०९३ रामाश्रमदर्शनम्

वाचनम्
ಭಾಗಸೂಚನಾ

ಸೈನ್ಯ ಸಹಿತ ಭರತನ ಚಿತ್ರಕೂಟ ಯಾತ್ರೆ

ಮೂಲಮ್ - 1

ತಯಾ ಮಹತ್ಯಾ ಯಾಯಿನ್ಯಾಧ್ವಜಿನ್ಯಾ ವನವಾಸಿನಃ ।
ಅರ್ದಿತಾ ಯೂಥಪಾ ಮತ್ತಾಃ ಸಯೂಥಾಃಸಂಪ್ರದುದ್ರುವುಃ ॥

ಅನುವಾದ

ಪ್ರಯಾಣಿಸುತ್ತಿರುವ ಆ ವಿಶಾಲ ವಾಹಿನಿಯಿಂದ ಪೀಡಿತವಾದ ಕಾಡಿನ ಯೂಥಪತಿ ಮತ್ತು ಗಜಗಳು ತಮ್ಮ ಗುಂಪಿನೊಂದಿಗೆ ಓಡಿಹೋಗುತ್ತಿದ್ದವು.॥1॥

ಮೂಲಮ್ - 2

ಋಕ್ಷಾಃ ಪೃಷತಮುಖ್ಯಾಶ್ಚ ರುರವಶ್ಚ ಸಮಂತತಃ ।
ದೃಶ್ಯಂತೇ ವನವಾಟೇಷು ಗಿರಿಷ್ವಪಿ ನದೀಷು ಚ ॥

ಅನುವಾದ

ಕರಡಿಗಳು, ಚುಕ್ಕೆಗಳಿದ್ದ ಪೃಷತ ಜಿಂಕೆಗಳು, ಚುಕ್ಕೆಗಳಿಲ್ಲದ ರುರು ಜಿಂಕೆಗಳು ಅರಣ್ಯಗಳಲ್ಲಿ, ಪರ್ವತಗಳಲ್ಲಿ ನದಿ ತೀರಗಳಲ್ಲಿ ಎಲ್ಲೆಡೆ ಆ ಸೈನ್ಯದಿಂದ ಭಯಗೊಂಡವರಂತೆ ಕಂಡು ಬರುತ್ತಿದ್ದವು.॥2॥

ಮೂಲಮ್ - 3

ಸ ಸಂಪ್ರತಸ್ಥೇಧರ್ಮಾತ್ಮಾ ಪ್ರೀತೋ ದಶರಥಾತ್ಮಜಃ ।
ವೃತೋ ಮಹತ್ಯಾ ನಾದಿನ್ಯಾ ಸೇನಯಾ ಚತುರಂಗಯಾ ॥

ಅನುವಾದ

ಮಹಾ ಕೋಲಾಹಲ ಮಾಡುವ ಆ ವಿಶಾಲ ಚತುರಂಗಿಣೀ ಸೇನೆಯಿಂದ ಸುತ್ತುವರಿದ ಧರ್ಮಾತ್ಮಾ ದಶರಥನಂದನ ಭರತನು ಬಹಳ ಸಂತೋಷದಿಂದ ಪ್ರಯಾಣಿಸುತ್ತಿದ್ದನು.॥3॥

ಮೂಲಮ್ - 4

ಸಾಗರೌಘನಿಭಾ ಸೇನಾ ಭರತಸ್ಯ ಮಹಾತ್ಮನಃ ।
ಮಹೀಂ ಸಂಛಾದಯಾಮಾಸ ಪ್ರಾವೃಷಿ ದ್ಯಾಮಿವಾಂಬುದಃ ॥

ಅನುವಾದ

ಮಳೆಗಾಲದಲ್ಲಿ ಮೋಡಗಳಿಂದ ಆಕಾಶವು ಮುಚ್ಚಿಹೋಗುವಂತೆ ಮಹಾತ್ಮಾ ಭರತನ ಸಮುದ್ರದಂತಹ ಆ ವಿಶಾಲ ಸೈನ್ಯವು ದೂರದವರೆಗಿನ ಭೂಭಾಗವನ್ನು ಆವರಿಸಿಬಿಟ್ಟಿತ್ತು.॥4॥

