०८८ भरतप्रतिज्ञा

वाचनम्
ಭಾಗಸೂಚನಾ

ಶ್ರೀರಾಮನ ಹುಲ್ಲಿನ ಶಯ್ಯೆಯನ್ನು ನೋಡಿ ಶೋಕಾವಿಷ್ಟನಾದ ಭರತನ ಉದ್ಗಾರ, ತಾನೂ ಜಟಾವಲ್ಕಲ ಧರನಾಗಿ ಅರಣ್ಯದಲ್ಲೇ ಇರುವ ವಿಚಾರ ಪ್ರಕಟಿಸಿದುದು

ಮೂಲಮ್ - 1

ತಚ್ಛ್ರುತ್ವಾ ನಿಪುಣಂಸರ್ವಂ ಭರತಃ ಸಹ ಮಂತ್ರಿಭಿಃ ।
ಇಂಗುದೀಮೂಲಮಾಗಮ್ಯ ರಾಮಶಯ್ಯಾಮವೈಕ್ಷತ ॥

ಅನುವಾದ

ನಿಷಾದರಾಜನ ಎಲ್ಲ ಮಾತುಗಳನ್ನು ಗಮನವಿಟ್ಟು ಕೇಳಿ ಮಂತ್ರಿಗಳೊಂದಿಗೆ ಭರತನು ಇಂಗುದೀ ವೃಕ್ಷದ ಬಳಿಗೆ ಬಂದು ಶ್ರೀರಾಮಚಂದ್ರನ ಶಯ್ಯೆಯನ್ನು ಸಂದರ್ಶಿಸಿದನು.॥1॥

ಮೂಲಮ್ - 2

ಅಬ್ರವೀಜ್ಜನನೀಃ ಸರ್ವಾ ಇಹ ತಸ್ಯ ಮಹಾತ್ಮನಃ ।
ಶರ್ವರೀ ಶಯಿತಾ ಭೂಮಾವಿದಮಸ್ಯ ವಿಮರ್ದಿತಮ್ ॥

ಅನುವಾದ

ಮತ್ತೆ ಅವನು ಎಲ್ಲ ತಾಯಂದಿರಲ್ಲಿ ಹೇಳಿದನು - ಇಲ್ಲೇ ಮಹಾತ್ಮಾ ಶ್ರೀರಾಮನು ಭೂಮಿಯಲ್ಲಿ ಮಲಗಿ ರಾತ್ರಿಯನ್ನು ಕಳೆದಿದ್ದನು. ಇದೇ ಆ ಹುಲ್ಲಿನ ರಾಶಿಯಾಗಿದೆ, ಅವನ ಶರೀರ ಹೊರಳಾಡಿದ್ದರಿಂದ ಪುಡಿಯಾಗಿದೆ.॥2॥

ಮೂಲಮ್ - 3

ಮಹಾರಾಜಕುಲೀನೇನ ಮಹಾಭಾಗೇನ ಧೀಮತಾ ।
ಜಾತೋ ದಶರಥೇನೋರ್ವ್ಯಾಂ ನ ರಾಮಃ ಸ್ವಪ್ತುಮರ್ಹತಿ ॥

ಅನುವಾದ

ನಮ್ಮ ಅಣ್ಣನು ರಾಜಮಹಾರಾಜರ ಕುಲದಲ್ಲಿ ಹುಟ್ಟಿದವನು. ಮಹಾಭಾಗ್ಯಶಾಲಿ, ಮಹಾ ಬುದ್ಧಿವಂತನು. ಮೇಲಾಗಿ ದಶರಥರಾಜನ ಮಗನು, ಅಂತಹವನು ಇಂತಹ ಕಠಿಣ ಶಯ್ಯೆಯಲ್ಲಿ ಮಲಗಬಾರದಾಗಿತ್ತು.॥3॥

