०५६ चित्रकूटदर्शनम्

वाचनम्
ಭಾಗಸೂಚನಾ

ಶ್ರೀರಾಮ-ಸೀತೆ-ಲಕ್ಷ್ಮಣರು ಅರಣ್ಯದ ಸೋಬಗನ್ನು ನೋಡುತ್ತಾ ಚಿತ್ರಕೂಟವನ್ನು ಸೇರಿದುದು, ವಾಲ್ಮೀಕಿಗಳ ಸಂದರ್ಶನ, ಲಕ್ಷ್ಮಣನು ಅಣ್ಣನ ಆಜ್ಞೆಯಂತೆ ಪರ್ಣಶಾಲೆಯನ್ನು ನಿರ್ಮಿಸಿದುದು, ವಾಸ್ತುಶಾಂತಿಯನ್ನು ಮಾಡಿದನಂತರ ಎಲ್ಲರೂ ಕುಟೀರವನ್ನು ಪ್ರವೇಶಿಸಿದುದು

ಮೂಲಮ್ - 1

ಅಥ ರಾತ್ರ್ಯಾಂ ವ್ಯತೀತಾಯಾಮವಸುಪ್ತಮನಂತರಮ್ ।
ಪ್ರಬೋಧಯಾಮಾಸಶನೈರ್ಲಕ್ಷ್ಮಣಂ ರಘುಪುಂಗವಃ ॥

ಅನುವಾದ

ಅನಂತರ ರಾತ್ರಿ ಕಳೆದಾಗ ರಘುಕುಲಶಿರೋಮಣಿ ಶ್ರೀರಾಮನು ಎದ್ದು, ಅಲ್ಲಿ ಮಲಗಿದ್ದ ಲಕ್ಷ್ಮಣನನ್ನು ನಿಧಾನವಾಗಿ ಎಬ್ಬಿಸಿ, ಹೀಗೆ ಹೇಳಿದನು.॥1॥

ಮೂಲಮ್ - 2

ಸೌಮಿತ್ರೇ ಶೃಣು ವನ್ಯಾನಾಂ ವಲ್ಗು ವ್ಯಾಹರತಾಂ ಸ್ವನಮ್ ।
ಸಂಪ್ರತಿಷ್ಠಾಮಹೇ ಕಾಲಃ ಪ್ರಸ್ಥಾನಸ್ಯ ಪರಂತಪ ॥

ಅನುವಾದ

ಪರಂತಪ ಸುಮಿತ್ರಾಕುಮಾರ! ಶುಕ-ಪಿಕ ಮೊದಲಾದ ಕಾಡಿನ ಪಕ್ಷಿಗಳ ಮಧುರ ಕಲರವ ಕೇಳುತ್ತಿದೆ ನೋಡು. ಈಗ ನಾವು ಇಲ್ಲಿಂದ ಪ್ರಯಾಣ ಮಾಡುವಾ; ಏಕೆಂದರೆ ಪ್ರಯಾಣಕ್ಕೆ ಯೋಗ್ಯವಾದ ಸಮಯ ಬಂದಿದೆ.॥2॥

ಮೂಲಮ್ - 3

ಪ್ರಸುಪ್ತಸ್ತು ತತೋ ಭ್ರಾತ್ರಾ ಸಮಯೇ ಪ್ರತಿಬೋಧಿತಃ ।
ಜಹೌ ನಿದ್ರಾಂ ಚ ತಂದ್ರಾಂ ಚ ಪ್ರಸಕ್ತಂ ಚ ಪರಿಶ್ರಮಮ್ ॥

ಅನುವಾದ

ಸರಿಯಾದ ಸಮಯದಲ್ಲಿ ಅಣ್ಣನು ಎಬ್ಬಿಸಿದಾಗ ಲಕ್ಷ್ಮಣನು ನಿದ್ರಾಲಸ್ಯ ಹಾಗೂ ನಡೆದು ಬಂದ ಬಳಲಿಕೆಯನ್ನು ದೂರಗೊಳಿಸಿದನು.॥3॥

ಮೂಲಮ್ - 4

ತತ ಉತ್ಥಾಯ ತೇ ಸರ್ವೇ ಸ್ಪಷ್ಟ್ವಾ ನದ್ಯಾಃ ಶಿವಂ ಜಲಮ್ ।
ಪಂಥಾನಮೃಷಿಭಿರ್ಜುಷ್ಟಂ ಚಿತ್ರಕೂಟಸ್ಯ ತಂ ಯಯುಃ ॥

ಅನುವಾದ

ಮತ್ತೆ ಎಲ್ಲರೂ ಎದ್ದು, ಯಮುನಾನದಿಯ ಶೀತಲ ಜಲದಲ್ಲಿ ಸ್ನಾನಾದಿಗಳನ್ನು ಮಾಡಿ, ಋಷಿ-ಮುನಿಗಳಿಂದ ಸೇವಿತ ಚಿತ್ರಕೂಟದ ದಾರಿಯನ್ನು ಹಿಡಿದರು.॥4॥

ಮೂಲಮ್ - 5

ತತಃ ಸಂಪ್ರಸ್ಥಿತಃ ಕಾಲೇ ರಾಮಃ ಸೌಮಿತ್ರಿಣಾ ಸಹ ।
ಸೀತಾಂ ಕಲಮಪತ್ರಾಕ್ಷೀಮಿದಂ ವಚನಮಬ್ರವೀತ್ ॥

ಅನುವಾದ

ಆಗ ಲಕ್ಷ್ಮಣನೊಂದಿಗೆ ಅಲ್ಲಿಂದ ಹೊರಟ ಶ್ರೀರಾಮನು ಕಮಲ ನಯನೀ ಸೀತೆಯ ಬಳಿ ಇಂತೆಂದನು.॥5॥

ಮೂಲಮ್ - 6

ಆದೀಪ್ತಾನಿವ ವೈದೇಹಿ ಸರ್ವತಃ ಪುಷ್ಪಿತಾನ್ನಗಾನ್ ।
ಸ್ವೈಃ ಪುಷ್ಪೈಃ ಕಿಂಶುಕಾನ್ಪಶ್ಯ ಮಾಲಿನಃ ಶಿಶಿರಾತ್ಯಯೇ ॥

