वाचनम्
ಭಾಗಸೂಚನಾ
ಶ್ರೀರಾಮನ ವಿಷಯವನ್ನು ಕೇಳಿ ಭರತನ ಮೂರ್ಛೆ, ಶತ್ರುಘ್ನ-ಕೌಸಲ್ಯಾ-ಕೈಕೇಯಿ ಸುಮಿತ್ರೆಯರ ವಿಲಾಪ, ಎಚ್ಚರಗೊಂಡ ಭರತನ ಕೇಳಿಕೆಯಂತೆ ಶ್ರೀರಾಮನ ಭೋಜನ-ಶಯನ ಮುಂತಾದ ವಿಷಯವಾಗಿ ಗುಹನಿಂದ ವಿವರಣೆ
ಮೂಲಮ್ - 1
ಗುಹಸ್ಯ ವಚನಂ ಶ್ರುತ್ವಾ ಭರತೋ ಭೃಶಮಪ್ರಿಯಮ್ ।
ಧ್ಯಾನಂ ಜಗಾಮ ತತ್ರೈವ ಯತ್ರತಚ್ಛ್ರುತಮಪ್ರಿಯಮ್ ॥
ಅನುವಾದ
ಶ್ರೀರಾಮನ ಜಟಾಧಾರಣ ಮುಂತಾದ ಅತ್ಯಂತ ಅಪ್ರಿಯ ಮಾತುಗಳನ್ನು ಗುಹನಿಂದ ಕೇಳಿ ಭರತನು ಚಿಂತಾ ಮಗ್ನನಾದನು. ಶ್ರೀರಾಮನ ಕುರಿತು ಕೇಳಿದ ಅಪ್ರಿಯ ಮಾತನ್ನು ಕೇಳಿ ಅದನ್ನೇ ಅವನು ಚಿಂತಿಸತೊಡಗಿದನು. (ಈಗ ನನ್ನ ಮನೋರಥ ಪೂರ್ಣವಾಗಲಾರದು. ಶ್ರೀರಾಮನು ಜಟೆ ಧರಿಸಿಕೊಂಡಿದ್ದರಿಂದ ಅವನು ಮರಳಿ ಬರಲಾರನೆಂದೇ ನನಗೆ ಚಿಂತೆ ಉಂಟಾಗಿದೆ.॥1॥
ಮೂಲಮ್ - 2
ಸುಕುಮಾರೋ ಮಹಾಸತ್ತ್ವಃ ಸಿಂಹಸ್ಕಂಧೋ ಮಹಾಭುಜಃ ।
ಪುಂಡರೀಕವಿಶಾಲಾಕ್ಷಸ್ತರುಣಃ ಪ್ರಿಯದರ್ಶನಃ ॥
ಮೂಲಮ್ - 3
ಪ್ರತ್ಯಾಶ್ವಸ್ಯ ಮುಹೂರ್ತಂ ತು ಕಾಲಂಪರಮದುರ್ಮನಾಃ ।
ಸಸಾದ ಸಹಸಾ ತೋತ್ರೈರ್ಹ್ಯದಿ ವಿದ್ಧ ಇವ ದ್ವಿಪಃ ॥
ಅನುವಾದ
ಭರತನು ಸುಕುಮಾರ ನಿರುವಂತೆಯೇ ಮಹಾ ಬಲಶಾಲಿಯಾಗಿದ್ದನು, ಅವನು ಸಿಂಹಸ್ಕಂಧನಾಗಿದ್ದು, ಭುಜಗಳು ದೀರ್ಘವಾಗಿದ್ದವು, ನೇತ್ರಗಳು ಅರಳಿದ ಕಮಲದಂತೆ ಸುಂದರವಾಗಿದ್ದವು. ಅವನು ತರುಣನಾಗಿದ್ದು, ನೋಡಲು ಮನೋಹರನಾಗಿದ್ದನು. ಗುಹನ ಮಾತನ್ನು ಕೇಳಿ ಮುಹೂರ್ತ ಕಾಲ ಹೇಗೋ ಸಮಾಧಾನಗೊಂಡಿದ್ದನು, ಮತ್ತೆ ಪುನಃ ಅವನ ಮನಸ್ಸಿನಲ್ಲಿ ಬಹಳ ದುಃಖವಾಯಿತು. ಅಂಕುಶದಿಂದ ತಿವಿದ ಆನೆಯಂತೆ ಅವನು ಅತ್ಯಂತ ವ್ಯಥಿತನಾಗಿ ತತ್ಕ್ಷಣ ದುಃಖದಿಂದ ಶಿಥಿಲನಾಗಿ ಮೂರ್ಛಿತನಾದನು.॥2-3॥
ಮೂಲಮ್ - 4
ಭರತಂ ಮೂರ್ಛಿತಂ ದೃಷ್ಟ್ವಾ ವಿವರ್ಣವದನೋಗುಹಃ ।
ಬಭೂವ ವ್ಯಥಿತಸ್ತತ್ರ ಭೂಮಿಕಂಪೇಯಥಾ ದ್ರುಮಃ ॥
ಅನುವಾದ
ಭರತನು ಮೂರ್ಛಿತನಾಗಿ ಇರುವುದನ್ನು ನೋಡಿ ಗುಹನ ಮುಖವು ಬಾಡಿತು. ಭೂಕಂಪದ ಸಮಯ ನಡುಗುವ ಮರದಂತೆ ವ್ಯಥಿತನಾಗಿ ನಡುಗಿಹೋದನು.॥4॥
ಮೂಲಮ್ - 5
ತದವಸ್ಥಂ ತು ಭರತಂ ಶತ್ರುಘ್ನೋಽನಂತರಸ್ಥಿತಃ ।
ಪರಿಷ್ವಜ್ಯ ರುರೋದೋಚ್ಚೈರ್ವಿಸಂಜ್ಞಃ ಶೋಕಕರ್ಶಿತಃ ॥
ಅನುವಾದ
ಶತ್ರುಘ್ನನು ಭರತನ ಬಳಿಯಲ್ಲೇ ಕುಳಿತಿದ್ದನು. ಅವನ ಅಂತಹ ಸ್ಥಿತಿಯನ್ನು ಕಂಡು ಅವನನ್ನು ಅಪ್ಪಿಕೊಂಡು ಜೋರಾಗಿ ಅಳ ತೊಡಗಿದನು ಹಾಗೂ ಶೋಕದಿಂದ ಎಚ್ಚರದಪ್ಪಿದನು.॥5॥
ಮೂಲಮ್ - 6
ತತಃ ಸರ್ವಾಃ ಸಮಾಪೇತುರ್ಮಾತರೋ ಭರತಸ್ಯ ತಾಃ ।
ಉಪವಾಸಕೃಶಾ ದೀನಾ ಭರ್ತುರ್ವ್ಯಸನಕರ್ಶಿತಾಃ ॥
ಅನುವಾದ
ಅನಂತರ ಭರತನ ಎಲ್ಲ ತಾಯಂದಿರು ಅಲ್ಲಿಗೆ ಬಂದರು. ಅವರು ಪತಿವಿಯೋಗದ ದುಃಖದಿಂದ ದುಃಖಿತರಾಗಿದ್ದು, ಉಪವಾಸದಿಂದಾಗಿ ದುರ್ಬಲರೂ, ದೀನರೂ ಆಗಿದ್ದರು.॥6॥
ಮೂಲಮ್ - 7
ತಾಶ್ಚ ತಂ ಪತಿತಂ ಭೂಮೌ ರುದಂತ್ಯಃಪರ್ಯವಾರಯನ್ ।
ಕೌಸಲ್ಯಾ ತ್ವನುಸೃತ್ಯೈನಂ ದರ್ಮನಾಃ ಪರಿಷಸ್ವಜೇ ॥
ಅನುವಾದ