ಮೂಲಮ್ - 4

ಅಜಿನೋತ್ತರಸಂಸ್ತೀರ್ಣೇ ವರಾಸ್ತರಣಸಂಚಯೇ ।
ಶಯಿತ್ವಾ ಪುರುಷವ್ಯಾಘ್ರಃಕಥಂ ಶೇತೇ ಮಹೀತಲೇ ॥

ಅನುವಾದ

ರಾಜಯೋಗ್ಯವಾದ ಕಂದಲೀ, ಚಮೂರು ಮುಂತಾದ ಪ್ರಾಣಿಗಳ ಮೃದುವಾದ ಚರ್ಮವನ್ನು ಹಾಸಿ ಅದರ ಮೇಲೆ ಅಮೂಲ್ಯವಾದ ರತ್ನಗಂಬಳಿಗಳನ್ನು ಹಾಸಿರುವ ರತ್ನಪರ್ಯಂಕದಲ್ಲಿ ಮಲಗುತ್ತಿದ್ದ ಪುರುಷಶ್ರೇಷ್ಠ ಶ್ರೀರಾಮನು ಈಗ ಈ ಒರಟಾದ ನೆಲದ ಮೇಲೆ ಹೇಗೆ ತಾನೇ ಮಲಗುವನು.॥4॥

ಮೂಲಮ್ - 5

ಪ್ರಾಸಾದಾಗ್ರವಿಮಾನೇಷು ವಲಭೀಷು ಚ ಸರ್ವದಾ ।
ಹೈಮರಾಜತಭೌಮೇಷು ವರಾಸ್ತರಣಶಾಲಿಷು ॥

ಮೂಲಮ್ - 6

ಪುಷ್ಪಸಂಚಯಚಿತ್ರೇಷು ಚಂದನಾಗರುಗಂಧಿಷು ।
ಪಾಂಡುರಾಭ್ರಪ್ರಕಾಶೇಷು ಶುಕಸಂಘರುತೇಷು ಚ ॥

ಮೂಲಮ್ - 7

ಪ್ರಾಸಾದವರವರ್ಯೇಷು ಶೀತವತ್ಸು ಸುಗಂಧಿಷು ।
ಉಷಿತ್ವಾ ಮೇರುಕಲ್ಪೇಷು ಕೃತಕಾಂಚನಭಿತ್ತಿಷು ॥

ಅನುವಾದ

ವಿಮಾನ ಸದೃಶ ಪ್ರಾಸಾದಗಳ ಶಿಖರಗಳಲ್ಲಿ, ಉಪ್ಪರಿಗೆಗಳ ಮೇಲಿರುವ ಶೈತ್ಯಗೃಹದಲ್ಲಿ, ಸುವರ್ಣಮಯ ಮತ್ತು ರಜತಮಯ ನೆಲವಿರುವಲ್ಲಿ, ಚಿತ್ರ-ವಿಚಿತ್ರವಾದ ರತ್ನಗಂಬಳಿಗಳನ್ನು ಹಾಸಿರುವೆಡೆಯಲ್ಲಿ, ವಿಚಿತ್ರ ತರವಾದ ಪುಷ್ಪಗುಚ್ಛಗಳಿರುವೆಡೆಯಲ್ಲಿ ಚಂದನಾಗರು ಶ್ರೀಗಂಧಗಳಿರುವ ಸ್ಥಳದಲ್ಲಿ, ಬಿಳುಪಾದ ಮೋಡದಂತೆ ಸುಮನೋಹರವಾಗಿರುವ ಹಾಗೂ ಶುಭ್ರವಾಗಿರುವ ಸ್ಥಳದಲ್ಲಿ, ಗಿಣಿಗಳು ನಿನಾದ ಮಾಡುತ್ತಿರುವಲ್ಲಿ, ಎಲ್ಲ ಪ್ರಾಸಾದಗಳಿಗಿಂತ ಉತ್ತಮೋತ್ತಮ ಪ್ರಾಸಾದದಲ್ಲಿ, ಶೀತಲವಾಗಿಯೂ ಸುಗಂಧಯುಕ್ತವೂ ಆಗಿರುವ ಸ್ಥಳದಲ್ಲಿ, ಮೇರು ಸದೃಶವಾದ ಸುವರ್ಣಮಯ ಗೋಡೆಗಳಿಂದ ಆವೃತವಾದ ಸರ್ವೋತ್ತಮ ಅರಮನೆಯಲ್ಲಿ ಮಲಗುತ್ತಿದ್ದ ಶ್ರೀರಾಮನು ವನದಲ್ಲಿ ನೆಲದ ಮೇಲೆ ಹೇಗೆ ಮಲಗುವನು.॥5-7॥

