वाचनम्
ಭಾಗಸೂಚನಾ
ನಗರವಾಸೀ ಸ್ತ್ರೀಯರ ವಿಲಾಪ
ಮೂಲಮ್ - 1
ತೇಷಾಮೇವಂ ವಿಷಣ್ಣಾನಾಂ ಪೀಡಿತಾನಾಮತೀವ ಚ ।
ಬಾಷ್ಪವಿಪ್ಲುತನೇತ್ರಾಣಾಂ ಸಶೋಕಾನಾಂ ಮುಮೂರ್ಷಯಾ ॥
ಮೂಲಮ್ - 2
ಅಭಿಗಮ್ಯ ನಿವೃತ್ತಾನಾಂ ರಾಮಂ ನಗರವಾಸಿನಾಮ್ ।
ಉದ್ಗತಾನೀವ ಸತ್ತ್ವಾನಿ ಬಭೂವುರಮನಸ್ವಿನಾಮ್ ॥
ಅನುವಾದ
ಈ ಪ್ರಕಾರ ವಿಷಾದಗ್ರಸ್ತ, ಅತ್ಯಂತ ಪೀಡಿತ, ಶೋಕಗ್ರಸ್ತ ಹಾಗೂ ಪ್ರಾಣತ್ಯಾಗಮಾಡುವ ಇಚ್ಛೆಯಿಂದ ಕೂಡಿದ್ದು, ಕಣ್ಣುಗಳಿಂದ ಕಣ್ಣೀರು ಹರಿಸುತ್ತಿರುವ ನಗರವಾಸಿಗಳು, ಶ್ರೀರಾಮಚಂದ್ರನ ಜೊತೆಗೆ ಹೋಗಿಯೂ ಅವನನ್ನು ಮರಳಿ ಕರೆದುಕೊಂಡು ಬರದೆ ಹಿಂದಿರುಗಿದ ಮತ್ತು ಚಿತ್ತಸ್ವಾಸ್ಥ್ಯವಿಲ್ಲದ ಆ ಪ್ರಜಾಜನರು ನಿಷ್ಪ್ರಾಣರಂತೆ ಆಗಿದ್ದರು.॥1-2॥
ಮೂಲಮ್ - 3
ಸ್ವಂ ಸ್ವಂ ನಿಲಯಮಾಗಮ್ಯಪುತ್ರದಾರೈಃ ಸಮಾವೃತಾಃ ।
ಅಶ್ರೂಣಿ ಮುಮುಚುಃ ಸರ್ವೇ ಬಾಷ್ಪೇಣ ಪಿಹಿತಾನನಾಃ ॥
ಅನುವಾದ
ಅವರೆಲ್ಲರೂ ತಮ್ಮ-ತಮ್ಮ ಮನೆಗಳಿಗೆ ಬಂದು ಪತ್ನೀ-ಪುತ್ರರಿಂದ ಸುತ್ತುವರೆದು ಕಣ್ಣೀರುಹರಿಸತೊಡಗಿದರು. ಅವರ ಮುಖಗಳು ಕಣ್ಣೀರಿ ನಿಂದ ತೊಯ್ದುಹೋಗಿತ್ತು.॥3॥
ಮೂಲಮ್ - 4
ನ ಚಾಹೃಷ್ಯನ್ನ ಚಾಮೋದನ್ ವಣಿಜೋ ನ ಪ್ರಸಾರಯನ್ ।
ನ ಚಾಶೋಭಂತ ಪಣ್ಯಾನಿ ನಾಪಚನ್ಗೃಹಮೇಧಿನಃ ॥
ಅನುವಾದ
ಅವರ ಶರೀರದಲ್ಲಿ ಯಾವುದೇ ಹರ್ಷದ ಚಿಹ್ನೆ ಕಾಣುತ್ತಿರಲಿಲ್ಲ. ಮನಸ್ಸಿನಲ್ಲೂ ಆನಂದ ಅಭಾವವಾಗಿತ್ತು. ವೈಶ್ಯರು ತಮ್ಮ ಅಂಗಡಿಗಳನ್ನು ತೆರೆಯಲಿಲ್ಲ. ಮಾರಾಟದ ವಸ್ತುಗಳು ಪೇಟೆಯಲ್ಲಿ ಹರಡಿ ಕೊಂಡಿದ್ದರೂ ಅವನ್ನು ಕೊಂಡುಕೊಳ್ಳುವ ಗ್ರಾಹಕರು ಯಾರೂ ಬಂದಿರಲಿಲ್ಲ. ಅಂದು ಗೃಹಸ್ಥರ ಮನೆಯಲ್ಲಿ ಒಲೆ ಉರಿಯಲಿಲ್ಲ. ಅಡಿಗೆ ಮಾಡಲಿಲ್ಲ.॥4॥
ಮೂಲಮ್ - 5
ನಷ್ಟಂ ದೃಷ್ಟ್ವಾ ನಾಭ್ಯನಂದನ್ವಿಪುಲಂ ವಾ ಧನಾಗಮಮ್ ।
ಪುತ್ರಂ ಪ್ರಥಮಜಂ ಲಬ್ಧ್ವಾ ಜನನೀ ನಾಪ್ಯನಂದತ ॥
ಅನುವಾದ
