०८३ शृङ्गिबेरपुरे भरतवासः

वाचनम्
ಭಾಗಸೂಚನಾ

ಭರತನ ವನಯಾತ್ರೆ, ಶೃಂಗವೇರಪುರದಲ್ಲಿ ರಾತ್ರಿ ಬಿಡಾರ

ಮೂಲಮ್ - 1

ತತಃ ಸಮುತ್ಥಿತಃ ಕಲ್ಪಮಾಸ್ಥಾಯ ಸ್ಯಂದನೋತ್ತಮಮ್ ।
ಪ್ರಯಯೌ ಭರತಃ ಶೀಘ್ರಂರಾಮದರ್ಶನಕಾಮ್ಯಯಾ ॥

ಅನುವಾದ

ಅನಂತರ ಪ್ರಾತಃಕಾಲ ಎದ್ದ ಭರತನು ಉತ್ತಮ ರಥದಲ್ಲಿ ಆರೂಢನಾಗಿ ಶ್ರೀರಾಮಚಂದ್ರನ ದರ್ಶನದ ಇಚ್ಛೆಯಿಂದ ಶೀಘ್ರವಾಗಿ ಹೊರಟನು.॥1॥

ಮೂಲಮ್ - 2

ಅಗ್ರತಃ ಪ್ರಯಯುಸ್ತಸ್ಯ ಸರ್ವೇ ಮಂತ್ರಿಪುರೋಹಿತಃ ।
ಅಧಿರುಹ್ಯ ಹಯೈರ್ಯುಕ್ತಾನ್ ರಥಾನ್ ಸೂರ್ಯರಥೋಪಮಾನ್ ॥

ಅನುವಾದ

ಅವನ ಮುಂದೆ-ಮುಂದೆ ಎಲ್ಲ ಮಂತ್ರಿಗಳು, ಪುರೋಹಿತರು ಕುದುರೆ ಹೂಡಿದ ರಥಗಳಲ್ಲಿ ಕುಳಿತು ಪ್ರಯಾಣಿಸುತ್ತಿದ್ದರು. ಆ ರಥಗಳು ಸೂರ್ಯನ ರಥದಂತೆ ತೇಜಸ್ವಿಯಾಗಿ ಕಾಣುತ್ತಿದ್ದವು.॥2॥

ಮೂಲಮ್ - 3

ನವನಾಗಸಹಸ್ರಾಣಿ ಕಲ್ಪಿತಾನಿ ಯಥಾವಿಧಿ ।
ಅನ್ವಯುರ್ಭರತಂ ಯಾಂತಮಿಕ್ಷ್ವಾಕುಕುಲನಂದನಮ್ ॥

ಅನುವಾದ

ಪ್ರಯಾಣ ಮಾಡುತ್ತಿದ್ದ ಇಕ್ಷ್ವಾಕು ಕುಲನಂದನ ಭರತನ ಹಿಂದೆ ಕ್ರಮವಾಗಿ ಅಲಂಕರಿಸಿದ ಒಂಭತ್ತು ಸಾವಿರ ಆನೆಗಳು ನಡೆಯುತ್ತಿದ್ದವು.॥3॥

ಮೂಲಮ್ - 4

ಷಷ್ಟೀ ರಥಸಹಸ್ರಾಣಿ ಧನ್ವಿನೋ ವಿವಿಧಾಯುಧಾಃ ।
ಅನ್ವಯುರ್ಭರತಂ ಯಾಂತಂ ರಾಜಪುತ್ರಂ ಯಶಸ್ವಿನಮ್ ॥

ಅನುವಾದ

ಯಾತ್ರಾ ಪರಾಯಣ ಯಶಸ್ವೀ ರಾಜಕುಮಾರ ಭರತನ ಹಿಂದೆ ಅರವತ್ತು ಸಾವಿರ ರಥಗಳು, ನಾನಾ ಪ್ರಕಾರದ ಆಯುಧಗಳನ್ನು ಧರಿಸಿದ ಧನುರ್ಧರ ಯೋಧರು ಹೋಗುತ್ತಿದ್ದರು.॥4॥

