०४५ तमसातीरगमनम्

वाचनम्
ಭಾಗಸೂಚನಾ

ದಶರಥ-ಭರತನ ವಿಷಯದಲ್ಲಿ ಪ್ರೇಮಭಾವದಿಂದ ಇರುವಂತೆ ಶ್ರೀರಾಮನು ತನ್ನನ್ನು ಅನುಸರಿಸಿ ಬರುತ್ತಿದ್ದ ಪ್ರಜೆಗಳಿಗೆ ಹೇಳಿ ಅಯೋಧ್ಯೆಗೆ ಹಿಂದಿರುಗಿಸಿದುದು, ವೃದ್ಧಬ್ರಾಹ್ಮಣರು ಶ್ರೀರಾಮನನ್ನು ಅಯೋಧ್ಯೆಗೆ ಹಿಂದಿರುಗುವಂತೆ ಆಗ್ರಹ ಪಡಿಸಿದುದು, ಅವರೆಲ್ಲರೊಡನೆ ಶ್ರೀರಾಮನು ತಮಸಾ ನದಿಯ ತೀರಕ್ಕೆ ಹೋದುದು

ಮೂಲಮ್ - 1

ಅನುರಕ್ತಾ ಮಹಾತ್ಮಾನಂ ರಾಮಂ ಸತ್ಯಪರಾಕ್ರಮಮ್ ।
ಅನುಜಗ್ಮುಃ ಪ್ರಯಾಂತಂ ತಂ ವನವಾಸಾಯಮಾನವಾಃ ॥

ಅನುವಾದ

ಅತ್ತ ಸತ್ಯಪರಾಕ್ರಮಿ ಮಹಾತ್ಮಾ ಶ್ರೀರಾಮನು ವನವಾಸಕ್ಕಾಗಿ ಹೋಗುತ್ತಿರುವಾಗ ಅವನ ಕುರಿತು ಅನುರಾಗವುಳ್ಳ ಅನೇಕ ಅಯೋಧ್ಯಾವಾಸಿಗಳು ವನದಲ್ಲಿ ಅವನೊಡನೆ ಇರಲು ಹಿಂದೆ-ಹಿಂದೆ ನಡೆದರು.॥1॥

ಮೂಲಮ್ - 2

ನಿವರ್ತಿತೇಽತೀವ ಬಲಾತ್ ಸುಹೃದ್ ಧರ್ಮೇಣರಾಜನಿ ।
ನೈವ ತೇ ಸಂನ್ಯವರ್ತಂತ ರಾಮಸ್ಯಾನುಗತಾ ರಥಮ್ ॥

ಅನುವಾದ

‘ಯಾರನ್ನು ಬೇಗನೇ ಹಿಂದಿರುಗಬೇಕೆಂದು ಬಯಸುವವರು ಸ್ವಜನರನ್ನು ದೂರದವರೆಗೆ ತಲುಪಿಸಲು ಹೋಗಬಾರದು’ ಮುಂತಾಗಿ ತಿಳಿಸಿ ಸುಹೃದ್ ಧರ್ಮಕ್ಕನುಸಾರ ದಶರಥನನ್ನು ಬಲವಂತವಾಗಿ ಹಿಂದಿರುಗಿಸಿದಾಗಲೂ ಶ್ರೀರಾಮನ ರಥದ ಹಿಂದೆ-ಹಿಂದೆ ಬರುತ್ತಿದ್ದ ಅಯೋಧ್ಯಾವಾಸಿಗಳು ತಮ್ಮ ಮನೆಗಳಿಗೆ ಮರಳಿಹೋಗಲಿಲ್ಲ.॥2॥

ಮೂಲಮ್ - 3

ಅಯೋಧ್ಯಾನಿಲಯಾನಾಂ ಹಿ ಪುರುಷಾಣಾಂ ಮಹಾಯಶಾಃ ।
ಬಭೂವ ಗುಣಸಂಪನ್ನಃ ಪೂರ್ಣಚಂದ್ರ ಇವ ಪ್ರಿಯಃ ॥

ಅನುವಾದ

ಏಕೆಂದರೆ ಅಯೋಧ್ಯಾವಾಸೀ ಜನರಿಗೆ ಸದ್ಗುಣಸಂಪನ್ನ ಮಹಾಯಶಸ್ವೀ ಶ್ರೀರಾಮನು ಪೂರ್ಣಚಂದ್ರನಂತೆ ಪ್ರಿಯನಾಗಿದ್ದನು.॥3॥

ಮೂಲಮ್ - 4

ಸ ಯಾಚ್ಯಮಾನಃ ಕಾಕುತ್ಸ್ಥಸ್ತಾಭಿಃ ಪ್ರಕೃತಿಭಿಸ್ತದಾ ।
ಕುರ್ವಾಣಃ ಪಿತರಂ ಸತ್ಯಂ ವನಮೇವಾನ್ವಪದ್ಯತ ॥

