वाचनम्
ಭಾಗಸೂಚನಾ
ಬೆಳಗಾದೊಡನೆ ಪಟ್ಟಣಿಗರು ಎಚ್ಚರಗೊಂಡಾಗ ಶ್ರೀರಾಮನಿಲ್ಲದಿರುವುದನ್ನು ನೋಡಿ ವಿಲಾಪಿಸಿದುದು, ಕೊನೆಗೆ ನಿರಾಶನಾಗಿ ನಗರಕ್ಕೆ ಮರಳಿದುದು
ಮೂಲಮ್ - 1
ಪ್ರಭಾತಾಯಾಂ ತು ಶರ್ವಯಾಂ ಪೌರಾಸ್ತೇ ರಾಘವಂ ವಿನಾ ।
ಶೋಕೋಪಹತನಿಶ್ಚೇಷ್ಟಾ ಬಭೂವುರ್ಹತಚೇತಸಃ ॥
ಅನುವಾದ
ಇತ್ತ ರಾತ್ರಿ ಕಳೆದು ಬೆಳಗಾದಾಗ ಅಯೋಧ್ಯಾ ನಿವಾಸಿಗಳು ಶ್ರೀ ರಘುನಾಥನನ್ನು ನೋಡದೆ ಶೋಕದಿಂದ ವ್ಯಾಕುಲರಾಗಿ ಏನು ಮಾಡಬೇಕೆಂದು ತೋಚದೆ ನಿಶ್ಚೇಷ್ಟಿತರಂತಾದರು.॥1॥
ಮೂಲಮ್ - 2
ಶೋಕಜಾಶ್ರುಪರಿದ್ಯೂನಾ ವೀಕ್ಷಮಾಣಾ ಸ್ತತಸ್ತತಃ ।
ಆಲೋಕಮಪಿ ರಾಮಸ್ಯ ನ ಪಶ್ಯಂತಿ ಸ್ಮ ದುಃಖಿತಾಃ ॥
ಅನುವಾದ
ಅವರು ಶೋಕಜನಿತ ದುಃಖಾಶ್ರುಗಳನ್ನು ಸುರಿಸುತ್ತಾ ಅತ್ಯಂತ ಖಿನ್ನರಾದರು ಹಾಗೂ ಎಲ್ಲ ಕಡೆಗಳಲ್ಲಿ ಹುಡುಕತೊಡಗಿದರು. ಆದರೆ ಆ ದುಃಖಿತರಾದ ಪುರವಾಸಿಗಳಿಗೆ ಶ್ರೀರಾಮನು ಯಾವ ಕಡೆ ಹೋದನು, ಇದರ ಸುಳಿವೇ ಸಿಗಲಿಲ್ಲ. ಯಾವ ಸುಳಿವೂ ಕಂಡು ಬರಲಿಲ್ಲ.॥2॥
ಮೂಲಮ್ - 3
ತೇ ವಿಷಾದಾರ್ತವದನಾ ರಹಿತಾಸ್ತೇನ ಧೀಮತಾ ।
ಕೃಪಣಾಃ ಕರುಣಾ ವಾಚೋವದಂತಿ ಸ್ಮ ಮನೀಷಿಣಃ ॥
ಅನುವಾದ
ಶ್ರೀರಾಮನಿಂದ ಅಗಲಿದ ಅವರು ಅತ್ಯಂತ ದೀನರಾದರು. ಅವರ ಮುಖದಲ್ಲಿ ವಿಷಾದವು ಸ್ಪಷ್ಟವಾಗಿ ಕಾಣುತ್ತಿತ್ತು. ಆ ಮನೀಷೀ ನಾಗರಿಕರು ಕರುಣಾ ಪೂರ್ಣ ಮಾತುಗಳಿಂದ ವಿಲಾಪಿಸತೊಡಗಿದರು.॥3॥
ಮೂಲಮ್ - 4
ಧಿಗಸ್ತು ಖಲುನಿದ್ರಾಂ ತಾಂ ಯಯಾಪಹತಚೇತಸಃ ।
ನಾದ್ಯ ಪಶ್ಯಾಮಹೇ ರಾಮಂ ಪೃಥೂರಸ್ಕಂ ಮಹಾಭುಜಮ್ ॥