ಕಳೆದುಹೋದ ವಸ್ತು ಸಿಕ್ಕಿದರೂ ಯಾರಿಗೂ ಸಂತೋಷವಾಗಲಿಲ್ಲ. ವಿಪುಲ ಧನರಾಶಿ ದೊರೆತರೂ ಯಾರೂ ಅದನ್ನು ಅಭಿನಂದಿಸಲಿಲ್ಲ. ಚೊಚ್ಚಲ ಮಗು ಹುಟ್ಟಿದ್ದರೂ ಮಾತೆಯರು ಆನಂದಿತರಾಗಲಿಲ್ಲ.॥5॥
ಮೂಲಮ್ - 6
ಗೃಹೇ ಗೃಹೇ ರುದತ್ಯಶ್ಚ ಭರ್ತಾರಂ ಗೃಹಮಾಗತಮ್ ।
ವ್ಯಗರ್ಹಯಂತ ದುಃಖಾರ್ತಾ ವಾಗ್ಭಿಸ್ತೋತ್ರೈರಿವ ದ್ವಿಪಾನ್ ॥
ಅನುವಾದ
ಪ್ರತಿಯೊಂದು ಮನೆಯ ಸ್ತ್ರೀಯರು ತಮ್ಮ ಗಂಡಂದಿರು ಶ್ರೀರಾಮನ ಹೊರತು ಮರಳಿ ಬಂದಿರುವುದನ್ನು ನೋಡಿ, ಅತ್ತುಬಿಟ್ಟರು ಮತ್ತು ದುಃಖಾತುರರಾಗಿ ಮಾವುತನು ಆನೆಗಳನ್ನು ತಿವಿಯುತ್ತಿರುವಂತೆ ಕಠೋರ ಮಾತುಗಳಿಂದ ಅವರನ್ನು ನಿಂದಿಸತೊಡಗಿದರು.॥6॥
ಮೂಲಮ್ - 7
ಕಿಂ ನು ತೇಷಾಂ ಗೃಹೈಃ ಕಾರ್ಯಂ ಕಿಂ ದಾರೈಃ ಕಿಂ ಧನೇನ ವಾ ।
ಪುತ್ರೈರ್ವಾಪಿ ಸುಖೈರ್ವಾಪಿ ಯೇ ನ ಪಶ್ಯಂತಿ ರಾಘವಮ್ ॥
ಅನುವಾದ
ಅವರು ಹೇಳುತ್ತಾರೆ - ಶ್ರೀರಾಮನನ್ನು ನೋಡದೆ ಜನರಿಗೆ ಮನೆ-ಮಠ, ಹೆಂಡತಿ-ಮಕ್ಕಳು, ಧನ-ಐಶ್ವರ್ಯ ಮತ್ತು ಸುಖ-ಭೋಗಗಳಿಂದ ಏನು ಪ್ರಯೋಜನ.॥7॥
ಮೂಲಮ್ - 8
ಏಕಃ ಸತ್ಪುರುಷೋ ಲೋಕೇ ಲಕ್ಷ್ಮಣಃ ಸಹ ಸೀತಯಾ ।
ಯೋನುಽಗಚ್ಛತಿ ಕಾಕುತ್ಸ್ಥಂ ರಾಮಂ ಪರಿಚರನ್ ವನೇ ॥
ಅನುವಾದ
ಜಗತ್ತಿನಲ್ಲಿ ಲಕ್ಷ್ಮಣನೊಬ್ಬನೇ ಸತ್ಪುರುಷನಾಗಿದ್ದಾನೆ, ಅವನು ಸೀತಾಸಹಿತ ಶ್ರೀರಾಮನ ಸೇವೆ ಮಾಡಲು ಅವನ ಹಿಂದೆ-ಹಿಂದೆಯೇ ಕಾಡಿಗೆ ಹೋದನು.॥8॥
ಮೂಲಮ್ - 9
ಆಪಗಾಃ ಕೃತಪುಣ್ಯಾಸ್ತಾಃ ಪದ್ಮಿನ್ಯಶ್ಚ ಸರಾಂಸಿ ಚ ।
ಯೇಷು ಯಾಸ್ಯತಿ ಕಾಕುತ್ಸ್ಥೋ ವಿಗಾಹ್ಯ ಸಲಿಲಂ ಶುಚಿ ॥
ಅನುವಾದ
ಯಾವ ಪವಿತ್ರ ಜಲದಲ್ಲಿ ಸ್ನಾನಮಾಡಿ ಶ್ರೀರಾಮಚಂದ್ರನು ಮುಂದಕ್ಕೆ ಹೋಗುವನೋ, ಆ ನದಿಗಳು, ಕಮಲಪುಷ್ಪಗಳಿಂದ ಕೂಡಿದ ಸರೋವರಗಳು, ಬಾವಿಗಳು ಇವೇ ಪುಣ್ಯಮಾಡಿದ್ದಿರಬಹುದು.॥9॥
ಮೂಲಮ್ - 10
ಶೋಭಯಿಷ್ಯಂತಿ ಕಾಕುತ್ಸ್ಥಮಟವ್ಯೋ ರಮ್ಯಕಾನನಾಃ ।
