वाचनम्
ಭಾಗಸೂಚನಾ
ಭರದ್ವಾಜ ಮುನಿಗಳಿಂದ ಭರತನಿಗೂ ಮತ್ತು ಅವನ ಸೈನ್ಯಕ್ಕೂ ದೇವಯೋಗ್ಯವಾದ ಸತ್ಕಾರ
ಮೂಲಮ್ - 1
ಕೃತಬುದ್ಧಿಂ ನಿವಾಸಾಯ ತತ್ರೈವ ಸ ಮುನಿಸ್ತದಾ ।
ಭರತಂ ಕೇಕಯೀಪುತ್ರಮಾತಿಥ್ಯೇನ ನ್ಯಮಂತ್ರಯತ್ ॥
ಅನುವಾದ
ರಾತ್ರಿಯಲ್ಲಿ ಆಶ್ರಮದಲ್ಲೇ ತಂಗಲು ನಿಶ್ಚಯಿಸಿದ ಭರತನನ್ನು ಭರದ್ವಾಜರು ಆತಿಥ್ಯಕ್ಕಾಗಿ ಆಮಂತ್ರಿಸಿದರು.॥1॥
ಮೂಲಮ್ - 2
ಅಬ್ರವೀದ್ಭರತಸ್ತ್ವೇನಂ ನನ್ವಿದಂ ಭವತಾ ಕೃತಮ್ ।
ಪಾದ್ಯಮರ್ಘ್ಯಮಥಾತಿಥ್ಯಂ ವನೇ ಯದುಪಪದ್ಯತೇ ॥
ಅನುವಾದ
ಇದನ್ನು ಕೇಳಿ ಭರತನು ಹೇಳಿದನು - ಮುನಿಗಳೇ! ವನದಲ್ಲಿ ಸಾಧ್ಯವಾಗುವ ಆತಿಥ್ಯ ಸತ್ಕಾರವಾಗಿ ನೀವು ಅರ್ಘ್ಯ-ಪಾದ್ಯ ಹಾಗೂ ಫಲಮೂಲಗಳನ್ನು ಕೊಟ್ಟು ಮಾಡಿಬಿಟ್ಟಿರುವಿರಿ. ಅದೇ ದೊಡ್ಡ ಸತ್ಕಾರವಾಯಿತು.॥2॥
ಮೂಲಮ್ - 3
ಅಥೋವಾಚ ಭರದ್ವಾಜೋ ಭರತಂ ಪ್ರಹಸನ್ನಿವ ।
ಜಾನೇ ತ್ವಾಂ ಪ್ರೀತಿಸಂಯುಕ್ತಂ ತುಷ್ಯೇಸ್ತ್ವಂ ಯೇನಕೇನಚಿತ್ ॥
ಅನುವಾದ
ಹೀಗೆ ಹೇಳಿದ ಭರತನಲ್ಲಿ ಭರದ್ವಾಜರು ನಗುತ್ತಾ ಹೇಳಿದರು - ಭರತನೇ! ನನ್ನ ಕುರಿತು ನಿನಗೆ ಪ್ರೇಮ ಇರುವುದನ್ನು ನಾನು ಬಲ್ಲೆನು; ಆದ್ದರಿಂದ ನಾನು ಏನನ್ನು ಕೊಡುವೆನೋ ಅದರಿಂದಲೇ ನೀನು ಸಂತುಷ್ಟನಾಗು.॥3॥
ಮೂಲಮ್ - 4
ಸೇನಾಯಾಸ್ತು ತವೈವಾಸ್ಯಾಃಕರ್ತುಮಿಚ್ಛಾಮಿ ಭೋಜನಮ್ ।
ಮಮ ಪ್ರೀತಿರ್ಯಥಾರೂಪಾ ತ್ವಮರ್ಹೋ ಮನುಜರ್ಷಭ ॥
ಅನುವಾದ
ಆದರೂ ಈಗ ನಿನ್ನ ಸೈನ್ಯಕ್ಕೆ ಭೋಜನ ಮಾಡಿಸಲು ನಾನು ಬಯಸುತ್ತಿದ್ದೇನೆ. ಇದರಿಂದ ನನಗೆ ಸಂತೋಷವಾಗಬಹುದು. ನನಗೆ ಸಂತೋಷವಾಗುವಂತಹ ಕಾರ್ಯವನ್ನೇ ನೀನು ಅವಶ್ಯವಾಗಿ ಮಾಡಬೇಕು.॥4॥
ಮೂಲಮ್ - 5
ಕಿಮರ್ಥಂ ಚಾಪಿ ನಿಕ್ಷಿಪ್ಯ ದೂರೇ ಬಲಮಿಹಾಗತಃ ।
ಕಸ್ಮಾನ್ನೇಹೋಪಯಾತೋಽಸಿ ಸಬಲಃಪುರುಷರ್ಷಭ ॥
ಅನುವಾದ
ಪುರುಷ ಪ್ರವರನೇ! ನೀನು ನಿನ್ನ ಸೈನ್ಯವನ್ನು ಇಷ್ಟು ದೂರ ನಿಲ್ಲಿಸಿ ಇಲ್ಲಿಗೆ ಬಂದಿರುವೆ, ಸೈನ್ಯ ಸಹಿತ ಏಕೆ ಇಲ್ಲಿಗೆ ಬಂದಿಲ್ಲ.॥5॥
ಮೂಲಮ್ - 6
ಭರತಃ ಪ್ರತ್ಯುವಾಚೇದಂ ಪ್ರಾಂಜಲಿಸ್ತಂ ತಪೋಧನಮ್ ।
ನ ಸೈನ್ಯೇನೋಪಯಾತೋಽಸ್ಮಿ ಭಗವನ್ಭಗವದ್ಭಯಾತ್ ॥
ಅನುವಾದ
ಆಗ ಭರತನು ಕೈಮುಗಿದು ಆ ತಪೋಧನರಿಗೆ ಉತ್ತರಿಸಿದನು - ಪೂಜ್ಯರೇ! ನಾನು ನಿಮ್ಮ ಭಯದಿಂದಲೇ ಸೈನ್ಯವನ್ನು ಇಲ್ಲಿಗೆ ಕರೆದುಕೊಂಡು ಬಂದಿಲ್ಲ.॥6॥
ಮೂಲಮ್ - 7
ರಾಜ್ಞಾ ಹಿ ಭಗವನ್ನಿತ್ಯಂ ರಾಜಪುತ್ರೇಣ ವಾ ತಥಾ ।
ಯತ್ನತಃ ಪರಿಹರ್ತವ್ಯಾ ವಿಷಯೇಷು ತಪಸ್ವಿನಃ ॥
ಅನುವಾದ
ಸ್ವಾಮಿ! ರಾಜ ಮತ್ತು ರಾಜಪುತ್ರರು ಎಲ್ಲ ದೇಶಗಳಲ್ಲಿ ಪ್ರಯತ್ನಪೂರ್ವಕ ತಪಸ್ವಿ ಜನರನ್ನು ದೂರದಲ್ಲೇ ಇರಿಸುವ ಪ್ರಯತ್ನಮಾಡಬೇಕು; ಏಕೆಂದರೆ ಅವರಿಂದ ಕಷ್ಟಗಳು ಸಂಭವಿಸುವ ಅವಕಾಶವಿರುತ್ತದೆ.॥7॥
ಮೂಲಮ್ - 8
ವಾಜಿಮುಖ್ಯಾ ಮನುಷ್ಯಾಶ್ಚ ಮತ್ತಾಶ್ಚ ವರವಾರಣಾಃ ।
ಪ್ರಚ್ಛಾದ್ಯ ಭಗವನ್ ಭೂಮಿಂ ಮಹತೀಮನುಯಾಂತಿಮಾಮ್ ॥
ಅನುವಾದ
ಪೂಜ್ಯರೇ! ನನ್ನೊಂದಿಗೆ ಬಹಳಷ್ಟು ಒಳ್ಳೆ-ಒಳ್ಳೆಯ ಕುದುರೆಗಳು, ಮನುಷ್ಯರು, ಮತ್ತ ಗಜಗಳೂ ಇವೆ. ಅವು ಬಹಳ ದೊಡ್ಡ ಭೂಭಾಗವನ್ನು ಆಕ್ರಮಿಸಿ ಹಿಂದೆ-ಹಿಂದೆ ಬರುತ್ತಿವೆ.॥8॥
ಮೂಲಮ್ - 9
ತೇ ವೃಕ್ಷಾನುದಕಂ ಭೂಮಿಮಾಶ್ರಮೇಷೂಟಜಾಂಸ್ತಥಾ ।
ನ ಹಿಂಸ್ಯುರಿತಿ ತೇವಾಹಮೇಕ ಏವಾಗತಸ್ತತಃ ॥
ಅನುವಾದ
ಅವು ಆಶ್ರಮದ ವೃಕ್ಷ, ಜಲ, ಭೂಮಿ ಮತ್ತು ಪರ್ಣಶಾಲೆಗಳಿಗೆ ಹಾನಿಯಾಗಬಾರದೆಂದು ಮಿತವಾದ ಪರಿವಾರದೊಂದಿಗೆ ನಾನು ಇಲ್ಲಿಗೆ ಒಬ್ಬನೇ ಬಂದಿರುವೆನು.॥9॥
ಮೂಲಮ್ - 10
ಆನೀಯತಾಮಿತಃ ಸೇನೇತ್ಯಾಜ್ಞಪ್ತಃ ಪರಮರ್ಷಿಣಾ ।
ತಥಾನುಚಕ್ರೇ ಭರತಃ ಸೇನಾಯಾಃ ಸಮುಪಾಗಮಮ್ ॥
ಅನುವಾದ
ಅನಂತರ ಆ ಮಹರ್ಷಿಗಳು ಸೈನ್ಯವನ್ನು ಇಲ್ಲಿಗೆ ಬರಲಿ ಎಂದು ಆಜ್ಞಾಪಿಸಿದಾಗ ಭರತನು ಸೇನೆಯನ್ನು ಬರಮಾಡಿಕೊಂಡನು.॥10॥
ಮೂಲಮ್ - 11
ಅಗ್ನಿಶಾಲಾಂ ಪ್ರವಿಶ್ಯಾಥ ಪೀತ್ವಾಪಃ ಪರಿಮೃಜ್ಯ ಚ ।
ಆತಿಥ್ಯಸ್ಯ ಕ್ರಿಯಾಹೇತೋರ್ವಿಶ್ವಕರ್ಮಾಣಮಾಹ್ವಯತ್ ॥
ಅನುವಾದ
ಬಳಿಕ ಭರದ್ವಾಜ ಮುನಿಗಳು ಅಗ್ನಿಶಾಲೆಯನ್ನು ಪ್ರವೇಶಿಸಿ ಭರತನ ಆತಿಥ್ಯಕ್ಕಾಗಿ ವಿಶ್ವಕರ್ಮಾದಿಗಳನ್ನು ಆವಾಹಿಸಿದರು.॥11॥
ಮೂಲಮ್ - 12
ಆಹ್ವಯೇ ವಿಶ್ವಕರ್ಮಾಣಮಹಂ ತ್ವಷ್ಟಾರಮೇವ ಚ ।
