०४० जनाक्रोशः

वाचनम्
ಭಾಗಸೂಚನಾ

ಸೀತಾ-ರಾಮ-ಲಕ್ಷ್ಮಣರು ದಶರಥನಿಗೆ ಪ್ರದಕ್ಷಿಣೆ ಮಾಡಿ ಕೌಸಲ್ಯೆಯೇ ಮೊದಲಾದ ತಾಯಂದಿರಿಗೆ ನಮಸ್ಕರಿಸಿದುದು, ಲಕ್ಷ್ಮಣನಿಗೆ ಸುಮಿತ್ರೆಯ ಉಪದೇಶ, ಸೀತಾಸಮೇತರಾಗಿ ರಾಮ-ಲಕ್ಷ್ಮಣರು ರಥದಲ್ಲಿ ಕುಳಿತು ಅರಣ್ಯಕ್ಕೆ ಪ್ರಯಾಣ ಹೊರಟಿದ್ದು, ಪುರಜನರ, ರಾಣೀವಾಸದವರ ಮತ್ತು ದಶರಥನ ಶೋಕಾಕುಲತೆ

ಮೂಲಮ್ - 1

ಅಥ ರಾಮಶ್ಚ ಸೀತಾ ಚ ಲಕ್ಷ್ಮಣಶ್ಚ ಕೃತಾಂಜಲಿಃ ।
ಉಪಸಂಗೃಹ್ಯ ರಾಜಾನಂ ಚಕ್ರುರ್ದೀನಾಃ ಪ್ರದಕ್ಷಿಣಮ್ ॥

ಅನುವಾದ

ಬಳಿಕ ಸೀತಾ-ರಾಮ-ಲಕ್ಷ್ಮಣರು ಕೈಮುಗಿದುಕೊಂಡು ದೀನಭಾವದಿಂದ ದಶರಥನ ಕಾಲುಗಳನ್ನು ಮುಟ್ಟಿ ನಮಸ್ಕರಿಸಿ ಪ್ರದಕ್ಷಿಣೆ ಮಾಡಿದರು.॥1॥

ಮೂಲಮ್ - 2

ತಂ ಚಾಪಿ ಸಮನುಜ್ಞಾಪ್ಯ ಧರ್ಮಜ್ಞಃ ಸಹ ಸೀತಯಾ ।
ರಾಘವಃ ಶೋಕಸಮ್ಮೂಢೋ ಜನನೀಮಭ್ಯವಾದಯತ್ ॥

ಅನುವಾದ

ತಂದೆಯಿಂದ ಬೀಳ್ಕೊಂಡು ಸೀತಾಸಹಿತ ಧರ್ಮಜ್ಞ ರಘುನಾಥನು ಮಾತೆಯ ಕಷ್ಟವನ್ನು ನೋಡಿ ಶೋಕಾಕುಲನಾಗಿ ಆಕೆಯ ಚರಣಗಳಿಗೆ ವಂದಿಸಿದನು.॥2॥

ಮೂಲಮ್ - 3

ಅನ್ವಕ್ಷಂ ಲಕ್ಷ್ಮಣೋ ಭ್ರಾತುಃ ಕೌಸಲ್ಯಾಮಭ್ಯವಾದಯತ್ ।
ಅಪಿ ಮಾತುಃ ಸುಮಿತ್ರಾಯಾ ಜಗ್ರಾಹ ಚರಣೌ ಪುನಃ ॥

ಅನುವಾದ

ಶ್ರೀರಾಮನ ಬಳಿಕ ಲಕ್ಷ್ಮಣನೂ ಮೊದಲು ಕೌಸಲ್ಯೆಗೆ ವಂದಿಸಿ ಮತ್ತು ತನ್ನ ತಾಯಿ ಸುಮಿತ್ರೆಯ ಕಾಲಿಗೆ ಬಿದ್ದನು.॥3॥

ಮೂಲಮ್ - 4

ತಂ ವಂದಮಾನಂ ರುದತೀ ಮಾತಾಸೌಮಿತ್ರಿಮಬ್ರವೀತ್ ।
ಹಿತಕಾಮಾ ಮಹಾಬಾಹುಂ ಮೂರ್ಧ್ನ್ಯುಪಾಘ್ರಾಯ ಲಕ್ಷ್ಮಣಮ್ ॥

ಅನುವಾದ

ತನ್ನ ಮಗ ಮಹಾಬಾಹು ಲಕ್ಷ್ಮಣನು ನಮಸ್ಕರಿಸುವುದನ್ನು ನೋಡಿ ಅವನ ಹಿತವನ್ನು ಬಯಸುವ ಮಾತೆ ಸುಮಿತ್ರೆಯು ಮಗನ ಶಿರಸ್ಸನ್ನು ಆಘ್ರಾಣಿಸಿ ಹೇಳಿದಳು.॥4॥

ಮೂಲಮ್ - 5

ಸೃಷ್ಟಸ್ತ್ವಂ ವನವಾಸಾಯ ಸ್ವನುರಕ್ತಃ ಸಹೃಜ್ಜನೇ ।
ರಾಮೇ ಪ್ರಮಾದಂ ಮಾ ಕಾರ್ಷೀಃ ಪುತ್ರ ಭ್ರಾತರಿ ಗಚ್ಛತಿ ॥

ಅನುವಾದ

ವತ್ಸ! ನೀನು ಸುಹೃದ ಶ್ರೀರಾಮನ ಪರಮ ಅನುರಾಗಿಯಾಗಿರುವೆ, ಅದಕ್ಕಾಗಿ ನಾನು ನಿನ್ನನ್ನು ವನವಾಸಕ್ಕಾಗಿ ಬೀಳ್ಕೊಡುತ್ತಿದ್ದೇನೆ. ನಿನ್ನಣ್ಣನು ವನದಲ್ಲಿ ಅತ್ತ-ಇತ್ತ ಹೋಗುವಾಗ ಅವನ ಸೇವೆಯಲ್ಲಿ ನೀನು ಎಂದೂ ಪ್ರಮಾದ ಮಾಡದಿರು.॥5॥

