०६० सुमन्त्रकृतकौसल्यासान्त्वनम्

वाचनम्
ಭಾಗಸೂಚನಾ

ಕೌಸಲ್ಯೆಯ ವಿಲಾಪ, ಸುಮಂತ್ರನಿಂದ ಸಮಾಧಾನ

ಮೂಲಮ್ - 1

ತತೋ ಭೂತೋಪಸೃಷ್ಟೇವ ವೇಪಮಾನಾ ಪುನಃ ಪುನಃ ।
ಧರಣ್ಯಾಂ ಗತಸತ್ತ್ವೇವ ಕೌಸಲ್ಯಾ ಸೂತಮಬ್ರವೀತ್ ॥

ಅನುವಾದ

ಕೌಸಲ್ಯೆಯು ಭೂತಸಂಚಾರವಾದವಳಂತೆ ಪದೇ-ಪದೇ ನಡುಗುತ್ತಾ ಮೂರ್ಛಿತಳಂತಾದಳು. ಮತ್ತೆ ಸುಧಾರಿಸಿಕೊಂಡು ಸುಮಂತ್ರನಲ್ಲಿ ಹೇಳಿದಳು.॥1॥

ಮೂಲಮ್ - 2

ನಯ ಮಾಂ ಯತ್ರ ಕಾಕುತ್ಸ್ಥಃ ಸೀತಾ ಯತ್ರ ಚ ಲಕ್ಷ್ಮಣಃ ।
ತಾನ್ವಿನಾ ಕ್ಷಣಮಪ್ಯದ್ಯ ಜೀವಿತುಂ ನೋತ್ಸಹೇ ಹ್ಯಹಮ್ ॥

ಅನುವಾದ

ಸುಮಂತ್ರನೇ! ಸೀತಾ-ರಾಮ-ಲಕ್ಷ್ಮಣರು ಇರುವಲ್ಲಿಗೆ ನನ್ನನ್ನೂ ಕರೆದುಕೊಂಡು ಹೋಗು. ಅವರಿಲ್ಲದೇ ನಾನು ಒಂದು ಕ್ಷಣವೂ ಜೀವಿಸಿ ಇರಲಾರೆನು.॥2॥

ಮೂಲಮ್ - 3

ನಿವರ್ತಯ ರಥಂ ಶೀಘ್ರಂ ದಂಡಕಾನ್ನಯ ಮಾಮಪಿ ।
ಅಥ ತಾನ್ನಾನುಗಚ್ಛಾಮಿ ಗಮಿಷ್ಯಾಮಿ ಯಮಕ್ಷಯಮ್ ॥

ಅನುವಾದ

ಬೇಗನೇ ರಥವನ್ನು ಸಿದ್ಧಗೊಳಿಸು, ನನ್ನನ್ನು ದಂಡಕಾರಣ್ಯಕ್ಕೆ ಕರೆದು ಕೊಂಡು ಹೋಗು. ಅವರ ಬಳಿಗೆ ನಾನು ಹೋಗದಿದ್ದರೆ ಯಮಲೋಕಕ್ಕೆ ತೆರಳುವೆನು.॥3॥

ಮೂಲಮ್ - 4

ಬಾಷ್ಪವೇಗೋಪಹತಯಾ ಸ ವಾಚಾ ಸಜ್ಜಮಾನಯಾ ।
ಇದಮಾಶ್ವಾಸಯನ್ ದೇವೀಂ ಸೂತಃ ಪ್ರಾಂಜಲಿರಬ್ರವೀತ್ ॥

ಅನುವಾದ

ದೇವೀ ಕೌಸಲ್ಯೆಯ ಮಾತನ್ನು ಕೇಳಿದ ಸಾರಥಿ ಸುಮಂತ್ರನು ಕೈಮುಗಿದುಕೊಂಡು ಆಕೆಯನ್ನು ಸಮಾಧಾನಗೊಳಿಸುತ್ತಾ ಕಣ್ಣೀರಿನ ವೇಗದಿಂದ ಗಂಟಲು ಕಟ್ಟಿ ಗದ್ಗದವಾಣಿಯಲ್ಲಿ ಹೇಳಿದನು.॥4॥