ಅನುವಾದ
ಅಯ್ಯೋ! ನಮ್ಮ ನಿದ್ರೆಗೆ ಧಿಕ್ಕಾರವಿರಲಿ, ಅದರಿಂದ ಎಚ್ಚರವಿಲ್ಲದೆ ಆಗ ನಾವು ವಿಶಾಲವಕ್ಷವುಳ್ಳ ಮಹಾಬಾಹು ಶ್ರೀರಾಮನ ದರ್ಶನದಿಂದ ವಂಚಿತರಾದೆವಲ್ಲ.॥4॥
ಮೂಲಮ್ - 5
ಕಥಂ ರಾಮೋಮಹಾಬಾಹುಃ ಸ ತಥಾವಿತಥಕ್ರಿಯಃ ।
ಭಕ್ತಂ ಜನಮಭಿತ್ಯಜ್ಯ ಪ್ರವಾಸಂ ತಾಪಸೋ ಗತಃ ॥
ಅನುವಾದ
ಯಾರ ಕ್ರಿಯೆಯೂ ಎಂದೂ ನಿಷ್ಫಲವಾಗುವುದಿಲ್ಲವೋ ಆ ತಾಪಸ ವೇಷಧಾರೀ ಮಹಾಬಾಹು ಶ್ರೀರಾಮನು ಭಕ್ತಜನರಾದ ನಮ್ಮನ್ನು ಬಿಟ್ಟು ವನಕ್ಕೆ ಹೇಗೆ ಹೋದನು.॥5॥
ಮೂಲಮ್ - 6
ಯೋ ನಃ ಸದಾ ಪಾಲಯತಿ ಪಿತಾ ಪುತ್ರಾನಿವೌರಸಾನ್ ।
ಕಥಂ ರಘೂಣಾಂ ಸ ಶ್ರೇಷ್ಠಸ್ತ್ಯಕ್ತ್ವಾ ನೋ ವಿಪಿನಂ ಗತಃ ॥
ಅನುವಾದ
ತಂದೆಯು ತನ್ನ ಔರಸಪುತ್ರರನ್ನು ಪಾಲಿಸುವಂತೆಯೇ ಸದಾ ನಮ್ಮನ್ನು ರಕ್ಷಿಸುತ್ತಿದ್ದ ರಘುಕುಲಶ್ರೇಷ್ಠ ಶ್ರೀರಾಮನು ಇಂದು ನಮ್ಮನ್ನು ಬಿಟ್ಟು ಕಾಡಿಗೆ ಏಕೆ ಹೋದನು.॥6॥
ಮೂಲಮ್ - 7
ಇಹೈವ ನಿಧನಂ ಯಾಮ ಮಹಾಪ್ರಸ್ಥಾನಮೇವ ವಾ ।
ರಾಮೇಣ ರಹಿತಾನಾಂ ನೋ ಕಿಮರ್ಥಂ ಜೀವಿತಂ ಹಿತಮ್ ॥
ಅನುವಾದ
ಈಗ ನಾವು ಇಲ್ಲೇ ಪ್ರಾಣ ಬಿಟ್ಟುಬಿಡುವೆವು ಅಥವಾ ಸಾಯಲು ನಿಶ್ಚಯಿಸಿ ಉತ್ತರದಿಕ್ಕಿಗೆ ಹೊರಟು ಹೋಗೋಣ. ಶ್ರೀರಾಮನಿಂದ ರಹಿತವಾಗಿ ನಾವು ಬದುಕಿರುವುದು ಯಾರಿಗಾಗಿ ಹಿತವಾಗಬಲ್ಲದು.॥7॥
ಮೂಲಮ್ - 8
ಸಂತಿ ಶುಷ್ಕಾಣಿ ಕಾಷ್ಠಾನಿ ಪ್ರಭೂತಾನಿ ಮಹಾಂತಿ ಚ ।
ತೈಃ ಪ್ರಜ್ವಾಲ್ಯ ಚಿತಾಂ ಸರ್ವೇ ಪ್ರವಿಶಾಮೋಽಥವಾ ವಯಮ್ ॥
ಅನುವಾದ
