१०१ दशरथनिर्याणकथनम्

वाचनम्
ಭಾಗಸೂಚನಾ

ಶ್ರೀರಾಮನು ಭರತನಲ್ಲಿ ವನಕ್ಕೆ ಆಗಮಿಸಿದ ಪ್ರಯೋಜನ ಕೇಳಿದುದು, ಭರತನು ಅವನಲ್ಲಿ ರಾಜ್ಯವನ್ನು ಸ್ವೀಕರಿಸುವಂತೆ ಪ್ರಾರ್ಥಿಸಿದುದು, ಶ್ರೀರಾಮನು ಅದನ್ನು ತಿರಸ್ಕರಿಸಿದುದು

ಮೂಲಮ್ - 1

ತಂ ತು ರಾಮಃ ಸಮಾಜ್ಞಾಯ ಭ್ರಾತರಂ ಗುರುವತ್ಸಲಮ್ ।
ಲಕ್ಷ್ಮಣೇನ ಸಹ ಭ್ರಾತ್ರಾ ಪ್ರಷ್ಟುಂ ಸಮುಪಚಕ್ರಮೇ ॥

ಅನುವಾದ

ಲಕ್ಷ್ಮಣ ಸಹಿತ ಶ್ರೀರಾಮನು ತನ್ನ ಗುರುಭಕ್ತ ತಮ್ಮನಾದ ಭರತನನ್ನು ಚೆನ್ನಾಗಿ ಸಮಜಾಯಿಸಿ ಅಥವಾ ಅವನು ತನ್ನಲ್ಲಿ ಅನುರಕ್ತನೆಂದು ತಿಳಿದು ಅವನಲ್ಲಿ ಈ ಪ್ರಕಾರ ಕೇಳಿದನು.॥1॥

ಮೂಲಮ್ - 2

ಕಿಮೇತದಿಚ್ಛೇಯಮಹಂ ಶ್ರೋತುಂಪ್ರವ್ಯಾಹೃತಂ ತ್ವಯಾ ।
ಯಸ್ಮಾತ್ ತ್ವಮಾಗತೋ ದೇಶಮಿಮಂ ಚೀರಜಟಾಜಿನೀ ॥

ಮೂಲಮ್ - 3

ಯನ್ನಿಮಿತ್ತಮಿಮಂ ದೇಶಂ ಕೃಷ್ಣಾಜಿನ ಜಟಾಧರಃ ।
ಹಿತ್ವಾ ರಾಜ್ಯಂಪ್ರವಿಷ್ಟಸ್ತ್ವಂ ತತ್ಸರ್ವಂ ವಕ್ತುಮರ್ಹಸಿ ॥

ಅನುವಾದ

ತಮ್ಮ! ನೀನು ರಾಜ್ಯವನ್ನು ಬಿಟ್ಟು ವಲ್ಕಲ, ಕೃಷ್ಣಮೃಗ ಚರ್ಮ ಮತ್ತು ಜಟೆಯನ್ನು ಧರಿಸಿ ಇಲ್ಲಿಗೆ ಬಂದಿರುವೆಯಲ್ಲ, ಇದರ ಕಾರಣವೇನು? ನೀನು ವನಕ್ಕೆ ಬಂದ ನಿಮಿತ್ತವನ್ನು ನಾನು ನಿನ್ನಿಂದ ಕೇಳಲು ಬಯಸುತ್ತಿರುವೆನು. ನೀನು ಎಲ್ಲವನ್ನೂ ಸರಿಯಾಗಿ ತಿಳಿಸು.॥2-3॥

ಮೂಲಮ್ - 4

ಇತ್ಯುಕ್ತಃ ಕೇಕಯೀಪುತ್ರಃ ಕಾಕುತ್ಸ್ಥೇನ ಮಹಾತ್ಮನಾ ।
ಪ್ರಗೃಹ್ಯ ಬಲವದ್ಭೂಯಃ ಪ್ರಾಂಜಲಿರ್ವಾಕ್ಯಮಬ್ರವೀತ್ ॥