ಮೂಲಮ್ - 5

ತ್ಯಜ ಶೋಕಂ ಚ ಮೋಹಂ ಚ ಸಂಭ್ರಮಂ ದುಃಖಜಂ ತಥಾ ।
ವ್ಯವಧೂಯ ಚ ಸಂತಾಪಂ ವನೇ ವತ್ಸ್ಯತಿ ರಾಘವಃ ॥

ಅನುವಾದ

ಮಹಾರಾಣೀ! ಈ ಶೋಕ, ಮೋಹ, ದುಃಖಜನಿತ ವ್ಯಾಕುಲತೆಯನ್ನು ಬಿಡಿರಿ. ಶ್ರೀರಾಮಚಂದ್ರನು ಈಗ ಎಲ್ಲ ಸಂತಾಪ ಮರೆತು ಕಾಡಿನಲ್ಲಿ ವಾಸಿಸುತ್ತಿರುವನು.॥5॥

ಮೂಲಮ್ - 6

ಲಕ್ಷ್ಮಣಶ್ಚಾಪಿ ರಾಮಸ್ಯ ಪಾದೌಪರಿಚರನ್ ವನೇ ।
ಆರಾಧಯತಿ ಧರ್ಮಜ್ಞಃ ಪರಲೋಕಂ ಜಿತೇಂದ್ರಿಯಃ ॥

ಅನುವಾದ

ಧರ್ಮಜ್ಞ ಹಾಗೂ ಜಿತೇಂದ್ರಿಯ ಲಕ್ಷ್ಮಣನೂ ಆ ವನದಲ್ಲಿ ಶ್ರೀರಾಮನ ಚರಣಸೇವೆ ಮಾಡುತ್ತಾ ತನ್ನ ಪರಲೋಕದ ಸಾಧನೆ ಮಾಡುತ್ತಿದ್ದಾನೆ.॥6॥

ಮೂಲಮ್ - 7

ವಿಜನೇಽಪಿ ವನೇ ಸೀತಾ ವಾಸಂ ಪ್ರಾಪ್ಯ ಗೃಹೇಷ್ವಿವ ।
ವಿಸ್ರಂಭಂ ಲಭತೇಽಭೀತಾ ರಾಮೇವಿನ್ಯಸ್ತಮಾನಸಾ ॥

ಅನುವಾದ

ಸೀತೆಯ ಮನಸ್ಸು ಭಗವಾನ್ ಶ್ರೀರಾಮನಲ್ಲೇ ನೆಟ್ಟಿದೆ. ಅದರಿಂದ ನಿರ್ಜನ ವನದಲ್ಲಿ ಇದ್ದರೂ ಮನೆಯಂತೆಯೇ ಪ್ರೇಮ, ಪ್ರಸನ್ನತೆಯನ್ನು ಪಡೆಯುತ್ತಾ ನಿರ್ಭಯಳಾಗಿರುವಳು.॥7॥

ಮೂಲಮ್ - 8

ನಾಸ್ಯಾ ದೈತ್ಯಂ ಕೃತಂ ಕಿಂಚಿತ್ ಸುಸೂಕ್ಷ್ಮಮಪಿ ಲಕ್ಷ್ಯತೇ ।
ಉಚಿತೇವ ಪ್ರವಾಸಾನಾಂ ವೈದೇಹೀ ಪ್ರತಿಭಾತಿ ಮೇ ॥

ಅನುವಾದ

ವನದಲ್ಲಿ ಇರುವ ಕಾರಣ ಆಕೆಯ ಮನಸ್ಸಿನಲ್ಲಿ ಸ್ವಲ್ಪವೂ ದುಃಖ ಕಂಡುಬರುವುದಿಲ್ಲ. ವಿದೇಹಕುಮಾರೀ ಸೀತೆಗೆ ಪರದೇಶದಲ್ಲಿ ಇರುವ ಅಭ್ಯಾಸ ಮೊದಲಿನಿಂದಲೇ ಇರುವಂತೆ ನನಗೆ ಕಾಣುತ್ತದೆ.॥8॥

