वाचनम्
ಭಾಗಸೂಚನಾ
ಶ್ರೀರಾಮನು ಸೀತಾದೇವಿಗೆ ಚಿತ್ರಕೂಟದ ಸೊಬಗನ್ನು ತೋರಿಸಿ ವರ್ಣಿಸಿದುದು
ಮೂಲಮ್ - 1
ದೀರ್ಘಕಾಲೋಷಿತಸ್ತಸ್ಮಿನ್ ಗಿರೌ ಗಿರಿವರಪ್ರಿಯಃ ।
ವೈದೇಹ್ಯಾಃ ಪ್ರಿಯಮಾಕಾಂಕ್ಷನ್ ಸ್ವಂ ಚ ಚಿತ್ತಂವಿಲೋಭಯನ್ ॥
ಮೂಲಮ್ - 2
ಅಥ ದಾಶರಥಿಶ್ಚಿತ್ರಂ ಚಿತ್ರಕೂಟಮದರ್ಶಯತ್ ।
ಭಾರ್ಯಾಮಮರಸಂಕಾಶಃ ಶಚೀಮಿವ ಪುರಂದರಃ ॥
ಅನುವಾದ
ಗಿರಿವರ ಚಿತ್ರಕೂಟವು ಶ್ರೀರಾಮನಿಗೆ ಬಹಳ ಪ್ರಿಯವಾಗಿತ್ತು. ಅವನು ಬಹಳ ದಿನಗಳಿಂದ ಆ ಪರ್ವತದ ಮೇಲೆ ಇರುತ್ತಿದ್ದನು. ಒಂದು ದಿನ ಅಮರತುಲ್ಯ ತೇಜಸ್ವಿ ದಶರಥನಂದನ ಶ್ರೀರಾಮನು ವಿದೇಹಕುಮಾರೀ ಸೀತೆಗೆ ಪ್ರಿಯವನ್ನು ಮಾಡುವ ಇಚ್ಛೆಯಿಂದ ಹಾಗೂ ಮನೋಲ್ಹಾದವನ್ನು ಉಂಟುಮಾಡಲು ಭಾರ್ಯೆಗೆ ವಿಚಿತ್ರ ಚಿತ್ರಕೂಟದ ಶೋಭೆಯನ್ನು ದೇವೇಂದ್ರನು ಶಚಿಗೆ ಪರ್ವತೀಯ ಸೊಬಗನ್ನು ತೋರಿಸುವಂತೆಯೇ, ದರ್ಶನ ಮಾಡಿಸಲುತೊಡಗಿದನು.॥1-2॥
ಮೂಲಮ್ - 3
ನ ರಾಜ್ಯಭ್ರಂಶನಂ ಭದ್ರೇ ನ ಸುಹೃದ್ಭಿರ್ವಿನಾಭವಃ ।
ಮನೋ ಮೇ ಬಾಧತೇ ದೃಷ್ಟ್ವಾ ರಮಣೀಯಮಿಮಂಗಿರಿಮ್ ॥
ಅನುವಾದ
ರಾಮನು ಹೇಳುತ್ತಾನೆ - ಭದ್ರೇ! ನಾನು ರಾಜ್ಯಭ್ರಷ್ಟನಾಗಿದ್ದರೂ, ಹಿತೈಷಿ ಸುಹೃದರಿಂದ ಅಗಲಿದ್ದರೂ, ನಾನು ಈ ರಮಣೀಯ ಪರ್ವತವನ್ನು ನೋಡುತ್ತಿರುವಾಗ ನನ್ನ ಎಲ್ಲ ದುಃಖಗಳು ದೂರವಾಗುತ್ತವೆ. ರಾಜ್ಯ ಸಿಗದಿರುವುದು, ಸುಹೃದರಿಂದ ವಿಯೋಗವಾಗುವುದು ನನ್ನ ಮನಸ್ಸಿಗೆ ಬೇಸರ ಬರುವುದಿಲ್ಲ.॥3॥
ಮೂಲಮ್ - 4