ಅನುವಾದ

ಕಕುತ್ಸ್ಥವಂಶೀ ಮಹಾತ್ಮಾ ಶ್ರೀರಾಮನು ಹೀಗೆ ಕೇಳಿದಾಗ ಭರತನು ಹೃದಯದ ಶೋಕವನ್ನು ಅದುಮಿಕೊಂಡು ಪುನಃ ಕೈಮುಗಿದು ಈ ಪ್ರಕಾರ ಹೇಳಿದನು.॥4॥

ಮೂಲಮ್ - 5

ಆರ್ಯ ತಾತಃ ಪರಿತ್ಯಜ್ಯ ಕೃತ್ವಾ ಕರ್ಮ ಸುದುಷ್ಕರಮ್ ।
ಗತಃ ಸ್ವರ್ಗಂ ಮಹಾಬಾಹುಃ ಪುತ್ರಶೋಕಾಭಿಪೀಡಿತಃ ॥

ಅನುವಾದ

ಆರ್ಯನೇ! ನಮ್ಮ ಮಹಾಬಾಹು ತಂದೆಯವರು ಅತ್ಯಂತ ದುಷ್ಕರ ಕರ್ಮಮಾಡಿ ಪುತ್ರಶೋಕದಿಂದ ಪೀಡಿತರಾಗಿ ನಮ್ಮನ್ನು ಅಗಲಿ ಸ್ವರ್ಗಲೋಕಕ್ಕೆ ಹೊರಟುಹೋದರು.॥5॥

ಮೂಲಮ್ - 6

ಸ್ತ್ರಿಯಾ ನಿಯುಕ್ತಃ ಕೈಕೇಯ್ಯಾ ಮಮ ಮಾತ್ರಾ ಪರಂತಪ ।
ಚಕಾರ ಸಾ ಮಹತ್ಪಾಪಮಿದಮಾತ್ಮಯಶೋಹರಮ್ ॥

ಅನುವಾದ

ಶತ್ರುಗಳಿಗೆ ಸಂತಾಪಕೊಡುವ ರಘುನಂದನ! ತನ್ನ ಪತ್ನೀ ಮತ್ತು ನನ್ನ ತಾಯಿ ಕೈಕೇಯಿಯ ಪ್ರೇರಣೆಯಿಂದಲೇ ವಿವಶರಾದ ತಂದೆಯವರು ಇಂತಹ ಕಠೋರ ಕಾರ್ಯ ಮಾಡಿದ್ದರು. ನನ್ನ ತಾಯಿಯು ತನ್ನ ಸುಯಶವನ್ನು ನಾಶಮಾಡುವ ಈ ಭಾರೀ ದೊಡ್ಡ ಪಾಪ ಮಾಡಿರುವಳು.॥6॥

ಮೂಲಮ್ - 7

ಸಾ ರಾಜ್ಯಾಲಮಪ್ರಾಪ್ಯ ವಿಧವಾ ಶೋಕಕರ್ಶಿತಾ ।
ಪ್ರತಿಷ್ಯತಿ ಮಹಾಘೋರೇ ನಿರಯೇ ಜನನೀ ಮಮ ॥

ಅನುವಾದ

ಆದ್ದರಿಂದ ಅವಳು ರಾಜ್ಯರೂಪೀ ಫಲವನ್ನು ಪಡೆಯದೆ ವಿಧವೆಯಾಗಿರುವಳು. ಈಗ ನನ್ನ ತಾಯಿಯು ಶೋಕದಿಂದ ದುರ್ಬಲಳಾಗಿ ಮಹಾಘೋರ ನರಕದಲ್ಲಿ ಬೀಳುವಳು.॥7॥

ಮೂಲಮ್ - 8

ತಸ್ಯ ಮೇ ದಾಸಭೂತಸ್ಯ ಪ್ರಸಾದಂ ಕರ್ತುಮರ್ಹಸಿ ।
ಅಭಿಷಿಂಚಸ್ವ ಚಾದ್ಯೈವ ರಾಜ್ಯೇನ ಮಘವಾನಿವ ॥

ಅನುವಾದ

ಈಗ ನೀನು ನಿನ್ನ ದಾಸ ಭರತನಾದ ನನ್ನ ಮೇಲೆ ಕೃಪೆ ಮಾಡು ಮತ್ತು ಇಂದ್ರನಂತೆ ಇಂದೇ ರಾಜ್ಯವನ್ನು ಸ್ವೀಕರಿಸಲು ಪಟ್ಟಾಭಿಷಿಕ್ತನಾಗು.॥8॥

