वाचनम्
ಭಾಗಸೂಚನಾ
ಕೌಸಲ್ಯೆಯ ವಿಲಾಪ, ಕೈಕೇಯಿಯ ನಿಂದನೆ, ಮಂತ್ರಿಗಳು ರಾಜನ ಶರೀರವನ್ನು ಎಣ್ಣೆಯ ಕೊಪ್ಪರಿಗೆಯಲ್ಲಿ ಇಟ್ಟುದು, ಕಳಾಹೀನವಾದ ನಗರ ಮತ್ತು ನಾಗರಿಕರ ಶೋಕ
ಮೂಲಮ್ - 1
ತಮಗ್ನಿಮಿವ ಸಂಶಾಂತಮಂಬುಹೀನಮಿವಾರ್ಣವಮ್ ।
ನತಪ್ರಭಮಿವಾದಿತ್ಯಂ ಸ್ವರ್ಗಸ್ಥಂ ಪ್ರೇಕ್ಷ್ಯ ಭೂಮಿಪಮ್ ॥
ಮೂಲಮ್ - 2
ಕೌಸಲ್ಯಾ ಬಾಷ್ಪಪೂರ್ಣಾಕ್ಷೀ ವಿವಿಧಂ ಶೋಕಕರ್ಶಿತಾ ।
ಉಪಗೃಹ್ಯ ಶಿರೋ ರಾಜ್ಞಃ ಕೈಕೇಯೀಂ ಪ್ರತ್ಯಭಾಷತ ॥
ಅನುವಾದ
ಆರಿಹೋದ ಬೆಂಕಿಯಂತೆ, ನೀರಿಲ್ಲದ ಸಮುದ್ರದಂತೆ, ಕಾಂತಿಹೀನ ಸೂರ್ಯನಂತೆ ಇದ್ದ ಸ್ವರ್ಗಸ್ಥನಾದ ರಾಜನ ಶವವನ್ನು ನೋಡಿ ಕೌಸಲ್ಯೆಯ ಕಣ್ಣುಗಳಲ್ಲಿ ಕಂಬನಿ ತುಂಬಿದವು. ಅವಳು ಅನೇಕ ಪ್ರಕಾರದಿಂದ ಶೋಕಾಕುಲಳಾಗಿ ರಾಜನ ತಲೆಯನ್ನು ತನ್ನ ತೊಡೆಯಲ್ಲಿಟ್ಟುಕೊಂಡು ಕೈಕೇಯಿಗೆ ಹೇಳಿದಳ.॥1-2॥
ಮೂಲಮ್ - 3
ಸಕಾಮಾ ಭವ ಕೈಕೇಯೀ ಭುಂಕ್ಷ್ವ ರಾಜ್ಯಮಕಂಟಕಮ್ ।
ತ್ಯಕ್ತ್ವಾರಾಜಾನಮೇಕಾಗ್ರ ನೃಶಂಸೇ ದುಷ್ಟಚಾರಿಣಿ ॥
ಅನುವಾದ
ದುರಾಚಾರಿಣೀ ಕ್ರೂರ ಕೈಕೇಯಿಯೇ! ನಿನ್ನ ಕಾಮನೆ ಸಫಲವಾಯಿತು. ಈಗ ಮಹಾರಾಜರನ್ನು ತ್ಯಜಿಸಿ ಏಕಾಗ್ರಚಿತ್ತಳಾಗಿ ತನ್ನ ನಿಷ್ಕಂಟಕ ರಾಜ್ಯವನ್ನು ಅನುಭವಿಸು.॥3॥
ಮೂಲಮ್ - 4
ವಿಹಾಯ ಮಾಂ ಗತೋ ರಾಮೋ ಭರ್ತಾ ಚ ಸ್ವರ್ಗತೋ ಮಮ ।
ವಿಪಥೇ ಸಾರ್ಥಹೀನೇವ ನಾಹಂ ಜೀವಿತುಮುತ್ಸಹೇ ॥
ಅನುವಾದ