ಆಪಗಾಶ್ಚ ಮಹಾನೂಪಾಃ ಸಾನುಮಂತಶ್ಚ ಪರ್ವತಾಃ ॥
ಅನುವಾದ
ರಮ್ಯವಾದ ವೃಕ್ಷಗಳಿಂದ ಶೋಭಿಸುತ್ತಿರುವ ವನರಾಜಿ, ತಗ್ಗಾದ ದಡಗಳುಳ್ಳ ನದಿಗಳು, ಶಿಖರಗಳಿಂದ ಕೂಡಿದ ಪರ್ವತಗಳು ಶ್ರೀರಾಮನ ಶೋಭೆ ಹೆಚ್ಚಿಸುತ್ತಾ ಇವೆ.॥10॥
ಮೂಲಮ್ - 11
ಕಾನನಂ ವಾಪಿ ಶೈಲಂ ವಾ ಯಂ ರಾಮೋಽನುಗಮಿಷ್ಯತಿ ।
ಪ್ರಿಯಾತಿಥಿಮಿವ ಪ್ರಾಪ್ತಂ ನೈನಂ ಶಕ್ಷ್ಯಂತ್ಯನರ್ಚಿತುಮ್ ॥
ಅನುವಾದ
ಶ್ರೀರಾಮನು ಹೋಗುವ ವನ ಅಥವಾ ಪರ್ವತಗಳು ಅವನನ್ನು ತಮ್ಮ ಪ್ರಿಯ ಅತಿಥಿಯೆಂದು ತಿಳಿದು ಪೂಜಿಸದೆ ಇರಲಾರವು.॥11॥
ಮೂಲಮ್ - 12
ವಿಚಿತ್ರಕುಸುಮಾಪೀಡಾ ಬಹುಮಂಜರಿಧಾರಿಣಃ ।
ರಾಘವಂ ದರ್ಶಯಿಷ್ಯಂತಿ ನಗಾ ಭ್ರಮರಶಾಲಿನಃ ॥
ಅನುವಾದ
ಚಿತ್ರವಿಚತ್ರ ಪುಷ್ಪಗಳ ಕಿರೀಟವನ್ನು ಹೊತ್ತು, ಅನೇಕ ಮಂಜರಿಗಳನ್ನು ಧರಿಸಿದ, ಭ್ರಮರಗಳಿಂದ ಸುಶೋಭಿತ ವೃಕ್ಷಗಳು ವನದಲ್ಲಿ ಶ್ರೀರಾಮನಿಗೆ ತಮ್ಮ ಶೋಭೆಯನ್ನು ಪ್ರದರ್ಶಿಸುವವು.॥12॥
ಮೂಲಮ್ - 13
ಅಕಾಲೇ ಚಾಪಿ ಮುಖ್ಯಾನಿಪುಷ್ಪಾಣಿ ಚ ಫಲಾನಿ ಚ ।
ದರ್ಶಯಿಷ್ಯಂತ್ಯನುಕ್ರೋಶಾದ್ ಗಿರಯೋ ರಾಮಮಾಗತಮ್ ॥
ಅನುವಾದ
ಅಲ್ಲಿಯ ಪರ್ವತಗಳು ತಮ್ಮಲ್ಲಿಗೆ ಆಗಮಿಸಿದ ಶ್ರೀರಾಮನಿಗೆ ಅತ್ಯಂತ ಆದರದಿಂದ ಅಸಮಯದಲ್ಲಿಯೂ ಉತ್ತಮೋತ್ತಮ ಫಲ-ಪುಷ್ಪಗಳನ್ನು ಕಾಣಿಕೆಯಾಗಿ ನೀಡುವವು.॥13॥
ಮೂಲಮ್ - 14
ಪ್ರಸ್ರವಿಷ್ಯಂತಿ ತೋಯಾನಿ ವಿಮಲಾನಿ ಮಹೀಧರಾಃ ।
ವಿದರ್ಶಯಂತೋ ವಿವಿಧಾನ್ ಭೂಯಶ್ಚಿತ್ರಾಂಶ್ಚ ನಿರ್ಝರಾನ್ ॥
ಅನುವಾದ
ಆ ಪರ್ವತಗಳು ಹೆಜ್ಜೆ ಹೆಜ್ಜೆಗೆ ನಾನಾ ಪ್ರಕಾರದ ಜಲಪಾತಗಳನ್ನು ತೋರುತ್ತಾ ಶ್ರೀರಾಮನಿಗಾಗಿ ನಿರ್ಮಲ ಜಲದ ಪ್ರವಾಹಗಳನ್ನು ಹರಿಸುವವು.॥14॥
ಮೂಲಮ್ - 15
ಪಾದಪಾಃ ಪರ್ವತಾಗ್ರೇಷು ರಮಯಿಷ್ಯಂತಿ ರಾಘವಮ್ ।
ಯತ್ರ ರಾಮೋ ಭಯಂ ನಾತ್ರ ನಾಸ್ತಿ ತತ್ರ ಪರಾಭವಃ ॥
ಮೂಲಮ್ - 16
ಸ ಹಿ ಶೂರೋ ಮಹಾಬಾಹುಃ ಪುತ್ರೋ ದಶರಥಸ್ಯ ಚ ।
