वाचनम्
ಭಾಗಸೂಚನಾ
ಭರತನು ಶ್ರೀರಾಮನ ಪರ್ಣಶಾಲೆಯನ್ನು ಹುಡುಕಿದುದು, ಶ್ರೀರಾಮನ ದರ್ಶನ
ಮೂಲಮ್ - 1
ನಿವೇಶ್ಯ ಸೇನಾಂ ತು ವಿಭುಃ ಪದ್ಭ್ಯಾಂ ಪಾದವತಾಂ ವರಃ ।
ಅಭಿಗಂತುಂ ಸಕಾಕುತ್ಸ್ಥಮಿಯೇಷ ಗುರುವರ್ತಕಮ್ ॥
ಮೂಲಮ್ - 2
ನಿವಿಷ್ಟಮಾತ್ರೇ ಸೈನ್ಯೇ ತು ಯಥೋದ್ದೇಶಂ ವಿನೀತವತ್ ।
ಭರತೋ ಭ್ರಾತರಂ ವಾಕ್ಯಂ ಶತ್ರುಘ್ನಮಿದಮಬ್ರವೀತ್ ॥
ಅನುವಾದ
ವಿಭುವಾದ ನರಶ್ರೇಷ್ಠನಾದ ಭರತನು ಚಿತ್ರಕೂಟದ ಸುತ್ತಲೂ ಬೀಡು ಬಿಡುವಂತೆ ಸೈನ್ಯಕ್ಕೆ ತಿಳಿಸಿ ಪಿತೃವಾಕ್ಯ ಪರಿಪಾಲಕನಾದ ಶ್ರೀರಾಮನನ್ನು ನೋಡಲು ಕಾಲ್ನಡಿಗೆಯಲ್ಲೇ ಹೋಗಲು ಬಯಸಿದನು. ಎಲ್ಲ ಸೇನೆಯು ವಿನೀತ ಭಾವದಿಂದ ಯಥಾಸ್ಥಾನ ನಿಂತುಕೊಂಡಿತು, ಆಗ ಭರತನು ತಮ್ಮನಾದ ಶತ್ರುಘ್ನನಲ್ಲಿ ಇಂತೆಂದನು .॥1-2॥
ಮೂಲಮ್ - 3
ಕ್ಷಿಪ್ರಂ ವನಮಿದಂ ಸೌಮ್ಯ ನರಸಂಘೈಃ ಸಮಂತತಃ ।
ಲುಬ್ಧೈಶ್ಚ ಸಹಿತೈರೇಭಿಸ್ತ್ವಮನ್ವೇಷಿತುಮರ್ಹಸಿ ॥
ಅನುವಾದ
ಸೌಮ್ಯ! ಅನೇಕ ಜನರಿಂದೊಡಗೂಡಿ, ಈ ನಿಷಾದರನ್ನು ಜೊತೆಯಲ್ಲಿ ಕರೆದುಕೊಂಡು ನೀನು ಶೀಘ್ರವಾಗಿ ಈ ವನದಲ್ಲಿ ಎಲ್ಲೆಡೆ ಶ್ರೀರಾಮಚಂದ್ರನನ್ನು ಹುಡುಕು.॥3॥
ಮೂಲಮ್ - 4
ಗುಹೋ ಜ್ಞಾತಿಸಹಸ್ರೇಣ ಶರಚಾಪಾಸಿಧಾರಿಣಾ ।
ಸಮನ್ವೇಷತು ಕಾಕುತ್ಸ್ಥಾವಸ್ಮಿನ್ ಪರಿವೃತಃ ಸ್ವಯಮ್ ॥
ಅನುವಾದ
ನಿಷಾದರಾಜ ಗುಹನೂ ಧನುರ್ಬಾಣ, ಕತ್ತಿ-ಗುರಾಣಿ ಹಿಡಿದಿರುವ ಸಾವಿರಾರು ತನ್ನ ಬಂಧು-ಬಾಂಧವರೊಂದಿಗೆ ಕೂಡಿಕೊಂಡು ಈ ವನದಲ್ಲಿ ಕಾಕುತ್ಸ್ಥ ಶ್ರೀರಾಮ ಮತ್ತು ಲಕ್ಷ್ಮಣರನ್ನು ಹುಡುಕಲಿ.॥4॥
ಮೂಲಮ್ - 5
ಅಮಾತ್ಯೈಃ ಸಹ ಪೌರೈಶ್ಚ ಗುರುಭಿಶ್ಚ ದ್ವಿಜಾತಿಭಿಃ ।
ಸಹ ಸರ್ವಂ ಚರಿಷ್ಯಾಮಿ ಪದ್ಭ್ಯಾಂ ಪರಿವೃತಃ ಸ್ವಯಮ್ ॥
ಅನುವಾದ
