०४२ दशरथविलापः

वाचनम्
ಭಾಗಸೂಚನಾ

ದಶರಥರಾಜನು ಮೂರ್ಛಿತನಾಗಿ ನೆಲಕ್ಕೆ ಬಿದ್ದು ಶ್ರೀರಾಮನಿಗಾಗಿ ವಿಲಪಿಸಿದುದು, ಕೈಕೇಯಿಯು ತನ್ನ ಬಳಿಗೆ ಬರಲು ವಿರೋಧಿಸಿದುದು, ಕೌಸಲ್ಯೆಯ ಸಹಾಯದಿಂದ ಅವಳ ಅಂತಃಪುರಕ್ಕೆ ಹೋದುದು, ಅಲ್ಲಿಯೂ ಶ್ರೀರಾಮನ ಸಲುವಾಗಿ ದುಃಖಿಸಿದುದು

ಮೂಲಮ್ - 1

ಯಾವತ್ತು ನಿರ್ಯತಸ್ತಸ್ಯ ರಜೋರೂಪಮದೃಶ್ಯತ ।
ನೈವೇಕ್ಷ್ವಾಕುವರಸ್ತಾವತ್ ಸಂಜಹಾರಾತ್ಮಚಕ್ಷುಷೀ ॥

ಅನುವಾದ

ವನದ ಕಡೆಗೆ ಹೋಗುತ್ತಿರುವ ಶ್ರೀರಾಮನ ರಥದ ಧೂಳು ಕಂಡುಬರುವ ತನಕ ಇಕ್ಷ್ವಾಕುವಂಶದ ಸ್ವಾಮಿ ದಶರಥನು ತನ್ನ ಕಣ್ಣುಗಳನ್ನು ಅಲ್ಲೇ ನೆಟ್ಟಿದ್ದನು.॥1॥

ಮೂಲಮ್ - 2

ಯಾವದ್ ರಾಜಾ ಪ್ರಿಯಂ ಪುತ್ರಂ ಪಶ್ಯತ್ಯತ್ಯಂತ ಧಾರ್ಮಿಕಮ್ ।
ತಾವದ್ ವ್ಯವರ್ಧತೇವಾಸ್ಯ ಧರಣ್ಯಾಂ ಪುತ್ರದರ್ಶನೇ ॥

ಅನುವಾದ

ಆ ಮಹಾರಾಜನು ತನ್ನ ಅತ್ಯಂತ ಧಾರ್ಮಿಕ ಪ್ರಿಯ ಪುತ್ರನನ್ನು ನೋಡುತ್ತಿರುವವರೆಗೆ ಮತ್ತು ಅವನನ್ನು ನೋಡಲಿಕ್ಕಾಗಿ ಶರೀರವನ್ನು ಎತ್ತರಿಸಿಕೊಂಡಿದ್ದನು. ತುದಿಕಾಲಿನಲ್ಲಿ ನಿಂತು ಅವಲೋಕಿಸುತ್ತಿದ್ದನು.॥2॥

ಮೂಲಮ್ - 3

ನ ಪಶ್ಯತಿ ರಜೋಽಪ್ಯಸ್ಯ ಯದಾ ರಾಮಸ್ಯ ಭೂಮಿಪಃ ।
ತದಾರ್ತಶ್ಚ ನಿಷಣ್ಣಶ್ಚ ಪಪಾತ ಧರಣೀತಲೇ ॥

ಅನುವಾದ

ರಾಜನಿಗೆ ಶ್ರೀರಾಮನ ರಥದ ಧೂಳೂ ಕಾಣದಿದ್ದಾಗ ಅವನು ಅತ್ಯಂತ ಆರ್ತ ಮತ್ತು ವಿಷಾದಗ್ರಸ್ತನಾಗಿ ನೆಲದಲ್ಲಿ ಬಿದ್ದುಬಿಟ್ಟನು.॥3॥

ಮೂಲಮ್ - 4

ತಸ್ಯ ದಕ್ಷಿಣಮನ್ವಾಗಾತ್ ಕೌಸಲ್ಯಾ ಬಾಹುಮಂಗನಾ ।
ಪರಂ ಚಾಸ್ಯಾನ್ವಗಾತ್ಪಾರ್ಶ್ವಂ ಕೈಕೇಯೀ ಸಾಸುಮಧ್ಯಮಾ॥

ಅನುವಾದ

ಆಗ ಅವನಿಗೆ ಆಸರೆಯನ್ನು ಕೊಡಲು ಅವನ ಧರ್ಮಪತ್ನೀ ಕೌಸಲ್ಯಾದೇವಿಯು ಬಲಕೈಯ ಬಳಿಗೆ ಬಂದಳು ಮತ್ತು ಸುಂದರೀ ಕೈಕೇಯಿಯು ಆತನ ಎಡಭಾಗದಲ್ಲಿ ಬಂದುನಿಂತಳು.॥4॥