ಅನುವಾದ

ವೈದೇಹಿ! ಈ ವಸಂತ ಋತುವಿನಲ್ಲಿ ಎಲ್ಲೆಡೆ ಅರಳಿದ ಹೂವುಗಳಿಂದ ಕೂಡಿದ ಮುತ್ತುಗದ ವೃಕ್ಷಗಳನ್ನು ನೋಡು. ಇವು ಪುಷ್ಪಮಾಲೆಗಳನ್ನು ಧರಿಸಿದಂತೆ ಅನಿಸುತ್ತದೆ. ಆ ಹೂವುಗಳ ಅರುಣಪ್ರಭೆಯಿಂದ ಉರಿಯುತ್ತಿರುವಂತೆ ಕಾಣುತ್ತವೆ.॥6॥

ಮೂಲಮ್ - 7

ಪಶ್ಯ ಭಲ್ಲಾತಕಾನ್ ಬಿಲ್ವಾನ್ನರೈರನುಪಸೇವಿತಾನ್
ಫಲಪುಷ್ಪೈರವನತಾನ್ನೂನಂ ಶಕ್ಷ್ಯಾಮ ಜೀವಿತುಮ್ ॥

ಅನುವಾದ

ಈ ವೀರವೃಕ್ಷಗಳು, ಬಿಲ್ವ ವೃಕ್ಷಗಳೂ ಹೂವು-ಹಣ್ಣುಗಳ ಭಾರದಿಂದ ಬಾಗಿಕೊಂಡಿರುವುದನ್ನು ನೋಡು; ಆದರೆ ನಿರ್ಜನವಾದ ಈ ಕಾಡಿನಲ್ಲಿ ಮನುಷ್ಯರೇ ಇಲ್ಲದಿರುವುದರಿಂದ ಇದನ್ನು ಉಪಯೋಗಿಸುವರೇ ಇಲ್ಲ. ಆದ್ದರಿಂದ ನಾವು ಈ ಫಲಗಳಿಂದ ಜೀವನ ನಿರ್ವಾಹ ಮಾಡಬಹುದು.॥7॥

ಮೂಲಮ್ - 8

ಪಶ್ಯ ದ್ರೋಣಪ್ರಮಾಣಾನಿ ಲಂಬಮಾನಾನಿ ಲಕ್ಷ್ಮಣ ।
ಮಧೂನಿ ಮಧುಕಾರೀಭಿಃ ಸಂಭೃತಾನಿ ನಗೇ ನಗೇ ॥

ಅನುವಾದ

ಮತ್ತೆ ಲಕ್ಷ್ಮಣನಲ್ಲಿ ಹೇಳುತ್ತಾನೆ-ಲಕ್ಷ್ಮಣ! ಇಲ್ಲಿಯ ಒಂದೊಂದು ಮರಗಳಲ್ಲಿ ಜೇನು ತುಂಬಿದ ಗೂಡುಗಳು ಜೋತಾಡುತ್ತಿವೆ. ಇವೆಲ್ಲವುಗಳಲ್ಲಿ ಒಂದೊಂದು ದ್ರೋಣ (ನಾಲ್ಕು ಕೊಳಗ)ದಷ್ಟು ಜೇನು ತುಂಬಿದೆ.॥8॥

ಮೂಲಮ್ - 9

ಏಷ ಕ್ರೋಶತಿ ನತ್ಯೂಹಸ್ತಂ ಶಿಖೀ ಪ್ರತಿಕೂಜತಿ ।
ರಮಣೀಯೇ ವನೋದ್ದೇಶೇ ಪುಷ್ಪಸಂಸ್ತರಸಂಕಟೇ ॥

ಅನುವಾದ

ವನದ ಈ ಭಾಗ ಬಹಳ ರಮಣೀಯವಾಗಿದೆ, ಇಲ್ಲಿ ಹೂವುಗಳ ಮಳೆಯೇ ಸುರಿಯುತ್ತಿದೆ, ಭೂಮಿ ಎಲ್ಲೆಡೆ ಹೂವುಗಳಿಂದ ಮುಚ್ಚಿಹೋಗಿದೆ. ಇಲ್ಲಿ ಚಾತಕಪಕ್ಷಿಗಳು ಪೀ ಪೀ ಎಂದು ಕೂಗುತ್ತಿವೆ. ಅಲ್ಲಿ ನವಿಲುಗಳು ಕೇಕೇ ಹಾಕುತ್ತಾ ಚಾತಕ ಪಕ್ಷಿಗಳಿಗೆ ಉತ್ತರ ಕೊಡುವಂತೆ ಇದೆ.॥9॥

ಮೂಲಮ್ - 10

ಮಾತಂಗಯೂಥಾನುಸೃತಂ ಪಕ್ಷಿಸಂಘಾನುನಾದಿತಮ್ ।
ಚಿತ್ರಕೂಟಮಿಮಂ ಪಶ್ಯ ಪ್ರವೃದ್ಧಶಿಖರಂ ಗಿರಿಮ್ ॥

ಅನುವಾದ

ಇದೋ ಚಿತ್ರಕೂಟಪರ್ವತ-ಇದರ ಶಿಖರ ಬಹಳ ಎತ್ತರವಾಗಿದೆ, ಆನೆಗಳ ಹಿಂಡುಗಳು ಅತ್ತಕಡೆಗೇ ಹೋಗುತ್ತಿವೆ ಹಾಗೂ ಅನೇಕ ಪಕ್ಷಿಗಳು ನಿನಾದಿಸುತ್ತಿವೆ.॥10॥

