वाचनम्
ಭಾಗಸೂಚನಾ
ಕುಶಲ ಪ್ರಶ್ನೆಯ ರೂಪದಲ್ಲಿ ಶ್ರೀರಾಮನು ಭರತನಿಗೆ ರಾಜನೀತಿಯನ್ನು ಉಪದೇಶಿಸಿದುದು
ಮೂಲಮ್ - 1
ಜಟಿಲಂ ಚೀರವಸನಂ ಪ್ರಾಂಜಲಿಂ ಪತಿತಂ ಭುವಿ ।
ದದರ್ಶ ರಾಮೋ ದುರ್ದರ್ಶಂ ಯುಗಾಂತೇ ಭಾಸ್ಕರಂ ಯಥಾ ॥
ಮೂಲಮ್ - 2
ಕಥಂಚಿದಭಿವಿಜ್ಞಾಯ ವಿವರ್ಣವದನಂ ಕೃಶಮ್ ।
ಭ್ರಾತರಂ ಭರತಂ ರಾಮಃ ಪ್ರರಿಜಗ್ರಾಹ ಪಾಣಿನಾ ॥
ಮೂಲಮ್ - 3
ಆಘ್ರಾಯ ರಾಮಸ್ತಂ ಮೂರ್ಧ್ನಿ ಪರಿಷ್ವಜ್ಯ ಚ ರಾಘವಮ್ ।
ಅಂಕೇ ಭರತಮಾರೋಪ್ಯ ಪರ್ಯಪೃಚ್ಛತ ಸಾದರಮ್ ॥
ಅನುವಾದ
ಜಟಾಧಾರಿಯಾಗಿದ್ದ, ನಾರುಮಡಿಯನ್ನುಟ್ಟಿದ್ದ, ಯುಗಾಂತದ ಸೂರ್ಯನೋಪಾದಿಯಲ್ಲಿ ನೋಡಲು ಅಶಕ್ಯನಾಗಿದ್ದು, ಕೈಮುಗಿದುಕೊಂಡೇ ನೆಲದ ಮೇಲೆ ಬಿದ್ದಿರುವ ಭರತನನ್ನು ಶ್ರೀರಾಮನು ನೋಡಿದನು. ಅವನಿಗೆ ಭರತನ ಗುರುತೇ ಸಿಗಲಿಲ್ಲ. ಅವನು ಅಷ್ಟು ಕೃಶವಾಗಿದ್ದು, ಕುಂದಿದ ಮುಖಭಾವದಿಂದ ಕೂಡಿದ್ದ, ಅತ್ಯಂತ ಬಡಕಲಾದ ಇವನು ನನ್ನ ತಮ್ಮ ಭರತನೇ ಎಂಬುದನ್ನು ಹೇಗೋ ತಿಳಿದು ಅವನನ್ನು ತನ್ನೆರಡು ತೋಳುಗಳಿಂದ ಹಿಡಿದೆತ್ತಿದನು. ಬಳಿಕ ಶ್ರೀರಾಮನು ಭರತನ ನೆತ್ತಿಯನ್ನು ಆಘ್ರಾಣಿಸಿ ಗಾಢವಾಗಿ ಆಲಿಂಗಿಸಿಕೊಂಡು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಆದರಪೂರ್ವಕವಾಗಿ ಪ್ರಶ್ನಿಸಿದನು.॥1-3॥
ಮೂಲಮ್ - 4
ಕ್ವ ನು ತೇಽಭೂತ್ಪಿತಾ ತಾತ ಯದರಣ್ಯಂ ತ್ವಮಾಗತಃ ।
ನ ಹಿ ತ್ವಂ ಜೀವತಸ್ತಸ್ಯ ವನಮಾಗಂತುಮರ್ಹಸಿ ॥
ಅನುವಾದ
ಮಗು! ನೀನು ವನಕ್ಕೆ ಬಂದಿರುವಾಗ, ತಂದೆಯವರು ಎಲ್ಲಿದ್ದರು? ಅವರು ಜೀವಿಸಿರುವಾಗ ನೀನು ಕಾಡಿಗೆ ಬರುವುದು ಸರಿಯಲ್ಲ.॥4॥
ಮೂಲಮ್ - 5
ಚಿರಸ್ಯಬತ ಪಶ್ಯಾಮಿ ದೂರಾದ್ ಭರತಮಾಗತಮ್ ।
ದುಷ್ಪ್ರತೀಕಮರಣ್ಯೇಽಸ್ಮಿನ್ ಕಿಂ ತಾತ ವನಮಾಗತಃ ॥
ಅನುವಾದ
ಎಷ್ಟೋ ದಿನಗಳ ಬಳಿಕ ದೂರದ ಮಾವನ ಮನೆಯಿಂದ ಬಂದಿರುವ ಭರತನನ್ನು ನಾನು ಇಂದು ನೋಡುತ್ತಿದ್ದೇನೆ. ಆದರೆ ಇವನ ಶರೀರ ಬಹಳ ದುರ್ಬಲವಾಗಿದೆ. ಅಯ್ಯಾ! ನೀನು ಕಾಡಿಗೆ ಏಕೆ ಬಂದೆ.॥5॥
ಮೂಲಮ್ - 6
ಕಚ್ಚಿನ್ನು ಧರತೇ ತಾತ ರಾಜಾ ಯತ್ ತ್ವಮಿಹಾಗತಃ ।
ಕಚ್ಚಿನ್ನ ದೀನಃ ಸಹಸಾ ರಾಜಾ ಲೋಕಾಂತರಂಗತಃ ॥
ಅನುವಾದ
ತಮ್ಮ! ಮಹಾರಾಜರು ಜೀವಂತರಾಗಿರುವರೇ? ಅವರು ಅತ್ಯಂತ ದುಃಖಿತರಾಗಿ ಕೂಡಲೇ ಪರಲೋಕ ವಾಸಿಗಳಾಗಿಲ್ಲವಲ್ಲ? ಹಾಗೂ ಅದಕ್ಕಾಗಿ ನಿನಗೆ ಕಾಡಿಗೆ ಬರಬೇಕಾಯಿತೇ.॥6॥
ಮೂಲಮ್ - 7
ಕಚ್ಚಿತ್ಸೌಮ್ಯ ನ ತೇ ರಾಜ್ಯಂ ಭ್ರಷ್ಟಂ ಬಾಲಸ್ಯ ಶಾಶ್ವತಮ್ ।
ಕಚ್ಚಿಚ್ಛ್ರುಶ್ರೂಷಸೇ ತಾತ ಪಿತುಃ ಸತ್ಯಪರಾಕ್ರಮ ॥
ಅನುವಾದ
ಸೌಮ್ಯ! ನೀನು ಇನ್ನು ಬಾಲಕನಾಗಿರುವೆ, ಅದಕ್ಕಾಗಿ ಪರಂಪರೆಯಿಂದ ನಡೆದುಬಂದಿರುವ ನಿನ್ನ ರಾಜ್ಯವು ಭ್ರಷ್ಟವಾಗಿಲ್ಲವಲ್ಲ? ಸತ್ಯಪರಾಕ್ರಮಿ ಭರತನೇ! ನೀನು ತಂದೆಯ ಸೇವಾ-ಶುಶ್ರೂಷೆಯನ್ನು ಮಾಡುತ್ತಿರುವೆಯಲ್ಲ.॥7॥
ಮೂಲಮ್ - 8
ಕಚ್ಚಿದ್ದಶರಥೋ ರಾಜಾ ಕುಶಲೀ ಸತ್ಯಸಂಗರಃ ।
ರಾಜಸೂಯಾಶ್ವಮೇಧಾನಾಮಾಹರ್ತಾ ಧರ್ಮನಿಶ್ಚಿತಃ ॥
ಅನುವಾದ
ಧರ್ಮದಲ್ಲಿ ಅಚಲನಾಗಿದ್ದ, ರಾಜಸೂಯ, ಅಶ್ವಮೇಧ ಯಜ್ಞಗಳ ಅನುಷ್ಠಾನ ಮಾಡಿದ, ಸತ್ಯಪ್ರತಿಜ್ಞರಾದ ದಶರಥ ಮಹಾರಾಜರು ಕ್ಷೇಮವಾಗಿ ಇರುವರಲ್ಲ.॥8॥
ಮೂಲಮ್ - 9
ಸ ಕಚ್ಚಿದ್ಬ್ರಾಹ್ಮಣೋ ವಿದ್ವಾನ್ ಧರ್ಮನಿತ್ಯೋ ಮಹಾದ್ಯುತಿಃ ।
ಇಕ್ಷ್ವಾಕೂಣಾಮುಪಾಧ್ಯಾಯೋ ಯಥಾವತ್ತಾತ ಪೂಜ್ಯತೇ ॥
ಅನುವಾದ
ಅಪ್ಪಾ! ಸದಾ ಧರ್ಮದಲ್ಲಿ ತತ್ಪರರಾಗಿರುವ, ವಿದ್ವಾಂಸರಾದ, ಬ್ರಹ್ಮವೇತ್ತ ಇಕ್ಷ್ವಾಕುಕುಲದ ಆಚಾರ್ಯ, ಮಹಾತೇಜಸ್ವೀ ವಸಿಷ್ಠರನ್ನು ನೀನು ಯಥಾವತ್ ಪೂಜೆ ಮಾಡುತ್ತಿರುವೆಯಲ್ಲ.॥9॥
ಮೂಲಮ್ - 10
ತಾತ ಕಚ್ಚಿಚ್ಚಕೌಸಲ್ಯಾ ಸುಮಿತ್ರಾ ಚ ಪ್ರಜಾವತೀ ।
ಸುಖಿನೀ ಕಚ್ಚಿದಾರ್ಯಾ ಚ ದೇವೀ ನಂದತಿ ಕೈಕಯೀ ॥
ಅನುವಾದ
ತಮ್ಮ! ತಾಯಿ ಕೌಸಲ್ಯೆಯು ಸುಖದಿಂದ ಇರುವಳಲ್ಲ? ಉತ್ತಮ ಸಂತಾನವುಳ್ಳ ಸುಮಿತ್ರಾ ದೇವಿಯು ಪ್ರಸನ್ನಳಾಗಿ ಇರುವಳಲ್ಲ? ಆರ್ಯಾ ಕೈಕೇಯಿಯೂ ಕೂಡ ಸಂತೋಷವಾಗಿರುವಳೇ.॥10॥
ಮೂಲಮ್ - 11
ಕಚ್ಚಿದ್ವಿನಯಸಂಪನ್ನಃ ಕುಲಪುತ್ರೋ ಬಹುಶ್ರುತಃ ।
ಅನಸೂಯುರನುದ್ರಷ್ಟಾ ಸತ್ಕೃತಸ್ತೇ ಪುರೋಹಿತಃ ॥
ಅನುವಾದ
ಉತ್ತಮಕುಲದಲ್ಲಿ ಹುಟ್ಟಿದ, ವಿನಯಸಂಪನ್ನ, ಬಹು ಶ್ರುತ, ಯಾರ ದೋಷವನ್ನೂ ನೋಡದ, ಶಾಸ್ತ್ರೋಕ್ತ ಧರ್ಮಗಳ ಮೇಲೆ ನಿರಂತರ ದೃಷ್ಟಿಯಿರಿಸುವ, ಆ ಪುರೋಹಿತರನ್ನು ನೀನು ಪೂರ್ಣವಾಗಿ ಸತ್ಕರಿಸುತ್ತಿರುವೆಯಲ್ಲ.॥11॥
ಮೂಲಮ್ - 12
ಕಚ್ಚಿದಗ್ನಿಷು ತೇ ಯುಕ್ತೋ ವಿಧಿಜ್ಞೋ ಮತಿಮಾನೃಜುಃ ।
ಹುತಂ ಚ ಹೋಷ್ಯಮಾಣಂ ಚ ಕಾಲೇ ವೇದಯತೇ ಸದಾ ॥
ಅನುವಾದ
ನೀನು ಅಗ್ನಿಹೋತ್ರಕ್ಕಾಗಿ ನೇಮಿಸಿರುವ ಹವನ ವಿಧಿಯನ್ನು ಬಲ್ಲ, ಬುದ್ಧಿವಂತ ಮತ್ತು ಸರಳ ಸ್ವಭಾವದ ಬ್ರಾಹ್ಮಣರು ಸದಾಕಾಲ ಸಮಯಕ್ಕೆ ಸರಿಯಾಗಿ ಬಂದು ಈಗ ಅಗ್ನಿಯಲ್ಲಿ ಆಹುತಿ ಕೊಡಬೇಕು, ಈಗ ಇಂತಹ ಹವನಮಾಡುವುದಿದೆ ಎಂದು ನಿನಗೆ ಸೂಚನೆ ಕೊಡುತ್ತಿರುವರು ತಾನೇ.॥12॥
ಮೂಲಮ್ - 13
ಕಚ್ಚಿದ್ದೇವಾನ್ ಪಿತೄನ್ ಭೃತ್ಯಾನ್ ಗುರೂನ್ ಪಿತೃಸಮಾನಪಿ ।