ಆತಿಥ್ಯಂ ಕರ್ತುಮಿಚ್ಛಾಮಿ ತತ್ರ ಮೇ ಸಂವಿಧೀಯತಾಮ್ ॥
ಅನುವಾದ
ಅವರು ಸಂಕಲ್ಪಿಸಿದರು - ನಾನು ವಿಶ್ವಕರ್ಮ, ತ್ವಷ್ಟಾ ದೇವತೆಗಳನ್ನು ಆವಾಹಿಸುತ್ತಿದ್ದೇನೆ. ನನ್ನ ಮನಸ್ಸಿನಲ್ಲಿ ಸೈನ್ಯಸಹಿತ ಭರತನ ಆತಿಥ್ಯ-ಸತ್ಕಾರ ಮಾಡುವ ಇಚ್ಛೆ ಉಂಟಾಗಿದೆ. ಇದಕ್ಕಾಗಿ ನನಗಾಗಿ ಅವರು ವ್ಯವಸ್ಥೆ ಮಾಡಲಿ.॥12॥
ಮೂಲಮ್ - 13
ಆಹ್ವಯೇ ಲೋಕಪಾಲಾಂಸ್ತ್ರೀನ್ ದೇವಾನ್ ಶಕ್ರಪುರೋಗಮಾನ್ ।
ಆತಿಥ್ಯಂ ಕರ್ತುಮಿಚ್ಛಾಮಿ ತತ್ರ ಮೇ ಸಂವಿಧೀಯತಾಮ್ ॥
ಅನುವಾದ
ಲೋಕಪಾಲಕರಾದ ಯಮ, ವರುಣ ಮತ್ತು ಕುಬೇರ ಮೂವರ ಸಹಿತ ಇಂದ್ರನನ್ನೂ ಆವಾಹಿಸುತ್ತಿದ್ದೇನೆ. ಈಗ ಭರತನ ಆತಿಥ್ಯ-ಸತ್ಕಾರ ಮಾಡಲು ಬಯಸುತ್ತಿರುವೆನು. ಅದಕ್ಕಾಗಿ ಅವರೆಲ್ಲರೂ ಅವಶ್ಯವಾಗಿ ವ್ಯವಸ್ಥೆ ಮಾಡಲಿ.॥13॥
ಮೂಲಮ್ - 14
ಪ್ರಾಕ್ಸ್ರೋತಸಶ್ಚ ಯಾ ನದ್ಯಸ್ತಿರ್ಯಕ್ ಸ್ರೋತಸ ಏವಚ ।
ಪೃಥಿವ್ಯಾಮಂತರಿಕ್ಷೇ ಚ ಸಮಾಯಾಂತ್ವದ್ಯ ಸರ್ವಶಃ ॥
ಅನುವಾದ
ಪೂರ್ವ ಮತ್ತು ಪಶ್ಚಿಮಕ್ಕೆ ಹರಿಯುವ ಭೂಮ್ಯಾಕಾಶದಲ್ಲಿ ಇರುವ ನದಿಗಳನ್ನೂ ನಾನು ಆವಾಹಿಸುತ್ತಿದ್ದೇನೆ. ಅವೆಲ್ಲವೂ ಇಂದು ಇಲ್ಲಿಗೆ ಆಗಮಿಸಲ.॥14॥
ಮೂಲಮ್ - 15
ಅನ್ಯಾಃ ಸ್ರವಂತು ಮೈರೇಯಂ ಸುರಾಮನ್ಯಾಃ ಸುನಿಷ್ಠಿತಾಮ್ ।
ಅಪರಾಶ್ಚೋದಕಂ ಶೀತಮಿಕ್ಷುಕಾಂಡರಸೋಪಮಮ್ ॥
ಅನುವಾದ
ಕೆಲವು ನದಿಗಳು ಮೈರೇಯ ಪ್ರಸ್ತುತಪಡಿಸಲಿ, ಬೇರೆ ಕೆಲವು ನದಿಗಳು ಚೆನ್ನಾಗಿ ತಯಾರಿಸಿದ ಸುರೆಯನ್ನು ತರಲಿ. ಇತರ ನದಿಗಳು ಕಬ್ಬಿನ ಹಾಲಿನಂತೆ ಮಧುರ ಹಾಗೂ ಶೀತಲ ನೀರನ್ನು ಸಿದ್ಧವಾಗಿಸಲಿ.॥15॥
ಮೂಲಮ್ - 16
ಆಹ್ವಯೇ ದೇವಗಂಧರ್ವಾನ್ ವಿಶ್ವಾವಸುಹಹಾಹುಹೂನ್ ।
ತಥೈವಾಪ್ಸರಸೋ ದೇವಗಂಧರ್ವೈಶ್ಚಾಪಿ ಸರ್ವಶಃ ॥
ಅನುವಾದ
ವಿಶ್ವಾವಸು, ಹಾಹಾ-ಹೂಹೂ ಮೊದಲಾದ ದೇವ ಗಂಧರ್ವರನ್ನು ಹಾಗೂ ಅವರೊಂದಿಗೆ ಸಮಸ್ತ ಅಪ್ಸರೆಯರನ್ನೂ ನಾನು ಆವಾಹಿಸುತ್ತಿದ್ದೇನೆ.॥16॥
ಮೂಲಮ್ - 17
ಘೃತಾಚೀಮಥ ವಿಶ್ವಾಚೀಂಮಿಶ್ರಕೇಶೀಮಲಂಬುಷಾಮ್ ।
ನಾಗದತ್ತಾಂ ಚ ಹೇಮಾಂ ಚ ಸೋಮಾಮದ್ರಿಕೃತಸ್ಥಲೀಮ್ ॥
ಅನುವಾದ
ಘೃತಾಚಿ, ವಿಶ್ವಾಚೀ, ಮಿಶ್ರಕೇಶೀ, ಅಲಂಬೂಷಾ, ನಾಗದತ್ತಾ, ಹೇಮಾ, ಸೋಮಾ ಹಾಗೂ ಅಧ್ರಿಕೃತಸ್ಥಳೀ (ಪರ್ವತದ ಮೇಲೆ ವಾಸಿಸುವ ಸೋಮ) ಇವರನ್ನು ನಾನು ಆವಾಹಿಸುತ್ತಿದ್ದೇನೆ.॥17॥
ಮೂಲಮ್ - 18
ಶಕ್ರಂ ಯಶ್ಚೋಪತಿಷ್ಠಂತಿ ಬ್ರಹ್ಮಾಣಂ ಯಾಶ್ಚ ಭಾಮಿನೀಃ ।
ಸರ್ವಾಸ್ತುಂಬುರುಣಾ ಸಾರ್ಧಮಾಹ್ವಯೇ ಸಪರಿಚ್ಛದಾಃ ॥
ಅನುವಾದ
ಇಂದ್ರನನ್ನು ಉಪಚರಿಸುವ ರಂಭೆ-ಊರ್ವಶಿಯರನ್ನೂ, ಬ್ರಹ್ಮನನ್ನು ಉಪಚರಿಸುವ ಭಾಮಿನಿಯರನ್ನೂ ದೇವಗಾಯನ ಪಟುಗಳಾದ ತುಂಬುರರೊಡನೆ ಅಲಂಕೃತರಾಗಿ ಗೀತೆಗಳಿಗೆ ಬೇಕಾಗುವ ಉಪಕರಣಗಳೊಂದಿಗೆ ಇಲ್ಲಿಗೆ ಆಗಮಿಸಲ.॥18॥
ಮೂಲಮ್ - 19
ವನಂ ಕರುಷು ಯದ್ದಿವ್ಯಂ ವಾಸೋಭೂಷಣಪತ್ರವತ್ ।
ದಿವ್ಯನಾರೀಲಂ ಶಶ್ವತ್ ತತ್ಕೌಬೇರಮಿಹೈವ ತು ॥
ಅನುವಾದ
ಉತ್ತರ ಕುರುವರ್ಷದಲ್ಲಿ ದಿವ್ಯವಾದ ಚೈತ್ರರಥ ಎಂಬ ವನವಿದೆ; ಅದರ ದಿವ್ಯವಸ್ತ್ರಾಭೂಣಗಳೇ ವೃಕ್ಷದ ಎಲೆಗಳಾಗಿವೆ ಮತ್ತು ಫಲಗಳೇ ದಿವ್ಯನಾರಿಯರಾಗಿದ್ದಾರೆ, ಕುಬೇರನ ಆ ಸನಾತನ ದಿವ್ಯವನವೂ ಇಲ್ಲಿಗೆ ಬರಲಿ.॥19॥
ಮೂಲಮ್ - 20
ಇಹ ಮೇ ಭಗವಾನ್ಸೋಮೋ ವಿಧತ್ತಾಮನ್ನಮುತ್ತಮಮ್ ।
ಭಕ್ಷ್ಯಂ ಭೋಜ್ಯಂ ಚ ಚೋಷ್ಯಂ ಚ ಲೇಹ್ಯಂ ಚ ವಿವಿಧಂ ಬಹು ॥
ಅನುವಾದ
ಭಗವಾನ್ ಸೋಮನು ನನ್ನ ಅತಿಥಿಗಳಿಗೆ ಉತ್ತಮ ಅನ್ನ, ನಾನಾ ಪ್ರಕಾರದ ಭಕ್ಷ್ಯ-ಭೋಜ್ಯ, ಲೇಹ್ಯ, ಚೋಷ್ಯಗಳನ್ನು ಸಾಕಷ್ಟು ಪ್ರಮಾಣದಲ್ಲಿ ವ್ಯವಸ್ಥೆ ಮಾಡಲಿ.॥20॥
ಮೂಲಮ್ - 21
ವಿಚಿತ್ರಾಣಿ ಚ ಮಾಲ್ಯಾನಿ ಪಾದಪಪ್ರಚ್ಯುತಾನಿ ಚ ।
ಸುರಾದೀನಿ ಚ ಪೇಯಾನಿ ಮಾಂಸಾನಿ ವಿವಿಧಾನಿ ಚ ॥
ಅನುವಾದ
ವೃಕ್ಷಗಳಿಂದ ಆಗಲೇ ಕಿತ್ತ ನಾನಾ ರೀತಿಯ ಪುಷ್ಪಗಳು, ಜೇನು ಮೊದಲಾದ ಪೇಯ ಪದಾರ್ಥ ಹಾಗೂ ನಾನಾ ಪ್ರಕಾರದ ಹಣ್ಣುಗಳ ತಿರುಳನ್ನೂ ಕೂಡ ಭಗವಾನ್ ಸೋಮನು ಇಲ್ಲಿ ಪ್ರಸ್ತುತಪಡಿಸಲಿ.॥21॥
ಮೂಲಮ್ - 22
ಏವಂ ಸಮಾಧಿನಾ ಯುಕ್ತಸ್ತೇಜಸಾಪ್ರತಿಮೇನ ಚ ।
ಶಿಕ್ಷಾಸ್ವರಸಮಾಯುಕ್ತಂ ಸುವ್ರತಶ್ಚಾಬ್ರವೀನ್ಮುನಿಃ ॥
ಅನುವಾದ
