वाचनम्
ಭಾಗಸೂಚನಾ
ಬೆಳಗಾಗುತ್ತಲೇ ವಂದಿ-ಮಾಗಧರು ಸ್ತುತಿಸಿದುದು, ದಶರಥನು ದಿವಂಗತನಾದನೆಂದು ತಿಳಿದು ರಾಣಿಯರು ವಿಲಪಿಸುದುದು
ಮೂಲಮ್ - 1
ಅಥ ರಾತ್ರ್ಯಾಂ ವ್ಯತೀತಾಯಾಂ ಪ್ರಾತರೇವಾಪರೇಽಹನಿ ।
ವಂದಿನಃ ಪರ್ಯುಪಾತಿಷ್ಠಂ ಸ್ತತ್ಪಾರ್ಥಿವನಿವೇಶನಮ್ ॥
ಅನುವಾದ
ರಾತ್ರಿಯು ಕಳೆದು ಮರುದಿನ ಮುಂಜಾನೆಯಾಗುತ್ತಲೇ ಸ್ತುತಿಪಾಠಕರು ರಾಜನಿಗೆ ಸುಪ್ರಭಾತವನ್ನು ಹೇಳಲು ಅರಮನೆಯಲ್ಲಿ ಉಪಸ್ಥಿತರಾದರು.॥1॥
ಮೂಲಮ್ - 2
ಸೂತಾಃ ಪರಮಸಂಸ್ಕಾರಾ ಮಾಗಧಾಶ್ಚೋತ್ತಮಾಶ್ರುತಾಃ ।
ಗಾಯಕಾಃ ಸ್ತುತಿಶೀಲಾಶ್ಚ ನಿಗದಂತಃ ಪೃಥಕ್ಪೃಥಕ್ ॥
ಅನುವಾದ
ವ್ಯಾಕರಣ-ಅಲಂಕಾರವನ್ನು ಚೆನ್ನಾಗಿ ಬಲ್ಲ ಸೂತರು, ಉತ್ತಮವಾಗಿ ವಂಶಪರಂಪರೆಯನ್ನು ಹೊಗಳುವ ಮಾಗಧರು ಮತ್ತು ಸಂಗೀತಶಾಸ್ತ್ರವನ್ನು ಅಭ್ಯಸಿಸಿದ ಗಾಯಕರು ತಮ್ಮ-ತಮ್ಮ ಮಾರ್ಗಕ್ಕನುಸಾರ ಬಗೆ-ಬಗೆಯ ಯಶೋಗಾನ ಮಾಡುತ್ತಾ ಅಲ್ಲಿಗೆ ಬಂದರು.॥2॥
ಮೂಲಮ್ - 3
ರಾಜಾನಂ ಸ್ತುವತಾಂ ತೇಷಾಮುದಾತ್ತಾಭಿಹಿತಾಶಿಷಾಮ್ ।
ಪ್ರಾಸಾದಾಭೋಗವಿಸ್ತೀರ್ಣಃ ಸ್ತುತಿಶಬ್ದೋ ಹ್ಯವರ್ತತ ॥
ಅನುವಾದ
ಗಟ್ಟಿಯಾಗಿ ಆಶೀರ್ವಾದಗಳನ್ನು ಕೊಡುತ್ತಾ ರಾಜನನ್ನು ಸ್ತುತಿಸುವ ಆ ಸೂತ-ಮಾಗಧರ ಶಬ್ದವು ಅರಮನೆಯ ಒಳಗೆ ತುಂಬಿ ಪ್ರತಿಧ್ವನಿಸಿತು.॥3॥
ಮೂಲಮ್ - 4
ತತಸ್ತು ಸ್ತುವತಾಂ ತೇಷಾಂ ಸೂತಾನಾಂ ಪಾಣಿವಾದಕಾಃ ।
ಅಪದಾನಾನ್ಯುದಾಹೃತ್ಯ ಪಾಣಿವಾದಾನ್ಯವಾದಯನ್ ॥
ಅನುವಾದ
