०९६ भरतविषये रामलक्ष्मणसंवादः

वाचनम्
ಭಾಗಸೂಚನಾ

ವನ್ಯ ಮೃಗಗಳು ಭಯಗೊಂಡು ಓಡುತ್ತಿರುವುದನ್ನು ನೋಡಿ ಶ್ರೀರಾಮನು ಲಕ್ಷ್ಮಣನಲ್ಲಿ ಕಾರಣವನ್ನು ತಿಳಿಯಲು ಹೇಳಿದುದು, ಲಕ್ಷ್ಮಣನು ಮರ ಹತ್ತಿ ಭರತನ ಅಪಾರ ಸೈನ್ಯವನ್ನು ನೋಡಿ ಅವನ ಕುರಿತು ಕೋಪದಿಂದ ಉದ್ಗರಿಸಿದುದು

ಮೂಲಮ್ - 1

ತಾಂ ತದಾ ದರ್ಶಯಿತ್ವಾ ತು ಮೈಥಿಲೀಂ ಗಿರಿನಿಮ್ನಗಾಮ್ ।
ನಿಷಸಾದ ಗಿರಪ್ರಸ್ಥೇ ಸೀತಾಂ ಮಾಂಸೇನ ಚ್ಛಂದಯನ್ ॥

ಅನುವಾದ

ಈ ಪ್ರಕಾರ ಶ್ರೀರಾಮನು ಮೈಥಿಲಿಗೆ ಮಂದಾಕಿನೀ ನದಿಯನ್ನು ತೋರಿಸಿ, ಚಿತ್ರಕೂಟ ಪರ್ವತದಲ್ಲಿದ್ದ ಪರ್ಣಶಾಲೆಗೆ ಹಿಂದಿರುಗಿದನು. ಹಸಿವಿನಿಂದ ಬಳಲಿದ್ದ ಸೀತೆಯನ್ನು ತಪಸ್ವೀ ಜನರ ಆಹಾರವಾದ ಫಲ-ಮೂಲಗಳ ತಿರುಳಿನಿಂದ ತೃಪ್ತಿಪಡಿಸುತ್ತಾ ಆಕೆಯನ್ನು ಲಾಲಿಸತೊಡಗಿದನು.॥1॥

ಮೂಲಮ್ - 2

ಇದಂ ಮೇಧ್ಯಮಿದಂ ಸ್ವಾದು ನಿಷ್ಟಪ್ತಮಿದಮಗ್ನಿನಾ ।
ಏವಮಾಸ್ತೇ ಸ ಧರ್ಮಾತ್ಮಾ ಸೀತಯಾ ಸಹ ರಾಘವಃ ॥

ಅನುವಾದ

ಧರ್ಮಾತ್ಮಾ ರಘುನಂದನನು ಸೀತೆಯೊಂದಿಗೆ ಹೀಗೆ ಮಾತನಾಡುತ್ತಿದ್ದನು - ಪ್ರಿಯೇ! ಈ ಫಲಗಳು ಪರಮಪವಿತ್ರವಾಗಿವೆ. ಇವು ಬಹಳ ಸ್ವಾದಿಷ್ಟವಾಗಿದ್ದು, ಈ ಕಂದವನ್ನು ಚೆನ್ನಾಗಿ ಬೆಂಕಿಯಲ್ಲಿ ಬೇಯಿಸಲಾಗಿದೆ.॥2॥

ಮೂಲಮ್ - 3

ತಥಾ ತತ್ರಾಸತಸ್ತಸ್ಯ ಭರತಸ್ಯೋಪಯಾಯಿನಃ ।
ಸೈನ್ಯರೇಣುಶ್ಚ ಶಬ್ದಶ್ಚ ಪ್ರಾದುರಾಸ್ತಾಂ ನಭಸ್ಪೃಶೌ ॥

ಅನುವಾದ

ಈ ಪ್ರಕಾರ ಅವರು ಆ ಪರ್ವತ ಪ್ರದೇಶದಲ್ಲಿ ಕುಳಿತಿದ್ದಾಗ, ಅವನ ಬಳಿಗೆ ಬರುತ್ತಿರುವ ಭರತನ ಸೈನ್ಯದ ಕೋಲಾಹಲ ಮತ್ತು ಧೂಳು ಒಟ್ಟಿಗೆ ಪ್ರಕಟವಾಗಿ ಆಕಾಶದಲ್ಲೆಲ್ಲ ವ್ಯಾಪಿಸಿತು.॥3॥