ಪುರಾ ಭವತಿ ನೋಽದೂರಾದನುಗಚ್ಛಾಮ ರಾಘವಮ್ ॥
ಅನುವಾದ
ಪರ್ವತ ಶಿಖರಗಳಲ್ಲಿರುವ ವೃಕ್ಷಗಳು ಶ್ರೀರಾಮನಿಗೆ ಕೈಬೀಸಿ ಮನೋರಂಜನೆ ಮಾಡುವವು. ರಾಮನಿರುವಲ್ಲಿ ಯಾವುದೇ ಭಯವಿಲ್ಲ, ಯಾರಿಂದಲೂ ಪರಾಭವವಿಲ್ಲ, ಏಕೆಂದರೆ ದಶರಥನಂದನ ಮಹಾಬಾಹು ಶ್ರೀರಾಮನು ಬಹಳ ಶೂರನಾಗಿದ್ದಾನೆ. ಆದ್ದರಿಂದ ಅವನು ನಮ್ಮಿಂದ ಬಹಳ ದೂರ ಹೋಗುವುದರೊಳಗೆ ನಾವು ಅವನ ಬಳಿಗೆ ಸಾರಿ ಹಿಂದೆ ಬೀಳಬೇಕು.॥15-16॥
ಮೂಲಮ್ - 17
ಪಾದಚ್ಛಾಯಾ ಸುಖಂಭರ್ತುಸ್ತಾದೃಶಸ್ಯ ಮಹಾತ್ಮನಃ ।
ಸ ಹಿ ನಾಥೋ ಜನಸ್ಯಾಸ್ಯ ಸ ಗತಿಃ ಸ ಪರಾಯಣಮ್ ॥
ಅನುವಾದ
ಅವನಂತಹ ಮಹಾತ್ಮಾ ಸ್ವಾಮಿಯ ಚರಣಛಾಯೆಯೇ ನಮಗೆ ಪರಮ ಸುಖಪ್ರದವಾಗಿದೆ. ಅವನೇ ನಮಗೆ ರಕ್ಷಕ, ಗತಿ ಮತ್ತು ಪರಮಾಶ್ರಯನಾಗಿರುವನು.॥17॥
ಮೂಲಮ್ - 18
ವಯಂ ಪರಿಚರಿಷ್ಯಾಮಃ ಸೀತಾಂ ಯೂಯಂ ಚ ರಾಘವಮ್ ।
ಇತಿ ಪೌರಸ್ತ್ರಿಯೋ ಭರ್ತೃನ್ ದುಃಖಾರ್ತಾಸ್ತತ್ತದಬ್ರುವನ್ ॥
ಅನುವಾದ
ಸ್ತ್ರೀಯರಾದ ನಾವು ಸೀತೆಯ ಸೇವೆ ಮಾಡುವೆವು, ನೀವೆಲ್ಲರೂ ಶ್ರೀರಘುನಾಥನ ಸೇವೆಯಲ್ಲಿ ತೊಡಗಿರಿ. ಈ ಪ್ರಕಾರ ಪುರವಾಸಿಗಳ ಪತ್ನಿಯರು ದುಃಖಾತುರರಾಗಿ ತಮ್ಮ ಪತಿಯರಲ್ಲಿ ಹೀಗೆ ಹೇಳಿದರು.॥18॥
ಮೂಲಮ್ - 19
ಯುಷ್ಮಾಕಂ ರಾಘವೋಽರಣ್ಯೇ ಯೋಗಕ್ಷೇಮಂ ವಿಧಾಸ್ಯತಿ ।
ಸೀತಾ ನಾರೀಜನಸ್ಯಾಸ್ಯ ಯೋಗಕ್ಷೇಮಂ ಕರಿಷ್ಯತಿ ॥
ಅನುವಾದ
ಪುನಃ ಅವರು ಹೇಳಿದರು - ವನದಲ್ಲಿ ಶ್ರೀರಾಮಚಂದ್ರನೇ ನಿಮ್ಮ ಯೋಗಕ್ಷೇಮ ನೋಡಿಕೊಳ್ಳುವವನು ಮತ್ತು ಸೀತಾ ದೇವಿಯು ನಾರಿಯರಾದ ನಮ್ಮನ್ನು ರಕ್ಷಿಸುವಳು.॥19॥
ಮೂಲಮ್ - 20
ಕೋ ನ್ವನೇನಾಪ್ರತೀತೇನ ಸೋತ್ಕಂಠಿತಜನೇನ ಚ ।
ಸಂಪ್ರೀಯೇತಾಮನೋಜ್ಞೇನ ವಾಸೇನ ಹೃತಚೇತಸಾ ॥
ಅನುವಾದ