ಆ ಸೂತರು ಸ್ತುತಿಸುತ್ತಿರುವಾಗಲೇ ಪಾಣಿವಾದಕರು (ಚಪ್ಪಾಳೆ ತಟ್ಟಿ ಹಾಡುವವರು) ಅಲ್ಲಿಗೆ ಬಂದು ರಾಜನ ಹಿಂದಿನ ಅದ್ಭುತ ಕರ್ಮಗಳನ್ನು ಹೊಗಳುತ್ತಾ ತಾಳಗತಿಗನು ಸಾರ ಚಪ್ಪಾಳೆ ತಟ್ಟತೊಡಗಿದರು.॥4॥
ಮೂಲಮ್ - 5
ತೇನ ಶಬ್ದೇನ ವಿಹಗಾಃ ಪ್ರತಿಬುದ್ಧಾಶ್ಚ ಸಸ್ವನುಃ ।
ಶಾಖಾಸ್ಥಾಃ ಪಂಜರಸ್ಥಾಶ್ಚ ಯೇ ರಾಜಕುಲಗೋಚರಾಃ ॥
ಅನುವಾದ
ಆ ಶಬ್ದದಿಂದ ವೃಕ್ಷಗಳಲ್ಲಿ ಇದ್ದ ಪಕ್ಷಿಗಳು, ರಾಜಕುಲದಲ್ಲೇ ಸಂಚರಿಸುವ ಪಂಜರದಲ್ಲಿದ್ದ ಪಕ್ಷಿಗಳು ಎಚ್ಚರಗೊಂಡು ಚಿಲಿಪಿಲಿಗುಟ್ಟಿದವು.॥5॥
ಮೂಲಮ್ - 6
ವ್ಯಾಹೃತಾಃ ಪುಣ್ಯಶಬ್ದಾಶ್ಚ ವೀಣಾನಾಂ ಚಾಪಿ ನಿಃಸ್ವನಾಃ ।
ಆಶೀರ್ಗೇಯಂ ಚ ಗಾಥಾನಾಂ ಪೂರಯಾಮಾಸ ವೇಶ್ಮತತ್ ॥
ಅನುವಾದ
ಶುಕಾದಿ ಪಕ್ಷಿಗಳ ಕೂಜನದಿಂದ ಹಾಗೂ ಬ್ರಾಹ್ಮಣರ ಪವಿತ್ರ ವೇದಧ್ವನಿಗಳಿಂದ, ವೀಣೆಯ ಮಧುರ ನಾದದಿಂದ, ಗಾಥೆಗಳ ಪವಿತ್ರ ಆಶೀರ್ವಾದಯುಕ್ತ ಗಾಯನದಿಂದ ಆ ರಾಜಭವನವು ಪ್ರತಿಧ್ವನಿಸಿತು.॥6॥
ಮೂಲಮ್ - 7
ತತಃ ಶುಚಿಸಮಾಚಾರಾಃ ಪರ್ಯುಪಸ್ಥಾನಕೋವಿದಾಃ ।
ಸ್ತ್ರೀವರ್ಷವರಭೂಯಿಷ್ಠಾ ಉಪತಸ್ಥುರ್ಯಥಾಪುರಾ ॥
ಅನುವಾದ
ಅನಂತರ ಸದಾಚಾರಿ ಮತ್ತು ಸೇವಾ ಧುರಂಧರರಾದ ಅನೇಕ ಸ್ತ್ರೀಯರು ಮತ್ತು ನಪುಂಸಕರೂ ಆದ ಸೇವಕರು ಮೊದಲಿನಂತೆ ಆ ದಿನವೂ ಅರಮನೆಯಲ್ಲಿ ಉಪಸ್ಥಿತರಾದರು.॥7॥
ಮೂಲಮ್ - 8
ಹರಿಚಂದನಸಂಪೃಕ್ತಮುದಕಂ ಕಾಂಚನೈರ್ಘಟೈಃ ।
ಆನಿನ್ಯುಃ ಸ್ನಾನಶಿಕ್ಷಾಜ್ಞಾ ಯಥಾಕಾಲಂ ಯಥಾವಿಧಿ ॥
ಅನುವಾದ