ಅನುವಾದ

ಆ ಪ್ರಜೆಗಳು ಶ್ರೀರಾಮನಲ್ಲಿ ಅರಮನೆಗೆ ಮರಳುವಂತೆ ಬಹಳ ಪ್ರಾರ್ಥಿಸಿದರು. ಆದರೆ ಅವನು ತಂದೆಯ ಸತ್ಯವನ್ನು ರಕ್ಷಿಸಲಿಕ್ಕಾಗಿ ವನದ ಕಡೆಗೆ ಮುಂದರಿದನು.॥4॥

ಮೂಲಮ್ - 5

ಅವೇಕ್ಷಮಾಣಃ ಸಸ್ನೇಹಂ ಚಕ್ಷುಷಾ ಪ್ರಪಿಬನ್ನಿವ ।
ಉವಾಚ ರಾಮಃ ಸಸ್ನೇಹಂ ತಾಃ ಪ್ರಜಾಃ ಸ್ವಾಃ ಪ್ರಜಾ ಇವ ॥

ಅನುವಾದ

ಅವನು ಪ್ರಜಾಜನರನ್ನು ಈ ರೀತಿಯ ಸ್ನೇಹತುಂಬಿದ ದೃಷ್ಟಿಯಿಂದ ನೋಡುತ್ತಿದ್ದನು. ಅವರನ್ನು ಕಣ್ಣುಗಳಿಂದಲೇ ಕುಡಿದುಬಿಡುವಂತೆ ಕಾಣುತ್ತಿತ್ತು. ಆಗ ಶ್ರೀರಾಮನು ತನ್ನ ಮಕ್ಕಳಂತೆ ಪ್ರಿಯರಾದ ಆ ಪ್ರಜಾಜನರಲ್ಲಿ ಸ್ನೇಹದಿಂದ ಹೇಳಿದನು.॥5॥

ಮೂಲಮ್ - 6

ಯಾ ಪ್ರಿತಿರ್ಬಹುಮಾನಶ್ಚ ಮಯ್ಯಯೋಧ್ಯಾನಿವಾಸಿನಾಮ್ ।
ಮತ್ಪ್ರಿಯಾರ್ಥಂ ವಿಶೇಷೇಣ ಭರತೇ ಸಾ ವಿಧೀಯತಾಮ್ ॥

ಅನುವಾದ

ಅಯೋಧ್ಯಾವಾಸಿಗಳ ಪ್ರೇಮಾದರವು ನನ್ನ ಕುರಿತು ಇರುವಂತೆಯೇ ನನ್ನ ಸಂತೋಷಕ್ಕಾಗಿ ಭರತನ ಕುರಿತೂ ಇನ್ನೂ ಹೆಚ್ಚಾಗಿಯೇ ಇರಬೇಕು.॥6॥

ಮೂಲಮ್ - 7

ಸ ಹಿ ಕಲ್ಯಾಣಚಾರಿತ್ರಃ ಕೈಕೇಯ್ಯಾನಂದವರ್ಧನಃ ।
ಕರಿಷ್ಯತಿ ಯಥಾವದ್ವಃ ಪ್ರಿಯಾಣಿ ಚ ಹಿತಾನಿ ಚ ॥

ಅನುವಾದ

ಭರತನ ಚರಿತ್ರವು ಬಹಳ ಸುಂದರ ಮತ್ತು ಎಲ್ಲರ ಕಲ್ಯಾಣ ಮಾಡುವುದಾಗಿದೆ. ಕೈಕೇಯಿಯ ಆನಂದವನ್ನ್ನು ಹೆಚ್ಚಿಸುವ ಭರತನು ನಿಮ್ಮೆಲ್ಲರ ಯಥಾವತ್ ಪ್ರಿಯ ಮತ್ತು ಹಿತ ಮಾಡುವನು.॥7॥

ಮೂಲಮ್ - 8

ಜ್ಞಾನವೃದ್ಧೋ ವಯೋಬಾಲೋಮೃದುರ್ವೀರ್ಯಗುಣಾನ್ವಿತಃ
ಅನುರೂಪಃ ಸ ವೋ ಭರ್ತಾ ಭವಿಷ್ಯತಿ ಭಯಾಪಹಃ ॥

ಅನುವಾದ

ಅವನು ವಯಸ್ಸಿನಲ್ಲಿ ಸಣ್ಣವನಾದರೂ ಜ್ಞಾನದಲ್ಲಿ ದೊಡ್ಡವನಾಗಿದ್ದಾನೆ. ಪರಾಕ್ರಮೋಚಿತ ಗುಣಗಳಿಂದ ಸಂಪನ್ನನಾಗಿದ್ದರೂ ಸ್ವಭಾವತಃ ತುಂಬಾ ಕೋಮಲನಾಗಿದ್ದಾನೆ. ಅವನು ನಿಮ್ಮೆಲ್ಲರಿಗೆ ಯೋಗ್ಯ ರಾಜನಾಗುವನು ಮತ್ತು ಪ್ರಜೆಯ ಭಯವನ್ನು ನಿವಾರಣ ಮಾಡುವನು.॥8॥