ರಾಮನು ನನ್ನನ್ನು ಬಿಟ್ಟು ಕಾಡಿಗೆ ಹೋದನು ಮತ್ತು ನನ್ನ ಸ್ವಾಮಿ ಸ್ವರ್ಗಸ್ಥರಾದರು. ಇನ್ನು ನಾನು ದುರ್ಗಮ ದಾರಿಯಲ್ಲಿ ಸಂಗಡಿಗರಿಂದ ಅಗಲಿದ ಅಸಹಾಯ ಅಬಲೆಯಂತೆ ಬದುಕಿರಲಾರೆನು.॥4॥
ಮೂಲಮ್ - 5
ಭರ್ತಾರಂ ತಂ ಪರಿತ್ಯಜ್ಯ ಕಾ ಸ್ತ್ರೀ ದೈವತಮಾತ್ಮನಃ ।
ಇಚ್ಛೇಜ್ಜೀವಿತುಮನ್ಯತ್ರ ಕೈಕೇಯ್ಯಾಸ್ತ್ಯಕ್ತಧರ್ಮಣಃ ॥
ಅನುವಾದ
ನಾರೀಧರ್ಮವನ್ನು ತ್ಯಜಿಸಿದ ಕೈಕೆಯಿಯಲ್ಲದೆ, ಜಗತ್ತಿನಲ್ಲಿ ತನ್ನ ಆರಾಧ್ಯ ದೇವರಂತಿರುವ ಪತಿಯನ್ನು ತ್ಯಜಿಸಿ ಬದುಕಲು ಬಯಸುವ ಸ್ತ್ರೀಯರು ಯಾರು ತಾನೇ ಇರಬಲ್ಲಳು.॥5॥
ಮೂಲಮ್ - 6
ನ ಲುಬ್ಧೋ ಬುಧ್ಯತೇ ದೋಷಾನ್ ಕಿಂಪಾಕಮಿವ ಭಕ್ಷಯನ್ ।
ಕುಬ್ಜಾನಿಮಿತ್ತಂ ಕೈಕೇಯ್ಯಾ ರಾಘವಾಣಾಂ ಕುಲಂ ಹತಮ್ ॥
ಅನುವಾದ
ಯಾವನಾದರೂ ಧನದ ಲೋಭಿಯು ಬೇರೆಯವರಿಗೆ ವಿಷವುಣಿಸಿ, ಅದರಿಂದ ಆಗುವ ಹತ್ಯೆಯ ದೋಷಗಳ ಕಡೆಗೆ ಗಮನಕೊಡುವುದಿಲ್ಲ, ಹಾಗೆಯೇ ಈ ಕೈಕೇಯಿಯು ಕುಬ್ಜೆಯ ಕಾರಣದಿಂದ ರಘುವಂಶಿಯರ ಈ ಕುಲವನ್ನು ನಾಶಮಾಡಿಬಿಟ್ಟಳು.॥6॥
ಮೂಲಮ್ - 7
ಅನಿಯೋಗೇ ನಿಯುಕ್ತೇನ ರಾಜ್ಞಾ ರಾಮಂ ವಿವಾಸಿತಮ್ ।
ಸಭಾರ್ಯಂ ಜನಕಃ ಶ್ರುತ್ವಾ ಪರಿತಪ್ಸ್ಯತ್ಯಹಂ ಯಥಾ ॥
ಅನುವಾದ
ಕೈಕೇಯಿಯು ಮಹಾರಾಜರನ್ನು ಅಯೋಗ್ಯ ಕಾರ್ಯದಲ್ಲಿ ತೊಡಗಿಸಿ, ಅವರಿಂದ ಪತ್ನೀಸಹಿತ ಶ್ರೀರಾಮನಿಗೆ ವನವಾಸ ಕೊಡಿಸಿದಳು. ಈ ಸಮಾಚಾರ ಜನಕ ಮಹಾರಾಜರು ಕೇಳಿದರೆ ನನ್ನಂತೆ ಅವರಿಗೆ ಬಹಳ ಕಷ್ಟವಾಗಬಹುದು.॥7॥
ಮೂಲಮ್ - 8
ಸ ಮಾಮನಾಥಾಂ ವಿಧವಾಂ ನಾದ್ಯ ಜಾನಾತಿ ಧಾರ್ಮಿಕಃ ।
ರಾಮಃ ಕಮಲಪತ್ರಾಕ್ಷೋ ಜೀವನ್ನಾಶಮಿತೋ ಗತಃ ॥
