वाचनम्
ಭಾಗಸೂಚನಾ
ದುಃಖತಪ್ತನಾದ ದಶರಥನು ಕೌಸಲ್ಯೆಯ ಕ್ಷಮೆ ಕೇಳಿದುದು, ಕೌಸಲ್ಯೆಯು ರಾಜನ ಚರಣಗಳಲ್ಲಿ ಬಿದ್ದು ಕ್ಷಮೆ ಕೇಳಿದುದು
ಮೂಲಮ್ - 1
ಏವಂ ತು ಕ್ರುದ್ಧಯಾ ರಾಜಾ ರಾಮಮಾತ್ರಾ ಸಶೋಕಯಾ ।
ಶ್ರಾವಿತಃ ಪುರುಷಂ ವಾಕ್ಯಂ ಚಿಂತಯಾಮಾಸ ದುಃಖಿತಃ ॥
ಅನುವಾದ
ಶೋಕಮಗ್ನಳಾಗಿ ಕುಪಿತಳಾದ ಶ್ರೀರಾಮಮಾತೆ ಕೌಸಲ್ಯೆಯು ದಶರಥನಲ್ಲಿ ಹೀಗೆ ಕಠೋರ ಮಾತುಗಳನ್ನಾಡಿದಾಗ ರಾಜನು ದುಃಖಿತನಾಗಿ ಬಹಳ ಚಿಂತೆಗೊಳಗಾದನು.॥1॥
ಮೂಲಮ್ - 2
ಚಿಂತಯಿತ್ವಾ ಸ ಚ ನೃಪೋ ಮೋಹವ್ಯಾಕುಲಿತೇಂದ್ರಿಯಃ ।
ಅಥ ದೀರ್ಘೇಣ ಕಾಲೇನಸಂಜ್ಞಾಮಾಪ ಪರಂತಪಃ ॥
ಅನುವಾದ
ಚಿಂತಿತನಾದ್ದರಿಂದ ರಾಜನ ಎಲ್ಲ ಇಂದ್ರಿಯಗಳು ಮೋಹಗೊಂಡು ಎಚ್ಚರದಪ್ಪಿದನು. ಅನಂತರ ಬಹಳ ಹೊತ್ತಿನ ಬಳಿಕ ಪರಂತಪ ದಶರಥ ಮಹಾರಾಜನು ಎಚ್ಚರಗೊಂಡನು.॥2॥
ಮೂಲಮ್ - 3
ಸ ಸಂಜ್ಞಾಮುಪಲಭ್ಯೈವ ದೀರ್ಘಮುಷ್ಣಂ ಚ ನಿಃಶ್ವಸನ್ ।
ಕೌಸಲ್ಯಾಂ ಪಾರ್ಶ್ವತೋ ದೃಷ್ಟ್ವಾ ತತಶ್ಚಿಂತಾಮುಪಾಗಮತ್ ॥
ಅನುವಾದ
ಎಚ್ಚರಗೊಂಡು ದೀರ್ಘವಾಗಿ ನಿಟ್ಟಿಸುರು ಬಿಡುತ್ತಾ, ಕೌಸಲ್ಯೆಯು ಪಕ್ಕದಲ್ಲೇ ಕುಳಿತಿರುವುದನ್ನು ನೋಡಿ ಪುನಃ ಚಿಂತಾಮಗ್ನನಾದನು.॥3॥
ಮೂಲಮ್ - 4
ತಸ್ಯ ಚಿಂತಯಮಾನಸ್ಯ ಪ್ರತ್ಯಭಾತ್ ಕರ್ಮ ದುಷ್ಕೃತಮ್ ।
ಯದನೇನ ಕೃತಂ ಪೂರ್ವಮಜ್ಞಾನಾಚ್ಛಬ್ದವೇಧಿನಾ ॥
ಅನುವಾದ
ಚಿಂತಿತನಾಗಿದ್ದಾಗಲೇ ಅವನಿಗೆ ತನ್ನದೊಂದು ದುಷ್ಕರ್ಮವು ನೆನಪಾಯಿತು. ಅದು ಶಬ್ದವೇಧೀ ಬಾಣವನ್ನು ಪ್ರಯೋಗಿಸಿದ ಘಟನೆ ನರೇಶನಿಂದ ಮೊದಲು ತಿಳಿಯದೇ ಆಗಿಹೋಗಿತ್ತು.॥4॥
ಮೂಲಮ್ - 5