ಮೂಲಮ್ - 5

ಶತಂ ಸಹಸ್ರಾಣ್ಯಶ್ವಾನಾಂ ಸಮಾರೂಢಾನಿರಾಘವಮ್ ।
ಅನ್ವಯುರ್ಭರತಂ ಯಾಂತಂ ರಾಜಪುತ್ರಂ ಯಶಸ್ವಿನಮ್ ॥

ಅನುವಾದ

ಹಾಗೆಯೇ ಒಂದು ಲಕ್ಷ ಕುದುರೆ ಸವಾರರೂ ಆ ಯಶಸ್ವೀ ರಘುಕುಲನಂದನ ರಾಜಪುತ್ರ ಭರತನನ್ನು ಅನುಸರಿಸುತ್ತಿದ್ದರು.॥5॥

ಮೂಲಮ್ - 6

ಕೈಕೇಯೀ ಚ ಸುಮಿತ್ರಾ ಚಕೌಸಲ್ಯಾ ಚ ಯಶಸ್ವಿನೀ ।
ರಾಮಾನಯನಸಂತುಷ್ಟಾ ಯಯುರ್ಯಾನೇನ ಭಾಸ್ವತಾ ॥

ಅನುವಾದ

ಕೈಕೇಯಿ, ಸುಮಿತ್ರೆ, ಯಶಸ್ವಿನೀ ಕೌಸಲ್ಯೆಯರೂ ಕೂಡ ಶ್ರೀರಾಮನನ್ನು ಕರೆತರಲು ಹೋಗುವ ಆ ಯಾತ್ರೆಯಲ್ಲಿ ಸಂತುಷ್ಟರಾಗಿ ತೇಜಸ್ವೀ ರಥಗಳಲ್ಲಿ ಹೊರಟರು.॥6॥

ಮೂಲಮ್ - 7

ಪ್ರಯಾತಾಶ್ಚಾರ್ಯಸಂಘಾತಾ ರಾಮಂ ದ್ರಷ್ಟುಂಸಲಕ್ಷ್ಮಣಮ್ ।
ತಸ್ಯೈವ ಚ ಕಥಾಶ್ಚಿತ್ರಾಃ ಕುರ್ವಾಣಾ ಹೃಷ್ಟಮಾನಸಾಃ ॥

ಅನುವಾದ

ಬ್ರಾಹ್ಮಣಾದಿ ಆರ್ಯರ (ತ್ರೈವರ್ಣಿಕರ) ಗುಂಪು, ಮನಸ್ಸಿನಲ್ಲಿ ಅತ್ಯಂತ ಹರ್ಷಿತರಾಗಿ ಲಕ್ಷ್ಮಣ ಸಹಿತ ಶ್ರೀರಾಮನ ದರ್ಶನ ಮಾಡಲಿಕ್ಕಾಗಿ, ಅವರ ಕುರಿತಾದ ವಿಚಿತ್ರ ಮಾತುಗಳನ್ನು ಹೇಳುತ್ತಾ-ಕೇಳುತ್ತಾ ಪ್ರಯಾಣಿಸುತ್ತಿದ್ದರು.॥7॥

ಮೂಲಮ್ - 8

ಮೇಘಶ್ಯಾಮಂ ಮಹಾಬಾಹುಂ ಸ್ಥಿರಸತ್ತ್ವಂ ದೃಢವ್ರತಮ್ ।
ಕದಾ ದ್ರಕ್ಷ್ಯಾಮಹೇ ರಾಮಂ ಜಗತಃ ಶೋಕನಾಶನಮ್ ॥

