०९९ श्रीरामदर्शनम्

वाचनम्
ಭಾಗಸೂಚನಾ

ಭರತನು ಶತ್ರುಘ್ನನೇ ಮೊದಲಾದವರೊಂದಿಗೆ ಶ್ರೀರಾಮನ ಆಶ್ರಮಕ್ಕೆ ಹೋದುದು, ಪರ್ಣಶಾಲೆಯನ್ನು ನೋಡಿ ಭರತನು ಬಿಕ್ಕಿ-ಬಿಕ್ಕಿ ಅಳುತ್ತಾ ಶ್ರೀರಾಮನ ಪಾದಗಳಲ್ಲಿ ಬಿದ್ದುದು, ಶ್ರೀರಾಮನು ಅವರೆಲ್ಲರನ್ನೂ ಆಲಿಂಗಿಸಿಕೊಂಡುದುದು

ಮೂಲಮ್ - 1

ನಿವಿಷ್ಟಾಯಾಂ ತು ಸೇನಾಯಾಮುತ್ಸುಕೋ ಭರತಸ್ತತಃ ।
ಜಗಾಮ ಭ್ರಾತರಂ ದ್ರಷ್ಟುಂ ಶತ್ರುಘ್ನಮನುದರ್ಶಯನ್ ॥

ಅನುವಾದ

ಸೈನ್ಯವನ್ನು ನಿಲ್ಲಲು ಹೇಳಿ, ಅಣ್ಣನ ದರ್ಶನಕ್ಕಾಗಿ ಉತ್ಕಂಠಿತನಾದ ಭರತನು ಅನುಜ ಶತ್ರುಘ್ನನಿಗೆ ಆಶ್ರಮದ ಚಿಹ್ನೆಗಳನ್ನು ತೋರಿಸುತ್ತಾ ಪರ್ಣಕುಟಿಯ ಕಡೆಗೆ ನಡೆದನು.॥1॥

ಮೂಲಮ್ - 2

ಋಷಿಂ ವಸಿಷ್ಠಂ ಸಂದಿಶ್ಯ ಮಾತೃರ್ಮೇ ಶೀಘ್ರಮಾನಯ ।
ಇತಿ ತ್ವರಿತಮಗ್ರೇ ಸ ಜಗಾಮ ಗುರುವತ್ಸಲಃ ॥

ಅನುವಾದ

ಗುರುಭಕ್ತ ಭರತನು ಮಹರ್ಷಿ ವಸಿಷ್ಠರಲ್ಲಿ - ‘ನೀವು ನಮ್ಮ ತಾಯಂದಿರನ್ನು ಜೊತೆಗೆ ಕರೆದುಕೊಂಡು ಬನ್ನಿ’ ಎಂದು ಹೇಳಿ ಲಗುಬಗೆಯಿಂದ ಮುಂದುವರಿದನು.॥2॥

ಮೂಲಮ್ - 3

ಸುಮಂತ್ರಸ್ತ್ವಪಿ ಶತ್ರುಘ್ನ ಮದೂರಾದನ್ವಪದ್ಯತ ।
ರಾಮದರ್ಶನಜಸ್ತರ್ಷೋ ಭರತಸ್ಯೇವ ತಸ್ಯ ಚ ॥

ಅನುವಾದ

ಸುಮಂತ್ರನೂ ಶತ್ರುಘ್ನನೊಡನೆ ಹಿಂದೆ-ಮುಂದೆ ನಡೆಯುತ್ತಿದ್ದನು. ಅವನಿಗೂ ಭರತನಂತೆಯೇ ಶ್ರೀರಾಮಚಂದ್ರನ ದರ್ಶನದ ತೀವ್ರ ಅಭಿಲಾಷೇ ಇತ್ತು.॥3॥

ಮೂಲಮ್ - 4

ಗಚ್ಛನ್ನೇವಾಥ ಭರತಸ್ತಾಪಸಾಲಯಸಂಸ್ಥಿತಾಮ್ ।
ಭ್ರಾತುಃ ಪರ್ಣಕುಟೀಂ ಶ್ರೀಮಾನುಟಜಂ ಚ ದದರ್ಶ ಹ ॥

ಅನುವಾದ

ನಡೆಯುತ್ತಾ ಮುಂದಕ್ಕೆ ಹೋದಾಗ ಶ್ರೀಮಾನ್ ಭರತನು ತಪಸ್ವೀ ಜನರ ಆಶ್ರಮದಂತೆ ಇರುವ ಅಣ್ಣನ ಪರ್ಣಕುಟಿಯನ್ನು ಮತ್ತು ಗುಡಿಸಲನ್ನು ನೋಡಿದನು.॥4॥

ಮೂಲಮ್ - 5

ಶಾಲಾಯಾಸ್ತ್ವಗ್ರತಸ್ತಸ್ಯಾ ದದರ್ಶ ಭರತಸ್ತದಾ ।
ಕಾಷ್ಠಾನಿ ಚಾವಭಗ್ನಾನಿ ಪುಷ್ಪಾಣ್ಯಪಚಿತಾನಿ ಚ ॥

ಅನುವಾದ

ಪರ್ಣಶಾಲೆಯ ಮುಂಭಾಗದಲ್ಲಿ ಹೋಮಾರ್ಥವಾಗಿ ಸೀಳಿ ಹಾಕಿದ್ದ ಕಟ್ಟಿಗೆಗಳನ್ನು, ಪೂಜೆಗಾಗಿ ಸಂಗ್ರಹಿಸಿದ ಪುಷ್ಪರಾಶಿಯನ್ನು ಭರತನು ನೋಡಿದನು.॥5॥