ಮೂಲಮ್ - 6

ವ್ಯಸನೀ ವಾ ಸಮೃದ್ಧೋ ವಾ ಗತಿರೇಷ ತವಾನಘ ।
ಏಷ ಲೋಕೇ ಸತಾಂ ಧರ್ಮೋ ಯಜ್ಜ್ಯೇಷ್ಠವಶಗೋ ಭವೇತ್ ॥

ಅನುವಾದ

ಸಂಕಟವಿರಲೀ, ಸಮೃದ್ಧಿಯಾಗಿರಲೀ ರಾಮನೇ ನಿನಗೆ ಪರಮಗತಿಯಾಗಿರುವನು. ನಿಷ್ಪಾಪ ಲಕ್ಷ್ಮಣ! ಜಗತ್ತಿನಲ್ಲಿ ಸರ್ವದಾ ತನ್ನ ಅಣ್ಣನ ಆಜ್ಞೆಯಲ್ಲೇ ಇರುವುದೇ ಸತ್ಪುರುಷರ ಧರ್ಮವಾಗಿದೆ.॥6॥

ಮೂಲಮ್ - 7

ಇದಂ ಹಿ ವೃತ್ತಮುಚಿತಂ ಕುಲಸ್ಯಾಸ್ಯ ಸನಾತನಮ್ ।
ದಾನಂ ದೀಕ್ಷಾ ಚ ಯಜ್ಞೇಷು ತನುತ್ಯಾಗೋಮೃಧೇಷು ಚ ॥

ಅನುವಾದ

ದಾನ ಮಾಡುವುದು, ಯಜ್ಞದಲ್ಲಿ ದೀಕ್ಷಾಗ್ರಹಣ ಮತ್ತು ಯುದ್ಧದಲ್ಲಿ ಶರೀರವನ್ನು ತ್ಯಜಿಸುವುದು - ಇದೇ ಈ ಕುಲದ ಉಚಿತ ಹಾಗೂ ಸನಾತನ ಆಚಾರವಾಗಿದೆ.॥7॥

ಮೂಲಮ್ - 8

ಲಕ್ಷ್ಮಣಂ ತ್ವೇವಮುಕ್ತ್ವಾಸೌ ಸಂಸಿದ್ಧಂ ಪ್ರಿಯರಾಘವಮ್ ।
ಸುಮಿತ್ರಾ ಗಚ್ಛ ಗಚ್ಛೇತಿ ಪುನಃ ಪುನರುವಾಚ ತಮ್ ॥

ಅನುವಾದ

ತನ್ನ ಪುತ್ರ ಲಕ್ಷ್ಮಣನಲ್ಲಿ ಹೀಗೆ ಹೇಳಿ ಸುಮಿತ್ರೆಯು ವನವಾಸಕ್ಕಾಗಿ ನಿಶ್ಚಿತ ವಿಚಾರವುಳ್ಳ ಸರ್ವಪ್ರಿಯ ರಾಮಚಂದ್ರನಲ್ಲಿ ಹೇಳಿದಳು - ಮಗು! ಹೋಗು, ಹೋಗು. ನಿನ್ನ ದಾರಿ ಮಂಗಲಮಯವಾಗಲಿ. ಮತ್ತೆ ಲಕ್ಷ್ಮಣನಲ್ಲಿ ಪುನಃ ಹೇಳಿದಳು.॥8॥

ಮೂಲಮ್ - 9

ರಾಮಂ ದಶರಥಂ ವಿದ್ಧಿ ಮಾಂ ವಿದ್ಧಿ ಜನಕಾತ್ಮಜಾಮ್ ।
ಅಯೋಧ್ಯಾಮಟವೀಂ ವಿದ್ಧಿ ಗಚ್ಛ ತಾತ ಯಥಾಸುಖಮ್ ॥

ಅನುವಾದ

ಮಗು! ನೀನು ಶ್ರೀರಾಮನನ್ನೇ ತನ್ನ ತಂದೆ ದಶರಥನೆಂದು ತಿಳಿ. ಜನಕನಂದಿನೀ ಸೀತೆಯನ್ನೇ ನಿನ್ನ ತಾಯಿ ಎಂದು ತಿಳಿ. ವನವನ್ನೇ ಅಯೋಧ್ಯೆಯೆಂದು ತಿಳಿ. ಈಗ ಸುಖವಾಗಿ ಇಲ್ಲಿಂದ ಹೊರಡು.॥9॥

ಮೂಲಮ್ - 10

ತತಃ ಸುಮಂತ್ರಃ ಕಾಕುತ್ಸ್ಥಂ ಪ್ರಾಂಜಲಿರ್ವಾಕ್ಯಮಬ್ರವೀತ್ ।
ವಿನೀತೋ ವಿನಯಜ್ಞಶ್ಚ ಮಾತಲಿರ್ವಾಸವಂ ಯಥಾ ॥

ಅನುವಾದ

ಅನಂತರ ಮಾತಲಿಯು ಇಂದ್ರನಲ್ಲಿ ಏನೋ ಹೇಳುವಂತೆಯೇ ವಿನಯವನ್ನು ಬಲ್ಲ ಸುಮಂತ್ರನು ಕಕುತ್ಸ್ಥ ಕುಲಭೂಷಣ ಶ್ರೀರಾಮನಲ್ಲಿ ವಿನಯದಿಂದ ಕೈಮುಗಿದು ಹೇಳಿದನು.॥10॥

