०५२ गङ्गातरणम्-सुमन्त्रविसर्जनं च

वाचनम्
ಭಾಗಸೂಚನಾ

ಶ್ರೀರಾಮನ ಆಜ್ಞೆಯಂತೆ ಗುಹನು ನಾವೆಯನ್ನು ಸಿದ್ಧಗೊಳಿಸಿದುದು, ಶ್ರೀರಾಮನು ಸುಮಂತ್ರನನ್ನು ಸಮಾಧಾನಗೊಳಿಸಿ ಅಯೋಧ್ಯೆಗೆ ಹಿಂದಿರುಗಲು ಆಜ್ಞಾಪಿಸುದುದು, ಸುಮಂತ್ರನೊಡನೆ ತಂದೆ-ತಾಯಿಗಳಿಗೆ ಶ್ರೀರಾಮನು ಸಂದೇಶ ಕಳುಹಿಸಿಕೊಟ್ಟುದು, ಅರಣ್ಯಕ್ಕೆ ಬರುವೆನೆಂದು ಹಠ ಹಿಡಿದ ಸುಮಂತ್ರನಿಗೆ ಯುಕ್ತಿಪೂರ್ವಕ ಸಮಾಧಾನ ಹೇಳಿ ಅಯೋಧ್ಯೆಗೆ ಹಿಂದಿರುಗುವಂತೆ ಹೇಳಿದುದು, ಮೂವರು ನಾವೆಯನ್ನೇರಿದುದು, ಸೀತಾದೇವಿಯಿಂದ ಗಂಗೆಯ ಪ್ರಾರ್ಥನೆ, ನಾವೆಯಿಂದ ಇಳಿದು ಶ್ರೀರಾಮಾದಿಗಳು ವತ್ಸದೇಶಕ್ಕೆ ಪ್ರಯಾಣ, ಸಾಯಂಕಾಲವಾಗುತ್ತಲೇ ವೃಕ್ಷವೊಂದರ ಕೆಳಗೆ ತಂಗಿದುದು

ಮೂಲಮ್ - 1

ಪ್ರಭಾತಾಯಾಂ ತು ಶರ್ವರ್ಯಾಂ ಪೃಥುವಕ್ಷಾ ಮಹಾಯಶಾಃ ।
ಉವಾಚ ರಾಮಃ ಸೌಮಿತ್ರಿಂ ಲಕ್ಷ್ಮಣಂ ಶುಭಲಕ್ಷಣಂ ॥

ಅನುವಾದ

ರಾತ್ರಿ ಕಳೆದು ಬೆಳಗಾದಾಗ ವಿಶಾಲ ವಕ್ಷಸ್ಥಳವುಳ್ಳ ಮಹಾ ಯಶಸ್ವೀ ಶ್ರೀರಾಮನು ಶುಭಲಕ್ಷಣಸಂಪನ್ನ ಸುಮಿತ್ರಾ ಕುಮಾರ ಲಕ್ಷ್ಮಣನಲ್ಲಿ ಇಂತೆಂದನು.॥1॥

ಮೂಲಮ್ - 2

ಭಾಸ್ಕರೋದಯಕಾಲೋಽಸೌ ಗತಾ ಭಗವತೀ ನಿಶಾ ।
ಅಸೌ ಸುಕೃಷ್ಣೋ ವಿಹಗಃ ಕೋಕಿಲಸ್ತಾತ ಕೂಜತಿ ॥

ಅನುವಾದ

ಅಯ್ಯಾ! ಭಗವತಿ ರಾತ್ರಿಯು ಕಳೆದುಹೋಯಿತು. ಈ ಸೂರ್ಯೋದಯದ ಸಮಯ ಬಂದಿದೆ. ಅತ್ಯಂತ ಕಪ್ಪಾದ ಕೋಗಿಲೆಯು ಕುಹೂ-ಕುಹೂ ಎಂದು ಕೂಗುತ್ತಿದೆ.॥2॥

ಮೂಲಮ್ - 3

ಬರ್ಹಿಣಾನಾಂ ಚ ನಿರ್ಘೋಷಃ ಶ್ರೂಯತೇ ನದತಾಂ ವನೇ ।
ತರಾಮ ಜಾಹ್ನವೀಂ ಸೌಮ್ಯ ಶೀಘ್ರಗಾಂ ಸಾಗರಂಗಮಾಮ್ ॥

ಅನುವಾದ

ಕಾಡಿನಿಂದ ನವಿಲುಗಳ ಆನಂದೋತ್ಸಾಹಧ್ವನಿ ಕೇಳಿ ಬರುತ್ತಿದೆ. ಆದ್ದರಿಂದ ಸೌಮ್ಯ! ಈಗ ನಾವು ವೇಗವಾಗಿ ಸಮುದ್ರದ ಕಡೆಗೆ ಹರಿಯುತ್ತಿರುವ ಗಂಗೆಯನ್ನು ದಾಟಬೇಕು.॥3॥

ಮೂಲಮ್ - 4

ವಿಜ್ಞಾಯ ರಾಮಸ್ಯ ವಚಃ ಸೌಮಿತ್ರಿರ್ಮಿತ್ರನಂದನಃ ।
ಗುಹಮಾಮಂತ್ರ್ಯ ಸೂತಂ ಚ ಸೋಽತಿಷ್ಠದ್ಭ್ರಾತುರಗ್ರತಃ ॥

ಅನುವಾದ

ಮಿತ್ರರಿಗೆ ಆನಂದ ಕೊಡುವ ಸೌಮಿತ್ರಿ ಲಕ್ಷ್ಮಣನು ಶ್ರೀರಾಮನ ಅಭಿಪ್ರಾಯ ತಿಳಿದು ಗುಹ ಮತ್ತು ಸುಮಂತ್ರರನ್ನು ಕರೆದು ಗಂಗೆ ದಾಟಲು ವ್ಯವಸ್ಥೆ ಮಾಡಿರೆಂದು ಹೇಳಿ, ಅಣ್ಣನ ಮುಂದೆ ಕೈಮುಗಿದುಕೊಂಡು ನಿಂತುಕೊಂಡನು.॥4॥

ಮೂಲಮ್ - 5

ಸ ತು ರಾಮಸ್ಯ ವಚನಂ ನಿಶಮ್ಯ ಪ್ರತಿಗೃಹ್ಯ ಚ ।
ಸ್ಥಪತಿಸ್ತೂರ್ಣಮಾಹೂಯ ಸಚಿವಾನಿದಮಬ್ರವೀತ್ ॥

ಅನುವಾದ

ಶ್ರೀರಾಮಚಂದ್ರನ ಮಾತನ್ನು ಕೇಳಿ ಅವನ ಅಪ್ಪಣೆಯನ್ನು ಶಿರಸಾವಹಿಸಿ ನಿಷಾದರಾದನು ಕೂಡಲೇ ತನ್ನ ಸಚಿವನನ್ನು ಕರೆದು ಹೇಳಿದನು-॥5॥

ಮೂಲಮ್ - 6

ಅಸ್ಯವಾಹನಸಂಯುಕ್ತಾಂ ಕರ್ಣಗ್ರಾಹವತೀಂ ಶುಭಾಮ್ ।
ಸುಪ್ರತಾರಾಂ ದೃಢಾಂ ತೀರ್ಥೇ ಶೀಘ್ರಂ ನಾವಮುಪಾಹರ ॥

ಅನುವಾದ

ನೀನು ಬೇಗನೇ ನದೀತೀರಕ್ಕೆ ಹೋಗಿ ಒಂದು ನಾವೆಯನ್ನು ತೆಗೆದುಕೊಂಡು ಬಾ. ಅದು ಗಟ್ಟಿಮುಟ್ಟಾಗಿದ್ದು, ಸುಲಭವಾಗಿ ನಡೆಸುವಂತಿರಬೇಕು. ಅದರಲ್ಲಿ ಕರ್ಣಧಾರ ನಾವೆಯನ್ನು ನಡೆಸುವವನಿದ್ದು, ಸುಂದರವಾಗಿರಬೇಕು.॥6॥

ಮೂಲಮ್ - 7

ತಂ ನಿಶಮ್ಯ ಗುಹಾದೇಶಂ ಗುಹಮಾತ್ಯೋ ಗತೋ ಮಹಾನ್ ।
ಉಪೋಹ್ಯ ರುಚಿರಾಂ ನಾವಂ ಗುಹಾಯ ಪ್ರತ್ಯವೇದಯತ್ ॥

ಅನುವಾದ

ನಿಷಾದರಾಜ ಗುಹನ ಆದೇಶವನ್ನು ಕೇಳಿ ಆ ಮಹಾಮಂತ್ರಿ ಹೋಗಿ ಒಂದು ಸುಂದರವಾದ ನಾವೆಯನ್ನು ದಡದಲ್ಲಿ ತಂದಿರಿಸಿ, ಗುಹನಿಗೆ ಅದರ ಸೂಚನೆ ಕೊಟ್ಟನು.॥7॥

ಮೂಲಮ್ - 8

ತತಃ ಸ ಪ್ರಾಂಜಲಿರ್ಭೂತ್ವಾ ಗುಹೋ ರಾಘವಮಬ್ರವೀತ್ ।
ಉಪಸ್ಥಿತೇಯಂ ನೌರ್ದೇವ ಭೂಯಃ ಕಿಂ ಕರವಾಣಿ ತೇ ॥

ಅನುವಾದ

ಆಗ ಗುಹನು ಕೈಮುಗಿದು ಶ್ರೀರಾಮಚಂದ್ರನಲ್ಲಿ ಹೇಳಿದನು- ದೇವಾ! ನೌಕೆ ಸಿದ್ಧವಾಗಿದೆ. ಇನ್ನು ನಿಮ್ಮ ಯಾವ ಸೇವೆ ಮಾಡಲಿ.॥8॥

ಮೂಲಮ್ - 9

ತವಾಮರಸುತಪ್ರಖ್ಯ ತರ್ತುಂ ಸಾಗರಗಾಮಿನೀಮ್ ।
ನೌರಿಯಂ ಪುರುಷವ್ಯಾಘ್ರ ಶೀಘ್ರಮಾರೋಹ ಸುವ್ರತ ॥

ಅನುವಾದ

ದೇವಕುಮಾರನಂತೆ ತೇಜಸ್ವೀ, ಸುವ್ರತ ಪುರಷಸಿಂಹ ಶ್ರೀರಾಮಾ! ಸಮುದ್ರಗಾಮಿನೀ ಗಂಗಾನದಿಯನ್ನು ದಾಟಲು ನಿಮ್ಮ ಸೇವೆಗಾಗಿ ಈ ನಾವೆ ಬಂದಿದೆ; ಈಗ ತಾವು ಬೇಗನೆ ಇದರ ಮೇಲೆ ಆರೂಢರಾಗಿರಿ.॥9॥

ಮೂಲಮ್ - 10

ಅಥೋವಾಚ ಮಹಾತೇಜಾ ರಾಮೋ ಗುಹಮಿದಂ ವಚಃ ।
ಕೃತಕಾಮೋಽಸ್ಮಿ ಭವತಾ ಶೀಘ್ರಮಾರೋಪ್ಯತಾಮಿತಿ ॥

ಅನುವಾದ

ಆಗ ಮಹಾತೇಜಸ್ವೀ ಶ್ರೀರಾಮನು ಗುಹನಲ್ಲಿ ಹೇಳಿದನು- ಸಖನೇ! ನೀನು ನನ್ನ ಎಲ್ಲ ಮನೋರಥವನ್ನು ಪೂರ್ಣಗೊಳಿಸಿರುವೆ. ಈಗ ಶೀಘ್ರವಾಗಿ ಈ ನಾವೆಯಲ್ಲಿ ನಮ್ಮನ್ನು ಹತ್ತಿಸು.॥10॥

ಮೂಲಮ್ - 11

ತತಃ ಕಲಾಪಾನ್ ಸಂನಹ್ಯ ಖಡ್ಗೌ ಬದ್ಧ್ವಾ ಚ ಧನ್ವಿನೌ ।
ಜಗ್ಮತುರ್ಯೇನ ತಾಂ ಗಂಗಾಂ ಸೀತಯಾ ಸಹ ರಾಘವೌ ॥

ಅನುವಾದ

ಹೀಗೆ ಹೇಳಿ ಶ್ರೀರಾಮ-ಲಕ್ಷ್ಮಣರು ಕವಚವನ್ನು ಧರಿಸಿ, ಬತ್ತಳಿಕೆ, ಖಡ್ಗವನ್ನು ಕಟ್ಟಿಕೊಂಡು ಧನುಸ್ಸನ್ನು ಹಿಡಿದು ಅವರಿಬ್ಬರೂ ಸೀತೆಯೊಂದಿಗೆ ನದಿತೀರಕ್ಕೆ ಬಂದರು.॥11॥

ಮೂಲಮ್ - 12

ರಾಮಮೇವಂ ತು ಧರ್ಮಜ್ಞಮುಪಾಗತ್ಯ ವಿನೀತವತ್ ।
ಕಿಮಹಂ ಕರವಾಣೀತಿ ಸೂತಃ ಪ್ರಾಂಜಲಿರಬ್ರವೀತ್ ॥

ಅನುವಾದ

ಆಗ ಸಾರಥಿ ಸುಮಂತ್ರನು ಧರ್ಮಜ್ಞ ಭಗವಾನ್ ಶ್ರೀರಾಮನ ಬಳಿಗೆ ಹೋಗಿ ಕೈಮುಗಿದುಕೊಂಡು - ಪ್ರಭೋ! ಈಗ ನಾನು ನಿಮ್ಮ ಯಾವ ಸೇವೆ ಮಾಡಲಿ? ಎಂದು ಕೇಳಿದನು.॥12॥

