वाचनम्
ಭಾಗಸೂಚನಾ
ನಿಷಾದರಾಜ ಗುಹನು ನದಿಯನ್ನು ರಕ್ಷಿಸುವ ನೆಪದಲ್ಲಿ ಯುದ್ಧಸನ್ನದ್ಧರಾಗಿರುವಂತೆ ತನ್ನ ಜ್ಞಾತಿಗಳಿಗೆ ಆದೇಶ ನೀಡಿ, ಸತ್ಕಾರ ಸಾಮಗ್ರಿಗಳನ್ನು ತೆಗೆದುಕೊಂಡು ಭರತನನ್ನು ಸಂದರ್ಶಿಸಿದುದು
ಮೂಲಮ್ - 1
ತತೋ ನಿವಿಷ್ಟಾಂ ಧ್ವಜಿನೀಂ ಗಂಗಾಮನ್ವಾಶ್ರಿತಾಂ ನದೀಮ್ ।
ನಿಷಾದರಾಜೋ ದೃಷ್ಟೈವ ಜ್ಞಾತೀನ್ ಸ ಪರಿತೋಽಬ್ರವೀತ್ ॥
ಅನುವಾದ
ಅತ್ತ ನಿಷಾದರಾಜ ಗುಹನು ಗಂಗಾನದಿಯ ತೀರದಲ್ಲಿ ತಂಗಿದ ಭರತನ ಸೈನ್ಯವನ್ನು ನೋಡಿ, ಅಲ್ಲಲ್ಲಿ ಕುಳಿತಿರುವ ತನ್ನ ಬಂಧು-ಬಾಂಧವರಲ್ಲಿ ಇಂತೆಂದನು.॥1॥
ಮೂಲಮ್ - 2
ಮಹತೀಯಮಿತಃ ಸೇನಾ ಸಾಗರಾಭಾ ಪ್ರದೃಶ್ಯತೇ ।
ನಾಸ್ಯಾಂತಮವಗಚ್ಛಾಮಿ ಮನಸಾಪಿ ವಿಚಿಂತಯನ್ ॥
ಅನುವಾದ
ಬಂಧುಗಳೇ! ಇಲ್ಲಿ ತಂಗಿದ ಈ ವಿಶಾಲ ಸೈನ್ಯವು ಸಮುದ್ರದಂತೆ ಅಪಾರವಾಗಿ ಕಾಣುತ್ತಿದೆ. ನಾನು ಮನಸ್ಸಿನಲ್ಲಿ ಬಹಳ ಯೋಚಿಸಿಯೂ ಇದರ ಕೊನೆಯೇ ಕಾಣುವುದಿಲ್ಲ.॥2॥
ಮೂಲಮ್ - 3
ಯಥಾ ನ ಖಲುದುರ್ಬುದ್ಧಿರ್ಭರತಃ ಸ್ವಯಮಾಗತಃ ।
ಸ ಏಷ ಹಿ ಮಹಾಕಾಯಃ ಕೋವಿದಾರಧ್ವಜೋರಥೇ ॥
ಅನುವಾದ
ನಿಶ್ಚಯವಾಗಿ ಇದರೊಂದಿಗೆ ದುರ್ಬುದ್ಧಿ ಭರತನೂ ಬಂದಿರುವನು; ಈ ಕೋವಿದಾರ ಚಿಹ್ನೆಯ ವಿಶಾಲ ಧ್ವಜವು ಅವನ ರಥದ ಮೇಲೆ ಹಾರಾಡುತ್ತಾ ಇದೆ.॥3॥
ಮೂಲಮ್ - 4
ಬಂಧಯಿಷ್ಯತಿ ವಾ ಪಾಶೈರಥ ವಾಸ್ಮಾನ್ ವಧಿಷ್ಯತಿ ।
ಅನು ದಾಶರಥಿಂ ರಾಮಂ ಪಿತ್ರಾ ರಾಜ್ಯಾದ್ವಿವಾಸಿತಮ್ ॥
ಅನುವಾದ
