०६१ कौसल्याकृतदशरथनिन्दा

वाचनम्
ಭಾಗಸೂಚನಾ

ಕೌಸಲ್ಯಾದೇವಿಯ ವಿಲಾಪ, ದಶರಥನ ನಿಂದನೆ

ಮೂಲಮ್ - 1

ವನಂ ಗತೇ ಧರ್ಮರತೇ ರಾಮೇ ರಮಯತಾಂ ವರೇ ।
ಕೌಸಲ್ಯಾ ರುದತೀ ಚಾರ್ತಾ ಭರ್ತಾರಮಿದಮಬ್ರವೀತ್ ॥

ಅನುವಾದ

ಪ್ರಜಾಜನರಿಗೆ ಆನಂದ ಕೊಡುವ ಪುರುಷಶ್ರೇಷ್ಠ ಧರ್ಮ ಪರಾಯಣ ಶ್ರೀರಾಮನು ವನಕ್ಕೆ ಹೊರಟು ಹೋದ ಬಳಿಕ ಆರ್ತಳಾಗಿ ಅಳುತ್ತಿರುವ ಕೌಸಲ್ಯೆಯು ತನ್ನ ಪತಿಯಲ್ಲಿ ಹೀಗೆ ಹೇಳಿದಳು.॥1॥

ಮೂಲಮ್ - 2

ಯದ್ಯಪಿ ತ್ರಿಷು ಲೋಕೇಷು ಪ್ರಥಿತಂ ತೇ ಮಹದ್ಯಶಃ ।
ಸಾನುಕ್ರೋಶೋ ವದಾನ್ಯಶ್ಚ ಪ್ರಿಯವಾದೀ ಚ ರಾಘವಃ ॥

ಅನುವಾದ

ಮಹಾರಾಜರೇ! ಮೂರು ಲೋಕಗಳಲ್ಲಿ ನಿಮ್ಮ ಮಹಾನ್ ಯಶ ಹರಡಿದ್ದರೂ, ರಘುಕುಲ ನರೇಶ ದಶರಥನು ಬಹಳ ದಯಾಳು, ಉದಾರ ಮತ್ತು ಪ್ರಿಯವಚನವನ್ನಾಡುವವನು ಎಂದೇ ಜನರು ಈಗಲೂ ತಿಳಿದಿದ್ದಾರೆ.॥2॥

ಮೂಲಮ್ - 3

ಕಥಂ ನರವರಶ್ರೇಷ್ಠ ಪುತ್ರೌ ತೌ ಸಹ ಸೀತಯಾ ।
ದುಃಖಿತೌ ಸುಖಸಂವೃದ್ಧೌ ವನೇ ದುಃಖಂ ಸಹಿಷ್ಯತಃ ॥

ಅನುವಾದ

ನರೇಶರಲ್ಲಿ ಶ್ರೇಷ್ಠ ಆರ್ಯಪುತ್ರ! ಆದರೂ ಸುಖದಲ್ಲಿ ಬೆಳೆದ ನಿಮ್ಮ ಆ ಇಬ್ಬರೂ ಪುತ್ರರು ಸೀತೆಯೊಂದಿಗೆ ವನವಾಸದ ಕಷ್ಟ ಹೇಗೆ ಸಹಿಸುವರು ಎಂಬ ಮಾತಿನ ವಿಚಾರವೇ ನೀವು ಮಾಡಿಲ್ಲ.॥3॥

ಮೂಲಮ್ - 4

ಸಾ ನೂನಂ ತರುಣೀ ಶ್ಯಾಮಾ ಸುಕುಮಾರೀ ಸುಖೋಚಿತಾ ।
ಕಥಮುಷ್ಣಂ ಚ ಶೀತಂ ಚ ಮೈಥಿಲೀ ವಿಸಹಿಷ್ಯತೇ ॥

ಅನುವಾದ

ಆ ಹದಿನಾರು-ಹದಿನೆಂಟು ವರ್ಷಗಳ ಸುಕುಮಾರಿ ತರುಣೀ ಮಿಥಿಲೇಶಕುಮಾರೀ ಸೀತೆಯು ಸುಖ ಭೋಗಿಸಲು ಯೋಗ್ಯವಾಗಿದ್ದಾಳೆ, ಕಾಡಿನಲ್ಲಿ ಬಿಸಿಲು, ಚಳಿ ಹೇಗೆ ಸಹಿಸಬಲ್ಲಳು.॥4॥