ವೃದ್ಧಾಂಶ್ಚ ತಾತ ವೈದ್ಯಾಂಶ್ಚ ಬ್ರಾಹ್ಮಣಾಂಶ್ಚಾಭಿಮನ್ಯಸೇ ॥
ಅನುವಾದ
ಅಪ್ಪಾ! ನೀನು ದೇವತೆಗಳನ್ನು, ಪಿತೃಗಳನ್ನು, ಭೃತ್ಯರನ್ನು, ಗುರು-ಹಿರಿಯರನ್ನು, ತಂದೆಯಂತೆ ಆದರಣೀಯರಾದ ವೃದ್ಧರೂ, ವೈದ್ಯರೂ, ಬ್ರಾಹ್ಮಣರೂ ಇವರನ್ನು ಸಮ್ಮಾನಿಸುವೆಯಲ್ಲ.॥13॥
ಮೂಲಮ್ - 14
ಇಷ್ವಸ್ತ್ರವರಸಂಪನ್ನಮರ್ಥಶಾಸ್ತ್ರವಿಶಾರದಮ್ ।
ಸುಧನ್ವಾನಮುಪಾಧ್ಯಾಯಂಕಚ್ಚಿತ್ತ್ವಂ ತಾತ ಮನ್ಯಸೇ ॥
ಅನುವಾದ
ತಮ್ಮಾ! ಮಂತ್ರರಹಿತ ಶ್ರೇಷ್ಠಬಾಣಗಳ ಪ್ರಯೋಗದಲ್ಲಿ ಹಾಗೂ ಮಂತ್ರಸಹಿತ ಉತ್ತಮ ಅಸ್ತ್ರಗಳ ಪ್ರಯೋಗದಲ್ಲಿ ವಿಶಾರದನಾದ, ಅರ್ಥಶಾಸ್ತ್ರ ಪಂಡಿತನಾದ, ಆಚಾರ್ಯ ಸುಧನ್ವನನ್ನು ನೀನು ಗೌರವಿಸುತ್ತಿರುವೆಯಲ್ಲ.॥14॥
ಮೂಲಮ್ - 15
ಕಚ್ಚಿದಾತ್ಮಸಮಾಃ ಶೂರಾಃ ಶ್ರುತವಂತೋ ಜಿತೇಂದ್ರಿಯಾಃ ।
ಕುಲೀನಾಶ್ಚೇಂಗಿತಜ್ಞಾಶ್ಚ ಕೃತಾಸ್ತೇ ತಾತ ಮಂತ್ರಿಣಃ ॥
ಅನುವಾದ
ಅಯ್ಯಾ! ತನ್ನಂತೆಯೇ ಶೂರವೀರ, ಶಾಸ್ತ್ರಜ್ಞ, ಜಿತೇಂದ್ರಿಯ, ಕುಲೀನ ಹಾಗೂ ಪರೇಂಗಿತಜ್ಞರಾದ, ಸುಯೋಗ್ಯ ವ್ಯಕ್ತಿಗಳನ್ನೇ ನೀನು ಮಂತ್ರಿಯಾಗಿಸಿಕೊಂಡಿರುವೆಯಲ್ಲ.॥15॥
ಮೂಲಮ್ - 16
ಮಂತ್ರೋ ವಿಜಯಮೂಲಂ ಹಿ ರಾಜ್ಞಾಂಭವತಿ ರಾಘವ ।
ಸುಸಂವೃತೋ ಮಂತ್ರಿಧುರೈರಮಾತ್ಯೈಃ ಶಾಸ್ತ್ರಕೋವಿದೈಃ ॥
ಅನುವಾದ
ರಘುನಂದನ! ಉತ್ತಮ ಮಂತ್ರಾಲೋಚನೆಯೇ ರಾಜರ ವಿಜಯದ ಮೂಲಕಾರಣವಾಗಿದೆ. ನೀತಿಶಾಸ್ತ್ರನಿಪುಣ ಮಂತ್ರಿವರ್ಯ ಅಮಾತ್ಯರು ಅದನ್ನು ಸರ್ವಥಾ ಗುಪ್ತವಾಗಿರಿಸಿದಾಗಲೇ ಅದು ಸಫಲವಾಗುವುದು.॥16॥
ಮೂಲಮ್ - 17
ಕಶ್ಚಿನ್ನಿದ್ರಾವಶಂ ನೈಷಿ ಕಚ್ಚಿತ್ಕಾಲೇಽವಬುಧ್ಯಸೇ ।
ಕಚ್ಚಿಚ್ಚಾಪರರಾತ್ರೇಷು ಚಿಂತಯಸ್ಯರ್ಥನೈಪುಣಮ್ ॥
ಅನುವಾದ
ಭರತನೇ ನೀನು ಹೊತ್ತುತಪ್ಪಿ ನಿದ್ರೆಗೆ ವಶೀಭೂತ ನಾಗುವುದಿಲ್ಲವಲ್ಲ? ಸಮಯಕ್ಕೆ ಸರಿಯಾಗಿ ಎಚ್ಚರಗೊಳ್ಳುತ್ತಿರುವೆಯಲ್ಲ? ರಾತ್ರಿಯ ಕೊನೆಯ ಜಾವದಲ್ಲಿ ಅರ್ಥ ಸಿದ್ಧಿಯ ಉಪಾಯದ ಕುರಿತು ಯೋಚಿಸುತ್ತಿರುವೆಯಲ್ಲ.॥17॥
ಮೂಲಮ್ - 18
ಕಚ್ಚಿನ್ಮಂತ್ರಯಸೇ ನೈಕಃ ಕಚ್ಚಿನ್ನ ಬಹುಭಿಃ ಸಹ ।
ಕಚ್ಚಿತ್ತೇ ಮಂತ್ರಿತೋ ಮಂತ್ರೋ ರಾಷ್ಟ್ರಂ ನ ಪರಿಧಾವತಿ ॥
ಅನುವಾದ
ನೀನೊಬ್ಬನೇ ಕುಳಿತು ರಾಜ್ಯಾಂಗದ ಮುಖ್ಯವಿಷಯವನ್ನು ಚರ್ಚಿಸುತ್ತಿಲ್ಲ ತಾನೇ? ಅಥವಾ ಹೆಚ್ಚು ಜನರೊಂದಿಗೆ ಕುಳಿತು ಚರ್ಚಿಸುತ್ತಿಲ್ಲ ತಾನೇ? ನೀನು ನಿಶ್ಚಯಿಸಿದ ರಾಜ್ಯಾಂಗದ ರಹಸ್ಯ ಶತ್ರುರಾಜ್ಯದವರೆಗೆ ಹರಡುವುದಿಲ್ಲ ತಾನೇ? (ಯಾವುದೇ ಗುಪ್ತರಹಸ್ಯ ಒಬ್ಬೊಬ್ಬರಿಗೇ ಮಾತ್ರ ತಿಳಿದಿರಬೇಕು, ಹೆಚ್ಚು ಜನರಿಗೆ ತಿಳಿದಾಗ ಬಯಲಾಗುವ ಸಂಭವವಿರುತ್ತದೆ. ಒಬ್ಬನೇ ನಿಶ್ಚಯಿಸುವಾಗ ಪ್ರಮಾದವಾಗುವ ಸಂಭವವಿರುತ್ತದೆ..॥18॥
ಮೂಲಮ್ - 19
ಕಚ್ಚಿದರ್ಥಂ ವಿನಿಶ್ಚಿತ್ಯ ಲಘುಮೂಲಂ ಮಹೋದಯಮ್ ।
ಕ್ಷಿಪ್ರಮಾರಭಸೇ ಕರ್ಮ ನ ದೀರ್ಘಯಸಿ ರಾಘವ ॥
ಅನುವಾದ
ರಘುನಂದನ! ಸಾಧನವು ಚಿಕ್ಕದಿದ್ದು ಫಲವು ದೊಡ್ಡದಾಗಿದ್ದರೆ, ಆ ಕಾರ್ಯವನ್ನು ನಿಶ್ಚಯಿಸಿದ ಬಳಿಕ ನೀನು ಅದನ್ನು ಕೂಡಲೇ ಪ್ರಾರಂಭಿಸುತ್ತಿರುವೆಯಲ್ಲ? ಅದರಲ್ಲಿ ವಿಳಂಬ ಮಾಡುವುದಿಲ್ಲ ತಾನೇ.॥19॥
ಮೂಲಮ್ - 20
ಕಚ್ಚಿನ್ನು ಸುಕೃತಾನ್ಯೇವ ಕೃತರೂಪಾಣಿ ವಾ ಪುನಃ ।
ವಿದುಸ್ತೇ ಸರ್ವಕಾರ್ಯಾಣಿ ನ ಕರ್ತವ್ಯಾನಿ ಪಾರ್ಥಿವಾಃ ॥
ಅನುವಾದ
ನಿನ್ನ ಎಲ್ಲ ಕಾರ್ಯಗಳು ಪೂರ್ಣವಾದಾಗ ಅಥವಾ ಪೂರ್ಣವಾಗುವ ಹತ್ತಿರ ಮುಟ್ಟಿದಾಗಲೇ ಬೇರೆ ರಾಜರಿಗೆ ತಿಳಿಯುತ್ತಿದೆ ತಾನೇ? ನಿನ್ನ ಮುಂದಿನ ಕಾರ್ಯಕ್ರಮವನ್ನು ಅವರು ಮೊದಲೇ ತಿಳಿಯುತ್ತಿಲ್ಲ ತಾನೇ.॥20॥
ಮೂಲಮ್ - 21
ಕಚ್ಚಿನ್ನ ತರ್ಕೈರ್ಯುಕ್ತ್ಯಾ ವಾ ಯೇ ಚಾಪ್ಯಪರಿಕೀರ್ತಿತಾಃ ।
ತ್ವಯಾ ವಾ ತವ ವಾಮಾತ್ಯೈರ್ಬುಧ್ಯತೇ ತಾತ ಮಂತ್ರಿತಮ್ ॥
ಅನುವಾದ
ನೀನು ನಿಶ್ಚಿತಗೊಳಿಸಿರುವ ವಿಚಾರಗಳು ನೀನು ಅಥವಾ ಮಂತ್ರಿಗಳು ಪ್ರಕಟಪಡಿಸುವ ಮೊದಲೇ ಬೇರೆ ಜನರು ತರ್ಕ ಮತ್ತು ಯುಕ್ತಿಯಿಂದ ತಿಳಿದುಕೊಳ್ಳುತ್ತಿಲ್ಲ ತಾನೇ? (ನಿನಗೆ ಹಾಗೂ ನಿನ್ನ ಅಮಾತ್ಯರಿಗೆ ಬೇರೆಯವರ ಗುಪ್ತವಿಚಾರಗಳು ತಿಳಿಯುತ್ತಿವೆಯಲ್ಲ?.॥21॥
ಮೂಲಮ್ - 22
ಕಶ್ಚಿತ್ಸಹಸ್ರೈಮೂರ್ಖಾಣಾಮೇಕಮಿಚ್ಛಸಿ ಪಂಡಿತಮ್ ।
ಪಂಡಿತೋ ಹ್ಯರ್ಥಕೃಚ್ಛ್ರೇಷು ಕುರ್ಯಾನ್ನಿಃಶ್ರೇಯಸಂ ಮಹತ್ ॥
ಅನುವಾದ
ನೀನು ಸಾವಿರಾರು ಮೂರ್ಖರ ಬದಲಿಗೆ ಒಬ್ಬ ಪಂಡಿತನನ್ನು ಬಳಿಯಲ್ಲಿಟ್ಟುಕೊಳ್ಳಲು ಬಯಸುತ್ತಿರುವೆ ತಾನೇ? ಏಕೆಂದರೆ ವಿದ್ವಾಂಸನಾದವನೇ ಅರ್ಥಸಂಕಟ ಕಾಲದಲ್ಲಿ ಮಹಾನ್ ಶ್ರೇಯಸ್ಸನ್ನು ಮಾಡಬಲ್ಲನು.॥22॥
ಮೂಲಮ್ - 23
ಸಹಸ್ರಾಣ್ಯಪಿ ಮೂರ್ಖಾಣಾಂ ಯದ್ಯುಪಾಸ್ತೇ ಮಹೀಪತಿಃ ।
ಅಥವಾಪ್ಯಯುತಾನ್ಯೇವ ನಾಸ್ತಿ ತೇಷು ಸಹಾಯತಾ ॥
ಅನುವಾದ
ರಾಜನಾದವನು ಸಾವಿರ ಅಥವಾ ಹತ್ತು ಸಾವಿರ ಮೂರ್ಖರನ್ನು ತನ್ನ ಬಳಿ ಇರಿಸಿಕೊಂಡರೂ ಕೂಡ ಅವರಿಂದ ಆಪತ್ಕಾಲದಲ್ಲಿ ಯಾವುದೇ ಸಹಾಯ ಸಿಗಲಾರದು.॥23॥
ಮೂಲಮ್ - 24
ಏಕೋಪ್ಯಮಾತ್ಯೋ ಮೇಧಾವೀ ಶೂರೋ ದಕ್ಷೋ ವಿಚಕ್ಷಣಃ ।
