वाचनम्
ಭಾಗಸೂಚನಾ
ಸುಮಂತ್ರನು ಅಯೋಧ್ಯೆಗೆ ಮರಳಿದುದು, ಅವನು ಹೇಳಿದ ಶ್ರೀರಾಮನ ಸಂದೇಶ ಕೇಳಿ ಪುರವಾಸಿಗಳ ವಿಲಾಪ, ದಶರಥ ಮತ್ತು ಕೌಸಲ್ಯೆಯರ ಮೂರ್ಛೆ, ಅಂತಃಪುರದ ರಾಣಿಯರ ಆರ್ತನಾದ
ಮೂಲಮ್ - 1
ಕಥಯಿತ್ವಾ ತು ದುಃಖಾರ್ತಃ ಸುಮಂತ್ರೇಣ ಚಿರಂ ಸಹ ।
ರಾಮೇ ದಕ್ಷಿಣಕೂಲಸ್ಥೇ ಜಗಾಮ ಸ್ವಗೃಹಂ ಗುಹಃ ॥
ಅನುವಾದ
ಇತ್ತ ಶ್ರೀರಾಮನು ಗಂಗೆಯ ದಕ್ಷಣತೀರದಲ್ಲಿ ಇಳಿದಾಗ ಗುಹನು ದುಃಖದಿಂದ ವ್ಯಾಕುಲನಾಗಿ ಸುಮಂತ್ರನೊಂದಿಗೆ ಬಹಳ ಹೊತ್ತು ಮಾತುಕತೆಯಾಡುತ್ತಾ, ಸುಮಂತ್ರನನ್ನು ತನ್ನ ಮನೆಗೆ ಕರೆದುಕೊಂಡು ಹೋದನು.॥1॥
ಮೂಲಮ್ - 2
ಭರದ್ವಾಜಾಭಿಗಮನಂ ಪ್ರಯಾಗೇ ಚ ಭಾಜನಮ್ ।
ಆ ಗಿರೇರ್ಗಮನಂ ತೇಷಾಂ ತತ್ರಸ್ಥೈರಭಿಲಕ್ಷಿತಮ್ ॥
ಅನುವಾದ
ಶ್ರೀರಾಮಚಂದ್ರನು ಪ್ರಯಾಗದಲ್ಲಿ ಭರದ್ವಾಜರ ಆಶ್ರಮಕ್ಕೆ ಹೋದುದು, ಮುನಿಯಿಂದ ಸತ್ಕಾರ ಪಡೆದು ಚಿತ್ರಕೂಟ ಪರ್ವತಕ್ಕೆ ಹೋದುದು, ಈ ಎಲ್ಲ ವೃತ್ತಾಂತವನ್ನು ಶೃಂಗವೇರಪುರದ ಗುಪ್ತಚರರು ನೋಡಿ ಮರಳಿ ಬಂದು ಗುಹನಿಗೆ ಎಲ್ಲವನ್ನೂ ತಿಳಿಸಿದರು.॥2॥
ಮೂಲಮ್ - 3
ಅನುಜ್ಞಾತಃ ಸುಮಂತ್ರೋಽಥ ಯೋಜಯಿತ್ವಾ ಹಯೋತ್ತಮಾನ್ ।
ಅಯೋಧ್ಯಾಮೇವ ನಗರೀಂ ಪ್ರಯಯೌ ಗಾಢದುರ್ಮನಾಃ ॥
ಅನುವಾದ
ಇವೆಲ್ಲ ಮಾತುಗಳನ್ನು ಅರಿತು ಸುಮಂತ್ರನು ಗುಹನಿಂದ ಬೀಳ್ಕೊಂಡು ತನ್ನ ಉತ್ತಮ ಕುದುರೆಗಳನ್ನು ರಥಕ್ಕೆ ಹೂಡಿ ಅಯೋಧ್ಯೆಯ ಕಡೆಗೆ ಹೊರಟನು. ಆಗ ಅವನ ಮನಸ್ಸಿನಲ್ಲಿ ಬಹಳ ದುಃಖವಾಗುತ್ತಿತ್ತು.॥3॥
ಮೂಲಮ್ - 4
ಸ ವನಾನಿ ಸುಗಂಧೀನಿ ಸರಿತಶ್ಚ ಸರಾಂಸಿ ಚ ।
ಪಶ್ಯನ್ ಯತ್ತೋ ಯಯೌ ಶೀಘ್ರಂ ಗ್ರಾಮಾಣಿ ನಗರಾಣಿ ಚ ॥
ಅನುವಾದ
