०८९ भरतादीनां प्रयागवनगमनम्

वाचनम्
ಭಾಗಸೂಚನಾ

ಭರತನು ಸೈನ್ಯದೊಂದಿಗೆ ಗಂಗೆಯನ್ನು ದಾಟಿ ಭರದ್ವಾಜರ ಆಶ್ರಮಕ್ಕೆ ಹೋಗುವುದು

ಮೂಲಮ್ - 1

ವ್ಯಷ್ಯ ರಾತ್ರಿಂ ತು ತತ್ರೈವ ಗಂಗಾಕೂಲೇ ಸ ರಾಘವಃ ।
ಕಾಲ್ಯಮುತ್ಥಾಯ ಶತ್ರುಘ್ನಮಿದಂ ವಚನಬ್ರವೀತ್ ॥

ಅನುವಾದ

ಶೃಂಗವೇರಪುರದಲ್ಲೇ ಗಂಗಾತೀರದಲ್ಲಿ ಇರುಳನ್ನು ಕಳೆದು ರಘುಕುಲನಂದನ ಭರತನು ಪ್ರಾತಃಕಾಲ ಎದ್ದು ಶತ್ರುಘ್ನನಲ್ಲಿ ಈ ಪ್ರಕಾರ ಹೇಳಿದನು.॥1॥

ಮೂಲಮ್ - 2

ಶತ್ರುಘ್ನೋತ್ತಿಷ್ಠ ಕಿಂ ಶೇಷೇ ನಿಷಾದಾಧಿಪತಿಂ ಗುಹಮ್ ।
ಶೀಘ್ರಮಾನಯ ಭದ್ರಂ ತೇ ತಾರಯಿಷ್ಯತಿ ವಾಹಿನೀಮ್ ॥

ಅನುವಾದ

ಶತ್ರುಘ್ನನೇ! ಏಳು, ಏಕೆ ಇನ್ನೂ ಮಲಗಿದ್ದೀಯೇ? ನಿನಗೆ ಮಂಗಳವಾಗಲಿ, ನೀನು ನಿಷಾದ ರಾಜಗುಹನನ್ನು ಬೇಗನೇ ಕರೆದುಕೊಂಡು ಬಾ, ಅವನೇ ನಮ್ಮನ್ನು ಗಂಗೆ ದಾಟಿಸುವನು.॥2॥

ಮೂಲಮ್ - 3

ಜಾಗರ್ಮಿ ನಾಹಂ ಸ್ವಪಿಮಿ ತಥೈವಾರ್ಯಂ ವಿಚಿಂತಯನ್ ।
ಇತ್ಯೇವಮಬ್ರವೀದ್ ಭ್ರಾತಾ ಶತ್ರುಘ್ನೋವಿಪ್ರಚೋದಿತಃ ॥

ಅನುವಾದ

ಭರತನಿಂದ ಹೀಗೆ ಪ್ರೇರಿತನಾದ ಶತ್ರುಘ್ನನು ಹೇಳಿದನು - ಅಣ್ಣಾ! ನಾನೂ ನಿನ್ನಂತೆಯೇ ಆರ್ಯ ಶ್ರೀರಾಮನನ್ನು ಚಿಂತಿಸುತ್ತಾ ಎಚ್ಚರನಾಗಿಯೇ ಇದ್ದೆ, ಮಲಗಿರಲಿಲ್ಲ.॥3॥

ಮೂಲಮ್ - 4

ಇತಿ ಸಂವದತೋರೇವಮನ್ಯೋನ್ಯಂ ನರಸಿಂಹಯೋಃ ।
ಆಗಮ್ಯ ಪ್ರಾಂಜಲಿಃ ಕಾಲೇ ಗುಹೋ ವಚನಮಬ್ರವೀತ್ ॥

ಅನುವಾದ

ಪುರುಷಸಿಂಹರಾದ ಅವರಿಬ್ಬರೂ ಹೀಗೆ ಪರಸ್ಪರ ಮಾತನಾಡಿಕೊಳ್ಳುತ್ತಿರುವಾಗಲೇ ಗುಹನು ಉಪಯುಕ್ತ ಸಮಯದಲ್ಲಿ ತಲುಪಿ ಕೈಮುಗಿದುಕೊಂಡು ನುಡಿದನು.॥4॥