ಮೂಲಮ್ - 13

ತತೋಽಬ್ರವೀದ್ದಾಶರಥಿಃ ಸುಮಂತ್ರಂ
ಸ್ಪೃಶನ್ ಕರೇಣೋತ್ತಮದಕ್ಷಿಣೇನ ।
ಸುಮಂತ್ರ ಶೀಘ್ರಂ ಪುನರೇವ ಯಾಹಿ
ರಾಜ್ಞಃ ಸಕಾಶೇ ಭವ ಚಾಪ್ರಮತ್ತಃ ॥

ಅನುವಾದ

ದಶರಥನಂದನ ಶ್ರೀರಾಮನು ಸುಮಂತ್ರನನ್ನು ಬಲಗೈಯಿಂದ ನೇವರಿಸುತ್ತಾ ಹೇಳಿದನು - ಸುಮಂತ್ರನೇ! ಈಗ ನೀನು ಶೀಘ್ರವಾಗಿ ಪುನಃ ಮಹಾರಾಜರ ಬಳಿಗೆ ಮರಳಿ ಹೋಗಿ ಅಲ್ಲಿ ಜಾಗರೂಕನಾಗಿ ಇರು.॥13॥

ಮೂಲಮ್ - 14

ನಿವರ್ತಸ್ವೇತ್ಯುವಾಚೈನಮೇತಾವದ್ಧಿ ಕೃತಂ ಮಮ ।
ರಥಂ ವಿಹಾಯ ಪದ್ಭ್ಯಾಂ ತು ಗಮಿಷ್ಯಾಮೋ ಮಹಾವನಮ್ ॥

ಅನುವಾದ

ಅವನು ಪುನಃ ಹೇಳಿದನು - ಇಷ್ಟು ದೂರ ಮಹಾರಾಜರ ಅಪ್ಪಣೆಯಂತೆ ನಾನು ರಥದಲ್ಲಿ ಪ್ರಯಾಣ ಮಾಡಿದೆ. ಈಗ ನಾವು ರಥವನ್ನು ಬಿಟ್ಟು ಕಾಲ್ನಡಿಗೆಯಿಂದಲೇ ಮಹಾವನಕ್ಕೆ ಹೋಗುವೆವು. ಆದ್ದರಿಂದ ನೀನು ಮರಳಿ ಹೋಗು.॥14॥

ಮೂಲಮ್ - 15

ಆತ್ಮಾನಂ ತ್ವಭ್ಯನುಜ್ಞಾತಮವೇಕ್ಷ್ಯಾರ್ತಃ ಸ ಸಾರಥಿಃ ।
ಸುಮಂತ್ರಃ ಪುರುಷವ್ಯಾಘ್ರಮೈಕ್ಷ್ವಾಕಮಿದಮಬ್ರವೀತ್ ॥

ಅನುವಾದ

ಮನೆಗೆ ಮರಳಿ ಹೋಗಲು ಆಜ್ಞೆ ಪ್ರಾಪ್ತವಾದಾಗ ಸಾರಥಿ ಸುಮಂತ್ರನು ಶೋಕದಿಂದ ವ್ಯಾಕುಲನಾದನು. ಅವನು ಇಕ್ಷ್ವಾಕುಕುಲ ನಂದನ ಪುರುಷಸಿಂಹ ಶ್ರೀರಾಮನಲ್ಲಿ ಹೀಗೆ ಹೇಳಿದನು.॥15॥

ಮೂಲಮ್ - 16

ನಾತಿಕ್ರಾಂತಮಿದಂ ಲೋಕೇ ಪುರುಷೇಣೇಹ ಕೇನಚಿತ್ ।
ತವ ಸಭ್ರಾತೃಭಾರ್ಯಸ್ಯ ವಾಸಃ ಪ್ರಾಕೃತವದ್ವನೇ ॥

ಅನುವಾದ

ರಘುನಂದನ! ಯಾರ ಪ್ರೇರಣೆಯಿಂದ ನಿಮಗೆ ಸಹೋದರ ಮತ್ತು ಪತ್ನೀಸಹಿತ ಸಾಧಾರಣ ಮನುಷ್ಯರಂತೆ ವನದಲ್ಲಿ ಇರಲು ವಿವಶವಾಗಿ ಮಾಡಿದೆಯೋ ಆ ದೈವವನ್ನು ಈ ಜಗತ್ತಿನಲ್ಲಿ ಯಾರೂ ಉಲ್ಲಂಘಿಸಲಾರರು.॥16॥

ಮೂಲಮ್ - 17

ನ ಮನ್ಯೇ ಬ್ರಹ್ಮಚರ್ಯೇವಾ ಸ್ವಧೀತೇವಾ ಫಲೋದಯಃ ।
ಮಾರ್ದವಾರ್ಜವಯೋರ್ವಾಪಿ ತ್ವಾಂ ಚೇದ್ ವ್ಯಸನಮಾಗತಮ್ ॥

ಅನುವಾದ

ನಿಮ್ಮಂತಹ ಮಹಾಪುರುಷನ ಮೇಲೆಯೂ ಇಂತಹ ಸಂಕಟ ಬಂದಿರುವಾಗ, ಬ್ರಹ್ಮಚರ್ಯಪಾಲನೆ, ವೇದಗಳ ಅಧ್ಯಯನ, ದಯಾಳುತ್ವ ಮತ್ತು ಸರಳತೆಯಲ್ಲಿಯೂ ಯಾವುದೇ ಫಲ ಸಿದ್ಧಿಯಾಗುವುದಿಲ್ಲ ಎಂದು ನಾನು ತಿಳಿಯುತ್ತೇನೆ.॥17॥

ಮೂಲಮ್ - 18

ಸಹ ರಾಘವ ವೈದೇಹ್ಯಾ ಭ್ರಾತ್ರಾ ಚೈವ ವನೇ ವಸನ್ ।
ತ್ವಂ ಗತಿಂ ಪ್ರಾಪ್ಸ್ಯಸೇವೀರ ತ್ರೀಂಲ್ಲೋಕಾಂಸ್ತು ಜಯನ್ನಿವ ॥

ಅನುವಾದ

ವೀರ ರಘುನಂದನ! ಪಿತೃವಾಕ್ಯ ಪರಿಪಾಲನೆಗಾಗಿ ವಿದೇಹನಂದಿನೀ ಸೀತೆ ಮತ್ತು ಸಹೋದರ ಲಕ್ಷ್ಮಣರೊಂದಿಗೆ ವನದಲ್ಲಿ ನಿವಾಸ ಮಾಡುತ್ತಾ ನೀನು ಮೂರುಲೋಕಗಳನ್ನು ಗೆದ್ದ ಮಹಾಪುರುಷ ನಾರಾಯಣನಂತೆ ಕೀರ್ತಿಶಾಲಿಯಾಗುವೆ.॥18॥

ಮೂಲಮ್ - 19

ವಯಂ ಖಲು ಹತಾ ರಾಮ ಯೇ ತ್ವಯಾ ಹ್ಯುಪವಂಚಿತಾಃ ।
ಕೈಕೇಯ್ಯಾ ವಶಮೇಷ್ಯಾಮಃ ಪಾಪಾಯಾ ದುಃಖಭಾಗಿನಃ ॥

ಅನುವಾದ

ಶ್ರೀರಾಮಾ! ಖಂಡಿತವಾಗಿ ನಾವು ಎಲ್ಲ ರೀತಿಯಿಂದ ಸತ್ತುಹೋದೆವು; ಏಕೆಂದರೆ ನೀನು ಪುರವಾಸಿಗಳಾದ ನಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗದೆ ದರ್ಶನ ಸುಖದಿಂದ ವಂಚಿತಗೊಳಿಸಿದೆ. ನಾವೆಲ್ಲರೂ ಪಾಪಿನಿಯಾದ ಕೈಕೇಯ ಕೈವಶರಾಗುವೆವು ಮತ್ತು ದುಃಖ ಭೋಗಿಸುವೆವು.॥19॥

ಮೂಲಮ್ - 20

ಇತಿ ಬ್ರುವನ್ನಾತ್ಮಸಮಂ ಸುಮಂತ್ರಃ ಸಾರಥಿಸ್ತದಾ ।
ದೃಷ್ಟ್ವಾ ದೂರಗತಂ ರಾಮಂ ದುಃಖಾರ್ತೋ ರುರುದೇ ಚಿರಮ್ ॥

ಅನುವಾದ

ಆತ್ಮದಂತೆ ಪ್ರಿಯನಾದ ಶ್ರೀರಾಮಚಂದ್ರನಲ್ಲಿ ಹೀಗೆ ಹೇಳಿ ದೂರ ಹೋಗಲು ಹೊರಟುದನ್ನು ನೋಡಿ ಸುಮಂತ್ರನು ದುಃಖದಿಂದ ವ್ಯಾಕುಲನಾಗಿ ಅಳತೊಡಗಿದನು.॥20॥

ಮೂಲಮ್ - 21

ತತಸ್ತು ವಿಗತೇ ಬಾಷ್ಪೇ ಸೂತಂ ಸ್ಪೃಷ್ಟೋದಕಂ ಶುಚಿಮ್ ।
ರಾಮಸ್ತು ಮಧುರಂ ವಾಕ್ಯಂ ಪುನಃ ಪುನರುವಾಚ ತಮ್ ॥

ಅನುವಾದ

ಕಣ್ಣೀರಿನ ಪ್ರವಾಹ ನಿಂತಾಗ ಆಚಮನ ಮಾಡಿ ಪವಿತ್ರನಾದ ಸಾರಥಿಯಲ್ಲಿ ಶ್ರೀರಾಮನು ಪುನಃ ಪುನಃ ಮಧುರವಾಗಿ ಇಂತೆಂದನು.॥21॥

ಮೂಲಮ್ - 22

ಇಕ್ಷ್ವಾಕೂಣಾಂ ತ್ವಯಾ ತುಲ್ಯಂ ಸುಹೃದಂ ನೋಪಲಕ್ಷಯೇ ।
ಯಥಾ ದಶರಥೋ ರಾಜಾ ಮಾಂ ನ ಶೋಚೇತ್ತಥಾ ಕುರು ॥

ಅನುವಾದ

ಸುಮಂತ್ರನೇ! ನನ್ನ ದೃಷ್ಟಿಯಲ್ಲಿ ಇಕ್ಷ್ವಾಕು ವಂಶಿಯರ ಹಿತವನ್ನು ಮಾಡುವ ಸುಹೃದಯರು ನಿನ್ನಂತೆ ಬೇರೆ ಯಾರೂ ಇಲ್ಲ. ದಶರಥ ಮಹಾರಾಜರಿಗೆ ನನ್ನ ಕುರಿತಾದ ಶೋಕವಾಗದಂತೆ ನೀನು ಪ್ರಯತ್ನಿಸು.॥22॥

ಮೂಲಮ್ - 23

ಶೋಕೋಪಹತಚೇತಾಶ್ಚ ವೃದ್ಧಶ್ಚ ಜಗತೀಪತಿಃ ।
ಕಾಮಭಾರಾವಸನ್ನಶ್ಚ ತಸ್ಮಾದೇತದ್ ಬ್ರವೀಮಿ ತೇ ॥

ಅನುವಾದ

ಪೃಥಿವೀಪತಿ ಮಹಾರಾಜರು ಮುದುಕರಾಗಿದ್ದಾರೆ, ಅಲ್ಲದೆ ಅವರ ಮನೋರಥ ನುಚ್ಚುನೂರಾಗಿದೆ; ಅದರಿಂದ ಅವರ ಹೃದಯ ಶೋಕದಿಂದ ಪೀಡಿತವಾಗಿದೆ. ಅದಕ್ಕಾಗಿ ನೀನು ಅವರನ್ನು ಜೋಪಾನವಾಗಿಸಬೇಕೆಂದು ಹೇಳುತ್ತೇನೆ.॥23॥

ಮೂಲಮ್ - 24

ಯದ್ಯಥಾಜ್ಞಾಪಯೇತ್ಕಿಂಚಿತ್ಸ ಮಹಾತ್ಮಾ ಮಹೀಪತಿಃ ।
ಕೈಕೇಯ್ಯಾಃ ಪ್ರಿಯಕಾಮಾರ್ಥಂ ಕಾರ್ಯಂ ತದವಿಕಾಂಕ್ಷಯಾ ॥

ಅನುವಾದ

ಮಹಾತ್ಮಾ ಮಹಾರಾಜರು ಕೈಕೇಯಿಯ ಪ್ರಿಯವನ್ನು ಮಾಡಲು ನಿನಗೆ ಯಾವುದೇ ಆಜ್ಞೆ ಕೊಟ್ಟರೂ, ಅದನ್ನು ನೀನು ಆದರದಿಂದ ಪಾಲಿಸಬೇಕೆಂದು ನಾನು ಒತ್ತಾಯಿಸುತ್ತಿದ್ದೇನೆ.॥24॥

ಮೂಲಮ್ - 25

ಏತದರ್ಥಂ ಹಿ ರಾಜ್ಯಾನಿ ಪ್ರಶಾಸಾತಿ ನರೇಶ್ವರಾಃ ।
ಯದೇಷಾಂ ಸರ್ವಕೃತ್ಯೇಷು ಮನೋ ನ ಪ್ರತಿಹನ್ಯತೇ ॥

