वाचनम्
ಭಾಗಸೂಚನಾ
ಶ್ರೀರಾಮ-ಲಕ್ಷ್ಮಣರು ಸೀತೆಯೊಡನೆ ಪ್ರಯಾಗದಲ್ಲಿ ಗಂಗಾ-ಯಮುನ ಸಂಗಮದ ಸಮೀಪದಲ್ಲಿದ್ದ ಭರದ್ವಾಜರ ಆಶ್ರಮಕ್ಕೆ ಹೋದುದು, ಭರದ್ವಾಜರಿಂದ ಸತ್ಕಾರ, ಅವರು ಶ್ರೀರಾಮನಿಗೆ ಚಿತ್ರಕೂಟ ಪರ್ವತದಲ್ಲಿರುವಂತೆ ಆದೇಶವಿತ್ತುದು, ಚಿತ್ರಕೂಟ ಪರ್ವತದ ಶೋಭೆಯ ವರ್ಣನೆ
ಮೂಲಮ್ - 1
ತೇ ತು ತಸ್ಮಿನ್ಮಹಾವೃಕ್ಷೇ ಉಷಿತ್ವಾ ರಜನೀಂ ಶುಭಾಮ್ ।
ವಿಮಲೇಽಭ್ಯುದಿತೋ ಸೂರ್ಯೇ ತಸ್ಮಾದ್ದೇಶಾತ್ ಪ್ರತಸ್ಥಿರೇ ॥
ಅನುವಾದ
ಆ ಮಹಾವೃಕ್ಷದ ಕೆಳಗೆ ಆ ಸುಂದರ ರಾತ್ರಿಯನ್ನು ಕಳೆದು ಅವರೆಲ್ಲರೂ ನಿರ್ಮಲ ಸೂರ್ಯೋದಯಕಾಲದಲ್ಲಿ ಅಲ್ಲಿಂದ ಮುಂದಕ್ಕೆ ಪ್ರಯಾಣ ಬೆಳೆಸಿದರು.॥1॥
ಮೂಲಮ್ - 2
ಯತ್ರ ಭಾಗೀರಥೀಂ ಗಂಗಾಂ ಯಮುನಾಭಿಪ್ರವರ್ತತೇ ।
ಜಗ್ಮುಸ್ತಂ ದೇಶಮುದ್ದಿಶ್ಯ ವಿಗಾಹ್ಯ ಸುಮಹದ್ವನಮ್ ॥
ಅನುವಾದ
ಭಾಗೀರಥೀ ಗಂಗೆಯೊಂದಿಗೆ ಯಮುನೆಯು ಸೇರುವ ಪ್ರಯಾಗಕ್ಕೆ ಹೋಗಲು ಆ ಮಹಾವನದೊಳಗಿಂದ ಪ್ರಯಾಣ ಮಾಡತೊಡಗಿದರು.॥2॥
ಮೂಲಮ್ - 3
ತೇ ಭೂಮಿಭಾಗಾನ್ ವಿವಿಧಾನ್ ದೇಶಾಂಶ್ಚಾಪಿ ಮನೋಹರಾನ್ ।
ಅದೃಷ್ಟಪೂರ್ವಾನ್ ಪಶ್ಯಂತಸ್ತತ್ರ ತತ್ರ ಯಶಸ್ವಿನಃ ॥
ಅನುವಾದ
ಅವರು ಮೂವರೂ ಯಾತ್ರಿಗಳು ದಾರಿಯಲ್ಲಿ ಅಲ್ಲಲ್ಲಿ ಹಿಂದೆ ಎಂದೂ ನೋಡದಿರುವ ಅನೇಕ ವಿಧದ ಭೂ-ಭಾಗಗಳನ್ನೂ, ಮನೋಹರ ಪ್ರದೇಶಗಳನ್ನು ನೋಡುತ್ತಾ ಮುಂದರಿಯುತ್ತಿದ್ದರು.॥3॥
ಮೂಲಮ್ - 4
ಯಥಾ ಕ್ಷೇಮೇಣ ಸಂಪಶ್ಯನ್ ಪುಷ್ಪಿತಾನ್ವಿವಿಧಾನ್ ದ್ರುಮಾನ್ ।
ನಿವೃತ್ತಮಾತ್ರೇ ದಿವಸೇ ರಾಮಃ ಸೌಮಿತ್ರಿಮಬ್ರವೀತ್ ॥
ಅನುವಾದ
ಸುಖವಾಗಿ ಅಲ್ಲಲ್ಲಿ ಕುಳಿತುಕೊಳ್ಳುತ್ತಾ ಪ್ರಯಾಣ ಮಾಡುತ್ತಾ ಅವರು ಮೂವರು ಹೂವುಗಳಿಂದ ಸುಶೋಭಿತ ಬಗೆ-ಬಗೆಯ ವೃಕ್ಷಗಳನ್ನು ದರ್ಶಿಸುತ್ತಾ ಹೀಗೆ ಹಗಲು ಕಳೆಯುತ್ತಿದ್ದಾಗ ಶ್ರೀರಾಮನು ಲಕ್ಷ್ಮಣನಲ್ಲಿ ಹೇಳಿದನು.॥4॥
ಮೂಲಮ್ - 5
ಪ್ರಯಾಗಮಭಿತಃ ಪಶ್ಯ ಸೌಮಿತ್ರೇ ಧೂಮಮುತ್ತಮಮ್ ।
ಅಗ್ನೇರ್ಭಗವತಃ ಕೇತುಂ ಮನ್ಯೇ ಸನ್ನಿಹಿತೋ ಮುನಿಃ ॥
ಅನುವಾದ
ಸುಮಿತ್ರಾನಂದನ! ಅದೋ ನೋಡು, ಪ್ರಯಾಗದ ಬಳಿ ಭಗವಾನ್ ಯಜ್ಞೇಶ್ವರನ ಧ್ವಜದಂತೆ ಉತ್ತಮ ಹೋಮ ಧೂಮ ಕಾಣುತ್ತಿದೆ. ಮುನಿವರ್ಯ ಭರದ್ವಾಜರು ಇಲ್ಲೇ ಇರುವರೆಂದು ಗೊತ್ತಾಗುತ್ತದೆ.॥5॥
