०६४ दशरथमृतिः

वाचनम्
ಭಾಗಸೂಚನಾ

ದಶರಥನು ಕೌಸಲ್ಯೆಗೆ ಋಷಿಕುಮಾರನ ವಧೆಯಿಂದ ಅವನ ವೃದ್ಧರಾದ ತಂದೆ-ತಾಯಿಯರಿಗೆ ಉಂಟಾದ ದುಃಖವನ್ನು ಅವರಿತ್ತ ಶಾಪವನ್ನು ವಿವರಿಸಿ ಹೇಳಿದುದು, ಕೌಸಲ್ಯೆಯ ಸಮೀಪದಲ್ಲಿ ವಿಲಪಿಸುತ್ತಲೇ ಇದ್ದು ಅರ್ಧರಾತ್ರಿಯ ಸಮಯದಲ್ಲಿ ಅವಸಾನ ಹೊಂದಿದುದು

ಮೂಲಮ್ - 1

ವಧಮಪ್ರತಿರೂಪಂ ತು ಮಹರ್ಷೇಸ್ತಸ್ಯ ರಾಘವಃ ।
ವಿಲಪನ್ನೇವ ಧರ್ಮಾತ್ಮಾ ಕೌಸಲ್ಯಾಮಿದಮಬ್ರವೀತ್ ॥

ಅನುವಾದ

ಧರ್ಮಾತ್ಮನಾದ ದಶರಥನು ಆ ಮಹರ್ಷಿಯ ಅನುಚಿತ ವಧೆಯನ್ನು ನೆನೆದು, ತನ್ನ ಪುತ್ರರಿಗಾಗಿ ವಿಲಾಪಿಸುತ್ತಾ ರಾಣೀ ಕೌಸಲ್ಯೆಗೆ ಪುನಃ ಹೇಳತೊಡಗಿದನು.॥1॥

ಮೂಲಮ್ - 2

ತದಜ್ಞಾನಾನ್ಮಹತ್ಪಾಪಂ ಕೃತ್ವಾ ಸಂಕುಲಿತೇಂದ್ರಿಯಃ ।
ಏಕಸ್ತ್ವಚಿಂತಯಂ ಬುದ್ಧ್ಯಾ ಕಥಂ ನು ಸುಕೃತಂ ಭವೇತ್ ॥

ಅನುವಾದ

ದೇವಿ! ತಿಳಿಯದೇ ಮಾಡಿದ ಈ ಮಹಾಪಾಪದಿಂದ ನನ್ನ ಎಲ್ಲ ಇಂದ್ರಿಯಗಳು ವ್ಯಾಕುಲಗೊಂಡಿದ್ದವು. ನಾನು ಒಬ್ಬನೇ ಈಗ ಯಾವ ಉಪಾಯದಿಂದ ನನ್ನ ಶ್ರೇಯಸ್ಸು ಆಗಬಹುದು ಎಂದು ಯೋಚಿಸತೊಡಗಿದೆ.॥2॥

ಮೂಲಮ್ - 3

ತತಸ್ತಂ ಘಟಮಾದಾಯಪೂರ್ಣಂ ಪರಮವಾರಿಣಾ ।
ಆಶ್ರಮಂ ತಮಹಂ ಪ್ರಾಪ್ಯಯಥಾಖ್ಯಾತಪಥಂ ಗತಃ ॥

ಅನುವಾದ

ಅನಂತರ ಆ ಬಿಂದಿಗೆಯಲ್ಲಿ ಸರಯೂವಿನ ಉತ್ತಮ ನೀರು ತುಂಬಿ, ಅದನ್ನೆತ್ತೆಕೊಂಡು ಮುನಿಕುಮಾರ ತಿಳಿಸಿದ ದಾರಿಯಿಂದ ಅವನ ಆಶ್ರಮಕ್ಕೆ ಹೋದೆ.॥3॥

ಮೂಲಮ್ - 4

ತತ್ರಾಹಂ ದುರ್ಬಲಾವಂಧೌ ವೃದ್ಧಾವಪರಿಣಾಯಕೌ ।
ಅಪಶ್ಯಂ ತಸ್ಯ ಪಿತರೌ ಲೂನಪಕ್ಷಾಮಿವ ದ್ವಿಜೌ ॥

ಅನುವಾದ

ಅಲ್ಲಿಗೆ ತಲುಪಿ ದುರ್ಬಲರೂ, ಕುರುಡರೂ, ಮುದುಕರೂ ಆದ, ಬೇರೆ ಯಾರೂ ಸಹಾಯಕರಿಲ್ಲದ, ರೆಕ್ಕೆ ತುಂಡಾದ ಪಕ್ಷಿಗಳಂತೆ ಇರುವ ಅವನ ತಂದೆ-ತಾಯಿಯರನ್ನು ನೋಡಿದೆ.॥4॥

ಮೂಲಮ್ - 5

ತನ್ನಿಮಿತ್ತಾಭಿರಾಸೀನೌ ಕಥಾಭಿರಪರಿಶ್ರಮೌ ।
ತಾಮಾಶಾಂ ಮತ್ಕೃತೇ ಹೀನಾವುಪಾಸೀನಾವನಾಥವತ್ ॥

ಅನುವಾದ

ಅವರು ಮಗನ ಕುರಿತು ಮಾತನಾಡುತ್ತಾ ಅವನು ಬರುವ ದಾರಿಯನ್ನೇ ನೋಡುತ್ತಾ ಕುಳಿತಿದ್ದರು. ಆ ಮಾತುಕತೆಯಿಂದ ಅವರಿಗೆ ಯಾವುದೇ ಬಳಲಿಕೆ ಆಗುತ್ತಿರಲಿಲ್ಲ. ನನ್ನಿಂದಾಗಿ ಅವರ ಆಸೆ ಮಣ್ಣುಗೂಡಿದ್ದರೂ ಅವರು ಅವನ ಭರವಸೆಯಿಂದ ಕುಳಿತಿದ್ದರು. ಈಗ ಅವರಿಬ್ಬರೂ ಸರ್ವಥಾ ಅನಾಥರಂತೆ ಆಗಿದ್ದರು.॥5॥

ಮೂಲಮ್ - 6

ಶೋಕೋಪಹತಚಿತ್ತಶ್ಚ ಭಯಸಂತ್ರಸ್ತಚೇತನಃ ।
ತಚ್ಛಾಶ್ರಮಪದಂ ಗತ್ವಾ ಭೂಯಃ ಶೋಕಮಹಂ ಗತಃ ॥

ಅನುವಾದ

ನಾನು ಶೋಕದಿಂದ ಮೊದಲೇ ಗಾಬರಿಗೊಂಡಿದ್ದೆ. ಭಯದಿಂದ ಎಚ್ಚರತಪ್ಪಿದವನಂತೆ ಆಗಿದ್ದೆ. ಮುನಿಯ ಆಶ್ರಮಕ್ಕೆ ಹೋಗಿ ನನ್ನ ಆ ಶೋಕವು ಇನ್ನೂ ಹೆಚ್ಚಾಯಿತು.॥6॥

ಮೂಲಮ್ - 7

ಪದಶಬ್ದಂ ತು ಮೇ ಶ್ರುತ್ವಾ ಮುನಿರ್ವಾಕ್ಯಮಭಾಷತ ।
ಕಿಂ ಚಿರಾಯಸಿ ಮೇ ಪುತ್ರ ಪಾನೀಯಂ ಕ್ಷಿಪ್ರಮಾನಯ ॥

ಅನುವಾದ

ನನ್ನ ಕಾಲಿನ ಸಪ್ಪಳ ಕೇಳಿ ಆ ಮುನಿಯು - ‘ಮಗು! ಏಕೆ ತಡ ಮಾಡುತ್ತಿರುವೆ? ಬೇಗ ನೀರನ್ನು ಕೊಡು’ ಎಂದು ನುಡಿದನು.॥7॥

ಮೂಲಮ್ - 8

ಯನ್ನಿಮಿತ್ತಮಿದಂ ತಾತ ಸಲಿಲೇ ಕ್ರೀಡಿತಂ ತ್ವಯಾ ।
ಉತ್ಕಂಠಿತಾ ತೇ ಮಾತೇಯಂ ಪ್ರವಿಶಕ್ಷಿಪ್ರಮಾಶ್ರಮಮ್ ॥

ಅನುವಾದ

ಅಪ್ಪಾ! ಯಾಕೆ ನೀನು ಇಷ್ಟೊತ್ತು ನೀರಾಟ ಮಾಡಿದೆ? ನೀರಿಗಾಗಿ ನಿನ್ನ ತಾಯಿಯು ಉತ್ಕಂಠಿತಳಾಗಿದ್ದಾಳೆ; ಆದ್ದರಿಂದ ಬೇಗನೇ ಆಶ್ರಮದೊಳಗೆ ಬಾ.॥8॥

ಮೂಲಮ್ - 9

ಯದ್ ವ್ಯಲೀಕಂ ಕೃತಂ ಪುತ್ರ ಮಾತ್ರಾ ತೇ ಯದಿ ವಾ ಮಯಾ ।
ನ ತನ್ಮನಸಿ ಕರ್ತವ್ಯಂ ತ್ವಯಾ ತಾತ ತಪಸ್ವಿನಾ ॥

ಅನುವಾದ

ಅಯ್ಯಾ! ಮಗು! ನಿನ್ನ ತಾಯಿ ಅಥವಾ ನಾನು ಏನಾದರೂ ಅಪ್ರಿಯಕಾರ್ಯ ಮಾಡಿದ್ದರೆ ಅದನ್ನು ನೀನು ಮನಸ್ಸಿಗೆ ಹಚ್ಚಿಕೊಳ್ಳಬಾರದು; ಏಕೆಂದರೆ ನೀನು ತಪಸ್ವಿಯಾಗಿರುವೆ.॥9॥

ಮೂಲಮ್ - 10

ತ್ವಂ ಗತಿಸ್ತ್ವಗತೀನಾಂ ಚ ಚಕ್ಷುಸ್ತ್ವಂ ಹೀನಚಕ್ಷುಷಾಮ್ ।
ಸಮಾಸಕ್ತಾಸ್ತ್ವಯಿ ಪ್ರಾಣಾಃ ಕಥಂ ತ್ವಂ ನಾಭಿಭಾಷಸೇ ॥