ಮೂಲಮ್ - 9

ಸ ಹಿ ರಾಜಗುಣೈರ್ಯುಕ್ತೋ ಯುವರಾಜಃ ಸಮೀಕ್ಷಿತಃ ।
ಆಪಿ ಚಾಪಿ ಮಯಾ ಶಿಷ್ಟೈಃ ಕಾರ್ಯಂ ವೋ ಭರ್ತೃಶಾಸನಮ್ ॥

ಅನುವಾದ

ಅವನು ನನಗಿಂತಲೂ ಹೆಚ್ಚು ರಾಜೋಚಿತ ಗುಣಗಳಿಂದ ಕೂಡಿರುವನು. ಅದಕ್ಕಾಗಿಯೇ ಮಹಾರಾಜರು ಅವನನ್ನು ಯುವರಾಜನನ್ನಾಗಿಸಲು ನಿಶ್ಚಯಿಸಿರುವರು. ಆದ್ದರಿಂದ ನೀವು ನಿಮ್ಮ ಸ್ವಾಮಿ ಭರತನ ಆಜ್ಞೆಯನ್ನು ಸದಾ ಪಾಲಿಸಬೇಕು.॥9॥

ಮೂಲಮ್ - 10

ನ ಸಂತಪ್ಯೇದ್ ಯಥಾ ಚಾಸೌ ವನವಾಸಂ ಗತೇ ಮಯಿ ।
ಮಹಾರಾಜಸ್ತಥಾ ಕಾರ್ಯೋ ಮಮ ಪ್ರಿಯಚಿಕೀರ್ಷಯಾ ॥

ಅನುವಾದ

ನಾನು ವನಕ್ಕೆ ಹೋದ ಬಳಿಕ ಮಹಾರಾಜರು ಯಾವ ವಿಧದಿಂದಲೂ ಶೋಕದಿಂದ ಸಂತಪ್ತರಾಗದಂತೆ ನೀವು ಸದಾ ಪ್ರಯತ್ನಿಸಬೇಕು. ನನಗೆ ಪ್ರಿಯ ಮಾಡುವ ಇಚ್ಛೆಯಿಂದ ನೀವು ನನ್ನ ಈ ಪ್ರಾರ್ಥನೆಯ ಮೇಲೆ ಅವಶ್ಯವಾಗಿ ಗಮನವಿಡಬೇಕು.॥10॥

ಮೂಲಮ್ - 11

ಯಥಾ ಯಥಾ ದಾಶರಥಿರ್ಧರ್ಮಮೇವಾಶ್ರಿತೋ ಭವೇತ್ ।
ತಥಾ ತಥಾ ಪ್ರಕೃತಯೋ ರಾಮಂ ಪತಿಮಕಾಮಯನ್ ॥

ಅನುವಾದ

ದಶರಥನಂದನ ಶ್ರೀರಾಮನು ಧರ್ಮವನ್ನು ಆಶ್ರಯಿಸಲು ದೃಢತೆಯನ್ನು ತೋರಿಸುತ್ತಿದ್ದಂತೆ ಪ್ರಜಾಜನರ ಮನಸ್ಸಿನಲ್ಲಿ ಅವನನ್ನೇ ತಮ್ಮ ಸ್ವಾಮಿಯಾಗಿಸಿಕೊಳ್ಳುವ ಇಚ್ಛೆ ಪ್ರಬಲವಾಗುತ್ತಾ ಹೋಯಿತು.॥11॥

ಮೂಲಮ್ - 12

ಬಾಷ್ಪೇಣ ಪಿಹಿತಂ ದೀನಂ ರಾಮಃ ಸೌಮಿತ್ರಿಣಾ ಸಹ ।
ಚಕರ್ಷೇವಗುಣೈರ್ಬದ್ಧಂ ಜನಂ ಪುರನಿವಾಸಿನಮ್ ॥

ಅನುವಾದ

ಸಮಸ್ತ ಪುರವಾಸಿಗಳು ಅತ್ಯಂತ ದೀನರಾಗಿ ಕಣ್ಣೀರು ಸುರಿಸುತ್ತಿದ್ದರು ಹಾಗೂ ಲಕ್ಷ್ಮಣಸಹಿತ ಶ್ರೀರಾಮನು ತನ್ನ ಗುಣಗಳಿಂದ ಬಂಧಿಸಿ ಅವರನ್ನು ಸೆಳೆಯುತ್ತಿದ್ದನೋ ಎಂಬಂತಿತ್ತು.॥12॥

