०५१ गुह-लक्ष्मणसंवादः

वाचनम्
ಭಾಗಸೂಚನಾ

ನಿಷಾದ ರಾಜ ಗುಹನ ಸಮಕ್ಷಮದಲ್ಲಿ ಲಕ್ಷ್ಮಣನ ವಿಲಾಪ

ಮೂಲಮ್ - 1

ನಿಷಾದ ರಾಜ ಗುಹನ ಸಮಕ್ಷಮದಲ್ಲಿ ಲಕ್ಷ್ಮಣನ ವಿಲಾಪ ।
ತಂ ಜಾಗ್ರತಮದಂಭೇನ ಭ್ರಾತುರರ್ಥಾಯ ಲಕ್ಷ್ಮಣಮ್ ।
ಗುಹಃ ಸಂತಾಪಸಂತಪ್ತೋ ರಾಘವಂ ವಾಕ್ಯಮಬ್ರವೀತ್ ॥

ಅನುವಾದ

ಅಣ್ಣನಿಗಾಗಿ ಸ್ವಾಭಾವಿಕ ಅನುರಾಗದಿಂದ ಜಾಗರಣೆ ಮಾಡುವ ಲಕ್ಷ್ಮಣನನ್ನು ನೋಡಿ ಗುಹನಿಗೆ ಬಹಳ ಸಂತಾಪವಾಯಿತು. ಅವನು ರಘುಕುಲನಂದನ ಲಕ್ಷ್ಮಣನಲ್ಲಿ ಹೇಳುತ್ತಾನೆ.॥1॥

ಮೂಲಮ್ - 2

ಇಯಂ ತಾತ ಸುಖಾ ಶಯ್ಯಾ ತ್ವದರ್ಥಮುಪಕಲ್ಪಿತಾ ।
ಪ್ರತ್ಯಾಶ್ವಸಿಹಿ ಸಾಧ್ವಸ್ಯಾಂ ರಾಜಪುತ್ರ ಯಥಾಸುಖಮ್ ॥

ಅನುವಾದ

ಅಯ್ಯಾ! ರಾಜಕುಮಾರ! ನಿನಗೂ ವಿಶ್ರಾಂತಿ ಪಡೆಯಲು ಈ ಶಯ್ಯೆ ಸಿದ್ಧವಾಗಿದೆ. ಇದರ ಮೇಲೆ ಸುಖವಾಗಿ ಚೆನ್ನಾಗಿ ಮಲಗಿ ವಿಶ್ರಮಿಸು.॥2॥

ಮೂಲಮ್ - 3

ಉಚಿತೋಽಯಂ ಜನಃ ಸರ್ವಃ ಕ್ಲೇಶಾನಾಂ ತ್ವಂ ಸುಖೋಚಿತಃ ।
ಗುಪ್ತ್ಯರ್ಥಂ ಜಾಗರಿಷ್ಯಾಮಃ ಕಾಕುತ್ಸ್ಥಸ್ಯ ವಯಂ ನಿಶಾಮ್ ॥

ಅನುವಾದ

ಸೇವಕನಾದ ನಾನು ಹಾಗೂ ನನ್ನೊಂದಿಗೆ ಇರುವ ಎಲ್ಲ ಜನರು ವನವಾಸದ ಎಲ್ಲ ಕ್ಲೇಶಗಳನ್ನು ಸಹಿಸುವ ಅಭ್ಯಾಸವುಳ್ಳವರು. ಆದರೆ ನೀನು ಸುಖದಲ್ಲಿ ಬೆಳೆದವನು, ಆದ್ದರಿಂದ ಅದಕ್ಕೆ ಯೋಗ್ಯನಲ್ಲ. ನಾವೆಲ್ಲರೂ ಶ್ರೀರಾಮಚಂದ್ರನ ರಕ್ಷಣೆಗಾಗಿ ರಾತ್ರಿಯಿಡೀ ಎಚ್ಚರವಾಗಿ ಇರುವೆವು.॥3॥

ಮೂಲಮ್ - 4

ನಹಿ ರಾಮಾತ್ ಪ್ರಿಯತಮೋ ಮಮಾಸ್ತೇ ಭುವಿ ಕಶ್ಚನ ।
ಬ್ರವೀಮ್ಯೇವ ಚ ತೇ ಸತ್ಯಂ ಸತ್ಯೇನೈವ ಚತೇ ಶಪೇ ॥