ಸ್ನಾನವಿಧಿಯನ್ನು ಬಲ್ಲ ಭೃತ್ಯರು ಬಂಗಾರದ ಬಿಂದಿಗೆಗಳಲ್ಲಿ ಚಂದನಮಿಶ್ರಿತ ನೀರನ್ನೆತ್ತಿಕೊಂಡು ಸರಿಯಾದ ಸಮಯಕ್ಕೆ ಅಲ್ಲಿಗೆ ಬಂದರು.॥8॥
ಮೂಲಮ್ - 9
ಮಂಗಲಾಲಂಭನೀಯಾನಿ ಪ್ರಾಶನೀಯಾನ್ಯುಪಸ್ಕರಾನ್ ।
ಉಪನಿನ್ಯುಸ್ತಥಾಪುಣ್ಯಾಃ ಕುಮಾರೀಬಹುಲಾಃ ಸ್ತ್ರಿಯಃ ॥
ಅನುವಾದ
ಪವಿತ್ರ ಆಚಾರ-ವಿಚಾರವುಳ್ಳ ಕುಮಾರಿ ಕನ್ಯೆಯರೇ ಹೆಚ್ಚಾಗಿದ್ದ ಸ್ತ್ರೀಯರು ಮಂಗಳಾರ್ಥವಾಗಿ ಸ್ಪರ್ಶಿಸಬೇಕಾದ ಗೋವು, ಕುಡಿಯಲು ಯೋಗ್ಯವಾದ ಗಂಗಾಜಲ, ದರ್ಪಣ, ಆಭೂಷಣಗಳು, ವಸ್ತ್ರ ಮೊದಲಾದ ಉಪಕರಣಗಳನ್ನು ತೆಗೆದುಕೊಂಡು ಬಂದರು.॥9॥
ಮೂಲಮ್ - 10
ಸರ್ವಲಕ್ಷಣಸಂಪನ್ನಂ ಸರ್ವಂ ವಿಧಿವದರ್ಚಿತಮ್ ।
ಸರ್ವಂ ಸುಗುಣಲಕ್ಷ್ಮೀವತ್ ತದಭೂದಾಭಿಹಾರಿಕಮ್ ॥
ಅನುವಾದ
ಪ್ರಾತಃಕಾಲದಲ್ಲಿ ರಾಜರ ಮಂಗಲಾರ್ಥವಾಗಿ ತರುವ ವಸ್ತುಗಳನ್ನು ಆಭಿಹಾರಿಕವೆಂದು ಹೇಳುತ್ತಾರೆ. ಅಲ್ಲಿಗೆ ತಂದಿರುವ ಎಲ್ಲ ಆಭಿಹಾರಿಕ ಸಾಮಗ್ರಿಗಳು ಶುಭಲಕ್ಷಣ ಸಂಪನ್ನ, ವಿಧಿಗನುಸಾರವಾಗಿ, ಆದರ ಮತ್ತು ಪ್ರಶಂಸೆಗೆ ಯೋಗ್ಯ ಉತ್ತಮ ಗುಣಗಳಿಂದ ಯುಕ್ತ ಹಾಗೂ ಶೋಭಾಯಮಾನವಾಗಿದ್ದವು.॥10॥
ಮೂಲಮ್ - 11
ತತಃ ಸೂರ್ಯೋದಯಂ ಯಾವತ್ಸರ್ವಂ ಪರಿಸಮುತ್ಸುಕಮ್ ।
ತಸ್ಥಾವನುಪಸಂಪ್ರಾಪ್ತಂ ಕಿಂಸ್ವಿದಿತ್ಯುಪಶಂಕಿತಮ್ ॥
ಅನುವಾದ
ಸೂರ್ಯೋದಯವಾಗುವವರೆಗೆ ರಾಜನ ಸೇವೆಗಾಗಿ ಉತ್ಸುಕರಾದ ಪರಿಜನವೆಲ್ಲವೂ ಅಲ್ಲಿಗೆ ಬಂದು ನಿಂತಿತ್ತು. ಆ ಸಮಯಕ್ಕೆ ರಾಜನು ಹೊರಗೆ ಬರದಿದ್ದಾಗ ಮಹಾರಾಜರು ಬಾರದಿರುವ ಕಾರಣವಾದರೂ ಏನಿರಬಹುದು ಎಂಬ ಆಶಂಕೆ ಎಲ್ಲರ ಮನಸ್ಸಿನಲ್ಲಿ ಉಂಟಾಯಿತು.॥11॥
