०५९ दशरथविलापः

वाचनम्
ಭಾಗಸೂಚನಾ

ಶ್ರೀರಾಮನ ವನವಾಸದಿಂದಾಗಿ ಅಯೋಧ್ಯಾಪಟ್ಟಣದಲ್ಲಿ ಆಗಿರುವ ದುರವಸ್ಥೆಯನ್ನು ಸುಮಂತ್ರನು ವರ್ಣಿಸಿದುದು, ದಶರಥನ ವಿಲಾಪ

ಮೂಲಮ್ - 1

ಮಮ ತ್ವಶ್ವಾ ನಿವೃತ್ತಸ್ಯ ನ ಪ್ರಾವರ್ತಂತ ವರ್ತ್ಮನಿ ।
ಉಷ್ಣಮಶ್ರು ಪ್ರಮುಂಚತೊ ರಾಮೇ ಸಂಪ್ರಸ್ಥಿತೇ ವನಮ್ ॥

ಮೂಲಮ್ - 2

ಉಭಾಭ್ಯಾಂ ರಾಜಪುತ್ರಾಭ್ಯಾಮಥ ಕೃತ್ವಾಹಮಂಜಲಿಮ್ ।
ಪ್ರಸ್ಥಿತೋ ರಥಮಾಸ್ಥಾಯ ತದ್ದುಃಖಮಪಿ ಧಾರಯನ್ ॥

ಅನುವಾದ

ಸುಮಂತ್ರನು ಹೇಳುತ್ತಿದ್ದಾನೆ - ಶ್ರೀರಾಮಚಂದ್ರನು ಕಾಡಿನ ಕಡೆಗೆ ಹೊರಟಾಗ ನಾನು ಅವರಿಬ್ಬರಿಗೂ ಕೈಮುಗಿದು ಪ್ರಣಾಮ ಮಾಡಿದೆ ಮತ್ತು ಅವರ ವಿಯೋಗದ ದುಃಖವನ್ನು ಹೃದಯದಲ್ಲಿ ಇಟ್ಟುಕೊಂಡು ರಥಾರೂಢನಾಗಿ ಅಲ್ಲಿಂದ ಮರಳಿದೆ. ಮರಳಿ ಬರುವಾಗ ನನ್ನ ಕುದುರೆಗಳ ಕಣ್ಣುಗಳಿಂದ ಬಿಸಿಯ ಕಣ್ಣೀರು ಹರಿಯುತ್ತಿತ್ತು. ದಾರಿ ಮುಂದಕ್ಕೆ ಹೋಗಲು ಅವುಗಳಿಗೆ ಮನಸ್ಸೇ ಇರಲಿಲ್ಲ.॥1-2॥

ಮೂಲಮ್ - 3

ಗುಹೇನ ಸಾರ್ಧಂ ತತ್ರೈವ ಸ್ಥಿತೋಽಸ್ಮಿ ದಿವಸಾನ್ಬಹೂನ್ ।
ಅಶಯಾ ಯದಿ ಮಾಂ ರಾಮಃ ಪುನಃ ಶಬ್ದಾಪಯೇದಿತಿ ॥

ಅನುವಾದ

ನಾನು ಗುಹನೊಂದಿಗೆ ಕೆಲವು ದಿನಗಳವರೆಗೆ ಎಲ್ಲಾದರೂ ಶ್ರೀರಾಮನು ಪುನಃ ನನ್ನನ್ನು ಕರೆಸಿಕೊಳ್ಳುವನೋ ಎಂಬ ಆಸೆಯಿಂದ ಅಲ್ಲೇ ನಿಂತಿದ್ದೆ.॥3॥

ಮೂಲಮ್ - 4

ವಿಷಯೇ ತೇ ಮಹಾರಾಜ ರಾಮವ್ಯಸನಕರ್ಶಿತಾಃ ।
ಅಪಿ ವೃಕ್ಷಾಃ ಪರಿಮ್ಲಾನಾಃ ಸಪುಷ್ಪಾಂಕುರಕೋರಕಾಃ ॥

ಅನುವಾದ

ಮಹಾರಾಜರೇ! ನಿಮ್ಮ ರಾಜ್ಯದಲ್ಲಿ ವೃಕ್ಷಗಳೂ ಕೂಡ ಈ ಮಹಾನ್ ಸಂಕಟದಿಂದ ಕೃಶವಾಗಿ, ಹೂವು, ಚಿಗುರು ಮತ್ತು ಮೊಗ್ಗುಗಳ ಸಹಿತ ಬಾಡಿಹೋಗಿವೆ.॥4॥

ಮೂಲಮ್ - 5

ಉಪತಪ್ತೋದಕಾ ನದ್ಯಃ ಪಲ್ವಲಾನಿ ಸರಾಂಸಿ ಚ ।
ಪರಿಶುಷ್ಕಪಲಾಶಾನಿ ವನಾನ್ಯುಪವನಾನಿ ಚ ॥

ಅನುವಾದ

ನದಿಗಳ, ಸಣ್ಣ ಜಲಾಶಯಗಳ, ದೊಡ್ಡ ಸರೋವರಗಳ ನೀರು ಬಿಸಿಯಾಗಿದೆ. ವನ ಮತ್ತು ಉಪವನದ ಎಲೆಗಳು ಒಣಗಿ ಹೋಗಿವೆ.॥5॥

ಮೂಲಮ್ - 6

ನ ಚ ಸರ್ಪಂತಿ ಸತ್ತ್ವಾನಿ ವ್ಯಾಲಾ ನ ಪ್ರಚರಂತಿ ಚ ।
ರಾಮಶೋಕಾಭಿಭೂತಂ ತನ್ನಿಷ್ಕೂಜಮಭವದ್ವನಮ್ ॥

ಅನುವಾದ

ಕಾಡಿನ ಜೀವಿಗಳು ಆಹಾರಕ್ಕಾಗಿಯೂ ಎಲ್ಲಿಗೂ ಹೋಗುವುದಿಲ್ಲ. ಹೆಬ್ಬಾವು ಮೊದಲಾದ ಸರ್ಪಗಳು ಅಲ್ಲಲ್ಲಿ ಬಿದ್ದುಕೊಂಡಿವೆ, ಅಲುಗಾಡುವುದಿಲ್ಲ. ಶ್ರೀರಾಮನ ಶೋಕದಿಂದ ಪೀಡಿತವಾದ ಆ ಇಡೀ ವನವು ನಿಃಶಬ್ದವಾಗಿದೆ.॥6॥

ಮೂಲಮ್ - 7

ಲೀನಪುಷ್ಕರಪತ್ರಾಶ್ಚ ನದ್ಯಶ್ಚ ಕಲುಷೋದಕಾಃ ।
ಸಂತಪ್ತಪದ್ಮಾಃ ಪದ್ಮಿನ್ಯೋ ಲೀನಮೀನವಿಹಂಗಮಾಃ ॥

ಅನುವಾದ

ನದಿಗಳ ನೀರು ಕದಡಿ ಹೋಗಿದೆ. ಅದರಲ್ಲಿರುವ ಕಮಲಗಳ ಎಲೆಗಳು ಕೊಳೆತುಹೋಗಿವೆ. ಸರೋವರದ ಕಮಲಗಳು ಒಣಗಿಹೋಗಿವೆ. ಅವುಗಳಲ್ಲಿ ಇರುವ ಮೀನು, ನೀರುಹಕ್ಕಿಗಳೂ ನಾಶವಾಗಿ ಹೋಗಿವೆ.॥7॥

ಮೂಲಮ್ - 8

ಜಲಜಾನಿ ಚ ಪುಷ್ಪಾಣಿ ಮಾಲ್ಯಾನಿ ಸ್ಥಲಜಾನಿ ಚ ।
ನಾತಿಭಾಂತ್ಯಲ್ಪಗಂಧೀನಿ ಫಲಾನಿ ಚ ಯಥಾಪುರಮ್ ॥

ಅನುವಾದ

ನೀರಿನಲ್ಲಿ ಮತ್ತು ನೆಲದಲ್ಲಿ ಉತ್ಪನ್ನವಾದ ಪುಷ್ಪಗಳು ಸುಗಂಧವನ್ನು ಕಳೆದುಕೊಂಡು ಶೋಭಾಹೀನವಾಗಿವೆ. ಫಲಗಳೂ ಮೊದಲಿನಂತೆ ಕಂಡುಬರುವುದಿಲ್ಲ.॥8॥

