वाचनम्
ಭಾಗಸೂಚನಾ
ಕೈಕೇಯಿಯಿಂದ ಕೌಸಲ್ಯೆಯೇ ಮೊದಲಾದವರಿಗೆ ತೊಂದರೆಯಾಗುವುದೆಂದು ಹೇಳಿ ಶ್ರೀರಾಮನು ಲಕ್ಷ್ಮಣನನ್ನು ಅಯೋಧ್ಯೆಗೆ ಕಳಿಸಲು ಪುನಃ ಪ್ರಯತ್ನಿಸಿದುದು, ಶ್ರೀರಾಮನಿಲ್ಲದೆ ನನ್ನ ಜೀವನವೇ ಉಳಿಯದು ಎಂದು ಹೇಳಿ ಲಕ್ಷ್ಮಣನು ಅಯೋಧ್ಯೆಗೆ ಹಿಂದಿರುಗಲು ನಿರಾಕರಿಸಿದುದು, ಶ್ರೀರಾಮನು ಲಕ್ಷ್ಮಣನಿಗೆ ಜೊತೆಯಲ್ಲಿಯೇ ಇರಲು ಹೇಳಿ ಸಮಾಧಾನಗೊಳಿಸಿದುದು
ಮೂಲಮ್ - 1
ಸ ತಂ ವೃಕ್ಷಂ ಸಮಾಸಾದ್ಯ ಸಂಧ್ಯಾಮನ್ವಾಸ್ಯ ಪಶ್ಚಿಮಾಮ್ ।
ರಾಮೋ ರಮಯತಾಂ ಶ್ರೇಷ್ಠ ಇತಿ ಹೋವಾಚ ಲಕ್ಷ್ಮಣಮ್ ॥
ಅನುವಾದ
ಆ ವೃಕ್ಷದ ಕೆಳಗೆ ತಲುಪಿ ಆನಂದಪ್ರದಾನ ಮಾಡುವವರಲ್ಲಿ ಶ್ರೇಷ್ಠ ಶ್ರೀರಾಮನು ಸಾಯಂ ಸಂಧ್ಯಾವಂದನೆ ಮಾಡಿ ಲಕ್ಷ್ಮಣನಲ್ಲಿ ಈ ಪ್ರಕಾರ ಹೇಳಿದನು.॥1॥
ಮೂಲಮ್ - 2
ಅದ್ಯೇಯಂ ಪ್ರಥಮಾ ರಾತ್ರಿರ್ಯಾತಾ ಜನಪದಾದ್ಬಿಹಿಃ ।
ಯಾ ಸುಮಂತ್ರೇಣ ರಹಿತಾ ತಾಂ ನೋತ್ಕಂಠಿತುಮರ್ಹಸಿ ॥
ಅನುವಾದ
ಸುಮಿತ್ರಾನಂದನ! ಇಂದು ನಮಗೆ ನಮ್ಮ ದೇಶದಿಂದ ಹೊರಗೆ ಇದು ಪ್ರಥಮ ರಾತ್ರಿ ಪ್ರಾಪ್ತವಾಗಿದೆ. ಈಗ ಸುಮಂತ್ರನು ನಮ್ಮ ಜೊತೆಗಿಲ್ಲ. ಇಂದಿನ ರಾತ್ರಿಯಲ್ಲಿ ನೀನು ನಗರದ ಸುಖ-ಸೌಲಭ್ಯಗಳಿಗಾಗಿ ಉತ್ಕಂಠಿತನಾಗಬಾರದು.॥2॥
ಮೂಲಮ್ - 3
ಜಾಗರ್ತವ್ಯಮತಂದ್ರಿಭ್ಯಾಮದ್ಯಪ್ರಭೃತಿ ರಾತ್ರಿಷು ।
ಯೋಗಕ್ಷೇಮೌ ಹಿ ಸೀತಾಯಾ ವರ್ತೇತೇ ಲಕ್ಷ್ಮಣಾವಯೋಃ ॥
ಅನುವಾದ
ಲಕ್ಷ್ಮಣ! ಇಂದಿನಿಂದ ನಾವಿಬ್ಬರೂ ಆಲಸ್ಯವನ್ನು ಬಿಟ್ಟು ರಾತ್ರಿಯಲ್ಲಿ ಎಚ್ಚರವಾಗಿರಬೇಕಾಗುವುದು, ಏಕೆಂದರೆ ಸೀತೆಯ ಯೋಗಕ್ಷೇಮವು ನಮ್ಮಿಬ್ಬರ ಹೊಣೆಯಾಗಿದೆ.॥3॥
ಮೂಲಮ್ - 4
ರಾತ್ರಿಂ ಕಥಂಚಿದೇವೇಮಾಂ ಸೌಮಿತ್ರೇ ವರ್ತಯಾಮಹೇ ।
ಅಪಾವರ್ತಾಮಹೇ ಭೂಮಾವಾಸ್ತೀರ್ಯ ಸ್ವಯಮರ್ಜಿತೈಃ ॥
ಅನುವಾದ
ಸುಮಿತ್ರಾನಂದನ! ಈ ರಾತ್ರಿಯನ್ನು ನಾವು ಹೇಗೋ ಕಳೆಯುವೆವು ಹಾಗೂ ಸ್ವತಃ ಸಂಗ್ರಹಿಸಿ ತಂದಿರುವ ಹುಲ್ಲು ಮತ್ತು ಎಲೆಗಳ ಶಯ್ಯೆಯನ್ನು ಮಾಡಿ ನೆಲದಲ್ಲಿ ಅದನ್ನು ಹಾಸಿ ಹೇಗೋ ಮಲಗುವೆವು.॥4॥
