वाचनम्
ಭಾಗಸೂಚನಾ
ಭರದ್ವಾಜ ಮಹರ್ಷಿಗಳು ಸೀತಾ-ರಾಮ-ಲಕ್ಷ್ಮಣರಿಗೆ ಸ್ವಸ್ತಿವಾಚನ ಮಾಡಿ ಚಿತ್ರಕೂಟ ಪರ್ವತದ ದಾರಿಯನ್ನು ತೋರಿದುದು, ಎಲ್ಲರ ಅನುಮತಿಯನ್ನು ಪಡೆದು ಶ್ರೀರಾಮನು ದೋಣಿಯ ಮೂಲಕ ಯಮುನಾ ನದಿಯನ್ನು ದಾಟಿದುದು, ಸೀತೆಯು ಯಮುನಾ ನದಿಯನ್ನು ಪ್ರಾರ್ಥಿಸಿದುದು, ಮೂವರೂ ಯಮುನಾ ನದಿಯ ತೀರದ ಮಾರ್ಗವನ್ನು ಹಿಡಿದು ಒಂದು ಹರದಾರಿ ಹೋಗಿ ಯಮುನಾ ನದಿಯ ತೀರ ಪ್ರದೇಶದ ಸಮತಲ ಸ್ಥಳದಲ್ಲಿ ರಾತ್ರಿ ತಂಗಿದುದು
ಮೂಲಮ್ - 1
ಉಷಿತ್ವಾ ರಜನೀಂ ತತ್ರ ರಾತಪುತ್ರಾವರಿಂದಮೌ ।
ಮಹರ್ಷಿಮಭಿವಾದ್ಯಾಥ ಜಗ್ಮತುಸ್ತಂ ಗಿರಿಂ ಪ್ರತಿ ॥
ಅನುವಾದ
ಆ ಆಶ್ರಮದಲ್ಲಿ ರಾತ್ರಿ ತಂಗಿದ್ದು ಶತ್ರುದಮನ ಆ ಇಬ್ಬರೂ ರಾಜಕುಮಾರರು ಮಹರ್ಷಿಗಳಿಗೆ ಪ್ರಣಾಮ ಮಾಡಿ ಚಿತ್ರಕೂಟ ಪರ್ವತಕ್ಕೆ ಹೊರಟರು.॥1॥
ಮೂಲಮ್ - 2
ತೇಷಾಂ ಸ್ವಸ್ತ್ಯಯನಂ ಚೈವಮಹರ್ಷಿಃ ಸ ಚಕಾರ ಹ ।
ಪ್ರಸ್ಥಿತಾನ್ಪ್ರೇಕ್ಷ್ಯ ತಾಂಶ್ಚೈವ ಪಿತಾ ಪುತ್ರಾನಿವೌರಸಾನ್ ॥
ಅನುವಾದ
ಅವರು ಮೂವರೂ ಹೊರಟಿರುವುದನ್ನು ನೋಡಿ ಮಹರ್ಷಿಗಳು ಅವರಿಗೆ ತಂದೆಯು ತನ್ನ ಔರಸಪುತ್ರರು ಪ್ರಯಾಣಕ್ಕೆ ಹೊರಟಾಗ ಮಂಗಲಸೂಚಕ ಆಶೀರ್ವಾದ ಕೊಡುವಂತೆ ಸ್ವಸ್ತಿವಾಚನ ಮಾಡಿದರು.॥2॥
ಮೂಲಮ್ - 3
ತತಃ ಪ್ರಚಕ್ರಮೇ ವಕ್ತುಂ ವಚನಂ ಸ ಮಹಾಮುನಿಃ ।
ಭರದ್ವಾಜೋ ಮಹಾತೇಜಾ ರಾಮಂ ಸತ್ಯಪರಾಕ್ರಮಮ್ ॥
ಅನುವಾದ
ಬಳಿಕ ಮಹಾತೇಜಸ್ವೀ ಮಹಾಮುನಿ ಭರದ್ವಾಜರು ಸತ್ಯಪರಾಕ್ರಮಿ ಶ್ರೀರಾಮನಲ್ಲಿ ಇಂತೆಂದರು.॥3॥
ಮೂಲಮ್ - 4
ಗಂಗಾಯಮುನಯೋಃ ಸಂಧಿಮಾಸಾದ್ಯ ಮನುಜರ್ಷಭೌ ।
ಕಾಲಿಂದೀಮನುಗಚ್ಛೇತಾಂ ನದೀಂ ಪಶ್ಚಾನ್ಮುಖಾಶ್ರಿತಾಮ್ ॥
ಅನುವಾದ
