०६३ दशरथेन पूर्वकृतबालवधकथनम्

वाचनम्
ಭಾಗಸೂಚನಾ

ದಶರಥನ ಶೋಕ, ಕೌಸಲ್ಯೆಯ ಬಳಿ ಋಷಿಕುಮಾರನನ್ನು ವಧಿಸಿದ ವೃತ್ತಾಂತವನ್ನು ರಾಜನು ಹೇಳಿದುದು

ಮೂಲಮ್ - 1

ಪ್ರತಿಬುದ್ಧೋ ಮುಹೂರ್ತೇನ ಶೋಕೋಪಹತಚೇತನಃ ।
ಅಥ ರಾಜಾ ದಶರಥಃ ಸ ಚಿಂತಾಮಭ್ಯಪದ್ಯತ ॥

ಅನುವಾದ

ದಶರಥನು ಮುಹೂರ್ತಕಾಲದಲ್ಲಿ ಎಚ್ಚರಗೊಂಡನು. ಆಗ ಅವನ ಹೃದಯ ಶೋಕದಿಂದ ವ್ಯಾಕುಲವಾಗಿತ್ತು. ಅವನು ಮನಸ್ಸಿನಲ್ಲೇ ಚಿಂತಿಸತೊಡಗಿದನು.॥1॥

ಮೂಲಮ್ - 2

ರಾಮಲಕ್ಷ್ಮಣಯೋಶ್ಚೈವ ವಿವಾಸಾದ್ ವಾಸವೋಪಮಮ್ ।
ಆಪೇದೇ ಉಪಸರ್ಗಸ್ತಂ ತಮಃ ಸೂರ್ಯಮಿವಾಸುರಮ್ ॥

ಅನುವಾದ

ಶ್ರೀರಾಮ-ಲಕ್ಷ್ಮಣರು ವನಕ್ಕೆ ಹೊರಟು ಹೋಗುವುದರಿಂದ ಈ ಇಂದ್ರ ತುಲ್ಯ ತೇಜಸ್ವೀ ದಶರಥನನ್ನು ಶೋಕವು ರಾಹುಗ್ರಸ್ತ ಸೂರ್ಯನಂತೆ ಅದುಮಿಬಿಟ್ಟಿತ್ತು.॥2॥

ಮೂಲಮ್ - 3

ಸಭಾರ್ಯೇ ಹೀ ಗತೇ ರಾಮೇ ಕೌಸಲ್ಯಾಂ ಕೋಸಲೇಶ್ವರಃ ।
ವಿವಕ್ಷುರಸಿತಾಪಾಂಗೀಂ ಸ್ಮೃತ್ವಾ ದುಷ್ಕೃತಮಾತ್ಮನಃ ॥

ಅನುವಾದ

ಪತ್ನೀಸಹಿತ ಶ್ರೀರಾಮನು ಕಾಡಿಗೆ ಹೋದಮೇಲೆ ಕೋಸಲೇಶ ನರೇಶ ದಶರಥನು ತನ್ನ ಪುರಾತನ ಪಾಪವನ್ನು ಸ್ಮರಿಸುತ್ತಾ ಕಾಡಿಗೆಯಿಂದ ಕಪ್ಪಾದ ಕಣ್ಣುಗಳುಳ್ಳ ಕೌಸಲ್ಯೆಯ ಬಳಿ ಹೇಳಲು ಮನಮಾಡಿದನು.॥3॥

ಮೂಲಮ್ - 4

ಸ ರಾಜಾ ರಜನೀಂ ಷಷ್ಠೀಂ ರಾಮೇ ಪ್ರವ್ರಾಜಿತೇ ವನಮ್ ।
ಅರ್ಧರಾತ್ರೇ ದಶರಥಃ ಸೋಽಸ್ಮರದ್ ದುಷ್ಕತಂ ಕೃತಮ್ ॥

ಅನುವಾದ

ಆಗ ಶ್ರೀರಾಮಚಂದ್ರನು ವನಕ್ಕೆ ಹೋಗಿ ಆರನೆಯ ರಾತ್ರಿ ನಡೆಯುತ್ತಿತ್ತು. ಅರ್ಧರಾತ್ರಿಯಾದಾಗ ದಶರಥನಿಗೆ ಹಿಂದೆ ಮಾಡಿದ ದುಷ್ಕರ್ಮದ ಸ್ಮರಣೆ ಉಂಟಾಯಿತು.॥4॥

ಮೂಲಮ್ - 5

ಸ ರಾಜಾ ಪುತ್ರಶೋಕಾರ್ತಃ ಸ್ಮೃತ್ವಾದುಷ್ಕೃತಮಾತ್ಮನಃ ।
ಕೌಸಲ್ಯಾಂ ಪುತ್ರಶೋಕಾರ್ತಾಮಿದಂ ವಚನಮಬ್ರವೀತ್ ॥

ಅನುವಾದ

ಪುತ್ರಶೋಕದಿಂದ ಪೀಡಿತನಾದ ಮಹಾರಾಜನು ತನ್ನ ದುಷ್ಕರ್ಮವನ್ನು ನೆನೆದು, ಪುತ್ರಶೋಕದಿಂದ ವ್ಯಾಕುಲಳಾದ ಕೌಸಲ್ಯೆಯ ಬಳಿ ಈ ಪ್ರಕಾರ ಹೇಳಲು ಪ್ರಾರಂಭಿಸಿದನು.॥5॥

ಮೂಲಮ್ - 6

ಯದಾಚರತಿ ಕಲ್ಯಾಣಿ ಶುಭಂ ವಾ ಯದಿ ವಾ ಶುಭಮ್ ।
ತದೇವ ಲಭತೇ ಭದ್ರೇ ಕರ್ತಾ ಕರ್ಮಜಮಾತ್ಮನಃ ॥

ಅನುವಾದ

ಕಲ್ಯಾಣಿ! ಭದ್ರೆ! ಮನುಷ್ಯನು ಮಾಡುವ ಶುಭ ಅಥವಾ ಅಶುಭ ಕರ್ಮದ ಫಲಸ್ವರೂಪವೇ ಸುಖ ಇಲ್ಲವೇ ದುಃಖಗಳು ಕರ್ತೃವಿಗೆ ಪ್ರಾಪ್ತವಾಗುತ್ತವೆ.॥6॥

ಮೂಲಮ್ - 7

ಗುರುಲಾಘವಮರ್ಥಾನಾಮಾರಂಭೇ ಕರ್ಮಣಾಂ ಫಲಮ್ ।
ದೋಷಂ ವಾ ಯೋ ನ ಜಾನಾತಿ ಸ ಬಾಲ ಇತಿ ಹೋಚ್ಯತೇ ॥

ಅನುವಾದ

ಕರ್ಮಗಳನ್ನು ಪ್ರಾರಂಭಿಸುವಾಗ ಅದರ ಫಲಗಳ ಲಘುತ್ವ ಅಥವಾ ಗುರುತ್ವ ತಿಳಿಯದವನನ್ನು, ಮುಂದೆ ಆಗುವ ಲಾಭರೂಪೀಗುಣ ಅಥವಾ ಹಾನಿರೂಪೀ ದೋಷವನ್ನು ತಿಳಿಯದ ಮನುಷ್ಯನನ್ನು ಬಾಲಕ (ಮೂರ್ಖ) ಎಂದು ಹೇಳುತ್ತಾರೆ.॥7॥