ಮೂಲಮ್ - 6
ನೂನಂ ಪ್ರಾಪ್ತಾಃ ಸ್ಮ ಸಂಭೇದಂ ಗಂಗಾಯಮುನಯೋರ್ವಯಮ್ ।
ತಥಾಹಿ ಶ್ರೂಯತೇ ಶಬ್ದೋ ವಾರಿಣೋರ್ವಾರಿಘರ್ಷಜಃ ॥
ಅನುವಾದ
ನಿಶ್ಚಯವಾಗಿ ನಾವು ಗಂಗಾ-ಯಮುನೆಯರ ಸಂಗಮದ ಬಳಿಗೆ ಬಂದಿದ್ದೇವೆ; ಏಕೆಂದರೆ ಎರಡು ನದಿಗಳು ಪರಸ್ಪರ ಅಪ್ಪಳಿಸುವುದರಿಂದ ಪ್ರಕಟವಾದ ಶಬ್ದವು ಕೇಳಿಬರುತ್ತಿದೆ.॥6॥
ಮೂಲಮ್ - 7
ದಾರೂಣಿ ಪರಿಭಿನ್ನಾನಿ ವನಜೈರುಪಜೀವಿಭಿಃ ।
ಛಿನ್ನಾಶ್ಚಾಶ್ರಮೇ ಚೈತೇ ದೃಶ್ಯಂತೇ ವಿವಿಧಾ ದ್ರುಮಾಃ ॥
ಅನುವಾದ
ಕಾಡಿನಲ್ಲಿ ಉತ್ಪನ್ನವಾದ ಫಲ-ಮೂಲ ಮತ್ತು ಕಟ್ಟಿಗೆಗಳಿಂದ ಜೀವನ ನಡೆಸುವ ಜನರು ಕಡಿದು ಹಾಕಿದ ಕಟ್ಟಿಗೆಗಳು ಕಂಡುಬರುತ್ತಿದ್ದವು ಹಾಗೂ ಕಟ್ಟಿಗೆ ಕಡಿದ ನಾನಾ ವೃಕ್ಷಗಳು ಆಶ್ರಮದ ಸಮೀಪ ಕಣ್ಣಿಗೆ ಬೀಳುತ್ತಿದ್ದವು.॥7॥
ಮೂಲಮ್ - 8
ಧನ್ವಿನೌ ತೌ ಸುಖಂ ಗತ್ವಾ ಲಂಬಮಾನೇ ದಿವಾಕರೇ ।
ಗಂಗಾಯಮುನಯೋಃ ಸಂಧೌ ಪ್ರಾಪತುರ್ನಿಲಯಂ ಮುನೇಃ ॥
ಅನುವಾದ
ಹೀಗೆ ಮಾತು-ಕತೆಯಾಡುತ್ತಾ ಆ ಇಬ್ಬರು ಧನುರ್ಧರ ವೀರ ಶ್ರೀರಾಮ-ಲಕ್ಷ್ಮಣರು ಸೂರ್ಯಾಸ್ತವಾಗುತ್ತಿರುವಾಗ ಗಂಗಾ-ಯಮುನೆಯ ಸಂಗಮದ ಸಮೀಪದಲ್ಲಿದ್ದ ಭರದ್ವಾಜರ ಆಶ್ರಮವನ್ನು ತಲುಪಿದರು.॥8॥
ಮೂಲಮ್ - 9
ರಾಮಸ್ತ್ವಾಶ್ರಮಮಾಸಾದ್ಯತ್ರಾಸಯನ್ ಮೃಗಪಕ್ಷಿಣಃ ।
ಗತ್ವಾ ಮುಹೂರ್ತಮಧ್ವಾನಂ ಭರದ್ವಾಜಮುಪಾಗಮತ್ ॥
ಅನುವಾದ
ಶ್ರೀರಾಮಚಂದ್ರನು ಆಶ್ರಮದ ಸೀಮೆಗೆ ತಲುಪಿ ತನ್ನ ಧನುರ್ಧರ ವೇಷದಲ್ಲಿ ಅಲ್ಲಿಯ ಪಶು-ಪಕ್ಷಿಗಳನ್ನು ಹೆದರಿಸುತ್ತಾ ಮುಹೂರ್ತಕಾಲ ದಾರಿಯನ್ನು ನಿಶ್ಚಯಿಸಿ ಭರದ್ವಾಜ ಮುನಿಗಳ ಸಮೀಪಕ್ಕೆ ಹೋದನು.॥9॥
ಮೂಲಮ್ - 10
ತತಸ್ತ್ವಾಶ್ರಮಮಾಸಾದ್ಯ ಮುನೇರ್ದರ್ಶನಕಾಂಕ್ಷಿಣೌ ।
ಸೀತಯಾನುಗತೌ ವೀರೌ ದೂರಾದೇವಾವತಸ್ಥತುಃ ॥
ಅನುವಾದ
ಆಶ್ರಮಕ್ಕೆ ತಲುಪಿ ಮಹರ್ಷಿಯ ದರ್ಶನದ ಇಚ್ಛೆಯುಳ್ಳ ಸೀತಾಸಹಿತ ಅವರಿಬ್ಬರು ವೀರರೂ ಸ್ವಲ್ಪ ದೂರ ನಿಂತುಕೊಂಡರು.॥10॥
ಮೂಲಮ್ - 11
ಸಪ್ರವಿಶ್ಯ ಮಹಾತ್ಮಾನಮೃಷಿಂ ಶಿಷ್ಯಗಣೈರ್ವೃತಮ್ ।
ಸಂಶಿತವ್ರತಮೇಕಾಗ್ರಂ ತಪಸಾ ಲಬ್ಧಚಕ್ಷುಷಮ್ ॥
ಮೂಲಮ್ - 12