ಮೂಲಮ್ - 8

ಗೀತವಾದಿತ್ರನಿರ್ಘೋಷೈರ್ವರಾಭರಣನಿಃಸ್ವನೈಃ ।
ಮೃದಂಗವರಶಬ್ದೈಶ್ಚ ಸತತಂ ಪ್ರತಿಬೋಧಿತಃ ॥

ಮೂಲಮ್ - 9

ಬಂದಿಭಿರ್ವಂದಿತಃ ಕಾಲೇ ಬಹುಭಿಃ ಸೂತಮಾಗಧೈಃ ।
ಗಾಥಾಭಿರನುರೂಪಾಭಿಃ ಸ್ತುತಿಭಿಶ್ಚ ಪರಂತಪಃ ॥

ಅನುವಾದ

ಸಂಗೀತ ಮತ್ತು ವಾದ್ಯಗಳ ಧ್ವನಿಗಳಿಂದ, ಶ್ರೇಷ್ಠ ಆಭರಣಗಳ ಝಣ-ಝಣ ಶಬ್ದಗಳಿಂದ, ಮೃದಂಗಗಳ ಉತ್ತಮ ನಾದಗಳಿಂದ ಎಚ್ಚರಗೊಳ್ಳುತ್ತಿದ್ದ, ಅನೇಕ ಸೂತ ವಂದಿ-ಮಾಗಧರು ಸಮಯಕ್ಕೆ ಸರಿಯಾಗಿ ವಂದಿಸಿ ಸ್ತುತಿಸುತ್ತಿದ್ದು, ಎಚ್ಚರಿಸುತ್ತಿದ್ದ, ಶತ್ರುಸಂತಾಪ ಶ್ರೀರಾಮನು ಈಗ ನೆಲದಲ್ಲಿ ಹೇಗೆ ಮಲಗುವನು.॥8-9॥

ಮೂಲಮ್ - 10

ಅಶ್ರದ್ಧೇಯಮಿದಂ ಲೋಕೇ ನ ಸತ್ಯಂ ಪ್ರತಿಭಾತಿ ಮಾ ।
ಮುಹ್ಯತೇ ಖಲು ಮೇ ಭಾವಃ ಸ್ವಪ್ನೋಽಯಮಿತಿ ಮೇ ಮತಿಃ ॥

ಅನುವಾದ

ಈ ಮಾತು ಜಗತ್ತಿನಲ್ಲಿ ನಂಬುವಂತಹುದಲ್ಲ, ನನಗೆ ಇದು ಸತ್ಯವಾಗಿ ಅನಿಸುವುದಿಲ್ಲ. ನನ್ನ ಅಂತಃಕರಣವು ಅವಶ್ಯವಾಗಿ ಮೋಹಿತವಾಗಿದೆ. ಇದೇ ನಾದರೂ ಸ್ವಪ್ನವೋ ಎಂಬಂತೆ ನನಗೆ ಅನಿಸುತ್ತದೆ.॥10॥

ಮೂಲಮ್ - 11

ನ ನೂನಂ ದೈವತಂ ಕಿಂಚಿತ್ಕಾಲೇನ ಬಲವತ್ತರಮ್ ।
ಯತ್ರ ದಾಶರಥೀ ರಾಮೋ ಭೂಮಾವೇವಮಶೇತ ಸಃ ॥

ಅನುವಾದ

ನಿಶ್ಚಯವಾಗಿ ಕಾಲ(ವಿಧಿ)ದಂತೆ ಸಮನಾದ ಪ್ರಬಲ ದೇವತೆ ಬೇರೆ ಯಾರೂ ಇಲ್ಲ. ಅದರ ಪ್ರಭಾವದಿಂದ ದಶರಥ ನಂದನ ಶ್ರೀರಾಮನಿಗೂ ಈ ಪ್ರಕಾರ ನೆಲದಲ್ಲಿ ಮಲಗಬೇಕಾಯಿತು.॥11॥