ಅನುವಾದ

ನಾನು ಸತ್ಯದ ಮೇಲೆ ಆಣೆಯಿಟ್ಟು ನಿಜವಾಗಿ ಹೇಳುತ್ತೇನೆ - ಈ ಭೂತಳದಲ್ಲಿ ನನಗೆ ಶ್ರೀರಾಮನಿಗಿಂತ ಮಿಗಿಲಾದ ಪ್ರಿಯರು ಯಾರೂ ಇಲ್ಲ.॥4॥

ಮೂಲಮ್ - 5

ಅಸ್ಯ ಪ್ರಸಾದಾದಾಶಂಸೇ ಲೋಕೇಽಸ್ಮಿನ್ ಸುಮಹದ್ಯಶಃ ।
ಧರ್ಮಾವಾಪ್ತಿಂ ಚ ವಿಪುಲಾಮರ್ಥಕಾವೌ ಚ ಪುಷ್ಕಲೌ ॥

ಅನುವಾದ

ಈ ಶ್ರೀರಘುನಾಥನ ಪ್ರಸಾದದಿಂದಲೇ ನಾನು ಈ ಲೋಕದಲ್ಲಿ ಮಹಾನ್ ಯಶ, ವಿಪುಲ ಧರ್ಮಲಾಭ ಹಾಗೂ ಹೇರಳ ಅರ್ಥ, ಭೋಗ್ಯವಸ್ತುಗಳನ್ನು ಪಡೆಯಲು ಆಶಿಸುತ್ತೇನೆ.॥5॥

ಮೂಲಮ್ - 6

ಸೋಽಹಂ ಪ್ರಿಯಸಖಂ ರಾಮಂ ಶಯಾನಂ ಸಹ ಸೀತಯಾ ।
ರಕ್ಷಿಷ್ಯಾಮಿ ಧನುಷ್ಪಾಣಿಃ ಸರ್ವಥಾ ಜ್ಞಾತಿಭಿಃ ಸಹ ॥

ಅನುವಾದ

ಆದ್ದರಿಂದ ನಾನು ನನ್ನ ಬಂಧು-ಬಾಂಧವರೊಂದಿಗೆ ಕೈಯಲ್ಲಿ ಧನುಸ್ಸು ಹಿಡಿದು ಸೀತಾಸಹಿತ ಮಲಗಿರುವ ಪ್ರಿಯಸಖನಾದ ಶ್ರೀರಾಮನನ್ನು ಎಲ್ಲ ರೀತಿಯಿಂದ ರಕ್ಷಿಸುವೆನು.॥6॥

ಮೂಲಮ್ - 7

ನ ಮೇಽಸ್ತ್ಯವಿದಿತಂ ಕಿಂಚಿದ್ವನೇಸ್ಮಿಶ್ಚರತಃ ಸದಾ ।
ಚತುರಂಗಂ ಹ್ಯತಿಬಲಂ ಸುಮಹತ್ ಸಂತರೇಮಹಿ ॥

ಅನುವಾದ

ಈ ವನದಲ್ಲಿ ಸದಾ ಸಂಚರಿಸುವುದರಿಂದ ನನಗೆ ಇಲ್ಲಿಯ ಎಲ್ಲ ಸಂಗತಿಗಳೂ ತಿಳಿದಿವೆ. ನಾವು ಇಲ್ಲಿ ಶತ್ರುವಿನ ಅತ್ಯಂತ ಶಕ್ತಿಶಾಲಿ ಚತುರಂಗಿಣಿ ಸೈನ್ಯವನ್ನು ಸುಲಭವಾಗಿ ಗೆಲ್ಲಬಲ್ಲೆವು.॥7॥

