०५० गङ्गातीरे गुहसमागमः

वाचनम्
ಭಾಗಸೂಚನಾ

ಮಾರ್ಗದಲ್ಲಿ ಶ್ರೀರಾಮನು ಅರಣ್ಯವಾಸದ ಅನುಮತಿಗಾಗಿ ಅಯೋಧ್ಯಾಪಟ್ಟಣದ ಅಧಿದೇವತೆಯನ್ನು ಪ್ರಾರ್ಥಿಸಿದುದು, ಶೃಂಗವೇರಪುರದ ಗಂಗಾನದಿಯ ತೀರದಲ್ಲಿ ತಂಗಿದುದು, ನಿಷಾದರಾಜ ಗುಹನಿಂದ ಸತ್ಕಾರ

ಮೂಲಮ್ - 1

ವಿಶಾಲಾನ್ ಕೋಸಲಾನ್ ರಮ್ಯಾನ್ಯಾತ್ವಾ ಲಕ್ಷ್ಮಣಪೂರ್ವಜಃ ।
ಅಯೋಧ್ಯಾಮುನ್ಮುಖೋ ಧೀಮಾನ್ ಪ್ರಾಂಜಲಿರ್ವಾಕ್ಯಮಬ್ರವೀತ್ ॥

ಅನುವಾದ

ಈ ಪ್ರಕಾರ ವಿಶಾಲ ಮತ್ತು ರಮಣೀಯ ಕೋಸಲದೇಶದ ಸೀಮೆಯನ್ನು ದಾಟಿ ಲಕ್ಷ್ಮಣನ ಅಣ್ಣ ಬುದ್ಧಿವಂತ ಶ್ರೀರಾಮನು ಅಯೋಧ್ಯೆಯ ಕಡೆಗೆ ಮುಖಮಾಡಿ ಕೈಜೋಡಿಸಿಕೊಂಡು ಹೇಳಿದನು .॥1॥

ಮೂಲಮ್ - 2

ಅಪೃಚ್ಛೇ ತ್ವಾಂ ಪುರಿಶ್ರೇಷ್ಠೇ ಕಾಕುತ್ಸ್ಥಪರಿಪಾಲಿತೇ ।
ದೈವತಾನಿ ಚ ಯಾನಿ ತ್ವಾಂ ಪಲಯಂತ್ಯಾವಸಂತಿ ಚ ॥

ಅನುವಾದ

ಕಕುತ್ಸ್ಥವಂಶಿ ರಾಜರು ಆಳಿದ ಶ್ರೇಷ್ಠ ಅಯೋಧ್ಯೆಯೇ! ನಿನ್ನಲ್ಲಿ ಮತ್ತು ನಿನ್ನನ್ನು ರಕ್ಷಿಸುವ ದೇವತೆಗಳಲ್ಲಿ, ನಿನ್ನೊಳಗೆ ವಾಸಿಸುವ ದೇವತೆಗಳಲ್ಲಿಯೂ ವನವಾಸಕ್ಕಾಗಿ ಆಜ್ಞೆ ಬೇಡುತ್ತಿದ್ದೇನೆ.॥2॥

ಮೂಲಮ್ - 3

ನಿವೃತ್ತವನವಾಸಸ್ತ್ವಾಮನೃಣೋ ಜಗತೀಪತೇಃ ।
ಪುನರ್ದ್ರಕ್ಷ್ಯಾಮಿ ಮಾತ್ರಾ ಚ ಪಿತ್ರಾ ಚ ಸಹ ಸಂಗತಃ ॥

ಅನುವಾದ

ವನವಾಸದ ಅವಧಿ ಮುಗಿಸಿ ಮಹಾರಾಜರ ಋಣದಿಂದ ಮುಕ್ತನಾಗಿ ನಾನು ಪುನಃ ಮರಳಿ ಬಂದು ನಿನ್ನನ್ನು ದರ್ಶಿಸುವೆನು ಹಾಗೂ ನಮ್ಮ ತಂದೆ-ತಾಯಿಯರನ್ನು ಭೆಟ್ಟಿಯಾಗುವೆನು.॥3॥

ಮೂಲಮ್ - 4

ತತೋ ರುಚಿರತಾಮ್ರಾಕ್ಷೋ ಭುಜಮುದ್ಯಮ್ಯ ದಕ್ಷಿಣಮ್ ।
ಅಶ್ರುಪೂರ್ಣಮುಖೋ ದೀನೋಽಬ್ರವೀಜ್ಜಾನಪದಂ ಜನಮ್ ॥

ಅನುವಾದ

ಅನಂತರ ಸುಂದರ, ಅರುಣ ನೇತ್ರವುಳ್ಳ ಶ್ರೀರಾಮನು ಬಲಗೈಯನ್ನು ಎತ್ತಿ ಕಣ್ಣುಗಳಿಂದ ಕಣ್ಣೀರು ಸುರಿಸುತ್ತಾ ದುಃಖಿತನಾಗಿ ಅಲ್ಲಿಯ ಜನರಲ್ಲಿ ಇಂತೆಂದನು.॥4॥

ಮೂಲಮ್ - 5

ಅನುಕ್ರೋಶೋ ದಯಾ ಚೈವ ಯಥಾರ್ಹಂ ಮಯಿ ವಃ ಕೃತಃ ।
ಚಿರಂ ದುಃಖಸ್ಯ ಪಾಪೀಯೋ ಗಮ್ಯತಾಮರ್ಥಸಿದ್ಧಯೇ ॥

ಅನುವಾದ

ನೀವು ನನ್ನ ಮೇಲೆ ದೊಡ್ಡ ಕೃಪೆ ಮಾಡಿರುವಿರಿ ಹಾಗೂ ಯಥೋಚಿತ ದಯೆ ತೋರಿರುವಿರಿ. ನನಗಾಗಿ ನೀವೆಲ್ಲರೂ ಬಹಳ ಕಷ್ಟ ಸಹಿಸಿದಿರಿ. ಹೀಗೆ ಬಹಳ ಹೊತ್ತು ದುಃಖದಲ್ಲಿ ಬೀಳುವುದು ಸರಿಯಲ್ಲ; ಅದಕ್ಕಾಗಿ ನೀವು ತಮ್ಮ-ತಮ್ಮ ಕಾರ್ಯವನ್ನು ಮಾಡಲು ಹೊರಡಿರಿ.॥5॥

ಮೂಲಮ್ - 6

ತೇಽಭಿವಾದ್ಯ ಮಹಾತ್ಮಾನಂ ಕೃತ್ವಾ ಚಾಪಿ ಪ್ರದಕ್ಷಿಣಮ್ ।
ವಿಲಪಂತೋ ನರಾ ಘೋರಂ ವ್ಯತಿಷ್ಠಂಶ್ಚ ಕ್ವಚಿತ್ ಕ್ವಚಿತ್ ॥

ಅನುವಾದ

ಇದನ್ನು ಕೇಳಿ ಅವರು ಮಹಾತ್ಮಾ ಶ್ರೀರಾಮನಿಗೆ ಪ್ರಣಾಮಗೈದು, ಅವನಿಗೆ ಪ್ರದಕ್ಷಿಣೆ ಬಂದು ಘೋರ ವಿಲಾಪ ಮಾಡುತ್ತಾ ಅಲ್ಲಲ್ಲೇ ನಿಂತುಕೊಂಡರು.॥6॥

