०९७ रामेण लक्ष्मणपरिसान्त्वनम्

वाचनम्
ಭಾಗಸೂಚನಾ

ಶ್ರೀರಾಮನು ಲಕ್ಷ್ಮಣನ ಕೋಪವನ್ನು ಶಾಂತಗೊಳಿಸುತ್ತಾ ಭರತನ ಸದ್ಭಾವನೆಯನ್ನು ವರ್ಣಿಸಿದುದು, ಲಕ್ಷ್ಮಣನು ಲಜ್ಜಿತನಾಗಿ ರಾಮನ ಬಳಿಯಲ್ಲಿ ನಿಂತುದುದು ಪರ್ವತದ ಕೆಳಭಾಗದಲ್ಲಿ ಭರತನ ಸೈನ್ಯ ಬಿಡಾರ ಬಿಟ್ಟಿದುದು

ಮೂಲಮ್ - 1

ಸುಸಂರಬ್ಧಂ ತು ಭರತಂ ಲಕ್ಷ್ಮಣಂ ಕ್ರೋಧಮೂರ್ಛಿತಮ್ ।
ರಾಮಸ್ತು ಪರಿಸಾನ್ ತ್ವ್ಯಾಥ ವಚನಂ ಚೇದಮಬ್ರವೀತ್ ॥

ಅನುವಾದ

ಲಕ್ಷ್ಮಣನು ಭರತನ ಕುರಿತು ರೋಷಾವೇಶದಿಂದ ಕ್ರೋಧವಶನಾಗಿ ತನ್ನ ವಿವೇಕವನ್ನು ಕಳೆದುಕೊಂಡಿದ್ದ, ಆ ಸ್ಥಿತಿಯಲ್ಲಿ ಶ್ರೀರಾಮನು ಅವನನ್ನು ಸಂತೈಸಿ ಶಾಂತಗೊಳಿಸಿ ಈ ಪ್ರಕಾರ ಹೇಳಿದನು .॥1॥

ಮೂಲಮ್ - 2

ಕಿಮತ್ರ ಧನುಷಾ ಕಾರ್ಯಮಸಿನಾ ವಾ ಸಚರ್ಮಣಾ ।
ಮಹಾಬಲೇ ಮಹೋತ್ಸಾಹೇ ಭರತೇ ಸ್ವಯಮಾಗತೇ ॥

ಅನುವಾದ

ಲಕ್ಷ್ಮಣಾ! ಮಹಾಬಲಿ, ಮಹಾ ಉತ್ಸಾಹೀ ಭರತನು ಸ್ವತಃ ಇಲ್ಲಿಗೆ ಬಂದಾಗ ಈಗ ಧನುಸ್ಸು, ಖಡ್ಗ-ಗುರಾಣಿಗಳ ಕೆಲಸ ಏನಿದೆ.॥2॥

ಮೂಲಮ್ - 3

ಪಿತುಃ ಸತ್ಯಂ ಪ್ರತಿಶ್ರುತ್ಯ ಹತ್ವಾ ಭರತಮಾಹವೇ ।
ಕಿಂ ಕರಿಷ್ಯಾಮಿ ರಾಜ್ಯೇನ ಸಾಪವಾದೇನ ಲಕ್ಷ್ಮಣ ॥

ಅನುವಾದ

ಲಕ್ಷ್ಮಣ! ತಂದೆಯ ಸತ್ಯದ ರಕ್ಷಣೆಗಾಗಿ ಪ್ರತಿಜ್ಞೆಮಾಡಿ ನಾನು ಯುದ್ಧದಲ್ಲಿ ಭರತನನ್ನು ಕೊಂದು ಅವನ ರಾಜ್ಯವನ್ನು ಕಸಿದುಕೊಂಡರೆ ಜಗತ್ತಿನಲ್ಲಿ ನನ್ನ ಎಷ್ಟು ನಿಂದೆಯಾದೀತು? ಆ ಕಲಂಕಿತ ರಾಜ್ಯವನ್ನು ಪಡೆದು ನಾನು ಏನು ಮಾಡಲಿ.॥3॥