ಮೂಲಮ್ - 9

ಇಮಾಃ ಪ್ರಕೃತಯಃ ಸರ್ವಾ ವಿಧವಾ ಮಾತರಶ್ಚ ಯಾಃ ।
ತ್ವತ್ಸಕಾಶಮನುಪ್ರಾಪ್ತಾಃ ಪ್ರಸಾದಂ ಕರ್ತುಮರ್ಹಸಿ ॥

ಅನುವಾದ

ಈ ಎಲ್ಲ ಮಂತ್ರಿಗಳೇ ಆದಿ ಎಲ್ಲ ವಿಧವೆಯರಾದ ತಾಯಂದಿರು ನಿನ್ನ ಬಳಿಗೆ ಬಂದಿರುವರು. ನೀನು ಇವರೆಲ್ಲರ ಮೇಲೆ ಕೃಪೆಮಾಡು.॥9॥

ಮೂಲಮ್ - 10

ತದಾನುಪೂರ್ವ್ಯಾ ಯುಕ್ತಶ್ಚ ಯುಕ್ತಂ ಚಾತ್ಮನಿ ಮಾನದ ।
ರಾಜ್ಯಂ ಪ್ರಾಪ್ನುಹಿ ಧರ್ಮೇಣ ಸಕಾಮಾನ್ ಸುಹೃದಃ ಕುರು ॥

ಅನುವಾದ

ಮಾನದನಾದ ಶ್ರೀರಾಮಾ! ನೀನು ಜ್ಯೇಷ್ಠನಾದ್ದರಿಂದ ಕ್ರಮವಾಗಿ ರಾಜ್ಯದ ಅಧಿಕಾರದಿಂದ ಯುಕ್ತನಾಗಿರುವೆ, ನ್ಯಾಯವಾಗಿ ನಿನಗೇ ರಾಜ್ಯ ಸಿಗುವುದು ಉಚಿತವಾಗಿದೆ. ಆದ್ದರಿಂದ ನೀನು ಧರ್ಮಾನುಸಾರ ರಾಜ್ಯವನ್ನು ಸ್ವೀಕರಿಸಿ, ತನ್ನ ಸುಹೃದರನ್ನು ಸಫಲ ಮನೋರಥವಾಗಿಸು.॥10॥

ಮೂಲಮ್ - 11

ಭವತ್ವವಿಧವಾ ಭೂಮಿಃ ಸಮಗ್ರಾ ಪತಿನಾ ತ್ವಯಾ ।
ಶಶಿನಾ ವಿಮಲೇನೇವ ಶಾರದೀ ರಜನೀ ಯಥಾ ॥

ಅನುವಾದ

ನಿನ್ನಂತಹ ಪತಿಯಿಂದ ಯುಕ್ತವಾದ ಈ ಇಡೀ ವಸುಂಧರೆ ವೈಧವ್ಯರಹಿತವಾಗಿ, ನಿರ್ಮಲಚಂದ್ರನಿಂದ ಸನಾಥವಾದ ಶರತ್ಕಾಲದ ರಾತ್ರಿಯಂತೆ ಶೋಭಿಸಲಿ.॥11॥

ಮೂಲಮ್ - 12

ಏಭಿಷ್ಚ ಸಚಿವೈಃ ಸಾರ್ಧಂ ಶಿರಸಾ ಯಾಚಿತೋ ಮಯಾ ।
ಭ್ರಾತುಃ ಶಿಷ್ಯಸ್ಯ ದಾಸಸ್ಯ ಪ್ರಸಾದಂ ಕರ್ತುಮರ್ಹಸಿ ॥

ಅನುವಾದ

ನಾನು ಎಲ್ಲ ಸಚಿವರಿಂದೊಡಗೂಡಿ ನಿನ್ನ ಚರಣಗಳಲ್ಲಿ ತಲೆಬಾಗಿ - ‘ನೀನು ರಾಜ್ಯವನ್ನು ಸ್ವೀಕರಿಸು’ ಎಂದು ಬೇಡಿಕೊಳ್ಳುತ್ತಿರುವೆನು. ನಾನು ನಿನ್ನ ತಮ್ಮನು, ಶಿಷ್ಯನು, ದಾಸನೂ ಆಗಿರುವೆ. ನೀನು ನನ್ನ ಮೇಲೆ ದಯೆತೋರು.॥12॥