ಮೂಲಮ್ - 8

ಕಶ್ಚಿದಾಮ್ರವಣಂ ಛಿತ್ವಾ ಪಲಾಶಾಂಶ್ಚ ನಿಷಿಂಚತಿ ।
ಪುಷ್ಪಂ ದೃಷ್ಟ್ವಾ ಫಲೇ ಗೃಧ್ನುಃ ಸ ಶೋಚತಿಲಾಗಮೇ ॥

ಅನುವಾದ

ಯಾವನಾದರೂ ಮುತ್ತುಗದ ಹೂವನ್ನು ನೋಡಿ ಮನಸ್ಸಿನಲ್ಲೇ ಇದರ ಫಲವು ಇನ್ನೂ ರುಚಿಕರವಾಗಿರಬಹುದು ಎಂದು ಅನುಮಾನಿಸಿ, ಫಲದ ಅಭಿಲಾಷೆಯಿಂದ ಮಾವಿನ ತೋಪನ್ನು ಕಡಿದು, ಮುತ್ತುಗದ ಗಿಡವನ್ನು ನೆಟ್ಟು, ನೀರು ಹಾಕಿ, ಫಲ ಬರುವಾಗ ಪಶ್ಚಾತ್ತಾಪ ಪಡುತ್ತಾನೆ. (ಏಕೆಂದರೆ ತನ್ನ ನಿರೀಕ್ಷೆಯಂತೆ ಫಲ ಪಡೆಯುವುದಿಲ್ಲ.॥8॥

ಮೂಲಮ್ - 9

ಅವಿಜ್ಞಾಯ ಫಲಂ ಯೋ ಹಿ ಕರ್ಮ ತ್ವೇವಾನುಧಾವತಿ ।
ಸ ಶೋಚೇತ್ಫಲವೇಲಾಯಾಂ ಯಥಾ ಕಿಂಶುಕಸೇಚಕಃ ॥

ಅನುವಾದ

ಯಾರು ಕ್ರಿಯಮಾಣ ಕರ್ಮದ ಫಲದ ಜ್ಞಾನ ಅಥವಾ ವಿಚಾರ ಮಾಡದೆ ಕೇವಲ ಕರ್ಮದ ಹಿಂದೆ ಓಡುವನೋ ಅವನಿಗೆ ಅದರ ಫಲ ಸಿಗುವಾಗ ಮಾವಿನಮರವನ್ನು ಕತ್ತರಿಸಿ ಮುತ್ತುಗವನ್ನು ಸಾಕಿದಂತೆ ಶೋಕ ಉಂಟಾಗುತ್ತದೆ.॥9॥

ಮೂಲಮ್ - 10

ಸೋಹಮಾಮ್ರವಣಂ ಛಿತ್ವಾ ಫಾಲಾಶಾಂಶ್ಚ ನ್ಯಷೇಚಯಮ್ ।
ರಾಮಂ ಫಲಾಗಮೇ ತ್ಯಕ್ತ್ವಾ ಪಶ್ಚಾಚ್ಛೋಚಾಮಿ ದುರ್ಮತಿಃ ॥

ಅನುವಾದ

ನಾನೂ ಕೂಡ ಮಾವಿನ ತೋಟವನ್ನು ಕಡಿದು ಮುತ್ತುಗವನ್ನೇ ಬೆಳೆಸಿದೆ, ಈ ಕರ್ಮದ ಫಲವು ಪ್ರಾಪ್ತವಾಗಿ ಈಗ ಶ್ರೀರಾಮನನ್ನು ಕಳೆದುಕೊಂಡು ದುರ್ಮತಿಯಾದ ನಾನು ಪಶ್ಚಾತ್ತಾಪ ಪಡುತ್ತಾ ಇದ್ದೇನೆ.॥10॥

ಮೂಲಮ್ - 11

ಲಬ್ಧಶಬ್ದೇನ ಕೌಸಲ್ಯೇ ಕುಮಾರೇಣ ಧನುಷ್ಮತಾ ।
ಕುಮಾರಃ ಶಬ್ದವೇಧೀತಿ ಮಯಾ ಪಾಪಮಿದಂ ಕೃತಮ್ ॥

ಅನುವಾದ

ಕೌಸಲ್ಯೆ! ನನ್ನ ತಂದೆಯವರು ಬದುಕಿದ್ದಾಗ ನಾನು ಕೇವಲ ರಾಜಕುಮಾರನಾಗಿದ್ದೆ, ಒಬ್ಬ ಒಳ್ಳೆಯ ಧನುರ್ಧರನೆಂಬ ಖ್ಯಾತಿ ನನ್ನದಾಗಿತ್ತು. ‘ರಾಜಕುಮಾರನು ಶಬ್ದವೇಧಿ ಬಾಣಬಿಡಲು ತಿಳಿದಿದ್ದಾನೆ’ ಎಂದು ಎಲ್ಲರೂ ಹೇಳುತ್ತಿದ್ದರು. ಇದೇ ಖ್ಯಾತಿಯಲ್ಲಿ ಬಿದ್ದು ನಾನು ಇದೊಂದು ಪಾಪ ಮಾಡಿಬಿಟ್ಟೆ. (ಅದನ್ನು ಈಗ ಹೇಳುತ್ತೇನೆ, ಕೇಳು.॥11॥

ಮೂಲಮ್ - 12

ತದಿದಂ ಮೇಽನುಸಂಪ್ರಾಪ್ತಂ ದೇವಿ ದುಃಖಂ ಸ್ವಯಂಕೃತಮ್ ।
ಸಂಮೋಹಾದಿಹ ಬಾಲೇನ ಯಥಾ ಸ್ಯಾದ್ಭಕ್ಷಿತಂ ವಿಷಮ್ ॥

ಅನುವಾದ

ದೇವಿ! ನಾನೇ ಮಾಡಿದ ಆ ಕುಕರ್ಮದ ಫಲವೇ ನನಗೇ ಈ ಮಹಾದುಃಖರೂಪವಾಗಿ ಪ್ರಾಪ್ತವಾಗಿದೆ. ಯಾವನಾದರೂ ಹುಡುಗ ಅಜ್ಞಾನದಿಂದ ವಿಷವನ್ನು ಸೇವಿಸಿದರೂ ಆ ವಿಷವು ಅವನನ್ನು ಕೊಂದುಬಿಡುವಂತೆಯೇ ಮೋಹ ಅಥವಾ ಅಜ್ಞಾನದಿಂದ ಮಾಡಿದ ದುಷ್ಕರ್ಮದ ಫಲವನ್ನು ಇಲ್ಲಿ ನನಗೆ ಅನುಭವಿಸಬೇಕಾಯಿತು.॥12॥

ಮೂಲಮ್ - 13

ಯಥಾನ್ಯಃ ಪುರುಷಃ ಕಶ್ಚಿತ್ ಪಲಾಶೈರ್ಮೋಹಿತೋ ಭವೇತ್ ।
ಏವಂ ಮಯಾಪ್ಯವಿಜ್ಞಾತಂ ಶಬ್ದವೇಧ್ಯಮಿದಂ ಫಲಮ್ ॥