ಮೂಲಮ್ - 4

ಯದ್ದ್ರವ್ಯಂ ಬಾಂಧವಾನಾಂ ವಾ ಮಿತ್ರಾಣಾಂ ವಾ ಕ್ಷಯೇ ಭವೇತ್ ।
ನಾಹಂ ತತ್ ಪ್ರತಿಗೃಹ್ಣೀಯಾಂ ಭಕ್ಷ್ಯಾನ್ವಿಷಕೃತಾನಿವ ॥

ಅನುವಾದ

ತನ್ನ ಬಂಧು-ಬಾಂಧವರನ್ನು ಅಥವಾ ಮಿತ್ರರನ್ನು ನಾಶ ಮಾಡಿ ಪ್ರಾಪ್ತವಾದ ಧನವು ವಿಷಮಿಶ್ರಿತ ಭೋಜನದಂತೆ ಸರ್ವಥಾ ತ್ಯಜಿಸಲು ಯೋಗ್ಯವಾಗಿದೆ. ಅದನ್ನು ನಾನು ಎಂದಿಗೂ ಸ್ವೀಕರಿಸಲಾರೆನು.॥4॥

ಮೂಲಮ್ - 5

ಧರ್ಮಮರ್ಥಂ ಚ ಕಾಮಂ ಚ ಪೃಥಿವೀಂ ಚಾಪಿಲಕ್ಷ್ಮಣ ।
ಇಚ್ಛಾಮಿ ಭವತಾಮರ್ಥೇ ಏತತ್ ಪ್ರತಿಶೃಣೋಮಿ ತೇ ॥

ಅನುವಾದ

ಲಕ್ಷ್ಮಣಾ! ಧರ್ಮ, ಅರ್ಥ, ಕಾಮ ಮತ್ತು ಪೃಥಿವಿಯ ರಾಜ್ಯವನ್ನು ನಾನು ನಿಮಗಾಗಿಯೇ ಬಯಸುತ್ತೇನೆ ಎಂದು ಪ್ರತಿಜ್ಞಾಪೂರ್ವಕ ನಿನ್ನಲ್ಲಿ ಹೇಳುತ್ತಿದ್ದೇನೆ.॥5॥

ಮೂಲಮ್ - 6

ಭ್ರಾತೃಣಾಂ ಸಂಗ್ರಹಾರ್ಥಂ ಚ ಸುಖಾರ್ಥಂ ಚಾಪಿ ಲಕ್ಷ್ಮಣ ।
ರಾಜ್ಯಮಪ್ಯಹಮಿಚ್ಛಾಮಿ ಸತ್ಯೇನಾಯುಧಮಾಲಭೇ ॥

ಅನುವಾದ

ಸುಮಿತ್ರಾಕುಮಾರ! ಸಹೋದರರ ಸಂಗ್ರಹ ಮತ್ತು ಸುಖಕ್ಕಾಗಿಯೇ ನಾನು ರಾಜ್ಯವನ್ನು ಇಚ್ಛಿಸುತ್ತೇನೆ ಮತ್ತು ಇದರ ಸತ್ಯತೆಗಾಗಿ ನನ್ನ ಧನುಸ್ಸನ್ನು ಮುಟ್ಟಿ ಆಣೆ ಇಡುತ್ತೇನೆ.॥6॥

ಮೂಲಮ್ - 7

ನೇಯಂ ಮಮ ಮಹೀ ಸೌಮ್ಯ ದುರ್ಲಭಾಸಾಗರಾಂಬರಾ ।
ನಹೀಚ್ಛೇಯಮಧರ್ಮೇಣ ಶಕ್ರತ್ವಮಪಿ ಲಕ್ಷ್ಮಣ ॥

ಅನುವಾದ

ಸೌಮ್ಯ ಲಕ್ಷ್ಮಣ! ಸಮುದ್ರದಿಂದ ಆವರಿಸಿದ ಈ ಪೃಥಿವಿಯು ನನಗೆ ದುರ್ಲಭವೇನಲ್ಲ, ಆದರೆ ನಾನು ಅಧರ್ಮದಿಂದ ಇಂದ್ರಪದವಿಯನ್ನು ಪಡೆಯಲು ಬಯಸುವುದಿಲ್ಲ.॥7॥