ರಾಜಾನಂ ರಾಜಪುತ್ರಂ ವಾ ಪ್ರಾಪಯೇನ್ಮಹತೀಂ ಶ್ರಿಯಮ್ ॥
ಅನುವಾದ
ಒಬ್ಬ ಮಂತ್ರಿಯಾದರೂ ಮೇಧಾವೀ, ಶೂರ-ವೀರ, ಚತುರ, ನೀತಿಜ್ಞನಾಗಿದ್ದರೆ ಅವನು ರಾಜಾ ಅಥವಾ ರಾಜಕುಮಾರನಿಗೆ ಬಹಳ ದೊಡ್ಡ ಸಂಪತ್ತು ದೊರಕಿಸಬಲ್ಲನು.॥24॥
ಮೂಲಮ್ - 25
ಕಚ್ಚಿನ್ಮುಖ್ಯಾ ಮಹತ್ಸೇವ ಮಧ್ಯಮೇಷು ಚ ಮಧ್ಯಮಾಃ ।
ಜಘನ್ಯಾಶ್ಚ ಜಘನ್ಯೇಷುಭೃತ್ಯಾಸ್ತೆ ತಾತ ಯೋಜಿತಾಃ ॥
ಅನುವಾದ
ಅಯ್ಯಾ! ನೀನು ಪ್ರಧಾನ ವ್ಯಕ್ತಿಗಳನ್ನು ಪ್ರಧಾನ ಕಾರ್ಯದಲ್ಲಿ, ಮಧ್ಯಮ ಶ್ರೇಣಿಯ ಮನುಷ್ಯರನ್ನು ಮಧ್ಯಮ ಮತ್ತು ನಿಮ್ನ ಶ್ರೇಣಿಯ ಜನರನ್ನು ಸಣ್ಣ ಕಾರ್ಯದಲ್ಲೇ ನಿಯುಕ್ತ ಗೊಳಿಸುವೆ ತಾನೇ.॥25॥
ಮೂಲಮ್ - 26
ಅಮಾತ್ಯಾನುಪಧಾತೀತಾನ್ಪಿತೃಪೈತಾಮಹಾನ್ಶುಚೀನ್ ।
ಶ್ರೇಷ್ಠಾನ್ ಶ್ರೇಷ್ಠೇಷು ಕಚ್ಚಿತ್ತ್ವಂ ನಿಯೋಜಯಸಿಕರ್ಮಸು ॥
ಅನುವಾದ
ಲಂಚಪಡೆಯದ, ನಿಶ್ಚಲವಾದ, ತಾತ-ಮುತ್ತಾತರ ಕಾಲದಿಂದಲೂ ಕಾರ್ಯಮಾಡುತ್ತಾ ಬಂದಿರುವ ಹಾಗೂ ತ್ರಿಕರಣ ಶುದ್ಧಿಯಿರುವ ಶ್ರೇಷ್ಠರಾದ ಅಮಾತ್ಯರನ್ನೇ ನೀನು ಮುಖ್ಯಕಾರ್ಯಗಳಲ್ಲಿ ನಿಯುಕ್ತಗೊಳಿಸಿರುವೆ ತಾನೇ.॥26॥
ಮೂಲಮ್ - 27
ಕಚ್ಚಿನ್ನೋಗ್ರೇಣ ದಂಡೇನ ಭೃಶಮುದ್ವೇಜಿತಾಃ ಪ್ರಜಾಃ ।
ರಾಷ್ಟ್ರೇ ತವಾವಜಾನಂತಿ ಮಂತ್ರಿಣಃ ಕೈಕಯೀಸುತ ॥
ಅನುವಾದ
ಕೈಕೇಯೀ ಕುಮಾರನೇ! ನಿನ್ನ ರಾಜ್ಯದ ಪ್ರಜೆಯು ಕಠೋರದಂಡದಿಂದ ಉದ್ವಿಗ್ನರಾಗಿ ನಿನ್ನ ಮತ್ತು ಮಂತ್ರಿಗಳನ್ನು ತಿರಸ್ಕಾರ ಮಾಡುವುದಿಲ್ಲ ತಾನೇ.॥27॥
ಮೂಲಮ್ - 28
ಕಚ್ಚಿತ್ತ್ವಾಂ ನಾವಜಾನಂತಿ ಯಾಜಕಾಃ ಪತಿತಂ ಯಥಾ ।
ಉಗ್ರಪ್ರತಿಗ್ರಹೀತಾರಂ ಕಾಮಯಾನಮಿವ ಸಿಯಃ ॥
ಅನುವಾದ
ಪವಿತ್ರನಾದ ಯಾಜಕನು ಪತಿತ ಯಜಮಾನನ್ನೂ, ಸ್ತ್ರೀಯರು ಕಾಮಚಾರೀ ಪುರುಷನನ್ನು ತಿರಸ್ಕರಿಸುವಂತೆಯೇ ಕಠೋರವಾಗಿ ಅಧಿಕಾರ ನಡೆಸಿದಾಗ ಪ್ರಜೆಗಳು ನಿನ್ನ ಅನಾದರ ಮಾಡುವುದಿಲ್ಲ ತಾನೇ.॥28॥
ಮೂಲಮ್ - 29
ಉಪಾಯಕುಶಲಂ ವೈದ್ಯಂ ಭೃತ್ಯಂಸಂದೂಷಣೇ ರತಮ್ ।
ಶೂರಮೈಶ್ವರ್ಯಕಾಮಂ ಚ ಯೋ ಹಂತಿ ನ ಸ ಹನ್ಯತೇ ॥
ಅನುವಾದ
ಸಾಮ, ದಾನ ಆದಿ ಉಪಾಯಗಳಲ್ಲಿ ಕುಶಲನಾದ, ರಾಜನೀತಿ ಶಾಸ್ತ್ರದ ವಿದ್ವಾಂಸನಾದ, ನಂಬಿಕಸ್ಥ ಸೇವಕರನ್ನು ಎತ್ತಿಕಟ್ಟುವವನು, ಶೂರ (ಸಾವಿಗೆ ಅಂಜದವನು), ರಾಜ್ಯವನ್ನು ಕಸಿದುಕೊಳ್ಳಲು ಬಯಸುವವ, ಇಂತಹ ಪುರುಷನನ್ನು ರಾಜನು ಕೊಂದುಹಾಕದಿದ್ದರೆ, ಸ್ವತಃ ಅವನ ಕೈಯಿಂದ ಸಾಯಬೇಕಾಗುತ್ತದೆ.॥29॥
ಮೂಲಮ್ - 30
ಕಚ್ಚಿದ್ ಧೃಷ್ಟಶ್ಚ ಶೂರಶ್ಚ ಧೃತಿಮಾನ್ಮತಿಮಾನ್ ಶುಚಿಃ ।
ಕುಲೀನಶ್ಚಾನುರಕ್ತಶ್ಚ ದಕ್ಷಃ ಸೇನಾಪತಿಃ ಕೃತಃ ॥
ಅನುವಾದ
ನೀನು ಸದಾ ಸಂತುಷ್ಟವಾಗಿರುವ, ಶೂರ-ವೀರ, ಧೈರ್ಯವಂತ, ಬುದ್ಧಿವಂತ, ಪವಿತ್ರ, ಕುಲೀನ ಹಾಗೂ ತನ್ನಲ್ಲಿ ಅನುರಾಗವುಳ್ಳ ರಣ ಕರ್ಮದಕ್ಷ ಪುರುಷನನ್ನೇ ಸೇನಾಪತಿಯಾಗಿಸಿಕೊಂಡಿರುವೆ ತಾನೇ.॥30॥
ಮೂಲಮ್ - 31
ಬಲವಂತಶ್ಚ ಕಚ್ಚಿತ್ತೇ ಮುಖ್ಯಾ ಯುದ್ಧವಿಶಾರದಾಃ ।
ದೃಷ್ಟಾಪದಾನಾ ವಿಕ್ರಾಂತಾಸ್ತ್ವಯಾ ಸತ್ಕೃತ್ಯ ಮಾನಿತಾಃ ॥
ಅನುವಾದ
ನಿನ್ನ ಮುಖ್ಯ ಸೇನಾಪತಿ ಬಲವಂತ, ಯುದ್ಧಕುಶಲ ಮತ್ತು ಪರಾಕ್ರಮಿಯಾಗಿರುವನಲ್ಲ? ನೀನು ಅವನ ಶೌರ್ಯವನ್ನು ಪರೀಕ್ಷಿಸಿದ್ದೆ ತಾನೇ? ಅವನು ನಿನ್ನಿಂದ ಸತ್ಕಾರಪೂರ್ವಕ ಸಮ್ಮಾನ ಪಡೆಯುತ್ತಿರುವನು ತಾನೇ.॥31॥
ಮೂಲಮ್ - 32
ಕಚ್ಚಿದ್ಬಲಸ್ಯ ಭಕ್ತಂ ಚ ವೇತನಂಚ ಯಥೋಚಿತಮ್ ।
ಸಂಪ್ರಾಪ್ತಕಾಲಂ ದಾತವ್ಯಂ ದದಾಸಿ ನ ವಿಲಂಬಸೇ ॥
ಅನುವಾದ
ಸೈನಿಕರಿಗೆ ಕೊಡಬೇಕಾದ ಸರಿಯಾದ ವೇತನ ಹಾಗೂ ಭತ್ತೆಗಳನ್ನು ನೀನು ಸಮಯಕ್ಕೆ ಸರಿಯಾಗಿ ಕೊಡುತ್ತಿರುವೆಯಲ್ಲ? ಕೊಡುವುದರಲ್ಲಿ ವಿಳಂಬ ಮಾಡುವುದಿಲ್ಲ ತಾನೇ.॥32॥
ಮೂಲಮ್ - 33
ಕಾಲಾತಿಕ್ರಮಣೇ ಹ್ಯೇವ ಭಕ್ತವೇತನಯೋರ್ಭೃತಾಃ ।
ಭರ್ತುರಪ್ಯತಿ ಕುಪ್ಯಂತಿ ಸೋಽನರ್ಥಃ ಸುಮಹಾನ್ ಕೃತಃ ॥
ಅನುವಾದ
ಸಮಯಕ್ಕೆ ಸರಿಯಾಗಿ ಭತ್ತೆ ಮತ್ತು ವೇತನ ಕೊಡದಿದ್ದರೆ ಸೈನಿಕರು ತಮ್ಮ ಒಡೆಯನ ಮೇಲೆಯೂ ಅತ್ಯಂತ ಕುಪಿತರಾಗುತ್ತಾರೆ; ಇದರಿಂದ ಬಹಳ ಭಾರೀ ಅನರ್ಥ ಘಟಿಸಬಹುದು.॥33॥
ಮೂಲಮ್ - 34
ಕಚ್ಚಿತ್ಸರ್ವೇಽನುರಕ್ತಾಸ್ತ್ವಾಂ ಕುಲಪುತ್ರಾಃ ಪ್ರಧಾನತಃ ।
ಕಚ್ಚಿತ್ಪ್ರಾಣಾಂಸ್ತವಾರ್ಥೇಷು ಸಂತ್ಯಜಂತಿ ಸಮಾಹಿತಾಃ ॥
ಅನುವಾದ
ಉತ್ತಮ ಕುಲದಲ್ಲಿ ಹುಟ್ಟಿದ ಮಂತ್ರಿಗಳೇ ಆದಿ ಎಲ್ಲ ಮುಖ್ಯ ಅಧಿಕಾರಿಗಳು ನಿನ್ನಲ್ಲಿ ಪ್ರೇಮವಿರಿಸುತ್ತಾರಲ್ಲ? ಅವರು ನಿನಗಾಗಿ ಏಕಚಿತ್ತರಾಗಿ ತನ್ನ ಪ್ರಾಣಗಳನ್ನೂ ತ್ಯಜಿಸಲು ಉದ್ಯುಕ್ತರಾಗಿರುವರು ತಾನೇ.॥34॥
ಮೂಲಮ್ - 35
ಕಚ್ಚಿಜ್ಜಾನಪದೋ ವಿದ್ವಾನ್ ದಕ್ಷಿಣಃ ಪ್ರತಿಭಾನವಾನ್ ।
ಯಥೋಕ್ತವಾದೀ ದೂತಸ್ತೇ ಕೃತೋ ಭರತ ಪಂಡಿತಃ ॥
ಅನುವಾದ
ಭರತ! ನೀನು ರಾಜದೂತನಾಗಿ ನಿಯುಕ್ತಗೊಳಿಸಿದವನು ತನ್ನ ದೇಶದ ನಿವಾಸೀ, ವಿದ್ವಾಂಸ, ಕುಶಲ, ಪ್ರತಿಭಾಶಾಲಿ ಮತ್ತು ಹೇಳಿದಂತೆಯೇ ಬೇರೆಯವರ ಮುಂದೆ ಮಾತನ್ನು ಹೇಳುವ ಸದಸದ್ವಿವೇಕಯುಕ್ತನಾಗಿರುವನು ತಾನೇ.॥35॥
ಮೂಲಮ್ - 36
ಕಚ್ಚಿದಷ್ಟಾದಶಾನ್ಯೇಷು ಸ್ವಪಕ್ಷೇ ದಶ ಪಂಚ ಚ ।