ಅನುವಾದ

ಯಾವನಾದರೂ ಹಳ್ಳಿಯ ಮನುಷ್ಯನು ಮುತ್ತುಗದ ಹೂವುಗಳಿಗೆ ಮೋಹಿತನಾಗಿ ಅದರ ಕಹೀ ಫಲವನ್ನು ತಿಳಿಯುವುದಿಲ್ಲ, ಹಾಗೆಯೇ ನಾನೂ ‘ಶಬ್ದವೇಧೀ ಬಾಣವಿದ್ಯೆ’ಯ ಪ್ರಶಂಸೆಯನ್ನು ಕೇಳಿ ಅದರಲ್ಲಿ ಆಕರ್ಷಿತನಾದೆ. ಅದರಿಂದಲೇ ಇಂತಹ ಕ್ರೂರವಾದ ಪಾಪಕರ್ಮ ನನ್ನಿಂದ ನಡೆದು, ಇಂತಹ ಭಯಂಕರ ಫಲ ಪ್ರಾಪ್ತವಾಗಬಹುದೆಂಬ ಜ್ಞಾನ ನನಗಿರಲಿಲ್ಲ.॥13॥

ಮೂಲಮ್ - 14

ದೇವ್ಯನೂಢಾ ತ್ವಮಭವೋ ಯುವರಾಜೋ ಭವಾಮ್ಯಹಮ್ ।
ತತಃ ಪ್ರಾವೃಡನುಪ್ರಾಪ್ತಾ ಮಮ ಕಾಮವಿವರ್ಧಿನೀ ॥

ಅನುವಾದ

ದೇವಿ! ಇನ್ನೂ ನಾನು ಯುವರಾಜನಾಗಿದ್ದೆ, ನಿನ್ನೊಂದಿಗೆ ಮದುವೆ ಆಗಿರಲಿಲ್ಲ, ಆಗಲೇ ನಡೆದುದು ಈ ಸಂಗತಿ. ನನ್ನ ಕಾಮಭಾವವನ್ನು ಹೆಚ್ಚಿಸುವ ವರ್ಷಋತು ಬಂತು.॥14॥

ಮೂಲಮ್ - 15

ಅಪಾಸ್ಯ ಹಿ ರಸಾನ್ ಭೌಮಾಂ ಸ್ತಪ್ತ್ವಾ ಚ ಜಗದಂಶುಭಿಃ ।
ಪರೇತಾಚರಿತಾಂ ಭೀಮಾಂ ರವಿರಾಚರತೇ ದಿಶಮ್ ॥

ಅನುವಾದ

ಸೂರ್ಯನು ಕಿರಣಗಳಿಂದ ಭೂಮಿಯಲ್ಲಿರುವ ಸಸ್ಯಗಳನ್ನು ಬಾಡಿಸುತ್ತಾ ಪ್ರಪಂಚದ ಪ್ರಾಣಿಗಳನ್ನು ಸಂತಪ್ತಗೊಳಿಸುತ್ತಾ ದಕ್ಷಿಣ ದಿಕ್ಕಿನೆಡೆಗೆ ವಾಲಿದನು. (ದಕ್ಷಿಣಾಯನವು ಪ್ರಾರಂಭವಾಯಿತು.॥15॥

ಮೂಲಮ್ - 16

ಉಷ್ಣಮಂತರ್ದಧೇ ಸದ್ಯಃ ಸ್ನಿಗ್ಧಾ ದದೃಶಿರೇ ಘನಾಃ ।
ತತೋ ಜಹೃಷಿರೇ ಸರ್ವೇ ಭೇಕಸಾರಂಗಬರ್ಹಿಣಃ ॥

ಅನುವಾದ

ನೀರಿನಿಂದ ಕೂಡಿದ ಮೇಘಗಳು ಆಕಾಶದಲ್ಲಿ ಕಾಣಿಸಿಕೊಂಡವು. ಬಿಸಿಲಿನ ಬೇಗೆಯು ಕಡಿಮೆಯಾಯಿತು. ಕಪ್ಪೆಗಳು, ಸಾರಂಗಗಳು, ಜಾತಕಗಳು, ನವಿಲುಗಳು ಸಂತಸದಿಂದ ನಲಿದಾಡಿದವು.॥16॥

ಮೂಲಮ್ - 17

ಕ್ಲಿನ್ನಪಕ್ಷೋತ್ತರಾಃ ಸ್ನಾತಾಃ ಕೃಚ್ಛ್ರಾದಿವ ಪತತ್ತ್ರಿಣಃ ।
ವೃಷ್ಟಿವಾತಾವಧೂತಾಗ್ರಾನ್ ಪಾದಪಾನಭಿಪೇದಿರೇ ॥

ಅನುವಾದ

ಮಳೆಯಿಂದಾಗಿ ತೊಯ್ದುಹೋಗಿದ್ದ ರೆಕ್ಕೆಗಳಿಂದ ಕೂಡಿದ ಪಕ್ಷಿಗಳು ಪ್ರಾಯಶ್ಚಿತ್ತಾರ್ಥವಾಗಿ ಸ್ನಾನ ಮಾಡಿರುವವೋ ಎಂಬಂತೆ ಕಾಣುತ್ತಿದ್ದವು. ತೊಯ್ದುಹೋದ ರೆಕ್ಕೆಗಳಿಂದ ಪಕ್ಷಿಗಳು ಮಳೆ-ಗಾಳಿಗಳಿಂದ ರೆಂಬೆಯೆಲ್ಲಾ ಅಲ್ಲಾಡುತ್ತಿದ್ದ ವೃಕ್ಷಗಳಲ್ಲಿ ಸೇರಿಕೊಂಡವು.॥17॥

ಮೂಲಮ್ - 18

ಪತಿತೇನಾಂಭಸಾಽಽಚ್ಛನ್ನಃ ಪತಮಾನೇನ ಚಾಸಕೃತ್ ।
ಆಬಭೌ ಮತ್ತಸಾರಂಗ ಸ್ತೋಯರಾಶಿರಿವಾಚಲಃ ॥

ಅನುವಾದ

ಬೀಳುತ್ತಿರುವ ನೀರಿನಿಂದ ಆಚ್ಛಾದಿತನಾದ ಮದಿಸಿದ ಆನೆಯು ಅಲೆಗಳಿಲ್ಲದ ಸಮುದ್ರದಂತೆ ಹಾಗೂ ನೆನೆದುಹೋದ ಪರ್ವತದಂತೆ ಕಾಣುತ್ತಿತ್ತು.॥18॥

ಮೂಲಮ್ - 19

ಪಾಂಡುರಾರುಣವರ್ಣಾನಿ ಸ್ರೋತಾಂಸಿ ವಿಮಲಾನ್ಯಪಿ ।
ಸುಸ್ರುವುರ್ಗಿರಿಧಾತುಭ್ಯಃ ಸಭಸ್ಮಾನಿ ಭುಜಂಗವತ್ ॥

ಅನುವಾದ

ಪರ್ವತಗಳಿಂದ ಇಳಿಯುತ್ತಿದ್ದ ನೀರು ಅಥವಾ ತೊರೆಗಳು ನಿರ್ಮಲವಾಗಿದ್ದರೂ ಬೆಟ್ಟದ ಧಾತುಗಳ ಸಂಪರ್ಕದಿಂದ ಬಿಳಿಯ, ಕೆಂಪು, ಬೂದಿ ಬಣ್ಣದ ಹಾವುಗಳಂತೆ ಅಂಕು-ಡೊಂಕಾಗಿ ಹರಿಯುತ್ತಿದ್ದವು.॥19॥