ಮೂಲಮ್ - 8

ಯದ್ವಿನಾ ಭರತಂ ತ್ವಾಂ ಚ ಶತ್ರುಘ್ನಂ ವಾಪಿ ಮಾನದ ।
ಭವೇನ್ಮಮ ಸುಖಂ ಕಿಂಚಿದ್ ಭಸ್ಮತತ್ಕುರುತಾಂ ಶಿಖೀ ॥

ಅನುವಾದ

ಮಾನದ! ಭರತನನ್ನು, ನಿನ್ನನ್ನು ಮತ್ತು ಶತ್ರುಘ್ನನನ್ನು ಬಿಟ್ಟು ನನಗೆ ಯಾವುದಾದರೂ ಸುಖ ಸಿಕ್ಕಿದರೆ ಅದನ್ನು ಅಗ್ನಿಯು ಸುಟ್ಟು ಬೂದಿಮಾಡಿಬಿಡಲಿ.॥8॥

ಮೂಲಮ್ - 9

ಮನ್ಯೇಹಮಾಗತೋಽಯೋಧ್ಯಾಂ ಭರತೋ ಭ್ರಾತೃವತ್ಸಲಃ ।
ಮಮ ಪ್ರಾಣೈಃ ಪ್ರಿಯತರಃ ಕುಲಧರ್ಮಮನುಸ್ಮರನ್ ॥

ಮೂಲಮ್ - 10

ಶ್ರುತ್ವಾ ಪ್ರಾವ್ರಾಜಿತಂ ಮಾಂ ಹಿ ಜಟಾವಲ್ಕಲಧಾರಿಣಮ್ ।
ಜಾನಕ್ಯಾ ಸಹಿತಂ ವೀರ ತ್ವಯಾ ಚ ಪುರುಷೋತ್ತಮ ॥

ಮೂಲಮ್ - 11

ಸ್ನೇಹೇನಾಕ್ರಾಂತಹೃದಯಃ ಶೋಕೇನಾಕುಲಿತೇಂದ್ರಿಯಃ ।
ದ್ರಷ್ಟುಮಭ್ಯಾಗತೋ ಹ್ಯೇಷ ಭರತೋ ನಾನ್ಯಥಾಽಽಗತಃ ॥

ಅನುವಾದ

ವೀರ! ಪುರುಷಪ್ರವರ! ಭರತನು ದೊಡ್ಡ ಭ್ರಾತೃವತ್ಸಲನಾಗಿದ್ದಾನೆ. ಅವನು ನನಗೆ ಪ್ರಾಣಗಳಿಗಿಂತ ಹೆಚ್ಚು ಪ್ರಿಯನಾಗಿದ್ದಾನೆ. ಭರತನು ಅಯೋಧ್ಯೆಗೆ ಬಂದಾಗ, ನಾನು ನಿನ್ನ ಮತ್ತು ಜಾನಕಿಯೊಂದಿಗೆ ಜಟಾ-ವಲ್ಕಲ ಧರಿಸಿ ಕಾಡಿಗೆ ಹೋಗಿರುವುದನ್ನು ಕೇಳಿದಾಗ ಅವನ ಇಂದ್ರಿಯಗಳು ಶೋಕದಿಂದ ವ್ಯಾಕುಲವಾಗಿ, ಅವನು ಕುಲಧರ್ಮವನ್ನು ವಿಚಾರ ಮಾಡಿ ಸ್ನೇಹಯುಕ್ತ ಹೃದಯದಿಂದ ನಮ್ಮನ್ನು ಕಾಣಲು ಬಂದಿರುವನು ಎಂದು ನನಗೆ ಅನಿಸುತ್ತದೆ. ಇದು ಬಿಟ್ಟು ಭರತನ ಆಗಮನದ ಬೇರೆ ಯಾವುದೇ ಉದ್ದೇಶವಿಲ್ಲ.॥9-11॥

ಮೂಲಮ್ - 12

ಅಂಬಾಂ ಚ ಕೇಕಯೀಂ ರುಷ್ಯ ಭರತಶ್ಚಾಪ್ರಿಯಂ ವದನ್ ।
ಪ್ರಸಾದ್ಯ ಪಿತರಂ ಶ್ರೀಮಾನ್ರಾಜ್ಯಂ ಮೇ ದಾತುಮಾಗತಃ ॥

