वाचनम्
ಭಾಗಸೂಚನಾ
ಗುಹ ಮತ್ತು ಭರತರ ಸಂಭಾಷಣೆ, ಭರತನ ಶೋಕ
ಮೂಲಮ್ - 1
ಏವಮುಕ್ತಸ್ತು ಭರತೋ ನಿಷಾದಾಧಿಪತಿಂ ಗುಹಮ್ ।
ಪ್ರತ್ಯುವಾಚ ಮಹಾಪ್ರಾಜ್ಞೋ ವಾಕ್ಯಂ ಹೇತ್ವರ್ಥಸಂಹಿತಮ್ ॥
ಅನುವಾದ
ನಿಷದಾಧಿಪತಿ ಗುಹನು ಹೀಗೆ ಹೇಳಿದಾಗ ಮಹಾ ಪ್ರಾಜ್ಞನಾದ ಭರತನು ಯುಕ್ತಿ ಮತ್ತು ಪ್ರಯೋಜನಗಳಿಂದ ಕೂಡಿದ ಮಾತುಗಳಿಂದ ಅವನಿಗೆ ಹೀಗೆ ಉತ್ತರಿಸಿದನು.॥1॥
ಮೂಲಮ್ - 2
ಊರ್ಜಿತಃ ಖಲು ತೇ ಕಾಮಃ ಕೃತೋ ಮಮ ಗುರೋಃ ಸಖೇ ।
ಯೋ ಮೇ ತ್ವಮೀದೃಶೀಂ ಸೇನಾಮಭ್ಯರ್ಚಯಿತುಮಿಚ್ಛಸಿ ॥
ಅನುವಾದ
ಅಯ್ಯಾ! ನೀನು ನನಗೆ ಅಣ್ಣನಾಗಿದ್ದು ಶ್ರೀರಾಮನ ಸಖನಾಗಿರುವೆ. ನಮ್ಮ ಇಷ್ಟು ದೊಡ್ಡ ಸೈನ್ಯದ ಸತ್ಕಾರ ಮಾಡಲು ಬಯಸಿದುದು, ಇದು ನಿನ್ನ ಮನೋರಥವು ಬಹಳ ಉಚ್ಚ ಮಟ್ಟದಾಗಿದೆ. ನೀನು ಅದು ಪೂರ್ಣವಾದಂತೆ ತಿಳಿ. ನಿನ್ನ ಶ್ರದ್ಧೆಯಿಂದಲೇ ನಮ್ಮೆಲ್ಲರ ಸತ್ಕಾರವಾಯಿತು.॥2॥
ಮೂಲಮ್ - 3
ಇತ್ಯುಕ್ತ್ವಾ ಸ ಮಹಾತೇಜಾ ಗುಹಂವಚನಮುತ್ತಮಮ್ ।
ಅಬ್ರವೀದ್ ಭರತಃ ಶ್ರೀಮಾನ್ಪಂಥಾನಂ ದರ್ಶಯನ್ಪುನಃ ॥
ಅನುವಾದ
ಹೀಗೆ ಹೇಳಿ ಮಹಾತೇಜಸ್ವೀ ಶ್ರೀಮಾನ್ ಭರತನು ಹೋಗುವ ದಾರಿಯನ್ನು ಕೈಸನ್ನೆಯಿಂದಲೇ ತಿಳಿಸಿ, ಪುನಃ ಗುಹನಲ್ಲಿ ಉತ್ತಮ ಮಾತಿನಿಂದ ಕೇಳಿದನು.॥3॥
ಮೂಲಮ್ - 4
ಕತರೇಣ ಗಮಿಷ್ಯಾಮಿ ಭರದ್ವಾಜಾಶ್ರಮಂ ಯಥಾ ।
ಗಹನೋಽಯಂ ಭೃಶಂ ದೇಶೋ ಗಂಗಾನೂಪೋ ದುರತ್ಯಯಃ ॥
ಅನುವಾದ
