१०२ निवापाञ्जलिदानम्

वाचनम्
ಭಾಗಸೂಚನಾ

ಭರತನು ಪುನಃ ಶ್ರೀರಾಮನಲ್ಲಿ ರಾಜ್ಯವನ್ನು ಸ್ವೀಕರಿಸುವಂತೆ ಒತ್ತಾಯಿಸಿ, ತಂದೆಯ ಮರಣವಾರ್ತೆಯನ್ನು ಅವನಿಗೆ ತಿಳಿಸಿದುದು

ಮೂಲಮ್ - 1

ರಾಮಸ್ಯ ವಚನಂ ಶ್ರುತ್ವಾ ಭರತಃ ಪ್ರತ್ಯುವಾಚ ಹ ।
ಕಿಂ ಮೇ ಧರ್ಮಾದ್ ವಿಹೀನಸ್ಯ ರಾಜಧರ್ಮಃ ಕರಿಷ್ಯತಿ ॥

ಅನುವಾದ

ಶ್ರೀರಾಮಚಂದ್ರನ ಮಾತನ್ನು ಕೇಳಿ ಭರತನು ಹೀಗೆ ಉತ್ತರಿಸಿದನು. ಅಣ್ಣಾ! ನಾನು ರಾಜ್ಯದ ಅಧಿಕಾರಿಯಲ್ಲದ ಕಾರಣ ಆ ರಾಜಧರ್ಮದ ಅಧಿಕಾರದಿಂದ ರಹಿತನಾಗಿದ್ದೇನೆ; ಆದ್ದರಿಂದ ನನಗೆ ಈ ರಾಜಧರ್ಮವು ಏನು ಉಪಯೋಗವಾದೀತು.॥1॥

ಮೂಲಮ್ - 2

ಶಾಶ್ವತೋಽಯಂ ಸದಾ ಧರ್ಮಃ ಸ್ಥಿತೋಽಸ್ಮಾಸು ನರರ್ಷಭ ।
ಜ್ಯೇಷ್ಠ ಪುತ್ರೇ ಸ್ಥಿತೇ ರಾಜಾ ನ ಕನೀಯಾನ್ ಭವೇನ್ನೃಪಃ ॥

ಅನುವಾದ

ನರಶ್ರೇಷ್ಠನೇ! ನಮ್ಮಲ್ಲಿ ಹಿರಿಯ ಪುತ್ರನು ಇರುವಾಗ ಕಿರಿಯ ಪುತ್ರನು ರಾಜನಾಗಲಾರನು, ಇದು ಹಿಂದಿನಿಂದಲೂ ನಡೆದು ಬಂದಿರುವ ಶಾಶ್ವತ ಧರ್ಮವಾಗಿದೆ.॥2॥

ಮೂಲಮ್ - 3

ಸಸಮೃದ್ಧಾಂ ಮಯಾ ಸಾರ್ಧಮಯೋಧ್ಯಾಂ ಗಚ್ಛ ರಾಘವ ।
ಅಭಿಷೇಚಯ ಚಾತ್ಮಾನಂ ಕುಲಸ್ಯಾಸ್ಯ ಭವಾಯ ನಃ ॥

ಅನುವಾದ

ಆದ್ದರಿಂದ ರಘುನಂದನ! ನೀನು ನನ್ನೊಂದಿಗೆ ಸಮೃದ್ಧಶಾಲೀ ಅಯೋಧ್ಯೆಗೆ ನಡೆ ಮತ್ತು ನಮ್ಮ ಕುಲದ ಅಭ್ಯುದಯಕ್ಕಾಗಿ ನೀನು ರಾಜನಾಗಿ ಪಟ್ಟಾಭಿಷಿಕ್ತನಾಗು.॥3॥

ಮೂಲಮ್ - 4

ರಾಜಾನಂ ಮಾನುಷಂ ಪ್ರಾಹುರ್ದೇವತ್ವೇ ಸಮ್ಮತೋ ಮಮ ।
ಯಸ್ಯ ಧರ್ಮಾರ್ಥಸಹಿತಂ ವೃತ್ತಮಾಹುರಮಾನುಷಮ್ ॥

ಅನುವಾದ

ಎಲ್ಲ ಜನರು ರಾಜನನ್ನು ಮನುಷ್ಯನೆಂದು ಹೇಳಿದರೂ ನನ್ನ ಅಭಿಪ್ರಾಯದಲ್ಲಿ ಅವನು ದೇವತ್ವದಲ್ಲಿ ಪ್ರತಿಷ್ಠಿತನಾಗಿರುತ್ತಾನೆ; ಏಕೆಂದರೆ ಅವನ ಧರ್ಮ ಮತ್ತು ಅರ್ಥಯುಕ್ತ ಆಚಾರವನ್ನು ಸಾಧಾರಣ ಮನುಷ್ಯನಿಗೆ ಅಸಂಭವವಾಗಿದೆ.॥4॥

ಮೂಲಮ್ - 5

ಕೇಕಯಸ್ಥೇ ಚ ಮಯಿತು ತ್ವಯಿ ಚಾರಣ್ಯಮಾಶ್ರಿತೇ ।
ಧೀಮಾನ್ ಸ್ವರ್ಗಂ ಗತೋ ರಾಜಾ ಯಾಯಜೂಕಃ ಸತಾಂ ಮತಃ ॥