ಮೂಲಮ್ - 9

ಅತ್ರೋದ್ಯಾನಾನಿ ಶೂನ್ಯಾನಿ ಪ್ರಲೀನವಿಹಗಾನಿ ಚ ।
ನ ಚಾಭಿರಾಮಾನಾರಾಮಾನ್ ಪಶ್ಯಾಮಿ ಮನುಜರ್ಷಭ ॥

ಅನುವಾದ

ನರಶ್ರೇಷ್ಠನೇ! ಅಯೋಧ್ಯೆಯ ಉದ್ಯಾನವನಗಳೂ ಪಾಳುಬಿದ್ದಿವೆ, ಅದರಲ್ಲಿ ಪಕ್ಷಿಗಳು ಅಡಗಿಹೋಗಿವೆ. ಇಲ್ಲಿಯ ಹೂದೋಟವೂ ನನಗೆ ಮೊದಲಿನಂತೆ ಮನೋಹರವಾಗಿ ಕಾಣುವುದಿಲ್ಲ.॥9॥

ಮೂಲಮ್ - 10

ಪ್ರವಿಶಂತಮಯೋಧ್ಯಾಯಾಂ ನ ಕಶ್ಚಿದಭಿನಂದತಿ ।
ನರಾ ರಾಮಮಪಶ್ಯಂತೋ ನಿಃಶ್ವಸಂತಿ ಮುಹುರ್ಮುಹುಃ ॥

ಅನುವಾದ

ಅಯೋಧ್ಯೆಯನ್ನು ಪ್ರವೇಶಿಸುವಾಗ ನನ್ನ ಬಳಿ ಯಾರೂ ಸಂತೋಷವಾಗಿ ಮಾತನಾಡಲಿಲ್ಲ. ಶ್ರೀರಾಮನನ್ನು ನೋಡದೆ ಪದೇ-ಪದೇ ನಿಟ್ಟುಸಿರುಬಿಡುತ್ತಿದ್ದರು.॥10॥

ಮೂಲಮ್ - 11

ದೇವ ರಾಜರಥಂ ದೃಷ್ಟ್ವಾ ವಿನಾ ರಾಮಮಿಹಾಗತಮ್ ।
ದುರಾದಶ್ರುಮುಖಃ ಸರ್ವೋ ರಾಜಮಾರ್ಗೇ ಗತೋ ಜನಃ ॥

ಅನುವಾದ

ಒಡೆಯ! ರಾಜಬೀದಿಗೆ ಬಂದ ಎಲ್ಲ ಜನರು ಶ್ರೀರಾಮನಿಲ್ಲದೆ ಬಂದಿರುವ ರಾಮನ ರಥವನ್ನು ನೋಡಿ ದೂರದಿಂದಲೇ ಕಣ್ಣೀರುಗರೆದರು.॥11॥

ಮೂಲಮ್ - 12

ಹರ್ಮ್ಯೈರ್ವಿಮಾನೈಃ ಪ್ರಾಸಾದೈರವೇಕ್ಷ್ಯ ರಥಮಾಗತಮ್ ।
ಹಾಹಾಕಾರಕೃತಾ ನಾರ್ಯೋ ರಾಮಾದರ್ಶನಕರ್ಶಿತಾಃ ॥

ಅನುವಾದ

ಮಹಡಿಗಳ ಮೇಲೆ, ವಿಮಾನಗಳ ಮೇಲೆ, ಪ್ರಾಸಾದಗಳ ಮೇಲೆ ಕುಳಿತ ಸ್ತ್ರೀಯರು ಮರಳಿ ಬಂದ ಬರಿದಾದ ರಥವನ್ನು ನೋಡಿ ಶ್ರೀರಾಮನನ್ನು ನೋಡದೆ ವ್ಯಥಿತರಾಗಿ ಹಾಹಾಕಾರ ಮಾಡತೊಡಗಿದರು.॥12॥

ಮೂಲಮ್ - 13

ಆಯತೈರ್ವಿಮಲೈರ್ನೇತ್ರೈರಶ್ರುವೇಗಪರಿಪ್ಲುತೈಃ ।
ಅನ್ಯೋನ್ಯಮಭಿವೀಕ್ಷಂತೇಽವ್ಯಕ್ತಮಾರ್ತತರಾಃ ಸ್ತ್ರಿಯಃ ॥

ಅನುವಾದ

ಅವರ ಕಾಡಿಗೆ ಇಲ್ಲದ ವಿಶಾಲ ನೇತ್ರಗಳು ಕಣ್ಣೀರಿನಿಂದ ತೇವಗೊಂಡಿದ್ದವು. ಆ ಸ್ತ್ರೀಯರು ಅತ್ಯಂತ ಆರ್ತರಾಗಿ ಅವ್ಯಕ್ತಭಾವದಿಂದ ಪರಸ್ಪರ ನೋಡುತ್ತಿದ್ದರು.॥13॥