ಅಥವಾ ಇಲ್ಲಿ ಅನೇಕ ದೊಡ್ಡ ದೊಡ್ಡ ಒಣಗಿದ ಕಟ್ಟಿಗೆ ಬಿದ್ದಿವೆ, ಅದರಿಂದ ಚಿತೆಯನ್ನು ಉರಿಸಿ ನಾವೆಲ್ಲರೂ ಅದರಲ್ಲಿ ಪ್ರವೇಶಿಸೋಣ.॥8॥
ಮೂಲಮ್ - 9
ಕಿಂ ವಕ್ಷ್ಯಾಮೋ ಮಹಾಬಾಹುರನಸೂಯಃ ಪ್ರಿಯಂವದಃ
ನೀತಃ ಸ ರಾಘವೋಽಸ್ಮಾಭಿರಿತಿ ವಕ್ತುಂ ಕಥಂ ಕ್ಷಮಮ್ ॥
ಅನುವಾದ
(ನಮ್ಮಲ್ಲಿ ಯಾರಾದರೂ ಶ್ರೀರಾಮನ ವೃತ್ತಾಂತವನ್ನು ಕೇಳಿದರೆ ನಾವು ಏನು ಉತ್ತರಿಸುವುದು?) ಯಾರ ದೋಷಗಳನ್ನೂ ನೋಡದ, ಎಲ್ಲರೊಂದಿಗೆ ಪ್ರಿಯವಾಗಿ ಮಾತನಾಡುವ ಆ ಮಹಾಬಾಹು ಶ್ರೀ ರಘುನಾಥನನ್ನು ನಾವು ಕಾಡಿಗೆ ಕಳಿಸಿಬಿಟ್ಟೆವು ಎಂದು ಹೇಳುವುದಿಲ್ಲವೇ? ಅಯ್ಯೋ! ಇಂತಹ ಅಯೋಗ್ಯವಾದ ಮಾತನ್ನು ಹೇಗೆ ಹೇಳುವುದು.॥9॥
ಮೂಲಮ್ - 10
ಸಾ ನೂನಂ ನಗರೀ ದೀನಾ ದೃಷ್ಟ್ವಾಸ್ಮಾನ್ ರಾಘವಂ ವಿನಾ ।
ಭವಿಷ್ಯತಿ ನಿರಾನಂದಾ ಸಸ್ತ್ರೀಬಾಲವಯೋಽಧಿಕಾ ॥
ಅನುವಾದ
ಶ್ರೀರಾಮನಿಲ್ಲದೆ ಮರಳಿದ ನಮ್ಮನ್ನು ನೋಡಿ ಪತ್ನೀ, ಪುತ್ರರು ಮತ್ತು ವೃದ್ಧರಸಹಿತ ಇಡೀ ಅಯೋಧ್ಯೆಯು ನಿಶ್ಚಯವಾಗಿ ದೀನ, ಆನಂದಹೀನವಾಗುವುದು.॥10॥
ಮೂಲಮ್ - 11
ನಿರ್ಯಾತಾಸ್ತೇನ ವೀರೇಣಸಹ ನಿತ್ಯಂ ಮಹಾತ್ಮನಾ ।
ವಿಹೀನಾಸ್ತೇನ ಚ ಪುನಃ ಕಥಂ ದ್ರಕ್ಷ್ಯಾಮ ತಾಂ ಪುರೀಮ್ ॥
ಅನುವಾದ
ನಾವು ವೀರವರ ಮಹಾತ್ಮಾ ಶ್ರೀರಾಮನ ಜೊತೆಗೆ ಸದಾಕಾಲ ವಾಸಿಸಲು ಹೊರಟೆದ್ದವು. ಈಗ ಅವನಿಂದ ಅಗಲಿದ ನಾವು ಅಯೋಧ್ಯಾಪುರಿಯನ್ನು ಹೇಗೆ ನೋಡಬಲ್ಲೆವು.॥11॥
ಮೂಲಮ್ - 12
ಇತೀವ ಬಹುಧಾ ವಾಚೋ ಬಾಹುಮುದ್ಯಮ್ಯ ತೇ ಜನಾಃ ।
ವಿಲಪಂತಿ ಸ್ಮ ದುಃಖಾರ್ತಾ ಹೃತವತ್ಸಾ ಇವಾಗ್ರ್ಯಗಾಃ ॥