ಅನುವಾದ

(ಅವರು ಪರಸ್ಪರ ಆಡಿಕೊಳ್ಳುತ್ತಿದ್ದರು -) ದೃಢತೆಯಿಂದ ಉತ್ತಮ ವ್ರತವನ್ನು ಪಾಲಿಸುವ ಹಾಗೂ ಜಗತ್ತಿನ ದುಃಖವನ್ನು ದೂರಗೊಳಿಸುವ, ಸ್ಥಿತಪ್ರಜ್ಞ, ಶ್ಯಾಮವರ್ಣ, ಮಹಾಬಾಹು ಶ್ರೀರಾಮನನ್ನು ನಾವು ಯಾವಾಗ ದರ್ಶಿಸುವೆ.॥8॥

ಮೂಲಮ್ - 9

ದೃಷ್ಟ ಏವ ಹಿ ನಃ ಶೋಕಮಪನೇಷ್ಯತಿ ರಾಘವಃ ।
ತಮಃ ಸರ್ವಸ್ಯ ಲೋಕಸ್ಯ ಸಮುದ್ಯನ್ನಿವ ಭಾಸ್ಕರಃ ॥

ಅನುವಾದ

ಸೂರ್ಯನು ಉದಯಿಸಿದಾಗ ಜಗತ್ತಿನ ಅಂಧಕಾರವನ್ನು ಇಲ್ಲವಾಗಿಸುವಂತೆ ಶ್ರೀರಘುನಾಥನು ನಮ್ಮ ಕಣ್ಣಿಗೆ ಬಿದ್ದಾಗ ನಮ್ಮ ಎಲ್ಲ ಶೋಕ-ಸಂತಾಪ ದೂರಗೊಳಿಸುವನು.॥9॥

ಮೂಲಮ್ - 10

ಇತ್ಯೇವಂ ಕಥಯಂತಸ್ತೇ ಸಂಪ್ರಹೃಷ್ಟಾಃ ಕಥಾಃ ಶುಭಾಃ ।
ಪರಿಷ್ವಜಾನಾಶ್ಚಾನ್ಯೋನ್ಯಂ ಯಯುರ್ನಾಗರಿಕಾ ಸ್ತದಾ ॥

ಅನುವಾದ

ಹೀಗೆ ಮಾತುಗಳನ್ನಾಡುತ್ತಾ, ಅತ್ಯಂತ ಹರ್ಷದಿಂದ ಒಬ್ಬರು ಮತ್ತೊಬ್ಬರನ್ನು ಆಲಿಂಗಿಸಿಕೊಳ್ಳುತ್ತಾ ಅಯೋಧ್ಯೆಯ ನಾಗರಿಕರು ಆಗ ಪ್ರಯಾಣ ಮಾಡುತ್ತಿದ್ದರು.॥10॥

ಮೂಲಮ್ - 11

ಯೇ ಚ ತತ್ರಾಪರೇ ಸರ್ವೇ ಸಮ್ಮತಾ ಯೇ ಚ ನೈಗಮಾಃ ।
ರಾಮಂ ಪ್ರತಿಯಯುರ್ಹೃಷ್ಟಾಃ ಸರ್ವಾಃ ಪ್ರಕೃತಯಃ ಶುಭಾಃ ॥

ಅನುವಾದ

ಆ ನಗರದಲ್ಲಿದ್ದ ಇತರ ಸಮ್ಮಾನಿತ ಎಲ್ಲ ಪುರುಷರೂ, ವ್ಯಾಪಾರಿಗಳೂ, ಶುಭ ವಿಚಾರವುಳ್ಳ ಪ್ರಜಾಜನರೂ ಕೂಡ ಬಹಳ ಹರ್ಷದಿಂದ ಶ್ರೀರಾಮನನ್ನು ಕಾಣಲು ಹೊರಟರು.॥11॥

ಮೂಲಮ್ - 12

ಮಣಿಕಾರಾಶ್ಚ ಯೇ ಕೇಚಿತ್ಕುಂಭಕಾರಾಶ್ಚ ಶೋಭನಾಃ ।
ಸೂತ್ರಕರ್ಮವಿಶೇಷಜ್ಞಾ ಯೇ ಚ ಶಸ್ತ್ರೋಪಜೀವಿನಃ ॥