ಮೂಲಮ್ - 4

ಏತಸ್ಮಿನ್ನಂತರೇ ತ್ರಸ್ತಾಃ ಶಬ್ದೇನ ಮಹತಾ ತತಃ ।
ಅರ್ದಿತಾ ಯೂಥಪಾ ಮತ್ತಾಃ ಸಯೂಥಾದ್ ದುದ್ರುವುರ್ದಿಶಃ ॥

ಅನುವಾದ

ಇಷ್ಟರಲ್ಲಿ ಸೈನ್ಯದ ಮಹಾ ಕೋಲಾಹಲದಿಂದ ತೊಂದರೆಗೊಳಗಾಗಿ, ಭಯಭೀತವಾಗಿ, ಆನೆಗಳು ಮತ್ತು ಯೂಥಪತಿಗಳು ತಮ್ಮ ಗುಂಪಿನೊಂದಿಗೆ ಕಂಡ-ಕಂಡಲ್ಲಿ ಓಡತೊಡಗಿದವು.॥4॥

ಮೂಲಮ್ - 5

ಸ ತಂ ಸೈನ್ಯಸಮುದ್ಭೂತಂ ಶಬ್ದಂ ಶುಶ್ರಾವ ರಾಘವಃ ।
ತಾಂಶ್ಚ ವಿಪ್ರದ್ರುತಾನ್ ಸರ್ವಾನ್ ಯೂಥಪಾನನ್ವವೈಕ್ಷತ ॥

ಅನುವಾದ

ಶ್ರೀರಾಮಚಂದ್ರನು ಸೈನ್ಯದಿಂದ ಪ್ರಕಟವಾದ ಆ ಮಹಾ ಕೋಲಾಹಲವನ್ನು ಕೇಳಿ, ಓಡುತ್ತಿರುವ ಆ ಯೂಥಪತಿಗಳನ್ನು ನೋಡಿದನು.॥5॥

ಮೂಲಮ್ - 6

ತಾಂಶ್ಚ ವಿಪ್ರದ್ರುತಾನ್ ದೃಷ್ಟ್ವಾ ತಂ ಚ ಶ್ರುತ್ವಾ ಮಹಾಸ್ವನಮ್ ।
ಉವಾಚ ರಾಮಃ ಸೌಮಿತ್ರಿಂ ಲಕ್ಷ್ಮಣಂ ದೀಪ್ತತೇಜಸಮ್ ॥

ಅನುವಾದ

ಓಡುತ್ತಿರುವ ಆನೆಗಳನ್ನು ನೋಡಿ ಮತ್ತು ಆ ಮಹಾಭಯಂಕರ ಶಬ್ದವನ್ನು ಕೇಳಿ ಶ್ರೀರಾಮನು ಉದ್ದೀಪ್ತ ತೇಜವುಳ್ಳ, ಸುಮಿತ್ರಾಕುಮಾರ ಲಕ್ಷ್ಮಣನಲ್ಲಿ ಹೇಳಿದನು.॥6॥

ಮೂಲಮ್ - 7

ಹಂತ ಲಕ್ಷ್ಮಣ ಪಶ್ಯೇಹ ಸುಮಿತ್ರಾ ಸುಪ್ರಜಾಸ್ತ್ವಯಾ ।
ಭೀಮಸ್ತನಿತಗಂಭೀರಂ ತುಮುಲಃ ಶ್ರೂಯತೇ ಸ್ವನಃ ॥

ಅನುವಾದ

ಲಕ್ಷ್ಮಣಾ! ಈ ಜಗತ್ತಿನಲ್ಲಿ ನಿನ್ನಿಂದಾಗಿಯೇ ತಾಯಿ ಸುಮಿತ್ರೆಯು ಶ್ರೇಷ್ಠ ಪುತ್ರವತಿಯಾಗಿರುವಳು. ನೋಡಿಲ್ಲಿ, ಈ ಭಯಂಕರ ಗರ್ಜನೆಯೊಂದಿಗೆ ಎಂತಹ ಗಂಭೀರ ತುಮುಲನಾದ ಕೇಳಿ ಬರುತ್ತಿದೆಯಲ್ಲ.॥7॥