ಅನುವಾದ

ಯಾವುದೇ ಕಾರ್ಯದಲ್ಲಿ ರಾಜನ ಮನಸ್ಸಿಗೆ ವಿರೋಧವಾಗುವಂತಹುದು ಯಾವುದೂ ನಡೆಯಬಾರದು. ಆಗಲೇ ರಾಜರಿಗೆ ರಾಜ್ಯವನ್ನು ಶಾಸನ ಮಾಡಲು ಸಾಧ್ಯವಾಗುತ್ತದೆ.॥25॥

ಮೂಲಮ್ - 26

ಯದ್ಯಥಾ ಸ ಮಹಾರಾಜೋ ನಾಲೀಕಮಧಿಗಚ್ಛತಿ ।
ನ ಚ ತಾಮ್ಯತಿ ಶೋಕೇನ ಸುಮಂತ್ರ ಕುರು ತತ್ತಥಾ ॥

ಅನುವಾದ

ಸುಮಂತ್ರನೇ! ಯಾವುದೇ ಕಾರ್ಯದಲ್ಲಿ ಯಾವುದೇ ರೀತಿಯಿಂದಲೂ ಮಹಾರಾಜರಿಗೆ ಅಪ್ರಿಯ ಮಾತುಗಳಿಂದ ಖಿನ್ನವಾಗುವ ಸಂದರ್ಭ ಬರಬಾರದು. ಅವರು ಶೋಕದಿಂದ ದುರ್ಬಲರಾಗಿದ್ದಾರೆ. ನೀನು ಹಾಗೆ ವರ್ತಿಸಬೇಕು.॥26॥

ಮೂಲಮ್ - 27

ಅದೃಷ್ಟದುಃಖಂ ರಾಜಾನಂ ವೃದ್ಧಮಾರ್ಯಂ ಜಿತೇಂದ್ರಿಯಮ್ ।
ಬ್ರೂಯಾಸ್ತ್ವಮಭಿವಾದ್ಯೈವ ಮಮ ಹೇತೋರಿದಂ ವಚಃ ॥

ಅನುವಾದ

ಎಂದೂ ದುಃಖವನ್ನೇ ನೋಡದ ಆ ಆರ್ಯ, ಚಿತೇಂದ್ರಿಯ ಮತ್ತು ವೃದ್ಧ ಮಹಾರಾಜರಿಗೆ ನನ್ನ ಕಡೆಯಿಂದ ಪ್ರಣಾಮ ಹೇಳಿ ಈ ಮಾತನ್ನು ಹೇಳು.॥27॥

ಮೂಲಮ್ - 28

ನ ಚಾಹಮನುಶೋಚಾಮಿ ಲಕ್ಷ್ಮಣೋ ನ ಚ ಶೋಚತಿ ।
ಅಯೋಧ್ಯಾಯಾಶ್ಚ್ಯುತಾಶ್ಚಯುತಾಶ್ಚೇತಿ ವನೇ ವತ್ಸ್ಯಾಮಹೇತಿ ವಾ ॥

ಅನುವಾದ

ನಾವು ಅಯೋಧ್ಯೆಯಿಂದ ಹೊರಟು ಕಾಡಿನಲ್ಲಿ ವಾಸಿಸುವ ಕುರಿತು ನಾನಾದರೋ ಶೋಕಿಸುವುದಿಲ್ಲ ಮತ್ತು ಲಕ್ಷ್ಮಣನಿಗೂ ಇದರ ಶೋಕವಿಲ್ಲ.॥28॥

ಮೂಲಮ್ - 29

ಚತುದರ್ಶಸು ವರ್ಷೇಷು ನಿವೃತ್ತೇಷು ಪುನಃ ಪುನಃ ।
ಲಕ್ಷ್ಮಣಂ ಮಾಂ ಚ ಸೀತಾಂ ಚ ದ್ರಕ್ಷ್ಯಸೇ ಶೀಘ್ರಮಾಗತಾನ್ ॥

ಅನುವಾದ

ಹದಿನಾಲ್ಕು ವರ್ಷ ಮುಗಿದಾಗ ನಾವು ಪುನಃ ಶೀಘ್ರವಾಗಿ ಮರಳಿ ಬರುವೆವು, ಆಗ ನೀವು ನನ್ನನ್ನು, ಲಕ್ಷ್ಮಣನನ್ನು ಸೀತೆಯನ್ನು ನೋಡುವಿರಂತೆ.॥29॥

ಮೂಲಮ್ - 30

ಏವಮುಕ್ತ್ವಾ ತು ರಾಜಾನಂ ಮಾತರಂ ಚ ಸುಮಂತ್ರ ಮೇ ।
ಅನ್ಯಾಶ್ಚ ದೇವೀಃ ಸಹಿತಾಃ ಕೈಕೇಯೀಂ ಚ ಪುನಃ ಪುನಃ ॥

ಅನುವಾದ

ಸುಮಂತ್ರನೇ! ಮಹಾರಾಜರಲ್ಲಿ ಹೀಗೆ ಹೇಳಿ ನನ್ನ ತಾಯಿಯ ಬಳಿಯಲ್ಲಿ, ಆಕೆಯೊಂದಿಗೆ ಕುಳಿತಿರುವ ಇತರ ಮಾತೆಯರಿಗೂ ಹಾಗೂ ಕೈಕೆಯಿಯ ಬಳಿಯಲ್ಲಿಯೂ ಪದೇ-ಪದೇ ನಮ್ಮ ಕ್ಷೇಮ-ಸಮಾಚಾರ ಹೇಳು.॥30॥

ಮೂಲಮ್ - 31

ಆರೋಗ್ಯಂ ಬ್ರೂಹಿ ಕೌಸಲ್ಯಾಮಥ ಪಾದಾಭಿವಂದನಮ್ ।
ಸೀತಾಯಾ ಮಮ ಚಾರ್ಯಸ್ಯ ವಚನಾಲ್ಲಕ್ಷ್ಮಣಸ್ಯಚ ॥

ಅನುವಾದ

ತಾಯಿ ಕೌಸಲ್ಯೆಯಲ್ಲಿ - ನಿನ್ನ ಪುತ್ರ ಸ್ವಸ್ಥ ಹಾಗೂ ಪ್ರಸನ್ನನಾಗಿದ್ದಾನೆ. ಬಳಿಕ ಸೀತೆಯ ಕಡೆಯಿಂದ, ಜ್ಯೇಷ್ಠಪುತ್ರನ ಕಡೆಯಿಂದ, ಲಕ್ಷ್ಮಣನ ಕಡೆಯಿಂದಲೂ ಚರಣವಂದನೆಯನ್ನು ಹೇಳು.॥31॥

ಮೂಲಮ್ - 32

ಬ್ರೂಯಾಶ್ಚಾಪಿ ಮಹಾರಾಜಂ ಭರತಂ ಕ್ಷಿಪ್ರಮಾನಯ ।
ಆಗತಶ್ಚಾಪಿ ಭರತಃ ಸ್ಥಾಪ್ಯೋ ನೃಪಮತೇ ಪದೇ ॥

ಅನುವಾದ

ಅನಂತರ ನನ್ನ ಕಡೆಯಿಂದ ಮಹಾರಾಜರಲ್ಲಿಯೂ ನಿವೇದಿಸು - ನೀವು ಭರತನನ್ನು ಶೀಘ್ರವಾಗಿ ಕರೆಸಿರಿ. ಅವನು ಬಂದಾಗ ತಮ್ಮ ಅಭೀಷ್ಟದಂತೆ ಯುವರಾಜ ಪದವಿಯಲ್ಲಿ ಅವನ ಪಟ್ಟಾಭಿಷೇಕ ಮಾಡಿರಿ.॥32॥

ಮೂಲಮ್ - 33

ಭರತಂ ಚ ಪರಿಷ್ವಜ್ಯ ಯೌವರಾಜ್ಯೇಽಭಿಷಿಚ್ಯ ಚ ।
ಅಸ್ಮತ್ಸಂತಾಪಜಂ ದುಃಖಂ ನ ತ್ವಾಮಭಿಭವಿಷ್ಯತಿ ॥

ಅನುವಾದ

ಭರತನನ್ನು ಅಪ್ಪಿಕೊಂಡು, ಯುವರಾಜನಾಗಿ ಪಟ್ಟಾಭಿಷೇಕ ಮಾಡಿ, ನಿಮಗೆ ನಮ್ಮಿಂದಾಗಿ ಉಂಟಾಗುವ ವಿಯೋಗ ದುಃಖವನ್ನು ಅದುಮಿ ಇಡಿರಿ; ಎಂದು ಮಹಾರಾಜರಲ್ಲಿ ಹೇಳು.॥33॥

ಮೂಲಮ್ - 34

ಭರತಶ್ಚಾಪಿ ವಕ್ತವ್ಯೋ ಯಥಾ ರಾಜನಿ ವರ್ತಸೇ ।
ತಥಾ ಮಾತೃಷು ವರ್ತೇಥಾಃ ಸರ್ವಾಸ್ವೇವಾವಿಶೇಷತಃ ॥

ಅನುವಾದ

ಭರತನಲ್ಲಿಯೂ ಈ ಸಂದೇಶವನ್ನು ಹೇಳು-ಮಹಾರಾಜರೊಂದಿಗೆ ವರ್ತಿಸಿದಂತೆ ಎಲ್ಲ ತಾಯಂದಿರ ಕುರಿತೂ ವರ್ತಿಸಬೇಕು.॥34॥

ಮೂಲಮ್ - 35

ಯಥಾ ಚ ತವ ಕೈಕೇಯೀ ಸುಮಿತ್ರಾ ಚ ವಿಶೇಷತಃ ।
ತಥೈವ ದೇವೀ ಕೌಸಲ್ಯಾಮಮ ಮಾತಾ ವಿಶೇಷತಃ ॥

ಅನುವಾದ

ನಿನ್ನ ದೃಷ್ಟಿಯಲ್ಲಿ ಕೈಕೇಯಿಗೆ ಇರುವ ಸ್ಥಾನವನ್ನೇ ಸಮಾನವಾಗಿ ಸುಮಿತ್ರೆ ಮತ್ತು ನನ್ನ ತಾಯಿ ಕೌಸಲ್ಯೆಯಲ್ಲೂ ಇರುವುದು ಉಚಿತವಾಗಿದೆ. ಇವರೆಲ್ಲರಲ್ಲಿ ಯಾವ ಅಂತರವನ್ನೂ ಇಡಬಾರದು.॥35॥

ಮೂಲಮ್ - 36

ತಾತಸ್ಯ ಪ್ರಿಯಕಾಮೇನ ಯೌವರಾಜ್ಯಮವೇಕ್ಷತಾ ।
ಲೋಕಯೋರುಭಯೋಃ ಶಕ್ಯಂ ನಿತ್ಯದಾ ಸುಖಮೇಧಿತುಮ್ ॥

ಅನುವಾದ

ತಂದೆಯವರಿಗೆ ಪ್ರಿಯವನ್ನು ಉಂಟುಮಾಡುವ ಇಚ್ಛೆಯಿಂದ ಯುವರಾಜ ಪಟ್ಟವನ್ನು ಸ್ವೀಕರಿಸಿ, ನೀನು ಆಡಳಿತ ನಡೆಸಿದರೆ ಇಹಲೋಕ ಮತ್ತು ಪರಲೋಕಗಳಲ್ಲಿ ಸದಾ ಸುಖವನ್ನೇ ಪಡೆಯುವೆ.॥36॥

ಮೂಲಮ್ - 37

ನಿವರ್ತ್ಯಮಾನೋ ರಾಮೇಣ ಸುಮಂತ್ರಃ ಪ್ರತಿಬೋಧತಃ ।
ತತ್ಸರ್ವಂ ವಚನಂ ಶ್ರುತ್ವಾ ಸ್ನೇಹಾತ್ಕಾಕುತ್ಸ್ಥಮಬ್ರವೀತ್ ॥

ಅನುವಾದ

ಶ್ರೀರಾಮಚಂದ್ರನು ಸುಮಂತ್ರನಿಗೆ ಹಿಂದಿರುಗಿ ಹೋಗಲು ಹೀಗೆ ಸಮಜಾಯಿಸಿದಾಗ, ಅವನ ಎಲ್ಲ ಮಾತುಗಳನ್ನು ಕೇಳಿ ಅವನು ಶ್ರೀರಾಮನಲ್ಲಿ ಸ್ನೇಹಪೂರ್ವಕ ಹೇಳಿದನು.॥37॥

ಮೂಲಮ್ - 38

ಯದಹಂ ನೋಪಚಾರೇಣ ಬ್ರೂಯಾಂ ಸ್ನೇಹಾದವಿಕ್ಲವಮ್ ।
ಭಕ್ತಿಮಾನಿತಿ ತತ್ತಾವದ್ ವಾಕ್ಯಂ ತ್ವಂ ಕ್ಷಂತುಮರ್ಹಸಿ ॥

ಮೂಲಮ್ - 39

ಕಥಂ ಹಿ ತ್ವದ್ವಿಹೀನೋಹಂ ಪ್ರತಿಯಾಸ್ಯಾಮಿ ತಾಂ ಪುರೀಮ್ ।
ತವ ತಾತ ವಿಯೋಗೇನ ಪುತ್ರಶೋಕಾತುರಾಮಿವ ॥