ಹುತಾಗ್ನಿಹೋತ್ರಂ ದೃಷ್ಟೈವ ಮಹಾಭಾಗಃ ಕೃತಾಂಜಲಿಃ ।
ರಾಮಃ ಸೌಮಿತ್ರಿಣಾ ಸಾರ್ಧಂ ಸೀತಯಾ ಚಾಭ್ಯವಾದಯತ್ ॥
ಅನುವಾದ
(ದೂರದಲ್ಲಿ ನಿಂತು ಮಹರ್ಷಿಯ ಶಿಷ್ಯರ ಮೂಲಕ ತಾನು ಬಂದಿರುವ ಸೂಚನೆಯನ್ನು ಕಳಿಸಿ, ಬರಲು ಅನುಮತಿಯನ್ನು ಪಡೆದು) ಪರ್ಣಶಾಲೆಯನ್ನು ಪ್ರವೇಶಿಸಿ ತಪಸ್ಸಿನ ಪ್ರಭಾವದಿಂದ ಮೂರು ಲೋಕದ ಎಲ್ಲ ಸಂಗತಿಗಳನ್ನು ನೋಡುವ ದಿವ್ಯದೃಷ್ಟಿ ಪ್ರಾಪ್ತಿಮಾಡಿಕೊಂಡು, ಏಕಾಗ್ರಚಿತ್ತ, ತೀಕ್ಷ್ಣವ್ರತ ಧಾರೀ ಮಹಾತ್ಮಾ ಭರದ್ವಾಜ ಋಷಿಯನ್ನು ದರ್ಶಿಸಿದರು. ಅವರು ಅಗ್ನಿಹೋತ್ರ ಮುಗಿಸಿ ಶಿಷ್ಯರಿಂದ ಸುತ್ತುವರೆದು ಆಸನದಲ್ಲಿ ವಿರಾಜಿಸುತ್ತಿದ್ದರು. ಮಹರ್ಷಿಯನ್ನು ನೋಡುತ್ತಲೇ ಲಕ್ಷ್ಮಣ ಮತ್ತು ಸೀತೆಯ ಸಹಿತ ಮಹಾಭಾಗ ಶ್ರೀರಾಮನು ಕೈಮುಗಿದು ಅವರ ಚರಣಗಳಿಗೆ ನಮಸ್ಕಾರ ಮಾಡಿದನು.॥11-12॥
ಮೂಲಮ್ - 13
ನ್ಯವೇದಯತ ಚಾತ್ಮಾನಂ ತಸ್ಮೈ ಲಕ್ಷ್ಮಣಪೂರ್ವಜಃ ।
ಪುತ್ರೌ ದಶರಥಸ್ಯಾವಾಂ ಭಗವನ್ ರಾಮಲಕ್ಷ್ಮಣೌ ॥
ಮೂಲಮ್ - 14
ಭಾರ್ಯಾ ಮಮೇಯಂ ಕಲ್ಯಾಣೀ ವೈದೇಹೀ ಜನಕಾತ್ಮಜಾ ।
ಮಾಂ ಚಾನುಯತಾ ವಿಜನಂ ತಪೋವನಮನಿಂದಿತಾ ॥
ಅನುವಾದ
ಅನಂತರ ಲಕ್ಷ್ಮಣನ ಅಣ್ಣನಾದ ಶ್ರೀರಾಮನು ಅವರಿಗೆ ತನ್ನ ಪರಿಚಯವನ್ನು ಕೊಡುತ್ತಾ - ಪೂಜ್ಯರೇ! ನಾವಿಬ್ಬರೂ ದಶರಥರಾಜನ ಪುತ್ರರು. ನನ್ನ ಹೆಸರು ರಾಮ ಮತ್ತು ಇವನು ಲಕ್ಷ್ಮಣನಾಗಿದ್ದಾನೆ, ಇವಳು ವಿದೇಹರಾಜನ ಪುತ್ರಿ ಮತ್ತು ಕಲ್ಯಾಣಮಯಿ ಪತ್ನೀ ಸತೀ-ಸಾಧ್ವೀ ಸೀತೆಯಾಗಿದ್ದಾಳೆ. ನಿರ್ಜನ ತಪೋವನದಲ್ಲಿಯೂ ನನ್ನೊಂದಿಗೆ ಬಂದಿರುವಳು.॥13-14॥
ಮೂಲಮ್ - 15
ಪಿತ್ರಾ ಪ್ರವ್ರಾಜ್ಯಮಾನಂ ಮಾಂ ಸೌಮಿತ್ರಿರನುಜಃ ಪ್ರಿಯಃ ।
ಅಯಮನ್ವಗಮದ್ ಭ್ರಾತಾ ವನಮೇವ ಧೃತವ್ರತಃ ॥
ಅನುವಾದ
ತಂದೆಯ ಆಜ್ಞೆಯಿಂದ ನಾನು ವನಕ್ಕೆ ಬರುವಾಗ ನನ್ನ ಪ್ರಿಯ ತಮ್ಮ ಸುಮಿತ್ರಾಕುಮಾರ ಲಕ್ಷ್ಮಣನೂ ಕಾಡಿನಲ್ಲೇ ಇರುವ ವ್ರತವನ್ನು ತೊಟ್ಟು ನನ್ನ ಹಿಂದೆ-ಹಿಂದೆ ಬಂದಿರುವನು.॥15॥
ಮೂಲಮ್ - 16
ಪಿತ್ರಾ ನಿಯುಕ್ತಾ ಭಗವನ್ ಪ್ರವೇಕ್ಷ್ಯಾಮಸ್ತಪೋವನಮ್ ।
ಧರ್ಮಮೇವಾಚರಿಷ್ಯಾಮಸ್ತತ್ರ ಮೂಲಫಲಾಶನಾಃ ॥
ಅನುವಾದ