ಅನುವಾದ
ನಾನು ಅನಾಥೆ ಮತ್ತು ವಿಧವೆ ಆಗಿಬಿಟ್ಟೆ-ಈ ಮಾತು ನನ್ನ ಧರ್ಮಾತ್ಮಾ ಪುತ್ರ ಕಮಲನಯನ ಶ್ರೀರಾಮನಿಗೆ ತಿಳಿಯದು. ಅವನಾದರೋ ಇಲ್ಲಿಂದ ಮಹಾರಾಜರು ಜೀವಿಸಿ ಇರುವಾಗಲೇ ಅದೃಶ್ಯನಾದನು.॥8॥
ಮೂಲಮ್ - 9
ವಿದೇಹರಾಜಸ್ಯ ಸುತಾ ತಥಾ ಚಾರುತಪಸ್ವಿನೀ ।
ದುಃಖಸ್ಯಾನುಚಿತಾ ದುಃಖಂ ವನೇ ಪರ್ಯುದ್ವಿಜಿಷ್ಯತಿ ॥
ಅನುವಾದ
ಪತಿಸೇವಾ ರೂಪೀ ಮನೋಹರ ತಪಸ್ಸನ್ನು ಮಾಡುವ ವಿದೇಹ ರಾಜಕುಮಾರಿ ಸೀತೆಯು ದುಃಖ ಅನುಭವಿಸಲು ಯೋಗ್ಯಳಲ್ಲ. ಅವಳು ಮನದಲ್ಲಿ ದುಃಖವನ್ನು ಅನುಭವಿಸುತ್ತಾ ಉದ್ವಿಗ್ನಳಾಗುವಳು.॥9॥
ಮೂಲಮ್ - 10
ನದತಾಂ ಭೀಮಘೋಷಾಣಾಂ ನಿಶಾಸು ಮೃಗಪಕ್ಷಿಣಾಮ್ ।
ನಿಶಮ್ಯಮಾನಾ ಸಂತ್ರಸ್ತಾ ರಾಘವಂ ಸಂಶ್ರಯಿಷ್ಯತಿ ॥
ಅನುವಾದ
ರಾತ್ರಿಯಲ್ಲಿ ಭಯಾನಕ ಶಬ್ದ ಮಾಡುವ ಪಶುಪಕ್ಷಿಗಳ ಧ್ವನಿ ಕೇಳಿ ಭಯಗೊಂಡ ಸೀತೆಯು ಶ್ರೀರಾಮನಲ್ಲಿ ಶರಣಾಗಿ ಅವನ ಮಡಿಲಲ್ಲಿ ಅಡಗಿಕೊಳ್ಳುವಳು.॥10॥
ಮೂಲಮ್ - 11
ವೃದ್ಧಶ್ಚೈವಾಲ್ಪಪುತ್ರಶ್ಚ ವೈದೇಹೀಮನುಚಿಂತಯನ್ ।
ಸೋಪಿ ಶೋಕಸಮಾವಿಷ್ಟೋ ನೂನಂ ತ್ಯಕ್ಷ್ಯತಿ ಜೀವಿತಮ್ ॥
ಅನುವಾದ
ಕನ್ಯೆಯರೇ ಮಾತ್ರ ಇರುವ, ಮುದುಕರಾದ ರಾಜಾ ಜನಕನೂ ಕೂಡ ಸೀತೆಯನ್ನು ಪದೇ-ಪದೇ ಚಿಂತಿಸುತ್ತಾ ಶೋಕದಲ್ಲಿ ಮುಳುಗಿ ಅವಶ್ಯವಾಗಿ ಪ್ರಾಣತ್ಯಾಗ ಮಾಡುವರು.॥11॥
ಮೂಲಮ್ - 12
ಸಾಹಮದ್ಯೈವ ದಿಷ್ಟಾಂತಂ ಗಮಿಷ್ಯಾಮಿ ಪತಿವ್ರತಾ ।
ಇದಂ ಶರೀರಮಾಲಿಂಗ್ಯ ಪ್ರವೇಕ್ಷ್ಯಾಮಿ ಹುತಾಶನಮ್ ॥
