वाचनम्
ಭಾಗಸೂಚನಾ
ಶ್ರೀರಾಮನ ವನಗಮನದಿಂದ ರಾಣೀವಾಸದವರು ದುಃಖಪಟ್ಟುದು, ನಗರವಾಸಿಗಳ ಶೋಕಾಕುಲತೆ
ಮೂಲಮ್ - 1
ತಸ್ಮಿಂಸ್ತು ಪುರುಷವ್ಯಾಘ್ರೇ ನಿಷ್ಕ್ರಾಮತಿ ಕೃತಾಂಜಲೌ ।
ಆರ್ತಶಬ್ದೋ ಹಿ ಸಂಜಜ್ಞೇ ಸ್ತ್ರೀಣಾಮಂತಃಪುರೇ ಮಹಾನ್ ॥
ಅನುವಾದ
ಪುರುಷಸಿಂಹ ಶ್ರೀರಾಮನು ಮಾತೆಯರ ಸಹಿತ ಪಿತನಿಗೆ ದೂರದಿಂದಲೇ ಕೈಮುಗಿಯುತ್ತಿದ್ದನು. ಅದೇ ಸ್ಥಿತಿಯಲ್ಲಿ ರಥದಿಂದ ನಗರದಿಂದ ಹೊರಗೆ ಹೊರಟಾಗ ರಾಣೀವಾಸದ ರಾಣಿಯರಲ್ಲಿ ದೊಡ್ಡ ಹಾಹಾಕಾರವೆದ್ದಿತು.॥1॥
ಮೂಲಮ್ - 2
ಅನಾಥಸ್ಯ ಜನಸ್ಯಾಸ್ಯ ದುರ್ಬಲಸ್ಯ ತಪಸ್ವಿನಃ ।
ಯೋ ಗತಿಃ ಶರಣಂ ಚಾಸೀತ್ ಸನಾಥಃ ಕ್ವ ನು ಗಚ್ಛತಿ ॥
ಅನುವಾದ
ಅವರು ಅಳುತ್ತಾ ಹೇಳತೊಡಗಿದರು - ಅಯ್ಯೋ! ಅನಾಥರೂ, ದುರ್ಬಲರೂ, ಶೋಚನೀಯರೂ ಆದ ನಮಗೆ ಗತಿ (ಎಲ್ಲ ಸುಖಗಳನ್ನು ಕೊಡುವ) ಮತ್ತು ಶರಣ್ಯ (ಸಮಸ್ತ ಆಪತ್ತುಗಳಿಂದ ರಕ್ಷಿಸುವ)ನಾಗಿದ್ದು ನಮ್ಮ ನಾಥನಾದ (ಮನೋರಥ ಪೂರ್ಣಗೊಳಿಸುವ) ಶ್ರೀರಾಮನು ಎಲ್ಲಿಗೆ ಹೋಗುತ್ತಿರುವನು.॥2॥
ಮೂಲಮ್ - 3
ನ ಕ್ರುಧ್ಯತ್ಯಭಿಶಸ್ತೋಽಪಿ ಕ್ರೋಧನೀಯಾನಿ ವರ್ಜಯನ್ ।
ಕ್ರುದ್ಧಾನ್ ಪ್ರಸಾದಯನ್ಸರ್ವಾನ್ ಸಮದುಃಖಃ ಕ್ವ ಗಚ್ಛತಿ ॥
ಅನುವಾದ
ಯಾರು ಯಾರಾದರೂ ಸುಳ್ಳು ಕಳಂಕ ಹಚ್ಚಿದರೂ ಸಿಟ್ಟುಗೊಳ್ಳುತ್ತಿರಲಿಲ್ಲವೋ, ಕ್ರೋಧದಿಂದ ಮಾತುಗಳನ್ನು ಆಡುತ್ತಿರಲ್ಲಿವೋ, ಮುನಿದ ಎಲ್ಲ ಜನರನ್ನು ಒಲಿಸಿ ಸಂತೋಷಪಡಿಸುತ್ತಿದ್ದನೋ, ಅಂತಹ ಬೇರೆಯವರ ದುಃಖದಲ್ಲಿ ಸಮ ವೇದನೆ ಪ್ರಕಟಗೊಳಿಸುತ್ತಿದ್ದ ಶ್ರೀರಾಮನು ಎಲ್ಲಿಗೆ ಹೋಗುತ್ತಿದ್ದಾನೆ.॥3॥
ಮೂಲಮ್ - 4
ಕೌಸಲ್ಯಾಯಾಂ ಮಹಾತೇಜಾ ಯಥಾ ಮಾತರಿ ವರ್ತತೇ ।