ಮೂಲಮ್ - 5

ಭುಕ್ತ್ವಾಶನಂ ವಿಶಾಲಾಕ್ಷೀ ಸೂಪದಂಶಾನ್ವಿತಂಶುಭಮ್ ।
ವನ್ಯಂ ನೈವಾರಮಾಹಾರಂ ಕಥಂ ಸೀತೋಪಭೋಕ್ಷ್ಯತೇ ॥

ಅನುವಾದ

ವಿಶಾಲಲೋಚನೆ ಸೀತೆ ಸುಂದರ ವ್ಯಂಜನಗಳಿಂದ ಕೂಡಿದ ಸ್ವಾಧಿಷ್ಟ ಭೋಜನ ಮಾಡುತ್ತಿದ್ದವಳು ಈಗ ಅವಳು ಕಾಡಿನಲ್ಲಿ ಹುಲ್ಲಿನ ಅಕ್ಕಿಯ ಒಣ ಅನ್ನವನ್ನು ಹೇಗೆ ತಿನ್ನುವಳು.॥5॥

ಮೂಲಮ್ - 6

ಗೀತವಾದಿತ್ರನಿರ್ಘೋಷಂ ಶ್ರುತ್ವಾ ಶುಭಸಮನ್ವಿತಾ ।
ಕಥಂ ಕ್ರವ್ಯಾದಸಿಂಹಾನಾಂ ಶಬ್ದಂ ಶ್ರೋಷ್ಯತ್ಯಶೋಭನಮ್ ॥

ಅನುವಾದ

ಮಂಗಳಕರವಾದ ವಸ್ತುಗಳಿಂದ ಸಂಪನ್ನಳಾಗಿ ಸದಾ ಗೀತ-ವಾದ್ಯಗಳ ಮಧುರ ಧ್ವನಿಯನ್ನು ಕೇಳುತ್ತಿದ್ದ ಆಕೆಯು ಕಾಡಿನಲ್ಲಿ ಮಾಂಸಭಕ್ಷಿ ಸಿಂಹಗಳ ಕರ್ಕಶ (ಅಮಂಗಲಕರ) ಧ್ವನಿಗಳನ್ನು ಹೇಗೆ ಕೇಳಬಲ್ಲಳು.॥6॥

ಮೂಲಮ್ - 7

ಮಹೇಂದ್ರಧ್ವಜಸಂಕಾಶಃ ಕ್ವ ನು ಶೇತೇ ಮಹಾಭುಜಃ ।
ಭುಜಂ ಪರಿಘಸಂಕಾಶಮುಪಾಧಾಯ ಮಹಾಬಲಃ ॥

ಅನುವಾದ

ಯಾರು ಇಂದ್ರಧ್ವಜದಂತೆ ಸಮಸ್ತ ಲೋಕಗಳಿಗೆ ಉತ್ಸವ ಪ್ರದಾನ ಮಾಡುವವನಿದ್ದನೋ, ಆ ಮಹಾಬಲೀ, ಮಹಾ ಬಾಹು ಶ್ರೀರಾಮನು ತನ್ನ ಪರಿಘದಂತಹ ತೋಳನ್ನೇ ದಿಂಬಾಗಿಸಿ ಹೇಗೆ ಮಲಗುವನೋ.॥7॥