ನರಶ್ರೇಷ್ಠನೇ! ನೀವು ಸಹೋದರರಿಬ್ಬರೂ ಗಂಗಾ-ಯಮುನಾ ಸಂಗಮಕ್ಕೆ ಹೋಗಿ ಗಂಗೆಯ ಪಶ್ಚಿಮಾಭಿ ಮುಖವಾಗಿ ಸೇರುವ ಮಹಾನದೀ ಯಮುನೆಯ ಬಳಿಗೆ ಹೋಗಿರಿ.॥4॥
ಮೂಲಮ್ - 5
ಅಥಾಸಾದ್ಯ ತು ಕಾಲಿಂದೀಂ ಪ್ರತಿಸ್ರೋತಃಸಮಾಗತಾಮ್ ।
ತಸ್ಯಾಸ್ತೀರ್ಥೇ ಪ್ರಚರಿತಂ ಪ್ರಕಾಮಂ ಪ್ರೇಕ್ಷ್ಯ ರಾಘವ ।
ತತ್ರ ಯೂಯಂ ಪ್ಲವಂ ಕೃತ್ವಾ ತರತಾಂಶುಮತೀಂ ನದೀಮ್ ॥
ಅನುವಾದ
ರಘುನಂದನ! ಅನಂತರ ಗಂಗೆಯ ನೀರಿನ ವೇಗದಿಂದ ತನ್ನ ಪ್ರವಾಹದ ವಿರುದ್ಧವಾಗಿ ತಿರುಗಿದ ಯಮುನೆಯ ಬಳಿಗೆ ಹೋಗಿ, ಜನರು ಬಂದು ಹೋಗುವ ಕಾಲುದಾರಿಯ ಮೂಲಕ ನದಿ ದಾಟುವ ಸ್ಥಳವನ್ನು ಚೆನ್ನಾಗಿ ಪರೀಕ್ಷಿಸಿ ಒಂದು ತೆಪ್ಪವನ್ನು ಮಾಡಿಕೊಂಡು ಅದರಿಂದ ಸೂರ್ಯಕನ್ಯೆ ಯಮುನೆಯನ್ನು ದಾಟಿಹೋಗಿರಿ.॥5॥
ಮೂಲಮ್ - 6
ತತೋ ನ್ಯಗ್ರೋಧಮಾಸಾದ್ಯ ಮಹಾಂತಂ ಹರಿತಚ್ಛದಮ್ ।
ಪರೀತಂ ಬಹುಭಿರ್ವೃಕ್ಷೈಃ ಶ್ಯಾಮಂ ಸಿದ್ಧೋಪಸೇವಿತಮ್ ॥
ಮೂಲಮ್ - 7
ತಸ್ಮಿನ್ ಸೀತಾಂಜಲಿಂ ಕೃತ್ವಾ ಪ್ರಯುಂಜಿತಾಶಿಷಾಂ ಕ್ರಿಯಾಮ್ ।
ಸಮಾಸಾದ್ಯ ಚತಂ ವೃಕ್ಷಂ ವಸೇದ್ವಾತಿಕ್ರಮೇತ ವಾ ॥
ಅನುವಾದ
ಅನಂತರ ಮುಂದೆ ಹೋದಾಗ ಒಂದು ಬಹಳ ದೊಡ್ಡ ಆಲದಮರ ಸಿಗುವುದು. ಅದು ಹಸಿರು ಎಲೆಗಳಿಂದ ಕೂಡಿದ್ದು, ಸುತ್ತಲೂ ಅಸಂಖ್ಯ ಇತರ ವೃಕ್ಷಗಳಿಂದ ಸುತ್ತುವರೆದಿದೆ. ಅದರ ಹೆಸರು ಶ್ಯಾಮವಟ ಎಂದಾಗಿದೆ. ಅದರ ನೆರಳಿನಲ್ಲಿ ಅನೇಕ ಸಿದ್ಧ ಪುರುಷರು ವಾಸಿಸುತ್ತಾರೆ. ಅಲ್ಲಿಗೆ ಹೋಗಿ ಸೀತೆಯು ಕೈಮುಗಿದು ಆ ವಟವೃಕ್ಷದ ಬಳಿ ಆಶೀರ್ವಾದವನ್ನು ಯಾಚಿಸಲಿ. ಯಾತ್ರಿಯ ಇಚ್ಛೆ ಇದ್ದರೆ ಆ ವೃಕ್ಷದ ಬಳಿಗೆ ಹೋಗಿ ಸ್ವಲ್ಪಕಾಲ ನಿಂತು ಅಲ್ಲಿಂದ ಮುಂದೆ ಹೋಗಬೇಕು.॥6-7॥
ಮೂಲಮ್ - 8
ಕ್ರೋಶಮಾತ್ರಂ ತತೋ ಗತ್ವಾ ನೀಲಂ ಪ್ರೇಕ್ಷ್ಯಚ ಕಾನನಮ್ ।
ಸಲ್ಲಕೀಬದರೀಮಿಶ್ರಂರಮ್ಯಂ ವಂಶ್ಚೈಶ್ಚ ಯಾಮುನೈಃ ॥