ಮೂಲಮ್ - 12
ಅಥ ಯಾಃ ಕೋಸಲೇಂದ್ರಸ್ಯ ಶಯನಂ ಪ್ರತ್ಯನಂತರಾಃ ।
ತಾಃ ಸ್ತ್ರೀಯಸ್ತು ಸಮಾಗಮ್ಯ ಭರ್ತಾರಂ ಪ್ರತ್ಯಬೋಧಯನ್ ॥
ಅನುವಾದ
ಅನಂತರ ಕೋಸಲ ನರೇಶ ದಶರಥನ ಸಮೀಪದಲ್ಲಿರುವ ಪತ್ನೀಯರು ಅವನ ಹಾಸಿಗೆಯ ಬಳಿಗೆ ಹೋಗಿ ತಮ್ಮ ಸ್ವಾಮಿಯನ್ನು ಎಚ್ಚರಗೊಳಿಸತೊಡಗಿದರು.॥12॥
ಮೂಲಮ್ - 13
ಅಥಾಪ್ಯುಚಿತವೃತ್ತಾಸ್ತಾ ವಿನಯೇನ ನಯೇನ ಚ ।
ನಹ್ಯಸ್ಯ ಶಯನಂ ಸ್ಪೃಷ್ಟ್ವಾ ಕಿಂಚಿದಪ್ಯುಪಲೇಭಿರೇ ॥
ಅನುವಾದ
ಅವರು ಅವನನ್ನು ಸ್ಪರ್ಶಿಸಲು ಯೋಗ್ಯರಾಗಿದ್ದರು; ಆದ್ದರಿಂದ ವಿನೀತಭಾವದಿಂದ ಯುಕ್ತಿಯುಕ್ತವಾಗಿ ಅವರು ಅವನ ಶಯ್ಯೆಯನ್ನು ಸ್ಪರ್ಶಿಸಿದರು. ಸ್ಪರ್ಶಿಸಿದಾಗ ಅವನಲ್ಲಿ ಜೀವದ ಯಾವ ಜಿಹ್ನೆಯು ಕಂಡುಬಂದಿಲ್ಲ.॥13॥
ಮೂಲಮ್ - 14
ತಾಃ ಸ್ತ್ರಿಯಃ ಸ್ವಪ್ನಶೀಲಜ್ಞಾಶ್ಚೇಷ್ಟಾಂ ಸಂಚಲನಾದಿಷು ।
ತಾ ವೇಪಥುಪರೀತಾಶ್ಚ ರಾಜ್ಞಃ ಪ್ರಾಣೇಷುಶಂಕಿತಾಃ ॥
ಅನುವಾದ
ಮಲಗಿರುವ ಪುರುಷನ ಸ್ಥಿತಿಯನ್ನು ಆ ಸ್ತ್ರೀಯರು ಚೆನ್ನಾಗಿ ಅರಿತಿದ್ದರು. ಆದ್ದರಿಂದ ಅವರು ಹೃದಯದ ನಾಡಿಬಡಿತವನ್ನು ಪರೀಕ್ಷಿಸಿದರು, ಆದರೆ ಯಾವ ಮಿಡಿತವೂ ಕಾಣದಿದ್ದಾಗ ಅವರು ನಡುಗಿ ಹೋದರು. ರಾಜನ ಪ್ರಾಣಗಳು ಹೊರಟುಹೋಗಿರುವ ಆಶಂಕೆ ಅವರ ಮನಸ್ಸಿನಲ್ಲಿ ಮೂಡಿತು.॥14॥
ಮೂಲಮ್ - 15
ಪ್ರತಿಸ್ರೋತಸ್ತೃಣಾಗ್ರಾಣಾಂ ಸದೃಶಂ ಸಂಚಕಾಶಿರೇ ।
ಅಥ ಸಂದೇಹಮಾನಾನಾಂ ಸ್ತ್ರೀಣಾಂ ದೃಷ್ಟ್ವಾಚ ಪಾರ್ಥಿವಮ್ ।