ಮೂಲಮ್ - 12

ಯಸ್ಮಿನ್ ವಿದೇಹರಾಜಸ್ಯ ಸುತಾ ಚ ಪ್ರಿಯದರ್ಶನಾ ।
ದಯಿತಾ ಶಯಿತಾ ಭೂಮೌ ಸ್ನುಷಾ ದಶರಥಸ್ಯ ಚ ॥

ಅನುವಾದ

ಆ ಕಾಲದ ಪ್ರಭಾವದಿಂದಲೇ ವಿದೇಹ ರಾಜನ ಪರಮಸುಂದರಿ ಪುತ್ರೀ ಮತ್ತು ದಶರಥ ಮಹಾರಾಜರ ಪ್ರೀತಿಯ ಸೊಸೆ ಸೀತೆಯೂ ಭೂಮಿಯಲ್ಲಿ ಮಲಗುತ್ತಾಳೆ.॥12॥

ಮೂಲಮ್ - 13

ಇಯಂ ಶಯ್ಯಾ ಮಮ ಭ್ರಾತುರಿದಮಾವರ್ತಿತಂ ಶುಭಮ್ ।
ಸ್ಥಂಡಿಲೇ ಕಠಿನೇ ಸರ್ವಂ ಗಾತ್ರೈರ್ವಿಮೃದಿತಂ ತೃಣಮ್ ॥

ಅನುವಾದ

ಇದೇ ನನ್ನ ಅಣ್ಣನ ಶಯ್ಯೆ ಆಗಿದೆ, ಇಲ್ಲೇ ಅವನು ಮಗ್ಗುಲು ಬದಲಿಸಿರುವನು. ಈ ಕಠೋರ ವೇದಿಕೆಯಲ್ಲಿ ಅವನ ಶುಭ ಶಯನವಾಗಿತ್ತು, ಅದಕ್ಕಾಗಿ ಅವನ ಶರೀರದಿಂದ ಒತ್ತಲ್ಪಟ್ಟ ಎಲ್ಲ ಹುಲ್ಲು ಇನ್ನೂ ಇಲ್ಲೇ ಬಿದ್ದಿದೆ.॥13॥

ಮೂಲಮ್ - 14

ಮನ್ಯೇ ಸಾಭರಣಾ ಸುಪ್ತಾ ಸೀತಾಸ್ಮಿನ್ ಶಯನೇ ಶುಭಾ ।
ತತ್ರ ತತ್ರ ಹಿ ದೃಶ್ಯಂತೇ ಸಕ್ತಾಃ ಕನಕಬಿಂದವಃ ॥

ಅನುವಾದ

ಶುಭ ಲಕ್ಷಣಾ ಸೀತೆಯು ಆಭೂಷಣಗಳನ್ನು ಧರಿಸಿಯೇ ಮಲಗಿದ್ದಳು ಎಂದು ಗೊತ್ತಾಗುತ್ತದೆ; ಏಕೆಂದರೆ ಇಲ್ಲಿ ಅಲ್ಲಲ್ಲಿ ಸುವರ್ಣ ಕಣಗಳು ಅಂಟಿಕೊಂಡಿರುವುದು ಕಾಣುತ್ತಿವೆ.॥14॥

ಮೂಲಮ್ - 15

ಉತ್ತರೀಯಮಿಹಾಸಕ್ತಂ ಸುವ್ಯಕ್ತಂ ಸೀತಯಾ ತದಾ ।
ತಥಾ ಹ್ಯೇತೇಪ್ರಕಾಶಂತೇ ಸಕ್ತಾಃ ಕೌಶೇಯತಂತವಃ ॥

ಅನುವಾದ

ಆಗ ಸೀತೆಯು ಅತ್ತ-ಇತ್ತ ಹೊರಳಾಡುತ್ತಿರುವಾಗ ಹೊದಿಕೆಯ ರೇಶ್ಮೆಯ ದಾರಗಳು ಹುಲ್ಲಿಗೆ ಅಂಟಿಕೊಂಡು ಹೊಳೆಯುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿವೆ.॥15॥

ಮೂಲಮ್ - 16

ಮನ್ಯೇ ಭರ್ತುಃ ಸುಖಾ ಶಯ್ಯಾ ಯೇನ ಬಾಲಾ ತಪಸ್ವಿನೀ ।
ಸುಕುಮಾರೀ ಸತೀ ದುಃಖಂ ನವಿಜಾನಾತಿ ಮೈಥಿಲೀ ॥

