वाचनम्
ಭಾಗಸೂಚನಾ
ಶ್ರೀರಾಮನು ಸೀತೆಗೆ ಮಂದಾಕಿನೀ ನದಿಯ ಶೋಭೆಯನ್ನು ವರ್ಣಿಸಿದುದು
ಮೂಲಮ್ - 1
ಅಥ ಶೈಲಾದ್ವಿನಿಷ್ಕ್ರಮ್ಯ ಮೈಥಿಲೀಂ ಕೋಸಲೇಶ್ವರಃ ।
ಅದರ್ಶಯಚ್ಛುಭಜಲಾಂ ರಮ್ಯಾಂ ಮಂದಾಕಿನೀಂ ನದೀಮ್ ॥
ಅನುವಾದ
ಕೊಸಲೇಶ್ವರ ಶ್ರೀರಾಮನು ಚಿತ್ರಕೂಟ ಪರ್ವತದಿಂದ ಹೊರಟ ಮಂಗಳಕರವಾದ ನೀರಿನಿಂದ ಕೂಡಿದ್ದ ಬಹು ರಮ್ಯವಾದ ಮಂದಾಕಿನೀ ನದಿಯನ್ನು ತೋರಿಸಿದನು.॥1॥
ಮೂಲಮ್ - 2
ಅಬ್ರವೀಚ್ಚ ವರಾರೋಹಾಂ ಚಂದ್ರಚಾರುನಿಭಾನನಾಮ್ ।
ವಿದೇಹರಾಜಸ್ಯ ಸುತಾಂ ರಾಮೋರಾಜೀವಲೋಚನಃ ॥
ಅನುವಾದ
ರಾಜೀವಲೋಚನನಾದ ಶ್ರೀರಾಮನು ಚಂದ್ರನಂತೆ ಮನೋಹರ ಮುಖವುಳ್ಳ, ಸುಂದರ ಕಟಿಪ್ರದೇಶವುಳ್ಳ ವಿದೇಹ ರಾಜನಂದಿನೀ ಸೀತೆಯಲ್ಲಿ ಈ ಪ್ರಕಾರ ಹೇಳಿದನು.॥2॥
ಮೂಲಮ್ - 3
ವಿಚಿತ್ರಪುಲಿನಾಂ ರಮ್ಯಾಂ ಹಂಸಸಾರಸಸೇವಿತಾಮ್ ।
ಕುಸುಮೈರುಪಸಂಪನ್ನಾಂ ಪಶ್ಯ ಮಂದಾಕಿನೀಂ ನದೀಮ್ ॥
ಅನುವಾದ
ಪ್ರಿಯೇ! ಈಗ ಮಂದಾಕಿನೀ ನದಿಯ ಶೋಭೆಯನ್ನು ನೋಡು. ಹಂಸ, ಸಾರಸಗಳಿಂದ ಸೇವಿತವಾದ ಕಾರಣ ಎಷ್ಟು ಸುಂದರವಾಗಿ ತೋರುತ್ತಿದೆ. ಇದರ ತೀರಗಳು ಬಹಳ ವಿಚಿತ್ರವಾಗಿವೆ. ನಾನಾ ಪ್ರಕಾರದ ಪುಷ್ಪಗಳು ಇದರ ಶೋಭೆ ಹೆಚ್ಚಿಸುತ್ತಿವೆ.॥3॥
ಮೂಲಮ್ - 4
ನಾನಾವಿಧೈಸ್ತೀರರುಹೈರ್ವೃತಾಂ ಪುಷ್ಪಫಲದ್ರುಮೈಃ ।
ರಾಜಂತೀಂ ರಾಜರಾಜಸ್ಯ ನಲಿನೀಮಿವ ಸರ್ವತಃ ॥
ಅನುವಾದ
ಫಲ-ಪುಷ್ಪಗಳ ಭಾರದಿಂದ ಬಾಗಿದ ನಾನಾ ಪ್ರಕಾರದ ವೃಕ್ಷಗಳು ತೀರದಲ್ಲಿ ತುಂಬಿದ್ದ ಈ ಮಂದಾಕಿನೀ ನದಿಯು ಕುಬೇರನ ಸೌಗಂಧಿಕ ಸರೋವರದಂತೆ ಸುಶೋಭಿತವಾಗಿದೆ.॥4॥
ಮೂಲಮ್ - 5