ಮೂಲಮ್ - 13

ತದಿದಂ ಶಾಶ್ವತಂ ಪಿತ್ರ್ಯಂ ಸರ್ವಂ ಸಚಿವಮಂಡಲಮ್ ।
ಪೂಜಿತಂ ಪುರುಷವ್ಯಾಘ್ರ ನಾತಿಕ್ರಮಿತುಮರ್ಹಸಿ ॥

ಅನುವಾದ

ಪುರುಷಸಿಂಹ! ಈ ಎಲ್ಲ ಮಂಡಲವು ನಮ್ಮಲ್ಲಿ ಕುಲ ಪರಂಪರೆಯಿಂದ ನಡೆದುಬಂದಿದೆ. ಇವರೆಲ್ಲ ಸಚಿವರು ತಂದೆಯವರ ಕಾಲದಲ್ಲಿಯೂ ಇದ್ದರು. ನಾವು ಸದಾ ಇವರನ್ನು ಸಮ್ಮಾನಿಸುತ್ತಾ ಬಂದಿರುವೆವು. ಆದ್ದರಿಂದ ನೀನು ಇವರ ಪ್ರಾರ್ಥನೆಯನ್ನು ತಳ್ಳಿಹಾಕಬೇಡ.॥13॥

ಮೂಲಮ್ - 14

ಏವಮುಕ್ತ್ವಾ ಮಹಾಬಾಹುಃ ಸಬಾಷ್ಪಃ ಕೇಕಯೀಸುತಃ ।
ರಾಮಸ್ಯ ಶಿರಸಾ ಪಾದೌ ಜಗ್ರಾಹ ಭರತಃ ಪುನಃ ॥

ಅನುವಾದ

ಹೀಗೆ ಹೇಳಿ ಕೈಕೇಯೀ ಪುತ್ರ ಮಹಾಬಾಹು ಭರತನು ಕಂಗಳಿಂದ ಕಂಬನಿಗರೆಯುತ್ತಾ ಪುನಃ ಶ್ರೀರಾಮಚಂದ್ರನ ಚರಣಗಳಲ್ಲಿ ತಲೆಯನ್ನು ಚಾಚಿದನು.॥14॥

ಮೂಲಮ್ - 15

ತಂ ಮತ್ತಮಿವ ಮಾತಂಗಂ ನಿಃಶ್ವಸಂತ ಪುನಃ ಪುನಃ ।
ಭ್ರಾತರಂ ಭರತಂ ರಾಮಃ ಪರಿಷ್ವಜ್ಯೇದಮಬ್ರವೀತ್ ॥

ಅನುವಾದ

ಆಗ ಅವನು ಮತ್ತ ಗಜದಂತೆ ಪದೇ ಪದೇ ದೀರ್ಘವಾಗಿ ನಿಟ್ಟಿಸಿರು ಬಿಡುತ್ತಿದ್ದನು, ಆಗ ಶ್ರೀರಾಮನು ತಮ್ಮನಾದ ಭರತನನ್ನು ಎತ್ತಿಕೊಂಡು ಅಪ್ಪಿಕೊಂಡನು ಹಾಗೂ ಈ ಪ್ರಕಾರ ಹೇಳಿದನು.॥15॥

ಮೂಲಮ್ - 16

ಕುಲೀನಃ ಸತ್ತ್ವಸಂಪನ್ನಸ್ತೇಜಸ್ವೀ ಚರಿತವ್ರತಃ ।
ರಾಜ್ಯಹೇತೋಃ ಕಥಂ ಪಾಪಮಾಚರೇನ್ಮದ್ವಿಧೋ ಜನಃ ॥

ಅನುವಾದ

ತಮ್ಮ! ಉತ್ತಮ ಕುಲದಲ್ಲಿ ಹುಟ್ಟಿದ, ಸತ್ತ್ವಗುಣಸಂಪನ್ನ, ತೇಜಸ್ವೀ ಮತ್ತು ಶ್ರೇಷ್ಠ ವ್ರತಗಳನ್ನು ಪಾಲಿಸುವ ನನ್ನಂತಹ ಮನುಷ್ಯನು ರಾಜ್ಯಕ್ಕಾಗಿ ತಂದೆಯ ಆಜ್ಞೆಯನ್ನು ಹೇಗೆ ಉಲ್ಲಂಘಿಸಬಲ್ಲನು? ನೀನೇ ಹೇಳು.॥16॥