ಮೂಲಮ್ - 20

ತಸ್ಮಿನ್ನತಿಸುಖೇ ಕಾಲೇ ಧನುಷ್ಮಾನಿಷುಮಾನ್ ರಥೀ ।
ವ್ಯಾಯಾಮಕೃತಸಂಕಲ್ಪಃ ಸರಯೂಮನ್ವಗಾಂ ನದೀಮ್ ॥

ಅನುವಾದ

ವರ್ಷಾಋತುವಿನ ಆ ಅತ್ಯಂತ ಸುಖಮಯ ಸಮಯದಲ್ಲಿ ನಾನು ಧನುರ್ಬಾಣಗಳನ್ನು ಎತ್ತಿಕೊಂಡು ರಥವನ್ನು ಹತ್ತಿ ಬೇಟೆಗಾಗಿ ಸರಯೂ ನದಿಯ ತೀರಕ್ಕೆ ಬಂದೆ.॥20॥

ಮೂಲಮ್ - 21

ನಿಪಾನೇ ಮಹಿಷಂ ರಾತ್ರೌ ಗಜಂ ವಾಭ್ಯಾಗತಂ ಮೃಗಮ್ ।
ಅನ್ಯದ್ ವಾ ಶ್ವಾಪದಂ ಕಿಂಚಿಜ್ಜಿಘಾಂಸುರಜಿತೇಂದ್ರಿಯಃ ॥

ಅನುವಾದ

ನನ್ನ ಇಂದ್ರಿಯಗಳು ನನ್ನ ವಶದಲ್ಲಿ ಇರಲಿಲ್ಲ. ನೀರು ಕುಡಿಯಲು ನದಿಗೆ ರಾತ್ರಿ ಯಾವುದಾದರೂ ಉಪದ್ರವಕಾರಿ ಕಾಡುಕೋಣ, ಮತ್ತಗಜ, ಸಿಂಹ-ಹುಲಿ ಮುಂತಾದ ಹಿಂಸಕ ಪ್ರಾಣಿ ಬಂದರೆ ಅದನ್ನು ಕೊಂದುಬಿಡುವೆ ಎಂದು ಯೋಚಿಸಿದ್ದೆ.॥21॥

ಮೂಲಮ್ - 22

ಅಥಾಂಧಕಾರೇ ತ್ವಶ್ರೌಷಂ ಜಲೇ ಕುಂಭಸ್ಯ ಪೂರ್ಯತಃ ।
ಅಚಕ್ಷುರ್ವಿಷಯೇ ಘೋಷಂ ವಾರಣಸ್ಯೇವ ನರ್ದತಃ ॥

ಅನುವಾದ

ಆಗ ಅಲ್ಲಿ ಎಲ್ಲೆಡೆ ಕತ್ತಲೆ ಆವರಿಸಿತ್ತು. ನನಗೆ ಅಕಸ್ಮಾತ್ತಾಗಿ ನೀರಿನಲ್ಲಿ ಬಿಂದಿಗೆಯನ್ನು ತುಂಬುತ್ತಿರುವಂತೆ ಶಬ್ದವು ಕೇಳಿ ಬಂತು. ಆದರೆ ಅದು ಕಣ್ಣಿಗೆ ಕಾಣಿಸುತ್ತಿರಲಿಲ್ಲ. ಆ ಶಬ್ದವು ನನಗೆ ಆನೆ ನೀರು ಕುಡಿಯುತ್ತಿರುವಂತೆ ಕೇಳಿಸಿತು.॥22॥

ಮೂಲಮ್ - 23

ತತೋಽಹಂ ಶರಮುದ್ಧೃತ್ಯ ದೀಪ್ತಮಾಶೀವಿಷೋಪಮಮ್ ।
ಶಬ್ದಂ ಪ್ರತಿ ಗಜಪ್ರೇಪ್ಸುರಭಿಲಕ್ಷ್ಯಮಪಾತಯಮ್ ॥

ಅನುವಾದ

ಆನೆಯು ಸೊಂಡಿಲಿನಲ್ಲಿ ನೀರು ತುಂಬುತ್ತಿದೆ ಎಂದು ನಾನು ತಿಳಿದೆ, ಆದ್ದರಿಂದ ಅದೇ ನನ್ನ ಬಾಣದ ಗುರಿಯಾಗುವುದು ಎಂದು ತಿಳಿದು ಬತ್ತಳಿಕೆಯಿಂದ ಬಾಣ ತೆಗೆದು ಆ ಶಬ್ದವನ್ನು ಲಕ್ಷವಾಗಿಸಿ ಪ್ರಯೋಗಿಸಿದೆನು. ಆ ಪ್ರಕಾಶಮಾನ ಬಾಣವು ವಿಷಧರ ಸರ್ಪದಂತೆ ಭಯಂಕರವಾಗಿತ್ತು.॥23॥

ಮೂಲಮ್ - 24

ಅಮುಂಚಂ ನಿಶಿತಂ ಬಾಣಮಹಮಾಶೀವಿಷೋಪಮಮ್ ।
ತತ್ರ ವಾಗುಷಸಿ ವ್ಯಕ್ತಾ ಪ್ರಾದುರಾಸೀದ್ ವನೌಕಸಃ ॥

ಮೂಲಮ್ - 25

ಹಾ ಹೇತಿ ಪತತಸ್ತೋಯೇ ಬಾಣಾದ್ ವ್ಯಥಿಮರ್ಮಣಃ ।
ತಸ್ಮಿನ್ನಿಪತಿತೇ ಭೂಮೌ ವಾಗಭೂತ್ತತ್ರ ಮಾನುಷೀ ॥

ಅನುವಾದ

ಅದು ಉಷಃಕಾಲದ ಸಮಯವಾಗಿತ್ತು. ವಿಷಸರ್ಪದಂತಹ ಆ ಹರಿತವಾದ ಬಾಣವನ್ನು ನಾನು ಬಿಡುತ್ತಲೇ ಅಲ್ಲಿ ನೀರಿನಲ್ಲಿ ಬೀಳುವಾಗ ಯಾರೋ ವನವಾಸಿಯ ಹಾಹಾಕಾರ ನನಗೆ ಸ್ಪಷ್ಟವಾಗಿ ಕೇಳಿಸಿತು. ನನ್ನ ಬಾಣದಿಂದ ಅವನ ಮರ್ಮಸ್ಥಾನಕ್ಕೆ ಬಹಳ ನೋವಾಗುತ್ತಿತ್ತು. ಆ ಪುರುಷನು ನೆಲಕ್ಕೊರಗಿದಾಗ ಅಲ್ಲಿ ಮಾನವ ವಾಣಿ ಕೇಳಿಬಂತು.॥24-25॥

ಮೂಲಮ್ - 26

ಕಥಮಸ್ಮದ್ವಿಧೇ ಶಸ್ತ್ರಂ ನಿಪತೇಚ್ಚ ತಪಸ್ವಿನಿ ।
ಪ್ರವಿವಿಕ್ತಾಂ ನದೀಂ ರಾತ್ರಾವುದಾಹಾರೋಽಹಮಾಗತಃ ॥

ಅನುವಾದ

ಅಯ್ಯೋ! ನನ್ನಂತಹ ತಪಸ್ವಿಯ ಮೇಲೆ ಶಸ್ತ್ರದ ಪ್ರಹಾರ ಹೇಗೆ ಸಂಭವಿಸಿತು? ನಾನಾದರೋ ನದಿಯ ಈ ಏಕಾಂತ ತೀರದಲ್ಲಿ ರಾತ್ರಿಯಲ್ಲಿ ನೀರು ತರಲು ಬಂದಿದ್ದೆ.॥26॥