ಮೂಲಮ್ - 5

ಕಚ್ಚಿತ್ಸುಖಂ ನದೀತೀರೇಽವಾತ್ಸೀಃ ಕಾಕುತ್ಸ್ಥ ಶರ್ವರೀಮ್ ।
ಕಚ್ಚಿಚ್ಚ ಸಹಸೈನ್ಯಸ್ಯ ತವ ನಿತ್ಯಮನಾಮಯಮ್ ॥

ಅನುವಾದ

ಕಕುತ್ಸ್ಥಕುಲಭೂಷಣ ಭರತ! ಈ ನದೀ ತೀರದಲ್ಲಿ ನೀನು ಸುಖವಾಗಿ ಮಲಗಿದರಲ್ಲ? ಸೇನಾಸಹಿತ ನಿನಗೆ ಇಲ್ಲಿ ಯಾವುದೇ ಕಷ್ಟವಾಗಲಿಲ್ಲವಲ್ಲ? ನೀವು ಸರ್ವಥಾ ನಿರೋಗಿಗಳಾಗಿ ಇದ್ದೀರಲ್ಲ.॥5॥

ಮೂಲಮ್ - 6

ಗುಹಸ್ಯ ತತ್ತುವಚನಂ ಶ್ರುತ್ವಾ ಸ್ನೇಹಾದುದೀರಿತಮ್ ।
ರಾಮಸ್ಯಾನುವಶೋ ವಾಕ್ಯಂ ಭರತೋಽಪೀದಮಬ್ರವೀತ್ ॥

ಅನುವಾದ

ಗುಹನು ಸ್ನೇಹಪೂರ್ವಕ ಹೇಳಿದ ಮಾತನ್ನು ಕೇಳಿ ಶ್ರೀರಾಮನಿಗೆ ಅಧೀನನಾಗಿರುವ ಭರತನು ಇಂತೆಂದನು.॥6॥

ಮೂಲಮ್ - 7

ಸುಖಾ ನಃ ಶರ್ವರೀ ಧೀಮನ್ ಪೂಜಿತಾಶ್ಚಾಪಿ ತೇ ವಯಮ್ ।
ಗಂಗಾಂ ತು ನೌಭಿರ್ಬಹ್ರೀಭಿರ್ದಾಶಾಃ ಸಂತಾರಯಂತು ನಃ ॥

ಅನುವಾದ

ಧೀಮಂತನಾದ ಗುಹನೇ! ನಮ್ಮೆಲ್ಲರ ರಾತ್ರಿಯು ಸುಖವಾಗಿ ಕಳೆಯಿತು. ನೀನು ನಮಗೆ ಭಾರೀ ಸತ್ಕಾರ ಮಾಡಿರುವೆ. ಈಗ ನಿನ್ನ ಬೆಸ್ತರು ಅನೇಕ ನೌಕೆಗಳನ್ನು ತಂದು ನಮ್ಮನ್ನು ಗಂಗೆಯನ್ನು ದಾಟಿಸುವ ವ್ಯವಸ್ಥೆ ಮಾಡು.॥7॥

ಮೂಲಮ್ - 8

ತತೋ ಗುಹಃ ಸಂತ್ವರಿತಃ ಶ್ರುತ್ವಾ ಭರತಶಾಸನಮ್ ।
ಪ್ರತಿಪ್ರವಿಷ್ಯ ನಗರಂ ತಂ ಜ್ಞಾತಿಜನಮಬ್ರವೀತ್ ॥

ಅನುವಾದ

ಭರತನ ಆದೇಶವನ್ನು ಕೇಳಿ ಗುಹನು ಕೂಡಲೇ ತನ್ನ ನಗರಕ್ಕೆ ಹೋಗಿ ಬಂಧು-ಬಾಂಧವರಲ್ಲಿ ಹೇಳಿದನು.॥8॥

ಮೂಲಮ್ - 9

ಉತ್ತಿಷ್ಠತ ಪ್ರಬುಧ್ಯಧ್ವಂ ಭದ್ರಮಸ್ತು ಹಿ ವಃ ಸದಾ ।
ನಾವಃ ಸಮುಪಕರ್ಷಧ್ವಂ ತಾರಯಿಷ್ಯಾಮಿ ವಾಹಿನೀಮ್ ॥