ಮೂಲಮ್ - 8

ಪದ್ಮವರ್ಣಂ ಸುಕೇಶಾಂತಂ ಪದ್ಮನಿಃಶ್ವಾಸಮುತ್ತಮಮ್ ।
ಕದಾ ದ್ರಕ್ಷ್ಯಾಮಿ ರಾಮಸ್ಯ ವದನಂ ಪುಷ್ಕರೇಕ್ಷಣಮ್ ॥

ಅನುವಾದ

ಕಮಲದಂತೆ ಕಾಂತಿಯುಳ್ಳ, ಸುಂದರ ಕೇಶಗಳಿಂದ ಶೋಭಿಸುವ, ಪ್ರತಿಯೊಂದು ಶ್ವಾಸವು ಕಮಲದಂತೆ ಸುಗಂಧಿತ ವಾಗಿದ್ದ, ಅರಳಿದ ತಾವರೆಯಂತೆ ಸುಂದರ ನೇತ್ರಗಳಿಂದ ಶೋಭಿಸುವ ಶ್ರೀರಾಮನ ಮನೋಹರ ಮುಖವನ್ನು ನಾನು ಎಂದು ನೋಡುವೆನೋ.॥8॥

ಮೂಲಮ್ - 9

ವಜ್ರಸಾರಮಯಂ ನೂನಂ ಹೃದಯಂ ಮೇ ನ ಸಂಶಯಃ ।
ಅಪಶ್ಯಂತ್ಯಾ ನ ತಂ ಯದ್ವೈ ಫಲತೀದಂ ಸಹಸ್ರಧಾ ॥

ಅನುವಾದ

ನನ್ನ ಹೃದಯು ಉಕ್ಕಿನದಾಗಿದೆ ಎಂಬುದರಲ್ಲಿ ಸಂಶಯವೇ ಇಲ್ಲ; ಏಕೆಂದರೆ ಶ್ರೀರಾಮನನ್ನು ನೋಡದೆ ಇದ್ದರೂ ನನ್ನ ಹೃದಯದ ಸಾವಿರಾರು ಹೋಳು ಆಗುವುದಿಲ್ಲವಲ್ಲ.॥9॥

ಮೂಲಮ್ - 10

ಯತ್ತ್ವಯಾಕರುಣಂ ಕರ್ಮ ವ್ಯಪೋಹ್ಯ ಮಮ ಬಾಂಧವಾಃ ।
ನಿರಸ್ತಾಃ ಪರಿಧಾವಂತಿಸುಖಾರ್ಹಾಃ ಕೃಪಣಾ ವನೇ ॥

ಅನುವಾದ

ನೀವು ಏನನ್ನೂ ಯೋಚಿಸದೆ ನನ್ನ ಬಾಂಧವರನ್ನು (ಕೈಕೆಯಿಯು ಹೇಳಿದ್ದರಿಂದ) ಹೊರ ಹಾಕಿ ನಿರ್ದಯವಾದ ಕರ್ಮ ಮಾಡಿದಿರಲ್ಲ. ಇದರಿಂದ ಅವರು ಸುಖ ಭೋಗಿಸಲು ಯೋಗ್ಯರಾಗಿದ್ದರೂ ದೀನರಾಗಿ ಕಾಡಿನಲ್ಲಿ ಅಲೆಯುತ್ತಿದ್ದಾರೆ.॥10॥

ಮೂಲಮ್ - 11

ಯದಿ ಪಂಚದಶೇ ವರ್ಷೇ ರಾಘವಃ ಪುನರೇಷ್ಯತಿ ।
ಜಹ್ಯಾದ್ರಾಜ್ಯಂ ಚ ಕೋಶಂ ಚ ಭರತೋ ನೋಪಲಕ್ಷ್ಯತೇ ॥

ಅನುವಾದ

ಹದಿನೈದನೆಯ ವರ್ಷ ಶ್ರೀರಾಮನು ಕಾಡಿನಿಂದ ಮರಳಿದಾಗ ಭರತನು ಅವನಿಗೆ ರಾಜ್ಯ-ಭಂಡಾರವನ್ನು ಬಿಟ್ಟುಕೊಡುವನು ಎಂದು ನನಗೆ ತೋರುವುದಿಲ್ಲ.॥11॥