ಮೂಲಮ್ - 6

ಸ ಲಕ್ಷ್ಮಣಸ್ಯ ರಾಮಸ್ಯ ದದರ್ಶಾಶ್ರಮಮೀಯುಷಃ ।
ಕೃತಂ ವೃಕ್ಷೇಷ್ವಭಿಜ್ಞಾನಂ ಕುಶಚೀರೈಃ ಕ್ವಚಿತ್ಕ್ವಚಿತ್ ॥

ಅನುವಾದ

ಆಶ್ರಮದಿಂದ ಹೊರಗೆ ಹೋಗಿ ಬರಲು ಶ್ರೀರಾಮ ಲಕ್ಷ್ಮಣರು ಮಾರ್ಗ ಸೂಚಕವಾದ ದರ್ಭೆಗಳಿಂದ, ವಲ್ಕಲಗಳಿಂದ ಮಾಡಿದ ಚಿಹ್ನೆಗಳನ್ನು ಮರದ ಕೊಂಬೆಗಳಲ್ಲಿ ತೂಗು ಹಾಕಿದ್ದರು.॥6॥

ಮೂಲಮ್ - 7

ದದರ್ಶ ಚ ವನೇ ತಸ್ಮಿನ್ ಮಹತಃ ಸಂಚಯಾನ್ಕೃತಾನ್ ।
ಮೃಗಾಣಾಂ ಮಹಿಷಾಣಾಂ ಚ ಕರಿಷೈಃ ಶೀತಕಾರಣಾತ್ ॥

ಅನುವಾದ

ಶೀತ ಪರಿಹಾರಕ್ಕಾಗಿ ಪರ್ಣಕುಟಿಯ ಸಮೀಪದಲ್ಲೇ ಮೃಗಗಳ ಮತ್ತು ಎಮ್ಮೆಗಳ ಸೆಗಣಿಯಿಂದ ಬೆರಣಿಗಳನ್ನು ಮಾಡಿ ರಾಶಿ-ರಾಶಿಯಾಗಿ ಸಂಗ್ರಹಿಸಿಟ್ಟಿರುವುದನ್ನು ನೋಡಿದನು.॥7॥

ಮೂಲಮ್ - 8

ಗಚ್ಛನ್ನೇವ ಮಹಾಬಾಹುರ್ದ್ಯುತಿಮಾನ್ ಭರತಸ್ತದಾ ।
ಶತ್ನುಘ್ನಂ ಚಾಬ್ರವೀದ್ಧೃಷ್ಟಸ್ತಾನಮಾತ್ಯಾಂಶ್ಚ ಸರ್ವಶಃ ॥

ಅನುವಾದ

ಆಗ ನಡೆಯುತ್ತಿರುವಾಗ ಕಾಂತಿವಂತ ಮಹಾಬಾಹು ಭರತನು ಶತ್ರುಘ್ನ ಹಾಗೂ ಇತರ ಮಂತ್ರಿಗಳಲ್ಲಿ ಅತ್ಯಂತ ಪ್ರಸನ್ನನಾಗಿ ಹೇಳಿದನು.॥8॥

ಮೂಲಮ್ - 9

ಮನ್ಯೇ ಪ್ರಾಪ್ತಾಃ ಸ್ಮ ತಂ ದೇಶಂಭರದ್ವಾಜೋ ಯಮಬ್ರವೀತ್ ।
ನಾತಿದೂರೇ ಹಿ ಮನ್ಯೇಹಂ ನದೀಂ ಮನ್ದಾಕಿನೀಮಿತಃ ॥

ಅನುವಾದ

ಮಹರ್ಷಿ ಭರದ್ವಾಜರು ಹೇಳಿದ ಸ್ಥಾನಕ್ಕೆ ನಾವು ಬಂದಂತೆ ಅನಿಸುತ್ತದೆ. ಮಂದಾಕಿನೀ ನದಿಯು ಇಲ್ಲಿಂದ ದೂರವಿಲ್ಲ ಎಂದು ನಾನು ತಿಳಿಯುತ್ತೇನೆ.॥9॥

ಮೂಲಮ್ - 10

ಉಚ್ಚೈರ್ಬದ್ಧಾನಿ ಚೀರಾಣಿ ಲಕ್ಷ್ಮಣೇನ ಭವೇದಯಮ್ ।
ಅಭಿಜ್ಞಾನಕೃತಃ ಪಂಥಾ ವಿಕಾಲೇ ಗಂತುಮಿಚ್ಛತಾ ॥

ಅನುವಾದ

ನೋಡಿ, ಎತ್ತರವಾಗಿ ನಾರುಮಡಿಯನ್ನು ಕಟ್ಟಿರುತ್ತಾರೆ. ಅಕಾಲದಲ್ಲಿ ಆಶ್ರಮದಿಂದ ಹೊರಗೆ ಹೋಗಿ ಬರುವ ಲಕ್ಷ್ಮಣನು ಆಶ್ರಮ ದಾರಿಯ ಗುರುತಿಗಾಗಿ ಈ ರೀತಿ ಚಿಹ್ನೆ ಮಾಡಿರಬಹುದು. ಆಶ್ರಮಕ್ಕೆ ಹೋಗುವ ದಾರಿಯು ಇದೇ ಆಗಿರಬಲ್ಲದು.॥10॥

ಮೂಲಮ್ - 11

ಇತಶ್ಚೋದಾತ್ತದಂತಾನಾಂ ಕುಂಜರಾಣಾಂ ತರಸ್ವಿನಾಮ್ ।
ಶೈಲಪಾರ್ಶ್ವೇ ಪರಿಕ್ರಾಂತಮನ್ಯೋನ್ಯಮಭಿಗರ್ಜತಾಮ್ ॥