ಈ ಪ್ರಕಾರ ಸುವ್ರತರಾದ ಭರದ್ವಾಜ ಮುನಿಗಳು ಏಕಾಗ್ರ ಚಿತ್ತರಾಗಿ ಅನುಪಮ ತೇಜದಿಂದ ಸಂಪನ್ನ ಶಿಕ್ಷಾ ಮತ್ತು ವ್ಯಾಕರಣಾದಿ ಶಾಸ್ತ್ರೋಕ್ತ ಸ್ವರದಿಂದ ಯುಕ್ತವಾಣಿಯಿಂದ ಅವರೆಲ್ಲರನ್ನು ಆವಾಹಿಸಿದರು.॥22॥
ಮೂಲಮ್ - 23
ಮನಸಾ ಧ್ಯಾಯತಸ್ತಸ್ಯ ಪ್ರಾಙ್ಮುಖಸ್ಯ ಕೃತಾಂಜಲೇಃ ।
ಆಜಗ್ಮುಸ್ತಾನಿ ಸರ್ವಾಣಿ ದೈವತಾನಿ ಪೃತಕ್ಪೃಥಕ್ ॥
ಅನುವಾದ
ಹೀಗೆ ಆವಾಹನೆ ಮಾಡಿ ಮುನಿಗಳು ಪೂರ್ವಾಭಿಮುಖರಾಗಿ ಕೈಮುಗಿದು ಮನಸ್ಸಿನಲ್ಲೇ ಧ್ಯಾನಿಸತೊಡಗಿದರು. ಅವರು ಸ್ಮರಿಸುತ್ತಲೇ ಅವರೆಲ್ಲ ದೇವತೆಗಳು ಒಬ್ಬೊಬ್ಬರಾಗಿ ಅಲ್ಲಿಗೆ ಬಂದು ತಲುಪಿದರು.॥23॥
ಮೂಲಮ್ - 24
ಮಲಯಂ ದುರ್ದರಂ ಚೈವ ತತಃ ಸ್ವೇದನುದೋಽನಿಲಃ ।
ಉಪಸ್ಪೃಶ್ಯ ವವೌ ಯುಕ್ತ್ಯಾ ಸುಪ್ರಿಯಾತ್ಮಾ ಸುಖಃ ಶಿವಃ ॥
ಅನುವಾದ
ಮತ್ತೆ ಅಲ್ಲಿ ಮಲಯ ಮತ್ತು ದರ್ದುರ ಎಂಬ ಪರ್ವತಗಳನ್ನು ಸ್ಪರ್ಶಿಸಿ ಬೀಸುವ ಅತ್ಯಂತ ಸುಖದಾಯಕ ಗಾಳಿಯು ನಿಧಾನವಾಗಿ ಬೀಸತೊಡಗಿತು. ಅದರ ಸ್ಪರ್ಶಮಾತ್ರದಿಂದ ಶರೀರದ ಬೆವರು ಒಣಗುತ್ತಿತ್ತು.॥24॥
ಮೂಲಮ್ - 25
ತತೋಽಭ್ಯವರ್ಷಂತ ಘನಾ ದಿವ್ಯಾಃಕುಸುಮವೃಷ್ಟಯಃ ।
ದೇವದುಂದುಭಿಘೋಷಶ್ಚ ದಿಕ್ಷು ಸರ್ವಾಸು ಶುಶ್ರುವೇ ॥
ಅನುವಾದ
ಅನಂತರ ಮೇಘಗಳು ದಿವ್ಯಪುಷ್ಪಗಳ ಮಳೆಗರೆದವು. ಎಲ್ಲ ದಿಕ್ಕುಗಳಿಂದ ದೇವದುಂದುಭಿಗಳ ಮಧುರ ಶಬ್ದವು ಕೇಳತೊಡಗಿತು.॥25॥
ಮೂಲಮ್ - 26
ಪ್ರವವುಶ್ಚೋತ್ತಮಾ ವಾತಾ ನನೃತುಶ್ಚಾಪ್ಸರೋಗಣಾಃ ।
ಪ್ರಜಗುರ್ದೇವಗಂಧರ್ವಾ ವೀಣಾಃ ಪ್ರಮುಮುಚುಃಸ್ವರಾನ್ ॥
ಅನುವಾದ
ಉತ್ತಮ ಮಂದಾನಿಲ ಬೀಸತೊಡಗಿತು. ಅಪ್ಸರೆಯರು ನೃತ್ಯಪ್ರಾರಂಭಿಸಿದರು. ದೇವಗಂಧರ್ವರು ಹಾಡತೊಡಗಿದರು. ಎಲ್ಲೆಡೆ ವೀಣೆಗಳು ನಿನಾದಿಸತೊಡಗಿದವು.॥26॥
ಮೂಲಮ್ - 27
ಸ ಶಬ್ದೋ ದ್ಯಾಂ ಚ ಭೂಮಿಂ ಚಪ್ರಾಣಿನಾಂ ಶ್ರವಣಾನಿ ಚ ।
ವಿವೇಶೋಚ್ಚಾವಚಃ ಶ್ಲಕ್ಷ್ಣಃ ಸಮೋ ಲಯಗುಣಾನ್ವಿತಃ ॥
ಅನುವಾದ
ಸಂಗೀತದ ಆ ನಾದ ಪೃಥಿವಿ, ಆಕಾಶ ಹಾಗೂ ಪ್ರಾಣಿಗಳ ಕಿವಿಗಳಲ್ಲಿ ಹೊಕ್ಕು ಪ್ರತಿಧ್ವನಿಸಿತು. ಆ ನಾದವು ಆರೋಹ- ಅವರೋಹದಿಂದ ಕೂಡಿ ಕೋಮಲ ತೀವ್ರ, ಶುದ್ಧ ಸ್ವರಗಳಿಂದೊಡಗೂಡಿ ತಾಳ-ಲಯಗಳಿಂದ ಸಂಪನ್ನವಾಗಿತ್ತು.॥27॥
ಮೂಲಮ್ - 28
ತಸ್ಮಿನ್ನೆವಂಗತೇ ಶಬ್ದೇ ದಿವ್ಯೇ ಶ್ರೋತ್ರಸುಖೇ ನೃಣಾಮ್ ।
ದದರ್ಶ ಭಾರತಂ ಸೈನ್ಯಂ ವಿಧಾನಂ ವಿಶ್ವಕರ್ಮಣಃ ॥
ಅನುವಾದ
ಈ ಪ್ರಕಾರ ಮನುಷ್ಯರ ಕಿವಿಗಳಿಗೆ ಸುಖಕೊಡುವ ಆ ದಿವ್ಯಶಬ್ದ ಕೇಳುತ್ತಿರುವಂತೆಯೇ ಭರತನ ಸೈನ್ಯವು ವಿಶ್ವ ಕರ್ಮನ ನಿರ್ಮಾಣ ಕೌಶಲ್ಯವನ್ನು ನೋಡಿತು.॥28॥
ಮೂಲಮ್ - 29
ಬಭೂವ ಹಿ ಸಮಾ ಭೂಮಿಃ ಸಮಂತಾತ್ ಪಂಚಯೋಜನಮ್ ।
ಶಾದ್ವಲೈರ್ಬಹುಭಿಶ್ಛನ್ನಾ ನೀಲವೈಡೂರ್ಯಸಂನಿಭೈಃ ॥
ಅನುವಾದ
ಸುತ್ತಲೂ ಐದು ಯೋಜನದ ಭೂಮಿ ಸಮತಟ್ಟಾಯಿತು. ಅದರ ಮೇಲೆ ನೀಲಮ್ ಮತ್ತು ವೈಡೂರ್ಯ ಮಣಿಗಳಂತೆ ನಾನಾ ಪ್ರಕಾರದ ಹುಲ್ಲು ಒತ್ತಾಗಿ ಹಾಸಲಾಗಿತ್ತು.॥29॥
ಮೂಲಮ್ - 30
ತಸ್ಮಿನ್ ಬಿಲ್ವಾಃ ಕಪಿತ್ಥಾಶ್ಚ ಪನಸಾ ಬೀಜಪೂರಕಾಃ ।
ಆಮಲಕ್ಯೋ ಬಭೂವುಶ್ಚ ಚೂತಾಶ್ಚ ಫಲಭೂಷಿತಾಃ ॥
ಅನುವಾದ
ಅಲ್ಲಲ್ಲಿ ಬಿಲ್ವ, ಬೇಲ, ಹಲಸು, ನೆಲ್ಲಿ, ಸೀಬೆ, ಮಾವು ಮುಂತಾದ ಫಲಭರಿತವಾದ ವೃಕ್ಷಗಳಿದ್ದವು.॥30॥
ಮೂಲಮ್ - 31
ಉತ್ತರೇಭ್ಯಃ ಕುರುಭ್ಯಶ್ಚ ವನಂ ದಿವ್ಯೋಪಭೋಗವತ್ ।
ಅಜಗಾಮ ನದೀ ಸೌಮ್ಯಾ ತೀರಜೈರ್ಬಹುಭಿರ್ವೃತಾ ॥
ಅನುವಾದ
ಉತ್ತರ ಕುರುವರ್ಷದಿಂದ ದಿವ್ಯ ಭೋಗಸಾಮಗ್ರಿಗಳಿಂದ ಸಂಪನ್ನವಾದ ಚೈತ್ರರಥ ಎಂಬ ವನವು ಅಲ್ಲಿಗೆ ಬಂದಿತ್ತು. ಜೊತೆಗೆ ಹೆಚ್ಚು ಸಂಖ್ಯೆಯಲ್ಲಿ ಅಲ್ಲಿಯ ನದಿಗಳೂ ಬಂದು ತಲುಪಿದವು. ಅವುಗಳ ತೀರಗಳು ವೃಕ್ಷಗಳಿಂದ ಆವೃತವಾಗಿದ್ದವು.॥31॥
ಮೂಲಮ್ - 32
ಚತುಃಶಾಲಾನಿ ಶುಭ್ರಾಣಿ ಶಾಲಾಶ್ಚ ಗಜವಾಜಿನಾಮ್ ।
ಹರ್ಮ್ಯಪ್ರಾಸಾದಸಂಯುಕ್ತತೋರಣಾನಿ ಶುಭಾನಿ ಚ ॥
ಅನುವಾದ
ಬೆಳ್ಳಗಿನ ನಾಲ್ಕು-ನಾಲ್ಕು ಮಿನಾರಗಳುಳ್ಳ ಭವನಗಳು ಸಿದ್ಧವಾದವು. ಆನೆ-ಕುದುರೆಗಳಿಗೆ ಲಾಯಗಳು ನಿರ್ಮಾಣವಾದವು. ಧನಿಕರ ವಾಸಕ್ಕೆ ಯೋಗ್ಯವಾದ ಅನೇಕ ಮಹಡಿಗಳಿಂದ ಕೂಡಿದ ಸೌಧಗಳಿಂದ ಕೂಡಿದ್ದು, ಸುಂದರ ನಗರ ದ್ವಾರ-ತೋರಣಗಳೂ ನಿರ್ಮಾಣವಾಗಿತ್ತು.॥32॥
ಮೂಲಮ್ - 33
ಸಿತಮೇಘನಿಭಂ ಚಾಪಿ ರಾಜವೇಶ್ಮ ಸುತೋರಣಮ್ ।
