०४९ रामादिभिः गोमत्यादिनदीतरणम्

वाचनम्
ಭಾಗಸೂಚನಾ

ಶ್ರೀರಾಮನು ಕೋಸಲದೇಶವನ್ನು ದಾಟಿ ಮುಂದೆ ವೇದಶ್ರುತಿ, ಗೋಮತಿ ಮತ್ತು ಸ್ಯಂದಿಕಾ ನದಿಗಳನ್ನು ದಾಟಿ ಸುಮಂತ್ರನಲ್ಲಿ ಈ ರೀತಿ ಹೇಳಿದುದು

ಮೂಲಮ್ - 1

ರಾಮೋಽಪಿ ರಾತ್ರಿಶೇಷೇಣ ತೇನೈವ ಮಹದಂತರಮ್ ।
ಜಗಾಮ ಪುರುಷವ್ಯಾಘ್ರಃ ಪಿತುರಾಜ್ಞಾಮನುಸ್ಮರನ್ ॥

ಅನುವಾದ

ಅತ್ತಲಾಗಿ ಪುರುಷಸಿಂಹನಾದ ಶ್ರೀರಾಮನೂ ತಂದೆಯ ಆಜ್ಞೆಯನ್ನು ಸ್ಮರಿಸುತ್ತಾ ರಾತ್ರಿಯ ಉಳಿದ ಭಾಗದಲ್ಲಿ ಬಹಳ ದೂರ ಪ್ರಯಾಣ ಮಾಡಿದನು.॥1॥

ಮೂಲಮ್ - 2

ತಥೈವ ಗಚ್ಛತಸ್ತಸ್ಯ ವ್ಯಪಾಯಾದ್ ರಜನೀ ಶಿವಾ ।
ಉಪಾಸ್ಯ ಸ ಶಿವಾಂ ಸಂಧ್ಯಾಂ ವಿಷಯಾನತ್ಯ ಗಾಹತ ॥

ಅನುವಾದ

ಹಾಗೆಯೇ ಪ್ರಯಾಣ ಮಾಡುತ್ತಾ ಆ ಮಂಗಳಮಯ ಇರುಳು ಕಳೆದುಹೋಯಿತು. ಬೆಳಗಾದೊಡನೆ ಮಂಗಳಮಯ ಸಂಧ್ಯೋಪಾಸನೆಯನ್ನು ಮಾಡಿ ಅವನು ಉತ್ತರ ಕೋಸಲದ ದಕ್ಷಿಣದ ಎಲ್ಲೆಯನ್ನು ತಲುಪಿದನು.॥2॥

ಮೂಲಮ್ - 3

ಗ್ರಾಮಾನ್ ವಿಕೃಷ್ಟಸೀಮಾಂತಾನ್ ಪುಷ್ಪಿತಾನಿ ವನಾನಿ ಚ ।
ಪಶ್ಯನ್ನತಿಯಯೌ ಶೀಘ್ರಂ ಶನೈರಿವ ಹಯೋತ್ತಮೈಃ ॥

ಅನುವಾದ

ಆ ಸೀಮೆಯ ಸಮೀಪದ ಭೂಮಿ ಉತ್ತು ಬಿತ್ತಲಾಗಿತ್ತು. ಆ ಗ್ರಾಮಗಳನ್ನು, ಪುಷ್ಪಗಳಿಂದ ಸುಶೋಭಿತ ವನಗಳನ್ನು ನೋಡುತ್ತಾ ಅವರು ಉತ್ತಮ ಕುದುರೆಗಳ ಮೂಲಕ ಶೀಘ್ರವಾಗಿ ಹೋಗುತ್ತಿದ್ದರೂ ಸುಂದರ ದೃಶ್ಯಗಳನ್ನು ನೋಡುವುದರಲ್ಲಿ ತನ್ಮಯರಾದ್ದರಿಂದ ಅವರಿಗೆ ರಥವು ನಿಧಾನವಾಗಿ ನಡೆಯುತ್ತಿದೆ ಎಂದೆನಿಸುತ್ತಿತ್ತು.॥3॥

ಮೂಲಮ್ - 4

ಶೃಣ್ವನ್ ವಾಚೋ ಮನುಷ್ಯಾಣಾಂ ಗ್ರಾಮಸಂವಾಸವಾಸಿನಾಮ್ ।
ರಾಜಾನಂ ದಿಗ್ ದಶರಥಂ ಕಾಮಸ್ಯ ವಶಮಾಸ್ಥಿತಮ್ ॥