ಮೂಲಮ್ - 14

ನಾಮಿತ್ರಾಣಾಂ ನ ಮಿತ್ರಾಣಾಮುದಸೀನಜನಸ್ಯ ಚ ।
ಅಹಮಾರ್ತತಯಾ ಕಿಂಚಿದ್ ವಿಶೇಷಂ ನೋಪಲಕ್ಷಯೇ ॥

ಅನುವಾದ

ಶತ್ರುಗಳು, ಮಿತ್ರರು, ಉದಾಸೀನ (ಮಧ್ಯಸ್ಥ) ಎಲ್ಲ ಮನುಷ್ಯರು ಸಮಾನ ದುಃಖಿತರಾಗಿರುವುದನ್ನು ನಾನು ನೋಡಿದೆ. ಯಾರ ಶೋಕದಲ್ಲಿಯೂ ಯಾವುದೇ ಅಂತರವಿರಲಿಲ್ಲ.॥14॥

ಮೂಲಮ್ - 15

ಅಪ್ರಹೃಷ್ಟಮನುಷ್ಯಾ ಚ ದೀನನಾಗತುರಂಗಮಾ ।
ಆರ್ತಸ್ವರಪರಿಮ್ಲಾನಾ ವಿನಿಃಶ್ವಸಿತನಿಃಸ್ವನಾ ॥

ಮೂಲಮ್ - 16

ನಿರಾನಂದಾ ಮಹಾರಾಜ ರಾಮಪ್ರವ್ರಾಜನಾತುರಾ ।
ಕೌಸಲ್ಯಾ ಪುತ್ರಹೀನೇವ ಅಯೋಧ್ಯಾ ಪ್ರತಿಭಾತಿ ಮೇ ॥

ಅನುವಾದ

ಮಹಾರಾಜರೇ! ಅಯೋಧ್ಯೆಯ ಜನರ ಹರ್ಷವೇ ಮರೆಯಾಗಿದೆ. ಇಲ್ಲಿಯ ಕುದುರೆ ಮತ್ತು ಆನೆಗಳೂ ಕೂಡ ಬಹಳ ದುಃಖಿತರಾಗಿದ್ದಾರೆ. ಇಡೀ ಪುರಿಯೇ ಆರ್ತನಾದದಿಂದ ಮಲಿನವಾಗಿದೆ. ಪ್ರಜೆಗಳ ದೀರ್ಘನಿಟ್ಟುಸಿರೇ ಈ ನಗರಿಯ ಶ್ವಾಸೋಚ್ಛ್ವಾಸವಾಗಿದೆ. ಈ ಅಯೋಧ್ಯೆಯು ಶ್ರೀರಾಮನ ವನವಾಸದಿಂದ ವ್ಯಾಕುಲವಾಗಿ ಪುತ್ರವಿಯೋಗಿನೀ ಕೌಸಲ್ಯೆಯಂತೆ ನನಗೆ ಆನಂದ ಶೂನ್ಯವಾಗಿ ಕಾಣುತ್ತದೆ.॥15-16॥

ಮೂಲಮ್ - 17

ಸೂತಸ್ಯ ವಚನಂ ಶ್ರುತ್ವಾ ವಾಚಾ ಪರಮದೀನಯಾ ।
ಬಾಷ್ಪೋಪಹತಯಾ ಸೂತಮಿದಂ ವಚನಮಬ್ರವೀತ್ ॥

ಅನುವಾದ

ಸುಮಂತ್ರನ ಮಾತನ್ನು ಕೇಳಿ ರಾಜನು ಅವನಲ್ಲಿ ಅಶ್ರು ಗದ್ಗದ ಪರಮದೀನವಾಣಿಯಲ್ಲಿ ಇಂತೆಂದನು.॥17॥

ಮೂಲಮ್ - 18

ಕೈಕೇಯ್ಯಾ ವಿನಿಯುಕ್ತೇನ ಪಾಪಾಭಿಜನಭಾವಯಾ ।
ಮಯಾ ನ ಮಂತ್ರಕುಶಲೈರ್ವೃದ್ಧೈಃ ಸಹ ಸಮರ್ಥಿತಮ್ ॥

ಅನುವಾದ

ಸೂತನೇ! ಯಾರು ಪಾಪಿಕುಲದಲ್ಲಿ ಮತ್ತು ಪಾಪಪೂರ್ಣದೇಶದಲ್ಲಿ ಹುಟ್ಟಿರುವಳೋ, ವಿಚಾರಗಳೂ ಪಾಪಪೂರ್ಣವಾಗಿವೆಯೋ ಆ ಕೈಕೆಯಿಯ ಮಾತಿಗೆ ಸಿಲುಕಿದ, ನಾನು ಸಲಹೆಕೊಡಲು ಕುಶಲರಾದ ವೃದ್ಧರ ಜೊತೆಯಲ್ಲಿ ಕುಳಿತು ಈ ವಿಷಯದಲ್ಲಿ ಏನೂ ಚರ್ಚಿಸಿಲ್ಲ.॥18॥