ಅನುವಾದ

ನಾವು ಅಸಹಾಯಕರಾಗಿದ್ದೇವೆ, ನೀನೇ ನಮಗೆ ಆಸರೆಯಾಗಿರುವೆ. ಕುರುಡರಾದ ನಮಗೆ ನೀನೇ ಕಣ್ಣಾಗಿರುವೆ. ನಮ್ಮ ಪ್ರಾಣಗಳು ನಿನ್ನಲ್ಲೇ ಸಿಕ್ಕಿಕೊಂಡಿವೆ. ನೀನು ಏಕೆ ಮಾತನಾಡುವುದಿಲ್ಲ.॥10॥

ಮೂಲಮ್ - 11

ಮುನಿಮವ್ಯಕ್ತಯಾ ವಾಚಾತಮಹಂ ಸಜ್ಜಮಾನಯಾ ।
ಹೀನವ್ಯಂಜನಯಾ ಪ್ರೇಕ್ಷ್ಯ ಭೀತಚಿತ್ತ ಇವಾಬ್ರುವಮ್ ॥

ಅನುವಾದ

ಮುನಿಯನ್ನು ನೋಡುತ್ತಲೇ ನನ್ನ ಮನಸ್ಸಿನಲ್ಲಿ ಭಯ ಆವರಿಸಿತು. ನನ್ನ ಮಾತು ತೊದಲಿತು. ಎಷ್ಟೋ ಅಕ್ಷರಗಳನ್ನು ಉಚ್ಚರಿಸಲೇ ಆಗಲಿಲ್ಲ. ಹೀಗೆ ಅಸ್ಪಷ್ಟವಾಣಿಯಿಂದ ಮಾತನಾಡಲು ನಾನು ಪ್ರಯತ್ನಿಸಿದೆ.॥11॥

ಮೂಲಮ್ - 12

ಮನಸಃ ಕರ್ಮ ಚೇಷ್ಟಾಭಿರಭಿಸಂಸ್ತಭ್ಯ ವಾಗ್ಬಲಮ್ ।
ಆಚಚಕ್ಷೇ ತ್ವಹಂ ತಸ್ಮೈ ಪುತ್ರವ್ಯಸನಜಂ ಭಯಮ್ ॥

ಅನುವಾದ

ಮಾನಸಿಕ ಭಯವನ್ನು ಹೊರಗಿನ ಚಟುವಟಿಕೆಗಳಿಂದ ಅದುಮಿಟ್ಟು ನಾನು ಮಾತನಾಡಲು ಸಮರ್ಥನಾಗಿ ಮುನಿಯ ಮೇಲೆ ಬಂದೆರಗಿದ ಪುತ್ರನ ಮರಣಸಂಕಟವನ್ನು ಪ್ರಕಟಿಸುತ್ತಾ ನುಡಿದೆ.॥12॥

ಮೂಲಮ್ - 13

ಕ್ಷತ್ರಿಯೋಽಹಂ ದಶರಥೋ ನಾಹಂ ಪುತ್ರೋ ಮಹಾತ್ಮನಃ ।
ಸಜ್ಜನಾವಮತಂ ದುಃಖಮಿದಂ ಪ್ರಾಪ್ತಂ ಸ್ವಕರ್ಮಜಮ್ ॥

ಅನುವಾದ

ಮಹಾತ್ಮನೇ! ನಾನು ನಿಮ್ಮ ಪುತ್ರನಲ್ಲ, ದಶರಥನೆಂಬ ಒಬ್ಬ ಕ್ಷತ್ರಿಯನಾಗಿದ್ದೇನೆ. ಸತ್ಪುರುಷರು ಸದಾ ನಿಂದಿಸುತ್ತಿರುವ ಇಂತಹ ದುಃಖವನ್ನು ನಾನು ನನ್ನ ಕರ್ಮವಶದಿಂದ ಪಡೆದಿರುವೆನು.॥13॥

ಮೂಲಮ್ - 14

ಭಗವಂಶ್ಚಾಪಹಸ್ತೋಽಹಂ ಸರಯೂ ತೀರಮಾಗತಃ ।
ಜಿಘಾಂಸುಃ ಶ್ವಾಪದಂ ಕಿಂಚಿನ್ನಿಪಾನೇ ವಾಗತಂ ಗಜಮ್ ॥

ಅನುವಾದ

ಪೂಜ್ಯರೇ! ನಾನು ಧನುರ್ಬಾಣವನ್ನೆತ್ತಿಕೊಂಡು ಸರಯೂ ತೀರಕ್ಕೆ ಬಂದಿದ್ದೆ. ನಾನು ಬಂದ ಉದ್ದೇಶ ಯಾವುದಾದರೂ ಕಾಡಿನ ಹಿಂಸಕ ಪಶುಗಳು ಅಥವಾ ಆನೆಗಳು ನೀರು ಕುಡಿಯಲು ಬಂದರೆ ಅವನ್ನು ವಧಿಸುವುದೆಂದಿತ್ತು.॥14॥

ಮೂಲಮ್ - 15

ತತಃ ಶ್ರುತೋ ಮಯಾ ಶಬ್ದೋ ಜಲೇ ಕುಂಭಸ್ಯ ಪೂರ್ಯತಃ ।
ದ್ವಿಪೋಽಯಮಿತಿ ಮತ್ವಾಹಂ ಬಾಣೇನಾಭಿಹತೋ ಮಯಾ ॥

ಅನುವಾದ

ಸ್ವಲ್ಪ ಸಮಯದಲ್ಲಿ ನನಗೆ ನೀರಿನಲ್ಲಿ ಬಿಂದಿಗೆ ತುಂಬುವ ಶಬ್ದ ಕೇಳಿಸಿತು. ಆನೆಯು ಬಂದು ನೀರು ಕುಡಿಯುತ್ತಿದೆ ಎಂದು ತಿಳಿದು ನಾನು ಅದರ ಮೇಲೆ ಬಾಣಪ್ರಯೋಗ ಮಾಡಿದೆ.॥15॥

ಮೂಲಮ್ - 16

ಗತ್ವಾ ತಸ್ಯಾಸ್ತತಸ್ತೀರಮಪಶ್ಯಮಿಷುಣಾ ಹೃದಿ ।
ವಿನಿರ್ಭಿನ್ನಂ ಗತಪ್ರಾಣಂ ಶಯಾನಂ ಭುವಿ ತಾಪಸಮ್ ॥

ಅನುವಾದ

ಮತ್ತೆ ಸರಯೂ ತೀರಕ್ಕೆ ಹೋಗಿ ನೋಡಿದರೆ ನನ್ನ ಬಾಣವು ಒಬ್ಬ ತಪಸ್ವಿಯ ಎದೆಗೆ ನಾಟಿತ್ತು. ಅವನು ಮೃತ ಪ್ರಾಯನಾಗಿ ಧರೆಯಲ್ಲಿ ಬಿದ್ದಿದ್ದನು.॥16॥

ಮೂಲಮ್ - 17

ತತಸ್ತಸ್ಯೈವ ವಚನಾದುಪೇತ್ಯ ಪರಿತಪ್ಯತಃ ।
ಸ ಮಯಾ ಸಹಸಾ ಬಾಣ ಉದ್ಧೃತೋಮರ್ಮತಸ್ತದಾ ॥

ಅನುವಾದ

ಆ ಬಾಣದಿಂದ ಅವನಿಗೆ ಬಹಳ ಯಾತನೆ ಆಗುತ್ತಿತ್ತು, ಆದ್ದರಿಂದ ಅವನು ಹೇಳಿದಂತೆ ನಾನು ಕೂಡಲೇ ಆ ಬಾಣವನ್ನು ಅವನ ಮರ್ಮಸ್ಥಾನದಿಂದ ಕಿತ್ತುಬಿಟ್ಟೆನು.॥17॥

ಮೂಲಮ್ - 18

ಸ ಚೋದ್ಧೃತೇನ ಬಾಣೇನ ಸಹಸಾ ಸ್ವರ್ಗಮಾಸ್ಥಿತಃ ।
ಭಗವಂತಾವುಭೌ ಶೋಚನ್ನಂಧಾವಿತಿ ವಿಲಪ್ಯ ಚ ॥

ಅನುವಾದ

ಬಾಣ ಕಿತ್ತಾಕ್ಷಣ ಅವನು ಸ್ವರ್ಗಕ್ಕೆ ತೆರಳಿದನು. ಸಾಯುವಾಗ ಅವನು ಪೂಜನೀಯರೂ, ಕುರುಡರೂ ತಂದೆ-ತಾಯಿಯರೂ ಆದ ನಿಮ್ಮಿಬ್ಬರ ಕುರಿತು ಬಹಳ ಶೋಕಿಸಿ, ವಿಲಪಿಸಿದನು.॥18॥

ಮೂಲಮ್ - 19

ಅಜ್ಞಾನಾದ್ಭವತಃ ಪುತ್ರಃ ಸಹಸಾಭಿಹತೋ ಮಯಾ ।
ಶೇಷಮೇವಂ ಗತೇ ಯತ್ ಸ್ಯಾತ್ ತತ್ ಪ್ರಸೀದತು ಮೇ ಮುನಿಃ ॥

ಅನುವಾದ

ಈ ಪ್ರಕಾರ ತಿಳಿಯದೆಯೇ ನನ್ನ ಕೈಯಿಂದ ನಿಮ್ಮ ಪುತ್ರನ ವಧೆಯಾಯಿತು. ಇಂತಹ ಸ್ಥಿತಿಯಲ್ಲಿ ನನಗೆ ಶಾಪ ಕೊಡಲು ಅಥವಾ ಅನುಗ್ರಹ ಮಾಡಲು ಮಹರ್ಷಿಗಳಾದ ನೀವು ಪ್ರಸನ್ನರಾಗಿರಿ.॥19॥