ಮೂಲಮ್ - 12

ಭೋಜಯಂತಿ ಕಿಲ ಶ್ರಾದ್ಧೇ ಕೇಚಿತ್ಸ್ವಾನೇವ ಬಾಂಧವಾನ್ ।
ತತಃ ಪಶ್ಚಾತ್ಸಮೀಕ್ಷಂತೇ ಕೃತಕಾರ್ಯಾ ದ್ವಿಜೋತ್ತಮಾನ್ ॥

ಮೂಲಮ್ - 13

ತತ್ರ ಯೇ ಗುಣವಂತಶ್ಚ ವಿದ್ವಾಂಸಶ್ಚ ದ್ವಿಜಾತಯಃ ।
ನ ಪಶ್ಚಾತ್ತೇಽಭಿಮನ್ಯಂತೇ ಸುಧಾಮಪಿ ಸುರೋಪಮಾಃ ॥

ಅನುವಾದ

ಕೆಲವರು ಶ್ರಾದ್ಧದಲ್ಲಿ ತಮ್ಮ ಬಂಧುಗಳಿಗೆ (ದೌಹಿತ್ರಾದಿ) ಊಟ ಬಡಿಸುತ್ತಾರೆ, ಮತ್ತು ಕೃತಕೃತ್ಯರಾಗಿ ಆಮಂತ್ರಿಸಿದ ಶ್ರೇಷ್ಠ ಬ್ರಾಹ್ಮಣರ ಕಡೆಗೆ ಗಮನ ಕೊಡುವರು. ಆದರೆ ಅಲ್ಲಿ ಬಂದಿರುವ ಗುಣವಂತ, ವಿದ್ವಾಂಸರಾದ ದೇವ ತುಲ್ಯ ಉತ್ತಮ ಬ್ರಾಹ್ಮಣರು ಎರಡನೇ ಪಂಕ್ತಿಯಲ್ಲಿ ಅಮೃತವನ್ನು ಬಡಿಸಿದರೂ ಅದನ್ನು ಸ್ವೀಕರಿಸುವುದಿಲ್ಲ.॥12-13॥

ಮೂಲಮ್ - 14

ಬ್ರಾಹ್ಮಣೇಷ್ವಪಿ ವೃತ್ತೇಷು ಭುಕ್ತಶೇಷಂ ದ್ವಿಜೋತ್ತಮಾಃ ।
ನಾಭ್ಯುಪೇತುಮಲಂ ಪ್ರಾಜ್ಞಾಃ ಶೃಂಗಚ್ಛೇದಮಿವರ್ಷಭಾಃ ॥

ಅನುವಾದ

ಮೊದಲ ಪಂಕ್ತಿಯಲ್ಲಿಯೂ ಬ್ರಾಹ್ಮಣರೇ ಭೋಜನ ಮಾಡಿ ಎದ್ದಿದರೂ, ಶ್ರೇಷ್ಠ, ವಿದ್ವಾಂಸ ಬ್ರಾಹ್ಮಣರು ಕೋಡಿನ ತುದಿಯನ್ನು ಕತ್ತರಿಸಿದ ಎತ್ತಿನಂತೆ ಅಪಮಾನದ ಭಯದಿಂದ ಆ ಭುಕ್ತಶೇಷ ಅನ್ನವನ್ನು ಸ್ವೀಕರಿಸುವುದಿಲ್ಲ.॥14॥

ಮೂಲಮ್ - 15

ಏವಂ ಕನೀಯಸಾ ಭ್ರಾತ್ರಾ ಭುಕ್ತಂ ರಾಜ್ಯಂ ವಿಶಾಂಪತೇ ।
ಭ್ರಾತ್ರಾ ಜ್ಯೇಷ್ಠೋ ವರಿಷ್ಠಶ್ಚ ಕಿಮರ್ಥಂನಾವಮನ್ಯತೇ ॥

