०८६ गुहेन रामवृत्तान्तकथनम्

वाचनम्
ಭಾಗಸೂಚನಾ

ಗುಹನು ಲಕ್ಷ್ಮಣನ ಸದ್ಭಾವನೆಯನ್ನು ಮತ್ತು ವಿಲಾಪವನ್ನು ವರ್ಣಿಸಿದುದು

ಮೂಲಮ್ - 1

ಆಚಚಕ್ಷೇಽಥ ಸದ್ಭಾವಂ ಲಕ್ಷ್ಮಣಸ್ಯ ಮಹಾತ್ಮನಃ ।
ಭರತಾಯಾಪ್ರಮೇಯಾಯ ಗುಹೋ ಗಹನಗೋಚರಃ ॥

ಅನುವಾದ

ವನಚಾರಿ ಗುಹನು ಅಪ್ರಮೇಯ ಶಕ್ತಿಶಾಲಿ ಭರತನಲ್ಲಿ ಮಹಾತ್ಮಾ ಲಕ್ಷ್ಮಣನ ಸದ್ಭಾವವನ್ನು ಹೀಗೆ ವರ್ಣಿಸಿದನು.॥1॥

ಮೂಲಮ್ - 2

ತಂ ಜಾಗ್ರತಂ ಗುಣೈರ್ಯುಕ್ತಂ ವರಚಾಪೇಷುಧಾರಿಣಮ್ ।
ಭ್ರಾತೃಗುಪ್ತ್ಯರ್ಥಮತ್ಯಂತಮಹಂ ಲಕ್ಷ್ಮಣಮಬ್ರುವಮ್ ॥

ಅನುವಾದ

ಲಕ್ಷ್ಮಣನು ತನ್ನ ಅಣ್ಣನ ರಕ್ಷಣೆಗಾಗಿ ಧನುರ್ಬಾಣಗಳನ್ನು ಧರಿಸಿಕೊಂಡು ಬಹಳ ಹೊತ್ತಿನವರೆಗೆ ಎಚ್ಚರವಾಗಿದ್ದನು. ಆಗ ಆ ಸದ್ಗುಣಶಾಲೀ ಲಕ್ಷ್ಮಣನಲ್ಲಿ ನಾನು ಹೀಗೆ ಹೇಳಿದೆ.॥2॥

ಮೂಲಮ್ - 3

ಇಯಂ ತಾತ ಸುಖಾ ಶಯ್ಯಾ ತ್ವದರ್ಥಮುಪಕಲ್ಪಿತಾ ।
ಪ್ರತ್ಯಾಶ್ವಸಿಹಿ ಶೇಷ್ವಾಸ್ಯಾಂ ಸುಖಂ ರಾಘವನಂದನ ॥

ಮೂಲಮ್ - 4

ಉಚಿತೋಽಯಂ ಜನಃ ಸರ್ವೋ ದುಃಖಾನಾಂ ತ್ವಂ ಸುಖೋಚಿತಃ ।
ಧರ್ಮಾತ್ಮಂಸ್ತಸ್ಯ ಗುಪ್ತ್ಯರ್ಥಂ ಜಾಗರಿಷ್ಯಾಮಹೇವಯಮ್ ॥