ಮೂಲಮ್ - 13

ತೇ ದ್ವಿಜಾಸ್ತ್ರಿವಿಧಂ ವೃದ್ಧಾ ಜ್ಞಾನೇನ ವಯಸೌಜಸಾ ।
ವಯಃಪ್ರಕಂಪಶಿರಸೋ ದೂರಾದೂಚುರಿದಂ ವಚಃ ॥

ಅನುವಾದ

ಅವರಲ್ಲಿ ಜ್ಞಾನ, ವಯಸ್ಸು ಮತ್ತು ತಪೋಬಲದ ದೃಷ್ಟಿಯಿಂದ ಹಿರಿಯರಾದ ಅನೇಕ ಬ್ರಾಹ್ಮಣರಿದ್ದರು. ವೃದ್ಧಾವಸ್ಥೆಯಿಂದಾಗಿ ಅವರ ತಲೆ ಅಲುಗಾಡುತ್ತಿತ್ತು. ಅವರು ದೂರದಿಂದಲೇ ಈ ಪ್ರಕಾರ ಹೇಳಿದರು.॥13॥

ಮೂಲಮ್ - 14

ವಹಂತೋ ಜವನಾ ರಾಮಂ ಭೋ ಭೋ ಜಾತ್ಯಾಸ್ತುರಂಗಮಾಃ ।
ನಿವರ್ತಧ್ವಂ ನ ಗಂತವ್ಯಂ ಹಿತಾ ಭವತು ಭರ್ತರಿ ॥

ಅನುವಾದ

ಓ ವೇಗವಾಗಿ ನಡೆಯುವ ಉತ್ತಮ ಜಾತಿಯ ಕುದುರೆಗಳಿರಾ! ನೀವು ಬಹಳ ವೇಗಶಾಲಿಗಳಾಗಿದ್ದೀರಿ ಹಾಗೂ ಶ್ರೀರಾಮನನ್ನು ಕಾಡಿನ ಕಡೆಗೆ ಕೊಂಡುಹೋಗುತ್ತಿರುವಿರಿ. ಮರಳಿರಿ! ನಿಮ್ಮ ಸ್ವಾಮಿಯ ಹಿತೈಷಿಗಳಾಗಿರಿ. ನೀವು ವನಕ್ಕೆ ಹೋಗಬಾರದು.॥14॥

ಮೂಲಮ್ - 15

ಕರ್ಣವಂತಿ ಹಿಭೂತಾನಿ ವಿಶೇಷೇಣ ತುರಂಗಮಾಃ ।
ಯೂಯಂ ತಸ್ಮಾನ್ನಿವರ್ತಧ್ವಂ ಯಾಚನಾಂ ಪ್ರತಿವೇದಿತಾಃ ॥

ಅನುವಾದ

ಎಲ್ಲ ಪ್ರಾಣಿಗಳಿಗೂ ಕಿವಿಗಳು ಇರುತ್ತವೆ. ಆದರೆ ಕುದುರೆಗಳ ಕಿವಿಗಳು ಉದ್ದವಾಗುತ್ತವೆ. ಆದ್ದರಿಂದ ನಿಮಗೆ ನಾನು ಹೇಳಿದುದು ಕೇಳಿಸಿಯೇ ಇರಬೇಕು. ಅದಕ್ಕಾಗಿ ಮನೆಯ ಕಡೆಗೆ ಹೊರಳಿರಿ.॥15॥

ಮೂಲಮ್ - 16

ಧರ್ಮತಃ ಸ ವಿಶುದ್ಧಾತ್ಮಾ ವೀರಃ ಶುಭದೃಢವ್ರತಃ ।
ಉಪವಾಹ್ಯಸ್ತು ವೋ ಭರ್ತಾ ನಾಪವಾಹ್ಯಃ ಪುರಾದ್ ವನಮ್ ॥

ಅನುವಾದ

ನಿಮ್ಮ ಸ್ವಾಮಿ ಶ್ರೀರಾಮನು ವಿಶುದ್ಧಾತ್ಮಾ, ವೀರ ಮತ್ತು ಉತ್ತಮ ವ್ರತವನ್ನು ದೃಢತೆಯಿಂದ ಪಾಲಿಸುವವನಾಗಿದ್ದಾನೆ. ಆದ್ದರಿಂದ ನೀವು ಇವನನ್ನು ಕಾಡಿಗೆ ಕೊಂಡು ಹೋಗಬಾರದು. ನಗರದಿಂದ ವನಕ್ಕೆ ಕರೆದುಕೊಂಡು ಹೋಗುವುದು ನಿಮಗೆಂದಿಗೂ ಉಚಿತವಲ್ಲ.॥16॥

ಮೂಲಮ್ - 17

ಏವಮಾರ್ತಪ್ರಲಾಪಾಂಸ್ತಾನ್ ವೃದ್ಧಾನ್ ಪ್ರಲಪತೋ ದ್ವಿಜಾನ್ ।
ಅವೇಕ್ಷ್ಯಸಹಸಾ ರಾಮೋ ರಥಾದವತತಾರ ಹ ॥

ಅನುವಾದ

ವೃದ್ಧಬ್ರಾಹ್ಮಣರು ಹೀಗೆ ಆರ್ತಭಾವದಿಂದ ಪ್ರಲಾಪಿಸುವುದನ್ನು ನೋಡಿ ಶ್ರೀರಾಮಚಂದ್ರನು ಸಟ್ಟನೇ ರಥದಿಂದ ಕೆಳಗೆ ಇಳಿದನು.॥17॥