ಮೂಲಮ್ - 7

ತಥಾ ವಿಲಪತಾಂ ತೇಷಾಮತೃಪ್ತಾನಾಂ ಚ ರಾಘವಃ ।
ಅಚಕ್ಷುರ್ವಿಷಯಂ ಪ್ರಾಯಾದ್ ಯಥಾರ್ಕಃ ಕ್ಷಣದಾಮುಖೇ ॥

ಅನುವಾದ

ಅವರ ಕಣ್ಣುಗಳು ಶ್ರೀರಾಮನ ದರ್ಶನದಿಂದ ಇನ್ನೂ ತೃಪ್ತವಾಗಿರಲಿಲ್ಲ. ಅವರು ಬಹಳ ವಿಲಾಪಮಾಡುತ್ತಾ ಇದ್ದರು. ಅಷ್ಟರಲ್ಲಿ ಶ್ರೀರಘುನಾಥನು ರಾತ್ರೆ ಸೂರ್ಯನು ಕಣ್ಮರೆಯಾಗುವಂತೆ ಕಣ್ಣುಗಳಿಂದ ಮರೆಯಾದನು.॥7॥

ಮೂಲಮ್ - 8

ತತೋ ಧಾನ್ಯಧನೋಪೇತಾನ್ ದಾನಶೀಲಜನಾನ್ಶಿವಾನ್ ।
ಅಕುತಶ್ಚಿದ್ಭಯಾನ್ ರಮ್ಯಾಂಶ್ಚೈತ್ಯಯೂಪಸಮಾವೃತಾನ್ ॥

ಮೂಲಮ್ - 9

ಉದ್ಯಾನಾಮ್ರವಣೋಪೇತಾನ್ ಸಂಪನ್ನಸಲಿಲಾಶಯಾನ್ ।
ತುಷ್ಟಪುಷ್ಟ ಜನಾಕೀರ್ಣಾನ್ ಗೋಕುಲಾಕುಲಸೇವಿತಾನ್ ॥

ಮೂಲಮ್ - 10

ರಕ್ಷಣೀಯಾನ್ನರೇಂದ್ರಾಣಾಂ ಬ್ರಹ್ಮಘೋಷಾಭಿನಾದಿತಾನ್
ರಥೇನ ಪುರುಷವ್ಯಾಘ್ರಃ ಕೋಸಲಾನತ್ಯವರ್ತತ ॥

ಅನುವಾದ

ಬಳಿಕ ಪುರುಷಸಿಂಹ ಶ್ರೀರಾಮನು ರಥದಿಂದಲೇ ಆ ಕೋಸಲ ದೇಶದ ಧನಧಾನ್ಯಗಳಿಂದ ಸಮೃದ್ಧವಾಗಿದ್ದ ಗಡಿಯನ್ನು ದಾಟಿದನು. ಅಲ್ಲಿಯ ಜನರು ದಾನಶೀಲರಾಗಿದ್ದರು. ಆ ದೇಶದಲ್ಲಿ ಎಲ್ಲಿಂದಲೂ ಯಾವುದೇ ಭಯವಿರಲಿಲ್ಲ. ಅಲ್ಲಿಯ ಭೂಭಾಗವು ರಮಣೀಯ ವೃಕ್ಷಗಳಿಂದ, ಯಜ್ಞದ ಯೂಪಗಳಿಂದ ವ್ಯಾಪ್ತವಾಗಿತ್ತು. ಅನೇಕ ಉದ್ಯಾನವನಗಳು ಮತ್ತು ಮಾವಿನತೋಪುಗಳಿಂದ ದೇಶದ ಶೋಭೆ ಹೆಚ್ಚಿಸಿದ್ದವು. ಅಲ್ಲಿ ತಿಳಿನೀರು ತುಂಬಿದ ಬಹಳಷ್ಟು ಜಲಾಶಯಗಳು ಸುಶೋಭಿತವಾಗಿದ್ದವು. ದೇಶದೆಲ್ಲೆಡೆ ಹೃಷ್ಟ-ಪುಷ್ಟ ಜನರಿಂದ ತುಂಬಿತ್ತು. ಗೋವುಗಳ ಸಮೂಹಗಳಿಂದ ವ್ಯಾಪ್ತವಾಗಿತ್ತು. ಅಲ್ಲಿಯ ಅನೇಕ ಗ್ರಾಮಗಳನ್ನು ರಾಜನು ರಕ್ಷಿಸುತ್ತಿದ್ದನು ಹಾಗೂ ಅಲ್ಲಿ ವೇದ ಮಂತ್ರಗಳ ಧ್ವನಿ ಪ್ರತಿಧ್ವನಿಸುತ್ತಿತ್ತು.॥8-10॥

ಮೂಲಮ್ - 11

ಮಧ್ಯೇನ ಮುದಿತಂ ಸ್ಫೀತಂ ರಮ್ಯೋದ್ಯಾನಸಮಾಕುಲಮ್ ।
ರಾಜ್ಯಂ ಭೋಜ್ಯಂ ನರೇಂದ್ರಾಣಾಂ ಯಯೌ ಧೃತಿಮತಾಂ ವರಃ ॥

ಅನುವಾದ

ಕೋಸಲದೇಶವನ್ನು ಬಿಟ್ಟು ಮುಂದೆ ಹೋದ ಶ್ರೇಷ್ಠಧೈರ್ಯಶಾಲಿ ಶ್ರೀರಾಮನು ಸುಖ-ಸೌಲಭ್ಯಗಳಿಂದ ಕೂಡಿದ, ಧನ-ಧಾನ್ಯಗಳಿಂದ ಸಮೃದ್ಧವಾದ, ರಮಣೀಯ ಉದ್ಯಾನವನಗಳಿಂದ ವ್ಯಾಪ್ತವಾದ ಹಾಗೂ ಸಾಮಂತರಾಜರು ಆಳುತ್ತಿದ್ದ ರಾಜ್ಯಗಳನ್ನು ದಾಟಿ ಮಧ್ಯಮಾರ್ಗದಿಂದ ಮುಂದರಿದನು.॥11॥

ಮೂಲಮ್ - 12

ತತ್ರ ತ್ರಿಪಥಗಾಂ ದಿವ್ಯಾಂಶೀತತೋಯಾಮಶೈವಲಾಮ್ ।
ದದರ್ಶ ರಾಘವೋ ಗಂಗಾಂರಮ್ಯಾಮೃಷಿನಿಷೇವಿತಾಮ್ ॥

ಅನುವಾದ

ಆ ರಾಜ್ಯದಲ್ಲಿ ಶ್ರೀರಘುನಾಥನು ಶೀತಲ ಜಲದಿಂದ ತುಂಬಿದ, ಪಾಪರಹಿತವಾದ, ರಮಣೀಯವಾದ ತ್ರಿಪಥಗಾಮಿನೀ ದಿವ್ಯ ಗಂಗೆಯನ್ನು ದರ್ಶಿಸಿದನು. ಅದನ್ನು ಬಹಳ ಮಹರ್ಷಿಗಳು ಸೇವಿಸುತ್ತಿದ್ದರು.॥12॥

