वाचनम्
ಭಾಗಸೂಚನಾ
ಭರತನು ಶ್ರೀರಾಮನ ಬಳಿಗೆ ಹೋಗಲು ಭರದ್ವಾಜರ ಅನುಮತಿ ಪಡೆದು ಮುನಿಗಳಿಗೆ ತನ್ನ ತಾಯಂದಿರನ್ನು ಪರಿಚಯಿಸಿದುದು, ಸೈನ್ಯ ಸಮೇತನಾಗಿ ಚಿತ್ರಕೂಟ ಪರ್ವತಕ್ಕೆ ಭರತನ ಪ್ರಯಾಣ
ಮೂಲಮ್ - 1
ತತಸ್ತಾಂ ರಜನೀಂ ವ್ಯಷ್ಯ ಭರತಃ ಸಪರಿಚ್ಛದಃ ।
ಕೃತಾತಿಥ್ಯೋ ಭರದ್ವಾಜಂ ಕಾಮಾದಭಿಜಗಾಮ ಹ ॥
ಅನುವಾದ
ಹೀಗೆ ಭರದ್ವಾಜರಿಂದ ಸತ್ಕೃತನಾದ ಭರತನು ಪರಿವಾರ ಸಮೇತನಾಗಿ ಆ ರಾತ್ರಿಯನ್ನು ಕಳೆದು ಬೆಳಗಾಗುತ್ತಲೇ ಶ್ರೀರಾಮನನ್ನು ಕಾಣಬೇಕೆಂಬ ಕಾಮನೆಯಿಂದ ಭರದ್ವಾಜರ ಬಳಿಗೆ ಬಂದನು.॥1॥
ಮೂಲಮ್ - 2
ತಮೃಷಿಃ ಪುರುಷವ್ಯಾಘ್ರಂ ಪ್ರೇಕ್ಷ್ಯ ಪ್ರಾಂಜಲಿ ಮಾಗತಮ್ ।
ಹುತಾಗ್ನಿಹೋತ್ರೋ ಭರತಂ ಭರದ್ವಾಜೋಽಭ್ಯಭಾಷತ ॥
ಅನುವಾದ
ಪುರುಷಸಿಂಹ ಭರತನು ಕೈಮುಗಿದುಕೊಂಡು ತನ್ನ ಬಳಿಗೆ ಬಂದಿರುವುದನ್ನು ನೋಡಿ ಭರದ್ವಾಜರು ಅಗ್ನಿಹೋತ್ರದ ಕಾರ್ಯವನ್ನು ಮುಗಿಸಿ ಕೇಳಿದರು.॥2॥
ಮೂಲಮ್ - 3
ಕಚ್ಚಿದತ್ರ ಸುಖಾ ರಾತ್ರಿಸ್ತವಾಸ್ಮದ್ವಿಷಯೇ ಗತಾ ।
ಸಮಗ್ರಸ್ತೇ ಜನಃ ಕಚ್ಚಿದಾತಿಥ್ಯೇ ಶಂಸ ಮೇಽನಘ ॥
ಅನುವಾದ
ನಿಷ್ಪಾಪ ಭರತನೇ! ನಮ್ಮ ಈ ಆಶ್ರಮದಲ್ಲಿ ನಿನ್ನ ಈ ರಾತ್ರಿಯು ಸುಖವಾಗಿ ಕಳೆಯಿತಲ್ಲ? ನಿನ್ನೊಂದಿಗೆ ಬಂದಿರುವ ಎಲ್ಲ ಜನರು ಈ ಆತಿಥ್ಯದಿಂದ ಸಂತುಷ್ಟರಾಗಿರುವಲ್ಲ? ಇದನ್ನು ತಿಳಿಸು.॥3॥
ಮೂಲಮ್ - 4
ತಮುವಾಚಾಂಜಲಿಂ ಕೃತ್ವಾ ಭರತೋಽಭಿಪ್ರಣಮ್ಯ ಚ ।
ಆಶ್ರಮಾದುಪನಿಷ್ಕ್ರಾಂತಮೃಷಿಮುತ್ತಮತೇಜಸಮ್ ॥
ಅನುವಾದ
ಆಗ ಆಶ್ರಮದಿಂದ ಹೊರಗೆ ಬಂದ ಉತ್ತಮ ತೇಜಸ್ವೀ ಮಹರ್ಷಿಗಳಿಗೆ ಭರತನು ವಂದಿಸಿ ಕೈಮುಗಿದುಕೊಂಡು ಅವರಲ್ಲಿ ಹೇಳಿದನು.॥4॥
ಮೂಲಮ್ - 5
ಸುಖೋಷಿತೋಽಸ್ಮಿ ಭಗವನ್ ಸಮಗ್ರಬಲವಾಹನಃ ।
ಬಲವತ್ತರ್ಪಿತಶ್ಚಾಹಂ ಬಲವಾನ್ ಭಗವಂಸ್ತ್ವಯಾ ॥
ಅನುವಾದ