ಮೂಲಮ್ - 9

ನಗರೋಪವನಂ ಗತ್ವಾ ಯಥಾ ಸ್ಮ ರಮತೇ ಪುರಾ ।
ತಥೈವ ರಮತೇ ಸೀತಾ ನಿರ್ಜನೇಷು ವನೇಷ್ವಪಿ ॥

ಅನುವಾದ

ಇಲ್ಲಿ ನಗರದ ಉಪವನಗಳಲ್ಲಿ ಮೊದಲು ತಿರುಗಾಡುತ್ತಿರುವಂತೆ, ನಿರ್ಜನ ವನದಲ್ಲಿ ಈಗ ಸೀತೆಯು ಆನಂದದಿಂದ ಸಂಚರಿಸುತ್ತಿರುವಳು.॥9॥

ಮೂಲಮ್ - 10

ಬಾಲೇವ ರಮತೇ ಸೀತಾಬಾಲಚಂದ್ರನಿಭಾನನಾ ।
ರಾಮಾ ರಾಮೇ ಹ್ಯದೀನಾತ್ಮಾ ವಿಜನೇಽಪಿ ವನೇ ಸತೀ ॥

ಅನುವಾದ

ಪೂರ್ಣಚಂದ್ರನಂತೆ ಮನೋಹರ ಮುಖವುಳ್ಳ, ಉದಾರ ಹೃದಯೀ ಸತೀ-ಸಾಧ್ವೀ ಸೀತೆಯು ಆ ನಿರ್ಜನ ವನದಲ್ಲಿಯೂ ಶ್ರೀರಾಮನ ಬಳಿ ಬಾಲಿಕೆಯಂತೆ ಆಡುತ್ತಾ ಸಂತೋಷದಿಂದ ಇರುವಳು.॥10॥

ಮೂಲಮ್ - 11

ತದ್ಗತಂ ಹೃದಯಂ ಯಸ್ಯಾಸ್ತದಧೀನಂ ಚ ಜೀವಿತಮ್ ।
ಅಯೋಧ್ಯಾ ಹಿ ಭವೇದಸ್ಯಾ ರಾಮಹೀನಾ ತಥಾ ವನಮ್ ॥

ಅನುವಾದ

ಆಕೆಯ ಹೃದಯ ಶ್ರೀರಾಮನಲ್ಲೇ ತೊಡಗಿದೆ. ಅವಳ ಜೀವನವೂ ಶ್ರೀರಾಮನ ಅಧೀನವಾಗಿದೆ; ಆದ್ದರಿಂದ ರಾಮನಿಲ್ಲದ ಅಯೋಧ್ಯೆಯೂ ಆಕೆಗೆ ಕಾಡಿನಂತೆ ಆಗುವುದು. (ಶ್ರೀರಾಮನೊಂದಿಗೆ ಕಾಡಿನಲ್ಲಿದ್ದರೂ ಅವಳು ಅಯೋಧ್ಯೆಯಲ್ಲಿರುವಂತೆ ಸುಖವನ್ನು ಅನುಭವಿಸುವಳು.॥11॥

ಮೂಲಮ್ - 12

ಪರಿಪೃಚ್ಛತಿ ವೈದೇಹೀ ಗ್ರಾಮಾಂಶ್ಚ ನಗರಾಣಿ ಚ ।
ಗತಿಂ ದೃಷ್ಟ್ವಾ ನದೀನಾಂ ಚ ಪಾದಪಾನ್ ವಿವಿಧಾನಪಿ ॥

ಅನುವಾದ

ವಿದೇಹನಂದಿನೀ ಸೀತೆಯು ದಾರಿಯಲ್ಲಿ ಸಿಗುವ ಊರು, ನಗರ, ನದಿಗಳನ್ನು, ನಾನಾ ಪ್ರಕಾರದ ವೃಕ್ಷಗಳನ್ನು ನೋಡಿ ಅವುಗಳ ಪರಿಚಯ ಕೇಳುತ್ತಾ ಇರುತ್ತಾಳೆ.॥12॥