ಮೂಲಮ್ - 13

ಆಶ್ರಮೈರವಿದೂರಸ್ಥೈಃ ಶ್ರೀಮದ್ಭಿಃ ಸಮಲಂಕೃತಾಮ್ ।
ಕಾಲೇಽಪ್ಸರೋಭಿರ್ಹೃಷ್ಟಾಭಿಃ ಸೇವಿತಾಂಭೋಹ್ರದಾಂ ಶಿವಾಮ್ ॥

ಅನುವಾದ

ಅದರ ತೀರದಲ್ಲಿ ಅಲ್ಲಲ್ಲಿ ಅನೇಕ ಸುಂದರ ಆಶ್ರಮಗಳು ಆ ದೇವನದಿಯ ಶೋಭೆಯನ್ನು ಹೆಚ್ಚಿಸುತ್ತಾ ನೆಲೆಸಿದ್ದವು. ಆಗಾಗ ಹರ್ಷಗೊಂಡ ಅಪ್ಸರೆಯರೂ ಕೆಳಗೆ ಇಳಿದು ಬಂದು, ಎಲ್ಲರ ಶ್ರೇಯಸ್ಸನ್ನು ಮಾಡುತ್ತಿದ್ದ ಗಂಗೆಯ ಮಡುವಿನಲ್ಲಿ ಸ್ನಾನ ಮಾಡುತ್ತಿದ್ದರು.॥13॥

ಮೂಲಮ್ - 14

ದೇವದಾನವಗಂಧರ್ವೈಃ ಕಿನ್ನರೈರುಪಶೋಭಿತಾಮ್ ।
ನಾಗಗಂಧರ್ವಪತ್ನೀಭಿಃ ಸೇವಿತಾಂ ಸತತಂ ಶಿವಾಮ್ ॥

ಅನುವಾದ

ದೇವತೆಗಳು, ದಾನವರು, ಗಂಧರ್ವರು, ಕಿನ್ನರರು ಆ ಮಂಗಳ ಸ್ವರೂಪಾ ಭಾಗೀರಥಿಯ ಶೋಭೆಯನ್ನು ಹೆಚ್ಚಿಸುತ್ತಿದ್ದರು. ನಾಗಗಳ ಮತ್ತು ಗಂಧರ್ವರ ಪತ್ನಿಯರು ಗಂಗಾಜಲದಲ್ಲಿ ಸ್ನಾನಮಾಡುತ್ತಿದ್ದರು.॥14॥

ಮೂಲಮ್ - 15

ದೇವಾಕ್ರೀಡಶತಾಕೀರ್ಣಾಂ ದೇವೋದ್ಯಾನಯುತಾಂ ನದೀಮ್ ।
ದೇವಾರ್ಥಮಾಕಾಶಗತಾಂ ವಿಖ್ಯಾತಾಂ ದೇವಪದ್ಮಿನೀಮ್ ॥

ಅನುವಾದ

ಗಂಗೆಯ ಎರಡೂ ದಡಗಳಲ್ಲಿ ದೇವತೆಗಳ ನೂರಾರು ಗಿರಿಧಾಮಗಳಿವೆ. ಅದರ ತೀರಗಳಲ್ಲಿ ದೇವತೆಗಳ ಉದ್ಯಾವನಗಳೂ ಇವೆ. ಆಕೆಯು ದೇವತೆಗಳ ಕ್ರೀಡೆಗಾಗಿ ಆಕಾಶದಲ್ಲೂ ನೆಲೆಸಿದ್ದಾಳೆ ಹಾಗೂ ಅಲ್ಲಿ ದೇವ ಪದ್ಮಿನೀ ಎಂಬ ರೂಪದಿಂದ ವಿಖ್ಯಾತಳಾಗಿದ್ದಾಳೆ.॥15॥

ಮೂಲಮ್ - 16

ಜಲಾಘಾತಾಟ್ಟಹಾಸೋಗ್ರಾಂ ಫೇನನಿರ್ಮಲಹಾಸಿನೀಮ್ ।
ಕ್ವಚಿದ್ ವೇಣೀಕೃತಜಲಾಂ ಕ್ವಚಿದಾವರ್ತಶೋಭಿತಾಮ್ ॥

ಅನುವಾದ

ಗಂಗಾನದಿಯು ಬಂಡೆಗಳಿಗೆ ಅಪ್ಪಳಿಸುವಾಗ ಉಂಟಾಗುವ ಶಬ್ದವೇ ಆಕೆಯ ಅಟ್ಟಹಾಸವಾಗಿದೆ. ನೀರಿನಲ್ಲಿ ಉಂಟಾದ ನೊರೆಯೇ ಆ ದಿವ್ಯ ನದಿಯ ನಿರ್ಮಲ ನಗು ಆಗಿದೆ. ಕೆಲವೆಡೆ ಅವಳ ಜಲವು ಜಡೆಯಂತೆ ಇದ್ದರೆ, ಕೆಲವೆಡೆ ಸುಳಿಗಳಿಂದ ಕೂಡಿದೆ.॥16॥

ಮೂಲಮ್ - 17

ಕ್ವಚಿತ್ಸ್ತಿಮಿತಗಂಭೀರಾಂ ಕ್ವಚಿದ್ವೇಗಸಮಾಕುಲಾಮ್ ।
ಕ್ವಚಿದ್ಗಂಭೀರನಿರ್ಘೋಷಾಂ ಕ್ವಚಿದ್ ಭೈರವನಿಃಸ್ವನಾಮ್ ॥

ಅನುವಾದ

ಕೆಲವೆಡೆ ಅದರ ಜಲ ನಿಶ್ಚಲ ಹಾಗೂ ಆಳವಾಗಿದೆ. ಕೆಲವೆಡೆ ಮಹಾವೇಗದಿಂದ ಕೂಡಿದೆ. ಕೆಲವೆಡೆ ಆಕೆಯ ಜಲದಿಂದ ಮೃದಂಗಾದಿಗಳಂತೆ ಗಂಭೀರ ಘೋಷ ಪ್ರಕಟವಾದರೆ, ಕೆಲವೆಡೆ ಸಿಡಿಲಿನಂತಹ ಭಯಂಕರನಾದ ಕೇಳಿಬರುತ್ತದೆ.॥17॥

ಮೂಲಮ್ - 18

ದೇವಸಂಘ್ಲಾುತಜಲಾಂ ನಿರ್ಮಲೋತ್ಪಲ ಸಂಕುಲಾಮ್ ।
ಕ್ವಚಿದಾಭೋಗಪುಲಿನಾಂ ಕ್ವಚಿನ್ನಿರ್ಮಲವಾಲುಕಾಮ್ ॥

ಅನುವಾದ

ಗಂಗೆಯ ಜಲದಲ್ಲಿ ದೇವತಾ ಸಮುದಾಯವು ಈಜುತ್ತಾರೆ. ಕೆಲವೆಡೆ ಅದರ ನೀರು ನೀಲ ಕಮಲಗಳಿಂದ ಮತ್ತು ಕುಮುದಗಳಿಂದ ಮುಚ್ಚಿಹೋಗಿದೆ. ಕೆಲವೆಡೆ ಮರಳಿನ ನಡು ಗಡ್ಡೆಗಳಲ್ಲಿ, ತೀರದಲ್ಲಿ ನಿರ್ಮಲ ಉಸುಕು ಹರಡಿದೆ.॥18॥