ಮೂಲಮ್ - 20

ಸ ತಚ್ಛ್ರುತ್ವಾ ವಚಃ ಕ್ರೂರಂ ಮಯಾ ತದಘಶಂಸಿನಾ ।
ನಾಶಕತ್ತೀವ್ರಮಾಯಾಸಂ ಸ ಕರ್ತುಂ ಭಗವಾನೃಷಿಃ ॥

ಅನುವಾದ

ನಾನು ಸ್ವತಃ ನನ್ನ ಪಾಪವನ್ನು ಪ್ರಕಟ ಪಡಿಸಿದ್ದೆ, ನನ್ನ ಕ್ರೂರತೆಯಿಂದ ತುಂಬಿದ ಮಾತನ್ನು ಕೇಳಿಯೂ ಆ ಪೂಜ್ಯಪಾದ ಮಹರ್ಷಿಗಳು ನನಗೆ ಘೋರ ದಂಡವನ್ನು, ಭಸ್ಮವಾಗಿ ಹೋಗುವ ಶಾಪ ಕೊಡಲಿಲ್ಲ.॥20॥

ಮೂಲಮ್ - 21

ಸ ಬಾಷ್ಪಪೂರ್ಣವದನೋ ನಿಃಶ್ವಸನ್ ಶೋಕಮೂರ್ಚ್ಛಿತಃ ।
ಮಾಮುವಾಚ ಮಹಾತೇಜಾಃ ಕೃತಾಂಜಲಿಮುಪಸ್ಥಿತಮ್ ॥

ಅನುವಾದ

ಅವರ ಕಣ್ಣುಗಳಿಂದ ಕಣ್ಣೀರಧಾರೆ ಹರಿಯುತ್ತಿತ್ತು. ಅವರು ಶೋಕದಿಂದ ಮೂರ್ಛಿತರಂತಾಗಿ ದೀರ್ಘವಾದ ನಿಟ್ಟಿಸುರು ಬಿಡುತ್ತಿದ್ದರು. ನಾನು ಕೈಮುಗಿದು ಅವರ ಮುಂದೆ ನಿಂತಿದ್ದೆ. ಆಗ ಆ ಮಹಾತೇಜಸ್ವೀ ಮುನಿಯು ಹೇಳಿದನು .॥21॥

ಮೂಲಮ್ - 22

ಯದ್ಯೇತದಶುಭಂ ಕರ್ಮ ನ ಸ್ಮ ಮೇ ಕಥಯೇಃ ಸ್ವಯಮ್ ।
ಫಲೇನ್ಮೂರ್ಧಾ ಸ್ಮ ತೇ ರಾಜನ್ಸದ್ಯಃ ಶತಸಹಸ್ರಧಾ ॥

ಅನುವಾದ

ರಾಜನೇ! ನಿನ್ನ ಈ ಪಾಪಕರ್ಮವನ್ನು ನೀನು ಸ್ವತಃ ಇಲ್ಲಿಗೆ ಬಂದು ಹೇಳಿರದಿದ್ದರೆ ಶೀಘ್ರವಾಗಿ ನಿನ್ನ ತಲೆಯು ನೂರಾರು ಸಾವಿರ ಹೋಳು ಆಗಿಹೋಗುತ್ತಿತ್ತು.॥22॥

ಮೂಲಮ್ - 23

ಕ್ಷತ್ರಿಯೇಣವಧೋ ರಾಜನ್ ವಾನಪ್ರಸ್ಥೇ ವಿಶೇಷತಃ ।
ಜ್ಞಾನಪೂರ್ವಂ ಕೃತಃ ಸ್ಥಾನಾಚ್ಚಾವಯೇದಪಿ ವಜ್ರಿಣಮ್ ॥

ಅನುವಾದ

ನರೇಶ್ವರ! ಕ್ಷತ್ರಿಯನು ತಿಳಿದು-ತಿಳಿದು ವಿಶೇಷವಾಗಿ ಯಾವುದೇ ವಾನಪ್ರಸ್ಥಿಯನ್ನು ವಧಿಸಿದರೆ ಆ ಪಾಪವು ವಜ್ರಧಾರೀ ಇಂದ್ರನೇ ಆಗಿದ್ದರೂ ಅವನನ್ನು ಸ್ಥಾನಭ್ರಷ್ಟವಾಗಿಸಿ ಬಿಡುತ್ತದೆ.॥23॥

ಮೂಲಮ್ - 24

ಸಪ್ತಧಾ ತುಭವೇನ್ಮೂರ್ಧಾ ಮುನೌ ತಪಸಿ ತಿಷ್ಠತಿ ।
ಜ್ಞಾನಾದ್ವಿಸೃಜತಃ ಶಸ್ತ್ರಂ ತಾದೃಶೇ ಬ್ರಹ್ಮವಾದಿನಿ ॥

ಅನುವಾದ

ತಪಸ್ಸಿನಲ್ಲಿ ತೊಡಗಿದ ಬ್ರಹ್ಮವಾದೀ ಮುನಿಯ ಮೇಲೆ ತಿಳಿದೂ-ತಿಳಿದೂ ಶಸ್ತ್ರವನ್ನು ಪ್ರಯೋಗಿಸಿದ ಪುರುಷನ ತಲೆಯು ಏಳು ಹೋಳಾಗಿ ಹೋಗುತ್ತದೆ.॥24॥

ಮೂಲಮ್ - 25

ಅಜ್ಞಾನಾದ್ಧಿ ಕೃತಂ ಯಸ್ಮಾದಿದಂ ತೇ ತೇನ ಜೀವಸೇ ।
ಅಪಿ ಹ್ಯಕುಶಲಂ ನ ಸ್ಯಾದ್ ರಾಘವಾಣಾಂ ಕುತೋ ಭವಾನ್ ॥

ಅನುವಾದ

ನೀನು ತಿಳಿಯದೆ ಈ ಪಾಪವನ್ನು ಮಾಡಿರುವೆ, ಆದ್ದರಿಂದ ಇಷ್ಟರವರೆಗೆ ಬದುಕಿ ಇರುವೆ. ತಿಳಿದೂ-ತಿಳಿದೂ ಮಾಡಿದ್ದರೆ ಸಮಸ್ತ ರಘುವಂಶೀಯರ ಕುಲವೇ ನಾಶವಾಗುತ್ತಿತ್ತು. ನಿನ್ನೊಬ್ಬನ ಮಾತೇನು.॥25॥

ಮೂಲಮ್ - 26

ನಯ ನೌ ನೃಪ ತಂ ದೇಶಮಿತಿ ಮಾಂ ಚಾಭ್ಯಭಾಷತ ।
ಅದ್ಯ ತಂ ದ್ರಷ್ಟುಮಿಚ್ಛಾವಃ ಪುತ್ರಂ ಪಶ್ಚಿಮದರ್ಶನಮ್ ॥

ಅನುವಾದ

ಅವರು ನನ್ನಲ್ಲಿ ಇದನ್ನು ಹೇಳಿದನು - ನರೇಶ್ವರನೇ! ನೀನು ನಮ್ಮಿಬ್ಬರನ್ನು ನಮ್ಮ ಪುತ್ರನು ಬಿದ್ದಲ್ಲಿಗೆ ಕರೆದುಕೊಂಡು ಹೋಗು. ಈಗ ನಾವು ಅವನನ್ನು ನೋಡಲು ಬಯಸುತ್ತಿರುವೆವು. ಇದು ನಮಗೆ ಅವನ ಅಂತಿಮ ದರ್ಶನವಾಗಬಹುದು.॥26॥

ಮೂಲಮ್ - 27

ರುಧಿರೇಣಾವಸಿಕ್ತಾಂಗಂ ಪ್ರಕೀರ್ಣಾಜಿನವಾಸಸಮ್ ।
ಶಯಾನಂ ಭುವಿ ನಿಃಸಂಜ್ಞಂ ಧರ್ಮರಾಜವಶಂ ಗತಮ್ ॥

ಮೂಲಮ್ - 28

ಅಥಾಹಮೇಕಸ್ತಂ ದೇಶಂ ನೀತ್ವಾ ತೌ ಭೃಶದುಃಖಿತೌ ।
ಅಸ್ಪರ್ಶಯಮಹಂ ಪುತ್ರಂ ತಂ ಮುನಿಂ ಸಹ ಭಾರ್ಯಯಾ ॥

ಅನುವಾದ

ಆಗ ನಾನು ಒಬ್ಬನೇ ಅತ್ಯಂತ ದುಃಖದಲ್ಲಿ ಮುಳುಗಿರುವ ಆ ದಂಪತಿಗಳನ್ನು ಅವರ ಪುತ್ರನು ಕಾಲವಶನಾಗಿ ಭೂಮಿಯ ಮೇಲೆ ನಿಶ್ಚೇಷ್ಟಿತನಾಗಿ ಬಿದ್ದ ಸ್ಥಾನಕ್ಕೆ ಕರೆದುಕೊಂಡು ಹೋದೆ. ಅವನ ಶರೀರವೆಲ್ಲ ರಕ್ತದಿಂದ ತೊಯ್ದು ಹೋಗಿತ್ತು, ಮೃಗ ಚರ್ಮ, ವಲ್ಕಲಗಳು ಅಸ್ತವ್ಯಸ್ತವಾಗಿದ್ದವು. ನಾನು ಪತ್ನೀಸಹಿತ ಆ ಮುನಿಯ ಕೈಯಿಂದ ಪುತ್ರನ ಶರೀರವನ್ನು ಸ್ಪರ್ಶಿಸಿದೆ.॥27-28॥

ಮೂಲಮ್ - 29

ತೌ ಪುತ್ರಮಾತ್ಮನಃ ಸ್ಪೃಷ್ಟ್ವಾತಮಾಸಾದ್ಯ ತಪಸ್ವಿನೌ ।
ನಿಪೇತತುಃ ಶರೀರೇಽಸ್ಯ ಪಿತಾ ಚೈನಮುವಾ ಚಹ ॥

ಅನುವಾದ

ಅವರಿಬ್ಬರೂ ತಪಸ್ವಿಗಳು ತಮ್ಮ ಪುತ್ರನನ್ನು ಮುಟ್ಟಿ ಇನ್ನೂ ಅವನ ಬಳಿಗೆ ಹೋಗಿ ಅವನ ಶರೀರದ ಮೇಲೆ ಕುಸಿದು ಬಿದ್ದರು. ಮತ್ತೆ ಪುತ್ರನನ್ನು ಸಂಬೋಧಿಸಿ ತಂದೆಯು ಈ ಪ್ರಕಾರ ಹೇಳಿದನು.॥29॥