ಪೂಜ್ಯರೇ! ಈ ಪ್ರಕಾರ ಪಿತನ ಆಜ್ಞೆಯಿಂದ ನಾವು ಮೂವರೂ ತಪೋವನಕ್ಕೆ ಹೋಗುವೆವು ಮತ್ತು ಅಲ್ಲಿ ಫಲ-ಮೂಲಗಳನ್ನು ತಿನ್ನುತ್ತಾ ಧರ್ಮವನ್ನು ಆಚರಿಸುವೆವು.॥16॥
ಮೂಲಮ್ - 17
ತಸ್ಯ ತದ್ವಚನಮಂ ಶ್ರುತ್ವಾ ರಾಜಪುತ್ರಸ್ಯ ಧೀಮತಃ ।
ಉಪಾನಯತ ಧರ್ಮಾತ್ಮಾ ಗಾಮರ್ಘ್ಯಮುದಕಂ ತತಃ ॥
ಅನುವಾದ
ಪರಮಬುದ್ಧಿವಂತ ರಾಜಕುಮಾರ ಶ್ರೀರಾಮನ ಈ ಮಾತನ್ನು ಕೇಳಿ ಧರ್ಮಾತ್ಮಾ ಭರದ್ವಾಜರು ಅವನಿಗೆ ಆತಿಥ್ಯ ಸತ್ಕಾರದಲ್ಲಿ ಒಂದು ಗೋವನ್ನು ಹಾಗೂ ಅರ್ಘ್ಯವನ್ನು ಸಮರ್ಪಿಸಿದನು.॥17॥
ಮೂಲಮ್ - 18
ನಾನಾವಿಧಾನನ್ನರಸಾನ್ ವನ್ಯಮೂಲಫಲಾಶ್ರಯಾನ್ ।
ತೇಭ್ಯೋ ದದೌ ತಪ್ತತಪಾ ವಾಸಂ ಚೈವಾಭ್ಯಕಲ್ಪಯತ್ ॥
ಅನುವಾದ
ಆ ತಪಸ್ವೀ ಮಹಾತ್ಮರು ಅವರೆಲ್ಲರಿಗೆ ನಾನಾ ಪ್ರಕಾರದ ಅನ್ನ, ರಸ ಹಾಗೂ ಕಾಡಿನ ಫಲ-ಮೂಲಗಳನ್ನು ನೀಡಿದರು. ಜೊತೆಗೆ ಅವರಿಗೆ ಉಳಕೊಳ್ಳಲು ಸ್ಥಳದ ವ್ಯವಸ್ಥೆಯನ್ನೂ ಮಾಡಿದರು.॥18॥
ಮೂಲಮ್ - 19
ಮೃಗಪಕ್ಷಿಭಿರಾಸೀನೋ ಮುನಿಭಿಶ್ಚ ಸಮಂತತಃ ।
ರಾಮಮಾಗತಮಭ್ಯರ್ಚ್ಯ ಸ್ವಾಗತೇನಾಗತಂ ಮುನಿಃ ॥
ಮೂಲಮ್ - 20
ಪ್ರತಿಗೃಹ್ಯ ತು ತಾಮರ್ಚಾಮುಪವಿಷ್ಟಂ ಸ ರಾಘವಮ್ ।
ಭರದ್ವಾಜೋಽಬ್ರವೀದ್ವಾಕ್ಯಂ ಧರ್ಮಯುಕ್ತಮಿದಂತದಾ ॥
ಅನುವಾದ
ಮಹರ್ಷಿಯ ಸುತ್ತಲೂ ಮೃಗ, ಪಕ್ಷಿ ಮತ್ತು ಋಷಿ-ಮುನಿಗಳು ಕುಳಿತಿದ್ದರು. ಅವರ ನಡುವೆ ಮುನಿಗಳು ವಿರಾಜಿಸುತ್ತಿದ್ದರು. ಅವರು ತಮ್ಮ ಆಶ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಶ್ರೀರಾಮನಿಗೆ ಸ್ವಾಗತ ಸತ್ಕಾರ ಮಾಡಿದರು. ಅವರ ಸತ್ಕಾರವನ್ನು ಸ್ವೀಕರಿಸಿ ಶ್ರೀರಾಮನು ಆಸನದಲ್ಲಿ ವಿರಾಜಮಾನಾದಾಗ ಭರದ್ವಾಜರು ಅವನಲ್ಲಿ ಈ ಧರ್ಮಯುಕ್ತ ಮಾತನ್ನಾಡಿದರು.॥19-20॥
ಮೂಲಮ್ - 21
ಚಿರಸ್ಯ ಖಲು ಕಾಕುತ್ಸ್ಥ ಪಶ್ಯಾಮ್ಯಹಮುಪಾಗತಮ್ ।
ಶ್ರುತಂ ತವಮಯಾ ಚೈವ ವಿವಾಸನಮಕಾರಣಮ್ ॥
ಅನುವಾದ
ಕಕುತ್ಸ್ಥಕುಲಭೂಷಣ ಶ್ರೀರಾಮಾ! ನಾನು ಈ ಆಶ್ರಮದಲ್ಲಿ ದೀರ್ಘಕಾಲದಿಂದ ನಿನ್ನ ಶುಭಾಗಮನವನ್ನು ಪ್ರತೀಕ್ಷಿಸುತ್ತಿದ್ದೆ. (ಇಂದು ನನ್ನ ಮನೋರಥ ಸಫಲವಾಯಿತು) ನಿನಗೆ ಅಕಾರಣವಾಗಿ ವನವಾಸ ವಿಧಿಸಲಾಗಿದೆ ಎಂದು ನಾನು ಕೇಳಿರುವೆನು.॥21॥
ಮೂಲಮ್ - 22
