वाचनम्
ಭಾಗಸೂಚನಾ
ಭರತ - ಭರದ್ವಾಜರ ಸಂಭಾಷಣೆ, ಆಶ್ರಮದಲ್ಲೇ ತಂಗಲು ಭರದ್ವಾಜರಿಂದ ಭರತನಿಗೆ ಆದೇಶ
ಮೂಲಮ್ - 1
ಭರದ್ವಾಜಾಶ್ರಮಂಗತ್ವಾ ಕ್ರೋಶಾದೇವ ನರರ್ಷಭಃ ।
ಜನಂ ಸರ್ವಮವಸ್ಥಾಪ್ಯ ಜಗಾಮ ಸಹ ಮಂತ್ರಿಭಿಃ ॥
ಮೂಲಮ್ - 2
ಪದ್ಭ್ಯಾಮೇವ ತು ಧರ್ಮಜ್ಞೋ ನ್ಯಸ್ತಶಸ್ತ್ರ ಪರಿಚ್ಛದಃ ।
ವಸಾನೋ ವಾಸಸೀ ಕ್ಷೌಮೇ ಪುರೋಧಾಯ ಪುರೋಹಿತಮ್ ॥
ಅನುವಾದ
ಧರ್ಮಜ್ಞನಾದ ನರಶ್ರೇಷ್ಠ ಭರತನು ಭರದ್ವಾಜರ ಆಶ್ರಮವನ್ನು ಸಮೀಪಿಸಿ ಆಶ್ರಮವು ಒಂದು ಕ್ರೋಶದಷ್ಟು ದೂರವಿದ್ದಾಗಲೇ ಸೈನಿಕರನ್ನು ಅಲ್ಲಿಯೇ ನಿಲ್ಲಿಸಿದನು. ಧನುರ್ಬಾಣಗಳನ್ನು ಕಿರೀಟವೇ ಮೊದಲಾದ ಆಭರಣಗಳನ್ನು ಬಿಚ್ಚಿಟ್ಟು ನಾರುಮಡಿಯನ್ನುಟ್ಟು ಅದನ್ನೇ ಉತ್ತರೀಯವಾಗಿ ಹೊದ್ದು, ಪುರೋಹಿತರಾದ ವಸಿಷ್ಠರನ್ನು ಮುಂದೆ ಮಾಡಿಕೊಂಡು ಮಂತ್ರಿಗಳೊಡನೆ ಭರದ್ವಾಜರನ್ನು ಸಂದರ್ಶಿಸಲು ಕಾಲ್ನಡಿಗೆಯಲ್ಲೇ ಹೊರಟನು.॥1-2॥
ಮೂಲಮ್ - 3
ತತಃ ಸಂದರ್ಶನೇ ತಸ್ಯ ಭರದ್ವಾಜಸ್ಯ ರಾಘವಃ ।
ಮಂತ್ರಿಣಸ್ತಾನವಸ್ಥಾಪ್ಯ ಜಗಾಮಾನುಪುರೋಹಿತಮ್ ॥
ಅನುವಾದ
ಆಶ್ರಮವನ್ನು ಪ್ರವೇಶಿಸಿ, ದೂರದಿಂದಲೇ ಮುನಿವರ ಭರದ್ವಾಜರನ್ನು ದರ್ಶಿಸಿ ಭರತನು ಮಂತ್ರಿಗಳನ್ನು ಅಲ್ಲೇ ನಿಲ್ಲಿಸಿ, ಪುರೋಹಿತ ವಸಿಷ್ಠರನ್ನು ಮುಂದೆ ಮಾಡಿಕೊಂಡು ಋಷಿಗಳ ಬಳಿಗೆ ಹೋದನು.॥3॥
ಮೂಲಮ್ - 4
ವಸಿಷ್ಠಮಥ ದೃಷ್ಟೈವ ಭರದ್ವಾಜೋ ಮಹಾತಪಾಃ ।
ಸಂಚಚಾಲಾಸನಾತ್ ತೂರ್ಣಂ ಶಿಷ್ಯಾನರ್ಘ್ಯಮಿತಿಬ್ರುವನ್ ॥
ಅನುವಾದ