ಮೂಲಮ್ - 30

ನಾಭಿವಾದಯಸೇ ಮಾದ್ಯ ನ ಚ ಮಾಮಭಿಭಾಷಸೇ ।
ಕಿಂ ಚ ಶೇಷೇತು ಭೂಮೌ ತ್ವಂ ವತ್ಸ ಕಿಂಕುಪಿತೋ ಹ್ಯಸಿ ॥

ಅನುವಾದ

ಮಗು! ಇಂದು ನೀನು ನಮಗೆ ನಮಸ್ಕರಿಸುತ್ತಿಲ್ಲ, ನಮ್ಮೊಂದಿಗೆ ಮಾತನಾಡುವುದೂ ಇಲ್ಲ. ನೀನು ನೆಲದಲ್ಲಿ ಏಕೆ ಮಲಗಿರುವೆ? ಏಕೆ ನಮ್ಮ ಮೇಲೆ ಕೋಪಗೊಂಡಿರುವೆಯಾ.॥30॥

ಮೂಲಮ್ - 31

ನನ್ವಹಂ ತೇಽಪ್ರಿಯಃ ಪುತ್ರ ಮಾತರಂ ಪಶ್ಯ ಧಾರ್ಮಿಕೀಮ್ ।
ಕಿಂ ಚ ನಾಲಿಂಗಸೇ ಪುತ್ರ ಸುಕುಮಾರ ವಚೋ ವದ ॥

ಅನುವಾದ

ಮಗನೇ! ನಾನು ನಿನಗೆ ಪ್ರಿಯವಲ್ಲದಿದ್ದರೆ ನೀನು ನಿನ್ನ ಈ ಧರ್ಮಾತ್ಮಳಾದ ತಾಯಿಯ ಕಡೆಗಾದರೂ ನೋಡು. ನೀನು ಈಕೆಯನ್ನು ಏಕೆ ಅಪ್ಪಿಕೊಳ್ಳುವುದಿಲ್ಲ? ವತ್ಸ! ಏನಾದರೂ ಮಾತನಾಡಪ್ಪ.॥31॥

ಮೂಲಮ್ - 32

ಕಸ್ಯ ವಾ ಪರರಾತ್ರೇಹಂ ಶ್ರೋಷ್ಯಾಮಿ ಹೃದಯಂಗಮಮ್ ।
ಅಧೀಯಾನಸ್ಯ ಮಧುರಂ ಶಾಸ್ತ್ರಂ ವಾನ್ಯದ್ ವಿಶೇಷತಃ ॥

ಅನುವಾದ

ಇನ್ನು ಮುಂದೆ ರಾತ್ರಿಯಲ್ಲಿ ಮಧುರಸ್ವರದಿಂದ ಶಾಸ್ತ್ರ-ಪುರಾಣಾದಿ ಇತರ ಯಾವುದೇ ಗ್ರಂಥಗಳ ಸ್ವಾಧ್ಯಾಯ ಮಾಡುತ್ತಾ ಇರುವ ಮನೋರಮ ಶಾಸ್ತ್ರ ಚರ್ಚೆಯನ್ನು ಯಾರ ಬಾಯಿಂದ ನಾನು ಕೇಳುವುದು.॥32॥

ಮೂಲಮ್ - 33

ಕೋ ಮಾಂ ಸಂಧ್ಯಾಮುಪಾಸ್ಯೈವ ಸ್ನಾತ್ವಾ ಹುತಹುತಾಶನಃ ।
ಶ್ಲಾಘಯಿಷ್ಯತ್ಯುಪಾಸೀನಃ ಪುತ್ರಶೋಕಭಯಾರ್ದಿತಮ್ ॥

ಅನುವಾದ

ಸ್ನಾನ-ಸಂಧ್ಯೋಪಾಸನೆ ಹಾಗೂ ಅಗ್ನಿಹೋತ್ರ ಮಾಡಿ ನನ್ನ ಬಳಿಯಲ್ಲಿ ಕುಳಿತು ಪುತ್ರಶೋಕದ ಭಯದಿಂದ ಪೀಡಿತನಾದ, ಮುದುಕನಾದ ನನಗೆ ಸಾಂತ್ವನ ಹೇಳುತ್ತಾ, ನನ್ನ ಸೇವೆ ಯಾರು ಮಾಡುವನು.॥33॥

ಮೂಲಮ್ - 34

ಕಂದಮೂಲಲಂ ಹೃತ್ವಾ ಯೋ ಮಾಂ ಪ್ರಿಯಮಿವಾತಿಥಿಮ್ ।
ಭೋಜಯಿಷ್ಯತ್ಯಕರ್ಮಣ್ಯಮ ಪ್ರಗ್ರಹಮನಾಯಕಮ್ ॥

ಅನುವಾದ

ಕಂದ-ಮೂಲಗಳನ್ನು ತಂದು ಅಕರ್ಮಣ್ಯನೂ, ಅನ್ನ ಸಂಗ್ರಹದಿಂದ ರಹಿತನೂ, ಅನಾಥನೂ ಆದ ನನಗೆ ಪ್ರಿಯ ಅತಿಥಿಯಂತೆ ಇನ್ನು ಯಾರು ಭೋಜನ ಮಾಡಿಸುವನು.॥34॥

ಮೂಲಮ್ - 35

ಇಮಾಮಂಧಾಂ ಚ ವೃದ್ಧಾಂ ಚ ಮಾತರಂ ತೇ ತಪಸ್ವಿನೀಮ್ ।
ಕಥಂ ಪುತ್ರ ಭರಿಷ್ಯಾಮಿ ಕೃಪಣಾಂ ಪುತ್ರಗರ್ಧಿನೀಮ್ ॥

ಅನುವಾದ

ಮಗು! ನಿನ್ನ ಈ ತಪಸ್ವಿನೀ ತಾಯಿಯು ಕುರುಡಳೂ, ದೀನಳೂ, ಮುದುಕಿಯೂ ಆಗಿ ಪುತ್ರನಿಗಾಗಿ ಸದಾ ಉತ್ಕಂಠಿತವಾಗಿರುವಳು. ನಾನೂ ಕುರುಡನಾದ್ದರಿಂದ ಈಕೆಯನ್ನು ಹೇಗೆ ಸಾಕಲಿ.॥35॥

ಮೂಲಮ್ - 36

ತಿಷ್ಠ ಮಾ ಮಾ ಗಮಃ ಪುತ್ರ ಯಮಸ್ಯ ಸದನಂ ಪ್ರತಿ ।
ಶ್ವೋ ಮಯಾ ಸಹ ಗಂತಾಸಿ ಜನನ್ಯಾ ಚ ಸಮೇಧಿತಃ ॥

ಅನುವಾದ

ಮಗನೇ! ನಿಲ್ಲು, ಇಂದು ನೀನು ಯಮನ ಆಲಯಕ್ಕೆ ಹೋಗಬೇಡ. ನಾಳೆ ನನ್ನೊಂದಿಗೆ ಮತ್ತು ನಿನ್ನ ತಾಯಿಯೊಂದಿಗೆ ಹೋಗುವಿಯಂತೆ.॥36॥

ಮೂಲಮ್ - 37

ಉಭಾವಪಿ ಚ ಶೋಕಾರ್ತಾವನಾಥೌ ಕೃಪಣೌ ವನೇ ।
ಕ್ಷಿಪ್ರಮೇವ ಗಮಿಷ್ಯಾವಸ್ತ್ವಯಾ ಹೀನೌ ಯಮಕ್ಷಯಮ್ ॥

ಅನುವಾದ

ನಾವಿಬ್ಬರೂ ಶೋಕದಿಂದ ಆರ್ತರೂ, ಅನಾಥರೂ, ದೀನರೂ ಆಗಿದ್ದೇವೆ. ನೀನಿಲ್ಲದಿರುವಾಗ ನಾವು ಬೇಗನೇ ಯಮಲೋಕದ ದಾರಿ ಹಿಡಿಯುವೆವು.॥37॥

ಮೂಲಮ್ - 38

ತತೋ ವೈವಸ್ವತಂ ದೃಷ್ಟ್ವಾ ತಂ ಪ್ರವಕ್ಷ್ಯಾಮಿಭಾರತೀಮ್ ।
ಕ್ಷಮತಾಂ ಧರ್ಮರಾಜೋ ಮೇ ಬಿಭೃಯಾತ್ ಪಿತರಾವಯಮ್ ॥

ಅನುವಾದ

ಅನಂತರ ಸೂರ್ಯಪುತ್ರ ಯಮರಾಜನ ದರ್ಶನ ಮಾಡಿ ಅವನಲ್ಲಿ ನಾನು-ಧರ್ಮರಾಜನೇ! ನನ್ನ ಅಪರಾಧವನ್ನು ಕ್ಷಮಿಸಿ ನನ್ನ ಪುತ್ರನನ್ನು ಬಿಟ್ಟುಬಿಡು. ಅದರಿಂದ ಇವನು ತನ್ನ ತಂದೆ-ತಾಯಿಯನ್ನು ಸಾಕಬಲ್ಲನು, ಎಂದು ಹೇಳುವೆನು.॥38॥

ಮೂಲಮ್ - 39

ದಾತುಮರ್ಹತಿ ಧರ್ಮಾತ್ಮಾ ಲೋಕಪಾಲೋ ಮಹಾಯಶಾಃ ।
ಈದೃಶಸ್ಯ ಮಮಾಕ್ಷಯ್ಯಾಮೇಕಾಮಭಯದಕ್ಷಿಣಾಮ್ ॥

ಅನುವಾದ

ಅವನು ಧರ್ಮಾತ್ಮಾ ಆಗಿದ್ದಾನೆ, ಮಹಾ ಯಶಸ್ವೀ ಲೋಕಪಾಲಕನಾಗಿದ್ದಾನೆ. ನನ್ನಂತಹ ಅನಾಥನಿಗೆ ಒಮ್ಮೆ ಅಭಯದಾನ ಕೊಡಬಲ್ಲನು.॥39॥