ಅನುವಾದ

ದೊಡ್ಡ-ದೊಡ್ಡ ದಂತಗಳುಳ್ಳ ಆನೆಗಳು ವೇಗವಾಗಿ ಈ ಕಡೆಯಿಂದ ಬಂದು ಪರಸ್ಪರ ದೂರದಿಂದಲೇ ಗರ್ಜಿಸುತ್ತಾ ಪರ್ವತ ಪಕ್ಕದಲ್ಲೇ ಸುತ್ತಾಡುತ್ತಿವೆ. (ಈ ಕಡೆ ಬರಲು ತಡೆಯಲೆಂದೇ ಲಕ್ಷ್ಮಣನು ಈ ಚಿಹ್ನೆಗಳನ್ನು ಮಾಡಿ ಇಟ್ಟಿರುವನು.॥11॥

ಮೂಲಮ್ - 12

ಯಮೇವಾಧಾತುಮಿಚ್ಛಂತಿ ತಾಪಸಾಃ ಸತತಂ ವನೇ ।
ತಸ್ಯಾಸೌದೃಶ್ಯತೇ ಧೂಮಃ ಸಂಕುಲಃ ಕೃಷ್ಣವರ್ತ್ಮನಃ ॥

ಅನುವಾದ

ತಪಸ್ವಿಗಳು ಯಾವಾತನನ್ನು ಸಂಸ್ಕಾರಪೂರ್ವಕ ಪ್ರತಿಷ್ಠಾಪಿಸಲು ಬಯಸುತ್ತಾರೋ ಅಂತಹ ಯಜ್ಞೇಶ್ವರನ ದಟ್ಟವಾದ ಹೊಗೆಯು ಇಲ್ಲಿ ಕಂಡುಬರುತ್ತಿದೆ.॥12॥

ಮೂಲಮ್ - 13

ಅತ್ರಾಹಂ ಪುರುಷವ್ಯಾಘ್ರಂ ಗುರುಸತ್ಕಾರಕಾರಿಣಮ್ ।
ಆರ್ಯಂ ದ್ರಕ್ಷ್ಯಾಮಿ ಸಂಹೃಷ್ಟಂಮಹರ್ಷಿಮಿವ ರಾಘವಮ್ ॥

ಅನುವಾದ

ಇಲ್ಲಿ ಗುರು-ಹಿರಿಯರ ಸತ್ಕಾರ ಮಾಡುವ ಪುರುಷ ಸಿಂಹ ಆರ್ಯ ರಘುನಂದನನನ್ನು ಸದಾ ಆನಂದಮಗ್ನನಾಗಿರುವ ಮಹರ್ಷಿಯಂತೆ ನಾನು ದರ್ಶಿಸುವೆನು.॥13॥

ಮೂಲಮ್ - 14

ಅಥ ಗತ್ವಾ ಮುಹೂರ್ತಂ ತು ಚಿತ್ರಕೂಟಂ ಸ ರಾಘವಃ ।
ಮಂದಾಕಿನೀಮನು ಪ್ರಾಪ್ತಸ್ತುಂ ಜನಂ ಚೇದಮಬ್ರವೀತ್ ॥

ಅನುವಾದ

ಅನಂತರ ಭರತನು ಮುಹೂರ್ತಮಾತ್ರದಲ್ಲಿ ಮಂದಾಕಿನಿ ತೀರದಲ್ಲಿ ವಿರಾಜಮಾನ ಚಿತ್ರಕೂಟದ ಸಮೀಪ ತಲುಪಿ, ತನ್ನ ಜೊತೆಯ ಜನರಲ್ಲಿ ಇಂತೆಂದನು.॥14॥

ಮೂಲಮ್ - 15

ಜಗತ್ಯಾಂ ಪುರುಷವ್ಯಾಘ್ರ ಅಸ್ತೇ ವೀರಾಸನೇ ರತಃ ।
ಜನೇಂದ್ರೋ ನಿರ್ಜನಂ ಪ್ರಾಪ್ಯ ಧಿಙ್ಮೇ ಜನ್ಮ ಸಜೀವಿತಮ್ ॥

ಅನುವಾದ

ಅಯ್ಯೋ! ನನ್ನ ಕಾರಣದಿಂದಲೇ ಪುರುಷಸಿಂಹ ಮಹಾರಾಜ ಶ್ರೀರಾಮನು ಈ ನಿರ್ಜನ ವನದಲ್ಲಿ ಬಂದು ಬರೀ ನೆಲದಲ್ಲಿ ವೀರಾಸನದಿಂದ ಕುಳಿತುಕೊಳ್ಳುವನು. ಆದ್ದರಿಂದ ನನ್ನ ಜನ್ಮ ಮತ್ತು ಜೀವನಕ್ಕೆ ಧಿಕ್ಕಾರವಿರಲಿ.॥15॥

ಮೂಲಮ್ - 16

ಮತ್ಕೃತೇ ವ್ಯಸನಂ ಪ್ರಾಪ್ತೋ ಲೋಕನಾಥೋ ಮಹಾದ್ಯುತಿಃ ।
ಸರ್ವಾನ್ ಕಾಮಾನ್ಪರಿತ್ಯಜ್ಯ ವನೇ ವಸತಿ ರಾಘವಃ ॥

ಅನುವಾದ

ನನ್ನಿಂದಾಗಿಯೇ ಮಹಾತೇಜಸ್ವೀ ಲೋಕನಾಥ ರಘುನಾಥನು ಭಾರೀ ಸಂಕಟದಲ್ಲಿ ಸಿಲುಕಿ ಸಮಸ್ತ ಕಾಮನೆಗಳನ್ನು ತ್ಯಜಿಸಿ ವನದಲ್ಲಿ ವಾಸಿಸುತ್ತಿದ್ದಾನೆ.॥16॥