ಅವನು ದಾರಿಯಲ್ಲಿ ಸುಗಂಧಿತ ವನಗಳನ್ನು, ನದಿಗಳನ್ನು, ಸರೋವರಗಳನ್ನು, ಗ್ರಾಮ-ನಗರಗಳನ್ನು ನೋಡುತ್ತಾ ಶೀಘ್ರವಾಗಿ ಸಾಗುತ್ತಿದ್ದನು.॥4॥
ಮೂಲಮ್ - 5
ತತಃ ಸಾಯಾಹ್ನಸಮಯೇ ದ್ವಿತೀಯೇಽಹನಿ ಸಾರಥಿಃ ।
ಅಯೋಧ್ಯಾಂ ಸಮನುಪ್ರಾಪ್ಯ ನಿರಾನಂದಾಂ ದದರ್ಶ ಹ ॥
ಅನುವಾದ
ಶೃಂಗವೇರಪುರದಿಂದ ಹೊರಟು ಮರುದಿನ ಸಾಯಂಕಾಲದಲ್ಲಿ ಅಯೋಧ್ಯೆಗೆ ತಲುಪಿ ನೋಡುತ್ತಾನೆ, ಇಡೀ ನಗರವು ಆನಂದಶೂನ್ಯವಾಗಿತ್ತು.॥5॥
ಮೂಲಮ್ - 6
ಸ ಶೂನ್ಯಾಮಿವ ನಿಃಶಬ್ದಾಂ ದೃಷ್ಟ್ವಾ ಪರಮದುರ್ಮನಾಃ ।
ಸುಮಂತ್ರಶ್ಚಿಂತಯಾಮಾಸ ಶೋಕವೇಗಸಮಾಹತಃ ॥
ಅನುವಾದ
ಅಲ್ಲಿ ಎಲ್ಲಿಯೂ ಯಾವುದೇ ಶಬ್ದ ಕೇಳಿ ಬರುತ್ತಿರಲಿಲ್ಲ. ಮನುಷ್ಯರಿಂದ ಶೂನ್ಯವಾಗಿರುವಂತೆ, ಸ್ಮಶಾನ ಮೌನದಂತಿತ್ತು. ಅಯೋಧ್ಯೆಯ ಇಂತಹ ಸ್ಥಿತಿಯನ್ನು ನೋಡಿ ಸುಮಂತ್ರನಿಗೆ ಬಹಳ ದುಃಖವಾಯಿತು. ಅವನು ಶೋಕಪೀಡಿತನಾಗಿ ಹೀಗೆ ಚಿಂತಿಸತೊಡಗಿದನು.॥6॥
ಮೂಲಮ್ - 7
ಕಚ್ಚಿನ್ನ ಸಗಜಾ ಸಾಶ್ವಾಸಜನಾ ಸಜನಾಧಿಪಾ ।
ರಾಮಸಂತಾಪದುಃಖೇನ ದಗ್ಧಾ ಶೋಕಾಗ್ನಿನಾ ಪುರೀ ॥
ಅನುವಾದ
ಶ್ರೀರಾಮನ ವಿರಹಜನಿತ ಸಂತಾಪ ದುಃಖದಿಂದ ವ್ಯಥಿತವಾಗಿ ಆನೆ, ಕುದುರೆ, ಮನುಷ್ಯರು ಮತ್ತು ಮಹಾರಾಜಸಹಿತ ಇಡೀ ಅಯೋಧ್ಯೆಯು ಶೋಕಾಗ್ನಿಯಿಂದ ಎಲ್ಲಾದರೂ ಸುಟ್ಟುಹೋಗಿಲ್ಲವಲ್ಲ.॥7॥
ಮೂಲಮ್ - 8
ಇತಿ ಚಿಂತಾಪರಃ ಸೂತೋ ವಾಜಿಭಿಃ ಶೀಘ್ರಯಾಯಿಭಿಃ ।
ನಗರದ್ವಾರಮಾಸಾದ್ಯ ತ್ವರಿತಃ ಪ್ರವಿವೇಶ ಹ ॥
ಅನುವಾದ
ಇದೇ ಚಿಂತೆಯಿಂದ ಸಾರಥಿ ಸುಮಂತ್ರನು ವೇಗಶಾಲಿ ಕುದುರೆಗಳ ಮೂಲಕ ನಗರದ್ವಾರವನ್ನು ತಲುಪಿ ಕೂಡಲೇ ಅಯೋಧ್ಯೆಯನ್ನು ಪ್ರವೇಶಿಸಿದನು.॥8॥
ಮೂಲಮ್ - 9
ಸುಮಂತ್ರಮಭಿಧಾವಂತಃ ಶತಶೋಽಥ ಸಹಸ್ರಶಃ ।
ಕ್ವ ರಾಮ ಇತಿ ಪೃಚ್ಛಂತಃ ಸೂತಮಭ್ಯದ್ರವನ್ನರಾಃ ॥