ಅನುವಾದ

ಮಹಾರಾಜರೇ! ಹೀಗೆಯೇ! ಶ್ರೇಷ್ಠಭ್ರಾತೃವು ತನ್ನ ಸಹೋದರನು ಭೋಗಿಸಿದ ರಾಜ್ಯವನ್ನು ಹೇಗೆ ಸ್ವೀಕರಿಸ ಬಲ್ಲನು? ಅವನು ಅದನ್ನು ತಿರಸ್ಕರಿಸಿಬಿಡಲಾರನೇ.॥15॥

ಮೂಲಮ್ - 16

ನಪರೇಣಾಹೃತಂ ಭಕ್ಷ್ಯಂ ವ್ಯಾಘ್ರಃ ಖಾದಿತುಮಿಚ್ಛತಿ ।
ಏವಮೇವ ನರವ್ಯಾಘ್ರಃ ಪರಲೀಢಂ ನ ಮಂಸ್ಯತೇ ॥

ಅನುವಾದ

ಹುಲಿಯು ಇತರ ಪ್ರಾಣಿಗಳು ತಂದು-ತಿಂದ ಬೇಟೆಯನ್ನು ತಿನ್ನಲು ಬಯಸದಿರುವಂತೆಯೇ ಪುರುಷಸಿಂಹ ಶ್ರೀರಾಮನು ಬೇರೆಯವರು ಭೋಗಿಸಿದ (ಎಂಜಲು) ರಾಜ್ಯ ಭೋಗವನ್ನು ಸ್ವೀಕರಿಸಲಾರನು.॥16॥

ಮೂಲಮ್ - 17

ಹವಿರಾಜ್ಯಂ ಪುರೋಡಾಶಃ ಕುಶಾ ಯೂಪಾಶ್ಚ ಖಾದಿರಾಃ ।
ನೈತಾನಿ ಯಾತಯಾಮಾನಿ ಕುರ್ವಂತಿ ಪುನರಧ್ವರೇ ॥

ಅನುವಾದ

ಹವಿಸ್ಸು, ತುಪ್ಪ, ಪುರೋಡಾಶ, ಕುಶ, ಖದಿರ (ಕಾಚು) ಮರದ ಯೂಪ-ಇವುಗಳನ್ನು ಒಂದು ಯಜ್ಞದಲ್ಲಿ ಬಳಸಿದ ಬಳಿಕ ಯಾತಯಾಮ (ಉಪಭುಕ್ತ)ವಾಗುತ್ತದೆ. ಅದಕ್ಕಾಗಿ ವಿದ್ವಾಂಸರು ಮತ್ತೆ ಇನ್ನೊಂದು ಯಜ್ಞದಲ್ಲಿ ಉಪಯೋಗಿಸುವುದಿಲ್ಲ.॥17॥

ಮೂಲಮ್ - 18

ತಥಾ ಹ್ಯಾತ್ತಮಿದಂ ರಾಜ್ಯಂ ಹೃತಸಾರಾಂಸುರಾಮಿವ ।
ನಾಭಿಮಂತುಮಲಂ ರಾಮೋ ನಷ್ಟಸೋಮಮಿವಾಧ್ವರಮ್ ॥

ಅನುವಾದ

ಹೀಗೆಯೇ ನಿಃಸಾರಸುರೆ ಮತ್ತು ಭುಕ್ತಾವಶಿಷ್ಟಯಜ್ಞದ ಸೋಮರಸದಂತೆ, ಒಬ್ಬರು ಭೋಗಿಸಿದ ಈ ರಾಜ್ಯವನ್ನು ಶ್ರೀರಾಮನು ಸ್ವೀಕರಿಸಲಾರನು.॥18॥