ಮೂಲಮ್ - 17

ಇತಿ ಲೋಕಸಮಾಕ್ರುಷ್ಟಃಪಾದೇಷ್ವದ್ಯ ಪ್ರಸಾದಯನ್ ।
ರಾಮಂ ತಸ್ಯ ಪತಿಷ್ಯಾಮಿ ಸೀತಾಯಾ ಲಕ್ಷ್ಮಣಸ್ಯ ಚ ॥

ಅನುವಾದ

ಆದ್ದರಿಂದ ನಾನು ಎಲ್ಲ ಜನರಿಂದ ನಿಂದಿತನಾಗಿದ್ದೇನೆ, ನನ್ನ ಜನ್ಮಕ್ಕೆ ಧಿಕ್ಕಾರವಿರಲಿ. ಇಂದು ನಾನು ಶ್ರೀರಾಮನನ್ನು ಪ್ರಸನ್ನಗೊಳಿಸಲು ಅವನ ಚರಣಗಳಲ್ಲಿ ಬೀಳುವೆನು. ಸೀತೆ ಮತ್ತು ಲಕ್ಷ್ಮಣರ ಕಾಲನ್ನು ಹಿಡಿಯುವೆನು.॥17॥

ಮೂಲಮ್ - 18

ಏವಂ ಸ ವಿಲಪಂಸ್ತಸ್ಮಿನ್ ವನೇ ದಶರಥಾತ್ಮಜಃ ।
ದದರ್ಶ ಮಹತೀಂ ಪುಣ್ಯಾಂ ಪರ್ಣಶಾಲಾಂ ಮನೋರಮಾಮ್ ॥

ಅನುವಾದ

ಹೀಗೆ ವಿಲಾಪ ಮಾಡುತ್ತಾ ದಶರಥಕುಮಾರ ಭರತನು ಆ ವನದಲ್ಲಿ ಒಂದು ವಿಶಾಲವಾದ ಪರ್ಣಕುಟಿಯನ್ನು ನೋಡಿದನು. ಅದು ಪರಮ ಪವಿತ್ರ ಮತ್ತು ಮನೋರಮವಾಗಿತ್ತು.॥18॥

ಮೂಲಮ್ - 19

ಸಾಲತಾಲಾಶ್ವಕರ್ಣಾನಾಂ ಪರ್ಣೈರ್ಬಹುಭಿರಾವೃತಾಮ್ ।
ವಿಶಾಲಾಂ ಮೃದುಭಿಸ್ತೀರ್ಣಾಂ ಕುಶೈರ್ವೇದಿಮಿವಾಧ್ವರೇ ॥

ಅನುವಾದ

ಆ ಕುಟೀರವು ಸಾಲ, ತಾಲ, ಅಶ್ವಕರ್ಣ ಎಂಬ ವೃಕ್ಷಗಳ ಎಲೆಗಳಿಂದ ಹೊದಿಸಲಾಗಿತ್ತು; ಆದ್ದರಿಂದ ಯಜ್ಞಶಾಲೆಯಲ್ಲಿ ಕುಶಗಳನ್ನು ಹಾಸಿದ ಉದ್ದ ಅಗಲ ವೇದಿಯಂತೆ ಶೋಭಿಸುತ್ತಿತ್ತು.॥19॥

ಮೂಲಮ್ - 20

ಶಕ್ರಾಯುಧನಿಕಾಶೈಶ್ಚ ಕಾರ್ಮುಕೈರ್ಭಾರಸಾಧನೈಃ ।
ರುಕ್ಮಪೃಷ್ಠೈರ್ಮಹಾಸಾರೈಃ ಶೋಭಿತಾಂ ಶತ್ರುಬಾಧಕೈಃ ॥

ಅನುವಾದ

ಅಲ್ಲಿ ಇಂದ್ರ ಧನುಷ್ಯದಂತಹ ಗುರುತರ ಕಾರ್ಯಸಾಧನೆಯಲ್ಲಿ ಸಮರ್ಥವಾದ ಅನೇಕ ಧನುಸ್ಸುಗಳನ್ನು ಇಡಲಾಗಿತ್ತು. ಅವುಗಳ ಪೃಷ್ಠಭಾಗವನ್ನು ಬಂಗಾರದಿಂದ ಮಾಡಿದ್ದಾಗಿದ್ದು ಬಹಳ ಪ್ರಬಲ ಶತ್ರುಗಳನ್ನು ಬಾಧೆಪಡಿಸುವಂತಹುದಾಗಿದ್ದವು. ಅವುಗಳಿಂದಲೇ ಆ ಪರ್ಣಕುಟಿಯು ಬಹಳ ಶೋಭಿಸುತ್ತಿತ್ತು.॥20॥

ಮೂಲಮ್ - 21

ಅರ್ಕರಶ್ಮಿಪ್ರತೀಕಾಶೈರ್ಘೋರೈಸ್ತೂಣಗತೈಃ ಶರೈಃ ।
ಶೋಭಿತಾಂ ದೀಪ್ತವದನೈಃಸರ್ಪೈರ್ಭೋಗವತೀಮಿವ ॥

ಅನುವಾದ

ಅಲ್ಲಿ ಬಾಣಗಳು ತುಂಬಿದ ಅನೇಕ ಬತ್ತಳಿಕೆಗಳಿದ್ದವು, ಅದರಲ್ಲಿನ ಬಾಣಗಳು ಸೂರ್ಯ ಕಿರಣಗಳಂತೆ ಹೊಳೆಯುತ್ತಿದ್ದು, ಭಯಂಕರವಾಗಿದ್ದವು. ಆ ಬಾಣಗಳಿಂದ ಪ್ರಕಾಶಮಾನ ಮುಖವುಳ್ಳ ಸರ್ಪಗಳಿಂದ ಭೋಗವತೀ ಪುರಿಯು ಶೋಭಿಸುವಂತೆ ಆ ಪರ್ಣಕುಟಿಯು ಶೋಭಿಸುತ್ತಿತ್ತು.॥21॥