ಮೂಲಮ್ - 27

ಇಷುಣಾಭಿಹತಃ ಕೇನ ಕಸ್ಯ ವಾಪಕೃತಂ ಮಯಾ ।
ಋಷೇರ್ಹಿ ನ್ಯಸ್ತದಂಡಸ್ಯ ವನೇ ವನ್ಯೇನ ಜೀವತಃ ॥

ಮೂಲಮ್ - 28

ಕಥಂ ನು ಶಸ್ತ್ರೇಣ ವಧೋ ಮದ್ವಿಧಸ್ಯ ವಿಧೀಯತೇ ।
ಜಟಾಭಾರಧರಸ್ಯೈವ ವಲ್ಕಲಾಜಿನವಾಸಸಃ ॥

ಮೂಲಮ್ - 29

ಕೋ ವಧೇನ ಮಮಾರ್ಥೀ ಸ್ಯಾತ್ ಕಿಂ ವಾಸ್ಯಾಪಕೃತಂ ಮಯಾ ।
ಏವಂ ನಿಷ್ಫಲಮಾರಬ್ಧಂ ಕೇವಲಾನರ್ಥಸಂಹಿತಮ್ ॥

ಅನುವಾದ

ಯಾರು ನನಗೆ ಬಾಣ ಹೊಡೆದರು? ನಾನು ಯಾರದು ಏನು ಕೆಡಿಸಿದೆ? ನಾನಾದರೋ ಸರ್ವ ಜೀವಿಗಳಿಗೆ ಪೀಡೆ ಕೊಡುವ ವೃತ್ತಿಯನ್ನು ತ್ಯಜಿಸಿ ಋಷಿ-ಜೀವನ ನಡೆಸುತ್ತಿದ್ದೆ. ಕಾಡಿನಲ್ಲಿದ್ದು ವನದ ಫಲ-ಮೂಲಗಳಿಂದಲೇ ಜೀವನ ನಿರ್ವಹಿಸುತ್ತಿದ್ದೆ. ನನ್ನಂತಹ ನಿರಪರಾಧೀ ಮನುಷ್ಯನನ್ನು ಶಸ್ತ್ರದಿಂದ ಏಕೆ ವಧಿಸಲಾಗಿದೆ? ನಾನು ವಲ್ಕಲ, ಮೃಗ ಚರ್ಮವನ್ನು ಉಡುವ ಜಟಾಧಾರೀ ತಪಸ್ವಿಯಾಗಿದ್ದೇನೆ. ನನ್ನನ್ನು ವಧಿಸಿ ಯಾರು ತನ್ನ ಲಾಭವನ್ನು ಯೋಚಿಸಿದನು? ನಾನು ಕೊಲ್ಲುವವನ ಯಾವ ಅಪರಾಧ ಮಾಡಿರುವೆನು? ನನ್ನ ಹತ್ಯೆಯ ವ್ಯರ್ಥಪ್ರಯತ್ನ ಮಾಡಿದುದಾಗಿದೆ. ಇದರಿಂದ ಯಾರಿಗೂ ಯಾವುದೇ ಲಾಭವಾಗಲಾರದು, ಕೇವಲ ಅನರ್ಥವೇ ಪಾಲಿಗೆ ಬಂದೀತು.॥27-29॥

ಮೂಲಮ್ - 30

ನ ಕಶ್ಚಿತ್ಸಾಧು ಮನ್ಯೇತ ಯಥೈವ ಗುರುತಲ್ಪಗಮ್ ।
ನೇಮಂ ತಥಾನುಶೋಚಾಮಿ ಜೀವತಕ್ಷಯಮಾತ್ಮನಃ ॥

ಮೂಲಮ್ - 31

ಮಾತರಂ ಪಿತರಂ ಚೋಭಾವನುಶೋಚಾಮಿ ಮದ್ವಧೇ ।
ತದೇತನ್ಮಿಥುನಂ ವೃದ್ಧಂ ಚಿರಕಾಲಭೃತಂ ಮಯಾ ॥

ಮೂಲಮ್ - 32½

ಮಯಿ ಪಂಚತ್ವಮಾಪನ್ನೇ ಕಾಂವೃತ್ತಿಂ ವರ್ತಯಿಷ್ಯತಿ ।
ವೃದ್ಧೌ ಚ ಮಾತಾಪಿತರಾವಹಂ ಚೈಕೇಷುಣಾ ಹತಃ ॥
ಕೇನ ಸ್ಮ ನಿಹತಾಃ ಸರ್ವೇ ಸುಬಾಲೇನಾಕೃತಾತ್ಮನಾ ॥

ಅನುವಾದ

ಈ ಹತ್ಯೆ ಮಾಡಿದವನನ್ನು ಜಗತ್ತಿನಲ್ಲಿ ಎಲ್ಲಿಯೂ, ಯಾರೂ ಒಳ್ಳೆಯವನೆಂದು ತಿಳಿಯಲಾರನು. ಗುರುಪತ್ನೀ ಗಾಮಿಯನ್ನು ನಿಂದಿಸಿದಂತೆ ನಿಂದಿಸುವರು. ನಾನು ಸಾಯುವುದರ ಚಿಂತೆ ನನಗಿಲ್ಲ, ಆದರೆ ನಾನು ಸಾಯುವುದರಿಂದ ನನ್ನ ತಂದೆ-ತಾಯಂದಿರಿಗೆ ಆಗುವ ಕಷ್ಟದ ಬಗ್ಗೆ ಪದೇ-ಪದೇ ಚಿಂತಿಸುತ್ತಿದ್ದೇನೆ. ನಾನು ಈ ವೃದ್ಧರಿಬ್ಬರನ್ನು ಬಹಳ ಕಾಲದಿಂದ ಪಾಲನೆ-ಪೋಷಣೆ ಮಾಡಿರುವೆನು. ಈಗ ನಾನಿಲ್ಲದೆ ಇವರು ಹೇಗೆ ಬದುಕಿರಬಲ್ಲರು? ಘಾತಕಿಯು ಒಂದೇ ಬಾಣದಿಂದ ನನ್ನನ್ನು ಮತ್ತು ನನ್ನ ವೃದ್ಧ ಮಾತಾ-ಪಿತರನ್ನೂ ಮೃತ್ಯುಮುಖವಾಗಿಸಿದನು. ಯಾವ ವಿವೇಕಹೀನ, ಅಜಿತೇಂದ್ರಿಯ ಪುರುಷನು ನಮ್ಮೆಲ್ಲರನ್ನು ಒಟ್ಟಿಗೆ ವಧಿಸಿಬಿಟ್ಟನು.॥30-32½॥

ಮೂಲಮ್ - 33½

ತಾಂ ಗಿರಂ ಕರುಣಂ ಶ್ರುತ್ವಾ ಮಮ ಧರ್ಮಾನುಕಾಂಕ್ಷಿಣಃ ॥
ಕರಾಭ್ಯಾಂ ಸಶರಂ ಚಾಪಂ ವ್ಯಥಿತಸ್ಯಾಪತದ್ಭುವಿ ।

ಅನುವಾದ

ಈ ಕರುಣಾಪೂರ್ಣ ಮಾತನ್ನು ಕೇಳಿ ನನ್ನ ಮನಸ್ಸಿಗೆ ತುಂಬಾ ನೋವಾಯಿತು. ಎಲ್ಲಿ ಧರ್ಮದ ಅಭಿಲಾಷೆ ಇಡುವ ನಾನು, ಎಲ್ಲಿ ಈ ಅಧರ್ಮದ ಕಾರ್ಯ ನಡೆಯಿತು! ಆಗ ನನ್ನ ಕೈಯಿಂದ ಧನುರ್ಬಾಣಗಳು ಬಿದ್ದುಹೋದುವು.॥33½॥