ಅನುವಾದ
ನಾನೂ ಇಂದೇ ಮೃತ್ಯುವನ್ನು ವರಿಸುವೆನು. ಓರ್ವ ಪತಿವ್ರತೆಯಂತೆ ಪತಿಯ ಶರೀರವನ್ನು ಆಲಿಂಗಿಸಿ ಚಿತೆಯ ಬೆಂಕಿಯಲ್ಲಿ ಪ್ರವೇಶಿಸುವೆನು.॥12॥
ಮೂಲಮ್ - 13
ತಾಂ ತತಃ ಸಂಪರಿಷ್ವಜ್ಯ ವಿಲಪಂತೀಂ ತಪಸ್ವಿನೀಮ್ ।
ವ್ಯಪನಿನ್ಯುಃ ಸುದುಃಖಾರ್ತಾಂ ಕೌಸಲ್ಯಾಂ ವ್ಯಾವಹಾರಿಕಾಃ ॥
ಅನುವಾದ
ಪತಿಯ ಶರೀರವನ್ನು ಅಪ್ಪಿಕೊಂಡು ಅತ್ಯಂತ ದುಃಖದಿಂದ ಆರ್ತಳಾಗಿ ವಿಲಾಪಿಸುತ್ತಿರುವ ತಪಸ್ವಿನೀ ಕೌಸಲ್ಯೆಯನ್ನು ಮಂತ್ರಿಗಳು ಇತರ ಸ್ತ್ರೀಯರ ಮೂಲಕ ಅಲ್ಲಿಂದ ದೂರ ಸರಿಸಿದರು.॥13॥
ಮೂಲಮ್ - 14
ತೈಲದ್ರೋಣ್ಯಾಂ ತದಾಮಾತ್ಯಾಃ ಸಂವೇಶ್ಯ ಜಗತೀಪತಿಮ್ ।
ರಾಜ್ಞಃ ಸರ್ವಾಣ್ಯಥಾದಿಷ್ಟಾಶ್ಚಕ್ರುಃ ಕರ್ಮಾಣ್ಯನಂತರಮ್ ॥
ಅನುವಾದ
ಮತ್ತೆ ಅವರು ಮಹಾರಾಜರ ಶರೀರವನ್ನು ಎಣ್ಣೆ ತುಂಬಿದ ಕೊಪ್ಪರಿಗೆಯಲ್ಲಿ ಇರಿಸಿ, ವಸಿಷ್ಠಾದಿಗಳ ಆಜ್ಞೆಯಂತೆ ಶವದ ರಕ್ಷಣೆ ಮುಂತಾದ ಇತರ ರಾಜಕಾರ್ಯದ ಕಡೆಗೆ ಗಮನ ಹರಿಸಿದರು.॥14॥
ಮೂಲಮ್ - 15
ನ ತು ಸಂಕಾಲನಂ ರಾಜ್ಞೋ ವಿನಾ ಪುತ್ರೇಣ ಮಂತ್ರಿಣಃ ।
ಸರ್ವಜ್ಞಾಃ ಕರ್ತುಮೀಷುಸ್ತೇ ತತೋ ರಕ್ಷಂತಿ ಭೂಮಿಪಮ್ ॥
ಅನುವಾದ
ಆ ಸರ್ವಜ್ಞರಾದ ಮಂತ್ರಿಗಳು ಪುತ್ರನಿಲ್ಲದೇ ರಾಜನ ದಹನಸಂಸ್ಕಾರ ಮಾಡುವಂತಿಲ್ಲ, ಆದ್ದರಿಂದ ಅವನ ಶವದ ರಕ್ಷಣೆಯನ್ನು ಮಾಡತೊಡಗಿದರು.॥15॥
ಮೂಲಮ್ - 16
ತೈಲದ್ರೋಣ್ಯಾಂ ಶಾಯಿತಂ ತಂ ಸಚಿವೈಸ್ತು ನರಾಧಿಪಮ್ ।
ಹಾ ಮೃತೋಯಮಿತಿ ಜ್ಞಾತ್ವಾ ಸ್ತ್ರಿಯಸ್ತಾಃ ಪರ್ಯದೇವಯನ್ ॥