ಮೂಲಮ್ - 8

ಗಜಯೂಥಾನಿ ವಾರಣ್ಯೇ ಮಹಿಷಾ ವಾ ಮಹಾವನೇ ।
ವಿತ್ರಾಸಿತಾ ಮೃಗಾಃ ಸಿಂಹೈಃ ಸಹಸಾ ಪ್ರದ್ರುತಾ ದಿಶಃ ॥

ಮೂಲಮ್ - 9

ರಾಜಾ ವಾ ರಾಜಪುತ್ರೋ ವಾ ಮೃಗಯಾಮಟತೇವನೇ ।
ಅನ್ಯದ್ವಾ ಸ್ವಾಪದಂ ಕಿಂಚಿತ್ ಸೌಮಿತ್ರೇ ಜ್ಞಾತುಮರ್ಹಸಿ ॥

ಅನುವಾದ

ಸುಮಿತ್ರಾನಂದನನೇ! ಈ ವಿಶಾಲ ವನದಲ್ಲಿ ಈ ಆನೆಗಳ ಗುಂಪುಗಳು, ಕಾಡುಕೋಣ, ಜಿಂಕೆಗಳು ಎಲ್ಲ ದಿಕ್ಕುಗಳಿಗೆ ಓಡಿಹೋಗುತ್ತಿವೆ, ಇದರ ಕಾರಣವೇನು? ತಿಳಿದು ನೋಡು. ಇವುಗಳನ್ನು ಸಿಂಹಗಳು ಹೆದರಿಸಿಲ್ಲ ತಾನೇ? ಅಥವಾ ಯಾವುದಾದರೂ ರಾಜ ಅಥವಾ ರಾಜಕುಮಾರ ಈ ವನಕ್ಕೆ ಬಂದು ಬೇಟೆಯಾಡುತ್ತಿಲ್ಲವಲ್ಲ! ಅಥವಾ ಬೇರೆ ಯಾವುದಾದರೂ ಹಿಂಸಕ ಪ್ರಾಣಿ ಪ್ರಕಟವಾಗಿಲ್ಲವಲ್ಲ.॥8-9॥

ಮೂಲಮ್ - 10

ಸುದುಶ್ಚರೋ ಗಿರಿಶ್ಚಾಯಂ ಪಕ್ಷಿಣಾಮಪಿ ಲಕ್ಷ್ಮಣ ।
ಸರ್ವಮೇತದ್ ಯಥಾತತ್ತ್ವಮಭಿಜ್ಞಾತುಮಿಹಾರ್ಹಸಿ ॥

ಅನುವಾದ

ಲಕ್ಷ್ಮಣ! ಈ ಪರ್ವತದ ಮೇಲೆ ಅಪರಿಚಿತ ಪಕ್ಷಿಗಳು ಬಂದು ಹೋಗುವುದೂ ಅತ್ಯಂತ ಕಠಿಣವಾಗಿದೆ. (ಹಾಗಿರುವಾಗ ಇಲ್ಲಿ ಯಾವುದಾದರೂ ಹಿಂಸಕ ಪ್ರಾಣಿ ಅಥವಾ ರಾಜನ ಆಕ್ರಮಣ ಹೇಗೆ ಸಂಭವಿಸಬಹುದು?) ಆದ್ದರಿಂದ ಇದೆಲ್ಲವನ್ನು ಸರಿಯಾಗಿ ತಿಳಿದು ಹೇಳು.॥10॥

ಮೂಲಮ್ - 11

ಸ ಲಕ್ಷ್ಮಣಃ ಸಂತ್ವರಿತಃ ಸಾಲಮಾರುಹ್ಯ ಪುಷ್ಪಿತಮ್ ।
ಪ್ರೇಕ್ಷಮಾಣೋ ದಿಶಃ ಸರ್ವಾಃ ಪೂರ್ವಾಂ ದಿಶಮವೈಕ್ಷತ ॥