ಅನುವಾದ

ಏಳಿ ಎದ್ದೇಳಿ, ಸದಾ ನಿಮಗೆ ಮಂಗಳವಾಗಲಿ, ದೋಣಿಗಳನ್ನು ತೀರದಲ್ಲಿ ತಂದು ನಿಲ್ಲಿಸಿರಿ. ಭರತನ ಸೈನ್ಯವನ್ನು ಗಂಗೆಯನ್ನು ದಾಟಿಸಬೇಕಾಗಿದೆ.॥9॥

ಮೂಲಮ್ - 10

ತೇ ತಥೋಕ್ತಾಃ ಸಮುತ್ಥಾಯ ತ್ವರಿತಾ ರಾಜಶಾಸನಾತ್ ।
ಪಂಚ ನಾವಾಂ ಶತಾನ್ಯೇವ ಸಮಾನಿನ್ಯುಃ ಸಮಂತತಃ ॥

ಅನುವಾದ

ಗುಹನು ಹೀಗೆ ಹೇಳಿದಾಗ ತನ್ನ ಒಡೆಯನ ಅಪ್ಪಣೆಯಂತೆ ಎಲ್ಲ ಬೆಸ್ತರು ಎದ್ದು ನಿಂತು, ಎಲ್ಲೆಡೆಗಳಿಂದ ಐದುನೂರು ದೋಣಿಗಳನ್ನು ಒಟ್ಟುಗೂಡಿಸಿದರು.॥10॥

ಮೂಲಮ್ - 11

ಅನ್ಯಾಃ ಸ್ವಸ್ತಿಕವಿಜ್ಞೇಯಾ ಮಹಾಘಂಟಾಧರಾವರಾಃ ।
ಶೋಭಮಾನಾಃ ಪತಾಕಿನ್ಯೋ ಯುಕ್ತವಾಹಾಃಸುಸಂಹತಾಃ ॥

ಅನುವಾದ

ಇವೆಲ್ಲವುಗಳಲ್ಲದೆ ಕೆಲವು ಸ್ವಸ್ತಿಕ ಹೆಸರಿನ ಪ್ರಸಿದ್ಧ ನೌಕೆಗಳಿದ್ದವು. ಅವು ಸ್ವಸ್ತಿಕ ಚಿಹ್ನೆಗಳಿಂದ ಅಲಂಕೃತವಾದ ಕಾರಣ ಅದೇ ಚಿಹ್ನೆಗಳಿಂದ ಗುರುತಿಸಲಾಗುತ್ತಿತ್ತು. ಅವುಗಳಲ್ಲಿ ಪತಾಕೆಗಳು ಹಾರಾಡುತ್ತಿದ್ದು, ದೊಡ್ಡ ದೊಡ್ಡ ಗಂಟೆಗಳು ತೂಗುಹಾಕಿದ್ದರು. ಸ್ವರ್ಣಾದಿಗಳಿಂದ ಕೊರೆದ ಚಿತ್ರಗಳಿಂದ ಆ ನೌಕೆಗಳ ಶೋಭೆ ವಿಶೇಷವಾಗಿತ್ತು. ಅವುಗಳನ್ನು ನಡೆಸಲು ಅನೇಕ ಹುಟ್ಟುಗಳಿದ್ದು, ಚತುರ ನಾವಿಕರು ಸಿದ್ಧರಾಗಿ ಕುಳಿತಿದ್ದರು. ಆ ಎಲ್ಲ ನೌಕೆಗಳು ಗಟ್ಟಿಮುಟ್ಟಾಗಿದ್ದವು.॥11॥

ಮೂಲಮ್ - 12

ತತಃ ಸ್ವಸ್ತಿಕವಿಜ್ಞೇಯಾಂ ಪಾಂಡುಕಂಬಲಸಂವೃತಾಮ್ ।
ಸನಂದಿಘೋಷಾಂ ಕಲ್ಯಾಣೀಂ ಗುಹೋ ನಾವಮುಪಾಹರತ್ ॥

ಅನುವಾದ

ಅವುಗಳಲ್ಲಿನ ಒಂದು ಮಂಗಲಮಯ ನೌಕೆಯನ್ನು ಗುಹನು ಸ್ವತಃ ತೆಗೆದುಕೊಂಡು ಬಂದನು. ಅದರಲ್ಲಿ ಬೆಳ್ಳಗಿನ ರತ್ನಗಂಬಳಿ ಹಾಸಿತ್ತು ಹಾಗೂ ಆ ಸ್ವಸ್ತಿಕ ನಾವೆಯಲ್ಲಿ ಮಾಂಗಲಿಕ ಶಬ್ದಗಳು ಆಗುತ್ತಿತ್ತು.॥12॥