ಮೂಲಮ್ - 34½

ತಸ್ಯಾಹಂ ಕರುಣಂ ಶ್ರುತ್ವಾ ಋಷೇರ್ವಿಲಪತೋ ನಿಶಿ ॥
ಸಂಭ್ರಾಂತಃ ಶೋಕವೇಗೇನ ಭೃಶಮಾಸಂ ವಿಚೇತನಃ ।

ಅನುವಾದ

ರಾತ್ರಿಯಲ್ಲಿ ವಿಲಪಿಸುತ್ತಿರುವ ಋಷಿಯ ಕರುಣ ವಚನವನ್ನು ಕೇಳಿ ನಾನು ಶೋಕವೇಗದಿಂದ ಗಾಬರಿಗೊಂಡೆನು. ನನ್ನ ಚೈತನ್ಯ ಉಡುಗಿದಂತಾಯಿತು.॥34½॥

ಮೂಲಮ್ - 35

ತಂ ದೇಶಮಹಮಾಗಮ್ಯ ದೀನಸತ್ತ್ವಃ ಸುದುರ್ಮನಾಃ ॥

ಮೂಲಮ್ - 36

ಅಪಶ್ಯಮಿಷುಣಾತೀರೇ ಸರಯ್ವಾಸ್ತಾಪಸಂ ಹತಮ್ ।
ಅವಕೀರ್ಣಜಟಾಭಾರಂ ಪ್ರವಿದ್ಧಕಲಶೋದಕಮ್ ॥

ಮೂಲಮ್ - 37½

ಪಾಂಸುಶೋಣಿತದಿಗ್ಧಾಂಗಂ ಶಯಾನಂ ಶಲ್ಯವೇಧಿತಮ್ ।
ಸ ಮಾಮುದ್ವೀಕ್ಷ್ಯ ನೇತ್ರಾಭ್ಯಾಂ ತ್ರಸ್ತಮಸ್ವಸ್ಥಚೇತನಮ್ ।
ಇತ್ಯುವಾಚ ವಚಃ ಕ್ರೂರಂ ದಿಧಕ್ಷನ್ನಿವ ತೇಜಸಾ ॥

ಅನುವಾದ

ನನ್ನ ಹೃದಯದಲ್ಲಿ ದೀನತೆ ಆವರಿಸಿತು, ಮನಸ್ಸು ಬಹಳ ದುಃಖಗೊಂಡಿತು. ಸರಯೂ ತೀರದ ಆ ಸ್ಥಳಕ್ಕೆ ಹೋಗಿ ನೋಡಿದೆ-ಓರ್ವ ತಪಸ್ವೀ ಬಾಣದಿಂದ ಘಾಸಿಗೊಂಡು ನೆಲದಲ್ಲಿ ಬಿದ್ದಿರುವನು. ತಲೆಯ ಜಟೆ ಕೆದರಿದೆ, ಬಿಂದಿಗೆಯ ನೀರು ಚೆಲ್ಲಿಹೋಗಿದೆ, ಇಡೀ ಶರೀರವು ಧೂಳು ಮತ್ತು ರಕ್ತದಿಂದ ತೊಯ್ದುಹೋಗಿದೆ. ಅವನು ಬಾಣ ತಗುಲಿ ಬಿದ್ದಿದ್ದನು. ಅವನ ಸ್ಥಿತಿಯನ್ನು ನೋಡಿ ನಾನು ಭಯಗೊಂಡೆ, ನನ್ನ ಚಿತ್ತಸ್ವಾಸ್ಥ್ಯ ಕೆಟ್ಟುಹೋಯಿತು. ಅವನು ಎರಡು ಕಣ್ಣುಗಳಿಂದ ತನ್ನ ತೇಜದಿಂದ ನನ್ನನ್ನು ಸುಟ್ಟುಬಿಡುವನೋ ಎಂಬಂತೆ ನೋಡುತ್ತಿದ್ದನು. ಅವನು ಕಠೋರವಾಣಿಯಿಂದ ಹೀಗೆ ನುಡಿದನು.॥35-37½॥

ಮೂಲಮ್ - 38½

ಕಿಂ ತವಾಪಕೃತಂ ರಾಜನ್ವನೇ ನಿವಸತಾ ಮಯಾ ॥
ಜಿರ್ಹೀರ್ಷುರಂಭೋ ಗುರ್ವರ್ಥಂ ಯದಹಂ ತಾಡಿತಸ್ತ್ವಯಾ ।

ಅನುವಾದ

ರಾಜನೇ! ವನದಲ್ಲಿ ಇರುತ್ತಾ ನಾನು ನಿನಗೆ ಯಾವ ಅಪರಾಧ ಮಾಡಿದ್ದೆ? ಅದರಿಂದ ನೀನು ಬಾಣದಿಂದ ನನ್ನನ್ನು ಹೊಡೆದೆಯಲ್ಲ? ನಾನಾದರೋ ತಾಯಿ-ತಂದೆಯವರಿಗೆ ನೀರು ತರಲು ಬಂದಿದ್ದೆ.॥38½॥

ಮೂಲಮ್ - 39½

ಏಕೇನ ಖಲು ಬಾಣೇನ ಮರ್ಮಣ್ಯಭಿಹತೇ ಮಯಿ ॥
ದ್ವಾವಂಧೌ ನಿಹತೌ ವೃದ್ಧೌ ಮಾತಾ ಜನಯಿತಾ ಚ ಮೇ ।

ಅನುವಾದ

ನೀನು ಒಂದೇ ಬಾಣದಿಂದ ನನ್ನ ಮರ್ಮ ವಿದೀರ್ಣಗೊಳಿಸಿ ನನ್ನ ಇಬ್ಬರು ಕುರುಡರಾದ, ವೃದ್ಧರಾದ ತಾಯಿ-ತಂದೆಯರನ್ನೂ ಕೊಂದು ಬಿಟ್ಟೆ.॥39½॥

ಮೂಲಮ್ - 40½

ತೌ ನೂನಂ ದುರ್ಬಲಾವಂಧೌ ಮತ್ಪ್ರತೀಕ್ಷೌ ಪಿಪಾಸಿತೌ ॥
ಚಿರಮಾಶಾಂಕೃತಾಂ ಕಷ್ಟಾಂ ತೃಷ್ಣಾಂ ಸಂಧಾರಯಿಷ್ಯತಃ ।

ಅನುವಾದ

ಅವರಿಬ್ಬರೂ ಬಹಳ ದುರ್ಬಲರು ಮತ್ತು ಕುರುಡರಾಗಿದ್ದಾರೆ. ನಿಶ್ಚಯವಾಗಿ ಬಾಯಾರಿಕೆಯಿಂದ ಪೀಡಿತರಾಗಿ ಅವರು ನನ್ನ ಪ್ರತೀಕ್ಷೆಯಲ್ಲಿ ಕುಳಿತಿರಬಹುದು. ಎಷ್ಟೋ ಹೊತ್ತಿನಿಂದ ನನ್ನ ಆಗಮನದ ಆಸೆಯಿಟ್ಟು ದುಃಖಕರ ಬಾಯಾರಿಕೆಯಿಂದಾಗಿ ದಾರಿ ನೋಡುತ್ತಾ ಇರಬಹುದು.॥40½॥