ಅನುವಾದ

ಭಗವಾನ್ ಶ್ರೀರಾಮನ ಅಪ್ಪಣೆ ಪಡೆದು ಲಕ್ಷ್ಮಣನು ಕೂಡಲೇ ಹೂವುಗಳಿಂದ ತುಂಬಿರುವ ಒಂದು ಸಾಲವೃಕ್ಷವನ್ನು ಹತ್ತಿ, ಎಲ್ಲ ದಿಕ್ಕುಗಳಿಗೆ ದೃಷ್ಟಿಹಾಯಿಸುತ್ತಾ ಪೂರ್ವದ ಕಡೆಗೆ ನೋಡಿದನು.॥11॥

ಮೂಲಮ್ - 12

ಉದಙ್ಮುಖಃ ಪ್ರೇಕ್ಷಮಾಣೋ ದದರ್ಶ ಮಹತೀಂ ಚಮೂಮ್ ।
ಗಜಾಶ್ವರಥಸಂಬಾಧಾಂ ಯತ್ತೈರ್ಯುಕ್ತಾಂ ಪದಾತಿಭಿಃ ॥

ಅನುವಾದ

ಅನಂತರ ಉತ್ತರದ ಕಡೆಗೆ ಮುಖಮಾಡಿ ನೋಡಿದಾಗ ಒಂದು ವಿಶಾಲ ಸೈನ್ಯ ಕಂಡು ಬಂತು. ಅದು ಆನೆ, ಕುದುರೆ, ರಥಗಳಿಂದ ಪರಿಪೂರ್ಣವಾಗಿದ್ದು, ಪ್ರಯತ್ನಶೀಲ ಕಾಲಾಳು ಸೈನಿಕರಿಂದ ಕೂಡಿತ್ತು.॥12॥

ಮೂಲಮ್ - 13

ತಾಮಶ್ವರಥಸಂಪೂರ್ಣಾಂ ರಥಧ್ವಜವಿಭೂಷಿತಾಮ್ ।
ಶಶಂಸ ಸೇನಾಂ ರಾಮಾಯ ವಚನಂ ಚೇದಮಬ್ರವೀತ್ ॥

ಅನುವಾದ

ಕುದುರೆಗಳಿಂದ ರಥಗಳಿಂದ ತುಂಬಿದ ಹಾಗೂ ಧ್ವಜದಿಂದ ವಿಭೂಷಿತ ಆ ಸೈನ್ಯದ ಸೂಚನೆಯನ್ನು ಲಕ್ಷ್ಮಣನು ಶ್ರೀರಾಮನಿಗೆ ತಿಳಿಸಿ ಹೀಗೆ ಹೇಳಿದನು.॥13॥

ಮೂಲಮ್ - 14

ಅಗ್ನಿಂ ಸಂಶಮಯತ್ವಾರ್ಯಃ ಸೀತಾ ಚ ಭಜತಾಂಗುಹಾಮ್ ।
ಸಜ್ಯಂ ಕುರುಷ್ವ ಚಾಪಂ ಚಶರಾಂಶ್ಚ ಕವಚಂ ತಥಾ ॥

ಅನುವಾದ

ಆರ್ಯ! ಈಗ ನೀನು ಬೆಂಕಿಯನ್ನು ಆರಿಸು. (ಇಲ್ಲದಿದ್ದರೆ ಹೊಗೆ ನೋಡಿ ಈ ಸೈನ್ಯವು ಇಲ್ಲಿಗೆ ಬರುವುದು) ದೇವೀ ಸೀತೆಯು ಗುಹೆಯಲ್ಲಿ ಹೋಗಿ ಕುಳಿತಿರಲಿ. ನೀನು ನಿನ್ನ ಧನುಸ್ಸಿಗೆ ಹೆದೆಯೇರಿಸಿ, ಕವಚವನ್ನು ತೊಟ್ಟು, ಬಾಣ ಕೈಗೆತ್ತಿಕೋ.॥14॥

ಮೂಲಮ್ - 15

ತಂ ರಾಮಃ ಪುರುಷವ್ಯಾಘ್ರೋ ಲಕ್ಷ್ಮಣಂ ಪ್ರತ್ಯುವಾಚ ಹ ।
ಅಂಗಾವೇಕ್ಷಸ್ಯ ಸೌಮಿತ್ರೇ ಕಸ್ಯೇಮಾಂ ಮನ್ಯಸೇ ಚಮೂಮ್ ॥