ಅನುವಾದ
ಸುಮಂತ್ರನನ್ನು ನೋಡಿ ನೂರಾರು-ಸಾವಿರಾರು ಪುರವಾಸಿಗಳು ಓಡಿ ಬಂದು ‘ಶ್ರೀರಾಮನೆಲ್ಲಿ?’ ಎಂದು ಕೇಳುತ್ತಾ ಅವನ ರಥದ ಜೊತೆಗೆ ಓಡತೊಡಗಿದರು.॥9॥
ಮೂಲಮ್ - 10
ತೇಷಾಂ ಶಶಂಸ ಗಂಗಾಯಾಮಹಮಾಪೃಚ್ಛ್ಯರಾಘವಮ್ ।
ಅನುಜ್ಞಾತೋ ನಿವೃತ್ತೋಽಸ್ಮಿ ಧಾರ್ಮಿಕೇಣ ಮಹಾತ್ಮನಾ ॥
ಮೂಲಮ್ - 11
ತೇ ತೀರ್ಣಾ ಇತಿ ವಿಜ್ಞಾಯ ಬಾಷ್ಪಪೂರ್ಣಮುಖಾನರಾಃ
ಅಹೋ ಧಿಗಿತಿ ನಿಃಶ್ವಸ್ಯ ಹಾ ರಾಮೇತಿ ವಿಚುಕ್ರುಶುಃ ॥
ಅನುವಾದ
ಆಗ ಸುಮಂತ್ರನು ಆ ಜನರಲ್ಲಿ ಹೇಳಿದನು-ಸಜ್ಜನರೇ! ನಾನು ಗಂಗೆಯ ತೀರದವರೆಗೆ ಶ್ರೀರಘುನಾಥನೊಂದಿಗೆ ಹೋಗಿದ್ದೆ. ಅಲ್ಲಿಂದ ಆ ಧರ್ಮಿನಿಷ್ಠ ಮಹಾತ್ಮನು ನನಗೆ ಮರಳಿ ಹೋಗುವಂತೆ ಆಜ್ಞಾಪಿಸಿದನು. ಆದ್ದರಿಂದ ನಾನು ಅವನಿಂದ ಬೀಳ್ಕೊಂಡು ಇಲ್ಲಿಗೆ ಮರಳಿ ಬಂದೆ. ಆ ಮೂವರು ಗಂಗೆಯನ್ನು ದಾಟಿ ಹೊರಟುಹೋದರು. ಇದನ್ನು ತಿಳಿದು ಎಲ್ಲರ ಕಣ್ಣುಗಳಲ್ಲಿ ಕಣ್ಣೀರು ಹರಿಯಿತು. ಅಯ್ಯೋ! ನಮಗೆ ಧಿಕ್ಕಾರವಿರಲಿ. ಹೀಗೆ ಹೇಳಿ ಅವರು ದೀರ್ಘವಾಗಿ ನಿಟ್ಟುಸಿರು ಬಿಡುತ್ತಾ ‘ಹಾ ರಾಮ!’ ಎಂದು ಕೂಗುತ್ತಾ ಜೋರಾಗಿ ಕರುಣಾಕ್ರಂದನ ಮಾಡತೊಡಗಿದರು.॥10-11॥
ಮೂಲಮ್ - 12
ಶುಶ್ರಾವ ಚ ವಚಸ್ತೇಷಾಂ ವೃಂದಂ ವೃಂದಂ ಚ ತಿಷ್ಠತಾಮ್ ।
ಹತಾಃ ಸ್ಮ ಖಲು ಯೇ ನೇಹ ಪಶ್ಯಾಮ ಇತಿ ರಾಘವಮ್ ॥
ಅನುವಾದ
ಸುಮಂತ್ರನು ಅವರ ಮಾತನ್ನು ಕೇಳಿದನು. ಅವರು ಗುಂಪು-ಗುಂಪಾಗಿ ನಿಂತುಕೊಂಡು - ಅಯ್ಯೋ! ನಿಶ್ಚಯವಾಗಿಯೂ ನಮ್ಮ ಸರ್ವನಾಶವಾಯಿತು; ಏಕೆಂದರೆ ಈಗ ನಾವು ಇಲ್ಲಿ ಶ್ರೀರಾಮನನ್ನು ನೋಡಲಾರೆವು.॥12॥
ಮೂಲಮ್ - 13
ದಾನಯಜ್ಞವಿವಾಹೇಷು ಸಮಾಜೇಷು ಮಹತ್ಸು ಚ ।
ನ ದ್ರಕ್ಷ್ಯಾಮಃ ಪುನರ್ಜಾತು ಧಾರ್ಮಿಕಂ ರಾಮಮಂತರಾ ॥