ಮೂಲಮ್ - 19

ನ ಸುಹೃದ್ಭಿರ್ನ ಚಾಮಾತ್ಯೈರ್ಮಂತ್ರಯಿತ್ವಾ ಸನೈಗಮೈಃ ।
ಮಯಾಯಮರ್ಥಃ ಸಂಮ್ಮೋಹಾತ್ ಸ್ತ್ರೀಹೇತೋಃ ಸಹಸಾ ಕೃತಃ ॥

ಅನುವಾದ

ಸುಹೃದರಿಂದ, ಮಂತ್ರಿಗಳಿಂದ ಹಾಗೂ ವೇದ ವೇತ್ತರಿಂದ ಸಲಹೆ ಪಡೆಯದೆಯೇ ನಾನು ಮೋಹಿತನಾಗಿ ಕೇವಲ ಒಂದು ಸ್ತ್ರೀಯ ಇಚ್ಛೆಯನ್ನು ಪೂರ್ಣಗೊಳಿಸಲು ಈ ಅನರ್ಥಮಯ ಕಾರ್ಯಮಾಡಿದಂತಾಯಿತು.॥19॥

ಮೂಲಮ್ - 20

ಭವಿತವ್ಯತಯಾ ನೂನಮಿದಂ ವಾ ವ್ಯಸನಂ ಮಹತ್ ।
ಕುಲಸ್ಯಾಸ್ಯ ವಿನಾಶಾಯ ಪ್ರಾಪ್ತಂ ಸೂತಯದೃಚ್ಛಯಾ ॥

ಅನುವಾದ

ಸುಮಂತ್ರನೇ! ಮುಂದೆ ಆಗಬೇಕಾದ ಯಾವುದೋ ಒಂದು ವಿಶಿಷ್ಟಕಾರ್ಯಕ್ಕಾಗಿ ಅಥವಾ ನಮ್ಮ ಕುಲದ ವಿನಾಶಕ್ಕಾಗಿ ದೈವೇಚ್ಛೆಯಿಂದಲೇ ನಮಗೆ ಈಗ ಪುತ್ರವಿಯೋಗ ವ್ಯಸನವು ಪ್ರಾಪ್ತವಾಗಿದೆ.॥20॥

ಮೂಲಮ್ - 21

ಸೂತ ಯದ್ಯಸ್ತಿ ತೇ ಕಿಂಚಿನ್ಮಯಾಪಿ ಸುಕೃತಂ ಕೃತಮ್ ।
ತ್ವಂ ಪ್ರಾಪಯಾಶು ಮಾಂ ರಾಮಂ ಪ್ರಾಣಾಃ ಸಂತ್ವರಯಂತಿಮಾಮ್ ॥

ಅನುವಾದ

ಸಾರಥಿಯೇ! ನಾನು ನಿನಗೆ ಎಂದಾದರೂ ಏನಾದರು ಸಣ್ಣ ಉಪಕಾರ ಮಾಡಿದ್ದರೆ ನೀನು ನನ್ನನ್ನು ಬೇಗನೇ ಶ್ರೀರಾಮನ ಬಳಿಗೆ ಕರೆದುಕೊಂಡು ಹೋಗು. ಶ್ರೀರಾಮನ ದರ್ಶನಕ್ಕಾಗಿ ನನ್ನ ಪ್ರಾಣಗಳು ಹಾತೊರೆಯುತ್ತಿವೆ.॥21॥

ಮೂಲಮ್ - 22

ಯದ್ಯದ್ಯಾಪಿ ಮಮೈವಾಜ್ಞಾ ನಿವರ್ತಯತು ರಾಘವಮ್ ।
ನ ಶಕ್ಷ್ಯಾಮಿ ವಿನಾ ರಾಮಂ ಮುಹೂರ್ತಮಪಿ ಜೀವಿತುಮ್ ॥