ತ್ರಿಭಿಸ್ತ್ರಿಭಿರವಿಜ್ಞಾತೈರ್ವೇತ್ಸಿ ತೀರ್ಥಾನಿ ಚಾರಕೈಃ ॥
ಅನುವಾದ
ನೀನು ಶತ್ರುಪಕ್ಷದ ಹದಿನೆಂಟು1 ಮತ್ತು ತನ್ನ ಪಕ್ಷದ ಹದಿನೈದು2 ತೀರ್ಥಗಳನ್ನು ಮೂರು-ಮೂರು ಅಜ್ಞಾತ ಗುಪ್ತಚರರ ಮೂಲಕ ಪರೀಕ್ಷಿಸಿಕೊಳ್ಳುವೆ ತಾನೇ.॥36॥
ಟಿಪ್ಪನೀ
1 ಶತ್ರು ಪಕ್ಷದ ಮಂತ್ರೀ, ಪುರೋಹಿತ, ಯುವರಾಜ, ಸೇನಾಪತಿ, ದ್ವಾರಪಾಲ, ಅಂತರ್ವೇಶಿಕ (ಅಂತಃಪುರದ ಅಧ್ಯಕ್ಷ), ಕಾರಾಗಾರಾಧ್ಯಕ್ಷ, ಕೋಶಾಧ್ಯಕ್ಷ, ಯಥಾಯೋಗ್ಯ ಕಾರ್ಯಗಳಲ್ಲಿ ಧನವನ್ನು ವ್ಯಯಿಸುವ ಸಚಿವ, ಪ್ರದೇಷ್ಟಾ (ಕಾವಲುಗಾರರಿಗೆ ಕೆಲಸ ಹೇಳುವವನು), ನಗರಾಧ್ಯಕ್ಷ (ಕೊತುವಾಲ), ಕಾರ್ಯನಿರ್ಮಾಣ ಕರ್ತಾ (ಶಿಲ್ಪಿಗಳ ಮೇಲ್ವಿಚಾರಕ), ಧರ್ಮಾಧ್ಯಕ್ಷ, ಸಭಾಧ್ಯಕ್ಷ, ದಂಡಪಾಲ, ದುರ್ಗಪಾಲ, ರಾಷ್ಟ್ರಸೀಮಾಪಾಲ ಮತ್ತು ವನರಕ್ಷಕ - ಇವು ಹದಿನೆಂಟು ತೀರ್ಥಗಳಾಗಿವೆ. ಇವುಗಳ ಮೇಲೆ ರಾಜನು ದೃಷ್ಟಿಯನ್ನಿರಿಸಬೇಕು. ಮತಾಂತರದಿಂದ ಈ ಹದಿನೆಂಟು ತೀರ್ಥಗಳು ಈ ಪ್ರಕಾರ ಇವೆ - ಮಂತ್ರಿ, ಪುರೋಹಿತ, ಯುವರಾಜ, ಸೇನಾಪತಿ, ದ್ವಾರಪಾಲ, ಅಂತಃಪುರಾಧ್ಯಕ್ಷ, ಕಾರಾಗಾರಾಧ್ಯಕ್ಷ, ಧನಾಧ್ಯಕ್ಷ, ರಾಜಾಜ್ಞೆಯಂತೆ ಸೇವಕರಿಗೆ ಕೆಲಸ ತಿಳಿಸುವವನು, ವಾದೀ-ಪ್ರತಿವಾದಿಗಳ ಖಟ್ಲೆಯನ್ನು ವಿಚಾರಿಸುವವ, ಪ್ರಾಡ್ವಿವಾಕ (ವಕೀಲ), ಧರ್ಮಾಸನಾಧಿಕಾರೀ (ನ್ಯಾಯಾಧೀಶ), ವ್ಯವಹಾರ ನಿರ್ಣೇತಾ, ಸಭ್ಯ, ಸೈನ್ಯಕ್ಕೆ ಧನವನ್ನು ಕೊಡುವ ಅಧಿಕಾರಿ (ಸೇನಾನಾಯಕ), ಕೆಲಸಗಾರರ ಕೆಲಸ ಪೂರ್ಣವಾದಾಗ ಸಂಬಳಕೊಡಲು ರಾಜನಿಂದ ಧನ ಪಡೆಯುವವನು, ನಗರಾಧ್ಯಕ್ಷ, ರಾಷ್ಟ್ರಸೀಮಾಪಾಲಕ, ವನರಕ್ಷಕ, ದುಷ್ಟರಿಗೆ ದಂಡ ಕೊಡುವ ಅಧಿಕಾರಿ, ಜಲ, ಪರ್ವತ, ವನ ಹಾಗೂ ದುರ್ಗಮ ಭೂಮಿಯನ್ನು ರಕ್ಷಿಸುವವ - ಇವರ ಮೇಲೆ ರಾಜನು ದೃಷ್ಟಿ ಇರಿಸಬೇಕು.
ಅನುವಾದ
2 ಮೇಲಿನ ಹದಿನೆಂಟು ತೀರ್ಥಗಳಲ್ಲಿ ಮೊದಲಿನ ಮೂರನ್ನು ಬಿಟ್ಟು ಉಳಿದ ಹದಿನೈದು ತೀರ್ಥ ತನ್ನ ಪಕ್ಷದವರಾಗಿದ್ದರೂ ಸದಾ ಪರೀಕ್ಷಿಸಬೇಕು.
ಮೂಲಮ್ - 37
ಕಚ್ಚಿದ್ ವ್ಯಾಪಾಸ್ತಾನಹಿತಾನ್ ಪ್ರತಿಯಾತಾಂಶ್ಚ ಸರ್ವದಾ ।
ದುರ್ಬಲಾನನವಜ್ಞಾಯ ವರ್ತಸೇ ರಿಪುಸೂದನ ॥
ಅನುವಾದ
ಶತ್ರುಸೂದನ! ಯಾವ ಶತ್ರುಗಳನ್ನು ನೀನು ರಾಜ್ಯದಿಂದ ಗಡೀಪಾರು ಮಾಡಿರುವೆಯೋ ಅವರು ಮರಳಿ ಬಂದರೆ ಅವರನ್ನು ದುರ್ಬಲರೆಂದು ತಿಳಿದು ಉಪೇಕ್ಷೆ ಮಾಡುವುದಿಲ್ಲ ತಾನೇ.॥37॥
ಮೂಲಮ್ - 38
ಕಚ್ಚಿನ್ನ ಲೌಕಾಯತಿಕಾನ್ ಬ್ರಾಹ್ಮಣಾಂಸ್ತಾತಸೇವಸೇ ।
ಅನರ್ಥಕುಶಲಾ ಹ್ಯೇತೇ ಬಾಲಾಃ ಪಂಡಿತಮಾನಿನಃ ॥
ಅನುವಾದ
ಅಯ್ಯಾ! ನೀನು ಎಂದೂ ನಾಸ್ತಿಕ ಬ್ರಾಹ್ಮಣನ ಸಂಗ ಮಾಡುವುದಿಲ್ಲ ತಾನೇ? ಏಕೆಂದರೆ ಅವರು ಪರಮಾರ್ಥದಿಂದ ಬುದ್ಧಿಯನ್ನು ವಿಚಲಿತಗೊಳಿಸುವುದರಲ್ಲಿ ಕುಶಲರಾಗಿರುತ್ತಾರೆ, ನಿಜವಾಗಿ ಅಜ್ಞಾನಿಗಳಾಗಿದ್ದರೂ ತನ್ನನ್ನು ಬಹಳ ದೊಡ್ಡ ಪಂಡಿತ ನೆಂದು ತಿಳಿಯುತ್ತಾರೆ.॥38॥
ಮೂಲಮ್ - 39
ಧರ್ಮಶಾಸ್ತ್ರೇಷು ಮುಖ್ಯೇಷು ವಿದ್ಯಮಾನೇಷು ದುರ್ಬುಧಾಃ ।
ಬುದ್ಧಿಮಾನ್ವೀಕ್ಷಿಕೀಂ ಪ್ರಾಪ್ಯ ನಿರರ್ಥಂ ಪ್ರವದಂತಿ ತೇ ॥
ಅನುವಾದ
ಅವರ ಜ್ಞಾನವು ವೇದವಿರುದ್ಧವಾಗಿರುವುದರಿಂದ ದೂಷಿತವಾಗಿರುತ್ತದೆ ಮತ್ತು ಅವರು ಪ್ರಮಾಣಭೂತ ಮುಖ್ಯ-ಮುಖ್ಯ ಧರ್ಮಶಾಸ್ತ್ರಗಳು ಇದ್ದರೂ ತಾರ್ಕಿಕ ಬುದ್ಧಿಯನ್ನು ಆಶ್ರಯಿಸಿ ವ್ಯರ್ಥವಾಗಿ ವಾದಿಸುತ್ತಾ ಇರುತ್ತಾರೆ.॥39॥
ಮೂಲಮ್ - 40
ವೀರೈರಧ್ಯುಷಿತಾಂ ಪೂರ್ವಮಸ್ಮಾಕಂ ತಾತಪೂರ್ವಕೈಃ ।
ಸತ್ಯನಾಮಾಂ ದೃಢದ್ವಾರಾಂ ಹಸ್ತ್ಯಶ್ವರಥಸಂಕುಲಾಮ್ ॥
ಮೂಲಮ್ - 41
ಬ್ರಾಹ್ಮಣೈಃ ಕ್ಷತ್ರಿಯೈರ್ವೈಶ್ಯೈಃ ಸ್ವಕರ್ಮನಿರತೈಃ ಸದಾ ।
ಜಿತೇಂದ್ರಿಯೈರ್ಮಹೋತ್ಸಾಹೈರ್ವೃತಾಮಾರ್ಯೈಃ ಸಹಸ್ರಶಃ ॥
ಮೂಲಮ್ - 42
ಪ್ರಾಸಾದೈರ್ವಿವಿಧಾಕಾರೈರ್ವೃತಾಂ ವೈದ್ಯಜನಾಕುಲಾಮ್ ।
ಕಚ್ಚಿತ್ ಸಮುದಿತಾಂಸ್ಫೀತಾಮಯೋಧ್ಯಾಂ ಪರಿರಕ್ಷಸೇ ॥
ಅನುವಾದ
ಅಪ್ಪಾ! ಅಯೋಧ್ಯೆಯು ನಮ್ಮ ವೀರ ಪೂರ್ವಜರ ನಿವಾಸಭೂಮಿಯಾಗಿದೆ. ಅದರ ಹೆಸರು ಇರುವಂತೆಯೇ ಗುಣವೂ ಆಗಿದೆ. ಅದರ ದ್ವಾರಗಳು ಸುದೃಢವಾಗಿವೆ. ಆನೆ, ಕುದುರೆ, ರಥಗಳಿಂದ ಅದು ಪರಿಪೂರ್ಣವಾಗಿದೆ. ತಮ್ಮ-ತಮ್ಮ ಕರ್ಮಗಳಲ್ಲಿ ತೊಡಗಿರುವ ಬ್ರಾಹ್ಮಣ, ಕ್ಷತ್ರಿಯರು, ವೈಶ್ಯರು ಸಾವಿರಾರು ಸಂಖ್ಯೆಯಲ್ಲಿ ಅಲ್ಲಿ ಸದಾ ವಾಸಿಸುತ್ತಾರೆ. ಅವರೆಲ್ಲರೂ ಉತ್ಸಾಹಿಗಳೂ, ಜಿತೇಂದ್ರಿಯರೂ, ಶ್ರೇಷ್ಠರೂ ಆಗಿದ್ದಾರೆ. ನಾನಾ ರೀತಿಯ ಅರಮನೆಗಳಿಂದ, ಮಂದಿರಗಳಿಂದ ಅದು ಶೋಭಿಸುತ್ತಾ ಇದೆ. ಆ ನಗರಿಯು ಅಸಂಖ್ಯ ವಿದ್ವಾಂಸರಿಂದ ತುಂಬಿದೆ. ಇಂತಹ ಅಭ್ಯುದಯಶೀಲ ಮತ್ತು ಸಮೃದ್ಧಿಶಾಲಿನೀ ನಗರಿ ಅಯೋಧ್ಯೆಯನ್ನು ನೀನು ಚೆನ್ನಾಗಿ ರಕ್ಷಿಸುತ್ತಾ ಇರುತ್ತಿರುವೆ ತಾನೇ.॥40-42॥
ಮೂಲಮ್ - 43
ಕಚ್ಚಿಚ್ಚೈತ್ತ್ಯಶತೈರ್ಜುಷ್ಟಃ ಸುನಿವಿಷ್ಟಜನಾಕುಲಃ ।
ದೇವಸ್ಥಾನೈಃ ಪ್ರಪಾಭಿಶ್ಚ ತಟಾಕೈಶ್ಚೋಪಶೋಭಿತಃ ॥
ಮೂಲಮ್ - 44
ಪ್ರಹೃಷ್ಟನರನಾರೀಕಃ ಸಮಾಜೋತ್ಸವಶೋಭಿತಃ ।
ಸುಕೃಷ್ಟಸೀಮಾಪಶುಮಾನ್ ಹಿಂಸಾಭಿರಭಿವರ್ಜಿತಃ ॥
ಮೂಲಮ್ - 45