ಮೂಲಮ್ - 19

ಹಂಸಸಾರಸಸಂಘುಷ್ಟಾಂ ಚಕ್ರವಾಕೋಪಶೋಭಿತಾಮ್ ।
ಸದಾಮತ್ತೈಶ್ಚ ವಿಹಗೈರಭಿಪನ್ನಾಮನಿಂದಿತಾಮ್ ॥

ಅನುವಾದ

ಹಂಸ ಮತ್ತು ಸಾರಸಗಳ ಕಲರವ ಕೆಲವೆಡೆ ಪ್ರತಿಧ್ವನಿ ಸುತ್ತಿತ್ತು. ಚಕ್ರವಾಕಪಕ್ಷಿಗಳು ಆ ದೇವನದಿಯ ಶೋಭೆ ಹೆಚ್ಚಿಸಿದ್ದವು. ಸದಾ ಮದಮತ್ತ ವಿಹಂಗಮಗಳು ಉತ್ತಮ ಶೋಭಾಸಂಪನ್ನವಾಗಿ ನೀರಿನ ಮೇಲೆ ಹಾರಾಡುತ್ತಿದ್ದವು.॥19॥

ಮೂಲಮ್ - 20

ಕ್ವಚಿತ್ತೀರರುಹೈರ್ವೃಕ್ಷೈರ್ಮಾಲಾಭಿರಿವ ಶೋಭಿತಾಮ್ ।
ಕ್ವಚಿತ್ಫುಲ್ಲೋತ್ಪಲಚ್ಛನ್ನಾಂ ಕ್ವಚಿತ್ಪದ್ಮವನಾಕುಲಾಮ್ ॥

ಅನುವಾದ

ಕೆಲವೆಡೆ ದಡದಲ್ಲಿದ್ದ ವೃಕ್ಷಗಳು ಮಾಲೆಯಂತೆ ಅದರ ಶೋಭೆ ಹೆಚ್ಚಿಸುತ್ತಿವೆ. ಕೆಲವೆಡೆ ಅದರ ಜಲ ಅರಳಿದ ಕನ್ನೈದಿಲೆಗಳಿಂದ ಆಚ್ಛಾದಿತವಾಗಿತ್ತು. ಕೆಲವೆಡೆ ಕಮಲ ವನಗಳಿಂದ ತುಂಬಿಹೋಗಿತ್ತು.॥20॥

ಮೂಲಮ್ - 21

ಕ್ವಚಿತ್ಕುಮುದಖಂಡೈಶ್ಚ ಕುಡ್ಮಲೈರುಪಶೋಭಿತಾಮ್ ।
ನಾನಾಪುಷ್ಪರಜೋಧ್ವಸ್ತಾಂ ಸಮದಾಮಿವ ಚ ಕ್ವಚಿತ್ ॥

ಅನುವಾದ

ಕೆಲವೆಡೆ ಅರಳಿದ ಕುಮುದಪುಷ್ಪಗಳಿಂದ, ಮೊಗ್ಗುಗಳಿಂದ ಶೋಭಿಸುತ್ತಿದ್ದರೆ, ಕೆಲವೆಡೆ ನಾನಾ ಪ್ರಕಾರದ ಪುಷ್ಪಪರಾಗಗಳಿಂದ ವ್ಯಾಪ್ತ ವಾಗಿ ಮದೋನ್ಮತ್ತ ನಾರಿಯಂತೆ ಕಂಡುಬರುತ್ತಿತ್ತು.॥21॥

ಮೂಲಮ್ - 22½

ವ್ಯಪೇತಮಲಸಂಘಾತಾಂ ಮಣಿನಿರ್ಮಲದರ್ಶನಾಮ್ ।
ದಿಶಾಗಜೈರ್ವನಗಜೈರ್ಮತ್ತೈಶ್ಚ ವರವಾರಣೈಃ ॥
ದೇವರಾಜೋಪವಾಹ್ಯೈಶ್ಚ ಸಂನಾದಿತವನಾಂತರಾಮ್ ।

ಅನುವಾದ

ಗಂಗೆಯು ಪಾಪಗಳನ್ನು ದೂರಗೊಳಿಸುತ್ತದೆ. ಅದರ ಜಲ ಸ್ಫಟಿಕಮಣಿಯಂತೆ ಸ್ವಚ್ಛವಾಗಿದೆ. ಅದರ ತಟದ ಅರಣ್ಯಗಳು ಮತ್ತಗಜಗಳು, ಕಾಡಾನೆಗಳು ಮತ್ತು ದೇವೇಂದ್ರನ ವಾಹನಕ್ಕೆ ಉಪಯೋಗೀ ಶ್ರೇಷ್ಠ ಆನೆಗಳ ಕೋಲಾಹಲದಿಂದ ತುಂಬಿದೆ.॥22॥

ಮೂಲಮ್ - 23

ಪ್ರಮದಾಮಿವ ಯತ್ನೇನ ಭೂಷಿತಾಂ ಭೂಷಣೋತ್ತಮೈಃ ॥

ಮೂಲಮ್ - 24

ಫಲೈಃಪುಷ್ಪೈಃ ಕಿಸಲಯೈರ್ವೃತಾಂ ಗುಲ್ಮೈರ್ದ್ವಿಜೈಸ್ತಥಾ ।
ವಿಷ್ಣುಪಾದಚ್ಯುತಾಂ ದಿವ್ಯಾಮಪಾಪಾಂ ಪಾಪನಾಶಿನೀಮ್ ॥

ಅನುವಾದ

ಆ ಗಂಗಾನದಿಯು ಹೂವು, ಹಣ್ಣು, ಚಿಗುರು, ಲತಾ ಗುಲ್ಮಗಳು ಮತ್ತು ಪಕ್ಷಿಗಳಿಂದ ಆವೃತವಾಗಿ ಉತ್ತಮ ಒಡವೆಗಳಿಂದ ಅಲಂಕರಿಸಿಕೊಂಡ ಯುವತಿಯಂತೆ ಶೋಭಿಸುತ್ತಿತ್ತು. ಆಕೆಯ ಪ್ರಾಕಟ್ಯವು ಭಗವಾನ್ ವಿಷ್ಣುವಿನ ಚರಣದಿಂದ ಆಗಿತ್ತು. ಅವಳಲ್ಲಿ ಪಾಪದ ಲೇಶವೂ ಇಲ್ಲ. ಆ ದಿವ್ಯ ನದಿಯು ಜೀವಿಗಳ ಸಮಸ್ತ ಪಾಪಗಳನ್ನು ನಾಶಮಾಡಿ ಬಿಡುವಳು.॥23-24॥

ಮೂಲಮ್ - 25

ಶಿಂಶುಮಾರೈಶ್ಚ ನಕ್ರೈಶ್ಚ ಭುಜಂಗೈಶ್ಚ ಸವನ್ವಿತಾಮ್ ।
ಶಂಕರಸ್ಯ ಜಟಾಜೂಟಾದ್ಭ್ರಷ್ಟಾಂ ಸಾಗರತೇಜಸಾ ॥