ನೆಲದಲ್ಲಿ ಬಿದ್ದಿರುವ ಭರತನನ್ನು ಸುತ್ತುವರಿದು ಎಲ್ಲರೂ ಅಳತೊಡಗಿದರು. ಕೌಸಲ್ಯೆಯ ಹೃದಯವಾದರೋ ದುಃಖದಿಂದ ಇನ್ನೂ ಕಾತರವಾಗಿತ್ತು. ಅವಳು ಭರತನ ಬಳಿಗೆ ಹೋಗಿ ಅವನನ್ನು ತೊಡೆಯಲ್ಲೆತ್ತಿಕೊಂಡಳು.॥7॥
ಮೂಲಮ್ - 8
ವತ್ಸಲಾ ಸ್ವಂ ಯಥಾ ವತ್ಸಮುಪಗುಹ್ಯ ತಪಸ್ವಿನೀ ।
ಪರಿಪಪ್ರಚ್ಛ ಭರತಂ ರುಂದತೀ ಶೋಕಲಾಲಸಾ ॥
ಅನುವಾದ
ವಾತ್ಸಲ್ಯಮಯೀ ಗೋವು ತನ್ನ ಕರುವನ್ನು ಪ್ರೇಮದಿಂದ ನೆಕ್ಕುವಂತೆ ಶೋಕದಿಂದ ವ್ಯಾಕುಲಳಾದ ತಪಸ್ವಿನೀ ಕೌಸಲ್ಯೆಯು ಭರತನನ್ನು ತೊಡೆಯಲ್ಲೆತ್ತಿಕೊಂಡು ಅಳುತ್ತಾ ಕೇಳಿದಳು.॥8॥
ಮೂಲಮ್ - 9
ಪುತ್ರ ವ್ಯಾಧಿರ್ನ ತೇ ಕಚ್ಚಿಚ್ಛರೀರಂ ಪರಿಬಾಧತೇ ।
ಅಸ್ಯ ರಾಜಕುಲಸ್ಯಾದ್ಯ ದ್ವದಧೀನಂ ಹಿ ಜೀವಿತಮ್ ॥
ಅನುವಾದ
ಮಗು! ನಿನ್ನ ಶರೀರಕ್ಕೆ ಯಾವುದಾದರೂ ರೋಗವು ಕಷ್ಟಕೊಡುತ್ತಿಲ್ಲವಲ್ಲ? ಈಗ ಈ ರಾಜವಂಶದ ಜೀವನವೇ ನಿನ್ನ ಅಧೀನವಾಗಿದೆ.॥9॥
ಮೂಲಮ್ - 10
ತ್ವಾಂ ದೃಷ್ಟ್ವಾ ಪುತ್ರ ಜೀವಾಮಿ ರಾಮೇ ಸಭ್ರಾತೃಕೇಗತೇ ।
ವೃತ್ತೇ ದಶರಥೇ ರಾಜ್ಞಿ ನಾಥ ಏಕಸ್ತ್ವಮದ್ಯ ನಃ ॥
ಅನುವಾದ
ವತ್ಸ! ನಾನು ನಿನ್ನನ್ನು ನೋಡಿಯೇ ಬದುಕುತ್ತಿರುವೆನು. ಶ್ರೀರಾಮನು ಲಕ್ಷ್ಮಣನೊಂದಿಗೆ ಕಾಡಿಗೆ ಹೋದನು. ಮಹಾರಾಜರು ಸ್ವರ್ಗವಾಸಿಗಳಾದರು. ಈಗ ನೀನೊಬ್ಬನೇ ನನಗೆ ರಕ್ಷಕನಾಗಿರುವೆ.॥10॥
ಮೂಲಮ್ - 11
ಕಚ್ಚಿನ್ನ ಲಕ್ಷ್ಮಣೇ ಪುತ್ರಶ್ರುತಂ ತೇ ಕಿಂಚಿದಪ್ರಿಯಮ್ ।