ಯತ್ತದಾಶಂಕಿತಂ ಪಾಪಂ ತದಾ ಜಜ್ಞೇ ವಿನಿಶ್ಚಯಃ ॥
ಅನುವಾದ
ಜಲಪ್ರವಾಹದ ಎದುರಿಗೆ ಸಿಕ್ಕಿದ ಹುಲ್ಲಿನ ತುದಿ ಅಲ್ಲಾಡುವಂತೆ ಅವರು ನಡುಗತೊಡಗಿದರು. ಸಂಶಯದಲ್ಲಿ ಬಿದ್ದ ಆ ಸ್ತ್ರೀಯರು ರಾಜನ ಕಡೆಗೆ ನೋಡಿ ಅವನ ಮೃತ್ಯುವಿನ ವಿಷಯದಲ್ಲಿ ಉಂಟಾದ ಆಶಂಕೆಯು ಆಗ ನಿಜವಾಗಿ, ಮೃತ್ಯು ಆದುದನ್ನು ನಿಶ್ಚಯಿಸಿದರು.॥15॥
ಮೂಲಮ್ - 16
ಕೌಸಲ್ಯಾ ಚ ಸುಮಿತ್ರಾ ಚ ಪುತ್ರಶೋಕಪರಾಜಿತೇ ।
ಪ್ರಸುಪ್ತೇ ನ ಪ್ರಬುಧ್ಯೇತೇ ಯಥಾ ಕಾಲಸಮನ್ವಿತೇ ॥
ಅನುವಾದ
ಪುತ್ರಶೋಕದಿಂದ ಆಕ್ರಾಂತಳಾದ ಕೌಸಲ್ಯೆ ಮತ್ತು ಸುಮಿತ್ರೆಯರು ಆಗ ಸತ್ತ ಹಾಗೆ ನಿದ್ದೆಮಾಡುತ್ತಿದ್ದರು. ಅವರು ಇನ್ನೂ ಎಚ್ಚರಗೊಂಡಿರಲಿಲ್ಲ.॥16॥
ಮೂಲಮ್ - 17
ನಿಷ್ಪ್ರಭಾಸಾ ವಿವರ್ಣಾ ಚ ಸನ್ನಾ ಶೋಕೇನ ಸಂನತಾ ।
ನ ವ್ಯರಾಜತ ಕೌಸಲ್ಯಾ ತಾರೇವ ತಿಮಿರಾವೃತಾ ॥
ಅನುವಾದ
ಮಲಗಿದ್ದ ಕೌಸಲ್ಯೆಯು ಕಾಂತಿಹೀನಳಾಗಿದ್ದಳು. ಆಕೆಯ ಮೈಬಣ್ಣ ಬದಲಾಗಿತ್ತು. ಅವಳು ಶೋಕದಿಂದ ಪರಾಜಿತ ಹಾಗೂ ಪೀಡಿತಳಾಗಿ ಅಂಧಕಾರದಿಂದ ಆಚ್ಛಾದಿತವಾದ ತಾರೆಯಂತೆ ಶೋಭಿಸುತ್ತಿದ್ದಳು.॥17॥
ಮೂಲಮ್ - 18
ಕೌಸಲ್ಯಾನಂತರಂ ರಾಜ್ಞಃ ಸುಮಿತ್ರಾ ತದನಂತರಮ್ ।
ನ ಸ್ಮ ವಿಭ್ರಾಜತೇ ದೇವೀ ಶೋಕಾಶ್ರುಲುಲಿತಾನನಾ ॥
ಅನುವಾದ
ರಾಜನ ಬಳಿ ಕೌಸಲ್ಯೆ ಇದ್ದಳು ಮತ್ತು ಕೌಸಲ್ಯೆಯ ಬಳಿ ಸುಮಿತ್ರೆ ಇದ್ದಳು. ಅವರಿಬ್ಬರೂ ನಿದ್ರಾಮಗ್ನರಾಗಿದ್ದ ಕಾರಣ ಶೋಭಾಹೀನರಾಗಿ ಕಾಣುತ್ತಿದ್ದರು. ಅವರಿಬ್ಬರ ಮುಖದಲ್ಲಿಯೂ ಶೋಕಾಶ್ರುಗಳು ಹರಡಿಕೊಂಡಿದ್ದವು.॥18॥