ಅನುವಾದ
ದಾನ, ಯಜ್ಞ, ವಿವಾಹ ಹಾಗೂ ದೊಡ್ಡ-ದೊಡ್ಡ ಸಾಮಾಜಿಕ ಉತ್ಸವಗಳ ಸಮಯದಲ್ಲಿ ಇನ್ನು ನಾವು ಎಂದೂ ಧರ್ಮಾತ್ಮಾ ಶ್ರೀರಾಮನನ್ನು ನಮ್ಮ ಜೊತೆಗೆ ನಿಂತಿರುವುದನ್ನು ನೋಡಲಾರೆವು.॥13॥
ಮೂಲಮ್ - 14
ಕಿಂ ಸಮರ್ಥಂ ಜನಸ್ಯಾಸ್ಯ ಕಿಂ ಪ್ರಿಯಂಕಿಂ ಸುಖಾವಹಮ್ ।
ಇತಿ ರಾಮೇಣ ನಗರಂ ಪಿತ್ರೇವ ಪರಿಪಾಲಿತಮ್ ॥
ಅನುವಾದ
ಇಂತಹ ಮನುಷ್ಯನಿಗೆ ಯಾವ ವಸ್ತು ಉಪಯೋಗಿಯಾಗಿದೆ? ಏನು ಮಾಡಿದರೆ ಅವರಿಗೆ ಪ್ರಿಯವಾಗುವುದು? ಯಾವ-ಯಾವ ವಸ್ತುವಿನಿಂದ ಅವರಿಗೆ ಸುಖ ಸಿಗಬಹುದು? ಮುಂತಾದ ವಿಷಯಗಳ ವಿಚಾರಮಾಡುತ್ತಾ ಶ್ರೀರಾಮ ಚಂದ್ರನು ತಂದೆಯಂತೆ ಈ ನಗರವನ್ನು ಪಾಲಿಸುತ್ತಿದ್ದನು.॥14॥
ಮೂಲಮ್ - 15
ವಾತಾಯನಗತಾನಾಂ ಚ ಸ್ತ್ರೀಣಾಮನ್ವಂತರಾಪಣಮ್ ।
ರಾಮಮೇವಾಭಿತಪ್ತಾನಾಂ ಶುಶ್ರಾವ ಪರಿದೇವನಮ್ ॥
ಅನುವಾದ
ರಾಜಬೀದಿಯಲ್ಲಿ ಹೋಗುವಾಗ ಸಾರಥಿಯ ಕಿವಿಗಳಿಗೆ ಸೌಧಗಳ ಕಿಡಕಿಗಳಲ್ಲಿ ಕುಳಿತು ಶ್ರೀರಾಮನಿಗಾಗಿಯೇ ಸಂತಪ್ತರಾಗಿ ವಿಲಾಪಿಸುತ್ತಾ ಅಳುವ ಸ್ತ್ರೀಯರ ಶಬ್ದ ಕೇಳಿ ಬರುತ್ತಿದ್ದವು.॥15॥
ಮೂಲಮ್ - 16
ಸ ರಾಜಮಾರ್ಗಮಧ್ಯೇನ ಸುಮಂತ್ರಃ ಪಿಹಿತಾನನಃ ।
ಯತ್ರ ರಾಜಾ ದಶರಥಸ್ತದೇವೋಪಯಯೌ ಗೃಹಮ್ ॥
ಅನುವಾದ
ರಾಜಮಾರ್ಗದಲ್ಲಿ ಹೋಗುತ್ತಿರುವಾಗ ಸುಮಂತ್ರನು ಬಟ್ಟೆಯಿಂದ ತನ್ನ ಮುಖವನ್ನು ಮುಚ್ಚಿಕೊಂಡಿದ್ದನು. ಅವನು ರಥದೊಂದಿಗೆ ದಶರಥ ಮಹಾರಾಜರು ಇರುವ ಭವನದ ಕಡೆಗೆ ಹೊರಟನು.॥16॥
ಮೂಲಮ್ - 17
ಸೋಽವತೀರ್ಯ ರಥಾಚ್ಛೀಘ್ರಂ ರಾಜವೇಶ್ಮ ಪ್ರವಿಶ್ಯ ಚ ।
ಕಕ್ಷ್ಯಾಃ ಸಪ್ತಾಭಿಚಕ್ರಾಮ ಮಹಾಜನಸಮಾಕುಲಾಃ ॥
ಅನುವಾದ