ಅನುವಾದ

ಇಂದು ಕೂಡ ಈ ರಾಜ್ಯದಲ್ಲಿ ನನ್ನದೇ ಆಜ್ಞೆ ನಡೆಯುತ್ತಿದ್ದರೆ ನೀನು ನನ್ನ ಆದೇಶದಂತೆ ಹೋಗಿ ಶ್ರೀರಾಮನನ್ನು ಕರೆದು ಕೊಂಡು ಬಾ; ಏಕೆಂದರೆ ಈಗ ನಾನು ಅವನಿಲ್ಲದೆ ಮುಹೂರ್ತ ಮಾತ್ರ ಬದುಕಿರಲಾರೆನು.॥22॥

ಮೂಲಮ್ - 23

ಅಥವಾಪಿ ಮಹಾಬಾಹುರ್ಗತೋ ದೂರಂ ಭವಿಷ್ಯತಿ ।
ಮಾಮೇವ ರಥಮಾರೋಪ್ಯ ಶೀಘ್ರಂ ರಾಮಾಯ ದರ್ಶಯ ॥

ಅನುವಾದ

ಅಥವಾ ಮಹಾಬಾಹು ಶ್ರೀರಾಮನಾದರೋ ಈಗ ದೂರ ಹೋಗಿರಬಹುದು; ಅದಕ್ಕಾಗಿ ನನ್ನನ್ನು ಕೂಡ ರಥದಲ್ಲಿ ಕುಳ್ಳಿರಿಸಿಕೊಂಡು ಹೋಗಿ ಬೇಗನೇ ರಾಮನ ದರ್ಶನ ಮಾಡಿಸು.॥23॥

ಮೂಲಮ್ - 24

ವೃತ್ತದಂಷ್ಟ್ರೋ ಮಹೇಷ್ವಾಸಃ ಕ್ವಾಸೌ ಲಕ್ಷ್ಮಣಪೂರ್ವಜಃ ।
ಯದಿ ಜೀವಾಮಿ ಸಾಧ್ವೇನಂ ಪಶ್ಯೇಯಂ ಸೀತಯಾ ಸಹ ॥

ಅನುವಾದ

ಮಲ್ಲಿಗೆಯ ಮೊಗ್ಗಿನಂತೆ ದಂತಪಂಕ್ತಿಯುಳ್ಳ, ಲಕ್ಷ್ಮಣನ ಅಗ್ರಜನಾದ, ಮಹಾಧನುರ್ಧರ ಶ್ರೀರಾಮನು ಎಲ್ಲಿ ಇರುವನು? ಸೀತೆಯೊಂದಿಗೆ ಚೆನ್ನಾಗಿ ಅವನನ್ನು ದರ್ಶಿಸಿದರೆ ಮಾತ್ರ ನಾನು ಬದುಕಿರಬಲ್ಲೆನು.॥24॥

ಮೂಲಮ್ - 25

ಲೋಹಿತಾಕ್ಷಂ ಮಹಾಬಾಹುಮಾಮುಕ್ತಮಣಿಕುಂಡಲಮ್ ।
ರಾಮಂ ಯದಿ ನ ಪಶ್ಯೇಯಂ ಗಮಿಷ್ಯಾಮಿ ಯಮಕ್ಷಯಮ್ ॥

ಅನುವಾದ

ಕೆಂಪಾದ ಕಣ್ಣುಗಳುಳ್ಳ, ದೀರ್ಘಬಾಹು, ಮಣಿಕುಂಡಲ ಧರಿಸಿದ ಆ ಶ್ರೀರಾಮನನ್ನು ನಾನು ನೋಡದಿದ್ದರೆ ಖಂಡಿತವಾಗಿ ಯಮಲೋಕಕ್ಕೆ ಹೋಗುವೆನು.॥25॥

ಮೂಲಮ್ - 26

ಅತೋ ನು ಕಿಂ ದುಃಖತರಂ ಯೋಽಹಮಿಕ್ಷ್ವಾಕುನಂದನಮ್ ।
ಇಮಾಮವಸ್ಥಾಮಾಪನ್ನೋ ನೇಹ ಪಶ್ಯಾಮಿ ರಾಘವಮ್ ॥

ಅನುವಾದ

ಈ ಮರಣಾಸನ್ನ ಅವಸ್ಥೆಯನ್ನು ತಲುಪಿದರೂ ಇಕ್ಷ್ವಾಕುಕುಲ ನಂದನ ರಾಘವೇಂದ್ರ ಶ್ರೀರಾಮನನ್ನು ಇಲ್ಲಿ ನೋಡದೆ ಇರುವುದಕ್ಕಿಂತ ಮಿಗಿಲಾದ ದುಃಖದ ಮಾತು ಬೇರೆ ಯಾವುದಿರಬಹುದು.॥26॥