ಅವಕಾಶೋ ವಿವಿಕ್ತೋಽಯಂ ಮಹಾನದ್ಯೋಃ ಸಮಾಗಮೇ ।
ಪುಣ್ಯಶ್ಚ ರಮಣೀಯಶ್ಚ ವಸತ್ವಿಹ ಭವಾನ್ ಸುಖಮ್ ॥
ಅನುವಾದ
ಗಂಗಾ-ಯಮುನಾ ಈ ಎರಡು ಮಹಾನದಿಗಳ ಸಂಗಮದ ಸಮೀಪದ ಈ ಸ್ಥಾನ ಬಹಳ ಪವಿತ್ರ ಹಾಗೂ ಏಕಾಂತವಾಗಿದೆ. ಇಲ್ಲಿಯ ಪ್ರಾಕೃತಿಕ ನೋಟವೂ ಮನೋಹರವಾಗಿದೆ. ಆದ್ದರಿಂದ ನೀನು ಇಲ್ಲೇ ಸುಖವಾಗಿವಾಸಿಸು.॥22॥
ಮೂಲಮ್ - 23
ಏವಮುಕ್ತಸ್ತು ವಚನಂ ಭರದ್ವಾಜೇನ ರಾಘವಃ ।
ಪ್ರತ್ಯುವಾಚ ಶುಭಂ ವಾಕ್ಯಂ ರಾಮಃ ಸರ್ವಹಿತೇ ರತಃ ॥
ಅನುವಾದ
ಭರದ್ವಾಜ ಮುನಿಗಳು ಹೀಗೆ ಹೇಳಿದಾಗ ಸಮಸ್ತಪ್ರಾಣಿಗಳ ಹಿತದಲ್ಲಿ ತತ್ಪರನಾದ ರಘುಕುಲನಂದನ ಶ್ರೀರಾಮನು ಶುಭವಾಕ್ಯಗಳಿಂದ ಹೀಗೆ ಉತ್ತರಿಸಿದನು.॥23॥
ಮೂಲಮ್ - 24
ಭಗವನ್ನಿತ ಆಸನ್ನಃ ಪೌರಜಾನಪದೋ ಜನಃ ।
ಸುದರ್ಶಮಿಹ ಮಾಂ ಪ್ರೇಕ್ಷ್ಯ ಮನ್ಯೇಽಹಮಿಮಮಾಶ್ರಮಮ್ ॥
ಮೂಲಮ್ - 25
ಆಗಮಿಷ್ಯತಿ ವೈದೇಹೀಂ ಮಾಂ ಚಾಪಿ ಪ್ರೇಕ್ಷಕೋ ಜನಃ ।
ಅನೇನ ಕಾರಣೇನಾಹಮಿಹ ವಾಸಂನ ರೋಚಯೇ ॥
ಅನುವಾದ
ಪೂಜ್ಯರೇ! ನನ್ನ ನಗರ ಮತ್ತು ಕೋಸಲದ ಜನರು ಇಲ್ಲಿಗೆ ಬಹಳ ಹತ್ತಿರದಲ್ಲೇ ಇದ್ದಾರೆ. ಆದ್ದರಿಂದ ಇಲ್ಲಿ ನನ್ನೊಂದಿಗೆ ಭೆಟ್ಟಿಯಾಗುವುದು ಸುಲಭವೆಂದು ತಿಳಿದು ಈ ಆಶ್ರಮಕ್ಕೆ ನನ್ನನ್ನು ಮತ್ತು ಸೀತೆಯನ್ನು ನೋಡಲು ಬಂದು-ಹೋಗುತ್ತಾ ಇರುವರು. ಇದರಿಂದ ಇಲ್ಲಿ ವಾಸಿಸುವುದು ಸರಿ ಎಂದು ನನಗೆ ತೋರುವುದಿಲ್ಲ.॥24-25॥
ಮೂಲಮ್ - 26
ಏಕಾಂತೇ ಪಶ್ಯ ಭಗವನ್ನಾಶ್ರಮಸ್ಥಾನಮುತ್ತಮಮ್ ।
ರಮತ ಯತ್ರ ವೈದೇಹೀಸುಖಾರ್ಹಾ ಜನಕಾತ್ಮಜಾ ॥
ಅನುವಾದ
ಸ್ವಾಮಿ! ಯಾವುದಾದರೂ ಏಕಾಂತ ಪ್ರದೇಶದಲ್ಲಿ ಆಶ್ರಮಕ್ಕೆ ಯೋಗ್ಯವಾದ ಉತ್ತಮ ಸ್ಥಾನವನ್ನು ಯೋಚಿಸಿ ತಿಳಿಸಿರಿ. ಅಲ್ಲಿ ಸುಖವನ್ನು ಅನುಭವಿಸಲು ಯೋಗ್ಯಳಾದ ಸೀತೆಯು ಸಂತೋಷದಿಂದ ಇರಬಲ್ಲಳು.॥26॥
ಮೂಲಮ್ - 27
ಏತಚ್ಛ್ರುತ್ವಾ ಶುಭಂ ವಾಕ್ಯಂ ಭರದ್ವಾಜೋ ಮಹಾಮುನಿಃ ।
ರಾಘವಸ್ಯ ತು ತದ್ವಾಕ್ಯಮರ್ಥಗ್ರಾಹಕಮಬ್ರವೀತ್ ॥
ಅನುವಾದ
ಶ್ರೀರಾಮ ಚಂದ್ರನ ಈ ಶುಭವಚನವನ್ನು ಕೇಳಿ, ಮಹಾಮುನಿ ಭರದ್ವಾಜರು ಅವನು ಹೇಳಿದ ಉದ್ದೇಶದ ಸಿದ್ಧಿಗಾಗಿ ಈ ಮಾತನ್ನು ಹೇಳಿದರು.॥27॥
ಮೂಲಮ್ - 28