ಮೂಲಮ್ - 13

ತಾಮಾರುರೋಹ ಭರತಃ ಶತ್ರುಘ್ನಶ್ಚ ಮಹಾಬಲಃ ।
ಕೌಸಲ್ಯಾ ಚ ಸುಮಿತ್ರಾ ಚ ಯಾಶ್ಚಾನ್ಯಾ ರಾಜಯೋಷಿತಃ ॥

ಮೂಲಮ್ - 14

ಪುರೋಹಿತಶ್ಚ ತತ್ಪೂರ್ವಂ ಗುರವೋಬ್ರಾಹ್ಮಣಾಶ್ಚ ಯೇ ।
ಅನಂತರಂ ರಾಜದಾರಾಸ್ತಥೈವ ಶಕಟಾಪಣಾಃ ॥

ಅನುವಾದ

ಅದರಲ್ಲಿ ಮೊದಲಿಗೆ ಪುರೋಹಿತರು, ಗುರುಗಳು, ಬ್ರಾಹ್ಮಣರು ಕುಳಿತರು, ಬಳಿಕ ಅದರ ಮೇಲೆ ಭರತ, ಮಹಾಬಲಿ ಶತ್ರುಘ್ನ, ಕೌಸಲ್ಯೆ, ಸುಮಿತ್ರೆ, ಕೈಕೇಯಿ ಹಾಗೂ ದಶರಥನ ಇತರ ರಾಣಿಯರು ಹೀಗೆ ಎಲ್ಲರೂ ಹತ್ತಿದರು. ಬಳಿಕ ರಾಜಪರಿವಾರದ ಸ್ತ್ರೀಯರು ಕುಳಿತರು. ಬಂಡಿಗಳು ಹಾಗೂ ಕ್ರಯ-ವಿಕ್ರಯದ ಸಮಗ್ರಿಗಳನ್ನು ಬೇರೆ-ಬೇರೆ ನೌಕೆಗಳಲ್ಲಿ ಹೇರಲಾಯಿತು.॥13-14॥

ಮೂಲಮ್ - 15

ಆವಾಸಮಾದೀಪಯತಾಂ ತೀರ್ಥಂ ಚಾಪ್ಯವಗಾಹತಾಮ್ ।
ಭಾಂಡಾನಿಚಾದದಾನಾನಾಂ ಘೋಷಸ್ತು ದಿವಮಸ್ಪೃಶತ್ ॥

ಅನುವಾದ

ಕೆಲವು ಸೈನಿಕರು ಸಂಪ್ರದಾಯದಂತೆ ತಮ್ಮ ತಾತ್ಕಾಲಿಕ ಗುಡಾರಗಳಲ್ಲಿ ದೀಪಗಳನ್ನು ಹೊತ್ತಿಸಿ ಇಟ್ಟರು. ಕೆಲವು ಸೈನಿಕರು ತಮ್ಮ-ತಮ್ಮ ವಸ್ತುಗಳನ್ನು ಇದು ನನ್ನದು, ಇದು ನನ್ನದು ಎಂದು ಹೇಳುತ್ತಾ ಎತ್ತಿಕೊಳ್ಳುತ್ತಿದ್ದರು. ಕೆಲವರು ನದೀ ತೀರಕ್ಕೆ ಲಗುಬಗೆಯಿಂದ ನಡೆದರು. ಆಗ ಉಂಟಾದ ಕೋಲಾಹಲವು ಆಕಾಶದಲ್ಲಿ ಪ್ರತಿಧ್ವನಿಸಿತು.॥15॥

ಮೂಲಮ್ - 16

ಪತಾಕಿನ್ಯಸ್ತು ತಾ ನಾವಃ ಸ್ವಯಂ ದಾಶೈರಧಿಷ್ಠಿತಾಃ ।
ವಹಂತ್ಯೋ ಜನಮಾರೂಢಂ ತದಾ ಸಂಪೇತುರಾಶುಗಾಃ ॥

ಅನುವಾದ

ಆ ಎಲ್ಲ ದೋಣಿಗಳ ಮೇಲೆ ಪತಾಕೆಗಳು ಹಾರಾಡುತ್ತಿದ್ದವು. ಎಲ್ಲದರಲ್ಲಿ ಬೆಸ್ತರು ಕುಳಿತಿದ್ದರು. ಆ ಎಲ್ಲ ನೌಕೆಗಳು ಅದರಲ್ಲಿ ಕುಳಿತ ಜನರನ್ನು ತೀವ್ರಗತಿಯಿಂದ ದಾಟಿಸುತ್ತಿದ್ದವು.॥16॥