ಮೂಲಮ್ - 26

ಸಮುದ್ರಮಹಿಷೀಂ ಗಂಗಾಂ ಸಾರಸಕ್ರೌಂಚನಾದಿತಾಮ್ ।
ಆಸಸಾದ ಮಹಾಬಾಹುಃ ಶೃಂಗವೇರಪುರಂ ಪ್ರತಿ ॥

ಅನುವಾದ

ಆಕೆಯ ಜಲದಲ್ಲಿ ನೀರು ಕಪಿಗಳು, ಮೊಸಳೆಗಳು, ನೀರು ಹಾವುಗಳು ವಾಸಿಸುತ್ತವೆ. ಸಗರವಂಶೀ ಭಗೀರಥನ ತಪೋಮಯ ತೇಜದಿಂದ, ಶಂಕರನ ಜಟಾಜೂಟದಿಂದ ಅವತರಿಸಿದ, ಸಮುದ್ರನ ರಾಣಿಯಾದ ದೇವನದಿಯ ಸನಿಹದಲ್ಲಿ ಸಾರಸ, ಕ್ರೌಂಚಪಕ್ಷಿಗಳು ಕಲರವ ಮಾಡುತ್ತಿದ್ದ ಗಂಗೆಯ ಬಳಿಗೆ ಮಹಾಬಾಹು ಶ್ರೀರಾಮನು ತಲುಪಿದನು. ಆ ಗಂಗೆಯು ಶೃಂಗವೇರಪುರಕ್ಕೆ ತಾಗಿ ಹರಿಯುತ್ತಿದ್ದಳು.॥25-26॥

ಮೂಲಮ್ - 27

ತಾಮೂರ್ಮಿಕಲಿಲಾವರ್ತಾಮನ್ವವೇಕ್ಷ್ಯ ಮಹಾರಥಃ ।
ಸುಮಂತ್ರಮಬ್ರವೀತ್ ಸೂತಮಿಹೈವಾದ್ಯವಸಾಮಹೇ ॥

ಅನುವಾದ

ಸುಳಿಗಳಿಂದ, ತೆರೆಗಳಿಂದ ವ್ಯಾಪ್ತವಾದ ಆ ಗಂಗೆಯನ್ನು ದರ್ಶಿಸಿ ಮಹಾರಥೀ ಶ್ರೀರಾಮನು ಸಾರಥಿ ಸುಮಂತ್ರನಲ್ಲಿ - ಸೂತನೇ! ಇಂದು ನಾವು ಇಲ್ಲೇ ಇರೋಣ ಎಂದು ಹೇಳಿದನು.॥27॥

ಮೂಲಮ್ - 28

ಅವಿದೂರಾದಯಂ ನದ್ಯಾ ಬಹುಪುಷ್ಪಪ್ರವಾಲವಾನ್ ।
ಸುಮಹಾನಿಂಗುದೀವೃಕ್ಷೋ ವಸಾಮೋಽತ್ರೈವ ಸಾರಥೇ ॥

ಅನುವಾದ

ಸಾರಥಿಯೇ! ಗಂಗೆಯ ಸನಿಹದಲ್ಲೇ ಇರುವ ಪುಷ್ಪಗಳಿಂದಲೂ, ನವಪಲ್ಲವಗಳಿಂದಲೂ, ಸುಶೋಭಿತವಾದ ಈ ಇಂಗುದೀ ಮಹಾವೃಕ್ಷದ ಕೆಳಗೆ ಇಂದು ನಾವು ತಂಗುವೆವು.॥28॥

ಮೂಲಮ್ - 29

ಪ್ರೇಕ್ಷ್ಯಾಮಿಃ ಸರಿತಾಂ ಶ್ರೇಷ್ಠಾಂ ಸಮ್ಮಾನ್ಯಸಲಿಲಾಂ ಶಿವಾಮ್ ।
ದೇವಮಾನವಗಂಧರ್ವಮೃಗಪನ್ನಗಪಕ್ಷಿಣಾಮ್ ॥

ಅನುವಾದ

ಯಾವ ಗಂಗೆಯ ಜಲವು ದೇವತೆಗಳಿಗೆ, ಮನುಷ್ಯರಿಗೆ, ಗಂಧರ್ವರಿಗೆ, ಸರ್ಪಗಳಿಗೆ, ಪಶುಗಳಿಗೆ, ಪಕ್ಷಿಗಳಿಗೆ ಆದರಣೀಯವಾಗಿದೆಯೋ, ಆ ಮಂಗಳಸ್ವರೂಪಾ, ಸರಿತೆಗಳಲ್ಲಿ ಶ್ರೇಷ್ಠಗಂಗೆಯ ದರ್ಶನ ನಮಗೆ ಆಗುತ್ತಾ ಇರಲಿ.॥29॥

ಮೂಲಮ್ - 30

ಲಕ್ಷ್ಮಣಶ್ಚ ಸುಮಂತ್ರಶ್ಚ ಬಾಢಮಿತ್ಯೇವ ರಾಘವಮ್ ।
ಉಕ್ತ್ವಾ ತಮಿಂಗುದೀವೃಕ್ಷಂ ತದೋಪಯಯತುರ್ಹಯೈಃ ॥

ಅನುವಾದ

ಆಗ ಲಕ್ಷ್ಮಣ ಮತ್ತು ಸುಮಂತ್ರ ಇಬ್ಬರೂ ಶ್ರೀರಾಮನಲ್ಲಿ ಹಾಗೆಯೇ ಆಗಲೀ ಎಂದು ಹೇಳಿ ರಥದಲ್ಲೇ ಆ ಇಂಗುದೀ ವೃಕ್ಷದ ಸಮೀಪಕ್ಕೆ ಹೋದರು.॥30॥

ಮೂಲಮ್ - 31

ರಾಮೋಽಭಿಯಾಯ ತಂರಮ್ಯಂ ವೃಕ್ಷಮಿಕ್ಷ್ವಾಕುನಂದನಃ ।
ರಥಾದವತರತ್ ತಸ್ಮಾ ಸಭಾರ್ಯಃ ಸಹಲಕ್ಷ್ಮಣಃ ॥

ಅನುವಾದ

ಆ ರಮಣೀಯ ವೃಕ್ಷದ ಬಳಿಗೆ ಹೋಗಿ ಇಕ್ಷ್ವಾಕುಕುಲನಂದನ ಶ್ರೀರಾಮನು ಪತ್ನಿ ಸೀತೆ ಮತ್ತು ಲಕ್ಷ್ಮಣರೊಂದಿಗೆ ರಥದಿಂದ ಕೆಳಗೆ ಇಳಿದನು.॥31॥

ಮೂಲಮ್ - 32

ಸುಮಂತ್ರೋಽಪ್ಯವತೀರ್ಯಾಥ ಮೋಚಯಿತ್ವಾ ಹಯೋತ್ತಮಾನ್ ।
ವೃಕ್ಷಮೂಲಗತಂ ರಾಮಮುಪತಸ್ಥೇ ಕೃತಾಂಜಲಿಃ ॥

ಅನುವಾದ

ಮತ್ತೆ ಸುಮಂತ್ರನು ಇಳಿದು ಕುದುರೆಗಳನ್ನು ಬಿಚ್ಚಿ, ವೃಕ್ಷದ ಬೇರಿನ ಮೇಲೆ ಕುಳಿತಿರುವ ಶ್ರೀರಾಮಚಂದ್ರನ ಬಳಿಗೆ ಹೋಗಿ ಕೈಮುಗಿದು ನಿಂತುಕೊಂಡನು.॥32॥