ಶುಕ್ಲಮಾಲ್ಯಕೃತಾಕಾರಂ ದಿವ್ಯಗಂಧಸಮುಕ್ಷಿತಮ್ ॥
ಅನುವಾದ
ರಾಜಪರಿವಾರದವರಿಗೆ ನಿರ್ಮಿಸಿದ ಸುಂದರ ದ್ವಾರಗಳಿಂದ ಕೂಡಿದ ದಿವ್ಯ ಭವನವು ಬಿಳಿಯ ಮೋಡಗಳಂತೆ ಸುಶೋಭಿತವಾಗಿತ್ತು. ಅವನ್ನು ಬಿಳಿಯ ಹೂವುಗಳಿಂದ ಅಲಂಕರಿಸಿ ಸುಗಂಧಿತ ಜಲವನ್ನು ಸಿಂಪಡಿಸಲಾಗಿತ್ತು.॥33॥
ಮೂಲಮ್ - 34
ಚತುರಸ್ರಮಸಂಬಾಧಂ ಶಯನಾಸನಯಾನವತ್ ।
ದಿವ್ಯೈಃ ಸರ್ವರಸೈರ್ಯುಕ್ತಂ ದಿವ್ಯಭೋಜನವಸ್ತ್ರವತ್ ॥
ಅನುವಾದ
ಆ ಭವನವು ಚೌಕಾಕಾರವಿದ್ದು ವಿಸ್ತಾರವಾಗಿತ್ತು. ಅದರಲ್ಲಿ ಸಂಕೀರ್ಣತೆಯೇ ಇರಲಿಲ್ಲ. ಅದರಲ್ಲಿ ಮಲಗಲು ಕುಳಿತುಕೊಳ್ಳಲು ವಾಹನಗಳನ್ನು ನಿಲ್ಲಿಸಲು ಬೇರೆ-ಬೇರೆ ಸ್ಥಾನಗಳಿದ್ದವು. ಅಲ್ಲಿ ಎಲ್ಲ ರೀತಿಯ ದಿವ್ಯ ರಸ, ದಿವ್ಯ ಭೋಜನ, ದಿವ್ಯವಸ್ತ್ರಗಳಿಂದ ತುಂಬಿ ತುಳುಕುತ್ತಿತ್ತು.॥34॥
ಮೂಲಮ್ - 35
ಉಪಕಲ್ಪಿತಸರ್ವಾನ್ನಂ ಧೌತನಿರ್ಮಲಭಾಜನಮ್ ।
ಕ್ಲೃಪ್ತಸರ್ವಾಸನಂ ಶ್ರೀಮತ್ಸ್ವಾಸ್ತೀರ್ಣಶಯನೋತ್ತಮಮ್ ॥
ಅನುವಾದ
ಎಲ್ಲ ರೀತಿಯ ಅನ್ನ ಸಾಮಗ್ರಿಗಳು, ತೊಳೆದಿಟ್ಟ ಸ್ವಚ್ಛ ಪಾತ್ರೆಗಳನ್ನಿಟ್ಟಿದ್ದರು. ಆ ಸುಂದರ ಭವನದಲ್ಲಿ ಕುಳಿತುಕೊಳ್ಳಲು ಎಲ್ಲ ರೀತಿಯ ಆಸನಗಳು ಎಲ್ಲೆಡೆಗಳಲ್ಲಿ ಇರಿಸಿದ್ದರು. ಕೆಲವೆಡೆ ಮಲಗಲು ಸುಂದರ ಹಂಸತೂಲಿಕಾ ತಲ್ಪಗಳು ಹಾಸಿದ್ದವು.॥35॥
ಮೂಲಮ್ - 36
ಪ್ರವಿವೇಶ ಮಹಾಬಾಹುರನುಜ್ಞಾತೋ ಮಹರ್ಷಿಣಾ ।
ವೇಶ್ಮ ತದ್ರತ್ನಸಂಪೂರ್ಣಂ ಭರತಃ ಕೇಕಯೀಸುತಃ ॥
ಮೂಲಮ್ - 37
ಅನುಜಗ್ಮುಶ್ಚತೇ ಸರ್ವೇಮಂತ್ರಿಣಃ ಸಪುರೋಹಿತಾಃ ।
ಬಭೂವುಶ್ಚ ಮುದಾ ಯುಕ್ತಾಸ್ತಂ ದೃಷ್ಟ್ವಾ ವೇಶ್ಮಸಂವಿಧಿಮ್ ॥
ಅನುವಾದ
ಮಹರ್ಷಿ ಭರದ್ವಾಜರ ಅಪ್ಪಣೆಯಂತೆ ಕೈಕೇಯಿ ಪುತ್ರ ಮಹಾಬಾಹು ಭರತನು ನಾನಾ ರೀತಿಯ ರತ್ನಗಳಿಂದ ತುಂಬಿದ ಆ ಭವನವನ್ನು ಪ್ರವೇಶಿಸಿದನು. ಅವನೊಡನೆ ಪುರೋಹಿತರೂ, ಮಂತ್ರಿಗಳೂ ಪ್ರವೇಶಿಸಿದರು. ಆ ಭವನದ ನಿರ್ಮಾಣ ಕೌಶಲ್ಯವನ್ನು ನೋಡಿ ಎಲ್ಲರಿಗೆ ಬಹಳ ಸಂತೋಷವಾಯಿತು.॥36-37॥
ಮೂಲಮ್ - 38
ತತ್ರರಾಜಾಸನಂ ದಿವ್ಯಂ ವ್ಯಜನಂ ಛತ್ರಮೇವ ಚ ।
ಭರತೋ ಮಂತ್ರಿಭಿಃ ಸಾರ್ಧಮಭ್ಯವರ್ತತ ರಾಜವತ್ ॥
ಅನುವಾದ
ಆ ಭವನದಲ್ಲಿ ಭರತನು ದಿವ್ಯರಾಜಸಿಂಹಾಸನ, ಛತ್ರ, ಚಾಮರಗಳನ್ನು ನೋಡಿದನು. ಅಲ್ಲಿ ರಾಜಾ ಶ್ರೀರಾಮನನ್ನು ಭಾವಿಸಿ ಮಂತ್ರಿಗಳೊಂದಿಗೆ ಆ ಎಲ್ಲ ರಾಜಭೋಗ್ಯ ವಸ್ತುಗಳ ಪ್ರದಕ್ಷಿಣೆ ಮಾಡಿದನು.॥38॥
ಮೂಲಮ್ - 39
ಆಸನಂ ಪೂಜಯಾಮಾಸ ರಾಮಾಯಾಭಿಪ್ರಣಮ್ಯಚ ।
ವಾಲವ್ಯಜನಮಾದಾಯ ನ್ಯಷೀದತ್ಸಚಿವಾಸನೇ ॥
ಅನುವಾದ
ಸಿಂಹಾಸನದ ಮೇಲೆ ಶ್ರೀರಾಮಚಂದ್ರ ಮಹಾರಾಜನೇ ವಿರಾಜಮಾನನಾಗಿದ್ದಾನೆ ಎಂದು ಭಾವಿಸಿ ಭರತನು ಶ್ರೀರಾಮನಿಗೆ ಪ್ರಣಾಮಗೈದು, ಆ ಸಿಂಹಾಸನವನ್ನು ಪೂಜಿಸಿದನು. ಮತ್ತೆ ಚಾಮರಗಳನ್ನೆತ್ತಿಕೊಂಡು ಅವನು ಮಂತ್ರಿಗಳ ಆಸನದಲ್ಲಿ ಕುಳಿತುಕೊಂಡನು.॥39॥
ಮೂಲಮ್ - 40
ಆನುಪೂರ್ವ್ಯಾನ್ನಿಷೇದುಶ್ಚ ಸರ್ವೇ ಮಂತ್ರಿಪುರೋಹಿತಾಃ ।
ತತಃ ಸೇನಾಪತಿಃ ಪಶ್ಚಾತ್ ಪ್ರಶಾಸ್ತಾಚ ಮ್ಯಷೀದತ ॥
ಅನುವಾದ
ಬಳಿಕ ಪುರೋಹಿತ ಮತ್ತು ಮಂತ್ರಿಗಳೂ ಕ್ರಮವಾಗಿ ತಮಗೆ ಯೋಗ್ಯವಾದ ಆಸನಗಳಲ್ಲಿ ಕುಳಿತರು. ಮತ್ತೆ ಸೇನಾಪತಿ ಮತ್ತು ಪ್ರಶಾಸ್ತಾ (ಸೈನ್ಯ ಶಿಬಿರ ರಕ್ಷಕ) ಅವರೂ ಕುಳಿತುಕೊಂಡರು.॥40॥
ಮೂಲಮ್ - 41
ತತಸ್ತತ್ರಮುಹೂರ್ತೇನ ನದ್ಯಃ ಪಾಯಸಕರ್ದಮಾಃ ।
ಉಪಾತಿಷ್ಠಂತ ಭರತಂ ಭರದ್ವಾಜಸ್ಯ ಶಾಸನಾತ್ ॥
ಅನುವಾದ
ಅನಂತರ ಮುಹೂರ್ತ ಮಾತ್ರದಲ್ಲಿ ಭರದ್ವಾಜಮುನಿಯ ಆಜ್ಞೆಯಂತೆ ಭರತನ ಸೇವೆಯಲ್ಲಿ ನದಿಗಳು ಉಪಸ್ಥಿತರಾದರು, ಅದರಲ್ಲಿ ಕೆಸರಿನ ಸ್ಥಾನದಲ್ಲಿ ಪಾಯಸವೇ ತುಂಬಿತ್ತು.॥41॥
ಮೂಲಮ್ - 42
ಆಸಾಮುಭಯತಃಕೂಲಂ ಪಾಂಡುಮೃತ್ತಿಕಲೇಪನಾಃ ।
ರಮ್ಯಾಶ್ಚಾವಸಥಾ ದಿವ್ಯಾ ಬ್ರಾಹ್ಮಣಸ್ಯ ಪ್ರಸಾದಜಾಃ ॥
ಅನುವಾದ
ಆ ನದಿಗಳ ಇಕ್ಕೆಲಗಳ ತೀರದಲ್ಲಿ ಬ್ರಹ್ಮರ್ಷಿ ಭರದ್ವಾಜರ ಕೃಪೆಯಿಂದ ದಿವ್ಯ, ರಮಣೀಯ, ಸುಣ್ಣ ಬಳಿದ ಭವನಗಳು ಪ್ರಕಟವಾಗಿದ್ದವು.॥42॥
ಮೂಲಮ್ - 43
ತೇನೈವ ಚ ಮುಹೂರ್ತೇನ ದಿವ್ಯಾಭರಣಭೂಷಿತಾಃ ।
ಆಗುರ್ವಿಂಶತಿಸಾಹಸ್ರಾ ಬ್ರಹ್ಮಣಾ ಪ್ರಹಿತಾಃ ಸ್ತ್ರಿಯಃ ॥
ಅನುವಾದ