ಇವನು ತನ್ನ ಮಂತ್ರಿಗಳಿಂದ ಮೊದಲು ನಮ್ಮೆಲ್ಲರನ್ನು ಪಾಶಗಳಿಂದ ಬಂಧಿಸಿಯಾನು, ಅಥವಾ ಕೊಲ್ಲಿಸಲೂಬಹುದು; ಅನಂತರ ಯಾರನ್ನು ತಂದೆಯು ರಾಜ್ಯದಿಂದ ಹೊರಹಾಕಿದ ಆ ದಶರಥನಂದನ ಶ್ರೀರಾಮನನ್ನೂ ಕೂಡ ಕೊಂದುಹಾಕುವನೆಂದು ನನಗೆ ಅನಿಸುತ್ತದೆ.॥4॥
ಮೂಲಮ್ - 5
ಸಂಪನ್ನಾಂ ಶ್ರಿಯಮನ್ವಿಚ್ಛಂಸ್ತಸ್ಯ ರಾಜ್ಞಃ ಸುದುರ್ಲಭಾಮ್ ।
ಭರತಃ ಕೇಕಯೀಪುತ್ರೋ ಹಂತುಂ ಸಮಧಿಗಚ್ಛತಿ ॥
ಅನುವಾದ
ಕೈಕೇಯಿಯ ಪುತ್ರ ಭರತನು ದಶರಥನ ಸಂಪನ್ನ ಹಾಗೂ ಸುದುರ್ಲಭ ರಾಜ್ಯಲಕ್ಷ್ಮಿಯನ್ನು ಒಬ್ಬನೇ ಎತ್ತಿಹಾಕಬೇಕೆಂದು ಬಯಸುತ್ತಿರುವನು. ಅದಕ್ಕಾಗಿ ಅವನು ಶ್ರೀರಾಮನನ್ನು ವನದಲ್ಲಿ ಕೊಂದುಹಾಕಲು ಹೋಗುತ್ತಿದ್ದಾನೆ.॥5॥
ಮೂಲಮ್ - 6
ಭರ್ತಾ ಚೈವ ಸಖಾ ಚೈವ ರಾಮೋದಾಶರಥಿರ್ಮಮ ।
ತಸ್ಯಾರ್ಥಕಾಮಾಃ ಸನ್ನದ್ಧಾ ಗಂಗಾನೂಪೇಽತ್ರ ತಿಷ್ಠತ ॥
ಅನುವಾದ
ಆದರೆ ದಶರಥಕುಮಾರ ಶ್ರೀರಾಮನು ನನ್ನ ಸ್ವಾಮಿ ಮತ್ತು ಸಖನಾಗಿದ್ದಾನೆ, ಅದಕ್ಕಾಗಿ ಅವನ ಹಿತವನ್ನು ಬಯಸಿ ನೀವೆಲ್ಲರೂ ಅಸ್ತ್ರ-ಶಸ್ತ್ರಗಳಿಂದ ಸುಸಜ್ಜಿತರಾಗಿ ಇಲ್ಲಿ ಗಂಗಾತೀರದಲ್ಲಿ ಸಿದ್ಧರಾಗಿರಿ.॥6॥
ಮೂಲಮ್ - 7
ತಿಷ್ಠಂತು ಸರ್ವದಾಶಾಶ್ಚ ಗಂಗಾಮನ್ವಾಶ್ರಿತಾ ನದೀಮ್ ।
ಬಲಯುಕ್ತಾ ನದೀರಕ್ಷಾ ಮಾಂಸಮೂಲಫಲಾಶನಾಃ ॥
ಅನುವಾದ
ಎಲ್ಲ ಅಂಬಿಗರು ಸೈನ್ಯದೊಂದಿಗೆ ನದಿಯನ್ನು ರಕ್ಷಿಸುತ್ತಾ ಗಂಗಾತೀರದಲ್ಲೇ ಇರಿ ಮತ್ತು ನಾವೆಗಳಲ್ಲಿ ಇಟ್ಟಿರುವ ಫಲ-ಮೂಲಗಳನ್ನು ತಿಂದುಕೊಂಡು ಇಂದಿನ ರಾತ್ರಿಯನ್ನು ಕಳೆಯಿರಿ.॥7॥
ಮೂಲಮ್ - 8
ನಾವಾಂ ಶತಾನಾಂ ಪಂಚಾನಾಂ ಕೈವರ್ತಾನಾಂ ಶತಂ ಶತಮ್ ।