ಮೂಲಮ್ - 5

ತಾಂ ನಯೇನ ಚ ಸಂಪನ್ನೋ ಧರ್ಮೇಣ ವಿನಯೇನ ಚ ।
ಉವಾಚ ರಾಜಾ ಕೈಕೇಯೀಂ ಸಮೀಕ್ಷ್ಯ ವ್ಯಥಿತೇಂದ್ರಿಯಃ ॥

ಅನುವಾದ

ಕೈಕೇಯಿಯನ್ನು ನೋಡುತ್ತಲೇ ನಯ, ವಿನಯ ಮತ್ತು ಧರ್ಮಸಂಪನ್ನ ದಶರಥನ ಸಮಸ್ತ ಇಂದ್ರಿಯಗಳು ವ್ಯಥಿತವಾದುವು. ಅವನು ಹೇಳಿದನು.॥5॥

ಮೂಲಮ್ - 6

ಕೈಕೇಯಿ ಮಾಮಕಾಂಗಾನಿ ಮಾ ಸ್ಪ್ರಾಕ್ಷೀಃ ಪಾಪನಿಶ್ಚಯೇ ।
ನಹಿ ತ್ವಾಂ ದ್ರಷ್ಟುಮಿಚ್ಛಾಮಿ ನ ಭಾರ್ಯಾ ನ ಚ ಬಾಂಧವೀ ॥

ಅನುವಾದ

ಪಾಪಪೂರ್ಣ ವಿಚಾರ ಮಾಡುವ ಕೈಕೇಯಿ! ನೀನು ನನ್ನ ಶರೀರವನ್ನು ಮುಟ್ಟಬೇಡ. ನಾನು ನಿನ್ನನ್ನು ನೋಡಲು ಬಯಸುವುದಿಲ್ಲ. ನೀನು ನನ್ನ ಭಾರ್ಯೆಯಾಗಲೀ ಬಂಧುವಾಗಲೀ ಅಲ್ಲವೇ ಅಲ್ಲ.॥6॥

ಮೂಲಮ್ - 7

ಯೇ ಚ ತ್ವಾಮನುಜೀವಂತಿ ನಾಹಂ ತೇಷಾಂ ನ ತೇ ಮಮ ।
ಕೇವಲಾರ್ಥಪರಾಂ ಹಿ ತ್ವಾಂ ತ್ಯಕ್ತಧರ್ಮಾಂ ತ್ಯಜಾಮ್ಯಹಮ್ ॥

ಅನುವಾದ

ನಿನ್ನನ್ನು ಆಶ್ರಯಿಸಿ ಜೀವನ ನಡೆಸುವವರಿಗೆ ನಾನು ಒಡೆಯನಲ್ಲ ಹಾಗೂ ಅವರು ನನಗೆ ಪರಿಜನರೂ ಅಲ್ಲ. ನೀನು ಕೇವಲ ಧನದಲ್ಲಿ ಆಸಕ್ತಳಾಗಿ ಧರ್ಮವನ್ನು ತ್ಯಜಿಸಿರುವೆ. ಅದಕ್ಕಾಗಿ ನಾನು ನಿನ್ನನ್ನು ಪರಿತ್ಯಜಿಸುತ್ತಿದ್ದೇನೆ.॥7॥

ಮೂಲಮ್ - 8

ಅಗೃಹ್ಣಾಂ ಯಚ್ಚ ತೇ ಪಾಣಿಮಗ್ನಿಂ ಪರ್ಯಣಯಂ ಚ ಯತ್ ।
ಅನುಜಾನಾಮಿ ತತ್ ಸರ್ವಮಸ್ಮಿನ್ ಲೋಕೇ ಪರತ್ರ ಚ ॥

ಅನುವಾದ

ನಾನು ನಿನ್ನನ್ನು ಪಾಣಿಗ್ರಹಣ ಮಾಡಿದುದು, ನಿನ್ನೊಂದಿಗೆ ಅಗ್ನಿಗೆ ಪ್ರದಕ್ಷಿಣೆ ಮಾಡಿದುದು ಮುಂತಾದ ನಿನ್ನೊಂದಿಗೆ ಇರುವ ಎಲ್ಲ ಸಂಬಂಧವನ್ನು ಲೋಕ ಮತ್ತು ಪರಲೋಕಕ್ಕಾಗಿ ತ್ಯಜಿಸಿಬಿಡುತ್ತಿದ್ದೇನೆ.॥8॥