ಪುತ್ರೇ ವಾ ಹ್ಯೇಕಪುತ್ರಾಯಾಃ ಸಹಭಾರ್ಯೇ ವನಂ ಗತೇ ॥
ಅನುವಾದ
ಮಗು! ನಿಜ ಹೇಳು, ನೀನು ಲಕ್ಷ್ಮಣನ ಸಂಬಂಧದಲ್ಲಿ ಅಥವಾ ಒಬ್ಬನೇ ಪುತ್ರನಾದ ನನ್ನ ಮಗನಾದ ಶ್ರೀರಾಮನು ಸೀತಾಸಹಿತ ವನಕ್ಕೆ ಹೋಗಿದ್ದ ಅವನ ವಿಷಯದಲ್ಲಿ ಏನಾದರೂ ಅಪ್ರಿಯ ಮಾತನ್ನು ಕೇಳಿದೆಯಾ.॥11॥
ಮೂಲಮ್ - 12
ಸ ಮುಹೂರ್ತಂ ಸಮಾಶ್ವಸ್ಯ ರುದನ್ನೇವ ಮಹಾಯಶಾಃ ।
ಕೌಸಲ್ಯಾಂ ಪರಿಸಾಂತ್ವಯೇದಂ ಗುಹಂ ವಚನಮಬ್ರವೀತ್ ॥
ಅನುವಾದ
ಮುಹೂರ್ತಕಾಲದಲ್ಲಿ ಮಹಾಯಶಸ್ವೀ ಭರತನ ಚಿತ್ತ ಸ್ವಸ್ಥವಾದಾಗ ಅವನು ಅಳುತ್ತಿರುವ ಕೌಸಲ್ಯೆಗೆ ಸಾಂತ್ವನವನ್ನು ನೀಡುತ್ತಾ, ಅಮ್ಮಾ! ಗಾಬರಿಪಡಬೇಡ, ನಾನು ಯಾವುದೇ ಅಪ್ರಿಯ ಮಾತನ್ನು ಕೇಳಲಿಲ್ಲ ಮತ್ತೆ ಗುಹನಲ್ಲಿ ಈ ಪ್ರಕಾರ ಕೇಳಿದನು.॥12॥
ಮೂಲಮ್ - 13
ಭ್ರಾತಾ ಮೇ ಕ್ವಾವಸದ್ ರಾತ್ರೌ ಕ್ವ ಸೀತಾ ಕ್ವ ಚ ಲಕ್ಷ್ಮಣಃ ।
ಅಸ್ವಪಚ್ಛಯನೇ ಕಸ್ಮಿನ್ ಕಿಂಭುಕ್ತ್ವಾ ಗುಹ ಶಂಸ ಮೇ ॥
ಅನುವಾದ
ಗುಹನೇ! ಅಂದು ರಾತ್ರಿಯಲ್ಲಿ ನನ್ನಣ್ಣ ಶ್ರೀರಾಮನು ಎಲ್ಲಿ ತಂಗಿದ್ದನು? ಸೀತೆ ಎಲ್ಲಿದ್ದಳು? ಮತ್ತು ಲಕ್ಷ್ಮಣ ಎಲ್ಲಿದ್ದನು? ಅವರು ಯಾವ ಆಹಾರ ಸೇವಿಸಿದರು ಎಂತಹ ಶಯ್ಯೆಯಲ್ಲಿ ಮಲಗಿದ್ದರು? ಇದೆಲ್ಲವನ್ನು ನನಗೆ ತಿಳಿಸು.॥13॥
ಮೂಲಮ್ - 14
ಸೋಽಬ್ರವೀದ್ಭರತಂ ಹೃಷ್ಟೋ ನಿಷಾದಾಧಿಪತಿರ್ಗುಹಃ ।
ಯದ್ವಿಧಂ ಪ್ರತಿಪೇದೇ ಚ ರಾಮೇಪ್ರಿಯಹಿತೇಽತಿಥೌ ॥
ಅನುವಾದ