ಮೂಲಮ್ - 40

ಅಪಾಪೋಽಸಿ ಯಥಾ ಪುತ್ರ ನಿಹತಃ ಪಾಪಕರ್ಮಣಾ ।
ತೇನ ಸತ್ಯೇನ ಗಚ್ಛಾಶು ಯೇ ಲೋಕಾಸ್ತ್ವಸ್ತ್ರಯೋಧಿನಾಮ್ ॥

ಮೂಲಮ್ - 41

ಯಾಂ ಹಿ ಶೂರಾ ಗತಿಂ ಯಾಂತಿ ಸಂಗ್ರಾಮೇಷ್ವನಿವರ್ತಿನಃ ।
ಹತಾಸ್ತ್ವಭಿಮುಖಾಃ ಪುತ್ರ ಗತಿಂ ತಾಂ ಪರಮಾಂ ವ್ರಜ ॥

ಅನುವಾದ

ಮಗು! ನೀನು ನಿಷ್ಪಾಪನಾಗಿರುವೆ, ಆದರೆ ಓರ್ವ ಪಾಪಕರ್ಮಾ ಕ್ಷತ್ರಿಯ ನಿನ್ನನ್ನು ವಧಿಸಿಬಿಟ್ಟನು, ಇದರಿಂದ ನನ್ನ ಸತ್ಯದ ಪ್ರಭಾವದಿಂದ ಅಸ್ತ್ರಯೋಧೀ ಶೂರವೀರರಿಗೆ ಸಿಗುವ ಲೋಕಕ್ಕೆ ನೀನೂ ಹೋಗು. ವತ್ಸ! ಯುದ್ಧದಲ್ಲಿ ಬೆನ್ನು ತೋರದೆ ಶೂರವೀರರು ಯುದ್ಧದಲ್ಲಿ ಮಡಿದು ಪಡೆಯುವ ಆ ಉತ್ತಮಗತಿಯೇ ನಿನಗೆ ಸಿಗಲಿ.॥40-41॥

ಮೂಲಮ್ - 42

ಯಾಂ ಗತಿಂ ಸಗರಃ ಶೈಬ್ಯೋ ದಿಲೀಪೋ ಜನಮೇಜಯಃ ।
ನಹುಷೋ ಧುಂಧುಮಾರಶ್ಚ ಪ್ರಾಪ್ತಾಸ್ತಾಂ ಗಚ್ಛ ಪುತ್ರಕ ॥

ಅನುವಾದ

ವತ್ಸನೇ! ರಾಜಾ ಸಗರ, ಶೈಬ್ಯ, ದಿಲೀಪ, ಜನಮೇಜಯ, ನಹುಷ ಮತ್ತು ಧುಂಧುಮಾರ ಇವರಿಗೆ ಪ್ರಾಪ್ತವಾದ ಉತ್ತಮಗತಿಯೇ ನಿನಗೂ ಸಿಗಲೀ.॥42॥

ಮೂಲಮ್ - 43

ಯಾ ಗತಿಃ ಸರ್ವಭೂತಾನಾಂ ಸ್ವಾಧ್ಯಾಯಾತ್ತಪಸಶ್ಚ ಯಾ ।
ಭೂಮಿದಸ್ಯಾಹಿತಾಗ್ನೇಶ್ಚ ಏಕಪತ್ನೀವ್ರತಸ್ಯ ಚ ॥

ಮೂಲಮ್ - 44

ಗೋಸಹಸ್ರಪ್ರದಾತೃಣಾಂ ಗುರುಸೇವಾಭೃತಾಮಪಿ ।
ದೇಹನ್ಯಾಸಕೃತಾಂ ಯಾ ಚ ತಾಂ ಗತಿಂ ಗಚ್ಛ ಪುತ್ರಕ ॥

ಅನುವಾದ

ಸ್ವಾಧ್ಯಾಯ ಮತ್ತು ತಪಸ್ಸಿನಿಂದ ಸಮಸ್ತ ಪ್ರಾಣಿಗಳ ಅಂತರ್ಯಾಮಿ ಪರಬ್ರಹ್ಮನ ಪ್ರಾಪ್ತಿಯಾಗುವಂತೆಯೇ ನಿನಗೂ ಪ್ರಾಪ್ತವಾಗಲಿ. ಮಗನೇ! ಭೂದಾನ ಮಾಡಿದವನಿಗೆ, ಅಗ್ನಿಹೋತ್ರಿಗೆ, ಏಕಪತ್ನೀ ವ್ರತಸ್ಥನಿಗೆ, ಒಂದು ಸಾವಿರ ಗೋವುಗಳನ್ನು ದಾನ ಮಾಡಿದವನಿಗೆ, ಗುರು ಸೇವೆ ಮಾಡಿದವರಿಗೆ, ಮಹಾ ಪ್ರಸ್ಥಾನಾದಿಗಳಿಂದ ದೇಹತ್ಯಾಗ ಮಾಡುವವರಿಗೆ ಸಿಗುವ ಗತಿಯೇ ನಿನಗೆ ದೊರಕಲೀ.॥43-44॥

ಮೂಲಮ್ - 45

ನಹಿ ತ್ವಸ್ಮಿನ್ ಕುಲೇ ಜಾತೋ ಗಚ್ಛತ್ಯಕುಶಲಾಂ ಗತಿಮ್ ।
ಸ ತು ಯಾಸ್ಯತಿ ಯೇನ ತ್ವಂ ನಿಹತೋ ಮಮ ಬಾಂಧವಃ ॥

ಅನುವಾದ

ನಮ್ಮಂತಹ ತಪಸ್ವಿಗಳ ಕುಲದಲ್ಲಿ ಹುಟ್ಟಿರುವ ಯಾವ ಪುರುಷನೂ ಕೆಟ್ಟ ಗತಿಯನ್ನು ಪಡೆಯುವುದಿಲ್ಲ. ಕೆಟ್ಟ ಗತಿಯು ನನ್ನ ಬಂಧು ರೂಪೀ ನಿನ್ನನ್ನು ಅಕಾರಣ ಕೊಂದವನಿಗೆ ಲಭಿಸುವುದು.॥45॥

ಮೂಲಮ್ - 46

ಏವಂ ಸ ಕೃಪಣಂ ತತ್ರ ಪರ್ಯದೇವಯತಾಸಕೃತ್ ।
ತತೋಽಸ್ಮೈ ಕರ್ತುಮುದಕಂ ಪ್ರವೃತ್ತಃ ಸಹ ಭಾರ್ಯಯಾ ॥

ಅನುವಾದ

ಹೀಗೆ ದೀನಭಾವದಿಂದ ಪದೇ-ಪದೇ ವಿಲಾಪಿಸುತ್ತಾ ತನ್ನ ಪತ್ನಿಯೊಂದಿಗೆ ಅವರು ಪುತ್ರನಿಗೆ ಜಲಾಂಜಲಿ ಕೊಡುವ ಕಾರ್ಯದಲ್ಲಿ ಪ್ರವೃತ್ತರಾದರು.॥46॥

ಮೂಲಮ್ - 47

ಸ ತು ದಿವ್ಯೇನ ರೂಪೇಣ ಮುನಿಪುತ್ರಃ ಸ್ವಕರ್ಮಭಿಃ ।
ಸ್ವರ್ಗಮಧ್ಯಾರುಹತ್ಕ್ಷಿಪ್ರಂ ಶಕ್ರೇಣ ಸಹ ಧರ್ಮವಿತ್ ॥

ಅನುವಾದ

ಆಗಲೇ ಆ ಧರ್ಮಜ್ಞ ಮುನಿಕುಮಾರನು ತನ್ನ ಪುಣ್ಯಕರ್ಮಗಳ ಪ್ರಭಾವದಿಂದ ದಿವ್ಯರೂಪ ಧರಿಸಿ ಶೀಘ್ರವಾಗಿ ಇಂದ್ರನೊಡನೆ ಸ್ವರ್ಗಕ್ಕೆ ತೆರಳಿದನು.॥47॥

ಮೂಲಮ್ - 48

ಆಬಭಾಷೇ ಚ ತೌವೃದ್ಧೌ ಶಕ್ರೇಣ ಸಹ ತಾಪಸಃ ।
ಆಶ್ವಸ್ಯ ಚ ಮುಹೂರ್ತಂ ತು ಪಿತರಂ ವಾಕ್ಯಮಬ್ರವೀತ್ ॥

ಅನುವಾದ

ಇಂದ್ರಸಹಿತ ಆ ತಪಸ್ವಿಯು ತನ್ನ ವೃದ್ಧ ತಂದೆ-ತಾಯಿಯರಿಗೆ ಒಂದು ಮುಹೂರ್ತ ಆಶ್ವಾಸನೆಯನ್ನಿತ್ತು, ಮಾತುಕತೆಯಾಡಿದನು. ಮತ್ತೆ ಅವನು ತನ್ನ ತಂದೆಯ ಬಳಿ ಹೇಳಿದನು.॥48॥

ಮೂಲಮ್ - 49

ಸ್ಥಾನಮಸ್ಮಿ ಮಹತ್ ಪ್ರಾಪ್ತೋ ಭವತೋಃ ಪರಿಚಾರಣಾತ್ ।
ಭವಂತಾವಪಿ ಚ ಕ್ಷಿಪ್ರಂ ಮಮ ಮೂಲಮುಪೈಷ್ಯಥಃ ॥

ಅನುವಾದ

ನಿಮ್ಮಿಬ್ಬರ ಸೇವೆಯಿಂದ ಮಹಾನ್ ಸ್ಥಾನವನ್ನು ಪಡೆಯುತ್ತಿದ್ದೇನೆ. ಈಗ ನೀವೂ ಬೇಗನೇ ನನ್ನ ಬಳಿಗೆ ಬಂದು ಬಿಡಿರಿ.॥49॥

ಮೂಲಮ್ - 50

ಏವಮುಕ್ತ್ವಾತು ದಿವ್ಯೇನ ವಿಮಾನೇನ ವಪುಷ್ಮತಾ ।
ಆರುರೋಹ ದಿವಂ ಕ್ಷಿಪ್ರಂ ಮುನಿಪುತ್ರೋ ಜಿತೇಂದ್ರಿಯಃ ॥