ಮೂಲಮ್ - 11

ರಥಾಮಾರೋಹ ಭದ್ರಂ ತೇ ರಾಜಪುತ್ರಮಹಾಯಶಃ ।
ಕ್ಷಿಪ್ರಂ ತ್ವಾಂ ಪ್ರಾಪಯಿಷ್ಯಾಮಿ ಯತ್ರ ಮಾಂ ರಾಮ ವಕ್ಷ್ಯಸೇ ॥

ಅನುವಾದ

ಮಹಾಯಶಸ್ವೀ ರಾಜಕುಮಾರ ಶ್ರೀರಾಮ! ನಿಮಗೆ ಮಂಗಳವಾಗಲಿ. ನೀವು ರಥದಲ್ಲಿ ಕುಳಿತುಕೊಳ್ಳಿ. ನೀವು ನನಗೆ ಹೇಳುವಲ್ಲಿಗೆ ನಿಮ್ಮನ್ನು ಕರೆದುಕೊಂಡು ಹೋಗುವೆನು.॥11॥

ಮೂಲಮ್ - 12

ಚತುರ್ದಶ ಹಿ ವರ್ಷಾಣಿ ವಸ್ತವ್ಯಾನಿ ವನೇ ತ್ವಯಾ ।
ತಾನ್ಯುಪಕ್ರಮಿತವ್ಯಾನಿ ಯಾನಿ ದೇವ್ಯಾ ಪ್ರಚೋದಿತಃ ॥

ಅನುವಾದ

ಹದಿನಾಲ್ಕು ವರ್ಷಗಳ ನಿಮ್ಮ ವನವಾಸದ ಗಣನೆ ಇಂದಿನಿಂದಲೇ ಪ್ರಾರಂಭವಾಗಬೇಕು; ಏಕೆಂದರೆ ದೇವೀ ಕೈಕೇಯಿಯು ಇಂದೇ ನಿಮಗೆ ಕಾಡಿಗೆ ಹೋಗಲು ಪ್ರೇರೇಪಿಸಿರುವಳು.॥12॥

ಮೂಲಮ್ - 13

ತಂ ರಥಂ ಸೂರ್ಯಸಂಕಾಶಂ ಸೀತಾ ಹೃಷ್ಟೇನ ಚೇತಸಾ ।
ಅರುರೋಹ ವರಾರೋಹಾ ಕೃತ್ವಾಲಂಕಾರಮಾತ್ಮನಃ ॥

ಅನುವಾದ

ಆಗ ಸುಂದರೀ ಸೀತೆಯು ಉತ್ತಮ ಒಡವೆಗಳನ್ನು ಧರಿಸಿಕೊಂಡು ಪ್ರಸನ್ನಚಿತ್ತದಿಂದ ಆ ಸೂರ್ಯಸದೃಶ ತೇಜಸ್ವೀ ರಥದಲ್ಲಿ ಆರೂಢಳಾದಳು.॥13॥

ಮೂಲಮ್ - 14

ವನವಾಸಂ ಹಿ ಸಂಖ್ಯಾಯ ವಾಸಾಂಸ್ಯಾಭರಣಾನಿ ಚ ।
ಭರ್ತಾರಮನುಗಚ್ಛಂತ್ಯೈ ಸೀತಾಯೈ ಶ್ವಶುರೋ ದದೌ ॥

ಅನುವಾದ

ಪತಿಯ ಜೊತೆಗೆ ಹೋಗುತ್ತಿರುವ ಸೀತೆಗಾಗಿ ಆಕೆಯ ಮಾವನವರು ವನವಾಸದ ವರ್ಷಗಳನ್ನು ಎಣಿಸಿ ಅದಕ್ಕನುಸಾರವಾಗಿಯೇ ಬಟ್ಟೆ, ಒಡವೆಗಳನ್ನು ಕೊಟ್ಟಿದ್ದರು.॥14॥

ಮೂಲಮ್ - 15

ತಥೈವಾಯುಧಜಾತಾನಿ ಭ್ರಾತೃಭ್ಯಾಂ ಕವಚಾನಿ ಚ ।
ರಥೋಪಸ್ಥೇ ಪ್ರವಿನ್ಯಸ್ಯ ಸಚರ್ಮ ಕಠಿನಂ ಚ ತತ್ ॥

ಅನುವಾದ

ಈ ಪ್ರಕಾರ ಮಹಾರಾಜನು ಇಬ್ಬರೂ ಸಹೋದರ ರಾಮ-ಲಕ್ಷ್ಮಣರಿಗಾಗಿ ಅನೇಕ ಅಸ್ತ್ರ-ಶಸ್ತ್ರ, ಕವಚಾದಿಗಳನ್ನು ಕೊಟ್ಟಿದ್ದನು, ಅವನ್ನೂ ರಥದ ಹಿಂಭಾಗದಲ್ಲಿ ಇರಿಸಿ, ಚರ್ಮದಿಂದ ಸುತ್ತಿದ ಮಂಕರಿ ಮತ್ತು ಗುದ್ದಲಿ ಇವನ್ನೂ ರಥದಲ್ಲಿ ಇರಿಸಲಾಯಿತು.॥15॥

ಮೂಲಮ್ - 16

ಅಥೋ ಜ್ವಲನಸಂಕಾಶಂ ಚಾಮೀಕರವಿಭೂಷಿತಮ್ ।
ತಮಾರುರುಹತುಸ್ತೂರ್ಣಂ ಭ್ರಾತರೌ ರಾಮಲಕ್ಷ್ಮಣೌ ॥

ಅನುವಾದ

ಅನಂತರ ರಾಮ-ಲಕ್ಷ್ಮಣರು ಆ ಅಗ್ನಿಯಂತೆ ಹೊಳೆಯುವ ಸುವರ್ಣಭೂಷಿತ ರಥದಲ್ಲಿ ಆರೂಢರಾದರು.॥16॥

ಮೂಲಮ್ - 17

ಸೀತಾತೃತೀಯಾನಾರೂಢಾನ್ ದೃಷ್ಟ್ವಾರಥಮಚೋದಯತ್ ।
ಸುಮಂತ್ರಃ ಸಮ್ಮತಾನಶ್ವಾನ್ವಾಯುವೇಗಸಮಾಂಜವೇ ॥

ಅನುವಾದ

ಶ್ರೀರಾಮನೇ ಆದಿ ಮೂವರು ರಥಾರೂಢರಾಗಿರುವುದನ್ನು ನೋಡಿ ಸುಮಂತ್ರನು ವಾಯುವೇಗದಂತೆ ವೇಗಶಾಲಿ ಉತ್ತಮ ಕುದುರೆಗಳನ್ನು ಹೂಡಿದ್ದ ರಥವನ್ನು ಮುನ್ನಡೆಸಿದನು.॥17॥