ಮೂಲಮ್ - 11

ಸಮಭೂಮಿತಲೇ ರಮ್ಯೇ ದ್ರುಮೈರ್ಬಹುಭಿರಾವೃತೇ ।
ಪುಣ್ಯೇ ರಂಸ್ಯಾಮಹೇ ತಾತ ಚಿತ್ರಕೂಟಸ್ಯ ಕಾನನೇ ॥

ಅನುವಾದ

ಅಯ್ಯಾ! ಇಲ್ಲಿಯ ಭೂಮಿ ಸಮತಟ್ಟಾಗಿದೆ ಹಾಗೂ ಬಹಳಷ್ಟು ಮರಗಳಿಂದ ತುಂಬಿಕೊಂಡಿದೆ. ಚಿತ್ರಕೂಟದ ಈ ಪವಿತ್ರ ಕಾನನದಲ್ಲಿ ನಾವು ಆನಂದದಿಂದ ಸಂಚರಿಸುವೆವು.॥11॥

ಮೂಲಮ್ - 12

ತತಸ್ತೌ ಪಾದಚಾರೇಣ ಗಚ್ಛಂತೌ ಸಹ ಸೀತಯಾ ।
ರಮ್ಯಮಾಸೇದತುಃ ಶೈಲಂ ಚಿತ್ರಕೂಟಂ ಮನೋರಮಮ್ ॥

ಅನುವಾದ

ಸೀತೆಯೊಂದಿಗೆ ರಾಮ-ಲಕ್ಷ್ಮಣರಿಬ್ಬರೂ ಕಾಲ್ನಡಿಗೆಯಿಂದಲೇ ಪ್ರಯಾಣ ಮಾಡುತ್ತಾ ಸರಿಯಾದ ಸಮಯಕ್ಕೆ ರಮಣೀಯ, ಮನೋರಮ ಚಿತ್ರಕೂಟ ಪರ್ವತವನ್ನು ತಲುಪಿದರು.॥12॥

ಮೂಲಮ್ - 13

ತಂ ತು ಪರ್ವತಮಾಸಾದ್ಯ ನಾನಾ ಪಕ್ಷಿಗಣಾಯುತಮ್ ।
ಬಹುಮೂಲಫಲಂ ರಮ್ಯಂ ಸಂಪನ್ನಸರಸೋದಕಮ್ ॥

ಅನುವಾದ

ಆ ಪರ್ವತವು ನಾನಾ ಪ್ರಕಾರದ ಪಕ್ಷಿಗಳಿಂದ ಪರಿಪೂರ್ಣವಾಗಿತ್ತು. ಅಲ್ಲಿ ಫಲ-ಮೂಲಗಳು ಧಾರಾಳವಿದ್ದು, ರುಚಿಕರ ನೀರೂ ಸಾಕಷ್ಟಿತ್ತು. ಆ ರಮಣೀಯ ಶೈಲದ ಬಳಿಗೆ ಹೋಗಿ ಶ್ರೀರಾಮನು ಹೇಳಿದನು.॥13॥

ಮೂಲಮ್ - 14

ಮನೋಜ್ಞೋಽಯಂ ಗಿರಿಃ ಸೌಮ್ಯ ನಾನಾದ್ರುಮಲತಾಯುತಃ ।
ಬಹುಮೂಲ ಫಲೋ ರಮ್ಯಃ ಸ್ವಾಜೀವಃ ಪ್ರತಿಭಾತಿ ಮೇ ॥

ಅನುವಾದ

ಸೌಮ್ಯ! ಈ ಪರ್ವತ ಬಹಳ ಮನೋಹರವಾಗಿದೆ. ನಾನಾ ವಿಧದ ವೃಕ್ಷ-ಲತೆಗಳಿಂದ ಇದರ ಶೋಭೆ ಹೆಚ್ಚಿದೆ. ಇಲ್ಲಿ ಫಲ-ಮೂಲಗಳೂ ಹೇರಳವಾಗಿವೆ. ಈ ರಮಣೀಯವಾದ ಪರ್ವತದಲ್ಲಿ ನಾವು ಸುಖವಾಗಿ ಜೀವನ-ನಿರ್ವಾಹ ಮಾಡ ಬಹುದೆಂದು ನನಗೆ ಅನಿಸುತ್ತಿದೆ.॥14॥

ಮೂಲಮ್ - 15

ಮುನಯಶ್ಚ ಮಹಾತ್ಮಾನೋ ವಸಂತ್ಯಸ್ಮಿನ್ ಶಿಲೋಚ್ಚಯೇ ।
ಅಯಂ ವಾಸೋ ಭವೇತ್ತಾತವಯಮತ್ರ ವಸೇಮಹಿ ॥

ಅನುವಾದ

ಈ ಪರ್ವತದಲ್ಲಿ ಅನೇಕ ಮಹಾತ್ಮಾ ಮುನಿಗಳು ವಾಸಿಸುತ್ತಿರುವರು. ಅಯ್ಯಾ! ಇದೇ ನಮಗೆ ವಾಸಕ್ಕಾಗಿ ಯೋಗ್ಯಸ್ಥಾನವಾಗಿದೆ. ನಾವು ಇಲ್ಲೇ ವಾಸಿಸುವಾ.॥15॥