ಅನುವಾದ

ಇದನ್ನು ಕೇಳಿ ಪುರುಷಸಿಂಹ ಶ್ರೀರಾಮನು ಲಕ್ಷ್ಮಣನಲ್ಲಿ ಹೇಳಿದನು - ಪ್ರಿಯ ಸುಮಿತ್ರಾಕುಮಾರ! ಸರಿಯಾಗಿ ನೋಡಬಾರದೇ? ನೀನು ತಿಳಿದಂತೆ ಈ ಸೈನ್ಯ ಯಾರದ್ದಾಗಿದೆ.॥15॥

ಮೂಲಮ್ - 16

ಏವಮುಕ್ತಸ್ತು ರಾಮೇಣ ಲಕ್ಷ್ಮಣೋ ವಾಕ್ಯಮಬ್ರವೀತ್ ।
ದಿಧಕ್ಷನ್ನಿವ ತಾಂ ಸೇನಾಂ ರುಷಿತಃ ಪಾವಕೋ ಯಥಾ ॥

ಅನುವಾದ

ಶ್ರೀರಾಮನು ಹೀಗೆ ಹೇಳಿದಾಗ ಲಕ್ಷ್ಮಣನು ಕೋಪದಿಂದ ಉರಿದೆದ್ದು, ಅಗ್ನಿಯಂತೆ ಆ ಸೇನೆಯ ಕಡೆಗೆ ನೋಡಿ, ಅದನ್ನು ಸುಟ್ಟು ಬೂದಿ ಮಾಡುವನೋ ಎಂಬಂತ್ತಿತ್ತು ಮತ್ತೆ ಹೀಗೆ ಹೇಳಿದನು.॥16॥

ಮೂಲಮ್ - 17

ಸಂಪನ್ನಂ ರಾಜ್ಯಮಿಚ್ಛಂಸ್ತು ವ್ಯಕ್ತಂ ಪ್ರಾಪ್ಯಾಭಿಷೇಚನಮ್ ।
ಆವಾಂ ಹಂತುಂ ಸಮಭ್ಯೇತಿ ಕೈಕೇಯ್ಯಾ ಭರತಃ ಸುತಃ ॥

ಅನುವಾದ

ಅಣ್ಣಾ! ಖಂಡಿತವಾಗಿ ಇವನು ಕೈಕೇಯಿಯ ಪುತ್ರ ಭರತನೇ ಆಗಿದ್ದಾನೆ. ಅವನು ಅಯೋಧ್ಯೆಯಲ್ಲಿ ಅಭಿಷಿಕ್ತನಾಗಿ ತನ್ನ ರಾಜ್ಯವನ್ನು ನಿಷ್ಕಂಟಕವಾಗಿಸಲು ನಮ್ಮಿಬ್ಬರನ್ನು ಕೊಂದು ಹಾಕಲು ಇಲ್ಲಿಗೆ ಬರುತ್ತಿದ್ದಾನೆ.॥17॥

ಮೂಲಮ್ - 18

ಏಷ ವೈ ಸುಮಹಾನ್ ಶ್ರೀಮಾನ್ವಿಟಪೀ ಸಂಪ್ರಕಾಶತೇ ।
ವಿರಾಜತ್ಯುಜ್ವಲಸ್ಕಂಧಃ ಕೋವಿದಾರಧ್ವಜೋ ರಥೇ ॥

ಅನುವಾದ

ಮುಂದುಗಡೆ ಇರುವ ಬಹಳ ದೊಡ್ಡದಾಗಿ ಶೋಭಿಸುವ ವೃಕ್ಷ ಕಾಣಿಸುತ್ತಿದೆಯಲ್ಲ, ಅದರ ಹತ್ತಿರ ಇರುವ ರಥದಲ್ಲಿ ಉಜ್ವಲ ತೇಜದಿಂದ ಕೂಡಿದ ಕೋವಿದಾರ ಚಿಹ್ನೆಯ ಧ್ವಜ ಶೋಭಿಸುತ್ತಿದೆ.॥18॥