ಪೂಜ್ಯರೇ! ಸಂಪೂರ್ಣ ಸೈನ್ಯ ಮತ್ತು ವಾಹನಗಳೊಂದಿಗೆ ನಾನು ಇಲ್ಲಿ ಸುಖವಾಗಿ ಇದ್ದೆ ಹಾಗೂ ಸೈನಿಕರ ಸಹಿತ ನನಗೆ ಪೂರ್ಣವಾಗಿ ತೃಪ್ತಿಯಾಗಿದೆ.॥5॥
ಮೂಲಮ್ - 6
ಅಪೇತಕ್ಲಮಸಂತಾಪಾಃ ಸುಭಿಕ್ಷಾಃ ಸುಪ್ರತಿಶ್ರಯಾಃ ।
ಅಪಿ ಪ್ರೇಷ್ಯಾನುಪಾದಾಯ ಸರ್ವೇ ಸ್ಮ ಸುಸುಖೋಷಿತಾಃ ॥
ಅನುವಾದ
ಸೇವಕರ ಸಹಿತ ನಾವೆಲ್ಲರೂ ಗ್ಲಾನಿ ಮತ್ತು ಸಂತಾಪರಹಿತರಾಗಿ, ಉತ್ತಮ ಅನ್ನ-ಪಾನಾದಿಗಳನ್ನು ಸೇವಿಸಿ, ಸುಂದರ ಗೃಹಗಳಲ್ಲಿ ತಂಗಿ ಬಹಳ ಸುಖವಾಗಿ ರಾತ್ರಿಯನ್ನು ಕಳೆದಿದ್ದೇವೆ.॥6॥
ಮೂಲಮ್ - 7
ಅಮಂತ್ರಯೇಽಹಂ ಭಗವನ್ಕಾಮಂ ತ್ವಾಮೃಷಿಸತ್ತಮ ।
ಸಮೀಪಂ ಪ್ರಸ್ಥಿತಂಭ್ರಾತುರ್ಮೈತ್ರೇಣೇಕ್ಷಸ್ವ ಚಕ್ಷುಷಾ ॥
ಅನುವಾದ
ಪೂಜ್ಯರಾದ ಮುನಿಶ್ರೇಷ್ಠರೇ! ಈಗ ನಾನು ತಮ್ಮ ಅಪ್ಪಣೆಯನ್ನು ಪಡೆಯಲು ಬಂದಿರುವೆನು ಹಾಗೂ ನನ್ನಣ್ಣನ ಬಳಿಗೆ ಹೋಗುವವನಿದ್ದೇನೆ. ತಾವು ಸ್ನೇಹಪೂರ್ಣ ದೃಷ್ಟಿಯು ನನ್ನ ಮೇಲಿಡಿರಿ.॥7॥
ಮೂಲಮ್ - 8
ಆಶ್ರಮಂ ತಸ್ಯ ಧರ್ಮಜ್ಞ ಧಾರ್ಮಿಕಸ್ಯ ಮಹಾತ್ಮನಃ ।
ಆಚಕ್ಷ್ವ ಕತಮೋ ಮಾರ್ಗಃ ಕಿಯಾನಿತಿ ಚ ಶಂಸ ಮೇ ॥
ಅನುವಾದ
ಧರ್ಮಜ್ಞ ಮುನೀಶ್ವರರೇ! ಧರ್ಮಪರಾಯಣ ಮಹಾತ್ಮಾ ಶ್ರೀರಾಮನ ಆಶ್ರಮ ಎಲ್ಲಿದೆ? ಎಷ್ಟು ದೂರವಿದೆ? ಅಲ್ಲಿಗೆ ಹೋಗಲು ದಾರಿ ಯಾವುದು? ಇದನ್ನು ನನಗೆ ಸ್ಪಷ್ಟವಾಗಿ ವರ್ಣಿಸಿರಿ.॥8॥
ಮೂಲಮ್ - 9
ಇತಿ ಪೃಷ್ಟಸ್ತು ಭರತಂ ಭ್ರಾತುರ್ದರ್ಶನಲಾಲಸಮ್ ।
ಪ್ರತ್ಯುವಾಚ ಮಹಾತೇಜಾ ಭರದ್ವಾಜೋ ಮಹಾತಪಾಃ ॥
ಅನುವಾದ
ಭರತನು ಹೀಗೆ ಕೇಳಿದಾಗ ಮಹಾತಪಸ್ವೀ, ಭರದ್ವಾಜ ಮುನಿಗಳು ಅಣ್ಣನ ದರ್ಶನದ ಲಾಲಸೆಯುಳ್ಳ ಅವನಲ್ಲಿ ಈ ಪ್ರಕಾರ ಹೇಳಿದರು.॥9॥
ಮೂಲಮ್ - 10
ಭರತಾರ್ಧತೃತೀಯೇಷು ಯೋಜನೇಷ್ವಜನೇ ವನೇ ।
ಚಿತ್ರಕೂಟಗಿರಿಸ್ತತ್ರ ರಮ್ಯನಿರ್ಝರಕಾನನಃ ॥
ಅನುವಾದ
ಭರತನೇ! ಇಲ್ಲಿಂದ ಸುಮಾರು ಎರಡೂವರೆ ಯೋಜನೆಗಳ ದೂರದಲ್ಲಿ ನಿರ್ಜನ ಅರಣ್ಯದಲ್ಲಿ ರಮ್ಯವಾದ ಗುಹೆಗಳಿಂದ, ಜಲಪಾತಗಳಿಂದ ಕೂಡಿದ ಚಿತ್ರಕೂಟ ಎಂಬ ಪರ್ವತವಿದೆ.॥10॥