ಮೂಲಮ್ - 18

ಪ್ರಯಾತೇ ತು ಮಹಾರಣ್ಯಂ ಚಿರರಾತ್ರಾಯ ರಾಘವೇ ।
ಬಭೂವ ನಗರೇ ಮೂರ್ಛಾ ಬಲಮೂರ್ಛಾ ಜನಸ್ಯ ಚ ॥

ಅನುವಾದ

ಶ್ರೀರಾಮಚಂದ್ರನು ದೀರ್ಘ ಕಾಲಕ್ಕಾಗಿ ಮಹಾರಣ್ಯದ ಕಡೆಗೆ ಹೋಗತೊಡಗಿದಾಗ ಸಮಸ್ತ ಪುರವಾಸಿಗಳು, ಸೈನಿಕರು ಹಾಗೂ ದರ್ಶಕರಾಗಿ ಬಂದಿರುವ ಜನರು ಮೂರ್ಛಿತರಂತಾದರು.॥18॥

ಮೂಲಮ್ - 19

ತತ್ ಸಮಾಕುಲಸಂಭ್ರಾತಂ ಮತ್ತಸಂಕುಪಿತದ್ವಿಪಮ್ ।
ಹಯಶಿಂಜಿತನಿರ್ಘೋಷಂ ಪುರಮಾಸೀನ್ಮಹಾಸ್ವನಮ್ ॥

ಅನುವಾದ

ಆಗ ಇಡೀ ಅಯೋಧ್ಯೆಯಲ್ಲಿ ಕೋಲಾಹಲವೆದ್ದಿತು. ಎಲ್ಲರೂ ವ್ಯಾಕುಲರಾಗಿ ಗಾಬರಿಗೊಂಡರು. ಮತ್ತಗಜಗಳು ಶ್ರೀರಾಮನ ವಿಯೋಗದಿಂದ ಕುಪಿತವಾಗಿ ಅತ್ತ-ಇತ್ತ ಓಡುವ, ಕುದುರೆಗಳ ಹೇಷಾರವ ಹಾಗೂ ಆಭೂಷಣಗಳ ಖಣಖಣ ತ್ಕಾರದ ಧ್ವನಿಗಳು ಎಲ್ಲೆಡೆ ಪ್ರತಿಧ್ವನಿಸಿದವು.॥19॥

ಮೂಲಮ್ - 20

ತತಃ ಸಬಾಲವೃದ್ಧಾ ಸಾ ಪುರೀ ಪರಮಪೀಡಿತಾ ।
ರಾಮಮೇವಾಭಿದುದ್ರಾವ ಘರ್ಮಾರ್ತಃ ಸಲಿಲಂ ಯಥಾ ॥

ಅನುವಾದ

ಬಿಸಿಲಿನ ತಾಪದಿಂದ ಕಂಗೆಟ್ಟ ಪ್ರಾಣಿಗಳು ನೀರಿನ ಕಡೆಗೆ ಓಡುವಂತೆ ಅಯೋಧ್ಯೆಯ ಆಬಾಲವೃದ್ಧ ಎಲ್ಲ ಜನರು ಅತ್ಯಂತ ಪೀಡಿತಾಗಿ ಶ್ರೀರಾಮನ ಹಿಂದೆ ಓಡತೊಡಗಿದರು.॥20॥

ಮೂಲಮ್ - 21

ಪಾರ್ಶ್ವತಃ ಪೃಷ್ಠತಶ್ಚಾಪಿ ಲಂಬಮಾನಾಸ್ತದುನ್ಮುಖಾಃ ।
ಬಾಷ್ಪಪೂರ್ಣಮುಖಾಃ ಸರ್ವೇ ತಮೂಚುರ್ಭೃಶನಿಸ್ವನಾಃ ॥

ಅನುವಾದ

ಅವರಲ್ಲಿ ಕೆಲವರು ರಥದ ಹಿಂದೆ ಮತ್ತು ಅಕ್ಕ-ಪಕ್ಕಗಳಲ್ಲಿ ಜೋತುಬಿದ್ದರು. ಎಲ್ಲರೂ ಶ್ರೀರಾಮನಿಗಾಗಿ ಉತ್ಕಂಠಿತರಾಗಿದ್ದು, ಎಲ್ಲರ ಮುಖಗಳಲ್ಲಿ ಕಣ್ಣೀರಧಾರೆ ಹರಿಯುತ್ತಿತ್ತು. ಅವರೆಲ್ಲರೂ ಗಟ್ಟಿಯಾಗಿ ಹೇಳತೊಡಗಿದರು.॥21॥

ಮೂಲಮ್ - 22

ಸಂಯಚ್ಛ ವಾಜಿನಾಂ ರಶ್ಮೀನ್ ಸೂತ ಯಾಹಿ ಶನೈಃ ಶನೈಃ ।
ಮುಖಂ ದ್ರಕ್ಷ್ಯಾಮ ರಾಮಸ್ಯ ದುರ್ದಶಂ ನೋಭವಿಷ್ಯತಿ ॥