ಮೂಲಮ್ - 5
ಸ ತು ಸಂವಿಶ್ಯ ಮೇದಿನ್ಯಾಂ ಮಹಾರ್ಹಶಯನೋಚಿತಃ ।
ಇಮಾಃ ಸೌಮಿತ್ರಯೇ ರಾಮೋ ವ್ಯಾಜಹಾರ ಕಥಾಃಶುಭಾಃ ॥
ಅನುವಾದ
ಬಹುಮೂಲ್ಯ ಶಯ್ಯೆಯಲ್ಲಿ ಮಲಗಲು ಯೋಗ್ಯನಾಗಿದ್ದ ಶ್ರೀರಾಮನು ಭೂಮಿಯಲ್ಲಿ ಕುಳಿತುಕೊಂಡು ಸುಮಿತ್ರಾ ಕುಮಾರ ಲಕ್ಷ್ಮಣನಲ್ಲಿ ಈ ಶುಭ ಮಾತನ್ನು ಹೇಳತೊಡಗಿದನು.॥5॥*
ಟಿಪ್ಪನೀ
*6ನೆಯ ಶ್ಲೋಕದಿಂದ 26ರವರೆಗೆ ಶ್ರೀರಾಮನು ಹೇಳಿದ ಮಾತನ್ನು ಲಕ್ಷ್ಮಣನ ಪರೀಕ್ಷೆಗಾಗಿ ಮತ್ತು ಅವನನ್ನು ಅಯೋಧ್ಯೆಗೆ ಮರಳಿ ಕಳಿಸಿಕೊಡಲು ಹೇಳಿರುವನು ; ನಿಜವಾಗಿ ಅವನಿಗೆ ಅಂತಹ ಯೋಚನೆಯೇನೂ ಇರಲಿಲ್ಲ. ಇದೇ ಮಾತನ್ನು ಎಲ್ಲ ವ್ಯಾಖ್ಯಾನಕಾರರು ಸ್ವೀಕರಿಸುವರು.
ಮೂಲಮ್ - 6
ಧ್ರುವಮದ್ಯ ಮಹಾರಾಜೋ ದುಃಖಂ ಸ್ವಪಿತಿ ಲಕ್ಷ್ಮಣ ।
ಕೃತಕಾಮಾ ತು ಕೈಕೇಯೀ ತುಷ್ಟಾ ಭವಿತುಮರ್ಹತಿ ॥
ಅನುವಾದ
ಲಕ್ಷ್ಮಣ! ಇಂದು ಮಹಾರಾಜರು ನಿಶ್ಚಯವಾಗಿಯೂ ತುಂಬಾ ದುಃಖದಿಂದ ಮಲಗಿರಬಹುದು; ಆದರೆ ಕೈಕೇಯಿಯು ಸಫಲ ಮನೋರಥಳಾದ ಕಾರಣ ಬಹಳ ಸಂತುಷ್ಟಳಾಗಿರಬಹುದು.॥6॥
ಮೂಲಮ್ - 7
ಸಾ ಹಿ ದೇವೀ ಮಹಾರಾಜಂ ಕೈಕೇಯೀ ರಾಜ್ಯಕಾರಣಾತ್ ।
ಅಪಿ ನ ಚ್ಯಾವಯೇತ್ಪ್ರಾಣಾನ್ ದೃಷ್ಟ್ವಾ ಭರತಮಾಗತಮ್ ॥
ಅನುವಾದ
ರಾಣೀ ಕೈಕೇಯಿಯು ಭರತನು ಬಂದಿರುವುದನ್ನು ನೋಡಿ ರಾಜ್ಯಕ್ಕಾಗಿ ಮಹಾರಾಜರನ್ನು ಪ್ರಾಣಗಳಿಂದಲೂ ಕೂಡ ವಿಮುಕ್ತಿಕೊಡದೆ ಇರಲಿ.॥7॥
ಮೂಲಮ್ - 8
ಅನಾಥಶ್ಚ ಹಿ ವೃದ್ಧಶ್ಚ ಮಯಾ ಚೈವ ವಿನಾ ಕೃತಃ ।
ಕಿಂ ಕರಿಷ್ಯತಿ ಕಾಮಾತ್ಮಾ ಕೈಕೇಯ್ಯಾವಶಮಾಗತಃ ॥
ಅನುವಾದ
ಮಹಾರಾಜರಿಗೆ ಯಾರೂ ರಕ್ಷಕರು ಇಲ್ಲದಿರುವ ಕಾರಣ ಅವರು ಈಗ ಅನಾಥರಾಗಿದ್ದಾರೆ, ಮುದುಕರಾಗಿದ್ದಾರೆ ಮತ್ತು ಅವರಿಗೆ ನನ್ನ ವಿಯೋಗವನ್ನು ಎದುರಿಸಬೇಕಾಯಿತು. ಅವರ ಕಾಮನೆ ಮನಸ್ಸಿನಲ್ಲೇ ಉಳಿದು, ಅವರು ಕೈಕೇಯಿಯ ವಶರಾಗಿದ್ದಾರೆ; ಇಂತಹ ಸ್ಥಿತಿಯಲ್ಲಿ ಬಡಪಾಯಿ ಅವರು ತನ್ನ ರಕ್ಷಣೆಗಾಗಿ ಏನು ಮಾಡುತ್ತಿರುವರೋ.॥8॥