ಮೂಲಮ್ - 19
ತೇ ಚ ದೃಷ್ಟ್ವಾ ತದಾ ಸುಪ್ತೇ ಉಭೇ ದೇವ್ಯೌ ಚ ತಂ ನೃಪಮ್ ।
ಸುಪ್ತಮೇವೋದ್ಗತಪ್ರಾಣಮಂತಃಪುರಮಮನ್ಯತ ॥
ಅನುವಾದ
ಆಗ ಆ ಇಬ್ಬರೂ ದೇವಿಯರು ನಿದ್ರಾಮಗ್ನರಾಗಿದ್ದುದನ್ನು ನೋಡಿ ಅಂತಃಪುರದ ಇತರ ಸ್ತ್ರೀಯರು ಮಲಗಿರುವಾಗಲೇ ಮಹಾರಾಜರ ಪ್ರಾಣಗಳು ಹೊರಟುಹೋಗಿರಬೇಕು ಎಂದು ತಿಳಿದರು.॥19॥
ಮೂಲಮ್ - 20
ತತಃ ಪ್ರಚುಕ್ರುಶುರ್ದೀನಾಃ ಸಸ್ವರಂ ತಾವರಾಂಗನಾ ।
ಕರೇಣೇವ ಇವಾರಣ್ಯೇ ಸ್ಥಾನಪ್ರಚ್ಯುತಯೂಥಪಾಃ ॥
ಅನುವಾದ
ಮತ್ತೆ ಕಾಡಿನಲ್ಲಿ ಯೂಥಪತಿ ಗಜರಾಜನು ತನ್ನ ವಾಸಸ್ಥಾನದಿಂದ ಬೇರೆಡೆಗೆ ಹೋದಾಗ ಗುಂಪಿನ ಹೆಣ್ಣಾನೆಗಳು ಕರುಣ ಚೀತ್ಕಾರ ಮಾಡುವಂತೆ ಆ ಅಂತಃಪುರದ ಸುಂದರ ರಾಣಿಯರು ಅತ್ಯಂತ ದುಃಖಿತರಾಗಿ ಗಟ್ಟಿಯಾಗಿ ಆರ್ತನಾದ ಮಾಡತೊಡಗಿದರು.॥20॥
ಮೂಲಮ್ - 21
ತಾಸಾಮಾಕ್ರಂದಶಬ್ದೇನ ಸಹಸೋದ್ಗತಚೇತನೇ ।
ಕೌಸಲ್ಯಾ ಚ ಸುಮಿತ್ರಾ ಚ ತ್ಯಕ್ತನಿದ್ರೇ ಬಭೂವತುಃ ॥
ಅನುವಾದ
ಅವರು ಅಳುವ ಸದ್ದಿನಿಂದ ಕೌಸಲ್ಯೆ ಮತ್ತು ಸುಮಿತ್ರೆಯರು ಎಚ್ಚರಗೊಂಡು ಇಬ್ಬರೂ ಸಟ್ಟನೆ ಎದ್ದುಬಿಟ್ಟರು.॥21॥
ಮೂಲಮ್ - 22
ಕೌಸಲ್ಯಾ ಚ ಸುಮಿತ್ರಾ ಚ ದೃಷ್ಟ್ವಾ ಸ್ಪೃಷ್ಟ್ವಾ ಚ ಪಾರ್ಥಿವಮ್ ।
ಹಾ ನಾಥೇತಿ ಪರಿಕ್ರುಶ್ಯ ಪೇತತುರ್ಧರಣೀತಲೇ ॥
ಅನುವಾದ
ಕೌಸಲ್ಯೆ ಮತ್ತು ಸುಮಿತ್ರೆಯರು ರಾಜನನ್ನು ನೋಡಿ, ಅವನ ಶರೀರವನ್ನು ಸ್ಪರ್ಶಿಸಿದರು ಹಾಗೂ ಹಾ ನಾಥ! ಎಂದು ಕೂಗುತ್ತಾ ಅವರಿಬ್ಬರೂ ರಾಣಿಯರು ನೆಲಕ್ಕೆ ಕುಸಿದುಬಿದ್ದರು.॥22॥