ಮೂಲಮ್ - 5

ತುರಂಗೌ ಘೈರವತತಾ ವಾರಣೈಶ್ಚ ಮಹಾಬಲೈಃ ।
ಅನಾಲಕ್ಷ್ಯಾ ಚಿರಂ ಕಾಲಂ ತಸ್ಮಿನ್ಕಾಲೇ ಬಭೂವ ಸಾ ॥

ಅನುವಾದ

ಕುದುರೆಗಳ, ಮಹಾ ಬಲಶಾಲಿ ಆನೆಗಳಿಂದ ತುಂಬಿರುವ ಹಾಗೂ ದೂರದವರೆಗೆ ವ್ಯಾಪಿಸಿದ ಆ ಸೈನ್ಯವನ್ನು ಮೊದಲಿನಿಂದ ಕಡೆಯವರೆಗೆ ನೋಡಲು ಹೆಚ್ಚು ಕಾಲವೇ ಬೇಕಾಗುತ್ತಿತ್ತು.॥5॥

ಮೂಲಮ್ - 6

ಸ ಗತ್ವಾ ದೂರಮಧ್ವಾನಂ ಸಂಪರಿಶ್ರಾಂತವಾಹನಃ ।
ಉವಾಚ ವಚನಂ ಶ್ರೀಮಾನ್ವಸಿಷ್ಠಂ ಮಂತ್ರಿಣಾಂ ವರಮ್ ॥

ಅನುವಾದ

ಬಹುದೂರ ಸಾಗಿದ ಬಳಿಕ ಭರತನ ವಾಹನಗಳು ಬಳಲಿದಾಗ ಶ್ರೀಮಾನ್ ಭರತನು ಮಂತ್ರಿಗಳಲ್ಲಿ ಶ್ರೇಷ್ಠರಾದ ವಸಿಷ್ಠರಲ್ಲಿ ಇಂತೆಂದನು .॥6॥

ಮೂಲಮ್ - 7

ಯಾದೃಶಂ ಲಕ್ಷ್ಯತೇ ರೂಪಂ ಯಥಾ ಚೈವ ಮಹಾ ಶ್ರುತಮ್ ।
ವ್ಯಕ್ತಂ ಪ್ರಾಪ್ತಾಃ ಸ್ಮ ತಂ ದೇಶಂ ಭರದ್ವಾಜೋ ಯಮಬ್ರವೀತ್ ॥

ಅನುವಾದ

ಬ್ರಾಹ್ಮಣೋತ್ತಮರೇ! ನಾನು ಕೇಳಿದಂತೆ ಈ ಪ್ರದೇಶದ ಸ್ವರೂಪ ಕಂಡುಬರುತ್ತಿದೆ. ಭರದ್ವಾಜರು ಆದೇಶಿಸಿದಂತೆ ಆ ಪ್ರದೇಶಕ್ಕೆ ನಾವು ಬಂದು ತಲುಪಿರುವಂತೆ ಸ್ಪಷ್ಟವಾಗಿ ಅನಿಸುತ್ತಿದೆ.॥7॥

ಮೂಲಮ್ - 8

ಅಯಂ ಗಿರಿಶ್ಚಿತ್ರಕೂಟ ಸ್ತಥಾ ಮಂದಾಕಿನೀ ನದೀ ।
ಏತತ್ ಪ್ರಕಾಶತೇ ದೂರಾನ್ನೀಲಮೇಘನಿಭಂ ವನಮ್ ॥

ಅನುವಾದ

ಇದೇ ಚಿತ್ರಕೂಟ ಪರ್ವತ ಹಾಗೂ ಹರಿಯುತ್ತಿರುವ ನದಿಯು ಮಂದಾಕಿನೀ ಎಂದು ತಿಳಿಯುತ್ತದೆ. ಈ ಪರ್ವತದ ಸುತ್ತಲ ವನವು ನೀಲಮೇಘದಂತೆ ಪ್ರಕಾಶಿಸುತ್ತಾ ಇದೆ.॥8॥

