वाचनम्
ಭಾಗಸೂಚನಾ
ಸೀತಾ-ಲಕ್ಷ್ಮಣರೊಡನೆ ಶ್ರೀರಾಮನು ತಮಸಾನದಿಯ ತೀರದಲ್ಲಿ ಬೀಡು ಬಿಟ್ಟುದು, ತಂದೆ-ತಾಯಿಯರ ಮತ್ತು ಅಯೋಧ್ಯೆಯ ವಿಷಯವಾಗಿ ಚಿಂತಿಸಿದುದು, ಅಯೋಧ್ಯಾವಾಸಿಗಳು ಮಲಗಿರುವಾಗ ಅವರನ್ನು ಬಿಟ್ಟು ಕಾಡಿನ ಕಡೆಗೆ ಪ್ರಯಾಣ ಮಾಡಿದುದು
ಮೂಲಮ್ - 1
ತತಸ್ತು ತಮಸಾತೀರಂ ರಮ್ಯಮಾಶ್ರಿತ್ಯ ರಾಘವಃ ।
ಸೀತಾಮುದ್ವೀಕ್ಷ್ಯಸೌಮಿತ್ರಿಮಿದಂ ವಚನಮಬ್ರವೀತ್ ॥
ಅನುವಾದ
ರಾಘವನು ರಮ್ಯವಾದ ತಮಸಾನದಿಯ ತೀರವನ್ನು ಸೇರಿ ಸೀತೆಯ ಕಡೆ ನೋಡಿ ಸುಮಿತ್ರಾಕುಮಾರ ಲಕ್ಷ್ಮಣನಲ್ಲಿ ಈ ಪ್ರಕಾರ ಹೇಳಿದನು.॥1॥
ಮೂಲಮ್ - 2
ಇಯಮದ್ಯ ನಿಶಾ ಪೂರ್ವಾ ಸೌಮಿತ್ರೇ ಪ್ರಹಿತಾ ವನಮ್ ।
ವನವಾಸಸ್ಯ ಭದ್ರಂ ತೇ ನ ಚೋತ್ಕಂಠಿತುಮರ್ಹಸಿ ॥
ಅನುವಾದ
ಸುಮಿತ್ರಾನಂದನ! ನಿನಗೆ ಮಂಗಳವಾಗಲಿ, ನಾವು ವನವಾಸಕ್ಕೆ ಹೊರಟಿರುವೆವು. ಇಂದು ನಮ್ಮ ವನವಾಸದ ಮೊದಲನೆಯ ರಾತ್ರಿಯಾಗಿದೆ. ಆದ್ದರಿಂದ ನೀನು ನಗರದ ಕಡೆಗೆ ಉತ್ಕಂಠಿತನಾಗಬಾರದು.॥2॥
ಮೂಲಮ್ - 3
ಪಶ್ಯ ಶೂನ್ಯಾನ್ಯರಣ್ಯಾನಿ ರುದಂತೀವ ಸಮಂತತಃ ।
ಯಥಾ ನಿಲಯಮಾಯದ್ಭಿರ್ನಿಲೀನಾನಿ ಮೃಗದ್ವಿಜೈಃ ॥
ಅನುವಾದ
ಈ ನಿರ್ಜನವಾದ ಅರಣ್ಯವನ್ನು ನೋಡು, ಇದರಲ್ಲಿ ವನ್ಯ ಪಶು-ಪಕ್ಷಿಗಳು ತಮ್ಮ-ತಮ್ಮ ಸ್ಥಾನಕ್ಕೆ ಬಂದು ಕೂಗುತ್ತಿರುವ ಶಬ್ದಗಳಿಂದ ವನವೆಲ್ಲ ವ್ಯಾಪ್ತವಾಗಿದೆ. ಇಡೀವನ ನಮ್ಮನ್ನು ಈ ಸ್ಥಿತಿಯಲ್ಲಿ ನೋಡಿ ಖಿನ್ನವಾಗಿ ಎಲ್ಲೆಡೆ ಅಳುವಂತೆ ಕಾಣುತ್ತಿದೆ.॥3॥
ಮೂಲಮ್ - 4
ಅದ್ಯಾಯೋಧ್ಯಾ ತು ನಗರೀ ರಾಜಧಾನೀ ಪಿತುರ್ಮಮ ।
ಸಸೀಪುಂಸಾ ಗತಾನಸ್ಮಾನ್ಶೋಚಿಷ್ಯತಿ ನ ಸಂಶಯಃ ॥
ಅನುವಾದ