ಮೂಲಮ್ - 22

ಮಹಾರಜತವಾಸೋಭ್ಯಾಮಸೀಭ್ಯಾಂ ಚ ವಿರಾಜಿತಾಮ್ ।
ರುಕ್ಮಬಿಂದುವಿಚಿತ್ರಾಭ್ಯಾಂ ಚರ್ವಭ್ಯಾಂ ಚಾಪಿಶೋಭಿತಾಮ್ ॥

ಅನುವಾದ

ಚಿನ್ನದ ಒರೆಯಲ್ಲಿ ಇರಿಸಿದ ಎರಡು ಖಡ್ಗಗಳು ಮತ್ತು ಸ್ವರ್ಣಮಯ ಬಿಂದುಗಳಿಂದ ಅಲಂಕೃತವಾದ ಎರಡು ಗುರಾಣಿಗಳು ಆ ಆಶ್ರಮದ ಶೋಭೆಯನ್ನು ಹೆಚ್ಚಿಸಿದ್ದವು.॥22॥

ಮೂಲಮ್ - 23

ಗೋಧಾಂಗುಲಿತ್ರೈರಾಸಕ್ತೈಶ್ಚಿತ್ರಕಾಂಚನಭೂಷಿತೈಃ ।
ಅರಿಸಂಘೈರನಾಧೃಷ್ಯಾಂ ಮೃಗೈಃ ಸಿಂಹಗುಹಾಮಿವ ॥

ಅನುವಾದ

ಅಲ್ಲಿ ನೀರುಡದ ಚರ್ಮದಿಂದ ಮಾಡಿದ ಅನೇಕ ಸ್ವರ್ಣಮಯ ಗೋದಾಂಗುಲಿಗಳನ್ನು ತೂಗುಹಾಕಲಾಗಿತ್ತು. ಸಿಂಹದ ಗುಹೆಯ ಮೇಲೆ ಜಿಂಕೆ ಆಕ್ರಮಣಮಾಡಲಾಗುವುದಿಲ್ಲವೋ ಅಂತಯೇ ಆ ಪರ್ಣಶಾಲೆಯು ಶತ್ರುಗಳಿಗೆ ಅಗಮ್ಯ ಮತ್ತು ಅಜೇಯವಾಗಿತ್ತು.॥23॥

ಮೂಲಮ್ - 24

ಪ್ರಾಗುದಕ್ಪ್ರವಣಾಂ ವೇದಿಂ ವಿಶಾಲಾಂ ದೀಪ್ತಪಾವಕಾಮ್ ।
ದದರ್ಶ ಭರತಸ್ತತ್ರ ಪುಣ್ಯಾಂ ರಾಮನಿವೇಶನೇ ॥

ಅನುವಾದ

ಶ್ರೀರಾಮನ ಆ ನಿವಾಸ ಸ್ಥಾನದಲ್ಲಿ ಭರತನು ಒಂದು ಪವಿತ್ರವೂ ವಿಶಾಲವೂ ಆದ ವೇದಿಯನ್ನು ನೋಡಿದನು. ಅದು ಈಶಾನ ಕೋಣದಲ್ಲಿ ತಗ್ಗಾಗಿದ್ದು, ಅದರ ಮೇಲೆ ಅಗ್ನಿಯು ಪ್ರಜ್ವಲಿಸುತ್ತಿತ್ತು.॥24॥

ಮೂಲಮ್ - 25

ನಿರೀಕ್ಷ್ಯ ಸ ಮುಹೂರ್ತಂ ತು ದದರ್ಶ ಭರತೋಗುರುಮ್ ।
ಉಟಜೇ ರಾಮಮಾಸೀನಂ ಜಟಾಮಂಡಲಧಾರಿಣಮ್ ॥

ಮೂಲಮ್ - 26

ಕೃಷ್ಣಾಜಿನಧರಂ ತಂ ತು ಚೀರವಲ್ಕಲವಾಸಸಮ್ ।
ದದರ್ಶ ರಾಮಮಾಸೀನಮಭಿತಃ ಪಾವಕೋಪಮಮ್ ॥

ಅನುವಾದ

ಮುಹೂರ್ತಕಾಲ ಪರ್ಣ ಶಾಲೆಯ ಕಡೆಗೆ ನೋಡಿ ಭರತನು ಕುಟಿರದಲ್ಲಿ ಕುಳಿತಿರುವ ಪೂಜನೀಯ ತನ್ನಣ್ಣನಾದ ಶ್ರೀರಾಮನನ್ನು ನೋಡಿದನು. ಅವನು ತಲೆಯಲ್ಲಿ ಜಟಾಮಂಡಲ ಧರಿಸಿಕೊಂಡು, ಕೃಷ್ಣ ಮೃಗಚರ್ಮ ಮತ್ತು ವಲ್ಕಲಗಳನ್ನು ಧರಿಸಿದ್ದನು. ಶ್ರೀರಾಮನು ಬಳಿಯಲ್ಲೇ ಕುಳಿತು, ಪ್ರಜ್ವಲಿತ ಅಗ್ನಿಯಂತೆ ತನ್ನ ದಿವ್ಯಪ್ರಭೆಯನ್ನು ಹರಡುತ್ತಿರುವುದನ್ನು ಭರತನು ನೋಡಿದನು.॥25-26॥