ಅನುವಾದ
ಮಂತ್ರಿಗಳು ರಾಜನ ಶವವನ್ನು ಎಣ್ಣೆಯ ಕೊಪ್ಪರಿಗೆಯಲ್ಲಿ ಮಲಗಿಸಿದಾಗ ಇದನ್ನು ತಿಳಿದ ಎಲ್ಲ ರಾಣಿಯರು ‘ಅಯ್ಯೋ! ವಿಧಿಯೇ! ಈ ಮಹಾರಾಜರು ಪರಲೋಕವಾಸಿಗಳಾದರಲ್ಲ!’ ಎಂದು ಪುನಃ ವಿಲಾಪಿಸತೊಡಗಿದರು.॥16॥
ಮೂಲಮ್ - 17
ಬಾಹೂನುಚ್ಛ್ರಿತ್ಯ ಕೃಪಣಾ ನೇತ್ರಪ್ರಸ್ರವಣೈರ್ಮುಖೈಃ ।
ರುದತ್ಯಃ ಶೋಕಸಂತಪ್ತಾಃ ಕೃಪಣಂ ಪರ್ಯದೇವಯನ್ ॥
ಅನುವಾದ
ಅವರ ಕಣ್ಣುಗಳಿಂದ ಕಂಬನಿಯ ಕೋಡಿಯೇ ಹರಿಯುತ್ತಿತ್ತು. ಅವರು ಭುಜಗಳನ್ನೆತ್ತಿ ದೀನ ಭಾವದಿಂದ ಅಳುತ್ತಾ ಶೋಕಸಂತಪ್ತರಾಗಿ ದಯನೀಯವಾಗಿ ವಿಲಾಪ ಮಾಡತೊಡಗಿದರು.॥17॥
ಮೂಲಮ್ - 18
ಹಾ ಮಹಾರಾಜ ರಾಮೇಣ ಸತತಂ ಪ್ರಿಯವಾದಿನಾ ।
ವಿಹೀನಾಃ ಸತ್ಯಸಂಧೇನ ಕಿಮರ್ಥಂ ವಿಜಹಾಸಿ ನಃ ॥
ಅನುವಾದ
ಅವರು ಹೇಳುತ್ತಾರೆ - ಹಾ ಮಹಾರಾಜ! ನಾವು ಸತ್ಯಪ್ರತಿಜ್ಞ, ಸದಾಪ್ರಿಯವಾಗಿ ಮಾತನಾಡುವ ನಮ್ಮ ಪುತ್ರ ಶ್ರೀರಾಮನಿಂದ ಮೊದಲೇ ಅಗಲಿದ್ದೆವು, ಈಗ ನೀವೂ ಏಕೆ ನಮ್ಮನ್ನು ಪರಿತ್ಯಜಿಸುತ್ತಿದ್ದೀರಿ.॥18॥
ಮೂಲಮ್ - 19
ಕೈಕೇಯ್ಯಾ ದುಷ್ಟಭಾವಾಯಾ ರಾಘವೇಣ ವಿವರ್ಜಿತಾಃ ।
ಕಥಂ ಸಪಪ್ನ್ಯಾ ವತ್ಸ್ಯಾಮಃ ಸಮೀಪೇ ವಿಧವಾ ವಯಮ್ ॥
ಅನುವಾದ
ಶ್ರೀರಾಮನಿಂದ ಅಗಲಿದ ವಿಧವೆಯರಾದ ನಾವು ಈ ದುಷ್ಟ ವಿಚಾರವುಳ್ಳ ಸವತಿ ಕೈಕೇಯಿಯ ಅಧೀನದಲ್ಲಿ ಹೇಗೆ ಇರಬಲ್ಲೆವು.॥19॥
ಮೂಲಮ್ - 20
ಸ ಹಿ ನಾಥಃ ಸ ಚಾಸ್ಮಾಕಂ ತವ ಚ ಪ್ರಭುರಾತ್ಮವಾನ್ ।
ವನಂ ರಾಮೋ ಗತಃ ಶ್ರೀಮಾನ್ವಿಹಾಯ ನೃಪತಿಶ್ರಿಯಮ್ ॥