ನಾನೂ ಕೂಡ ಮಂತ್ರಿಗಳೊಂದಿಗೆ, ಪುರವಾಸಿಗಳು, ಗುರುಗಳೊಂದಿಗೆ, ಬ್ರಾಹ್ಮಣರೊಂದಿಗೆ ಕೂಡಿಕೊಂಡು ಕಾಲ್ನಡಿಗೆ ಯಲ್ಲೇ ಇಡೀ ವನದಲ್ಲಿ ಸಂಚರಿಸುವೆನು.॥5॥
ಮೂಲಮ್ - 6
ಯಾವನ್ನ ರಾಮಂ ದ್ರಕ್ಷ್ಯಾಮಿ ಲಕ್ಷ್ಮಣಂ ವಾಮಹಾಬಲಮ್ ।
ವೈದೇಹೀಂ ವಾ ಮಹಾಭಾಗಾಂ ನ ಮೇ ಶಾಂತಿರ್ಭವಿಷ್ಯತಿ ॥
ಅನುವಾದ
ಶ್ರೀರಾಮನನ್ನು ಮಹಾಬಲಿ ಲಕ್ಷ್ಮಣನನ್ನು, ಮಹಾಭಾಗಾ ವಿದೇಹ ಕುಮಾರಿ ಸೀತೆಯನ್ನು ನೋಡುವತನಕ ನನಗೆ ಶಾಂತಿ ಸಿಗಲಾರದು.॥6॥
ಮೂಲಮ್ - 7
ಯಾವನ್ನ ಚಂದ್ರಸಂಕಾಶಂ ತದ್ದ್ರಕ್ಷ್ಯಾಮಿ ಶುಭಾನನಮ್ ।
ಭ್ರಾತುಃ ಪದ್ಮವಿಶಾಲಾಕ್ಷಂ ನ ಮೇ ಶಾಂತಿರ್ಭವಿಷ್ಯತಿ ॥
ಅನುವಾದ
ನನ್ನ ಪೂಜ್ಯ ಅಣ್ಣನಾದ ಶ್ರೀರಾಮನ ಕಮಲದಂತಿರುವ ವಿಶಾಲನೇತ್ರಗಳುಳ್ಳ ಸುಂದರ ಮುಖ ಚಂದ್ರನ ದರ್ಶನ ಪಡೆಯುವವರೆಗೆ ನನಗೆ ಶಾಂತಿ ಪ್ರಾಪ್ತವಾಗಲಾರದು.॥7॥
ಮೂಲಮ್ - 8
ಸಿದ್ಧಾರ್ಥಃ ಖಲು ಸೌಮಿತ್ರಿರ್ಯಶ್ಚಂದ್ರವಿಮಲೋಪಮಮ್ ।
ಮುಖಂ ಪಶ್ಯತಿ ರಾಮಸ್ಯ ರಾಜೀವಾಕ್ಷಂ ಮಹಾದ್ಯುತಿ ॥
ಅನುವಾದ
ನಿಶ್ಚಯವಾಗಿಯೂ ಸುಮಿತ್ರಾಕುಮಾರ ಲಕ್ಷ್ಮಣನು ಕೃತಾರ್ಥನಾದನು. ಅವನು ಶ್ರೀರಾಮನ ಕಮಲ ಸದೃಶ ಕಣ್ಣುಗಳುಳ್ಳ ಮಹಾತೇಜಸ್ವೀ ಮುಖವನ್ನು ನಿರಂತರ ದರ್ಶಿಸುತ್ತಿರುವನು. ಅದು ಚಂದ್ರನಂತೆ ನಿರ್ಮಲ ಹಾಗೂ ಆಹ್ಲಾದವನ್ನು ಕೊಡುವಂತಹುದು.॥8॥
ಮೂಲಮ್ - 9
ಯಾವನ್ನ ಚರಣೌ ಭ್ರಾತುಃ ಪಾರ್ಥಿವವ್ಯಂಜನಾನ್ವಿತೌ ।
ಶಿರಸಾ ಪ್ರಗ್ರಹೀಷ್ಯಾಮಿ ನ ಮೇ ಶಾಂತಿರ್ಭವಿಷ್ಯತಿ ॥
ಅನುವಾದ
ಅಣ್ಣನಾದ ಶ್ರೀರಾಮನ ರಾಜೋಚಿತ ಲಕ್ಷಣಗಳಿಂದ ಕೂಡಿದ ಚರಣಾರವಿಂದಗಳನ್ನು ನನ್ನ ತಲೆಯ ಮೇಲೆ ಇರಿಸಿ ಕೊಳ್ಳುವ ತನಕ ನನಗೆ ಶಾಂತಿ ಸಿಗಲಾರದು.॥9॥
ಮೂಲಮ್ - 10
ಯಾವನ್ನ ರಾಜ್ಯೇ ರಾಜ್ಯಾರ್ಹಃ ಪಿತೃಪೈತಾಮಹೇ ಸ್ಥಿತಃ ।