ಅನುವಾದ

ಪತಿಯ ಶಯ್ಯೆ ಕೋಮಲ ಅಥವಾ ಒರಟಾಗಿರಲಿ, ಸಾಧ್ವೀ ಸ್ತ್ರೀಯರಿಗೆ ಅದೇ ಸುಖದಾಯಕವಾಗಿರುತ್ತದೆ ಎಂದು ನಾನು ತಿಳಿಯುತ್ತೇನೆ. ಅದರಿಂದಲೇ ಆ ತಪಸ್ವಿನೀ, ಸುಕುಮಾರಿ ಸತೀ-ಸಾಧ್ವೀ ಮಿಥಿಲೇಶ ಕುಮಾರಿ ಸೀತೆಯು ಇಲ್ಲಿ ದುಃಖವನ್ನು ಅನುಭವಿಸಿರಲಿಕ್ಕಿಲ್ಲ.॥16॥

ಮೂಲಮ್ - 17

ಹಾ ಹತೋಽಸ್ಮಿ ನೃಶಂಸೋಽಸ್ಮಿ ಯತ್ಸಭಾರ್ಯಃ ಕೃತೇ ಮಮ ।
ಈದೃಶೀಂ ರಾಘವಃ ಶಯ್ಯಾಮಧಿಶೇತೇ ಹ್ಯನಾಥವತ್ ॥

ಅನುವಾದ

ಅಯ್ಯೋ! ನಾನು ಸತ್ತುಹೋದೆ, ನನ್ನ ಜೀವನ ವ್ಯರ್ಥವಾಯಿತು! ನಾನು ಬಹಳ ಕ್ರೂರಿಯಾಗಿದ್ದೇನೆ, ಅದರಿಂದಲೇ ಸೀತಾಸಹಿತ ಶ್ರೀರಾಮನಿಗೆ ಅನಾಥನಂತೆ ಇಂತಹ ಶಯ್ಯೆಯಲ್ಲಿ ಮಲಗಬೇಕಾಯಿತು.॥17॥

ಮೂಲಮ್ - 18

ಸಾರ್ವಭೌಮಕುಲೇ ಜಾತಃಸರ್ವಲೋಕಸುಖಾವಹಃ ।
ಸರ್ವಪ್ರಿಯಕರಸ್ತ್ಯಕ್ತ್ವಾ ರಾಜ್ಯಂಪ್ರಿಯಮನುತ್ತಮಮ್ ॥

ಮೂಲಮ್ - 19

ಕಥಮಿಂದೀವರಶ್ಯಾಮೋ ರಕ್ತಾಕ್ಷಃ ಪ್ರಿಯದರ್ಶನಃ ।
ಸುಖಭಾಗೀ ನ ದುಃಖಾರ್ಹಃ ಶಯಿತೋ ಭುವಿರಾಘವಃ ॥

ಅನುವಾದ

ಚಕ್ರವರ್ತಿ ಸಾಮ್ರಾಟನ ಕುಲದಲ್ಲಿ ಯಾರು ಹುಟ್ಟಿರುವನೋ, ಸಮಸ್ತ ಲೋಕಗಳಿಗೆ ಸುಖಕೊಡುವಂತಹವನೋ, ಎಲ್ಲರ ಪ್ರಿಯ ಮಾಡುವುದರಲ್ಲಿ ತತ್ಪರನೋ, ಯಾರ ಶರೀರ ನೀಲಕಮಲದಂತೆ ಶ್ಯಾಮಲವಾಗಿದೆಯೋ, ಕಣ್ಣುಗಳು ಕೆಂಪಗಾಗಿದ್ದು, ಯಾರ ದರ್ಶನವು ಎಲ್ಲರಿಗೆ ಪ್ರಿಯವಾಗಿದೆಯೋ, ಸುಖ ಭೋಗಿಸಲು ಯೋಗ್ಯವಾಗಿರುವನೋ, ದುಃಖ ಅನುಭವಿಸಲು ಎಂದಿಗೂ ಯೋಗ್ಯನಲ್ಲವೋ, ಅಂತಹ ಶ್ರೀರಾಮನು ಪರಮೋತ್ತಮ ಪ್ರಿಯ ರಾಜ್ಯವನ್ನು ತ್ಯಜಿಸಿ ಈಗ ಪೃಥಿವಿಯಲ್ಲಿ ಶಯನ ಮಾಡುತ್ತಿದ್ದಾನಲ್ಲ.॥18-19॥