ಮೃಗಯೂಥನಿಪೀತಾನಿ ಕಲುಷಾಂಭಾಂಸಿ ಸಾಂಪ್ರತಮ್ ।
ತೀರ್ಥಾನಿ ರಮಣೀಯಾನಿ ರತಿಂ ಸಂಜನಯಂತಿ ಮೇ ॥
ಅನುವಾದ
ಜಿಂಕೆಗಳ ಗುಂಪುಗಳು ನೀರು ಕುಡಿದು ಈಗ ಇಲ್ಲಿಯ ನೀರು ಕದಡಿದರೂ ಇದರ ರಮಣೀಯ ತೀರಗಳು ನನ್ನ ಮನಸ್ಸಿಗೆ ಬಹಳ ಆನಂದ ಕೊಡುತ್ತಿವೆ.॥5॥
ಮೂಲಮ್ - 6
ಜಟಾಜಿನಧರಾಃ ಕಾಲೇ ವಲ್ಕಲೋತ್ತರವಾಸಸಃ ।
ಋಷಯಸ್ತ್ವವಗಾಹಂತೇ ನದೀಂ ಮಂದಾಕಿನೀಂ ಪ್ರಿಯೇ ॥
ಅನುವಾದ
ಪ್ರಿಯೇ! ಅಲ್ಲಿ ನೋಡು, ಜಟಾ, ಮೃಗಚರ್ಮ, ವಲ್ಕಲದ ಉತ್ತರೀಯವನ್ನು ಹೊದ್ದಿರುವ ಮಹರ್ಷಿಗಳು ಸರಿಯಾದ ಸಮಯದಲ್ಲಿ ಬಂದು ಈ ಮಂದಾಕಿನೀ ನದಿಯಲ್ಲಿ ಸ್ನಾನಮಾಡುತ್ತಿದ್ದಾರೆ.॥6॥
ಮೂಲಮ್ - 7
ಆದಿತ್ಯಮುಪತಿಷ್ಠಂತೇ ನಿಯಮಾದೂರ್ಧ್ವಬಾಹವಃ ।
ಏತೇ ಪರೇ ವಿಶಾಲಾಕ್ಷಿ ಮುನಯಃ ಸಂಶಿತವ್ರತಾಃ ॥
ಅನುವಾದ
ವಿಶಾಲಲೋಚನೇ! ಕಠೋರ ವ್ರತವನ್ನು ಪಾಲಿಸುವ ಇತರ ಮುನಿಗಳು ನಿತ್ಯ ನಿಯಮದಂತೆ ಎರಡೂ ಕೈಗಳನ್ನು ಮೇಲಕ್ಕೆತ್ತಿ ಈ ನದೀ ತೀರದಲ್ಲಿ ಸೂರ್ಯೋಪಾಸನೆ ಮಾಡುತ್ತಿದ್ದಾರೆ.॥7॥
ಮೂಲಮ್ - 8
ಮಾರುತೋದ್ಭೂತಶಿಖರೈಃ ಪ್ರನೃತ್ತ ಇವ ಪರ್ವತಃ ।
ಪಾದಪೈಃ ಪುಷ್ಪಪತ್ರಾಣಿ ಸೃಜದ್ಭಿರಭಿತೋ ನದೀಮ್ ॥
ಅನುವಾದ
ಗಾಳಿಯಿಂದ ಅಲ್ಲಾಡುತ್ತಿರುವ ರೆಂಬೆಗಳಿಂದ ಪುಷ್ಪಗಳು ಮಂದಾಕಿನೀ ನದಿಯ ಎರಡೂ ತೀರಗಳಲ್ಲಿ ಚೆಲ್ಲಾಡಿಹೋಗಿವೆ. ಇದನ್ನು ನೋಡಿದರೆ ಪರ್ವತ ರಾಜನೇನಾದರೂ ಪುಷ್ಪಾಂಜಲಿ ಅರ್ಪಿಸುತ್ತಾ ನೃತ್ಯಮಾಡುತ್ತಿರುವನೋ ಎಂಬಂತಿತ್ತು.॥8॥
ಮೂಲಮ್ - 9
ಕ್ವಚಿನ್ಮಣಿನಿಕಾಶೋದಾಂ ಕ್ವಚಿತ್ ಪುಲಿನಶಾಲಿನೀಮ್ ।
ಕ್ವಚಿತ್ಸಿದ್ಧಜನಾಕೀರ್ಣಾಂ ಪಶ್ಯ ಮಂದಾಕಿನೀಂನದೀಮ್ ॥