ದಶಕ್ರೋಶ ಇತಸ್ತಾತ ಗಿರಿರ್ಯಸ್ಮಿನ್ನಿವತ್ಸ್ಯಸಿ ।
ಮಹರ್ಷಿಸೇವಿತಃ ಪುಣ್ಯಃ ಪರ್ವತಃ ಶುಭದರ್ಶನಃ ॥
ಅನುವಾದ
ಅಯ್ಯಾ! ಇಲ್ಲಿಂದ ಹತ್ತು ಹರದಾರಿ (ಕ್ರೋಶ) (ಇತರ ವ್ಯಾಖ್ಯಾನಕಾರರ ಪ್ರಕಾರ 30 ಹರದಾರಿ) ದೂರದಲ್ಲಿ ಒಂದು ಸುಂದರ ಮತ್ತು ಮಹರ್ಷಿಗಳಿಂದ ಸೇವಿತ ಪರಮಪವಿತ್ರ ಪರ್ವತವಿದೆ. ಅಲ್ಲಿ ನೀವು ವಾಸಿಸಬಹುದು.॥28॥
ಮೂಲಮ್ - 29
ಗೋಲಾಂಗೂಲಾನುಚರಿತೋ ವಾನರರ್ಕ್ಷನಿಷೇವಿತಃ ।
ಚಿತ್ರಕೂಟ ಇತಿ ಖ್ಯಾತೋ ಗಂಧಮಾದನಸಂನಿಭಃ ॥
ಅನುವಾದ
ಅದು ಗೋಲಾಂಗೂಲಗಳಿಂದಲೂ, ಕಪಿಗಳಿಂದಲೂ, ಕರಡಿಗಳಿಂದಲೂ ತುಂಬಿದೆ. ಗಂಧಮಾದನ ಪರ್ವತಕ್ಕೆ ಸದೃಶವಾಗಿರುವ ಆ ಪರ್ವತಕ್ಕೆ ಚಿತ್ರಕೂಟವೆಂದು ಹೆಸರು.॥29॥
ಮೂಲಮ್ - 30
ಯಾವತಾ ಚಿತ್ರಕೂಟಸ್ಯ ನರಃ ಶೃಂಗಾಣ್ಯವೇಕ್ಷತೇ ।
ಕಲ್ಯಾಣಾನಿ ಸಮಾಧತ್ತೇ ನ ಪಾಪೇ ಕುರುತೇ ಮನಃ ॥
ಅನುವಾದ
ಚಿತ್ರಕೂಟ ಶಿಖರಗಳನ್ನು ದರ್ಶಿಸುವವರು ಕಲ್ಯಾಣಕರ ಪುಣ್ಯಕರ್ಮಗಳ ಫಲಗಳನ್ನು ಪಡೆಯುತ್ತಾನೆ ಮತ್ತು ಎಂದಿಗೂ ಪಾಪಗಳಿಗೆ ಮನಗೊಡುವುದಿಲ್ಲ.॥30॥
ಮೂಲಮ್ - 31
ಋಷಯಸ್ತತ್ರಬಹವೋ ವಿಹೃತ್ಯ ಶರದಾಂ ಶತಮ್ ।
ತಪಸಾ ದಿವಮಾರೂಢಾಃ ಕಪಾಲಶಿರಸಾ ಸಹ ॥
ಅನುವಾದ
ಅಲ್ಲಿ ವೃದ್ಧಾವಸ್ಥೆಯ ಕಾರಣ ತಲೆಗೂದಲು ನೆರೆತ ಅನೇಕ ಋಷಿಗಳು ನೂರಾರು ವರ್ಷಗಳಕಾಲ ತಪಸ್ಸನ್ನು ಮಾಡುತ್ತಾ ವಿಹರಿಸುತ್ತಾ ಸಶರೀರರಾಗಿಯೇ ಸ್ವರ್ಗಕ್ಕೆ ತೆರಳಿದರು.॥31॥
ಮೂಲಮ್ - 32
ಪ್ರವಿವಿಕ್ತಮಹಂ ಮನ್ಯೇ ತಂ ವಾಸಂ ಭವತಃ ಸುಖಮ್ ।
ಇಹ ವಾ ವನವಾಸಾಯ ವಸ ರಾಮ ಮಯಾ ಸಹ ॥
ಅನುವಾದ
ಅದೇ ಪರ್ವತವನ್ನು ನಿನಗಾಗಿ ಏಕಾಂತವಾಸಕ್ಕೆ ಯೋಗ್ಯ ಮತ್ತು ಸುಖಮಯವೆಂದು ನಾನು ತಿಳಿಯುತ್ತೇನೆ ಅಥವಾ ಶ್ರೀರಾಮಾ! ನೀನು ವನವಾಸದ ಉದ್ದೇಶದಿಂದ ನನ್ನೊಂದಿಗೆ ಇದೇ ಆಶ್ರಮದಲ್ಲಿ ಇರು.॥32॥
ಮೂಲಮ್ - 33
ಸ ರಾಮಂ ಸರ್ವಕಾಮೈಸ್ತಂ ಭರದ್ವಾಜಃ ಪ್ರಿಯಾತಿಥಿಮ್ ।
ಸಭಾರ್ಯಂ ಸಹ ಚ ಭ್ರಾತ್ರಾ ಪ್ರತಿಜಗ್ರಾಹ ಹರ್ಷಯನ್ ॥
ಅನುವಾದ
ಹೀಗೆ ಹೇಳಿ ಭರದ್ವಾಜರು ಸೀತಾ-ಲಕ್ಷ್ಮಣ ಸಹಿತ ಪ್ರಿಯ ಅತಿಥಿ ಶ್ರೀರಾಮನ ಹರ್ಷವನ್ನು ಹೆಚ್ಚಿಸುತ್ತಾ ಎಲ್ಲ ರೀತಿಯ ಮನೋವಾಂಛಿತ ವಸ್ತುಗಳಿಂದ ಅವರೆಲ್ಲರ ಅತಿಥಿಸತ್ಕಾರ ಮಾಡಿದರು.॥33॥