ಅದೇ ಮುಹೂರ್ತದಲ್ಲಿ ಬ್ರಹ್ಮದೇವರು ಕಳಿಸಿದ ದಿವ್ಯ ಒಡವೆಗಳಿಂದ ಭೂಷಿತರಾದ ಇಪ್ಪತ್ತು ಸಾವಿರ ದಿವ್ಯಾಂಗನೆಯರು ಅಲ್ಲಿಗೆ ಬಂದರು.॥43॥
ಮೂಲಮ್ - 44½
ಸುವರ್ಣಮಣಿಮುಕ್ತೇನ ಪ್ರವಾಲೇನ ಚ ಶೋಭಿತಾಃ ।
ಆಗುರ್ವಿಂಶತಿಸಾಹಸ್ರಾಃ ಕುಬೇರಪ್ರಹಿತಾಃ ಸ್ತ್ರಿಯಃ ॥
ಯಾಭಿರ್ಗೃಹೀತಃ ಪುರುಷಃ ಸೋನ್ಮಾದ ಇವ ಲಕ್ಷ್ಯತೇ ।
ಅನುವಾದ
ಹೀಗೆಯೇ ಸುವರ್ಣ, ಮಣಿ, ಮುತ್ತು ಹವಳದ ಆಭೂಷಣಗಳಿಂದ ಶೋಭಿಸುವ, ಕುಬೇರನು ಕಳಿಸಿದ ಇಪ್ಪತ್ತು ಸಾವಿರ ದಿವ್ಯಮಹಿಳೆಯರೂ ಅಲ್ಲಿಗೆ ಬಂದರು. ಅವರ ಸ್ಪರ್ಶದಿಂದ ಪುರುಷನು ಉನ್ಮಾದಗ್ರಸ್ತನಂತಾಗುತ್ತಿದ್ದನು.॥44॥
ಮೂಲಮ್ - 45
ಆಗುರ್ವಿಂಶತಿಸಾಹಸ್ರಾ ನಂದನಾದಪ್ಸರೋಗಣಾಃ ॥
ಮೂಲಮ್ - 46
ನಾರದಸ್ತುಂಬುರುರ್ಗೋಪಃ ಪ್ರಭಯಾ ಸೂರ್ಯವರ್ಚಸಃ ।
ಏತೇ ಗಂಧರ್ವರಾಜಾನೋ ಭರತಸ್ಯಾಗ್ರತೋ ಜಗುಃ ॥
ಅನುವಾದ
ಇವರಲ್ಲದೆ ನಂದನವನದಿಂದ ಇಪ್ಪತ್ತು ಸಾವಿರ ಅಪ್ಸರೆಯರೂ ಬಂದರು. ನಾರದ, ತುಂಬುರು ಮತ್ತು ಗೋಪರು ತಮ್ಮ ಕಾಂತಿಯಿಂದ ಸೂರ್ಯನಂತೆ ಪ್ರಕಾಶಿಸುತ್ತಿದ್ದರು. ಈ ಮೂವರೂ ಗಂಧರ್ವರು ಭರತನ ಮುಂದೆ ಗಾಯನ ಮಾಡತೊಡಗಿದರು.॥45-46॥
ಮೂಲಮ್ - 47
ಅಲಂಬುಷಾಮಿಶ್ರಕೇಶೀ ಪುಂಡರೀಕಾಥ ವಾಮನಾ ।
ಉಪಾನೃತ್ಯಂತ ಭರತಂ ಭರದ್ವಾಜಸ್ಯ ಶಾಸನಾತ್ ॥
ಅನುವಾದ
ಅಲಂಬುಷಾ, ಮಿಶ್ರಕೇಶೀ, ಪುಂಡರೀಕಾ ಮತ್ತು ವಾಮನಾ ಈ ನಾಲ್ವರು ಅಪ್ಸರೆಯರು ಭರದ್ವಾಜರ ಆಜ್ಞೆಯಂತೆ ಭರತನ ಮುಂದೆ ನೃತ್ಯಮಾಡತೊಡಗಿದರು.॥47॥
ಮೂಲಮ್ - 48
ಯಾನಿ ಮಾಲ್ಯಾನಿ ದೇವೇಷು ಯಾನಿ ಚೈತ್ರರಥೇ ವನೇ ।
ಪ್ರಯಾಗೇ ತಾನ್ಯದೃಶ್ಯಂತ ಭರದ್ವಾಜಸ್ಯ ತೇಜಸಾ ॥
ಅನುವಾದ
ಮಹರ್ಷಿ ಭರದ್ವಾಜರ ಪ್ರತಾಪದಿಂದ ದೇವತೆಗಳ ಉದ್ಯಾನವನಗಳಲ್ಲಿ ಹಾಗೂ ಚೈತ್ರರಥ ವನದಲ್ಲಿ ಅರಳುವ ಹೂವುಗಳು ಪ್ರಯಾಗದಲ್ಲಿ ಕಾಣಿಸಿಕೊಂಡವು.॥48॥
ಮೂಲಮ್ - 49
ಬಿಲ್ವಾ ಮಾರ್ದಂಗಿಕಾ ಆಸನ್ ಶಮ್ಯಾಗ್ರಾಹಾ ಬಿಭೀತಕಾಃ ।
ಅಶ್ವತ್ಥಾ ನರ್ತಕಾಶ್ಚಾಸನ್ ಭರದ್ವಾಜಸ್ಯ ತೇಜಸಾ ॥
ಅನುವಾದ
ಭರದ್ವಾಜ ಮುನಿಯ ತೇಜದಿಂದ ಬಿಲ್ವವೃಕ್ಷಗಳು ಮೃದಂಗ ನುಡಿಸುತ್ತಿದ್ದವು, ಬಿಭೀತಕ ವೃಕ್ಷಗಳು ತಾಳ ಹಾಕುತ್ತಿದ್ದವು, ಅಶ್ವತ್ಥ ವೃಕ್ಷಗಳು ನರ್ತನ ಮಾಡುತ್ತಿದ್ದವು.॥49॥
ಮೂಲಮ್ - 50
ತತಃ ಸರಲತಾಲಾಶ್ಚ ತಿಲಕಾಃ ಸತಮಾಲಕಾಃ ।
ಪ್ರಹೃಷ್ಟಾಸ್ತತ್ರ ಸಂಪೇತುಃ ಕುಬ್ಜಾ ಭೂತ್ವಾಥ ವಾಮನಾಃ ॥
ಅನುವಾದ
ಅನಂತರ ಎತ್ತರವಾಗಿ ಬೆಳೆದಿರುವ ದೇವದಾರು-ತಾಲ-ತಿಲಕ-ತಮೂಲ ವೃಕ್ಷಗಳು ಸಂತೋಷಗೊಂಡು ವಕ್ರವಾಗಿ, ಕಿರುಗಿಡಗಳಂತಾಗಿ ಭರತನ ಸೇವೆಯಲ್ಲಿ ಉಪಸ್ಥಿತವಾದವು.॥50॥
ಮೂಲಮ್ - 51
ಶಿಂಶಪಾಽಽಮಲಕೀಜಂಬೂರ್ಯಾಶ್ಚಾನ್ಯಾಃ ಕಾನನೇ ಲತಾಃ ।
ಮಾಲತೀ ಮಲ್ಲಿಕಾ ಜಾತಿರ್ಯಾಶ್ಚಾನ್ಯಾಃ ಕಾನನೇಲತಾಃ ।
ಪ್ರಮದಾವಿಗ್ರಹಂ ಕೃತ್ವಾ ಭರದ್ವಾಜಾಶ್ರಮೇಽವಸನ್ ॥
ಅನುವಾದ
ಶಿಂಶಪಾ, ಆಮಲಕಿ, ಜಂಬೂ ಸೀಲಿಂಗ ವೃಕ್ಷಗಳು, ಮಾಲತಿ, ಮಲ್ಲಿಕಾ, ಜಾಜಿ ಮೊದಲಾದ ಕಾಡಿನ ಲತೆಗಳು ನಾರಿಯರ ರೂಪಧರಿಸಿ ಭರದ್ವಾಜಮುನಿಯ ಆಶ್ರಮದಲ್ಲಿ ಬಂದು ತಂಗಿದರು.॥51॥
ಮೂಲಮ್ - 52
ಸುರಾಂ ಸುರಾಪಾಃ ಪಿಬತ ಪಾಯಸಂ ಚ ಬುಭುಕ್ಷಿತಾಃ ।
ಮಾಂಸಾನಿ ಚ ಸುಮೇಧ್ಯಾನಿ ಭಕ್ಷ್ಯಂತಾಂ ಯೋ ಯದಿಚ್ಛತಿ ॥
ಅನುವಾದ
(ಅವರು ಭರತನ ಸೈನಿಕರಿಗೆ ಕರೆ-ಕರೆದು ಹೇಳುತ್ತಿದ್ದರು-) ಮಧುಪಾನ ಮಾಡುವ ಜನರಿರಾ! ಇದೋ, ಮಧುಪಾನ ಮಾಡಿರಿ, ನಿಮ್ಮಲ್ಲಿ ಹಸಿವಾದವರು ಈ ಪಾಯಸ ತಿನ್ನಿರಿ ಹಾಗೂ ಪರಮ ಪವಿತ್ರ ಫಲಗಳ ತಿರುಳೂ ಕೂಡ ಸಿದ್ಧವಿದೆ ಅದನ್ನು ಸವಿಯಿರಿ. ನಿಮ್ಮ ಇಚ್ಛೆಯಂತೆ ಭೋಜನಮಾಡಿರಿ.॥52॥
ಮೂಲಮ್ - 53
ಉಚ್ಛೋದ್ಯ ಸ್ನಾಪಯಂತಿ ಸ್ಮ ನದೀತೀರೇಷು ವಲ್ಗುಷು ।
ಅಪ್ಯೇಕಮೇಕಂ ಪುರುಷಂ ಪ್ರಮದಾಃ ಸಪ್ತ ಚಾಷ್ಟ ಚ ॥
ಅನುವಾದ
ಏಳೆಂಟು ತರುಣಿಯರು ಸೇರಿ ಒಬ್ಬೊಬ್ಬ ಪುರುಷರಿಗೆ ನದಿಯ ಮನೋಹರ ತೀರದಲ್ಲಿ ಮೈಗೆ ಸುಗಂಧ ತೈಲವನ್ನು ಹಚ್ಚಿ ಸ್ನಾನ ಮಾಡಿಸುತ್ತಿದ್ದರು.॥53॥
ಮೂಲಮ್ - 54
ಸಂವಾಹಂತ್ಯಃ ಸಮಾಪೇತುರ್ನಾರ್ಯೋ ವಿಪುಲಲೋಚನಾಃ ।
ಪರಿಮೃಜ್ಯ ತಥಾನ್ಯೋನ್ಯಂ ಪಾಯಯಂತಿ ವರಾಂಗನಾಃ ॥
ಅನುವಾದ