ಪಶ್ಯೇಮಮಚಲಂ ಭದ್ರೇ ನಾನಾದ್ವಿಜಗಣಾಯುತಮ್ ।
ಶಿಖರೈಃ ಖಮಿವೋದ್ವಿದ್ಧೈರ್ಧಾತುಮದ್ಭಿರ್ವಿಭೂಷಿತಮ್ ॥
ಅನುವಾದ
ಕಲ್ಯಾಣೀ! ಈ ಪರ್ವತದ ಕಡೆಗೆ ಕಣ್ಣು ಹಾಯಿಸು, ನಾನಾ ಪ್ರಕಾರದ ಅಸಂಖ್ಯ ಪಕ್ಷಿಗಳು ಕಲರವ ಮಾಡುತ್ತಿವೆ. ನಾನಾ ಪ್ರಕಾರದ ಗೈರಿಕಾದಿ ಧಾತುಗಳಿಂದ ಕೂಡಿದ ಇದರ ಗಗನಚುಂಬೀ ಶಿಖರಗಳು ಆಕಾಶವನ್ನು ಮುಟ್ಟುತ್ತಿವೆ. ಈ ಶಿಖರಗಳಿಂದ ವಿಭೂಷಿತವಾದ ಈ ಚಿತ್ರಕೂಟವು ಹೇಗೆ ಶೋಭಿಸುತ್ತಿದೆ ನೋಡು.॥4॥
ಮೂಲಮ್ - 5
ಕೇಚಿದ್ ರಜತಸಂಕಾಶಾಃ ಕೇಚಿತ್ಕ್ಷತಜಸಂನಿಭಾಃ ।
ಪೀತಮಾಂಜಿಷ್ಠವರ್ಣಾಶ್ಚ ಕೇಚಿನ್ಮಣಿವರಪ್ರಭಾಃ ॥
ಮೂಲಮ್ - 6
ಪುಷ್ಪಾರ್ಕಕೇತಕಾಭಾಶ್ಚ ಕೇಚಿಜ್ಜ್ಯೋತೀರಸಪ್ರಭಾಃ ।
ವಿರಾಜಂತೇಽಚಲೇಂದ್ರಸ್ಯ ದೇಶಾಧಾತುವಿಭೂಷಿತಾಃ ॥
ಅನುವಾದ
ಬೇರೆ-ಬೇರೆ ಧಾತುಗಳಿಂದ ಅಲಂಕೃತವಾದ ಅಚಲರಾಜ ಚಿತ್ರಕೂಟದ ಪ್ರದೇಶವು ಎಷ್ಟು ಸುಂದರವಾಗಿದೆ. ಇವುಗಳಲ್ಲಿ ಕೆಲವು ಬೆಳ್ಳಿಯಂತೆ ಹೊಳೆಯುತ್ತಿದ್ದರೆ, ಕೆಲವು ರಕ್ತವರ್ಣವಾಗಿವೆ. ಕೆಲವು ಹಳದಿ ಮತ್ತು ಅಚ್ಚಹಳದಿ ಬಣ್ಣದಿಂದ ಕೂಡಿವೆ. ಕೆಲವು ಶ್ರೇಷ್ಠವಾದ ಇಂದ್ರನೀಲಮಣಿಯಂತೆ ಶೋಭಾಯ ಮಾನವಾಗಿವೆ. ಇನ್ನೂ ಕೆಲವು ಪುಷ್ಯರಾಗದ ಕಾಂತಿಯಿಂದಲೂ, ಸ್ಫಟಿಕದ ಕಾಂತಿಯಿಂದಲೂ ಬೆಳಗುತ್ತಿವೆ. ಕೆಲವು ಕೇದಿಗೆಯ ಹೂವಿನಂತಿದ್ದರೆ, ಕೆಲವು ಎಕ್ಕದ ಹೂವಿನಂತೆ ಪ್ರಕಾಶಿಸುತ್ತಿವೆ. ಕೆಲವು ಧಾತುಗಳು ನಕ್ಷತ್ರಗಳ ಕಾಂತಿಯಿಂದಲೂ, ಇನ್ನೂ ಕೆಲವು ಪಾದರಸದಂತೆ ಹೊಳೆಯುತ್ತಿವೆ.॥5-6॥