ಮೂಲಮ್ - 9
ಇದಂ ವ್ಯಸನಮಾಲೋಕ್ಯ ರಾಜ್ಞಶ್ಚ ಮತಿವಿಭ್ರಮಮ್ ।
ಕಾಮ ಏವಾರ್ಥಧರ್ಮಾಭ್ಯಾಂ ಗರೀಯಾನಿತಿ ಮೇ ಮತಿಃ ॥
ಅನುವಾದ
ನಮ್ಮ ಮೇಲೆ ಬಂದೆರಗಿದ ಈ ಸಂಕಟ ಮತ್ತು ರಾಜರ ಮತಿಭ್ರಾಂತಿಯನ್ನು ನೋಡಿದರೆ ಅರ್ಥ ಮತ್ತು ಧರ್ಮಕ್ಕಿಂತಲೂ ಕಾಮವೇ ಹೆಚ್ಚು ಗೌರವಶಾಲಿಯಾಗಿದೆ ಎಂದು ನನಗೆ ಅನಿಸುತ್ತದೆ.॥9॥
ಮೂಲಮ್ - 10
ಕೋ ಹ್ಯವಿದ್ವಾನಪಿ ಪುಮಾನ್ಪ್ರವದಾಯಾಃ ಕೃತೇ ತ್ಯಜೇತ್ ।
ಛಂದಾನುವರ್ತಿನಂ ಪುತ್ರಂ ತಾತೋ ಮಾಮಿವ ಲಕ್ಷ್ಮಣ ॥
ಅನುವಾದ
ಲಕ್ಷ್ಮಣ! ತಂದೆಯವರು ನನ್ನನ್ನು ತ್ಯಜಿಸಿದಂತೆ, ಅತ್ಯಂತ ಅಜ್ಞಾನಿಯಾಗಿದ್ದರೂ ಒಂದು ಸ್ತ್ರೀಗಾಗಿ ತನ್ನ ಆಜ್ಞಾಕಾರೀ ಪುತ್ರನನ್ನು ಪರಿತ್ಯಾಗ ಮಾಡುವ ಪುರುಷ ಯಾರು ತಾನೇ ಇರಬಲ್ಲನು.॥10॥
ಮೂಲಮ್ - 11
ಸುಖೀ ಬತ ಸುಭಾರ್ಯಶ್ಚ ಭರತಃ ಕೇಕಯೀಸುತಃ ।
ಮುದಿತಾನ್ ಕೋಸಲಾನೇಕೋ ಯೋ ಭೋಕ್ಷ್ಯತ್ಯಧಿರಾಜವತ್ ॥
ಅನುವಾದ
ಕೈಕೇಯಿಕುಮಾರ ಭರತನೂ ಕೂಡ ಸುಖೀ ಮತ್ತು ಸೌಭಾಗ್ಯವತಿ ಸ್ತ್ರೀಯ ಪತಿಯಾಗಿದ್ದಾನೆ. ಅವನು ಒಬ್ಬನೇ ಹೃಷ್ಟ-ಪುಷ್ಟ ಮನುಷ್ಯರಿಂದ ತುಂಬಿದ ಕೋಸಲ ದೇಶವನ್ನು ಸಾಮ್ರಾಟನಂತೆ ಆಳುವನು.॥11॥
ಮೂಲಮ್ - 12
ಸ ಹಿ ರಾಜ್ಯಸ್ಯ ಸರ್ವಸ್ಯ ಸುಖಮೇಕಂ ಭವಿಷ್ಯತಿ ।
ತಾತೇ ತು ವಯಸಾತೀತೇ ಮಯಿ ಚಾರಣ್ಯಮಾಶ್ರಿತೇ ॥
ಅನುವಾದ
ತಂದೆಯವರು ಅತ್ಯಂತ ವೃದ್ಧರಾಗಿದ್ದಾರೆ ಮತ್ತು ನಾನು ಕಾಡಿಗೆ ಬಂದಿದ್ದೇನೆ. ಇಂತಹ ಸ್ಥಿತಿಯಲ್ಲಿ ಕೇವಲ ಭರತನೇ ಸಮಸ್ತ ರಾಜ್ಯದ ಶ್ರೇಷ್ಠ ಸುಖವನ್ನು ಅನುಭವಿಸುವನು.॥12॥
ಮೂಲಮ್ - 13
ಅರ್ಥಧರ್ಮೌ ಪರಿತ್ಯಜ್ಯ ಯಃ ಕಾಮಮನುವರ್ತತೇ ।
ಏವಮಾಪದ್ಯತೇ ಕ್ಷಿಪ್ರಂ ರಾಜಾ ದಶರಥೋ ಯಥಾ ॥
ಅನುವಾದ