ಅರಮನೆಯ ಬಳಿಗೆ ಹೋಗಿ ಅವನು ಶೀಘ್ರವಾಗಿ ರಥದಿಂದ ಇಳಿದು, ಒಳಗೆ ಪ್ರವೇಶಿಸಿ ಬಹಳ ಜನರಿಂದ ತುಂಬಿದ ಏಳು ಹಜಾರಗಳನ್ನು ದಾಟಿದನು.॥17॥
ಮೂಲಮ್ - 18
ಹರ್ಮ್ಯೈರ್ವಿಮಾನೈಃ ಪ್ರಾಸಾದೈರವೇಕ್ಷ್ಯಾಥ ಸಮಾಗತಮ್ ।
ಹಾಹಾಕಾರಕೃತಾ ನಾರ್ಯೋ ರಾಮಾದರ್ಶನಕರ್ಶಿತಾಃ ॥
ಅನುವಾದ
ಶ್ರೀಮಂತರ ಸೌಧಗಳಲ್ಲಿ, ಏಳು ಮಹಡಿಯುಳ್ಳ ಮನೆಗಳಲ್ಲಿ ಹಾಗೂ ಅರಮನೆಯಲ್ಲಿ ಕುಳಿತಿರುವ ಸ್ತ್ರೀಯರು ಸುಮಂತ್ರನು ಮರಳಿದುದನ್ನು ನೋಡಿ ಶ್ರೀರಾಮನ ದರ್ಶನದಿಂದ ವಂಚಿತರಾದ್ದರಿಂದ ದುಃಖದಿಂದ ದುರ್ಬಲರಾಗಿ ಹಾಹಾಕಾರ ಮಾಡಿದರು.॥18॥
ಮೂಲಮ್ - 19
ಆಯತೈರ್ವಿಮಲೈರ್ನೇತ್ರೈರಶ್ರುವೇಗಪರಿಪ್ಲುತೈಃ ।
ಅನ್ಯೋನ್ಯಮಭಿವೀಕ್ಷಂತೇವ್ಯಕ್ತಮಾರ್ತತರಾಃ ಸ್ತ್ರಿಯಃ ॥
ಅನುವಾದ
ಅವರ ಕಾಡಿಗೆರಹಿತ ದೊಡ್ಡ-ದೊಡ್ಡ ಕಣ್ಣುಗಳು ಕಣ್ಣೀರಿನಿಂದ ಒದ್ದೆಯಾಗಿದ್ದವು. ಆ ಸ್ತ್ರೀಯರು ಅತ್ಯಂತ ಆರ್ತರಾಗಿ ಅವ್ಯಕ್ತಭಾವದಿಂದ ಒಬ್ಬರು ಮತ್ತೊಬ್ಬರ ಕಡೆಗೆ ನೋಡುತ್ತಿದ್ದರು.॥19॥
ಮೂಲಮ್ - 20
ತತೋ ದಶರಥ ಸ್ತ್ರೀಣಾಂ ಪ್ರಾಸಾದೇಭ್ಯಸ್ತತಸ್ತತಃ ।
ರಾಮಶೋಕಾಭಿತಪ್ತಾನಾಂ ಮಂದಂ ಶುಶ್ರಾವ ಜಲ್ಪಿತಮ್ ॥
ಅನುವಾದ
ಅನಂತರ ಅರಮನೆಯಲ್ಲಿ ಅಲ್ಲಲ್ಲಿ ಶ್ರೀರಾಮನ ಶೋಕದಿಂದ ಸಂತಪ್ತರಾದ ದಶರಥನ ರಾಣಿಯರು ಮೆಲ್ಲನೆ ಮಾತನಾಡುತ್ತಿದ್ದ ಮಾತುಗಳು ಕೇಳಿಬಂದವು.॥20॥
ಮೂಲಮ್ - 21
ಸಹ ರಾಮೇಣ ನಿರ್ಯಾತೋ ವಿನಾ ರಾಮಮಿಹಾಗತಃ ।
ಸೂತಃ ಕಿಂ ನಾಮ ಕೌಸಲ್ಯಾಂ ಕ್ರೋಶಂತೀಂ ಪ್ರತಿವಕ್ಷ್ಯತಿ ॥
ಅನುವಾದ
ಈ ಸಾರಥಿ ಸುಮಂತ್ರನು ಶ್ರೀರಾಮನೊಂದಿಗೆ ಇಲ್ಲಿಂದ ಹೋಗಿದ್ದ ಹಾಗೂ ಅವನಿಲ್ಲದೆ ಮರಳಿ ಬಂದಿರುವನು. ಇಂತಹ ಸ್ಥಿತಿಯಲ್ಲಿ ಕರುಣಾಕ್ರಂದನ ಮಾಡುತ್ತಿರುವ ಕೌಸಲ್ಯೆಗೆ ಏನು ಉತ್ತರ ಕೊಡುವನು.॥21॥
ಮೂಲಮ್ - 22