ಮೂಲಮ್ - 13

ಮಾಯೂರಕಾಃ ಕ್ರಾಕಚಿಕಾ ವೇಧಕಾ ರೋಚಕಾಸ್ತಥಾ ।
ದಂತಕಾರಾಃ ಸುಧಾಕಾರಾ ಯೇ ಚ ಗಂಧೋಪಜೀವಿನಃ ॥

ಮೂಲಮ್ - 14

ಸುವರ್ಣಕಾರಾಃ ಪ್ರಖ್ಯಾತಸ್ತಥಾ ಕಂಬಲಕಾರಕಾಃ ।
ಸ್ನಾಪಕೋಷ್ಣೋದಕಾ ವೈದ್ಯಾಧೂಪಕಾಃಶೌಂಡಿಕಾಸ್ತಥಾ ॥

ಮೂಲಮ್ - 15

ರಜಕಾಸ್ತುನ್ನವಾಯಾಶ್ಚ ಗ್ರಾಮಘೋಷಮಹತ್ತರಾಃ ।
ಶೈಲೂಷಾಶ್ಚಸಹ ಸ್ತ್ರೀಭಿರ್ಯಾಂತಿಃ ಕೈವರ್ತಕಾಸ್ತಥಾ ॥

ಮೂಲಮ್ - 16

ಸಮಾಹಿತಾ ವೇದವಿದೋ ಬ್ರಾಹ್ಮಣಾ ವೃತ್ತಸಮ್ಮತಾಃ ।
ಗೋರಥೈರ್ಭರತಂ ಯಾಂತಮನುಜಗ್ಮುಃ ಸಹಸ್ರಶಃ ॥

ಅನುವಾದ

ಮಣಿಕಾರರೂ, ಕುಂಬಾರರೂ, ದಾರತೆಗೆದು ಬಟ್ಟೆಗಳನ್ನು ನೇಯುವುದರಲ್ಲಿ ನಿಪುಣರಾದ ನೆಯ್ಗೆಯವರು, ಶಸ್ತ್ರಗಳನ್ನು ತಯಾರಿಸಿ ಜೀವನ ನಡೆಸುವವರೂ, ನವಿಲುಗರಿಗಳಿಂದ ಬೀಸಣಿಗೆಗಳನ್ನೂ ಚಾಮರಗಳನ್ನೂ ಮಾಡುವವರೂ, ಗರಗಸದಿಂದ ಮರವನ್ನು ಕೊಯ್ದು ಜೀವಿಸುವವರು, ಮಣಿ-ಮುತ್ತುಗಳಿಗೆ ರಂಧ್ರಮಾಡುವವರೂ, ಮನೆಗಳನ್ನು ಅಲಂಕರಿಸುವವರೂ, ಆನೆಯ ದಂತದಿಂದ ಮನೋಹರ ಚಿತ್ರಗಳನ್ನು ಮಾಡುವವರೂ, ಗಾರೆ ಕೆಲಸದವರೂ, ಸುಗಂಧ ದ್ರವ್ಯಗಳನ್ನು ತಯಾರಿಸುವವರೂ, ಚಿನ್ನದ ಕೆಲಸ ಮಾಡುವ ಅಕ್ಕಸಾಲಿಗರೂ, ಅಭ್ಯಂಜನ ಮಾಡಿಸುವರೂ, ಮೈಯೊತ್ತುವವರೂ, ಕಂಬಳಿಗಳನ್ನು ನೇಯುವವರೂ, ವೈದ್ಯರೂ, ಉತ್ತಮೋತ್ತಮವಾದ ಧೂಪಗಳನ್ನು ತಯಾರಿಸುವವರೂ, ಮದ್ಯವನ್ನು ತಯಾರಿಸುವವರೂ, ಅಗಸರೂ, ದರ್ಜಿಗಳೂ, ಗೋಪಾಲಕರೂ, ಸ್ತ್ರೀಯರಿಂದ ಕೂಡಿದ ಮತ್ತು ಸ್ತ್ರೀಯರಿಂದಲೇ ಜೀವನ ನಡೆಸುವ ನಟರೂ, ಬೆಸ್ತರೂ, ಬೇಟೆಗಾರರೂ, ಕಮ್ಮಾರರೂ, ಬಡಗಿಗಳೂ ಹಾಗೂ ಸದಾಚಾರ ಸಂಪನ್ನರಾದ ವೇದವಿದರಾದ ಸಾವಿರಾರು ಬ್ರಾಹ್ಮಣರು ಎತ್ತಿನ ಗಾಡಿಗಳಲ್ಲಿ ಕುಳಿತು ಶ್ರೀರಾಮನನ್ನು ಸಂದರ್ಶಿಸಲು ಭರತನನ್ನು ಅನುಸರಿಸಿ ಹೊರಟರು.॥12-16॥