ಮೂಲಮ್ - 7
ನಾನಾಮೃಗಗಣೈರ್ದ್ವೀಪಿತರಕ್ಷ್ವಕ್ಷಗಣೈರ್ವೃತಃ ।
ಅದುಷ್ಟೈರ್ಭಾತ್ಯಯಂ ಶೈಲೋ ಬಹುಪಕ್ಷಿಸಮಾಕುಲಃ ॥
ಅನುವಾದ
ಈ ಪರ್ವತವು ಅಸಂಖ್ಯ ಪಕ್ಷಿಗಳಿಂದ ವ್ಯಾಪ್ತವಾಗಿದೆ. ನಾನಾ ಪ್ರಕಾರದ ಜಿಂಕೆಗಳಿಂದ ದೊಡ್ಡ ದೊಡ್ಡ ಹುಲಿಗಳಿಂದ, ಚಿರತೆ ಮತ್ತು ಕರಡಿಗಳಿಂದ ತುಂಬಿದೆ. ಆ ವ್ಯಾಘ್ರವೇ ಆದಿ ಹಿಂಸಕ ಪ್ರಾಣಿಗಳು ತಮ್ಮ ದುಷ್ಟ ಸ್ವಭಾವವನ್ನು ಬಿಟ್ಟು ಇಲ್ಲಿ ಇರುತ್ತವೆ ಹಾಗೂ ಪರ್ವತದ ಶೋಭೆ ಹೆಚ್ಚಿಸುತ್ತವೆ.॥7॥
ಮೂಲಮ್ - 8
ಆಮ್ರಜಂಭ್ವಸನೈರ್ಲೋಧ್ರೈಃ ಪ್ರಿಯಾಲೈಃ ಪನಸೈರ್ಧವೈಃ ।
ಅಂಕೋಲೈರ್ಭವ್ಯತಿನಿಶೈರ್ಬಿಲ್ವತಿಂದುಕವೇಣುಭಿಃ ॥
ಮೂಲಮ್ - 9
ಕಾಶ್ಮರ್ಯಾರಿಷ್ಟವರಣೈರ್ಮಧೂಕೈಸ್ತಿಲಕೈರಪಿ ।
ಬದರ್ಯಾಮಲಕೈರ್ನೀಪೈರ್ವೇತ್ರಧನ್ವನಬೀಜಕೈಃ ॥
ಮೂಲಮ್ - 10
ಪುಷ್ಪವದ್ಭಿಃ ಫಲೋಪೇತೈಶ್ಛಾಯಾವದ್ಭಿರ್ಮನೋರಮೈಃ ।
ಏವಮಾದಿಭಿರಾಕೀರ್ಣಃ ಶ್ರಿಯಂ ಪುಷ್ಯತ್ಯಯಂ ಗಿರಿಃ ॥
ಅನುವಾದ
ಫಲ-ಪುಷ್ಪಗಳಿಂದ ಸಮೃದ್ಧವಾದ ಮಾವು, ನೇರಳೇ, ಹೊನ್ನೆ, ಲೋಧ್ರ, ಪ್ರಿಯಾಲ, ಹಲಸು, ಅಂಕೊಲ, ಭವ್ಯ, ತಿನಿಶ, ಬಿಲ್ವ, ತಿಂದುಕ, ಬಿದಿರು, ಕಾಶ್ಮರೀ (ಮಧುಪರ್ಣಿಕಾ) ಅರಿಷ್ಟ, ನಿಂಬೆ, ವರಣ, ಮದೂಕ, ತಿಲಕ, ಬದರೀ, ನೆಲ್ಲಿ, ಕದಂಬ, ಬೆತ್ತ, ಇಂದ್ರವೃಕ್ಷ, ಬೀಜಕ (ದಾಳಿಂಬ) ಮೊದಲಾದ ವೃಕ್ಷಗಳಿಂದ, ನೆರಳಿನಿಂದ ಕೂಡಿದ್ದ ಮರಗಳಿಂದ ಮನೋರಮವಾಗಿ ಕಾಣುತ್ತಿದೆ. ಇವುಗಳಿಂದ ಕೂಡಿದ ಈ ಪರ್ವತವು ಅನುಪಮ ಶೋಭೆಯನ್ನು ಹಾಗೂ ಪೋಷಿಸಿ ವಿಸ್ತಾರಮಾಡುತ್ತಿವೆ.॥8-10॥