ನಿಷಾದರಾಜನೇ! ಭರದ್ವಾಜರ ಆಶ್ರಮಕ್ಕೆ ಹೋಗುವ ದಾರಿಯು ಯಾವುದು? ಕಷ್ಟವಿಲ್ಲದೆ ಬೇಗನೆ ಹೋಗಬಹುದಾದ ದಾರಿ ಯಾವುದು? ಗಂಗಾತೀರದ ಈ ಪ್ರದೇಶವು ಬಹಳ ಗಹನವಾಗಿದೆ. ಇದನ್ನು ದಾಟಿ ಹೋಗುವುದು ಕಠಿಣವಾಗಿದೆ.॥4॥
ಮೂಲಮ್ - 5
ತಸ್ಯ ತದ್ವಚನಂ ಶ್ರುತ್ವಾ ರಾಜಪುತ್ರಸ್ಯ ಧೀಮತಃ ।
ಅಬ್ರವೀತ್ ಪ್ರಾಂಜಲಿರ್ಭೂತ್ವಾ ಗುಹೋಗಹನಗೋಚರಃ ॥
ಅನುವಾದ
ಧೀಮಂತನಾದ ರಾಜಕುಮಾರ ಭರತನ ಮಾತನ್ನು ಕೇಳಿ ದಟ್ಟ ಅಡವಿಯಲ್ಲಿ ಸಂಚರಿಸುವ ಗುಹನು ಕೈಮುಗಿದು ಹೇಳಿದನು.॥5॥
ಮೂಲಮ್ - 6
ದಾಶಾಸ್ತ್ವಾನುಗಮಿಷ್ಯಂತಿ ದೇಶಜ್ಞಾಃ ಸುಸಮಾಹಿತಾಃ ।
ಅಹಂ ಚಾನುಗಮಿಷ್ಯಾಮಿ ರಾಜಪುತ್ರ ಮಹಾಬಲ ॥
ಅನುವಾದ
ಮಹಾಬಲೀ ರಾಜಕುಮಾರನೇ! ಈ ಪ್ರದೇಶದ ಪೂರ್ಣ ಪರಿಚಯವುಳ್ಳ ಹಾಗೂ ರಾಜನಿಷ್ಠೆಯಿಂದ ಇರುವ ಅನೇಕ ಬೆಸ್ತರು ನಿನ್ನೊಡನೆ ಬರುವರು. ಅಲ್ಲದೆ ನಾನೂ ನಿಮ್ಮೊಂದಿಗೆ ಬರುವೆನು.॥6॥
ಮೂಲಮ್ - 7
ಕಚ್ಚಿನ್ನ ದುಷ್ಟೋ ವ್ರಜಸಿ ರಾಮಸ್ಯಾಕ್ಲಿಷ್ಟಕರ್ಮಣಃ ।
ಇಯಂ ತೇ ಮಹತೀ ಸೇನಾ ಶಂಕಾಂ ಜನಯತೀವ ಮೇ ॥
ಅನುವಾದ
ಯಾವುದೇ ಪ್ರಯಾಸವಿಲ್ಲದೆ ಮಹಾಪರಾಕ್ರಮ ತೋರುವ ಶ್ರೀರಾಮನ ಕುರಿತು ನಿಮ್ಮಲ್ಲಿ ಯಾವುದೇ ದುರ್ಭಾವನೆ ಇಲ್ಲವಲ್ಲ? ಇದನ್ನು ತಿಳಿಸು. ನಿಮ್ಮ ಈ ವಿಶಾಲ ಸೈನ್ಯವನ್ನು ನೋಡಿ ನನ್ನ ಮನಸ್ಸಿನಲ್ಲಿ ಶಂಕೆ ಉಂಟಾಗಿದೆ.॥7॥
ಮೂಲಮ್ - 8
ತಮೇವಮಭಿಭಾಷಂತಮಾಕಾಶ ಇವ ನಿರ್ಮಲಃ ।
ಭರತಃ ಶ್ಲಕ್ಷ್ಣಯಾ ವಾಚಾ ಗುಹಂ ವಚನಮಬ್ರವೀತ್ ॥
ಅನುವಾದ
ಹೀಗೆ ನುಡಿದ ಗುಹನಲ್ಲಿ ಆಕಾಶದಂತೆ ನಿರ್ಮಲವಾದ ಭರತನು ಮಧುರವಾಗಿ ಹೇಳಿದನು.॥8॥
ಮೂಲಮ್ - 9