ಮೂಲಮ್ - 9

ಭರತಶ್ಚೇಪ್ರತೀತಃ ಸ್ಯಾದ್ರಾಜ್ಯಂ ಪ್ರಾಪ್ಯೈದಮವ್ಯಯಮ್ ।
ಯನ್ಮೇ ಸ ದದ್ಯಾದ್ ಪಿತ್ರರ್ಥಂ ಮಾ ಮಾಂ ತದ್ದತ್ತಮಾಗಮತ್ ॥

ಅನುವಾದ

ನಿನ್ನ ಪುತ್ರ ಭರತನೂ ಈ ವಿಘ್ನಬಾಧೆಗಳಿಲ್ಲದ ರಾಜ್ಯವನ್ನು ಪಡೆದು ಪ್ರಸನ್ನನಾದರೆ, ಅವನು ನನಗಾಗಿ ಮಾಡುವ ಶ್ರಾದ್ಧದಲ್ಲಿನ ಪಿಂಡದಾನ, ತರ್ಪಣಗಳು ನನಗೆ ಸಿಗದೇ ಹೋಗಲಿ.॥9॥

ಮೂಲಮ್ - 10

ಅಥ ರೇಣುಸಮುಧ್ವಸ್ತಂ ತಮುತ್ಥಾಪ್ಯ ನರಾಧಿಪಮ್ ।
ನ್ಯವರ್ತತತದಾ ದೇವೀ ಕೌಸಲ್ಯಾ ಶೋಕಕರ್ಶಿತಾ ॥

ಅನುವಾದ

ಅನಂತರ ಶೋಕದಿಂದ ಕಾತರಳಾದ ಕೌಸಲ್ಯಾದೇವಿಯು ಆಗ ನೆಲದಲ್ಲಿ ಒರಗಿದ ಕಾರಣ ಧೂಳಿನಿಂದ ವ್ಯಾಪ್ತನಾದ ಮಹಾರಾಜರನ್ನು ಎಬ್ಬಿಸಿ ತನ್ನ ಅಂತಃಪುರಕ್ಕೆ ಕರೆದುಕೊಂಡು ಹೋದಳು.॥10॥

ಮೂಲಮ್ - 11

ಹತ್ವೇವ ಬ್ರಾಹ್ಮಣಂ ಕಾಮಾತ್ ಸ್ಪೃಷ್ಟ್ವಾಗ್ನಿಮಿವ ಪಾಣಿನಾ ।
ಅನ್ವತಪ್ಯತ ಧರ್ಮಾತ್ಮಾ ಪುತ್ರಂ ಸಂಚಿತ್ಯ ರಾಘವಮ್ ॥

ಅನುವಾದ

ಯಾರಾದರೂ ತಿಳಿದು-ತಿಳಿದು ಸ್ವೇಚ್ಛೆಯಿಂದ ಬ್ರಾಹ್ಮಣನ ಹತ್ಯೆ ಮಾಡಿರುವನೋ, ಅಥವಾ ಉರಿಯುವ ಬೆಂಕಿಯನ್ನು ಕೈಯಿಂದ ಮುಟ್ಟುವನೋ, ಹೀಗೆ ಮಾಡಿ ಸಂತಪ್ತನಾಗುವನೋ, ಹಾಗೆಯೇ ಧರ್ಮಾತ್ಮಾ ದಶರಥನು ತಾನು ಕೊಟ್ಟ ವರದಾನದ ಕಾರಣ ಕಾಡಿಗೆ ಹೋದ ಶ್ರೀರಾಮನನ್ನು ಚಿಂತಿಸುತ್ತಾ ಅನುತಪ್ತನಾದನು.॥11॥

ಮೂಲಮ್ - 12

ನಿವೃತ್ತ್ಯೈವ ನಿವೃತ್ತೈವ ಸೀದತೋ ರಥವರ್ತ್ಮಸು ।
ರಾಜ್ಞೋ ನಾತಿಬಭೌ ರೂಪಂ ಗ್ರಸ್ತಸ್ಯಾಂಶುಮತೋ ಯಥಾ ॥

ಅನುವಾದ

ದಶರಥರಾಜನು ಪದೇ-ಪದೇ ಹಿಂದೆ ಹೊರಳಿ ರಥದ ಮಾರ್ಗವನ್ನೇ ನೋಡಲು ಕಷ್ಟಪಡುತ್ತಿದ್ದನು. ಆಗ ಅವನ ರೂಪ ರಾಹುಗ್ರಸ್ತ ಸೂರ್ಯನಂತೆ ಮಂಕಾಗಿತ್ತು.॥12॥