ಸಂನದ್ಧಾನಾಂ ತಥಾ ಯೂನಾಂ ತಿಷ್ಠಂತ್ವಿತ್ಯಭ್ಯಚೋದಯತ್ ॥
ಅನುವಾದ
ನಮ್ಮ ಬಳಿ ಐದುನೂರು ದೋಣಿಗಳು ಇವೆ, ಅದರಲ್ಲಿ ಪ್ರತಿಯೊಂದರ ಮೇಲೆಯೂ ಬೆಸ್ತರ ನೂರು-ನೂರು ಯುವಕರು ಯುದ್ಧ ಸಾಮಗ್ರಿಗಳನ್ನು ಅಣಿಗೊಳಿಸಿ ಕೂತಿರಲಿ. ಈ ಪ್ರಕಾರ ಗುಹನು ಅವರೆಲ್ಲರಿಗೆ ಆದೇಶಿಸಿದನು.॥8॥
ಮೂಲಮ್ - 9
ಯದಿ ತುಷ್ಟಸ್ತು ಭರತೋ ರಾಮಸ್ಯೇಹ ಭವಿಷ್ಯತಿ ।
ಇಯಂ ಸ್ವಸ್ತಿಮತೀ ಸೇನಾ ಗಂಗಾಮದ್ಯ ತರಿಷ್ಯತಿ ॥
ಅನುವಾದ
ಅವನು ಪುನಃ ಹೇಳಿದನು - ಭರತನ ಭಾವವು ಶ್ರೀರಾಮನ ಕುರಿತು ಸಂತೋಷಜನಕವಾಗಿದ್ದರೆ ಆಗ ಅವನ ಈ ಸೈನ್ಯ ಇಂದು ಕ್ಷೇಮವಾಗಿ ಗಂಗೆಯನ್ನು ದಾಟಬಹುದು.॥9॥
ಮೂಲಮ್ - 10
ಇತ್ಯುಕ್ತ್ವೋಪಾಯನಂ ಗೃಹ್ಯ ಮತ್ಸ್ಯಮಾಂಸಮಧೂನಿ ಚ ।
ಅಭಿಚಕ್ರಾಮ ಭರತಂ ನಿಷಾದಾಧಿಪತಿರ್ಗುಹಃ ॥
ಅನುವಾದ
ಹೀಗೆ ಹೇಳಿ ನಿಷಾದರಾಜ ಗುಹನು ಮತ್ಸ್ಯಂಡೀ (ಕಲ್ಲು ಸಕ್ಕರೆ) ಹಣ್ಣಿನ ತಿರುಳು, ಜೇನು ಮೊದಲಾದ ಸಾಮಗ್ರಿಗಳನ್ನು ತೆಗೆದುಕೊಂಡು ಭರತನನ್ನು ಸಂದರ್ಶಿಸಲು ಹೊರಟನು.॥10॥
ಮೂಲಮ್ - 11
ತಮಾಯಾಂತಂ ತು ಸಂಪ್ರೇಕ್ಷ್ಯ ಸೂತಪುತ್ರಃ ಪ್ರತಾಪವಾನ್ ।
ಭರತಾಯಾಚಚಕ್ಷೇಽಥ ಸಮಯಜ್ಞೋ ವಿನೀತವತ್ ॥
ಅನುವಾದ
ಅವನು ಬರುವುದನ್ನು ನೋಡಿ ಸಮಯೋಚಿತ ಕರ್ತವ್ಯವನ್ನು ತಿಳಿದ ಪ್ರತಾಪಿ ಸೂತಪುತ್ರ ಸುಮಂತ್ರನು ವಿನೀತ ಭಾವದಿಂದ ಭರತನಲ್ಲಿ ಹೇಳಿದನು.॥11॥
ಮೂಲಮ್ - 12
ಏಷ ಜ್ಞಾತಿಸಹಸ್ರೇಣ ಸ್ಥಪತಿಃ ಪರಿವಾರಿತಃ ।
ಕುಶಲೋ ದಂಡಕಾರಣ್ಯೇ ವೃದ್ಧೋ ಭ್ರಾತುಶ್ಚ ತೇ ಸಖಾ ॥
ಮೂಲಮ್ - 13