ಅನುವಾದ
ಮಂದಾಕಿನೀ ನದಿಯ ಶೋಭೆ ಹೇಗಿದೆ ನೋಡು; ಕೆಲವು ಕಡೆ ಇದರಲ್ಲಿ ಮುತ್ತುಗಳಂತೆ ಸ್ವಚ್ಛವಾದ ನೀರು ಹರಿಯುವುದು ಕಂಡುಬಂದರೆ, ಕೆಲವೆಡೆ ಎತ್ತರವಾದ ಮರಳ ದಿಣ್ಣೆಗಳಿಂದ ಕಣ್ಮರೆಯಾಗುತ್ತಿದೆ. ಕೆಲವೆಡೆ ಇದರಲ್ಲಿ ಸಿದ್ಧರು ಸ್ನಾನಮಾಡುತ್ತಿದ್ದಾರೆ.॥9॥
ಮೂಲಮ್ - 10
ನಿರ್ಧೂತಾನ್ ವಾಯುನಾ ಪಶ್ಯವಿತತಾನ್ ಪುಷ್ಪಸಂಚಯಾನ್ ।
ಪೋಪ್ಲೂಯಮಾನಾನಪರಾನ್ಪಶ್ಯ ತ್ವಂ ತನುಮಧ್ಯಮೇ ॥
ಅನುವಾದ
ಸುಂದರೀ! ವಾಯುವು ಹಾರಿಸಿಕೊಂಡು ಬಂದ ಹೂವುಗಳ ರಾಶಿ-ರಾಶಿಗಳು ಮಂದಾಕಿನಿಯ ಎರಡೂ ದಂಡೆಗಳಲ್ಲಿ ಬಿದ್ದಿವೆ. ಬೇರೆ ಪುಷ್ಪಸಮೂಹವು ನೀರಿನ ಮೇಲೆ ಹೇಗೆ ತೇಲುತ್ತಾ ಸಾಗುತ್ತಿದೆ ನೋಡು.॥10॥
ಮೂಲಮ್ - 11
ಪಶ್ಯೈತದ್ ವಲ್ಗುವಚಸೋ ರಥಾಂಗಾಹ್ವಯನಾ ದ್ವಿಜಾಃ ।
ಅಧಿರೋಹಂತಿ ಕಲ್ಯಾಣಿನಿಷ್ಕೂಜಂತಃ ಶುಭಾ ಗಿರಃ ॥
ಅನುವಾದ
ಕಲ್ಯಾಣಿ! ಮಧುರವಾಗಿ ನುಡಿಯುವ ಚಕ್ರವಾಕ ಪಕ್ಷಿಗಳು ಕಲರವ ಮಾಡುತ್ತಾ ನದಿಯ ಎರಡೂ ದಡಗಳಲ್ಲಿ ಆರೂಢವಾಗಿರುವುದನ್ನು ನೋಡಲ್ಲಿ.॥11॥
ಮೂಲಮ್ - 12
ದರ್ಶನಂ ಚಿತ್ರಕೂಟಸ್ಯ ಮಂದಾಕಿನ್ಯಾಶ್ಚ ಶೋಭನೇ ।
ಅಧಿಕಂ ಪುರವಾಸಾಚ್ಚ ಮನ್ಯೇ ತವ ಚ ದರ್ಶನಾತ್ ॥
ಅನುವಾದ
ಶೋಭನೇ! ಪ್ರತಿದಿನ ಚಿತ್ರಕೂಟ ಮತ್ತು ಮಂದಾಕಿನಿಯ ದರ್ಶನವು ನನಗೆ ನಿನ್ನ ದರ್ಶನಕ್ಕಿಂತಲೂ ಹೆಚ್ಚು ಕಣ್ಮನಗಳಿಗೆ ಸುಖಾವಹವಾಗಿ, ಅಯೋಧ್ಯೆಯ ವಾಸಕ್ಕಿಂತಲೂ ಹೆಚ್ಚು ಆಹ್ಲಾದಕರವಾಗಿದೆ.॥12॥
ಮೂಲಮ್ - 13
ವಿಧೂತಕಲ್ಮಷೈಃ ಸಿದ್ಧೈಸ್ತಪೋದಮಶಮಾನ್ವಿತೈಃ ।
ನಿತ್ಯವಿಕ್ಷೋಭಿತಜಲಾಂ ವಿಗಾಹಸ್ವ ಮಯಾ ಸಹ ॥