ಮೂಲಮ್ - 19

ಭಜಂತ್ಯೇತೇ ಯಥಾಕಾಮಮಶ್ವಾನಾರುಹ್ಯ ಶೀಘ್ರಗಾನ್ ।
ಏತೇ ಭ್ರಾಜಂತಿ ಸಂಹೃಷ್ಟಾ ಗಜಾನಾರುಹ್ಯ ಸಾದಿನಃ ॥

ಅನುವಾದ

ಈ ಸೈನಿಕರು ಇಚ್ಛಾನುಸಾರ ಶೀಘ್ರಗಾಮಿ ಕುದುರೆಗಳನ್ನು ಹತ್ತಿ ಈ ಕಡೆಗೇ ಬರುತ್ತಿದ್ದಾರೆ ಮತ್ತು ಆನೆ ಸವಾರರು ಬಹಳ ಹರ್ಷದಿಂದ ಆನೆಗಳನ್ನೇರಿ ಬರುತ್ತಿರುವುದು ಕಂಡುಬರುತ್ತಿದೆ.॥19॥

ಮೂಲಮ್ - 20

ಗೃಹೀತಧನುಷಾವಾವಾಂ ಗಿರಿಂ ವೀರ ಶ್ರಯಾವಹೇ ।
ಅಥವೇಹೈವ ತಿಷ್ಠಾವಃ ಸಂನದ್ಧಾವುದ್ಯತಾಯುಧೌ ॥

ಅನುವಾದ

ವೀರನೇ! ನಾವಿಬ್ಬರೂ ಧನುರ್ಧಾರಿಗಳಾಗಿ ಪರ್ವತದ ಶಿಖರವನ್ನೇರಿ ನೋಡೋಣ ಅಥವಾ ಕವಚಧಾರಿಗಳಾಗಿ ಅಸ್ತ್ರ-ಶಸ್ತ್ರ ಸನ್ನದ್ಧರಾಗಿ ಇಲ್ಲಿಯೇ ಎದುರು ನೋಡೋಣ.॥20॥

ಮೂಲಮ್ - 21

ಅಪಿ ನೌ ವಶಮಾಗಚ್ಛೇತ್ ಕೋವಿದಾರಧ್ವಜೋರಣೇ ।
ಅಪಿ ದ್ರಕ್ಷ್ಯಾಮಿ ಭರತಂ ಯತ್ಕೃತೇ ವ್ಯಸನಂ ಮಹತ್ ॥

ಮೂಲಮ್ - 22

ತ್ವಯಾ ರಾಘವ ಸಂಪ್ರಾಪ್ತಂ ಸೀತಯಾ ಚ ಮಯಾ ತಥಾ ।
ಯನ್ನಿಮಿತ್ತಂ ಭವಾನ್ರಾಜ್ಯಾಚ್ಚ್ಯುತೋ ರಾಘವಶಾಶ್ವತಾತ್ ॥

ಅನುವಾದ

ರಘುನಂದನ! ಇಂದು ಈ ಕೋವಿದಾರದ ಚಿಹ್ನೆಯಿಂದ ಕೂಡಿದ ಧ್ವಜವುಳ್ಳ ರಥವು ರಣಭೂಮಿಯಲ್ಲಿ ನಮ್ಮಿಬ್ಬರ ಸ್ವಾಧೀನಕ್ಕೆ ಬರುವುದು. ಇಂದೇ ನಾನು ನನ್ನ ಇಚ್ಛೆಯಿಂದ ಯಾರಿಂದಾಗಿ ನಿನಗೆ, ಸೀತೆಗೆ ಮತ್ತು ನನಗೂ ಮಹಾ ಸಂಕಟ ಇದಿರಿಸಬೇಕಾಯಿತೋ ಹಾಗೂ ಯಾರಿಂದಾಗಿ ನೀನು ಸನಾತನ ರಾಜ್ಯದಿಂದ ವಂಚಿತನಾದೆಯೋ, ಆ ಭರತನನ್ನು ಎದುರಿಗೆ ನೋಡುವೆನು.॥21-22॥