ಮೂಲಮ್ - 20

ಧನ್ಯಃ ಖಲುಮಹಾಭಾಗೋ ಲಕ್ಷ್ಮಣಃ ಶುಭಲಕ್ಷಣಃ ।
ಭ್ರಾತರಂ ವಿಷಮೇ ಕಾಲೇ ಯೋ ರಾಮಮನುವರ್ತತೇ ॥

ಅನುವಾದ

ಉತ್ತಮ ಲಕ್ಷಣಗಳಿಂದ ಕೂಡಿದ ಲಕ್ಷ್ಮಣನೇ ಧನ್ಯ ಮತ್ತು ಭಾಗ್ಯಶಾಲಿಯಾಗಿದ್ದಾನೆ. ಅವನು ಸಂಕಟದ ಸಮಯದಲ್ಲಿ ಅಣ್ಣನಾದ ಶ್ರೀರಾಮನೊಂದಿಗೆ ಇದ್ದು ಅವನ ಸೇವೆ ಮಾಡುತ್ತಿರುವನು.॥20॥

ಮೂಲಮ್ - 21

ಸಿದ್ಧಾರ್ಥಾ ಖಲು ವೈದೇಹೀ ಪತಿಂ ಯಾನುಗತಾ ವನಮ್ ।
ವಯಂ ಸಂಶಯಿತಾಃ ಸರ್ವೇ ಹೀನಾಸ್ತೇನ ಮಹಾತ್ಮನಾ ॥

ಅನುವಾದ

ನಿಶ್ಚಯವಾಗಿ ವಿದೇಹನಂದಿನೀ ಸೀತೆಯು ಕೃತಾರ್ಥಳಾದಳು. ಅವಳು ಪತಿಯೊಂದಿಗೆ ವನವಾಸವನ್ನು ಅನುಸರಿಸಿದಳು. ನಾವೆಲ್ಲರೂ ಆ ಮಹಾತ್ಮಾ ಶ್ರೀರಾಮನಿಂದ ಅಗಲಿ ಸಂಶಯದಲ್ಲಿ ಬಿದ್ದಿರುವೆವು (ಶ್ರೀರಾಮನು ನಮ್ಮ ಸೇವೆಯನ್ನು ಸ್ವೀಕರಿಸುವನೋ, ಇಲ್ಲವೋ ಎಂಬ ಸಂದೇಹ ಉಂಟಾಗುತ್ತಿದೆ.॥21॥

ಮೂಲಮ್ - 22

ಅಕರ್ಣಧಾರಾ ಪೃಥಿವೀ ಶೂನ್ಯೇವ ಪ್ರತಿಭಾತಿ ಮೇ ।
ಗತೇ ದಶರಥೇ ಸ್ವರ್ಗಂ ರಾಮೇ ಚಾರಣ್ಯಮಾಶ್ರಿತೇ ॥

ಅನುವಾದ

ದಶರಥ ಮಹಾರಾಜರು ಸ್ವರ್ಗಲೋಕಕ್ಕೆ ತೆರಳಿದರು, ಶ್ರೀರಾಮನು ವನವಾಸಿಯಾದನು. ಇಂತಹ ಸ್ಥಿತಿಯಲ್ಲಿ ಈ ಪೃಥಿವಿಯು ನಾವಿಕನಿಲ್ಲದ ನೌಕೆಯಂತೆ ನನಗೆ ಬರಿದಾಗಿ ಕಾಣುತ್ತಿದೆ.॥22॥