ಮೂಲಮ್ - 8

ಲಕ್ಷ್ಮಣಸ್ತು ತದೋವಾಚ ರಕ್ಷ್ಯಮಾಣಾಸ್ತ್ವಯಾನಘ ।
ನಾತ್ರ ಭೀತಾ ವಯಂ ಸರ್ವೇ ಧರ್ಮಮೇವಾನುಪಶ್ಯತಾ ॥

ಮೂಲಮ್ - 9

ಕಥಂ ದಾಶರಥೌ ಭೂಮೌ ಶಯಾನೇ ಸಹ ಸೀತಯಾ ।
ಶಕ್ಯಾ ನಿದ್ರಾ ಮಯಾ ಲಬ್ಧುಂ ಜೀವಿತಂ ವಾ ಸುಖಾನಿ ವಾ ॥

ಅನುವಾದ

ಇದನ್ನು ಕೇಳಿ ಲಕ್ಷ್ಮಣನು ಹೇಳಿದನು - ನಿಷ್ಪಾಪನಾದ ನಿಷಾದರಾಜನೇ! ನೀನು ಧರ್ಮದ ಮೇಲೆ ದೃಷ್ಟಿ ಇರಿಸುತ್ತಾ ನಮ್ಮೆಲ್ಲರನ್ನು ರಕ್ಷಿಸುತ್ತಿರುವೆ, ಇದರಿಂದ ನಮಗೆ ಯಾವುದೇ ಭಯವಿಲ್ಲ. ಹೀಗಿದ್ದರೂ ದಶರಥ ಮಹಾರಾಜರ ಜ್ಯೇಷ್ಠಪುತ್ರ ಸೀತೆಯ ಜೊತೆಗೆ ನೆಲದಲ್ಲಿ ಮಲಗಿರುವಾಗ ನಾನು ಉತ್ತಮ ಶಯ್ಯೆಯಲ್ಲಿ ಮಲಗುವುದು, ಸ್ವಾದಿಷ್ಟ ಅನ್ನ ಆಹಾರ ತಿನ್ನುವುದು, ಅಥವಾ ಇತರ ಸುಖಗಳನ್ನು ಅನುಭವಿಸುವುದು ಹೇಗೆ ಸಂಭವವಾಗಬಲ್ಲದು.॥8-9॥

ಮೂಲಮ್ - 10

ಯೋ ನ ದೇವಾಸುರೈಃ ಸರ್ವೈಃ ಶಕ್ಯಃ ಪ್ರಸಹಿತುಂ ಯುಧಿ ।
ತಂ ಪಶ್ಯ ಸುಖಸಂಸುಪ್ತಂ ತೃಣೇಷು ಸಹ ಸೀತಯಾ ॥

ಅನುವಾದ

ನೋಡು, ಸಮಸ್ತ ದೇವತೆಗಳು ಮತ್ತು ಅಸುರರು ಸೇರಿಯೂ ಯುದ್ಧದಲ್ಲಿ ಯಾರ ವೇಗವನ್ನು ಸಹಿಸಲಾರರೋ ಅಂತಹ ಶ್ರೀರಾಮನು ಈಗ ಸೀತೆಯೊಂದಿಗೆ ಹುಲ್ಲಿನ ಮೇಲೆ ಸುಖವಾಗಿ ಮಲಗಿರುವನು.॥10॥

ಮೂಲಮ್ - 11

ಯೋ ಮಂತ್ರತಪಸಾಲಬ್ಧೋ ವಿವಿಧೈಶ್ಚ ಪರಾಕ್ರಮೈ ।
ಏಕೋ ದಶರಥಸ್ಯೈಷ ಪುತ್ರಃ ಸದೃಶಲಕ್ಷಣಃ ॥

ಮೂಲಮ್ - 12

ಅಸ್ಮಿನ್ಪ್ರವ್ರಜಿತೇ ರಾಜಾ ನ ಚಿರಂ ವರ್ತಯಿಷ್ಯತಿ ।
ವಿಧವಾ ಮೇದಿನೀ ನೂನಂ ಕ್ಷಿಪ್ರಮೇವ ಭವಿಷ್ಯತಿ ॥