ಅಭಿಷಿಕ್ತೋ ಜಲಕ್ಲಿನ್ನೋ ನ ಮೇ ಶಾಂತಿರ್ಭವಿಷ್ಯತಿ ॥
ಅನುವಾದ
ರಾಜ್ಯದ ನಿಜವಾದ ಅಧಿಕಾರೀ ಆರ್ಯ ಶ್ರೀರಾಮನು ಪಿತಾ- ಪಿತಾಮಹರ ರಾಜ್ಯದಲ್ಲಿ ಪ್ರತಿಷ್ಠಿತನಾಗಿ ಅಭಿಷೇಕದ ಜಲದಿಂದ ಒದ್ದೆಯಾಗುವತನಕ ನನ್ನ ಮನಸ್ಸಿಗೆ ಶಾಂತಿಯು ದೊರೆಯಲಾರದು.॥10॥
ಮೂಲಮ್ - 11
ಕೃತಕೃತ್ಯಾ ಮಹಾಭಾಗಾ ವೈದೇಹೀ ಜನಕಾತ್ಮಜಾ ।
ಭರ್ತಾರಂ ಸಾಗರಾಂತಾಯಾಃ ಪೃಥಿವ್ಯಾಯಾನುಗಚ್ಛತಿ ॥
ಅನುವಾದ
ಯಾರು ಸಮುದ್ರಪರ್ಯಂತ ಪೃಥಿವಿಯ ಒಡೆಯ ತನ್ನ ಪತಿಯಾದ ಶ್ರೀರಾಮನನ್ನು ಅನುಸರಿಸುತ್ತಿರುವಳೋ, ಆ ಜನಕಕಿಶೋರಿ ವಿದೇಹನಂದಿನೀ ಮಹಾಭಾಗಾ ಸೀತೆಯು ತನ್ನ ಈ ಸತ್ಕರ್ಮದಿಂದ ಕೃತಾರ್ಥಳಾಗಿರುವಳು.॥11॥
ಮೂಲಮ್ - 12
ಸುಶುಭಶ್ಚಿತ್ರಕೂಟೋಽಸೌ ಗಿರಿರಾಜಸಪಮೋ ಗಿರಿಃ ।
ಯಸ್ಮಿನ್ ವಸತಿ ಕಾಕುತ್ಸ್ಥಃ ಕುಬೇರ ಇವ ನಂದನೇ ॥
ಅನುವಾದ
ನಂದನವನದಲ್ಲಿ ಕುಬೇರನು ವಾಸಿಸುವಂತೆಯೇ ಯಾವ ವನದಲ್ಲಿ ಕಾಕುತ್ಸ್ಥ ಶ್ರೀರಾಮಚಂದ್ರನು ವಿರಾಜಿಸುತ್ತಿ ರುವನೋ, ಆ ಚಿತ್ರಕೂಟವು ಪರಮಮಂಗಲಕಾರೀ ಹಾಗೂ ಹಿಮಾಲಯ ಮತ್ತು ವೆಂಕಟಾಚಲದಂತೆ ಸರ್ವಶ್ರೇಷ್ಠ ಪರ್ವತವಾಗಿದೆ.॥12॥
ಮೂಲಮ್ - 13
ಕೃತಕಾರ್ಯಮಿದಂ ದುರ್ಗವನಂ ವ್ಯಾಲನಿಷೇವಿತಮ್ ।
ಯದಧ್ಯಾಸ್ತೇ ಮಹಾರಾಜೋ ರಾಮಃ ಶಸ್ತ್ರಭೃತಾಂ ವರಃ ॥
ಅನುವಾದ
ಶಸ್ತ್ರಧಾರಿಗಳಲ್ಲಿ ಶ್ರೇಷ್ಠ ಮಹಾರಾಜ ಶ್ರೀರಾಮನು ವಾಸಿಸುತ್ತಿರುವ, ಸರ್ಪಸೇವಿತ ದುರ್ಗಮ ವನವೂ ಕೂಡ ಕೃತಾರ್ಥವಾಯಿತು.॥13॥
ಮೂಲಮ್ - 14
ಏವಮುಕ್ತ್ವಾ ಮಹಾಬಾಹುರ್ಭರತಃ ಪುರುಷರ್ಷಭಃ ।
ಪದ್ಭ್ಯಾಮೇವ ಮಹಾತೇಜಾಃ ಪ್ರವಿವೇಶ ಮಹದ್ವನಮ್ ॥
ಅನುವಾದ
ಹೀಗೆ ಹೇಳಿ ಮಹಾತೇಜಸ್ವೀ ಪುರುಷಪ್ರವರ ಮಹಾಬಾಹು ಭರತನು ಆ ವಿಶಾಲ ವನವನ್ನು ಕಾಲ್ನಡಿಗೆಯಿಂದಲೇ ಪ್ರವೇಶಿಸಿದನು.॥14॥