ಯಥಾ ಚ ಮನ್ಯೇ ದುರ್ಜೀವಮೇವಂ ನ ಸುಕರಂ ಧ್ರುವಮ್ ।
ಆಚ್ಛಿದ್ಯ ಪುತ್ರೇ ನಿರ್ಯಾತೇ ಕೌಸಲ್ಯಾಯತ್ರ ಜೀವತಿ ॥
ಅನುವಾದ
ಜೀವನ ದುಃಖಮಯ ಇರುವಂತೆಯೇ ನಿಶ್ಚಯವಾಗಿ ಅದರ ನಾಶವೂ ಸುಲಭವಿಲ್ಲ ಎಂದೇ ನಾನು ತಿಳಿಯುತ್ತೇನೆ. ಅದರಿಂದಲೇ ನ್ಯಾಯೋಚಿತವಾಗಿ ಪ್ರಾಪ್ತವಾದ ಪಟ್ಟಾಭಿಷೇಕವನ್ನು ತ್ಯಜಿಸಿ ಪುತ್ರನು ಕಾಡಿಗೆ ಹೋದರೂ ಕೌಸಲ್ಯೆ ಇನ್ನೂ ಜೀವಂತರವಾಗಿರುವಳು.॥22॥
ಮೂಲಮ್ - 23
ಸತ್ಯರೂಪಂ ತು ತದ್ವಾಕ್ಯಂ ರಾಜಸ್ತ್ರೀಣಾಂ ನಿಶಾಮಯನ್ ।
ಪ್ರದೀಪ್ತ ಇವ ಶೋಕೇನ ವಿವೇಶ ಸಹಸಾ ಗೃಹಮ್ ॥
ಅನುವಾದ
ರಾಣಿಯರ ಆ ನಿಜವಾದ ಮಾತನ್ನು ಕೇಳಿ ಶೋಕದಿಂದ ದಗ್ಧನಂತಾದ ಸುಮಂತ್ರನು ಕೂಡಲೇ ರಾಜಭವನವನ್ನು ಪ್ರವೇಶಿಸಿದನು.॥23॥
ಮೂಲಮ್ - 24
ಸ ಪ್ರವಿಶ್ಯಾಷ್ಟಮೀಂ ಕಕ್ಷ್ಯಾಂ ರಾಜಾನಂ ದೀನಮಾತುರಮ್ ।
ಪುತ್ರಶೋಕಪರಿದ್ಯೂನಮಪಶ್ಯತ್ ಪಾಂಡುರೇ ಗೃಹೇ ॥
ಅನುವಾದ
ಎಂಟನೆಯ ಹಜಾರವನ್ನು ಪ್ರವೇಶಿಸಿ ನೋಡಿದರೆ, ಒಂದು ಶ್ವೇತಭವನದಲ್ಲಿ ಪುತ್ರಶೋಕದಿಂದ ಮಲಿನ, ದೀನ ಹಾಗೂ ದುಃಖಾತುರನಾಗಿ ಮಹಾರಾಜನು ಕುಳಿತಿದ್ದಾನೆ.॥24॥
ಮೂಲಮ್ - 25
ಅಭಿಗಮ್ಯ ತಮಾಸೀನಂ ರಾಜಾನಮಭಿವಾದ್ಯ ಚ ।
ಸುಮಂತ್ರೋ ರಾಮವಚನಂ ಯಥೋಕ್ತಂ ಪ್ರತ್ಯವೇದಯತ್ ॥
ಅನುವಾದ
ಸುಮಂತ್ರನು ಅಲ್ಲಿ ಕುಳಿತಿರುವ ಮಹಾರಾಜರ ಬಳಿಗೆ ಹೋಗಿ, ಅವರಿಗೆ ವಂದಿಸಿ ಶ್ರೀರಾಮಚಂದ್ರನು ಹೇಳಿದ ಮಾತುಗಳನ್ನು ಹಾಗೆಯೇ ನಿವೇದಿಸಿಕೊಂಡನು.॥25॥
ಮೂಲಮ್ - 26
ಸ ತೂಷ್ಣೀಮೇವ ತಚ್ಛ್ರುತ್ವಾ ರಾಜಾ ವಿದ್ರುತಮಾನಸಃ ।
ಮೂರ್ಛಿತೋ ನ್ಯಪತದ್ಭೂಮೌ ರಾಮಶೋಕಾಭಿಪೀಡಿತಃ ॥
ಅನುವಾದ