ತಥಾ ಯೋ ವರ್ತತೇಽಸ್ಮಾಸು ಮಹಾತ್ಮಾ ಕ್ವ ನು ಗಚ್ಛತಿ ॥
ಅನುವಾದ
ಮಹಾತೇಜಸ್ವೀ ಮಹಾತ್ಮಾ ಶ್ರೀರಾಮನು ತನ್ನ ಮಾತೆ ಕೌಸಲ್ಯೆಯೊಂದಿಗೆ ವರ್ತಿಸಿದಂತೆಯೇ ನಮ್ಮೊಂದಿಗೂ ವರ್ತಿಸುತ್ತಿದ್ದನು. ಅವನು ಎಲ್ಲಿಗೆ ಹೋಗುತ್ತಿರುವನು.॥4॥
ಮೂಲಮ್ - 5
ಕೈಕೇಯ್ಯಾ ಕ್ಲಿಶ್ಯಮಾನೇನ ರಾಜ್ಞಾ ಸಂಚೋದಿತೋ ವನಮ್ ।
ಪರಿತ್ರಾತಾ ಜನಸ್ಯಾಸ್ಯ ಜಗತಃ ಕ್ವ ನು ಗಚ್ಛತಿ ॥
ಅನುವಾದ
ಕೈಕೇಯಿಯ ಮೂಲಕ ಕ್ಲೇಶದಲ್ಲಿ ಬಿದ್ದಿರುವ ಮಹಾರಾಜರು ವನಕ್ಕೆ ಹೋಗಲು ಹೇಳಿದಾಗ ನಮ್ಮನ್ನು ಅಥವಾ ಸಮಸ್ತ ಜಗತ್ತನ್ನು ರಕ್ಷಿಸುವ ಶ್ರೀರಘುವರನು ಎಲ್ಲಿಗೆ ಹೋಗುತ್ತಿರುವನು.॥5॥
ಮೂಲಮ್ - 6
ಅಹೋ ನಿಶ್ಚೇತನೋ ರಾಜಾ ಜೀವಲೋಕಸ್ಯ ಸಂಕ್ಷಯಮ್ ।
ಧರ್ಮ್ಯಂ ಸತ್ಯವ್ರತಂ ರಾಮಂ ವನವಾಸೇ ಪ್ರವತ್ಸ್ಯತಿ ॥
ಅನುವಾದ
ಅಯ್ಯೋ! ಈ ರಾಜರು ಬಹಳ ಬುದ್ಧಿಹೀನರಾಗಿದ್ದಾರೆ. ಜೀವಜಗತ್ತಿಗೆ ಆಶ್ರಯಭೂತ, ಧರ್ಮಪರಾಯಣ, ಸತ್ಯವ್ರತ, ಶ್ರೀರಾಮನನ್ನು ವನವಾಸಕ್ಕಾಗಿ ದೇಶದಿಂದಲೇ ಹೊರಗೆ ಹಾಕಿರುವನಲ್ಲ.॥6॥
ಮೂಲಮ್ - 7
ಇತಿ ಸರ್ವಾ ಮಹಿಷ್ಯಸ್ತಾ ವಿವತ್ಸಾ ಇವ ಧೇನವಃ ।
ರುರುದುಶ್ಚೈವ ದುಃಖಾರ್ತಾಃ ಸಸ್ವರಂ ಚ ವಿಚುಕ್ರುಶುಃ ॥
ಅನುವಾದ
ಹೀಗೆ ಅವರೆಲ್ಲ ರಾಣಿಯರು ಕರುವನ್ನು ಅಗಲಿದ ಹಸುವಿನಂತೆ ದುಃಖದಿಂದ ಆರ್ತರಾಗಿ ಗಟ್ಟಿಯಾಗಿ ಆಕ್ರಂದನ ಮಾಡತೊಡಗಿದರು.॥7॥
ಮೂಲಮ್ - 8
ಸ ತಮಂತಃಪುರೇ ಘೋರಮಾರ್ತಶಬ್ದಂ ಮಹೀಪತಿಃ ।
ಪುತ್ರಶೋಕಾಭಿಸಂತಪ್ತಃ ಶ್ರುತ್ವಾ ಚಾಸೀತ್ಸುದುಃಖಿತಃ ॥
ಅನುವಾದ
ಅಂತಃಪುರದಲ್ಲಿ ನಡೆಯುತ್ತಿದ್ದ ಘೋರ ಆರ್ತನಾದವನ್ನು ಕೇಳಿ ಪುತ್ರಶೋಕದಿಂದ ಸಂತಪ್ತನಾದ ದಶರಥನು ಬಹಳ ದುಃಖಿತನಾದನು.॥8॥