ಇಲ್ಲಿಯ ವಾಸವು ಪ್ರೀತಿ ಆದರರಹಿತವಾಗಿದೆ. ಇಲ್ಲಿಯ ಎಲ್ಲ ಜನರು ಶ್ರೀರಾಮನಿಗಾಗಿ ಉತ್ಕಂಠಿತರಾಗಿ ಇರುವರು. ಯಾರಿಗೂ ಇಲ್ಲಿ ಇರಲು ಮೆಚ್ಚುವುದಿಲ್ಲ, ಇಲ್ಲಿ ಇರುವುದರಿಂದ ಮನಸ್ಸು ತನ್ನ ಸ್ತಿಮಿತವನ್ನು ಕಳೆದುಕೊಳ್ಳುತ್ತದೆ. ಇಂತಹ ನಿವಾಸದಲ್ಲಿ ಯಾರಿಗೆ ತಾನೇ ಪ್ರಸನ್ನತೆ ಉಂಟಾದೀತು.॥20॥
ಮೂಲಮ್ - 21
ಕೈಕೇಯ್ಯಾ ಯದಿ ಚೇದ್ ರಾಜ್ಯಂ ಸ್ಯಾದಧರ್ಮ್ಯಮನಾಥವತ್ ।
ನ ಹಿ ನೋ ಜೀವಿತೇನಾರ್ಥಃ ಕುತಃ ಪುತ್ರೈಃ ಕುತೋ ಧನೈಃ ॥
ಅನುವಾದ
ಈ ರಾಜ್ಯದಲ್ಲಿ ಕೈಕೇಯಿಯ ಅಧಿಕಾರ ನಡೆದರೆ ಇದು ನಾಥರಿಲ್ಲದ ರಾಜ್ಯದಂತೆ ಆದೀತು. ಇದರಲ್ಲಿ ಧರ್ಮಕ್ಕೆ ಬೆಲೆಯೇ ಇರಲಾರದು. ಇಂತಹ ರಾಜ್ಯದಲ್ಲಿ ಬದುಕಿರಲೂ ಕೂಡ ನಮಗೆ ಆವಶ್ಯಕತೆ ಕಂಡುಬರುವುದಿಲ್ಲ, ಮತ್ತೆ ಧನ, ಪುತ್ರರಿಂದ ಏನಾಗಬೇಕಿದೆ.॥21॥
ಮೂಲಮ್ - 22
ಯಯಾ ಪುತ್ರಶ್ಚ ಭರ್ತಾ ಚ ತ್ಯಕ್ತಾವೈಶ್ವರ್ಯಕಾರಣಾತ್ ।
ಕಂ ಸಾ ಪರಿಹರೇದನ್ಯಂ ಕೈಕೇಯೀ ಕುಲಪಾಂಸನೀ ॥
ಮೂಲಮ್ - 23
ಕೈಕೇಯ್ಯಾ ನ ವಯಂ ರಾಜ್ಯೇ ಭೃತಕಾ ನಿ ವಸೇಮಹಿ ।
ಜೀವಂತ್ತ್ಯಾ ಜಾತು ಜೀವಂತ್ಯಃ ಪುತ್ರೈರಪಿ ಶಪಾಮಹೇ ॥
ಅನುವಾದ
ರಾಜ್ಯ ವೈಭವಕ್ಕಾಗಿ ತನ್ನ ಪುತ್ರ ಮತ್ತು ಪತಿಯನ್ನು ಧಿಕ್ಕರಿಸಿದ ಕೈಕೇಯಿಯು ಜೀವಿಸಿ ಇರುವವರೆಗೆ ನಾವು ಆಕೆಯ ರಾಜ್ಯದಲ್ಲಿ ಬದುಕಿರಲಾರೆವು ಎಂದು ನಾವು ನಮ್ಮ ಮಕ್ಕಳ ಮೇಲೆ ಆಣೆಯಿಟ್ಟು ಹೇಳುತ್ತೇವೆ. ಇಲ್ಲಿ ನಮ್ಮ ಪಾಲನೆ - ಪೋಷಣೆ ಆಗುತ್ತಿದ್ದರೂ ನಾವು ಇಲ್ಲಿ ಇರಲು ಬಯಸಲಾರೆವು.॥22-23॥
ಮೂಲಮ್ - 24
ಯಾ ಪುತ್ರಂ ಪಾರ್ಥಿವೇಂದ್ರಸ್ಯ ಪ್ರವಾಸಯತಿ ನಿರ್ಘೃಣಾ ।
ಕಸ್ತಾಂ ಪ್ರಾಪ್ಯಂ ಸುಖಂ ಜೀವೇದಧರ್ಮ್ಯಾಂ ದುಷ್ಟಚಾರಿಣೀಮ್ ॥
ಅನುವಾದ
ನಿರ್ದಯ ಸ್ವಭಾವವುಳ್ಳ ರಾಣಿಯು ಮಹಾರಾಜರ ಪುತ್ರನನ್ನು ರಾಜ್ಯದಿಂದ ಹೊರಗೆ ಓಡಿಸಿದಳೋ ಆ ಅಧರ್ಮ ಪರಾಯಣಾ ದುರಾಚಾರಿಣೀ ಕೈಕೇಯಿಯ ಅಧಿಕಾರದಲ್ಲಿ ಯಾರು ತಾನೇ ಸುಖವಾಗಿ ಬದುಕು ಸಾಗಿಸಬಲ್ಲರು.॥24॥
ಮೂಲಮ್ - 25
ಉಪದ್ರುತಮಿದಂ ಸರ್ವಮನಾಲಂಬಮನಾಯಕಮ್ ।