ಮೂಲಮ್ - 13

ವಿಲಲಾಪ ಸ ದುಃಖಾರ್ತಃ ಪ್ರಿಯಂ ಪುತ್ರಮನುಸ್ಮರನ್ ।
ನಗರಾಂತಮನುಪ್ರಾಪ್ತಂ ಬುಧ್ವಾ ಪುತ್ರಮಥಾಬ್ರವೀತ್ ॥

ಅನುವಾದ

ಅವನು ತನ್ನ ಪುತ್ರನನ್ನು ಪದೇ-ಪದೇ ಸ್ಮರಿಸುತ್ತಾ ದುಃಖಾತುರನಾಗಿ ವಿಲಾಪಿಸತೊಡಗಿದನು. ಮಗನು ನಗರದ ಸೀಮೆಗೆ ತಲುಪಿರಬಹುದು ಎಂದು ಯೋಚಿಸುತ್ತಾ ಅವನು ಹೇಳತೊಡಗಿದನು.॥13॥

ಮೂಲಮ್ - 14

ವಾಹನಾನಾಂ ಚ ಮುಖ್ಯಾನಾಂ ವಹತಾಂ ತಂ ಮಮಾತ್ಮಜಮ್ ।
ಪದಾನಿ ಪಥಿ ದೃಶ್ಯಂತೇ ಸ ಮಹಾತ್ಮಾ ನ ದೃಶ್ಯತೇ ॥

ಅನುವಾದ

ಅಯ್ಯೋ! ನನ್ನ ಪುತ್ರನನ್ನು ವನಕ್ಕೆ ಕೊಂಡುಹೋಗುವ ಕುದುರೆಗಳ ಪದಚಿಹ್ನೆಗಳಾದರೋ ದಾರಿಯಲ್ಲಿ ಕಾಣುತ್ತಿವೆ; ಆದರೆ ಆ ಮಹಾತ್ಮಾ ಶ್ರೀರಾಮನ ದರ್ಶನವಾಗುತ್ತಿಲ್ಲವಲ್ಲ.॥14॥

ಮೂಲಮ್ - 15

ಯಃ ಸುಖೇನೋಪಧಾನೇಷು ಶೇತೇ ಚಂದನರೂಷಿತಃ ।
ವೀಜ್ಯಮಾನೋ ಮಹಾರ್ಹಾಭಿಃ ಸ್ತ್ರೀಭಿರ್ಮಮ ಸುತೋತ್ತಮಃ॥

ಮೂಲಮ್ - 16

ಸ ನೂನಂ ಕ್ವಚಿದೇವಾದ್ಯ ವೃಕ್ಷಮೂಲಮುಪಾಶ್ರಿತಃ ।
ಕಾಷ್ಠಂ ವಾ ಯದಿ ವಾಶ್ಮಾನಮುಪಧಾಯ ಶಯಿಷ್ಯತೇ ॥

ಅನುವಾದ

ನನ್ನ ಶ್ರೇಷ್ಠಪುತ್ರ ಶ್ರೀರಾಮನು ಚಂದನಚರ್ಚಿತ ದಿಂಬುಗಳನ್ನು ಆಧರಿಸಿ ಹಂಸತೂಲಿಕಾತಲ್ಪದಲ್ಲಿ ಮಲಗುತ್ತಿದ್ದನು ಮತ್ತು ಅಲಂಕಾರಗಳಿಂದ ಭೂಷಿತರಾದ ಸುಂದರಿಯರು ಅವನಿಗೆ ಗಾಳಿ ಬೀಸುತ್ತಿದ್ದರು. ಅಂತಹವನು ಇಂದು ಎಲ್ಲಾದರೂ ಮರದ ಬೇರನ್ನು ಅಥವಾ ಮರವೋ, ಕಲ್ಲೋ, ತಲೆಯಡಿ ಇಟ್ಟುಕೊಂಡು ನೆಲದಲ್ಲಿ ಮಲಗುವನು.॥15-16॥

ಮೂಲಮ್ - 17

ಉತ್ಥಾಸ್ಯತಿ ಚ ಮೇದಿನ್ಯಾಃ ಕೃಪಣಃ ಪಾಂಸುಗುಂಠಿತಃ ।
ವಿನಿಃಶ್ವಸನ್ ಪ್ರಸ್ರವಣಾತ್ ಕರೇಣೂನಾಮಿವರ್ಷಭಃ ॥

ಅನುವಾದ

ಮತ್ತೆ ಶರರೀಕ್ಕೆಲ್ಲ ಧೂಳು ಮೆತ್ತಿಕೊಂಡು ದೀನನಂತೆ ದೀರ್ಘವಾಗಿ ನಿಟ್ಟುಸಿರು ಬಿಡುತ್ತಾ ಯಾವುದಾದರು ಗಜರಾಜನು ನೀರಿನ ಪ್ರವಾಹದಲ್ಲಿ ಹೊರಳಾಡಿ ಕೆಸರು ಮೆತ್ತಿಕೊಂಡು ಏಳುವಂತೆ, ಏಳುವನು.॥17॥