ಅನುವಾದ

ಸೂತನೇ! ಕುದುರೆಗಳ ಲಗಾಮು ಎಳೆ, ರಥವನ್ನು ನಿಧಾನವಾಗಿ ನಡೆಸು. ನಾವು ಶ್ರೀರಾಮನ ಮುಖವನ್ನು ನೋಡುವೆವು; ಏಕೆಂದರೆ ಇನ್ನು ಈ ಮುಖದ ದರ್ಶನ ನಮಗೆ ದುರ್ಲಭವಾಗುವುದು.॥22॥

ಮೂಲಮ್ - 23

ಆಯಸಂ ಹೃದಯಂ ನೂನಂ ರಾಮಮಾತುರ ಸಂಶಯಮ್ ।
ಯದ್ದೇವಗರ್ಭಪ್ರತಿಮೇವನಂ ಯಾತಿ ನ ಭಿದ್ಯತೇ ॥

ಅನುವಾದ

ಖಂಡಿತವಾಗಿ ಶ್ರೀರಾಮನ ತಾಯಿಯ ಹೃದಯ ಕಬ್ಬಿಣದಿಂದ ಮಾಡಿದೆ, ಇದರಲ್ಲಿ ಸಂಶಯವೇ ಇಲ್ಲ. ಆದ್ದರಿಂದಲೇ ದೇವಕುಮಾರನಂತಹ ತೇಜಸ್ವೀ ಪುತ್ರನು ಕಾಡಿಗೆ ಹೋಗುವಾಗ ಒಡೆದುಹೋಗಿಲ್ಲ.॥23॥

ಮೂಲಮ್ - 24

ಕೃತಕೃತ್ಯಾ ಹಿ ವೈದೇಹೀ ಛಾಯೇವಾನುಗತಾ ಪತಿಮ್ ।
ನ ಜಹಾತಿ ರತಾ ಧರ್ಮೇ ಮೇರುಮರ್ಕಪ್ರಭಾ ಯಥಾ ॥

ಅನುವಾದ

ವಿದೇಹನಂದಿನೀ ಸೀತೆಯು ಕೃತಾರ್ಥಳಾದಳು; ಏಕೆಂದರೆ ಅವಳು ಪಾತಿವ್ರತ್ಯಧರ್ಮದಲ್ಲಿ ತತ್ಪರಳಾಗಿ ನೆರಳಿನಂತೆ ಪತಿಯ ಹಿಂದೆ-ಹಿಂದೆ ಹೋಗುತ್ತಿರುವಳು. ಸೂರ್ಯನ ಪ್ರಭೆ ಮೇರುಪರ್ವತವನ್ನು ತ್ಯಜಿಸದಂತೆ ಅವಳು ಶ್ರೀರಾಮನನ್ನು ಅನುಸರಿಸುತ್ತಿರುವಳು.॥24॥

ಮೂಲಮ್ - 25

ಅಹೋ ಲಕ್ಷ್ಮಣ ಸಿದ್ಧಾರ್ಥಃ ಸತತಂ ಪ್ರಿಯವಾದಿನಮ್ ।
ಭ್ರಾತರಂ ದೇವಸಂಕಾಶಂ ಯಸ್ತ್ವಂ ಪರಿಚರಿಷ್ಯಸಿ ॥

ಅನುವಾದ

ಆಹಾ ಲಕ್ಷ್ಮಣ! ನೀನೂ ಕೃತಾರ್ಥನಾದೆ; ಏಕೆಂದರೆ ನೀನು ಸದಾ ಪ್ರಿಯವಾಗಿ ಮಾತನಾಡುವ ದೇವತುಲ್ಯ ತನ್ನ ಅಣ್ಣನ ಸೇವೆ ಕಾಡಿನಲ್ಲಿ ಮಾಡುವಿ.॥25॥

ಮೂಲಮ್ - 26

ಮಹತ್ಯೇಷಾ ಹಿ ತೇ ಬುದ್ಧಿರೇಷ ಚಾಭ್ಯುದಯೋ ಮಹಾನ್ ।
ಏಷ ಸ್ವರ್ಗಸ್ಯ ಮಾರ್ಗಶ್ಚ ಯದೇನಮನುಗಚ್ಛಸಿ ॥

ಅನುವಾದ

ನಿನ್ನ ಈ ಬುದ್ಧಿ ವಿಶಾಲವಾಗಿದೆ. ಇದು ನಿನ್ನ ಅಭ್ಯುದಯವಾಗಿದೆ. ನಿನಗೆ ಇದು ಸ್ವರ್ಗದ ದಾರಿಯೇ ದೊರೆತಿದೆ; ಏಕೆಂದರೆ ನೀನು ಶ್ರೀರಾಮನನ್ನು ಅನುಸರಿಸುತ್ತಿರುವೆ.॥26॥

ಮೂಲಮ್ - 27

ಏವಂ ವದಂತಸ್ತೇ ಸೋಢುಂ ನ ಶೇಕುರ್ವಾಷ್ಪಮಾಗತಮ್ ।
ನರಾಸ್ತಮನುಗಚ್ಛಂತಿ ಪ್ರಿಯಮಿಕ್ಷ್ವಾಕುನಂದನಮ್ ॥

ಅನುವಾದ

ಹೀಗೆ ಮಾತುಗಳನ್ನಾಡುತ್ತಾ ಆ ಪುರವಾಸಿಗಳು ಉಕ್ಕಿ ಬರುವ ಕಣ್ಣೀರಿನ ವೇಗ ಸಹಿಸದಾದರು. ಅವರೆಲ್ಲರೂ ಎಲ್ಲರ ಪ್ರೇಮಪಾತ್ರ ಇಕ್ಷ್ವಾಕುಕುಲನಂದನ ಶ್ರೀರಾಮನ ಹಿಂದೆ-ಹಿಂದೆ ನಡೆದುಹೋಗುತ್ತಿದ್ದರು.॥27॥