ವಿಶಾಲ ನೇತ್ರೆಯರಾದ ಸುಂದರೀ ರಮಣೀಯರು ಅತಿಥಿಗಳ ಕಾಲುಗಳನ್ನೊತ್ತುತ್ತಿದ್ದರು. ಅವರು ನೆನೆದ ಅವರ ಶರೀರವನ್ನು ಬಟ್ಟೆಯಿಂದ ಒರೆಸಿ ಶುದ್ಧ ವಸ್ತ್ರ ಉಡಿಸಿ, ಅವರಿಗೆ ರುಚಿಕರ ಹಾಲನ್ನು ಕುಡಿಸುತ್ತಿದ್ದರು.॥54॥
ಮೂಲಮ್ - 55
ಹಯಾನ್ಗಜಾನ್ಖರಾನುಷ್ಟ್ರಾಂಸ್ತಥೈವ ಸುರಭೇಃ ಸುತಾನ್ ।
ಅಭೋಜಯನ್ವಾಹನಪಾಸ್ತೇಷಾಂ ಭೋಜ್ಯಂ ಯಥಾವಿಧಿ ॥
ಅನುವಾದ
ಅನಂತರ ಬೇರೆ-ಬೇರೆ ವಾಹನಗಳ ರಕ್ಷಣೆಯಲ್ಲಿ ನಿಯುಕ್ತರಾದ ಜನರು ಆನೆ, ಕುದುರೆ, ಒಂಟೆ, ಹೆಸರಗತ್ತೆ, ಎತ್ತುಗಳು ಹೀಗೆ ಪ್ರಾಣಿಗಳಿಗೆ ಬಗೆ-ಬಗೆಯ ಹುಲ್ಲು, ಕಾಳು ತಿನ್ನಿಸಿದರು.॥55॥
ಮೂಲಮ್ - 56
ಇಕ್ಷೂಂಶ್ಚ ಮಧುಲಾಜಾಂಶ್ಚ ಭೋಜಯಂತಿಸ್ಮ ವಾಹನಾನ್ ।
ಇಕ್ಷ್ವಾಕುವರಯೋಧಾನಾಂ ಚೋದಯಂತೋ ಮಹಾಬಲಾಃ ॥
ಅನುವಾದ
ಇಕ್ಷ್ವಾಕುಕುಲದ ಶ್ರೇಷ್ಠ ಯೋಧರ ವಾಹನಗಳನ್ನು ಎಳೆಯುವ ಪಶುಗಳಿಗೆ ಮಹರ್ಷಿಗಳು ಸೇವೆಗಾಗಿ ನಿಯುಕ್ತಗೊಳಿಸಿದ ವಾಹನ ರಕ್ಷಕರು ಕಬ್ಬು ಮತ್ತು ಜೇನುತುಪ್ಪವನ್ನು ಬೆರೆಸಿದ ಅರಳು ಒತ್ತಾಯವಾಗಿ ತಿನ್ನಿಸುತ್ತಿದ್ದರು.॥56॥
ಮೂಲಮ್ - 57
ನಾಶ್ವಬಂಧೋಽಶ್ವಮಾಜಾನಾನ್ನ ಗಜಂ ಕುಂಜರಗ್ರಹಃ ।
ಮತ್ತಪ್ರಮತ್ತಮುದಿತಾ ಸಾ ಚಮೂಸ್ತತ್ರ ಸಂಬಭೌ ॥
ಅನುವಾದ
ಕುದುರೆಗಳನ್ನು ಕಟ್ಟಿಹಾಕುವವರಿಗೆ ತಮ್ಮ ಕುದುರೆಗಳು ಮತ್ತು ಆನೆಗಳ ಮಾವುತರಿಗೆ ತಮ್ಮ ಆನೆಗಳು ಎಲ್ಲಿವೆ ಎಂಬುದೇ ತಿಳಿದಿರಲಿಲ್ಲ. ಎಲ್ಲ ಸೈನ್ಯವು ಅಲ್ಲಿ ಮತ್ತ-ಪ್ರಮತ್ತ ಹಾಗೂ ಆನಂದಮಗ್ನವಾಗಿ ಕಾಣುತ್ತಿತ್ತು.॥57॥
ಮೂಲಮ್ - 58
ತರ್ಪಿತಾಃ ಸರ್ವಕಾಮೈಶ್ಚ ರಕ್ತಚಂದನರೂಷಿತಾಃ ।
ಅಪ್ಸರೋಗಣಸಂಯುಕ್ತಾಃ ಸೈನ್ಯಾ ವಾಚಮುದೀರಯನ್ ॥
ಅನುವಾದ
ಸಮಸ್ತ ಮನೋ ವಾಂಛಿತ ಪದಾರ್ಥಗಳಿಂದ ತೃಪ್ತರಾಗಿ ಕೆಂಪು ಚಂದನದಿಂದ ಚರ್ಚಿತರಾದ ಸೈನಿಕರು ಅಪ್ಸರೆಯರ ಸಂಯೋಗ ಪಡೆದು ಕೆಳಗಿನಂತೆ ಹೇಳತೊಡಗಿದರು .॥58॥
ಮೂಲಮ್ - 59
ನೈವಾಯೋಧ್ಯಾಂ ಗಮಿಷ್ಯಾಮೋ ನ ಗಮಿಷ್ಯಾಮದಂಡಕಾನ್ ।
ಕುಶಲಂ ಭರತಸ್ಯಾಸ್ತು ರಾಮಸ್ಯಾಸ್ತು ತಥಾ ಸುಖಮ್ ॥
ಅನುವಾದ
ಇನ್ನು ನಾವು ಅಯೋಧ್ಯೆಗೆ ಹೋಗುವುದಿಲ್ಲ, ದಂಡಕಾರಣ್ಯಕ್ಕೂ ಹೋಗಲಾರೆವು. ಭರತನು ಕುಶಲನಾಗಿರಲಿ (ಅವನಿಂದಾಗಿ ನಮಗೆ ಈ ಭೂತಳದಲ್ಲೇ ಸ್ವರ್ಗವು ಸಿಕ್ಕಿದೆ) ಶ್ರೀರಾಮಚಂದ್ರನೂ ಸುಖವಾಗಿ ಇರಲಿ. (ಅವನ ದರ್ಶನಕ್ಕಾಗಿ ಬಂದಾಗ ನಮಗೆ ಇಂತಹ ದಿವ್ಯಸುಖವು ದೊರೆಯಿತು.॥59॥
ಮೂಲಮ್ - 60
ಇತಿಪಾದಾತಯೋಧಾಶ್ಚ ಹಸ್ತ್ಯಶ್ವಾರೋಹಬಂಧಕಾಃ ।
ಅನಾಥಾಸ್ತಂ ವಿಧಿಂಲಬ್ಧ್ವಾ ವಾಚಮೇತಾಮುದೀರಯನ್ ॥
ಅನುವಾದ
ಹೀಗೆ ಕಾಲಾಳುಗಳು, ಆನೆ ಸವಾರರು, ಕುದುರೆ ಸವಾರರು, ಮಾವುತರೇ ಆದಿ ಆ ಸತ್ಕಾರವನ್ನು ಪಡೆದು ಸ್ವಚ್ಛಂದವಾಗಿ ಮೇಲಿನಂತೆ ಮಾತನಾಡಿಕೊಳ್ಳುತ್ತಿದ್ದರು.॥60॥
ಮೂಲಮ್ - 61
ಸಂಪ್ರಹೃಷ್ಟಾ ವಿನೇದುಸ್ತೇ ನರಾಸ್ತತ್ರ ಸಹಸ್ರಶಃ ।
ಭರತಸ್ಯಾನುಯಾತಾರಃ ಸ್ವರ್ಗೋಽಯಮಿತಿ ಚಾಬ್ರುವನ್ ॥
ಅನುವಾದ
ಭರತನ ಜೊತೆಗೆ ಬಂದ ಸಾವಿರಾರು ಜನರು ಅಲ್ಲಿಯ ವೈಭವವನ್ನು ನೋಡಿ ಅತ್ಯಂತ ಹರ್ಷಗೊಂಡು ‘ಇದು ಸ್ವರ್ಗವಾಗಿದೆ’ ಎಂದು ಗಟ್ಟಿಯಾಗಿ ಹೇಳುತ್ತಿದ್ದರು.॥61॥
ಮೂಲಮ್ - 62
ನೃತ್ಯತಂಶ್ಚ ಹಸಂತಶ್ಚ ಗಾಯಂತಶ್ಚೈವ ಸೈನಿಕಾಃ ।
ಸಮಂತಾತ್ ಪರಿಧಾವಂತೋ ಮಾಲ್ಯೋಪೇತಾಃ ಸಹಸ್ರಶಃ ॥
ಅನುವಾದ
ಸಾವಿರಾರು ಸೈನಿಕರು ಹೂವಿನ ಹಾರಗಳನ್ನು ಧರಿಸಿಕೊಂಡು ಕುಣಿಯುತ್ತಾ, ನಗುತ್ತಾ, ಹಾಡುತ್ತಾ ಎಲ್ಲೆಡೆ ಕುಣಿದಾಡುತ್ತಿದ್ದರು.॥62॥
ಮೂಲಮ್ - 63
ತತೋ ಭುಕ್ತವತಾಂ ತೇಷಾಂತದನ್ನಮಮೃತೋಪಮಮ್ ।
ದಿವ್ಯಾನುದ್ವೀಕ್ಷ್ಯ ಭಕ್ಷ್ಯಾಂಸ್ತಾನಭವದ್ ಭಕ್ಷಣೇ ಮತಿಃ ॥
ಅನುವಾದ
ಆ ಅಮೃತತುಲ್ಯ ರುಚಿಕರ ಭೋಜನ ಮಾಡಿಯಾದ ಮೇಲೆಯೂ ಆ ದಿವ್ಯ ಭಕ್ಷ್ಯಭೋಜ್ಯ ಪದಾರ್ಥಗಳನ್ನು ನೋಡಿ ಪುನಃ ಊಟಮಾಡುವ ಇಚ್ಛೆ ಉಂಟಾಗುತ್ತಿತ್ತು.॥63॥
ಮೂಲಮ್ - 64
ಪ್ರೇಷ್ಯಾಶ್ಚೇಟ್ಯಶ್ಚ ವಧ್ಯಶ್ಚ ಬಲಸ್ಥಾಶ್ಚಾಪಿ ಸರ್ವಶಃ ।
ಬಭೂಷುಸ್ತೇ ಭೃಶಂ ಪ್ರೀತಾಃ ಸರ್ವೇ ಚಾಹತವಾಸಸಃ ॥
ಅನುವಾದ
ದಾಸ, ದಾಸಿಯರು, ಸೈನಿಕರ ಪತ್ನಿಯರೂ, ಸೈನಿಕರೂ ಎಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ ಎಲ್ಲ ವಿಧದಿಂದ ಅತ್ಯಂತ ಪ್ರಸನ್ನರಾಗಿದ್ದರು.॥64॥
ಮೂಲಮ್ - 65
ಕುಂಜರಾಶ್ಚ ಖರೋಷ್ಟ್ರಾಶ್ಚ ಗೋಽಶ್ವಾಶ್ಚ ಮೃಗಪಕ್ಷಿಣಃ ।