ಅಮನಾಸ್ತೇವ ಶೋಕೇನ ರಾಮಶೋಕೇನ ಚ ಪ್ರಭುಃ ।
ದ್ವಾಭ್ಯಾಮಪಿ ಮಹಾರಾಜಃ ಶೋಕಾಭ್ಯಾಮಭಿತಪ್ಯತೇ ॥
ಅನುವಾದ
ಆ ಶೋಕದಿಂದ ಮತ್ತು ಶ್ರೀರಾಮನ ಶೋಕದಿಂದ ರಾಜನ ಮನಸ್ಸಿಗೆ ಭಾರೀ ವೇದನೆಯಾಯಿತು. ಆ ಎರಡೂ ಶೋಕಗಳಿಂದ ಮಹಾರಾಜನು ಸಂತಪ್ತನಾದನು.॥5॥
ಮೂಲಮ್ - 6
ದಹ್ಯಮಾನಸ್ತು ಶೋಕಾಭ್ಯಾಂ ಕೌಸಲ್ಯಾಮಾಹ ದುಃಖಿತಃ ।
ವೇಪಮಾನೋಽಂಜಲಿಂ ಕೃತ್ವಾ ಪ್ರಸಾದಾರ್ಥಮವಾಙ್ಮುಖಃ ॥
ಅನುವಾದ
ಆ ಎರಡೂ ಶೋಕಗಳಿಂದ ದಗ್ಧನಾದ ದುಃಖೀ ದಶರಥನು ತಲೆತಗ್ಗಿಸಿ, ಗಡ-ಗಡನೆ ನಡುಗುತ್ತಾ ಕೌಸಲ್ಯೆಯನ್ನು ಒಲಿಸಲು ಕೈಮುಗಿದು ಹೇಳಿದನು.॥6॥
ಮೂಲಮ್ - 7
ಪ್ರಸಾದಯೇ ತ್ವಾಂ ಕೌಸಲ್ಯೇ ರಚಿತೋಽಯಂ ಮಯಾಂಜಲಿಃ ।
ವತ್ಸಲಾ ಚಾನೃಶಂಸಾ ಚ ತ್ವಂ ಹಿ ನಿತ್ಯಂ ಪರೇಷ್ವಪಿ ॥
ಅನುವಾದ
ಕೌಸಲ್ಯೆ! ನಾನು ನಿನ್ನಲ್ಲಿ ಬೇಡುತ್ತಿದ್ದೇನೆ, ನೀನು ಪ್ರಸನ್ನಳಾಗು. ನೋಡು, ನಾನು ಎರಡೂ ಕೈಗಳನ್ನು ಮುಗಿದಿರುವೆನು. ನೀನಾದರೋ ಬೇರೆಯವರ ಮೇಲೆಯೂ ಸಹ ವಾತ್ಸಲ್ಯದಿಂದ ದಯೆ ತೋರುವವಳು. (ಮತ್ತೆ ನನ್ನ ಕುರಿತು ಇಷ್ಟು ಕಠೋರವೇಕೆ?॥7॥
ಮೂಲಮ್ - 8
ಭರ್ತಾ ತು ಖಲು ನಾರೀಣಾಂಗುಣವಾನ್ ನಿರ್ಗುಣೋಽಪಿ ವಾ ।
ಧರ್ಮಂ ವಿಮೃಶಮಾನಾನಾಂಪ್ರತ್ಯಕ್ಷಂ ದೇವಿ ದೈವತಮ್ ॥
ಅನುವಾದ
ದೇವಿ! ಪತಿಯು ಗುಣವಂತನಿರಲೀ ಗುಣಹೀನನಾಗಿರಲಿ, ಧರ್ಮದೃಷ್ಟಿಯುಳ್ಳ ಸತೀ ನಾರಿಯರಿಗೆ ಅವನು ಪ್ರತ್ಯಕ್ಷ ದೇವತೆಯೇ ಆಗಿದ್ದಾನೆ.॥8॥
ಮೂಲಮ್ - 9
ಸಾ ತ್ವಂ ಧರ್ಮಪರಾ ನಿತ್ಯಂ ದೃಷ್ಟಲೋಕಪರಾವರಾ ।
ನಾರ್ಹಸೇ ವಿಪ್ರಯಂ ವಕ್ತುಂ ದುಃಖಿತಾಪಿ ಸುದುಃಖಿತಮ್ ॥
ಅನುವಾದ