ರಾಜನು ಸುಮ್ಮನೆ ಕೇಳುತ್ತಿದ್ದನು, ಕೇಳಿ ಅವನ ಹೃದಯ ದ್ರವೀಭೂತವಾಯಿತು. ಮತ್ತೆ ಅವನು ಶ್ರೀರಾಮನ ಶೋಕದಿಂದ ಅತ್ಯಂತ ಪೀಡಿತನಾಗಿ ಮೂರ್ಛಿತನಾಗಿ ನೆಲಕ್ಕೆ ಕುಸಿದುಬಿದ್ದನು.॥26॥
ಮೂಲಮ್ - 27
ತತೋಂಽತಃಪುರಮಾವಿದ್ಧಂ ಮೂರ್ಛಿತೇ ಪೃಥಿವೀಪತೌ ।
ಉಚ್ಛಿೃತ್ಯ ಬಾಹೂ ಚುಕ್ರೋಶ ನೃಪತೌ ಪತಿತೇ ಕ್ಷಿತೌ ॥
ಅನುವಾದ
ಮಹಾರಾಜರು ಮೂರ್ಛಿತರಾದಾಗ ಇಡೀ ಅಂತಃಪುರವು ದುಃಖದಿಂದ ವ್ಯಥಿತವಾಯಿತು. ರಾಜನು ಭೂಮಿಗೆ ಬೀಳುತ್ತಲೇ ಎಲ್ಲ ಜನರು ಎರಡೂ ಕೈಗಳನ್ನೆತ್ತಿ ಜೋರಾಗಿ ಚೀತ್ಕಾರ ಮಾಡತೊಡಗಿದರು.॥27॥
ಮೂಲಮ್ - 28
ಸುಮಿತ್ರಯಾ ತು ಸಹಿತಾ ಕೌಸಲ್ಯಾ ಪತಿತಂ ಪತಿಮ್ ।
ಉತ್ಥಾಪಯಾಮಾಸ ತದಾ ವಚನಂ ಚೇದಮಬ್ರವೀತ್ ॥
ಅನುವಾದ
ಆಗ ಕೌಸಲ್ಯೆಯು ಸುಮಿತ್ರೆಯ ಸಹಾಯದಿಂದ ಬಿದ್ದಿರುವ ತಮ್ಮ ಪತಿಯನ್ನು ಎಬ್ಬಿಸಿ, ಈ ಪ್ರಕಾರ ಹೇಳಿದಳು.॥28॥
ಮೂಲಮ್ - 29
ಇಮಂ ತಸ್ಯ ಮಹಾಭಾಗ ದೂತಂ ದುಷ್ಕರಕಾರಿಣಃ ।
ವನವಾಸಾದನುಪ್ರಾಪ್ತಂ ಕಸ್ಮಾನ್ನ ಪ್ರತಿಭಾಷಸೇ ॥
ಅನುವಾದ
ಮಹಾಭಾಗ! ಈ ಸುಮಂತ್ರನು ದುಷ್ಕರಕರ್ಮ ಮಾಡುವ ಶ್ರೀರಾಮನ ದೂತನಾಗಿ ಅವನ ಸಂದೇಶವನೆತ್ತಿಕೊಂಡು ವನದಿಂದ ಮರಳಿರುವನು. ನೀವು ಅವನಲ್ಲಿ ಏಕೆ ಮಾತನಾಡುವುದಿಲ್ಲ.॥29॥
ಮೂಲಮ್ - 30
ಅದ್ಯೇಮಮನಯಂ ಕೃತ್ವಾ ವ್ಯಪತ್ರಪಸಿ ರಾಘವ ।
ಉತ್ತಿಷ್ಠ ಸುಕೃತಂ ತೇಽಸ್ತು ಶೋಕೇ ನಸ್ಯಾತ್ಸಹಾಯತಾ ॥
ಅನುವಾದ
ರಘುನಂದನ! ಪುತ್ರನಿಗೆ ವನವಾಸ ಕೊಡುವುದು ಅನ್ಯಾಯವಾಗಿದೆ. ಈ ಅನ್ಯಾಯ ಮಾಡಿ ನೀವು ಏಕೆ ಲಜ್ಜಿತರಾಗುವಿರಿ? ಏಳಿ, ನಿಮಗೆ ನಿಮ್ಮ ಸತ್ಯಪಾಲನೆಯ ಪುಣ್ಯ ಪ್ರಾಪ್ತವಾಗಿದೆ. ನೀವು ಈ ರೀತಿ ಶೋಕ ಮಾಡಿದಾಗ ನಿಮ್ಮ ಸಹಾಯಕರ ಸಮುದಾಯವೂ ನಿಮ್ಮೊಂದಿಗೆ ನಾಶವಾದೀತು.॥30॥
ಮೂಲಮ್ - 31
ದೇವ ಯಸ್ಯಾಭಯಾದ್ ರಾಮಂ ನಾನುಪೃಚ್ಛಸಿ ಸಾರಥಿಮ್ ।