ಮೂಲಮ್ - 11
ಉತ್ತರಂ ಪಾರ್ಶ್ವಮಾಸಾದ್ಯ ತಸ್ಯ ಮಂದಾಕಿನೀ ನದೀ ।
ಪುಷ್ಪಿತದ್ರುಮಸಂಛನ್ನಾ ರಮ್ಯಪುಷ್ಪಿತಕಾನನಾ ॥
ಮೂಲಮ್ - 12
ಅನಂತರಂ ತತ್ಸರಿತಶ್ಚಿತ್ರಕೂಟಂ ಚ ಪರ್ವತಮ್ ।
ತಯೋಃ ಪರ್ಣಕುಟೀಂ ತಾತ ತತ್ರ ತೌ ವಸತೋ ಧ್ರುವಮ್ ॥
ಅನುವಾದ
ಪರ್ವತದ ಉತ್ತರಕ್ಕೆ ಮಂದಾಕಿನೀ ನದಿ ಹರಿಯುತ್ತಿದೆ, ಅದು ಹೂವುಗಳಿಂದ ತುಂಬಿದ ವೃಕ್ಷಗಳಿಂದ ಆವೃತವಾಗಿದೆ. ಅದರ ಸುತ್ತಮುತ್ತಲಿನ ವನವು ಬಹಳ ರಮಣೀಯವಾಗಿದ್ದು, ನಾನಾ ಪ್ರಕಾರದ ಪುಷ್ಪಗಳಿಂದ ಸುಶೋಭಿತವಾಗಿದೆ. ಆ ನದಿಯ ಆಚೆಗೆ ಚಿತ್ರಕೂಟ ಪರ್ವತವಿದೆ. ಅಯ್ಯಾ! ಅಲ್ಲಿಗೆ ಹೋಗಿ ನೀನು ನದೀ ಮತ್ತು ಪರ್ವತದ ನಡುವೆ ಶ್ರೀರಾಮನ ಪರ್ಣಕುಟಿ ನೋಡುವೆ. ಶ್ರೀರಾಮ-ಲಕ್ಷ್ಮಣರು ನಿಶ್ಚಯವಾಗಿ ಅದರಲ್ಲೇ ವಾಸಿಸುತ್ತಿದ್ದಾರೆ.॥11-12॥
ಮೂಲಮ್ - 13½
ದಕ್ಷಿಣೇನ ಚ ಮಾರ್ಗೇಣ ಸವ್ಯದಕ್ಷಿಣಮೇವ ಚ ।
ಗಜವಾಜಿಸಮಾಕೀರ್ಣಾಂ ವಾಹಿನೀಂ ವಾಹಿನೀಪತೇ ॥
ವಾಹಯಸ್ವ ಮಹಾಭಾಗ ತತೋ ದ್ರಕ್ಷ್ಯಸಿರಾಘವಮ್ ।
ಅನುವಾದ
ಸೇನಾಪತಿಯೇ! ನೀನು ಇಲ್ಲಿಂದ ಆನೆ-ಕುದುರೆಗಳಿಂದ ಕೂಡಿದ ತನ್ನ ಸೈನ್ಯವನ್ನು ಕರೆದುಕೊಂಡು ಮೊದಲಿಗೆ ಯಮುನೆಯ ದಕ್ಷಿಣ ತೀರವಾಗಿ ಹೋಗುವ ಮಾರ್ಗದಿಂದ ಹೋಗು. ಮುಂದೆ ಹೋದಾಗ ಎರಡು ದಾರಿಗಳು ಸಿಗುವುವು, ಅದರಲ್ಲಿ ಎಡದ ದಾರಿಯನ್ನು ಬಿಟ್ಟು ದಕ್ಷಿಣ ದಿಕ್ಕಿಗೆ ಹೋಗಿರುವ ದಾರಿಯಿಂದ ಸೈನ್ಯವನ್ನು ಕರೆದುಕೊಂಡು ಹೋಗು. ಮಹಾಭಾಗ! ಆ ಮಾರ್ಗವಾಗಿ ನಡೆದು ನೀನು ಶೀಘ್ರವಾಗಿ ಶ್ರೀರಾಮನ ದರ್ಶನವನ್ನು ಪಡೆಯುವೆ.॥13॥
ಮೂಲಮ್ - 14½
ಪ್ರಯಾಣಮಿತಿ ಚ ಶ್ರುತ್ವಾ ರಾಜರಾಜಸ್ಯ ಯೋಷಿತಃ ॥
ಹಿತ್ವಾ ಯಾನಾನಿ ಯಾನಾರ್ಹಾ ಬ್ರಾಹ್ಮಣಂ ಪರ್ಯವಾರಯನ್ ।
ಅನುವಾದ