ಅನುವಾದ
ಈ ಪ್ರಕಾರ ಅನೇಕ ರೀತಿಯ ಮಾತುಗಳನ್ನಾಡುತ್ತಾ ಆ ಸಮಸ್ತ ಪುರನಿವಾಸಿಗಳು ಕೈಗಳನ್ನೆತ್ತಿ ವಿಲಾಪಿಸತೊಡಗಿದರು. ಅವರು ಕರುಗಳಿಂದ ಬೇರ್ಪಡಿಸಿದ ಹಸುಗಳಂತೆ ದುಃಖದಿಂದ ವ್ಯಾಕುಲರಾಗಿದ್ದರು.॥12॥
ಮೂಲಮ್ - 13
ತತೋ ಮಾರ್ಗಾನುಸಾರೇಣ ಗತ್ವಾ ಕಿಂಚಿತ್ತತಃ ಕ್ಷಣಮ್ ।
ಮಾರ್ಗನಾಶಾದ್ ವಿಷಾದೇನ ಮಹತಾ ಸಮಭಿಪ್ಲುತಾಃ ॥
ಅನುವಾದ
ಮತ್ತೆ ದಾರಿಯಲ್ಲಿ ರಥದ ಜಾಡನ್ನು ಹಿಡಿದು ಎಲ್ಲರೂ ಸ್ವಲ್ಪ ದೂರ ಹೋದರು, ಆದರೆ ತತ್ಕ್ಷಣ ರಥದ ಚಿಹ್ನೆ ಕಾಣದಿದ್ದಾಗ ಅವರು ಮಹಾಶೋಕದಲ್ಲಿ ಮುಳುಗಿ ಹೋದರು.॥13॥
ಮೂಲಮ್ - 14
ರಥಮಾರ್ಗಮನುಸಾರೇಣ ನ್ಯವರ್ತಂತ ಮನಸ್ವಿನಃ ।
ಕಿಮಿದಂ ಕಿಂಕರಿಷ್ಯಾಮೋ ದೈವೇನೋಪಹತಾ ಇತಿ ॥
ಅನುವಾದ
ಆಗ ‘ಇದೇನಾಯಿತು? ಈಗ ನಾವೇನು ಮಾಡುವುದು? ದೈವವು ನಮ್ಮನ್ನು ಕೊಂದು ಬಿಟ್ಟಿತು’ ಎಂದು ಹೇಳುತ್ತಾ ಆ ಮನಸ್ವೀ ಜನರು ರಥದ ಜಾಡು ಕಾಣದೆ ಅಯೋಧ್ಯೆಯ ಕಡೆಗೆ ಮರಳಿದರು.॥14॥
ಮೂಲಮ್ - 15
ತದಾ ಯಥಾಗತೇನೈವ ಮಾರ್ಗೇಣ ಕ್ಲಾಂತಚೇತಸಃ ।
ಅಯೋಧ್ಯಾಮಗಮನ್ಸರ್ವೇ ಪುರೀಂ ವ್ಯಥಿತಸಜ್ಜನಾಮ್ ॥
ಅನುವಾದ
ಅವರ ಚಿತ್ತ ವ್ಯಥಿತವಾಗಿತ್ತು. ಅವರೆಲ್ಲರೂ ಹೋದ ದಾರಿಯಲ್ಲೇ ಹಿಂದಿರುಗಿ ಅಯೋಧ್ಯಾಪುರಿಗೆ ಬಂದರು. ಅಲ್ಲಿಯ ಎಲ್ಲ ಸತ್ಪುರುಷರು ಶ್ರೀರಾಮನಿಗಾಗಿ ವ್ಯಥಿತರಾಗಿದ್ದರು.॥15॥
ಮೂಲಮ್ - 16
ಆಲೋಕ್ಯ ನಗರೀಂ ತಾಂ ಚ ಕ್ಷಯವ್ಯಾಕುಲಮಾನಸಾಃ ।
ಆವರ್ತಯಂತ ತೇಽಶ್ರೂಣಿ ನಯನೈಃ ಶೋಕಪೀಡಿತೈಃ ॥