ಮೂಲಮ್ - 18

ಪದ್ಭ್ಯಾಮೇವ ಜಗಾಮಾಥ ಸಸೀತಃ ಸಹಲಕ್ಷ್ಮಣಃ ।
ಸಂನಿಕೃಷ್ಟಪದನ್ಯಾಸೋ ರಾಮೋ ವನಪರಾಯಣಃ ॥

ಅನುವಾದ

ಅವನು ಸೀತಾ-ಲಕ್ಷ್ಮಣರೊಂದಿಗೆ ಕಾಲ್ನಡಿಗೆಯಿಂದಲೇ ಹೋಗತೊಡಗಿದನು. ಬ್ರಾಹ್ಮಣರ ಜೊತೆ ಬಿಡಬಾರದೆಂದು ಮೆಲ್ಲ-ಮೆಲ್ಲನೆ ಹೆಜ್ಜೆಯನ್ನಿಡುತ್ತಾ ನಡೆಯುತ್ತಿದ್ದನು. ವನಕ್ಕೆ ಹೋಗುವುದೇ ಅವನ ಪರಮ ಲಕ್ಷ್ಯವಾಗಿತ್ತು.॥18॥

ಮೂಲಮ್ - 19

ದ್ವಿಜಾತೀನ್ ಹಿ ಪದಾತೀಂಸ್ತಾನ್ ರಾಮಶ್ಚಾರಿತ್ರವತ್ಸಲಃ ।
ನ ಶಶಾಕ ಘೃಣಾಚಕ್ಷುಃ ಪರಿಮೋಕ್ತುಂ ರಥೇನ ಸಃ ॥

ಅನುವಾದ

ಶ್ರೀರಾಮಚಂದ್ರನ ಚರಿತ್ರೆಯಲ್ಲಿ ವಾತ್ಸಲ್ಯಗುಣದ ಪ್ರಧಾನತೆ ಇತ್ತು. ಅವನ ದೃಷ್ಟಿಯಲ್ಲಿ ದಯೆ ತುಂಬಿತ್ತು. ಅದಕ್ಕಾಗಿ ಅವನು ರಥದಲ್ಲಿ ಹೋಗಿ ಕಾಲ್ನಡಿಗೆಯಿಂದ ಹೋಗುತ್ತಿದ್ದ ಬ್ರಾಹ್ಮಣರನ್ನು ಹಿಂದಕ್ಕೆ ಹಾಕಲು ಬಯಸುತ್ತಿರಲಿಲ್ಲ.॥19॥

ಮೂಲಮ್ - 20

ಗಚ್ಛಂತಮೇವ ತಂ ದೃಷ್ಟ್ವಾ ರಾಮಂ ಸಂಭ್ರಾಂತಮಾನಸಾಃ ।
ಊಚುಃ ಪರಮಸಂತಪ್ತಾ ರಾಮಂ ವಾಕ್ಯಮಿದಂ ದ್ವಿಜಾಃ ॥

ಅನುವಾದ

ಶ್ರೀರಾಮನು ಈಗಲೂ ಕಾಡಿನ ಕಡೆಗೆ ಹೋಗುತ್ತಿರುವುದನ್ನು ನೋಡಿ ಆ ಬ್ರಾಹ್ಮಣರು ಮನಸ್ಸಿನಲ್ಲೇ ಗಾಬರಿಗೊಂಡರು. ಅತ್ಯಂತ ಸಂತಪ್ತರಾಗಿ ಅವರು ರಾಮನಲ್ಲಿ ಇಂತೆಂದರು.॥20॥

ಮೂಲಮ್ - 21

ಬ್ರಾಹ್ಮಣ್ಯಂ ಕೃತ್ನ್ಸಮೇತತ್ ತ್ವಾಂ ಬ್ರಹ್ಮಣ್ಯಮನುಗಚ್ಛತಿ ।
ದ್ವಿಜಸ್ಕಂಧಾಧಿರೂಢಾಸ್ತ್ವಾಮಗ್ನಯೋಽಪ್ಯನುಯಾಂತ್ವಮೀ ॥

ಅನುವಾದ

ರಘುನಂದನ! ನೀನು ಬ್ರಾಹ್ಮಣರ ಹಿತೈಷಿಯಾಗಿರುವೆ. ಅದರಿಂದಲೇ ಈ ಎಲ್ಲ ಬ್ರಾಹ್ಮಣ ಸಮಾಜ ನಿನ್ನ ಹಿಂದೆ- ಹಿಂದೆ ಬರುತ್ತಿದೆ. ಈ ಬ್ರಾಹ್ಮಣರ ಹೆಗಲೇರಿ ಯಜ್ಞೇಶ್ವರನೂ ನಿನ್ನನ್ನು ಅನುಸರಿಸುತ್ತಿರುವನು.॥21॥