ಮೂಲಮ್ - 11
ಶೈಲಪ್ರಸ್ಥೇಷು ರಮ್ಯೇಷು ಪಶ್ಯೇಮಾನ್ ಕಾಮಹರ್ಷಣಾನ್ ।
ಕಿನ್ನರಾನ್ ದ್ವಂದ್ವಶೋ ಭದ್ರೇ ರಮಮಾಣಾನ್ಮನಸ್ವಿನಃ ॥
ಅನುವಾದ
ಈ ರಮಣೀಯ ಶೈಲ ಶಿಖರಗಳಲ್ಲಿ ಆ ಪ್ರದೇಶಗಳನ್ನು ನೋಡು - ಅಲ್ಲಿ ಪ್ರೇಮಮಿಲನದ ಭಾವನೆಯನ್ನು ಉದ್ದೀಪನ ಗೊಳಿಸುತ್ತಾ ಆಂತರಿಕ ಹರ್ಷವನ್ನು ಹೆಚ್ಚಿಸುವಂತಹ ಕಿನ್ನರರ ಜೋಡಿಗಳು ಮನಬಂದಂತೆ ವಿಹರಿಸುತ್ತಿವೆ.॥11॥
ಮೂಲಮ್ - 12
ಶಾಖಾವಸಕ್ತಾನ್ ಖಡ್ಗಾಂಶ್ಚ ಪ್ರವರಾಣ್ಯಂಬರಾಣಿ ಚ ।
ಪಶ್ಯ ವಿದ್ಯಾಧರಸ್ತ್ರೀಣಾಂ ಕ್ರೀಡೋದ್ದೇಶಾನ್ಮನೋರಮಾನ್ ॥
ಅನುವಾದ
ಕಿನ್ನರರ ಖಡ್ಗಗಳು ಮರಗಳ ಕೊಂಬೆಗಳಲ್ಲಿ ನೇತಾಡುತ್ತಿವೆ. ಇತ್ತ ವಿದ್ಯಾಧರರ ಸ್ತ್ರೀಯರ ಮನೋರಮ ಕ್ರೀಡಾಸ್ಥಳಗಳನ್ನು ಹಾಗೂ ಮರಗಳ ಕೊಂಬೆಗಳಲ್ಲಿ ಒಣ ಹಾಕಿರುವ ಅವರ ಸುಂದರ ವಸ್ತ್ರಗಳನ್ನು ನೋಡು.॥12॥
ಮೂಲಮ್ - 13
ಜಲಪ್ರಪಾತೈರುದ್ಧೇದೈರ್ನಿಷ್ಪಂದೈಶ್ಚ ಕ್ವಚಿತ್ ಕ್ವಚಿತ್ ।
ಸ್ರವದ್ಭಿರ್ಭಾತ್ಯಯಂ ಶೈಲಃ ಸ್ರವನ್ಮದ ಇವ ದ್ವಿಪಃ ॥
ಅನುವಾದ
ಇದರ ಮೇಲೆ ಎಲ್ಲೋ ಎತ್ತರದಿಂದ ಜಲಪಾತಗಳು ಬೀಳುತ್ತಿವೆ, ಕೆಲವು ಕಡೆ ನೆಲದಿಂದ ನೀರಿನ ಬುಗ್ಗೆಗಳು ಚಿಮ್ಮುತ್ತಿವೆ. ಕೆಲವು ಕಡೆ ಸಣ್ಣ-ಸಣ್ಣ ಝರಿಗಳು ಹರಿಯುತ್ತಿವೆ. ಇವೆಲ್ಲವುಗಳಿಂದ ಈ ಪರ್ವತವು ಮದೋದಕವನ್ನು ಹರಿಸುತ್ತಿರುವ ಆನೆಯಂತೆ ಶೋಭಿಸುತ್ತಿದೆ.॥13॥
ಮೂಲಮ್ - 14
ಗುಹಾಸಮೀರಣೋ ಗಂಧಾನ್ನಾನಾಪುಷ್ಪಭವಾನ್ ಬಹೂನ್ ।