ಮೂಲಮ್ - 17

ಸುವೇಷಾಃ ಶುದ್ಧವಸನಾಸ್ತಾಮ್ರಮೃಷ್ಟಾನುಲೇಪನಃ ।
ಸರ್ವೇ ತೇ ವಿವಿಧೈರ್ಯಾನೈಃ ಶನೈರ್ಭರತಮನ್ವಯುಃ ॥

ಅನುವಾದ

ಎಲ್ಲರೂ ಶುದ್ಧ ವಸ್ತ್ರಗಳನ್ನುಟ್ಟು ಸುಂದರ ವೇಷ ಭೂಷಣಗಳಿಂದ ತಾಮ್ರದಂತೆ ಕೆಂಪಾದ ಅಂಗರಾಗವನ್ನು ಪೂಸಿಕೊಂಡು, ನಾನಾ ಪ್ರಕಾರದ ವಾಹನಗಳಲ್ಲಿ ನಿಧಾನವಾಗಿ ಭರತನನ್ನು ಅನುಸರಿಸುತ್ತಿದ್ದರು.॥17॥

ಮೂಲಮ್ - 18

ಪ್ರಹೃಷ್ಟಮುದಿತಾ ಸೇನಾ ಸಾನ್ವಯಾತ್ ಕೈಕಯೀಸುತಮ್ ।
ಭ್ರಾತುರಾನಯನೇ ಯಾಂತಂ ಭರತಂ ಭ್ರಾತೃವತ್ಸಮ್ ॥

ಅನುವಾದ

ಹರ್ಷ- ಆನಂದದಿಂದ ಕೂಡಿದ ಆ ಸೈನ್ಯವು ಅಣ್ಣನನ್ನು ಕರೆತರಲು ಹೊರಟ ಕೈಕೇಯೀ ಕುಮಾರ ಭ್ರಾತೃವತ್ಸಲ ಭರತನ ಹಿಂದೆ-ಹಿಂದೆ ನಡೆಯತೊಡಗಿತು.॥18॥

ಮೂಲಮ್ - 19

ತೇ ಗತ್ವಾ ದೂರಮಧ್ವಾನಂ ರಥಯಾನಾಶ್ವಕುಂಜರೈಃ ।
ಸಮಾಸೇದುಸ್ತತೋ ಗಂಗಾಂ ಶೃಂಗವೇರಪುರಂಪ್ರತಿ ॥

ಅನುವಾದ

ಈ ಪ್ರಕಾರ ರಥ, ಪಲ್ಲಕ್ಕಿಗಳು, ಕುದುರೆ, ಆನೆಗಳು ಇವುಗಳಿಂದ ಬಹಳ ದೂರ ದಾರಿ ನಡೆದ ಬಳಿಕ ಅವರೆಲ್ಲರೂ ಶೃಂಗವೇರಪುರದ ಗಂಗಾತೀರಕ್ಕೆ ತಲುಪಿದರು.॥19॥