ಮೂಲಮ್ - 19

ನೈವಂವಿಧಮಸತ್ಕಾರಂ ರಾಘವೋ ಮರ್ಷಯಿಷ್ಯತಿ ।
ಬಲವಾನಿವ ಶಾರ್ದೂಲೋ ವಾಲಧೇರಭಿಮರ್ಶನಮ್ ॥

ಅನುವಾದ

ಬಲಿಷ್ಠವಾದ ಹುಲಿಯು ಯಾರಾದರೂ ತನ್ನ ಬಾಲ ಹಿಡಿದರೆ ಸಹಿಸದಿರುವಂತೆ ಶ್ರೀರಾಮನು ಇಂತಹ ಅಪಮಾನವನ್ನು ಸಹಿಸಲಾರನು.॥19॥

ಮೂಲಮ್ - 20

ನೈತಸ್ಯ ಸಹಿತಾ ಲೋಕಾ ಭಯಂ ಕುರ್ಯುರ್ಮಹಾಮೃಧೇ ।
ಅಧರ್ಮಂ ತ್ವಿಹ ಧರ್ಮಾತ್ಮಾ ಲೋಕಂ ಧರ್ಮೇಣ ಯೋಜಯೇತ್ ॥

ಅನುವಾದ

ಸಮಸ್ತಲೋಕಗಳು ಒಟ್ಟಾಗಿ ಮಹಾಸಮರದಲ್ಲಿ ಬಂದರೂ ಶ್ರೀರಾಮಚಂದ್ರನ ಮನಸ್ಸಿನಲ್ಲಿ ಭಯ ಉತ್ಪನ್ನ ಮಾಡಲಾರರು. ಹೀಗೆಯೇ ರಾಜ್ಯವನ್ನು ಪಡೆಯುವುದರಲ್ಲಿ ಅಧರ್ಮವೆಂದು ತಿಳಿದು ಅವನು ಇದರ ಮೇಲೆ ಅಧಿಕಾರ ಪಡೆಯಲಿಲ್ಲ. ಧರ್ಮಾತ್ಮ ನಾದವನು ಸಮಸ್ತ ಜಗತ್ತನ್ನು ಧರ್ಮದಲ್ಲಿ ತೊಡಗಿಸುವವನು ಸ್ವತಃ ಅಧರ್ಮ ಹೇಗೆ ಮಾಡಬಲ್ಲನು.॥20॥

ಮೂಲಮ್ - 21

ನನ್ವಸೌ ಕಾಂಚನೈರ್ಬಾಣೈರ್ಮಹಾವೀರ್ಯೋ ಮಹಾಭುಜಃ ।
ಯುಗಾಂತ ಇವ ಭೂತಾನಿ ಸಾಗರಾನಪಿ ನರ್ದಹೇತ್ ॥

ಅನುವಾದ

ಮಹಾಪರಾಕ್ರಮಿ ಮಹಾಬಾಹು ಶ್ರೀರಾಮನು ತನ್ನ ಸುವರ್ಣಭೂಷಿತ ಬಾಣಗಳಿಂದ ಎಲ್ಲ ಸಮುದ್ರಗಳನ್ನು ಸಂವರ್ತಕ ಅಗ್ನಿಯು ಪ್ರಳಯಕಾಲದಲ್ಲಿ ಸಂಪೂರ್ಣಪ್ರಾಣಿಗಳನ್ನು ಸುಟ್ಟುಬಿಡುವಂತೆ, ದಗ್ಧಗೊಳಿಸಬಲ್ಲನು.॥21॥

ಮೂಲಮ್ - 22

ಸ ತಾದೃಶಃ ಸಿಂಹಬಲೋ ವೃಷಭಾಕ್ಷೋ ನರರ್ಷಭಃ ।
ಸ್ವಯಮೇವ ಹತಃ ಪಿತ್ರಾಜಲಜೇನಾತ್ಮಜೋ ಯಥಾ ॥

ಅನುವಾದ

ಸಿಂಹದಂತೆ ಬಲಾಢ್ಯನೂ, ವೃಷಭಾಕ್ಷನೂ, ನರಶ್ರೇಷ್ಠನೂ ಆದ ವೀರಪುತ್ರ ಶ್ರೀರಾಮನು ತಂದೆಯ ಕೈಯಿಂದಲೇ ಮೀನಿನ ಮರಿಯನ್ನು ತಂದೆ ಮೀನೇ ತಿಂದು ಹಾಕುವಂತೆ ರಾಜ್ಯದಿಂದ ವಂಚಿತನಾದನು.॥22॥