ಅದೇವಮಾತೃಕೋ ರಮ್ಯಃ ಶ್ವಾಪದೈಃ ಪರಿವರ್ಜಿತಃ ।
ಪರಿತ್ಯಕ್ತೋ ಭಯೈಃಸರ್ವೈಃ ಖನಿಭಿಶ್ಚೋಪಶೋಭಿತಃ ॥
ಮೂಲಮ್ - 46
ವಿವರ್ಜಿತೋ ನರೈಃ ಪಾಪೈರ್ಮಮ ಪೂರ್ವೈಃ ಸುರಕ್ಷಿತಃ ।
ಕಚ್ಚಿಜ್ಜನಪದಃ ಸ್ಫೀತಃ ಸುಖಂ ವಸತಿ ರಾಘವ ॥
ಅನುವಾದ
ರಘುನಂದನ ಭರತ! ನಮ್ಮ ಕೋಸಲ ದೇಶದಲ್ಲಿ ನಾನಾ ಪ್ರಕಾರದ ಅಶ್ವಮೇಧಾದಿ ಮಹಾಯಜ್ಞಗಳ ಅನುಷ್ಠಾನ ಸ್ಥಳಗಳು ಶೋಭಿಸುತ್ತಿವೆ, ಅದರಲ್ಲಿ ಪ್ರತಿಷ್ಠಿತ ಮನುಷ್ಯರು ಹೆಚ್ಚಾಗಿ ವಾಸಿಸುತ್ತಾರೆ. ಅನೇಕ ದೇವಸ್ಥಾನಗಳು, ಅರವಟ್ಟಿಗೆಗಳು, ಸರೋವರಗಳು ಅದರ ಶೋಭೆಯನ್ನು ಹೆಚ್ಚಿಸಿವೆ. ಅಲ್ಲಿಯ ಸ್ತ್ರೀ-ಪುರುಷರು ಸದಾ ಪ್ರಸನ್ನರಾಗಿದ್ದು, ಅವರು ಸಾಮಾಜಿಕ ಉತ್ಸವಗಳಿಂದ ಸದಾ ಶೋಭಿಸುತ್ತಿದ್ದಾರೆ. ಅಲ್ಲಿ ಹೊಲವನ್ನು ಉಳುವ ಸಮರ್ಥ ಪಶುಗಳು ಹೆಚ್ಚಾಗಿವೆ; ಯಾವುದೇ ರೀತಿಯ ಹಿಂಸೆ ಆಗುವುದಿಲ್ಲ. ಅಲ್ಲಿ ಹೊಲಕ್ಕಾಗಿ ಮಳೆಯ ನೀರನ್ನೇ ಅವಲಂಬಿಸದೇ ರಮ್ಯವಾಗಿ ಕಂಗೊಳಿಸುತ್ತಿರುವ ನದಿಗಳ ನೀರನ್ನು ಹಾಯಿಸಲಾಗುವುದು. ಹಿಂಸಕ ಪಶುಗಳಿಂದ ರಹಿತವಾಗಿ ಯಾವುದರ ಭಯವೂ ಅಲ್ಲಿ ಇರುವುದಿಲ್ಲ. ಅನೇಕ ಪ್ರಕಾರದ ಗಣಿಗಳಿಂದ ಅದರ ಶೋಭೆ ಹೆಚ್ಚಿದೆ. ಅಲ್ಲಿ ಪಾಪಿ ಮನುಷ್ಯರ ಸರ್ವಥಾ ಅಭಾವವಾಗಿದೆ. ಇದನ್ನು ನಮ್ಮ ಪೂರ್ವಜರು ಚೆನ್ನಾಗಿ ರಕ್ಷಿಸಿದ್ದರು; ಅಂತಹ ರಾಜ್ಯವು ಧನ-ಧಾನ್ಯಗಳಿಂದ ಸಂಪನ್ನ ಮತ್ತು ಸುಖವಾಗಿ ನೆಲೆಸಿದೆಯಲ್ಲ.॥43-46॥
ಮೂಲಮ್ - 47
ಕಚ್ಚಿತ್ತೇ ದಯಿತಾಃ ಸರ್ವೇ ಕೃಷಿಗೋರಕ್ಷಜೀವಿನಃ ।
ವಾರ್ತಾಯಾಂ ಸಂಶ್ರಿತಸ್ತಾತ ಲೋಕೋಽಯಂ ಸುಖಮೇಧತೇ ॥
ಅನುವಾದ
ಅಯ್ಯಾ! ಕೃಷಿ-ಗೋರಕ್ಷದಿಂದ ಜೀವನ ನಡೆಸುವ ಎಲ್ಲ ವೈಶ್ಯರು ನಿನಗೆ ಪ್ರೀತಿಪಾತ್ರರಾಗಿದ್ದಾರಲ್ಲ? ಏಕೆಂದರೆ ಕೃಷಿ ಮತ್ತು ವ್ಯಾಪಾರಾದಿಗಳಲ್ಲಿ ಸಂಲಗ್ನವಾಗಿದ್ದಾಗಲೇ ಈ ಲೋಕ ಸುಖೀ ಮತ್ತು ಉನ್ನತಿಶೀಲವಾಗುತ್ತದೆ.॥47॥
ಮೂಲಮ್ - 48
ತೇಷಾಂ ಗುಪ್ತಿಪರೀಹಾರೈಃ ಕಚ್ಚಿತ್ತೇ ಭರಣಂ ಕೃತಮ್ ।
ರಕ್ಷ್ಯಾ ಹಿ ರಾಜಾ ಧರ್ಮೇಣ ಸರ್ವೇ ವಿಷಯವಾಸಿನಃ ॥
ಅನುವಾದ
ಆ ವೈಶ್ಯರ ರಕ್ಷಣೆ ಮತ್ತು ಅವರಿಗೆ ಒದಗುವ ಕಷ್ಟಗಳ ಪರಿಹಾರ ಇವುಗಳಿಂದ ಅವರನ್ನು ಭರಿಸಿ ಪೋಷಿಸುತ್ತಿರುವೆಯಲ್ಲವೇ? ಏಕೆಂದರೆ, ರಾಜನಾದವನು ತನ್ನ ದೇಶದಲ್ಲಿರುವ ಎಲ್ಲ ಪ್ರಜೆಗಳನ್ನು ಧರ್ಮದಿಂದ ಪಾಲಿಸಬೇಕು.॥48॥
ಮೂಲಮ್ - 49
ಕಚ್ಚಿತ್ಸ್ತ್ರಿಯಃ ಸಾಂತ್ವಯಸೇ ಕಚ್ಚಿತ್ತಾಸ್ತೇ ಸುರಕ್ಷಿತಾಃ ।
ಕಚ್ಚಿನ್ನ ಶ್ರದ್ದಧಾಸ್ಯಾಸಾಂ ಕಚ್ಚಿದ್ಗುಹ್ಯಂ ನ ಭಾಷಸೇ ॥
ಅನುವಾದ
ಕಷ್ಟದಲ್ಲಿರುವ ಸ್ತ್ರೀಯರನ್ನು ಸಂತೈಸುತ್ತಿರುವೆಯಲ್ಲವೇ? ಅವರು ನಿನ್ನ ದೇಶದಲ್ಲಿ ಸುರಕ್ಷಿತರಾಗಿರುವರಲ್ಲವೇ? ಅವರಲ್ಲಿ ನೀನು ಹೆಚ್ಚಿನ ನಂಬಿಕೆ ಇಡುತ್ತಿಲ್ಲವಲ್ಲ? ರಹಸ್ಯ ವಿಷಯಗಳನ್ನು ಅವರಿಗೆ ಹೇಳುತ್ತಿಲ್ಲ ತಾನೇ.॥49॥
ಮೂಲಮ್ - 50
ಕಚ್ಚಿನ್ನಾಗವನಂ ಗುಪ್ತಂ ಕಚ್ಚಿತ್ತೇ ಸಂತಿ ಧೇನುಕಾಃ ।
ಕಚ್ಚಿನ್ನ ಗಣಿಕಾಶ್ವಾನಾಂ ಕುಂಜರಾಣಾಂ ಚ ತೃಪ್ಯಸಿ ॥
ಅನುವಾದ
ಆನೆಗಳು ಉತ್ಪನ್ನವಾಗುವ ಅರಣ್ಯವು ನಿನ್ನಿಂದ ಸುರಕ್ಷಿತವಾಗಿದೆಯಲ್ಲ? ಹಾಲು ಕರೆಯುವ ಹಸುಗಳು ನಿನ್ನ ಬಳಿ ಹೆಚ್ಚಾಗಿ ಇವೆಯಲ್ಲವೇ? (ಅಥವಾ ಗಂಡಾನೆಗಳನ್ನು ಮೋಸಗೊಳಿಸುವ ಹೆಣ್ಣಾನೆಗಳು ನಿನ್ನಲ್ಲಿ ಸಾಕಷ್ಟಿವೆ ತಾನೇ?) ಹೆಣ್ಣಾನೆಗಳ, ಕುದುರೆಗಳ, ಗಂಡಾನೆಗಳ ಸಂಗ್ರಹದಿಂದ ನೀನು ಎಂದೂ ತೃಪ್ತನಾಗುವುದಿಲ್ಲ ತಾನೇ.॥50॥
ಮೂಲಮ್ - 51
ಕಚ್ಚಿದ್ದರ್ಶಯಸೇ ನಿತ್ಯಂ ಮಾನುಷಾಣಾಂವಿಭೂಷಿತಮ್ ।
ಉತ್ಥಾಯೋತ್ಥಾಯ ಪೂರ್ವಾಹ್ಣೇ ರಾಜಪುತ್ರ ಮಹಾಪಥೇ ॥
ಅನುವಾದ
ರಾಜಕುಮಾರ! ನೀನು ಪ್ರತಿದಿನ ಪೂರ್ವಹ್ನದಲ್ಲಿ ವಸಾಭೂಷಣಗಳಿಂದ ಅಲಂಕೃತನಾಗಿ ಮುಖ್ಯ ಬೀದಿಗಳಲ್ಲಿ ಸಂಚರಿಸಿ ನಗರವಾಸೀ ಜನರಿಗೆ ದರ್ಶನ ಕೊಡುತ್ತಿರುವೆ ತಾನೇ.॥51॥
ಮೂಲಮ್ - 52
ಕಚ್ಚಿನ್ನ ಸರ್ವೇ ಕರ್ಮಾಂತಾಃಪ್ರತ್ಯಕ್ಷಾಸ್ತೇಽವಿಶಂಕಯಾ ।
ಸರ್ವೇ ವಾ ಪುನುರುತ್ಸೃಷ್ಟಾ ಮಧ್ಯಮೇವಾತ್ರ ಕಾರಣಮ್ ॥
ಅನುವಾದ
ನಾನಾ ವಿಧವಾದ ಕಾರ್ಯದಲ್ಲಿ ನಿಯುಕ್ತರಾದ ಸೇವಕರು ಧೈರ್ಯದಿಂದ ನಿನ್ನ ಎದುರಿಗೆ ಓಡಾಡುತ್ತಾ ಇರುವರೇ? ಅಥವಾ ನಿನ್ನ ಭಯದಿಂದ ದೂರವೇ ಉಳಿಯುತ್ತಾರೆಯೇ? ಏಕೆಂದರೆ, ಸೇವಕರ ವಿಷಯದಲ್ಲಿ ಮಧ್ಯಮ ಸ್ಥಿತಿಯನ್ನು ಅವಲಂಬಿಸುವುದೇ ಕಾರ್ಯಸಿದ್ಧಿಯ ಕಾರಣವಾಗಿದೆ.॥52॥
ಮೂಲಮ್ - 53
ಕಚ್ಚಿದ್ದುರ್ಗಾಣಿ ಸರ್ವಾಣಿ ಧನಧಾನ್ಯಾಯುಧೋದಕೈಃ ।
ಯಂತ್ರೈಶ್ಚ ಪ್ರತಿಪೂರ್ಣಾನಿ ತಥಾ ಶಿಲ್ಪಿಧನುರ್ಧರೈಃ ॥
ಅನುವಾದ
ನಿನ್ನ ಎಲ್ಲ ದುರ್ಗ (ಕೋಟೆ)ಗಳೂ ಧನ-ಧಾನ್ಯ, ಅಸ್ತ್ರ-ಶಸ್ತ್ರ, ಜಲ, ಯಂತ್ರ, ಶಿಲ್ಪಿ ಹಾಗೂ ಧನುರ್ಧರ ಸೈನಿಕರಿಂದ ತುಂಬಿರುತ್ತವೆ ತಾನೇ.॥53॥
ಮೂಲಮ್ - 54
ಆಯಸ್ತೇ ವಿಪುಲಃ ಕಚ್ಚಿತ್ ಕಚ್ಚಿದಲ್ಪತರೋ ವ್ಯಯಃ ।
ಅಪಾತ್ರೇಷು ನ ತೇ ಕಚ್ಚಿತ್ ಕೋಷೋಗಚ್ಛತಿರಾಘವ ॥
ಅನುವಾದ
ರಘುನಂದನ! ನಿನ್ನ ಆದಾಯ ಹೆಚ್ಚಾಗಿದ್ದು, ವ್ಯಯ ಬಹಳ ಕಡಿಮೆಯಾಗಿದೆಯಲ್ಲ? ನಿನ್ನ ಭಂಡಾರದ ಧನವು ಅಪಾತ್ರರ ಕೈಗೆ ಸೇರುವುದಿಲ್ಲ ತಾನೇ.॥54॥