ಅನುವಾದ

ತಾಯಿ ಕೈಕೇಯಿಯ ಕುರಿತು ಕುಪಿತನಾಗಿ ಕಠೋರ ಮಾತುಗಳನ್ನು ಹೇಳಿ, ತಂದೆಯನ್ನು ಪ್ರಸನ್ನಗೊಳಿಸಿ ಶ್ರೀಮಾನ್ ಭರತನು ನನಗೆ ರಾಜ್ಯವನ್ನು ಕೊಡಲಿಕ್ಕಾಗಿಯೇ ಬಂದಿರುವನು.॥12॥

ಮೂಲಮ್ - 13

ಪ್ರಾಪ್ತಕಾಲಂ ಯಥೈಷೋಽಸ್ಮಾನ್ ಭರತೋದ್ರಷ್ಟುಮರ್ಹತಿ ।
ಅಸ್ಮಾಸು ಮನಸಾಪ್ಯೇಷ ನಾಹಿತಂ ಕಿಂಚಿದಾಚರೇತ್ ॥

ಅನುವಾದ

ಭರತನು ನಮ್ಮನ್ನು ಕಾಣಲು ಬರುವುದು ಸರ್ವಥಾ ಸಮಯೋಚಿತವಾಗಿದೆ. ಅವನು ನನಗೆ ಭೆಟ್ಟಿಯಾಗುವುದು ಯೋಗ್ಯವೇ ಆಗಿದೆ. ನಮಗೆ ಯಾವುದೇ ಅಹಿತ ಮಾಡುವ ವಿಚಾರ ಅವನು ಮನಸ್ಸಿಲ್ಲೂ ಎಂದೂ ಮಾಡಲಾರನು.॥13॥

ಮೂಲಮ್ - 14

ವಿಪ್ರಿಯಂ ಕೃತಪೂರ್ವಂ ತೇ ಭರತೇನ ಕದಾ ನು ಕಿಮ್ ।
ಈದೃಶಂ ವಾ ಭಯಂ ತೇಽದ್ಯ ಭರತಂ ಯದ್ವಿಶಂಕಸೇ ॥

ಅನುವಾದ

ಭರತನು ನಿನ್ನ ಕುರಿತು ಮೊದಲು ಎಂದಾದರೂ ಅಪ್ರಿಯವಾಗಿ ವರ್ತಿಸಿರುವನೇ? ಇಂದೇಕೆ ನಿನಗೆ ಅವನಿಂದ ಭಯ ಉಂಟಾಗಿದೆ ಹಾಗೂ ನೀನು ಅವನ ವಿಷಯದಲ್ಲಿ ಈ ರೀತಿಯ ಸಂಶಯ ಪಡುತ್ತಿರುವೆ.॥14॥

ಮೂಲಮ್ - 15

ನಹಿ ತೇ ನಿಷ್ಠುರಂ ವಾಚ್ಯೋ ಭರತೋನಾಪ್ರಿಯಂವಚಃ ।
ಅಹಂ ಹ್ಯಪ್ರಿಯಮುಕ್ತಃ ಸ್ಯಾಂ ಭರತಸ್ಯಾಪ್ರಿಯೇಕೃತೇ ॥

ಅನುವಾದ

ಭರತನು ಬಂದ ಮೇಲೆ ನೀನು ಅವನಲ್ಲಿ ಯಾವುದೇ ಕಠೋರವಾಗಿ ಅಥವಾ ಅಪ್ರಿಯವಾಗಿ ಮಾತನಾಡಬಾರದು. ನೀನು ಏನಾದರೂ ಅವನಲ್ಲಿ ಪ್ರತಿಕೂಲವಾಗಿ ನುಡಿದರೆ ಅದು ನನ್ನ ಕುರಿತೇ ಹೇಳಿದುದು ಎಂದು ತಿಳಿಯಲಾಗುವುದು.॥15॥