ಅನುವಾದ

ಅಯ್ಯಾ ರಘುನಂದನ! ನಾನು ನಿನಗಾಗಿ ಈ ಸುಖಮಯ ಶಯ್ಯೆಯನ್ನು ಸಿದ್ಧಗೊಳಿಸಿರುವೆನು. ನೀನು ಇದರ ಮೇಲೆ ಸುಖವಾಗಿ ಮಲಗಿರು. ಈ ಸೇವಕ ಮತ್ತು ನನ್ನ ಜೊತೆಯ ಜನರು ವನವಾಸಿಗಳಾಗಿರುವುದರಿಂದ ಕಷ್ಟವನ್ನು ಸಹಿಸಲು ಯೋಗ್ಯರಾಗಿದ್ದಾರೆ, (ಏಕೆಂದರೆ ನಮಗೆಲ್ಲ ಕಷ್ಟಗಳನ್ನು ಸಹಿಸುವ ಅಭ್ಯಾಸವಿದೆ); ಆದರೆ ನೀನು ಸುಖದಲ್ಲೇ ಬೆಳೆದವನಾದ್ದರಿಂದ ಅದಕ್ಕೆ ಯೋಗ್ಯನಲ್ಲ. ಧರ್ಮಾತ್ಮನೇ! ನಾವುಗಳು ಶ್ರೀರಾಮನ ರಕ್ಷಣೆಗಾಗಿ ರಾತ್ರಿಯಿಡೀ ಜಾಗರಣೆ ಮಾಡುವೆವು.॥3-4॥

ಮೂಲಮ್ - 5

ನಹಿ ರಾಮಾತ್ ಪ್ರಿಯತರೋ ಮಮಾಸ್ತಿಭುವಿ ಕಶ್ಚನ ।
ಮೋತ್ಸುಕೋ ಭೂರ್ಬ್ರವೀಮ್ಯೇತದಥ ಸತ್ಯಂತವಾಗ್ರತಃ ॥

ಅನುವಾದ

ಈ ಭೂಮಂಡಲದಲ್ಲಿ ನನಗೆ ಶ್ರೀರಾಮನಿಗಿಂತ ಮಿಗಿಲಾದ ಪ್ರಿಯರು ಯಾರೂ ಇಲ್ಲ, ಇದನ್ನು ನಿನ್ನ ಮುಂದೆ ನಾನು ಸತ್ಯವಾಗಿ ಹೇಳುತ್ತಿದ್ದೇನೆ. ಆದ್ದರಿಂದ ನೀನು ಇವರ ರಕ್ಷಣೆಗಾಗಿ ಉತ್ಸುಕನಾಗಬೇಡ.॥5॥

ಮೂಲಮ್ - 6

ಅಸ್ಯ ಪ್ರಸಾದಾದಾಶಂಸೇ ಲೋಕೇಽಸ್ಮಿನ್ಸುಮಹದ್ಯಶಃ ।
ಧರ್ಮಾವಾಪ್ತಿಂ ಚ ವಿಪುಲಾಮರ್ಥಕಾಮೌ ಚ ಕೇವಲೌ ॥

ಅನುವಾದ

ಈ ರಘುನಾಥನ ಪ್ರಸಾದದಿಂದಲೇ ನಾನು ಈ ಲೋಕದಲ್ಲಿ ಮಹಾನ್ ಯಶ, ಸಾಕಷ್ಟು ಧರ್ಮಲಾಭ ಹಾಗೂ ವಿಪುಲ ಅರ್ಥ ಮತ್ತು ಭೋಗ್ಯವಸ್ತುಗಳನ್ನು ಪಡೆದಿದ್ದೇನೆ.॥6॥

ಮೂಲಮ್ - 7

ಸೋಽಹಂ ಪ್ರಿಯಸಖಂ ರಾಮಂ ಶಯಾನಂ ಸಹ ಸೀತಯಾ ।
ರಕ್ಷಿಷ್ಯಾಮಿ ಧನುಷ್ಪಾಣಿಃ ಸರ್ವೈಃ ಸ್ವೈರ್ಜ್ಞಾತಿಭಿಃ ಸಹ ॥

ಅನುವಾದ

ಆದ್ದರಿಂದ ನಾನು ನನ್ನ ಸಮಸ್ತ ಬಂಧು-ಬಾಂಧವರೊಂದಿಗೆ ಕೈಯಲ್ಲಿ ಧನುರ್ಬಾಣಗಳನ್ನು ಧರಿಸಿ ಸೀತೆಯೊಂದಿಗೆ ಮಲಗಿರುವ ಪ್ರಿಯ ಸಖನಾದ ಶ್ರೀರಾಮನನ್ನು ಎಲ್ಲ ಪ್ರಕಾರದಿಂದ ರಕ್ಷಿಸುವೆನು.॥7॥