ಮೂಲಮ್ - 27

ಸಿಂಹಸ್ಕಂಧಂ ಮಹಾಬಾಹುಂಪುಂಡರೀಕ ನಿಭೇಕ್ಷಣಮ್ ।
ಪೃಥಿವ್ಯಾಃ ಸಾಗರಾಂತಾಯಾಭರ್ತಾರಂ ಧರ್ಮಚಾರಿಣಮ್ ॥

ಮೂಲಮ್ - 28

ಉಪವಿಷ್ಟಂ ಮಹಾಬಾಹುಂ ಬ್ರಹ್ಮಾಣಮಿವ ಶಾಶ್ವತಮ್ ।
ಸ್ಥಂಡಿಲೇ ದರ್ಭಸಂಸ್ತೀರ್ಣೇ ಸೀತಯಾಲಕ್ಷ್ಮಣೇನ ಚ ॥

ಅನುವಾದ

ಸಮುದ್ರಾಂಕಿತ ಪೃಥಿವಿಯ ಒಡೆಯ, ಧರ್ಮಾತ್ಮಾ ಮಹಾಬಾಹು ಶ್ರೀರಾಮನು ಸನಾತನ ಬ್ರಹ್ಮನಂತೆ ದರ್ಭೆಗಳನ್ನು ಹಾಸಿ ವೇದಿಕೆಯ ಮೇಲೆ ಕುಳಿತಿರುವನು. ಅವನ ಹೆಗಲು ಸಿಂಹದಂತಿದ್ದು, ನೇತ್ರಗಳು ಅರಳಿದ ಕಮಲದಂತೆ ಇದ್ದವು. ಅವನು ವೇದಿಕೆಯ ಮೇಲೆ ಸೀತಾ ಲಕ್ಷ್ಮಣರೊಡನೆ ವಿರಾಜಿಸುತ್ತಿದ್ದನು.॥27-28॥

ಮೂಲಮ್ - 29

ತಂ ದೃಷ್ಟ್ವಾ ಭರತಃ ಶ್ರೀಮಾನ್ ಶೋಕಮೋಹಪರಿಪ್ಲುತಃ ।
ಅಭ್ಯಧಾವತ ಧರ್ಮಾತ್ಮಾ ಭರತಃ ಕೇಕಯೀಸುತಃ ॥

ಅನುವಾದ

ಅವನನ್ನು ಈ ಸ್ಥಿತಿಯಲ್ಲಿ ನೋಡಿದ ಧರ್ಮಾತ್ಮಾ ಶ್ರೀಮಾನ್ ಕೈಕೇಯಿಕುಮಾರ ಭರತನು ಶೋಕ-ಮೋಹಗಳಲ್ಲಿ ಮುಳುಗಿ, ಬಹಳ ವೇಗವಾಗಿ ಅವನ ಕಡೆಗೆ ಓಡಿದನು.॥29॥

ಮೂಲಮ್ - 30

ದೃಷ್ಟೈವ ವಿಲಲಾಪಾರ್ತೋ ಬಾಷ್ಪಸಂದಿಗ್ಧಯಾ ಗಿರಾ ।
ಅಶಕ್ನುವನ್ ವಾರಯಿತುಂಧೈರ್ಯಾದ್ವಚನಮಬ್ರುವನ್ ॥

ಅನುವಾದ

ಅಣ್ಣನ ಕಡೆಗೆ ದೃಷ್ಟಿ ಬೀಳುತ್ತಲೇ ಭರತನು ಆರ್ತಭಾವದಿಂದ ವಿಲಾಪಿಸ ತೊಡಗಿದನು. ಅವನು ತನ್ನ ಶೋಕದ ಆವೇಗವನ್ನು ಧೈರ್ಯದಿಂದ ತಡೆಯಲಾರದೆ ಕಂಬನಿಗರೆಯುತ್ತ ಗದ್ಗದ ವಾಣಿಯಿಂದ ನುಡಿದನು .॥30॥

ಮೂಲಮ್ - 31

ಯಃ ಸಂಸದಿ ಪ್ರಕೃತಿಭಿರ್ಭವೇದ್ಯುಕ್ತ ಉಪಾಸಿತುಮ್ ।
ವನ್ಯೈಮೃಗೈರುಪಾಸೀನಃ ಸೋಽಯಮಾಸ್ತೇ ಮಮಾಗ್ರಜಃ ॥

ಅನುವಾದ

ಅಯ್ಯೋ! ರಾಜಸಭೆಯಲ್ಲಿ ಕುಳಿತು ಪ್ರಜಾಜನರಿಂದ, ಮಂತ್ರಿಗಳಿಂದ ಸೇವೆ-ಸಮ್ಮಾನ ಪಡೆಯಲು ಯೋಗ್ಯನಾದ ಈ ಅಣ್ಣನಾದ ಶ್ರೀರಾಮನು ಇಲ್ಲಿ ಕಾಡುಪ್ರಾಣಿಗಳಿಂದ ಸುತ್ತುವರಿದು ಕುಳಿತಿರುವನಲ್ಲ.॥31॥