ಮೂಲಮ್ - 9
ನಾಗ್ನಿಹೋತ್ರಾಣ್ಯಹೂಯಂತ ನಾಪಚನ್ ಗೃಹಮೇಧಿನಃ ।
ಅಕುರ್ವನ್ನ ಪ್ರಜಾಃ ಕಾರ್ಯಂ ಸೂರ್ಯಶ್ಚಾಂತರಧೀಯತ ॥
ಮೂಲಮ್ - 10
ವ್ಯಸೃಜನ್ ಕವಲಾನ್ನಾಗಾ ಗಾವೋವತ್ಸಾನ್ನ ಪಾಯಯನ್ ।
ಪುತ್ರಂ ಪ್ರಥಮಜಂ ಲಬ್ಧ್ವಾ ಜನನೀ ನಾಭ್ಯನಂದತ ॥
ಅನುವಾದ
ಅಂದಿನ ದಿನ ಅಗ್ನಿಹೋತ್ರಗಳು ನಿಂತುಹೋದುವು, ಗೃಹಸ್ಥರ ಮನೆಗಳಲ್ಲಿ ಅಡಿಗೆ ನಡೆಯಲಿಲ್ಲ. ಪ್ರಜೆಗಳು ಯಾವ ಕೆಲಸವನ್ನೂ ಮಾಡಲಿಲ್ಲ. ಸೂರ್ಯನು ಅಸ್ತಾಚಲಕ್ಕೆ ಸರಿದನು. ಆನೆಗಳು ಬಾಯಿಯಲ್ಲಿ ತೆಗೆದುಕೊಂಡ ಆಹಾರ ಬಿಟ್ಟುಬಿಟ್ಟವು. ಹಸುಗಳು ಕರುಗಳಿಗೆ ಹಾಲುಣಿಸಲಿಲ್ಲ. ಚೊಚ್ಚಲು ಮಗು ಹುಟ್ಟಿದ್ದರೂ ಯಾವ ತಾಯಿಯೂ ಸಂತೋಷಪಡಲಿಲ್ಲ.॥9-10॥
ಮೂಲಮ್ - 11
ತ್ರಿಶಂಕುರ್ಲೋಹಿತಾಂಗಶ್ಚ ಬೃಹಸ್ಪತಿಬುಧಾವಪಿ ।
ದಾರುಣಾಃ ಸೋಮಮಭ್ಯೇತ್ಯ ಗ್ರಹಾಃ ಸರ್ವೇ ವ್ಯವಸ್ಥಿತಾಃ ॥
ಅನುವಾದ
ತ್ರಿಶಂಕು, ಮಂಗಳ, ಗುರು, ಬುಧ ಹಾಗೂ ಇತರ ಸಮಸ್ತ ಗ್ರಹರು ಶುಕ್ರ, ಶನಿ ಮೊದಲಾದವುಗಳು ರಾತ್ರೆಯಲ್ಲಿ ವಕ್ರಗತಿಯಿಂದ ಚಂದ್ರನ ಬಳಿಗೆ ಬಂದು ದಾರುಣರಾಗಿ ಸ್ಥಿತರಾದರು.॥11॥
ಮೂಲಮ್ - 12
ನಕ್ಷತ್ರಾಣಿ ಗತಾರ್ಚಿಂಷಿ ಗ್ರಹಾಶ್ಚ ಗತತೇಜಸಃ ।
ವಿಶಾಖಾಶ್ಚ ಸಧೂಮಾಶ್ಚ ನಭಸಿ ಪ್ರಚಕಾಶಿರೇ ॥
ಅನುವಾದ
ನಕ್ಷತ್ರಗಳು ಮಂಕಾದವು ಮತ್ತು ಗ್ರಹರು ನಿಸ್ತೇಜರಾದರು. ಅವರೆಲ್ಲರೂ ಆಕಾಶದಲ್ಲಿ ವಿಪರೀತ ಮಾರ್ಗದಲ್ಲಿ ಸ್ಥಿತರಾಗಿ ಮೂರ್ಛಿತರಂತಾಗಿದ್ದರು.॥12॥
ಮೂಲಮ್ - 13
ಕಾಲಿಕಾನಿಲವೇಗೇನ ಮಹೋದಧಿರಿವೋತ್ಥಿತಃ ।
ರಾಮೇ ವನಂ ಪ್ರವ್ರಜಿತೇ ನಗರಂ ಪ್ರಚಚಾಲ ತತ್ ॥
ಅನುವಾದ