ಅನುವಾದ

ಅಯ್ಯಾ! ಸೇವಕನು ಸ್ವಾಮಿಯ ಕುರಿತು ಯಾವ ಸತ್ಕಾರಪೂರ್ಣ ವರ್ತನೆ ಆಗಬೇಕೋ, ಅದನ್ನು ನಾನು ನಿಮ್ಮಲ್ಲಿ ಮಾತನಾಡುವಾಗ ಪಾಲಿಸದಿದ್ದರೆ, ನನ್ನ ಬಾಯಿಯಿಂದ ಅವಿನಯ ಮಾತು ಹೊರಟರೆ ‘ಇವನು ನನ್ನ ಭಕ್ತನು’ ಎಂದು ತಿಳಿದು ನೀವು ನನ್ನನ್ನು ಕ್ಷಮಿಸಿಬಿಡಿ. ನಿಮ್ಮ ವಿಯೋಗದಿಂದ ಪುತ್ರಶೋಕಾತುರಳಾದ ತಾಯಿಯಂತೆ ಸಂತಪ್ತವಾದ ಅಯೋಧ್ಯೆಗೆ ನಿಮ್ಮನ್ನು ಜೊತೆಗೆ ಕರೆದುಕೊಂಡು ಹೋಗದೆ ಹೇಗೆ ಮರಳಿಹೋಗುವುದು.॥38-39॥

ಮೂಲಮ್ - 40

ಸ ರಾಮಮಪಿ ತಾವನ್ಮೇ ರಥಂ ದೃಷ್ಟ್ವಾ ತದಾ ಜನಃ ।
ವಿನಾ ರಾಮಂ ರಥಂ ದೃಷ್ಟ್ವಾ ವಿದೀರ್ಯೇತಾಪಿ ಸಾ ಪುರೀ ॥

ಅನುವಾದ

ಬರುವಾಗ ಜನರು ನನ್ನ ರಥದಲ್ಲಿ ಶ್ರೀರಾಮನು ವಿರಾಜಿಸುತ್ತಿದ್ದುದನ್ನು ನೋಡಿದ್ದರು. ಈಗ ರಾಮನಿಂದ ರಹಿತವಾದ ಈ ರಥವನ್ನು ನೋಡಿ ಆ ಜನರ ಮತ್ತು ಅಯೋಧ್ಯೆಯ ಹೃದಯವೂ ಒಡೆದು ಹೋಗುವುದು.॥40॥

ಮೂಲಮ್ - 41

ದೈನ್ಯಂ ಹಿ ನಗರೀ ಗಚ್ಛೇದ್ದೃಷ್ಟ್ವಾ ಶೂನ್ಯಮಿಮಂ ರಥಮ್ ।
ಸೂತಾವಶೇಷಂ ಸ್ವಂ ಸೈನ್ಯಂ ಹತವೀರಮಿವಾಹವೇ ॥

ಅನುವಾದ

ಯುದ್ಧದಲ್ಲಿ ವೀರ ರಥಿಕನು ಸತ್ತುಹೋದಾಗ ರಥದಲ್ಲಿ ಕೇವಲ ಸಾರಥಿ ಮಾತ್ರ ಉಳಿದ ರಥವನ್ನು ನೋಡಿ ಅದರ ಸೈನ್ಯದ ಸ್ಥಿತಿಯು ಅತ್ಯಂತ ದಯನೀಯವಾಗುವಂತೆಯೇ ನಿಮ್ಮಿಂದ ಬರಿದಾದ ನನ್ನ ಈ ರಥವನ್ನು ನೋಡಿ ಇಡೀ ಅಯೋಧ್ಯೆಗೆ ದೀನಸ್ಥಿತಿ ಉಂಟಾದೀತು.॥41॥

ಮೂಲಮ್ - 42

ದೂರೇಽಪಿ ನಿವಸಂತಂ ತ್ವಾಂ ಮಾನಸೇನಾಗ್ರತಃ ಸ್ಥಿತಮ್ ।
ಚಿಂತಯಂತ್ಯೋದ್ಯ ನೂನಂ ತ್ವಾಂ ನಿರಾಹಾರಾಃ ಕೃತಾಃ ಪ್ರಜಾಃ ॥

ಅನುವಾದ

ನೀವು ದೂರದಲ್ಲಿದ್ದರೂ ಪ್ರಜೆಯ ಹೃದಯದಲ್ಲಿ ವಾಸಿಸುವುದರಿಂದ ಸದಾ ಅವರ ಮುಂದೆಯೇ ನಿಂತಿರುತ್ತೀರಿ. ಖಂಡಿತವಾಗಿ ಈಗ ಎಲ್ಲ ಪ್ರಜಾವರ್ಗವು ನಿಮ್ಮ ಚಿಂತೆಯಲ್ಲೇ ಊಟ-ತಿಂಡಿ ಬಿಟ್ಟಿರಬಹುದು.॥42॥

ಮೂಲಮ್ - 43

ದೃಷ್ಟಂ ತದ್ ವೈ ತ್ವಯಾ ರಾಮ ಯಾದೃಶಂತ್ವತ್ಪ್ರವಾಸನೇ ।
ಪ್ರಾಜಾನಾಂ ಸಂಕುಲಂ ವೃತ್ತಂ ತ್ವಚ್ಛೋಕಕ್ಲಾಂತಚೇತಸಾಮ್ ॥

ಅನುವಾದ

ಶ್ರೀರಾಮಾ! ನೀವು ವನವಾಸಕ್ಕಾಗಿ ಹೊರಟಾಗ ನಿಮ್ಮ ಶೋಕದಿಂದ ವ್ಯಾಕುಲಚಿತ್ತರಾದ ಪ್ರಜಾಜನರಲ್ಲಿ ಉಂಟಾದ ಶೋಕ ಮತ್ತು ಮಾಡಿದ ಆರ್ತನಾದವನ್ನು ನೀವು ನೋಡಿಯೇ ಇರುವಿರಿ.॥43॥

ಮೂಲಮ್ - 44

ಆರ್ತನಾದೋಹಿ ಯಃ ಪೌರೈರುನ್ಮ್ಮುಕ್ತಸ್ತ್ವತ್ಪ್ರವಾಸನೇ ।
ಸರಥಂ ಮಾಂ ನಿಶಾಮ್ಯೈವ ಕುರ್ಯುಃ ಶತಗಣಂ ತತಃ ॥

ಅನುವಾದ

ನೀನು ಅಯೋಧ್ಯೆಯಿಂದ ಹೊರಟಾಗ ಪುರವಾಸಿಗಳು ಮಾಡಿದ ಆರ್ತನಾದದಂತೆ, ನೀನಿಲ್ಲದ ಬರಿದಾದ ರಥವನ್ನು ನಾನು ತಂದುದು ನೋಡಿ ಅದಕ್ಕಿಂತಲೂ ನೂರುಪಟ್ಟು ಹಾಹಾಕಾರ ಮಾಡುವರು.॥44॥

ಮೂಲಮ್ - 45

ಅಹಂ ಕಿಂ ಚಾಪಿ ವಕ್ಷ್ಯಾಮಿ ದೇವೀಂ ತವ ಸುತೋ ಮಯಾ ।
ನೀತೋಽಸೌ ಮಾತುಲಕುಲಂ ಸಂತಾಪಂ ಮಾ ಕೃಥಾ ಇತಿ ॥

ಮೂಲಮ್ - 46

ಅಸತ್ಯಮಪಿ ನೈವಾಹಂ ಬ್ರೂಯಾಂ ವಚನಮೀದೃಶಮ್ ।
ಕಥಮಪ್ರಿಯಮೇವಾಹಂ ಬ್ರೂಯಾಂ ಸತ್ಯಮಿದಂ ವಚಃ ॥

ಅನುವಾದ

ಮಹಾರಾಣಿ ಕೌಸಲ್ಯೆಯ ಬಳಿಗೆ ಹೋಗಿ - ನಾನು ನಿನ್ನ ಮಗನನ್ನು ಮಾವನ ಮನೆಗೆ ತಲುಪಿಸಿದೆ ಎಂದು ಹೇಳಲೇನು? ಅದಕ್ಕಾಗಿ ನೀವು ದುಃಖಿಸಬೇಡಿ, ಈ ಮಾತು ಪ್ರಿಯವಾದರೂ ಸುಳ್ಳು ಆಗಿದೆ, ಆದ್ದರಿಂದ ಇಂತಹ ಅಸತ್ಯವಚನವನ್ನು ನಾನು ಎಂದಿಗೂ ಹೇಳಲಾರೆ. ಹಾಗಿರುವಾಗ ನಾನು ನಿನ್ನ ಪುತ್ರನನ್ನು ವನಕ್ಕೆ ತಲುಪಿಸಿ ಬಂದಿರುವೆನು ಎಂಬ ಅಪ್ರಿಯ ಸತ್ಯವನ್ನು ನಾನು ಹೇಗೆ ಹೇಳಲಿ.॥45-46॥

ಮೂಲಮ್ - 47

ಮಮ ತಾವನ್ನಿಯೋಗಸ್ಥಾಸ್ತ್ವದ್ಬಂಧುಜನವಾಹಿನಃ ।
ಕಥಂ ರಥಂ ತ್ವಯಾಹೀನಂ ಪ್ರವಾಹ್ಯಂತಿ ಹಯೋತ್ತಮಾಃ ॥

ಅನುವಾದ

ಈ ಉತ್ತಮ ಕುದುರೆಗಳು ನನ್ನ ಆಜ್ಞೆಯಲ್ಲಿ ಇದ್ದು ನಿನ್ನ ಬಂಧುಗಳ ಭಾರವನ್ನು ಹೋರುವುವು. (ನಿನ್ನ ಬಂಧುಜನರಿಂದ ರಹಿತವಾದ ರಥವನ್ನು ಇವು ಎಳೆಯಲಾರವು.) ಇಂತಹ ಸ್ಥಿತಿಯಲ್ಲಿ ನಿನ್ನಿಂದ ಬರಿದಾದ ರಥವನ್ನು ಹೇಗೆ ಎಳೆದುಕೊಂಡು ಹೋಗಬಲ್ಲವು.॥47॥

ಮೂಲಮ್ - 48

ತನ್ನ ಶಕ್ಷ್ಯಾಮ್ಯಹಂ ಗಂತುಮಯೋಧ್ಯಾಂ ತ್ವದೃತೇಽನಘ ।
ವನವಾಸಾನುಯಾನಾಯ ಮಾಮನುಜ್ಞಾತುಮರ್ಹಸಿ ॥

ಅನುವಾದ

ಆದ್ದರಿಂದ ನಿಷ್ಪಾಪ ರಾಘವನೇ! ಈಗ ನಾನು ನೀವಿಲ್ಲದೆ ಅಯೋಧ್ಯೆಗೆ ಮರಳಿ ಹೋಗಲಾರೆನು. ನನಗೂ ನಿಮ್ಮೊಂದಿಗೆ ವನಕ್ಕೆ ಬರಲು ಅಪ್ಪಣೆ ಕೊಡಿರಿ.॥48॥

ಮೂಲಮ್ - 49

ಯದಿ ಮೇ ಯಾಚಮಾನಸ್ಯ ತ್ಯಾಗಮೇವ ಕರಿಷ್ಯಸಿ ।
ಸರಥೋಽಗ್ನಿಂ ಪ್ರವೇಕ್ಷ್ಯಾಮಿ ತ್ಯಕ್ತಮಾತ್ರ ಇಹ ತ್ವಯಾ ॥

ಅನುವಾದ

ಈ ಪ್ರಕಾರ ಯಾಚಿಸಿದರೂ ನೀವು ನನ್ನನ್ನು ತ್ಯಜಿಸಿದರೆ, ನಿಮ್ಮಿಂದ ಪರಿತ್ಯಕ್ತನಾದ ನಾನು ಇಲ್ಲಿ ರಥಸಹಿತ ಅಗ್ನಿಯಲ್ಲಿ ಪ್ರವೇಶಿಸುವೆನು.॥49॥

ಮೂಲಮ್ - 50

ಭವಿಷ್ಯಂತಿ ವನೇ ಯಾನಿ ತಪೋವಿಘ್ನಕರಾಣಿ ತೇ ।
ರಥೇನ ಪ್ರತಿಬಾಧಿಷ್ಯೇ ತಾನಿ ಸರ್ವಾಣಿ ರಾಘವ ॥

ಅನುವಾದ

ರಘುನಂದನ! ಕಾಡಿನಲ್ಲಿ ನಿನ್ನ ತಪಸ್ಸಿನಲ್ಲಿ ವಿಘ್ನವನ್ನು ಒಡ್ಡುವ ಜೀವ-ಜಂತುಗಳನ್ನು ನಾನು ಈ ರಥದ ಮೂಲಕ ದೂರ ಓಡಿಸಿ ಬಿಡುವೆನು.॥50॥

ಮೂಲಮ್ - 51

ತ್ವತ್ಕೃತೇನ ಮಯಾ ಪ್ರಾಪ್ತಂ ರಥಚರ್ಯಾಕೃತಂ ಸುಖಮ್ ।
ಆಶಂಸೇ ತ್ವತ್ಕೃತೇನಾಹಂ ವನವಾಸಕೃತಂ ಸುಖಮ್ ॥

ಅನುವಾದ

ಶ್ರೀರಾಮ! ನಿಮ್ಮ ಕೃಪೆಯಿಂದ ನಿಮ್ಮನ್ನು ರಥದಲ್ಲಿ ಕುಳ್ಳಿರಿಸಿಕೊಂಡು ಇಲ್ಲಿಯವರೆಗೆ ತರುವ ಸುಖ ನನಗೆ ಪ್ರಾಪ್ತವಾಯಿತು. ಈಗ ತಮ್ಮ ಅನುಗ್ರಹದಿಂದಲೇ ನಾನು ನಿಮ್ಮೊಂದಿಗೆ ವನದಲ್ಲಿ ಇರುವ ಸುಖವನ್ನು ಪಡೆಯಲು ಆಶಿಸುತ್ತಿರುವೆನು.॥51॥