ಮೂಲಮ್ - 8

ನಹಿ ಮೇಽವಿದಿತಂ ಕಿಂಚಿದ್ ವನೇಽಸ್ಮಿಂಶ್ಚರತಃ ಸದಾ ।
ಚತುರಂಗಂ ಹ್ಯಪಿ ಬಲಂ ಪ್ರಸಹೇಮ ವಯಂ ಯುಧಿ ॥

ಅನುವಾದ

ಈ ಅರಣ್ಯದಲ್ಲಿ ಸದಾ ಸಂಚರಿಸುವುದರಿಂದ ನನಗೆ ಇಲ್ಲಿನ ಎಲ್ಲ ಸಂಗತಿಗಳೂ ತಿಳಿದಿವೆ. ನಾವು ಇಲ್ಲಿ ಯುದ್ಧದಲ್ಲಿ ಶತ್ರುವಿನ ಚತುರಂಗ ಸೈನ್ಯವನ್ನೂ ಕೂಡ ಚೆನ್ನಾಗಿ ಎದುರಿಸಬಲ್ಲೆವು.॥8॥

ಮೂಲಮ್ - 9

ಏವಮಸ್ಮಾಭಿರುಕ್ತೇನ ಲಕ್ಷ್ಮಣೇನ ಮಹಾತ್ಮನಾ ।
ಅನುನೀತಾ ವಯಂ ಸರ್ವೇ ಧರ್ಮಮೇವಾನುಪಶ್ಯತಾ ॥

ಅನುವಾದ

ನಾನು ಹೀಗೆ ಹೇಳಿದಾಗ ಧರ್ಮದಲ್ಲೇ ದೃಷ್ಟಿಯುಳ್ಳ ಮಹಾತ್ಮಾ ಲಕ್ಷ್ಮಣನು ನಮ್ಮೆಲ್ಲರಲ್ಲಿ ಅನುನಯವಾಗಿ ಹೇಳಿದನು.॥9॥

ಮೂಲಮ್ - 10

ಕಥಂ ದಾಶರಥೌ ಭೂಮೌ ಶಯನೇ ಸಹ ಸೀತಯಾ ।
ಶಕ್ಯಾ ನಿದ್ರಾ ಮಯಾ ಲಬ್ಧುಂ ಜೀವಿತಾನಿ ಸುಖಾನಿ ವಾ ॥

ಅನುವಾದ

ನಿಷಾದರಾಜನೇ! ದಶರಥನಂದನ ಶ್ರೀರಾಮನು ದೇವೀ ಸೀತೆಯೊಂದಿಗೆ ನೆಲದಲ್ಲಿ ಮಲಗಿರುವಾಗ ನನಗಾಗಿ ಉತ್ತಮ ಶಯ್ಯೆಯಲ್ಲಿ ಮಲಗುವುದು, ಜೀವನ ಧಾರಣೆಗಾಗಿ ರುಚಿಕರ ಆಹಾರ ಸೇವಿಸುವುದು ಅಥವಾ ಇತರ ಸುಖಗಳನ್ನು ಅನುಭವಿಸುವುದು ಹೇಗೆ ಸಂಭವಿಸಬಲ್ಲದು.॥10॥

ಮೂಲಮ್ - 11

ಯೋ ನ ದೇವಾಸುರೈಃ ಸರ್ವೈಃ ಶಕ್ಯಃ ಪ್ರಸಹಿತುಂ ಯುಧಿ ।
ತಂ ಪಶ್ಯ ಗುಹ ಸಂವಿಷ್ಟಂ ತೃಣೇಷು ಸಹ ಸೀತಯಾ ॥