ಘ್ರಾಣತರ್ಪಣಮಭ್ಯೇತ್ಯ ಕಂ ನರಂ ನ ಪ್ರಹರ್ಷಯೇತ್ ॥
ಅನುವಾದ
ಗುಹೆಗಳಿಂದ ಹೊರಟ ವಾಯುವು ನಾನಾ ಪ್ರಕಾರದ ಪುಷ್ಪಗಳ ಸಾಕಷ್ಟು ಪರಿಮಳವನ್ನೆತ್ತಿಕೊಂಡು ಬಂದು ಮೂಗನ್ನು ತೃಪ್ತಿಪಡಿಸುತ್ತಾ ಯಾವ ಪುರುಷನ ಹರ್ಷವನ್ನು ತಾನೇ ಹೆಚ್ಚಿಸುವುದಿಲ್ಲ.॥14॥
ಮೂಲಮ್ - 15
ಯದೀಹ ಶರದೋಽನೇಕಾಸ್ತ್ವಯಾ ಸಾರ್ಧಮನಿಂದಿತೇ ।
ಲಕ್ಷ್ಮಣೇನ ಚ ವತ್ಸ್ಯಾಮಿ ನ ಮಾಂ ಶೋಕಃ ಪ್ರಧರ್ಷತಿ ॥
ಅನುವಾದ
ಸಾಧ್ವೀ ಸೀತೇ! ನಿನ್ನ ಮತ್ತು ಲಕ್ಷ್ಮಣನೊಂದಿಗೆ ನಾನು ಇಲ್ಲಿ ಅನೇಕ ವರ್ಷಗಳವರೆಗೆ ವಾಸಿಸಿದರೂ ನಗರತ್ಯಾಗದ ಶೋಕ ನನಗೆ ಎಂದಿಗೂ ಆಗಲಾರದು.॥15॥
ಮೂಲಮ್ - 16
ಬಹುಪುಷ್ಪಫಲೇ ರಮ್ಯೇ ನಾನಾದ್ವಿಜಗಣಾಯುತೇ ।
ವಿಚಿತ್ರಶಿಖರೇ ಹ್ಯಸ್ಮಿನ್ ರತವಾನಸ್ಮಿ ಭಾಮಿನಿ ॥
ಅನುವಾದ
ಭಾಮಿನೀ! ಬಹಳಷ್ಟು ಹೂವು-ಹಣ್ಣುಗಳಿಂದ ಕೂಡಿದ ಹಾಗೂ ನಾನಾ ರೀತಿಯ ಪಕ್ಷಿಗಳಿಂದ ಸೇವಿತವಾದ ಈ ವಿಚಿತ್ರ ಶಿಖರವುಳ್ಳ ರಮಣೀಯ ಪರ್ವತದ ಮೇಲೆ ನನ್ನ ಮನಸ್ಸು ಬಹಳ ಮಗ್ನವಾಗಿಹೋಗಿದೆ.॥16॥
ಮೂಲಮ್ - 17
ಅನೇನ ವನವಾಸೇನ ಮಮ ಪ್ರಾಪ್ತಂ ಫಲದ್ವಯಮ್ ।
ಪಿತುಶ್ಚಾನೃಣ್ಯತಾ ಧರ್ಮೇ ಭರತಸ್ಯ ಪ್ರಿಯಂ ತಥಾ ॥
ಅನುವಾದ
ಪ್ರಿಯೇ! ಈ ವನವಾಸದಿಂದ ನನಗೆ ಎರಡು ಫಲ ಪ್ರಾಪ್ತವಾಗಿದೆ, ಎರಡು ಲಾಭವಾಗಿವೆ. ಒಂದು ಧರ್ಮಾನುಸಾರ ಪಿತೃವಾಕ್ಯ ಪರಿಪಾಲನೆಯಿಂದ ಋಣ ತೀರಿಸಿದಂತಾಯಿತು; ಇನ್ನೊಂದು ತಮ್ಮ ಭರತನಿಗೆ ಪ್ರಿಯವಾಯಿತು.॥17॥
ಮೂಲಮ್ - 18