ನೀನಾದರೋ ಸದಾ ಧರ್ಮತತ್ಪರಳಾಗಿ ಇರುವವಳು ಹಾಗೂ ಲೋಕದಲ್ಲಿ ಒಳಿತು-ಕೆಡುಕುಗಳನ್ನು ತಿಳಿಯುವವಳಾಗಿರುವೆ. ನೀನೂ ಕೂಡ ದುಃಖಿತಳಾಗಿದ್ದರೂ ನಾನೂ ದುಃಖದಲ್ಲಿ ಬಿದ್ದಿರುವೆನು. ಆದ್ದರಿಂದ ನನ್ನಲ್ಲಿ ಹೀಗೆ ಕಠೋರ ವಚನಗಳನ್ನು ಆಡಬಾರದು.॥9॥
ಮೂಲಮ್ - 10
ತದ್ವಾಕ್ಯಂ ಕರುಣಂ ರಾಜ್ಞಃ ಶ್ರುತ್ವಾ ದೀನಸ್ಯ ಭಾಷಿತಮ್ ।
ಕೌಸಲ್ಯಾವ್ಯಸೃಜದ್ ವಾಷ್ಪಂ ಪ್ರಣಾಲೀವ ನವೋದಕಮ್ ॥
ಅನುವಾದ
ದುಃಖಿತನಾದ ದಶರಥನು ಹೇಳಿದ ಆ ಕರುಣಾಜನಕ ಮಾತುಗಳನ್ನು ಕೇಳಿ ಕೌಸಲ್ಯೆಯು ತನ್ನ ಕಣ್ಣುಗಳಿಂದ ಛಾವಣಿಯಿಂದ ಹೊಸ ಮಳೆಯ ನೀರು ತೊಟ್ಟಿಕ್ಕುವಂತೆ ಕಣ್ಣೀರನ್ನು ಹರಿಸತೊಡಗಿದಳು.॥10॥
ಮೂಲಮ್ - 11
ಸಾ ಮೂರ್ಧ್ನಿ ಬದ್ಧ್ವಾ ರುದತೀ ರಾಜ್ಞಃ ಪದ್ಮಮಿವಾಂಜಲಿಮ್ ।
ಸಂಭ್ರಮಾದಬ್ರವೀತ್ ತ್ರಸ್ತಾ ತ್ವರಮಾಣಾಕ್ಷರಂ ವಚಃ ॥
ಅನುವಾದ
ಅವಳು ಅಧರ್ಮದ ಭಯದಿಂದ ಅಳುತ್ತಾ, ರಾಜನು ಜೋಡಿಸಿದ ಕಮಲಸದೃಶ ಕೈಗಳನ್ನು ತನ್ನ ತಲೆಯ ಮೇಲಿರಿಸಿಕೊಂಡು, ಗಾಬರಿಯಿಂದಾಗಿ ಅವಸರವಾಗಿ ಒಂದೊಂದೇ ಶಬ್ದವನ್ನು ಉಚ್ಚರಿಸುತ್ತಾ ನುಡಿದಳು.॥11॥
ಮೂಲಮ್ - 12
ಪ್ರಸೀದ ಶಿರಸಾ ಯಾಚೇ ಭೂಮೌ ನಿಪತಿತಾಸ್ಮಿ ತೇ ।
ಯಾಚಿತಾಸ್ಮಿ ಹತಾ ದೇವ ಹಂತವ್ಯಾಹಂ ನಹಿ ತ್ವಯಾ ॥
ಅನುವಾದ
ಸ್ವಾಮಿ! ನಾನು ನಿಮ್ಮ ಮುಂದೆ ನೆಲದಲ್ಲಿ ಬಿದ್ದಿರುವೆನು, ನಿಮ್ಮ ಪಾದಗಳಲ್ಲಿ ಶಿರವನ್ನಿಟ್ಟು ಯಾಚಿಸುತ್ತಿದ್ದೇನೆ, ನೀವು ಪ್ರಸನ್ನ ರಾಗಿರಿ. ನೀವೇ ನನ್ನಲ್ಲಿ ಯಾಚಿಸಿದರೆ ನಾನು ಸತ್ತೇ ಹೋಗುವೆನು. ನನ್ನಿಂದ ಅಪರಾಧವಾಗಿದ್ದರೂ ನಾನು ನಿಮ್ಮಿಂದ ಕ್ಷಮೆ ಪಡೆಯಲು ಯೋಗ್ಯಳಾಗಿದ್ದೇನೆ, ಪ್ರಹಾರಕ್ಕೆ ಯೋಗ್ಯಳಲ್ಲ.॥12॥