ಅನುವಾದ
ಆ ನಗರವನ್ನು ನೋಡಿ ಅವರ ಹೃದಯ ದುಃಖದಿಂದ ವ್ಯಾಕುಲವಾಗಿತ್ತು. ಅವರ ಶೋಕಪೀಡಿತ ಕಣ್ಣುಗಳಿಂದ ಕಣ್ಣೀರಿನ ಮಳೆಯೇ ಸುರಿಯಿತು.॥16॥
ಮೂಲಮ್ - 17
ಏಷಾ ರಾಮೇಣ ನಗರೀ ರಹಿತಾ ನಾತಿಶೋಭತೇ ।
ಆಪಗಾ ಗರುಡೇನೇವ ಹ್ರದಾದುದ್ಧೃತಪನ್ನಗಾ ॥
ಅನುವಾದ
ಆಳವಾದ ಮಡುವಿನಿಂದ ಸರ್ಪವನ್ನು ಗರುಡನು ಎತ್ತಿಕೊಂಡು ಹೋದಾಗ ಆ ನದಿಯು ಶೋಭಾಹೀನವಾಗಿರುವಂತೆಯೇ ಶ್ರೀರಾಮರಹಿತವಾದ ಈ ಅಯೋಧ್ಯೆಯು ಈಗ ಹೆಚ್ಚು ಶೋಭಾಹೀನವಾಗಿತ್ತು.॥17॥
ಮೂಲಮ್ - 18
ಚಂದ್ರಹೀನಮಿವಾಕಾಶಂ ತೋಯಹೀನಮಿವಾರ್ಣವಮ್ ।
ಅಪಶನ್ನಿಹತಾನಂದಂ ನಗರಂ ತೇ ವಿಚೇತಸಃ ॥
ಅನುವಾದ
ಅವರು ನೋಡುತ್ತಾರೆ - ಇಡೀ ನಗರವು ಚಂದ್ರಹೀನ ಆಕಾಶದಂತೆ, ಜಲಹೀನ ಸಮುದ್ರದಂತೆ ಆನಂದಶೂನ್ಯವಾಗಿ ಹೋಯಿತು. ಪುರಿಯ ಈ ದುರವಸ್ಥೆಯನ್ನು ನೋಡಿ ಅವರು ಎಚ್ಚರ ತಪ್ಪಿದಂತಾದರು.॥18॥
ಮೂಲಮ್ - 19
ತೇ ತಾನಿ ವೇಶ್ಮಾನಿ ಮಹಾಧನಾನಿ
ದುಃಖೇನ ದುಃಖೋಪಹತಾ ವಿಶಂತಃ ।
ನೈವ ಪ್ರಜಗ್ಮುಃ ಸ್ವಜನಂ ಪರಂ ವಾ
ನಿರೀಕ್ಷಮಾಣಾಃ ಪ್ರವಿನಷ್ಟಹರ್ಷಾಃ ॥
ಅನುವಾದ
ಅವರ ಹೃದಯದ ಎಲ್ಲ ಉಲ್ಲಾಸ ನಾಶವಾಗಿತ್ತು. ಅವರು ದುಃಖದಿಂದ ಪೀಡಿತರಾಗಿ ಆ ಮಹಾ ವೈಭವ ಸಂಪನ್ನ ಮನೆಗಳಲ್ಲಿ ಬಹಳ ಕ್ಲೇಶದಿಂದ ಒಳಹೊಕ್ಕು ನೋಡುತ್ತಿದ್ದರೂ ತಮ್ಮ ಮತ್ತು ಪರರ ಪರಿಚಯವೇ ಸಿಗದಂತಹ ಅವರ ಸ್ಥಿತಿಯಾಗಿತ್ತು.॥19॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ನಲವತ್ತೇಳನೆಯ ಸರ್ಗ ಪೂರ್ಣವಾಯಿತು ॥47॥