ಮೂಲಮ್ - 32

ವಾಸೋಭಿರ್ಬಹುಸಾಹಸ್ರೈರ್ಯೋ ಮಹಾತ್ಮಾ ಪುರೋಚಿತಃ ।
ಮೃಗಾಜಿನೇ ಸೋಽಯಮಿಹ ಪ್ರವಸ್ತೇ ಧರ್ಮಮಾಚರನ್ ॥

ಅನುವಾದ

ಈ ಮಹಾತ್ಮನು ಮೊದಲು ಸಾವಿರಾರು ವಸ್ತ್ರಗಳನ್ನು ಉಪಯೋಗಿಸುತ್ತಿದ್ದವನು ಈಗ ಧರ್ಮಾಚರಣೆ ಮಾಡುತ್ತಾ ಇಲ್ಲಿ ಕೇವಲ ಎರಡು ಮೃಗಚರ್ಮಗಳನ್ನು ಧರಿಸುತ್ತಿರುವನಲ್ಲ.॥32॥

ಮೂಲಮ್ - 33

ಆಧಾರಯದ್ಯೋವಿವಿಧಾಶ್ಚಿತ್ರಾಃ ಸುಮನಸಃ ಸದಾ ।
ಸೋಽಯಂ ಜಟಾಭಾರಮಿಮಂ ವಹತೇ ರಾಘವಃ ಕಥಮ್ ॥

ಅನುವಾದ

ಸದಾಕಾಲ ನಾನಾ ಪ್ರಕಾರದ ವಿಚಿತ್ರಪುಷ್ಪಗಳನ್ನು ತಲೆಯಲ್ಲಿ ಧರಿಸುತ್ತಿದ್ದ ಈ ರಘುನಾಥನು ಈಗ ಜಟಾಭಾರವನ್ನು ಹೇಗೆ ಸಹಿಸಬಲ್ಲನು.॥33॥

ಮೂಲಮ್ - 34

ಯಸ್ಯ ಯಜ್ಞೈರ್ಯಥಾದಿಷ್ಟೈರ್ಯುಕ್ತೋಧರ್ಮಸ್ಯ ಸಂಚಯಃ ।
ಶರೀರಕ್ಲೇಶಸಂಭೂತಂ ಸ ಧರ್ಮಂ ಪರಿಮಾರ್ಗತೇ ॥

ಅನುವಾದ

ಶಾಸ್ತ್ರೋಕ್ತ ಯಜ್ಞಗಳ ಅನುಷ್ಠಾನದ ಮೂಲಕ ಧರ್ಮ ಸಂಗ್ರಹಮಾಡುತ್ತಿದ್ದವನೇ ಈ ಸಮಯದಲ್ಲಿ ಶರೀರಕ್ಕೆ ಕಷ್ಟ ಕೊಟ್ಟುಗಳಿಸುವ ಧರ್ಮದ ಅನುಸಂಧಾನ ಮಾಡುತ್ತಿರುವನಲ್ಲ.॥34॥

ಮೂಲಮ್ - 35

ಚಂದನೇನ ಮಹಾರ್ಹೇಣ ಯಸ್ಯಾಂಗ ಮುಪಸೇವಿತಮ್ ।
ಮಲೇನತಸ್ಯಾಂಗಮಿದಂ ಕಥಮಾರ್ಯಸ್ಯ ಸೇವ್ಯತೇ ॥

ಅನುವಾದ

ಅಮೂಲ್ಯ ಚಂದನದಿಂದ ಯಾರ ಶರೀರದ ಸೇವೆ ನಡೆಯುತ್ತಿತ್ತೋ, ಅದೇ ನನ್ನ ಪೂಜ್ಯ ಅಣ್ಣನ ಶರೀರವು ಕೊಳೆಯಿಂದ ಹೀಗೆ ಸೇವಿತವಾಗಿದೆಯಲ್ಲ.॥35॥

ಮೂಲಮ್ - 36

ಮನ್ನಿಮಿತ್ತಮಿದಂ ದುಃಖಂ ಪ್ರಾಪ್ತೋ ರಾಮಃಸುಖೋಚಿತಃ ।
ಧಿಗ್ಜೀವಿತಂ ನೃಶಂಸಸ್ಯ ಮಮ ಲೋಕವಿಗರ್ಹಿತಮ್ ॥

ಅನುವಾದ

ಅಯ್ಯೋ! ಸರ್ವಥಾ ಸುಖ ಭೋಗಿಸಲು ಯೋಗ್ಯವಾದ ಶ್ರೀರಾಮನು ನನ್ನ ಕಾರಣದಿಂದಲೇ ಇಂತಹ ದುಃಖದಲ್ಲಿ ಬಿದ್ದಿರುವನು. ಅಯ್ಯೋ! ನಾನು ಎಷ್ಟು ಕ್ರೂರಿಯಾಗಿದ್ದೇನೆ? ನನ್ನ ಈ ಲೋಕನಿಂದಿತ ಜೀವನಕ್ಕೆ ಧಿಕ್ಕಾರವಿರಲಿ.॥36॥

ಮೂಲಮ್ - 37

ಇತ್ಯೇವಂ ವಿಲಪನ್ ದೀನಃ ಪ್ರಸ್ವಿನ್ನಮುಖಪಂಕಜಃ ।
ಪಾದಾವಪ್ರಾಪ್ಯ ರಾಮಸ್ಯ ಪಪಾತ ಭರತೋ ರುದನ್ ॥

ಅನುವಾದ

ಈ ಪ್ರಕಾರ ವಿಲಾಪ ಮಾಡುತ್ತಾ ಭರತನು ಅತ್ಯಂತ ದುಃಖಿತನಾಗಿ ಮುಖದಲ್ಲಿ ಬೆವರಿನ ಹನಿಗಳು ಕಾಣಿಸಿಕೊಂಡವು. ಅವನು ಶ್ರೀರಾಮಚಂದ್ರನ ಚರಣಗಳವರೆಗೆ ಮುಟ್ಟುವ ಮೊದಲೇ ಭೂಮಿಯಲ್ಲಿ ಕುಸಿದುಬಿದ್ದನು.॥37॥