ಮೂಲಮ್ - 23

ದ್ವಿಜಾತಿಚರಿತೋ ಧರ್ಮಃ ಶಾಸ್ತ್ರೇದೃಷ್ಟಃ ಸನಾತನೈಃ ।
ಯದಿ ತೇ ಧರ್ಮನಿರತೇ ತ್ವಯಾ ಪುತ್ರೇ ವಿವಾಸಿತೇ ॥

ಅನುವಾದ

ನೀವೇ ಧರ್ಮ ಪರಾಯಣ ಪುತ್ರನನ್ನು ಕಾಡಿಗೆ ಕಳಿಸಿದಿರಿ, ಆದ್ದರಿಂದ ಸನಾತನ ಋಷಿಗಳು ವೇದಗಳಲ್ಲಿ ಸಾಕ್ಷಾತ್ಕಾರ ಮಾಡಿಕೊಂಡ ಹಾಗೂ ಶ್ರೇಷ್ಠ ದ್ವಿಜರು ತಮ್ಮ ಆಚರಣೆಯಲ್ಲಿ ತಂದಿರುವ ಧರ್ಮವು ನಿಮ್ಮ ದೃಷ್ಟಿಯಲ್ಲಿ ಸತ್ಯವಾಗಿದೆಯೋ ಇಲ್ಲವೋ.॥23॥

ಮೂಲಮ್ - 24

ಗತಿರೇಕಾ ಪತಿರ್ನಾರ್ಯಾ ದ್ವಿತೀಯಾ ಗತಿರಾತ್ಮಜಃ ।
ತೃತೀಯಾ ಜ್ಞಾತಯೋ ರಾಜಂಶ್ಚತುರ್ಥೀ ನೇಹ ವಿದ್ಯತೇ ॥

ಅನುವಾದ

ಮಹಾರಾಜರೇ! ನಾರಿಗಾಗಿ ಒಂದೇ ಆಸರೆ ಆಕೆಯ ಪತಿಯಾಗಿದ್ದಾನೆ, ಇನ್ನೊಬ್ಬ ಪುತ್ರನಾಗಿದ್ದಾನೆ, ಮೂರನೆಯದಾಗಿ ತಂದೆ-ಸಹೋದರ-ಬಂಧುಬಾಂಧವರಿದ್ದಾರೆ. ನಾಲ್ಕನೆಯ ಆಸರೆ ಆಕೆಗೆ ಯಾವುದೂ ಇಲ್ಲ.॥24॥

ಮೂಲಮ್ - 25

ತತ್ರ ತ್ವಂ ಮಮ ನೈವಾಸಿ ರಾಮಶ್ಚ ವನಮಾಹಿತಃ ।
ನ ವನಂ ಗಂತುಮಿಚ್ಛಾಮಿ ಸರ್ವಥಾ ಹಾ ಹತಾ ತ್ವಯಾ ॥

ಅನುವಾದ

ಈ ಆಸರೆಗಳಲ್ಲಿ ನೀವಾದರೋ ನನ್ನವರು ಅಲ್ಲವೇ ಅಲ್ಲ. (ಸವತಿಯ ಆಧೀನರಾಗಿರುವಿರಿ) ಎರಡನೆಯ ಆಸರೆಯಾದ ಶ್ರೀರಾಮನನ್ನು ಕಾಡಿಗೆ ಕಳಿಸಿದಿರಿ. (ಬಂಧು-ಬಾಂಧವರು ದೂರವಾಗಿದ್ದಾರೆ. ಆದ್ದರಿಂದ ಮೂರನೆಯದಾದ ಆಸರೆಯೂ ಇಲ್ಲ) ನಿಮ್ಮ ಸೇವೆ ಬಿಟ್ಟು ನಾನು ಶ್ರೀರಾಮನ ಬಳಿಗೆ ಕಾಡಿಗೆ ಹೋಗಲಾರೆನು, ಆದ್ದರಿಂದ ಸರ್ವಥಾ ನಿಮ್ಮಿಂದ ವಂಚಿತಳಾಗಿರುವೆನು.॥25॥