ಮಹರ್ಷಿ ವಸಿಷ್ಠರನ್ನು ನೋಡುತ್ತಲೇ ಮಹಾತಪಸ್ವೀ ಭರದ್ವಾಜರು ಆಸನದಿಂದ ಎದ್ದು ನಿಂತು ಶಿಷ್ಯರಿಗೆ ಬೇಗನೇ ಅರ್ಘ್ಯವನ್ನು ತರಲು ಹೇಳಿದರು.॥4॥
ಮೂಲಮ್ - 5
ಸಮಾಗಮ್ಯ ವಸಿಷ್ಠೇನ ಭರತೇನಾಭಿವಾದಿತಃ ।
ಅಬುಧ್ಯತ ಮಹಾತೇಜಾಃ ಸುತಂ ದಶರಥಸ್ಯತಮ್ ॥
ಅನುವಾದ
ಮತ್ತೆ ಅವರು ವಸಿಷ್ಠರನ್ನು ಭೆಟ್ಟಿಯಾದರು. ಬಳಿಕ ಭರತನು ಅವರ ಚರಣಗಳಿಗೆ ನಮಸ್ಕರಿಸಿದನು. ಇವನು ದಶರಥ ಮಹಾರಾಜರ ಪುತ್ರನೆಂದು ಮಹಾತೇಜಸ್ವೀ ಭರದ್ವಾಜರು ತಿಳಿದುಕೊಂಡರು.॥5॥
ಮೂಲಮ್ - 6
ತಾಭ್ಯಾಮರ್ಘ್ಯಂಚ ಪಾದ್ಯಂ ಚ ದತ್ತ್ವಾ ಪಶ್ಚಾತ್ಫಲಾನಿ ಚ ।
ಅನುಪೂರ್ವ್ಯಾಚ್ಚ ಧರ್ಮಜ್ಞಃ ಪಪ್ರಚ್ಛ ಕುಶಲಂ ಕುಲೇ ॥
ಅನುವಾದ
ಧರ್ಮಜ್ಞ ಋಷಿಯು ಕ್ರಮಶಃ ವಸಿಷ್ಠರಿಗೆ ಮತ್ತು ಭರತನಿಗೆ ಅರ್ಘ್ಯ, ಪಾದ್ಯ, ಫಲಾದಿಗಳನ್ನು ನಿವೇದಿಸಿ ಅವರಿಬ್ಬರ ಕುಲದ ಕ್ಷೇಮ ಸಮಾಚಾರ ಕೇಳಿದರು.॥6॥
ಮೂಲಮ್ - 7
ಅಯೋಧ್ಯಾಯಾಂ ಬಲೇ ಕೋಶೇ ಮಿತ್ರೇಷ್ವಪಿ ಚ ಮಂತ್ರಿಷು ।
ಜಾನನ್ ದಶರಥಂ ವೃತ್ತಂನ ರಾಜಾನಮುದಾಹರತ್ ॥
ಅನುವಾದ
ಬಳಿಕ ಅಯೋಧ್ಯೆ, ಸೈನ್ಯ, ಭಂಡಾರ, ಮಿತ್ರವರ್ಗ ಹಾಗೂ ಮಂತ್ರಿಮಂಡಲದ ಸ್ಥಿತಿಯನ್ನು ಕೇಳಿದರು. ದಶರಥ ಮಹಾರಾಜರ ಮೃತ್ಯುವಿನ ವೃತ್ತಾಂತ ಅವರು ತಿಳಿದಿದ್ದರು. ಅದಕ್ಕಾಗಿ ಅವರ ಕುರಿತು ಏನನ್ನೂ ಕೇಳಲಿಲ್ಲ.॥7॥
ಮೂಲಮ್ - 8
ವಸಿಷ್ಠೋ ಭರತಶ್ಚೈನಂ ಪಪ್ರಚ್ಛತುರನಾಮಯಮ್ ।
ಶರೀರೇಽಗ್ನಿಷು ಶಿಷ್ಯೇಷು ವೃಕ್ಷೇಷು ಮೃಗಪಕ್ಷಿಷು ॥
ಅನುವಾದ
ವಸಿಷ್ಠರು ಮತ್ತು ಭರತನೂ ಮಹರ್ಷಿಯ ದೇಹಾರೋಗ್ಯ, ಅಗ್ನಿಹೋತ್ರ, ಶಿಷ್ಟವರ್ಗ, ಮರ-ಗಿಡಗಳು, ಮೃಗ-ಪಕ್ಷಿ ಮೊದಲಾದವರ ಕ್ಷೇಮ ಸಮಾಚಾರ ಕೇಳಿದರು.॥8॥