ಮೂಲಮ್ - 13

ರಾಮಂ ವಾ ಲಕ್ಷ್ಮಣಂ ವಾಪಿ ದೃಷ್ಟ್ವಾ ಜಾನಾತಿ ಜಾನಕೀ ।
ಅಯೋಧ್ಯಾಕ್ರೋಶಮಾತ್ರೇ ತು ವಿಹಾರಮಿವಸಾಶ್ರಿತಾ ॥

ಅನುವಾದ

ಶ್ರೀರಾಮ-ಲಕ್ಷ್ಮಣರನ್ನು ತನ್ನ ಬಳಿಯಲ್ಲಿ ಇರುವುದನ್ನು ನೋಡಿ ಜಾನಕಿಗೆ ನಾನು ಅಯೋಧ್ಯೆಯಿಂದ ಒಂದು ಗಾವುದ ದೂರ ತಿರುಗಾಡಲು ಬಂದಿರುವಂತೆ ಅನಿಸುತ್ತಿದೆ.॥13॥

ಮೂಲಮ್ - 14

ಇದಮೇವ ಸ್ಮರಾಮ್ಯಸ್ಯಾಃ ಸಹಸೈವೋಪಜಲ್ಪಿತಮ್ ।
ಕೈಕೇಯೀಸಂಶ್ರಿತಂ ಜಲ್ಪಂ ನೇದಾನೀಂ ಪ್ರತಿಭಾತಿಮಾಮ್ ॥

ಅನುವಾದ

ಸೀತೆಯ ಕುರಿತು ನನಗೆ ಇಷ್ಟು ಸ್ಮರಣೆ ಇದೆ. ಅವಳು ಕೈಕೇಯಿಯನ್ನು ಗುರಿಯಾಗಿಸಿ ಹೇಳಿದ ಯಾವುದೇ ಮಾತುಗಳು ಈಗ ನನಗೆ ನೆನಪಿಗೆ ಬರುವುದಿಲ್ಲ.॥14॥

ಮೂಲಮ್ - 15

ಧ್ವಂಸಯಿತ್ವಾ ತು ತದ್ವಾಕ್ಯಂ ಪ್ರಮಾದಾತ್ ಪರ್ಯುಪಸ್ಥಿತಮ್ ।
ಹ್ಲಾದನಂ ವಚನಂ ಸೂತೋ ದೇವ್ಯಾ ಮಧುರಮಬ್ರವೀತ್ ॥

ಅನುವಾದ

ಈ ಪ್ರಕಾರ ಮರವೆಯಿಂದ ಹೊರಟ ಕೈಕೇಯಿಯ ವಿಷಯಕ ಆ ಮಾತನ್ನು ಬದಲಾಯಿಸಿ ಸಾರಥಿಯು ಕೌಸಲ್ಯಾದೇವಿಯ ಹೃದಯಕ್ಕೆ ಆಹ್ಲಾದಕೊಡುವಂತಹ ಮಧುರ ಮಾತನ್ನು ಹೇಳಿದನು.॥15॥

ಮೂಲಮ್ - 16

ಅಧ್ವಾನಾ ವಾತವೇಗೇನ ಸಂಭ್ರಮೇಣಾತಪೇನ ಚ ।
ನ ವಿಗಚ್ಛತಿ ವೈದೇಹ್ಯಾಶ್ಚಂದ್ರಾಂಶುಸದೃಶೀ ಪ್ರಭಾ ॥

ಅನುವಾದ

ದಾರಿ ನಡೆಯುವ ಬಳಲಿಕೆ, ವಾಯುವಿನ ವೇಗ, ಭಯಾನಕ ವಸ್ತುಗಳನ್ನು ನೋಡುವುದರಿಂದ ಆಗುವ ಗಾಬರಿ ಯಾವುದೇ ಇಲ್ಲದೆ, ಬಿಸಿಲಿನಿಂದಲೂ ವಿದೇಹ ರಾಜಕುಮಾರಿಯ ಚಂದ್ರಕಿರಣದಂತೆ ಇರುವ ಕಮನೀಯ ಕಾಂತಿಯು ಮಾಸಿಹೋಗಿಲ್ಲ.॥16॥