ಆಕಾಶದಲ್ಲಿ ಆವರಿಸಿದ ಮೇಘಗಳು ವಾಯುವಿನ ವೇಗದಿಂದ ಚದುರಿ ಸಮುದ್ರದಂತೆ ಕಂಡುಬರುತ್ತಿದ್ದವು. ಶ್ರೀರಾಮನು ವನಕ್ಕೆ ಹೋಗುವ ಸಮಯ ನಗರದಲ್ಲಿ ಭೂಕಂಪವಾಯಿತು.॥13॥
ಮೂಲಮ್ - 14
ದಿಶಃ ಪರ್ಯಾಕುಲಾಃ ಸರ್ವಾಸ್ತಿಮಿರೇಣೇವ ಸಂವೃತಾಃ ।
ನ ಗ್ರಹೋ ನಾಪಿ ನಕ್ಷತ್ರಂ ಪ್ರಚಕಾಶೇ ನ ಕಿಂಚನ ॥
ಅನುವಾದ
ಸಮಸ್ತ ದಿಕ್ಕುಗಳು ವ್ಯಾಕುಲಗೊಂಡವು, ಅವುಗಳಲ್ಲಿ ಅಂಧಕಾರ ಆವರಿಸಿತು. ಯಾವುದೇ ಗ್ರಹ, ನಕ್ಷತ್ರಗಳು ಪ್ರಕಾಶಿಸುತ್ತಿರಲಿಲ್ಲ.॥14॥
ಮೂಲಮ್ - 15
ಅಕಸ್ಮಾನ್ನಾಗರಃ ಸರ್ವೋ ಜನೇ ದೈನ್ಯಮುಪಾಗಮತ್ ।
ಆಹಾರೇ ವಾ ವಿಹಾರೇ ವಾ ನ ಕಶ್ಚಿದಕರೋನ್ಮನಃ ॥
ಅನುವಾದ
ಸಾಮಾನ್ಯವಾಗಿ ಎಲ್ಲ ನಾಗರಿಕರು ದೀನಸ್ಥಿತಿಯನ್ನು ಹೊಂದಿದ್ದರು. ಯಾರೂ ಆಹಾರ ಅಥವಾ ವಿಹಾರದ ಕಡೆಗೆ ಮನಗೊಡಲಿಲ್ಲ.॥15॥
ಮೂಲಮ್ - 16
ಶೋಕಪರ್ಯಾಯಸಂತಪ್ತಃ ಸತತಂ ದೀರ್ಘಮುಚ್ಛಸನ್ ।
ಅಯೋಧ್ಯಾಯಾಂ ಜನಃ ಸರ್ವಶ್ಚುಕ್ರೋಶ ಜಗತೀಪತಿಮ್ ॥
ಅನುವಾದ
ಅಯೋಧ್ಯಾನಿವಾಸಿ ಎಲ್ಲ ಜನರು ಶೋಕಪರಂಪರೆಯಿಂದ ಸಂತಪ್ತರಾಗಿ ನಿರಂತರ ದೀರ್ಘವಾಗಿ ನಿಟ್ಟುಸಿರು ಬಿಡುತ್ತಾ ದಶರಥ ರಾಜನನ್ನು ಜರೆಯುತ್ತಿದ್ದರು.॥16॥
ಮೂಲಮ್ - 17
ಭಾಷ್ಪಪರ್ಯಾಕುಲಮುಖೋ ರಾಜಮಾರ್ಗಗತೋ ಜನಃ ।
ನ ಹೃಷ್ಟೋ ಲಭ್ಯತೇ ಕಶ್ಚಿತ್ಸರ್ವಃ ಶೋಕಪರಾಯಣಃ ॥
ಅನುವಾದ
ರಸ್ತೆಯಲ್ಲಿ ಹೊರಟ ಯಾವ ಮನುಷ್ಯನೂ ಪ್ರಸನ್ನನಾಗಿ ಕಾಣುತ್ತಿರಲಿಲ್ಲ. ಎಲ್ಲರ ಮುಖ ಕಣ್ಣೀರಿನಿಂದ ಒದ್ದೆಯಾಗಿತ್ತು. ಎಲ್ಲರೂ ಶೋಕಮಗ್ನರಾಗಿದ್ದರು.॥17॥
ಮೂಲಮ್ - 18
ನ ವಾತಿ ಪವನಃ ಶೀತೋ ನ ಶಶೀ ಸೌಮ್ಯದರ್ಶನಃ ।
ನ ಸೂರ್ಯಸ್ತಪತೇ ಲೋಕಂ ಸರ್ವಂ ಪರ್ಯಾಕುಲಂ ಜಗತ್ ॥
ಅನುವಾದ