ಮೂಲಮ್ - 27

ಹಾ ರಾಮ ರಾಮಾನುಜ ಹಾ ಹಾ ವೈದೇಹಿ ತಪಸ್ವಿನಿ ।
ನ ಮಾಂ ಜಾನೀತ ದುಃಖೇನ ಮ್ರಿಯಮಾಣಮನಾಥವತ್ ॥

ಅನುವಾದ

ಹಾ ರಾಮಾ! ಹಾ ಲಕ್ಷ್ಮಣಾ! ಹಾ ವಿದೇಹ ರಾಜಕುಮಾರೀ ತಪಸ್ವಿನೀ ಸೀತೇ! ನಾನು ಯಾವ ರೀತಿ ದುಃಖದಿಂದ ಅನಾಥನಂತೆ ಸಾಯುತ್ತಿದ್ದೇನೆ, ಇದು ನಿಮಗೆ ತಿಳಿದಿರಲಿಕ್ಕಿಲ್ಲ.॥27॥

ಮೂಲಮ್ - 28

ಸ ತೇನ ರಾಜಾ ದುಃಖೇನ ಭೃಶಮರ್ಪಿತಚೇತನಃ ।
ಅವಗಾಢಃ ಸುದುಷ್ಪಾರಂ ಶೋಕಸಾಗರಮಬ್ರವೀತ್ ॥

ಅನುವಾದ

ರಾಜನು ಆ ದುಃಖದಿಂದ ಅಚಿಂತ್ಯ ಅಚೇತನನಾಗಿದ್ದನು, ಆದ್ದರಿಂದ ಅವನು ಆ ಪರಮ ದುರ್ಲಂಘ್ಯ ಶೋಕ ಸಮುದ್ರದಲ್ಲಿ ನಿಮಗ್ನನಾಗಿ ಹೇಳಿದನು.॥28॥