ಮೂಲಮ್ - 13
ನೈಷಾ ಹಿ ಸಾ ಸ್ತ್ರೀ ಭವತಿಶ್ಲಾಘನೀಯೇನ ಧೀಮತಾ ।
ಉಭಯೋರ್ಲೋಕಯೋರ್ಲೋಕೆ ಪತ್ಯಾ ಯಾ ಸಂಪ್ರಸಾದ್ಯತೇ ॥
ಅನುವಾದ
ಇಹ-ಪರಗಳೆರಡರಲ್ಲಿಯೂ ಧರ್ಮಾತ್ಮನೆಂದು ಕೀರ್ತಿಗಳಿಸಿದ ಧೀಮಂತ ಪತಿಯ ವಿಷಯದಲ್ಲಿ ವಿಧೇಯಳಾಗಿ ಇರುವುದಿಲ್ಲವೋ, ಗಂಡನು ಕ್ಷಮೆಬೇಡಬೇಕೆಂದು ಬಯಸುವ ಕುಲಸ್ತ್ರೀಯು ನಿಶ್ಚಯವಾಗಿ ಸಾಧ್ವಿಯೇ ಅಲ್ಲ.॥13॥
ಮೂಲಮ್ - 14
ಜಾನಾಮಿ ಧರ್ಮಂ ಧರ್ಮಜ್ಞ ತ್ವಾಂ ಜಾನೇ ಸತ್ಯವಾದಿನಮ್ ।
ಪುತ್ರಶೋಕಾರ್ತಯಾ ತತ್ತು ಮಯಾ ಕಿಮಪಿ ಭಾಷಿತಮ್ ॥
ಅನುವಾದ
ಧರ್ಮಜ್ಞ ಮಹಾರಾಜರೇ! ನಾನು ಸ್ತ್ರೀಧರ್ಮವನ್ನು ಅರಿತಿರುವೆನು ಹಾಗೂ ನೀವು ಸತ್ಯವಾದಿಗಳು ಎಂದೂ ತಿಳಿದಿದ್ದೇನೆ. ಈಗ ನಾನು ಹೇಳಬಾರದ ಮಾತನ್ನು ಆಡಿದುದು ಪುತ್ರಶೋಕದಿಂದ ಪೀಡಿತಳಾದ ಕಾರಣ ನನ್ನ ಬಾಯಿಯಿಂದ ಬಂತು.॥14॥
ಮೂಲಮ್ - 15
ಶೋಕೋ ನಾಶಯತೇ ಧೈರ್ಯಂ ಶೋಕೋ ನಾಶಯತೇ ಶ್ರುತಮ್ ।
ಶೋಕೋ ನಾಶಯತೇ ಸರ್ವಂ ನಾಸ್ತಿ ಶೋಕಸಮೋ ರಿಪುಃ ॥
ಅನುವಾದ
ಶೋಕವು ಧೈರ್ಯವನ್ನು ನಾಶಮಾಡಿಬಿಡುತ್ತದೆ. ಶೋಕವು ಶಾಸ್ತ್ರಜ್ಞಾನವನ್ನು ಲುಪ್ತಗೊಳಿಸುತ್ತದೆ, ಶೋಕವು ಎಲ್ಲವನ್ನು ಹಾಳುಮಾಡುವುದು; ಆದ್ದರಿಂದ ಶೋಕದಂತಹ ಶತ್ರು ಬೇರೊಂದಿಲ್ಲ.॥15॥
ಮೂಲಮ್ - 16
ಶಕ್ಯಮಾಪತಿತಃ ಸೋಢುಂ ಪ್ರಹಾರೋ ರಿಪುಹಸ್ತತಃ ।
ಸೋಢುಮಾಪತಿತಃ ಶೋಕಃ ಸುಸೂಕ್ಷ್ಮೋಽಪಿ ನ ಶಕ್ಯತೇ ॥
ಅನುವಾದ
ಶತ್ರುಗಳು ಪ್ರಹರಿಸುವ ಶಸ್ತ್ರಗಳ ಏಟುಗಳನ್ನು ಸಹಿಸಬಹುದು, ಆದರೆ ದೈವವಶ ಪ್ರಾಪ್ತವಾದ ಸ್ವಲ್ಪ ಶೋಕವನ್ನೂ ಸಹಿಸಲಾಗುವುದಿಲ್ಲ.॥16॥