ಅನುವಾದ
ಶ್ಯಾಮವಟದಿಂದ ಒಂದು ಹರದಾರಿ ದೂರ ಹೋದಾಗ ನಿಮಗೆ ನೀಲವನದ ದರ್ಶನವಾಗುವುದು. ಅಲ್ಲಿ ಮುತ್ತುಗದ ಮರಗಳು ಅತ್ತಿಮರಗಳು ಸಿಗುವವು. ಯಮುನಾ ತೀರದಲ್ಲಿ ಬೆಳೆದಿರುವ ಬಿದಿರುಗಳಿಂದ ಅದು ಇನ್ನೂ ರಮಣೀಯವಾಗಿ ಕಂಡುಬರುತ್ತದೆ.॥8॥
ಮೂಲಮ್ - 9
ಸ ಪಂಥಾಶ್ಚಿತ್ರಕೂಟಸ್ಯ ಗತಸ್ಯ ಬಹುಶೋ ಮಯಾ ।
ರಮ್ಯೋ ಮಾರ್ದವಯುಕ್ತಶ್ಚ ದಾವೈಶ್ಚೈವ ವಿವರ್ಜಿತಃ ॥
ಅನುವಾದ
ಈ ಸ್ಥಾನದಿಂದಲೇ ಚಿತ್ರಕೂಟದ ದಾರಿ ಹೋಗುತ್ತದೆ. ನಾನು ಆ ದಾರಿಯಿಂದ ಅನೇಕ ಸಲ ಹೋಗಿರುವೆನು. ಅಲ್ಲಿಯ ಭೂಮಿ ಕೋಮಲವಾಗಿದ್ದು, ದೃಶ್ಯ ರಮಣೀಯವಾಗಿದೆ. ಅಲ್ಲಿ ಎಂದಿಗೂ ಕಾಡ್ಗಿಚ್ಚಿನ ಭಯವಿರುವುದಿಲ್ಲ.॥9॥
ಮೂಲಮ್ - 10
ಇತಿ ಪಂಥಾನಮಾದಿಶ್ಯ ಮಹರ್ಷಿಃ ಸಂನ್ಯವರ್ತತ ।
ಅಭಿವಾದ್ಯ ತಥೇತ್ಯುಕ್ತ್ವಾ ರಾಮೇಣ ವಿನಿವರ್ತಿತಃ ॥
ಅನುವಾದ
ಈ ಪ್ರಕಾರ ಮಾರ್ಗವನ್ನು ತಿಳಿಸಿ ಮಹರ್ಷಿ ಭರದ್ವಾಜರು ಮರಳಿದಾಗ ಶ್ರೀರಾಮನು ‘ಹಾಗೆಯೇ ಆಗಲಿ’ ಎಂದು ಹೇಳಿ ಅವರ ಚರಣಗಳಿಗೆ ವಂದಿಸಿ, ಈಗ ತಾವು ಆಶ್ರಮಕ್ಕೆ ನಡೆಯಿರಿ ಎಂದು ಹೇಳಿದನು.॥10॥
ಮೂಲಮ್ - 11
ಉಪಾವೃತ್ತೇ ಮುನೌ ತಸ್ಮಿನ್ರಾಮೋ ಲಕ್ಷ್ಮಣಮಬ್ರವೀತ್ ।
ಕೃತಪುಣ್ಯಾಃ ಸ್ಮ ಭದ್ರಂ ತ್ರೇ ಮುನಿರ್ಯನ್ನೋಽನುಕಂಪತೇ ॥
ಅನುವಾದ
ಆ ಮಹರ್ಷಿಗಳು ಮರಳಿ ಹೋದಬಳಿಕ ಶ್ರೀರಾಮನು ಲಕ್ಷ್ಮಣನಲ್ಲಿ ಹೇಳಿದನು-ಸುಮಿತ್ರಾನಂದನ! ನಿನಗೆ ಮಂಗಳವಾಗಲಿ. ಈ ಮುನಿಗಳು ನಮ್ಮ ಮೇಲೆ ಇಷ್ಟೊಂದು ಕೃಪೆ ಮಾಡುವುದನ್ನು ನೋಡಿದರೆ ನಾವು ಮೊದಲು ಎಂದೋ ಮಹಾಪುಣ್ಯ ಮಾಡಿರಬೇಕು.॥11॥
ಮೂಲಮ್ - 12
ಇತಿ ತೌ ಪುರುಷವ್ಯಾಘ್ರೌ ಮಂತ್ರಯಿತ್ವಾ ಮನಸ್ವಿನೌ ।
ಸೀತಾಮೇವಾಗ್ರತಃ ಕೃತ್ವಾ ಕಾಲಿಂದೀ ಜಗ್ಮತುರ್ನದೀಮ್ ॥
ಅನುವಾದ