ಕೈಕೇಯ್ಯಾಸ್ತು ಕೃತೇ ಸರ್ವಂ ವಿನಾಶಮುಪಯಾಸ್ಯತಿ ॥
ಅನುವಾದ
ಕೈಕೆಯಿಯಿಂದಾಗಿ ಈ ಇಡೀ ರಾಜ್ಯ ಅನಾಥ ಮತ್ತು ಯಜ್ಞರಹಿತವಾಗಿ ಉಪದ್ರವಗಳ ಕೇಂದ್ರವಾಗಿದೆ. ಆದ್ದರಿಂದ ಒಂದಲ್ಲ ಒಂದು ದಿನ ಎಲ್ಲರ ವಿನಾಶವಾಗಿ ಹೋದೀತು.॥25॥
ಮೂಲಮ್ - 26
ನಹಿ ಪ್ರವ್ರಜಿತೇ ರಾಮೇ ಜೀವಿಷ್ಯತಿ ಮಹೀಪತಿಃ ।
ಮೃತೇ ದಶರಥೇ ವ್ಯಕ್ತಂ ವಿಲೋಪಸ್ತದನಂತರಮ್ ॥
ಅನುವಾದ
ಶ್ರೀರಾಮಚಂದ್ರನು ವನವಾಸಿಯಾದಾಗ ಮಹಾರಾಜ ದಶರಥನು ಜೀವಿಸಿ ಇರಲಾರನು. ಜೊತೆಗೆ ದಶರಥನ ಮೃತ್ಯುವಿನ ಬಳಿಕ ಈ ರಾಜ್ಯದ ಲೋಪವಾಗುವುದು ಸ್ಪಷ್ಟವೇ ಆಗಿದೆ.॥26॥
ಮೂಲಮ್ - 27
ತೇ ವಿಷಂ ಪಿಬತಾಲೋಡ್ಯ ಕ್ಷೀಣಪುಣ್ಯಾಃ ಸುದುಃಖಿತಾಃ ।
ರಾಘವಂ ವಾನುಗಚ್ಛಧ್ವಮಶ್ರುತಿಂ ವಾಪಿ ಗಚ್ಛತ ॥
ಅನುವಾದ
ಈಗ ನಮ್ಮ ಪುಣ್ಯವು ಮುಗಿದುಹೋಯಿತೆಂದೇ ನೀವು ತಿಳಿಯಿರಿ. ಇಲ್ಲಿ ಇದ್ದು ನಾವು ಅತ್ಯಂತ ದುಃಖವನ್ನೇ ಅನುಭವಿಸಬೇಕಾಗುವುದು. ಇಂತಹ ಸ್ಥಿತಿಯಲ್ಲಿ ಒಂದೋ ವಿಷ ಕುಡಿದುಬಿಡಿರಿ, ಇಲ್ಲವೇ ಶ್ರೀರಾಮನನ್ನು ಅನುಸರಿಸಿರಿ, ಅಥವಾ ಕೈಕೇಯಿಯ ಹೆಸರೇ ಕೇಳದಿರುವ ದೇಶಕ್ಕೆ ಹೊರಟುಹೋಗಿರಿ.॥27॥
ಮೂಲಮ್ - 28
ಮಿಥ್ಯಾಪ್ರವ್ರಾಜಿತೋ ರಾಮಃ ಸಭಾರ್ಯಃ ಸಹಲಕ್ಷ್ಮಣಃ ।
ಭರತೇ ಸನ್ನಿಬದ್ಧಾಃ ಸ್ಮಃ ಸೌನಿಕೇ ಪಶವೋ ಯಥಾ ॥
ಅನುವಾದ
ಸುಳ್ಳು ವರದ ಕಲ್ಪನೆ ಮಾಡಿ ಪತ್ನೀ ಮತ್ತು ಲಕ್ಷ್ಮಣರೊಂದಿಗೆ ಶ್ರೀರಾಮನನ್ನು ದೇಶದಿಂದ ಹೊರಹಾಕಿ, ನಮ್ಮನ್ನು ಭರತನೊಂದಿಗೆ ಕಟ್ಟಿಹಾಕಲಾಯಿತು. ಈಗ ಕಟುಕನ ಮನೆಯಲ್ಲಿ ಕಟ್ಟಿಹಾಕಿದ ಪಶುಗಳಂತೆ ನಮ್ಮ ಸ್ಥಿತಿ ಆಗಿದೆ.॥28॥
ಮೂಲಮ್ - 29
ಪೂರ್ಣಚಂದ್ರಾನನಃ ಶ್ಯಾಮೋ ಗೂಢಜತ್ರುರರಿಂದಮಃ ।
ಆಜಾನುಬಾಹುಃ ಪದ್ಮಾಕ್ಷೋ ರಾಮೋ ಲಕ್ಷ್ಮಣಪೂರ್ವಜಃ ॥
ಮೂಲಮ್ - 30
ಪೂರ್ವಾಭಿಭಾಷೀ ಮಧುರಃ ಸತ್ಯವಾದೀ ಮಹಾಬಲಃ ।
ಸೌಮ್ಯಶ್ಚ ಸರ್ವಲೋಕಸ್ಯ ಚಂದ್ರವತ್ ಪ್ರಿಯದರ್ಶನಃ ॥