ಮೂಲಮ್ - 16

ಇತಿ ಸೀತಾ ಚ ರಾಮಶ್ಚ ಲಕ್ಷ್ಮಣಶ್ಚ ಕೃತಾಂಜಲಿಃ ।
ಅಭಿಗಮ್ಯಾಶ್ರಮಂ ಸರ್ವೇ ವಾಲ್ಮೀಕಿಮಭಿವಾದಯನ್ ॥

ಅನುವಾದ

ಹೀಗೆ ನಿಶ್ಚಯಿಸಿ ಮಹರ್ಷಿ ವಾಲ್ಮೀಕಿಗಳ ಆಶ್ರಮದ ಬಳಿಗೆ ಬಂದು, ಸೀತಾ-ರಾಮ-ಲಕ್ಷ್ಮಣರು ಕೈಮುಗಿದುಕೊಂಡು ಮುನಿಯ ಆಶ್ರಮವನ್ನು ಪ್ರವೇಶಿಸಿ, ಎಲ್ಲರೂ ಅವರ ಚರಣಗಳಲ್ಲಿ ಮಸ್ತಕಗಳನ್ನು ಚಾಚಿದರು.॥16॥

ಮೂಲಮ್ - 17

ತಾನ್ಮಹರ್ಷಿಃ ಪ್ರಮುದಿತಃ ಪೂಜಯಾಮಾಸ ಧರ್ಮವಿತ್ ।
ಆಸ್ಯತಾಮಿತಿ ಚೋವಾಚ ಸ್ವಾಗತಂ ತಂ ನಿವೇದ್ಯ ಚ ॥

ಅನುವಾದ

ಧರ್ಮಜ್ಞರಾದ ಮಹರ್ಷಿಗಳು ಅವರ ಆಗಮನದಿಂದ ಬಹಳ ಪ್ರಸನ್ನರಾಗಿ, ‘ನಿಮಗೆ ಸ್ವಾಗತವು, ಬನ್ನಿ ಕುಳಿತುಕೊಳ್ಳಿ’ ಎಂದು ಹೇಳುತ್ತಾ ಅವರನ್ನು ಆದರದಿಂದ ಸತ್ಕರಿಸಿದರು.॥17॥

ಮೂಲಮ್ - 18

ತತೋಽಬ್ರವೀನ್ಮಹಾಬಾಹುರ್ಲಕ್ಷ್ಮಣಂ ಲಕ್ಷ್ಮಣಾಗ್ರಜಃ ।
ಸಂನಿವೇದ್ಯ ಯಥಾನ್ಯಾಯಮಾತ್ಮಾನಮೃಷಯೇ ಪ್ರಭುಃ ॥

ಅನುವಾದ

ಅನಂತರ ಮಹಾಬಾಹು ಭಗವಾನ್ ಶ್ರೀರಾಮನು ಮಹರ್ಷಿಗಳಿಗೆ ತನ್ನ ಯಥೋಚಿತ ಪರಿಚಯವನ್ನು ಕೊಟ್ಟು, ಲಕ್ಷ್ಮಣನಲ್ಲಿ ಹೇಳಿದನು.॥18॥

ಮೂಲಮ್ - 19

ಲಕ್ಷ್ಮಣಾನಯ ದಾರೂಣಿ ದೃಢಾನಿ ಚ ವರಾಣಿ ಚ ।
ಕುರುಷ್ವಾವಸಥಂ ಸೌಮ್ಯ ವಾಸೇ ಮೇಽಭಿರತಂ ಮನಃ ॥

ಅನುವಾದ

ಸೌಮ್ಯ ಲಕ್ಷ್ಮಣ! ನೀನು ಕಾಡಿನಿಂದ ಗಟ್ಟಿಮುಟ್ಟಾದ ಮರಗಳನ್ನು ತಂದು, ವಾಸಿಸಲು ಒಂದು ಕುಟೀರವನ್ನು ನಿರ್ಮಿಸು, ಇಲ್ಲೇ ವಾಸಿಸಲು ನನ್ನ ಮನಸ್ಸು ಬಯಸುತ್ತಿದೆ.॥19॥

ಮೂಲಮ್ - 20

ತಸ್ಯ ತದ್ವಚನಂ ಶ್ರುತ್ವಾ ಸೌಮಿತ್ರಿರ್ವಿವಿಧಾನ್ ದ್ರುಮಾನ್ ।
ಅಜಹಾರ ತತಶ್ಚಕ್ರೇ ಪರ್ಣಶಾಲಾಮರಿಂದಮಃ ॥

ಅನುವಾದ

ಶ್ರೀರಾಮನ ಈ ಮಾತನ್ನು ಕೇಳಿ ಶತ್ರುದಮನ ಲಕ್ಷ್ಮಣನು ಅನೇಕ ಪ್ರಕಾರದ ವೃಕ್ಷಗಳ ರೆಂಬೆಗಳನ್ನು ಕತ್ತರಿಸಿ ತಂದು, ಅವುಗಳಿಂದ ಒಂದು ಪರ್ಣಕುಟೀರವನ್ನು ನಿರ್ಮಿಸಿದನು.॥20॥

ಮೂಲಮ್ - 21

ತಾಂ ನಿಷ್ಠಿತಾಂ ಬದ್ಧಕಟಾಂ ದೃಷ್ಟ್ವಾ ರಾಮಃ ಸುದರ್ಶನಾಮ್ ।
ಶುಶ್ರೂಷಮಾಣಮೇಕಾಗ್ರಮಿದಂ ವಚನಮಬ್ರವೀತ್ ॥