ಮೂಲಮ್ - 17

ನಾರೀಣಾಮಭಿಪೂರ್ಣಾಸ್ತು ಕಾಶ್ಚಿತ್ ಕಾಶ್ಚಿತ್ ತು ವಾಜಿನಾಮ್ ।
ಕಾಶ್ಚಿತ್ ತತ್ರ ವಹಂತಿ ಸ್ಮ ಯಾನಯುಗ್ಯಂ ಮಹಾಧನಮ್ ॥

ಅನುವಾದ

ಅನೇಕ ನೌಕೆಗಳು ಸ್ತ್ರೀಯರಿಂದಲೇ ತುಂಬಿದ್ದವು. ಕೆಲವುಗಳಲ್ಲಿ ಕುದುರೆಗಳು, ಕೆಲವುಗಳಲ್ಲಿ ಬಂಡಿಗಳು, ಗಾಡಿ-ರಥಕ್ಕೆ ಹೂಡುವ ಕುದುರೆ, ಹೇಸರಗತ್ತೆ, ಎತ್ತುಗಳು ಮೊದಲಾದವುಗಳು, ವಾಹನಗಳು, ಅಮೂಲ್ಯ ರತ್ನಾದಿಗಳನ್ನು ಹೇರಲಾಗಿತ್ತು.॥17॥

ಮೂಲಮ್ - 18

ತಾಸ್ತು ಗತ್ವಾ ಪರಂ ತೀರಮವರೋಪ್ಯ ಚ ತಂ ಜನಮ್ ।
ನಿವೃತ್ತಾ ಕಾಂಡಚಿತ್ರಾಣಿ ಕ್ರಿಯಂತೇ ದಾಶಬಂಧುಭಿಃ ॥

ಅನುವಾದ

ಅವು ಆಚೆಯ ದಡಕ್ಕೆ ತಲುಪಿ ಅಲ್ಲಿ ಜನರನ್ನು ಇಳಿಸಿ ಮರಳುವಾಗ ಬೆಸ್ತರು ನೀರಿನಲ್ಲಿ ಅವುಗಳ ವಿಚಿತ್ರ ಗತಿಗಳನ್ನು ಪ್ರದರ್ಶಿಸತೊಡಗಿದರು.॥18॥

ಮೂಲಮ್ - 19

ಸವೈಜಯಂತಾಸ್ತು ಗಜಾ ಗಜಾರೋಹೈಃ ಪ್ರಚೋದಿತಾಃ ।
ತರಂತಃ ಸ್ಮ ಪ್ರಕಾಶಂತೇ ಸಪಕ್ಷಾ ಇವ ಪರ್ವತಾಃ ॥

ಅನುವಾದ

ವೈಜಯಂತೀ ಪತಾಕೆಗಳಿಂದ ಸುಶೋಭಿತವಾದ ಆನೆಗಳು ಮಾವುತರಿಂದ ಪ್ರೇರಿತವಾಗಿ ನದಿಯನ್ನು ದಾಟಲು ತೊಡಗಿದವು. ಆಗ ಅವು ರೆಕ್ಕೆಗಳುಳ್ಳ ಪರ್ವತದಂತೆ ಕಂಡುಬರುತ್ತಿತ್ತು.॥19॥

ಮೂಲಮ್ - 20

ನಾವಶ್ಚಾರುರುಹುಸ್ತ್ವನ್ಯೇ ಪ್ಲವೈಸ್ತೇರುಸ್ತಥಾಪರೇ ।
ಅನ್ಯೇ ಕುಂಭಘಟೈಸ್ತೇರುರನ್ಯೇ ತೇರುಶ್ಚ ಬಾಹುಭಿಃ ॥