ಮೂಲಮ್ - 52

ಪ್ರಸೀದೇಚ್ಛಾಮಿ ತೇಽರಣ್ಯೇ ಭವಿತುಂ ಪ್ರತ್ಯನಂತರಃ ।
ಪ್ರೀತ್ಯಾಭಿಹಿತಮಿಚ್ಛಾಮಿ ಭವ ಮೇ ಪ್ರತ್ಯನಂತರಃ ॥

ಅನುವಾದ

ನಾನು ವನದಲ್ಲಿ ನಿನ್ನ ಬಳಿಯೇ ಇರಲು ಬಯಸುತ್ತಿದ್ದೇನೆ, ನೀನು ಪ್ರಸನ್ನನಾಗಿ ಅಪ್ಪಣೆ ಕೊಡಿರಿ. ನೀವು ಸಂತೋಷದಿಂದ ‘ನೀನು ವನದಲ್ಲಿ ನನ್ನೊಂದಿಗೆ ಇರು’ ಎಂದು ಹೇಳಬೇಕೆಂದು ಇಚ್ಛಿಸುತ್ತೇನೆ.॥52॥

ಮೂಲಮ್ - 53

ಇಮೇಽಪಿ ಚ ಹಯಾ ವೀರ ಯದಿ ತೇ ವನವಾಸಿನಃ ।
ಪರಿಚರ್ಯಾಂ ಕರಿಷ್ಯಂತಿ ಪ್ರಾಪ್ಸ್ಯಂತಿ ಪರಮಾಂ ಗತಿಮ್ ॥

ಅನುವಾದ

ವೀರನೇ! ಈ ಕುದುರೆಗಳೂ ಕೂಡ ಕಾಡಿನಲ್ಲಿ ಇರುತ್ತಾ ನಿನ್ನ ಸೇವೆ ಮಾಡುವುವು. ಅದರಿಂದ ಇವುಗಳಿಗೂ ಪರಮಗತಿ ಪ್ರಾಪ್ತವಾಗುವುದು.॥53॥

ಮೂಲಮ್ - 54

ತವ ಶುಶ್ರೂಷಣಂ ಮೂರ್ಧ್ನಾ ಕರಿಷ್ಯಾಮಿ ವನೇ ವಸನ್ ।
ಅಯೋಧ್ಯಾಂ ದೇವಲೋಕಂ ವಾ ಸರ್ವಥಾ ಪ್ರಜಹಾಮ್ಯಹಮ್ ॥

ಅನುವಾದ

ಪ್ರಭೋ! ನಾನು ವನದಲ್ಲಿ ಇದ್ದು ನನ್ನ ಇಡೀ ಶರೀರದಿಂದ ನಿಮ್ಮ ಸೇವೆ ಮಾಡುವೆನು. ಈ ಸುಖದ ಮುಂದೆ ಅಯೋಧ್ಯೆಯನ್ನು, ದೇವಲೋಕವನ್ನು ಪೂರ್ಣವಾಗಿ ತ್ಯಜಿಸಬಲ್ಲೆನು.॥54॥

ಮೂಲಮ್ - 55

ನಹಿ ಶಕ್ಯಾ ಪ್ರವೇಷ್ಟುಂ ಸಾ ಮಯಾಯೋಧ್ಯಾ ತ್ವಯಾ ವಿನಾ ।
ರಾಜಧಾನೀ ಮಹೇಂದ್ರಸ್ಯ ಯಥಾ ದುಷ್ಕೃತಕರ್ಮಣಾ ॥

ಅನುವಾದ

ಸದಾಚಾರಹೀನನಾದ ಪ್ರಾಣಿ ಇಂದ್ರನ ರಾಜಧಾನಿ ಸ್ವರ್ಗದಲ್ಲಿ ಪ್ರವೇಶಿಸಲಾರದೋ, ಹಾಗೆಯೇ ನೀನಿಲ್ಲದೆ ನಾನು ಅಯೋಧ್ಯಾ ಪುರಿಗೆ ಹೋಗಲಾರೆನು.॥55॥

ಮೂಲಮ್ - 56

ವನವಾಸೇ ಕ್ಷಯಂ ಪ್ರಾಪ್ತೇ ಮಮೈಷ ಹಿ ಮನೋರಥಃ ।
ಯದನೇನ ರಥೇನೈವ ತ್ವಾಂ ವಹೇಯಂ ಪುರೀಂ ಪುನಃ ॥

ಅನುವಾದ

ವನವಾಸದ ಅವಧಿ ಮುಗಿದಾಗ ಮತ್ತೆ ಇದೇ ರಥದಲ್ಲಿ ಕುಳ್ಳಿರಿಸಿಕೊಂಡು ನಿಮ್ಮನ್ನು ಅಯೋಧ್ಯೆಗೆ ಕರೆದುಕೊಂಡು ಹೋಗುವೆನು.॥56॥

ಮೂಲಮ್ - 57

ಚತುದರ್ಶ ಹಿ ವರ್ಷಾಣಿ ಸಹಿತಸ್ಯ ತ್ವಯಾವನೇ ।
ಕ್ಷಣಭೂತಾನಿ ಯಾಸ್ಯಂತಿ ಶತಸಂಖ್ಯಾನಿ ಚಾನ್ಯಥಾ ॥

ಅನುವಾದ

ಕಾಡಿನಲ್ಲಿ ನಿನ್ನೊಂದಿಗೆ ಇರುವುದರಿಂದ ಈ ಹದಿನಾಲ್ಕು ವರ್ಷಗಳು ಹದಿನಾಲ್ಕು ಕ್ಷಣಗಳಂತೆ ಕಳೆದು ಹೋದಾವು. ಇಲ್ಲದಿದ್ದರೆ ಹದಿನಾಲ್ಕು ಸಾವಿರ ವರ್ಷಗಳಂತೆ ಕಂಡುಬರುವವು.॥57॥

ಮೂಲಮ್ - 58

ಭೃತ್ಯವತ್ಸಲ ತಿಷ್ಠಂತಂ ಭರ್ತೃಪುತ್ರಗತೇ ಪಥಿ ।
ಭಕ್ತಂ ಭೃತ್ಯಂ ಸ್ಥಿತಂ ಸ್ಥಿತ್ಯಾ ನ ಮಾ ತ್ವಂ ಹಾತುಮರ್ಹಸಿ ॥

ಅನುವಾದ

ಆದ್ದರಿಂದ ಭಕ್ತವತ್ಸಲನೇ! ನೀವು ನನ್ನ ಸ್ವಾಮಿಯ ಪುತ್ರನಾಗಿರುವಿರಿ. ನೀವು ನಡೆಯುತ್ತಿರುವ ಪಥದಲ್ಲೇ ನಿಮ್ಮ ಸೇವೆಗಾಗಿ ನಿಮ್ಮೊಂದಿಗೆ ನಡೆಯಲು ನಾನು ಸಿದ್ಧನಾಗಿರುವೆನು. ನಾನು ನಿಮ್ಮಲ್ಲಿ ಭಕ್ತಿಯನ್ನಿರಿಸಿರುವೆನು, ನಿಮ್ಮ ಭೃತ್ಯನಾಗಿದ್ದೇನೆ ಮತ್ತು ಭೃತ್ಯಜನರಿಗೆ ಉಚಿತವಾದ ಸೀಮೆಯೊಳಗೆ ಸ್ಥಿತನಾಗಿದ್ದೇನೆ. ನೀವು ನನ್ನನ್ನು ತ್ಯಜಿಸಬೇಡ.॥58॥

ಮೂಲಮ್ - 59

ಏವಂ ಬಹುವಿಧಂ ದೀನಂ ಯಾಚಮಾನಂ ಪುನಃ ಪುನಃ ।
ರಾಮೋ ಭೃತ್ಯಾನುಕಂಪೀ ತು ಸುಮಂತ್ರಮಿದಮಬ್ರವೀತ್ ॥

ಅನುವಾದ

ಹೀಗೆ ಅನೇಕ ವಿಧದಿಂದ ದೀನ ಮಾತುಗಳನ್ನು ಹೇಳಿ ಪದೇ-ಪದೇ ಯಾಚಿಸುತ್ತಿರುವ ಸುಮಂತ್ರನಲ್ಲಿ ಸೇವಕರ ಮೇಲೆ ಕೃಪೆ ಮಾಡುವ ಶ್ರೀರಾಮನು ಈ ಪ್ರಕಾರ ಹೇಳಿದನು.॥59॥

ಮೂಲಮ್ - 60

ಜಾನಾಮಿ ಪರಮಾಂ ಭಕ್ತಿಮಹಂ ತೇಭರ್ತೃವತ್ಸಲ ।
ಶೃಣು ಚಾಪಿ ಯದರ್ಥಂ ತ್ವಾಂ ಪ್ರೇಷಯಾಮಿ ಪುರೀಮಿತಃ ॥

ಅನುವಾದ

ಸುಮಂತ್ರನೇ! ನೀನು ಸ್ವಾಮಿಯ ಕುರಿತು ಸ್ನೇಹವನ್ನಿರಿಸುವವನು. ನನ್ನಲ್ಲಿ ನನ್ನ ಕುರಿತಾದ ಉತ್ಕೃಷ್ಟ ಭಕ್ತಿ ಇರುವುದನ್ನು ತಿಳಿದಿರುವೆನು. ಹೀಗಿದ್ದರೂ ಯಾವ ಕಾರ್ಯಕ್ಕಾಗಿ ನಾನು ನಿನ್ನನ್ನು ಅಯೋಧ್ಯೆಗೆ ಕಳಿಸುತ್ತಿರುವೆನೋ ಅದನ್ನು ಕೇಳು.॥60॥

ಮೂಲಮ್ - 61

ನಗರೀಂ ತ್ವಾಂ ಗತಂ ದೃಷ್ಟ್ವಾ ಜನನೀ ಮೇ ಯವೀಯಸೀ ।
ಕೈಕೇಯೀ ಪ್ರತ್ಯಯಂ ಗಚ್ಛೇದಿತಿ ರಾಮೋ ವನಂ ಗತಃ ॥

ಅನುವಾದ

ನೀನು ನಗರಕ್ಕೆ ಮರಳಿ ಹೋದಾಗ ನಿನ್ನನ್ನು ನೋಡಿ ನನ್ನ ಚಿಕ್ಕಮ್ಮ ಕೈಕೇಯಿಗೆ ರಾಮನು ವನವಾಸಕ್ಕೆ ಹೋಗಿರುವನು ಎಂಬ ವಿಶ್ವಾಸ ಉಂಟಾದೀತು.॥61॥

ಮೂಲಮ್ - 62

ವಿಪರೀತೇ ತುಷ್ಟಿಹೀನಾ ವನವಾಸಂ ಗತೇ ಮಯಿ ।
ರಾಜಾನಂ ನಾತಿಶಂಕೇತ ಮಿಥ್ಯಾವಾದೀತಿ ಧಾರ್ಮಿಕಮ್ ॥

ಅನುವಾದ

ಇದಕ್ಕೆ ವಿಪರೀತವಾಗಿ ನೀನು ಹೋಗದಿದ್ದರೆ ಆಕೆಗೆ ಸಂತೋಷವಾಗಲಾರದು. ನಾನು ವನವಾಸಿಯಾದರೂ ಕೂಡ ಅವಳು ಧರ್ಮಪರಾಯಣ ಮಹಾರಾಜರ ಕುರಿತು ಮಿಥ್ಯಾಸಂದೇಹ ಪಡುವುದು ನಾನು ಬಯಸುವುದಿಲ್ಲ.॥62॥

ಮೂಲಮ್ - 63

ಏಷ ಮೇ ಪ್ರಥಮಃ ಕಲ್ಪೋ ಯದಂಬಾ ಮೇ ಯವೀಯಸೀ ।
ಭರತಾರಕ್ಷಿತಂ ಸ್ಫೀತಂ ಪುತ್ರರಾಜ್ಯಮವಾಪ್ಸ್ಯತೇ ॥

ಅನುವಾದ

ನಿನ್ನನ್ನು ಕಳಿಸುವುದರಲ್ಲಿ ಮುಖ್ಯ ಉದ್ದೇಶ-ನನ್ನ ಚಿಕ್ಕಮ್ಮ ಕೈಕೇಯಿಯು ಭರತನ ಮೂಲಕ ಸುರಕ್ಷಿತ ಸಮೃದ್ಧಶಾಲಿ ರಾಜ್ಯವನ್ನು ಕೈವಶ ಮಾಡಿಕೊಳ್ಳಲೆಂದೇ ಆಗಿದೆ.॥63॥

ಮೂಲಮ್ - 64

ಮಮ ಪ್ರಿಯಾರ್ಥಂ ರಾಜ್ಞಶ್ಚ ಸುಮಂತ್ರ ತ್ವಂ ಪುರೀಂ ವ್ರಜ ।
ಸಂದಿಷ್ಟಶ್ಚಾಪಿ ಯಾನರ್ಥಾಂಸ್ತಾಂಸ್ತಾನ್ಬ್ರೂಯಾಸ್ತಥಾ ತಥಾ ॥