ಮೂಲಮ್ - 18

ದ್ರಕ್ಷ್ಯಂತಿ ನೂನಂ ಪುರುಷಾ ದೀರ್ಘಬಾಹುಂ ವನೇಚರಾಃ ।
ರಾಮಮುತ್ಥಾಯ ಗಚ್ಛಂತಂ ಲೋಕನಾಥಮನಾಥವತ್ ॥

ಅನುವಾದ

ನಿಶ್ಚಯವಾಗಿ ಕಾಡಿನಲ್ಲಿರುವ ಮನುಷ್ಯರು ಲೋಕನಾಥ ಮಹಾಬಾಹು ಶ್ರೀರಾಮನು ಅನಾಥನಂತೆ ಎದ್ದು ಹೋಗುವುದನ್ನು ನೋಡುವರು.॥18॥

ಮೂಲಮ್ - 19

ಸಾ ನೂನಂ ಜನಕಸ್ಯೇಷ್ಟಾ ಸುತಾ ಸುಖಸದೋಚಿತಾ ।
ಕಣ್ಟಕಾಕ್ರಮಣಾಕ್ಲಾಂತಾ ವನಮದ್ಯಗಮಿಷ್ಯತಿ ॥

ಅನುವಾದ

ಸದಾ ಸುಖವನ್ನೇ ಅನುಭವಿಸಲು ಯೋಗ್ಯಳಾದ ಜನಕನಪ್ರಿಯ ಕುವರಿ ಸೀತೆಯು ಇಂದು ಖಂಡಿತವಾಗಿ ಕಾಲಿಗೆ ಮುಳ್ಳುಚುಚ್ಚಿ ವ್ಯಥಿತಳಾಗಿ ಕಾಡಿನಲ್ಲಿ ನಡೆಯುವಳು.॥19॥

ಮೂಲಮ್ - 20

ಅನಭಿಜ್ಞಾ ವಾನಾನಾಂ ಸಾ ನೂನಂ ಭಯಮುಪೈಷ್ಯತಿ ।
ಶ್ವಪದಾನರ್ದಿತಂ ಶ್ರುತ್ವಾ ಗಂಭೀರಂ ರೋಮಹರ್ಷಣಮ್ ॥

ಅನುವಾದ

ಅವಳು ಕಾಡಿನ ಕಷ್ಟಗಳಿಂದ ಅನಭಿಜ್ಞಳಾಗಿದ್ದಾಳೆ. ಅಲ್ಲಿ ವ್ಯಾಘ್ರವೇ ಮೊದಲಾದ ಹಿಂಸಕ ಪ್ರಾಣಿಗಳು ಗಂಭೀರ ಹಾಗೂ ರೋಮಾಂಚನಕಾರಿ ಗರ್ಜನೆಯನ್ನು ಕೇಳಿ ನಿಶ್ಚಯವಾಗಿ ಭಯಗೊಳ್ಳುವಳು.॥20॥

ಮೂಲಮ್ - 21

ಸಕಾಮಾ ಭವ ಕೈಕೇಯಿ ವಿಧವಾ ರಾಜ್ಯಮಾವಸ ।
ನಹಿ ತಂ ಪುರುಷವ್ಯಾಘ್ರಂ ವಿನಾ ಜೀವಿತುಮುತ್ಸಹೇ ॥

ಅನುವಾದ

ಎಲೆಗೆ ಕೈಕೇ! ನೀನು ನಿನ್ನ ಕಾಮನೆಯನ್ನು ಸಫಲಗೊಳಿಸಿಕೊಂಡು ವಿಧವೆಯಾಗಿ ರಾಜ್ಯವಾಳು. ನಾನು ಪುರುಷಸಿಂಹ ರಾಮನಿಲ್ಲದೆ ಜೀವಿಸಿ ಇರಲಾರೆನು.॥21॥

ಮೂಲಮ್ - 22

ಇತ್ಯೇವಂ ವಿಲಪನ್ ರಾಜಾ ಜನೌಘೇನಾಭಿಸಂವೃತಃ ।
ಅಪಸ್ನಾತ ಇವಾರಿಷ್ಟಂ ಪ್ರವಿವೇಶ ಗೃಹೋತ್ತಮಮ್ ॥

ಅನುವಾದ

ಹೀಗೆ ರಾಜನು ಗೋಳಾಡುತ್ತಾ ಜನಸಮೂಹದಿಂದ ಪರಿವೃತನಾಗಿ ಮರಣವಾರ್ತೆಯನ್ನು ಕೇಳಿ ಸ್ನಾನಮಾಡದವನಂತೆ ಕಲ್ಮಷಯುಕ್ತನಾಗಿ ಉತ್ತಮ ಭವನವನ್ನು ಪ್ರವೇಶಿಸಿದನು.॥22॥