ಅನುವಾದ

ಗಾಯತ್ರೀ ಮೊದಲಾದ ಮಂತ್ರಗಳ ಜಪ, ಕೃಚ್ಛ್ರ ಚಾಂದ್ರಾಯಣಾದಿ ತಪಸ್ಸು, ನಾನಾ ಪ್ರಕಾರದ ಪರಾಕ್ರಮ (ಯಜ್ಞಾನುಷ್ಠಾನ ಆದಿ ಪ್ರಯತ್ನ)ಗಳನ್ನು ಮಾಡಿ ದಶರಥ ಮಹಾರಾಜರಿಗೆ ಇಂತಹ ಉತ್ತಮ ಲಕ್ಷಣಗಳಿಂದ ಕೂಡಿದ ಜ್ಯೇಷ್ಠಪುತ್ರನಾಗಿ ಪ್ರಾಪ್ತನಾದ ಈ ಶ್ರೀರಾಮನು ಕಾಡಿಗೆ ಬಂದಿರುವುದರಿಂದ ಈಗ ಮಹಾರಾಜರು ಹೆಚ್ಚುಕಾಲ ಬದುಕಿರಲಾರರು. ನಿಶ್ಚಯವಾಗಿಯೇ ಈ ಪೃಥಿವಿಯು ಈಗ ಶೀಘ್ರವಾಗಿ ವಿಧವೆ ಆಗಿ ಹೋಗುವುದು.॥11-12॥

ಮೂಲಮ್ - 13

ವಿನದ್ಯ ಸುಮಹಾನಾದಂ ಶ್ರಮೇಣೋಪರತಾಃ ಸ್ತ್ರಿಯಃ ।
ನಿರ್ಘೋಷೋಪರತಂ ತಾತ ಮನ್ಯೇ ರಾಜನಿವೇಶನಮ್ ॥

ಅನುವಾದ

ಅಯ್ಯಾ! ರಾಣೀವಾಸದ ಸ್ತ್ರೀಯರು ಗಟ್ಟಿಯಾಗಿ ಆರ್ತನಾದ ಮಾಡುತ್ತಾ ಬಳಲಿ ಈಗ ಸುಮ್ಮನಾಗಿರಬಹುದು. ರಾಜಭವನದ ಹಾಹಾಕಾರ ಮತ್ತು ಚೀತ್ಕಾರ ಈಗ ಶಾಂತವಾಗಿರಬಹುದೆಂದು ನಾನು ತಿಳಿಯುತ್ತೇನೆ.॥13॥

ಮೂಲಮ್ - 14

ಕೌಸಲ್ಯಾ ಚೈವ ರಾಜಾ ಚ ತಥೈವ ಜನನೀ ಮಮ ।
ನಾಶಂಸೇ ಯದಿ ಜೀವಂತಿ ಸರ್ವೇ ತೇ ಶರ್ವರೀಮಿಮಾಮ್ ॥

ಅನುವಾದ

ಮಹಾರಾಣೀ ಕೌಸಲ್ಯೆ, ದಶರಥ ಮಹಾರಾಜರು, ನನ್ನ ತಾಯಿ ಸುಮಿತ್ರೆ ಇವರೆಲ್ಲರೂ ಇಂದಿನ ರಾತ್ರಿಯವರೆಗೆ ಜೀವಿಸಿರುವರೋ ಇಲ್ಲವೋ ಇದನ್ನು ನಾನು ಹೇಳಲಾರೆ.॥14॥

ಮೂಲಮ್ - 15

ಜೀವೇದಪಿ ಹಿ ಮೇ ಮಾತಾ ಶತ್ರುಘ್ನಸ್ಯಾನ್ವವೇಕ್ಷಯಾ ।
ತದ್ದುಃಖಂ ಯದಿ ಕೌಸಲ್ಯಾ ವೀರಸೂರ್ವಿನಶಿಷ್ಯತಿ ॥

ಅನುವಾದ

ಶತ್ರುಘ್ನನ ದಾರಿ ನೋಡುವುದರಿಂದ ನನ್ನ ತಾಯಿ ಬದುಕಿರುವ ಸಂಭವವಿದೆ, ಆದರೆ ವೀರಜನನೀ ಕೌಸಲ್ಯೆಯು ಶ್ರೀರಾಮನ ವಿರಹದಲ್ಲಿ ತೀರಿ ಹೋದರೆ ನಮಗೆ ಬಹಳ ದೊಡ್ಡ ದುಃಖದ ಮಾತಾಗಬಹುದು.॥15॥