ಮೂಲಮ್ - 33

ತತ್ರ ರಾಜಾ ಗುಹೋ ನಾಮ ರಾಮಸ್ಯಾತ್ಮಸಮಃ ಸಖಾ ।
ನಿಷಾದಜಾತ್ಯೋ ಬಲವಾನ್ ಸ್ಥಪತಿಶ್ಚೇತಿ ವಿಶ್ರುತಃ ॥

ಅನುವಾದ

ಶೃಂಗವೇರಪುರದಲ್ಲಿ ಗುಹ ಎಂಬ ರಾಜನು ರಾಜ್ಯವಾಳುತ್ತಿದ್ದನು. ಅವನು ಶ್ರೀರಾಮನಿಗೆ ಪ್ರಾಣಗಳಂತೆ ಪ್ರಿಯನಾಗಿದ್ದನು. ನಿಷಾದಕುಲದಲ್ಲಿ ಹುಟ್ಟಿದ ಅವನು ಶಾರೀರಿಕಶಕ್ತಿ ಮತ್ತು ಸೈನಿಕಶಕ್ತಿಯಿಂದ ಬಲಿಷ್ಠನಾಗಿದ್ದನು. ಅಲ್ಲಿಯ ನಿಷಾದರಿಗೆ ಸುವಿಖ್ಯಾತ ರಾಜನಾಗಿದ್ದನು.॥33॥

ಮೂಲಮ್ - 34

ಸ ಶ್ರುತ್ವಾ ಪುರುಷವ್ಯಾಘ್ರಂ ರಾಮಂ ವಿಷಯಮಾಗತಮ್ ।
ವೃದ್ಧೈಃಪರಿವೃತೋಽಮಾತ್ಯೈರ್ಜ್ಞಾತಿಭಿಶ್ಚಾಪ್ಯುಪಾಗತಃ ॥

ಅನುವಾದ

ಅವನು ಪುರುಷಸಿಂಹ ಶ್ರೀರಾಮನು ತನ್ನ ರಾಜ್ಯಕ್ಕೆ ಆಗಮಿಸಿರುವನು ಎಂದು ಕೇಳಿದಾಗ ವೃದ್ಧ ಮಂತ್ರಿಗಳೊಂದಿಗೆ ಹಾಗೂ ಬಂಧು-ಬಾಂಧವರೊಂದಿಗೆ ಕೂಡಿಕೊಂಡು ರಾಮನಿದ್ದಲ್ಲಿಗೆ ಬಂದನು.॥34॥

ಮೂಲಮ್ - 35

ತತೋ ನಿಷಾದಾಧಿಪತಿಂ ದೃಷ್ಟ್ವಾ ದೂರಾದುಪಸ್ಥಿತಮ್ ।
ಸಹ ಸೌಮಿತ್ರಿಣಾ ರಾಮಃ ಸಮಾಗಚ್ಛದ್ ಗುಹೇನ ಸಃ ॥

ಅನುವಾದ

ನಿಷಾದರಾಜನು ಬರುತ್ತಿರುವುದನ್ನು ದೂರದಿಂದಲೇ ನೋಡಿ ಶ್ರೀರಾಮನು ಲಕ್ಷ್ಮಣನ ಸಹಿತ ಮುಂದಾಗಿ ಹೋಗಿ ಅವನನ್ನು ಭೆಟ್ಟಿಯಾದನು.॥35॥

ಮೂಲಮ್ - 36½

ತಮಾರ್ತಃ ಸಂಪರಿಷ್ವಜ್ಯ ಗುಹೋ ರಾಘವಮಬ್ರವೀತ್ ।
ಯಥಾಯೋಧ್ಯಾ ತಥೇದಂ ತೇ ರಾಮ ಕಿಂ ಕರವಾಣಿ ತೇ ॥
ಈದೃಶಂ ಹಿ ಮಹಾಬಾಹೋ ಕಃ ಪ್ರಾಪ್ಸ್ಯತ್ಯತಿಥಿಂ ಪ್ರಿಯಮ್ ।

ಅನುವಾದ

ಜಟಾವಲ್ಕಲಧಾರೀ ಶ್ರೀರಾಮಚಂದ್ರ ನನ್ನು ನೋಡಿ ಗುಹನಿಗೆ ಬಹಳ ದುಃಖವಾಯಿತು. ಅವನು ಶ್ರೀರಾಮನನ್ನು ಎದೆಗೊತ್ತಿಕೊಂಡು ಹೇಳಿದನು - ಶ್ರೀರಾಮಾ! ನಿನಗೆ ಅಯೋಧ್ಯೆಯ ರಾಜ್ಯದಂತೆಯೇ ಈ ರಾಜ್ಯವು ಆಗಿದೆ. ನಾನು ನಿನ್ನ ಏನು ಸೇವೆ ಮಾಡಲಿ? ಮಹಾಬಾಹೋ! ನಿಮ್ಮಂತಹ ಅತಿಥಿ ಯಾರಿಗೆ ಪ್ರಿಯವಾಗಿಲ್ಲ.॥36॥

ಮೂಲಮ್ - 37

ತತೋ ಗುಣವದನ್ನಾದ್ಯಮುಪಾದಾಯ ಪೃಥಗ್ವಿಧಮ್ ॥

ಮೂಲಮ್ - 38

ಅರ್ಘ್ಯಂ ಚೋಪಾನಯಚ್ಛೀಘ್ರ ವಾಕ್ಯಂ ಚೇದಮುವಾಚ ಹ ।
ಸ್ವಾಗತಂ ತೇ ಮಹಾಬಾಹೋ ತವೇಯಮಖಿಲಾ ಮಹೀ ॥

ಮೂಲಮ್ - 39

ವಯಂ ಪ್ರೇಷ್ಯಾ ಭವಾನ್ಭರ್ತಾ ಸಾಧು ರಾಜ್ಯಂ ಪ್ರಶಾಧಿ ನಃ ।
ಭಕ್ಷ್ಯಂ ಭೋಜ್ಯಂ ಚ ಪೇಯಂ ಚ ಲೇಹ್ಯಂ ಚೈತದುಪಸ್ಥಿತಮ್
ಶಯನಾನಿ ಚ ಮುಖ್ಯಾನಿ ವಾಜಿನಾಂ ಖಾದನಂ ಚ ತೇ ॥