ಅನುವಾದ
ಈ ನದಿಯಲ್ಲಿ ಪ್ರತಿದಿನ ತಪಸ್ಸು, ಇಂದ್ರಿಯ ಸಂಯಮ ಮತ್ತು ಮನೋನಿಗ್ರಹ ಸಂಪನ್ನ ನಿಷ್ಪಾಪ ಸಿದ್ಧ ಮಹಾತ್ಮರು ಸ್ನಾನಮಾಡುವುದರಿಂದ ಅವರ ಪಾದಧೂಳಿಯಿಂದ ಪವಿತ್ರವಾದ ತೀರ್ಥದಲ್ಲಿ ನಡೆ, ನನ್ನೊಂದಿಗೆ ಸ್ನಾನ ಮಾಡು.॥13॥
ಮೂಲಮ್ - 14
ಸಖೀವಚ್ಚ ವಿಗಾಹಸ್ವ ಸೀತೇ ಮಂದಾಕಿನೀಂ ನದೀಮ್ ।
ಕಮಲಾನ್ಯವಮಜ್ಜಂತೀ ಪುಷ್ಕರಾಣಿ ಚ ಭಾಮಿನಿ ॥
ಅನುವಾದ
ಭಾಮಿನಿ ಸೀತೆ! ಸಖಿಯರು ಪರಸ್ಪರ ಜಲಕ್ರೀಡೆ ಯಾಡುವಂತೆ ನೀನೂ ಮಂದಾಕಿನೀ ನದಿಯಲ್ಲಿ ಇಳಿದು ಇದರಲ್ಲಿ ಕೆಂಪು ಮತ್ತು ಬಿಳಿಯ ಕುಮುದಗಳಲ್ಲಿ ನೀರಿನಲ್ಲಿ ಮುಳುಗಿಸುತ್ತಾ ಇದರಲ್ಲಿ ಸ್ನಾನ ಕ್ರೀಡೆಯಾಡು.॥14॥
ಮೂಲಮ್ - 15
ತ್ವಂ ಪೌರಜನವದ್ ವ್ಯಾಲಾನಯೋಧ್ಯಾಮಿವ ಪರ್ವತಮ್ ।
ಮನ್ಯಸ್ವ ವನಿತೇ ನಿತ್ಯಂ ಸರಯೂವದಿಮಾಂ ನದೀಮ್ ॥
ಅನುವಾದ
ಪ್ರಿಯೆ! ನೀನು ಈ ವನದ ನಿವಾಸಿಗಳನ್ನು ಪುರವಾಸಿ ಜನರಂತೆ ತಿಳಿ. ಚಿತ್ರಕೂಟ ಪರ್ವತವನ್ನು ಅಯೋಧ್ಯೆಯಂತೆ ತಿಳಿ ಮತ್ತು ಈ ಮಂದಾಕಿನೀ ನದಿಯನ್ನು ಸರಯೂವಿನಂತೆ ತಿಳಿ.॥15॥
ಮೂಲಮ್ - 16
ಲಕ್ಷ್ಮಣಶ್ಚೈವ ಧರ್ಮಾತ್ಮಾ ಮನ್ನಿದೇಶೇ ವ್ಯವಸ್ಥಿತಃ ।
ತ್ವಂ ಚಾನುಕೂಲಾ ವೈದೇಹಿ ಪ್ರೀತಿಂ ಜನಯತೀ ಮಮ ॥
ಅನುವಾದ
ವಿದೇಹನಂದಿನೀ! ಧರ್ಮಾತ್ಮಾ ಲಕ್ಷ್ಮಣನು ಸದಾ ನನ್ನ ಆಜ್ಞೆಗಧೀನನಾಗಿರುತ್ತಾನೆ ಮತ್ತು ನೀನೂ ಕೂಡ ನನ್ನ ಮನಸ್ಸಿಗೆ ಅನುಕೂಲವಾಗಿಯೇ ನಡೆಯುತ್ತಿರುವೆ; ಇದರಿಂದ ನನಗೆ ಬಹಳ ಸಂತೋಷವಾಗುತ್ತಿದೆ.॥16॥
ಮೂಲಮ್ - 17
ಉಪಸ್ಪೃಶಂಸ್ತ್ರಿಷವಣಂ ಮಧುಮೂಲಲಾಶನಃ ।