ಇಂದು ನಮ್ಮ ತಂದೆಯ ರಾಜಧಾನಿ ಅಯೋಧ್ಯೆಯು ವನಕ್ಕೆ ಬಂದಿರುವ ನಮಗಾಗಿ ಸಮಸ್ತ ನರ-ನಾರಿಯರು ಸಹಿತ ಶೋಕಿಸುತ್ತಿರಬಹುದು, ಇದರಲ್ಲಿ ಸಂಶಯವೇ ಇಲ್ಲ.॥4॥
ಮೂಲಮ್ - 5
ಅನುರಕ್ತಾ ಹಿ ಮನುಜಾ ರಾಜಾನಂ ಬಹುಭಿರ್ಗುಣೈಃ ।
ತ್ವಾಂ ಚ ಮಾಂ ಚ ನರವ್ಯಾಘ್ರ ಶತ್ರುಘ್ನಭರತೌ ತಥಾ ॥
ಅನುವಾದ
ಪುರುಷಸಿಂಹ! ಅಯೋಧ್ಯೆಯ ಜನರು ಬಹಳ ಸದ್ಗುಣಗಳಿಂದಾಗಿ ಮಹಾರಾಜರಲ್ಲಿ, ನಿನ್ನಲ್ಲಿ, ನನ್ನಲ್ಲಿ, ಹಾಗೂ ಭರತ-ಶತ್ರುಘ್ನರಲ್ಲಿಯೂ ಅನುರಕ್ತರಾಗಿರುವರು.॥5॥
ಮೂಲಮ್ - 6
ಪಿತರಂ ಚಾನುಶೋಚಾಮಿ ಮಾತರಂ ಚ ಯಶಸ್ವಿನೀಮ್ ।
ಅಪಿ ನಾಂಧೌ ಭವೇತಾಂ ನೌರುದಂತೌ ತಾವಭೀಕ್ಷ್ಣಶಃ ॥
ಅನುವಾದ
ಈಗ ನನಗೆ ತಂದೆ ಮತ್ತು ಯಶಸ್ವಿನೀ ಮಾತೆಯರಿಗಾಗಿ ಬಹಳ ದುಃಖವಾಗುತ್ತಿದೆ. ಅವರು ನಿರಂತರ ಅಳುತ್ತಾ ಇರುವುದರಿಂದ ಎಲ್ಲಾದರೂ ಕುರುಡರಾಗದಿರಲಿ.॥6॥
ಮೂಲಮ್ - 7
ಭರತಃ ಖಲು ಧರ್ಮಾತ್ಮಾ ಪಿತರಂ ಮಾತರಂ ಚ ಮೇ ।
ಧರ್ಮಾರ್ಥಕಾಮಸಹಿತೈರ್ವಾಕ್ಯೈರಾಶ್ವಾಸಯಿಷ್ಯತಿ ॥
ಅನುವಾದ
ಆದರೆ ಭರತನು ಬಹಳ ಧರ್ಮಾತ್ಮನಾಗಿದ್ದಾನೆ. ಅವಶ್ಯವಾಗಿಯೇ ಅವನು ಧರ್ಮ, ಅರ್ಥ, ಕಾಮ - ಈ ಮೂರರ ಅನುಕೂಲವಾದ ಮಾತುಗಳಿಂದ ತಂದೆಯನ್ನೂ ತಾಯಿಯರನ್ನು ಸಮಾಧಾನಪಡಿಸುವನು.॥7॥
ಮೂಲಮ್ - 8
ಭರತಸ್ಯಾನೃಶಂಸತ್ವಂ ಸಚಿಂತ್ಯಾಹಂ ಪುನಃ ಪುನಃ ।
ನಾನುಶೋಚಾಮಿ ಪಿತರಂ ಮಾತರಂ ಚ ಮಹಾಭುಜ ॥
ಅನುವಾದ
ಮಹಾಬಾಹೋ! ಭರತನ ಕೋಮಲವಾದ ಸ್ವಭಾವವನ್ನು ಪದೇ-ಪದೇ ನಾನು ನೆನೆದಾಗ ನನಗೆ ತಂದೆ-ತಾಯಿಯರ ಕುರಿತು ಹೆಚ್ಚು ಚಿಂತೆಯಾಗುವುದಿಲ್ಲ.॥8॥
ಮೂಲಮ್ - 9
ತ್ವಯಾ ಕಾರ್ಯಂ ನರವ್ಯಾಘ್ರ ಮಾಮನುವ್ರಜತಾ ಕೃತಮ್ ।
ಅನ್ವೇಷ್ಟವ್ಯಾ ಹಿ ವೈದೇಹ್ಯಾ ರಕ್ಷಣಾರ್ಥಂ ಸಹಾಯತಾ ॥