ಮೂಲಮ್ - 26

ಹತಂ ತ್ವಯಾ ರಾಷ್ಟ್ರಮಿದಂ ಸರಾಜ್ಯಂ
ಹತಾಃ ಸ್ಮ ಸರ್ವಾಃ ಸಹ ಮಂತ್ರಿಭಿಶ್ಚ ।
ಹತಾ ಸಪುತ್ರಾಸ್ಮಿ ಹತಾಶ್ಚ ಪೌರಾಃ
ಸುತಶ್ಚ ಭಾರ್ಯಾ ಚ ತವ ಪ್ರಹೃಷ್ಟೌ ॥

ಅನುವಾದ

ನೀವು ಶ್ರೀರಾಮನನ್ನು ವನಕ್ಕೆ ಕಳಿಸಿ ಈ ರಾಷ್ಟ್ರದ ಹಾಗೂ ನೆರೆಯ ಇತರ ರಾಜ್ಯಗಳನ್ನು ನಾಶಮಾಡಿಬಿಟ್ಟಿರಿ, ಮಂತ್ರಿಗಳ ಸಹಿತ ಎಲ್ಲ ಪ್ರಜೆಗಳನ್ನು ಕೊಂದುಬಿಟ್ಟಿರಿ. ನಿಮ್ಮಿಂದ ಪುತ್ರಸಹಿತ ನಾನೂ ವಂಚಿತಳಾದೆ, ಈ ನಗರದ ನಿವಾಸಿಗಳೂ ನಷ್ಟ ಪ್ರಾಯರಾದರು. ಕೇವಲ ನಿಮ್ಮ ಪುತ್ರ ಭರತ ಮತ್ತು ಕೈಕೇಯಿಯು ಇಬ್ಬರೇ ಪ್ರಸನ್ನರಾಗಿದ್ದಾರೆ.॥26॥

ಮೂಲಮ್ - 27

ಇಮಾಂ ಗಿರಂ ದಾರುಣಶಬ್ದಸಂಹಿತಾಂ
ನಿಶಮ್ಯ ರಾಮೇತಿ ಮುಮೋಹ ದುಃಖಿತಃ ।
ತತಃ ಸ ಶೋಕಂ ಪ್ರವಿವೇಶ ಪಾರ್ಥಿವಃ
ಸ್ವದುಷ್ಕತಂ ಚಾಪಿ ಪುನಸ್ತಥಾಸ್ಮರತ್ ॥

ಅನುವಾದ

ಕೌಸಲ್ಯೆಯ ಈ ಕಠೋರವಾದ ಮಾತುಗಳನ್ನು ಕೇಳಿ ದಶರಥನಿಗೆ ಬಹಳ ದುಃಖವಾಯಿತು. ಅವನು ‘ಹಾ ರಾಮಾ!’ ಎಂದು ಹೇಳುತ್ತಾ ಮೂರ್ಛೆಹೋದನು. ಶೋಕದಲ್ಲಿ ಮುಳುಗಿದನು. ಮತ್ತೆ ಆಗಲೇ ಅವನಿಗೆ ತನ್ನದೊಂದು ಹಳೆಯ ದುಷ್ಕರ್ಮದ ಸ್ಮರಣೆಯಾಯಿತು, ಅದರಿಂದ ಅವನಿಗೆ ಈ ದುಃಖ ಪ್ರಾಪ್ತವಾಗಿತ್ತು.॥27॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಅರವತ್ತೊಂದನೆಯ ಸರ್ಗ ಪೂರ್ಣವಾಯಿತು.॥61॥