ಅನುವಾದ
ನಮ್ಮ ಮತ್ತು ನಿಮ್ಮ ರಕ್ಷಕ ಮತ್ತು ಸ್ವಾಮಿಯಾಗಿದ್ದ ಆ ಮನಸ್ವೀ ಶ್ರೀರಾಮಚಂದ್ರನು ರಾಜಲಕ್ಷ್ಮಿಯನ್ನು ಬಿಟ್ಟು ವನಕ್ಕೆ ಹೊರಟುಹೋಗಿರುವನು.॥20॥
ಮೂಲಮ್ - 21
ತ್ವಯಾ ತೇನ ಚ ವೀರೇಣ ವಿನಾ ವ್ಯಸನಮೋಹಿತಾಃ ।
ಕಥಂ ವಯಂ ನಿವತ್ಸ್ಯಾಮಃ ಕೈಕೇಯ್ಯಾ ಚ ವಿದೂಷಿತಾಃ ॥
ಅನುವಾದ
ವೀರವರ ಶ್ರೀರಾಮ ಮತ್ತು ನೀವೂ ಇರದಿದ್ದಾಗ ನಮ್ಮ ಮೇಲೆ ಭಾರೀ ಸಂಕಟ ಬಂದೆರಗಿತು, ಇದರಿಂದ ನಾವು ಮೋಹಿತರಾಗುತ್ತಿದ್ದೇವೆ. ಈಗ ಸವತಿ ಕೈಕೇಯಿಯಿಂದ ತಿರಸ್ಕೃತರಾಗಿ ನಾವು ಇಲ್ಲಿ ಹೇಗೆ ಇರಬಲ್ಲೆವು.॥21॥
ಮೂಲಮ್ - 22
ಯಯಾ ಚ ರಾಜಾ ರಾಮಶ್ಚಲಕ್ಷ್ಮಣಶ್ಚ ಮಹಾಬಲಃ ।
ಸೀತಯಾ ಸಹ ಸಂತ್ಯಕ್ತಾಃ ಸಾ ಕಮನ್ಯಂ ನ ಹಾಸ್ಯತಿ ॥
ಅನುವಾದ
ಯಾರು ರಾಜನನ್ನು, ಸೀತಾ ಸಹಿತ ಶ್ರೀರಾಮನನ್ನು, ಮಹಾಬಲಿ ಲಕ್ಷ್ಮಣನನ್ನು ಪರಿತ್ಯಾಗ ಮಾಡಿರುವರೋ ಅವರು ಬೇರೆ ಏನನ್ನು ತಾನೇ ತ್ಯಾಗ ಮಾಡಲಾರರು.॥22॥
ಮೂಲಮ್ - 23
ತಾ ಬಾಷ್ಪೇಣ ಚ ಸಂವೀತಾಃ ಶೋಕೇನ ವಿಪುಲೇನ ಚ ।
ವ್ಯಚೇಷ್ಟಂತ ನಿರಾನಂದಾ ರಾಘವಸ್ಯ ವರಸ್ತ್ರಿಯಃ ॥
ಅನುವಾದ
ರಘುಕುಲನರೇಶ ದಶರಥನ ಆ ಸುಂದರ ರಾಣಿಯರು ಮಹಾಶೋಕದಿಂದ ಗ್ರಸ್ತರಾಗಿ ಕಂಬನಿ ಸುರಿಸುತ್ತಾ, ನಾನಾ ಪ್ರಕಾರದ ಚೇಷ್ಟೆಗಳನ್ನು ಮಾಡುತ್ತಾ ವಿಲಾಪಿಸುತ್ತಿದ್ದರು. ಅವರ ಆನಂದವು ಸೂರೆ ಹೋಗಿತ್ತು.॥23॥
ಮೂಲಮ್ - 24
ನಿಶಾ ನಕ್ಷತ್ರಹೀನೇವ ಸ್ತ್ರೀವ ಭರ್ತೃವಿವರ್ಜಿತಾ ।