ತಸ್ಮಾತ್ಪುಶ್ಯತು ಕಾಕುತ್ಸ್ಥ ತ್ವಾಂ ನಿಷಾದಾಧಿಪೋ ಗುಹಃ ।
ಅಸಂಶಯಂ ವಿಜಾನೀತೇ ಯತ್ರ ತೌ ರಾಮಲಕ್ಷ್ಮಣೌ ॥
ಅನುವಾದ
ಕಕುತ್ಸ್ಥಕುಲಭೂಷಣ! ಈ ಮುದುಕ ನಿಷಾದರಾಜ ಗುಹನು ತನ್ನ ಸಾವಿರಾರು ಬಂಧು-ಬಾಂಧವರೊಂದಿಗೆ ಇಲ್ಲಿ ವಾಸಿಸುತ್ತಿದ್ದಾನೆ. ಇವನು ನಿನ್ನಣ್ಣ ಶ್ರೀರಾಮನ ಮಿತ್ರನಾಗಿದ್ದಾನೆ. ಇವನಿಗೆ ದಂಡಕಾರಣ್ಯದ ವಿಶೇಷ ಪರಿಚಯವಿದೆ. ಖಂಡಿತವಾಗಿ ಶ್ರೀರಾಮ-ಲಕ್ಷ್ಮಣರು ಎಲ್ಲಿರುವರೆಂದು ಇವನಿಗೆ ತಿಳಿದಿರಬಹುದು; ಆದ್ದರಿಂದ ನಿಷಾದರಾಜ ಗುಹನು ನಿನ್ನೊಂದಿಗೆ ಭೆಟ್ಟಿಯಾಗಲು ಅವಕಾಶಮಾಡಿಕೊಡು.॥12-13॥
ಮೂಲಮ್ - 14
ಏತತ್ತು ವಚನಂ ಶ್ರುತ್ವಾ ಸುಮಂತ್ರಾದ್ ಭರತಃ ಶುಭಮ್ ।
ಉವಾಚ ವಚನಂ ಶೀಘ್ರಂ ಗುಹಃ ಪಶ್ಯತು ಮಾಮಿತಿ ॥
ಅನುವಾದ
ಸುಮಂತ್ರನಿಂದ ಈ ಶುಭ ಸಮಾಚಾರ ಕೇಳಿ ಭರತನು ಹೇಳಿದನು - ನಿಷಾದರಾಜ ಗುಹನು ನನಗೆ ಶೀಘ್ರವಾಗಿ ಭೆಟ್ಟಿಯಾಗುವಂತೆ ವ್ಯವಸ್ಥೆಯಾಗಲಿ.॥14॥
ಮೂಲಮ್ - 15
ಲಬ್ಧ್ವಾನುಜ್ಞಾಂ ಸಂಪ್ರಹೃಷ್ಟೋ ಜ್ಞಾತಿಭಿಃ ಪರಿವಾರಿತಃ ।
ಆಗಮ್ಯ ಭರತಂ ಪ್ರಹ್ವೋ ಗುಹೋ ವಚನಮಬ್ರವೀತ್ ॥
ಅನುವಾದ
ಭೇಟಿಯ ಅನುಮತಿ ಪಡೆದು ಗುಹನು ತನ್ನ ಬಂಧು-ಬಾಂಧವರೊಂದಿಗೆ ಅಲ್ಲಿಗೆ ಸಂತೋಷವಾಗಿ ಬಂದು, ಭರತನನ್ನು ಭೆಟ್ಟಿಯಾಗಿ ಬಹಳ ನಮ್ರತೆಯಿಂದ ಹೇಳಿದನು.॥15॥
ಮೂಲಮ್ - 16
ನಿಷ್ಕುಟಶ್ಚೈವ ದೇಶೋಽಯಂ ವಂಚಿತಾಶ್ಚಾಪಿ ತೇ ವಯಮ್ ।
ನಿವೇದಯಾಮ ತೇ ಸರ್ವಂ ಸ್ವಕೇ ದಾಶಗೃಹೇ ವಸ ॥
ಅನುವಾದ