ಮೂಲಮ್ - 23

ಸಂಪ್ರಾಪ್ತೋಽಯಮರಿರ್ವೀರ ಭರತೋ ವಧ್ಯ ಏವ ಹಿ ।
ಭರತಸ್ಯ ವಧೇ ದೋಷಂ ನಾಹಂಪಶ್ಯಾಮಿ ರಾಘವ ॥

ಅನುವಾದ

ವೀರ ರಘುನಾಥನೇ! ಈ ಭರತನು ನಮ್ಮ ಶತ್ರು ಆಗಿದ್ದು ಎದುರಿಗೆ ಬಂದಿರುವನು; ಆದ್ದರಿಂದ ವಧೆಗೆ ಯೋಗ್ಯನಾಗಿದ್ದಾನೆ. ಭರತನನ್ನು ವಧಿಸುವುದರಲ್ಲಿ ನನಗೆ ಯಾವುದೇ ದೋಷ ಕಾಣುವುದಿಲ್ಲ.॥23॥

ಮೂಲಮ್ - 24

ಪೂರ್ವಾಪಕಾರಿಣಾಂ ಹತ್ವಾ ನ ಹ್ಯಧರ್ಮೇಣಯುಜ್ಯತೇ ।
ಪೂರ್ವಾಪಕಾರೀ ಭರತಸ್ತ್ಯಾಗೇಽಧರ್ಮಶ್ಚ ರಾಘವ ॥

ಅನುವಾದ

ರಘುನಂದನ! ಮೊದಲೇ ಅಪಕಾರಿಯಾದವನನ್ನು ಕೊಂದರೆ ಯಾರೂ ಅಧರ್ಮಕ್ಕೆ ಭಾಗಿಯಾಗುವುದಿಲ್ಲ. ಭರತನು ನಮಗೆ ಮೊದಲು ಅಪಕಾರ ಮಾಡಿರುವನು, ಆದ್ದರಿಂದ ಅವನನ್ನು ಜೀವಂತವಾಗಿ ಉಳಿಸುವುದೇ ಅಧರ್ಮವಾಗಿದೆ.॥24॥

ಮೂಲಮ್ - 25½

ಏತಸ್ಮಿನ್ನಿಹತೇ ಕೃತ್ನ್ಸಾಮನುಶಾಧಿ ವಸುಂಧರಾಮ್ ।
ಅದ್ಯ ಪುತ್ರಂ ಹತಂ ಸಂಖ್ಯೇ ಕೈಕೇಯೀ ರಾಜ್ಯಕಾಮುಕಾ ॥
ಮಯಾ ಪಶ್ಯೇತ್ಸುದುಃಖಾರ್ತಾ ಹಸ್ತಿಭಿನ್ನಮಿವ ದ್ರುಮಮ್ ।

ಅನುವಾದ

ಈ ಭರತನು ಸತ್ತುಹೋದಾಗ ನೀನು ಸಮಸ್ತ ವಸುಧೆಯ ಶಾಸನ ಮಾಡು. ಆನೆಯು ಯಾವುದಾದರೂ ಮರವನ್ನು ಮುರಿದುಹಾಕುವಂತೆ ರಾಜ್ಯಲೋಭಿಯಾದ ಕೈಕೇಯಿಯು ಇಂದು ಅತ್ಯಂತ ದುಃಖದಿಂದ ಆರ್ತಳಾಗಿ ನಾನು ಯುದ್ಧದಲ್ಲಿ ಕೊಂದಿರುವ ಭರತನನ್ನು ನೋಡಲಿ.॥25½॥

ಮೂಲಮ್ - 26½

ಕೈಕೇಯೀಂ ಚ ವಧಿಷ್ಯಾಮಿ ಸಾನುಬಂಧಾಂ ಸಬಾಂಧವಾಮ್ ॥
ಕಲುಷೇಣಾದ್ಯ ಮಹತಾ ಮೇದಿನೀ ಪರಿಮುಚ್ಯತಾಮ್ ।

ಅನುವಾದ

ನಾನು ಕೈಕೇಯಿಯನ್ನೂ, ಆಕೆಯ ನೆಂಟರಿಷ್ಟರನ್ನೂ, ಬಂಧು-ಬಾಂಧವರನ್ನು ವಧಿಸಿಬಿಡುವೆನು. ಇಂದು ಈ ಪೃಥಿವಿಯು ಕೈಕೇಯಿರೂಪೀ ಮಹಾಪಾಪದಿಂದ ಮುಕ್ತಳಾಗುವಳು.॥26½॥