ಮೂಲಮ್ - 28

ಅಥ ರಾಜಾ ವೃತಃ ಸ್ತ್ರೀಭಿರ್ದಿನಾಭಿರ್ದೀನಚೇತನಃ ।
ನಿರ್ಜಗಾಮ ಪ್ರಿಯಂ ಪುತ್ರಂ ದ್ರಕ್ಷ್ಯಾಮೀತಿ ಬ್ರುವನ್ಗೃಹಾತ್ ॥

ಅನುವಾದ

ಆಗ ದಯನೀಯ ಸ್ಥಿತಿಯಲ್ಲಿದ್ದು ತನ್ನ ಪತ್ನಿಯರಿಂದ ಸುತ್ತುವರೆದ ದಶರಥನು ಅತ್ಯಂತ ದೀನನಾಗಿ ‘ನಾನು ನನ್ನ ಪ್ರಿಯಪುತ್ರ ಶ್ರೀರಾಮನನ್ನು ನೋಡುವೆನು’ ಎಂದು ಹೇಳುತ್ತಾ ಅಂತಃಪುರದಿಂದ ಹೊರಗೆ ಬಂದನು.॥28॥

ಮೂಲಮ್ - 29

ಶುಶ್ರವೇ ಚಾಗ್ರತಃ ಸ್ತ್ರೀಣಾಂ ರುದತೀನಾಂ ಮಹಾಸ್ವನಃ ।
ಯಥಾ ನಾದಃ ಕರೇಣೂನಾಂ ಬದ್ಧೇ ಮಹತಿ ಕುಂಜರೇ ॥

ಅನುವಾದ

ಅವನು ತನ್ನ ಎದುರಿಗೆ ಅಳುತ್ತಿರುವ ಪತ್ನಿಯರ ಆರ್ತನಾದವನ್ನು ಕೇಳಿದನು. ಅದು ಯೂಥಪತಿ ದೊಡ್ಡ ಆನೆಯು ಬಂಧಿತವಾದಾಗ ಹೆಣ್ಣಾನೆಗಳ ಚೀತ್ಕಾರದಂತೆ ಕಾಣುತ್ತಿತ್ತು.॥29॥

ಮೂಲಮ್ - 30

ಪಿತಾ ಹಿ ರಾಜಾ ಕಾಕುತ್ಸ್ಥಃ ಶ್ರೀಮಾನ್ ಸನ್ನಸ್ತದಾ ಬಭೌ ।
ಪರಿಪೂರ್ಣಃ ಶಶೀ ಕಾಲೇ ಗೃಹೇಣೋಪಪ್ಲುತೋ ಯಥಾ ॥

ಅನುವಾದ

ಆಗ ಶ್ರೀರಾಮನ ತಂದೆ ಕಕುತ್ಸ್ಥವಂಶೀ ಶ್ರೀಮಾನ್ ದಶರಥನು- ಪರ್ವಕಾಲದಲ್ಲಿ ರಾಹುಗ್ರಸ್ತ ಪೂರ್ಣಚಂದ್ರನು ಕಾಂತಿಹೀನನಾಗುವಂತೆ ಖಿನ್ನನಾಗಿ ಕಂಡುಬರುತ್ತಿದ್ದನು.॥30॥

ಮೂಲಮ್ - 31

ಸ ಚ ಶ್ರೀಮಾನಚಿಂತ್ಯಾತ್ಮಾ ರಾಮೋ ದಶರಥಾತ್ಮಜಃ ।
ಸೂತಂ ಸಂಚೋದಯಾಮಾಸ ತ್ವರಿತಂ ವಾಹ್ಯತಾಮಿತಿ ॥

ಅನುವಾದ

ಇದನ್ನು ನೋಡಿ ಅಚಿಂತ್ಯ ಸ್ವರೂಪ ದಶರಥನಂದನ ಶ್ರೀಮಾನ್ ಭಗವಾನ್ ಶ್ರೀರಾಮನು ಸುಮಂತ್ರನನ್ನು ಪ್ರೇರೇಪಿಸುತ್ತಾ-‘ನೀನು ರಥವನ್ನು ವೇಗವಾಗಿ ನಡೆಸು’ ಎಂದು ಹೇಳಿದನು.॥31॥

ಮೂಲಮ್ - 32

ರಾಮೋ ಯಾಹೀತಿ ತಂ ಸೂತಂ ತಿಷ್ಠೇತಿ ಸ ಜನಸ್ತಥಾ ।
ಉಭಯಂ ನಾಶಕತ್ಸೂತಃ ಕರ್ತುಮಧ್ವನಿ ಚೋದಿತಃ ॥

ಅನುವಾದ

ಒಂದು ಕಡೆ ಶ್ರೀರಾಮನು ರಥವನ್ನು ಓಡಿಸಲು ಹೇಳುತ್ತಿದ್ದಾನೆ, ಇನ್ನೊಂದೆಡೆ ಎಲ್ಲ ಜನ ಸಮುದಾಯವು ಅವನನ್ನು ನಿಲ್ಲುವಂತೆ ಹೇಳುತ್ತಿತ್ತು. ಹೀಗೆ ಕಿಂಕರ್ತವ್ಯಮೂಢನಾಗಿ ಸಾರಥಿ ಸುಮಂತ್ರನು ಏನೂ ಮಾಡದಾದನು. ರಥವನ್ನು ಮುಂದಕ್ಕೂ ಓಡಿಸಲಿಲ್ಲ, ಪೂರ್ಣವಾಗಿ ನಿಲ್ಲಿಸಲೂ ಇಲ್ಲ.॥32॥