ಅನುವಾದ

ಎಷ್ಟೋ ಜನರು ದೋಣಿಗಳಲ್ಲಿ ಕುಳಿತಿದ್ದರೆ ಕೆಲವರು ಬಿದಿರಿನಿಂದ ಮಾಡಿದ ತೆಪ್ಪಗಳನ್ನೇರಿದರು. ಕೆಲವು ಜನರು ದೊಡ್ಡ-ದೊಡ್ಡ ಮಡಕೆಗಳನ್ನು ಆಸರೆಯಾಗಿಟ್ಟುಕೊಂಡು ಈಜಿಯೇ ದಾಟುತ್ತಿದ್ದರು.॥20॥

ಮೂಲಮ್ - 21

ಸಾ ಪುಣ್ಯಾ ಧ್ವಜಿನೀ ಗಂಗಾಂ ದಾಶೈಃ ಸಂತಾರಿತಾ ಸ್ವಯಮ್ ।
ಮೈತ್ರೇ ಮುಹೂರ್ತೇ ಪ್ರಯಯೌ ಪ್ರಯಾಗವನಮುತ್ತಮಮ್ ॥

ಅನುವಾದ

ಈ ಪ್ರಕಾರ ಬೆಸ್ತರ ಸಹಾಯದಿಂದ ಆ ಪವಿತ್ರ ಸೈನ್ಯವು ಗಂಗೆಯನ್ನು ದಾಟಿತು. ಮತ್ತೆ ಆ ಸೈನ್ಯವು ಮೈತ್ರ ಎಂಬ ಮುಹೂರ್ತದಲ್ಲಿ ಪ್ರಯಾಗದ ಕಡೆಗೆ ಹೊರಟಿತು.॥21॥

ಮೂಲಮ್ - 22

ಆಶ್ವಾಸಯಿತ್ವಾ ಚ ಚಮೂಂ ಮಹಾತ್ಮಾ
ನಿವೇಶಯಿತ್ವಾ ಚ ಯಥೋಪಜೋಷಮ್ ।
ದ್ರಷ್ಟುಂ ಭರದ್ವಾಜಮೃಷಿಪ್ರವರ್ಯಂ-
ಋತ್ವಿಕ್ ಸದಸ್ಯೈರ್ಭರತಃ ಪ್ರತಸ್ಥೇ ॥

ಅನುವಾದ

ಅಲ್ಲಿಗೆ ತಲುಪಿ ಮಹಾತ್ಮಾ ಭರತನು ಸೈನ್ಯಕ್ಕೆ ಸುಖವಾಗಿ ವಿಶ್ರಾಂತಿ ಪಡೆಯಲು ಆಜ್ಞಾಪಿಸಿದನು. ಅವರನ್ನು ಪ್ರಯಾಗದಲ್ಲಿ ನಿಲ್ಲಿಸಿ ಸ್ವತಃ ಋತ್ವಿಜರು, ರಾಜಸಭೆಯ ಸದಸ್ಯರೊಂದಿಗೆ ಋಷಿಶ್ರೇಷ್ಠ ಭರದ್ವಾಜರನ್ನು ದರ್ಶಿಸಲು ಹೊರಟರು.॥22॥

ಮೂಲಮ್ - 23

ಸ ಬ್ರಾಹ್ಮಣಸ್ಯಾಶ್ರಮಮಭ್ಯುಪೇತ್ಯ
ಮಹಾತ್ಮನೋದೇವಪುರೋಹಿತಸ್ಯ ।
ದದರ್ಶ ರಮ್ಯೋಟಜವೃಕ್ಷದೇಶಂ
ಮಹದ್ವನಂ ವಿಪ್ರವರಸ್ಯ ರಮ್ಯಮ್ ॥

ಅನುವಾದ

ದೇವ ಪುರೋಹಿತರಾದ ಮಹಾತ್ಮಾ ಬ್ರಾಹ್ಮಣ ಭರದ್ವಾಜ ಮುನಿಯ ಆಶ್ರಮಕ್ಕೆ ತಲುಪಿ ಭರತನು ಆ ವಿಪ್ರ ಶಿರೋಮಣಿಯ ರಮಣೀಯ ಹಾಗೂ ವಿಶಾಲವನವನ್ನು ನೋಡಿದನು. ಅದು ಮನೋಹರ ಪರ್ಣಶಾಲೆಗಳಿಂದ, ನಿಬಿಡವಾದ ವೃಕ್ಷಗಳಿಂದ ಸುಶೋಭಿತವಾಗಿತ್ತು.॥23॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಎಂಭತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು॥89॥