ಬಭೂವುಃ ಸುಭೃತಾಸ್ತತ್ರ ನಾತೋ ಹ್ಯನ್ಯಮಕಲ್ಪಯತ್ ॥
ಅನುವಾದ
ಆನೆ, ಕುದುರೆ, ಒಂಟೆ, ಎತ್ತು, ಹೇಸರಗತ್ತೆ ಹಾಗೂ ಪಶುಪಕ್ಷಿಗಳೆಲ್ಲ ಅಲ್ಲಿ ಪೂರ್ಣ ತೃಪ್ತವಾಗಿದ್ದವು. ಆದ್ದರಿಂದ ಯಾರೂ ಬೇರೆ ಯಾವ ವಸ್ತುವನ್ನೂ ಇಚ್ಛಿಸುತ್ತಿರಲಿಲ್ಲ.॥65॥
ಮೂಲಮ್ - 66
ನಾಶುಕ್ಲವಾಸಾಸ್ತತ್ರಾಸೀತ್ ಕ್ಷುಧಿತೋ ಮಲಿನೋಽಪಿ ವಾ ।
ರಜಸಾ ಧ್ವಸ್ತಕೇಶೋ ವಾ ನರಃ ಕಶ್ಚಿದದೃಶ್ಯತ ॥
ಅನುವಾದ
ಆಗ ಅಲ್ಲಿ ಬಟ್ಟೆ ಕೊಳೆಯಾದವರು, ಹಸಿದಿರುವವರು, ಕೊಳಕಾದವರು, ಧೂಳು ತುಂಬಿ ಕೆದರಿದ ಕೂದಲುಳ್ಳವರು ಯಾರೂ ಕಂಡು ಬರುತ್ತಿರಲಿಲ್ಲ.॥66॥
ಮೂಲಮ್ - 67
ಆಜೈಶ್ಚಾಪಿ ಚ ವಾರಾಹೈರ್ನಿಷ್ಠಾನವರಸಂಚಯೈಃ ।
ಫಲನಿರ್ಯೂಹಸಂಸಿದ್ಧೈಃ ಸೂಪೈರ್ಗಂಧರಸಾನ್ವಿತೈಃ ॥
ಮೂಲಮ್ - 68
ಪುಷ್ಪಧ್ವಜವತೀಃ ಪೂರ್ಣಾಃ ಶುಕ್ಲಸ್ಯಾನ್ನಸ್ಯ ಚಾಭಿತಃ ।
ದದೃಶುರ್ವಿಸ್ಮಿತಾಸ್ತತ್ರ ನರಾ ಲೌಹೀಃ ಸಹಸ್ರಶಃ ॥
ಅನುವಾದ
ಓಮ ಬೆರೆಸಿದ, ವರಾಹೀ ಕಂದದಿಂದ ಸಿದ್ಧಪಡಿಸಿದ ಹಾಗೂ ಮಾವು ಮೊದಲಾದ ಹಣ್ಣುಗಳ ರಸದಲ್ಲಿ ಬೇಯಿಸಿದ ಉತ್ತಮೋತ್ತಮ ವ್ಯಂಜನಗಳ ಸಂಗ್ರಹದಿಂದ, ಪರಿಮಳಯುಕ್ತ ತೊವ್ವೆಗಳಿಂದ, ಬಿಳಿಯಾದ ಶಾಲ್ಯಾನ್ನಗಳಿಂದ ತುಂಬಿದ ಸಾವಿರಾರು ಬಂಗಾರವೇ ಮೊದಲಾದ ಪಾತ್ರೆಗಳು ಅಲ್ಲಿ ಎಲ್ಲೆಡೆ ಇರಿಸಿದ್ದರು. ಅವನ್ನು ಹೂವಿನ ಧ್ವಜಗಳಿಂದ ಅಲಂಕರಿಸಲಾಗಿತ್ತು. ಭರತನೊಂದಿಗೆ ಬಂದವರೆಲ್ಲರೂ ಆ ಪಾತ್ರೆಗಳನ್ನು ಆಶ್ಚರ್ಯಚಕಿತರಾಗಿ ನೋಡುತ್ತಿದ್ದರು.॥67-68॥
ಮೂಲಮ್ - 69
ಬಬೂವುರ್ವನಪಾರ್ಶ್ವೇಷು ಕೂಪಾಃ ಪಾಯಸಕರ್ದಮಾಃ ।
ತಾಶ್ಚ ಕಾಮದುಘಾ ಗಾವೋ ದ್ರುಮಾಶ್ಚಾಸನ್ ಮಧುಚ್ಯುತಃ ॥
ಅನುವಾದ
ವನದ ಸಮೀಪದಲ್ಲಿದ್ದ ಎಲ್ಲ ಕೆರೆಗಳಲ್ಲಿ ರುಚಿಕರ, ಗಾಢವಾದ ಪಾಯಸ ತುಂಬಿತ್ತು. ಎಲ್ಲ ರೀತಿಯ ಕಾಮನೆಗಳನ್ನು ಪೂರ್ಣವಾಗಿಸುವ ಅಲ್ಲಿಯ ಗೋವುಗಳೆಲ್ಲ ಕಾಮಧೇನುಗಳಾಗಿದ್ದವು. ಆ ದಿವ್ಯವನದ ವೃಕ್ಷಗಳು ಜೇನನ್ನು ಸುರಿಸುತ್ತಿದ್ದವು.॥69॥
ಮೂಲಮ್ - 70
ವಾಪ್ಯೋ ಮೈರೈಯಪೂರ್ಣಾಶ್ಚ ಮೃಷ್ಟಮಾಂಸಚಯೈರ್ವೃತಾಃ ।
ಪ್ರತಪ್ತಪಿಠರೈಶ್ಚಾಪಿ ಮಾರ್ಗಮಾಯೂರಕೌಕ್ಕುಟೈಃ ॥
ಅನುವಾದ
ಭರತನ ಸೇನೆಯಲ್ಲಿ ಬಂದಿರುವ ನಿಷಾದರೇ ಆದಿ ಕೇಳ ವರ್ಗದ ಜನರ ತೃಪ್ತಿಗಾಗಿ ಅಲ್ಲಿ ಮಧು ತುಂಬಿದ ಬಾವಿಗಳು ಪ್ರಕಟಗೊಂಡಿದ್ದವು. ಅದರ ಪಕ್ಕದಲ್ಲಿ ಬೇಯಿಸಿದ ಜಿಂಕೆ, ನವಿಲು, ಕೋಳಿ ಇವುಗಳ ಸ್ವಚ್ಛವಾದ ಮಾಂಸದ ರಾಶಿ-ರಾಶಿಗಳನ್ನೇ ಇರಿಸಿದ್ದರು.॥70॥
ಮೂಲಮ್ - 71
ಪಾತ್ರೀಣಾಂ ಚ ಸಹಸ್ರಾಣಿ ಸ್ಥಾಲೀನಾಂ ನಿಯುತಾನಿ ಚ ।
ನ್ಯರ್ಬುದಾನಿ ಚ ಪಾತ್ರಾಣಿ ಶಾತಕುಂಭಮಯಾನಿ ಚ ॥
ಅನುವಾದ
ಅಲ್ಲಿ ಸಾವಿರಾರು ಚಿನ್ನದ ತಟ್ಟೆಗಳು, ಲಕ್ಷಗಟ್ಟಲೆ ಬಟ್ಟಲುಗಳು ಮತ್ತು ಒಂದು ಅರ್ಬುದ ಲೋಟ-ತಟ್ಟೆಗಳು ಸಂಗ್ರಹಿತವಾಗಿತ್ತು.॥71॥
ಮೂಲಮ್ - 72
ಸ್ಥಾಲ್ಯಃ ಕುಂಭ್ಯಃ ಕರಂಭ್ಯಶ್ಚ ದಧಿಪೂರ್ಣಾಃ ಸುಸಂಸ್ಕೃತಾಃ ।
ಯೌವನಸ್ಥಸ್ಯ ಗೌರಸ್ಯ ಕಪಿತ್ಥಸ್ಯ ಸುಗಂಧಿನಃ ॥
ಮೂಲಮ್ - 73
ಹ್ರದಾಃ ಪೂರ್ಣಾ ರಸಾಲಸ್ಯದಧ್ನಃ ಶ್ವೇತಸ್ಯ ಚಾಪರೇ ।
ಬಭೂವುಃ ಪಾಯಸಸ್ಯಾನ್ಯೇ ಶರ್ಕರಾಣಾಂ ಚ ಸಂಚಯಾಃ ॥
ಅನುವಾದ
ಕಡಾಯಿಗಳಲ್ಲಿ ಸಣ್ಣ-ಸಣ್ಣ ಗಡಿಗೆಗಳಲ್ಲಿ ಮೊಸರನ್ನು ತುಂಬಿಟ್ಟಿದ್ದರು. ಮೊಸರನ್ನು ರುಚಿಕರವಾಗಿಸಲು ಶುಂಠಿಯೇ ಆದಿ ಮಸಾಲೆಗಳನ್ನು ಅದರಲ್ಲಿ ಹಾಕಿದ್ದರು. ಆಗತಾನೇ ತಯಾರಿಸಿದ ಕೇಸರೀ ಮಿಶ್ರಿತ ಸುಗಂಧಿತ ಮಜ್ಜಿಗೆಯ ಅನೇಕ ಸರೋವರಗಳೇ ತುಂಬಿದ್ದವು. ಜೀರಿಗೆ ಮೊದಲಾದುವನ್ನು ಬೆರೆಸಿದ ಮಠ್ಠಾದಿಂದ ತುಂಬಿದ, ಬಿಳಿಯ ಮೊಸರಿನ ಮತ್ತು ಹಾಲಿನ ಅನೇಕ ಕುಂಡಗಳು ಬೇರೆ-ಬೇರೆಯಾಗಿ ತುಂಬಿದ್ದವು. ಸಕ್ಕರೆಯ ಪರ್ವತಗಳೇ ಅಲ್ಲಿದ್ದವು.॥72-73॥
ಮೂಲಮ್ - 74
ಕಲ್ಕಾಂಶ್ಚೂರ್ಣಕಷಾಯಾಂಶ್ಚ ಸ್ನಾನಾನಿ ವಿವಿಧಾನಿ ಚ ।
ದದೃಶುರ್ಭಾಜನಸ್ಥಾನಿ ತೀರ್ಥೇಷು ಸರಿತಾಂ ನರಾಃ ॥
ಅನುವಾದ
ಸ್ನಾನ ಮಾಡುವ ಜನರಿಗೆ ನದೀ ತೀರದಲ್ಲಿ ಬೇರೆ-ಬೇರೆ ಪಾತ್ರೆಗಳಲ್ಲಿ ಅರೆದ ನೆಲ್ಲಿಕಾಯಿ ಚೂರ್ಣ, ಸುಗಂಧಿತ ಚೂರ್ಣ ಹಾಗೂ ಇನ್ನೂ ನಾನಾ ರೀತಿಯ ಸ್ನಾನೋಪಯೋಗಿ ಪದಾರ್ಥಗಳು ಕಂಡುಬರುತ್ತಿದ್ದವು.॥74॥
ಮೂಲಮ್ - 75