ಮೂಲಮ್ - 9

ಗಿರೇಃ ಸಾನೂನಿ ರಮ್ಯಾಣಿ ಚಿತ್ರಕೂಟಸ್ಯ ಸಂಪ್ರತಿ ।
ವಾರಣೈರವಮೃದ್ಯಂತೇ ಮಾಮಕೈಃ ಪರ್ವತೋಪಮೈಃ ॥

ಅನುವಾದ

ಪರ್ವತೋಪಮಯವಾದ ನಮ್ಮ ಆನೆಗಳು ಚಿತ್ರಕೂಟದ ರಮ್ಯವಾದ ತಪ್ಪಲು ಪ್ರದೇಶಗಳನ್ನು ಧ್ವಂಸ ಮಾಡುತ್ತಿವೆ.॥9॥

ಮೂಲಮ್ - 10

ಮುಂಚಂತಿ ಕುಸುಮಾನ್ಯೇತೇ ನಗಾಃಪರ್ವತಸಾನುಷು ।
ನೀಲಾ ಇವಾತಪಾಪಾಯೇ ತೋಯಂ ತೋಯಧರಾ ಘನಾಃ ॥

ಅನುವಾದ

ವರ್ಷಾಕಾಲದ ನೀಲಮೇಘಗಳು ಪರ್ವತ ಶಿಖರಗಳ ಮೇಲೆ ಮಳೆಗರೆಯುವಂತೆ, ಈ ವೃಕ್ಷಗಳು ಪರ್ವತದ ಮೇಲೆ ಹೂವಿನ ಮಳೆಗರೆಯುತ್ತಿವೆ.॥10॥

ಮೂಲಮ್ - 11

ಕಿನ್ನರಾಚರಿತಂ ದೇಶಂ ಪಶ್ಯ ಶತ್ರುಘ್ನ ಪರ್ವತೆ ।
ಹಯೈಃ ಸಮಂತಾದಾಕೀರ್ಣಂ ಮಕರೈರಿವ ಸಾಗರಮ್ ॥

ಅನುವಾದ

(ಬಳಿಕ ಭರತನು ಶತ್ರುಘ್ನನಲ್ಲಿ ಹೇಳಿದನು-) ಶತ್ರುಘ್ನನೇ! ನೋಡು ಈ ಪರ್ವತದ ತಪ್ಪಲುಗಳಲ್ಲಿ ಕಿನ್ನರರು ಸಂಚರಿಸುತ್ತಿರುವರು. ಅದೇ ಪ್ರದೇಶವನ್ನು ನಮ್ಮ ಸೈನ್ಯದ ಕುದುರೆಗಳಿಂದ ವ್ಯಾಪ್ತವಾಗಿ ಮೊಸಳೆಗಳಿಂದ ತುಂಬಿದ ಸಮುದ್ರದಂತೆ ಕಂಡುಬರುತ್ತಿದೆ.॥11॥

ಮೂಲಮ್ - 12

ಏತೇ ಮೃಗಗಣಾ ಭಾಂತಿ ಶೀಘ್ರವೇಗಾಃ ಪ್ರಚೋದಿತಾಃ ।
ವಾಯುಪ್ರವಿದ್ಧಾಃ ಶರದಿ ಮೇಘಜಾಲಾ ಇವಾಂಬರೇ ॥

ಅನುವಾದ

ಶರತ್ಕಾಲದ ಆಕಾಶದಲ್ಲಿ ಗಾಳಿಯು ಹಾರಿಸಿಕೊಂಡು ಹೋಗುವ ಮೇಘಗಳ ಸಮೂಹದಂತೆ ಸೈನಿಕರು ಓಡಿಸುವ ಮೃಗಗಳ ಗುಂಪುಗಳು ತೀವ್ರವೇಗದಿಂದ ಓಡುತ್ತಿರುವಾಗ ಶೋಭಿಸುತ್ತಿವೆ.॥12॥