ಮೂಲಮ್ - 22

ವಾಜಪೇಯಸಮುತ್ಥಾನಿ ಛತ್ರಾಣ್ಯೇತಾನಿ ಪಶ್ಯ ನಃ ।
ಪೃಷ್ಠತೋನುಪ್ರಯಾತಾನಿ ಮೇಘಾನಿವ ಜಲಾತ್ಯಯೇ ॥

ಅನುವಾದ

ಮಳೆಗಾಲ ಕಳೆದು ಶರದ್ಋತುವಿನಲ್ಲಿ ಕಂಡುಬರುವ ಬಿಳಿಯ ಮೋಡಗಳಂತೆ ನಮ್ಮ ಈ ಶ್ವೇತಛತ್ರಗಳನ್ನು ನೋಡು, ನಿನ್ನ ಹಿಂದೆ-ಹಿಂದೆ ಹೊರಟಿವೆ. ಇವು ನಮಗೆ ವಾಜಪೇಯ ಯಜ್ಞದಲ್ಲಿ ಪ್ರಾಪ್ತವಾಗಿದ್ದವು.॥22॥

ಮೂಲಮ್ - 23

ಅನವಾಪ್ತಾತಪತ್ರಸ್ಯ ರಶ್ಮಿಸಂತಾಪಿತಸ್ಯ ತೇ ।
ಏಭಿಶ್ಛಾಯಾಂ ಕರಿಷ್ಯಾಮಃ ಸ್ವೈಶ್ಛತ್ರೈರ್ವಾಜಪೇಯಿಕೈಃ ॥

ಅನುವಾದ

ನಿನಗೆ ರಾಜಚಿಹ್ನೆಯಾದ ಶ್ವೇತಚ್ಛತ್ರ ಸಿಗಲಿಲ್ಲ, ಅದರಿಂದ ನೀನು ಸೂರ್ಯನ ಕಿರಣಗಳಿಂದ ಸಂತಪ್ತನಾಗುತ್ತಿರುವೆ. ಈ ಸ್ಥಿತಿಯಲ್ಲಿ ನಾವು ವಾಜಪೇಯ ಯಜ್ಞದಲ್ಲಿ ದೊರೆತ ಈ ನಮ್ಮ ಛತ್ರಗಳಿಂದ ನಿನಗೆ ನೆರಳು ನೀಡುವೆವು.॥23॥

ಮೂಲಮ್ - 24

ಯಾ ಹಿ ನಃ ಸತತಂಬುದ್ಧಿರ್ವೇದಮಂತ್ರಾನುಸಾರಿಣೀ ।
ತ್ವತ್ಕೃತೇ ಸಾ ಕೃತಾ ವತ್ಸ ವನವಾಸಾನುಸಾರಿಣೀ ॥

ಅನುವಾದ

ವತ್ಸ! ನಮ್ಮ ಬುದ್ಧಿಯು ಸದಾ ವೇದಮಂತ್ರಗಳ ಹಿಂದೆ ಹೋಗುತ್ತಿತ್ತು, ಅದರ ಚಿಂತನೆಯಲ್ಲೇ ತೊಡಗಿರುತ್ತಿತ್ತು. ಅದು ಇಂದು ನಿನ್ನ ಹಿಂದೆ ವನವಾಸವನ್ನು ಅನುಸರಿಸುವಂತಾಯಿತು.॥24॥

ಮೂಲಮ್ - 25

ಹೃದಯೇಷ್ವವತಿಷ್ಠಂತೇ ವೇದಾ ಯೇ ನಃ ಪರಂಧನಮ್ ।
ವತ್ಸ್ಯಂತ್ಯ ಪಿಗೃಹೇಷ್ವೇವ ದಾರಾಶ್ಚಾರಿತ್ರರಕ್ಷಿತಾಃ ॥

ಅನುವಾದ

ನಮ್ಮ ಪರಮ ಧನ ವೇದಗಳು ನಮ್ಮ ಹೃದಯದಲ್ಲಿ ಸ್ಥಿತವಾಗಿವೆ. ನಮ್ಮ ಪತ್ನಿಯರು ತಮ್ಮ ಚರಿತ್ರ ಬಲದಿಂದ ಸುರಕ್ಷಿತರಾಗಿ ಮನೆಗಳಲ್ಲೇ ಇರುವರು.॥25॥

ಮೂಲಮ್ - 26

ಪುನರ್ನ ನಿಶ್ಚಯಃ ಕಾರ್ಯಸ್ತ್ವದ್ಗತೌ ಸುಕೃತಾ ಮತಿಃ ।
ತ್ವಯಿ ಧರ್ಮವ್ಯಪೇಕ್ಷೇ ತು ಕಿಂ ಸ್ಯಾದ್ಧರ್ಮಪಥೇ ಸ್ಥಿತಮ್ ॥