ವೈದೇಹಿ ರಮಸೇ ಕಚ್ಚಿಚ್ಚಿತ್ರಕೂಟೇ ಮಯಾ ಸಹ ।
ಪಶ್ಯಂತೀ ವಿವಿಧಾನ್ ಭಾವಾನ್ಮನೋವಾಕ್ಕಾಯಸಮ್ಮತಾನ್ ॥
ಅನುವಾದ
ವಿದೇಹಕುಮಾರಿ! ಚಿತ್ರಕೂಟ ಪರ್ವತದ ಮೇಲೆ ನನ್ನೊಂದಿಗೆ ಮನಸ್ಸು, ವಾಣಿ ಮತ್ತು ಶರೀರಕ್ಕೆ ಪ್ರಿಯವಾಗುವ ಬಗೆ-ಬಗೆಯ ಪದಾರ್ಥಗಳನ್ನು ನೋಡಿ ನಿನಗೆ ಆನಂದ ಪ್ರಾಪ್ತವಾಗುವುದಿಲ್ಲವೇ.॥18॥
ಮೂಲಮ್ - 19
ಇದಮೇವಾಮೃತಂ ಪ್ರಾಹೂ ರಾಜ್ಞಿ ರಾಜರ್ಷಯಃ ಪರೇ ।
ವನವಾಸಂ ಭವಾರ್ಥಾಯ ಪ್ರೇತ್ಯ ಮೇಪ್ರಪಿತಾಮಹಾಃ ॥
ಅನುವಾದ
ರಾಣೀ! ನನ್ನ ಪ್ರಪಿತಾಮಹ ಮನುವೇ ಆದಿ ಶ್ರೇಷ್ಠ ರಾಜರ್ಷಿಗಳು ನಿಯಮಪೂರ್ವಕ ಮಾಡಿದ ಈ ವನವಾಸವನ್ನೇ ಅಮೃತವೆಂದು ತಿಳಿಸಿರುವರು. ಇದರಿಂದ ಶರೀರ ತ್ಯಾಗದ ಬಳಿಕ ಪರಮ ಶ್ರೇಯಸ್ಸು ಪ್ರಾಪ್ತವಾಗುತ್ತದೆ.॥19॥
ಮೂಲಮ್ - 20
ಶಿಲಾಃ ಶೈಲಸ್ಯ ಶೋಭಂತೇ ವಿಶಾಲಾಃ ಶತಶೋಽಭಿತಃ ।
ಬಹುಲಾ ಬಹುಲೈರ್ವರ್ಣೈರ್ನೀಲಪೀತಸಿತಾರುಣೈಃ ॥
ಅನುವಾದ
ಎಲ್ಲೆಡೆ ಈ ಪರ್ವತದ ನೂರಾರು ವಿಶಾಲ ಬಂಡೆಗಳು ಶೋಭಿಸುತ್ತಿವೆ. ಅವು ನೀಲಿ, ಹಳದಿ, ಬಿಳಿ, ಕೆಂಪು ಮುಂತಾದ ವಿವಿಧ ಬಣ್ಣಗಳಿಂದ ಅನೇಕ ರೀತಿಯಿಂದ ಕಂಡುಬರುತ್ತಿವೆ.॥20॥
ಮೂಲಮ್ - 21
ನಿಶಿ ಭಾಂತ್ಯಚಲೇಂದ್ರಸ್ಯ ಹುತಾಶನಶಿಖಾ ಇವ ।
ಓಷಧ್ಯಃ ಸ್ವಪ್ರಭಾಲಕ್ಷ್ಯ್ಮಾ ಭ್ರಾಜಮಾನಾಃ ಸಹಸ್ರಶಃ ॥
ಅನುವಾದ
ರಾತ್ರಿಯಲ್ಲಿ ಈ ಪರ್ವತದ ಮೇಲೆ ಇರುವ ಔಷಧೀಯ ಗಿಡಗಳು ತಮ್ಮ ಬೆಳಕಿನಿಂದ ಹೊಳೆಯುತ್ತಾ ಇದ್ದು ಅಗ್ನಿಶಿಖೆಗಳಂತೆ ಪ್ರಕಾಶಿಸುತ್ತಿವೆ.॥21॥
ಮೂಲಮ್ - 22