ಅನುವಾದ

ಸುಮಂತ್ರನೇ! ನನ್ನ ಮತ್ತು ಮಹಾರಾಜರ ಸಂತೋಷಕ್ಕಾಗಿ ನೀನು ಅಯೋಧ್ಯೆಗೆ ಅವಶ್ಯವಾಗಿ ತೆರಳಬೇಕು. ಯಾರಿಗಾಗಿ ಯಾವ ಸಂದೇಶ ಕೊಡಲಾಗಿದೆಯೋ ಅದೆಲ್ಲವನ್ನು ಅವರವರಿಗೆ ನೀನು ತಿಳಿಸಬೇಕು.॥64॥

ಮೂಲಮ್ - 65

ಇತ್ಯುಕ್ತ್ವಾ ವಚನಂ ಸೂತಂ ಸಾಂತ್ವಯಿತ್ವಾ ಪುನಃ ಪುನಃ ।
ಗುಹಂ ವಚನಮಕ್ಲೀಬೋ ರಾಮೋ ಹೇತುಮದಬ್ರವೀತ್ ॥

ಅನುವಾದ

ಹೀಗೆ ಹೇಳಿ ಶ್ರೀರಾಮನು ಸುಮಂತ್ರನನ್ನು ಪದೇ-ಪದೇ ಸಾಂತ್ವನಗೊಳಿಸಿದನು. ಅನಂತರ ಅವನು ಗುಹನಲ್ಲಿ ಉತ್ಸಾಹದಿಂದ ಹೀಗೆ ಯುಕ್ತಿಯುಕ್ತವಾಗಿ ನುಡಿದನು.॥65॥

ಮೂಲಮ್ - 66

ನೇದಾನೀಂ ಗುಹ ಯೋಗ್ಯೋಯಂ ವಾಸೋ ಮೇ ಸಜನೇ ವನೇ ।
ಅವಶ್ಯಮಾಶ್ರಮೇ ವಾಸಃ ಕರ್ತವ್ಯಸ್ತದ್ಗತೋ ವಿಧಿಃ ॥

ಅನುವಾದ

ನಿಷಾದರಾಜ ಗುಹನೇ! ಈಗ ನನಗೆ ನಾಗರಿಕರು ಬಂದು ಹೋಗುವಂತಹ ವನದಲ್ಲಿ ಇರುವುದು ಉಚಿತವಲ್ಲ. ಈಗ ನಿರ್ಜನ ವನದ ಆಶ್ರಮದಲ್ಲೇ ನಾನು ಇರುವುದು ಆವಶ್ಯಕವಾಗಿದೆ. ಅದಕ್ಕಾಗಿ ಜಟಾಧಾರಣ ಮುಂತಾದ ಆವಶ್ಯಕ ವಿಧಿಯನ್ನು ನಾನು ಪಾಲಿಸಬೇಕಾಗಿದೆ.॥66॥

ಮೂಲಮ್ - 67

ಸೋಽಹಂ ಗೃಹೀತ್ವಾ ನಿಯಮಂ ತಪಸ್ವಿಜನಭೂಷಣಮ್ ।
ಹಿತಕಾಮಃ ಪಿತುಭೂರ್ಯಃ ಸೀತಾಯಾ ಲಕ್ಷ್ಮಣಸ್ಯ ಚ ॥

ಮೂಲಮ್ - 68

ಜಟಾಃ ಕೃತ್ವಾ ಗಮಿಷ್ಯಾಮಿ ನ್ಯಗ್ರೋಧಕ್ಷೀರಮಾನಯ ।
ತತ್ಕ್ಷೀರಂ ರಾಜಪುತ್ರಾಯ ಗುಹಃ ಕ್ಷಿಪ್ರಮುಪಾಹರತ್ ॥

ಅನುವಾದ

‘ಆದ್ದರಿಂದ ಫಲ-ಮೂಲಗಳ ಆಹಾರ, ನೆಲದ ಮೇಲೆ ಮಲಗುವುದು ಮುಂತಾದ ನಿಯಮಗಳನ್ನು ಸ್ವೀಕರಿಸಿ ನಾನು ಸೀತೆ ಮತ್ತು ಲಕ್ಷ್ಮಣನ ಅನುಮತಿ ಪಡೆದು ತಂದೆಯ ಹಿತವನ್ನು ಮಾಡುವುದಕ್ಕಾಗಿ ತಲೆಯಲ್ಲಿ ತಪಸ್ವಿಗಳಂತೆ ಭೂಷಣಪ್ರಾಯ ಜಟೆಯನ್ನು ಧರಿಸಿ ಇಲ್ಲಿಂದ ವನಕ್ಕೆ ಹೋಗುವೆನು. ನನ್ನ ಕೂದಲುಗಳನ್ನು ಜಟೆಯಾಗಿಸಲು ಆಲದ ಹಾಲನ್ನು ತಂದುಕೊಡು.’ ಗುಹನು ಕೂಡಲೇ ಆಲದ ಹಾಲನ್ನು ತಂದುಕೊಟ್ಟನು.॥67-68॥

ಮೂಲಮ್ - 69

ಲಕ್ಷ್ಮಣಸ್ಯಾತ್ಮನಶ್ಚೈವ ರಾಮಸ್ತೇನಾಕರೋಜ್ಜಟಾಃ ।
ದೀರ್ಘಬಾಹುರ್ನರವ್ಯಾಘ್ರೋ ಜಟಿಲತ್ವಮಧಾರಯತ್ ॥

ಅನುವಾದ

ಶ್ರೀರಾಮನು ಅದರಿಂದ ಲಕ್ಷ್ಮಣನ ಮತ್ತು ತನ್ನ ಜಟೆಯನ್ನು ಕಟ್ಟಿಕೊಂಡನು. ಮಹಾಬಾಹು ಪುರುಷಸಿಂಹ ಶ್ರೀರಾಮನು ತತ್ಕ್ಷಣ ಜಟಾಧಾರಿಯಾದನು.॥69॥

ಮೂಲಮ್ - 70

ತೌ ತದಾ ಚೀರಸಂಪನ್ನೌ ಜಟಾಮಂಡಲಧಾರಿಣೌ ।
ಅಶೋಭೇತಾಮೃಷಿಸವೌ ಭ್ರಾತರೌ ರಾಮಲಕ್ಷ್ಮಣೌ ॥

ಅನುವಾದ

ಆಗ ಆ ಇಬ್ಬರೂ ಸಹೋದರ ಶ್ರೀರಾಮ-ಲಕ್ಷ್ಮಣರು ವಲ್ಕಲವಸ್ತ್ರ ಮತ್ತು ಜಟಾಧಾರಿಗಳಾಗಿ ಋಷಿಗಳಂತೆ ಶೋಭಿಸತೊಡಗಿದರು.॥70॥

ಮೂಲಮ್ - 71

ತತೋ ವೈಖಾನಸಂ ಮಾರ್ಗಮಾಸ್ಥಿತಃ ಸಹಲಕ್ಷ್ಮಣಃ ।
ವ್ರತಮಾದಿಷ್ಟವಾನ್ ರಾಮಃ ಸಹಾಯಂ ಗುಹಮಬ್ರವೀತ್ ॥

ಅನುವಾದ

ಅನಂತರ ವಾನಪ್ರಸ್ಥಮಾರ್ಗವನ್ನು ಆಶ್ರಯಿಸಿ ಲಕ್ಷ್ಮಣಸಹಿತ ಶ್ರೀರಾಮನು ವಾಸ ಪ್ರಸ್ಥೋಚಿತ ವ್ರತವನ್ನು ಸ್ವೀಕರಿಸಿದನು. ಬಳಿಕ ಅವನು ತನ್ನ ಸಹಾಯಕ ಗುಹನಲ್ಲಿ ಹೇಳಿದನು.॥71॥

ಮೂಲಮ್ - 72

ಅಪ್ರಮತ್ತೋ ಬಲೇ ಕೋಶೇ ದುರ್ಗೇ ಜನಪದೇ ತಥಾ ।
ಭವೇಥಾ ಗುಹ ರಾಜ್ಯಂ ಹಿ ದುರಾರಕ್ಷತಮಂ ಮತಮ್ ॥

ಅನುವಾದ

ನಿಷಾದರಾಜನೇ! ನೀನು ಸೈನ್ಯ, ಭಂಡಾರ, ಕೋಟೆ ಮತ್ತು ರಾಜ್ಯದ ವಿಷಯದಲ್ಲಿ ಸದಾ ಜಾಗರೂಕನಾಗಿ ಇರಬೇಕು; ಏಕೆಂದರೆ ರಾಜ್ಯದ ರಕ್ಷಣೆಯ ಕಾರ್ಯ ಬಹಳ ಕಠಿಣವಾಗಿದೆ.॥72॥

ಮೂಲಮ್ - 73

ತತಸ್ತಂ ಸಮನುಜ್ಞಾಪ್ಯ ಗುಹಮಿಕ್ಷ್ವಾಕುನಂದನಃ ।
ಜಗಾಮ ತೂರ್ಣಮವ್ಯಗ್ರಃ ಸಭಾರ್ಯಃ ಸಹಲಕ್ಷ್ಮಣಃ ॥

ಅನುವಾದ

ಗುಹನಿಗೆ ಹೀಗೆ ಆಜ್ಞಾಪಿಸಿ ಅವನಿಂದ ಬೀಳ್ಕೊಂಡು ಇಕ್ಷ್ವಾಕುಕುಲನಂದನ ಶ್ರೀರಾಮನು ಪತ್ನೀ ಮತ್ತು ಲಕ್ಷ್ಮಣರೊಂದಿಗೆ ಕೂಡಲೇ ಅಲ್ಲಿಂದ ಹೊರಟನು. ಆಗ ಅವನ ಮನಸ್ಸಿನಲ್ಲಿ ಕೊಂಚವೂ ವ್ಯಗ್ರತೆ ಇರಲಿಲ್ಲ.॥73॥

ಮೂಲಮ್ - 74

ಸ ತು ದೃಷ್ಟ್ವಾ ನದೀತೀರೇ ನಾವಮಿಕ್ಷ್ವಾಕು ನಂದನಃ ।
ತಿತೀರ್ಷುಃ ಶೀಘ್ರಗಾಂ ಗಂಗಾಮಿದಂವಚನಮಬ್ರವೀತ್ ॥

ಅನುವಾದ

ನದೀತೀರದಲ್ಲಿ ನಿಂತಿದ್ದ ನಾವೆಯನ್ನು ನೋಡಿ ಇಕ್ಷ್ವಾಕು ಕುಲನಂದನ ಶ್ರೀರಾಮನು ಶೀಘ್ರಗಾಮಿ ಗಂಗೆಯನ್ನು ದಾಟಿಹೋಗುವ ಇಚ್ಛೆಯಿಂದ ಲಕ್ಷ್ಮಣನನ್ನು ಸಂಬೋಧಿಸಿ ಇಂತೆದನು.॥74॥

ಮೂಲಮ್ - 75

ಆರೋಹ ತ್ವಂ ನರವ್ಯಾಘ್ರ ಸ್ಥಿತಾಂ ನಾವಮಿಮಾಂ ಶನೈಃ ।
ಸೀತಾಂ ಚಾರೋಪಯಾನ್ವಕ್ಷಂ ಪರಿಗೃಹ್ಯ ಮನಸ್ವಿನೀಮ್ ॥

ಅನುವಾದ

ಪುರುಷಸಿಂಹನೇ! ಇದೋ ಎದುರಿಗೆ ದೋಣಿ ನಿಂತಿದೆ. ನೀನು ಮನಸ್ವಿನೀ ಸೀತೆಗೆ ಆಸರೆಯಾಗಿ ನಿಧಾನವಾಗಿ ದೋಣಿ ಹತ್ತಿಸು. ಮತ್ತೆ ನೀನು ನಾವೆಯಲ್ಲಿ ಕುಳಿತುಕೋ.॥75॥

ಮೂಲಮ್ - 76

ಸ ಭ್ರಾತುಃ ಶಾಸನಂ ಶ್ರುತ್ವಾಸರ್ವಮಪ್ರತಿಕೂಲಯನ್ ।
ಆರೋಪ್ಯ ಮೈಥಿಲೀಂ ಪೂರ್ವಮಾರುರೋಹಾತ್ಮವಾಂಸ್ತತಃ ॥

ಅನುವಾದ

ಅಣ್ಣನ ಆದೇಶವನ್ನು ಕೇಳಿ ಮನಸ್ಸನ್ನು ವಶದಲ್ಲಿರಿಸಿ ಕೊಂಡ ಲಕ್ಷ್ಮಣನು ಪೂರ್ಣವಾಗಿ ರಾಮನಿಗೆ ಅನುಕೂಲವಾಗಿ ನಡೆಯುತ್ತಾ ಮೊದಲಿಗೆ ಸೀತೆಯನ್ನು ನಾವೆಯಲ್ಲಿ ಕುಳ್ಳಿರಿಸಿ ಮತ್ತೆ ತಾನೂ ಅದನ್ನು ಹತ್ತಿದನು.॥76॥

ಮೂಲಮ್ - 77

ಅಥಾರುರೋಹ ತೇಜಸ್ವೀ ಸ್ವಯಂ ಲಕ್ಷ್ಮಣಪೂರ್ವಜಃ ।
ತತೋ ನಿಷಾದಾಧಿಪತಿರ್ಗುಹೋ ಜ್ಞಾತೀನಚೋದಯತ್ ॥

ಅನುವಾದ

ಕೊನೆಗೆ ಲಕ್ಷ್ಮಣನ ಅಣ್ಣ ತೇಜಸ್ವೀ ಶ್ರೀರಾಮನು ಸ್ವತಃ ನಾವೆಯಲ್ಲಿ ಕುಳಿತನು. ಬಳಿಕ ನಿಷಾದರಾಜ ಗುಹನು ತನ್ನ ಬಂಧುಗಳಿಗೆ ನಾವೆಯನ್ನು ನಡೆಸಲು ಆದೇಶಿಸಿದನು.॥77॥