ಮೂಲಮ್ - 17

ನ ದೋಷಂ ತ್ವಯಿ ಪಶ್ಯಾಮಿ ಸೂಕ್ಷ್ಮಮಪ್ಯರಿಸೂದನ ।
ನ ಚಾಪಿ ಜನನೀಂ ಬಾಲ್ಯಾತ್ ತ್ವಂ ವಿಗರ್ಹಿತುಮರ್ಹಸಿ ॥

ಅನುವಾದ

ಶತ್ರುಸೂದನ! ನಾನು ನಿನ್ನೊಳಗೆ ಕೊಂಚವೂ ದೋಷವನ್ನು ನೋಡುವುದಿಲ್ಲ. ಅಜ್ಞಾನವಶನಾಗಿ ನೀನು ನಿನ್ನ ತಾಯಿಯನ್ನು ಎಂದಿಗೂ ನಿಂದಿಸಬಾರದು.॥17॥

ಮೂಲಮ್ - 18

ಕಾಮಕಾರೋ ಮಹಾಪ್ರಾಜ್ಞ ಗುರೂಣಾಂ ಸರ್ವದಾನಘ ।
ಉಪಪನ್ನೇಷು ದಾರೇಷುಪುತ್ರೇಷು ಚ ವಿಧೀಯತೇ ॥

ಅನುವಾದ

ನಿಷ್ಪಾಪ ಮಹಾಪ್ರಾಜ್ಞನೇ! ಹಿರಿಯರಿಗೆ ತನಗೆ ಬೇಕಾದ ಪತ್ನಿಯರಲ್ಲಿ ಮತ್ತು ಪ್ರಿಯ ಪುತ್ರರ ಮೇಲೆ ಸದಾ ಪೂರ್ಣ ಅಧಿಕಾರವಿರುತ್ತದೆ. ಅವರು ಅವರಿಗೆ ಬೇಕಾದ ಹಾಗೆ ಆಜ್ಞಾಪಿಸಬಲ್ಲರು.॥18॥

ಮೂಲಮ್ - 19

ವಯಮಸ್ಯ ಯಥಾ ಲೋಕೇ ಸಂಖ್ಯಾತಾಃ ಸೌಮ್ಯ ಸಾಧುಭಿಃ ।
ಭಾರ್ಯಾಃ ಪುತ್ರಾಶ್ಚ ಶಿಷ್ಯಾಶ್ಚ ತ್ವಮಪಿ ಜ್ಞಾತುಮರ್ಹಸಿ ॥

ಅನುವಾದ

ಸೌಮ್ಯನೇ! ತಾಯಂದಿರ ಸಹಿತ ನಾವೂ ಕೂಡ ಈ ಲೋಕದಲ್ಲಿ ಶ್ರೇಷ್ಠಪುರುಷರಿಂದ ಮಹಾರಾಜರ ಪತ್ನೀ-ಪುತ್ರ ಮತ್ತು ಶಿಷ್ಯರೆಂದು ಹೇಳಿಸಿಕೊಂಡಿದ್ದೇವೆ. ಆದ್ದರಿಂದ ನಮಗೂ ಎಲ್ಲ ರೀತಿಯ ಅಪ್ಪಣೆ ಮಾಡುವ ಅಧಿಕಾರ ಅವರಿಗಿತ್ತು. ಈ ಮಾತನ್ನು ತಿಳಿಯಲು ನೀನೂ ಯೋಗ್ಯನಾಗಿರುವೆ.॥19॥