ಈ ಪ್ರಕಾರ ಮಾತುಕತೆಯಾಡುತ್ತಾ ಅವರಿಬ್ಬರು ಮನಸ್ವೀ ಪುರುಷಸಿಂಹರು ಸೀತೆಯನ್ನು ಮುಂದಿರಿಸಿಕೊಂಡು ಯಮುನಾ ನದಿಯ ತೀರಕ್ಕೆ ಹೋದರು.॥12॥
ಮೂಲಮ್ - 13
ಅಥಾಸಾದ್ಯ ತು ಕಾಲಿಂದೀ ಶೀಘ್ರಸ್ರೋತಸ್ವಿನೀಂ ನದೀಮ್ ।
ಚಿಂತಾಮಾಪೇದಿರೇ ಸದ್ಯೋ ನದೀಜಲತಿತೀರ್ಷವಃ ॥
ಅನುವಾದ
ಅಲ್ಲಿ ಕಾಲಿಂದಿಯ ಪ್ರವಾಹ ತುಂಬಾ ತೀವ್ರಗತಿಯಿಂದ ಹರಿಯುತಿತ್ತು. ಅಲ್ಲಿಗೆ ತಲುಪಿ ನದಿಯನ್ನು ಹೇಗೆ ದಾಟಬಹುದು ಎಂಬ ಚಿಂತೆಯುಂಟಾಯಿತು; ಏಕೆಂದರೆ ಅವರು ಶೀಘ್ರವಾಗಿ ನದಿಯನ್ನು ದಾಟಲು ಬಯಸುತ್ತಿದ್ದರು.॥13॥
ಮೂಲಮ್ - 14
ತೌ ಕಾಷ್ಠಸಂಘಾಟಮಥೋ ಚಕ್ರತುಃ ಸುಮಹಾಪ್ಲವಮ್ ।
ಶುಷ್ಕೈರ್ವಂಶೈಃ ಸಮಾಕೀರ್ಣಮುಶೀರೈಶ್ಚಸಮಾವೃತಮ್ ॥
ಮೂಲಮ್ - 15
ತತೋ ವೈತಸಶಾಖಾಶ್ಚ ಜಂಬುಶಾಖಾಶ್ಚವೀರ್ಯವಾನ್ ।
ಚಕಾರ ಲಕ್ಷ್ಮಣಶ್ಛಿತ್ವಾ ಸೀತಾಯಾಃ ಸುಖಮಾಸನಮ್ ॥
ಅನುವಾದ
ಮತ್ತೆ ಅವರಿಬ್ಬರೂ ಕಾಡಿನಿಂದ ಒಣಗಿದ ದಿಮ್ಮಿಗಳನ್ನು ತಂದು ಬಹಳ ದೊಡ್ಡ ತೆಪ್ಪವನ್ನು ತಯಾರಿಸಿದರು. ಆ ತೆಪ್ಪವು ಒಣಗಿದ ಬಿದಿರುಗಳಿಂದಲೂ ಮಾಡಿ ಅದರ ಮೇಲೆ ಲಾವಂಚದ ಬೇರುಗಳನ್ನು ಹಾಸಿತ್ತು. ಬಳಿಕ ಪರಾಕ್ರಮಿ ಲಕ್ಷ್ಮಣನು ಬೆತ್ತ ಮತ್ತು ನೇರಳೆ ಕೊಂಬೆಗಳನ್ನು ಕತ್ತರಿಸಿ ಸೀತೆಗೆ ಕುಳಿತುಕೊಳ್ಳಲು ಒಂದು ಸುಖಮಯ ಆಸನವನ್ನು ಸಿದ್ಧಗೊಳಿಸಿದನು.॥14-15॥
ಮೂಲಮ್ - 16
ತತ್ರ ಶ್ರಿಯಮಿವಾಚಿಂತ್ಯಾಂ ರಾಮೋ ದಾಶರಥಿಃ ಪ್ರಿಯಾಮ್ ।
ಈಷತ್ಸಲಜ್ಜಮಾನಾಂ ತಾಮಧ್ಯಾರೋಪಯತ ಪ್ಲವಮ್ ॥
ಮೂಲಮ್ - 17
ಪಾರ್ಶ್ವೇ ತತ್ರ ಚ ವೈದೇಹ್ಯಾ ವಸನೇ ಭೂಷಣಾನಿ ಚ ।
ಪ್ಲವೇ ಕಠಿಣಕಾಜಂ ಚ ರಾಮಶ್ಚಕ್ರೇ ಸಮಾಹಿತಃ ॥
ಅನುವಾದ