ಮೂಲಮ್ - 78

ರಾಘವೋಽಪಿ ಮಹಾತೇಜಾ ನಾವಮಾರುಹ್ಯ ತಾಂ ತತಃ ।
ಬ್ರಹ್ಮವತ್ಕ್ಷತ್ರವಚ್ಚೈವ ಜಜಾಪ ಹಿತಮಾತ್ಮನಃ ॥

ಅನುವಾದ

ಮಹಾ ತೇಜಸ್ವೀ ಶ್ರೀರಾಮನು ನಾವೆಯಲ್ಲಿ ಕುಳಿತುಕೊಂಡು ತನ್ನ ಹಿತದ ಉದ್ದೇಶದಿಂದ ಬ್ರಾಹ್ಮಣ ಮತ್ತು ಕ್ಷತ್ರಿಯರು ಜಪಿಸು ವಂತಹ ‘ದೈವೀನಾವ’ ಮುಂತಾದ ವೈದಿಕ ಮಂತ್ರಗಳನ್ನು ಜಪಿಸತೊಡಗಿದನು.॥78॥

ಮೂಲಮ್ - 79

ಆಚಮ್ಯ ಚ ಯಥಾಶಾಸ್ತ್ರಂ ನದೀಂ ತಾಂ ಸಹ ಸೀತಯಾ ।
ಪ್ರಣವತ್ಪ್ರೀತಿಸಂತುಷ್ಟೋ ಲಕ್ಷ್ಮಣಶ್ಚ ಮಹಾರಥಃ ॥

ಅನುವಾದ

ಮತ್ತೆ ಶಾಸ್ತ್ರವಿಧಿಗನುಸಾರ ಆಚಮನ ಮಾಡಿ ಸೀತೆಯೊಂದಿಗೆ ಅವನು ಪ್ರಸನ್ನಚಿತ್ತನಾಗಿ ಗಂಗೆಗೆ ಪ್ರಣಾಮ ಮಾಡಿದನು. ಮಹಾರಥೀ ಲಕ್ಷ್ಮಣನೂ ಕೂಡ ಗಂಗೆಗೆ ತಲೆಬಾಗಿದನು.॥79॥

ಮೂಲಮ್ - 80

ಅನುಜ್ಞಾಯ ಸುಮಂತ್ರಂ ಚ ಸಬಲಂ ಚೈವ ತಂ ಗುಹಮ್ ।
ಆಸ್ಥಾಯ ನಾವಂ ರಾಮಸ್ತು ಚೋದಯಾಮಾಸ ನಾವಿಕಾನ್ ॥

ಅನುವಾದ

ಅನಂತರ ಶ್ರೀರಾಮನು ಸುಮಂತ್ರನಿಗೆ ಮತ್ತು ಸೇನಾ ಸಹಿತ ಗುಹನನ್ನು ಹೋಗಲು ಆಜ್ಞಾಪಿಸಿ, ನಾವೆಯಲ್ಲಿ ಸರಿಯಾಗಿ ಕುಳಿತುಕೊಂಡು ಅಂಬಿಗರಿಗೆ ದೋಣಿ ನಡೆಸುವಂತೆ ಆದೇಶಿಸಿದನು.॥80॥

ಮೂಲಮ್ - 81

ತತಸ್ತೈಶ್ಚಾಲಿತಾ ನೌಕಾ ಕರ್ಣಧಾರಸಮಾಹಿತಾ ।
ಶುಭಸ್ಫ್ಯವೇಗಾಭಿಹತಾ ಶೀಘ್ರಂ ಸಲಿಲಮತ್ಯಗಾತ್ ॥

ಅನುವಾದ

ಬಳಿಕ ಅಂಬಿಗರು ದೋಣಿಯನ್ನು ನಡೆಸಿದರು. ಕಪ್ತಾನನು ಎಚ್ಚರವಾಗಿ ಅದನ್ನು ನಿಯಂತ್ರಿಸುತ್ತಿದ್ದನು. ವೇಗವಾಗಿ ಹುಟ್ಟುಹಾಕುವುದರಿಂದ ಆ ನಾವೆಯು ಬಹಳ ವೇಗವಾಗಿ ನೀರಿನಮೇಲೆ ಸಾಗಿತು.॥81॥

ಮೂಲಮ್ - 82

ಮಧ್ಯಂ ತು ಸಮನುಪ್ರಾಪ್ಯ ಭಾಗೀರಥ್ಯಾಸ್ತ್ವನಿಂದಿತಾ ।
ವೈದೇಹೀ ಪ್ರಾಂಜಲಿರ್ಭೂತ್ವಾ ತಾಂ ನದೀಮಿದಮಬ್ರವೀತ್ ॥

ಅನುವಾದ

ಭಾಗೀರಥೀ ನದಿಯ ನಡುವಿಗೆ ಬಂದಾಗ ಸತೀಸಾಧ್ವೀ ವಿದೇಹನಂದಿನೀ ಸೀತೆಯು ಕೈಮುಗಿದು ಗಂಗೆಯನ್ನು ಹೀಗೆ ಪ್ರಾರ್ಥಿಸಿದಳು.॥82॥

ಮೂಲಮ್ - 83

ಪುತ್ರೋ ದಶರಥಾಸ್ಯಾಯಂ ಮಹಾರಾಜಸ್ಯ ಧೀಮತಃ ।
ನಿದೇಶಂ ಪಾಲಯತ್ವೇನಂ ಗಂಗೇ ತ್ವದಭಿರಕ್ಷಿತಃ ॥

ಅನುವಾದ

ದೇವಿಗಂಗೇ! ಇವರು ಪರಮಬುದ್ಧಿವಂತ ದಶರಥ ಮಹಾರಾಜರ ಪುತ್ರರು ಪಿತೃವಾಕ್ಯಪರಿಪಾಲನೆಗಾಗಿ ವನಕ್ಕೆ ಹೋಗುತ್ತಿದ್ದಾರೆ. ಇವರು ನಿನ್ನಿಂದ ಸುರಕ್ಷಿತರಾಗಿ ಪಿತನ ಆಜ್ಞೆಯನ್ನು ಪಾಲಿಸುವಂತೆ ಅನುಗ್ರಹಿಸು.॥83॥

ಮೂಲಮ್ - 84

ಚತುರ್ದಶ ಹಿ ವರ್ಷಾಣಿ ಸಮಗ್ರಾಣ್ಯುಷ್ಯಕಾನನೇ ।
ಭ್ರಾತ್ರಾ ಸಹ ಮಯಾ ಚೈವ ಪುನಃ ಪ್ರತ್ಯಾಗಮಿಷ್ಯತಿ ॥

ಅನುವಾದ

ವನದಲ್ಲಿ ಹದಿನಾಲ್ಕು ವರ್ಷ ವಾಸಿಸಿ ಇವರು ನನ್ನೊಂದಿಗೆ ಹಾಗೂ ಲಕ್ಷ್ಮಣನೊಂದಿಗೆ ಪುನಃ ಅಯೋಧ್ಯೆಗೆ ಮರಳುವರು.॥84॥

ಮೂಲಮ್ - 85

ತತಸ್ತ್ವಾಂ ದೇವಿ ಸುಭಗೇ ಕ್ಷೇಮೇಣ ಪುನರಾಗತಾ ।
ಯಕ್ಷ್ಯೇ ಪ್ರಮುದಿತಾ ಗಂಗೇ ಸರ್ವಕಾಮಸಮೃದ್ಧಿನೀ ॥

ಅನುವಾದ

ಸೌಭಾಗ್ಯಶಾಲಿನೀ ದೇವಿಗಂಗೇ! ಆಗ ವನದಿಂದ ಪುನಃ ಕ್ಷೇಮವಾಗಿ ಮರಳಿದಾಗ ಸಂಪೂರ್ಣ ಮನೋರಥಗಳು ಸಂಪನ್ನವಾಗಿ ನಾನು ಬಹಳ ಸಂತೋಷದಿಂದ ನಿನ್ನನ್ನು ಪೂಜಿಸುವೆನು.॥85॥

ಮೂಲಮ್ - 86

ತ್ವಂ ಹಿ ತ್ರಿಪಥಗೇ ದೇವಿ ಬ್ರಹ್ಮಲೋಕಂ ಸಮೀಕ್ಷಸೇ ।
ಭಾರ್ಯಾ ಚೋದಧಿರಾಜಸ್ಯ ಲೋಕೇಽಸ್ಮಿನ್ ಸಂಪ್ರದೃಶ್ಯಸೇ ॥

ಅನುವಾದ

ಸ್ವರ್ಗ, ಭೂತಲ ಮತ್ತು ಪಾತಾಳ - ಮೂರೂ ಕಡೆ ಸಂಚರಿಸುವ ದೇವಿ! ನೀನು ಇಲ್ಲಿಂದ ಬ್ರಹ್ಮಲೋಕದವರೆಗೆ ಹರಡಿಕೊಂಡಿರುವ ಮತ್ತು ಈ ಲೋಕದಲ್ಲಿ ಸಮುದ್ರದ ಪತ್ನಿಯಾಗಿ ಕಂಡುಬರುವೆ.॥86॥

ಮೂಲಮ್ - 87

ಸಾ ತ್ವಾಂ ದೇವಿ ನಮಸ್ಯಾಮಿ ಪ್ರಶಂಸಾಮಿ ಚ ಶೋಭನೇ ।
ಪ್ರಾಪ್ತರಾಜ್ಯೇ ನರವ್ಯಾಘ್ರೇ ಶಿವೇನ ಪುನರಾಗತೇ ॥

ಅನುವಾದ

ಶೋಭಾಶಾಲಿನೀ ದೇವಿ! ಪುರುಷಸಿಂಹ ಶ್ರೀರಾಮನು ಪುನಃ ವನದಿಂದ ಕ್ಷೇಮವಾಗಿ ಮರಳಿ ತನ್ನ ರಾಜ್ಯವನ್ನು ಪಡೆದಾಗ ಸೀತೆಯಾದ ನಾನು ಪುನಃ ನಿನಗೆ ವಂದಿಸಿ, ನಿನ್ನನ್ನು ಸ್ತುತಿಸುವೆನು.॥87॥

ಮೂಲಮ್ - 88

ಗವಾಂ ಶತಸಹಸ್ರಂ ಚ ವಸಾಣ್ಯನ್ನಂ ಚ ಪೇಶಲಮ್ ।
ಬ್ರಾಹ್ಮಣೇಭ್ಯಃ ಪ್ರದಾಸ್ಯಾಮಿ ತವಪ್ರಿಯಚಿಕೀರ್ಷಯಾ ॥

ಅನುವಾದ

ಇಷ್ಟೇ ಅಲ್ಲ ನಿನಗೆ ಪ್ರೀತ್ಯರ್ಥವಾಗಿ ನಾನು ಬ್ರಾಹ್ಮಣರಿಗೆ ಒಂದು ಲಕ್ಷಗೋವುಗಳನ್ನು, ಅನೇಕ ವಸ್ತ್ರಗಳನ್ನು ಹಾಗೂ ಉತ್ತಮೋತ್ತಮ ಭೋಜನವನ್ನು ದಾನ ಮಾಡುವೆನು.॥88॥

ಮೂಲಮ್ - 89

ಸುರಾಘಟಸಹಸ್ರೇಣ ಮಾಂಸ ಭೂತೌದನೇನ ಚ ।
ಯಕ್ಷ್ಯೇತ್ವಾಂ ಪ್ರಿಯತಾಂ ದೇವಿ ಪುರೀಂ ಪುನರುಪಾಗತಾ ॥

ಅನುವಾದ

ದೇವಿ! ಪುನಃ ಅಯೋಧ್ಯಾಪುರಿಗೆ ಮರಳಿದಾಗ ನಾನು ಸಾವಿರಾರು ದೇವದುರ್ಲಭ ಪದಾರ್ಥಗಳಿಂದ ಹಾಗೂ ರಾಜಕೀಯ ಭಾಗರಹಿತ ಪೃಥಿವಿ, ವಸ್ತ್ರ, ಅನ್ನದ ಮೂಲಕ ನಿನ್ನನ್ನು ಪೂಜಿಸುವೆನು. ನೀನು ನನ್ನ ಮೇಲೆ ಪ್ರಸನ್ನಳಾಗು.॥89॥

ಮೂಲಮ್ - 90

ಯಾನಿ ತ್ವತ್ತೀರವಾಸೀನಿ ದೈವತಾನಿ ಚ ಸಂತಿ ಹಿ ।
ತಾನಿ ಸರ್ವಾಣಿ ಯಕ್ಷ್ಯಾಮಿ ತೀರ್ಥಾನ್ಯಾಯತನಾನಿ ಚ ॥