ಮೂಲಮ್ - 20

ವನೇ ವಾ ಚೀರವಸನಂ ಸೌಮ್ಯಕೃಷ್ಣಾಜಿನಾಂಬರಮ್ ।
ರಾಜ್ಯೇ ವಾಪಿ ಮಹಾರಾಜೋ ಮಾಂ ವಾಸಯಿತುಮೀಶ್ವರಃ ॥

ಅನುವಾದ

ಮಹಾರಾಜರು ನನಗೆ ನಾರುಮಡಿ, ಮೃಗಚರ್ಮ ತೊಡಿಸಿ ವನದಲ್ಲಿ ಇರಿಸಲು ಅಥವಾ ಸಿಂಹಾಸನದಲ್ಲಿ ಕುಳ್ಳಿರಿಸಲು ಇವೆರಡರಲ್ಲಿಯೂ ಅವರು ಸರ್ವಥಾ ಸಮರ್ಥರಾಗಿದ್ದರು.॥20॥

ಮೂಲಮ್ - 21

ಯಾವತ್ ಪಿತರಿ ಧರ್ಮಜ್ಞ ಗೌರವಂ ಲೋಕಸತ್ಕೃತೇ ।
ತಾವದ್ಧರ್ಮಕೃತಾಂ ಶ್ರೇಷ್ಠಜನನ್ಯಾಮಪಿಗೌರವಮ್ ॥

ಅನುವಾದ

ಧರ್ಮಜ್ಞನೇ! ಧರ್ಮಾತ್ಮರಲ್ಲಿ ಶ್ರೇಷ್ಠನಾದ ಭರತನೇ ಮನುಷ್ಯನಿಗೆ ವಿಶ್ವವಂದ್ಯ ತಂದೆಯಲ್ಲಿ ಇರುವಷ್ಟೇ ಗೌರವ ಬುದ್ಧಿಯು ತಾಯಿಯಲ್ಲಿಯೂ ಇರಬೇಕು.॥21॥

ಮೂಲಮ್ - 22

ಏತಾಭ್ಯಾಂ ಧರ್ಮಶೀಲಾಭ್ಯಾಂ ವನಂ ಗಚ್ಛೇತಿ ರಾಘವ ।
ಮಾತಾಪಿತೃಭ್ಯಾಮುಕ್ತೋಽಹಂ ಕಥಮನ್ಯತ್ ಸಮಾಚರೇ ॥

ಅನುವಾದ

ರಘುನಂದನ! ಈ ಧರ್ಮಶೀಲ ತಾಯಿ ಮತ್ತು ತಂದೆ ಇಬ್ಬರೂ ನನಗೆ ಕಾಡಿಗೆ ಹೋಗಲು ಆಜ್ಞಾಪಿಸಿದಾಗ ನಾನು ಅವರ ಆಜ್ಞೆಗೆ ವಿಪರೀತವಾಗಿ ಬೇರೆ ಏನಾದರೂ ಹೇಗೆ ವರ್ತಿಸಬಲ್ಲೆನು.॥22॥

ಮೂಲಮ್ - 23

ತ್ವಯಾ ರಾಜ್ಯಮಯೋಧ್ಯಾಯಾಂ ಪ್ರಾಪ್ತವ್ಯಂ ಲೋಕಸತ್ಕೃತಮ್ ।
ವಸ್ತವ್ಯಂ ದಂಡಕಾರಣ್ಯೇ ಮಯಾ ವಲ್ಕಲವಾಸಸಾ ॥

ಅನುವಾದ

ನೀನು ಅಯೋಧ್ಯೆಯಲ್ಲಿ ಇದ್ದು ಸಮಸ್ತ ಜಗತ್ತಿಗಾಗಿ ಆದರಣೀಯ ರಾಜ್ಯವನ್ನು ಪಡೆಯಬೇಕು ಮತ್ತು ನಾನು ವಲ್ಕಲಗಳನ್ನು ಧರಿಸಿ ದಂಡಕಾರಣ್ಯದಲ್ಲಿ ಇರಬೇಕು.॥23॥

ಮೂಲಮ್ - 24

ಏವಮುತ್ವಾ ಮಹಾರಾಜೋ ವಿಭಾಗಂ ಲೋಕಸನ್ನಿಧೌ ।
ವ್ಯಾದಿಶ್ಯ ಚ ಮಹಾರಾಜೋ ದಿವಂ ದಶರಥೋ ಗತಃ ॥

ಅನುವಾದ

ಏಕೆಂದರೆ ದಶರಥ ಮಹಾರಾಜರು ಬಹಳ ಜನರ ಮುಂದೆ ನಮ್ಮಿಬ್ಬರಿಗೆ ಈ ಪ್ರಕಾರ ಬೇರೆ-ಬೇರೆ ಎರಡು ಆಜ್ಞೆಯನ್ನು ಕೊಟ್ಟು ಸ್ವರ್ಗಕ್ಕೆ ತೆರಳಿದರು.॥24॥