ಅನುವಾದ

ಹೀಗೆ ಹೇಳಿ ಆ ಜಿತೇಂದ್ರಿಯ ಮುನಿಕುಮಾರನು ಸುಂದರ ದಿವ್ಯವಿಮಾನದಿಂದ ಶೀಘ್ರವಾಗಿ ದೇವಲೋಕಕ್ಕೆ ಹೊರಟು ಹೋದನು.॥50॥

ಮೂಲಮ್ - 51

ಸ ಕೃತ್ವಾಥೋದಕಂ ತೂರ್ಣಂ ತಾಪಸಃ ಸಹ ಭಾರ್ಯಯಾ ।
ಮಾಮುವಾಚ ಮಹಾತೇಜಾಃ ಕೃತಾಂಜಲಿಮುಪಸ್ಥಿತಮ್ ॥

ಅನುವಾದ

ಅನಂತರ ಪತ್ನೀಸಹಿತ ಆ ಮಹಾತೇಜಸ್ವೀ ತಪಸ್ವೀ ಮುನಿಯು ಕೂಡಲೇ ಪುತ್ರನಿಗೆ ಜಲಾಂಜಲಿಯನ್ನಿತ್ತು ಕೈಮುಗಿದು ನಿಂತುಕೊಂಡು ನನ್ನಲ್ಲಿ ಹೇಳಿದನು.॥51॥

ಮೂಲಮ್ - 52

ಅದ್ಯೈವ ಜಹಿ ಮಾಂ ರಾಜನ್ಮರಣೇ ನಾಸ್ತಿ ಮೇ ವ್ಯಥಾ ।
ಯಃ ಶರೇಣೈಕಪುತ್ರಂ ಮಾಂತ್ವಮಕಾರ್ಷೀರಪುತ್ರಕಮ್ ॥

ಅನುವಾದ

ರಾಜನೇ! ನೀನು ಇಂದೇ ನನ್ನನ್ನು ಕೊಂದುಬಿಡು. ಈಗ ಸಾಯಲು ನನಗೆ ಕಷ್ಟವಾಗಲಾರದು. ನನಗೆ ಇದ್ದ ಒಬ್ಬನೇ ಮಗನನ್ನು ನೀನು ತನ್ನ ಬಾಣಕ್ಕೆ ಗುರಿಯಾಗಿಸಿ ನನ್ನನ್ನು ಪುತ್ರಹೀನನನ್ನಾಗಿಸಿದೆ.॥52॥

ಮೂಲಮ್ - 53

ತ್ವಯಾಪಿ ಚ ಯದಜ್ಞಾನಾನ್ನಿಹತೋ ಮೇ ಸ ಬಾಲಕಃ ।
ತೇನ ತ್ವಾಮಪಿಶಪ್ಸ್ಯೇಽಹಂ ಸುದುಃಖಮತಿದಾರುಣಮ್ ॥

ಅನುವಾದ

ನೀನು ಅಜ್ಞಾನವಶ ನನ್ನ ಬಾಲಕನನ್ನು ಹತ್ಯೆ ಮಾಡಿರುವಿ, ಆದ್ದರಿಂದ ನಾನು ನಿನಗೆ ಅತ್ಯಂತ ಭಯಂಕರ ಹಾಗೂ ಹೆಚ್ಚು ದುಃಖ ಕೊಡುವ ಶಾಪವನ್ನು ಕೊಡುವೆನು.॥53॥

ಮೂಲಮ್ - 54

ಪುತ್ರವ್ಯಸನಜಂ ದುಃಖಂ ಯದೇತನ್ಮಮ ಸಾಂಪ್ರತಮ್ ।
ಏವಂ ತ್ವಂ ಪುತ್ರಶೋಕೇನ ರಾಜನ್ ಕಾಲಂ ಗಮಿಷ್ಯಸಿ ॥

ಅನುವಾದ

ರಾಜನೇ! ಈಗ ಪುತ್ರ ವಿಯೋಗದ ಕಷ್ಟ ನನಗೆ ಆದಂತೆಯೇ ನಿನಗೂ ಆಗಲಿ. ನೀನೂ ಕೂಡ ಪುತ್ರಶೋಕದಿಂದಲೇ ಕಾಲವಶನಾಗುವೆ.॥54॥

ಮೂಲಮ್ - 55

ಅಜ್ಞಾನಾತ್ತು ಹತೋ ಯಸ್ಮಾತ್ಕ್ಷತ್ರಿಯೇಣ ತ್ವಯಾ ಮುನಿಃ ।
ತಸ್ಮಾತ್ತ್ವಾಂ ನಾವಿಶತ್ಯಾಶು ಬ್ರಹ್ಮಹತ್ಯಾ ನರಾಧಿಪ ॥

ಮೂಲಮ್ - 56

ತ್ವಾಮಪ್ಯೇತಾದೃಶೋಭಾವಃ ಕ್ಷಿಪ್ರಮೇವ ಗಮಿಷ್ಯತಿ ।
ಜೀವಿತಾಂತಕರೋ ಘೋರೋ ದಾತಾರಮಿವ ದಕ್ಷಿಣಾಮ್ ॥

ಅನುವಾದ

ನರೇಶ್ವರನೇ! ಕ್ಷತ್ರಿಯನಾಗಿ ತಿಳಿಯದೆಯೇ ನೀನು ವೈಶ್ಯಮುನಿಯನ್ನು ವಧಿಸಿದ್ದೀಯೆ, ಅದಕ್ಕಾಗಿ ನಿನಗೆ ಬ್ರಹ್ಮಹತ್ಯೆಯ ಪಾಪ ತಗಲಲಾರದು, ಆದರೂ ಬೇಗನೇ ನಿನಗೂ ಕೂಡ ದಕ್ಷಿಣೆಯು ಹೇಗೆ ದಾತೃವಿಗೆ ಅನುಗುಣವಾದ ಕ್ಷಿಪ್ರಫಲವನ್ನು ಕೊಡುವಂತೆ ಇಂತಹ ಭಯಾನಕ ಮತ್ತು ಪ್ರಾಣವನ್ನೇ ತೊರೆಯುವ ಅವಸ್ಥೆ ಪ್ರಾಪ್ತವಾಗುವುದು.॥55-56॥

ಮೂಲಮ್ - 57

ಏವಂ ಶಾಪಂ ಮಯಿ ನ್ಯಸ್ಯವಿಲಪ್ಯ ಕರುಣಂ ಬಹು ।
ಚಿತಾಮಾರೋಪ್ಯ ದೇಹಂ ತನ್ಮಿಥುನಂ ಸ್ವರ್ಗಮಭ್ಯಯಾತ್ ॥

ಅನುವಾದ

ಈ ಪ್ರಕಾರ ನನಗೆ ಶಾಪಕೊಟ್ಟು ಅವರು ಬಹಳ ಹೊತ್ತು ಕರುಣಾಜನಕ ವಿಲಾಪ ಮಾಡುತ್ತಾ ಇದ್ದರು; ಮತ್ತೆ ಅವರಿಬ್ಬರೂ ಪತಿ-ಪತ್ನಿಯರು ತಮ್ಮ ಶರೀರಗಳನ್ನು ಉರಿಯುವ ಚಿತೆಗೆ ಅರ್ಪಿಸಿ ಸ್ವರ್ಗಕ್ಕೆ ತೆರಳಿದರು.॥57॥

ಮೂಲಮ್ - 58

ತದೇತಚ್ಚಿಂತಯಾನೇನ ಸ್ಮೃತಂ ಪಾಪಂ ಮಯಾ ಸ್ವಯಮ್ ।
ತದಾ ಬಾಲ್ಯಾತ್ ಕೃತಂ ದೇವಿ ಶಬ್ದವೇಧ್ಯನುಕರ್ಷಿಣಾ ॥

ಅನುವಾದ

ದೇವಿ! ಹೀಗೆ ಬಾಲಸ್ವಭಾವದಿಂದ ನಾನು ಮೊದಲು ಶಬ್ದವೇಧೀ ಬಾಣವನ್ನು ಹೂಡಿ, ಮತ್ತೆ ಆ ಮುನಿಯ ಶರೀರದಿಂದ ಬಾಣವನ್ನು ಕಿತ್ತು ಅವನ ವಧರೂಪೀ ಮಾಡಿದ ಪಾಪವೇ ಇಂದು ಈ ಪುತ್ರವಿಯೋಗದ ಚಿಂತೆಯಲ್ಲಿ ಬಿದ್ದಿರುವ ನನಗೆ ತಾನಾಗಿ ನೆನಪಾಯಿತು.॥58॥

ಮೂಲಮ್ - 59½

ತಸ್ಯಾಯಂ ಕರ್ಮಣೋ ದೇವಿ ವಿಪಾಕಃ ಸಮುಪಸ್ಥಿತಃ ।
ಅಪಥ್ಯೈಃ ಸಹ ಸಂಭುಕ್ತೇ ವ್ಯಾಧಿರನ್ನರಸೇ ಯಥಾ ॥
ತಸ್ಮಾನ್ಮಾಮಾಗತಂ ಭದ್ರೇ ತಸ್ಯೋದಾರಸ್ಯ ತದ್ವಚಃ ।

ಅನುವಾದ

ದೇವಿ! ಅಪಥ್ಯ ವಸ್ತುವಿನೊಂದಿಗೆ ಅನ್ನರಸವನ್ನು ತಿಂದಾಗ ಶರೀರದಲ್ಲಿ ರೋಗ ಉಂಟಾಗುವಂತೆಯೇ ಇದು ಆ ಪಾಪ ಕರ್ಮದ ಫಲ ಉಪಸ್ಥಿತವಾಗಿದೆ. ಆದ್ದರಿಂದ ಕಲ್ಯಾಣಿ! ಆ ಉದಾರ ಮಹಾತ್ಮರ ಶಾಪರೂಪೀ ವಚನವೇ ಈಗ ಫಲ ಕೊಡಲು ನನ್ನ ಬಳಿಗೆ ಬಂದಿದೆ.॥59½॥