ಈಗ ಇಲ್ಲಿಂದ ಪ್ರಯಾಣ ಮಾಡುವುದಿದೆ. ಇದನ್ನು ಕೇಳಿ ದಶರಥ ಮಹಾರಾಜರ ಪತ್ನಿಯರು ವಾಹನಗಳನ್ನು ಬಿಟ್ಟು ಬ್ರಹ್ಮರ್ಷಿ ಭರದ್ವಾಜರಿಗೆ ನಮಸ್ಕರಿಸಲು ಅವರ ಸುತ್ತಲೂ ನೆರೆದು ನಿಂತುಕೊಂಡರು.॥14॥
ಮೂಲಮ್ - 15½
ವೇಪಮಾನಾ ಕೃಶಾ ದೀನಾ ಸಹ ದೇವ್ಯಾ ಸುಮಿತ್ರಯಾ ॥
ಕೌಸಲ್ಯಾ ತತ್ರ ಜಗ್ರಾಹ ಕರಾಭ್ಯಾಂ ಚರಣೌ ಮುನೇಃ ।
ಅನುವಾದ
ಉಪವಾಸದ ಕಾರಣ ಅತ್ಯಂತ ದುರ್ಬಲ ಹಾಗೂ ದೀನಳಾದ ದೇವೀ ಕೌಸಲ್ಯೆಯು ನಡುಗುತ್ತಾ ಸುಮಿತ್ರಾ ದೇವಿಯೊಂದಿಗೆ ಭರದ್ವಾಜ ಮುನಿಗಳ ಚರಣಗಳನ್ನು ಹಿಡಿದುಕೊಂಡಳು.॥15॥
ಮೂಲಮ್ - 16
ಅಸಮೃದ್ಧೇನ ಕಾಮೇನ ಸರ್ವಲೋಕಸ್ಯ ಗರ್ಹಿತಾ ॥
ಮೂಲಮ್ - 17½
ಕೈಕೇಯೀ ತಸ್ಯ ಜಗ್ರಾಹ ಚರಣೌ ಸವ್ಯಪತ್ರಪಾ ।
ತಂ ಪ್ರದಕ್ಷಿಣಮಾಗಮ್ಯ ಭಗವಂತಂ ಮಹಾಮುನಿಮ್ ॥
ಅದೂರಾದ್ಭರತಸ್ಯೈವ ತಸ್ಥೌ ದೀನಮನಾಸ್ತದಾ ।
ಅನುವಾದ
ಅನಂತರ ಅಸಲ ಮನೋರಥಳಾದ, ಎಲ್ಲ ಜನರಿಂದ ನಿಂದಿತಳಾದ ಕೈಕೇಯಿಯು ಲಜ್ಜಿತಳಾಗಿ ಮುನಿಯ ಚರಣಗಳನ್ನು ಸ್ಪರ್ಶಿಸಿದಳು ಹಾಗೂ ಆ ಮಹಾ ಮುನಿ ಭಗವಾನ್ ಭರದ್ವಾಜರಿಗೆ ಪ್ರದಕ್ಷಿಣೆ ಮಾಡಿ ಅವಳು ದೀನಚಿತ್ತಳಾಗಿ ಭರತನ ಬಳಿ ಬಂದು ನಿಂತುಕೊಂಡಳು.॥16-17½॥
ಮೂಲಮ್ - 18½
ತತ್ರ ಪಪ್ರಚ್ಛ ಭರತಂ ಭರದ್ವಾಜೋ ಮಹಾಮುನಿಃ ॥
ವಿಶೇಷಂ ಜ್ಞಾತುಮಿಚ್ಛಾಮಿ ಮಾತೄಣಾಂ ತವರಾಘವ ।
ಅನುವಾದ
ಆಗ ಮಹಾಮುನಿ ಭರದ್ವಾಜರು ಭರತನಲ್ಲಿ ಕೇಳಿದರು - ರಘುನಂದನ! ನಿನ್ನ ಈ ತಾಯಂದಿರ ವಿಶೇಷ ಪರಿಚಯ ಮಾಡಿಕೊಡು, ಇದನ್ನು ತಿಳಿಯಲು ನಾನು ಬಯಸುತ್ತೇನೆ.॥18½॥
ಮೂಲಮ್ - 19½
ಏವಮುಕ್ತಸ್ತು ಭರತೋ ಭರದ್ವಾಜೇನ ಧಾರ್ಮಿಕಃ ॥
ಉವಾಚ ಪ್ರಾಂಜಲಿರ್ಭೂತ್ವಾ ವಾಕ್ಯಂ ವಚನಕೋವಿದಃ ।
ಅನುವಾದ
ಭರದ್ವಾಜರು ಹೀಗೆ ಹೇಳಿದಾಗ ಮಾತಿನಲ್ಲಿ ಕುಶಲಿಯಾದ ಧರ್ಮಾತ್ಮಾ ಭರತನು ಕೈಮುಗಿದು ಇಂತೆಂದನು.॥19½॥
ಮೂಲಮ್ - 20
ಯಾಮಿಮಾಂ ಭಗವನ್ ದೀನಾಂ ಶೋಕಾನಶನಕರ್ಶಿತಾಮ್ ॥
ಮೂಲಮ್ - 21½