ಮೂಲಮ್ - 29

ರಾಮಶೋಕಮಹಾವೇಗಃ ಸೀತಾವಿರಹಪಾರಗಃ ।
ಶ್ವಸಿತೋರ್ಮಿಮಹಾವರ್ತೋ ಬಾಷ್ಪವೇಗಜಲಾವಿಲಃ ॥

ಮೂಲಮ್ - 30

ಬಾಹುವಿಕ್ಷೇಪಮೀನೋಽಸೌ ವಿಕ್ರಂದಿತಮಹಾಸ್ವನಃ ।
ಪ್ರಕೀರ್ಣಕೇಶಶೈವಾಲಃ ಕೈಕೇಯೀವಡವಾಮುಖಃ ॥

ಮೂಲಮ್ - 31

ಮಮಾಶ್ರುವೇಗಪ್ರಭವಃ ಕುಬ್ಜಾವಾಕ್ಯಮಹಾಗ್ರಹಃ ।
ವರವೇಲೋ ನೃಶಂಸಾಯಾ ರಾಮಪ್ರವ್ರಾಜನಾಯತಃ ॥

ಮೂಲಮ್ - 32

ಯಸ್ಮಿನ್ಬತ ನಿಮಗ್ನೋಽಹಂ ಕೌಸಲ್ಯೇ ರಾಘವಂ ವಿನಾ ।
ದುಸ್ತರೋ ಜೀವತಾ ದೇವಿ ಮಯಾಯಂ ಶೋಕಸಾಗರಃ ॥

ಅನುವಾದ

ದೇವಿ ಕೌಸಲ್ಯೇ! ನಾನು ಶ್ರೀರಾಮನಿಲ್ಲದ ಶೋಕ ಸಮುದ್ರದಲ್ಲಿ ಮುಳುಗುತ್ತಿರುವೆನು; ಅದನ್ನು ಬದುಕಿರುವಾಗಲೇ ದಾಟುವುದು ನನಗೆ ಅತ್ಯಂತ ಕಠಿಣವಾಗಿದೆ. ಶ್ರೀರಾಮನ ಶೋಕವೇ ಆ ಸಮುದ್ರದ ಮಹಾವೇಗವಾಗಿದೆ. ಸೀತೆಯ ಅಗಲಿಕೆಯೇ ಅದರ ಇನ್ನೊಂದು ತುದಿಯಾಗಿದೆ. ದೀರ್ಘವಾದ ನಿಟ್ಟುಸಿರೇ ಅದರ ಅಲೆಗಳು ಮತ್ತು ಸುಳಿಗಳಾಗಿವೆ. ಕಣ್ಣುಗಳಿಂದ ಹರಿದ ಕಣ್ಣೀರೇ ಅದರ ಮಲಿನ ಜಲವಾಗಿದೆ. ನಾನು ಕೈಗಳನ್ನು ಬಡಿದುಕೊಳ್ಳುವುದೇ ಅದರಲ್ಲಿ ನೆಗೆಯುವ ಮೀನುಗಳಾಗಿವೆ. ಕರುಣಕ್ರಂದನವೇ ಅದರ ಮಹಾ ಗರ್ಜನೆ. ಈ ಕೆದರಿದ ಕೂದಲುಗಳೇ ಅದರಲ್ಲಿ ಇರುವ ಪಾಚಿಯಾಗಿದೆ. ಕೈಕೇಯಿಯೇ ವಡವಾನಲವಾಗಿದೆ. ಆ ಶೋಕಸಮುದ್ರವು ವೇಗವಾಗಿ ನಾನು ಸುರಿಸುವ ಅಶ್ರು ವರ್ಷೆಯ ಉತ್ಪತ್ತಿಯ ಮೂಲ ಕಾರಣವಾಗಿದೆ. ಮಂಥರೆಯ ಕುಟಿಲ ವಚನಗಳೇ ಈ ಸಮುದ್ರದ ದೊಡ್ಡ-ದೊಡ್ಡ ಮೊಸಳೆಗಳು. ಕ್ರೂರ ಕೈಕೇಯಿಯು ಬೇಡಿದ ಎರಡು ವರಗಳೇ ಅದರ ಎರಡು ದಡಗಳು. ಶ್ರೀರಾಮನ ವನವಾಸವೇ ಆ ಶೋಕಸಾಗರದ ಮಹಾ ವಿಸ್ತಾರವಾಗಿದೆ.॥29-32॥

ಮೂಲಮ್ - 33

ಅಶೋಭನಂ ಯೋಽಹಮಿಹಾದ್ಯ ರಾಘವಂ
ದಿದೃಕ್ಷಮಾಣೋ ನ ಲಭೇ ಸಲಕ್ಷ್ಮಣಮ್ ।
ಇತೀವ ರಾಜಾ ವಿಲಪನ್ ಮಹಾಯಶಾಃ
ಪಪಾತ ತೂರ್ಣಂ ಶಯನೇ ಸ ಮೂರ್ಛಿತಃ ॥

ಅನುವಾದ

ನಾನು ಲಕ್ಷ್ಮಣಸಹಿತ ಶ್ರೀರಾಮನನ್ನು ನೋಡಲು ಬಯಸುತ್ತಿದ್ದೇನೆ, ಆದರೆ ಈಗ ಅವನನ್ನು ಇಲ್ಲಿ ನೋಡಲಾಗುತ್ತಿಲ್ಲ- ಇದು ನನ್ನ ಬಹಳ ದೊಡ್ಡ ಪಾಪದ ಫಲವಾಗಿದೆ. ಈ ರೀತಿ ವಿಲಪಿಸುತ್ತಿರುವ ಮಹಾಯಶಸ್ವೀ ದಶರಥನು ಕೂಡಲೇ ಮೂರ್ಛಿತನಾಗಿ ಶಯ್ಯೆಯಲ್ಲಿ ಬಿದ್ದುಬಿಟ್ಟನು.॥33॥

ಮೂಲಮ್ - 34

ಇತಿ ವಿಲಪತಿ ಪಾರ್ಥಿವೇ ಪ್ರಣಷ್ಟೇ
ಕರುಣತರಂ ದ್ವಿಗುಣಂ ಚರಾಮಹೇತೋಃ ।
ವಚನಮನುನಿಶಮ್ಯ ತಸ್ಯ ದೇವೀ
ಭಯಮಗಮತ್ ಪುನರೇವ ರಾಮಮಾತಾ ॥

ಅನುವಾದ

ಶ್ರೀರಾಮಚಂದ್ರನಿಗಾಗಿ ಈ ಪ್ರಕಾರ ವಿಲಾಪ ಮಾಡುತ್ತಾ ದಶರಥನು ಮೂರ್ಛಿತನಾದಾಗ ಅವನ ಆ ಅತ್ಯಂತ ಕರುಣಾಜನಕ ಮಾತನ್ನು ಕೇಳಿ ರಾಮಮಾತೆ ದೇವೀ ಕೌಸಲ್ಯೆಗೆ ಪುನಃ ಇಮ್ಮಡಿ ಭಯವಾಯಿತು.॥34॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಐವತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು.॥59॥