ಅನುವಾದ
ನರಶ್ರೇಷ್ಠ ಲಕ್ಷ್ಮಣ! ನೀನು ನನ್ನೊಂದಿಗೆ ಬಂದು ತುಂಬಾ ಮಹತ್ವಪೂರ್ಣ ಕಾರ್ಯವನ್ನು ಮಾಡಿರುವೆ. ಏಕೆಂದರೆ ನೀನು ಬರದಿದ್ದರೆ, ವಿದೇಹಕುಮಾರಿ ಸೀತೆಯ ರಕ್ಷಣೆಗಾಗಿ ಯಾವನಾದರೂ ಸಹಾಯಕನನ್ನು ಹುಡುಕ ಬೇಕಾಗಿತ್ತು.॥9॥
ಮೂಲಮ್ - 10
ಅದ್ಭಿರೇವ ಹಿ ಸೌಮಿತ್ರೇ ವತ್ಸ್ಯಾಮ್ಯದ್ಯ ನಿಶಾಮಿಮಾಮ್ ।
ಏತದ್ಧಿ ರೋಚತೇ ಮಹ್ಯಂ ವನ್ಯೇಽಪಿ ವಿವಿಧೇ ಸತಿ ॥
ಅನುವಾದ
ಸುಮಿತ್ರಾನಂದನ! ಇಲ್ಲಿ ನಾನಾ ಪ್ರಕಾರದ ಕಾಡು ಫಲ-ಮೂಲಗಳು ಸಿಗುವುದಿದ್ದರೂ ಇಂದಿನ ರಾತ್ರೆಯನ್ನು ನಾನು ಕೇವಲ ನೀರನ್ನು ಕುಡಿದು ಕಳೆಯುವೆನು. ಹೀಗೆ ನನಗೆ ಅನಿಸುತ್ತದೆ.॥10॥
ಮೂಲಮ್ - 11
ಏವಮುಕ್ತ್ವಾ ತು ಸೌಮಿತ್ರಿಂ ಸುಮಂತ್ರಮಪಿ ರಾಘವಃ ।
ಅಪ್ರಮತ್ತಸ್ತ್ವಮಶ್ವೇಷು ಭವ ಸೌಮ್ಯೇತ್ಯುವಾಚ ಹ ॥
ಅನುವಾದ
ಲಕ್ಷ್ಮಣನಲ್ಲಿ ಹೀಗೆ ಹೇಳಿ ಶ್ರೀರಾಮನು ಸುಮಂತ್ರನಲ್ಲಿ - ಸೌಮ್ಯ! ಈಗ ನೀವು ಕುದುರೆಗಳ ರಕ್ಷಣೆಯ ಕಡೆಗೆ ಗಮನ ಕೊಡಿರಿ. ಅವಗಳ ಕುರಿತು ಉದಾಸೀನ ತೋರಬಾರದು.॥11॥
ಮೂಲಮ್ - 12
ಸೋಽಶ್ವಾನ್ಸುಮಂತ್ರಃ ಸಂಯಮ್ಯ ಸೂರ್ಯೋಽಸ್ತಂ ಸಮುಪಾಗತೇ ।
ಪ್ರಭೂತಯವಸಾನ್ ಕೃತ್ವಾ ಬಭೂವ ಪ್ರತ್ಯನಂತರಃ ॥
ಅನುವಾದ
ಸುಮಂತ್ರನು ಸೂರ್ಯಾಸ್ತವಾದಾಗ ಕುದುರೆಗಳನ್ನು ತಂದು ಕಟ್ಟಿಹಾಕಿದನು. ಅವುಗಳಿಗೆ ಸಾಕಷ್ಟು ಹುಲ್ಲು ಹಾಕಿ ಅವನು ಶ್ರೀರಾಮಚಂದ್ರನ ಬಳಿಗೆ ಬಂದನು.॥12॥
ಮೂಲಮ್ - 13
ಉಪಾಸ್ಯ ತು ಶಿವಾಂ ಸಂಧ್ಯಾಂ ದೃಷ್ಟ್ವಾ ರಾತ್ರಿಮುಪಾಗತಾಮ್ ।
ರಾಮಸ್ಯ ಶಯನಂಚಕ್ರೇ ಸೂತಃ ಸೌಮಿತ್ರಿಣಾ ಸಹ ॥
ಅನುವಾದ