ಈ ಪ್ರಶ್ನೆ ಕೇಳಿ ಗುಹನಿಗೆ ಬಹಳ ಸಂತೋಷವಾಗಿ, ಅವನು ತನ್ನ ಪ್ರಿಯ ಹಾಗೂ ಹಿತಕಾರಿ ಅತಿಥಿ ಶ್ರೀರಾಮನು ಬಂದಾಗ ನಮ್ಮೊಂದಿಗೆ ಹೇಗೆ ವರ್ತಿಸಿದ್ದನು? ಅದೆಲ್ಲವನ್ನು ತಿಳಿಸುತ್ತಾ ಭರತನಲ್ಲಿ ಹೇಳಿದನು.॥14॥
ಮೂಲಮ್ - 15
ಅನ್ನಮುಚ್ಚಾವಚಂ ಭಕ್ಷ್ಯಾಃ ಲಾನಿ ವಿವಿಧಾನಿ ಚ ।
ರಾಮಾಯಾಭ್ಯವಹಾರಾರ್ಥಂ ಬಹುಶೋಽಪಹೃತಂ ಮಯಾ ॥
ಅನುವಾದ
ನಾನು ಬಗೆ ಬಗೆಯ ಅನ್ನ, ಅನೇಕ ಪ್ರಕಾರದ ಖಾದ್ಯ ಪದಾರ್ಥಗಳನ್ನು, ಅನೇಕ ರೀತಿಯ ಫಲಗಳನ್ನು ಶ್ರೀರಾಮನ ಬಳಿಗೆ ಭೋಜನಕ್ಕಾಗಿ ಸಾಕಾಗುವಷ್ಟು ಕಳಿಸಿದೆ.॥15॥
ಮೂಲಮ್ - 16
ತತ್ಸರ್ವಂ ಪ್ರತ್ಯನುಜ್ಞಾಸೀದ್ ರಾಮಃ ಸತ್ಯಪರಾಕ್ರಮಃ ।
ನ ಹಿ ತತ್ ಪ್ರತ್ಯಗೃಹ್ಣಾತ್ ಸ ಕ್ಷತ್ರಧರ್ಮಮನುಸ್ಮರನ್ ॥
ಅನುವಾದ
ಸತ್ಯ ಪರಾಕ್ರಮಿ ಶ್ರೀರಾಮನು ನಾನು ಕೊಟ್ಟ ಎಲ್ಲ ವಸ್ತುಗಳನ್ನೇನೋ ಸ್ವೀಕರಿಸಿದನು, ಆದರೆ ಕ್ಷತ್ರಿಯ ಧರ್ಮವನ್ನು ನೆನೆಯುತ್ತಾ ಅವನ್ನು ತೆಗೆದುಕೊಳ್ಳದೆ ನನಗೇ ಆದರ ಪೂರ್ವಕವಾಗಿ ಹಿಂದಿರುಗಿಸಿದನು.॥16॥
ಮೂಲಮ್ - 17
ನಹ್ಯಸ್ಮಾಭಿಃ ಪ್ರತಿಗ್ರಾಹ್ಯಂ ಸಖೇ ದೇಯಂ ತು ಸರ್ವದಾ ।
ಇತಿ ತೇನ ವಯಂ ಸರ್ವೇ ಅನುನೀತಾ ಮಹಾತ್ಮನಾ ॥
ಅನುವಾದ
ಮತ್ತೆ ಆ ಮಹಾತ್ಮನು ನಮ್ಮೆಲ್ಲರಿಗೆ ಸಮಜಾಯಿಸುತ್ತಾ ಹೇಳಿದನು - ಸಖನೇ! ನಮ್ಮಂತಹ ಕ್ಷತ್ರಿಯರು ಯಾರಿಂದಲೂ ಏನನ್ನೂ ತೆಗೆದುಕೊಳ್ಳಬಾರದು; ಆದರೆ ಸದಾ ಕೊಡುತ್ತಾ ಇರಬೇಕು.॥17॥
ಮೂಲಮ್ - 18
ಲಕ್ಷ್ಮಣೇನ ಯದಾನೀತಂ ಪೀತಂ ವಾರಿ ಮಹಾತ್ಮನಾ ।