ಮೂಲಮ್ - 60

ಇತ್ಯುಕ್ತ್ವಾ ಸ ರುದಂಸ್ತ್ರಸ್ತೋ ಭಾರ್ಯಾಮಾಹ ತುಭೂಮಿಪಃ ॥

ಮೂಲಮ್ - 61

ಯದಹಂ ಪುತ್ರಶೋಕೇನ ಸಂತ್ಯಜಿಷ್ಯಾಮಿ ಜೀವಿತಮ್ ।
ಚಕ್ಷುರ್ಭ್ಯಾಂ ತ್ವಾಂ ನ ಪಶ್ಯಾಮಿ ಕೌಸಲ್ಯೇ ತ್ವಂ ಹಿ ಮಾಂ ಸ್ಪೃಶ ॥

ಅನುವಾದ

ಹೀಗೆ ಹೇಳಿ ಆ ಭೂಪಾಲನು ಮೃತ್ಯುಭಯದಿಂದ ತ್ರಸ್ತನಾಗಿ ತನ್ನ ಪತ್ನಿಯಲ್ಲಿ ಅಳುತ್ತಾ ಹೇಳಿದನು - ಕೌಸಲ್ಯೆ! ಈಗ ನಾನು ಪುತ್ರಶೋಕದಿಂದ ನನ್ನ ಪ್ರಾಣಗಳನ್ನೇ ತ್ಯಜಿಸುತ್ತಿದ್ದೇನೆ. ಈಗ ನಾನು ನಿನ್ನನ್ನು ನೋಡಲಾಗುವುದಿಲ್ಲ. ನೀನು ನನ್ನನ್ನು ಸ್ಪರ್ಶಿಸು.॥60-61॥

ಮೂಲಮ್ - 62½

ಯಮಕ್ಷಯಮನುಪ್ರಾಪ್ತಾ ದ್ರಕ್ಷ್ಯಂತಿ ನಹಿ ಮಾನವಾಃ ।
ಯದಿ ಮಾಂ ಸಂಸ್ಪೃಶ್ರೇದ್ರಾಮಃ ಸಕೃದನ್ವಾರ ಭೇತ ವಾ ॥
ಧನಂ ವಾ ಯೌವರಾಜ್ಯಂ ವಾ ಜೀವೇಯಮಿತಿ ಮೇ ಮತಿಃ ।

ಅನುವಾದ

ಯಮಲೋಕಕ್ಕೆ ಹೋಗುವ (ಮರಣಾಸನ್ನ) ಮನುಷ್ಯನು ತನ್ನ ಬಾಂಧವರನ್ನು ನೋಡಲಾಗುವುದಿಲ್ಲ! ಶ್ರೀರಾಮನು ಬಂದು ಒಮ್ಮೆ ನನ್ನನ್ನು ಸ್ಪರ್ಶಿಸಿದರೆ ಅಥವಾ ಈ ಧನ ವೈಭವ ಮತ್ತು ಯುವರಾಜ ಪದವಿಯನ್ನು ಸ್ವೀಕರಿಸಿದರೆ ನಾನು ಬದುಕಿರಬಲ್ಲೆ ಎಂಬ ವಿಶ್ವಾಸ ನನಗಿದೆ.॥62½॥

ಮೂಲಮ್ - 63½

ನ ತನ್ಮೇ ಸದೃಶಂ ದೇವಿ ಯನ್ಮಯಾರಾಘವೇ ಕೃತಮ್ ॥

ಅನುವಾದ

ದೇವಿ! ನಾನು ಶ್ರೀರಾಮನೊಂದಿಗೆ ವರ್ತಿಸಿದುದು ನನಗೆ ಯೋಗ್ಯವಾಗಿರಲಿಲ್ಲ; ಆದರೂ ಶ್ರೀರಾಮನು ನನ್ನೊಂದಿಗೆ ಮಾಡಿದ ವ್ಯವಹಾರ ಅವನಿಗೆ ಯೋಗ್ಯವಾಗಿಯೇ ಇತ್ತು.॥63½॥

ಮೂಲಮ್ - 64½

ಸದೃಶಂ ತತ್ತು ತಸ್ಯೈವ ಯದನೇನ ಕೃತಂ ಮಯಿ ।
ದುರ್ವೃತ್ತಮಪಿ ಕಃ ಪುತ್ರಂ ತ್ಯಜೇದ್ಭುವಿ ವಿಚಕ್ಷಣಃ ॥

ಅನುವಾದ

ಬುದ್ಧಿವಂತನಾದವನು ಯಾರು ತಾನೇ ಈ ಭೂತಳದಲ್ಲಿ ತನ್ನ ಪುತ್ರನು ದುರಾಚಾರಿಯಾಗಿದ್ದರೂ ಪರಿತ್ಯಾಗ ಮಾಡಬಲ್ಲನು? (ತನ್ನ ಧರ್ಮಾತ್ಮಾ ಪುತ್ರನನ್ನು ತ್ಯಜಿಸಿದವನು ನಾನೊಬ್ಬನೇ ಇದ್ದೇನೆ.) ಮನೆಯಿಂದ ಹೊರ ಹಾಕಿದರೂ ತಂದೆಯನ್ನು ನಿಂದಿಸದೇ ಇರುವ ಪುತ್ರನು ಯಾರಿರಬಹುದು? (ಆದರೆ ಶ್ರೀರಾಮನು ಸುಮ್ಮನೇ ಹೊರಟುಹೋದನು. ಅವನು ನನ್ನ ವಿರುದ್ಧವಾಗಿ ಚಕಾರ ಎತ್ತಲಿಲ್ಲ.॥64½॥

ಮೂಲಮ್ - 65

ಕಶ್ಚ ಪ್ರವ್ರಾಜ್ಯಮಾನೋ ವಾ ನಾಸೂಯೇತ್ ಪಿತರಂ ಸುತಃ ।
ಚಕ್ಷುಷಾ ತ್ವಾಂ ನ ಪಶ್ಯಾಮಿ ಸ್ಮೃತಿರ್ಮಮ ವಿಲುಪ್ಯತೇ ॥

ಅನುವಾದ

ಕೌಸಲ್ಯೇ! ಈಗ ನಾನು ನಿನ್ನನ್ನು ನೋಡುತ್ತಿಲ್ಲ, ನೆನಪಿನ ಶಕ್ತಿಯೂ ಹೊರಟುಹೋಗುತ್ತಿದೆ. ನೋಡಿಲ್ಲಿ, ಈ ಯಮರಾಜನ ದೂತರು ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಲು ಅವಸರಪಡಿಸುತ್ತಿದ್ದಾರೆ.॥65॥

ಮೂಲಮ್ - 66

ದೂತಾ ವೈವಸ್ವತಸ್ಯೈತೇ ಕೌಸಲ್ಯೇ ತ್ವರಯಂತಿ ಮಾಮ್ ।
ಅತಸ್ತು ಕಿಂ ದುಃಖತರಂ ಯದಹಂ ಜೀವತಕ್ಷಯೇ ॥

ಅನುವಾದ

ನಾನು ಪ್ರಾಣಾಂತ್ಯದ ಸಮಯದಲ್ಲಿ ಸತ್ಯಪರಾಕ್ರಮಿ ಧರ್ಮಜ್ಞ ರಾಮನನ್ನು ದರ್ಶಿಸದೇ ಇರುವುದಕ್ಕಿಂತ ಮಿಗಿಲಾದ ದುಃಖ ನನಗೆ ಬೇರೆ ಏನಿರಬಹುದು.॥66॥

ಮೂಲಮ್ - 67

ನಹಿ ಪಶ್ಯಾಮಿ ಧರ್ಮಜ್ಞಂ ರಾಮಂ ಸತ್ಯಪರಾಕ್ರಮಮ್ ।
ತಸ್ಯಾದರ್ಶನಜಃ ಶೋಕಃ ಸುತಸ್ಯಾಪ್ರತಿಕರ್ಮಣಃ ॥

ಅನುವಾದ

ಜಗತ್ತಿನಲ್ಲಿ ಅವನಿಗೆ ಸಮಾನರಾದವರೂ ಯಾರೂ ಇಲ್ಲದ ಆ ಪ್ರಿಯಪುತ್ರ ಶ್ರೀರಾಮನನ್ನು ನೋಡದಿರುವ ಶೋಕವು ಉರಿಬಿಸಿಲು ಸ್ವಲ್ಪವಾದ ನೀರನ್ನು ಇಂಗಿಸುವಂತೆ ನನ್ನ ಪ್ರಾಣಗಳನ್ನು ಒಣಗಿಸಿಬಿಡುತ್ತಿದೆ.॥67॥

ಮೂಲಮ್ - 68

ಉಚ್ಛೋಷಯತಿ ವೈ ಪ್ರಾಣಾನ್ವಾರಿ ಸ್ತೋಕಮಿವಾತಪಃ ।
ನ ತೇ ಮನುಷ್ಯಾ ದೇವಾಸ್ತೇ ಯೇ ಚಾರುಶುಭಕುಂಡಲಮ್ ॥

ಅನುವಾದ

ತನ್ನ ಹದಿನೈದನೆಯ ವರ್ಷ ವನದಿಂದ ಮರಳಿದಾಗ ಶ್ರೀರಾಮನ ಸುಂದರ, ಮನೋಹರ, ಕುಂಡಲಗಳಿಂದ ಅಲಂಕೃತವಾದ ಮುಖವನ್ನು ನೋಡುವವರು ಮನುಷ್ಯರಲ್ಲ ದೇವತೆಗಳೇ ಆಗಿದ್ದಾರೆ.॥68॥

ಮೂಲಮ್ - 69

ಮುಖಂ ದ್ರಕ್ಷ್ಯಂತಿ ರಾಮಸ್ಯ ವರ್ಷೇ ಪಂಚದಶೇ ಪುನಃ ।
ಪದ್ಮಪತ್ರೇಕ್ಷಣಂ ಸುಭ್ರು ಸುದಂಷ್ಟ್ರಂ ಚಾರುನಾಸಿಕಮ್ ॥