ಮೂಲಮ್ - 41½

ನ ನೂನಂ ತಪಸೋ ವಾಸ್ತಿ ಫಲಯೋಗಃ ಶ್ರುತಸ್ಯ ವಾ ॥
ಪಿತಾ ಯನ್ಮಾಂ ನ ಜಾನೀತೇ ಶಯಾನಂ ಪತಿತಂ ಭುವಿ ।

ಅನುವಾದ

ನನ್ನ ತಪಸ್ಸು ಅಥವಾ ಶಾಸ್ತ್ರದ ಯಾವುದೇ ಫಲ ನಿಶ್ಚಯವಾಗಿ ಇಲ್ಲಿ ಪ್ರಕಟವಾಗಿಲ್ಲ; ಏಕೆಂದರೆ ನಾನು ಭೂಮಿಗೆ ಬಿದ್ದು ಮೃತ್ಯುಶಯ್ಯೆಯಲ್ಲಿ ಬಿದ್ದಿರುವುದು ತಂದೆಯವರಿಗೆ ತಿಳಿದಿಲ್ಲ.॥41½॥

ಮೂಲಮ್ - 42½

ಜಾನನ್ನಪಿ ಚ ಕಿಂ ಕುರ್ಯಾದಶಕ್ತಶ್ಚಾಪರಿಕ್ರಮಃ ॥
ಭಿದ್ಯಮಾನಮಿವಾಶಕ್ತಸ್ತ್ರಾತುಮನ್ಯೋ ನಗೋ ನಗಮ್ ।

ಅನುವಾದ

ತಿಳಿದುಕೊಂಡರೂ ಏನು ತಾನೇ ಮಾಡಬಲ್ಲನು? ಏಕೆಂದರೆ ಅಸಮರ್ಥನಾಗಿ ಎದ್ದು ನಡೆದಾಡಲೂ ಆಗುವುದಿಲ್ಲ. ವಾಯುವಿನಿಂದ ಉರುಳಿ ಬೀಳುವ ಮರವನ್ನು ಇತರ ಮರಗಳು ರಕ್ಷಿಸಲಾರವೋ ಹಾಗೆಯೇ ನನ್ನ ಪಿತನೂ ನನ್ನನ್ನು ರಕ್ಷಿಸಲಾರನು.॥42½॥

ಮೂಲಮ್ - 43½

ಪಿತುಸ್ತ್ವಮೇವ ಮೇಗತ್ವಾ ಶೀಘ್ರಮಾಚಕ್ಷ್ವರಾಘವ ॥
ನ ತ್ವಾಮನುದಹೇತ್ ಕ್ರುದ್ಧೋ ವನಂಮಗ್ನಿರಿವೈಧಿತಃ ।

ಅನುವಾದ

ಆದ್ದರಿಂದ ರಘುಕುಲನರೇಶನೇ! ಈಗ ನೀನೇ ಹೋಗಿ ಬೇಗನೆ ನನ್ನ ತಂದೆಗೆ ಈ ಸಮಾಚಾರ ತಿಳಿಸು. (ಸ್ವತಃ ನೀನೆ ಹೇಳಿದರೆ) ಪ್ರಜ್ವಲಿತ ಅಗ್ನಿಯು ಕಾಡನ್ನು ಸುಟ್ಟುಬಿಡುವಂತೆ ಅವನು ಕ್ರೋಧಗೊಂಡು ನಿನ್ನನ್ನು ಭಸ್ಮವಾಗಿಸಲಾರನು.॥43½॥

ಮೂಲಮ್ - 44½

ಇಯಮೇಕಪದೀ ರಾಜನ್ಯತೋಮೇ ಪಿತುರಾಶ್ರಮಃ ॥
ತಂ ಪ್ರಸಾದಯ ಗತ್ವಾ ತ್ವಂ ನ ತ್ವಾಂ ಸಂಕುಪಿತಃ ಶಪೇತ್ ।

ಅನುವಾದ

ರಾಜನೇ! ಈ ಕಾಲುದಾರಿಯು ನನ್ನ ತಂದೆಯ ಆಶ್ರಮವಿರುವಲ್ಲಿಗೇ ಹೋಗಿದೆ. ನೀನು ಹೋಗಿ ಅವನನ್ನು ಪ್ರಸನ್ನಗೊಳಿಸು. ಅದರಿಂದ ಅವನು ಕುಪಿತನಾಗಿ ನಿನಗೆ ಶಾಪ ಕೊಡಲಾರನು.॥44½॥

ಮೂಲಮ್ - 45½

ವಿಶಲ್ಯಂ ಕುರು ಮಾಂ ರಾಜನ್ಮರ್ಮ ಮೇ ನಿಶಿತಃ ಶರಃ ॥
ರುಣದ್ಧಿ ಮೃದು ಸೋತ್ಸೇಧಂ ತೀರಮಂಬುರಯೋ ಯಥಾ ।

ಅನುವಾದ

ರಾಜನೇ! ನನ್ನ ಶರೀರದಿಂದ ಈ ಬಾಣವನ್ನು ಕಿತ್ತುಬಿಡು. ಈ ಹರಿತಬಾಣವು ನದಿಯ ನೀರಿನ ವೇಗವು ಕೋಮಲ ಮಳಲಿನ ಎತ್ತರ ದಡವನ್ನು ಕೊಚ್ಚಿಕೊಂಡು ಹೋಗುವಂತೆ, ನನ್ನ ಮರ್ಮಸ್ಥಾನಕ್ಕೆ ನೋವು ಕೊಡುತ್ತಿದೆ.॥45½॥

ಮೂಲಮ್ - 46

ಸಶಲ್ಯಃ ಕ್ಲಿಶ್ಯತೇ ಪ್ರಾಣೈರ್ವಿಶಲ್ಯೋ ನಿವಶಿಷ್ಯತಿ ॥

ಮೂಲಮ್ - 47½

ಇತಿ ಮಾಮವಿಶಚ್ಚಿಂತಾ ತಸ್ಯ ಶಲ್ಯಾಪಕರ್ಷಣೇ ।
ದುಃಖಿತಸ್ಯ ಚ ದೀನಸ್ಯ ಮಮ ಶೋಕಾತುರಸ್ಯ ಚ ॥
ಲಕ್ಷಯಾಮಾಸ ಸ ಋಷಿಶ್ಚಿಂತಾಂ ಮುನಿಸುತಸ್ತದಾ ।

ಅನುವಾದ

ಮುನಿಕುಮಾರನ ಮಾತು ಕೇಳಿ ಬಾಣವನ್ನು ಕೀಳದಿದ್ದರೆ ಇವನಿಗೆ ಕ್ಲೇಶವಾಗುತ್ತದೆ, ಕಿತ್ತುಬಿಟ್ಟರೆ ಇವನು ಈಗಲೇ ಸತ್ತು ಹೋಗುವನು ಎಂಬ ಚಿಂತೆ ಮನಸ್ಸಿನಲ್ಲಿ ತುಂಬಿಹೋಯಿತು. ಹೀಗೆ ಬಾಣವನ್ನು ಕೀಳುವ ವಿಷಯದಲ್ಲಿ ದೀನ-ದುಃಖ ಮತ್ತು ಶೋಕಾಕುಲನಾದ ನನ್ನ ಈ ಚಿಂತೆಯನ್ನು ಆಗ ಮುನಿ ಕುಮಾರನು ಗಮನಿಸಿದನು.॥46-47½॥