ಮೂಲಮ್ - 13

ಕುರ್ವಂತಿ ಕುಸುಮಾಪೀಡಾನ್ ಶಿರಸ್ಸು ಸುರಭೀನಮೀ ।
ಮೇಘಪ್ರಕಾಶೈಃ ಫಲಕೈರ್ದಾಕ್ಷಿಣಾತ್ಯಾ ನರಾ ಯಥಾ ॥

ಅನುವಾದ

ಮೋಡಗಳಂತೆ ಹೊಳೆಯುವ ಪುಷ್ಪಗುಚ್ಛಗಳನ್ನು ತಲೆಯಲ್ಲಿ ಹೊತ್ತ ಈ ವೃಕ್ಷಗಳು, ತಲೆಗಳಲ್ಲಿ ಫಲಕ (ದುಂಡಾದ) ಗಳಂತೆ ಕಾಣುವ ಹೆರಳುಗಳನ್ನು ಹೂವಿನ ದಂಡೆಗಳಿಂದ ಅಲಂಕರಿಸಿಕೊಂಡಿರುವ ದಕ್ಷಿಣ ದೇಶದ ಹೆಂಗಸರಂತೆ ಕಾಣುತ್ತಿವೆ.॥13॥

ಮೂಲಮ್ - 14

ನಿಷ್ಕೂಜಮಿವ ಭೂತ್ವೇದಂ ವನಂ ಘೋರಪ್ರದರ್ಶನಮ್ ।
ಅಯೋಧ್ಯೇವ ಜನಾಕೀರ್ಣಾ ಸಂಪ್ರತಿ ಪ್ರತಿಭಾತಿ ಮೇ ॥

ಅನುವಾದ

ಮೊದಲು ಈ ವನವು ನಿಶ್ಶಬ್ದವಾದ ಕಾರಣ ಅತ್ಯಂತ ಭಯಂಕರವಾಗಿ ಕಾಣುತ್ತಿತ್ತು, ಆದರೆ ಅದೇ ವನವು ಈಗ ನಮ್ಮ ಜೊತೆಗೆ ಬಂದಿರುವ ಜನರಿಂದ ವ್ಯಾಪ್ತವಾಗಿ ನನಗೆ ಅಯೋಧ್ಯೆಯಂತೆ ಕಂಡುಬರುತ್ತಿದೆ.॥14॥

ಮೂಲಮ್ - 15

ಖುರೈರುದೀರಿತೋ ರೇಣುರ್ದಿವಂ ಪ್ರಚ್ಛಾದ್ಯ ತಿಷ್ಠತಿ ।
ತಂ ವಹತ್ಯನಿಲಃ ಶೀಘ್ರಂ ಕುರ್ವನ್ನಿವ ಮಮ ಪ್ರಿಯಮ್ ॥

ಅನುವಾದ

ಕುದುರೆಗಳ ಖುರಪುಟಗಳಿಂದ ಎದ್ದಿರುವ ಧೂಳು ಆಕಾಶವನ್ನು ಮುಚ್ಚಿಬಿಡುತ್ತಿದೆ, ಆದರೆ ಅದನ್ನು ಗಾಳಿಯು ನನಗೆ ಪ್ರಿಯವನ್ನುಂಟು ಮಾಡುತ್ತಾ ಅದನ್ನು ಶೀಘ್ರವಾಗಿ ಬೇರೆಡೆಗೆ ಹಾರಿಸಿಕೊಂಡು ಹೋಗುತ್ತಿದೆ.॥15॥

ಮೂಲಮ್ - 16

ಸ್ಯಂದನಾಂಸ್ತುರಗೋಪೇತಾನ್ ಸೂತಮುಖ್ಯೈರಧಿಷ್ಠಿತಾನ್ ।
ಏತಾನ್ಸಂಪತತಃ ಶೀಘ್ರಂ ಪಶ್ಯ ಶತ್ರುಘ್ನ ಕಾನನೇ ॥