ಅನುವಾದ

ಮತ್ತೆ ಬಗೆ-ಬಗೆಯ ಉತ್ತಮ ಆಹಾರವನ್ನು ತಂದಿರಿಸಿದನು. ಅವನು ಶೀಘ್ರವಾಗಿ ಅರ್ಘ್ಯವನ್ನು ನಿವೇದಿಸಿ, ಈ ಪ್ರಕಾರ ಹೇಳಿದನು-ಮಹಾಬಾಹೋ! ನಿನಗೆ ಸ್ವಾಗತವು. ನನ್ನ ಅಧಿಕಾರದಲ್ಲಿರುವ ರಾಜ್ಯವು ನಿನ್ನದೇ ಆಗಿದೆ. ನೀನು ನಮಗೆ ಸ್ವಾಮಿಯಾಗಿರುವೆ, ನಾವು ನಿನ್ನ ಸೇವಕರಾಗಿರುವೆವು. ಇಂದಿನಿಂದ ಈ ನಮ್ಮ ರಾಜ್ಯವನ್ನು ನೀನೇ ಪಾಲಿಸು. ಈ ಭಕ್ಷ್ಯ-ಭೋಜ್ಯ, ಪೇಯ, ಲೇಹ್ಯ ಮೊದಲಾದವುಗಳು ನಿನ್ನ ಸೇವೆಗೆ ಇರಿಸಿದ್ದೇವೆ, ಇದನ್ನು ಸ್ವೀಕಾರ ಮಾಡು. ಈ ಉತ್ತಮೋತ್ತಮ ಶಯ್ಯೆಗಳು ಹಾಗೂ ಕುದುರೆಗಳಿಗಾಗಿ ಕಡಲೆ, ಹುಲ್ಲು ಇರಿಸಿದೆ, ಇದೆಲ್ಲ ಸಾಮಗ್ರಿಗಳನ್ನು ಸ್ವೀಕರಿಸು.॥37-39॥

ಮೂಲಮ್ - 40½

ಗುಹಮೇವಂ ಬ್ರುವಾಣಂ ತು ರಾಘವಃ ಪ್ರತ್ಯುವಾಚ ಹ ।
ಅರ್ಚಿತಾಶ್ಚೈವ ಹೃಷ್ಟಾಶ್ಚ ಭವತಾ ಸರ್ವದಾ ವಯಮ್ ॥
ಪದ್ಭ್ಯಾಮಭಿಗಮಾಚ್ಚೈವ ಸ್ನೇಹಸಂದರ್ಶನೇನ ಚ ।

ಅನುವಾದ

ಗುಹನು ಹೀಗೆ ಹೇಳಿದಾಗ ಶ್ರೀರಾಮಚಂದ್ರನು ಅವನಿಗೆ ಹೀಗೆ ಉತ್ತರಿಸಿದನು - ಸಖನೇ! ನೀನು ಇಲ್ಲಿಯವರೆಗೆ ಕಾಲ್ನಡಿಗೆಯಿಂದ ಬಂದಿರುವುದು, ಸ್ನೇಹತೋರಿಸುವುದೇ ನಮಗಾಗಿ ಒಳ್ಳೆಯ ಪೂಜೆ, ಸ್ವಾಗತ-ಸತ್ಕಾರವಾಯಿತು. ನಿನ್ನೊಂದಿಗೆ ಭೆಟ್ಟಿಯಾಗಿ ನನಗೆ ಬಹಳ ಸಂತೋಷವಾಯಿತು.॥40॥

ಮೂಲಮ್ - 41

ಭುಜಾಭ್ಯಾಂ ಸಾಧು ವೃತ್ತಾಭ್ಯಾಂ ಪೀಡಯನ್ ವಾಕ್ಯಮಬ್ರವೀತ್ ॥

ಮೂಲಮ್ - 42

ದಿಷ್ಟ್ಯಾ ತ್ವಾಂ ಗುಹ ಪಶ್ಯಾಮಿ ಹ್ಯರೋಗಂ ಸಹ ಬಾಂಧವೈಃ ।
ಅಪಿ ತೇ ಕುಶಲಂ ರಾಷ್ಟ್ರೇ ಮಿತ್ರೇಷು ಚ ವನೇಷು ಚ ॥

ಅನುವಾದ

ಮತ್ತೆ ಶ್ರೀರಾಮನು ತನ್ನ ದುಂಡಾದ ಭುಜಗಳಿಂದ ಗುಹನನ್ನು ಬರಸೆಳೆದು ಅಪ್ಪಿಕೊಂಡು ಹೇಳಿದನು - ಗುಹನೇ! ಇಂದು ಬಂಧು-ಬಾಂಧವರೊಂದಿಗೆ ಸ್ವಸ್ಥ ಹಾಗೂ ಆನಂದಿತನಾದ ನಿನ್ನನ್ನು ನೋಡುತ್ತಿರುವುದು ಸೌಭಾಗ್ಯದ ಮಾತಾಗಿದೆ. ನಿನ್ನ ರಾಜ್ಯದಲಿ, ಮಿತ್ರರಲ್ಲಿ ಹಾಗೂ ವನದಲ್ಲಿ ಎಲ್ಲೆಡೆ ಕ್ಷೇಮವಾಗಿದ್ದಾರಲ್ಲ ತಿಳಿಸು.॥41-42॥

ಮೂಲಮ್ - 43

ಯತ್ತ್ವಿದಂ ಭವತಾ ಕಿಂಚಿತ್ ಪ್ರೀತ್ಯಾ ಸಮುಪಕಲ್ಪಿತಮ್ ।
ಸರ್ವಂ ತದನುಜಾನಾಮಿ ನ ಹಿ ವರ್ತೇ ಪ್ರತಿಗ್ರಹೇ ॥

ಅನುವಾದ

ಪ್ರೇಮದಿಂದ ತಂದಿರುವ ಈ ಸಾಮಗ್ರಿಗಳನ್ನು ನಾನು ಸ್ವೀಕಾರ ಮಾಡಿರುವೆ, ನೀನು ಇದನ್ನು ಹಿಂದಕ್ಕೆ ಒಯ್ಯುವಂತೆ ಆಜ್ಞಾಪಿಸುತ್ತಿದ್ದೇನೆ; ಏಕೆಂದರೆ ಈ ಸಮಯದಲ್ಲಿ ಬೇರೆಯವರು ಕೊಟ್ಟಿರುವ ಯಾವುದೇ ವಸ್ತುವನ್ನು ನಾನು ತೆಗೆದುಕೊಳ್ಳುವುದಿಲ್ಲ, ಉಪಯೋಗಿಸುವುದಿಲ್ಲ.॥43॥

ಮೂಲಮ್ - 44

ಕುಶಚೀರಾಜಿನಧರಂ ಫಲಮೂಲಾಶಿನಂ ಚ ಮಾಮ್ ।
ವಿದ್ಧಿ ಪ್ರಣಿಹಿತಂ ಧರ್ಮೇ ತಾಪಸಂ ವನಗೋಚರಮ್ ॥

ಅನುವಾದ

ವಲ್ಕಲ ಮತ್ತು ಮೃಗಚರ್ಮ ಧರಿಸಿ ಫಲ-ಮೂಲಗಳ ಆಹಾರ ಸ್ವೀಕರಿಸುತ್ತೇನೆ. ಧರ್ಮದಲ್ಲಿ ಸ್ಥಿತನಾಗಿ ತಾಪಸ ವೇಷದಲ್ಲಿ ವನದಲ್ಲಿ ಸಂಚರಿಸುವೆನು. ಈ ದಿನಗಳಲ್ಲಿ ನಾನು ಈ ನಿಯಮದಲ್ಲಿ ಸ್ಥಿತನೆಂದು ತಿಳಿ.॥44॥