ಪುರೀ ನಾರಾಜತಾಯೋಧ್ಯಾ ಹೀನಾ ರಾಜ್ಞಾ ಮಹಾತ್ಮನಾ ॥
ಅನುವಾದ
ಮಹಾತ್ಮನಾದ ದಶರಥನಿಂದ ವಿಹೀನವಾದ ಆ ಅಯೋಧ್ಯಾಪುರಿಯು ನಕ್ಷತ್ರಹೀನ ರಾತ್ರಿಯಂತೆ, ಪತಿವಿಹೀನೆ ನಾರಿಯಂತೆ ಶ್ರೀಹೀನವಾಯಿತು.॥24॥
ಮೂಲಮ್ - 25
ಬಾಷ್ಪಪರ್ಯಾಕುಲಜನಾ ಹಾಹಾ ಭೂತ ಕುಲಾಂಗನಾ ।
ಶೂನ್ಯಚತ್ವರವೇಶ್ಮಾಂತಾ ನ ಬಭ್ರಾಜ ಯಥಾಪುರಮ್ ॥
ಅನುವಾದ
ನಗರದ ಜನರೆಲ್ಲರೂ ಕಣ್ಣೀರು ಹರಿಸುತ್ತಿದ್ದರು. ಕುಲವತಿ ಸ್ತ್ರೀಯರು ಹಾಹಾಕಾರ ಮಾಡುತ್ತಿದ್ದರು. ರಾಜಬೀದಿಗಳು, ಚೌಕಗಳು, ಮನೆಗಳು ಶೂನ್ಯವಾಗಿ ಕಾಣುತ್ತಿದ್ದವು. (ಗುಡಿಸಿ-ಸಾರಿಸಿ, ರಂಗವಲ್ಲಿ ಇಡುವುದು, ಬಲಿ ಅರ್ಪಣ ಮುಂತಾದ ಕಾರ್ಯಗಳು ನಡೆಯುತ್ತಿರಲಿಲ್ಲ.) ಹೀಗೆ ಆ ಪುರಿಯು ಮೊದಲಿನಂತೆ ಶೋಭಿಸುತ್ತಿರಲಿಲ್ಲ.॥25॥
ಮೂಲಮ್ - 26
ಗತೇ ತು ಶೋಕಾತ್ತ್ರಿದಿವಂ ನರಾಧಿಪೇ
ಮಹೀತಲಸ್ಥಾಸು ನೃಪಾಂಗನಾಸು ಚ ।
ನಿವೃತ್ತಚಾರಃ ಸಹಸಾ ಗತೋ ರವಿಃ
ಪ್ರವೃತ್ತಚಾರಾ ರಜನೀ ಹ್ಯುಪಸ್ಥಿತಾ ॥
ಅನುವಾದ
ದಶರಥನು ಶೋಕವಶ ದಿವಂಗತನಾದನು, ಅವನ ಪತ್ನಿಯರು ಶೋಕದಿಂದ ಭೂಮಿಯಲ್ಲಿ ಹೊರಳಾಡುತ್ತಿದ್ದರು. ಈ ಶೋಕದಿಂದಲೇ ಸೂರ್ಯಕಿರಣಗಳು ಮರೆಯಾದವೋ ಎಂಬಂತೆ ಸೂರ್ಯಾಸ್ತವಾಯಿತು. ಮತ್ತೆ ಅಂಧಕಾರವನ್ನು ಪಸರಿಸುತ್ತಾ ರಾತ್ರಿಯು ಉಪಸ್ಥಿತವಾಯಿತು.॥26॥
ಮೂಲಮ್ - 27
ಋತೇ ತು ಪುತ್ರಾದ್ದಹನಂ ಮಹೀಪತೇ-
ರ್ನಾರೋಚಯಸ್ತೇ ಸುಹೃದಃ ಸಮಾಗತಾಃ ।
ಇತೀವ ತಸ್ಮಿನ್ ಶಯನೇ ನ್ಯವೇಶಯನ್
ವಿಚಿಂತ್ಯ ರಾಜಾನಮಚಿಂತ್ಯದರ್ಶನಮ್ ॥