ಕೇಚಿತ್ ಕ್ಷಯನಿಭಾ ದೇಶಾಃ ಕೇಚಿದುದ್ಯಾನಸಂನಿಭಾಃ ।
ಕೇಚಿದೇಕಶಿಲಾ ಭಾಂತಿ ಪರ್ವತಸ್ಯಾಸ್ಯ ಭಾಮಿನಿ ॥
ಅನುವಾದ
ಭಾಮಿನಿ! ಈ ಪರ್ವತದ ಕೆಲವು ಸ್ಥಾನಗಳು ಮನೆಯಂತೆ ಕಂಡುಬರುತ್ತವೆ; ಏಕೆಂದರೆ ಅವು ವೃಕ್ಷಗಳ ದಟ್ಟ ನೆರಳಿನಿಂದ ಆಚ್ಛಾದಿತವಾಗಿವೆ. ಕೆಲವು ಸ್ಥಾನಗಳು ಸಂಪಿಗೆ, ಮಲ್ಲಿಗೆ ಮೊದಲಾದ ಹೂವುಗಳು ಹೆಚ್ಚು ಇರುವುದರಿಂದ ಉದ್ಯಾನವನದಂತೆ ಸುಶೋಭಿತವಾಗಿವೆ. ಬಹಳ ದೂರದವರೆಗೆ ಚಾಚಿದ ಬಂಡೆಗಳು ಇರುವ ಎಷ್ಟೋ ಸ್ಥಾನಗಳಿವೆ. ಇವೆಲ್ಲವುಗಳಿಂದ ಬಹಳ ಶೋಭಿಸುತ್ತಾ ಇದೆ.॥22॥
ಮೂಲಮ್ - 23
ಭಿತ್ತ್ವೇವ ವಸುಧಾಂ ಭಾತಿ ಚಿತ್ರಕೂಟಃ ಸಮುತ್ಥಿತಃ ।
ಚಿತ್ರಕೂಟಸ್ಯ ಕೂಟೋಽಯಂ ದೃಶ್ಯತೇ ಸರ್ವತಃ ಶುಭಃ ॥
ಅನುವಾದ
ಈ ಚಿತ್ರಕೂಟ ಪರ್ವತವು ಭೂಮಿಯನ್ನು ಸೀಳಿ ಮೇಲಕ್ಕೆದ್ದು ಬಂದಂತೆ ತೋರುತ್ತದೆ. ಚಿತ್ರಕೂಟದ ಈ ಶಿಖರ ಎಲ್ಲ ಕಡೆಯಿಂದಲೂ ಸುಂದರವಾಗಿ ಕಾಣುತ್ತಿದೆ.॥23॥
ಮೂಲಮ್ - 24
ಕುಷ್ಠಸ್ಥಗರಪುಂನಾಗಭೂರ್ಜಪತ್ರೋತ್ತರಚ್ಛದಾನ್ ।
ಕಾಮಿನಾಂ ಸ್ವಾಸ್ತರಾನ್ ಪಶ್ಯ ಕುಶೇಶಯದಲಾಯುತಾನ್ ॥
ಅನುವಾದ
ಪ್ರಿಯೆ! ಇದು ವಿಲಾಸಿನಿಯರ ಶಯ್ಯೆ ಇದ್ದಂತೆ ಇದೆ. ಇದರ ಮೇಲೆ ಕನ್ನೈದಿಲೆ, ಪುನ್ನಾಗ, ಭೂರ್ಜಪತ್ರ ಇವುಗಳ ಎಲೆಗಳನ್ನು ಕೆಳಭಾಗದಲ್ಲಿಯೂ, ಕಮಲಪುಷ್ಪಗಳ ಎಸಳುಗಳು ಮೇಲ್ಭಾಗದಲ್ಲಿಯೂ ಹಾಕಿ ಸಜ್ಜುಗೊಳಿಸಿದ ಕಾಮಿಗಳ ಈ ಹಾಸಿಗೆಗಳನ್ನು ನೋಡು.॥24॥
ಮೂಲಮ್ - 25
ಮೃದಿತಾಶ್ಚಾಪವಿದ್ಧಾಶ್ಚ ದೃಶ್ಯಂತೇ ಕಮಲಸ್ರಜಃ ।