ಮೂಲಮ್ - 16

ಕಥಂ ನು ಪುತ್ರಾಃ ಪಿತರಂ ಹನ್ಯುಃ ಕಸ್ಯಾಂಚಿದಾಪದಿ ।
ಭ್ರಾತಾ ವಾ ಭ್ರಾತರಂ ಹನ್ಯಾತ್ ಸೌಮಿತ್ರೇ ಪ್ರಾಣಮಾತ್ಮನಃ ॥

ಅನುವಾದ

ಸುಮಿತ್ರಾನಂದನ! ಎಷ್ಟೇ ದೊಡ್ಡ ಆಪತ್ತು ಬಂದರೂ ಪುತ್ರನು ತನ್ನ ತಂದೆಯನ್ನು ಹೇಗೆ ಕೊಲ್ಲಬಲ್ಲನು? ಅಥವಾ ಅಣ್ಣನಾದವನು ತನ್ನ ಪ್ರಾಣಪ್ರಿಯನಾದ ತಮ್ಮನನ್ನು ಹೇಗೆ ಕೊಲ್ಲಬಲ್ಲನು.॥16॥

ಮೂಲಮ್ - 17

ಯದಿ ರಾಜ್ಯಸ್ಯ ಹೇತೋಸ್ತ್ವಮಿಮಾಂ ವಾಚಂ ಪ್ರಭಾಷಸೇ ।
ವಕ್ಷ್ಯಾಮಿ ಭರತಂ ದೃಷ್ಟ್ವಾ ರಾಜ್ಯಮಸ್ಮೈ ಪ್ರದೀಯತಾಮ್ ॥

ಅನುವಾದ

ನೀನು ರಾಜ್ಯಕ್ಕಾಗಿ ಹೀಗೆ ಕಠೋರವಾಗಿ ಮಾತನಾಡುತ್ತಿರುವೆಯಾದರೆ ಭರತನು ಭೆಟ್ಟಿ ಯಾದಾಗ ‘ನೀನು ಈ ರಾಜ್ಯವನ್ನು ಲಕ್ಷ್ಮಣನಿಗೆ ಕೊಟ್ಟು ಬಿಡು’ ಎಂದು ನಾನು ಅವನಲ್ಲಿ ಹೇಳುವೆನು.॥17॥

ಮೂಲಮ್ - 18

ಉಚ್ಯಮಾನೋ ಹಿ ಭರತೋ ಮಯಾಲಕ್ಷ್ಮಣ ತದ್ವಚಃ ।
ರಾಜ್ಯಮಸ್ಮೈಪ್ರಯಚ್ಛೇತಿ ಬಾಢಮಿತ್ಯೇವ ಮಂಸ್ಯತೇ ॥

ಅನುವಾದ

ಲಕ್ಷ್ಮಣಾ! ನಾನು ಭರತನಲ್ಲಿ ‘ನೀನು ರಾಜ್ಯವನ್ನು ಇವನಿಗೆ ಕೊಟ್ಟುಬಿಡು’ ಎಂದು ಹೇಳಿದರೆ ಅವನು ‘ಹಾಗೆಯೇ ಆಗಲಿ’ ಎಂದು ಹೇಳಿ ಖಂಡಿತವಾಗಿ ನನ್ನ ಮಾತನ್ನು ಒಪ್ಪಿಕೊಳ್ಳುವನು.॥18॥

ಮೂಲಮ್ - 19

ತಥೋಕ್ತೋ ಧರ್ಮಶೀಲೇನ ಭ್ರಾತ್ರಾ ತಸ್ಯ ಹಿತೇ ರತಃ ।
ಲಕ್ಷ್ಮಣಃ ಪ್ರವಿವೇಶೇವ ಸ್ವಾನಿ ಗಾತ್ರಾಣಿ ಲಜ್ಜಯಾ ॥

ಅನುವಾದ

ತನ್ನ ಧರ್ಮಪರಾಯಣ ಸಹೋದರನು ಹೀಗೆ ಹೇಳಿದಾಗ, ಅಣ್ಣನ ಹಿತದಲ್ಲೇ ತತ್ಪರನಾಗಿರುವ ಲಕ್ಷ್ಮಣನು ಲಜ್ಜೆಯಿಂದ ಮುದ್ದೆಯಾದನು, ಕುಸಿದುಹೋದನು.॥19॥