ಮೂಲಮ್ - 9
ತಥೇತಿ ತು ಪ್ರತಿಜ್ಞಾಯಭರದ್ವಾಜೋ ಮಹಾಯಶಾಃ ।
ಭರತಂ ಪ್ರತ್ಯುವಾಚೇದಂ ರಾಘವಸ್ನೇಹಬಂಧನಾತ್ ॥
ಅನುವಾದ
ಮಹಾಯಶಸ್ವೀ ಭರದ್ವಾಜರು ಎಲ್ಲವೂ ಕ್ಷೇಮವೆಂದು ಹೇಳಿ ಶ್ರೀರಾಮನ ಕುರಿತು ಸ್ನೇಹವಿದ್ದ ಕಾರಣ ಭರತನಲ್ಲಿ ಈ ಪ್ರಕಾರ ಕೇಳಿದರು.॥9॥
ಮೂಲಮ್ - 10
ಕಿಮಿಹಾಗಮನೇ ಕಾರ್ಯಂ ತವ ರಾಜ್ಯಂ ಪ್ರಶಾಸತಃ ।
ಏತದಾಚಕ್ಷ್ವ ಸರ್ವಂ ಮೇ ನ ಹಿ ಮೇ ಶುಧ್ಯತೇಮನಃ ॥
ಅನುವಾದ
ನೀನು ರಾಜ್ಯವನ್ನಾಳುತ್ತಿರುವೆಯಲ್ಲ? ನಿನಗೆ ಇಲ್ಲಿ ಬರುವ ಅವಶ್ಯಕತೆ ಏನು ಬಿತ್ತು? ಇದೆಲ್ಲವನ್ನು ನನಗೆ ಹೇಳು; ಏಕೆಂದರೆ ನನ್ನ ಮನಸ್ಸು ನಿನ್ನ ಕುರಿತು ಶುದ್ಧವಾಗಿಲ್ಲ, ನನಗೆ ನಿನ್ನ ಮೇಲೆ ವಿಶ್ವಾಸ ಮೂಡುವುದಿಲ್ಲ.॥10॥
ಮೂಲಮ್ - 11
ಸುಷುವೇ ಯಮಮಿತ್ರಘ್ನಂ ಕೌಸಲ್ಯಾಽಽನಂದವರ್ಧನಮ್ ।
ಭ್ರಾತ್ರಾ ಸಹ ಸಭಾರ್ಯೋ ಯಶ್ಚಿರಂ ಪ್ರವ್ರಾಜಿತೋ ವನಮ್ ॥
ಮೂಲಮ್ - 12
ನಿಯುಕ್ತಃ ಸ್ತ್ರೀನಿಮಿತ್ತೇನ ಪಿತ್ರಾ ಯೋಽಸೌ ಮಹಾಯಶಾಃ ।
ವನವಾಸೀ ಭವೇತೀಹ ಸಮಾಃ ಕಿಲ ಚತುರ್ದಶ ॥
ಮೂಲಮ್ - 13
ಕಚ್ಛಿನ್ನ ತಸ್ಯಾಪಾಪಸ್ಯ ಪಾಪಂ ಕರ್ತುಮಿಹೇಚ್ಛಸಿ ।
ಅಕಂಟಕಂ ಭೋಕ್ತುಮನಾ ರಾಜ್ಯಂ ತಸ್ಯಾನುಜಸ್ಯ ಚ ॥
ಅನುವಾದ
ಯಾರು ಶತ್ರುಗಳನ್ನು ನಾಶಮಾಡುವವನೋ, ಕೌಸಲ್ಯಾನಂದವರ್ಧಕನೂ, ನಿನ್ನ ತಂದೆಯು ಸ್ತ್ರೀಯ ಕಾರಣದಿಂದ ಯಾವ ಮಹಾ ಯಶಸ್ವೀ ಪುತ್ರನಿಗೆ ಹದಿನಾಲ್ಕು ವರ್ಷ ವನವಾಸದ ಆಜ್ಞೆ ಕೊಟ್ಟು ಸಹೋದರ ಮತ್ತು ಪತ್ನಿಯೊಂದಿಗೆ ಕಾಡಿಗೆ ಕಳಿಸಿದನೋ, ಆ ನಿರಪರಾಧೀ ಶ್ರೀರಾಮ ಮತ್ತು ಲಕ್ಷ್ಮಣರ ನಿಷ್ಕಂಟಕ ರಾಜ್ಯವನ್ನು ಆಳುವ ಇಚ್ಛೆಯಿಂದ ಅವರಿಗೆ ಯಾವುದಾದರೂ ಅನಿಷ್ಟವೇನಾದರೂ ಮಾಡಲು ಬಯಸುತ್ತಿರುವೆಯಾ.॥11-13॥