ಮತ್ತೆ ಮಂಗಳಕರ ಸಂಧ್ಯಾವಂದನೆಯನ್ನು ಮಾಡಿ, ರಾತ್ರಿಯಾಗಿರುವುದನ್ನು ನೋಡಿ ಲಕ್ಷ್ಮಣ ಸಹಿತ ಸುಮಂತ್ರನು ಶ್ರೀರಾಮನಿಗೆ ಮಲಗಲು ಯೋಗ್ಯವಾದ ಹಾಸಿಗೆಯನ್ನು ಸಿದ್ಧಪಡಿಸಿದನು.॥13॥
ಮೂಲಮ್ - 14
ತಾಂ ಶಯ್ಯಾಂ ತಮಸಾತೀರೇ ವೀಕ್ಷ್ಯವೃಕ್ಷದಲೈರ್ವೃತಾಮ್ ।
ರಾಮಃ ಸೌಮಿತ್ರಿಣಾ ಸಾರ್ಧಂ ಸಭಾರ್ಯಃ ಸಂವಿವೇಶ ಹ ॥
ಅನುವಾದ
ತಮಸಾ ತೀರದಲ್ಲಿ ಮರಗಳ ಚಿಗುರುಗಳಿಂದ ಮಾಡಿರುವ ಆ ಶಯ್ಯೆಯನ್ನು ನೋಡಿ ಶ್ರೀರಾಮಚಂದ್ರನು ಲಕ್ಷ್ಮಣ ಸೀತೆಯೊಂದಿಗೆ ಅದರಲ್ಲಿ ಕುಳಿತುಕೊಂಡನು.॥14॥
ಮೂಲಮ್ - 15
ಸಭಾರ್ಯಂ ಸಂಪ್ರಸುಪ್ತಂ ತು ಶ್ರಾಂತಂ ಸಂಪ್ರೇಕ್ಷ್ಯಲಕ್ಷ್ಮಣಃ ।
ಕಥಯಾಮಾಸ ಸೂತಾಯ ರಾಮಸ್ಯ ವಿವಿಧಾನ್ಗುಣಾನ್ ॥
ಅನುವಾದ
ಸ್ವಲ್ಪ ಹೊತ್ತಿನಲ್ಲೆ ಸೀತಾಸಹಿತ ಶ್ರೀರಾಮನು ಬಳಲಿ ಮಲಗಿರುವುದನ್ನು ನೋಡಿ, ಲಕ್ಷ್ಮಣನು ಸುಮಂತ್ರನಲ್ಲಿ ರಾಮನ ನಾನಾ ಗುಣಗಳನ್ನು ವರ್ಣಿಸತೊಡಗಿದನು.॥15॥
ಮೂಲಮ್ - 16
ಜಾಗ್ರತೋರೇವ ತಾಂ ರಾತ್ರಿಂ ಸೌಮಿತ್ರೇರುದಿತೋ ರವಿಃ ।
ಸೂತಸ್ಯ ತಮಸಾತೀರೇ ರಾಮಸ್ಯ ಬ್ರುವತೋ ಗುಣಾನ್ ॥
ಅನುವಾದ
ಸುಮಂತ್ರ ಮತ್ತು ಲಕ್ಷ್ಮಣರು ತಮಸೆಯ ತೀರದಲ್ಲಿ ಶ್ರೀರಾಮನ ಗುಣಗಳನ್ನು ಚರ್ಚಿಸುತ್ತಾ ಇಡೀ ರಾತ್ರಿ ಎಚ್ಚರವಾಗಿಯೇ ಇದ್ದರು. ಅಷ್ಟರಲ್ಲಿ ಸೂರ್ಯೋದಯದ ಸಮಯ ಸಮೀಪಿಸಿತು.॥16॥
ಮೂಲಮ್ - 17
ಗೋಕುಲಾಕುಲತೀರಾಯಾಸ್ತಮಸಾಯಾ ವಿದೂರತಃ ।
ಅವಸತ್ತತ್ರ ತಾಂ ರಾತ್ರಿಂ ರಾಮಃ ಪ್ರಕೃತಿಭಿಃ ಸಹ ॥
ಅನುವಾದ
ತಮಸೆಯ ಆ ದಡ ಗೋವುಗಳ ಸಮುದಾಯಗಳಿಂದ ತುಂಬಿ ಹೋಗಿತ್ತು. ಶ್ರೀರಾಮಚಂದ್ರನು ಪ್ರಜಾ ಜನರೊಂದಿಗೆ ಅಲ್ಲೇ ರಾತ್ರಿಯನ್ನು ಕಳೆದನು. ಅವನು ಪ್ರಜಾಜನರಿಂದ ಸ್ವಲ್ಪ ದೂರದಲ್ಲಿ ಮಲಗಿದ್ದನು.॥17॥
ಮೂಲಮ್ - 18