ಅನುವಾದ

ಕಮಲದಂತೆ ಕಣ್ಣುಗಳುಳ್ಳ, ಸುಂದರ ಹುಬ್ಬು, ಬಿಳಿಯ ದಂತಪಂಕ್ತಿ ಮತ್ತು ಮನೋಹರ ಮೂಗಿನಿಂದ ಸುಶೋಭಿತ ಶ್ರೀರಾಮನ ಚಂದ್ರನಂತಿರುವ ಮುಖವನ್ನು ದರ್ಶಿಸುವವರೇ ಧನ್ಯರಾಗಿದ್ದಾರೆ.॥69॥

ಮೂಲಮ್ - 70

ಧನ್ಯಾ ದ್ರಕ್ಷ್ಯಂತಿ ರಾಮಸ್ಯ ತಾರಾಧಿಪಸಮಂ ಮುಖಮ್ ।
ಸದೃಶಂ ಶಾರದಸ್ಯೇಂದ್ರೋಃ ಫುಲ್ಲಸ್ಯ ಕಮಲಸ್ಯ ಚ ॥

ಮೂಲಮ್ - 71

ಸುಗಂಧಿ ಮಮ ರಾಮಸ್ಯ ಧನ್ಯಾ ದ್ರಕ್ಷಂತಿ ಯೇ ಮುಖಮ್ ।
ನಿವೃತ್ತವನವಾಸಂ ತಮಯೋಧ್ಯಾಂ ಪುನರಾಗತಮ್ ॥

ಅನುವಾದ

ನನ್ನ ಶ್ರೀರಾಮನ ಶರಚ್ಚಂದ್ರಸದೃಶ ಮನೋಹರ ಮತ್ತು ಪ್ರಫುಲ್ಲ ಕಮಲದಂತೆ ಸುವಾಸಿತ ಮುಖದ ದರ್ಶನ ಮಾಡುವವರೇ ಧನ್ಯರಾಗಿದ್ದಾರೆ. ಉಚ್ಚನಾದ ಶುಕ್ರಗ್ರಹದ ದರ್ಶನ ಮಾಡಿ ಜನರು ಸುಖಿಗಳಾಗುವಂತೆಯೇ ವನವಾಸದ ಅವಧಿ ಪೂರ್ಣಗೊಳಿಸಿ ಪುನಃ ಅಯೋಧ್ಯೆಗೆ ಮರಳಿ ಬಂದ ಶ್ರೀರಾಮನನ್ನು ನೋಡಿದವರೇ ಸುಖಿಗಳಾಗುವರು.॥70-71॥

ಮೂಲಮ್ - 72

ದ್ರಕ್ಷ್ಯಂತಿ ಸುಖಿನೋ ರಾಮಂ ಶುಕ್ರಂ ಮಾರ್ಗಗತಂ ಯಥಾ ।
ಕೌಸಲ್ಯೇ ಚಿತ್ತಮೋಹೇನ ಹೃದಯಂ ಸೀದತೇತರಾಮ್ ॥

ಅನುವಾದ

ಕೌಸಲ್ಯೇ! ನನ್ನ ಚಿತ್ತಕ್ಕೆ ಮೋಹ ಆವರಿಸಿದೆ, ಹೃದಯವು ಒಡೆದುಹೋಗುವಂತಿದೆ. ಇಂದ್ರಿಯಗಳೊಡನೆ ಸಂಯೋಗ ಉಂಟಾದರೂ ನನಗೆ ಶಬ್ದ, ಸ್ಪರ್ಶ, ರಸ ಮೊದಲಾದ ವಿಷಯಗಳ ಅನುಭವವಾಗುವುದಿಲ್ಲ.॥72॥

ಮೂಲಮ್ - 73

ವೇದಯೇ ನ ಚ ಸಂಯುಕ್ತಾನ್ ಶಬ್ದ ಸ್ಪರ್ಶರಸಾನಹಮ್ ।
ಚಿತ್ತನಾಶಾದ್ವಿಪದ್ಯಂತೇ ಸರ್ವಾಣ್ಯೇವೇಂದ್ರಿಯಾಣಿ ಹಿ ॥
ಕ್ಷೀಣಸ್ನೇಹಸ್ಯ ದೀಪಸ್ಯ ಸಂರಕ್ತಾ ರಶ್ಮಯೋ ಯಥಾ ।

ಅನುವಾದ

ಎಣ್ಣೆ ತೀರಿದಾಗ ದೀಪದ ಅರುಣಪ್ರಭೆ ವಿಲೀನವಾಗುವಂತೆ ಚೈತನ್ಯವು ಉಡುಗಿ ನನ್ನ ಎಲ್ಲ ಇಂದ್ರಿಯಗಳು ನಿಶ್ಚೇಷ್ಟಿತವಾಗುತ್ತಾ ಇವೆ.॥73॥

ಮೂಲಮ್ - 74

ಅಯಮಾತ್ಮಭವಃ ಶೋಕೋ ಮಾಮನಾಥಮಚೇತನಮ್ ।
ಸಂಸಾಧಯತಿ ವೇಗೇನ ಯಥಾ ಕೂಲಂ ನದೀರಯಃ ॥

ಅನುವಾದ

ನದಿಯ ಪ್ರವಾಹವು ತನ್ನ ದಡವನ್ನೇ ಕೆಡಹಿಹಾಕುತ್ತದೋ ಹಾಗೆಯೇ ನಾನೇ ಉತ್ಪನ್ನ ಮಾಡಿದ ಶೋಕವು ನನ್ನನ್ನು ವೇಗವಾಗಿ ಅನಾಥ ಹಾಗೂ ಅಚೇತನವಾಗಿಸುತ್ತಿದೆ.॥74॥

ಮೂಲಮ್ - 75

ಹಾ ರಾಘವ ಮಹಾಬಾಹೋ ಹಾ ಮಮಾಯಾಸನಾಶನ ।
ಹಾ ಪಿತೃಪ್ರಿಯ ಮೇ ನಾಥ ಹಾ ಮಮಾಸಿಗತಃ ಸುತ ॥

ಅನುವಾದ

ಹಾ ಮಹಾಬಾಹು ರಘುನಂದನ! ನನ್ನ ಕಷ್ಟಗಳನ್ನು ದೂರಗೊಳಿಸುವ ರಾಮಾ! ಹಾ ನನ್ನ ಪ್ರಿಯಪುತ್ರನೇ! ಹಾ ನನ್ನ ನಾಥ! ಹಾ ನನ್ನ ಮಗನೇ! ನೀನು ಎಲ್ಲಿಗೆ ಹೊರಟು ಹೋಗಿರುವೆ.॥75॥

ಮೂಲಮ್ - 76

ಹಾ ಕೌಸಲ್ಯೇ ನ ಪಶ್ಯಾಮಿ ಹಾ ಸುಮಿತ್ರೇ ತಪಸ್ವಿನಿ ।
ಹಾ ನೃಶಂಸೇ ಮಮಾಮಿತ್ರೇ ಕೈಕೇಯಿ ಕುಲಪಾಂಸನಿ ॥

ಅನುವಾದ

ಹಾ ಕೌಸಲ್ಯೇ! ಈಗ ನನಗೇನೂ ಕಾಣುವುದಿಲ್ಲ. ಹಾ ತಪಸ್ವಿನೀ ಸುಮಿತ್ರೇ! ಈಗ ನಾನು ಈ ಲೋಕದಿಂದ ಹೋಗುತ್ತಾ ಇದ್ದೇನೆ. ಹಾ ನನ್ನ ಶತ್ರು, ಕ್ರೂರ, ಕುಲಾಂಗಾರ ಕೈಕೇಯಿ! (ನಿನ್ನ ಕುಟಿಲ ಇಚ್ಛೆ ಪೂರ್ಣವಾಯಿತಲ್ಲ!.॥76॥

ಮೂಲಮ್ - 77

ಇತಿ ಮಾತುಶ್ಚ ರಾಮಸ್ಯ ಸುಮಿತ್ರಾಯಾಶ್ಚ ಸನ್ನಿಧೌ ।
ರಾಜಾ ದಶರಥಃ ಶೋಚನ್ ಜೀವಿತಾಂತಮುಪಾಗಮತ್ ॥

ಅನುವಾದ

ಈ ಪ್ರಕಾರ ಶ್ರೀರಾಮ-ಮಾತಾ ಕೌಸಲ್ಯೆ ಮತ್ತು ಸುಮಿತ್ರೆಯರ ಬಳಿಯಲ್ಲಿ ಶೋಕಪೂರ್ಣ ವಿಲಾಪ ಮಾಡುತ್ತಾ ರಾಜಾ ದಶರಥನ ಜೀವನದ ಅಂತ್ಯವಾಯಿತು.॥77॥

ಮೂಲಮ್ - 78

ತಥಾ ತು ದೀನಃ ಕಥಯನ್ನರಾಧಿಪಃ
ಪ್ರಿಯಸ್ಯ ಪುತ್ರಸ್ಯ ವಿವಾಸನಾತುರಃ ।
ಗತೇರ್ಧರಾತ್ರೇ ಭೃಶದುಃಖಪೀಡಿತ -
ಸ್ತದಾ ಜಹೌಪ್ರಾಣಮುದಾರದರ್ಶನಃ ॥

ಅನುವಾದ

ತನ್ನ ಪ್ರಿಯಪುತ್ರನ ವನವಾಸದಿಂದ ಶೋಕಾಕುಲನಾದ ದಶರಥನು ಹೀಗೆ ದೀನತಾಪೂರ್ಣ ಮಾತನ್ನು ಹೇಳುತ್ತಾ ಅರ್ಧರಾತ್ರಿ ಕಳೆಯುತ್ತಿರುವಂತೆ ಅತ್ಯಂತ ದುಃಖದಿಂದ ಪೀಡಿತನಾಗಿ ಆಗಲೇ ಆ ಉದಾರದರ್ಶಿ ನರೇಶನು ತನ್ನ ಪ್ರಾಣಗಳನ್ನು ತ್ಯಜಿಸಿದನು.॥78॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಅರವತ್ತನಾಲ್ಕನೆಯ ಸರ್ಗ ಪೂರ್ಣವಾಯಿತು.॥64॥