ಪಿತುರ್ಹಿ ಮಹಿಷೀಂ ದೇವೀಂದೇವತಾಮಿವ ಪಶ್ಯಸಿ ।
ಏಷಾಂ ತಂ ಪುರುಷವ್ಯಾಘ್ರಂ ಸಿಂಹವಿಕ್ರಾಂತಗಾಮಿನಮ್ ॥
ಕೌಸಲ್ಯಾ ಸುಷುವೇ ರಾಮಂ ಧಾತಾರಮದಿತಿರ್ಯಥಾ ।
ಅನುವಾದ
ಪೂಜ್ಯರೇ! ಶೋಕ ಮತ್ತು ಉಪವಾಸದಿಂದಾಗಿ ಅತ್ಯಂತ ದುರ್ಬಲ ಹಾಗೂ ದುಃಖಿಯಾಗಿ, ದೇವಿಯಂತೆ ಕಂಡು ಬರುವವಳು ನನ್ನ ತಂದೆಯವರ ಎಲ್ಲರಿಗಿಂತ ಹಿರಿಯ ಮಹಾರಾಣಿ ಕೌಸಲ್ಯೆಯಾಗಿರುವಳು. ಅದಿತಿಯು ಧಾತಾ ಎಂಬ ಆದಿತ್ಯನನ್ನು ಉತ್ಪನ್ನಮಾಡಿದಂತೆ ಈ ಕೌಸಲ್ಯಾದೇವಿಯು ಸಿಂಹದಂತೆ ಪರಾಕ್ರಮ ಸೂಚಕ ಗತಿಯಿಂದ ನಡೆಯುವ ಪುರುಷಸಿಂಹ ಶ್ರೀರಾಮನಿಗೆ ಜನ್ಮನೀಡಿರುವಳು.॥20-21½॥
ಮೂಲಮ್ - 22
ಅಸ್ಯಾ ವಾಮಭುಜಂ ಶ್ಲಿಷ್ಟಾ ಯಾ ಸಾ ತಿಷ್ಠತಿ ದುರ್ಮನಾಃ ॥
ಮೂಲಮ್ - 23
ಇಯಂ ಸುಮಿತ್ರಾ ದುರ್ಖಾರ್ತಾ ದೇವೀ ರಾಜ್ಞಶ್ಚ ಮಧ್ಯಮಾ ।
ಕರ್ಣಿಕಾರಸ್ಯ ಶಾಖೇವ ಶೀರ್ಣಪುಷ್ಪಾ ವನಾಂತರೇ ॥
ಮೂಲಮ್ - 24
ಏತಸ್ಯಾಸ್ತೌ ಸುತೌ ದೇವ್ಯಾಃ ಕುಮಾರೌ ದೇವವರ್ಣಿನೌ ।
ಉಭೌ ಲಕ್ಷ್ಮಣಶತ್ರುಘ್ನೌ ವೀರೌ ಸತ್ಯಪರಾಕ್ರಮೌ ॥
ಅನುವಾದ
ಈಕೆಯ ಬಲ ಭುಜವನ್ನು ಅಂಟಿಕೊಂಡು ಉದಾಸವಾಗಿ ನಿಂತಿರುವ ಇವರು-ದುಃಖದಿಂದ ಆತುರಳಾಗಿ, ಆಭೂಷಣ ಶೂನ್ಯಳಾಗಿರುವುದರಿಂದ ಕಾಡಿನಲ್ಲಿರುವ ಹೂವುಗಳಿಂದ ಕರ್ಣಿಕಾರ ವೃಕ್ಷದ ರೆಂಬೆಯಂತಿರುವ, ಮಹಾರಾಜರ ಎರಡನೆಯ ಪತ್ನಿಯರಾದ ಸುಮಿತ್ರಾದೇವಿಯವರಾಗಿದ್ದಾರೆ. ಸತ್ಯ ಪರಾಕ್ರಮಿ ವೀರರೂ, ದೇವತೆಗಳಂತೆ ಕಾಂತಿಯುಳ್ಳ ರಾಜಕುಮಾರ ಲಕ್ಷ್ಮಣ-ಶತ್ರುಘ್ನ ಇಬ್ಬರೂ ಇದೇ ಸುಮಿತ್ರಾದೇವಿಯ ಪುತ್ರರು.॥22-24॥
ಮೂಲಮ್ - 25
ಯಸ್ಯಾಃ ಕೃತೇ ನರವ್ಯಾಘ್ರೌ ಜೀವನಾಶಮಿತೋ ಗತೌ ।
ರಾಜಾ ಪುತ್ರವಿಹೀನಶ್ಚ ಸ್ವರ್ಗಂ ದಶರಥೋ ಗತಃ ॥
ಮೂಲಮ್ - 25
ಕ್ರೋಧನಾಮಕೃತಪ್ರಜ್ಞಾಂ ದೃಪ್ತಾಂಸುಭಗಮಾನಿನೀಮ್ ।
ಐಶ್ವರ್ಯಕಾಮಾಂ ಕೈಕೇಯೀಮನಾರ್ಯಾಮಾರ್ಯರೂಪಿಣೀಮ್ ॥
ಮೂಲಮ್ - 27