ಮೂಲಮ್ - 17

ಸದೃಶಂ ಶತಪತ್ರಸ್ಯ ಪೂರ್ಣಚಂದ್ರೋಪಮಪ್ರಭಮ್ ।
ವದನಂತದ್ವದಾನ್ಯಾಯಾ ವೈದೇಹ್ಯಾ ನ ವಿಕಂಪತೇ ॥

ಅನುವಾದ

ಉದಾರ ಹೃದಯೀ ಸೀತೆಯು ಅರಳಿದ ಕಮಲದಂತೆ ಸುಂದರ ಹಾಗೂ ಪೂರ್ಣಚಂದ್ರನಂತೆ ಆನಂದದಾಯಕ ಕಾಂತಿಯಿಂದ ಕೂಡಿದ ಮುಖವು ಎಂದೂ ಮಲಿನವಾಗುವುದಿಲ್ಲ.॥17॥

ಮೂಲಮ್ - 18

ಅಲಕ್ತರಸರಕ್ತಾಭಾವಲಕ್ತರಸವರ್ಜಿತೌ ।
ಅದ್ಯಾಪಿ ಚರಣೌ ತಸ್ಯಾಃ ಪದ್ಮಕೋಶಸಮಪ್ರಭೌ ॥

ಅನುವಾದ

ಪದ್ಮಕೋಶದ ಪ್ರಭೆಗೆ ಸಮಾನವಾದ ಪ್ರಭೆಯಿಂದ ಕೂಡಿದ್ದ ಅವಳ ಕಾಲುಗಳಿಗೆ ಮದರಿಂಗಿ ರಸವನ್ನು ಹಚ್ಚದಿದ್ದರೂ ಅದನ್ನು ಹಚ್ಚಿದಂತೆಯೇ ಕಾಲುಗಳು ಕೆಂಪಾಗಿಯೇ ಕಂಗೊಳಿಸುತ್ತಿವೆ.॥18॥

ಮೂಲಮ್ - 19

ನೂಪುರೋತ್ ಕೃಷ್ಟಲೀಲೇವ ಖೇಲಂ ಗಚ್ಛತಿ ಭಾಮಿನೀ ।
ಇದಾನೀಮಪಿ ವೈದೇಹೀ ತದ್ರಾಗಾನ್ಯಸ್ತಭೂಷಣಾ ॥

ಅನುವಾದ

ಶ್ರೀರಾಮಚಂದ್ರನ ಕುರಿತು ಅನುರಾಗವಿದ್ದ ಕಾರಣ ಅವನ ಪ್ರಸನ್ನತೆಗಾಗಿ ವಿದೇಹಕುಮಾರೀ ಒಡವೆಗಳನ್ನು ತ್ಯಜಿಸಲಿಲ್ಲ. ಭಾಮಿನೀ ಸೀತೆಯು ಈಗಲೂ ನೂಪುರಗಳ ಝಣತ್ಕಾರದಿಂದ ಹಂಸದ ನಡಿಗೆಯನ್ನು ತಿರಸ್ಕರಿಸಿ ಲೀಲಾವಿಲಾಸಯುಕ್ತ ಗತಿಯಿಂದ ನಡೆಯುತ್ತಿರುವಳು.॥19॥

ಮೂಲಮ್ - 20

ಗಜಂ ವಾ ವೀಕ್ಷ್ಯ ಸಿಂಹಂ ವಾ ವ್ಯಾಘ್ರಂ ವಾ ವನಮಾಶ್ರಿತಾ ।
ನಾಹಾರಯತಿ ಸಂತ್ರಾಸಂ ಬಾಹೂ ರಾಮಸ್ಯ ಸಂಶ್ರಿತಾ ॥

ಅನುವಾದ

ಅವಳು ಶ್ರೀರಾಮನ ಬಾಹುಬಲವನ್ನು ಆಶ್ರಯಿಸಿ ಕಾಡಿನಲ್ಲಿ ಇರುವಾಗ ಆನೆ, ಹುಲಿ, ಸಿಂಹಗಳನ್ನು ನೋಡಿದರೂ ಎಂದೂ ಭಯ ಪಡುವುದಿಲ್ಲ.॥20॥