ಅನುವಾದ

ಗುಹನೇ! ನೋಡು, ಸಮಸ್ತ ದೇವತೆಗಳು ಮತ್ತು ಅಸುರರು ಸೇರಿಯೂ ಯುದ್ಧದಲ್ಲಿ ಯಾರ ಪರಾಕ್ರಮವನ್ನು ಸಹಿಸಲಾರರೋ, ಅಂತಹ ಶ್ರೀರಾಮನು ಈಗ ಸೀತೆಯೊಂದಿಗೆ ಹುಲ್ಲಿನ ಮೇಲೆ ಮಲಗಿರುವನು.॥11॥

ಮೂಲಮ್ - 12

ಮಹತಾ ತಪಸಾ ಲಬ್ಧೋ ವಿವಿಧೈಶ್ಚ ಪರಿಶ್ರಮೈಃ ।
ಏಕೋ ದಶರಥಸ್ಯೈಷ ಪುತ್ರಃ ಸದೃಶಲಕ್ಷಣಃ ॥

ಮೂಲಮ್ - 13

ಅಸ್ಮಿನ್ ಪ್ರವ್ರಾಜಿತೇರಾಜಾ ನ ಚಿರಂ ವರ್ತಯಿಷ್ಯತಿ ।
ವಿಧವಾ ಮೇದಿನೀ ನೂನಂ ಕ್ಷಿಪ್ರಮೇವ ಭವಿಷ್ಯತಿ ॥

ಅನುವಾದ

ಮಹಾನ್ ತಪಸ್ಸು, ನಾನಾ ಪ್ರಕಾರದ ಪರಿಶ್ರಮಸಾಧ್ಯ ಉಪಾಯಗಳಿಂದ ಯಾರು ದಶರಥ ಮಹಾರಾಜರಿಗೆ ತನ್ನಂತೆಯೇ ಉತ್ತಮ ಲಕ್ಷಣಗಳಿಂದ ಕೂಡಿದ ಜ್ಯೇಷ್ಠಪುತ್ರನಾಗಿ ದೊರಕಿರುವನೋ, ಆ ಶ್ರೀರಾಮನು ಕಾಡಿಗೆ ಬಂದಿರುವುದರಿಂದ ದಶರಥ ಮಹಾರಾಜರು ಹೆಚ್ಚುಕಾಲ ಬದುಕಿರಲಾರರು. ನಿಶ್ಚಯವಾಗಿಯೇ ಈ ಪೃಥಿವಿಯು ಬೇಗನೆ ವಿಧವೆಯಾಗುವಂತೆ ಕಾಣುತ್ತದೆ.॥12-13॥

ಮೂಲಮ್ - 14

ವಿನದ್ಯ ಸುಮಹಾನಾದಂ ಶ್ರಮೇಣೋಪರತಾಃ ಸ್ತ್ರಿಯಃ ।
ನಿರ್ಘೋಷೋವಿರತೋ ನೂನಮದ್ಯ ರಾಜನಿವೇಶನೇ ॥

ಅನುವಾದ

ಖಂಡಿತವಾಗಿ ಈಗ ರಾಣೀವಾಸದ ಸ್ತ್ರೀಯರು ಜೋರಾಗಿ ಆರ್ತನಾದ ಮಾಡುತ್ತಾ, ಹೆಚ್ಚಿನ ಆಯಾಸದಿಂದ ಈಗ ಸುಮ್ಮನಾಗಿರಬಹುದು ಮತ್ತು ಅರಮನೆಯ ಆ ಹಾಹಾಕಾರ ಈಗ ಶಾಂತವಾಗಿರಬಹುದು.॥14॥