ಮೂಲಮ್ - 20

ತದ್ವಾಕ್ಯಂ ಲಕ್ಷ್ಮಣಃ ಶ್ರುತ್ವಾ ವ್ರೀಡಿತಃ ಪ್ರತ್ಯುವಾಚ ಹ ।
ತ್ವಾಂ ಮನ್ಯೇ ದ್ರಷ್ಟುಮಾಯಾತಃ ಪಿತಾ ದಶರಥಃ ಸ್ಮಯಾಮ್ ॥

ಅನುವಾದ

ಶ್ರೀರಾಮನ ಮಾತನ್ನು ಕೇಳಿ ನಾಚಿಕೊಂಡು ಲಕ್ಷ್ಮಣನು ಹೇಳಿದನು - ಅಣ್ಣಾ! ನಮ್ಮ ತಂದೆ ದಶರಥ ಮಹಾರಾಜರೇ ಸ್ವತಃ ನಿನ್ನನ್ನು ಭೆಟ್ಟಿಯಾಗಲು ಬಂದಿರುವರು ಎಂದೇ ನಾನು ತಿಳಿಯುತ್ತೇನೆ.॥20॥

ಮೂಲಮ್ - 21

ವ್ರೀಡಿತಂ ಲಕ್ಷ್ಮಣಂ ದೃಷ್ಟ್ವಾ ರಾಘವಃ ಪ್ರತ್ಯಾವಾಚ ಹ ।
ಏಷ ಮನ್ಯೆಮಹಾಬಾಹುರಿಹಾಸ್ಮಾನ್ ದ್ರಷ್ಟು ಮಾಗತಃ ॥

ಅನುವಾದ

ಲಜ್ಜಿತನಾದ ಲಕ್ಷ್ಮಣನನ್ನು ನೋಡಿ ಶ್ರೀರಾಮನು ಉತ್ತರಿಸಿದನು - ಮಹಾಬಾಹು ನಮ್ಮ ತಂದೆಯವರೇ ನಮ್ಮನ್ನು ನೋಡಲು ಬಂದಿರುವರೆಂದೇ ನಾನೂ ತಿಳಿಯುತ್ತೇನೆ.॥21॥

ಮೂಲಮ್ - 22

ಅಥವಾ ನೌ ಧ್ರುವಂ ಮನ್ಯೇ ಮನ್ಯಮಾನಃ ಸುಖೋಚಿತೌ ।
ವನವಾಸಮನುಧ್ಯಾಯ ಗೃಹಾಯ ಪ್ರತಿನೇಷ್ಯತಿ ॥

ಅನುವಾದ

ಅಥವಾ ಸುಖಭೋಗಿಸಲು ನಮ್ಮನ್ನು ಯೋಗ್ಯರೆಂದು ತಿಳಿಯುತ್ತಾ ತಂದೆಯವರು ವನವಾಸದ ಕಷ್ಟಗಳನ್ನು ವಿಚಾರಮಾಡಿ ನಮ್ಮಿಬ್ಬರನ್ನು ನಿಶ್ಚಯವಾಗಿ ಅಯೋಧ್ಯೆಗೆ ಕರೆದುಕೊಂಡು ಹೋಗುವರು ಎಂದೇ ನಾನೂ ತಿಳಿಯುತ್ತೇನೆ.॥22॥

ಮೂಲಮ್ - 23

ಇಮಾಂ ಚಾಪ್ಯೇಷ ವೇದೇಹೀಮತ್ಯಂತಸುಖಸೇವಿನೀಮ್ ।
ಪಿತಾ ಮೇ ರಾಘವಃ ಶ್ರೀಮಾನ್ವನಾದಾದಾಯ ಯಾಸ್ಯತಿ ॥

ಅನುವಾದ

ನಮ್ಮ ತಂದೆಯವರಾದ ರಘುಕುಲತಿಲಕ ಶ್ರೀಮಾನ್ ದಶರಥ ಮಹಾರಾಜರು ಅತ್ಯಂತ ಸುಖವನ್ನು ಸೇವಿಸುವ ಈ ವಿದೇಹನಂದಿನೀ ಸೀತೆಯನ್ನೂ ಸಹ ಕಾಡಿನಿಂದ ಜೊತೆಗೆ ಕರೆದುಕೊಂಡು ಅರಮನೆಗೆ ಮರಳುವರು.॥23॥