ಮೂಲಮ್ - 16

ಅನುರಕ್ತಜನಾಕೀರ್ಣಾ ಸುಖಾಲೋಕಪ್ರಿಯಾವಹಾ ।
ರಾಜವ್ಯಸನಸಂಸೃಷ್ಟಾ ಸಾ ಪುರೀ ವಿನಶಿಷ್ಯತಿ ॥

ಅನುವಾದ

ಶ್ರೀರಾಮನ ಅನುರಾಗಿ ಜನರಿಂದ ತುಂಬಿರುವ, ಸದಾ ಸುಖಮಯ ಪ್ರಿಯವಸ್ತುಗಳನ್ನು ಪ್ರಾಪ್ತಿಮಾಡಿಕೊಡುವಂತಹ ಅಯೋಧ್ಯಾ ಪುರಿಯು ಮಹಾರಾಜರ ಮರಣ ದುಃಖದಿಂದ ನಾಶವಾಗಿ ಹೋಗುವುದು.॥16॥

ಮೂಲಮ್ - 17

ಕಥಂ ಪುತ್ರಂ ಮಹಾತ್ಮಾನಂ ಜ್ಯೇಷ್ಠಪುತ್ರಮಪಶ್ಯತಃ ।
ಶರೀರಂ ಧಾರಯಿಷ್ಯಂತಿಪ್ರಾಣಾ ರಾಜ್ಞೋ ಮಹಾತ್ಮನಃ ॥

ಅನುವಾದ

ತನ್ನ ಹಿರಿಯ ಮಗ ಮಹಾತ್ಮಾ ಶ್ರೀರಾಮನನ್ನು ನೋಡದಿರುವಾಗ ಮಹಾಮನಾ ದಶರಥರ ಪ್ರಾಣಗಳು ಅವರ ಶರೀರದಲ್ಲಿ ಹೇಗೆ ಇರಬಲ್ಲವು.॥17॥

ಮೂಲಮ್ - 18

ವಿನಷ್ಟೇ ನೃಪತೌ ಪಶ್ಚಾತ್ ಕೌಸಲ್ಯಾ ವಿನಶಿಷ್ಯತಿ ।
ಅನಂತರಂ ಚ ಮಾತಾಪಿ ಮಮ ನಾಶಮುಪೈಷ್ಯತಿ ॥

ಅನುವಾದ

ಮಹಾರಾಜರು ತೀರಿಹೋದಾಗ ದೇವೀ ಕೌಸಲ್ಯೆಯು ನಾಶವಾಗಿ ಹೋದಾಳು. ಅನಂತರ ನನ್ನ ತಾಯಿ ಸುಮಿತ್ರೆಯೂ ನಾಶವಾಗದೆ ಇರಲಾರಳು.॥18॥

ಮೂಲಮ್ - 19

ಅತಿಕ್ರಾಂತಮತಿಕ್ರಾಂತಮನವಾಪ್ಯ ಮನೋರಥಮ್ ।
ರಾಜ್ಯೆ ರಾಮಮನಿಕ್ಷಿಪ್ಯ ಪಿತಾ ಮೇ ವಿನಶಿಷ್ಯತಿ ॥

ಅನುವಾದ

ಶ್ರೀರಾಮನ ಪಟ್ಟಾಭಿಷೇಕ ಮಾಡಬೇಕೆಂಬ ಮಹಾರಾಜರ ಮನೋರಥವು ಪೂರ್ಣವಾಗದೆ ಶ್ರೀರಾಮನನ್ನು ರಾಜನಾಗಿ ಸದೆಯೇ ‘ಅಯ್ಯೋ! ನನ್ನದೆಲ್ಲವೂ ನಾಶವಾಯಿತು, ನಾಶವಾಯಿತು’ ಎಂದು ಹೇಳುತ್ತಾ ನನ್ನ ತಂದೆಯವರು ಪ್ರಾಣತ್ಯಾಗ ಮಾಡಿಬಿಡುವರು.॥19॥

ಮೂಲಮ್ - 20

ಸಿದ್ಧಾರ್ಥಾಃ ಪಿತರಂ ವೃತ್ತಂ ತಸ್ಮಿನ್ಕಾಲೇಹ್ಯುಪಸ್ಥಿತೇ ।
ಪ್ರೇತಕಾರ್ಯೇಷು ಸರ್ವೇಷು ಸಂಸ್ಕರಿಷ್ಯಂತಿ ರಾಘವಮ್ ॥