ಮಾ ಭೂತ್ಸಕಾಲೋ ಯತ್ ಕಷ್ಟಂ ನ ಮಾಂಶಂಕಿತುಮರ್ಹಸಿ ।
ರಾಘವಃ ಸ ಹಿ ಮೇ ಭ್ರಾತಾ ಜ್ಯೇಷ್ಠಃ ಪಿತೃಸಮೋ ಮತಃ ॥
ಅನುವಾದ
ನಿಷಾದ ರಾಜನೇ! ಇಂತಹ ಸಮಯ ಎಂದೂ ಬಾರದಿರಲಿ. ನಿನ್ನ ಮಾತನ್ನು ಕೇಳಿ ನನಗೆ ಬಹಳ ದುಃಖವಾಯಿತು. ನೀನು ನನ್ನ ಮೇಲೆ ಸಂದೇಹಪಡಬಾರದು. ಶ್ರೀ ರಘುನಾಥನು ನನಗೆ ಅಣ್ಣನಾಗಿದ್ದಾನೆ. ನಾನು ಅವನನ್ನು ತಂದೆಯಂತೆ ತಿಳಿಯುತ್ತೇನೆ.॥9॥
ಮೂಲಮ್ - 10
ತಂ ನಿವರ್ತಯಿತುಂ ಯಾಮಿ ಕಾಕುತ್ಸ್ಥಂ ವನವಾಸಿನಮ್ ।
ಬುದ್ಧಿರನ್ಯಾ ನ ಮೇ ಕಾರ್ಯಾ ಗುಹ ಸತ್ಯಂ ಬ್ರವೀಮಿ ತೇ ॥
ಅನುವಾದ
ಕಾಕುತ್ಸ್ಥ ಶ್ರೀರಾಮನು ವನದಲ್ಲಿ ವಾಸಿಸುತ್ತಿದ್ದಾನೆ, ಆದ್ದರಿಂದ ಅವನನ್ನು ಮರಳಿ ಕರೆದುಕೊಂಡು ಬರಲು ಹೋಗುತ್ತಿದ್ದೇನೆ. ಗುಹನೇ! ನಾನು ನಿನ್ನಲ್ಲಿ ನಿಜವನ್ನೇ ಹೇಳುತ್ತಿದ್ದೇನೆ. ನೀನು ನನ್ನ ಕುರಿತು ಅನ್ಯಥಾ ವಿಚಾರಮಾಡಬಾರದು.॥10॥
ಮೂಲಮ್ - 11
ಸ ತು ಸಂಹೃಷ್ಟವದನಃ ಶ್ರುತ್ವಾ ಭರತಭಾಷಿತಮ್ ।
ಪುನರೇವಾಬ್ರವೀದ್ವಾಕ್ಯಂ ಭರತಂ ಪ್ರತಿ ಹರ್ಷಿತಃ ॥
ಅನುವಾದ
ಭರತನ ಮಾತನ್ನು ಕೇಳಿ ನಿಷಾದರಾಜನ ಮುಖವು ಪ್ರಸನ್ನತೆಯಿಂದ ಅರಳಿತು. ಅವನು ಹರ್ಷಗೊಂಡು ಪುನಃ ಭರತನಲ್ಲಿ ಈ ರೀತಿ ಹೇಳಿದನು.॥11॥
ಮೂಲಮ್ - 12
ಧನ್ಯಸ್ತ್ವಂ ನ ತ್ವಯಾ ತುಲ್ಯಂ ಪಶ್ಯಾಮಿ ಜಗತೀತಲೇ ।
ಅಯತ್ನಾದಾಗತಂ ರಾಜ್ಯಂ ಯಸ್ತ್ವಂ ತ್ಯಕ್ತುಮಿಹೇಚ್ಛಸಿ ॥
ಅನುವಾದ
ನೀವು ಧನ್ಯರಾಗಿರುವಿರಿ. ಪ್ರಯತ್ನವಿಲ್ಲದೆ ಕೈಗೆ ಬಂದ ರಾಜ್ಯವನ್ನು ತ್ಯಜಿಸಲು ಬಯಸುತ್ತಿರುವಿರಿ. ನಿಮ್ಮಂತಹ ಧರ್ಮಾತ್ಮರು ನನಗೆ ಭೂಮಂಡಲದಲ್ಲಿ ಯಾರು ಕಾಣುವುದಿಲ್ಲ.॥12॥