ಮೂಲಮ್ - 24

ಏತೌ ತೌ ಸಂಪ್ರಕಾಶೇತೇ ಗೋತ್ರವಂತೌ ಮನೋರಮೌ ।
ವಾಯುವೇಗಸವೌ ವೀರೌ ಜವನೌ ತುರಗೋತ್ತಮೌ ॥

ಅನುವಾದ

ಉತ್ತಮ ಕುದುರೆಗಳ ಕುಲದಲ್ಲಿ ಉತ್ಪನ್ನವಾದ ಹೊಳೆಯುತ್ತಿರುವ ಇವೇ ಆ ಎರಡೂ ವಾಯುವೇಗದಂತೆ ಶೀಘ್ರಗಾಮಿ ವೀರ ಹಾಗೂ ಮನೋರಮ ನಮ್ಮ ಉತ್ತಮ ಕುದುರೆಗಳು.॥24॥

ಮೂಲಮ್ - 25

ಸ ಏಷ ಸುಮಹಾಕಾಯಃಕಂಪತೇ ವಾಹೀನೀಮುಖೇ ।
ನಾಗಃ ಶತ್ರುಂಜಯೋ ನಾಮ ವೃದ್ಧಸ್ತಾತಸ್ಯ ಧಿಮತಃ ॥

ಅನುವಾದ

ತಂದೆಯವರ ವಾಹನಗಳಲ್ಲಿ ಪರಮ ಬುದ್ಧಿವಂತನಾದ, ಮಹಾಕಾಯ ಶತ್ರುಂಜಯ ಎಂಬ ಮುದಿ ಗಜರಾಜವು ಸೇನೆಯ ಮುಂಭಾಗದಲ್ಲಿ ಶರೀರವನ್ನು ಕುಲುಕುತ್ತಾ ನಡೆಯುತ್ತಾ ಇದೆ.॥25॥

ಮೂಲಮ್ - 26

ನ ತು ಪಶ್ಯಾಮಿ ತಚ್ಛತ್ರಂ ಪಾಂಡುರಂ ಲೋಕವಿಶ್ರುತಮ್ ।
ಪಿತುರ್ದಿವ್ಯಂ ಮಹಾಭಾಗ ಸಂಶಯೋ ಭವತೀಹ ಮೇ ॥

ಅನುವಾದ

ಮಹಾಭಾಗನೇ! ಆದರೆ ಇದರ ಮೇಲೆ ತಂದೆ ಯವರ ವಿಶ್ವವಿಖ್ಯಾತ ದಿವ್ಯ ಶ್ವೇತಛತ್ರ ನನಗೆ ಕಾಣುವುದಿಲ್ಲ. ಇದರಿಂದ ನನ್ನ ಮನಸ್ಸಿನಲ್ಲಿ ಸಂಶಯ ಉಂಟಾಗಿದೆ.॥26॥

ಮೂಲಮ್ - 27

ವಕ್ಷಾಗ್ರಾದವರೋಹ ತ್ವಂ ಕುರು ಲಕ್ಷ್ಮಣ ಮದ್ವಚಃ ।
ಇತೀವ ರಾಮೋ ಧರ್ಮಾತ್ಮಾ ಸೌಮಿತ್ರಿಂ ತಮುವಾಚ ಹ ॥

ಮೂಲಮ್ - 28

ಅವತೀರ್ಯ ತು ಸಾಲಾಗ್ರಾತ್ ತಸ್ಮಾತ್ ಸ ಸಮಿತಿಂಜಯಃ ।
ಲಕ್ಷ್ಮಣಃ ಪ್ರಾಂಜಲಿಭೂತ್ವಾ ತಸ್ಥೌ ರಾಮಸ್ಯಪಾರ್ಶ್ವತಃ ॥