ಮೂಲಮ್ - 33

ನಿರ್ಗಚ್ಛತಿ ಮಹಾಬಾಹೌರಾಮೇ ಪೌರಜನಾಶ್ರುಭಿಃ ।
ಪತಿತೈರಭ್ಯವಹಿತಂ ಪ್ರಣನಾಶ ಮಹೀರಜಃ ॥

ಅನುವಾದ

ಮಹಾಬಾಹು ಶ್ರೀರಾಮನು ನಗರದಿಂದ ಹೊರಡುವಾಗ ನಗರವಾಸಿಗಳ ಕಣ್ಣುಗಳಿಂದ ಬಿದ್ದಿರುವ ಕಣ್ಣೀರಿನಿಂದ ಭೂಮಿಯ ಮೇಲಿನ ಹಾರುವ ಧೂಳೂ ನೆನೆದು ಹೋಯಿತು.॥33॥

ಮೂಲಮ್ - 34

ರುದಿತಾಶ್ರುಪರಿದ್ಯೂನಂ ಹಾಹಾಕೃತಮಚೇತನಮ್ ।
ಪ್ರಯಾಣೇ ರಾಘವಸ್ಯಾಸೀತ್ ಪುರಂ ಪರಮಪೀಡಿತಮ್ ॥

ಅನುವಾದ

ಶ್ರೀರಾಮಚಂದ್ರನು ಹೊರಡುವಾಗ ಇಡೀ ನಗರವು ಪೀಡಿತವಾಯಿತು. ಎಲ್ಲರೂ ಅಳುತ್ತಾ ಕಣ್ಣೀರು ಸುರಿಸಿದರು. ಎಲ್ಲರೂ ಹಾಹಾಕಾರ ಮಾಡುತ್ತಾ ಮೂರ್ಛಿತರಂತಾದರು.॥34॥

ಮೂಲಮ್ - 35

ಸುಸ್ರಾವ ನಯನೈಃ ಸ್ತ್ರೀಣಾಮಸ್ರಮಾಯಾಸಸಂಭವಮ್ ।
ಮೀನಸಂಕ್ಷೋಭಚಲಿತೈಃ ಸಲಿಲಂ ಪಂಕಜೈರಿವ ॥

ಅನುವಾದ

ಸರೋವರದಲ್ಲಿ ಮೀನುಗಳು ನೆಗೆಯುತ್ತಿರುವಾಗ ಹಾರಿದ ನೀರು ಕಮಲಗಳಿಂದ ತೊಟ್ಟಿಕ್ಕುವ ನೀರಿನಂತೆ ನಾರಿಯರ ಕಣ್ಣುಗಳಿಂದ ದುಃಖದ ಕಣ್ಣೀರು ಹರಿಯುತ್ತಿದ್ದವು.॥35॥

ಮೂಲಮ್ - 36

ದೃಷ್ಟ್ವಾ ತು ನೃಪತಿಃ ಶ್ರೀಮಾನೇಕಚಿತ್ತಗತಂ ಪುರಮ್ ।
ನಿಪಪಾತೈವ ದುಃಖೇನ ಕೃತ್ತಮೂಲ ಇವ ದ್ರುಮಃ ॥

ಅನುವಾದ

ಶ್ರೀಮಾನ್ ದಶರಥನು ಇಡೀ ಅಯೋಧ್ಯೆಯ ಜನರು ಒಂದೇ ರೀತಿ ವ್ಯಾಕುಲಚಿತ್ತರಾಗಿರುವುದನ್ನು ನೋಡಿ ಅತ್ಯಂತ ದುಃಖದಿಂದಾಗಿ ಬುಡ ಕಡಿದ ಮರದಂತೆ ನೆಲಕ್ಕೆ ಕುಸಿದುಬಿದ್ದನು.॥36॥

ಮೂಲಮ್ - 37

ತತೋ ಹಲಹಲಾಶಬ್ದೋ ಜಜ್ಞೇ ರಾಮಸ್ಯ ಪೃಷ್ಠತಃ ।
ನರಾಣಾಂ ಪ್ರೇಕ್ಷ್ಯ ರಾಜಾನಂ ಸೀದಂತಂ ಭೃಶದುಃಖಿತಮ್ ॥

ಅನುವಾದ

ಆಗ ಅತ್ಯಂತ ದುಃಖಮಗ್ನನಾಗಿ ಕಷ್ಟಪಡುತ್ತಿರುವ ರಾಜನನ್ನು ನೋಡಿ ಶ್ರೀರಾಮನ ಹಿಂದೆ ಹೋಗುತ್ತಿದ್ದ ಜನರ ಕೋಲಾಹಲ ಪುನಃ ಪ್ರಕಟವಾಯಿತು.॥37॥

ಮೂಲಮ್ - 38

ಹಾ ರಾಮೇತಿ ಜನಾಃ ಕೇಚಿದ್ ರಾಮಮಾತೇತಿ ಚಾಪರೇ ।
ಅಂತಃಪುರಸಮೃದ್ಧಂ ಚ ಕ್ರೋಶಂತಂ ಪರ್ಯದೇವಯನ್ ॥

ಅನುವಾದ

ಅಂತಃಪುರದ ರಾಣಿಯರ ಸಹಿತ ರಾಜಾದಶರಥನು ಗಟ್ಟಿಯಾಗಿ ವಿಲಾಪಮಾಡುತ್ತಾ, ಕೆಲವರು ಹಾ ರಾಮ! ಎಂದು ಹೇಳಿದರೆ, ಕೆಲವರು ಹಾ ರಾಮಮಾತೆ! ಎಂದು ಕೂಗುತ್ತಾ ಕರುಣಾಕ್ರಂದನ ಮಾಡತೊಡಗಿದರು.॥38॥