ಮೂಲಮ್ - 13
ಶಾಶ್ವತೀ ಖಲು ತೇ ಕೀರ್ತಿರ್ಲೋಕಾನನು ಚರಿಷ್ಯತಿ ।
ಯಸ್ತ್ವಂ ಕೃಚ್ಛ್ರಗತಂ ರಾಮಂ ಪ್ರತ್ಯಾನಯಿತುಮಿಚ್ಛಸಿ ॥
ಅನುವಾದ
ಕಷ್ಟಕರ ಕಾಡಿನಲ್ಲಿ ವಾಸಿಸುವ ಶ್ರೀರಾಮನನ್ನು ನೀವು ಕರೆದುಕೊಂಡು ಬರಲು ಬಯಸುತ್ತಿರುವಿರಿ. ಇದರಿಂದ ಸಮಸ್ತ ಲೋಕಗಳಲ್ಲಿ ನಿಮ್ಮ ಅಕ್ಷಯ ಕೀರ್ತಿಯು ಹರಡುವುದು.॥13॥
ಮೂಲಮ್ - 14
ಏವಂ ಸಂಭಾಷಮಾಣಸ್ಯ ಗುಹಸ್ಯ ಭರತಂ ತದಾ ।
ಬಭೌ ನಷ್ಟಪ್ರಭಃ ಸೂರ್ಯೋ ರಜನೀ ಚಾಭ್ಯವರ್ತತ ॥
ಅನುವಾದ
ಗುಹನು ಭರತನಲ್ಲಿ ಹೀಗೆ ಸಂಭಾಷಣೆ ಮಾಡುತ್ತಿದ್ದಾಗ ಸೂರ್ಯನ ಪ್ರಕಾಶ ಅದೃಶ್ಯವಾಗಿ ರಾತ್ರಿಯ ಅಂಧಕಾರ ಎಲ್ಲೆಡೆ ಹರಡಿಕೊಂಡಿತು.॥14॥
ಮೂಲಮ್ - 15
ಸಂನಿವೇಶ್ಯ ಸ ತಾಂ ಸೇನಾಂಗುಹೇನ ಪರಿತೋಷಿತಃ ।
ಶತ್ರುಘ್ನೇನ ಸಮಂ ಶ್ರೀಮಾನ್ ಶಯನಂ ಪುನರಾಗತಮ್ ॥
ಅನುವಾದ
ಗುಹನ ವರ್ತನೆಯಿಂದ ಶ್ರೀಮಾನ್ ಭರತನಿಗೆ ಬಹಳ ಸಂತೋಷವಾಯಿತು. ಅವನು ಸೈನ್ಯಕ್ಕೆ ವಿಶ್ರಮಿಸಿಕೊಳ್ಳಲು ಆಜ್ಞೆಯಿತ್ತು ಶತ್ರುಘ್ನನೊಂದಿಗೆ ಮಲಗಲು ಹೋದನು.॥15॥
ಮೂಲಮ್ - 16
ರಾಮಚಿಂತಾಮಯಃ ಶೋಕೋ ಭರತಸ್ಯಮಹಾತ್ಮನಃ ।
ಉಪಸ್ಥಿತೋ ಹ್ಯನರ್ಹಸ್ಯ ಧರ್ಮಪ್ರೇಕ್ಷಸ್ಯ ತಾದೃಶಃ ॥
ಅನುವಾದ
ಧರ್ಮದಲ್ಲಿ ದೃಷ್ಟಿಯಿರಿಸಿರುವ ಮಹಾತ್ಮಾ ಭರತನು ಶೋಕಿಸಲು ಯೋಗ್ಯನಲ್ಲದಿದ್ದರೂ ಅವನ ಮನಸ್ಸಿನಲ್ಲಿ ಶ್ರೀರಾಮನ ಕುರಿತಾದ ಚಿಂತೆಯಿಂದಾಗಿ ವರ್ಣಿಸಲಾರದಷ್ಟು ಶೋಕ ಉಂಟಾಯಿತು.॥16॥