ದಶರಥನಂದನ ಶ್ರೀರಾಮನು ಲಕ್ಷ್ಮೀಯಂತಿರುವ ಅಚಿಂತ್ಯ ಐಶ್ವರ್ಯವುಳ್ಳ ಸ್ವಲ್ಪ ನಾಚಿಕೆಗೊಂಡ ತನ್ನ ಪ್ರಿಯೆ ಸೀತೆಯನ್ನು ಆ ತೆಪ್ಪದ ಮೇಲೆ ಕುಳ್ಳಿರಿಸಿ, ಆಕೆಯ ಪಕ್ಕದಲ್ಲಿ ವಸ್ತ್ರಾಭೂಷಣಗಳನ್ನು ಇರಿಸಿದನು. ಮತ್ತೆ ಶ್ರೀರಾಮನು ಎಚ್ಚರಿಕೆಯಿಂದ ಗುದ್ದಲಿ ಮತ್ತು ಆಡಿನ ಚರ್ಮ ಹೊದಿಸಿದ ಮಂಕರಿಯನ್ನು ತೆಪ್ಪದ ಮೇಲೆ ಇರಿಸಿದನು.॥16-17॥
ಮೂಲಮ್ - 18
ಆರೋಪ್ಯ ಸೀತಾಂ ಪ್ರಥಮಂ ಸಂಘಾಟಂ ಪರಿಗೃಹ್ಯ ತೌ ।
ತತಃ ಪ್ರತೇತರತುರ್ಯತ್ತೌ ಪ್ರೀತೌ ದಶರಥಾತ್ಮಜೌ ॥
ಅನುವಾದ
ಈ ಪ್ರಕಾರ ಮೊದಲಿಗೆ ಸೀತೆಯನ್ನು ಕುಳ್ಳಿರಿಸಿ ದಶರಥಕುಮಾರ ಶ್ರೀರಾಮ ಮತ್ತು ಲಕ್ಷ್ಮಣರು ಆ ತೆಪ್ಪವನ್ನು ನಡೆಸತೊಡಗಿದರು. ಅವರು ಸಂತೋಷದಿಂದ ನದಿಯನ್ನು ದಾಟಲು ತೊಡಗಿದರು.॥18॥
ಮೂಲಮ್ - 19
ಕಾಲಿಂದೀಮಧ್ಯಮಾಯಾತಾ ಸೀತಾ ತ್ವೇನಾಮವಂದತ ।
ಸ್ವಸ್ತಿ ದೇವಿ ತರಾಮಿ ತ್ವಾಂ ಪಾರಯೇನ್ಮೇ ಪತಿರ್ವ್ರತಮ್ ॥
ಅನುವಾದ
ಯಮುನಾ ನದಿಯ ಮಧ್ಯಕ್ಕೆ ಬಂದಾಗ ಸೀತೆಯು ಆಕೆಯನ್ನು ವಂದಿಸಿ ಹೇಳಿದಳು - ದೇವಿ! ಈ ತೆಪ್ಪದ ಮೂಲಕ ನಾವು ನಿನ್ನನ್ನು ದಾಟುತ್ತಿದ್ದೇವೆ. ಇದರಿಂದ ನಾವು ಕ್ಷೇಮವಾಗಿ ದಾಟಿ ಹೋಗಿ, ನನ್ನ ಪತಿದೇವರ ತಮ್ಮ ವನವಾಸದ ಪ್ರತಿಜ್ಞೆಯು ನಿರ್ವಿಘ್ನವಾಗಿ ಪೂರ್ಣವಾಗುವಂತೆ ಕೃಪೆ ಮಾಡು.॥19॥
ಮೂಲಮ್ - 20
ಯಕ್ಷ್ಯೇ ತ್ವಾಂ ಗೋಸಹಸ್ರೇಣ ಸುರಾಘಟಶತೇನ ಚ ।
ಸ್ವಸ್ತಿ ಪ್ರತ್ಯಾಗತೇ ರಾಮೇ ಪುರೀಮಿಕ್ಷ್ವಾಕುಪಾಲಿತಾಮ್ ॥
ಅನುವಾದ
ಇಕ್ಷ್ವಾಕುವಂಶೀ ವೀರರಿಂದ ಪಾಲಿತವಾದ ಅಯೋಧ್ಯೆಗೆ ಶ್ರೀರಘುನಾಥನು ಕ್ಷೇಮವಾಗಿ ಮರಳಿದ ಮೇಲೆ ನಾನು ನಿನ್ನ ತೀರದಲ್ಲಿ ಒಂದು ಸಾವಿರ ಗೋವುಗಳನ್ನು ದಾನ ಮಾಡುವೆನು. ಸಾವಿರಾರು ದೇವ ದುರ್ಲಭ ಪದಾರ್ಥಗಳನ್ನು ಅರ್ಪಿಸಿ ನಿನ್ನನ್ನು ಪೂಜಿಸುವೆನು.॥20॥
ಮೂಲಮ್ - 21