ಅರ್ಥ ಮತ್ತು ಧರ್ಮದ ಪರಿತ್ಯಾಗ ಮಾಡಿ ಕೇವಲ ಕಾಮವನ್ನು ಅನುಸರಿಸುವವನು ಶೀಘ್ರವಾಗಿ ಈಗ ಮಹಾರಾಜರು ಬಿದ್ದ ಹಾಗೆಯೇ ಆಪತ್ತಿನಲ್ಲಿ ಬೀಳುತ್ತಾನೆ; ಇದು ಸತ್ಯವಾಗಿದೆ.॥13॥
ಮೂಲಮ್ - 14
ಮನ್ಯೇ ದಶರಥಾಂತಾಯ ಮಮ ಪ್ರವ್ರಾಜನಾಯ ಚ ।
ಕೈಕೇಯೀ ಸೌಮ್ಯ ಸಂಪ್ರಾಪ್ತಾ ರಾಜ್ಯಾಯ ಭರತಸ್ಯ ಚ ॥
ಅನುವಾದ
ಸೌಮ್ಯ! ಮಹಾರಾಜರ ಪ್ರಾಣಗಳನ್ನು ಕೊನೆಗೊಳಿಸಲು, ನನ್ನನ್ನು ಕಾಡಿಗೆ ಅಟ್ಟಲು ಮತ್ತು ಭರತನಿಗೆ ರಾಜ್ಯವನ್ನು ಕೊಡಿಸಲೆಂದೇ ಕೈಕೇಯಿಯು ಈ ರಾಜಭವನಕ್ಕೆ ಬಂದಿರುವಳು ಎಂದು ನಾನು ತಿಳಿಯುತ್ತೇನೆ.॥14॥
ಮೂಲಮ್ - 15
ಅಪೀದಾನೀಂ ತು ಕೈಕೇಯೀ ಸೌಭಾಗ್ಯಮದಮೋಹಿತಾ ।
ಕೌಸಲ್ಯಾಂ ಚ ಸುಮಿತ್ರಾಂ ಚ ಸಾ ಪ್ರಬಾಧೇತ ಮತ್ಕೃತೇ ॥
ಅನುವಾದ
ಈಗಲೂ ಸೌಭಾಗ್ಯದ ಮದದಿಂದ ಮೋಹಿತಳಾದ ಕೈಕೇಯಿಯು ನನ್ನ ಕಾರಣದಿಂದ ಕೌಸಲ್ಯಾ ಮತ್ತು ಸುಮಿತ್ರೆಯರಿಗೆ ಕಷ್ಟಕೊಡುತ್ತಾ ಇರಬಹುದು.॥15॥
ಮೂಲಮ್ - 16
ಮಾತಾಸ್ಮತ್ಕಾರಣಾದ್ದೇವೀ ಸುಮಿತ್ರಾ ದುಃಖಮಾವಸೇತ್ ।
ಅಯೋಧ್ಯಾಮಿತ ಏವ ತ್ವಂ ಕಾಲೇ ಪ್ರವಿಶ ಲಕ್ಷ್ಮಣ ॥
ಅನುವಾದ
ನಮ್ಮಿಂದಾಗಿ ನಿನ್ನ ತಾಯಿ ಸುಮಿತ್ರಾದೇವಿಗೆ ಬಹಳ ದುಃಖದಿಂದ ಅಲ್ಲಿ ಇರಬೇಕಾದೀತು ; ಆದ್ದರಿಂದ ಲಕ್ಷ್ಮಣ! ನೀನು ಇಲ್ಲಿಂದ ನಾಳೆ ಬೆಳಿಗ್ಗೆಯೇ ಅಯೋಧ್ಯೆಗೆ ಮರಳಿ ಹೋಗು.॥16॥
ಮೂಲಮ್ - 17
ಅಹಮೇಕೋ ಗಮಿಷ್ಯಾಮಿ ಸೀತಯಾ ಸಹ ದಂಡಕಾನ್ ।
ಅನಾಥಾಯ ಹಿ ನಾಥಸ್ತ್ವಂ ಕೌಸಲ್ಯಾಯಾ ಭವಿಷ್ಯಸಿ ॥
ಅನುವಾದ
ನಾನೊಬ್ಬನೇ ಸೀತೆಯೊಂದಿಗೆ ದಂಡಕಾರಣ್ಯಕ್ಕೆ ಹೋಗುವೆನು. ನೀನು ಅಲ್ಲಿ ನನ್ನ ಅಸಹಾಯಕಳಾದ ತಾಯಿ ಕೌಸಲ್ಯೆಯ ಸಹಾಯಕನಾಗುವೆ.॥17॥
ಮೂಲಮ್ - 18
ಕ್ಷುದ್ರಕರ್ಮಾ ಹಿ ಕೈಕೇಯೀ ದ್ವೇಷಾದನ್ಯಾಯಮಾಚರೇತ್ ।
ಪರಿದದ್ಯಾದ್ಧಿ ಧರ್ಮಜ್ಞ ಗರಂ ತೇ ಮಮ ಮಾತರಮ್ ॥
ಅನುವಾದ
ಧರ್ಮಜ್ಞ ಲಕ್ಷ್ಮಣ! ಕೈಕೇಯಿಯ ಕರ್ಮ ಬಹಳ ಕ್ಷುದ್ರವಾಗಿದೆ. ಅವಳು ದ್ವೇಷವಶ ಅನ್ಯಾಯವನ್ನು ಮಾಡಬಲ್ಲಳು. ನಿನ್ನ ಮತ್ತು ನನ್ನ ತಾಯಂದಿರಿಗೆ ವಿಷವನ್ನೂ ಕೂಡ ಕೊಡಬಹುದು.॥18॥