ಮೂಲಮ್ - 23
ಸಾ ಕೋಸಲೇಂದ್ರದುಹಿತಾ ಚೇಷ್ಟಮಾನಾ ಮಹೀತಲೇ ।
ನ ಭ್ರಾಜತೇ ರಜೋಧ್ವಸ್ತಾ ತಾರೇವ ಗಗನಾಚ್ಚ್ಯುತಾ ॥
ಅನುವಾದ
ಕೋಸಲ ರಾಜಕುಮಾರಿ ಕೌಸಲ್ಯೆಯು ನೆಲಕ್ಕೆ ಬಿದ್ದು ಹೊರಳಾಡತೊಡಗಿದರು. ಆಕೆಯ ಶರೀರವು ಧೂಳೀಧೂಸರಿತವಾಗಿ ಆಕಾಶದಿಂದ ಕಳಚಿ ಧೂಳಿನಲ್ಲಿ ಬಿದ್ದ ತಾರೆಯಂತೆ ಶೋಭಾಹೀನವಾಗಿ ಕಂಡು ಬರುತ್ತಿದ್ದಳು.॥23॥
ಮೂಲಮ್ - 24
ನೃಪೇ ಶಾಂತಗುಣೇ ಜಾತೇ ಕೌಸಲ್ಯಾಂ ಪತಿತಾಂ ಭುವಿ ।
ಅಪಶ್ಯಂಸ್ತಾಃ ಸ್ತ್ರಿಯಃ ಸರ್ವಾ ಹತಾಂ ನಾಗವಧೂಮಿವ ॥
ಅನುವಾದ
ದಶರಥನ ಶರೀರ ತಣ್ಣಗಾಗಿತ್ತು. ಹೀಗೆ ಅವನ ಜೀವ ಶಾಂತವಾದಾಗ ನೆಲದಲ್ಲಿ ನಿಶ್ಚೇಷ್ಟಿತಳಾಗಿ ಬಿದ್ದಿರುವ ಕೌಸಲ್ಯೆಯು ಸತ್ತುಬಿದ್ದಿರುವ ನಾಗಿಣಿಯಂತೆ ಅಂತಃಪುರದ ಸ್ತ್ರೀಯರಿಗೆ ಕಾಣಿಸುತ್ತಿದ್ದಳು.॥24॥
ಮೂಲಮ್ - 25
ತತಃ ಸರ್ವಾ ನರೇಂದ್ರಸ್ಯ ಕೈಕೇಯೀಪ್ರಮುಖಾಃ ಸ್ತ್ರಿಯಃ ।
ರುದತ್ಯಃ ಶೋಕಸಂತಪ್ತಾ ನಿಪೇತುರ್ಗತಚೇತನಾಃ ॥
ಅನುವಾದ
ಬಳಿಕ ಬಂದಿರುವ ಕೈಕೇಯಿಯೇ ಮೊದಲಾದ ಮಹಾರಾಜರ ಪತ್ನಿಯರು ಶೋಕದಿಂದ ಸಂತಪ್ತರಾಗಿ ಅಳತೊಡಗಿದರು ಹಾಗೂ ನಿಶ್ಚೇಷ್ಟಿತರಾಗಿ ಬಿದ್ದುಬಿಟ್ಟರು.॥25॥
ಮೂಲಮ್ - 26
ತಾಭಿಃ ಸ ಬಲವಾನ್ನಾದಃ ಕ್ರೋಶಂತೀಭಿರನುದ್ರುತಃ ।
ಯೇನ ಸ್ಫೀತೀಕೃತೋ ಭೂಯಸ್ತದ್ಗೃಹಂ ಸಮನಾದಯತ್ ॥
ಅನುವಾದ