ಅನುವಾದ

ಆ ಕುಟೀರವನ್ನು ಒಳ-ಹೊರಗಿನಿಂದ ಕಟ್ಟಿಗೆಯ ಗೋಡೆಯಿಂದಲೇ ಸುಸ್ಥಿರವಾಗಿ ಕಟ್ಟಲಾಗಿತ್ತು, ಮೇಲಿನಿಂದ ಹುಲ್ಲಿನ ಛಾವಣಿ ಇದ್ದು, ಗಾಳಿ-ಮಳೆಗಳು ನಿವಾರಣೆಯಾಗುತ್ತಿತ್ತು. ನೋಡಲು ಸುಂದರವಾಗಿ ಸಿದ್ಧವಾಗಿದ್ದ ಅದನ್ನು ನೋಡಿ ಏಕಾಗ್ರ ಚಿತ್ತನಾಗಿ ಕೇಳುತ್ತಿದ್ದ ಲಕ್ಷ್ಮಣನಲ್ಲಿ ಶ್ರೀರಾಮನು ಇಂತೆಂದನು.॥21॥

ಮೂಲಮ್ - 22

ಐಣೇಯಂ ಮಾಂಸಮಾಹೃತ್ಯ ಶಾಲಾಂ ಯಕ್ಷ್ಯಾಮಹೇ ವಯಮ್ ।
ಕರ್ತವ್ಯಂ ವಾಸ್ತುಶಮನಂ ಸೌಮಿತ್ರೇ ಚಿರಜೀವಿಭಿಃ ॥

ಅನುವಾದ

ಸುಮಿತ್ರಾನಂದನ! ನಾವು ಗಜಕಂದದ ತಿರುಳಿನಿಂದ ಪರ್ಣಶಾಲೆಯ ಅಧಿಷ್ಠಾತೃ ದೇವತೆಗಳನ್ನು ಪೂಜಿಸುವಾ;1 ಏಕೆಂದರೆ ದೀರ್ಘಾಯುಷ್ಯವನ್ನು ಬಯಸುವ ಜನರು ವಾಸ್ತುಶಾಂತಿಯನ್ನು ಅವಶ್ಯವಾಗಿ ಮಾಡಬೇಕು.॥22॥

ಟಿಪ್ಪನೀ
  1. ಇಲ್ಲಿ ‘ಐಣೆಯಂ ಮಾಂಸಮ್’ ಇದರ ಅರ್ಥ - ಗಜಕಂದ ಎಂಬ ವಿಶೇಷ ಗಡ್ಡೆಯ ತಿರುಳು. ಈ ಪ್ರಸಂಗದಲ್ಲಿ ಮಾಂಸಪರ ಅರ್ಥ ತೆಗೆದುಕೊಳ್ಳಬಾರದು; ಏಕೆಂದರೆ ಹೀಗೆ ಅರ್ಥೈಸಿದರೆ - ‘ಹಿತ್ವಾ ಮುನಿವದಾ ಮಿಷಮ್’ (2/20/29), ‘ಫಲಾನಿ ಮೂಲಾನಿ ಚ ಭಕ್ಷಯನ್ ವನೇ’ (2/34/59), ‘ಧರ್ಮಮೇವಾಚರಿಷ್ಯಾಮಸ್ತತ್ರ ಮೂಲಲಾಶನಾಃ’ (2/54/16) ಇತ್ಯಾದಿಯಾಗಿ ಶ್ರೀರಾಮನು ಮಾಡಿದ ಪ್ರತಿಜ್ಞೆಗೆ ವಿರೋಧ ಉಂಟಾದೀತು. ಈ ವಚನಗಳಲ್ಲಿ ನಿರಾಮಿಷವಾಗಿ ಇರುವ ಮತ್ತು ಫಲ-ಮೂಲಗಳನ್ನು ತಿಂದು ಧರ್ಮಾಚರಣ ಮಾಡುವ ಮಾತು ಹೇಳಲಾಗಿದೆ. ‘ರಾಮೋ ದ್ವಿರ್ನಾಭಿಭಾಷತೆ’ (ಶ್ರೀರಾಮನು ಎಂದೂ ಎರಡಾಡುವುದಿಲ್ಲ ಒಮ್ಮೆ ಆಡಿದ ಮಾತನ್ನು ಮತ್ತೆಂದೂ ಬದಲಿಸುವುದಿಲ್ಲ) ಈ ಮಾತಿಗನುಸಾರ ಶ್ರೀರಾಮನ ಪ್ರತಿಜ್ಞೆ ಅಚಲವಾಗಿರುವಂತಹುದು.
ಮೂಲಮ್ - 23

ಮೃಗಂ ಹತ್ವಾಽಽನಯ ಕ್ಷಿಪ್ರಂ ಲಕ್ಷ್ಮಣೇಹ ಶುಭೇಕ್ಷಣ ।
ಕರ್ತವ್ಯಃ ಶಾಸ್ತ್ರದೃಷ್ಟೋ ಹಿ ವಿಧಿರ್ಧರ್ಮಮನುಸ್ಮರ ॥

ಅನುವಾದ

ಕಲ್ಯಾಣದರ್ಶೀ ಲಕ್ಷ್ಮಣನೇ! ನೀನು ‘ಗಜಕಂದ’2 ಎಂಬ ಗಡ್ಡೆಯನ್ನು ಅಗೆದು ಬೇಗನೇ ತೆಗೆದುಕೊಂಡು ಬಾ; ಏಕೆಂದರೆ ಶಾಸ್ತ್ರೋಕ್ತ ವಿಧಿಗನುಸಾರ ಅನುಷ್ಠಾನವು ನಮಗೆ ಅವಶ್ಯ ಕರ್ತವ್ಯವಾಗಿದೆ. ನೀನು ಧರ್ಮವನ್ನೇ ಸದಾ ಚಿಂತಿಸುತ್ತಾ ಇರು.॥23॥