ಅನುವಾದ

ನಿನ್ನ ದಡದಲ್ಲಿ ಇರುವ ದೇವತೆಗಳನ್ನು, ತೀರ್ಥ ಮತ್ತು ಮಂದಿರಗಳನ್ನು ನಾನು ಪೂಜಿಸುವೆನು.॥90॥

ಮೂಲಮ್ - 91

ಪುನರೇವ ಮಹಾಬಾಹುರ್ಮಯಾ ಭ್ರಾತ್ರಾ ಚ ಸಂಗತಃ ।
ಅಯೋಧ್ಯಾಂ ವನವಾಸಾತ್ತು ಪ್ರವಿಶತ್ವನಘೋಽನಘೇ ॥

ಅನುವಾದ

ನಿಷ್ಪಾಪ ಗಂಗೇ! ಈ ಮಹಾಬಾಹು ಪಾಪರಹಿತ ನನ್ನ ಪತಿದೇವರು ನನ್ನೊಂದಿಗೆ ಮತ್ತು ಸಹೋದರನೊಂದಿಗೆ ವನವಾಸದಿಂದ ಮರಳಿ ಪುನಃ ಅಯೋಧ್ಯಾಪುರಿಯನ್ನು ಪ್ರವೇಶಿಸುವಂತಾಗಲಿ.॥91॥

ಮೂಲಮ್ - 92

ತಥಾ ಸಂಭಾಷಮಾಣಾ ಸಾ ಸೀತಾ ಗಂಗಾಮನಿಂದಿತಾ ।
ದಕ್ಷಿಣಾ ದಕ್ಷಿಣಂ ತೀರಂ ಕ್ಷಿಪ್ರಮೇವಾಭ್ಯುಪಾಗಮತ್ ॥

ಅನುವಾದ

ಪತಿಗೆ ಅನುಕೂಲವಾಗಿರುವ ಸತೀ-ಸಾಧ್ವೀ ಸೀತೆಯು ಹೀಗೆ ಗಂಗಾದೇವಿಯಲ್ಲಿ ಪ್ರಾರ್ಥಿಸುತ್ತ ಶೀಘ್ರವಾಗಿ ದಕ್ಷಿಣ ದಡಕ್ಕೆ ತಲುಪಿದರು.॥92॥

ಮೂಲಮ್ - 93

ತೀರಂ ತು ಸಮನುಪ್ರಾಪ್ಯ ನಾವಂ ಹಿತ್ವಾ ನರರ್ಷಭಃ ।
ಪ್ರಾತಿಷ್ಠಿತ ಸಹ ಭ್ರಾತ್ರಾ ವೈದೇಹ್ಯಾ ಚ ಪರಂತಪಃ ॥

ಅನುವಾದ

ದಡಕ್ಕೆ ತಲುಪಿ ಪರಂತಪನಾದ ನರಶ್ರೇಷ್ಠ ಶ್ರೀರಾಮನು ದೋಣಿಯನ್ನು ಬಿಟ್ಟು, ಲಕ್ಷ್ಮಣ ಮತ್ತು ವೈದೇಹೀ ಸೀತೆಯೊಂದಿಗೆ ಮುಂದೆ ಪ್ರಯಾಣ ಬೆಳೆಸಿದನು.॥93॥

ಮೂಲಮ್ - 94

ಅಥಾಬ್ರವೀನ್ಮಹಾಬಾಹುಃ ಸುಮಿತ್ರಾನಂದವರ್ಧನಮ್ ।
ಭವ ಸಂರಕ್ಷಣಾರ್ಥಾಯ ಸಜನೇ ವಿಜನೇಪಿ ವಾ ॥

ಮೂಲಮ್ - 95

ಅವಶ್ಯಂ ರಕ್ಷಣಂ ಕಾರ್ಯಂ ಮದ್ವಿಧೈರ್ವಿಜನೇ ವನೇ ।
ಅಗ್ರತೋ ಗಚ್ಛ ಸೌಮಿತ್ರೇ ಸೀತಾ ತ್ವಾಮನುಗಚ್ಛತು ॥

ಮೂಲಮ್ - 96

ಪೃಷ್ಠತೋಽನುಗಮಿಷ್ಯಾಮಿ ಸೀತಾಂ ತ್ವಾಂ ಚಾನುಪಾಲಯನ್ ।
ಅನ್ಯೋನ್ಯಸ್ಯ ಹಿ ನೋ ರಕ್ಷಾ ಕರ್ತವ್ಯಾ ಪುರಷರ್ಷಭ ॥

ಅನುವಾದ

ಅನಂತರ ಮಹಾಬಾಹು ಶ್ರೀರಾಮನು ಸುಮಿತ್ರಾನಂದನ ಲಕ್ಷ್ಮಣನಲ್ಲಿ ನುಡಿದನು - ಲಕ್ಷ್ಮಣ! ಈಗ ನೀನು ಜನರಿರುವ ಅಥವಾ ನಿರ್ಜನ ವನದಲ್ಲಿ ಸೀತೆಯ ರಕ್ಷಣೆಗಾಗಿ ಜಾಗರೂಕ ನಾಗಿರು. ನಮ್ಮಂತಹವರಿಗೆ ನಿರ್ಜನ ವನದಲ್ಲಿ ನಾರಿಯನ್ನು ರಕ್ಷಿಸುವುದು ಅವಶ್ಯವಾಗಿದೆ. ಆದ್ದರಿಂದ ನೀನು ಮುಂದಾಗಿ ನಡೆ, ಸೀತೆ ನಿನ್ನ ಹಿಂದೆ - ಹಿಂದೆ ನಡೆಯಲಿ ಮತ್ತು ನಾನು ಸೀತೆಯೊಂದಿಗೆ ನಿನ್ನನ್ನು ರಕ್ಷಿಸುತ್ತಾ ಎಲ್ಲರ ಹಿಂದೆ ನಡೆಯುವೆನು. ಪುರುಷಪ್ರವರ! ನಾವು ಒಬ್ಬರು ಇನ್ನೊಬ್ಬರನ್ನು ರಕ್ಷಿಸಬೇಕಾಗಿದೆ.॥94-96॥

ಮೂಲಮ್ - 97

ನ ಹಿ ತಾವದತಿಕ್ರಾಂತಾ ಸುಕರಾ ಕಾಚನ ಕ್ರಿಯಾ ।
ಅದ್ಯ ದುಃಖಂ ತು ವೈದೇಹೀ ವನವಾಸಸ್ಯ ವೇತ್ಸ್ಯತಿ ॥

ಅನುವಾದ

ಇಷ್ಟರವರೆಗೆ ಯಾವುದೇ ದುಷ್ಕರ ಕಾರ್ಯ ಘಟಿಸಲಿಲ್ಲ - ಈಗಿನಿಂದಲೇ ಕಠಿಣತೆಗಳನ್ನು ಎದುರಿಸಲು ಪ್ರಾರಂಭವಾಗಿದೆ. ಇಂದು ವೈದೇಹಿ ಸೀತೆಗೆ ವನವಾಸದ ವಾಸ್ತವಿಕ ಕಷ್ಟದ ಅನುಭವವಾಗುವುದು.॥97॥

ಮೂಲಮ್ - 98

ಪ್ರಣಷ್ಟಜನಸಂಬಾಧಂ ಕ್ಷೇತ್ರಾರಾಮವಿವರ್ಜಿತಮ್ ।
ವಿಷಮಂಚ ಪ್ರಪಾತಂ ಚ ವನಮದ್ಯ ಪ್ರವೇಕ್ಷ್ಯತಿ ॥

ಅನುವಾದ

ಮುಂದಿನ ವನದಲ್ಲಿ ಮನುಷ್ಯರು ಬಂದು-ಹೋಗುವ ಚಿಹ್ನೆಯೇ ಕಾಣದು, ಭತ್ತದ ಹೊಲಗಳು ಇರಲಾರವು, ಸುತ್ತಾಡಲು ಉದ್ಯಾನ ವನಗಳು ಇರವು, ಇಲ್ಲಿ ಎತ್ತರ-ತಗ್ಗು ಭೂಮಿ ಇದ್ದು ಹೊಂಡಗಳಲ್ಲಿ ಬೀಳುವ ಭಯವಿರುವ ಘೋರವನದಲ್ಲಿ ಸೀತೆಯು ಪ್ರವೇಶಿಸುವಳು.॥98॥

ಮೂಲಮ್ - 99

ಶ್ರುತ್ವಾ ರಾಮಸ್ಯ ವಚನಂ ಪ್ರತಸ್ಥೇ ಲಕ್ಷ್ಮಣೋಽಗ್ರತಃ ।
ಅನಂತರಂ ಚ ಸೀತಾಯಾರಾಘವೋ ರಘುನಂದನಃ ॥

ಅನುವಾದ

ಶ್ರೀರಾಮಚಂದ್ರನ ಈ ಮಾತನ್ನು ಕೇಳಿ ಲಕ್ಷ್ಮಣನು ಮುಂದರಿದನು. ಅವನ ಹಿಂದೆ ಸೀತೆ ನಡೆಯತೊಡಗಿದಳು ಹಾಗೂ ಸೀತೆಯ ಹಿಂದೆ ರಘುಕುಲನಂದನ ಶ್ರೀರಾಮನಿದ್ದನು.॥99॥

ಮೂಲಮ್ - 100

ಗತಂ ತು ಗಂಗಾಪರಪಾರಮಾಶು
ರಾಮಂ ಸುಮಂತ್ರಃ ಪ್ರತತಂ ನಿರೀಕ್ಷ್ಯ।
ಅಧ್ವಪ್ರಕರ್ಷಾದ್ವಿನಿವೃತ್ತದೃಷ್ಟಿ -
ರ್ಮುಮೋಚ ಬಾಷ್ಪಂ ವ್ಯಥಿತಸ್ತಪಸ್ವೀ ॥

ಅನುವಾದ

ಶ್ರೀರಾಮಚಂದ್ರನು ಗಂಗೆಯ ಆಚೆ ದಡಕ್ಕೆ ತಲುಪಿ ಕಣ್ಮರೆಯಾಗುವ ತನಕ ಸುಮಂತ್ರನು ನಿರಂತರ ಅವನ ಕಡೆಗೆ ನೆಟ್ಟನೋಟದಿಂದ ನೋಡುತ್ತಿದ್ದನು. ಕಾಡುದಾರಿಯಲ್ಲಿ ದೂರ ಸಾಗಿದಾಗ ಕಣ್ಣಿಗೆ ಕಾಣಿಸದಂತಾದರು. ಆಗ ತಪಸ್ವೀ ಸುಮಂತ್ರನ ಹೃದಯದಲ್ಲಿ ಭಾರೀ ದುಃಖವಾಯಿತು, ಕಣ್ಣುಗಳಿಂದ ಕಣ್ಣೀರು ಸುರಿಸುತ್ತಿದ್ದನು.॥100॥

ಮೂಲಮ್ - 101

ಸ ಲೋಕಪಾಲಪ್ರತಿಮಪ್ರಭಾವ -
ಸ್ತೀರ್ತ್ವಾ ಮಹಾತ್ಮಾ ವರದೋ ಮಹಾನದೀಮ್ ।
ತತಃ ಸಮೃದ್ಧಾನ್ ಶುಭಸಸ್ಯಮಾಲಿನಃ
ಕ್ರಮೇಣ ವತ್ಸಾನ್ಮುದಿತಾನುಪಾಗಮತ್ ॥

ಅನುವಾದ

ಲೋಕ ಪಾಲಕರಂತೆ ಪ್ರಭಾವಶಾಲೀ ವರದಾಯಕ ಮಹಾತ್ಮಾ ಶ್ರೀರಾಮನು ಮಹಾನದೀ ಗಂಗೆಯನ್ನು ದಾಟಿ ಕ್ರಮವಾಗಿ ಸಮೃದ್ಧ ಶಾಲಿಯಾದ, ಸುಂದರ ಧನ-ಧಾನ್ಯಗಳಿಂದ ಸಮೃದ್ಧವಾದ ವತ್ಸದೇಶವನ್ನು (ಪ್ರಯಾಗ) ತಲುಪಿದನು. ಅಲ್ಲಿಯ ಜನರು ಬಹಳ ಹೃಷ್ಟ-ಪುಷ್ಟರಾಗಿದ್ದರು.॥101॥

ಮೂಲಮ್ - 102

ತೌ ತತ್ರ ಹತ್ವಾ ಚತುರೋ ಮಹಾಮೃಗಾನ್
ವರಾಹಮೃಶ್ಯಂ ಪೃಷತಂ ಮಹಾರುರುಮ್ ।
ಆದಾಯ ಮೇಧ್ಯಂ ತ್ವರಿತಂ ಬುಭುಕ್ಷಿತೌ
ವಾಸಾಯ ಕಾಲೇ ಯಯತುರ್ವನಸ್ಪತಿಮ್ ॥

ಅನುವಾದ

ಅಲ್ಲಿ ಅವರಿಬ್ಬರು ವರಾಹ, ಸಾರಂಗ, ಜಿಂಕೆ, ಮಹಾರುರು ಎಂಬ ನಾಲ್ಕು ಮಹಾ ಮೃಗಗಳನ್ನು ಬಾಣಗಳಿಂದ ಹೊಡೆದರು. ಬಳಿಕ ಅವರಿಗೆ ಹಸಿವಾದಾಗ ಪವಿತ್ರ ಕಂದ-ಮೂಲಾದಿಗಳನ್ನು ತೆಗೆದುಕೊಂಡು ಸಾಯಂಕಾಲ ಉಳಿದುಕೊಳ್ಳಲು ಸೀತೆಯೊಂದಿಗೆ ಒಂದು ವೃಕ್ಷವನ್ನು ಸಾರಿದರು.॥102॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಐವತ್ತೆರಡನೆಯ ಸರ್ಗ ಪೂರ್ಣವಾಯಿತು ॥52॥