ಮೂಲಮ್ - 17
ಅಂತರ್ದಾಹೇನ ದಹನಃ ಸಂತಾಪಯತಿ ರಾಘವಮ್ ।
ವನದಾಹಾಗ್ನಿಸಂತಪ್ತಂ ಗೂಢೋಽಗ್ನಿರಿವ ಪಾದಪಮ್ ॥
ಅನುವಾದ
ಕಾಡುಗಿಚ್ಚಿನಿಂದ ಬೆಂದ ಮರದ ಪೊಟರೆಯಲ್ಲಿದ್ದ ಕಿಡಿಯಿಂದಾಗಿ ಇನ್ನು ಹೆಚ್ಚಾಗಿ ಉರಿಯುಂಟುಮಾಡುವ ಹಾಗೆ ದಶರಥನ ಮರಣಜನ್ಯ ಚಿಂತೆಯಿಂದ ಬೇಯುತ್ತಿದ್ದ ರಘುಕುಲನಂದನ ಭರತನನ್ನು ರಾಮ ವಿಯೋಗವೆಂಬ ಶೋಕಾಗ್ನಿಯು ಇನ್ನೂ ಸುಡಲು ತೊಡಗಿತು.॥17॥
ಮೂಲಮ್ - 18
ಪ್ರಸೃತಃ ಸರ್ವಗಾತ್ರೇಭ್ಯಃ ಸ್ವೇದಂ ಶೋಕಾಗ್ನಿಸಂಭವಮ್ ।
ಯಥಾ ಸೂರ್ಯಾಂಶುಸಂತಪ್ತೋ ಹಿಮವಾನ್ ಪ್ರಸೃತೋಹಿಮಮ್ ॥
ಅನುವಾದ
ಸೂರ್ಯನ ಕಿರಣಗಳ ಬಿಸಿಯಿಂದ ಹಿಮಾಲಯವು ಕರಗಿದ ಮಂಜುಗಡ್ಡೆಗಳನ್ನು ಹರಿಸಿ ಬಿಡುವಂತೆಯೇ ಭರತನು ಶೋಕಾಗ್ನಿಯಿಂದ ಸಂತಪ್ತನಾದ್ದರಿಂದ ತನ್ನ ಸಮಸ್ತ ಶರೀರದಿಂದ ಬೆವರು ಸುರಿಸತೊಡಗಿದನು.॥18॥
ಮೂಲಮ್ - 19
ಧ್ಯಾನನಿರ್ದರಶೈಲೇನ ವಿನಿಃಶ್ವಸಿತಧಾತುನಾ ।
ದೈನ್ಯಪಾದಪಸಂಘೇನ ಶೋಕಾಯಾಸಾಧಿಶೃಂಗಿಣಾ ॥
ಮೂಲಮ್ - 20
ಪ್ರಮೋಹಾನಂತಸತ್ತ್ವೇನ ಸಂತಾಪೌಷಧಿವೇಣುನಾ ।
ಆಕ್ರಾಂತೋ ದುಃಖಶೈಲೇನ ಮಹತಾ ಕೈಕಯೀಸುತಃ ॥
ಅನುವಾದ
ಆಗ ಕೈಕೇಯಿಯ ಮಗ ಭರತನು ದುಃಖದ ವಿಶಾಲ ಪರ್ವತದಿಂದ ಆಕ್ರಾಂತನಾಗಿದ್ದನು. ಶ್ರೀರಾಮನ ಧ್ಯಾನವೇ ಅದರಲ್ಲಿನ ಛಿದ್ರರಹಿತ ಬಂಡೆಗಳ ಸಮೂಹವಾಗಿತ್ತು. ದುಃಖಪೂರ್ಣ ನಿಟ್ಟುಸಿರೇ ಗೈರಿಕ ಮೊದಲಾದ ಧಾತುಗಳ ಸ್ಥಾನವಾಗಿದ್ದವು. ದೀನತೆ (ಇಂದ್ರಿಯಗಳು ತಮ್ಮ ವಿಷಯಗಳಿಂದ ವಿಮುಖತೆ)ಯೇ ವೃಕ್ಷ ಸಮೂಹವಾಗಿ ಕಂಡು