ಉತ್ಥಾಯ ಚ ಮಹಾತೇಜಾಃ ಪ್ರಕೃತೀಸ್ತಾ ನಿಶಾಮ್ಯಚ ।
ಅಬ್ರವೀದ್ಭ್ರಾತರಂ ರಾಮೋ ಲಕ್ಷ್ಮಣಂ ಪುಣ್ಯಲಕ್ಷಣಮ್ ॥
ಅನುವಾದ
ಮಹಾತೇಜಸ್ವೀ ಶ್ರೀರಾಮನು ಸಟ್ಟನೆ ಎದ್ದು, ಪ್ರಜಾಜನರು ಮಲಗಿರುವುದನ್ನು ನೋಡಿ ಪವಿತ್ರ ಲಕ್ಷಣಗಳುಳ್ಳ ಲಕ್ಷ್ಮಣನಲ್ಲಿ ಈ ಪ್ರಕಾರ ಹೇಳಿದನು.॥18॥
ಮೂಲಮ್ - 19
ಅಸ್ಮದ್ವ್ಯಪೇಕ್ಷಾನ್ ಸೌಮಿತ್ರೇ ನಿರ್ವ್ಯಪೇಕ್ಷಾನ್ ಗೃಹೇಷ್ವಪಿ ।
ವೃಕ್ಷಮೂಲೇಷು ಸಂಸಕ್ತಾನ್ಪಶ್ಯ ಲಕ್ಷ್ಮಣ ಸಾಂಪ್ರತಮ್ ॥
ಅನುವಾದ
ಸುಮಿತ್ರಾಕುಮಾರ ಲಕ್ಷ್ಮಣ! ಈ ಪುರವಾಸಿಗಳನ್ನು ನೋಡು, ಈಗ ಮರಗಳ ಬೇರುಗಳಿಗೆ ಒರಗಿ ನಿದ್ದೆ ಮಾಡುತ್ತಿದ್ದಾರೆ. ಇವರಿಗೆ ಕೇವಲ ನಮ್ಮಲ್ಲೇ ಪ್ರೀತಿ ಇದೆ. ಇವರು ತಮ್ಮ ಮನೆಗಳ ಕುರಿತು ಪೂರ್ಣ ನಿರಪೇಕ್ಷರಾಗಿದ್ದಾರೆ.॥19॥
ಮೂಲಮ್ - 20
ಯಥೈತೇ ನಿಯಮಂ ಪೌರಾಃ ಕುರ್ವಂತ್ಯಸ್ಮನ್ನಿವರ್ತನೇ ।
ಅಪಿ ಪ್ರಾಣಾನ್ ನ್ಯಸಿಷ್ಯಂತಿ ನ ತು ತ್ಯಕ್ಷ್ಯಂತಿ ನಿಶ್ಚಯಮ್ ॥
ಅನುವಾದ
ನಮ್ಮನ್ನು ಮರಳಿ ಕರೆದುಕೊಂಡು ಹೋಗಲು ಇವರು ಮಾಡುವ ಪ್ರಯತ್ನ ನೋಡಿದರೆ ಇವರು ತಮ್ಮ ಪ್ರಾಣಗಳನ್ನೇ ಬಿಡುವರು, ಆದರೆ ತಮ್ಮ ನಿಶ್ಚಯವನ್ನು ಬಿಡಲಾರದೆಂದೇ ಅನಿಸುತ್ತದೆ.॥20॥
ಮೂಲಮ್ - 21
ಯಾವದೇವ ತು ಸಂಸುಪ್ತಾಸ್ತಾವದೇವ ವಯಂ ಲಘು ।
ರಥಮಾರುಹ್ಯ ಗಚ್ಛಾಮಃ ಪಂಥಾನಮಕುತೋಭಯಮ್ ॥
ಅನುವಾದ
ಆದ್ದರಿಂದ ಇವರು ಮಲಗಿರುವಾಗಲೇ ನಾವು ರಥಾರೂಢರಾಗಿ ಶೀಘ್ರವಾಗಿ ಇಲ್ಲಿಂದ ಹೊರಡಬೇಕು. ಮತ್ತೆ ಈ ಮಾರ್ಗದಿಂದ ಬೇರೆ ಯಾರೂ ಬರುವ ಭಯ ನಮಗೆ ಇರಲಾರದು.॥21॥
ಮೂಲಮ್ - 22
ಅತೋ ಭೂಯೋಽಪಿ ನೇದಾನೀಮಿಕ್ಷ್ವಾಕುಪುರವಾಸಿನಃ ।
ಸ್ವೇಪಯುರನುರಕ್ತಾ ಮಾವೃಕ್ಷಮೂಲೇಷು ಸಂಶ್ರಿತಾಃ ॥