ಅನುವಾದ

ಲಕ್ಷ್ಮಣಾ! ‘ಈಗ ನನ್ನ ಮಾತನ್ನು ಮನ್ನಿಸಿ ಮರದಿಂದ ಕೆಳಗೆ ಇಳಿದು ಬಾ’. ಧರ್ಮಾತ್ಮಾ ಶ್ರೀರಾಮನು ಸುಮಿತ್ರಾ ಕುಮಾರ ಲಕ್ಷ್ಮಣನಲ್ಲಿ ಹೀಗೆ ಹೇಳಿದಾಗ ಯುದ್ಧದಲ್ಲಿ ವಿಜಯ ಪಡೆಯುವ ಲಕ್ಷ್ಮಣನು ಆ ಸಾಲವೃಕ್ಷದಿಂದ ಇಳಿದು ಶ್ರೀರಾಮನ ಬಳಿಗೆ ಬಂದು ಕೈಮುಗಿದುಕೊಂಡು ನಿಂತನು.॥27-28॥

ಮೂಲಮ್ - 29

ಭರತೇನಾಥ ಸಂದಿಷ್ಟಾ ಸಮ್ಮರ್ದೋ ನ ಭವೇದಿತಿ ।
ಸಮಂತಾತ್ತಸ್ಯ ಶೈಲಸ್ಯ ಸೇನಾ ವಾಸಮಕಲ್ಪಯತ್ ॥

ಅನುವಾದ

ಅತ್ತಕಡೆ ಭರತನು ಸೈನ್ಯಕ್ಕೆ - ‘ಇಲ್ಲಿ ಯಾರಿಗೂ ನಮ್ಮಿಂದ ತೊಂದರೆ ಆಗಬಾರದು’ ಎಂದು ಆಜ್ಞಾಪಿಸಿದನು. ಅವನ ಈ ಆದೇಶ ಪಡೆದು ಸಮಸ್ತ ಸೈನಿಕರು ಪರ್ವತದ ಕೆಳಗೆಯೇ ನಿಂತುಬಿಟ್ಟರು.॥29॥

ಮೂಲಮ್ - 30

ಅಧ್ಯರ್ಧಮಿಕ್ಷ್ವಾಕುಚಮೂರ್ಯೋಜನಂ ಪರ್ವತಸ್ಯ ಹ ।
ಪಾರ್ಶ್ವೇ ನ್ಯವಿಶದಾವೃತ್ಯ ಗಜವಾಜಿನರಾಕುಲಾ ॥

ಅನುವಾದ

ಆಗ ಆನೆ, ಕುದುರೆ, ಜನರಿಂದ ಕೂಡಿದ ಇಕ್ಷ್ವಾಕುವಂಶೀ ರಾಜನ ಆ ಸೇನೆಯು ಪರ್ವತದ ಹತ್ತಿರ ಒಂದೂವರೆ ಯೋಜನ ಭೂಮಿಯನ್ನು ವ್ಯಾಪಿಸಿ ಡೇರೆ ಹಾಕಿ ತಂಗಿತು.॥30॥

ಮೂಲಮ್ - 31

ಸಾ ಚಿತ್ರಕೂಟೇ ಭರತೇನ ಸೇನಾ
ಧರ್ಮಂ ಪುರಸ್ಕೃತ್ಯ ವಿಧೂಯದರ್ಪಮ್ ।
ಪ್ರಸಾದನಾರ್ಥಂ ರಘುನಂದನಸ್ಯ
ವಿರೋಚತೇ ನೀತಿಮತಾ ಪ್ರಣೀತಾ ॥

ಅನುವಾದ

ನೀತಿಜ್ಞ ಭರತನು ಧರ್ಮವನ್ನು ಮುಂದಿಟ್ಟುಕೊಂಡು ಗರ್ವವನ್ನು ತ್ಯಜಿಸಿ ರಘುನಂದನ ಶ್ರೀರಾಮನನ್ನು ಪ್ರಸನ್ನಗೊಳಿಸಲು ತನ್ನೊಂದಿಗೆ ತಂದಿರುವ ಆ ಸೈನ್ಯವು ಚಿತ್ರಕೂಟ ಪರ್ವತದ ಬಳಿ ಬಹಳ ಶೋಭಿಸುತ್ತಿತ್ತು.॥31॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ತೊಂಭತ್ತೇಳನೆಯ ಸರ್ಗ ಪೂರ್ಣವಾಯಿತು.॥97॥