ಮಮೈತಾಂ ಮಾತರಂ ವಿದ್ಧಿ ನೃಶಂಸಾಂ ಪಾಪನಿಶ್ಚಯಾಮ್ ।
ಯತೋಮೂಲಂ ಹಿ ಪಶ್ಯಾಮಿ ವ್ಯಸನಂ ಮಹದಾತ್ಮನಃ ॥
ಅನುವಾದ
ಯಾರ ಕಾರಣದಿಂದ ಪುರುಷಸಿಂಹ ಶ್ರೀರಾಮ ಮತ್ತು ಲಕ್ಷ್ಮಣರು ಜೀವನಾಶಕವಾದ ಘೋರಾರಣ್ಯಕ್ಕೆ ಹೋಗ ಬೇಕಾಯಿತೋ ಮತ್ತು ದಶರಥರಾಜರು ಪುತ್ರವಿಯೋಗ ಶೋಕದಿಂದಲೇ ಸ್ವರ್ಗವಾಸಿಗಳಾದರೋ, ಯಾರು ಸ್ವಭಾವದಿಂದಲೇ ಕ್ರೋಧವುಳ್ಳವಳೋ, ಅಶಿಕ್ಷಿತ ಬುದ್ಧಿಯುಳ್ಳ, ಗರ್ವಿಷ್ಠೆಯಾದ, ತನ್ನನ್ನು ಅತಿ ಸುಂದರಿ ಎಂದು ತಿಳಿದಿರುವಳೋ, ರಾಜ್ಯಲೋಭಿಯಾದ, ನೋಡಲು ಆರ್ಯೆಯಂತಿದ್ದರೂ ವಾಸ್ತವವಾಗಿ ಅನಾರ್ಯಳಾಗಿರುವಳೋ ಅಂತಹ ಈ ಕೈಕೇಯಿಯು ನನ್ನ ತಾಯಿ ಎಂದು ತಿಳಿಯಿರಿ. ನಮ್ಮ ಮೇಲೆ ಬಂದೆರಗಿದ ಈ ಮಹಾಸಂಕಟಕ್ಕೆ ಮೂಲಕಾರಣ ಈಕೆಯೇ ಎಂದು ನಾನು ನೋಡುತ್ತಿದ್ದೇನೆ.॥25-27॥
ಮೂಲಮ್ - 28
ಇತ್ಯುಕ್ತ್ವಾ ನರಶಾರ್ದೂಲೋ ಬಾಷ್ಪಗದ್ಗದಯಾ ಗಿರಾ ।
ವಿನಿಃಶ್ವಸ್ಯ ಸ ತಾಮ್ರಾಕ್ಷಃಕ್ರುದ್ಧೋ ನಾಗ ಇವಶ್ವಸನ್ ॥
ಅನುವಾದ
ಅಶ್ರುಗದ್ಗದ ವಾಣಿಯಿಂದ ಹೀಗೆ ಹೇಳಿ ಕಣ್ಣು ಕೆಂಪಾಗಿಸಿಕೊಂಡ ಪುರುಷಸಿಂಹ ಭರತನು ರೋಷಗೊಂಡು ಬುಸುಗುಟ್ಟುವ ಹಾವಿನಂತೆ ದೀರ್ಘವಾಗಿ ನಿಟ್ಟುಸಿರುಬಿಡತೊಡಗಿದನು.॥28॥
ಮೂಲಮ್ - 29
ಭರದ್ವಾಜೋ ಮಹರ್ಷಿಸ್ತಂ ಬ್ರುವಂತಂ ಭರತಂ ತದಾ ।
ಪ್ರತ್ಯುವಾಚ ಮಹಾಬುದ್ಧಿರಿದಂ ವಚನಮರ್ಥವಿತ್ ॥
ಅನುವಾದ
ಆಗ ಹೀಗೆ ಮಾತನಾಡುತ್ತಿರುವಾಗ ಭರತನಲ್ಲಿ - ಶ್ರೀರಾಮಾವತಾರದ ಪ್ರಯೋಜನವನ್ನು ಬಲ್ಲ ಮಹಾಬುದ್ಧಿವಂತ ಮಹರ್ಷಿ ಭರದ್ವಾಜರು ಹೀಗೆ ಹೇಳಿದರು.॥29॥
ಮೂಲಮ್ - 30
ನ ದೋಷೇಣಾವಗಂತವ್ಯಾ ಕೈಕೇಯೀ ಭರತ ತ್ವಯಾ ।
ರಾಮಪ್ರವ್ರಾಜನಂ ಹ್ಯೇತತ್ಸುಖೋದರ್ಕಂ ಭವಿಷ್ಯತಿ ॥
ಅನುವಾದ
ಭರತ! ನೀನು ಕೈಕೇಯಿಯ ಕುರಿತು ದೋಷ ದೃಷ್ಟಿ ಇರಿಸಬೇಡ. ಶ್ರೀರಾಮನ ಈ ವನವಾಸವು ಭವಿಷ್ಯದಲ್ಲಿ ಬಹಳ ಸುಖದಾಯಕವಾಗುವುದು.॥30॥
ಮೂಲಮ್ - 31