ಅನುವಾದ
ಅಯೋಧ್ಯಾ ನಿವಾಸಿಗಳು ನಮ್ಮ ಅನುರಾಗಿಗಳಾಗಿದ್ದಾರೆ. ನಾವು ಇಲ್ಲಿಂದ ಹೊರಟು ಹೋದರೆ ಮತ್ತೆ ಪುನಃ ಈ ಪ್ರಕಾರ ಇವರು ಮರಗಳ ಬೇರುಗಳಿಗೆ ಒರಗಿ ಮಲಗಲಾರರು.॥22॥
ಮೂಲಮ್ - 23
ಪೌರಾ ಹ್ಯಾತ್ಮಕೃತಾದ್ದುಃಖಾದ್ ವಿಪ್ರಮೋಚ್ಯಾ ನೃಪಾತ್ಮಜೈಃ ।
ನ ತು ಖಲ್ವಾತ್ಮನಾ ಯೋಜ್ಯಾ ದುಃಖೇನ ಪುರವಾಸಿನಃ ॥
ಅನುವಾದ
ಪುರವಾಸಿಗಳಿಗೆ ನಮ್ಮಿಂದ ಆಗುವ ದುಃಖದಿಂದ ಮುಕ್ತಗೊಳಿಸುವುದು, ನಮ್ಮ ದುಃಖ ಅವರಿಗೆ ಕೊಟ್ಟು ದುಃಖಿಯಾಗಿಸದೇ ಇರುವುದು ರಾಜಕುಮಾರರ ಕರ್ತವ್ಯವಾಗಿದೆ.॥23॥
ಮೂಲಮ್ - 24
ಅಬ್ರವೀಲ್ಲಕ್ಷ್ಮಣೋ ರಾಮಂ ಸಾಕ್ಷಾದ್ಧರ್ಮಮಿವ ಸ್ಥಿತಮ್ ।
ರೋಚತೇ ಮೇ ತಥಾಪ್ರಾಜ್ಞ ಕ್ಷಿಪ್ರಮಾರುಹ್ಯತಾಮಿತಿ ॥
ಅನುವಾದ
ಇದನ್ನು ಕೇಳಿ ಲಕ್ಷ್ಮಣನು ಸಾಕ್ಷಾತ್ ಧರ್ಮದಂತೆ ವಿರಾಜಮಾನ ಶ್ರೀರಾಮನಲ್ಲಿ ಹೇಳಿದನು-ಪರಮ ಬುದ್ಧಿವಂತ ಆರ್ಯ! ನೀವು ಹೇಳಿದುದು ನನಗೆ ಒಪ್ಪಿಗೆಯಾಗಿದೆ. ಶೀಘ್ರವಾಗಿ ರಥವನ್ನು ಏರು.॥24॥
ಮೂಲಮ್ - 25
ಅಥ ರಾಮೋಽಬ್ರವೀತ್ಸೂತಂ ಶೀಘ್ರಂ ಸಂಯುಜ್ಯತಾಂ ರಥಃ ।
ಗಮಿಷ್ಯಾಮಿ ತತೋಽರಣ್ಯಂ ಗಚ್ಛ ಶೀಘ್ರಮಿತಃ ಪ್ರಭೋ ॥
ಅನುವಾದ
ಆಗ ಶ್ರೀರಾಮನು ಸುಮಂತ್ರನಲ್ಲಿ ಹೇಳಿದನು - ಅಯ್ಯಾ! ನೀವು ಹೋಗಿ ಬೇಗನೇ ರಥವನ್ನು ಹೂಡಿ, ಸಿದ್ಧಗೊಳಿಸಿರಿ. ಮತ್ತೆ ನಾನು ತಕ್ಷಣವೇ ಇಲ್ಲಿಂದ ವನದ ಕಡೆಗೆ ಹೋಗುವೆನು.॥25॥
ಮೂಲಮ್ - 26
ಸೂತಸ್ತತಃ ಸಂತ್ವರಿತಃ ಸ್ಯಂದನಂ ತೈರ್ಹಯೋತ್ತಮೈಃ ।
ಯೋಜಯಿತ್ವಾ ತು ರಾಮಸ್ಯ ಪ್ರಾಂಜಲಿಃ ಪ್ರತ್ಯವೇದಯತ್ ॥
ಅನುವಾದ
ಆಜ್ಞೆ ಪಡೆದು ಸುಮಂತ್ರನು ಆ ಉತ್ತಮ ಕುದುರೆಗಳನ್ನು ರಥಕ್ಕೆ ಹೂಡಿ, ಶ್ರೀರಾಮನಲ್ಲಿ ಕೈಮುಗಿದು ನಿವೇದಿಸಿಕೊಂಡನು-॥26॥