ಮೂಲಮ್ - 19
ನೂನಂ ಜಾತ್ಯಂತರೇ ತಾತ ಸ್ತ್ರಿಯಃ ಪುತ್ರೈರ್ವಿಯೋಜಿತಾಃ ।
ಜನನ್ಯಾ ಮಮ ಸೌಮಿತ್ರೇ ತದದ್ಯೈತದುಪಸ್ಥಿತಮ್ ॥
ಅನುವಾದ
ಅಯ್ಯಾ, ಸುಮಿತ್ರಾಕುಮಾರ! ನಿಶ್ಚಯವಾಗಿಯೇ ಹಿಂದಿನ ಜನ್ಮದಲ್ಲಿ ನನ್ನ ತಾಯಿಯು ಕೆಲವು ಸ್ತ್ರೀಯರ ಪುತ್ರರನ್ನು ಅಗಲಿಸಿರಬಹುದು. ಆ ಪಾಪದ ಫಲವಾಗಿಯೇ ಈ ಪುತ್ರವಿಯೋಗ ಎಂಬ ದುಃಖವು ಆಕೆಗೆ ಪ್ರಾಪ್ತವಾಗಿದೆ.॥19॥
ಮೂಲಮ್ - 20
ಮಯಾ ಹಿ ಚಿರಪುಷ್ಟೇನ ದುಃಖಸಂವರ್ಧಿತೇನ ಚ ।
ವಿಪ್ರಯುಜ್ಯತ ಕೌಸಲ್ಯಾ ಫಲಕಾಲೇ ಧಿಗಸ್ತುಮಾಮ್ ॥
ಅನುವಾದ
ನನ್ನ ತಾಯಿಯು ಚಿರಕಾಲ ನನ್ನನ್ನು ಪಾಲಿಸಿ-ಪೋಷಿಸಿರುವಳು ಮತ್ತು ಸ್ವತಃ ದುಃಖವನ್ನು ಸಹಿಸಿಕೊಂಡು ನನ್ನನ್ನು ಬೆಳೆಸಿರುವಳು. ಈಗ ಪುತ್ರನಿಂದ ಸಿಗಬಹುದಾದ ಸುಖವನ್ನು ಅನುಭವಿಸುವ ಸಂದರ್ಭ ಬಂದಾಗ ನಾನು ತಾಯಿಯಿಂದ ಬೇರೆಯಾದೆ. ನನಗೆ ಧಿಕ್ಕಾರವಿರಲಿ.॥20॥
ಮೂಲಮ್ - 21
ಮಾ ಸ್ಮ ಸೀಮಂತಿನೀ ಕಾಚಿಜ್ಜನಯೇತ್ಪುತ್ರಮೀದೃಶಮ್ ।
ಸೌಮಿತ್ರೇ ಯೋಽಹಮಂಬಾಯಾ ದದ್ಮಿ ಶೋಕಮನಂತಕಮ್ ॥
ಅನುವಾದ
ಸುಮಿತ್ರಾನಂದನ! ಯಾವುದೇ ಸೌಭಾಗ್ಯವತೀ ಸ್ತ್ರೀಯು ಎಂದೂ ನನ್ನಂತಹ ಪುತ್ರನಿಗೆ ಜನ್ಮ ನೀಡದಿರಲಿ ; ಏಕೆಂದರೆ ನಾನು ನನ್ನ ತಾಯಿಗೆ ಅನಂತಶೋಕವನ್ನು ಕೊಡುತ್ತಾ ಇದ್ದೇನೆ.॥21॥
ಮೂಲಮ್ - 22
ಮನ್ಯೇ ಪ್ರೀತಿವಿಶಿಷ್ಟಾ ಸಾ ಮತ್ತೋ ಲಕ್ಷ್ಮಣ ಸಾರಿಕಾ ।
ಯತ್ತಸ್ಯಾಃ ಶ್ರೂಯತೇ ವಾಕ್ಯಂ ಶುಕ ಪಾದಮರೇರ್ದಶ ॥
ಅನುವಾದ
ಲಕ್ಷ್ಮಣ! ತಾಯಿ ಕೌಸಲ್ಯೆಗೆ ನನಗಿಂತ ಹೆಚ್ಚು ಪ್ರೇಮ ಅವಳು ಸಾಕಿದ ಸಾರಿಕಾ ಪಕ್ಷಿಯ ಮೇಲಿದೆ ; ಏಕೆಂದರೆ, ಅದರ ಮುಖದಿಂದ ‘ಎಲೈ ಗಿಳಿಯೇ! ನೀನು ಶತ್ರುವಿನ ಕಾಲನ್ನು ಕುಟುಕು’ ಎಂಬ ಮಾತನ್ನು ತಾಯಿಯು ಸದಾ ಕೇಳುತ್ತಿದ್ದಳು. (ಅರ್ಥಾತ್ ನಮ್ಮನ್ನು ಸಾಕಿದ ತಾಯಿ ಕೌಸಲ್ಯೆಯ ಶತ್ರುವಿನ ಕಾಲಿಗೆ ಕಚ್ಚು. ಆ ಪಕ್ಷಿಯಾಗಿದ್ದರೂ ತಾಯಿಯ ಕುರಿತು ಇಷ್ಟು ಗಮನಕೊಡುತ್ತಿರುವಾಗ ನಾನು ಪುತ್ರನಾಗಿಯೂ ಆಕೆಯ ಕುರಿತು ಏನೂ ಮಾಡದಾದೆ.॥22॥