ಔಪವಾಸ್ಯಂ ತದಾಕಾರ್ಷೀದ್ ರಾಘವಃ ಸಹ ಸೀತಯಾ ॥
ಅನುವಾದ
ಸೀತಾಸಹಿತ ರಾಮನು ಆ ರಾತ್ರಿ ಉಪವಾಸವನ್ನೇ ಮಾಡಿದನು. ಲಕ್ಷ್ಮಣನು ತಂದಿತ್ತ ಜಲವನ್ನು ಮಾತ್ರ ಆ ಮಹಾತ್ಮನು ಕುಡಿದನು.॥18॥
ಮೂಲಮ್ - 19
ತತಸ್ತು ಜಲಶೇಷೇಣ ಲಕ್ಷ್ಮಣೋಽಪ್ಯಕರೋತ್ತದಾ ।
ವಾಗ್ಯತಾಸ್ತೇ ತ್ರಯಃ ಸಂಧ್ಯಾಂಸಮುಪಾಸಂತ ಸಂಹಿತಾಃ ॥
ಅನುವಾದ
ಅವನು ಕುಡಿದು ಉಳಿದ ನೀರನ್ನು ಲಕ್ಷ್ಮಣನು ಸ್ವೀಕರಿಸಿದನು. ನೀರು ಕುಡಿಯುವ ಮೊದಲು ಅವರು ಮೂವರೂ ಏಕಾಗ್ರಚಿತ್ತರಾಗಿ ಮೌನದಿಂದ ಸಂಧ್ಯೋಪಾಸನೆ ಮಾಡಿದ್ದರು.॥19॥
ಮೂಲಮ್ - 20
ಸೌಮಿತ್ರಿಸ್ತು ತತಃ ಪಶ್ಚಾದಕರೋತ್ ಸ್ವಾಸ್ತರಂ ಶುಭಮ್ ।
ಸ್ವಯಮಾನವೀಯ ಬರ್ಹೀಂಷಿ ಕ್ಷಿಪ್ರಂ ರಾಘವಕಾರಣಾತ್ ॥
ಅನುವಾದ
ಅನಂತರ ಲಕ್ಷ್ಮಣನು ಬೇಗನೇ ಹುಲ್ಲು-ಚಿಗುರುಗಳನ್ನು ತಂದು ಶ್ರೀರಾಮನಿಗಾಗಿ ಸುಂದರ ಶಯ್ಯೆಯನ್ನು ನಿರ್ಮಿಸಿದನು.॥20॥
ಮೂಲಮ್ - 21
ತಸ್ಮಿನ್ಸಮಾವಿಶದ್ ರಾಮಃ ಸ್ವಾಸ್ತರೇ ಸಹ ಸೀತಯಾ ।
ಪ್ರಕ್ಷಾಲ್ಯ ಚ ತಯೋಃ ಪಾದೌ ವ್ಯಪಾಕ್ರಾಮತ್ ಸಲಕ್ಷ್ಮಣಃ ॥
ಅನುವಾದ
ಆ ಸುಂದರ ಶಯ್ಯೆಯಲ್ಲಿ ಸೀತೆಯೊಂದಿಗೆ ಶ್ರೀರಾಮನು ವಿರಾಜಮಾನನಾದಾಗ ಲಕ್ಷ್ಮಣನು ಅವರಿಬ್ಬರ ಪಾದಸೇವೆ ಗೈದು ಅಲ್ಲಿಂದ ದೂರಹೋಗಿ ಕುಳಿತುಕೊಂಡನು.॥21॥
ಮೂಲಮ್ - 22
ಏತತ್ ತದಿಂಗುದೀಮೂಲಮಿದಮೇವ ಚ ತತ್ತೃಣಮ್ ।
ಯಸ್ಮಿನ್ ರಾಮಶ್ಚ ಸೀತಾ ಚ ರಾತ್ರಿಂ ತಾಂ ಶಯಿತಾವುಭೌ ॥
ಅನುವಾದ