ಮೂಲಮ್ - 15
ಸ ತಾನಿ ದ್ರುಮಜಾಲಾನಿ ಜಾತಾನಿ ಗಿರಿಸಾನುಷು ।
ಪುಷ್ಪಿತಾಗ್ರಾಣಿ ಮಧ್ಯೇನ ಜಗಾಮ ವದತಾಂ ವರಃ ॥
ಅನುವಾದ
ಮಾತಿನಲ್ಲಿ ಶ್ರೇಷ್ಠನಾದ ಭರತನು ಪರ್ವತ ಶಿಖರಗಳಲ್ಲಿನ ಹೂವುಗಳಿಂದ ತುಂಬಿದ ಕೊಂಬೆಗಳುಳ್ಳ ವೃಕ್ಷ ಸಮೂಹಗಳ ನಡುವಿನಿಂದ ಹೊರಟನು.॥15॥
ಮೂಲಮ್ - 16
ಸ ಗಿರೇಶ್ಚಿತ್ರಕೂಟಸ್ಯ ಸಾಲಮಾರುಹ್ಯ ಸತ್ತ್ವರಮ್ ।
ರಾಮಾಶ್ರಮಗತಸ್ಯಾಗ್ನೇರ್ದದರ್ಶ ಧ್ವಜಮುಚ್ಛ್ರಿತಮ್ ॥
ಅನುವಾದ
ಮುಂದೆ ಹೋಗಿ ಅವನು ವೇಗವಾಗಿ ಚಿತ್ರಕೂಟ ಪರ್ವತದ ಒಂದು ಸಾಲ ವೃಕ್ಷವನ್ನು ಹತ್ತಿ ಅಲ್ಲಿಂದ ಶ್ರೀರಾಮನ ಆಶ್ರಮದಿಂದ ಮೇಲೇರುತ್ತಿರುವ ಹೊಗೆಯನ್ನು ನೋಡಿದನು.॥16॥
ಮೂಲಮ್ - 17
ತಂ ದೃಷ್ಟ್ವಾ ಭರತಃ ಶ್ರೀಮಾನ್ಮುಮೋದ ಸಹಬಾಂಧವಃ ।
ಅತ್ರರಾಮ ಇತಿ ಜ್ಞಾತ್ವಾ ಗತಃ ಪಾರಮಿವಾಂಭಸಃ ॥
ಅನುವಾದ
ಆ ಹೊಗೆಯನ್ನು ನೋಡಿ ಶ್ರೀಮಾನ್ ಭರತನು ತನ್ನ ಅನುಜ ಶತ್ರುಘ್ನಸಹಿತ ಸಂತೋಷದಿಂದ ‘ಇಲ್ಲೇ ಶ್ರೀರಾಮನ ಆಶ್ರಮವಿದೆ’ ಎಂದು ಹೇಳುತ್ತಾ ಅವನಿಗೆ ಆಳವಾದ ನೀರನ್ನು ದಾಟಿದಷ್ಟು ಸಂತೋಷ ಪ್ರಾಪ್ತವಾಯಿತು.॥17॥
ಮೂಲಮ್ - 18
ಸ ಚಿತ್ರಕೂಟೇ ತು ಗಿರೌ ನಿಶಮ್ಯ
ರಾಮಾಶ್ರಮಂ ಪುಣ್ಯಜನೋಪಪನ್ನಮ್ ।
ಗುಹೇನ ಸಾರ್ಧಂ ತ್ವರಿತೋ ಜಗಾಮ
ಪುನರ್ನಿವೇಶ್ಯೈವ ಚಮೂಂ ಮಹಾತ್ಮಾ ॥
ಅನುವಾದ
ಹೀಗೆ ಚಿತ್ರಕೂಟ ಪರ್ವತದ ಮೇಲೆ ಪುಣ್ಯಾತ್ಮಾ ಮಹರ್ಷಿಗಳಿಂದ ಕೂಡಿದ ಶ್ರೀರಾಮನ ಆಶ್ರಮವನ್ನು ನೋಡಿ ಮಹಾತ್ಮಾ ಭರತನು ಹುಡುಕಲು ಬಂದಿರುವ ಜನರನ್ನು ಅಲ್ಲೇ ನಿಲ್ಲಲು ಹೇಳಿ, ಅವನು ಸ್ವತಃ ಗುಹನೊಂದಿಗೆ ಶೀಘ್ರವಾಗಿ ಆಶ್ರಮದ ಕಡೆಗೆ ನಡೆದನು.॥18॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ತೊಂಭತ್ತೆಂಟನೆಯ ಸರ್ಗ ಪೂರ್ಣವಾಯಿತು.॥98॥