ನೇಹ ತಿಷ್ಠತಿ ಕೈಕೇಯೀ ವಿಶ್ರಬ್ಧಂ ಪ್ರತಿಭಾಷ್ಯತಾಮ್ ॥
ಅನುವಾದ
ಸ್ವಾಮಿ! ನೀವು ಯಾರ ಭಯದಿಂದ ಸುಮಂತ್ರನಲ್ಲಿ ಶ್ರೀರಾಮನ ಸಮಾಚಾರ ಕೇಳುವುದಿಲ್ಲವೋ ಆ ಕೈಕೇಯಿ ಇಲ್ಲಿ ಇಲ್ಲ. ಆದ್ದರಿಂದ ನಿರ್ಭಯರಾಗಿ ಮಾತನಾಡಿರಿ.॥31॥
ಮೂಲಮ್ - 32
ಸಾ ತಥೋಕ್ತ್ವಾ ಮಹಾರಾಜಂ ಕೌಸಲ್ಯಾ ಶೋಕಲಾಲಸಾ ।
ಧರಣ್ಯಾಂ ನಿಪಪಾತಾಶು ಬಾಷ್ಪವಿಪ್ಲುತಭಾಷಿಣೀ ॥
ಅನುವಾದ
ಮಹಾರಾಜರಲ್ಲಿ ಹೀಗೆ ಹೇಳಿ ಕೌಸಲ್ಯೆಯ ಗಂಟಲು ಕಟ್ಟಿಕೊಂಡಿತು. ಕಣ್ಣೀರಿನಿಂದಾಗಿ ಅವಳಿಂದ ಮಾತನಾಡಲಾಗಲಿಲ್ಲ. ಶೋಕದಿಂದ ವ್ಯಾಕುಲಳಾಗಿ ಕೂಡಲೇ ನೆಲಕ್ಕೆ ಬಿದ್ದುಬಿಟ್ಟಳು.॥32॥
ಮೂಲಮ್ - 33
ವಿಲಪಂತೀಂ ತಥಾ ದೃಷ್ಟ್ವಾ ಕೌಸಲ್ಯಾಂ ಪತಿತಾಂ ಭುವಿ ।
ಪತಿಂ ಚಾವೇಕ್ಷ್ಯ ತಾಃ ಸರ್ವಾಃ ಸಮಂತಾದ್ರುರುದುಃ ಸ್ತ್ರಿಯಃ ॥
ಅನುವಾದ
ಈ ಪ್ರಕಾರ ವಿಲಪಿಸುತ್ತಾ ಕೌಸಲ್ಯೆಯು ಭೂಮಿಗೆ ಬಿದ್ದಿರುವುದನ್ನು ನೋಡಿ, ತಮ್ಮ ಪತಿಯ ಮೂರ್ಛಿತ ಸ್ಥಿತಿಯನ್ನು ನೋಡುತ್ತಾ ಎಲ್ಲ ರಾಣಿಯರು ಅವರನ್ನು ಸುತ್ತುವರಿದು ಅಳತೊಡಗಿದರು.॥33॥
ಮೂಲಮ್ - 34
ತತಸ್ತಮಂತಃಪುರನಾದಮುತ್ಥಿತಂ
ಸಮೀಕ್ಷ್ಯ ವೃದ್ಧಾಸ್ತರುಣಾಶ್ಚ ಮಾನವಾಃ ।
ಸ್ತ್ರಿಯಶ್ಚ ಸರ್ವಾ ರುರುದುಃ ಸಮಂತತಃ
ಪುರಂ ತದಾಸೀತ್ ಪುನರೇವ ಸಂಕುಲಮ್ ॥
ಅನುವಾದ
ಅಂತಃಪುರದಲ್ಲಿ ನಡೆಯುವ ಆರ್ತನಾದವನ್ನು ಕೇಳಿ-ನೋಡಿ ನಗರದ ವೃದ್ಧರು ಮತ್ತು ತರುಣರು ಅತ್ತುಬಿಟ್ಟರು. ಎಲ್ಲ ಸ್ತ್ರೀಯರೂ ಅಳತೊಡಗಿದರು. ಆ ಇಡೀ ನಗರವು ಎಲ್ಲೆಡೆ ಪುನಃ ಶೋಕದಿಂದ ವ್ಯಾಕುಲವಾಯಿತು.॥34॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಐವತ್ತೇಳನೆಯ ಸರ್ಗ ಪೂರ್ಣವಾಯಿತು ॥57॥