ಮೂಲಮ್ - 23

ನ ಚಪ್ರಾರ್ಥಯತೇ ಕಶ್ಚಿನ್ಮನಸಾಪಿ ವಸುಂಧರಾಮ್ ।
ವನೇ ನಿವಸತಸ್ತಸ್ಯ ಬಾಹುವೀರ್ಯಾಭಿರಕ್ಷಿತಾಮ್ ॥

ಅನುವಾದ

ಅರಣ್ಯದಲ್ಲೇ ವಾಸಿಸುತ್ತಿರುವಾಗಲೂ ಆ ಶ್ರೀರಾಮನ ಬಾಹುಬಲದಿಂದ ಸುರಕ್ಷಿತವಾದ ಈ ವಸುಂಧರೆಯನ್ನು ಯಾವ ಶತ್ರುವೂ ಪಡೆಯಲು ಮನಸ್ಸಿನಲ್ಲೂ ಯೋಚಿಸಲಾರ.॥23॥

ಮೂಲಮ್ - 24

ಶೂನ್ಯಸಂವರಣಾರಕ್ಷಾಮಯಂತ್ರಿತಹಯದ್ವಿಪಾಮ್ ।
ಅಪಾವೃತಪುರದ್ವಾರಾಂ ರಾಜಧಾನೀಮರಕ್ಷಿತಾಮ್ ॥

ಮೂಲಮ್ - 25

ಅಪ್ರಹೃಷ್ಟಬಲಾಂ ನ್ಯೂನಾಂ ವಿಷಮಸ್ಥಾಮನಾವೃತಾಮ್ ।
ಶತ್ರವೋ ನಾಭಿಮನ್ಯಂತೇ ಭಕ್ಷ್ಯಾನ್ವಿಷಕೃತಾನಿವ ॥

ಅನುವಾದ

ಈ ಸಮಯದಲ್ಲಿ ಅಯೋಧ್ಯೆಯ ಸುತ್ತಲ ಕೋಟೆಯ ರಕ್ಷಣೆಯ ಯಾವ ವ್ಯವಸ್ಥೆಯೂ ಇಲ್ಲ, ಆನೆ, ಕುದುರೆಗಳು ಬಂಧನವಿಲ್ಲದೆ ಓಡಾಡುತ್ತಿವೆ, ನಗರದ ಮಹಾದ್ವಾರವೂ ತೆರೆದೇ ಇದೆ, ಇಡೀ ರಾಜಧಾನಿ ಅರಕ್ಷಿತವಾಗಿದೆ, ಸೈನ್ಯದಲ್ಲಿ ಹರ್ಷ, ಉತ್ಸಾಹವಿಲ್ಲ, ಸಮಸ್ತ ನಗರಿಯು ಶಿಕ್ಷಕರಿಲ್ಲದೆ ಬಟ್ಟ ಬಯಲಾಗಿದೆ, ಹೀಗಿದ್ದರೂ ಶತ್ರುಗಳು ವಿಷಮಿಶ್ರಿತ ಭೋಜನದಂತೆ ಇದನ್ನು ಆಕ್ರಮಿಸಲು ಇಚ್ಛಿಸುವುದಿಲ್ಲ. ಶ್ರೀರಾಮನ ಬಾಹುಬಲದಿಂದಲೇ ಇದರ ರಕ್ಷಣೆ ಆಗುತ್ತಿದೆ.॥24-25॥

ಮೂಲಮ್ - 26

ಅದ್ಯಪ್ರಭೃತಿ ಭೂಮೌ ತು ಶಯಿಷ್ಯೇಽಹಂ ತೃಣೇಷು ವಾ ।
ಫಲಮೂಲಾಶನೋ ನಿತ್ಯಂ ಜಟಾಚೀರಾಣಿಧಾರಯನ್ ॥

ಅನುವಾದ

ಇಂದಿನಿಂದ ನಾನೂ ಕೂಡ ನೆಲದಲ್ಲೇ ಅಥವಾ ಹುಲ್ಲಿನ ಮೇಲೆಯೇ ಮಲಗುವೆನು, ಫಲ-ಮೂಲಗಳನ್ನೇ ತಿನ್ನುವೆನು, ಸದಾ ವಲ್ಕಲ ನಾರುಮಡಿಯನ್ನು ಮತ್ತು ಜಟೆಯನ್ನು ಧರಿಸುವೆನು.॥26॥

ಮೂಲಮ್ - 27

ತಸ್ಯಾಹಮುತ್ತರಂ ಕಾಲಂ ನಿವತ್ಸ್ಯಾಮಿಸುಖಂ ವನೇ ।
ತತ್ ಪ್ರತಿಶ್ರುತಮಾರ್ಯಸ್ಯ ನೈವ ಮಿಥ್ಯಾ ಭವಿಷ್ಯತಿ ॥