ಅನುವಾದ

ದಾರಿಯಲ್ಲಿ ಸಿಗುವ ಸಣ್ಣ-ದೊಡ್ಡ ಹಳ್ಳಿಗಳಲ್ಲಿ ವಾಸಿಸುವ ಜನರು ಆಡುತ್ತಿದ್ದ ಮಾತುಗಳು ಶ್ರೀರಾಮನ ಕಿವಿಗೆ ಬೀಳುತ್ತಿದ್ದವು. ಅವು ಹೀಗಿದ್ದವು - ಅಯ್ಯೋ! ಕಾಮಕ್ಕೆ ವಶನಾದ ದಶರಥನಿಗೆ ಧಿಕ್ಕಾರವಿರಲಿ.॥4॥

ಮೂಲಮ್ - 5

ಹಾ ನೃಶಂಸಾದ್ಯ ಕೈಕೇಯೀ ಪಾಪಾ ಪಾಪಾನುಬಂಧಿನೀ ।
ತೀಕ್ಷ್ಣಾ ಸಂಭಿನ್ನಮರ್ಯಾದಾ ತೀಕ್ಷ್ಣಕರ್ಮಣಿ ವರ್ತತೇ ॥

ಅನುವಾದ

ಅಯ್ಯೋ ಶಿವನೇ! ಪಾಪಾಸಕ್ತ, ಪಾಪಿಣಿ, ಕ್ರೂರಳಾದ, ಧರ್ಮದ ಮೇರೆ ಮೀರಿದ ಕೈಕೇಯಿಗೆಯಾದರೋ ದಯೆಯೇ ಸ್ಪರ್ಶಿಸಲಿಲ್ಲ. ಕ್ರೂರಳಾದ ಅವಳು ಈಗ ನಿಷ್ಠುರ ಕರ್ಮದಲ್ಲೇ ತೊಡಗಿರುವಳು.॥5॥

ಮೂಲಮ್ - 6

ಯಾ ಪುತ್ರಮೀದೃಶಂ ರಾಜ್ಞಃ ಪ್ರವಾಸಯತಿ ಧಾರ್ಮಿಕಮ್ ।
ವನವಾಸೇ ಮಹಾಪ್ರಾಜ್ಞಂ ಸಾನುಕ್ರೋಶಂ ಜಿತೇಂದ್ರಿಯಮ್ ॥

ಅನುವಾದ

ಆಕೆಯಿಂದಲೇ ಮಹಾ ರಾಜರು ಇಂತಹ ಧರ್ಮಾತ್ಮಾ, ಮಹಾಜ್ಞಾನೀ, ದಯಾಳು ಮತ್ತು ಜಿತೇಂದ್ರಿಯ ಪುತ್ರನನ್ನು ವನವಾಸಕ್ಕಾಗಿ ಮನೆಯಿಂದ ಹೊರ ಹಾಕಿರುವರು.॥6॥

ಮೂಲಮ್ - 7

ಕಥಂ ನಾಮ ಮಹಾಭಾಗಾ ಸೀತಾ ಜನಕನಂದಿನೀ ।
ಸದಾ ಸುಖೇಷ್ವಭಿರತಾ ದುಃಖಾನ್ಯನುಭವಿಷ್ಯತಿ ॥

ಅನುವಾದ

ಜನಕನಂದಿನೀ, ಮಹಾಭಾಗಾ ಸೀತೆಯು ಸದಾ ಸುಖದಲ್ಲೇ ಇರುತ್ತಿದ್ದವಳು. ಈಗ ವನವಾಸದ ದುಃಖವನ್ನು ಹೇಗೆ ಅನುಭವಿಸುವಳು.॥7॥

ಮೂಲಮ್ - 8

ಅಹೋ ದಶರಥೋ ರಾಜಾನಿಃಸ್ನೇಹಃ ಸ್ವಸುತಂ ಪ್ರತಿ ।
ಪ್ರಜಾನಾಮನಘಂ ರಾಮಂ ಪರಿತ್ಯಕ್ತುಮಿಹೇಚ್ಛತಿ ॥

ಅನುವಾದ

ಅಯ್ಯೋ! ದಶರಥರಾಜನು ತನ್ನ ಪುತ್ರನ ಕುರಿತು ಇಷ್ಟು ಸ್ನೇಹಹೀನನಾದನೇ? ಪ್ರಜೆಗಳ ಕುರಿತು ಯಾವುದೇ ಅಪರಾಧ ಮಾಡದೇ ಇರುವ ಶ್ರೀರಾಮಚಂದ್ರನನ್ನು ಪರಿತ್ಯಾಗ ಮಾಡಲು ಬಯಸುತ್ತಿರುವನಲ್ಲ.॥8॥