ಈ ವನಪ್ರದೇಶವು ನಿಮಗಾಗಿ ಮನೆಯ ಹೂದೋಟದಂತೆ ಇದೆ. ನೀವು ನಿಮ್ಮ ಆಗಮನದ ಸೂಚನೆಯನ್ನು ಕೊಡದೆ ನಮ್ಮನ್ನು ವಂಚಿಸಿದರಿ. ನಾವು ನಿಮ್ಮ ಸ್ವಾಗತದ ಯಾವುದೇ ಸಿದ್ಧತೆ ಮಾಡದೇಹೋದೆವು. ನಮ್ಮ ಬಳಿ ಇರುವುದೆಲ್ಲವೂ ನಿಮ್ಮ ಸೇವೆಗಾಗಿ ಅರ್ಪಿತವಾಗಿದೆ. ಈ ನಿಷಾದರ ಮನೆ ನಿಮ್ಮದೇ ಆಗಿದೆ. ನೀವು ಸುಖವಾಗಿ ಇಲ್ಲಿ ವಾಸಿಸಿರಿ.॥16॥
ಮೂಲಮ್ - 17
ಅಸ್ತಿ ಮೂಲ ಫಲಂ ಚೈತನ್ನಿಷಾದೈಃ ಸ್ವಯಮರ್ಜಿತಮ್ ।
ಆರ್ದ್ರಂ ಶುಷ್ಕಂ ಯಥಾ ಮಾಂಸಂ ವನ್ಯಂ ಚೋಚ್ಚಾವಚಂ ತಥಾ ॥
ಅನುವಾದ
ಈ ಫಲ-ಮೂಲಗಳು ನಿಮ್ಮ ಸೇವೆಗಾಗಿ ಇವೆ. ಇವನ್ನು ನಿಷಾದರು ಸ್ವತಃ ಕಿತ್ತುತಂದಿರುವರು. ಇವುಗಳಲ್ಲಿ ಕೆಲವು ಫಲ ಹಣ್ಣಾಗಿವೆ, ಕೆಲವು ಒಣಗಿವೆ. ಇವುಗಳ ಜೊತೆಗೆ ಹಣ್ಣುಗಳ ತಿರುಳನ್ನು ಇರಿಸಿದೆ. ಇವುಗಳಲ್ಲದೆ ಇತರ ವನ್ಯ ಪದಾರ್ಥಗಳೂ ಇವೆ. ಇವೆಲ್ಲವನ್ನು ಸ್ವೀಕರಿಸಿರಿ.॥17॥
ಮೂಲಮ್ - 18
ಆಶಂಸೇ ಸ್ವಶಿತಾ ಸೇನಾ ವತ್ಸ್ಯತ್ಯೇನಾಂ ವಿಭಾವರೀಮ್ ।
ಅರ್ಚಿತೋ ವಿವಿಧೈಃ ಕಾಮೈಃಶ್ವಃ ಸಸೈನ್ಯೋ ಗಮಿಷ್ಯಸಿ ॥
ಅನುವಾದ
ಈ ಸೈನ್ಯವು ಇಂದಿನ ರಾತ್ರಿ ಇಲ್ಲೇ ತಂಗಿದ್ದು ನಾವು ಕೊಟ್ಟ ಭೋಜನವನ್ನು ಸ್ವೀಕರಿಸಬೇಕೆಂದು ನಾವು ಆಶಿಸುತ್ತೇವೆ. ನಾನಾ ಪ್ರಕಾರ ಮನೋವಾಂಛಿತ ವಸ್ತುಗಳಿಂದ ಇಂದು ನಾವು ಸೈನ್ಯಸಹಿತ ನಿಮ್ಮನ್ನು ಸತ್ಕರಿಸುವೆವು ಮತ್ತು ನಾಳೆ ಬೆಳಿಗ್ಗೆ ನೀವು ನಿಮ್ಮ ಸೈನ್ಯದೊಂದಿಗೆ ಬೇರೆಡೆಗೆ ಹೋಗಿರಿ.॥18॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಎಂಭತ್ತನಾಲ್ಕನೆಯ ಸರ್ಗ ಪೂರ್ಣವಾಯಿತು.॥84॥