ಮೂಲಮ್ - 55
ದೇವತಾರ್ಥೇ ಚ ಪಿತ್ರರ್ಥೇ ಬ್ರಾಹ್ಮಣಾಭ್ಯಾಗತೇಷು ಚ ।
ಯೋಧೇಷು ಮಿತ್ರವರ್ಗೇಷು ಕಚ್ಚಿದ್ಗಚ್ಛತಿ ತೇ ವ್ಯಯಃ ॥
ಅನುವಾದ
ದೇವತೆಗಳು, ಪಿತೃಗಳು, ಬ್ರಾಹ್ಮಣರು, ಅಭ್ಯಾಗತರು, ಯೋಧರು, ಮಂತ್ರಿಗಳು-ಇವರಿಗಾಗಿಯೇ ನಿನ್ನ ಧನ ಖರ್ಚಾಗುವುದು ತಾನೇ.॥55॥
ಮೂಲಮ್ - 56
ಕಚ್ಚಿದಾರ್ಯೋಽಪಿ ಶುದ್ಧಾತ್ಮಾ ಕ್ಷಾರಿತಶ್ಚಾಪಕರ್ಮಣಾ ।
ಅದೃಷ್ಟಃ ಶಾಸ್ತ್ರಕುಶಲೈರ್ನ ಲೋಭಾದ್ಬಧ್ಯತೇ ಶುಚಿಃ ॥
ಅನುವಾದ
ಯಾವನಾದರೂ ಮನುಷ್ಯನು ಶ್ರೇಷ್ಠ, ನಿರ್ದೋಷ, ಶುದ್ಧಾತ್ಮಾ ಮನುಷ್ಯನ ಮೇಲೆ ದೋಷಾರೋಪಣೆ ಮಾಡಿ. ಶಾಸ್ತ್ರಜ್ಞಾನ ಕುಶಲ ವಿದ್ವಾಂಸರಿಂದ, ಅವನ ಕುರಿತು ವಿಚಾರಮಾಡದೆ, ಲೋಭವಶನಾಗಿ ಆರ್ಥಿಕ ದಂಡವಿಧಿಸುವುದಿಲ್ಲ ತಾನೇ.॥56॥
ಮೂಲಮ್ - 57
ಗೃಹೀತಶ್ಚೈವ ಪೃಷ್ಟಶ್ಚ ಕಾಲೇ ದೃಷ್ಟಃ ಸಕಾರಣಃ ।
ಕಚ್ಚಿನ್ನ ಮುಚ್ಯತೇ ಚೋರೋಧನಲೋಭಾನ್ನರರ್ಷಭ ॥
ಅನುವಾದ
ನರಶ್ರೇಷ್ಠನೇ! ಕಳ್ಳನೊಬ್ಬನು ಕಳ್ಳತನ ಮಾಡುತ್ತಿರುವಾಗಲೇ ಕಳವು ಮಾಡಿದ ಪದಾರ್ಥಗಳೊಂದಿಗೆ ಸಿಕ್ಕಿಬಿದ್ದು ಬಂಧಿತನಾಗಿ, ನ್ಯಾಯಾಧೀಶನಿಂದಲೂ ಕಳ್ಳನೆಂದೇ ನಿರ್ಧಾರವಾದ ಬಳಿಕ ಶಿಕ್ಷೆಕೊಡುವ ಸಂದರ್ಭದಲ್ಲಿ ಅಧಿಕಾರಿಗಳು ಧನದ ಆಸೆಯಿಂದ ಅಂತಹವನನ್ನು ಶಿಕ್ಷಿಸದೆ ಬಿಟ್ಟುಬಿಡುತ್ತಿಲ್ಲವಲ್ಲ.॥57॥
ಮೂಲಮ್ - 58
ವ್ಯಸನೇ ಕಚ್ಚಿದಾಢ್ಯಸ್ಯ ದುರ್ಬಲಸ್ಯ ಚ ರಾಘವ ।
ಅರ್ಥಂ ವಿರಾಗಾಃ ಪಶ್ಯಂತಿ ತವಾಮಾತ್ಯಾ ಬಹುಶ್ರುತಾಃ ॥
ಅನುವಾದ
ರಘುಕುಲಭೂಷಣ! ಶ್ರೀಮಂತ ಮತ್ತು ಬಡವರ ನಡುವೆ ಯಾವುದಾದರೂ ವಿವಾದ ಉಂಟಾಗಿ, ಅದು ರಾಜ್ಯದ ನ್ಯಾಯಾಲಯಕ್ಕೆ ನಿರ್ಣಯಕ್ಕಾಗಿ ಹೋದರೆ ನಿನ್ನ ಬಹುಶ್ರುತರಾದ ಮಂತ್ರಿಗಳು ಧನಾದಿ ಲೋಭವನ್ನು ಬಿಟ್ಟು ಆ ವಿವಾದವನ್ನು ನ್ಯಾಯಯುತವಾಗಿ ತೀರ್ಮಾನಿಸುತ್ತಾರಲ್ಲ.॥58॥
ಮೂಲಮ್ - 59
ಯಾನಿ ಮಿಥ್ಯಾಭಿಶಸ್ತಾನಾಂ ಪತಂತ್ಯಶ್ರೂಣಿ ರಾಘವ ।
ತಾನಿ ಪುತ್ರಪಶೂನ್ ಘ್ನಂತಿ ಪ್ರೀತ್ಯರ್ಥಮನುಶಾಸತಃ ॥
ಅನುವಾದ
ರಘುನಂದನ! ನಿರಪರಾಧಿಯಾಗಿದ್ದರೂ ಅವರ ಮೇಲೆ ಮಿಥ್ಯಾದೋಷಾರೋಪಣೆ ಮಾಡಿ ಶಿಕ್ಷೆ ಕೊಡಲಾದರೆ, ಆ ಮನುಷ್ಯನು ಹರಿಸುವ ಕಂಬನಿಯು ಪಕ್ಷಪಾತವಾಗಿ ಶಾಸನ ಮಾಡುವ ಆ ರಾಜನ ಪುತ್ರ ಹಾಗೂ ಪಶುಗಳನ್ನು ನಾಶ ಮಾಡಿಬಿಡುತ್ತದೆ.॥59॥
ಮೂಲಮ್ - 60
ಕಚ್ಚ್ವಿದ್ ವೃದ್ಧಾಂಶ್ಚ ಬಾಲಾಂಶ್ಚ ವೈದ್ಯಾನ್ ಮುಖ್ಯಾಂಶ್ಚ ರಾಘವ ।
ದಾನೇನಮನಸಾ ವಾಚಾ ತ್ರಿಭಿರೇತೈರ್ಬುಭೂಷಸೇ ॥
ಅನುವಾದ
ರಾಘವ! ನೀನು ವೃದ್ಧಪುರುಷರನ್ನು ಆಂತರಿಕ ಅನುರಾಗದಿಂದ, ಬಾಲಕರನ್ನು ಮಧುರ ವಚನಗಳಿಂದ ಮತ್ತು ಮುಖ್ಯ-ಮುಖ್ಯ ವೈದ್ಯರನ್ನು ಧನದಾನದಿಂದ ಸಮ್ಮಾನಿಸುತ್ತಿರುವಿ ತಾನೇ.॥60॥
ಮೂಲಮ್ - 61
ಕಚ್ಚಿದ್ಗುರೂಂಶ್ಚ ವೃದ್ಧಾಂಶ್ಚ ತಾಪಸಾನ್ ದೇವತಾತಿಥೀನ್ ।
ಚೈತ್ಯಾಂಶ್ಚ ಸರ್ವಾನ್ಸಿದ್ಧಾರ್ಥಾನ್ ಬ್ರಾಹ್ಮಣಾಂಶ್ಚ ನಮಸ್ಯಸಿ ॥
ಅನುವಾದ
ಗುರು-ಹಿರಿಯರಿಗೆ, ವೃದ್ಧರಿಗೆ, ತಪಸ್ವಿಗಳಿಗೆ, ದೇವತೆಗಳಿಗೆ, ಅತಿಥಿಗಳಿಗೆ, ಪವಿತ್ರವೃಕ್ಷಗಳಿಗೆ ಮತ್ತು ಸಮಸ್ತ ಪೂರ್ಣಕಾಮ ಬ್ರಾಹ್ಮಣರಿಗೆ ನಮಸ್ಕರಿಸುತ್ತಿರುವೆಯಲ್ಲ.॥61॥
ಮೂಲಮ್ - 62
ಕಚ್ಚಿದರ್ಥೇನ ವಾ ಧರ್ಮಮರ್ಥಂ ಧರ್ಮೇಣ ವಾ ಪುನಃ ।
ಉಭೌ ವಾ ಪ್ರೀತಿಲೋಭೇನ ಕಾಮೇನ ನ ವಿಬಾಧಸೇ ॥
ಅನುವಾದ
ನೀನು ಅರ್ಥದಿಂದ ಧರ್ಮದ ಅಥವಾ ಧರ್ಮದಿಂದ ಅರ್ಥದ ಹಾನಿಯನ್ನು ಮಾಡುತ್ತಿಲ್ಲವಲ್ಲ? ಇಲ್ಲವೇ ಆಸಕ್ತಿ ಮತ್ತು ಲೋಭರೂಪೀ ಕಾಮದಿಂದ ಧರ್ಮ ಹಾಗೂ ಅರ್ಥ ಎರಡರಲ್ಲಿಯೂ ಬಾಧೆ ಬರಲು ಬಿಡುವುದಿಲ್ಲ ತಾನೇ.॥62॥
ಮೂಲಮ್ - 63
ಕಚ್ಚಿದರ್ಥಂ ಚ ಕಾಮಾ ಚ ಧರ್ಮಂ ಚ ಜಯತಾಂ ವರ ।
ವಿಭಜ್ಯ ಕಾಲೇ ಕಾಲಜ್ಞ ಸರ್ವಾನ್ ವರದ ಸೇವಸೇ ॥
ಅನುವಾದ
ವಿಜಯೀ ವೀರರಲ್ಲಿ ಶ್ರೇಷ್ಠನೂ, ಸಮಯೋಚಿತ ಕರ್ತವ್ಯವನ್ನು ಬಲ್ಲವನೂ, ಬೇರೆಯವರಿಗೆ ವರ ಕೊಡಲು ಸಮರ್ಥನೂ ಆದ ಭರತನೇ! ನೀನು ಸಮಯವನ್ನು ವಿಭಾಗಿಸಿ ಧರ್ಮ, ಅರ್ಥ, ಕಾಮ ಇವನ್ನು ಯೋಗ್ಯ ಸಮಯದಲ್ಲಿ ಸೇವಿಸುತ್ತಿರುವೆಯಲ್ಲ.॥63॥
ಮೂಲಮ್ - 64
ಕಚ್ಚಿತ್ತೇ ಬ್ರಾಹ್ಮಣಾಃ ಶರ್ಮ ಸರ್ವಶಾಸ್ತ್ರಾರ್ಥಕೋವಿದಾಃ ।
ಆಶಂಸಂತೇ ಮಹಾಪ್ರಾಜ್ಞ ಪೌರಜಾನಪದೈಃ ಸಹ ॥
ಅನುವಾದ
ಮಹಾ ಪ್ರಾಜ್ಞನೇ! ಸಮಸ್ತ ಶಾಸ್ತ್ರಗಳನ್ನು ತಿಳಿದ ಬ್ರಾಹ್ಮಣರು-ಪುರವಾಸಿಗಳು ಮತ್ತು ದೇಶವಾಸೀ ಜನರೊಂದಿಗೆ ನಿನ್ನ ಶ್ರೇಯಸ್ಸನ್ನು ಬಯಸುತ್ತಿರುವರು ತಾನೇ.॥64॥
ಮೂಲಮ್ - 65
ನಾಸ್ತಿಕ್ಯಮನೃತಂ ಕ್ರೋಧಂ ಪ್ರಮಾದಂ ದೀರ್ಘಸೂತ್ರತಾಮ್ ।
ಅದರ್ಶನಂ ಜ್ಞಾನವತಾಮಾಲಸ್ಯಂ ಪಂಚವೃತ್ತಿತಾಮ್ ॥
ಮೂಲಮ್ - 66
ಏಕಚಿಂತನಮರ್ಥಾನಾಮನರ್ಥಜ್ಞೈಶ್ಚ ಮಂತ್ರಣಮ್ ।
ನಿಶ್ಚಿತಾನಾಮನಾರಂಭಂ ಮಂತ್ರಸ್ಯಾಪರಿರಕ್ಷಣಮ್ ॥
ಮೂಲಮ್ - 67
ಮಂಗಲಾದ್ಯಪ್ರಯೋಗಂ ಚ ಪ್ರತ್ಯುತ್ಥಾನಂ ಚ ಸರ್ವತಃ ।
ಕಚ್ಚಿತ್ತ್ವಂ ವರ್ಜಯಸ್ಯೇತಾನ್ ರಾಜದೋಷಾಂಶ್ಚತುರ್ದಶ ॥
ಅನುವಾದ