ಅನುವಾದ

ನಾನು ಕೇಕಯ ದೇಶದಲ್ಲಿದ್ದೆ ಮತ್ತು ನೀನು ವನಕ್ಕೆ ಹೋಗಿದ್ದೆ, ಆಗ ಅಶ್ವಮೇಧ ಮೊದಲಾದ ಯಜ್ಞಗಳ ಕರ್ತಾ ಹಾಗೂ ಸತ್ಪುರುಷರಿಂದ ಸಮ್ಮಾನಿತ ಬುದ್ಧಿವಂತ ದಶರಥ ಮಹಾರಾಜರು ಸ್ವರ್ಗಲೋಕಕ್ಕೆ ಹೊರಟಹೋದರು.॥5॥

ಮೂಲಮ್ - 6

ನಿಷ್ಕ್ರಾಂತಮಾತ್ರೇ ಭವತಿ ಸಹಸೀತೇ ಸಲಕ್ಷ್ಮಣೇ ।
ದುಃಖಶೋಕಾಭಿಭೂತಸ್ತು ರಾಜಾ ತ್ರಿದಿವಮಭ್ಯಗಾತ್ ॥

ಅನುವಾದ

ಸೀತೆ ಮತ್ತು ಲಕ್ಷ್ಮಣನೊಂದಿಗೆ ನೀನು ರಾಜ್ಯದಿಂದ ಹೊರಡುತ್ತಲೇ, ದುಃಖ-ಶೋಕದಿಂದ ಪೀಡಿತರಾದ ಮಹಾರಾಜರು ಸ್ವರ್ಗಲೋಕಕ್ಕೆ ತೆರಳಿದರು.॥6॥

ಮೂಲಮ್ - 7

ಉತ್ತಿಷ್ಠ ಪುರುಷವ್ಯಾಘ್ರ ಕ್ರಿಯತಾಮುದಕಂ ಪಿತುಃ ।
ಅಹಂ ಚಾಯಂ ಚ ಶತ್ನುಘ್ನಃ ಪೂರ್ವಮೇವ ಕೃತೋದಕೌ ॥

ಅನುವಾದ

ಪುರುಷಸಿಂಹನೇ! ಏಳು, ತಂದೆಗೆ ಜಲಾಂಜಲಿಯನ್ನು ಕೊಡು. ನಾನು ಮತ್ತು ಈ ಶತ್ರುಘ್ನ ಇಬ್ಬರೂ ಮೊದಲೇ ಅವರಿಗೆ ಜಲಾಂಜಲಿಯನ್ನು ಕೊಟ್ಟುಬಿಟ್ಟಿದ್ದೇವೆ.॥7॥

ಮೂಲಮ್ - 8

ಪ್ರಿಯೇಣ ಕಿಲ ದತ್ತಂ ಹಿ ಪಿತೃಲೋಕೇಷು ರಾಘವ ।
ಅಕ್ಷಯಂ ಭವತೀತ್ಯಾಹುರ್ಭವಾಂಶ್ಚೈವಪಿತುಃಪ್ರಿಯಃ ॥

ಅನುವಾದ

ರಘುನಂದನ! ಪ್ರಿಯಪುತ್ರನು ಕೊಟ್ಟಿರುವ ಜಲಾದಿಗಳು ಪಿತೃಲೋಕದಲ್ಲಿ ಅಕ್ಷಯವಾಗುತ್ತದೆ ಎಂದು ಹೇಳುತ್ತಾರೆ. ನೀನು ತಂದೆಯವರ ಪರಮಪ್ರಿಯ ಪುತ್ರನಾಗಿರುವೆ.॥8॥

ಮೂಲಮ್ - 9

ತ್ವಾಮೇವ ಶೋಚಂಸ್ತವ ದರ್ಶನೇಪ್ಸು -
ಸ್ತ್ವಯ್ಯೇವ ಸಕ್ತಾಮನಿವರ್ತ್ಯ ಬುದ್ಧಿಮ್ ।
ತ್ವಯಾ ವಿಹೀನಸ್ತವ ಶೋಕರುಗ್ಣ -
ಸ್ತ್ವಾಂ ಸಂಸ್ಮರನ್ನೇವ ಗತಃ ಪಿತಾ ತೇ ॥

ಅನುವಾದ

ನಮ್ಮ ತಂದೆಯವರು ನಿನ್ನಿಂದ ಅಗಲುತ್ತಲೇ ಶೋಕದಿಂದ ರುಗ್ಣರಾದರು ಮತ್ತು ನಿನ್ನ ಶೋಕದಲ್ಲೇ ಮಗ್ನರಾದರು. ನಿನ್ನನ್ನೇ ನೋಡುವ ಇಚ್ಛೆಯಿಂದ, ನಿನ್ನಲ್ಲೇ ನೆಟ್ಟಿರುವ ಬುದ್ಧಿಯನ್ನು ತೊಡೆಯಲಾರದೆ, ನಿನ್ನನ್ನೇ ಸ್ಮರಿಸುತ್ತಾ ಸ್ವರ್ಗಸ್ಥರಾದರು.॥9॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ನೂರ ಎರಡನೆಯ ಸರ್ಗ ಪೂರ್ಣವಾಯಿತು.॥102॥