ಬರುತ್ತಿತ್ತು. ಶೋಕಜನಿತ ಆಯಾಸವೇ ಆ ದುಃಖರೂಪೀ ಪರ್ವತದ ಎತ್ತರವಾದ ಶಿಖರಗಳಾಗಿದ್ದವು. ಅತಿಶಯ ಮೋಹವೇ ಅದರಲ್ಲಿನ ಅನಂತ ಪ್ರಾಣಿಗಳು. ಒಳ-ಹೊರಗೆ ಇಂದ್ರಿಯಗಳಲ್ಲಿ ಆಗುವ ಸಂತಾಪವೇ ಆ ಪರ್ವತದ ವನಸ್ಪತಿಗಳು ಮತ್ತು ಬೆತ್ತ-ಬಿದಿರುಗಳಾಗಿದ್ದವು.॥19-20॥
ಮೂಲಮ್ - 21
ವಿನಿಃಶ್ವಸನ್ ವೈ ಭೃಶದುರ್ಮನಾಸ್ತತಃ
ಪ್ರಮೂಢಸಂಜ್ಞಃ ಪರಮಾಪದಂ ಗತಃ ।
ಶಮಂ ನ ಲೇಭೇ ಹೃದಯಜ್ಞರಾರ್ದಿತೋ
ನರರ್ಷಭೋ ಯೂಥಹತೋ ಯಥರ್ಷಭಃ ॥
ಅನುವಾದ
ಅವನ ಮನಸ್ಸು ಬಹಳ ದುಃಖಿತವಾಗಿತ್ತು. ಅವನು ದೀರ್ಘವಾಗಿ ನಿಟ್ಟುಸಿರು ಬಿಡುತ್ತಿದ್ದನು. ಅವನ ಹೃದಯ ಕಲುಷಿತ ಗೊಂಡು ಪ್ರತಿಕ್ಷಣ ಮೂರ್ಛಿತನಾಗುತ್ತಿದ್ದನು. ಭಾರೀ ಆಪತ್ತಿಗೆ ಸಿಲುಕಿ, ಮಾನಸಿಕ ಚಿಂತೆಯಿಂದ ನರಶ್ರೇಷ್ಠ ಭರತನಿಗೆ ಶಾಂತಿ ಇರಲಿಲ್ಲ. ಅವನ ಸ್ಥಿತಿಯು ಗುಂಪಿನಿಂದ ಅಗಲಿದ ಗೂಳಿಯಂತಾಗಿತ್ತು.॥21॥
ಮೂಲಮ್ - 22
ಗುಹೇನ ಸಾರ್ಧಂ ಭರತಃ ಸಮಾಗತೋ
ಮಹಾನುಭಾವಃ ಸಜನಃ ಸಮಾಹಿತಃ ।
ಸುದುರ್ಮನಾಸ್ತಂ ಭರತಂ ತದಾ ಪುನ-
ರ್ಗುಹಃ ಸಮಾಶ್ವಾಸಯದಗ್ರಜಂ ಪ್ರತಿ ॥
ಅನುವಾದ
ಏಕಾಗ್ರಚಿತ್ತ ಮಹಾನುಭಾವ ಭರತನು ಪರಿವಾರದೊಂದಿಗೆ ಗುಹನನ್ನು ಭೆಟ್ಟಿಯಾದಾಗ ಅವನ ಮನಸ್ಸಿಗೆ ದುಃಖವಾಗಿತ್ತು. ಅವನು ತನ್ನಣ್ಣನಿಗಾಗಿ ಚಿಂತಿತನಾಗಿದ್ದನು. ಆದ್ದರಿಂದ ಗುಹನು ಅವನಿಗೆ ಪುನಃ ಆಶ್ವಾಸನೆಯನ್ನು ನೀಡಿದನು.॥22॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಎಂಭತ್ತೈದನೆಯ ಸರ್ಗ ಪೂರ್ಣವಾಯಿತು ॥85॥