ಅನುವಾದ
ಲಕ್ಷ್ಮಣನ ಅಣ್ಣ ಶ್ರೀರಾಮನ ಮುಖವು ಪೂರ್ಣಚಂದ್ರನಂತೆ ಮನೋಹರವಾಗಿದೆ. ಅವನ ಕಾಂತಿ ಶ್ಯಾಮಲವಾಗಿದ್ದು, ಪುಷ್ಟವಾಗಿರುವ ಹೆಗಲು ಉಳ್ಳವನೂ, ಆಜಾನುಬಾಹುವೂ, ನೇತ್ರಗಳು ಕಮಲದಂತೆ ಸುಂದರವಾಗಿವೆ. ಯಾರನ್ನಾದರೂ ಅವರಿಗಿಂತ ಮೊದಲೇ ಮಾತನಾಡಿಸುವವನು, ಮಧುರ ಮತ್ತು ಸತ್ಯವಾಗಿ ನುಡಿಯುವವನಾಗಿದ್ದಾನೆ. ಶ್ರೀರಾಮನು ಶತ್ರುಗಳನ್ನು ದಮನ ಮಾಡುವ ಮಹಾಬಲವಂತನಾಗಿದ್ದಾನೆ. ಸಮಸ್ತ ಜಗತ್ತಿಗೆ ಸೌಮ್ಯ(ಕೋಮಲ)ಸ್ವಭಾವದವನಾಗಿದ್ದು, ಅವನ ದರ್ಶನ ಚಂದ್ರನಂತೆ ಆಹ್ಲಾದಕರವಾಗಿದೆ.॥29-30॥
ಮೂಲಮ್ - 31
ನೂನಂ ಪುರುಷಶರ್ದೂಲೋ ಮತ್ತಮಾತಂಗವಿಕ್ರಮಃ ।
ಶೋಭಯಿಷ್ಯತ್ಯರಣ್ಯಾನಿ ವಿಚರನ್ ಸ ಮಹಾರಥಃ ॥
ಅನುವಾದ
ನಿಶ್ಚಯವಾಗಿಯೇ ಮತ್ತಗಜದಂತೆ ಪರಾಕ್ರಮಿ ಪುರುಷಸಿಂಹ ಮಹಾರಥೀ ಶ್ರೀರಾಮನು ಭೂತಳದಲ್ಲಿ ಸಂಚರಿಸುತ್ತಾ ವನದ ಶೋಭೆಯನ್ನು ಹೆಚ್ಚಿಸುವನು.॥31॥
ಮೂಲಮ್ - 32
ತಾಸ್ತಥಾ ವಿಲಪಂತ್ಯಸ್ತು ನಗರೇ ನಾಗರ ಸ್ತ್ರಿಯಃ ।
ಚುಕ್ರುಶುರ್ದುಃಖಸಂತಪ್ತಾ ಮೃತ್ಯೋರಿವ ಭಯಾಗಮೇ ॥
ಅನುವಾದ
ನಗರವಾಸಿಗಳ ಪತ್ನಿಯರು ಈ ಪ್ರಕಾರ ವಿಲಾಪ ಮಾಡುತ್ತಾ ದುಃಖದಿಂದ ಸಂತಪ್ತರಾಗಿ ಮೃತ್ಯುವಿನ ಭಯವೇ ಇದಿರಾಗಿದೆಯೋ ಎಂಬಂತೆ ಜೋರಾಗಿ ಅಳತೊಡಗಿದರು.॥32॥
ಮೂಲಮ್ - 33
ಇತ್ಯೇವಂ ವಿಲಪಂತೀನಾಂ ಸ್ತ್ರೀಣಾಂ ವೇಶ್ಮಸು ರಾಘವಮ್ ।
ಜಗಾಮಾಸ್ತಂ ದಿನಕರೋ ರಜನೀ ಚಾಭ್ಯವರ್ತತ ॥
ಅನುವಾದ
ತಮ್ಮ-ತಮ್ಮ ಮನೆಗಳಲ್ಲಿ ಶ್ರೀರಾಮನಿಗಾಗಿ ನಾರಿಯರು ಈ ಪ್ರಕಾರ ದಿನವಿಡೀ ವಿಲಪಿಸುತ್ತಾ ಇದ್ದರು. ನಿಧಾನವಾಗಿ ಸೂರ್ಯನು ಅಸ್ತಾಚಲವನ್ನು ಸೇರಿದನು ಹಾಗೂ ರಾತ್ರಿ ಯಾಯಿತು.॥33॥
ಮೂಲಮ್ - 34
ನಷ್ಟಜ್ವಲನಸಂತಾಪಾ ಪ್ರಶಾಂತಾಧ್ಯಾಯಸತ್ಕಥಾ ।
ತಿಮಿರೇಣಾನುಲಿಪ್ತೇವ ತದಾ ಸಾ ನಗರೀ ಬಭೌ ॥
ಅನುವಾದ