ಅನುವಾದ

ಈಗ ನಾವು ನಮ್ಮ ಕರ್ತವ್ಯಗಳ ವಿಷಯದಲ್ಲಿ ಪುನಃ ಏನನ್ನೂ ನಿಶ್ಚಯಿಸುವುದಿಲ್ಲ. ನಾವು ನಿನ್ನ ಜೊತೆಗೆ ಬರುವ ವಿಚಾರ ಸ್ಥಿರ ಮಾಡಿಕೊಂಡಿರುವೆವು. ಹೀಗಿದ್ದರೂ ಇಷ್ಟು ಹೇಳುವುದು ಅವಶ್ಯವಾಗಿದೆ. ನೀನೇ ಬ್ರಾಹ್ಮಣರ ಆಜ್ಞಾಪಾಲನ ರೂಪೀ ಧರ್ಮದ ಕುರಿತು ನಿರಪೇಕ್ಷನಾದಾಗ ಬೇರೆ ಯಾವ ಪ್ರಾಣಿ ಧರ್ಮಮಾರ್ಗದಲ್ಲಿ ಸ್ಥಿರವಾಗಿರುವದು.॥26॥

ಮೂಲಮ್ - 27

ಯಾಚಿತೋ ನೋ ನಿವರ್ತಸ್ವ ಹಂಸಶುಕ್ಲಶಿರೋರುಹೈಃ ।
ಶಿರೋಭಿರ್ನಿಭೃತಾಚಾರ ಮಹೀಪತನಪಾಂಸುಲೈಃ ॥

ಅನುವಾದ

ಸದಾಚಾರವನ್ನು ಪೋಷಿಸುವ ಶ್ರೀರಾಮ! ನಮ್ಮ ತಲೆಯ ಕೂದಲು ಹಣ್ಣಾಗಿ ಹಂಸದಂತೆ ಬೆಳ್ಳಗೆ ಆಗಿವೆ. ಪೃಥಿವಿಯಲ್ಲಿ ಸಾಷ್ಟಾಂಗ ನಮಸ್ಕಾರ ಮಾಡುವುದರಿಂದ ಅವುಗಳಲ್ಲಿ ಧೂಳು ತುಂಬಿದೆ. ನಾವು ತಲೆಬಾಗಿ ನಿನ್ನಲ್ಲಿ - ‘ನೀನು ಮನೆಗೆ ಮರಳು’ ಎಂದು ಯಾಚಿಸುತ್ತಿದ್ದೇವೆ. (ಆ ತತ್ತ್ವಜ್ಞ ಬ್ರಾಹ್ಮಣರು ಶ್ರೀರಾಮನು ಸಾಕ್ಷಾತ್ ಭಗವಾನ್ ವಿಷ್ಣು ಆಗಿದ್ದಾನೆ ಎಂಬುದನ್ನು ತಿಳಿದಿದ್ದರು. ಅದರಿಂದ ಅವರು ಶ್ರೀರಾಮನಿಗೆ ಪ್ರಣಾಮ ಮಾಡಿದುದು ದೋಷದ ಸಂಗತಿಯಲ್ಲ.॥27॥

ಮೂಲಮ್ - 28

ಬಹೂನಾಂ ವಿತತಾ ಯಜ್ಞಾ ದ್ವಿಜಾನಾಂ ಯ ಇಹಾಗತಾಃ ।
ಶೇಷಾಂ ಸಮಾಪ್ತಿರಾಯತ್ತಾತವ ವತ್ಸ ನಿರ್ವರ್ತನೇ ॥

ಅನುವಾದ

(ಇಷ್ಟಾದರೂ ಶ್ರೀರಾಮನು ನಿಂತಿಲ್ಲ, ಆಗ ಆ ಬ್ರಾಹ್ಮಣರು ಹೇಳಿದರು -) ವತ್ಸ! ಇಲ್ಲಿ ಬಂದಿರುವವರಲ್ಲಿ ಅನೇಕ ಬ್ರಾಹ್ಮಣರು ಯಜ್ಞವನ್ನು ಪ್ರಾರಂಭಿಸಿರುವರು. ಈಗ ಇವರ ಯಜ್ಞದ ಸಮಾಪ್ತಿ ನೀನು ಮರಳಿ ಬರುವುದರಿಂದಲೇ ಆಗುವುದು.॥28॥

ಮೂಲಮ್ - 29

ಭಕ್ತಿಮಂತೀಹಿ ಭೂತಾನಿ ಜಂಗಮಾಜಂಗಮಾನಿ ಚ ।
ಯಾಚಮಾನೇಷು ತೇಷು ತ್ವಂ ಭಕ್ತಿಂ ಭಕ್ತೇಷು ದರ್ಶಯ ॥

ಅನುವಾದ

ಜಗತ್ತಿನ ಸ್ಥಾವರ-ಜಂಗಮ ಎಲ್ಲ ಪ್ರಾಣಿಗಳು ನಿನ್ನಲ್ಲಿ ಭಕ್ತಿಯನ್ನಿಟ್ಟಿರುವರು. ಅವರೆಲ್ಲರೂ ನೀನು ಮರಳಬೇಕೆಂದು ಪ್ರಾರ್ಥಿಸುತ್ತಾ ಇದ್ದಾರೆ. ನಿನ್ನ ಆ ಭಕ್ತರ ಮೇಲೆ ಸ್ನೇಹವನ್ನು ತೋರು.॥29॥