ಮೂಲಮ್ - 23
ಶೋಚಂತ್ಯಾಶ್ಚಾಲ್ಪಭಾಗ್ಯಾಯಾ ನ ಕಿಂಚಿದುಪಕುರ್ವತಾ ।
ಪುತ್ರೇಣ ಕಿಮಪುತ್ರಾಯಾ ಮಯಾಕಾರ್ಯಮರಿಂದಮ ॥
ಅನುವಾದ
ಶತ್ರುದವನ! ನನ್ನ ತಾಯಿಯು ನನಗಾಗಿ ಶೋಕಮಗ್ನಳಾಗಿರುತ್ತಾ, ಮಂದಭಾಗ್ಯಳಂತೆ ಆಗಿರುವಳು ಮತ್ತು ಪುತ್ರ ಸುಖದ ಯಾವುದೇ ಫಲವನ್ನು ಪಡೆಯದೆ ಪುತ್ರರಹಿತಳಂತೆ ಆಗಿರುವಳು. ಆ ನನ್ನ ತಾಯಿಗೆ ಯಾವ ಉಪಕಾರವನ್ನು ಮಾಡದ ನನ್ನಂತಹ ಪುತ್ರನಿಂದ ಏನು ಪ್ರಯೋಜನ.॥23॥
ಮೂಲಮ್ - 24
ಅಲ್ಪಭಾಗ್ಯಾ ಹಿ ಮೇ ಮಾತಾ ಕೌಸಲ್ಯಾ ರಹಿತಾ ಮಯಾ ।
ಶೇತೇ ಪರಮದುಃಖಾರ್ತಾ ಪತಿತಾ ಶೋಕಸಾಗರೇ ॥
ಅನುವಾದ
ನನ್ನಿಂದ ಅಗಲಿದ ಕಾರಣ ಮಾತೆ ಕೌಸಲ್ಯೆಯು ವಾಸ್ತವವಾಗಿ ಮಂದಭಾಗ್ಯಳಾಗಿರುವಳು ಹಾಗೂ ಶೋಕಸಮುದ್ರದಲ್ಲಿ ಬಿದ್ದು ಅತ್ಯಂತ ದುಃಖದಿಂದ ಆತುರಳಾಗಿ ಅದರಲ್ಲೇ ಮಲಗಿರುತ್ತಾಳೆ.॥24॥
ಮೂಲಮ್ - 25
ಏಕೋ ಹ್ಯಹಮಯೋಧ್ಯಾಂ ಚ ಪೃಥಿವೀಂ ಚಾಪಿ ಲಕ್ಷ್ಮಣ ।
ತರೇಯಮಿಷುಭಿಃ ಕ್ರುದ್ಧೋ ನನು ವೀರ್ಯಮಕಾರಣಮ್ ॥
ಅನುವಾದ
ಲಕ್ಷ್ಮಣ! ನಾನು ಕುಪಿತನಾದರೆ ನನ್ನ ಬಾಣಗಳಿಂದ ಒಬ್ಬನೇ ಅಯೋಧ್ಯೆಯನ್ನು ಮತ್ತು ಸಮಸ್ತ ಭೂಮಂಡಲವನ್ನು ನಿಷ್ಕಂಟಕವಾಗಿಸಿ ನನ್ನ ಅಧಿಕಾರವನ್ನು ಪಡೆಯಬಲ್ಲೆನು; ಆದರೆ ಪಾರಲೌಕಿಕ ಹಿತಸಾಧನೆಯಲ್ಲಿ ಬಲ-ಪರಾಕ್ರಮ ಕಾರಣವಾಗುವುದಿಲ್ಲ (ಅದಕ್ಕಾಗಿ ನಾನು ಹಾಗೆ ಮಾಡಲಾರೆ).॥25॥
ಮೂಲಮ್ - 26
ಅಧರ್ಮಭಯಭೀತಶ್ಚ ಪರಲೋಕಸ್ಯ ಚಾನಘ ।
ತೇನ ಲಕ್ಷ್ಮಣ ನಾದ್ಯಾಹಮಾತ್ಮಾನಮಭಿಷೇಚಯೇ ॥
ಅನುವಾದ
ನಿಷ್ಪಾಪ ಲಕ್ಷ್ಮಣ! ನಾನು ಅಧರ್ಮ ಮತ್ತು ಪರ ಲೋಕಕ್ಕಾಗಿ ಹೆದರುತ್ತೇನೆ; ಅದಕ್ಕಾಗಿ ಇಂದು ಅಯೋಧ್ಯೆಯ ರಾಜ್ಯದಲ್ಲಿ ಪಟ್ಟಾಭಿಷೇಕ ಮಾಡಿಕೊಳ್ಳುವುದಿಲ್ಲ.॥26॥