ಮೂಲಮ್ - 14
ಏವಮುಕ್ತೋ ಭರದ್ವಾಜಂ ಭರತಃ ಪ್ರತ್ಯುವಾಚ ಹ ।
ಪರ್ಯಶ್ರುನಯನೋ ದುಃಖಾದ್ವಾಚಾಸಂಸಜ್ಜಮಾನಯಾ ॥
ಅನುವಾದ
ಭರದ್ವಾಜರು ಹೀಗೆ ಹೇಳಿದಾಗ ದುಃಖದಿಂದಾಗಿ ಭರತನು ಕಣ್ಣುಗಳಲ್ಲಿ ಕಂಬನಿ ಹರಿದವು. ಅವನು ಗದ್ಗದ ವಾಣಿಯಿಂದ ಅವರಲ್ಲಿ ಈ ಪ್ರಕಾರ ಹೇಳಿದನು.॥14॥
ಮೂಲಮ್ - 15
ಹತೋಽಸ್ಮಿ ಯದಿ ಮಾವೇವಂ ಭಗವಾನಪಿ ಮನ್ಯತೇ ।
ಮತ್ತೋ ನ ದೋಷಮಾಶಂಕೇ ಮೈವಂ ಮಾಮನುಶಾಧಿ ಹಿ ॥
ಅನುವಾದ
ಪೂಜ್ಯರೇ! ನಿಮ್ಮಂತಹ ಪೂಜ್ಯರಾದ ಮಹರ್ಷಿಗಳೂ ನನ್ನನ್ನು ಹೀಗೆ ತಿಳಿದರೆ ನಾನು ಎಲ್ಲ ರೀತಿಯಿಂದ ಹಾಳಾದೆ. ಶ್ರೀರಾಮನ ವನವಾಸದಲ್ಲಿ ನನ್ನಿಂದ ಯಾವುದೇ ಅಪರಾಧವಾಗಲಿಲ್ಲ, ಇದನ್ನು ನಾನು ನಿಶ್ಚಿತವಾಗಿ ತಿಳಿಯುತ್ತೇನೆ; ಆದ್ದರಿಂದ ತಾವು ನನ್ನಲ್ಲಿ ಇಂತಹ ಕಠೋರ ಮಾತನ್ನು ಹೇಳಬೇಡಿ.॥15॥
ಮೂಲಮ್ - 16
ನ ಚೈತದಿಷ್ಟಂ ಮಾತಾ ಮೇ ಯದವೋಚನ್ಮದಂತರೇ ।
ನಾಹಮೇತೇನ ತುಷ್ಟಶ್ಚ ನ ತದ್ವಚನಮಾದದೇ ॥
ಅನುವಾದ
ನನಗೆ ತಿಳಿಯದಂತೆ ನನ್ನ ತಾಯಿಯು ಮಾತನಾಡಿದುದು, ಮಾಡಿದುದು ನನಗೆ ಸಮ್ಮತಿ ಇಲ್ಲ. ಇದರಿಂದ ನಾನು ಸಂತುಷ್ಟನಾಗಿಲ್ಲ ಮತ್ತು ತಾಯಿಯ ಆ ಮಾತುಗಳನ್ನು ನಾನು ಸ್ವೀಕರಿಸುವುದಿಲ್ಲ.॥16॥
ಮೂಲಮ್ - 17
ಅಹಂ ತು ತಂ ನರವ್ಯಾಘ್ರಮುಪಯಾತಃ ಪ್ರಸಾದಕಃ ।
ಪ್ರತಿನೇತುಮಯೋಧ್ಯಾಯಾಂ ಪಾದೌ ಚಾಸ್ಯಾಭಿವಂದಿತುಮ್ ॥
ಅನುವಾದ