ಆ ಸಮಯದಲ್ಲಿ ಯಾರ ಮನೆಯಲ್ಲಿ ಅಗ್ನಿಹೋತ್ರಕ್ಕಾಗಿಯೂ ಅಗ್ನಿ ಪ್ರಜ್ವಲಿಸಲಿಲ್ಲ. ಸ್ವಾಧ್ಯಾಯ ಪುರಾಣಪ್ರವಚನ ನಡೆಯಲಿಲ್ಲ. ಇಡೀ ಅಯೋಧ್ಯೆಯು ಅಂಧಕಾರದಲ್ಲಿ ಮಿಂದಂತೆ ಕಂಡುಬರುತ್ತಿತ್ತು.॥34॥
ಮೂಲಮ್ - 35
ಉಪಶಾಂತವಣಿಕ್ಪಣ್ಯಾ ನಷ್ಟಹರ್ಷಾ ನಿರಾಶ್ರಯಾ ।
ಅಯೋಧ್ಯಾ ನಗರೀ ಚಾಸೀನ್ನಷ್ಟ ತಾರಮಿವಾಂಬರಮ್ ॥
ಅನುವಾದ
ವರ್ತಕರ ಅಂಗಡಿಗಳು ಮುಚ್ಚಿದ್ದರಿಂದ ಪೇಟೆಯಲ್ಲಿ ಯಾವುದೇ ಚಟುವಟಿಕೆಗಳು ಇರಲಿಲ್ಲ. ಇಡೀ ನಗರದ ನಗು-ಸಂತೋಷ ಅಡಗಿಹೋಗಿತ್ತು. ಶ್ರೀರಾಮನಿಂದ ಆಶ್ರಯರಹಿತವಾದ ಅಯೋಧ್ಯೆಯು ತಾರೆಗಳು ಅಡಗಿದ ಆಕಾಶದಂತೆ ನಿಸ್ತೇಜವಾಗಿತ್ತು.॥35॥
ಮೂಲಮ್ - 36
ತಥಾ ಸ್ತ್ರಿಯೋ ರಾಮನಿಮಿತ್ತಮಾತುರಾ
ಯಥಾ ಸುತೇ ಭ್ರಾತರಿ ವಾ ವಿವಾಸಿತೇ ।
ವಿಲಪ್ಯ ದೀನಾ ರುರುದುರ್ವಿಚೇತಸಃ
ಸುತೈರ್ಹಿತಾಸಾಮಧಿಕೋಽಪಿ ಸೋಽಭವತ್ ॥
ಅನುವಾದ
ಆಗ ಶ್ರೀರಾಮನಿಗಾಗಿ ನಗರವಾಸೀ ಸ್ತ್ರೀಯರ ಸ್ಥಿತಿ ಮಕ್ಕಳನ್ನು, ಸಹೋದರರನ್ನು ಗಡಿಪಾರು ಮಾಡಿದಂತೆ ಶೋಕಾತುರ ವಾಗಿತ್ತು. ಅವರು ಅತ್ಯಂತ ದೀನಭಾವದಿಂದ ವಿಲಾಪಮಾಡುತ್ತಾ ಅಳತೊಡಗಿದರು ಮತ್ತು ಅಳುತ್ತಾ-ಅಳುತ್ತಾ ನಿಶ್ಚೇಷ್ಟಿತರಂತಾದರು. ಏಕೆಂದರೆ ಶ್ರೀರಾಮನು ಅವರಿಗೆ ಪುತ್ರ-ಸಹೋದರರಿಗಿಂತಲೂ ಮಿಗಿಲಾಗಿದ್ದನು.॥36॥
ಮೂಲಮ್ - 37
ಪ್ರಶಾಂತಗೀತೋತ್ಸವನೃತ್ಯವಾದನಾ
ವಿಭ್ರಷ್ಟಹರ್ಷಾ ಪಿಹಿತಾಪಣೋದಯಾ ।
ತದಾ ಹ್ಯಯೋಧ್ಯಾ ನಗರೀ ಬಭೂವ ಸಾ
ಮಹಾರ್ಣವಃ ಸಂಕ್ಷಪಿತೋದಕೋ ಯಥಾ ॥
ಅನುವಾದ
ಅಲ್ಲಿ ಸಂಗೀತ, ನೃತ್ಯ, ವಾದ್ಯಗೋಷ್ಠಿ ಮುಂತಾದ ಉತ್ಸವಗಳು ನಿಂತುಹೋದುವು. ಎಲ್ಲರ ಉತ್ಸಾಹ ಉಡುಗಿ ಹೋಗಿತ್ತು. ಪೇಟೆಯ ಅಂಗಡಿಗಳು ತೆರೆಯಲಿಲ್ಲ. ಇದೆಲ್ಲ ಕಾರಣದಿಂದ ಆಗ ಅಯೋಧ್ಯೆಯು ನೀರಿಲ್ಲದ ಸಮುದ್ರದಂತೆ ಅನಿಸುತಿತ್ತು.॥37॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ನಲವತ್ತೆಂಟನೆಯ ಸರ್ಗ ಪೂರ್ಣವಾಯಿತು.॥48॥