ಮೂಲಮ್ - 34
ತಸ್ಯ ಪ್ರಯಾಗೇ ರಾಮಸ್ಯ ತಂ ಮಹರ್ಷಿಮುಪೇಯುಷಃ ।
ಪ್ರಪನ್ನಾ ರಜನೀ ಪುಣ್ಯಾ ಚಿತ್ರಾಃ ಕಥಯತಃ ಕಥಾಃ ॥
ಅನುವಾದ
ಪ್ರಯಾಗದಲ್ಲಿ ಶ್ರೀರಾಮಚಂದ್ರನು ಮಹರ್ಷಿಗಳ ಬಳಿ ಕುಳಿತು ವಿಚಿತ್ರ ಮಾತುಗಳನ್ನಾಡುತ್ತಾ ಇದ್ದನು, ಅಷ್ಟರಲ್ಲಿ ಪುಣ್ಯಮಯ ರಾತ್ರಿಯ ಆಗಮನವಾಯಿತು.॥34॥
ಮೂಲಮ್ - 35
ಸೀತಾತೃತೀಯಃ ಕಾಕುತ್ಸ್ಥಃ ಪರಿಶ್ರಾಂತಃ ಸುಖೋಚಿತಃ ।
ಭರದ್ವಾಜಾಶ್ರಮೇ ರಮ್ಯೇ ತಾಂ ರಾತ್ರಿಮವಸತ್ಸುಖಮ್ ॥
ಅನುವಾದ
ಸುಖವನ್ನು ಅನುಭವಿಸಲು ಯೋಗ್ಯರಾದ ಅವರು ಬಹಳ ಬಳಲಿಹೋಗಿದ್ದರು; ಅದರಿಂದ ಭರದ್ವಾಜರ ಮನೋಹರ ಆಶ್ರಮದಲ್ಲಿ ಶ್ರೀರಾಮನು ಲಕ್ಷ್ಮಣ ಮತ್ತು ಸೀತೆಯೊಂದಿಗೆ ಸುಖವಾಗಿ ಆ ರಾತ್ರಿಯನ್ನು ಕಳೆದರು.॥35॥
ಮೂಲಮ್ - 36
ಪ್ರಭಾತಾಯಾಂ ತು ಶರ್ವರ್ಯಾಂ ಭರದ್ವಾಜಮುಪಾಗಮತ್ ।
ಉವಾಚ ನರಶಾರ್ದೂಲೋ ಮುನಿಂ ಜ್ವಲಿತತೇಜಸಮ್ ॥
ಅನುವಾದ
ಅನಂತರ ರಾತ್ರಿ ಕಳೆದು ಪ್ರಾತಃಕಾಲವಾದಾಗ ಪುರುಷಸಿಂಹ ಶ್ರೀರಾಮನು ಪ್ರಜ್ವಲಿತ ಅಗ್ನಿಯಂತೆ ತೇಜಸ್ಸುಳ್ಳ ಭರದ್ವಾಜ ಮುನಿಯ ಬಳಿಗೆ ಬಂದು ಹೇಳಿದನು.॥36॥
ಮೂಲಮ್ - 37
ಶರ್ವರೀಂ ಭಗವನ್ನದ್ಯ ಸತ್ಯಶೀಲ ತವಾಶ್ರಮೇ ।
ಉಷಿತಾಃ ಸ್ಮೋಽಹ ವಸತಿಮನುಜಾನಾತು ನೋ ಭವಾನ್ ॥
ಅನುವಾದ
ಪೂಜ್ಯರೇ! ತಾವು ಸ್ವಭಾವತಃ ಸತ್ಯವನ್ನೇ ಮಾತನಾಡುವವರು. ಇಂದು ನಾವು ನಿಮ್ಮ ಆಶ್ರಮದಲ್ಲಿ ಬಹಳ ಸುಖವಾಗಿ ರಾತ್ರೆಯನ್ನು ಕಳೆದೆವು. ಈಗ ನೀವು ಮುಂದಿನ ನಮ್ಮ ಗಂತವ್ಯ-ಸ್ಥಾನಕ್ಕೆ ಹೋಗಲು ಅಪ್ಪಣೆ ಕೊಡಿರಿ.॥37॥
ಮೂಲಮ್ - 38½
ರಾತ್ರ್ಯಾಂ ತು ತಸ್ಯಾಂ ವ್ಯಷ್ಟಾಯಾಂ ಭರದ್ವಾಜೋಽಬ್ರವೀದಿದಮ್ ।
ಮಧುಮೂಲಫಲೋಪೇತಂ ಚಿತ್ರಕೂಟಂ ವ್ರಜೇತಿ ಹ ॥
ವಾಸಮೌಪಯಿಕಂ ಮನ್ಯೇ ತವ ರಾಮ ಮಹಾಬಲ ।
ಅನುವಾದ
ರಾತ್ರಿ ಕಳೆದು ಬೆಳಗಾದಾಗ ಶ್ರೀರಾಮನು ಹೀಗೆ ಕೇಳಿದಾಗ ಭರದ್ವಾಜರು ಹೇಳಿದರು - ಮಹಾಬಲಿ ಶ್ರೀರಾಮ! ನೀನು ಮಧುರ ಫಲ-ಮೂಲಗಳಿಂದ ಸಂಪನ್ನ ಚಿತ್ರಕೂಟ ಪರ್ವತಕ್ಕೆ ಹೋಗು. ನಾನು ಅದನ್ನೇ ನಿನಗಾಗಿ ಉಪಯುಕ್ತ ನಿವಾಸಸ್ಥಾನವೆಂದು ತಿಳಿಯುತ್ತೇನೆ.॥38॥
ಮೂಲಮ್ - 39
ನಾನಾನಗಗಣೋಪೇತಃ ಕಿನ್ನರೋರಗಸೇವಿತಃ ॥