ದೇವಾನಾಂ ದಾನವಾನಾಂ ಚ ಋಷೀಣಾಂ ಭಾವಿತಾತ್ಮನಾಮ್ ।
ಹಿತಮೇವ ಭವಿಷ್ಯದ್ಧಿ ರಾಮಪ್ರವ್ರಾಜನಾದಿಹ ॥
ಅನುವಾದ
ಶ್ರೀರಾಮನು ವನಕ್ಕೆ ಹೋಗುವುದರಿಂದ ದೇವತೆಗಳಿಗೆ, ದಾನವರಿಗೆ, ಪರಮಾತ್ಮನನ್ನು ಚಿಂತಿಸುವ ಮಹರ್ಷಿಗಳಿಗೆ ಈ ಜಗತ್ತಿನಲ್ಲಿ ಹಿತವೇ ಆಗುವುದಿದೆ.॥31॥
ಮೂಲಮ್ - 32
ಅಭಿವಾದ್ಯ ತು ಸಂಸಿದ್ಧಃ ಕೃತ್ವಾ ಚೈನಂ ಪ್ರದಕ್ಷಿಣಮ್ ।
ಅಮಂತ್ರ್ಯಭರತಃ ಸೈನ್ಯಂ ಯುಜ್ಯತಾಮಿತಿಚಾಬ್ರವೀತ್ ॥
ಅನುವಾದ
ಶ್ರೀರಾಮನ ಠಾವನ್ನು ತಿಳಿದುಕೊಂಡು, ಮುನಿಯ ಆಶೀರ್ವಾದ ಪಡೆದು ಕೃತಕೃತ್ಯನಾದ ಭರತನು ಮುನಿಗಳಿಗೆ ತಲೆಬಾಗಿ, ಅವರಿಗೆ ಪ್ರದಕ್ಷಿಣೆ ಬಂದು ಅವರಿಂದ ಅಪ್ಪಣೆ ಪಡೆದು, ಸೈನ್ಯಕ್ಕೆ ಹೊರಡುವಂತೆ ಆಜ್ಞಾಪಿಸಿದನು.॥32॥
ಮೂಲಮ್ - 33
ತತೋ ವಾಜಿರಥಾನ್ ಯುಕ್ತ್ವಾ ದಿವ್ಯಾನ್ ಹೇಮಭೂಷಿತಾನ್ ।
ಅಧ್ಯಾರೋಹತ್ ಪ್ರಯಾಣಾರ್ಥಂ ಬಹೂನ್ಬಹುವಿಧೋ ಜನಃ ॥
ಅನುವಾದ
ಅನಂತರ ಅನೇಕ ಪ್ರಕಾರದ ವೇಷ-ಭೂಷಣಗಳುಳ್ಳ ಅನೇಕ ಜನರು ದಿವ್ಯ ಕುದುರೆಗಳನ್ನು ಸುವರ್ಣ ಭೂಷಿತ ದಿವ್ಯರಥಗಳಿಗೆ ಹೂಡಿ ಪ್ರಯಾಣಕ್ಕಾಗಿ ಅವನ್ನು ಏರಿದರು.॥33॥
ಮೂಲಮ್ - 34
ಗಜಕನ್ಯಾ ಗಜಾಶ್ಚೈವ ಹೇಮಕಕ್ಷ್ಯಾಃ ಪತಾಕಿನಃ ।
ಜೀಮೂತಾ ಇವ ಘರ್ಮಾಂತೇ ಸಘೋಷಾಃ ಸಂಪ್ರತಸ್ಥಿರೇ ॥
ಅನುವಾದ
ಅನೇಕ ಚಿನ್ನದ ಸರಪಳಿಗಳಿಂದ ಬಂಧಿಸಿದ, ಪತಾಕೆಗಳನ್ನು ಹಾರಿಸುತ್ತಾ ಹೆಣ್ಣಾನೆಗಳು, ಗಂಡಾನೆಗಳು ಮಳೆಗಾಲದಲ್ಲಿ ಗುಡುಗುವ ಮೋಡಗಳಂತೆ ಗಂಟೆಗಳನಾದ ಮಾಡುತ್ತಾ ಅಲ್ಲಿಂದ ಹೊರಟವು.॥34॥
ಮೂಲಮ್ - 35
ವಿವಿಧಾನ್ಯಪಿ ಯಾನಾನಿಮಹಾಂತಿ ಚ ಲಘೂನಿ ಚ ।
ಪ್ರಯಯುಃ ಸುಮಹಾರ್ಹಾಣಿ ಪಾದೈರಪಿ ಪದಾತಯಃ ॥
ಅನುವಾದ
ನಾನಾ ಪ್ರಕಾರದ ಚಿಕ್ಕ-ಪುಟ್ಟ ಅಮೂಲ್ಯವಾಹನಗಳ ಮೇಲೆ ಕುಳಿತು ಅವುಗಳ ಅಧಿಕಾರಿಗಳು ಹೊರಟರು ಮತ್ತು ಪಾದಾತಿಗಳು ಕಾಲ್ನಡಿಗೆಯಲ್ಲಿ ಪ್ರಯಾಣ ಮಾಡತೊಡಗಿದರು.॥35॥