ಮೂಲಮ್ - 48

ತಾಮ್ಯಮಾನಂ ಸ ಮಾಂ ಕೃಚ್ಛ್ರಾದುವಾಚ ಪರಮಾರ್ಥವಿತ್ ॥

ಮೂಲಮ್ - 49

ಸೀದಮಾನೋ ವಿವೃತ್ತಾಂಗೋಽಚೇಷ್ಟಮಾನೋ ಗತಃ ಕ್ಷಯಮ್ ।
ಸಂಸ್ತಭ್ಯ ಶೋಕಂ ಧೈರ್ಯೇಣ ಸ್ಥಿರಚಿತ್ತೋ ಭವಾಮ್ಯಹಮ್ ॥

ಅನುವಾದ

ಯಥಾರ್ಥವನ್ನು ತಿಳಿದುಕೊಳ್ಳುವ ಆ ಮಹರ್ಷಿಯು ಅತ್ಯಂತ ಗ್ಲಾನಿಗೊಂಡ ನನ್ನನ್ನು ನೋಡಿ ಬಹಳ ಕಷ್ಟದಿಂದ ಹೇಳಿದನು - ರಾಜನೇ! ನನಗೆ ತುಂಬಾ ಕಷ್ಟವಾಗುತ್ತಾ ಇದೆ. ನನ್ನ ಕಣ್ಣು ಮೇಲೇರಿದೆ. ಸರ್ವಾಂಗವೂ ಚಡಪಡಿಸುತ್ತಿದೆ. ನಾನು ನಿಶ್ಚೇಷ್ಟಿತನಾಗಿದ್ದೇನೆ. ಈಗ ನಾನು ಮೃತ್ಯುವಿಗೆ ಸಮೀಪ ತಲುಪಿದ್ದೇನೆ. ಹೀಗಿದ್ದರೂ ಧೈರ್ಯದಿಂದ ಶೋಕವನ್ನು ತಡೆದು, ನನ್ನ ಚಿತ್ತವನ್ನು ಸ್ಥಿರಗೊಳಿಸಿ ಹೇಳುತ್ತೇನೆ, ಕೇಳು.॥48-49॥

ಮೂಲಮ್ - 50

ಬ್ರಹ್ಮಹತ್ಯಾಕೃತಂ ಪಾಪಂಹೃದಯಾದಪನೀಯತಾಮ್ ।
ನ ದ್ವಿಜಾತಿರಹಂ ರಾಜನ್ ಮಾ ಭೂತ್ತೇ ಮನಸೋ ವ್ಯಥಾ ॥

ಅನುವಾದ

ನನ್ನಿಂದ ಬ್ರಹ್ಮಹತ್ಯೆಯಾಯಿತೆಂಬ ಚಿಂತೆಯನ್ನು ಬಿಡು. ರಾಜನೇ! ನಾನು ಬ್ರಾಹ್ಮಣನಲ್ಲ, ಆದ್ದರಿಂದ ನಿನ್ನ ಮನಸ್ಸಿನಲ್ಲಿ ಬ್ರಹ್ಮಹತ್ಯೆಯ ಕುರಿತಾದ ವ್ಯಥೆಯನ್ನು ಮಾಡಬೇಡ.॥50॥

ಮೂಲಮ್ - 51

ಶೂದ್ರಾಯಾಮಸ್ಮಿವೈಶ್ಯೇನ ಜಾತೋ ನರವರಾಧಿಪ ।
ಇತೀವ ವದತಃ ಕೃಚ್ಛ್ರಾದ್ ಬಾಣಾಭಿಹತಮರ್ಮಣಃ ॥

ಮೂಲಮ್ - 52

ವಿಘೂರ್ಣತೋ ವಿಚೇಷ್ಟಸ್ಯ ವೇಪಮಾನಸ್ಯಭೂತಲೇ ।
ತಸ್ಯ ತ್ವಾತಾಮ್ಯಮಾನಸ್ಯ ತಂ ಬಾಣಮಹಮುದ್ಧರಮ್ ।
ಸ ಮಾಮುದ್ವೀಕ್ಷ್ಯ ಸಂತ್ರಸ್ತೋ ಜಹೌ ಪ್ರಾಣಾಂಸ್ತಪೋಧನಃ ॥

ಅನುವಾದ

ನರಶ್ರೇಷ್ಠನೇ! ನಾನು ವೈಶ್ಯ ತಂದೆಯಿಂದ ಶೂದ್ರ ಜಾತಿಯ ತಾಯಿಯ ಗರ್ಭದಿಂದ ಹುಟ್ಟಿರುವೆನು. ಬಾಣದಿಂದ ಮರ್ಮಾಘಾತವಾದ ಕಾರಣ ಅವನು ಬಹಳ ಕಷ್ಟದಿಂದ ಇಷ್ಟನ್ನು ಮಾತ್ರ ಹೇಳಿದನು. ಅವನು ಕಣ್ಣುಗಳು ತಿರುಗುತ್ತಿದ್ದವು. ಯಾತನೆಯಿಂದ ಅವನು ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದನು ಹಾಗೂ ಅತ್ಯಂತ ಕಷ್ಟಪಡುತ್ತಿದ್ದನು. ಆ ಸ್ಥಿತಿಯಲ್ಲಿ ನಾನು ಅವನ ಶರೀರದಿಂದ ಬಾಣವನ್ನು ಕಿತ್ತುಬಿಟ್ಟೆ. ಮತ್ತೆ ಅತ್ಯಂತ ಭಯಭೀತನಾಗಿ ಆ ತಪೋಧನನು ನನ್ನ ಕಡೆಗೆ ನೋಡುತ್ತಾ ಪ್ರಾಣತ್ಯಾಗ ಮಾಡಿದನು.॥51-52॥

ಮೂಲಮ್ - 53

ಜಲಾರ್ದ್ರಗಾತ್ರಂ ತು ವಿಲಪ್ಯ ಕೃಚ್ಛ್ರಂ
ಮರ್ಮವ್ರಣಂ ಸಂತತಮುಚ್ಛ್ವಸಂತಮ್ ।
ತತಃ ಸರಯ್ವಾಂ ತಮಹಂ ಶಯಾನಂ
ಸಮೀಕ್ಷ್ಯ ಭದ್ರೇ ಸುಭೃಶಂ ವಿಷಣ್ಣಃ ॥

ಅನುವಾದ

ನೀರಿನಲ್ಲಿ ಬಿದ್ದಿದ್ದರಿಂದ ಅವನ ಶರೀರ ತೊಯ್ದುಹೋಗಿತ್ತು. ಮರ್ಮಾಘಾತವಾದದ್ದರಿಂದ ಅವನು ಪ್ರಾಣ ತ್ಯಾಗ ಮಾಡಿದ್ದನು. ಕಲ್ಯಾಣೀ ಕೌಸಲ್ಯೇ! ಆ ಸ್ಥಿತಿಯಲ್ಲಿ ಸರಯೂ ತೀರದಲ್ಲಿ ಸತ್ತುಬಿದ್ದ ಮುನಿ ಪುತ್ರನನ್ನು ನೋಡಿ ನನಗೆ ಬಹಳ ದುಃಖವಾಯಿತು.॥53॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಅರವತ್ತಮೂರನೆಯ ಸರ್ಗ ಪೂರ್ಣವಾಯಿತು.॥63॥