ಅನುವಾದ

ಶತ್ರುಘ್ನ! ನೋಡು, ಈ ವನದಲ್ಲಿ ಕುದುರೆಗಳು ಹೂಡಿದ, ಶ್ರೇಷ್ಠ ಸಾರಥಿಗಳಿಂದ ನಡೆಸುತ್ತಿದ್ದ ಈ ರಥಗಳು ಎಷ್ಟು ವೇಗವಾಗಿ ಮುಂದುವರಿಯುತ್ತಿವೆ.॥16॥

ಮೂಲಮ್ - 17

ಏತಾನ್ ವಿತ್ರಾಸಿತಾನ್ ಪಶ್ಯ ಬರ್ಹಿಣಃ ಪ್ರಿಯದರ್ಶನಾನ್ ।
ಏವಮಾಪತತಃ ಶೈಲಮಧಿವಾಸಂ ಪತತ್ರಿಣಃ ॥

ಅನುವಾದ

ನೋಡಲು ಪ್ರಿಯವಾಗಿರುವ ಈ ನವಿಲುಗಳನ್ನು ನೋಡು, ಇವು ನಮ್ಮ ಸೈನಿಕರ ಭಯದಿಂದ ಎಷ್ಟು ಅಂಜಿಕೊಂಡಿವೆ. ಹೀಗೆಯೇ ತಮ್ಮ ವಾಸಸ್ಥಾನವಾದ ಪರ್ವತದ ಕಡೆಗೆ ಹಾರಿಹೋಗುವ ಇತರ ಪಕ್ಷಿಗಳನ್ನು ನೋಡು.॥17॥

ಮೂಲಮ್ - 18

ಅತಿಮಾತ್ರಮಯಂ ದೇಶೋ ಮನೋಜ್ಞಃ ಪ್ರತಿಭಾತಿ ಮೇ ।
ತಾಪಸಾನಾಂ ನಿವಾಸೋಽಯಂ ವ್ಯಕ್ತಂ ಸ್ವರ್ಗಪಥೋಽನಘ ॥

ಅನುವಾದ

ನಿಷ್ಪಾಪ ಶತ್ರುಘ್ನನೇ! ಈ ದೇಶವು ನನಗೆ ಬಹಳ ಮನೋಹರವಾಗಿ ಕಂಡು ಬರುತ್ತಿದೆ. ತಪಸ್ವಿಗಳ ನಿವಾಸಸ್ಥಾನವಾದ ಇದು ನಿಜವಾಗಿ ಸ್ವರ್ಗೀಯ ಪಥವೇ ಆಗಿದೆ.॥18॥

ಮೂಲಮ್ - 19

ಮೃಗಾ ಮೃಗೀಭಿಃ ಸಹಿತಾ ಬಹವಃ ಪೃಷತಾ ವನೇ ।
ಮನೋಜ್ಞರೂಪಾ ಲಕ್ಷ್ಯಂತೇ ಕುಸುಮೈರಿವ ಚಿತ್ರಿತಾಃ ॥

ಅನುವಾದ

ಈ ವನದಲ್ಲಿ ಹೆಣ್ಣು ಜಿಂಕೆಗಳೊಂದಿಗೆ ಸಂಚರಿಸುವ ಅನೇಕ ಚುಕ್ಕೆಗಳಿದ್ದ ಜಿಂಕೆಗಳು ಹೂವುಗಳಿಂದ ಅಲಂಕರಿಸಿ ಚಿತ್ರಿತವಾಗಿಸಿದಂತೆ ಮನೋಹರವಾಗಿ ಕಂಡು ಬರುತ್ತಿವೆ.॥19॥

ಮೂಲಮ್ - 20

ಸಾಧು ಸೈನ್ಯಾಃ ಪ್ರತಿಷ್ಠಂತಾಂ ವಿಚಿನ್ವಂತು ಚ ಕಾನನಮ್ ।
ಯಥಾ ತೌ ಪುರುಷವ್ಯಾಘ್ರೌ ದೃಶ್ಯೇತೇ ರಾಮಲಕ್ಷ್ಮಣೌ ॥