ಕಾಲಿಂದೀಮಥ ಸೀತಾ ತು ಯಾಚಮಾನಾ ಕೃತಾಂಜಲಿಃ ।
ತೀರಮೇವಾಭಿಸಂಪ್ರಾಪ್ತಾ ದಕ್ಷಿಣಂ ವರವರ್ಣಿನೀ ॥
ಅನುವಾದ
ಈ ಪ್ರಕಾರ ಸುಂದರೀ ಸೀತೆಯು ಕೈಜೋಡಿಸಿಕೊಂಡು ಯಮುನೆಯನ್ನು ಪ್ರಾರ್ಥಿಸುತ್ತಿದ್ದಳು; ಇಷ್ಟರಲ್ಲಿ ಅವರು ದಕ್ಷಿಣ ತೀರವನ್ನು ತಲುಪಿದರು.॥21॥
ಮೂಲಮ್ - 22
ತತಃ ಪ್ಲವೇನಾಂಶುಮತೀಂ ಶೀಘ್ರಗಾಮೂರ್ಮಿಮಾಲಿನೀಮ್ ।
ತೀರಜೈರ್ಬಹುಭಿರ್ವೃಕ್ಷೈಃ ಸಂತೇರುರ್ಯಮುನಾಂ ನದೀಮ್ ॥
ಅನುವಾದ
ಹೀಗೆ ಅವರು ಮೂವರೂ ಆ ತೆಪ್ಪದ ಮೂಲಕ ಅಸಂಖ್ಯ ತಟವರ್ತಿ ವೃಕ್ಷಗಳಿಂದ ಸುಶೋಭಿತ ಮತ್ತು ತರಂಗಗಳಿಂದ ಅಲಂಕೃತ ಶೀಘ್ರಗಾಮಿನಿ ಸೂರ್ಯಕನ್ಯೆ ಯಮುನಾ ನದಿಯನ್ನು ದಾಟಿದರು.॥22॥
ಮೂಲಮ್ - 23
ತೇ ತೀರ್ಣಾಃ ಪ್ಲವಮುತ್ಸೃಜ್ಯ ಪ್ರಸ್ಥಾಯ ಯಮುನಾವನಾತ್ ।
ಶ್ಯಾಮಂ ನ್ಯಗ್ರೋಧಮಾಸೇದುಃ ಶೀತಲಂ ಹರಿತಚ್ಛದಮ್ ॥
ಅನುವಾದ
ದಡದಲ್ಲಿ ಇಳಿದು ಅವರು ತೆಪ್ಪವನ್ನು ಅಲ್ಲೇ ತೀರದಲ್ಲಿ ಬಿಟ್ಟು, ಯಮುನಾತೀರದ ವನದಲ್ಲಿ ಪ್ರಯಾಣ ಮಾಡುತ್ತಾ ಅವರು ಹಸಿರು ಎಲೆಗಳಿಂದ ಸುಶೋಭಿತ ಶೀತಲ ನೆರಳು ಉಳ್ಳ ಶ್ಯಾಮಲವಟದ ಬಳಿಗೆ ತಲುಪಿದರು.॥23॥
ಮೂಲಮ್ - 24
ನ್ಯಗ್ರೋಧಂ ಸಮುಪಾಗಮ್ಯ ವೈದೇಹೀ ಚಾಭ್ಯವಂದತ ।
ನಮಸ್ತೇಽಸ್ತು ಮಹಾವೃಕ್ಷ ಪಾರಯೇನ್ಮೇ ಪತಿರ್ವ್ರತಮ್ ॥
ಅನುವಾದ
ವಟವೃಕ್ಷದ ಬಳಿಗೆ ಸಾರಿ ವೈದೇಹೀ ಸೀತೆಯು ಅದಕ್ಕೆ ತಲೆಬಾಗಿದಳು ಹಾಗೂ ಹೀಗೆ ಹೇಳಿದಳು - ಮಹಾ ವೃಕ್ಷವೇ! ನಿನಗೆ ನಮಸ್ಕಾರ. ನನ್ನ ಪತಿದೇವರು ವನವಾಸ ವ್ರತವನ್ನು ಪೂರ್ಣಗೊಳಿಸುವಂತೆ ಕೃಪೆ ಮಾಡು.॥24॥
ಮೂಲಮ್ - 25
ಕೌಸಲ್ಯಾಂ ಚೈವ ಪಶ್ಯೇಮ ಸುಮಿತ್ರಾಂ ಚಯಶಸ್ವಿನೀಮ್ ।
ಇತಿ ಸೀತಾಂಜಲಿಂ ಕೃತ್ವಾ ಪರ್ಯಗಚ್ಛನ್ಮನಸ್ವಿನೀ ॥
ಅನುವಾದ