ಮೂಲಮ್ - 27
ಅಯಂ ಯುಕ್ತೋ ಮಹಾಬಾಹೋ ರಥಸ್ತೇ ರಥಿನಾಂ ವರ ।
ತ್ವರಯಾಽಽರೋಹ ಭದ್ರಂ ತೇ ಸಸೀತಃ ಸಹ ಲಕ್ಷ್ಮಣಃ ॥
ಅನುವಾದ
ಮಹಾಬಾಹೋ! ರಥಿಯರಲ್ಲಿ ಶ್ರೇಷ್ಠವೀರನೇ! ನಿನಗೆ ಮಂಗಳವಾಗಲಿ. ನಿಮ್ಮ ಈ ರಥ ಸಿದ್ಧವಾಗಿದೆ. ಈಗ ಸೀತಾ-ಲಕ್ಷ್ಮಣರೊಂದಿಗೆ ಇದರ ಮೇಲೆ ಆರೋಹಣ ಮಾಡು.॥27॥
ಮೂಲಮ್ - 28
ತಂ ಸ್ಯಂದನಮಧಿಷ್ಠಾಯ ರಾಘವಃ ಸಪರಿಚ್ಛದಃ ।
ಶೀಘ್ರಗಾಮಾಕುಲಾವರ್ತಾಂ ತಮಸಾಮತರನ್ನದೀಮ್ ॥
ಅನುವಾದ
ಶ್ರೀರಾಮಚಂದ್ರನು ಎಲ್ಲರೊಂದಿಗೆ ರಥದಲ್ಲಿ ಕುಳಿತು ಸುಳಿಗಳಿಂದ ಕೂಡಿ, ತೀವ್ರಗತಿಯಿಂದ ಹರಿಯುವ ನದಿಯ ಆಚೆ ದಡವನ್ನು ಸೇರಿದನು.॥28॥
ಮೂಲಮ್ - 29
ಸ ಸಂತೀರ್ಯ ಮಹಾಬಾಹುಃ ಶ್ರೀಮಾನ್ ಶಿವಮಕಂಟಕಮ್ ।
ಪ್ರಾಪದ್ಯತ ಮಹಾಮಾರ್ಗಮಭಯಂ ಭಯದರ್ಶಿನಾಮ್ ॥
ಅನುವಾದ
ನದಿಯನ್ನು ದಾಟಿ ಮಹಾಬಾಹು ಶ್ರೀರಾಮನು ಮಂಗಲಪ್ರದ, ಕಂಟಕರಹಿತ ಹಾಗೂ ಎಲ್ಲೆಡೆಗಳಲ್ಲಿ ಭಯವನ್ನೇ ನೋಡುವವರಿಗೂ ಕೂಡ ನಿರ್ಭಯವಾದ ಹೆದ್ದಾರಿಯನ್ನು ಸೇರಿದನು.॥29॥
ಮೂಲಮ್ - 30
ಮೋಹನಾರ್ಥಂ ತು ಪೌರಾಣಾಂ ಸೂತಂ ರಾಮೋಽಬ್ರವೀದ್ವಚಃ ।
ಉದಂಙ್ಮುಖಃ ಪ್ರಯಾಹಿ ತ್ವಂ ರಥಮಾರುಹ್ಯ ಸಾರಥೇ ॥
ಮೂಲಮ್ - 31
ಮುಹೂರ್ತಂ ತ್ವರಿತಂ ಗತ್ವಾ ನಿವರ್ತಯ ರಥಂ ಪುನಃ ।
ಯಥಾ ನ ವಿದ್ಯುಃ ಪೌರಾ ಮಾಂ ತಥಾ ಕುರು ಸಮಾಹಿತಃ ॥
ಅನುವಾದ
ಆಗ ಶ್ರೀರಾಮನು ಪುರವಾಸಿಗಳಿಗೆ ಭ್ರಾಂತಿಯನ್ನುಂಟುಮಾಡುವ ಸಲುವಾಗಿ ಸುಮಂತ್ರನಲ್ಲಿ ಹೇಳಿದನು - ಸಾರಥಿಯೇ! ನೀನು ರಥದಲ್ಲಿ ಕುಳಿತು ಉತ್ತರಾಭಿಮುಖವಾಗಿ ಪ್ರಯಾಣ ಮಾಡು. ಮುಹೂರ್ತಕಾಲ ಉತ್ತರದಿಕ್ಕಿಗೆ ಶೀಘ್ರವಾಗಿ ಪ್ರಯಾಣ ಮಾಡಿದ ಬಳಿಕ ರಥವನ್ನು ಹಿಂದಕ್ಕೆ ತಿರುಗಿಸಿಕೊಂಡು ಬಾ. ಯಾವುದೇ ರೀತಿಯಿಂದಲೂ ಪುರವಾಸಿಗಳಿಗೆ ನಾನು ಯಾವ ಕಡೆ ಹೋಗಿರುವೆನೆಂಬುದು ತಿಳಿಯಲು ಸಾಧ್ಯವಾಗದಂತೆ ಪ್ರಯತ್ನ ಮಾಡು.॥