ಅನುವಾದ

ಅವರ ಆ ಮೃತ್ಯುವಿನ ಸಮಯ ಅಲ್ಲಿ ಇರುವವರು ಹಾಗೂ ನನ್ನ ತೀರಿ ಹೋದ ರಘುಕುಲಶಿರೋಮಣಿ ತಂದೆಯ ಅಂತ್ಯಕ್ರಿಯೆಯನ್ನು ಮಾಡುವವರು ಸಫಲ ಮನೋರಥರಾಗುವರು ಮತ್ತು ಅವರೇ ಭಾಗ್ಯಶಾಲಿಗಳು.॥20॥

ಮೂಲಮ್ - 21

ರಮ್ಯಚತ್ವರಸಂಸ್ಥಾನಾಂ ಸಂವಿಭಕ್ತಮಹಾಪಥಾಮ್ ।
ಹರ್ಮ್ಯಪ್ರಾಸಾದಸಂಪನ್ನಾಂ ಗಣಿಕಾವರಶೋಭಿತಾಮ್ ॥

ಮೂಲಮ್ - 22

ರಥಾಶ್ವಗಜಸಂಬಾಧಾಂ ತೂರ್ಯನಾದನಿನಾದಿತಾಮ್ ।
ಸರ್ವಕಲ್ಯಾಣಸಂಪೂರ್ಣಾ ಹೃಷ್ಟಪುಷ್ಟಜನಾಕುಲಾಮ್ ॥

ಮೂಲಮ್ - 23

ಆರಾಮೋದ್ಯಾನಸಂಪನ್ನಾಂ ಸಮಾಜೋತ್ಸವಶಾಲಿನೀಮ್ ।
ಸುಖಿತಾ ವಿಚರಿಷ್ಯಂತಿ ರಾಜಧಾನೀಂ ಪಿತುರ್ಮಮ ॥

ಅನುವಾದ

(ತಂದೆಯವರು ಜೀವಂತರಾಗಿದ್ದರೆ) ರಮಣೀಯ ನಾಲ್ಕು ರಸ್ತೆ ಕೂಡುವ ವೃತ್ತಗಳಿಂದ ಸುಂದರ ಸ್ಥಾನಗಳಿಂದ ಕೂಡಿದ, ಬೇರೆ-ಬೇರೆಯಾಗಿ ರಚಿಸಿದ ವಿಶಾಲ ರಾಜಬೀದಿಗಳಿಂದ ಅಲಂಕೃತ, ಶ್ರೀಮಂತರ ಸೌಧಗಳಿಂದ ಮತ್ತು ದೇವ ಮಂದಿರಗಳಿಂದ, ರಾಜಭವನಗಳಿಂದ ಸಂಪನ್ನ, ಶ್ರೇಷ್ಠ ವಾರಾಂಗನೆಯರಿಂದ ಸುಶೋಭಿತ, ರಥ, ಅಶ್ವ, ಆನೆಗಳ ಸಂಚಾರದಿಂದ ತುಂಬಿದ ವಿವಿಧವಾದ್ಯಗಳ ಧ್ವನಿಗಳಿಂದ ನಿನಾದಿತ, ಸಮಸ್ತ ಮಂಗಳಕರ ವಸ್ತುಗಳಿಂದ ತುಂಬಿ ತುಳುಕುವ, ಹೃಷ್ಟ-ಪುಷ್ಟ ಮನುಷ್ಯರಿಂದ ಸೇವಿತ, ಪುಷ್ಪವಾಟಿಕೆ ಮತ್ತು ಉದ್ಯಾನಗಳಿಂದ ವಿಭೂಷಿತ, ಸಾಮಾಜಿಕ ಉತ್ಸವಗಳಿಂದ ಸುಶೋಭಿತವಾದ ನನ್ನ ತಂದೆಯ ರಾಜಧಾನೀ ಅಯೋಧ್ಯೆಯಲ್ಲಿ ವಿಚರಿಸುವ ಜನರೇ ನಿಜವಾಗಿ ಸುಖಿಗಳಾಗುವರು.॥21-23॥