ಮೂಲಮ್ - 9

ಏತಾ ವಾಚೋ ಮನುಷ್ಯಾಣಾಂ ಗ್ರಾಮಸಂವಾಸವಾಸಿನಾಮ್ ।
ಶೃಣ್ವನ್ನತಿಯಯೌ ವೀರಃ ಕೋಸಲಾನ್ ಕೋಸಲೇಶ್ವರಃ ॥

ಅನುವಾದ

ಸಣ್ಣ-ದೊಡ್ಡ ಗ್ರಾಮಗಳಲ್ಲಿರುವ ಜನರ ಇಂತಹ ಮಾತುಗಳನ್ನು ಕೇಳುತ್ತಾ ವೀರ ಕೋಸಲಪತಿ ಶ್ರೀರಾಮನು ಕೋಸಲದೇಶದ ಸೀಮೆಯನ್ನು ದಾಟಿ ಮುಂದರಿದನು.॥9॥

ಮೂಲಮ್ - 10

ತತೋ ವೇದಶ್ರುತಿಂ ನಾಮ ಶಿವವಾರಿವಹಾಂ ನದೀಮ್ ।
ಉತ್ತೀರ್ಯಾಭಿಮುಖಃ ಪ್ರಾಯಾದಗಸ್ತ್ಯಾಧ್ಯುಷಿತಾಂ ದಿಶಮ್ ॥

ಅನುವಾದ

ಅನಂತರ ಶೀತಲ ಹಾಗೂ ಸುಖಮಯ ನೀರು ಹರಿಯುತ್ತಿರುವ ವೇದಶ್ರುತಿ ಎಂಬ ನದಿಯನ್ನು ದಾಟಿ ಶ್ರೀರಾಮನು ಅಗಸ್ತ್ಯರಿಂದ ಸೇವಿತನಾದ ದಕ್ಷಿಣ ದಿಕ್ಕಿನ ಕಡೆಗೆ ಹೊರಟನು.॥10॥

ಮೂಲಮ್ - 11

ಗತ್ವಾ ತು ಸುಚಿರಂ ಕಾಲಂ ತತಃ ಶೀತವಹಾಂ ನದೀಮ್ ।
ಗೋಮತೀಂ ಗೋಯುತಾನೂಪಾಮತರತ್ ಸಾಗರಂಗಮಾಮ್ ॥

ಅನುವಾದ

ಬಹಳ ದೂರ ನಡೆದು ಅವರು ಶೀತಲಜಲ ಹರಿಯುವ ಸಮುದ್ರಗಾಮಿನೀ ಗೋಮತಿನದಿಯನ್ನು ದಾಟಿದರು. ಅದರ ತೀರದಲ್ಲಿ ಅನೇಕ ಗೋವುಗಳು ಮೇಯುತ್ತಿದ್ದವು.॥11॥

ಮೂಲಮ್ - 12

ಗೋಮತಿಂ ಚಾಪ್ಯತಿಕ್ರಮ್ಯ ರಾಘವಃ ಶೀಘ್ರಗೈರ್ಹಯೈಃ ।
ಮಯೂರಹಂಸಾಭಿರುತಾಂ ತತಾರ ಸ್ಯಂದಿಕಾಂ ನದೀಮ್ ॥

ಅನುವಾದ

ಶೀಘ್ರಗಾಮಿ ಅಶ್ವಗಳಿಂದ ಗೊಮತಿನದಿಯನ್ನು ದಾಟಿ ಶ್ರೀರಘುನಾಥನು ನವಿಲು ಮತ್ತು ಹಂಸಗಳ ಕಲರವದಿಂದ ವ್ಯಾಪ್ತವಾದ ಸ್ಯಂದಿಕಾ ಎಂಬ ನದಿಯನ್ನು ದಾಟಿದನು.॥12॥

ಮೂಲಮ್ - 13

ಸ ಮಹೀಂ ಮನುನಾ ರಾಜ್ಞಾ ದತ್ತಾಮಿಕ್ಷ್ವಾಕವೇ ಪುರಾ ।
ಸ್ಫೀತಾಂ ರಾಷ್ಟ್ರವೃತಾಂ ರಾಮೋ ವೈದೇಹೀಮನ್ವದರ್ಶಯತ್ ॥

ಅನುವಾದ

ಹಿಂದೆ ಮನುಮಹಾರಾಜನು ಇಕ್ಷ್ವಾಕು ಕೊಟ್ಟಿದ್ದ ಧನ-ಧಾನ್ಯ ಸಂಪನ್ನ ಹಾಗೂ ಅನೇಕ ರಾಷ್ಟ್ರಗಳಿಂದ ಸಮಾವೃತವಾಗಿದ್ದ ಕೋಸಲರಾಜ್ಯವನ್ನು ಶ್ರೀರಾಮನು ಸೀತೆಗೆ ತೋರಿಸಿದನು.॥13॥