ಶುಕ್ಲಾನಂಶುಮತಶ್ಚಾಪಿ ದಂತಧಾವನಸಂಚಯಾನ್ ।
ಶುಕ್ಲಾಂಶ್ಚಂದನಕಲ್ಕಾಂಶ್ಚ ಸಮುದ್ರೇಷ್ವವತಿಷ್ಠತಃ ॥
ಅನುವಾದ
ಹಲ್ಲುಗಳನ್ನು ಉಜ್ಜಲು ಬಿಳುಪಾದ ಚೂರ್ಣದಿಂದ ಕೂಡಿರುವ ಬೇವಿನ ಮತ್ತು ಉತ್ತರಣೆಯ ಕಡ್ಡಿಗಳನ್ನು ರಾಶಿ-ರಾಶಿಯಾಗಿದ್ದು, ಸ್ನಾನಾನಂತರ ಅಲಂಕಾರಾರ್ಥ ಲೇಪಿಸಿಕೊಳ್ಳುವ ಅಂಗ ರಾಗಗಳನ್ನು ಸಂಪುಟಗಳಲ್ಲಿ ಸಿದ್ಧಪಡಿಸಿದ್ದುದು ಜನರು ನೋಡಿದರು.॥75॥
ಮೂಲಮ್ - 76
ದರ್ಪಣಾನ್ಪರಿಮೃಷ್ಟಾಂಶ್ಚ ವಾಸಸಾಂ ಚಾಪಿ ಸಂಚಯಾನ್ ।
ಪಾದುಕೋಪಾನಹಾಂ ಚೈವ ಯುಗ್ಮಾನ್ಯತ್ರ ಸಹಸ್ರಶಃ ॥
ಅನುವಾದ
ಇಷ್ಟೇ ಅಲ್ಲದೆ ಅಲ್ಲಿ ಅನೇಕ ಸ್ವಚ್ಛ ಕನ್ನಡಿಗಳು, ರಾಶಿ-ರಾಶಿ ಬಟ್ಟೆಗಳು ಮತ್ತು ಸಾವಿರಾರು ಪಾದುಕೆಗಳನ್ನು, ಪಾದರಕ್ಷೆಗಳನ್ನು ಇಟ್ಟಿರುವುದನ್ನು ಭರತನ ಜನರು ನೋಡಿದರು.॥76॥
ಮೂಲಮ್ - 77
ಅಂಜನೀಃ ಕಂಕತಾನ್ ಕೂರ್ಚಾಂಶ್ಛಸ್ತ್ರಾಣಿ ಚ ಧನೂಂಷಿಚ ।
ಮರ್ಮತ್ರಾಣಾನಿ ಚಿತ್ರಾಣಿ ಶಯನಾನ್ಯಾಸನಾನಿ ಚ ॥
ಅನುವಾದ
ಕಾಡಿಗೆಯ ಕರಂಡಗಳೂ, ಬಾಚಣಿಗೆ, ಕೂರ್ಚಗಳೂ (ತುಲಿಕಾ ಅಥವಾ ಬ್ರಶ್), ಛತ್ರ ಧನುಸ್ಸುಗಳೂ, ಮರ್ಮಸ್ಥಾನಗಳಲ್ಲಿ ತೊಡುವ ಕವಚಗಳೂ, ಚಿತ್ರಿತ ಶಯ್ಯೆಗಳೂ, ಆಸನಗಳೂ ಅಲ್ಲಿ ಕಾಣಿಸುತ್ತಿದ್ದವು.॥77॥
ಮೂಲಮ್ - 78
ಪ್ರತಿಪಾನಹ್ರದಾನ್ಪೂರ್ಣಾನ್ ಖರೋಷ್ಟ್ರಗಜವಾಜಿನಾಮ್ ।
ಅವಗಾಹ್ಯಸುತೀರ್ಥಾಂಶ್ಚ ಹ್ರದಾನ್ ಸೋತ್ಪಲಪುಷ್ಕರಾನ್ ।
ಆಕಾಶವರ್ಣಪ್ರತಿಮಾನ್ ಸ್ವಚ್ಛತೋಯಾನ್ಸುಖಪ್ಲವಾನ್ ॥
ಅನುವಾದ
ಹೇಸರಗತ್ತೆ, ಒಂಟೆ, ಆನೆ, ಕುದುರೆ ಇವುಗಳಿಗೆ ನೀರು ಕುಡಿಯಲು ಅನೇಕ ಜಲಾಶಯಗಳು ಅಲ್ಲಿದ್ದವು. ಜನರು ಸುಖವಾಗಿ ಇಳಿದು ಸ್ನಾನಮಾಡಲು ಸುಂದರ ಘಟ್ಟಗಳಿದ್ದವು. ಆ ಜಲಾಶಯಗಳಲ್ಲಿ ಕಮಲಗಳು ಮತ್ತು ನೈದಿಲೆಗಳು ಶೋಭಿಸುತ್ತಿದ್ದವು. ಅವುಗಳ ನೀರು ಆಕಾಶದಂತೆ ಸ್ವಚ್ಛವಾಗಿದ್ದು, ಅವುಗಳಲ್ಲಿ ಸುಖವಾಗಿ ಈಜುವಂತಿದ್ದವು.॥78॥
ಮೂಲಮ್ - 79
ನೀಲವೈಡೂರ್ಯವರ್ಣಾಂಶ್ಚ ಮೃದೂನ್ ಯವಸಸಂಚಯಾನ್ ।
ನಿರ್ವಾಪಾರ್ಥಂ ಪಶೂನಾಂ ತೇ ದದೃಶುಸ್ತತ್ರ ಸರ್ವಶಃ ॥
ಅನುವಾದ
ಪಶುಗಳಿಗೆ ತಿನ್ನಲು ಅಲ್ಲಿ ಎಲ್ಲೆಡೆ ನೀಲ ವೈಡೂರ್ಯದಂತೆ ಹಸಿರು ಹುಲ್ಲಿನ ರಾಶಿಗಳೇ ಬಿದ್ದಿದ್ದವು. ಅದೆಲ್ಲವನ್ನು ಭರತನ ಜೊತೆಗೆ ಬಂದ ಜನರು ನೋಡಿದರು.॥79॥
ಮೂಲಮ್ - 80
ವ್ಯಸ್ಮಯಂತ ಮನುಷ್ಯಾಸ್ತೇ ಸ್ವಪ್ನಕಲ್ಪಂ ತದದ್ಭುತಮ್ ।
ದೃಷ್ಟ್ವಾಽಽತಿಥ್ಯಂ ಕೃತಂ ತಾದೃಗ್ ಭರತಸ್ಯ ಮಹರ್ಷಿಣಾ ॥
ಅನುವಾದ
ಮಹರ್ಷಿ ಭರದ್ವಾಜರು ಸೈನ್ಯಸಹಿತ ಭರತನಿಗೆ ಮಾಡಿದ ಸತ್ಕಾರವು, ಆತಿಥ್ಯ ಅವರ್ಣನೀಯವಾಗಿತ್ತು, ಅದ್ಭುತ ಹಾಗೂ ಸ್ವಪ್ನದಂತೆ ಇತ್ತು. ಅದನ್ನು ನೋಡಿದ ಎಲ್ಲ ಜನರು ಆಶ್ಚರ್ಯಚಕಿತರಾದರು.॥80॥
ಮೂಲಮ್ - 81
ಇತ್ಯೇವಂ ರಮಮಾಣಾನಾಂ ದೇವಾನಾಮಿವ ನಂದನೇ ।
ಭರದ್ವಾಜಾಶ್ರಮೇ ರಮ್ಯೇ ಸಾ ರಾತ್ರಿರ್ವ್ಯತ್ಯವರ್ತತ ॥
ಅನುವಾದ
ದೇವತೆಗಳು ನಂದನವನದಲ್ಲಿ ವಿಹರಿಸುವಂತೆ ಭರದ್ವಾಜ ಮುನಿಗಳ ಆಶ್ರಮದಲ್ಲಿ ಯಥೇಷ್ಟವಾಗಿ ಕ್ರೀಡಾ-ವಿಹಾರ ಮಾಡುತ್ತಾ ಜನರ ಆ ರಾತ್ರಿಯು ಬಹಳ ಸುಖವಾಗಿ ಕಳೆಯಿತು.॥81॥
ಮೂಲಮ್ - 82
ಪ್ರತಿಜಗ್ಮುಶ್ಚ ತಾ ನದ್ಯೋ ಗಂಧರ್ವಾಶ್ಚ ಯಥಾಗತಮ್ ।
ಭರದ್ವಾಜಮನುಜ್ಞಾಪ್ಯ ತಾಶ್ಚ ಸರ್ವಾ ವರಾಂಗನಾಃ ॥
ಅನುವಾದ
ಅನಂತರ ನದಿಗಳು, ಗಂಧರ್ವರು, ಸಮಸ್ತ ಸುಂದರ ಅಪ್ಸರೆಯರು ಭರದ್ವಾಜರ ಅಪ್ಪಣೆ ಪಡೆದು ಬಂದ ಹಾಗೆಯೇ ಹೊರಟುಹೋದರು.॥82॥
ಮೂಲಮ್ - 83
ತಥೈವ ಮತ್ತಾ ಮದಿರೋತ್ಕಟಾ ನರಾ -
ಸ್ತಥೈವ ದಿವ್ಯಾಗುರುಚಂದನೋಕ್ಷಿತಾಃ ।
ತಥೈವ ದಿವ್ಯಾ ವಿವಿಧಾಃ ಸ್ರಗುತ್ತಮಾಃ
ಪೃಥಗ್ವಿಕೀರ್ಣಾ ಮನುಜೈಃ ಪ್ರಮರ್ದಿತಾಃ ॥
ಅನುವಾದ
ಬೆಳಗಾದರೂ ಕೂಡ ಜನರು ಮಧುಪಾನದಿಂದ ಮತ್ತರು ಮತ್ತು ಉನ್ಮತ್ತರಂತೆ ಕಂಡುಬರುತ್ತಿದ್ದರು. ಅವರ ಶರೀರಗಳ ಮೇಲೆ ದಿವ್ಯ ಅಗರುಯುಕ್ತ ಚಂದನದ ಲೇಪ ಹಾಗೆಯೇ ಕಾಣುತ್ತಿತ್ತು. ಮನುಷ್ಯರ ಉಪಭೋಗದಲ್ಲಿ ತಂದಿರುವ ನಾನಾ ಪ್ರಕಾರದ ದಿವ್ಯ ಉತ್ತಮ ಪುಷ್ಪಹಾರಗಳೂ ಅದೇ ಸ್ಥಿತಿಯಲ್ಲಿ ಬೇರೆ-ಬೇರೆಯಾಗಿ ಹರಡಿಕೊಂಡಿದ್ದವು.॥83॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ತೊಂಭತ್ತೊಂದನೆಯ ಸರ್ಗ ಪೂರ್ಣವಾಯಿತು.॥91॥