ಗೋಳಾಡುತ್ತಿದ್ದ ಆ ರಾಣಿಯರು ಅಲ್ಲಿ ಮೊದಲಿನಿಂದ ಆಗುತ್ತಿದ್ದ ಪ್ರಬಲ ಆರ್ತನಾದವನ್ನು ಇನ್ನೂ ಹೆಚ್ಚಾಗಿಸಿದರು. ಆ ಭಾರೀ ಆರ್ತನಾದವು ಅರಮನೆಯಲ್ಲೆಲ್ಲ ಪ್ರತಿಧ್ವನಿಸಿತು.॥26॥
ಮೂಲಮ್ - 27
ತತ್ ಪರಿತ್ರಸ್ತಸಂಭ್ರಾಂತಪರ್ಯುತ್ಸುಕಜನಾಕುಲಮ್ ।
ಸರ್ವತಸ್ತುಮುಲಾಕ್ರಂದಂ ಪರಿತಾಪಾರ್ತಬಾಂಧವಮ್ ॥
ಮೂಲಮ್ - 28
ಸದ್ಯೋನಿಪತಿತಾನಂದಂ ದೀನಂ ವಿಕ್ಲವದರ್ಶನಮ್ ।
ಬಭೂವ ನರದೇವಸ್ಯ ಸದ್ಮ ದಿಷ್ಟಾಂತಮೀಯುಷಃ ॥
ಅನುವಾದ
ಕಾಲವಶನಾದ ದಶರಥನ ಆ ಅರಮನೆಯು ಹೆದರಿದ, ಗಾಬರಿಗೊಂಡ ಹಾಗೂ ಅತ್ಯಂತ ಉತ್ಸುಕರಾದ ಜನರಿಂದ ತುಂಬಿಹೋಗಿತ್ತು. ಎಲ್ಲೆಡೆ ಅಳುವ ಭಯಂಕರ ಶಬ್ದ ಕೇಳಿ ಬರುತ್ತಿತ್ತು. ಅಲ್ಲಿ ಸೇರಿದ ರಾಜನ ಎಲ್ಲ ಬಂಧು-ಬಾಂಧವರು ಶೋಕ-ತಾಪದಿಂದ ಪೀಡಿತರಾಗಿದ್ದರು. ಆ ಭವನವೆಲ್ಲ ಆನಂದಶೂನ್ಯವಾಗಿ ದೀನ-ದುಃಖಿ ಹಾಗೂ ವ್ಯಾಕುಲವಾದಂತೆ ಕಾಣುತ್ತಿತ್ತು.॥27-28॥
ಮೂಲಮ್ - 29
ಅತೀತಮಾಜ್ಞಾಯ ತು ಪಾರ್ಥಿವರ್ಷಭಂ
ಯಶಸ್ವಿನಂ ತಂ ಪರಿವಾರ್ಯ ಪತ್ನಯಃ ।
ಭೃಶಂ ರುದತ್ಯಃ ಕರುಣಂ ಸದುಃಖಿತಾಃ
ಪ್ರಗೃಹ್ಯ ಬಾಹೂ ವ್ಯಲಪನ್ನನಾಥವತ್ ॥
ಅನುವಾದ
ಆ ಯಶಸ್ವೀ ಭೂಪಾಲಶಿರೋಮಣಿ ದಿವಂಗತವಾದುದನ್ನು ತಿಳಿದು ಅವನ ಪತ್ನಿಯರೆಲ್ಲರೂ ಅವನನ್ನು ಸುತ್ತುವರೆದು ಅತ್ಯಂತ ದುಃಖಿತರಾಗಿ ಜೋರಾಗಿ ಅಳತೊಡಗಿದರು. ಎದೆ ಬಡಿದುಕೊಂಡು ಅನಾಥರಂತೆ ವಿಲಾಪ ಮಾಡುತ್ತಿದ್ದರು.॥29॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಅರವತ್ತೈದನೆಯ ಸರ್ಗ ಪೂರ್ಣವಾಯಿತು ॥65॥