ಮೂಲಮ್ - 20

ಯತ್ರ ರಾಮಸಖಾ ವೀರೋ ಗುಹೋಜ್ಞಾತಿಗಣೈರ್ವೃತಃ ।
ನಿವಸತ್ಯಪ್ರಮಾದೇನ ದೇಶಂ ತಂ ಪರಿಪಾಲಯನ್ ॥

ಅನುವಾದ

ಅಲ್ಲಿ ಶ್ರೀರಾಮಚಂದ್ರನ ಸಖನಾದ ವೀರ ನಿಷಾದರಾಜ ಗುಹನು ಎಚ್ಚರಿಕೆಯಿಂದ ಆ ದೇಶವನ್ನು ರಕ್ಷಿಸುತ್ತಾ ತನ್ನ ಬಂಧು-ಬಾಂಧವರೊಂದಿಗೆ ವಾಸಿಸುತ್ತಿದ್ದನು.॥20॥

ಮೂಲಮ್ - 21

ಉಪೇತ್ಯ ತೀರಂ ಗಂಗಾಯಾಶ್ಚಕ್ರವಾಕೈರಲಂಕೃತಮ್ ।
ವ್ಯವತಿಷ್ಠತ ಸಾ ಸೇನಾ ಭರತಸ್ಯಾನುಯಾಯಿನೀ ॥

ಅನುವಾದ

ಚಕ್ರವಾಕಗಳಿಂದ ಅಲಂಕೃತ ಗಂಗಾತೀರಕ್ಕೆ ತಲುಪಿ ಭರತ ನನ್ನು ಅನುಸರಿಸಿ ಬಂದ ಸೈನ್ಯವು ಅಲ್ಲಿ ತಂಗಿತು.॥21॥

ಮೂಲಮ್ - 22

ನೀರೀಕ್ಷ್ಯಾನುಸ್ಥಿತಾಂ ಸೇನಾಂ ತಾಂ ಚ ಗಂಗಾಂ ಶಿವೋದಕಾಮ್ ।
ಭರತಃ ಸಚಿವಾನ್ಸರ್ವಾನಬ್ರವೀದ್ವಾಕ್ಯಕೋವಿದಃ ॥

ಅನುವಾದ

ಪುಣ್ಯಸಲಿಲೆ ಭಾಗೀರಥಿಯ ದರ್ಶನ ಪಡೆದು ತನ್ನ ಸೈನ್ಯವು ಬಳಲಿರುವುದನ್ನು ನೋಡಿ ಮಾತಿನಲ್ಲಿ ಕುಶಲನಾದ ಭರತನು ಸಮಸ್ತ ಸೇನಾಪತಿಗಳಲ್ಲಿ ಹೇಳಿದನು.॥22॥

ಮೂಲಮ್ - 23

ನಿವೇಶಯತ ಮೇ ಸೈನ್ಯಮಭಿಪ್ರಾಯೇಣ ಸರ್ವತಃ ।
ವಿಶ್ರಾಂತಾಃ ಪ್ರತರಿಷ್ಯಾಮಃ ಶ್ವ ಇಮಾಂ ಸಾಗರಂಗಮಾಮ್ ॥

ಅನುವಾದ

ನೀವು ನಿಮ್ಮ ಸೈನಿಕರಿಗೆ ಅವರ ಇಚ್ಛೆಗನುಸಾರ ಇಲ್ಲಿ ಎಲ್ಲೆಡೆ ನಿಲ್ಲಿಸಿ ಬಿಡಿರಿ. ಇಂದು ರಾತ್ರಿ ನಾವೆಲ್ಲರೂ ಇಲ್ಲಿ ವಿಶ್ರಾಂತಿ ಪಡೆದು, ನಾಳೆ ಬೆಳಿಗ್ಗೆ ಈ ಸಾಗರಗಾಮಿನೀ ನದಿಯನ್ನು ದಾಟೋಣ.॥23॥