ಮೂಲಮ್ - 17
ವನವಾಸಾಯ ರಾಮಸ್ಯ ಪಂಚರಾತ್ರೋಽತ್ರ ಗಣ್ಯತೇ ।
ಯಃ ಶೋಕಹತಹರ್ಷಾಯಾಃ ಪಂಚವರ್ಷೋಪಮೋ ಮಮ ॥
ಅನುವಾದ
ಶ್ರೀರಾಮನು ಕಾಡಿಗೆ ಹೋಗಿ ಇಂದಿಗೆ ಐದು ರಾತ್ರಿಗಳು ಕಳೆದವು. ನಾನು ಇದನ್ನೇ ಎಣಿಸುತ್ತಾ ಇದ್ದೆ. ಶೋಕವು ನನ್ನ ಹರ್ಷವನ್ನು ನಾಶಮಾಡಿಬಿಟ್ಟಿದೆ; ಆದ್ದರಿಂದ ಈ ಐದು ರಾತ್ರಿಗಳು ನನಗೆ ಐದು ವರ್ಷಗಳಂತೆ ಕಂಡುಬಂತು.॥17॥
ಮೂಲಮ್ - 18
ತಂ ಹಿ ಚಿಂತಯಮಾನಾಯಾಃ ಶೋಕೋಽಯಂ ಹೃದಿ ವರ್ಧತೇ ।
ನದೀನಾಮಿವ ವೇಗೇನ ಸಮುದ್ರಸಲಿಲಂ ಮಹತ್ ॥
ಅನುವಾದ
ಶ್ರೀರಾಮನನ್ನೇ ಚಿಂತಿಸುವುರಿಂದ ನನ್ನ ಹೃದಯದ ಈ ಶೋಕವು ನದಿಗಳ ವೇಗದಿಂದ ಸಮುದ್ರದ ಜಲ ಹೆಚ್ಚುವಂತೆಯೇ ಬೆಳೆಯುತ್ತಾ ಹೋಗುತ್ತದೆ.॥18॥
ಮೂಲಮ್ - 19
ಏವಂ ಹಿ ಕಥಯಂತ್ಯಾಸ್ತು ಕೌಸಲ್ಯಾಯಾಃ ಶುಭಂ ವಚಃ ।
ಮಂದರಶ್ಮಿರಭೂತ್ಸೂರ್ಯೋ ರಜನೀ ಚಾಭ್ಯವರ್ತತ ॥
ಮೂಲಮ್ - 20
ಅಥ ಪ್ರಹ್ಲಾದಿತೋ ವಾಕ್ಯೈರ್ದೇವ್ಯಾ ಕೌಸಲ್ಯಯಾ ನೃಪಃ ।
ಶೋಕೇನ ಚ ಸಮಾಕ್ರಾಂತೋ ನಿದ್ರಾಯಾ ವಶಮೇಯಿವಾನ್ ॥
ಅನುವಾದ
ಕೌಸಲ್ಯೆಯು ಹೀಗೆ ಸೂರ್ಯಕಿರಣಗಳು ಮಂದವಾಗಿ ರಾತ್ರಿಯು ಬರುವಂತೆ ಶುಭವಚನಗಳನ್ನು ಹೇಳುತ್ತಾ ಇದ್ದಳು. ಕೌಸಲ್ಯೆಯ ಈ ಮಾತುಗಳಿಂದ ರಾಜನಿಗೆ ಬಹಳ ಸಂತೋಷವಾಯಿತು, ಜೊತೆಗೆ ಅವನು ಶ್ರೀರಾಮನ ಶೋಕದಿಂದ ಪೀಡಿತನಾಗಿದ್ದನು. ಹೀಗೆ ಹರ್ಷ ಮತ್ತು ಶೋಕದ ಅವಸ್ಥೆಯಲ್ಲಿ ಅವನಿಗೆ ನಿದ್ದೆ ಬಂತು.॥19-20॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಅರವತ್ತೆರಡನೆಯ ಸರ್ಗ ಪೂರ್ಣವಾಯಿತು॥62॥