ಮೂಲಮ್ - 24

ಅಪಿ ಜೀವೇದ್ದಶರಥೋ ವನವಾಸಾತ್ ಪುನರ್ವಯಮ್ ।
ಪ್ರತ್ಯಾಗಮ್ಯ ಮಹಾತ್ಮಾನಮಪಿ ಪಶ್ಯಾಮ ಸುವ್ರತಮ್ ॥

ಅನುವಾದ

ನಮ್ಮ ತಂದೆಯವರು ನಾವು ಮರಳಿ ಬರುವತನಕ ಜೀವಿಸಿ ಇರುವರೇನು? ವನವಾಸದಿಂದ ಹಿಂದಿರುಗಿ ಆ ಉತ್ತಮ ವ್ರತಧಾರೀ ಮಹಾತ್ಮರನ್ನು ನಾವು ಪುನಃ ನೋಡುವೆವೋ.॥24॥

ಮೂಲಮ್ - 25

ಅಪಿ ಸತ್ಯಪ್ರತಿಜ್ಞೇನ ಸಾರ್ಧಂ ಕುಶಲಿನಾ ವಯಮ್ ।
ನಿವೃತ್ತೇ ವನವಾಸೇಽಸ್ಮಿನ್ನಯೋಧ್ಯಾಂ ಪ್ರವಿಶೇಮಹಿ ॥

ಅನುವಾದ

ವನವಾಸದ ಈ ಅವಧಿ ಮುಗಿದು ನಾವು ಸತ್ಯಪ್ರತಿಜ್ಞ ಶ್ರೀರಾಮನೊಂದಿಗೆ ಕ್ಷೇಮವಾಗಿ ಅಯೋಧ್ಯೆಯನ್ನು ಪ್ರವೇಶಿಸುವೆವೋ? ಏನೋ.॥25॥

ಮೂಲಮ್ - 26

ಪರಿದೇವಯಮಾನಸ್ಯ ದುಃಖಾರ್ತಸ್ಯ ಮಹಾತ್ಮನಃ ।
ತಿಷ್ಠತೋ ರಾಜಪುತ್ರಸ್ಯ ಶರ್ವರೀ ಸಾತ್ಯವರ್ತತ ॥

ಅನುವಾದ

ಹೀಗೆ ದುಃಖದಿಂದ ಆರ್ತನಾಗಿ ವಿಲಾಪ ಮಾಡುತ್ತಾ ಮಹಾಮನಾ ರಾಜಪುತ್ರ ಲಕ್ಷ್ಮಣನ ಆ ಇಡೀ ರಾತ್ರಿಯು ಜಾಗರಣೆಯಲ್ಲೇ ಕಳೆಯಿತು.॥26॥

ಮೂಲಮ್ - 27

ತಥಾ ಹಿ ಸತ್ಯಂ ಬ್ರುವತಿ ಪ್ರಜಾಹಿತೇ
ನರೇಂದ್ರಸೂನೌ ಗುರುಸೌಹೃದಾದ್ಗುಹಃ ।
ಮುಮೋಚ ಬಾಷ್ಪಂ ವ್ಯಸನಾಭಿಪೀಡಿತೋ
ಜ್ವರಾತುರೋ ನಾಗ ಇವ ವ್ಯಥಾತುರಃ ॥

ಅನುವಾದ

ಪ್ರಜೆಯ ಹಿತದಲ್ಲೇ ಸಂಲಗ್ನವಾಗಿದ್ದ ರಾಜಕುಮಾರ ಲಕ್ಷ್ಮಣನು ಅಣ್ಣನ ಕುರಿತು ಸೌಹಾರ್ದವಶನಾಗಿ ಮೇಲಿನಂತೆ ಯಥಾರ್ಥವಾದ ಮಾತುಗಳನ್ನು ಹೇಳುತ್ತಿದ್ದಾಗ ಅದನ್ನು ಕೇಳಿ ನಿಷಾದರಾಜ ಗುಹನು ದುಃಖದಿಂದ ಪೀಡಿತನಾಗಿ, ವ್ಯಥೆಯಿಂದ ವ್ಯಾಕುಲನಾಗಿ ಜ್ವರಪೀಡಿತ ಆನೆಯಂತೆ ಕಣ್ಣೀರು ಸುರಿಸತೊಡಗಿದನು.॥27॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಐವತ್ತೊಂದನೆಯ ಸರ್ಗ ಪೂರ್ಣವಾಯಿತು ॥51॥