ಮೂಲಮ್ - 23

ಶೂನ್ಯಚತ್ವರವೇಶ್ಮಾಂತಾಂ ಸಂವೃತಾಪಣವೇದಿಕಾಮ್ ।
ಕ್ಲಾಂತದುರ್ಬಲದುಃಖಾರ್ತಾಂ ನಾತ್ಯಾಕೀರ್ಣಮಹಾಪಥಾಮ್ ॥

ಮೂಲಮ್ - 24

ತಾಮವೇಕ್ಷ್ಯ ಪುರೀಂ ಸರ್ವಾಂ ರಾಮೇವಾನುಚಿಂತಯನ್ ।
ವಿಲಪನ್ಪ್ರಾವಿಶದ್ ರಾಜಾ ಗೃಹಂ ಸೂರ್ಯ ಇವಾಂಬುದಮ್ ॥

ಅನುವಾದ

ಅಯೋಧ್ಯೆಯ ಪ್ರತಿಯೊಂದು ಮನೆಯೂ ಶೂನ್ಯವಾಗಿತ್ತು. (ಏಕೆಂದರೆ ಮನೆಯ ಎಲ್ಲರೂ ಶ್ರೀರಾಮನ ಹಿಂದೆ ಹೊರಟುಹೋಗಿದ್ದರು.) ಅಂಗಡಿಗಳು ಮುಚ್ಚಿದ್ದವು. ನಗರದಲ್ಲಿ ಇರುವ ಜನರೂ ಕೂಡ ಅತ್ಯಂತ ಬಳಲಿ, ದುರ್ಬಲ, ದುಃಖಿತರಾಗಿದ್ದರು. ರಾಜಬೀದಿಯಲ್ಲಿ ಒಬ್ಬಿಬ್ಬರು ಓಡಾಡುತ್ತಿದ್ದರು. ಇಡೀ ನಗರದ ಈ ಸ್ಥಿತಿಯನ್ನು ನೋಡಿ ಶ್ರೀರಾಮನಿಗಾಗಿ ಚಿಂತಿಸುತ್ತಾ, ವಿಲಪಿಸುತ್ತಾ ಸೂರ್ಯನು ಮೋಡಗಳಲ್ಲಿ ಅಡಗುವಂತೆ ರಾಜನು ಭವನ ವನದ ಒಳಹೊಕ್ಕನು.॥23-24॥

ಮೂಲಮ್ - 25

ಮಹಾಹ್ರದಮಿವಾಕ್ಷೋಭ್ಯಂ ಸುಪರ್ಣೇನ ಹೃತೋರಗಮ್ ।
ರಾಮೇಣ ರಹಿತಂ ವೇಶ್ಮ ವೈದೇಹ್ಯಾ ಲಕ್ಷ್ಮಣೇನ ಚ ॥

ಅನುವಾದ

ಶ್ರೀರಾಮ, ಲಕ್ಷ್ಮಣ, ಸೀತೆ ಇವರಿಂದ ರಹಿತವಾದ ಆ ಅರಮನೆಯು ನಿರ್ಭಯವೂ, ಶಾಂತವೂ ಆಳವಾದ ಜಲಾಶಯದ ಮಧ್ಯದಿಂದ ನಾಗವನ್ನು ಗರುಡ ಎತ್ತಿಕೊಂಡು ಹೋದಂತ್ತಿತ್ತು.॥25॥

ಮೂಲಮ್ - 26

ಅಥ ಗದ್ಗದಶಬ್ದಸ್ತು ವಿಲಪನ್ ವಸುಧಾಧಿಪಃ ।
ಉವಾಚ ಮೃದು ಮಂದಾರ್ಥಂ ವಚನಂ ದೀನಮಸ್ವರಮ್ ॥

ಅನುವಾದ

ಆಗ ವಿಲಾಪ ಮಾಡುತ್ತಾ ದಶರಥನು ಗದ್ಗದವಾಣಿಯಿಂದ ದ್ವಾರಪಾಲಕರಲ್ಲಿ ಮೆಲ್ಲಗೆ, ಅಸ್ವಸ್ಥನಾಗಿ, ದೀನತೆಯಿಂದ ಕೂಡಿದ ಮಾತನ್ನು ಹೇಳಿದನು.॥26॥