ನಾನಾದರೋ ಪುರುಷಸಿಂಹ ಶ್ರೀರಾಮನನ್ನು ಒಲಿಸಿ ಅಯೋಧ್ಯೆಗೆ ಮರಳಿ ಕರೆದುಕೊಂಡು ಬರಲು ಹಾಗೂ ಅವನ ಚರಣಗಳನ್ನು ವಂದಿಸಲಿಕ್ಕೆ ಹೋಗುತ್ತಿದ್ದೇನೆ.॥17॥
ಮೂಲಮ್ - 18
ತ್ವಂ ಮಾಮೇವಂಗತಂ ಮತ್ವಾ ಪ್ರಸಾದಂ ಕರ್ತುಮರ್ಹಸಿ ।
ಶಂಸ ತೇ ಭಗವನ್ ರಾಮಃ ಕ್ವ ಸಂಪ್ರತಿ ಮಹೀಪತಿಃ ॥
ಅನುವಾದ
ಇದೇ ಉದ್ದೇಶದಿಂದ ನಾನು ಇಲ್ಲಿಗೆ ಬಂದಿರುವೆನು. ಹೀಗೆ ತಿಳಿದು ನೀವು ನನ್ನ ಮೇಲೆ ಕೃಪೆಮಾಡಬೇಕು. ಪೂಜ್ಯರೇ! ಈಗ ಮಹಾರಾಜ ಶ್ರೀರಾಮ ಎಲ್ಲಿರುವನು? ಎಂದು ತಾವು ತಿಳಿಸಿರಿ.॥18॥
ಮೂಲಮ್ - 19
ವಸಿಷ್ಠಾದಿಭಿರ್ಋತ್ವಿಗ್ಭಿರ್ಯಾಚಿತೋ ಭಗವಾಂಸ್ತತಃ ।
ಉವಾಚ ತಂ ಭರದ್ವಾಜಃ ಪ್ರಸಾದಾದ್ ಭರತಂ ವಚಃ ॥
ಅನುವಾದ
ಬಳಿಕ ವಸಿಷ್ಠಾದಿ ಋತ್ವಿಜರೂ ‘ಭರತನ ಯಾವುದೇ ಅಪರಾಧವಿಲ್ಲ’ ಎಂದು ಪ್ರಾರ್ಥಿಸಿದರು. ತಾವು ಪ್ರಸನ್ನರಾಗಬೇಕು. ಆಗ ಪೂಜ್ಯರಾದ ಭರದ್ವಾಜರು ಸಂತೋಷದಿಂದ ಭರತನಲ್ಲಿ ಹೇಳಿದರು .॥19॥
ಮೂಲಮ್ - 20
ತ್ವಯ್ಯೇತತ್ಪುರುಷವ್ಯಾಘ್ರ ಯುಕ್ತಂ ರಾಘವವಂಶಜೇ ।
ಗುರುವೃತ್ತಿರ್ದಮಶ್ಚೈವ ಸಾಧೂನಾಂ ಚಾನುಯಾಯಿತಾ ॥
ಅನುವಾದ
ಪುರುಷ ಸಿಂಹ! ನೀನು ರಘುಕುಲದಲ್ಲಿ ಹುಟ್ಟಿರುವೆ, ನಿನ್ನಲ್ಲಿ ಗುರು-ಹಿರಿಯರ ಸೇವೆ, ಇಂದ್ರಿಯ ಸಂಯಮ ಹಾಗೂ ಶ್ರೇಷ್ಠ ಪುರುಷರನ್ನು ಅನುಸರಿಸುವ ಭಾವ ಇರುವುದು ಉಚಿತವೇ ಆಗಿದೆ.॥20॥
ಮೂಲಮ್ - 21
ಜಾನೇ ಚೈತನ್ಮನಃಸ್ಥಂ ತೇ ದೃಢೀಕರಣಮಸ್ತ್ವಿತಿ ।
ಅಪೃಚ್ಛಂ ತ್ವಾಂ ತವಾತ್ಯರ್ಥಂ ಕೀರ್ತಿ ಸಮಭಿವರ್ಧಯನ್ ॥
ಅನುವಾದ