ಮೂಲಮ್ - 21

ನ ಶೋಚ್ಯಾಸ್ತೇ ನ ಚಾತ್ಮಾ ತೇ ಶೋಚ್ಯೋ ನಾಪಿ ಜನಾಧಿಪಃ ।
ಇದಂ ಹಿ ಚರಿತಂ ಲೋಕೇ ಪ್ರತಿಷ್ಠಾಸ್ಯತಿ ಶಾಶ್ವತಮ್ ॥

ಅನುವಾದ

ಆದ್ದರಿಂದ ನೀವು ಶ್ರೀರಾಮ-ಲಕ್ಷ್ಮಣ-ಸೀತೆಯರ ಕುರಿತು ಶೋಕಿಸಬೇಡಿರಿ. ತನ್ನ ಕುರಿತು ಮತ್ತು ಮಹಾರಾಜರ ಕುರಿತೂ ಚಿಂತೆ ಬಿಡಿರಿ. ಶ್ರೀರಾಮಚಂದ್ರನ ಈ ಪಾವನ ಚರಿತ್ರೆ ಜಗತ್ತಿನಲ್ಲಿ ಸದಾ ಸ್ಥಿರವಾಗಿರುವುದು.॥21॥

ಮೂಲಮ್ - 22

ವಿಧೂಯ ಶೋಕಂ ಪರಿಹೃಷ್ಟಮಾನಸಾ
ಮಹರ್ಷಿಯಾತೇ ಪಥಿ ಸುವ್ಯವಸ್ಥಿತಾಃ ।
ವನೇ ರತಾ ವನ್ಯಲಾಶನಾಃ ಪಿತುಃ
ಶುಭಾಂ ಪ್ರತಿಜ್ಞಾಂ ಪರಿಪಾಲಯಂತೀ ತೇ ॥

ಅನುವಾದ

ಅವರು ಮೂವರೂ ಶೋಕರಹಿತರಾಗಿ ಪ್ರಸನ್ನಚಿತ್ತದಿಂದ ಮಹರ್ಷಿಗಳ ಮಾರ್ಗದಲ್ಲಿ ದೃಢತೆಯಿಂದ ಸ್ಥಿತರಾಗಿದ್ದಾರೆ. ಕಾಡಿನಲ್ಲಿದ್ದು ಫಲ-ಮೂಲಗಳನ್ನು ಭುಂಜಿಸುತ್ತಾ ತಂದೆಯ ಪ್ರತಿಜ್ಞೆಯನ್ನು ಪಾಲಿಸುತ್ತಿದ್ದಾರೆ.॥22॥

ಮೂಲಮ್ - 23

ತಥಾಪಿ ಸೂತೇನ ಸುಯುಕ್ತವಾದಿನಾ
ನಿವಾರ್ಯಮಾಣಾ ಸುತಶೋಕಕರ್ಶಿತಾ ।
ನ ಚೈವ ದೇವೀ ವಿರರಾಮ ಕೂಜಿತಾತ್
ಪ್ರಿಯೇತಿ ಪುತ್ರೇತಿ ಚ ರಾಘವೇತಿ ಚ ॥

ಅನುವಾದ

ಈ ಪ್ರಕಾರ ಯುಕ್ತಿ ಯುಕ್ತ ಮಾತನ್ನು ಹೇಳಿ ಸಾರಥಿ ಸುಮಂತ್ರನು ಪುತ್ರಶೋಕದಿಂದ ಪೀಡಿತಳಾದ ಕೌಸಲ್ಯೆಯ ಚಿಂತೆಯನ್ನು, ಅಳುವನ್ನು ತಡೆದರೂ ಕೌಸಲ್ಯೆಯು ವಿಲಾಪದಿಂದ ವಿರತಳಾಗಲಿಲ್ಲ. ಅವಳು ‘ಹಾ ಪ್ರಿಯಪುತ್ರನೇ! ಹಾ ರಘುನಂದನ’ ಎಂದು ಹೇಳುತ್ತಾ ಕರುಣಾಕ್ರಂದನವನ್ನು ಮಾಡುತ್ತಲೇ ಇದ್ದಳು.॥23॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಅರವತ್ತನೆಯ ಸರ್ಗ ಪೂರ್ಣವಾಯಿತು ॥60॥