ಅನುವಾದ

ನನ್ನ ಸೈನಿಕರು ಯಥೋಚಿತವಾಗಿ ಮುಂದುವರಿದು ಪುರುಷಸಿಂಹ ಶ್ರೀರಾಮಲಕ್ಷ್ಮಣರಿಬ್ಬರೂ ಇರುವ ಆಶ್ರಮವನ್ನು ಕಾಡಿನಲ್ಲೆಲ್ಲ ಹುಡುಕಲಿ.॥20॥

ಮೂಲಮ್ - 21

ಭರತಸ್ಯ ವಚಃ ಶ್ರುತ್ವಾ ಪುರುಷಾಃ ಶಸ್ತ್ರಪಾಣಯಃ ।
ವಿವಿಶುಸ್ತದ್ವನಂ ಶೂರಾ ಧೂಮಾಗ್ರಂ ದದೃಶುಸ್ತುತಃ ॥

ಅನುವಾದ

ಭರತನ ಮಾತನ್ನು ಕೇಳಿ ಅನೇಕ ಶೂರ-ವೀರ ಪುರುಷರು ಕೈಯಲ್ಲಿ ಆಯುಧಗಳನ್ನು ಹಿಡಿದುಕೊಂಡು ಆ ವನವನ್ನು ಪ್ರವೇಶಿಸಿದರು. ಬಳಿಕ ಮುಂದೆ ಹೋದಾಗ ಅವರಿಗೆ ಸ್ವಲ್ಪ ದೂರದಲ್ಲಿ ಮೇಲಕ್ಕೇಳುತ್ತಿದ್ದ ಹೊಗೆಯು ಕಾಣಿಸಿತು.॥21॥

ಮೂಲಮ್ - 22

ತೇ ಸಮಾಲೋಕ್ಯ ಧೂಮಾಗ್ರಮೂಚುರ್ಭರತಮಾಗತಾಃ ।
ನಾಮನುಷ್ಯೇ ಭವತ್ಯಗ್ನಿರ್ವ್ಯಕ್ತಮತ್ರೈವ ರಾಘವೌ ॥

ಅನುವಾದ

ಆ ಧೂಮಶಿಖೆಯನ್ನು ನೋಡಿ ಅವರು ಮರಳಿ ಬಂದು ಭರತನಲ್ಲಿ ಹೇಳಿದರು - ಪ್ರಭೋ! ಮನುಷ್ಯರಿಲ್ಲದ ಕಡೆ ಹೊಗೆ ಇರುವುದಿಲ್ಲ. ಆದ್ದರಿಂದ ಶ್ರೀರಾಮ ಲಕ್ಷ್ಮಣರು ಖಂಡಿತವಾಗಿ ಇಲ್ಲೇ ಇರುವರು.॥22॥

ಮೂಲಮ್ - 23

ಅಥ ನಾತ್ರ ನರವ್ಯಾಘ್ರೌ ರಾಜಪುತ್ರೌ ಪರಂತಪೌ ।
ಅನ್ಯೇ ರಾಮೋಪಮಾಃ ಸಂತಿ ವ್ಯಕ್ತಮತ್ರ ತಪಸ್ವಿನಃ ॥

ಅನುವಾದ

ಪರಂತಪನಾದ ಪುರುಷಸಿಂಹ ರಾಜಕುಮಾರರು ಶ್ರೀರಾಮ-ಲಕ್ಷ್ಮಣರು ಇಲ್ಲಿ ಇಲ್ಲದಿದ್ದರೂ, ಶ್ರೀರಾಮನಂತಹ ತೇಜಸ್ವೀ ಬೇರೆ ಯಾರೋ ತಪಸ್ವಿಗಳು ಅವಶ್ಯವಾಗಿ ಇರುವರು.॥23॥