ಮೂಲಮ್ - 25

ಸ ಚ ಪ್ರಮಾಣಂ ಧರ್ಮಾತ್ಮಾ ರಾಜಾಲೋಕಗುರುಸ್ತವ ।
ಪಿತ್ರಾ ದತ್ತಂ ಯಥಾಭಾಗಮುಪಭೋಕ್ತುಂ ತ್ವಮರ್ಹಸಿ ॥

ಅನುವಾದ

ಈ ವಿಷಯದಲ್ಲಿ ಲೋಕಗುರು ಧರ್ಮಾತ್ಮಾ ಮಹಾರಾಜರೇ ನಿನಗೆ ಪ್ರಮಾಣ ಭೂತರಾಗಿದ್ದಾರೆ, ಅವರ ಆಜ್ಞೆಯನ್ನು ನೀನು ಒಪ್ಪಿಕೊಳ್ಳಲೇಬೇಕು. ತಂದೆಯವರು ನಿನ್ನ ಪಾಲಿಗೆ ಕೊಟ್ಟಿದ್ದನ್ನು ನೀನು ಯಥಾವತ್ತಾಗಿ ಅನುಭವಿಸಬೇಕು.॥25॥

ಮೂಲಮ್ - 26

ಚತುರ್ದಶ ಸಮಾಃ ಸೌಮ್ಯ ದಂಡಕಾರಣ್ಯಮಾಶ್ರಿತಃ ।
ಉಪಭೋಕ್ಷ್ಯೇ ತ್ವಹಂ ದತ್ತಂ ಭಾಗಂ ಪಿತ್ರಾ ಮಹಾತ್ಮನಾ ॥

ಅನುವಾದ

ಸೌಮ್ಯ! ಹದಿನಾಲ್ಕು ವರ್ಷ ದಂಡಕಾರಣ್ಯದಲ್ಲಿ ಇದ್ದು ಬಳಿಕವೇ ಮಹಾತ್ಮಾ ತಂದೆಯು ಕೊಟ್ಟಿರುವ ರಾಜ್ಯಭಾಗವನ್ನು ನಾನು ಅನುಭವಿಸುವೆನು.॥26॥

ಮೂಲಮ್ - 27

ಯದಬ್ರವೀನ್ಮಾಂ ನರಲೋಕಸತ್ಕೃತಃ
ಪಿತಾ ಮಹಾತ್ಮಾ ವಿಬುಧಾಧಿಪೋಪಮಃ ।
ತದೇವ ಮನ್ಯೇ ಪರಮಾತ್ಮನೋ ಹಿತಂ
ನ ಸರ್ವಲೋಕೇಶ್ವರಭಾವಮವ್ಯಮ್ ॥

ಅನುವಾದ

ಮನುಷ್ಯ ಲೋಕದಲ್ಲಿ ಸಮ್ಮಾನಿತರಾದ, ದೇವೇಂದ್ರನಂತೆ ತೇಜಸ್ವಿಯಾದ ನನ್ನ ಮಹಾತ್ಮಾ ತಂದೆಯವರು ನನಗೆ ಕೊಟ್ಟ ವನವಾಸದ ಆಜ್ಞೆಯನ್ನು ನಾನು ನನಗೆ ಪರಮ ಹಿತಕಾರಿ ಎಂದು ತಿಳಿಯುವೆನು. ಅವರ ಆಜ್ಞೆಗೆ ವಿರುದ್ಧವಾಗಿ ಸರ್ವಲೋಕೇಶ್ವರ ಬ್ರಹ್ಮನ ಅವಿನಾಶೀ ಪದವೂ ಕೂಡ ನನಗೆ ಶ್ರೇಯಸ್ಕರವಲ್ಲ.॥27॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಒಂದು ನೂರ ಒಂದನೆಯ ಸರ್ಗ ಪೂರ್ಣವಾಯಿತು ॥101॥