ಅನುವಾದ

ವನವಾಸದ ಅವಧಿ ಇರುವಷ್ಟು ದಿನಗಳವರೆಗೆ ನಾನೂ ಕಾಡಿನಲ್ಲೇ ಸುಖವಾಗಿ ಇರುವೆನು. ಹೀಗಾದರೆ ಆರ್ಯ ಶ್ರೀರಾಮನು ಮಾಡಿದ ಪ್ರತಿಜ್ಞೆ ಸುಳ್ಳಾಗದು.॥27॥

ಮೂಲಮ್ - 28

ವಸಂತಂ ಭ್ರಾತುರರ್ಥಾಯ ಶತ್ರುಘ್ನೋ ಮಾನುವತ್ಸ್ಯತಿ ।
ಲಕ್ಷ್ಮಣೇನ ಸಹಾಯೋಧ್ಯಾಮಾರ್ಯೋ ಮೇ ಪಾಲಯಿಷ್ಯತಿ ॥

ಅನುವಾದ

ಅಣ್ಣನಿಗಾಗಿ ವನದಲ್ಲಿ ವಾಸಿಸುವಾಗ ಶತ್ರುಘ್ನನೂ ನನ್ನೊಂದಿಗೆ ಇರುವನು ಮತ್ತು ನನ್ನ ಅಣ್ಣ ಶ್ರೀರಾಮನು ಲಕ್ಷ್ಮಣನೊಂದಿಗೆ ಅಯೋಧ್ಯೆಯನ್ನು ಪಾಲಿಸುವನು.॥28॥

ಮೂಲಮ್ - 29

ಅಭಿಷೇಕ್ಷ್ಯಂತಿ ಕಾಕುತ್ಸ್ಥಮಯೋಧ್ಯಾಯಾಂದ್ವಿಜಾತಯಃ ।
ಅಪಿ ಮೇ ದೇವತಾಃ ಕುರ್ಯುರಿಮಂ ಸತ್ಯಂ ಮನೋರಥಮ್ ॥

ಅನುವಾದ

ಅಯೋಧ್ಯೆಯಲ್ಲಿ ಬ್ರಾಹ್ಮಣರು ಕಾಕುತ್ಸ್ಥ ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡುವರು. ದೇವತೆಗಳು ನನ್ನ ಈ ಮನೋರಥವನ್ನು ಸತ್ಯವಾಗಿಸಲಾರರೇ.॥29॥

ಮೂಲಮ್ - 30

ಪ್ರಸಾದ್ಯಮಾನಃ ಶಿರಸಾ ಮಯಾ ಸ್ವಯಂ
ಬಹುಪ್ರಕಾರಂ ಯದಿ ನ ಪ್ರಪತ್ಸ್ಯತೇ ।
ತತೋಽನುವತ್ಸ್ಯಾಮಿ ಚಿರಾಯ ರಾಘವಂ
ವನೇಚರಂ ನಾರ್ಹತಿ ಮಾಮುಪೇಕ್ಷಿತುಮ್ ॥

ಅನುವಾದ

ನಾನು ಶ್ರೀರಾಮನ ಚರಣಗಳಲ್ಲಿ ಮಸ್ತಕವನ್ನಿಟ್ಟು ಅವನನ್ನು ಒಪ್ಪಿಸಲು ಪ್ರಯತ್ನಿಸುವೆನು. ನಾನು ಎಷ್ಟು ಹೇಳಿದರೂ ಅವನು ಹಿಂದಿರಗಲು ಒಪ್ಪದಿದ್ದರೆ ಆ ವನವಾಸಿ ಶ್ರೀರಾಮನೊಂದಿಗೆ ನಾನೂ ದೀರ್ಘಕಾಲದವರೆಗೆ ಅಲ್ಲೇ ವಾಸಿಸುವೆನು. ಅವನು ನನ್ನನ್ನು ಉಪೇಕ್ಷಿಸಲಾರನು.॥30॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಎಂಭತ್ತೆಂಟನೆಯ ಸರ್ಗ ಪೂರ್ಣವಾಯಿತು ॥88॥