ನಾವು ವನದಿಂದ ಕ್ಷೇಮವಾಗಿ ಮರಳಿ ಬಂದು ಕೌಸಲ್ಯೆ ಮತ್ತು ಯಶಸ್ವಿನೀ ಸುಮಿತ್ರಾದೇವಿಯನ್ನು ದರ್ಶನ ಮಾಡುವಂತಾಗಲಿ. ಹೀಗೆ ಹೇಳಿ ಮನಸ್ವಿನೀ ಸೀತೆಯು ಕೈಮುಗಿದು ಆ ವೃಕ್ಷಕ್ಕೆ ಪ್ರದಕ್ಷಿಣೆ ಮಾಡಿದಳು.॥25॥
ಮೂಲಮ್ - 26
ಅವಲೋಕ್ಯ ತತಃ ಸೀತಾಮಾಯಾಚಂತೀಮನಿಂದಿತಾಮ್ ।
ದಯಿತಾಂ ಚ ವಿಧೇಯಾಂ ಚ ರಾಮೋಲಕ್ಷ್ಮಣಮಬ್ರವೀತ್ ॥
ಅನುವಾದ
ಸದಾ ತನ್ನ ಆಜ್ಞೆಗೆ ಅಧೀನವಾಗಿರುವ ಪ್ರಾಣಪ್ರಿಯೆ ಸತೀಸಾಧ್ವೀ ಸೀತೆಯು ಶ್ಯಾಮವಟದಲ್ಲಿ ಆಶೀರ್ವಾದವನ್ನು ಬೇಡುತ್ತಿರುವುದನ್ನು ನೋಡಿ ಶ್ರೀರಾಮನು ಲಕ್ಷ್ಮಣನಲ್ಲಿ ಹೇಳಿದನು.॥26॥
ಮೂಲಮ್ - 27
ಸೀತಾಮಾದಾಯ ಗಚ್ಛ ತ್ವಮಗ್ರತೋ ಭರತಾನುಜ ।
ಪೃಷ್ಠತೋಽನುಗಮಿಷ್ಯಾಮಿ ಸಾಯುಧೋ ದ್ವಿಪದಾಂ ವರ ॥
ಅನುವಾದ
ಭರತಾನುಜ ನರಶ್ರೇಷ್ಠ ಲಕ್ಷ್ಮಣ! ನೀನು ಸೀತೆಯನ್ನು ಕರೆದುಕೊಂಡು ಮುಂದೆ-ಮುಂದೆ ನಡೆ, ನಾನು ಧನುರ್ಧಾರಿಯಾಗಿ ಹಿಂದಿನಿಂದ ನಿಮ್ಮನ್ನು ರಕ್ಷಿಸುತ್ತಾ ನಡೆಯುವೆನು.॥27॥
ಮೂಲಮ್ - 28
ಯದ್ ಯತ್ ಫಲಂ ಪ್ರಾರ್ಥಯತೇ ಪುಷ್ಪಂ ವಾ ಜನಕಾತ್ಮಜಾ ।
ತತ್ತತ್ಪ್ರಯಚ್ಛ ವೈದೇಹ್ಯಾ ಯತ್ರಾಸ್ಯಾ ರಮತೇ ಮನಃ ॥
ಅನುವಾದ
ವಿದೇಹಕುಲನಂದಿನೀ ಜನಕಾತ್ಮಜಾ ಸೀತೆಯು ಬಯಸುವ ಫಲಗಳನ್ನು ಮತ್ತು ಹೂವುಗಳನ್ನು ಪಡೆದು ಆಕೆಯ ಮನಸ್ಸು ಪ್ರಸನ್ನವಾಗುವುದು. ಅದೆಲ್ಲವನ್ನು ಅವಳಿಗೆ ಕೊಡುತ್ತಾ ಇರು.॥28॥
ಮೂಲಮ್ - 29
ಏಕೈಕಂ ಪಾದಪಂ ಗುಲ್ಮಂ ಲತಾಂ ವಾ ಪುಷ್ಪಶಾಲಿನೀಮ್ ।
ಅದೃಷ್ಟರೂಪಾಂ ಪಶ್ಯಂತಿ ರಾಮಂ ಪಪ್ರಚ್ಛ ಸಾಬಲಾ ॥
ಅನುವಾದ
ಅಬಲೆಯಾದ ಸೀತೆಯು ಒಂದೊಂದು ಗಿಡ, ಮರ, ಹಿಂದೆಂದೂ ನೋಡದಿರುವ ಪುಷ್ಪಶೋಭಿತ ಲತೆಯನ್ನು ಕಂಡು ಅದರ ವಿಷಯದಲ್ಲಿ ಶ್ರೀರಾಮನಲ್ಲಿ ಕೇಳುತ್ತಿದ್ದಳು.॥29॥
ಮೂಲಮ್ - 30
ರಮಣೀಯಾನ್ಬಹುವಿಧಾನ್ ಪಾದಪಾನ್ಕುಸುಮೋತ್ಕರಾನ್ ।