ಮೂಲಮ್ - 14

ಸೂತ ಇತ್ಯೇವ ಚಾಭಾಷ್ಯ ಸಾರಥಿಂ ತಮಭೀಕ್ಷ್ಣಶಃ ।
ಹಂಸಮತ್ತಸ್ವರಃ ಶ್ರೀಮಾನುವಾಚ ಪುರುಷೋತ್ತಮಃ ॥

ಅನುವಾದ

ಮದಿಸಿದ ಹಂಸದಂತೆ ಮಧುರವಾಗಿ ಶ್ರೀಮಾನ್ ರಾಮನು ಸಾರಥಿಯಾದ ಸುಮಂತ್ರನನ್ನು ‘ಸೂತ’ ಎಂದು ಪದೇ-ಪದೇ ಸಂಬೋಧಿಸಿ ಹೀಗೆ ಹೇಳಿದನು.॥14॥

ಮೂಲಮ್ - 15

ಕದಾಹಂ ಪುನರಾಗಮ್ಯ ಸರಯ್ವಾಃ ಪುಷ್ಪಿತೇ ವನೇ ।
ಮೃಗಯಾಂ ಪರ್ಯಟಿಷ್ಯಾಮಿ ಮಾತ್ರಾ ಪಿತ್ರಾ ಚ ಸಂಗತಃ ॥

ಅನುವಾದ

ಸೂತ! ನಾನು ಯಾವಾಗ ಪುನಃ ಮರಳಿ ತಂದೆ-ತಾಯಿಯರನ್ನು ಭೆಟ್ಟಿಯಾಗುವೆನೋ? ಸರಯೂ ತೀರದ ಪುಷ್ಪಿತ ವನಗಳಲ್ಲಿ ಬೇಟೆಗಾಗಿ ಎಂದು ಸಂಚರಿಸುವೆನೋ.॥15॥

ಮೂಲಮ್ - 16

ನಾತ್ಯರ್ಥಮಭಿಕಾಂಕ್ಷಾಮಿ ಮೃಗಯಾಂ ಸರಯೂವನೇ ।
ರತಿರ್ಹ್ಯೇಷಾತುಲಾ ಲೋಕೇ ರಾಜರ್ಷಿಗಣಸಮ್ಮತಾ ॥

ಅನುವಾದ

ನಾನು ಸರಯುವಿನ ವನಗಳಲ್ಲಿ ಬೇಟೆಯಾಡಲು ಹೆಚ್ಚು ಬಯಸುವುದಿಲ್ಲ. ಇದು ಜಗತ್ತಿನಲ್ಲಿ ರಾಜರ್ಷಿ ಸಮುದಾಯಕ್ಕೆ ಅಭಿಮತವಾದ ಒಂದು ಪ್ರಕಾರದ ಅನುಪಮ ಕ್ರೀಡೆಯಾಗಿದೆ.॥16॥

ಮೂಲಮ್ - 17

ರಾಜರ್ಷೀಣಾಂ ಹಿ ಲೋಕೇಽಸ್ಮಿನ್ ರತ್ಯರ್ಥಂ ಮೃಗಯಾ ವನೇ ।
ಕಾಲೇ ವೃತಾಂ ತಾಂ ಮನುಜೈರ್ಧನ್ವಿನಾಮಭಿಕಾಂಕ್ಷತಾಮ್ ॥

ಅನುವಾದ

ಈ ಲೋಕದಲ್ಲಿ ವನದಲ್ಲಿ ಬೇಟೆಯಾಡುವುದು ರಾಜರ್ಷಿಗಳಿಂದ ಪ್ರಚಲಿತವಾದ ಕ್ರೀಡೆಯಾಗಿತ್ತು. ಆದ್ದರಿಂದ ಮನುಪುತ್ರರಿಂದ ಆಗ ಮಾಡಿದ ಕ್ರೀಡೆಯನ್ನು ಇತರ ಧನುರ್ಧರರಿಗೂ ಅಭೀಷ್ಟವಾಯಿತು.॥17॥

ಮೂಲಮ್ - 18

ಸ ತಮಧ್ವಾನಮೈಕ್ಷ್ವಾಕಃ ಸೂತಂ ಮಧುರಯಾ ಗಿರಾ ।
ತಂ ತಮರ್ಥಮಭಿಪ್ರೇತ್ಯ ಯಯೌವಾಕ್ಯಮುದೀರಯನ್ ॥

ಅನುವಾದ

ಇಕ್ಷ್ವಾಕು ಕುಲನಂದನ ಶ್ರೀರಾಮನು ವಿಭಿನ್ನ ವಿಷಯಗಳ ಕುರಿತು ಸೂತನಲ್ಲಿ ಮಧುರವಾಣಿಯಿಂದ ಮೇಲಿನಂತೆ ಹೇಳುತ್ತಾ ದಾರಿ ಸಾಗುತ್ತಿದ್ದನು.॥18॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ನಲವತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು.॥49॥