ನಾಯೋಧ್ಯಾಯೈ ನ ರಾಜ್ಯಾಯ ಸ್ಪೃಹಯೇಚ ತ್ವಯಾ ಸಹ ॥
ಅನುವಾದ
ಪ್ರಿಯೇ! ನಿನ್ನೊಡನೆ ತ್ರಿಕಾಲಗಳಲ್ಲಿ ಸ್ನಾನ ಮಾಡುತ್ತಾ ಮಧುರ ಫಲ-ಮೂಲಗಳ ಆಹಾರ ಸೇವಿಸುತ್ತಾ ಇರುವ ನಾನು ಅಯೋಧ್ಯೆಗೆ ಹೋಗಲು ಮತ್ತು ರಾಜ್ಯವನ್ನು ಪಡೆಯಲು ಇಚ್ಛಿಸುವುದಿಲ್ಲ.॥17॥
ಮೂಲಮ್ - 18
ಇಮಾಂ ಹಿ ರಮ್ಯಾಂ ಗಜಯೂಥಲೋಡಿತಾಂ
ನಿಪೀತತೋಯಾಂ ಗಜಸಿಂಹವಾನರೈಃ ।
ಸುಪುಷ್ಪಿತಾಂ ಪುಷ್ಪಭರೈರಲಂಕೃತಾಂ
ನ ಸೋಽಸ್ತಿ ಯಃ ಸ್ಯಾನ್ನ ಗತಕ್ಲಮಃ ಸುಖೀ ॥
ಅನುವಾದ
ಯಾವುದನ್ನು ಆನೆಗಳ ಗುಂಪು ಕದಡಿಹಾಕುತ್ತವೋ, ಸಿಂಹ ಮತ್ತು ವಾನರರು ಯಾವುದರ ನೀರು ಕುಡಿಯುತ್ತವೆಯೋ, ಯಾವುದರ ತಟದಲ್ಲಿ ಸುಂದರ ಪುಷ್ಪಭರಿತ ವೃಕ್ಷಗಳು ಶೋಭಿಸುತ್ತಿವೆಯೋ ಹಾಗೂ ಪುಷ್ಪ ಸಮೂಹಗಳಿಂದ ಅಲಂಕೃತವಾಗಿದೆಯೋ ಇಂತಹ ರಮಣೀಯ ಈ ಮಂದಾಕಿನೀ ನದಿಯಲ್ಲಿ ಸ್ನಾನಮಾಡಿ ಗ್ಲಾನಿರಹಿತ ಮತ್ತು ಸುಖಿಯಾಗುವಂತಹ ಮನುಷ್ಯನು ಈ ಜಗತ್ತಿನಲ್ಲಿ ಬೇರೆ ಯಾರು ಇಲ್ಲ.॥18॥
ಮೂಲಮ್ - 19
ಇತೀವ ರಾಮೋ ಬಹುಸಂಗತಂ ವಚಃ
ಪ್ರಿಯಾಸಹಾಯಃ ಸರಿತಂ ಪ್ರತಿ ಬ್ರುವನ್ ।
ಚಚಾರ ರಮ್ಯಂ ನಯನಾಂಜನಪ್ರಭಂ
ಸ ಚಿತ್ರಕೂಟಂ ರಘುವಂಶವರ್ಧನಃ ॥
ಅನುವಾದ
ರಘುವಂಶವನ್ನು ವೃದ್ಧಿಗೊಳಿಸುವ ಶ್ರೀರಾಮನು ಮಂದಾಕಿನೀ ನದಿಯ ಕುರಿತು ಹೀಗೆ ಅನೇಕ ರೀತಿಯ ಸುಸಂಗತ ಮಾತುಗಳನ್ನು ಹೇಳುತ್ತಾ ನೀಲ ಕಾಂತಿಯುಳ್ಳ ರಮಣೀಯ ಚಿತ್ರಕೂಟ ಪರ್ವತದಲ್ಲಿ ತನ್ನ ಪ್ರಿಯಪತ್ನೀ ಸೀತೆಯೊಂದಿಗೆ ಸಂಚರಿಸತೊಡಗಿದನು.॥19॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ತೊಂಭತ್ತೈದನೆಯ ಸರ್ಗ ಪೂರ್ಣವಾಯಿತು.॥95॥