ಮೂಲಮ್ - 27
ಏತದನ್ಯಚ್ಚ ಕರುಣಂ ವಿಲಪ್ಯ ವಿಜನೇ ಬಹು ।
ಅಶ್ರುಪೂರ್ಣಮುಖೋ ದೀನೋ ನಿಶಿ ತೂಷ್ಣೀಮುಪಾವಿಶತ್ ॥
ಅನುವಾದ
ಹೀಗೆ ಅನೇಕ ಮಾತುಗಳನ್ನು ಹೇಳಿ ಶ್ರೀರಾಮನು ಆ ನಿರ್ಜನ ವನದಲ್ಲಿ ಕರುಣಾಜನಕ ವಿಲಾಪಮಾಡಿದನು. ಅನಂತರ ಅವನು ಸುಮ್ಮನೆ ಕುಳಿತುಬಿಟ್ಟನು. ಆಗ ಅವನ ಮುಖದಲ್ಲಿ ಕಣ್ಣೀರಿನ ಧಾರೆ ಹರಿಯುತ್ತಿತ್ತು ಮತ್ತು ದೀನತೆ ಆವರಿಸಿತ್ತು.॥27॥
ಮೂಲಮ್ - 28
ವಿಲಪೋಪರತಂ ರಾಮಂ ಗತಾರ್ಚಿಷಮಿವಾನಲಮ್ ।
ಸಮುದ್ರಮಿವ ನಿರ್ವೇಗಮಾಶ್ವಾಸಯತ ಲಕ್ಷ್ಮಣಃ ॥
ಅನುವಾದ
ವಿಲಾಪದಿಂದ ನಿವೃತ್ತನಾಗಿ ಶ್ರೀರಾಮನು ಜ್ವಾಲಾರಹಿತ ಅಗ್ನಿಯಂತೆ, ತೆರೆಗಳಿಲ್ಲದ ಸಮುದ್ರದಂತೆ ಶಾಂತವಾಗಿ ಕಾಣುತ್ತಿದ್ದನು. ಆಗ ಲಕ್ಷ್ಮಣನು ಅವನಿಗೆ ಆಶ್ವಾಸನೆ ಕೊಡುತ್ತಾ ಹೇಳಿದನು.॥28॥
ಮೂಲಮ್ - 29
ಧ್ರುವಮದ್ಯಪುರೀ ರಾಮ ಅಯೋಧ್ಯಾಽಽಯುಧಿನಾಂ ವರ ।
ನಿಷ್ಪ್ರಭಾತ್ವಯಿ ನಿಷ್ಕ್ರಾಂತೇ ಗತಚಂದ್ರೇವ ಶರ್ವರೀ ॥
ಅನುವಾದ
ಅಸಧಾರಿಗಳಲ್ಲಿ ಶ್ರೇಷ್ಠ ಶ್ರೀರಾಮಾ! ನೀನು ಹೊರಟುಬಂದದ್ದರಿಂದ ನಿಶ್ಚಯವಾಗಿ ಇಂದು ಅಯೋಧ್ಯೆಯು ಚಂದ್ರನಿಲ್ಲದ ರಾತ್ರಿಯಂತೆ ನಿಸ್ತೇಜವಾಗಿದೆ.॥29॥
ಮೂಲಮ್ - 30
ನೈತದೌಪಯಿಕಂ ರಾಮ ಯದಿದಂ ಪರಿತಪ್ಯಸೇ ।
ವಿಷಾದಯಸಿ ಸೀತಾಂ ಚ ಮಾಂ ಚೈವ ಪುರುಷರ್ಷಭ ॥
ಅನುವಾದ
ಪುರುಷೋತ್ತಮ ಶ್ರೀರಾಮಾ! ನೀನು ಈ ರೀತಿ ಸಂತಪ್ತನಾಗುವುದು ನಿನಗೆ ಎಂದಿಗೂ ಉಚಿತವಲ್ಲ. ನೀನು ಹೀಗೆ ಮಾಡಿ ಸೀತೆಗೆ ಮತ್ತು ನನಗೂ ಕೂಡ ಖೇದವನ್ನು ಕೊಡುತ್ತಿರುವೆ.॥30॥
ಮೂಲಮ್ - 31
ನ ಚ ಸೀತಾ ತ್ವಯಾ ಹೀನಾ ಚ ಚಾಹಮಪಿ ರಾಘವ ।
ಮುಹೂರ್ತಮಪಿ ಜೀವಾವೋ ಜಲಾನ್ಮತ್ಸ್ಯಾವಿವೋದ್ಧೃತೌ ॥
ಅನುವಾದ
ರಘುನಂದನ! ನೀನಿಲ್ಲದೆ ಸೀತೆ ಮತ್ತು ನಾನು ಒಂದು ಮುಹೂರ್ತಕಾಲವೂ ಬದುಕಿರಲಾರೆವು. ನೀರಿನಿಂದ ಹೊರಗೆ ತೆಗೆದ ಮೀನಿನಂತೆ ನಮ್ಮ ಸ್ಥಿತಿಯಾಗುವುದು.॥31॥
ಮೂಲಮ್ - 32