ಕಾಮಿಭಿರ್ವನಿತೇ ಪಶ್ಯ ಲಾನಿ ವಿವಿಧಾನಿ ಚ ॥
ಅನುವಾದ
ಪ್ರಿಯತಮೆ! ಇಲ್ಲಿ ನೋಡು, ವಿಲಾಸಿಗಳು ಹೊಸಕಿ ಹಾಕಿದ ಈ ಕಮಲಗಳ ಮಾಲೆಗಳು ಕಂಡುಬರುತ್ತಿವೆ. ಅತ್ತ ನೋಡು, ಮರಗಳ ಮೇಲೆ ನಾನಾ ಪ್ರಕಾರದ ಫಲಗಳು ಬಿಟ್ಟಿವೆ.॥25॥
ಮೂಲಮ್ - 26
ವಸ್ವೌಕಸಾರಾಂ ನಲೀನೀಮತೀತ್ಯೈವೋತ್ತರಾನ್ಕುರೂನ್ ।
ಪರ್ವತಶ್ಚಿತ್ರಕೂಟೋಽಸೌ ಬಹುಮೂಲ ಫಲೋದಕಃ ॥
ಅನುವಾದ
ಬಹಳಷ್ಟು ಫಲ-ಮೂಲ, ಜಲದಿಂದ ಸಂಪನ್ನವಾದ ಈ ಚಿತ್ರಕೂಟ ಪರ್ವತವು ಕುಬೇರ ನಗರೀ ಅಲಕಾವತಿಯಂತೆ, ಇಂದ್ರಪುರೀ ನಲಿನೀ (ಅಮರಾವತಿ ಅಥವಾ ನಲಿನೀ ಎಂದು ಪ್ರಸಿದ್ಧವಾದ ಕುಬೇರನ ಸೌಗಂಧಿಕ ಕಮಲಗಳಿಂದ ಕೂಡಿದ ಪುಷ್ಕರಿಣೀ) ಹಾಗೂ ಉತ್ತರ ಕುರುವನ್ನು ತನ್ನ ಶೋಭೆಯಿಂದ ತಿರಸ್ಕರಿಸುತ್ತದೆ.॥26॥
ಮೂಲಮ್ - 27
ಇಮಂ ತು ಕಾಲಂ ವನಿತೇ ವಿಜಹ್ರಿವಾಂ -
ಸ್ತ್ವಯಾ ಚ ಸೀತೇ ಸಹ ಲಕ್ಷ್ಮಣೇನ ।
ರತಿಂ ಪ್ರಪತ್ಸ್ಯೇ ಕುಲಧರ್ಮವರ್ಧಿನೀಂ
ಸತಾಂ ಪಥಿ ಸ್ವೈರ್ನಿಯಮೈಃ ಪರೈಃ ಸ್ಥಿತಃ ॥
ಅನುವಾದ
ಪ್ರಾಣವಲ್ಲಭೆ ಸೀತೇ! ತನ್ನ ಉತ್ತಮ ನಿಯಮಗಳನ್ನು ಪಾಲಿಸುತ್ತಾ, ಸನ್ಮಾರ್ಗದಲ್ಲಿ ಸ್ಥಿತನಾಗಿ ನಿನ್ನೊಂದಿಗೆ ಮತ್ತು ಲಕ್ಷ್ಮಣನೊಂದಿಗೆ ಈ ಹದಿನಾಲ್ಕು ವರ್ಷಗಳ ಸಮಯವನ್ನು ಆನಂದವಾಗಿ ಕಳೆದರೆ ನನಗೆ ಕುಲಧರ್ಮವನ್ನು ಹೆಚ್ಚಿಸುವ ಸುಖ ಪ್ರಾಪ್ತವಾಗುವುದು.॥27॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ತೊಂಭತ್ತನಾಲ್ಕನೆಯ ಸರ್ಗ ಪೂರ್ಣವಾಯಿತು.॥94॥