ಶೀತಲವಾಯು ಬೀಸುತ್ತಿರಲಿಲ್ಲ. ಚಂದ್ರನು ಸೌಮ್ಯನಾಗಿ ಕಾಣುತ್ತಿರಲಿಲ್ಲ. ಸೂರ್ಯನೂ ಕೂಡ ಜಗತ್ತಿಗೆ ಸಾಕಷ್ಟು ಪ್ರಕಾಶ ಅಥವಾ ತಾಪ ಕೊಡುತ್ತಿರಲಿಲ್ಲ. ಇಡೀ ಜಗತ್ತೇ ವ್ಯಾಕುಲವಾಗಿತ್ತು.॥18॥
ಮೂಲಮ್ - 19
ಅನರ್ಥಿನಃ ಸುತಾಃ ಸ್ತ್ರೀಣಾಂ ಭರ್ತಾರೋ ಭ್ರಾತರಸ್ತಥಾ ।
ಸರ್ವೇ ಸರ್ವಂ ಪರಿತ್ಯಜ್ಯ ರಾಮಮೇವಾನ್ವಚಿಂತಯನ್ ॥
ಅನುವಾದ
ಮಕ್ಕಳು ತಂದೆ-ತಾಯಿಯರನ್ನು ಮರೆತುಹೋದವು. ಪತಿಗಳಿಗೆ ಪತ್ನಿಯರ ನೆನಪೇ ಆಗಿಲಿಲ್ಲ. ಅಣ್ಣ-ತಮ್ಮಂದಿರು ಪರಸ್ಪರ ಮರೆತುಹೋದರು. ಎಲ್ಲರೂ ಎಲ್ಲವನ್ನೂ ಬಿಟ್ಟು ಕೇವಲ ಶ್ರೀರಾಮನ ಚಿಂತನೆ ಮಾತ್ರ ಮಾಡತೊಡಗಿದರು.॥19॥
ಮೂಲಮ್ - 20
ಯೇ ತು ರಾಮಸ್ಯ ಸುಹೃದಃ ಸರ್ವೇ ತೇ ಮೂಢಚೇತಸಃ ।
ಶೋಕಭಾರೇಣ ಚಕ್ರಾಂತಾಃ ಶಯನಂ ನೈವ ಭೇಜಿರೇ ॥
ಅನುವಾದ
ಶ್ರೀರಾಮನ ಮಿತ್ರರಾಗಿದ್ದವರೆಲ್ಲರೂ ಇನ್ನೂ ಹೆಚ್ಚು ಬುದ್ಧಿಗೆಟ್ಟಂತಾದರು. ಶೋಕಭಾರದಿಂದ ಆಕ್ರಾಂತರಾದ ಕಾರಣ ಅವರು ರಾತ್ರಿಯಲ್ಲಿ ಮಲಗಲೂ ಇಲ್ಲ.॥20॥
ಮೂಲಮ್ - 21
ತತಸ್ತ್ವಯೋಧ್ಯಾ ರಹಿತಾ ಮಹಾತ್ಮನಾ
ಪುರಂದರೇಣೇವ ಮಹೀ ಸಪರ್ವತಾ ।
ಚಚಾಲ ಘೋರಂ ಭಯಶೋಕಪೀಡಿತಾ
ಸನಾಗಯೋಧಾಶ್ವಗಣಾ ನನಾದ ಚ ॥
ಅನುವಾದ
ಈ ಪ್ರಕಾರ ಇಡೀ ಅಯೋಧ್ಯೆಯು ಶ್ರೀರಾಮನಿಂದ ರಹಿತವಾಗಿ ಭಯ ಮತ್ತು ಶೋಕದಿಂದ ಪ್ರಜ್ವಲಿತದಂತಾಗಿ ದೇವೇಂದ್ರನಿಂದ ರಹಿತವಾದ ಮೇರುಪರ್ವತ ಸಹಿತ ಈ ಇಡೀ ಪೃಥಿವಿಯು ನಡುಗುವಂತೆ ನಡುಗಿತು. ಆನೆ, ಕುದುರೆ, ಸೈನಿಕರ ಸಹಿತ ಆ ನಗರದಲ್ಲಿ ಭಯಂಕರ ಆರ್ತನಾದ ಆಗತೊಡಗಿತು.॥21॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ನಲವತ್ತೊಂದನೆಯ ಸರ್ಗ ಪೂರ್ಣವಾಯಿತು.॥41॥