ಮೂಲಮ್ - 15

ಕೌಸಲ್ಯಾ ಚೈವ ರಾಜಾ ಚ ತಥೈವ ಜನನೀ ಮಮ ।
ನಾಶಂಸೇ ಯದಿ ತೇ ಸರ್ವೇ ಜೀವೇಯುಃ ಶರ್ವರೀಮಿಮಾಮ್ ॥

ಅನುವಾದ

ಮಹಾರಾಣೀ ಕೌಸಲ್ಯೆ, ದಶರಥ ಮಹಾರಾಜರು, ನನ್ನ ತಾಯಿ ಸುಮಿತ್ರೆ ಇವರೆಲ್ಲರೂ ಇಂದಿನ ರಾತ್ರಿಯವರೆಗೆ ಜೀವಂತರಾಗಿರುವರೋ ಅಥವಾ ಇಲ್ಲವೋ, ನಾನು ಹೇಳಲಾರೆನು.॥15॥

ಮೂಲಮ್ - 16

ಜೀವೇದಪಿ ಚ ಮೇ ಮಾತಾ ಶತ್ರುಘ್ನಸ್ಯಾನ್ವವೇಕ್ಷಯಾ ।
ದುಃಖಿತಾ ಯಾಹಿ ಕೌಸಲ್ಯಾ ವೀರಸೂರ್ವಿನಶಿಷ್ಯತಿ ॥

ಅನುವಾದ

ಶತ್ರುಘ್ನನ ದಾರಿ ನೋಡುವುದರಿಂದ ನನ್ನ ತಾಯಿ ಸುಮಿತ್ರೆಯು ಬದುಕಿರಲೂಬಹುದು, ಆದರೆ ಪುತ್ರನ ವಿರಹದಿಂದ ದುಃಖದಲ್ಲಿ ಮುಳುಗಿದ ವೀರ ಜನನೀ ಕೌಸಲ್ಯೆಯು ಖಂಡಿತವಾಗಿ ಜೀವಿಸಲಾರಳು.॥16॥

ಮೂಲಮ್ - 17

ಅತಿಕ್ರಾಂತಮತಿಕ್ರಾಂತಮನವಾಪ್ಯ ಮನೋರಥಮ್ ।
ರಾಜ್ಯೇ ರಾಮಮನಿಕ್ಷಿಪ್ಯ ಪಿತಾ ಮೇ ವಿನಶಿಷ್ಯತಿ ॥

ಅನುವಾದ

(ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡಬೇಕೆಂದು ಮಹಾರಾಜರು ಇಚ್ಛಿಸುತ್ತಿದ್ದರು) ಅವರು ಆ ಮನೋರಥವನ್ನು ಪಡೆಯದೆ ಶ್ರೀರಾಮನನ್ನು ರಾಜನನ್ನಾಗಿಸುವ ಮೊದಲೇ ‘ಅಯ್ಯೋ! ನನ್ನದೆಲ್ಲವೂ ನಾಶವಾಯಿತು! ನಾಶವಾಯಿತು!!’ ಎಂದು ಹೇಳುತ್ತಾ ನಮ್ಮ ತಂದೆಯವರು ಪ್ರಾಣಗಳನ್ನು ಬಿಡುವರು.॥17॥

ಮೂಲಮ್ - 18

ಸಿದ್ಧಾರ್ಥಾಃ ಪಿತರಂ ವೃತ್ತಂ ತಸ್ಮಿನ್ಕಾಲೇ ಹ್ಯುಪಸ್ಥಿತೇ ।
ಪ್ರೇತಕಾರ್ಯೇಷು ಸರ್ವೇಷು ಸಂಸ್ಕರಿಷ್ಯಂತಿಭೂಮಿಪಮ್ ॥

ಅನುವಾದ

ಅವರ ಆ ಮೃತ್ಯು ಸಮಯದಲ್ಲಿ ಯಾರು ಉಪಸ್ಥಿತರಾಗಿ ಇರುವರೋ, ಸತ್ತಿರುವ ನನ್ನ ತಂದೆ ದಶರಥ ಮಹಾರಾಜರಎಲ್ಲ ಪ್ರೇತ ಸಂಸ್ಕಾರ ಮಾಡುವರೋ, ಅವರೇ ಸಲ ಮನೋರಥರು ಮತ್ತು ಭಾಗ್ಯಶಾಲಿಗಳು.॥18॥