ಮೂಲಮ್ - 38

ದುಃಖಾಭಿತಪ್ತೋ ಭರತೋ ರಾಜಪುತ್ರೋ ಮಹಾಬಲಃ ।
ಉಕ್ತ್ವಾಽಽರ್ಯೇತಿ ಸಕೃದ್ದೀನಂ ಪುನರ್ನೋವಾಚ ಕಿಂಚನ ॥

ಅನುವಾದ

ಅತ್ಯಂತ ದುಃಖದಿಂದ ಸಂತತಪ್ತನಾಗಿ ಮಹಾಬಲಿ ರಾಜಕುಮಾರ ಭರತನು ಒಮ್ಮೆ ದೀನವಾಣಿಯಲ್ಲಿ ‘ಆರ್ಯನೇ’ ಎಂದು ಕೂಗಿದನು ಮತ್ತೆ ಅವನಿಂದ ಮಾತನಾಡಲಾಗಲಿಲ್ಲ.॥38॥

ಮೂಲಮ್ - 39

ಬಾಷ್ಟೈಃ ಪಿಹಿತಕಂಠಶ್ಚ ಪ್ರೇಕ್ಷ್ಯ ರಾಮಂ ಯಶಸ್ವಿನಮ್ ।
ಆರ್ಯೇತ್ಯೇವಾಭಿಸುಂಕ್ರುಶ್ಯ ವ್ಯಾಹರ್ತುಂ ನಾಶಕತ್ತತಃ ॥

ಅನುವಾದ

ಕಂಬನಿಗಳಿಂದ ಅವನ ಕಂಠ ಬಿದ್ದುಕೊಂಡಿತು. ಯಶಸ್ವೀ ಶ್ರೀರಾಮನ ಕಡೆಗೆ ನೋಡಿ ಅವನು ‘ಹಾ! ಆರ್ಯ’ ಎಂದು ಗಟ್ಟಿಯಾಗಿ ಹೇಳಿದನು. ಮುಂದೆ ಅವನು ಏನನ್ನೂ ಮಾತನಾಡದಾದನು.॥39॥

ಮೂಲಮ್ - 40

ಶತ್ರುಘ್ನಶ್ಚಾಪಿ ರಾಮಸ್ಯ ವನಂದೇ ಚರಣೌ ರುದನ್ ।
ತಾವುಭೌ ಸ ಸಮಾಲಿಂಗ್ಯ ರಾಮೋಽಪ್ಯಶ್ರೂಣ್ಯವರ್ತಯತ್ ॥

ಅನುವಾದ

ನಂತರ ಶತ್ರುಘ್ನನು ಅಳುತ್ತಳುತ್ತಾ ಶ್ರೀರಾಮನ ಚರಣಗಳಲ್ಲಿ ವಂದಿಸಿದನು. ಶ್ರೀರಾಮನು ಆ ಇಬ್ಬರನ್ನೂ ಎಬ್ಬಿಸಿ ಎದೆಗೊತ್ತಿಕೊಂಡನು ಮತ್ತೆ ಅವನೂ ಕಂಬನಿಗರೆದನು.॥40॥

ಮೂಲಮ್ - 41

ತತಃ ಸುಮಂತ್ರೇಣ ಗುಹೇನ ಚೈವ
ಸಮೀಯತ್ ರಾಜಸುತಾವರಣ್ಯೇ ।
ದಿವಾಕರಶ್ಚೈವ ನಿಶಾಕರಶ್ಚ
ಯಥಾಮ್ಬರೇ ಶುಕ್ರಬೃಹಸ್ಪತಿಭ್ಯಾಮ್ ॥

ಅನುವಾದ

ಅನಂತರ ರಾಜಕುಮಾರ ಶ್ರೀರಾಮ-ಲಕ್ಷ್ಮಣರು ಆ ವನದಲ್ಲಿ ಸುಮಂತ್ರ ಮತ್ತು ನಿಷಾದ ರಾಜಗುಹನನ್ನು ಭೆಟ್ಟಿಯಾದರು. ಅದು ಆಕಾಶದಲ್ಲಿ ಸೂರ್ಯ, ಚಂದ್ರ, ಶುಕ್ರ, ಬೃಹಸ್ಪತಿ ಸೇರಿದಂತೆ ಇತ್ತು.॥41

ಮೂಲಮ್ - 42

ತಾನ್ ಪಾರ್ಥಿವಾನ್ವಾರಣಯೂಥಪಾರ್ಹಾನ್
ಸಮಾಗತಾಂಸ್ತತ್ರ ಮಹತ್ಯರಣ್ಯೇ ।
ವನೌಕಸಸ್ತೇಽಭಿ ಸಮೀಕ್ಷ್ಯ ಸರ್ವೇ
ತ್ವಶ್ರೂಣ್ಯಮುಂಚನ್ ಪ್ರವಿಹಾಯ ಹರ್ಷಮ್ ॥

ಅನುವಾದ

ಯೂಥಪತಿ ಗಜರಾಜನ ಮೇಲೆ ಕುಳಿತು ಪಯಣಿಸಲು ಯೋಗ್ಯರಾದ ಆ ನಾಲ್ವರೂ ರಾಜಕುಮಾರರು ಆ ವಿಶಾಲ ಕಾಡಿಗೆ ಬಂದಿರುವುದನ್ನು ನೋಡಿ ಸಮಸ್ತ ವನವಾಸಿಗಳು ಹರ್ಷರಹಿತರಾಗಿ ಶೋಕಾಶ್ರುಗಳನ್ನು ಹರಿಸತೊಡಗಿದರು.॥42॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ತೊಂಭತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು.॥99॥