ಟಿಪ್ಪನೀ
  1. ಮದನಪಾಲ - ನಿಘಂಟುವಿಗನುಸಾರ ‘ಮೃಗ’ದ ಅರ್ಥ ಗಜಕಂದ ಎಂದಿದೆ.
ಮೂಲಮ್ - 24

ಭ್ರಾತುರ್ವಚನಮಾಜ್ಞಾಯ ಲಕ್ಷ್ಮಣಃ ಪರವೀರಹಾ ।
ಚಕಾರ ಚ ಯಥೋಕ್ತಂ ಹಿ ತಂ ರಾಮಃ ಪುನರಬ್ರವೀತ್ ॥

ಅನುವಾದ

ಅಣ್ಣನ ಮಾತನ್ನು ತಿಳಿದುಕೊಂಡ ಶತ್ರುವೀರರನ್ನು ವಧಿಸುವ ಲಕ್ಷ್ಮಣನು ಅವನ ಮಾತಿನಂತೆ ಕಾರ್ಯ ಮಾಡಿದನು. ಆಗ ಶ್ರೀರಾಮನು ಪುನಃ ಅವನಲ್ಲಿ ಹೇಳಿದನು.॥24॥

ಮೂಲಮ್ - 25

ಐಣೇಯಂ ಶ್ರಪಯಸ್ವೈತಚ್ಛಾಲಾಂ ಯಕ್ಷ್ಯಾಮಹೇ ವಯಮ್ ।
ತ್ವರ ಸೌಮ್ಯಮುಹೂರ್ತೋಽಯಂ ಧ್ರುವಶ್ಚ ದಿವಸೋಽಹ್ಯಯಮ್ ॥

ಅನುವಾದ

ಲಕ್ಷ್ಮಣ! ಈ ಗಜಕಂದವನ್ನು ಬೇಯಿಸು, ನಾವು ಪರ್ಣಶಾಲೆಯ ಅಧಿಷ್ಠಾತೃದೇವತೆಗಳನ್ನು ಪೂಜಿಸುವಾ. ತಡ ಮಾಡಬೇಡ. ಈಗ ಸೌಮ್ಯಮುಹೂರ್ತವಿದೆ ಹಾಗೂ ಇದೇ ದಿನ ‘ಧ್ರುವ’3 ಎಂಬ ಮುಹೂರ್ತವೂ ಇದೆ. (ಆದ್ದರಿಂದ ಇದರಲ್ಲೇ ಈ ಶುಭಕಾರ್ಯವಾಗಬೇಕು.॥25॥

ಟಿಪ್ಪನೀ
  1. ‘ಉತ್ತರಾತ್ರಯರೋಹಿಣ್ಯೋ ಭಾಸ್ಕರಶ್ಚ ಧ್ರುವಂ ಸ್ಥಿರಮ್’ (ಮುಹೂರ್ತ ಚಿಂತಾಮಣಿ)
    ಅರ್ಥಾತ್ ಮೂರೂ ಉತ್ತರಾ ಮತ್ತು ರೋಹಿಣಿ ನಕ್ಷತ್ರ ಹಾಗೂ ರವಿವಾರ - ಇವು ‘ಧ್ರುವ’ ಮತ್ತು ‘ಸ್ಥಿರ’ ಸಂಜ್ಞಕವಾಗಿವೆ. ಇದರಲ್ಲಿ ಗೃಹಶಾಂತಿ ಅಥವಾ ವಾಸ್ತುಶಾಂತಿಯೇ ಮೊದಲಾದ ಕರ್ಮಗಳು ಪ್ರಶಸ್ತ ಎಂದು ಹೇಳಿದೆ.
ಮೂಲಮ್ - 26

ಸ ಲಕ್ಷ್ಮಣಃ ಕೃಷ್ಣಮೃಗಂ ಹತ್ವಾ ಮೇಧ್ಯಂ ಪ್ರತಾಪವಾನ್ ।
ಅಥ ಚಿಕ್ಷೇಪ ಸೌಮಿತ್ರಿಃ ಸಮಿದ್ಧೇ ಜಾತವೇದಸಿ ॥

ಅನುವಾದ

ಪ್ರತಾಪಿ ಸುಮಿತ್ರಾಕುಮಾರ ಲಕ್ಷ್ಮಣನು ಪವಿತ್ರ ಮತ್ತು ಕಪ್ಪು ಸಿಪ್ಪೆಯುಳ್ಳ ಗಜಕಂದವನ್ನು ಕಿತ್ತು ಉರಿಯುವ ಬೆಂಕಿಯಲ್ಲಿ ಹಾಕಿದನು.॥26॥

ಮೂಲಮ್ - 27

ತತ್ ತು ಪಕ್ವಂ ಸಮಾಜ್ಞಾಯ ನಿಷ್ಟಪ್ತಂ ಛಿನ್ನಶೋಣಿತಮ್ ।
ಲಕ್ಷ್ಮಣಃ ಪುರುಷವ್ಯಾಘ್ರಮಥ ರಾಘವಮಬ್ರವೀತ್ ॥

ಅನುವಾದ

ರಕ್ತವಿಕಾರ ನಾಶಮಾಡುವ1 ಆ ಗಜಕಂದವನ್ನು ಚೆನ್ನಾಗಿ ಬೆಂದಿರುವುದನ್ನು ನೋಡಿ ಲಕ್ಷ್ಮಣನು ಪುರುಷಸಿಂಹ ಶ್ರೀರಘುನಾಥನಲ್ಲಿ ಹೇಳಿದನು.॥27॥

ಟಿಪ್ಪನೀ
  1. ‘ಛಿನ್ನಶೋಣಿತಮ್’ ಇದರ ವ್ಯತ್ಪತ್ತಿ ಹೀಗಿದೆ - ‘ಛಿನ್ನಂ ಶೋಣಿತಂ ರಕ್ತವಿಕಾರರೂಪಂ ರೋಗಜಾತಂ ಯೇನ ಸಃ ತಮ್’. ‘ಗಜಕಂದ’ ರೋಗವಿಕಾರದ ನಾಶಕವಾಗಿದೆ. ಇದು ವೈದ್ಯಕದಲ್ಲಿ ಪ್ರಸಿದ್ಧವಾಗಿದೆ. ಮದನಪಾಲ ನಿಘಂಟುವಿನ ‘ಷಡ್ ದೋಷಾದಿಕುಷ್ಠಹಂತಾ’ ಮುಂತಾದ ವಚನಗಳಿಂದಲೂ ಕೂಡ ಇದು ಚರ್ಮದೋಷ ಮತ್ತು ಕುಷ್ಠವೇ ಆದಿ ರಕ್ತವಿಕಾರದ ನಾಶಕವಾಗಿದೆ.
ಮೂಲಮ್ - 28