ಅನುವಾದ
ಅಲ್ಲಿಗೆ ಆಗಮಿಸಿದ ಸುಹೃದರು ಯಾವುದೇ ಪುತ್ರನಿಲ್ಲದೆ ರಾಜನ ದಹನಸಂಸ್ಕಾರ ನಡೆಸಲು ಒಪ್ಪಲಿಲ್ಲ. ಇನ್ನು ರಾಜನ ದರ್ಶನ ಅಚಿಂತ್ಯವಾಯಿತೆಂದು ಯೋಚಿಸಿ ಅವರೆಲ್ಲರೂ ಆ ಶವವನ್ನು ಎಣ್ಣೆಯ ಕೊಪ್ಪರಿಗೆಯಲ್ಲಿ ಸುರಕ್ಷಿತವಾಗಿ ಇರಿಸಿದ್ದರು.॥27॥
ಮೂಲಮ್ - 28
ಗತಪ್ರಭಾ ದ್ಯೌರಿವ ಭಾಸ್ಕರಂ ವಿನಾ
ವ್ಯಪೇತನಕ್ಷತ್ರಗಣೇವ ಶರ್ವರೀ ।
ಪುರೀ ಬಭಾಸೇ ರಹಿತಾ ಮಹಾತ್ಮನಾ
ಕಂಠಾಸ್ರಕಂಠಾಕುಲಮಾರ್ಗಚತ್ವರಾ ॥
ಅನುವಾದ
ಸೂರ್ಯನಿಲ್ಲದ ಪ್ರಭಾಹೀನ ಆಕಾಶ, ನಕ್ಷತ್ರಗಳಿಲ್ಲದ ಶೋಭಾಹೀನ ರಾತ್ರಿಯಂತೆ ಅಯೋಧ್ಯಾಪುರಿಯು ಮಹಾತ್ಮಾ ದಶರಥನಿಂದ ರಹಿತವಾಗಿ ಶ್ರೀಹೀನವಾಗಿ ಕಂಡು ಬರುತ್ತಿತ್ತು. ರಾಜ ಬೀದಿಗಳಲ್ಲಿ-ಚೌಕಗಳಲ್ಲಿ ಕಂಬನಿ ಸುರಿಸುತ್ತಾ, ಗಂಟಲು ಕಟ್ಟಿ ಮಾತನಾಡಲೂ ಆಗದ ಜನರು ತುಂಬಿಹೋಗಿದ್ದರು.॥28॥
ಮೂಲಮ್ - 29
ನರಾಶ್ಚ ನಾರ್ಯಶ್ಚ ಸಮೇತ್ಯ ಸಂಘಶೋ
ವಿಗರ್ಹಮಾಣಾ ಭರತಸ್ಯ ಮಾತರಮ್ ।
ತದಾ ನಗರ್ಯಾಂ ನರದೇವಸಂಕ್ಷಯೇ
ಬಭೂವುರಾರ್ತಾ ನ ಚ ಶರ್ಮ ಲೇಭಿರೇ ॥
ಅನುವಾದ
ಗುಂಪು-ಗುಂಪಾಗಿ ಸ್ತ್ರೀ-ಪುರುಷರು ಅಲ್ಲಲ್ಲಿ ನಿಂತು ಭರತ ಮಾತೆ ಕೈಕೇಯಿಯನ್ನು ನಿಂದಿಸತೊಡಗಿದರು. ಆಗ ಮಹಾರಾಜನ ಮೃತ್ಯುವಿನಿಂದ ಅಯೋಧ್ಯೆಯಲ್ಲಿರುವ ಎಲ್ಲ ಜನರು ಶೋಕಾಕುಲವಾಗಿದ್ದರು. ಯಾರಿಗೂ ಶಾಂತಿ ಇರಲಿಲ್ಲ.॥29॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಅರವತ್ತಾರನೆಯ ಸರ್ಗ ಪೂರ್ಣವಾಯಿತು ॥66॥