ಮೂಲಮ್ - 24

ತಚ್ಛ್ರುತ್ವಾ ಭರತಸ್ತೇಷಾಂ ವಚನಂ ಸಾಧುಸಮ್ಮತಮ್ ।
ಸೈನ್ಯಾನುವಾಚ ಸರ್ವಾಂಸ್ತಾನಮಿತ್ರಬಲಮರ್ದನಃ ॥

ಅನುವಾದ

ಶ್ರೇಷ್ಠ ಪುರುಷರು ಒಪ್ಪಿಕೊಳ್ಳುವಂತಹ ಅವರ ಮಾತನ್ನು ಕೇಳಿ ಶತ್ರುಸೈನ್ಯವನ್ನು ಮರ್ದಿಸುವ ಭರತನು ಆ ಸಮಸ್ತ ಸೈನಿಕರಲ್ಲಿ ಹೇಳಿದನು.॥24॥

ಮೂಲಮ್ - 25

ಯತ್ತಾ ಭವಂತಸ್ತಿಷ್ಠಂತು ನೇತೋ ಗಂತವ್ಯಮಗ್ರತಃ ।
ಅಹಮೇವ ಗಮಿಷ್ಯಾಮಿಸುಮಂತ್ರೋ ಧೃತಿರೇವ ಚ ॥

ಅನುವಾದ

ನೀವೆಲ್ಲರೂ ಎಚ್ಚರವಾಗಿ ಇಲ್ಲೇ ಇರಿ. ಇಲ್ಲಿಂದ ಮುಂದೆ ಹೋಗಬೇಡಿ. ಈಗ ನಾನು ಸುಮಂತ್ರ ಮತ್ತು ಧೃತಿಯರೊಂದಿಗೆ ಅಲ್ಲಿಗೆ ಹೋಗುವೆನು.॥25॥

ಮೂಲಮ್ - 26

ಏವಮುಕ್ತಾಸ್ತತಃ ಸೈನ್ಯಾಸ್ತತ್ರ ತಸ್ಥುಃ ಸಮಂತತಃ ।
ಭರತೋ ಯತ್ರ ಧೂಮಾಗ್ರಂ ತತ್ರ ದೃಷ್ಟಿಂಸಮಾದಧತ್ ॥

ಅನುವಾದ

ಅವನ ಆಜ್ಞೆಯನ್ನು ಪಡೆದು ಸಮಸ್ತ ಸೈನಿಕರು ಅಲ್ಲೇ ಎಲ್ಲೆಡೆ ಹರಡಿಕೊಂಡು ನಿಂತುಬಿಟ್ಟರು. ಭರತನು ಹೊಗೆ ಏಳುತ್ತಿರುವ ಕಡೆ ತನ್ನ ದೃಷ್ಟಿಯನ್ನು ಸ್ಥಿರಗೊಳಿಸಿದನು.॥26॥

ಮೂಲಮ್ - 27

ವ್ಯವಸ್ಥಿತಾ ಯಾ ಭರತೇನ ಸಾ ಚಮೂ -
ರ್ನಿರೀಕ್ಷಮಾಣಾಪಿ ಚ ಭೂಮಿಮಗ್ರತಃ ।
ಬಭೂವ ಹೃಷ್ಟಾ ನಚಿರೇಣ ಜಾನತೀ
ಪ್ರಿಯಸ್ಯ ರಾಮಸ್ಯ ಸಮಾಗಮಂ ತದಾ ॥

ಅನುವಾದ

ಭರತನಿಂದ ನಿಲ್ಲಿಸಲ್ಪಟ್ಟ ಆ ಸೈನ್ಯವು ಮುಂದಿನ ಜಾಗವನ್ನು ನಿರೀಕ್ಷಿಸುತ್ತಾ ಅಲ್ಲೇ ಹರ್ಷದಿಂದ ನಿಂತುಕೊಂಡಿತು. ಏಕೆಂದರೆ ಈಗ ಶೀಘ್ರವಾಗಿಯೇ ಶ್ರೀರಾಮಚಂದ್ರನನ್ನು ದರ್ಶಿಸುವ ಅವಕಾಶ ಬರುವುದು ಎಂದು ಅವರು ತಿಳಿದುಕೊಂಡರು.॥27॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ತೊಂಭತ್ತಮೂರನೆಯ ಸರ್ಗ ಪೂರ್ಣವಾಯಿತು.॥93॥