ಮೂಲಮ್ - 30

ಅನುಗಂತುಮಶಕ್ತಾಸ್ತ್ವಾಂ ಮೂಲೈರುದ್ಧತವೇಗಿನಃ ।
ಉನ್ನತಾ ವಾಯುವೇಗೇನ ವಿಕ್ರೋಶಂತೀವ ಪಾದಪಾಃ ॥

ಅನುವಾದ

ಈ ವೃಕ್ಷಗಳು ಬೇರುಗಳಿಂದಾಗಿ ನಡೆಯಲಾರವು, ಆದ್ದರಿಂದ ನಿನ್ನ ಹಿಂದೆ ಬರಲಾರವು; ಆದರೆ ಗಾಳಿಯ ವೇಗದಿಂದ ರೆಂಬೆಗಳನ್ನು ಮೇಲಕ್ಕೆ ಹಾರಿಸುತ್ತಾ ರಾಮಾ! ರಾಮಾ! ಎಂದು ಕೂಗಿಕೊಳ್ಳುತ್ತಿವೆಯೋ ಎಂಬಂತೆ ಕಾಣುತ್ತಿದೆ.॥30॥

ಮೂಲಮ್ - 31

ನಿಶ್ಚೇಷ್ಟಾಹಾರಸಂಚಾರಾ ವೃಕ್ಷೈಕಸ್ಥಾನನಿಶ್ಚಿತಾಃ ।
ಪಕ್ಷಿಣೋಽಪಿ ಪ್ರಯಾಚಂತೇ ಸರ್ವಭೂತಾನುಕಂಪಿನಮ್ ॥

ಅನುವಾದ

ರಾಮಭದ್ರ! ಈ ಪಕ್ಷಿಗಳನ್ನು ನೋಡು! ಅವು ಆಹಾರಕ್ಕಾಗಿಯೂ ಸಂಚರಿಸದೆ ಮರದ ಒಂದು ಮೂಲೆಯಲ್ಲಿ ಕುಳಿತು ಸರ್ವಪ್ರಾಣಿಗಳ ವಿಷಯದಲ್ಲಿ ಅತ್ಯಂತ ದಯಾಪರನಾದ ನಿನ್ನ ಹಿಂದಿರುಗುವಿಕೆಯನ್ನೇ ಪ್ರಾರ್ಥಿಸುತ್ತಿರುವವು.॥31॥

ಮೂಲಮ್ - 32

ಏವಂ ವಿಕ್ರೋಶತಾಂ ತೇಷಾಂ ದ್ವಿಜಾತೀನಾಂ ನಿವರ್ತನೇ ।
ದದೃಶೇ ತಮಸಾತತ್ರ ವಾರಯಂತೀವ ರಾಘವಮ್ ॥

ಅನುವಾದ

ಹೀಗೆ ಶ್ರೀರಾಮನಲ್ಲಿ ಮರಳಲಿಕ್ಕಾಗಿ ಕೂಗುತ್ತಾ ಇರುವ ಬ್ರಾಹ್ಮಣರ ಮೇಲೆ ಕೃಪೆ ಮಾಡಲಿಕ್ಕಾಗಿ ದಾರಿಯಲ್ಲಿ ಓರೆಯಾಗಿ ಹರಿಯುವ ತಮಸಾ ನದಿ ಕಂಡು ಬಂತು. ಅದು ಶ್ರೀರಘುನಾಥನನ್ನು ತಡೆಯುತ್ತಿದೆಯೋ ಎಂದೆನಿಸುತ್ತಿತ್ತು.॥32॥

ಮೂಲಮ್ - 33

ತತಃ ಸುಮಂತ್ರೋಽಪಿ ರಥಾದ್ವಿಮುಚ್ಯ
ಶ್ರಾಂತಾನ್ ಹಯಾನ್ಸಂಪರಿವರ್ತ್ಯ ಶೀಘ್ರಮ್
ಪೀತೋದಕಾಂಸ್ತೋಯಪರಿಪ್ಲುತಾಂಗಾ-
ನಚಾರಯದ್ ವೈ ತಮಸಾವಿದೂರೇ ॥

ಅನುವಾದ

ಅಲ್ಲಿಗೆ ತಲುಪಿದಾಗ ಸುಮಂತ್ರನು ಬಳಲಿದ ಕುದುರೆಗಳನ್ನು ರಥದಿಂದ ಬಿಚ್ಚಿ, ಅವಕ್ಕೆ ನೀರು ಕುಡಿಸಿ, ಮೈತೊಳೆದು ತಮಸಾ ತೀರದಲ್ಲಿ ಮೇಯಲು ಬಿಟ್ಟನು.॥33॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ನಲವತೈದನೆಯ ಸರ್ಗ ಪೂರ್ಣವಾಯಿತು.॥45॥