ಅಯಂ ಸರ್ವಃ ಸಮಸ್ತಾಂಗಃ ಶೃತಃ ಕೃಷ್ಣಮೃಗೋ ಮಯಾ ।
ದೇವತಾ ದೇವಸಂಕಾಶ ಯಜಸ್ವ ಕುಶಲೋ ಹ್ಯಸಿ ॥

ಅನುವಾದ

ದೇವೋಪಮ ತೇಜಸ್ವೀ ಶ್ರೀರಘುನಾಥನೇ! ಈ ಕಪ್ಪು ಸಿಪ್ಪೆ ಇರುವ ಗಜಕಂದವು ಕೆಟ್ಟುಹೋದ ಎಲ್ಲ ಅವಯವಗಳನ್ನು ಸರಿಯಾಗಿಸುವುದು.2 ನಾನು ಇದನ್ನು ಚೆನ್ನಾಗಿ ಬೇಯಿಸಿರುವೆನು. ಈಗ ನೀವು ವಾಸ್ತುದೇವತೆಗಳನ್ನು ಪೂಜಿಸಿರಿ; ಏಕೆಂದರೆ ನೀವು ಈ ಕಾರ್ಯದಲ್ಲಿ ಕುಶಲರಾಗಿದ್ದೀರಿ.॥28॥

ಟಿಪ್ಪನೀ
  1. ‘ಸಮಸ್ತಾಂಗಃ’ ಇದರ ವ್ಯತ್ಪತ್ತಿ ‘ಸಮ್ಯಗ್ ಭವಂತಿ ಅಸ್ತಾನಿ ಅಂಗಾನಿ ಯೇನ ಸಃ’ ಹೀಗೆ ತಿಳಿಯಬೇಕು.
ಮೂಲಮ್ - 29

ರಾಮಃ ಸ್ನಾತ್ವಾ ತು ನಿಯತೋ ಗುಣವಾನ್ ಜಪಕೋವಿದಃ ।
ಸಂಗ್ರಹೇಣಾಕರೋತ್ಸರ್ವಾನ್ ಮಂತ್ರಾನ್ಸತ್ರಾವಸಾನಿಕಾನ್ ॥

ಅನುವಾದ

ಸದ್ಗುಣಸಂಪನ್ನ ಹಾಗೂ ಜಪ ಕೋವಿದನಾದ ಶ್ರೀರಾಮನು ಸ್ನಾನಮಾಡಿ ಶೌಚ-ಸಂತೋಷಾದಿ ನಿಯಮಗಳನ್ನು ಪಾಲಿಸುತ್ತಾ ಸಂಕ್ಷೇಪವಾಗಿ ಎಲ್ಲ ಮಂತ್ರಗಳನ್ನು ಪಠಿಸಿ, ಜಪ ಮಾಡಿದನು. ಇದರಿಂದ ವಾಸ್ತುಶಾಂತಿಯು ಪೂರ್ಣವಾಗುತ್ತದೆ.॥29॥

ಮೂಲಮ್ - 30

ಇಷ್ಟ್ವಾದೇವಗಣಾನ್ಸರ್ವಾನ್ ವಿವೇಶಾವಸಥಂ ಶುಚಿಃ ।
ಬಭೂವ ಚ ಮನೋಹ್ಲಾದೋ ರಾಮಸ್ಯಾಮಿತತೇಜಸಃ ॥

ಅನುವಾದ

ಸಮಸ್ತ ದೇವತೆಗಳನ್ನು ಪೂಜಿಸಿ ಪವಿತ್ರಭಾವದಿಂದ ಶ್ರೀರಾಮನು ಪರ್ಣಕುಟಿಯನ್ನು ಪ್ರವೇಶಿಸಿದನು. ಆಗ ಅಮಿತ ತೇಜಸ್ವೀ ಶ್ರೀರಾಮನ ಮನಸ್ಸಿನಲ್ಲಿ ತುಂಬಾ ಆಹ್ಲಾದವಾಯಿತು.॥30॥

ಮೂಲಮ್ - 31

ವೈಶ್ವದೇವಬಲಿಂ ಕೃತ್ವಾ ರೌದ್ರಂ ವೈಷ್ಣವಮೇವ ಚ ।
ವಾಸ್ತುಸಂಶಮನೀಯಾನಿ ಮಂಗಲಾನಿ ಪ್ರವರ್ತಯನ್ ॥

ಅನುವಾದ

ಅನಂತರ ಬಲಿ-ವೈಶ್ವದೇವ ಕರ್ಮ, ರುದ್ರಯಾಗ ಮತ್ತು ವೈಷ್ಣವಯಾಗ ಮಾಡಿ ಶ್ರೀರಾಮನು ವಾಸ್ತುದೋಷದ ಶಾಂತಿಗಾಗಿ ಸ್ವಸ್ತಿವಾಚನ ಮಾಡಿದನು.॥31॥