ನಾಸ್ತಿಕತೆ, ಅಸತ್ಯ ಭಾಷಣ, ಕ್ರೋಧ, ಪ್ರಮಾದ, ದೀರ್ಘ ಸೂತ್ರತಾ, ಜ್ಞಾನೀ ಪುರುಷರ ಸಂಗದಲ್ಲಿ ಇಲ್ಲದಿರುವುದು, ಆಲಸ್ಯ, ನೇತ್ರಾದಿ ಐದು ಇಂದ್ರಿಯಗಳಿಗೆ ವಶನಾಗುವುದು, ರಾಜಕಾರ್ಯದ ವಿಷಯದಲ್ಲಿ ಒಬ್ಬನೇ ವಿಚಾರ ಮಾಡುವುದು, ಪ್ರಯೋಜನವನ್ನು ತಿಳಿಯದ ವಿಪರೀತದರ್ಶೀ ಮೂರ್ಖರಿಂದ ಸಲಹೆ ಪಡೆಯುವುದು, ನಿಶ್ಚಯಿಸಿದ ಕಾರ್ಯಗಳನ್ನು ಶೀಘ್ರವಾಗಿ ಪ್ರಾರಂಭಿಸದೇ ಇರುವುದು, ಗುಪ್ತವಾದ ವಿಷಯಗಳನ್ನು ಸುರಕ್ಷಿತವಾಗಿಡದೆ ಪ್ರಕಟಪಡಿಸುವುದು, ಮಾಂಗಲಿಕ ಕಾರ್ಯಗಳನ್ನು ಅನುಷ್ಠಾನ ಮಾಡದಿರುವುದು, ಎಲ್ಲ ಶತ್ರುಗಳ ಮೇಲೆ ಒಟ್ಟಿಗೆ ಆಕ್ರಮಣಮಾಡುವುದು - ಇವು ರಾಜನ ಹದಿನಾಲ್ಕು ದೋಷಗಳಾಗಿವೆ. ನೀನು ಈ ದೋಷಗಳನ್ನು ಸದಾ ಪರಿತ್ಯಾಗ ಮಾಡುತ್ತಿರುವೆಯಲ್ಲ.॥65-67॥
ಮೂಲಮ್ - 68
ದಶಪಂಚಚತುರ್ವರ್ಗಾನ್ ಸಪ್ತವರ್ಗಂ ಚ ತತ್ತ್ವತಃ ।
ಅಷ್ಟವರ್ಗಂ ತ್ರಿವರ್ಗಂ ಚ ವಿದ್ಯಾಸ್ತಿಸ್ರಶ್ಚ ರಾಘವ ॥
ಮೂಲಮ್ - 69
ಇಂದ್ರಿಯಾಣಾಂ ಜಯಂ ಬುದ್ಧ್ವಾ ಷಾಡ್ಗುಣ್ಯಂ ದೈವಮಾನುಷಮ್ ।
ಕೃತ್ಯಂ ವಿಂಶತಿವರ್ಗಂ ಚ ತಥಾ ಪ್ರಕೃತಿಮಂಡಲಮ್ ॥
ಮೂಲಮ್ - 70
ಯಾತ್ರಾದಂಡವಿಧಾನಂ ಚ ದ್ವಿಯೋನೀ ಸಂಧಿವಿಗ್ರಹೌ ।
ಕಚ್ಚಿದೇತಾನ್ಮಹಾಪ್ರಾಜ್ಞ ಯಥಾವದನುಮನ್ಯಸೇ ॥
ಅನುವಾದ
ಮಹಾಪ್ರಾಜ್ಞ ಭರತನೇ! ದಶವರ್ಗ1, ಪಂಚವರ್ಗ2, ಚತುರ್ವರ್ಗ3, ಸಪ್ತವರ್ಗ4,ಅಷ್ಟವರ್ಗ5, ತ್ರಿವರ್ಗ6, ಮೂರು ವಿದ್ಯೆಗಳು7, ಬುದ್ಧಿಯಿಂದ ಇಂದ್ರಿಯಗಳನ್ನು ಜಯಿಸುವುದು, ಆರು ಗುಣ8, ದೈವೀ9 ಮತ್ತು ಮಾನುಷೀ ಬಾಧೆಗಳು, ರಾಜನ ನೀತಿ ಪೂರ್ಣಕಾರ್ಯ10, ವಿಂಶತಿ ವರ್ಗ11, ಪ್ರಕೃತಿ ಮಂಡಲ12, ಯಾತ್ರಾ (ಶತ್ರುಗಳ ಮೇಲೆ ಆಕ್ರಮಣ), ದಂಡವಿಧಾನ (ವ್ಯೆಹರಚನಾ) ಹಾಗೂ ಎರಡೆರಡು ಗುಣಗಳ13 ಯೋನಿಭೂತ ಸಂಧಿ ಮತ್ತು ವಿಗ್ರಹ - ಇವೆಲ್ಲವನ್ನು ನೀನು ಯಥಾರ್ಥವಾಗಿ ಗಮನಿಸುತ್ತಿರುವೆಯಲ್ಲ? ಇವುಗಳಲ್ಲಿ ತ್ಯಜಿಸಲು ಯೋಗ್ಯವಾದ ದೋಷಗಳನ್ನು ತ್ಯಾಗಮಾಡಿ, ಗ್ರಹಿಸಲು ಯೋಗ್ಯವಾದ ಗುಣಗಳನ್ನು ಸ್ವೀಕರಿಸುತ್ತಿರುವೆ ತಾನೇ.॥68-70॥
ಟಿಪ್ಪನೀ
1 ಕಾಮದಿಂದ ಉಂಟಾಗುವ ಹತ್ತು ದೋಷಗಳನ್ನು ದಶವರ್ಗ ಎಂದು ಹೇಳುತ್ತಾರೆ. ಇವು ರಾಜನಿಗೆ ತ್ಯಾಜ್ಯವಾಗಿವೆ. ಮನುವು ಇವುಗಳ ಹೆಸರುಗಳನ್ನು ಈ ರೀತಿ ಹೇಳಿರುವನು - ಬೇಟೆ, ಜೂಜು, ಹಗಲಲ್ಲಿ ಮಲಗುವುದು, ಬೇರೆಯವರನ್ನು ನಿಂದಿಸುವುದು, ಸ್ತ್ರೀಯರಲ್ಲಿ ಆಸಕ್ತನಾಗುವುದು, ಮದ್ಯಪಾನ, ಕುಣಿಯುವುದು, ಹಾಡುವುದು, ವಾದ್ಯಗಳನ್ನು ನುಡಿಸುವುದು ಮತ್ತು ವ್ಯರ್ಥವಾಗಿ ಅಲೆಯುವುದು.
2 ಜಲದುರ್ಗ, ಪರ್ವತದುರ್ಗ, ವೃಕ್ಷದುರ್ಗ, ಈರಿಣದುರ್ಗ ಮತ್ತು ಧನ್ವದುರ್ಗ-ಹೀಗೆ ಇವು ಐದು ಪ್ರಕಾರದ ದುರ್ಗಗಳಿವೆ. ಇವುಗಳಲ್ಲಿ ಮೊದಲಿನ ಮೂರು ಪ್ರಸಿದ್ಧವಾಗಿವೆ. ಬರಡು ಭೂಮಿಯನ್ನು ಈರಿಣವೆಂದು ಹೇಳುತ್ತಾರೆ. ಮರುಭೂಮಿಯನ್ನು ಧನ್ವ ಎಂದು ಹೇಳುತ್ತಾರೆ. ಬೇಸಿಗೆಯ ಕಾಲದಲ್ಲಿ ಅವು ಶತ್ರುಗಳಿಗೆ ದುರ್ಗಮವಾಗಿರುತ್ತದೆ. ಇವೆಲ್ಲ ದುರ್ಗಗಳನ್ನು ಯಥಾ ಸಮಯದಲ್ಲಿ ಉಪಯೋಗಿಸಿ ರಾಜನು ಆತ್ಮರಕ್ಷಣೆ ಮಾಡಿಕೊಳ್ಳಬೇಕು.
3 ಸಾಮ, ದಾನ, ಭೇದ, ದಂಡ - ಈ ನಾಲ್ಕು ರೀತಿಯ ನೀತಿಗಳನ್ನು ಚರ್ತುವರ್ಗವೆಂದು ಹೇಳುತ್ತಾರೆ.
4 ರಾಜಾ, ಮಂತ್ರಿ, ರಾಷ್ಟ್ರ, ಕೋಟೆ, ಭಂಡಾರ, ಸೈನ್ಯ ಮತ್ತು ಮಿತ್ರವರ್ಗ - ಇವು ಪರಸ್ಪರ ಉಪಕಾರ ಮಾಡುವ ರಾಜ್ಯದ ಏಳು ಅಂಗಗಳು. ಇವುಗಳನ್ನು ಸಪ್ತವರ್ಗ ಎಂದು ಹೇಳಲಾಗಿದೆ.
5 ಚಾಡಿ, ಸಾಹಸ, ದ್ರೋಹ, ಈರ್ಷ್ಯೆ, ದೋಷದರ್ಶನ, ಅರ್ಥದೂಷಣ, ಮಾತಿನ ಕಠೋರತೆ ಮತ್ತು ಶಿಕ್ಷೆಯ ಕಠೋರತೆ - ಇವು ಕ್ರೋಧದಿಂದ ಉಂಟಾಗುವ ಎಂಟು ದೋಷಗಳನ್ನು ಅಷ್ಟವರ್ಗ ಎಂದು ಹೇಳಲಾಗಿದೆ. ಕೆಲವರ ಮತದಲ್ಲಿ - ವ್ಯವಸಾಯ (ಕೃಷಿ), ಮಾಡುವುದು, ವ್ಯಾಪಾರ ಹೆಚ್ಚಿಸುವುದು, ಕೋಟೆ ಕಟ್ಟುವುದು, ಸೇತುವೆ ನಿರ್ಮಾಣ, ಕಾಡಾನೆಗಳನ್ನು ಪಳಗಿಸುವುದು, ಗಣಿಗಳ ಮೇಲೆ ಅಧಿಕಾರ, ಅಧೀನ ರಾಜರಿಂದ ಕಪ್ಪವನ್ನು ಪಡೆಯುವುದು, ನಿರ್ಜನ ಪ್ರದೇಶದಲ್ಲಿ ಸೈನ್ಯವಿರಿಸುವುದು - ಇವೂ ರಾಜನು ಗಳಿಸಬೇಕಾದ ಎಂಟು ಗುಣಗಳೂ ಅಷ್ಟವರ್ಗವಾಗಿವೆ.
6 ಧರ್ಮ, ಅರ್ಥ, ಕಾಮವನ್ನು ಅಥವಾ ಉತ್ಸಾಹ - ಶಕ್ತಿ, ಪ್ರಭುಶಕ್ತಿ, ಮಂತ್ರಶಕ್ತಿಗಳನ್ನು ತ್ರಿವರ್ಗವೆಂದು ಹೇಳುತ್ತಾರೆ.
7 ತ್ರಯೀ, ವಾರ್ತಾ ಮತ್ತು ದಂಡನೀತಿ - ಇವು ಮೂರು ವಿದ್ಯೆಗಳಾಗಿವೆ. ಇವುಗಳಲ್ಲಿ ಮೂರು ವೇದಗಳನ್ನು ತ್ರಯೀ ಎಂದು ಹೇಳುತ್ತಾರೆ. ಕೃಷಿ-ಗೋರಕ್ಷಣೆ ಮೊದಲಾದವುಗಳು ವಾರ್ತೆಯ ಅಂತರ್ಗತವಾಗಿವೆ ಹಾಗೂ ನೀತಿಶಾಸ್ತ್ರವನ್ನು ದಂಡನೀತಿ ಎಂದು ಹೇಳುತ್ತಾರೆ.
8 ಸಂಧಿ, ವಿಗ್ರಹ, ಯಾನ, ಆಸನ, ದ್ವೈಧೀಭಾವ ಮತ್ತು ಸಮಾಶ್ರಯ - ಇವು ಆರು ಗುಣಗಳಾಗಿವೆ. ಇವುಗಳಲ್ಲಿ ಶತ್ರುವಿನೊಡನೆ ಒಪ್ಪಂದಸಂವಧಿ, ಅವರಲ್ಲಿ ಯುದ್ಧಸಾರುವುದು ವಿಗ್ರಹ, ಆಕ್ರಮಣ ಮಾಡುವುದು ಯಾನ, ಕಾಲವನ್ನು ನಿರೀಕ್ಷಿಸುತ್ತಾ ಕುಳಿತುಕೊಳ್ಳುವುದು ಆಸನ, ಇಬ್ಬಗೆಯ ನೀತಿ ವರ್ತಿಸುವುದು ದ್ವೈಧೀಭಾವ ಮತ್ತು ತನಗಿಂತ ಬಲಿಷ್ಠನಾದ ರಾಜನಲ್ಲಿ ಶರಣಾಗುವುದು ಸಮಾಶ್ರಯವೆಂದು ಹೇಳಲಾಗುತ್ತದೆ.