ಇದೋ, ಇದೆ ಆ ಇಂಗುದಿ ವೃಕ್ಷದ ಬುಡವಾಗಿದೆ ಮತ್ತು ಇಲ್ಲೇ ಶ್ರೀರಾಮ ಮತ್ತು ಸೀತೆಯರು ರಾತ್ರಿಯಲ್ಲಿ ಮಲಗಿದ್ದ ಹುಲ್ಲು ಇದೆ.॥22॥
ಮೂಲಮ್ - 23
ನಿಯಮ್ಯ ಪೃಷ್ಠೇ ತು ತಲಾಂಗುಲಿತ್ರವಾನ್
ಶರೈಃ ಸುಪೂರ್ಣಾವಿಷುಧೀ ಪರಂತಪಃ ।
ಮಹದ್ಧನುಃ ಸಜ್ಯಮುಪೀಹ್ಯ ಲಕ್ಷ್ಮಣೋ
ನಿಶಾಮತಿಷ್ಠತ್ ಪರಿತೋಸ್ಯ ಕೇವಲಮ್ ॥
ಅನುವಾದ
ಪರಂತಪ ಲಕ್ಷ್ಮಣನು ಬಾಣಗಳಿಂದ ತುಂಬಿದ ಎರಡು ಬತ್ತಳಿಕೆಗಳನ್ನು ಬೆನ್ನಿಗೆ ಕಟ್ಟಿಕೊಂಡು, ಎರಡೂ ಕೈಗಳ ಬೆರಳುಗಳಲ್ಲಿ ಚರ್ಮದ ಕವಚವನ್ನು ತೊಟ್ಟು ಮಹಾಧನುಸ್ಸನ್ನು ಸಜ್ಜಾಗಿಸಿ ಶ್ರೀರಾಮನ ಸುತ್ತಲೂ ತಿರುಗುತ್ತಾ ಕಾವಲು ಕಾಯುತ್ತಾ ರಾತ್ರಿಯಿಡೀ ನಿಂತೇ ಇದ್ದನು.॥23॥
ಮೂಲಮ್ - 24
ತತಸ್ತ್ವಹಂ ಚೋತ್ತಮಬಾಣಚಾಪಭೃತ್
ಸ್ಥಿತೋಽಭವಂ ತತ್ರ ಸ ಯತ್ರ ಲಕ್ಷ್ಮಣಃ ।
ಅತಂದ್ರಿತೈಜ್ಞಾತಿಭಿರಾತ್ತಕಾರ್ಮುಕೈ-
ರ್ಮಹೇಂದ್ರಕಲ್ಪಂ ಪರಿಪಾಲಯಂಸ್ತದಾ ॥
ಅನುವಾದ
ಅನಂತರ ನಾನೂ ಕೂಡ ಉತ್ತಮ ಧನುರ್ಬಾಣಗಳನ್ನು ಹಿಡಿದುಕೊಂಡು ಲಕ್ಷ್ಮಣನಿದ್ದಲ್ಲಿಗೇ ಬಂದು ನಿಂತೆನು. ಆಗ ನನ್ನ ಬಂಧು-ಬಾಂಧವರೊಂದಿಗೆ, ನಿದ್ರೆ-ಆಲಸ್ಯಗಳನ್ನು ತ್ಯಜಿಸಿ ಧನುಸ್ಸು-ಬಾಣಗಳನ್ನು ಧರಿಸಿ ಎಚ್ಚರಿಕೆಯಿಂದ ದೇವೇಂದ್ರನಂತೆ ತೇಜಸ್ವೀ ಶ್ರೀರಾಮನನ್ನು ನಾನು ರಕ್ಷಿಸುತ್ತಿದ್ದೆ.॥24॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಎಂಭತ್ತೇಳನೆಯ ಸರ್ಗ ಪೂರ್ಣವಾಯಿತು.॥87॥