ಮೂಲಮ್ - 32

ಜಪಂ ಚ ನ್ಯಾಯತಃ ಕೃತ್ವಾ ಸ್ನಾತ್ವಾ ನದ್ಯಾಂ ಯಥಾವಿಧಿ ।
ಪಾಪಸಂಶಮನಂ ರಾಮಶ್ಚಕಾರ ಬಲಿಮುತ್ತಮಮ್ ॥

ಅನುವಾದ

ನದಿಯಲ್ಲಿ ವಿಧಿವತ್ತಾಗಿ ಅವಭೃತ ಸ್ನಾನಮಾಡಿ ಯಥಾವಿಧಿ ಗಾಯತ್ರೀ ಮೊದಲಾದ ಮಂತ್ರಗಳನ್ನು ಜಪಿಸಿ ಅನಂತರ ಶ್ರೀರಾಮನು ಪಂಚಸೂನಾ ದೋಷಶಾಂತಿಗಾಗಿ ಬಲಿ-ವೈಶ್ಯದೇವವನ್ನು ನೆರವೇರಿಸಿದನು.॥32॥

ಮೂಲಮ್ - 33

ವೇದಿಸ್ಥಲವಿಧಾನಾನಿ ಚೈತ್ಯಾನ್ಯಾಯತನಾನಿ ಚ ।
ಆಶ್ರಮಸ್ಯಾನುರೂಪಾಣಿ ಸ್ಥಾಪಯಾಮಾಸ ರಾಘವಃ ॥

ಅನುವಾದ

ರಘುನಾಥನು ತನ್ನ ಸಣ್ಣದಾದ ಕುಟಿಗನುರೂಪವಾಗಿಯೇ ವೇದಿ ಸ್ಥಳಗಳು (ಎಂಟು ದಿಕ್ಪಾಲಕರಿಗೆ ಬಲಿದಾನ ಅರ್ಪಿಸುವ ಸ್ಥಾನ), ಚೈತ್ಯಗಳನ್ನು (ಗಣೇಶಾದಿಗಳ ಸ್ಥಾನ) ಹಾಗೂ ಆಯತನಗಳು (ವಿಷ್ಣು ಆದಿದೇವತೆಗಳ ಸ್ಥಾನ) ಇದನ್ನು ನಿರ್ಮಿಸಿ, ಸ್ಥಾಪಿಸಿದನು.॥33॥

ಮೂಲಮ್ - 34

ತಾಂ ವೃಕ್ಷಪರ್ಣಚ್ಛದನಾಂ ಮನೋಜ್ಞಾಂ
ಯಥಾಪ್ರದೇಶಂ ಸುಕೃತಾಂ ನಿವಾತಾಮ್ ।
ವಾಸಾಯ ಸರ್ವೇ ವಿವಿಶುಃ ಸಮೇತಾಃ
ಸಭಾಂ ಯಥಾ ದೇವಗಣಾಃ ಸುಧರ್ಮಾನ್ ॥

ಅನುವಾದ

ಆ ಮನೋಹರ ಕುಟೀರವು ಉಪಯುಕ್ತ ಸ್ಥಾನದಲ್ಲಿ ನಿರ್ಮಾಣವಾಗಿತ್ತು. ಅದನ್ನು ಮರಗಳ ಸೊಪ್ಪಿನಿಂದ ಹೊದಿಸಿತ್ತು. ಪ್ರಚಂಡ ಗಾಳಿಯಿಂದ ರಕ್ಷಿಸಿಕೊಳ್ಳುವ ವ್ಯವಸ್ಥೆ ಇತ್ತು. ಸೀತಾ, ಲಕ್ಷ್ಮಣ ಮತ್ತು ಶ್ರೀರಾಮ ಎಲ್ಲರೂ ಒಟ್ಟಿಗೆ ದೇವತೆಗಳು ಸುಧರ್ಮಾ ಸಭೆಯನ್ನು ಪ್ರವೇಶಿಸುವಂತೆ ಅದರಲ್ಲಿ ವಾಸಕ್ಕಾಗಿ ಪ್ರವೇಶಿಸಿದರು.॥34॥

ಮೂಲಮ್ - 35

ಸುರಮ್ಯಮಾಸಾದ್ಯ ತು ಚಿತ್ರಕೂಟಂ
ನದೀಂ ಚ ತಾಂ ಮಾಲ್ಯವತೀಂ ಸುತೀರ್ಥಾಮ್ ।
ನನಂದ ಹೃಷ್ಟೋ ಮೃಗಪಕ್ಷಿಜುಷ್ಟಾಂ
ಜಹೌ ಚ ದುಃಖಂ ಪುರವಿಪ್ರವಾಸಾತ್ ॥

ಅನುವಾದ

ಚಿತ್ರಕೂಟ ಪರ್ವತವು ಬಹಳ ರಮಣೀಯವಾಗಿತ್ತು. ಅಲ್ಲಿ ಉತ್ತಮ ತೀರ್ಥಸ್ಥಾನಗಳಿಂದ ಸುಶೋಭಿತ ಮಾಲ್ಯವತೀ (ಮಂದಾಕಿನೀ) ನದಿಯು ಹರಿಯುತಿತ್ತು. ಅದನ್ನು ಅನೇಕ ಪಶು-ಪಕ್ಷಿಗಳು ಸೇವಿಸುತ್ತಿದ್ದವು. ಆ ಪರ್ವತ ಮತ್ತು ನದಿಯ ಸಾನ್ನಿಧ್ಯ ಪಡೆದು ಶ್ರೀರಾಮನಿಗೆ ಬಹಳ ಹರ್ಷ ಮತ್ತು ಆನಂದ ಉಂಟಾಯಿತು. ಅವನು ನಗರದಿಂದ ದೂರ ವನಕ್ಕೆ ಬಂದಿರುವುದರಿಂದ ಆದ ಕಷ್ಟ ಮರೆತುಬಿಟ್ಟನು.॥35॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಐವತ್ತಾರನೆಯ ಸರ್ಗ ಪೂರ್ಣವಾಯಿತು ॥56॥