9 ಬೆಂಕಿ ಹತ್ತಿಕೊಳ್ಳುವುದು, ನೆರೆ ಬರುವುದು, ರೋಗ ಹರಡುವುದು, ಕ್ಷಾಮ ಉಂಟಾಗುವುದು ಮತ್ತು ಮಹಾಮಾರಿಯ ಪ್ರಕೋಪ - ಇವು ಐದು ದೈವೀ ಬಾಧೆಗಳು. ರಾಜ್ಯದ ಅಧಿಕಾರಿಗಳು, ಕಳ್ಳರು, ಶತ್ರುಗಳು ಮತ್ತು ರಾಜನ ಪ್ರಿಯ ವ್ಯಕ್ತಿಗಳು ಮತ್ತು ಸ್ವಯಂ ರಾಜನ ದುರಾಸೆಯಿಂದ ಉಂಟಾಗುವ ಭಯವನ್ನು ಮಾನವೀ ಬಾಧೆ ಎನ್ನುತ್ತಾರೆ.
10 ಶತ್ರುರಾಜರ ಸೇವಕರಲ್ಲಿ ವೇತನ ಸಿಗದಿರುವವರಿಗೆ, ಅಪಮಾನಿತರಾದವರಿಗೆ, ಒಡೆಯನ ವರ್ತನೆಯಿಂದ ಸಿಟ್ಟುಗೊಂಡಿರುವ, ಭಯತೋರಿಸಿ ಹೆದರಿಸಿದವನನ್ನು ಇವರಿಗೆ ಮನಮೆಚ್ಚಿದ ವಸ್ತುಗಳನ್ನು ಕೊಟ್ಟು ತಮ್ಮಂತೆ ಮಾಡಿಕೊಳ್ಳುವುದು ನೀತಿಪೂರ್ಣ ಕಾರ್ಯವೆಂದು ತಿಳಿಯಲಾಗಿದೆ.
11 ಬಾಲಕ, ವೃದ್ಧ, ದೀರ್ಘಕಾಲದ ರೋಗಿ, ಜಾತಿ ಬಹಿಷ್ಕೃತ, ಹೆದರುವವನು, ಅಂಜುಬುರುಕರನ್ನು ಜೊತೆಯಲ್ಲಿ ಇರಿಸಿಕೊಂಡವ, ಲೋಭಿ ಜನರಿಗೆ ಆಶ್ರಯಕೊಡುವವನು, ಮಂತ್ರಿ, ಸೇನಾಪತಿ ಆದಿ ಪ್ರಕೃತಿಗಳನ್ನು ಅಸಂತುಷ್ಟವಾಗಿ ಇರಿಸುವವ, ವಿಷಯಾಸಕ್ತ, ಚಂಚಲಚಿತ್ತ ಮನುಷ್ಯರಿಂದ ಸಲಹೆ ಪಡೆಯುವವ, ದೇವತಾ ಮತ್ತು ಬ್ರಾಹ್ಮಣರನ್ನು ನಿಂದಿಸುವವ, ದೇವರಕೃಪೆ ಇಲ್ಲದವನು, ದೈವವನ್ನೇ ನಂಬಿ ಪ್ರಯತ್ನ ಮಾಡದವನು, ದುರ್ಭಿಕ್ಷದಿಂದ ಪೀಡಿತನಾದವನು ಸೈನ್ಯವಿಲ್ಲದವನು, ಸ್ವದೇಶದಲ್ಲಿ ಇರದೆ ಪರದೇಶದಲ್ಲಿರುವವನು, ಹೆಚ್ಚು ಶತ್ರುಗಳುಳ್ಳವನು, ಕ್ಷಾಮ (ಕ್ರೂರಗ್ರಹಸ್ಥಿತಿಯುಕ್ತ) ಮತ್ತು ಸತ್ಯಧರ್ಮದಿಂದ ರಹಿತ - ಈ ಇಪ್ಪತ್ತು ಜನರಲ್ಲಿ ರಾಜನು ಸಂಧಿಮಾಡಿಕೊಳ್ಳಬಾರದು. ಇವನ್ನು ವಿಂಶತಿವರ್ಗವೆಂದು ಹೇಳಲಾಗಿದೆ.
12 ರಾಜ್ಯದ ಒಡೆಯ, ಅಮಾತ್ಯ, ಸುಹೃದ, ಕೋಷ, ರಾಷ್ಟ್ರ, ದುರ್ಗ ಮತ್ತು ಸೈನ್ಯ - ಇವು ರಾಜ್ಯದ ಏಳು ಅಂಗಗಳನ್ನೇ ಪ್ರಕೃತಿ ಮಂಡಲವೆಂದು ಹೇಳುತ್ತಾರೆ. ಕೆಲವರ ಮತದಲ್ಲಿ - ಮಂತ್ರಿ, ರಾಷ್ಟ್ರ, ಕೋಟೆ, ಭಂಡಾರ ಮತ್ತು ದಂಡ - ಇವು ಐದು ಪ್ರಕೃತಿಗಳು ಬೇರೆಯಾಗಿವೆ ಹಾಗೂ ಹನ್ನೆರಡು ರಾಜರ ಸಮೂಹವನ್ನು ಮಂಡಲವೆಂದು ಹೇಳಿದೆ.
13 ದ್ವೈಧಿಭಾವ ಮತ್ತು ಸಮಾಶ್ರಯ - ಇವು ಇದರ ಯೋನಿ ಸಂಧಿಯಾಗಿದೆ ಮತ್ತು ಯಾನ, ಆಸನ ಇವುಗಳ ಯೋನಿ ನಿಗ್ರಹವಾಗಿದೆ, ಅರ್ಥಾತ್ ಮೊದಲನೆಯ ಎರಡು ಸಂಧಿಮೂಲಕ ಮತ್ತು ಕೊನೆಯ ಎರಡು ವಿಗ್ರಹಮೂಲಕವಾಗಿದೆ.
ಮೂಲಮ್ - 71
ಮಂತ್ರಿಭಿಸ್ತ್ವಂಯಥೋದ್ದಿಷ್ಟಂ ಚತುರ್ಭಿಸ್ತ್ರಿಭಿರೇವ ವಾ ।
ಕಚ್ಚಿತ್ಸಮಸ್ತೈರ್ವ್ಯಸ್ತೈಶ್ಚ ಮಂತ್ರಂ ಮಂತ್ರಯಸೇ ಬುಧ ॥
ಅನುವಾದ
ಧೀಮಂತನೇ! ನೀನು ನೀತಿಶಾಸ್ತ್ರದ ಆಜ್ಞೆಗನುಸಾರ ನಾಲ್ಕು ಅಥವಾ ಮೂರು ಮಂತ್ರಿಗಳೊಡನೆ-ಎಲ್ಲರನ್ನು ಸೇರಿಸಿಕೊಂಡು ಅಥವಾ ಬೇರೆ-ಬೇರೆಯಾಗಿ ಸಲಹೆ ಪಡೆಯುತ್ತಿರುವೆ ತಾನೇ.॥71॥
ಮೂಲಮ್ - 72
ಕಚ್ಚಿತ್ತೇ ಸಫಲಾ ವೇದಾಃ ಕಚ್ಚಿತ್ತೇ ಸಲಾಃ ಕ್ರಿಯಾಃ ।
ಕಚ್ಚಿತ್ತೇ ಸಫಲಾ ದಾರಾಃ ಕಚ್ಚಿತ್ತೇ ಸಫಲಂ ಶ್ರುತಮ್ ॥
ಅನುವಾದ
ನೀನು ವೇದಗಳ ಆಜ್ಞೆಗನುಸಾರ ಕಾರ್ಯಮಾಡುತ್ತಾ ಅದನ್ನು ಸಲ ಮಾಡುತ್ತಿರುವೆಯಲ್ಲ? ನಿನ್ನ ಕ್ರಿಯೆಗಳು ಸಲವಾಗುತ್ತವೆ ತಾನೇ? ನಿನ್ನ ಪತ್ನಿಯರು ಸಲ (ಸಂತಾನವುಳ್ಳವರು)ರಾಗಿದ್ದಾರಲ್ಲ? ನಿನ್ನ ಶಾಸ್ತ್ರಜ್ಞಾನವೂ ವಿನಯಾದಿ ಗುಣಗಳ ಉತ್ಪಾದಕವಾಗಿ ಸಫಲವಾಗಿದೆಯಲ್ಲ.॥72॥
ಮೂಲಮ್ - 73
ಕಚ್ಚಿದೇಷೈವ ತೇ ಬುದ್ಧಿರ್ಯಥೋಕ್ತಾ ಮಮ ರಾಘವ ।
ಆಯುಷ್ಯಾ ಚ ಯಶಸ್ಯಾ ಚ ಧರ್ಮಕಾಮಾರ್ಥಸಂಹಿತಾ ॥
ಅನುವಾದ
ರಘುನಂದನ! ನಾನು ಹೇಳಿದುದೆಲ್ಲವೂ ನಿನ್ನ ಬುದ್ಧಿಯ ನಿಶ್ಚಯವು ಹಾಗೆಯೇ ಇದೆಯಲ್ಲ? ಏಕೆಂದರೆ ಈ ವಿಚಾರವು ಆಯುಸ್ಸು ಮತ್ತು ಯಶವನ್ನು ಹೆಚ್ಚಿಸುವು ದಾಗಿದೆ ಹಾಗೂ ಧರ್ಮ, ಕಾಮ, ಅರ್ಥ ಇವುಗಳ ಸಿದ್ಧಿ ಮಾಡುವುದಾಗಿದೆ.॥73॥
ಮೂಲಮ್ - 74
ಯಾಂ ವೃತ್ತಿಂ ವರ್ತತೇ ತಾತೋ ಯಾಂ ಚ ನಃ ಪ್ರಪಿತಾಮಹಃ ।
ತಾಂ ವೃತ್ತಿಂ ವರ್ತಸೇ ಕಚ್ಚಿದ್ ಯಾ ಚ ಸತ್ಪಥಗಾ ಶುಭಾ ॥
ಅನುವಾದ
ನಮ್ಮ ತಂದೆಯವರು ಯಾವ ವೃತ್ತಿಯನ್ನು ಆಶ್ರಯಿಸಿದ್ದರೋ, ನಮ್ಮ ಪಿತಾಮಹರು ಯಾವ ಆಚರಣೆಯನ್ನು ಪಾಲಿಸಿದ್ದರೋ, ಸತ್ಪುರುಷರು ಯಾವುದನ್ನು ಸೇವಿಸುತ್ತಿರುವರೋ, ಯಾವುದು ಶ್ರೇಯಸ್ಸಿನ ಮೂಲವಾಗಿದೆಯೋ, ಅದನ್ನೇ ನೀನು ಪಾಲಿಸುತ್ತಾ ಇರುವೆಯಲ್ಲ.॥74॥
ಮೂಲಮ್ - 75
ಕಚ್ಚಿತ್ ಸ್ವಾದುಕೃತಂ ಭೋಜ್ಯಮೇಕೋ ನಾಶ್ನಾಸಿ ರಾಘವ ।
ಕಚ್ಚಿದಾಶಂಸಮಾನೇಭ್ಯೋ ಮಿತ್ರೇಭ್ಯಃ ಸಂಪ್ರಯಚ್ಛಸಿ ॥
ಅನುವಾದ
ರಘುನಂದನ! ನೀನು ಸ್ವಾದಿಷ್ಟವಾದ ಅನ್ನವನ್ನು ಒಬ್ಬನೇ ತಿನ್ನುವುದಿಲ್ಲ ತಾನೇ? ಅದನ್ನು ಆಶಿಸುವ ಮಿತ್ರರಿಗೂ ಕೂಡ ಕೊಡುತ್ತಿರುವೆಯಲ್ಲ.॥75॥
ಮೂಲಮ್ - 76
ರಾಜಾ ತು ಧರ್ಮೇಣ ಹಿ ಪಾಲಯಿತ್ವಾ
ಮಹೀಪತಿರ್ದಂಡಧರಃ ಪ್ರಜಾನಾಮ್ ।
ಅವಾಪ್ಯ ಕೃತ್ಸ್ನಾಂ ವಸುಧಾಂ ಯಥಾವ -
ದಿತಶ್ಚ್ಯುತಃ ಸ್ವರ್ಗಮುಪೈತಿ ವಿದ್ವಾನ್ ॥
ಅನುವಾದ
ಈ ಪ್ರಕಾರ ಧರ್ಮಕ್ಕನುಸಾರ ದಂಡ ಧರಿಸುವ ವಿದ್ವಾಂಸ ರಾಜನು ಪ್ರಜೆಗಳನ್ನು ಪಾಲಿಸುತ್ತಾ ಇಡೀ ಪೃಥಿವಿಯನ್ನು ಯಥಾವತ್ತಾಗಿ ತನ್ನ ಅಧಿಕಾರವನ್ನು ಸ್ಥಾಪಿಸುವನು ಹಾಗೂ ದೇಹತ್ಯಾಗ ಮಾಡಿದ ಬಳಿಕ ಸ್ವರ್ಗಲೋಕಕ್ಕೆ ತೆರಳುವನು.॥76॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ನೂರನೆಯ ಸರ್ಗ ಪೂರ್ಣವಾಯಿತು ॥100॥