ಮೂಲಮ್ - 27

ಕೌಸಲ್ಯಾಯಾ ಗೃಹಂ ಶೀಘ್ರಂ ರಾಮಮಾತುರ್ನಯಂತು ಮಾಮ್ ।
ನಹ್ಯನ್ಯತ್ರ ಸಮಾಶ್ವಾಸೋ ಹೃದಯಸ್ಯ ಭವಿಷ್ಯತಿ ॥

ಅನುವಾದ

ನನ್ನನ್ನು ಶೀಘ್ರವಾಗಿ ಶ್ರೀರಾಮಮಾತೆ ಕೌಸಲ್ಯೆಯ ಅಂತಃಪುರಕ್ಕೆ ಕೊಂಡುಹೋಗಿರಿ; ಏಕೆಂದರೆ ನನ್ನ ಮನಸ್ಸಿಗೆ ಬೇರೆ ಎಲ್ಲಿಯೂ ಶಾಂತಿ ಸಿಗಲಾರದು.॥27॥

ಮೂಲಮ್ - 28

ಇತಿ ಬ್ರುವಂತಂ ರಾಜಾನಮನಯನ್ದ್ವಾರದರ್ಶಿನಃ ।
ಕೌಸಲ್ಯಾಯಾ ಗೃಹಂ ತತ್ರ ನ್ಯವೇಸ್ಯತ ವಿನೀತವತ್ ॥

ಅನುವಾದ

ಹೀಗೆ ಹೇಳುತ್ತಿರುವ ರಾಜಾ ದಶರಥನನ್ನು ದ್ವಾರಪಾಲಕರು ಬಹಳ ವಿನಯದೊಂದಿಗೆ ರಾಣಿ ಕೌಸಲ್ಯೆಯ ಭವನಕ್ಕೆ ಕರೆದುಕೊಂಡು ಹೋಗಿ ಮಂಚದಲ್ಲಿ ಮಲಗಿಸಿದರು.॥28॥

ಮೂಲಮ್ - 29

ತತಸ್ತತ್ರ ಪ್ರವಿಷ್ಟಸ್ಯ ಕೌಸಲ್ಯಾಯಾ ನಿವೇಶನಮ್ ।
ಅಧಿರುಹ್ಯಾಪಿ ಶಯನಂ ಬಭೂವ ಲುಲಿತಂ ಮನಃ ॥

ಅನುವಾದ

ಕೌಸಲ್ಯೆಯ ಅಂತಃಪುರವನ್ನು ಪ್ರವೇಶಿಸಿ ಮಂಚದಲ್ಲಿ ಆರೂಢನಾದರೂ ದಶರಥನ ಮನಸ್ಸು ಚಂಚಲ ಹಾಗೂ ಮಲಿನವಾಗಿಯೇ ಇತ್ತು.॥29॥

ಮೂಲಮ್ - 30

ಪುತ್ರದ್ವಯವಿಹೀನಂ ಚ ಸ್ನುಷಯಾ ಚ ವಿವರ್ಜಿತಮ್ ।
ಅಪಶ್ಯದ್ ಭವನಂ ರಾಜಾ ನಷ್ಟಚಂದ್ರಮಿವಾಂಬರಮ್ ॥

ಅನುವಾದ

ಇಬ್ಬರು ಪುತ್ರರು ಮತ್ತು ಸೊಸೆ ಸೀತೆಯಿಂದ ರಹಿತವಾದ ಆ ಭವನವು ರಾಜನಿಗೆ ಚಂದ್ರಹೀನ ಆಕಾಶದಂತೆ ಕಾಂತಿಹೀನವಾಗಿ ಕಂಡಿತು.॥30॥

ಮೂಲಮ್ - 31

ತಚ್ಚ ದೃಷ್ಟ್ವಾ ಮಹಾರಾಜೋ ಭುಜಮುದ್ಯಮ್ಯ ವೀರ್ಯವಾನ್ ।
ಉಚ್ಚೈಃ ಸ್ವರೇಣ ಪ್ರಾಕ್ರೋಶದ್ಧಾ ರಾಮ ವಿಜಹಾಸಿ ನೌ ॥

ಮೂಲಮ್ - 32

ಸುಖಿತಾ ಬತ ತಂ ಕಾಲಂ ಜೀವಿಷ್ಯಂತಿ ನರೋತ್ತಮಾಃ ।
ಪರಿಷ್ವಜಂತೋ ಯೇ ರಾಮಂ ದ್ರಕ್ಷ್ಯಂತಿ ಪುನರಾಗತಮ್ ॥