ಮೂಲಮ್ - 27½

ಅದ್ಯೇಮಂ ಸಂಯತಂ ಕ್ರೋಧಮಸತ್ಕಾರಂ ಚ ಮಾನದ ॥
ಮೋಕ್ಷ್ಯಾಮಿ ಶತ್ರುಸೈನ್ಯೇಷು ಕಕ್ಷೇಷ್ವಿವ ಹುತಾಶನಮ್ ।

ಅನುವಾದ

ಮಾನದ! ಇಂದು ನಾನು ತಡೆದಿದ್ದ ಕ್ರೋಧ ಮತ್ತು ತಿರಸ್ಕಾರವನ್ನು ಒಣಗಿದ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿದಂತೆ ಶತ್ರು ಸೈನ್ಯದ ಮೇಲೆ ತೀರಿಸಿಕೊಳ್ಳುವೆನು.॥27½॥

ಮೂಲಮ್ - 28½

ಅದ್ಯೈವ ಚ್ಚಿತ್ರಕೂಟಸ್ಯ ಕಾನನಂ ನಿಶಿತೈಃ ಶರೈಃ ॥
ಛಿಂದನ್ ಶತ್ರುಶರೀರಾಣಿ ಕರಿಷ್ಯೇ ಶೋಣಿತೋಕ್ಷಿತಮ್ ।

ಅನುವಾದ

ನನ್ನ ತೀಕ್ಷ್ಣ ಬಾಣಗಳಿಂದ ಶತ್ರುಗಳ ಶರೀರಗಳನ್ನು ತುಂಡು-ತುಂಡಾಗಿಸಿ ನಾನು ಈಗಲೇ ಚಿತ್ರಕೂಟದ ಈ ವನವನ್ನು ರಕ್ತಸಿಕ್ತವಾಗಿಸುವೆನು.॥28½॥

ಮೂಲಮ್ - 29½

ಶರೈನಿರ್ಭಿನ್ನಹೃದಯಾನ್ ಕುಂಜರಾಂಸ್ತುರಗಾಂಸ್ತಥಾ ॥
ಶ್ವಾಪದಾಃ ಪರಿಕರ್ಷಂತು ನರಾಂಶ್ಚ ನಿಹತಾನ್ಮಯಾ ।

ಅನುವಾದ

ನನ್ನ ಬಾಣಗಳಿಂದ ಒಡೆದು ಹೋದ ಹೃದಯವುಳ್ಳ ಆನೆಗಳನ್ನು, ಕುದುರೆಗಳನ್ನು ಹಾಗೂ ನಾನು ಕೊಂದಿರುವ ಮನುಷ್ಯರನ್ನೂ ಕೂಡ ರಣಹದ್ದು ಮುಂತಾದ ಮಾಂಸ ಭಕ್ಷಿ ಪ್ರಾಣಿಗಳು ಅತ್ತಿ-ಇತ್ತ ಎಳೆದಾಡಲಿ.॥29½॥

ಮೂಲಮ್ - 30

ಶರಾಣಾಂ ಧನುಷಶ್ಚಾಹಮನೃಣೋಽಸ್ಮಿ ಮಹಾವನೇ ।
ಸಸೈನ್ಯಂ ಭರತಂ ಹತ್ವಾ ಭವಿಷ್ಯಾಮಿ ನ ಸಂಶಯಃ ॥
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ।

ಅನುವಾದ

ಈ ಮಹಾ ವನದಲ್ಲಿ ಸೈನ್ಯಸಹಿತ ಭರತನನ್ನು ವಧಿಸಿ ನಾನು ಧನುರ್ಬಾಣಗಳ ಋಣದಿಂದ ಮುಕ್ತನಾಗುವೆನು. ಇದರಲ್ಲಿ ಸಂದೇಹವೇ ಇಲ್ಲ.॥30॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ತೊಂಭತ್ತಾರನೆಯ ಸರ್ಗ ಪೂರ್ಣವಾಯಿತು॥96॥