ನಹಿ ತಾತಂ ನಶತ್ರುಘ್ನಂ ನ ಸುಮಿತ್ರಾಂ ಪರಂತಪ ।
ದ್ರಷ್ಟುಮಿಚ್ಛೇಯಮದ್ಯಾಹಂ ಸ್ವರ್ಗಂ ಚಾಪಿ ತ್ವಯಾ ವಿನಾ ॥
ಅನುವಾದ
ಪರಂತಪ ರಘುವೀರನೇ! ನಿನ್ನನ್ನು ಬಿಟ್ಟು ನಾನು ಇಂದು ತಂದೆಯನ್ನಾಗಲೀ, ಶತ್ರುಘ್ನನನ್ನಾಗಲೀ, ತಾಯಿ ಸುಮಿತ್ರೆಯನ್ನಾಗಲೀ, ಸ್ವರ್ಗವನ್ನಾಗಲೀ ನೋಡಲು ಬಯಸುವುದಿಲ್ಲ.॥32॥
ಮೂಲಮ್ - 33
ತತಸ್ತತ್ರ ಸಮಾಸೀನೌ ನಾತಿದೂರೇ ನಿರೀಕ್ಷ್ಯತಾಮ್ ।
ನ್ಯಗ್ರೋಧೇ ಸುಕೃತಾಂ ಶಯ್ಯಾಂ ಭೇಜಾತೇಧರ್ಮವತ್ಸಲೌ ॥
ಅನುವಾದ
ಅನಂತರ ಅಲ್ಲಿ ಕುಳಿತಿದ್ದ ಧರ್ಮ ವತ್ಸಲ ಸೀತೆ ಮತ್ತು ಶ್ರೀರಾಮನು ಸ್ವಲ್ಪ ದೂರದಲ್ಲೇ ವಟವೃಕ್ಷದ ಕೆಳಗೆ ಲಕ್ಷ್ಮಣನು ಸಿದ್ಧಪಡಿಸಿದ ಸುಂದರ ಶಯ್ಯೆಯನ್ನು ನೋಡಿ ಅದನ್ನು ಆಶ್ರಯಿಸಿ ಮಲಗಿಬಿಟ್ಟರು.॥33॥
ಮೂಲಮ್ - 34
ಸ ಲಕ್ಷ್ಮಣಸ್ಯೋತ್ತಮಪುಷ್ಕಲಂ ವಚೋ
ನಿಶಮ್ಯ ಚೈವಂ ವನವಾಸಮಾದರಾತ್ ।
ಸಮಾಃ ಸಮಸ್ತಾ ವಿದಧೇ ಪರಂತಪಃ
ಪ್ರಪದ್ಯ ಧರ್ಮಂ ಸುಚಿರಾಯ ರಾಘವಃ ॥
ಅನುವಾದ
ಪರಂತಪ ರಘುನಾಥನು ಹೀಗೆ ವನವಾಸದ ಕುರಿತು ಆದರದಿಂದ ಹೇಳಿರುವ ಲಕ್ಷ್ಮಣನ ಮಾತನ್ನು ಕೇಳಿ ಅವನು ದೀರ್ಘಕಾಲದವರೆಗೆ ವನವಾಸರೂಪೀ ಧರ್ಮವನ್ನು ಸ್ವೀಕರಿಸಿ ಸಂಪೂರ್ಣ ವರ್ಷಗಳವರೆಗೆ ಲಕ್ಷ್ಮಣನಿಗೆ ತನ್ನೊಂದಿಗೆ ಇರುವಂತೆ ಅನುಮತಿ ಕೊಟ್ಟನು.॥34॥
ಮೂಲಮ್ - 35
ತತಸ್ತು ತಸ್ಮಿನ್ವಿಜನೇ ಮಹಾಬಲೌ
ಮಹಾವನೇ ರಾಘವವಂಶವರ್ಧನೌ ।
ನ ತೌ ಭಯಂ ಸಂಭ್ರಮಮಭ್ಯುಪೇಯತು -
ರ್ಯಥೈವ ಸಿಂಹೌ ಗಿರಿಸಾನುಗೋಚರೌ ॥
ಅನುವಾದ
ಅನಂತರ ಆ ಮಹಾನಿರ್ಜನ ವನದಲ್ಲಿ ರಘುವಂಶವನ್ನು ವೃದ್ಧಿಗೊಳಿಸುವ ಆ ಇಬ್ಬರೂ ಮಹಾಬಲಶಾಲಿಗಳಾದ ವೀರರು ಪರ್ವತ ಶಿಖರದಲ್ಲಿ ಸಂಚರಿಸುವ ಎರಡು ಸಿಂಹಗಳಂತೆ ಎಂದೂ ಭಯ ಮತ್ತು ಉದ್ವೇಗವನ್ನು ಹೊಂದಲಿಲ್ಲ.॥35॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಐವತ್ತಮೂರನೆಯ ಸರ್ಗ ಪೂರ್ಣವಾಯಿತು.॥53॥