ಮೂಲಮ್ - 40
ಮಯೂರನಾದಾಭಿರತೋ ಗಜರಾಜನಿಷೇವಿತಃ ।
ಗಮ್ಯತಾಂ ಭವತಾ ಶೈಲಶ್ಚಿತ್ರಕೂಟಃ ಸ ವಿಶ್ರುತಃ ॥
ಅನುವಾದ
ಆ ಸುವಿಖ್ಯಾತ ಚಿತ್ರಕೂಟ ಪರ್ವತವು ನಾನಾ ಪ್ರಕಾರದ ವೃಕ್ಷಗಳಿಂದ ವ್ಯಾಪ್ತವಾಗಿ, ಅಲ್ಲಿ ಅನೇಕ ಕಿನ್ನರರು ಮತ್ತು ಸರ್ಪಗಳು ವಾಸಿಸುತ್ತವೆ. ನವಿಲುಗಳ ಕಲರವದಿಂದ ಅದು ಇನ್ನೂ ರಮಣೀಯವಾಗಿ ಕಾಣುತ್ತದೆ. ಅನೇಕ ಗಜ ರಾಜಗಳು ಆ ಪರ್ವತದಲ್ಲಿ ಸಂಚರಿಸುತ್ತವೆ. ನೀನು ಅಲ್ಲಿಗೆ ಹೋಗು.॥39-40॥
ಮೂಲಮ್ - 41
ಪುಣ್ಯಶ್ಚ ರಮಣೀಯಶ್ಚ ಬಹುಮೂಲಫಲಾಯುತಃ ।
ತತ್ರ ಕುಂಜರಯೂಥಾನಿ ಮೃಗಯೂಥಾನಿ ಚೈವಹಿ ॥
ಮೂಲಮ್ - 42
ವಿಚರಂತಿ ವನಾಂತೇಷು ತಾನಿ ದ್ರಕ್ಷ್ಯಸಿ ರಾಘವ ।
ಸರಿತ್ಪ್ರಸ್ರವಣಪ್ರಸ್ಥಾನ್ ದರೀಕಂದರನಿರ್ಝರಾನ್ ।
ಚರತಃ ಸೀತಯಾ ಸಾರ್ಧಂ ನಂದಿಷ್ಯತಿ ಮನಸ್ತವ ॥
ಅನುವಾದ
ಆ ಪರ್ವತವು ಪರಮಪವಿತ್ರ, ರಮಣೀಯ ಹಾಗೂ ಅಸಂಖ್ಯ ಫಲ-ಮೂಲಗಳಿಂದ ಸಂಪನ್ನವಾಗಿದೆ. ಅಲ್ಲಿ ಆನೆಗಳ ಹಿಂಡುಗಳು ಮತ್ತು ಜಿಂಕೆಗಳು ಕಾಡಿನಲ್ಲಿ ಓಡಾಡುತ್ತಿರುವವು. ರಘುನಂದನ! ನೀನು ಅವೆಲ್ಲವನ್ನು ಪ್ರತ್ಯಕ್ಷವಾಗಿ ನೋಡುವೆಯಂತೆ. ಮಂದಾಕಿನೀ ನದೀ, ಅನೇಕ ಜಲಪಾತಗಳು, ಪರ್ವತ ಶಿಖರಗಳು, ಗುಹೆಗಳು, ಕಂದಕಗಳು, ಸಣ್ಣ-ಸಣ್ಣ ಝರಿಗಳು ನಿನಗೆ ಕಂಡುಬರುವವು. ಆ ಪರ್ವತವು ಸೀತೆಯೊಂದಿಗೆ ವಿಚರಿಸುವ ನಿನ್ನ ಮನಸ್ಸಿಗೆ ಮುದ ನೀಡುವುದು.॥41-42॥
ಮೂಲಮ್ - 43
ಪ್ರಹೃಷ್ಟಕೋಯಷ್ಟಿಭಕೋಕಿಲಸ್ವನೈ-
ರ್ವಿನೋದಯಂತ ಚ ಸುಖಂ ಪರಂ ಶಿವಮ್ ।
ಮೃಗೈಶ್ಚ ಮತ್ತೈರ್ಬಹುಭಿಶ್ಚ ಕುಂಜರೈಃ
ಸುರಮ್ಯಮಾಸಾದ್ಯ ಸಮಾವಸಾಶ್ರಯಮ್ ॥
ಅನುವಾದ
ಹರ್ಷದಿಂದ ಟಿಟ್ಟಿಭ ಪಕ್ಷಿಗಳು ಮತ್ತು ಕೋಗಿಲೆಗಳ ಕಲರವದಿಂದ ಆ ಪರ್ವತವು ಯಾತ್ರಿಗಳ ಮನೋರಂಜನೆ ಮಾಡುವಂತಿದೆ. ಅದು ಪರಮ ಸುಖಮಯ, ಕಲ್ಯಾಣಕಾರಿಯಾಗಿದೆ. ಮದಮತ್ತ ಮೃಗಗಳಿಂದ ಮತ್ತು ಅಸಂಖ್ಯ ಮತ್ತಗಜಗಳಿಂದ ಅದರ ರಮಣೀಯತೆ ಹೆಚ್ಚಾಗಿದೆ. ನೀನು ಅದೇ ಪರ್ವತಕ್ಕೆ ಹೋಗಿ ಆಶ್ರಮ ರಚಿಸಿ ಅದರಲ್ಲಿ ವಾಸಿಸು.॥43॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಐವತ್ತನಾಲ್ಕನೆಯ ಸರ್ಗ ಪೂರ್ಣವಾಯಿತು.॥54॥