ಮೂಲಮ್ - 19

ರಮ್ಯಚತ್ವರಸಂಸ್ಥಾನಾಂ ಸುವಿಭಕ್ತಮಹಾಪಥಾಮ್ ।
ಹರ್ಮ್ಯಪ್ರಾಸಾದಸಂಪನ್ನಾಂ ಸರ್ವರತ್ನವಿಭೂಷಿತಾಮ್ ॥

ಮೂಲಮ್ - 20

ಗಜಾಶ್ವರಥಸಂಬಾಧಾಂ ತೂರ್ಯನಾದವಿನಾದಿತಾಮ್ ।
ಸರ್ವಕಲ್ಯಾಣಸಂಪೂರ್ಣಾಂಹೃಷ್ಟಪುಷ್ಟಜನಾಕುಲಾಮ್ ॥

ಮೂಲಮ್ - 21

ಆರಾಮೋದ್ಯಾನ ಸಂಪೂರ್ಣಾಂ ಸಮಾಜೋತ್ಸವಶಾಲಿನೀಮ್ ।
ಸುಖಿತಾ ವಿಚರಿಷ್ಯಂತಿ ರಾಜಧಾನೀಂ ಪಿತುರ್ಮಮ ॥

ಅನುವಾದ

(ತಂದೆಯವರು ಜೀವಂತರಾಗಿದ್ದರೆ) ನಾಲ್ಕು ಬೀದಿಗಳು ಸೇರಿರುವ ಸುಂದರವಾದ ಚೌಕಗಳಿಂದ ಕೂಡಿರುವ, ಚೆನ್ನಾಗಿ ವಿಭಾಗಿಸಿದ ಹೆದ್ದಾರಿಗಳುಳ್ಳ, ಭವ್ಯವಾದ ಸೌಧಗಳಿಂದಲೂ, ಪ್ರಾಸಾದಗಳಿಂದಲೂ ಕೂಡಿ ಸುಶೋಭಿತವಾದ, ಆನೆ, ಕುದುರೆ ಮತ್ತು ರಥಗಳಿಂದ ತುಂಬಿರುವ, ಮಂಗಳವಾದ್ಯಗಳಿಂದ ನಿನಾದಿತವಾದ, ಸಮಸ್ತ ಕಲ್ಯಾಣಕಾರೀ ವಸ್ತುಗಳಿಂದ ಒಡಗೊಂಡ, ಹೃಷ್ಟ-ಪುಷ್ಟರಾದ ಪ್ರಜೆಗಳಿಂದ ವ್ಯಾಪ್ತವಾದ, ಉಪವನಗಳಿಂದಲೂ, ಉದ್ಯಾನ ವನಗಳಿಂದಲೂ ಪರಿಪೂರ್ಣವಾದ, ಸಾಮಾಜಿಕ ಉತ್ಸವಗಳಿಂದ ಸುಶೋಭಿತವಾದ, ನನ್ನ ತಂದೆಯವರ ರಾಜಧಾನೀ ಅಯೋಧ್ಯೆಯಲ್ಲಿ ವಿಚರಿಸುವ ಜನರೇ ವಾಸ್ತವವಾಗಿ ಸುಖಿಗಳಾಗಿದ್ದಾರೆ.॥19-21॥

ಮೂಲಮ್ - 22

ಅಪಿ ಸತ್ಯಪ್ರತಿಜ್ಞೇನ ಸಾರ್ಧಂ ಕುಶಲಿನಾ ವಯಮ್ ।
ನಿವೃತ್ತೇ ಸಮಯೇ ಹ್ಯಸ್ಮಿನ್ಸುಖಿತಾಃ ಪ್ರವಿಶೇಮಹಿ ॥