ಮೂಲಮ್ - 45

ಅಶ್ವಾನಾಂ ಖಾದನೇನಾಹಮರ್ಥೀ ನಾನ್ಯೇನ ಕೇನಚಿತ್ ।
ಏತಾವತಾತ್ರ ಭವತಾ ಭವಿಷ್ಯಾಮಿ ಸುಪೂಜಿತಃ ॥

ಅನುವಾದ

ಈ ವಸ್ತುಗಳಲ್ಲಿ ಕುದುರೆಗಳು ತಿನ್ನುವ ವಸ್ತುಗಳ ಆವಶ್ಯಕತೆ ನನಗಿದೆ, ಬೇರೆ ಯಾವ ವಸ್ತುಗಳೂ ಬೇಡ. ಕುದುರೆಗಳಿಗೆ ತಿನ್ನಿಸುವುದರಿಂದ ನಿನ್ನಿಂದ ನನ್ನ ಪೂರ್ಣ ಸತ್ಕಾರವಾದಂತೆ.॥45॥

ಮೂಲಮ್ - 46

ಏತೇ ಹಿ ದಯಿತಾ ರಾಜ್ಞಃ ಪಿತುರ್ದಶರಥಸ್ಯ ಮೇ ।
ಏತೈಃ ಸುವಿಹಿತೈರಶ್ವೈರ್ಭವಿಷ್ಯಾಮ್ಯಹಮರ್ಚಿತಃ ॥

ಅನುವಾದ

ಈ ಕುದುರೆಗಳು ನನ್ನ ತಂದೆ ಮಹಾರಾಜರಿಗೆ ಬಹಳ ಪ್ರಿಯವಾಗಿವೆ. ಇವುಗಳ ಮೇವು-ನೀರಿನ ವ್ಯವಸ್ಥೆ ಸರಿಯಾಗಿ ಆದರೆ ನನ್ನ ಪೂಜೆ ಸರಿಯಾಗಿ ಆದಂತೆಯೇ.॥46॥

ಮೂಲಮ್ - 47

ಅಶ್ವಾನಾಂ ಪ್ರತಿಪಾದಂ ಚ ಖಾದನಂ ಚೈವ ಸೋನ್ವಶಾತ್ ।
ಗುಹಸ್ತತ್ರೈವ ಪುರುಷಾಸ್ತ್ವರಿತಂ ದೀಯತಾಮಿತಿ ॥

ಅನುವಾದ

ಗುಹನೇ! ಕುದುರೆಗಳ ಮೇವು-ನೀರನ್ನು ವಸ್ತುಗಳನ್ನು ಶೀಘ್ರವಾಗಿ ತರುವಂತೆ ಸೇವಕರಿಗೆ ಈಗ ಆಜ್ಞಾಪಿಸು.॥47॥

ಮೂಲಮ್ - 48

ತತಶ್ಚೀರೋತ್ತರಾಸಂಗಃ ಸಂಧ್ಯಾಮನ್ವಾಸ್ಯಪಶ್ಚಿಮಾಮ್ ।
ಜಲಮೇವಾದದೇ ಭೋಜ್ಯಂ ಲಕ್ಷ್ಮಣೇನಾಹೃತಂ ಸ್ವಯಮ್ ॥

ಅನುವಾದ

ಅನಂತರ ವಲ್ಕಲದ ಉತ್ತರೀಯವನ್ನು ಧರಿಸಿದ ಶ್ರೀರಾಮನು ಸಾಯಂಕಾಲದ ಸಂಧ್ಯಾವಂದನೆಯನ್ನು ಮಾಡಿ ಆಹಾರವಾಗಿ ಸ್ವತಃ ಲಕ್ಷ್ಮಣನು ತಂದಿರುವ ಕೇವಲ ನೀರು ಮಾತ್ರ ಕುಡಿದನು.॥48॥

ಮೂಲಮ್ - 49

ತಸ್ಯ ಭೂವೌ ಶಯಾನಸ್ಯ ಪಾದೌ ಪ್ರಕ್ಷಾಲ್ಯ ಲಕ್ಷ್ಮಣಃ ।
ಸಭಾರ್ಯಸ್ಯ ತತೋಽಭ್ಯೇತ್ಯ ತಸ್ಥೌ ವೃಕ್ಷಮುಪಾಶ್ರಿತಃ ॥

ಅನುವಾದ

ನಂತರ ಶ್ರೀರಾಮನು ಪತ್ನೀಸಹಿತ ನೆಲದಲ್ಲಿ ಹಾಸಿದ ಹುಲ್ಲಿನ ಶಯ್ಯೆಯಲ್ಲಿ ಮಲಗಿದನು. ಆಗ ಲಕ್ಷ್ಮಣನು ಅವನ ಎರಡೂ ಕಾಲುಗಳನ್ನು ತೊಳೆದು ಒರೆಸಿ ಅಲ್ಲಿಂದ ಸ್ವಲ್ಪ ದೂರ ಹೋಗಿ ಒಂದು ಮರವನ್ನಾಂತು ಕುಳಿತುಕೊಂಡನು.॥49॥

ಮೂಲಮ್ - 50

ಗುಹೋಽಪಿ ಸಹ ಸೂತೇನ ಸೌಮಿತ್ರಿಮನುಭಾಷಯನ್ ।
ಅನ್ವಜಾಗ್ರತ್ ತತೋ ರಾಮಮಪ್ರಮತ್ತೋಧನುರ್ಧರಃ ॥

ಅನುವಾದ

ಗುಹನೂ ಎಚ್ಚರಿಕೆಯಿಂದ ಧನುಷ್ಯವನ್ನು ಧರಿಸಿ ಸುಮಂತ್ರನೊಂದಿಗೆ ಕುಳಿತುಕೊಂಡು ಸುಮಿತ್ರಾನಂದನ ಲಕ್ಷ್ಮಣನಲ್ಲಿ ಮಾತುಕತೆಯಾಡುತ್ತಾ ಶ್ರೀರಾಮನ ರಕ್ಷಣೆಗಾಗಿ ರಾತ್ರಿಯಿಡೀ ಜಾಗರಣೆ ಮಾಡಿದನು.॥50॥

ಮೂಲಮ್ - 51

ತಥಾ ಶಯಾನಸ್ಯ ತತೋ ಯಶಸ್ವಿನೋ
ಮನಸ್ವಿನೋ ದಾಶರಥೇರ್ಮಹಾತ್ಮನಃ ।
ಅದೃಷ್ಟದುಃಖಸ್ಯ ಸುಖೋಚಿತಸ್ಯ ಸಾ
ತದಾ ವ್ಯತಿತಾ ಸುಚಿರೇಣ ಶರ್ವರೀ ॥

ಅನುವಾದ

ಈ ಪ್ರಕಾರ ಮಲಗಿರುವ, ಎಂದೂ ದುಃಖವನ್ನೇ ನೋಡದ, ಸುಖವನ್ನು ಅನುಭವಿಸಲು ಯೋಗ್ಯನಾದ, ಯಶಸ್ವೀ, ಮನಸ್ವೀ, ದಶರಥನಂದನ ಮಹಾತ್ಮಾ ಶ್ರೀರಾಮನ ಆ ರಾತ್ರಿಯು ನಿಧಾನವಾಗಿ ಕಳೆಯಿತು.॥51॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಐವತ್ತನೆಯ ಸರ್ಗ ಪೂರ್ಣವಾಯಿತು ॥50॥