30-31॥
ಮೂಲಮ್ - 32
ರಾಮಸ್ಯ ತು ವಚನಃ ಶ್ರುತ್ವಾ ತಥಾ ಚಕ್ರೇ ಚ ಸಾರಥಿಃ ।
ಪ್ರತ್ಯಾಗಮ್ಯ ಚ ರಾಮಸ್ಯ ಸ್ಯಂದನಂ ಪ್ರತ್ಯವೇದಯತ್ ॥
ಅನುವಾದ
ಶ್ರೀರಾಮನ ಈ ಮಾತನ್ನು ಕೇಳಿ ಸಾರಥಿಯು ಹಾಗೆಯೇ ಮಾಡಿದನು ಮತ್ತು ಮರಳಿ ಪುನಃ ರಥವನ್ನು ಶ್ರೀರಾಮನ ಸೇವೆಯಲ್ಲಿ ಉಪಸ್ಥಿತಗೊಳಿಸಿದನು.॥32॥
ಮೂಲಮ್ - 33
ತೌ ಸಂಪ್ರಯುಕ್ತಂ ತು ರಥಂ ಸಮಾಸ್ಥಿತೌ
ತದಾ ಸಸೀತೌ ರಘುವಂಶವರ್ಧನೌ ।
ಪ್ರಚೋದಯಾಮಾಸ ತತಸ್ತುರಂಗಮಾನ್
ಸ ಸಾರಥಿರ್ಯೇನ ಪಥಾ ತಪೋವನಮ್ ॥
ಅನುವಾದ
ಅನಂತರ ರಘುವಂಶವನ್ನು ವೃದ್ಧಿಪಡಿಸುವ ಶ್ರೀರಾಮನು ಸೀತಾ ಮತ್ತು ಲಕ್ಷ್ಮಣರ ಸಹಿತ ಮರಳಿ ತಂದ ರಥವನ್ನು ಹತ್ತಿದರು. ಮತ್ತೆ ಸಾರಥಿಯು ಕುದುರೆಗಳನ್ನು ತಪೋವನಕ್ಕೆ ಹೋಗುವಂತಹ ಮಾರ್ಗದಲ್ಲಿ ಓಡಿಸಿದನು.॥33॥
ಮೂಲಮ್ - 34
ತತಃ ಸಮಾಸ್ಥಾಯ ರಥಂ ಮಹಾರಥಃ
ಸಸಾರಥಿರ್ದಾಶರಥಿರ್ವನಂ ಯಯೌ ।
ಉದಙ್ಮುಖಂ ತಂ ತು ರಥಂ ಚಕಾರ
ಪ್ರಯಾಣಮಾಂಗಲ್ಯನಿಮಿತ್ತದರ್ಶನಾತ್ ॥
ಅನುವಾದ
ಬಳಿಕ ಸಾರಥಿಸಹಿತ ಮಹಾರಥಿ ಶ್ರೀರಾಮನು ಪ್ರವಾಸಕಾಲದ ಮಂಗಲಸೂಚಕ ಶಕುನಗಳನ್ನು ನೋಡಿ, ಮೊದಲು ಆ ರಥವನ್ನು ಉತ್ತರಾಭಿಮುಖವಾಗಿ ನಿಲ್ಲಿಸಿದನು; ಮತ್ತೆ ಅವನು ಆ ರಥದಲ್ಲಿ ಆರೂಢನಾಗಿ ಕಾಡಿನ ಕಡೆಗೆ ಪ್ರಯಾಣಮಾಡಿದನು.॥34॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ನಲವತ್ತಾರನೆಯ ಸರ್ಗ ಪೂರ್ಣವಾಯಿತು.॥46॥