ಮೂಲಮ್ - 36
ಅಥ ಯಾನಪ್ರವೇಕೈಸ್ತು ಕೌಸಲ್ಯಾಪ್ರಮುಖಾಃ ಸ್ತ್ರಿಯಃ ।
ರಾಮದರ್ಶನಕಾಂಕ್ಷಿಣ್ಯಃ ಪ್ರಯಯುರ್ಮುದಿತಾಸ್ತದಾ ॥
ಅನುವಾದ
ಅನಂತರ ಕೌಸಲ್ಯಾದಿ ರಾಣಿಯರು ಉತ್ತಮ ವಾಹನಗಳಲ್ಲಿ ಕುಳಿತುಕೊಂಡು ಶ್ರೀರಾಮಚಂದ್ರನ ದರ್ಶನದ ಆಕಾಂಕ್ಷೆಯಿಂದ ಸಂತೋಷವಾಗಿ ಹೊರಟರು.॥36॥
ಮೂಲಮ್ - 37
ಚಂದ್ರಾರ್ಕತರುಣಾಭಾಸಾಂ ನಿಯುಕ್ತಾಂ ಶಿಬಿಕಾಂ ಶುಭಾಮ್ ।
ಆಸ್ಥಾಯ ಪ್ರಯಯೌ ಶ್ರೀಮಾನ್ ಭರತಃ ಸಪರಿಚ್ಛದಃ ॥
ಅನುವಾದ
ಹೀಗೆಯೇ ಶ್ರೀಮಾನ್ ಭರತನು ನವೋದಿತ ಚಂದ್ರ-ಸೂರ್ಯರ ಕಾಂತಿಯುಕ್ತ ಬೋವಿಗಳು ಹೊತ್ತಿರುವ ಮೇನೆಯಲ್ಲಿ ಕುಳಿತು ಆವಶ್ಯಕ ಸಾಮಗ್ರಿಗಳೊಂದಿಗೆ ಹೊರಟನು.॥37॥
ಮೂಲಮ್ - 38
ಸಾ ಪ್ರಯಾತಾ ಮಹಾಸೇನಾ ಗಜವಾಜಿಸಮಾಕುಲಾ ।
ದಕ್ಷಿಣಾಂ ದಿಶಮಾವೃತ್ಯ ಮಹಾಮೇಘ ಇವೋತ್ಥಿತಃ ॥
ಅನುವಾದ
ಆನೆ-ಕುದುರೆಗಳಿಂದ ತುಂಬಿದ ಆ ವಿಶಾಲ ವಾಹಿನಿಯು ದಕ್ಷಿಣ ದಿಕ್ಕನ್ನು ಆವರಿಸಿಕೊಂಡು ಮಹಾಮೇಘಗಳಂತೆ ಹೊರಟಿತು.॥38॥
ಮೂಲಮ್ - 39
ವನಾನಿ ಚ ವ್ಯತಿಕ್ರಮ್ಯ ಜುಷ್ಟಾನಿ ಮಗೃಪಕ್ಷಿಭಿಃ ।
ಗಂಗಾಯಾಃ ಪರವೇಲಾಯಾಂ ಗಿರಿಷ್ವಥ ನದೀಷ್ವಪಿ ॥
ಅನುವಾದ
ಗಂಗೆಯ ಆಚೆ ಇರುವ ಪರ್ವತ, ನದಿಗಳ ನಿಕಟವಾದ ಮೃಗ-ಪಕ್ಷಿಗಳಿಂದ ಸೇವಿತವಾದ ವನವನ್ನು ದಾಟಿ ಮುಂದುವರಿಯಿತು.॥39॥
ಮೂಲಮ್ - 40
ಸಾ ಸಂಪ್ರಹೃಷ್ಟದ್ವಿಪವಾಜಿಯೂಥಾ
ವಿತ್ರಾಸಯಂತೀ ಮೃಗಪಕ್ಷಿಸಂಘಾನ್ ।
ಮಹದ್ವನಂ ತತ್ ಪ್ರವಿಗಾಹಮಾನಾ
ರರಾಜ ಸೇನಾ ಭರತಸ್ಯ ತತ್ರ ॥
ಅನುವಾದ
ಆ ಸೈನ್ಯದ ಆನೆ-ಕುದುರೆಗಳ ಸಮುದಾಯ ಪ್ರಸನ್ನವಾಗಿತ್ತು. ಕಾಡಿನ ಮೃಗ-ಪಕ್ಷಿಗಳನ್ನು ಭಯಪಡಿಸುತ್ತಾ ಭರತನ ಸೇನೆಯು ಆ ವಿಶಾಲ ವನವನ್ನು ಪ್ರವೇಶಿಸಿ ಬಹಳ ಶೋಭಿಸುತ್ತಿತ್ತು.॥40॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ತೊಂಭತ್ತೆರಡನೆಯ ಸರ್ಗ ಪೂರ್ಣವಾಯಿತು.॥92॥