ಸೀತಾವಚನಸಂರಬ್ಧ ಅನಯಾಮಾಸ ಲಕ್ಷ್ಮಣಃ ॥
ಅನುವಾದ
ಲಕ್ಷ್ಮಣನು ಸೀತೆಯ ಮಾತಿನಂತೆ ಕೂಡಲೇ ಬಗೆ-ಬಗೆಯ ಮರಗಳ ಚಿಗುರುಗಳನ್ನು, ಪುಷ್ಪಗುಚ್ಛಗಳನ್ನು ತಂದು-ತಂದು ಕೊಡುತ್ತಿದ್ದನು.॥30॥
ಮೂಲಮ್ - 31
ವಿಚಿತ್ರವಾಲುಕಜಲಾಂ ಹಂಸಸಾರಸನಾದಿತಾಮ್ ।
ರೇಮೇ ಜನಕರಾಜಸ್ಯ ಸುತಾ ಪ್ರೇಕ್ಷ್ಯ ತದಾ ನದೀಮ್ ॥
ಅನುವಾದ
ಆಗ ಜನಕರಾಜನಂದಿನೀ ಸೀತೆಯು ವಿಚಿತ್ರ ಉಸುಕು ಮತ್ತು ಜಲರಾಶಿಯಿಂದ ಶೋಭಿಸುವ, ಹಂಸ, ಸಾರಸಗಳ ಕಲರವದಿಂದ ಕೂಡಿದ ಯಮುನೆಯನ್ನು ನೋಡಿ ಬಹಳ ಸಂತೋಷಪಡುತ್ತಿದ್ದಳು.॥31॥
ಮೂಲಮ್ - 32
ಕ್ರೋಶಮಾತ್ರಂ ತತೋ ಗತ್ವಾ ಭ್ರಾತರೌ ರಾಮಲಕ್ಷ್ಮಣೌ ।
ಬಹೂನ್ಮೇಧ್ಯಾನ್ ಮೃಗಾನ್ಹತ್ವಾ ಚೇರತುರ್ಯಮುನಾವನೇ ॥
ಅನುವಾದ
ಈ ಪ್ರಕಾರ ಒಂದು ಹರದಾರಿ ಪ್ರಯಾಣ ಮಾಡಿ ಇಬ್ಬರೂ ಸಹೋದರರು ಶ್ರೀರಾಮ-ಲಕ್ಷ್ಮಣರು ದಾರಿಯಲ್ಲಿ ಸಿಗುವ ಹಿಂಸಕ ಪಶುಗಳನ್ನು (ಪ್ರಾಣಿಗಳ ಹಿತಕ್ಕಾಗಿ) ವಧಿಸುತ್ತಾ ಯಮುನಾ ತೀರದ ಕಾಡಿನಲ್ಲಿ ಸಂಚರಿಸಿದರು.॥32॥
ಮೂಲಮ್ - 33
ವಿಹೃತ್ಯ ತೇ ಬರ್ಹಿಣಪೂಗನಾದಿತೇ
ಶುಭೇ ವನೇ ವಾರಣವಾನರಾಯುತೇ ।
ಸಮಂ ನದೀವಪ್ರಮುಪೇತ್ಯ ಸತ್ವರಂ
ನಿವಾಸಮಾಜಗ್ಮುರದೀನದರ್ಶನಾಃ ॥
ಅನುವಾದ
ಉದಾರ ದೃಷ್ಟಿಯುಳ್ಳ ಆ ಸೀತಾ, ಲಕ್ಷ್ಮಣ ಮತ್ತು ಶ್ರೀರಾಮನು ನವಿಲುಗಳ ಗುಂಪುಗಳ ಕೇಕಾರವದಿಂದ ಪ್ರತಿಧ್ವನಿಸುತ್ತಿದ್ದ, ಆನೆಗಳಿಂದ ಮತ್ತು ವಾನರರಿಂದ ತುಂಬಿದ ಆ ಸುಂದರವನದಲ್ಲಿ ತಿರುಗಾಡುತ್ತಾ ಶೀಘ್ರವಾಗಿ ಯಮುನಾ ನದಿಯ ಸಮತಟ್ಟಾದ ಸ್ಥಳಕ್ಕೆ ಬಂದು, ರಾತ್ರಿಯಲ್ಲಿ ಅಲ್ಲೇ ತಂಗಿದರು.॥33॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಐವತ್ತೈದನೆಯ ಸರ್ಗ ಪೂರ್ಣವಾಯಿತು ॥55॥