ನಿನ್ನ ಮನಸ್ಸಿನಲ್ಲಿರುವ ಮಾತನ್ನು ನಾನು ಬಲ್ಲೆನು; ಆದರೂ ನಿನ್ನ ಈ ಭಾವ ಇನ್ನೂ ದೃಢವಾಗಲೀ ಹಾಗೂ ನಿನ್ನ ಕೀರ್ತಿಯ ವಿಸ್ತಾರ ಹೆಚ್ಚಾಗಲಿ ಎಂದೇ ನಾನು ಕೇಳುತ್ತಿದ್ದೇನೆ.॥21॥
ಮೂಲಮ್ - 22
ಜಾನೇ ಚ ರಾಮಂ ಧರ್ಮಜ್ಞಂ ಸಸೀತಂಸಹಲಕ್ಷ್ಮಣಮ್ ।
ಅಯಂ ವಸತಿ ತೇ ಭ್ರಾತಾ ಚಿತ್ರಕೂಟೇ ಮಹಾಗಿರೌ ॥
ಅನುವಾದ
ಸೀತೆ ಮತ್ತು ಲಕ್ಷ್ಮಣಸಹಿತ ಧರ್ಮಾತ್ಮಾ ಶ್ರೀರಾಮನಿರುವ ಠಾವು ನಾನು ಬಲ್ಲೆನು. ಈ ನಿನ್ನಣ್ಣ ರಾಮ ಚಂದ್ರನು ಮಹಾಪರ್ವತ ಚಿತ್ರಕೂಟದಲ್ಲಿ ವಾಸಿಸುತ್ತಿರುವನು.॥22॥
ಮೂಲಮ್ - 23
ಶ್ವಸ್ತು ಗಂತಾಸಿ ತಂ ದೇಶಂ ವಸಾದ್ಯ ಸಹ ಮಂತ್ರಿಭಿಃ ।
ಏತಂ ಮೇ ಕುರು ಸುಪ್ರಾಜ್ಞ ಕಾಮಂ ಕಾಮಾರ್ಥಕೋವಿದ ॥
ಅನುವಾದ
ನಾಳೆ ನೀನು ಅಲ್ಲಿಗೆ ಪ್ರಯಾಣ ಮಾಡು. ಇಂದು ನಿನ್ನ ಮಂತ್ರಿಗಳೊಂದಿಗೆ ಈ ಆಶ್ರಮದಲ್ಲೇ ಇರು. ಮಹಾಬುದ್ಧಿವಂತ ಭರತನೇ! ಮನೋಭೀಷ್ಟವನ್ನು ಪೂರೈಸಿಕೊಳ್ಳಲು ನೀನು ಸಮರ್ಥನಿರುವೆ, ಆದ್ದರಿಂದ ನನ್ನ ಈ ಅಭಿಲಾಷೆಯನ್ನು ಪೂರ್ಣಗೊಳಿಸು.॥23॥
ಮೂಲಮ್ - 24
ತತಸ್ತಥೇತ್ಯವಮುದಾರದರ್ಶನಃ
ಪ್ರತೀತರೂಪೋ ಭರತೋಽಬ್ರವೀದ್ವಚಃ ।
ಚಕಾರ ಬುದ್ಧಿಂ ಚ ತದಾಶ್ರಮೇ ತದಾ
ನಿಶಾನಿವಾಸಾಯ ನರಾಧಿಪಾತ್ಮಜಃ ॥
ಅನುವಾದ
ಸ್ವರೂಪ ಮತ್ತು ಸ್ವಭಾವದ ಪರಿಚಯವಾದ ಉದಾರ ದೃಷ್ಟಿಯುಳ್ಳ ಭರತನು ‘ಹಾಗೆಯೇ ಆಗಲಿ’ ಎಂದು ಹೇಳಿ ಮುನಿಯ ಆಜ್ಞೆಯನ್ನು ಶಿರಸಾ ವಹಿಸಿದನು. ಆ ರಾಜಕುಮಾರನು ಅಂದಿನ ಇರುಳನ್ನು ಆ ಆಶ್ರಮದಲ್ಲೇ ಕಳೆಯುವ ವಿಚಾರಮಾಡಿದನು.॥24॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ತೊಂಭತ್ತನೆಯ ಸರ್ಗ ಪೂರ್ಣವಾಯಿತು.॥90॥