ಅನುವಾದ

ವನವಾಸದ ಅವಧಿಯು ಮುಗಿದಾಗ ಕ್ಷೇಮವಾಗಿ ಸತ್ಯಪ್ರತಿಜ್ಞ ಶ್ರೀರಾಮನೊಂದಿಗೆ ನಾವು ಅಯೋಧ್ಯೆಯನ್ನು ಪ್ರವೇಶಿಸಬಲ್ಲೆವೇನು?॥22॥

ಮೂಲಮ್ - 23

ಪರಿದೇವಯಮಾನಸ್ಯ ತಸ್ಯೈವಂ ಹಿ ಮಹಾತ್ಮನಃ ।
ತಿಷ್ಠತೋ ರಾಜಪುತ್ರಸ್ಯ ಶರ್ವರೀ ಸಾತ್ಯವರ್ತತ ॥

ಅನುವಾದ

ಹೀಗೆ ವಿಲಪಿಸುತ್ತಾ ಮಹಾತ್ಮಾ ರಾಜಕುಮಾರ ಲಕ್ಷ್ಮಣನು ಜಾಗರಣೆಯಲ್ಲೇ ಆ ರಾತ್ರಿ ಕಳೆದನು.॥23॥

ಮೂಲಮ್ - 24

ಪ್ರಭಾತೇ ವಿಮಲೇ ಸೂರ್ಯೇ ಕಾರಯಿತ್ವಾ ಜಟಾ ಉಭೌ ।
ಅಸ್ಮಿನ್ಭಾಗೀರಥೀತೀರೇ ಸುಖಂ ಸಂತಾರಿತೌ ಮಯಾ ॥

ಅನುವಾದ

ಪ್ರಾತಃಕಾಲ ನಿರ್ಮಲ ಸೂರ್ಯೋದಯವಾದಾಗ ನಾನು ಭಾಗೀರಥಿಯ ತೀರದಲ್ಲಿ ಆಲದ ಹಾಲನ್ನು ತಂದುಕೊಟ್ಟೆ. ಇಬ್ಬರೂ ಜಟೆಯನ್ನು ಕಟ್ಟಿಕೊಂಡ ಮೇಲೆ ನಾನು ಅವರನ್ನು ನದಿ ದಾಟಿಸಿದೆ.॥24॥

ಮೂಲಮ್ - 25

ಜಟಾಧರೌ ತೌ ದ್ರುಮಚೀರವಾಸಸೌ
ಮಹಾಬಲೌ ಕುಂಜರಯೂಥಪೋಪಮೌ ।
ವರೇಷುಧೀಚಾಪಧರೌ ಪರಂತಪೌ
ವ್ಯಪೇಕ್ಷಮಾಣೌ ಸಹ ಸೀತಯಾ ಗತೌ ॥

ಅನುವಾದ

ತಲೆಯಲ್ಲಿ ಜಟೆಯನ್ನು ಧರಿಸಿ ವಲ್ಕಲ ಹಾಗೂ ನಾರು ಬಟ್ಟೆಯನ್ನುಟ್ಟು ಮಹಾಬಲೀ, ಶತ್ರುಸಂತಾಪಿ ಶ್ರೀರಾಮ ಮತ್ತು ಲಕ್ಷ್ಮಣರು ಎರಡು ಯೂಥಪತಿ ಗಜಗಳಂತೆ ಶೋಭಿಸುತ್ತಿದ್ದರು. ಅವರು ಸುಂದರ ಬತ್ತಳಿಕೆ ಮತ್ತು ಧನುಸ್ಸುಗಳನ್ನು ಧರಿಸಿಕೊಂಡು ಆ ಕಡೆ-ಈ ಕಡೆ ನೋಡುತ್ತಾ ಸೀತೆಯೊಂದಿಗೆ ಹೊರಟುಹೋದರು.॥25॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಎಂಭತ್ತಾರನೆಯ ಸರ್ಗ ಪೂರ್ಣವಾಯಿತು ॥86॥