ಅನುವಾದ

ಅದನ್ನು ನೋಡಿ ಪರಾಕ್ರಮಿ ಮಹಾರಾಜನು ಒಂದು ತೋಳನ್ನು ಎತ್ತಿ ಗಟ್ಟಿಯಾಗಿ ವಿಲಪಿಸುತ್ತಾ - ಹಾ ರಾಮಾ! ನೀನು ತಾಯಿ-ತಂದೆಯರಾದ ನಮ್ಮಿಬ್ಬರನ್ನು ತ್ಯಜಿಸುತ್ತಿರುವೆಯಲ್ಲ! ಯಾರು ಹದಿನಾಲ್ಕು ವರ್ಷಗಳವರೆಗೆ ಜೀವಿಸಿದ್ದು ಅಯೋಧ್ಯೆಗೆ ಮರಳಿ ಬಂದ ಶ್ರೀರಾಮನನ್ನು ನೋಡಿ, ಬಿಗಿದಪ್ಪಿಕೊಳ್ಳುವವನೋ ಅವನೇ ವಾಸ್ತವವಾಗಿ ಸುಖಿಯಾಗುವನು.॥31-32॥

ಮೂಲಮ್ - 33

ಅಥ ರಾತ್ರ್ಯಾಂ ಪ್ರಪನ್ನಾಯಾಂ ಕಾಲರಾತ್ರ್ಯಾಮಿವಾತ್ಮನಃ ।
ಅರ್ಧರಾತ್ರೇ ದಶರಥಃ ಕೌಸಲ್ಯಾಮಿದಮಬ್ರವೀತ್ ॥

ಅನುವಾದ

ಅನಂತರ ಕಾಲರಾತ್ರಿಯಂತಿದ್ದ ಆ ರಾತ್ರಿಯು ಅರ್ಧ ಕಳೆದಾಗ ದಶರಥನು ಕೌಸಲ್ಯೆಯ ಬಳಿಯಲ್ಲಿ ಇಂತೆಂದನು.॥33॥

ಮೂಲಮ್ - 34

ನ ತ್ವಾಂ ಪಶ್ಯಾಮಿ ಕೌಸಲ್ಯೇ ಸಾಧು ಮಾಂ ಪಾಣಿನಾ ಸ್ಪೃಶ ।
ರಾಮಂ ಮೇಽನುಗತಾ ದೃಷ್ಟಿರದ್ಯಾಪಿ ನ ನಿವರ್ತತೇ ॥

ಅನುವಾದ

ಕೌಸಲ್ಯೇ! ನನ್ನ ದೃಷ್ಟಿಯು ಶ್ರೀರಾಮನೊಂದಿಗೆ ಹೊರಟುಹೋಗಿದೆ, ಅದು ಇನ್ನೂ ಮರಳಿ ಬಂದಿಲ್ಲ. ಆದ್ದರಿಂದ ನನ್ನಿಂದ ನಿನ್ನನ್ನು ನೋಡಲಾಗುತ್ತಿಲ್ಲ. ಒಮ್ಮೆ ನಿನ್ನ ಕೈಯಿಂದ ನನ್ನ ಶರೀರವನ್ನು ಸ್ಪರ್ಶಿಸು.॥34॥

ಮೂಲಮ್ - 35

ತಂ ರಾಮಮೇವಾನುವಿಚಿಂತಯಂತಂ
ಸಮೀಕ್ಷ್ಯ ದೇವೀ ಶಯನೇ ನರೇಂದ್ರಮ್ ।
ಉಪೋಪವಿಶ್ಯಾಧಿಕಮಾರ್ತರೂಪಾ
ವಿನಿಶ್ವಸಂತಂ ವಿಲಲಾಪ ಕೃಚ್ಛ್ರಮ್ ॥

ಅನುವಾದ

ಶಯ್ಯೆಯಲ್ಲಿ ಬಿದ್ದಿರುವ ದಶರಥ ಮಹಾರಾಜನು ಶ್ರೀರಾಮನನ್ನೇ ಚಿಂತಿಸುತ್ತಾ ದೀರ್ಘವಾಗಿ ನಿಟ್ಟುಸಿರುಬಿಡುತ್ತಿರುವುದನ್ನು ನೋಡಿ ಕೌಸಲ್ಯೆಯು ಅತ್ಯಂತ ದುಃಖಿತಳಾಗಿ ಅವನ ಬಳಿಯಲ್ಲಿ ಹೋಗಿ ಕುಳಿತು ಬಹಳ ಕಷ್ಟದಿಂದ ವಿಲಾಪಿಸತೊಡಗಿದಳು.॥35॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ನಲವತ್ತೆರಡನೆಯ ಸರ್ಗ ಪೂರ್ಣವಾಯಿತು.॥42॥