ಮೂಲಮ್ - 24

ದಾತುಂ ಚ ತಾವದಿಚ್ಛಾಮಿ ಸ್ವರ್ಗತಸ್ಯ ಮಹೀಪತೇಃ ।
ಔರ್ಧ್ವದೇಹನಿಮಿತ್ತಾರ್ಥಮವತೀರ್ಯೋದಕಂ ನದೀಮ್ ॥

ಅನುವಾದ

ಇಲ್ಲಿ ತಂಗುವ ಇನ್ನೊಂದು ಪ್ರಯೋಜನ - ಗಂಗೆಯಲ್ಲಿ ಸ್ನಾನಮಾಡಿ ಸ್ವರ್ಗಸ್ಥ ತಂದೆಯವರ ಪಾರಲೌಕಿಕ ಶ್ರೇಯಸ್ಸಿಗಾಗಿ ಜಲಾಂಜಲಿಯನ್ನು ಕೊಡಬೇಕೆಂದು ಬಯಸುತ್ತಿದ್ದೇನೆ.॥24॥

ಮೂಲಮ್ - 25

ತಸ್ಯೈವಂ ಬ್ರುವತೋಽಮಾತ್ಯಾಸ್ತಥೇತ್ಯುಕ್ತ್ವಾ ಸಮಾಹಿತಾಃ ।
ನ್ಯವೇಶಯಂಸ್ತಾಂಶ್ಛಂದೇನ ಸ್ವೇನ ಸ್ವೇನ ಪೃಥಕ್ಪೃಥಕ್ ॥

ಅನುವಾದ

ಭರತನು ಹೀಗೆ ಹೇಳಿದಾಗ ಎಲ್ಲ ಮಂತ್ರಿಗಳು ‘ಹಾಗೆಯೇ ಆಗಲಿ’ ಎಂದು ಹೇಳಿ, ಅವನ ಆಜ್ಞೆಯನ್ನು ಶಿರಸಾವಹಿಸಿ, ಸಮಸ್ತ ಸೈನಿಕರನ್ನು ಅವರ ಇಚ್ಛಾನುಸಾರ ಬೇರೆ-ಬೇರೆ ಸ್ಥಾನಗಳಲ್ಲಿ ಇರಿಸಿದರು.॥25॥

ಮೂಲಮ್ - 26

ನಿವೇಶ್ಯ ಗಂಗಾಮನು ತಾಂ ಮಹಾನದೀಂ
ಚಮೂಂ ವಿಧಾನೈಃ ಪರಿಬರ್ಹಶೋಭಿನೀಮ್ ।
ಉವಾಸ ರಾಮಸ್ಯ ತದಾ ಮಹಾತ್ಮನೋ
ವಿಚಿಂತಮಾನೋ ಭರತೋ ನಿವರ್ತನಮ್ ॥

ಅನುವಾದ

ಧ್ವಜ ಪತಾಕಾದಿಗಳಿಂದ ಸುಶೋಭಿತವಾದ ಚತುರಂಗಬಲವನ್ನು ಗಂಗಾನದಿಯ ಸಮೀಪದಲ್ಲಿ ಯಥಾವಿಧಿಯಾಗಿ ನಿಲ್ಲಿಸಿ, ಶ್ರೀರಾಮನನ್ನು ಅಯೋಧ್ಯೆಗೆ ಕರೆತರಲು ಏನು ಮಾಡಬೇಕೆಂದು ಚಿಂತಿಸುತ್ತಾ ಮಹಾತ್ಮನಾದ ಭರತನು ಅಲ್ಲಿ ವಾಸಿಸಿದನು.॥26॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಎಂಭತ್ತಮೂರನೆಯ ಸರ್ಗ ಪೂರ್ಣವಾಯಿತು.॥83॥