ಮೂಲಮ್ - 39

ಅನ್ವೀಕ್ಷಮಾಣೋ ರಾಮಸ್ತು ವಿಷಣ್ಣಂ ಭ್ರಾಂತಚೇತಸಮ್ ।
ರಾಜಾನಂ ಮಾತರಂ ಚೈವ ದದರ್ಶಾನುಗತೌ ಪಥಿ ॥

ಅನುವಾದ

ಆಗ ಶ್ರೀರಾಮಚಂದ್ರನು ಹಿಂದಿರುಗಿ ನೋಡಿದಾಗ ಅವನಿಗೆ ವಿಷಾದಗ್ರಸ್ತ ಹಾಗೂ ಭ್ರಾಂತಚಿತ್ತ ತಂದೆ ದಶರಥ ಮತ್ತು ದುಃಖದಲ್ಲಿ ಮುಳುಗಿದ ತಾಯಿ ಕೌಸಲ್ಯೆ ಇಬ್ಬರೂ ಮಾರ್ಗದಲ್ಲಿ ತನ್ನ ಹಿಂದೆ ಬರುತ್ತಿರುವುದನ್ನು ನೋಡಿದನು.॥39॥

ಮೂಲಮ್ - 40

ಸ ಬದ್ಧ ಇವ ಪಾಶೇನ ಕಿಶೋರೋ ಮಾತರಂ ಯಥಾ ।
ಧರ್ಮಪಾಶೇನ ಸಂಯುಕ್ತಃ ಪ್ರಕಾಶಂ ನಾಭ್ಯುದೈಕ್ಷತ ॥

ಅನುವಾದ

ಹಗ್ಗದಿಂದ ಕಟ್ಟಿಹಾಕಿದ ಕುದುರೆಯ ಮರಿ ತನ್ನ ತಾಯಿಯ ಬಳಿಗೆ ಹೋಗಲಾರದೋ ಹಾಗೆಯೇ ಧರ್ಮದ ಬಂಧನದಲ್ಲಿ ಬಂಧಿತನಾದ ಶ್ರೀರಾಮನು ತನ್ನ ತಾಯಿಯ ಕಡೆಗೆ ಸ್ಪಷ್ಟವಾಗಿ ನೋಡದಾದನು.॥40॥

ಮೂಲಮ್ - 41

ಪದಾತಿನೌ ಚ ಯಾನಾರ್ಹಾವದುಃಖಾರ್ಹೌ ಸುಖೋಚಿತೌ ।
ದೃಷ್ಟ್ವಾ ಸಂಚೋದಯಾಮಾಸ ಶೀಘ್ರಂ ಯಾಹೀತಿ ಸಾರಥಿಮ್ ॥

ಅನುವಾದ

ವಾಹನಗಳಲ್ಲೇ ಓಡಾಡಲು ಯೋಗ್ಯವಾದ, ದುಃಖ ಭೋಗಿಸಲು ಅಯೋಗ್ಯ ಹಾಗೂ ಸುಖಭೋಗಿಸಲಿಕ್ಕಾಗಿಯೇ ಯೋಗ್ಯವಾದ, ತಾಯಿ-ತಂದೆಯವರು ಕಾಲ್ನಡಿಗೆಯಿಂದಲೇ ನನ್ನ ಹಿಂದೆ-ಹಿಂದೆಯೇ ಬರುತ್ತಿರುವುದನ್ನು ನೋಡಿ ಶ್ರೀರಾಮನು ಸಾರಥಿಗೆ ಶೀಘ್ರವಾಗಿ ರಥವನ್ನು ಓಡಿಸುವಂತೆ ಪ್ರೇರೇಪಿಸಿದನು.॥41॥

ಮೂಲಮ್ - 42

ನಹಿತತ್ ಪುರುಷವ್ಯಾಘ್ರೋ ದುಃಖಜಂ ದರ್ಶನಂ ಪಿತುಃ ।
ಮಾತುಶ್ಚ ಸಹಿತುಂ ಶಕ್ತಸ್ತೋತ್ರೈರ್ನುನ್ನ ಇವ ದ್ವಿಪಃ ॥

ಅನುವಾದ

ಅಂಕುಶದಿಂದ ಪೀಡಿಸಿದ ಗಜರಾಜವು ಆ ಕಷ್ಟವನ್ನು ಸಹಿಸಲಾರದಂತೆ, ಪುರುಷಸಿಂಹ ಶ್ರೀರಾಮನಿಗೆ ತಾಯಿ-ತಂದೆಯರನ್ನು ಈ ದುಃಖಿತ ಸ್ಥಿತಿಯಲ್ಲಿ ನೋಡುವುದು ಸಹಿಸಲಾಗಲಿಲ್ಲ.॥42॥

ಮೂಲಮ್ - 43

ಪ್ರತ್ಯಗಾರಮಿವಾಯಾಂತೀ ಸವತ್ಸಾ ವತ್ಸಕಾರಣಾತ್ ।
ಬುದ್ಧವತ್ಸಾ ಯಥಾ ಧೇನೂರಾಮಮಾತಾಭ್ಯಧಾವತ ॥

ಅನುವಾದ

ಮನೆಯಲ್ಲಿ ಕಟ್ಟಿಹಾಕಿದ ಕರುವಿನ ಬಳಿಗೆ ತಾಯಿ ಹಸು ಸಂಜೆ ಮನೆಯ ಕಡೆಗೆ ಓಡಿಹೋಗುತ್ತದೋ ಹಾಗೆಯೇ ಶ್ರೀರಾಮನ ತಾಯಿ ಕೌಸಲ್ಯೆಯು ಅವನ ಬಳಿಗೆ ಓಡಿ ಬರುತ್ತಿದ್ದಳು.॥43॥

ಮೂಲಮ್ - 44

ತಥಾ ರುದಂತೀಂ ಕೌಸಲ್ಯಾಂ ರಥಂ ತಮನುಧಾವತೀಮ್ ।
ಕ್ರೋಶಂತೀಂ ರಾಮ ರಾಮೇತಿ ಹಾ ಸೀತೇ ಲಕ್ಷ್ಮಣೇತಿ ಚ ॥

ಮೂಲಮ್ - 45

ರಾಮಲಕ್ಷ್ಮಣಸೀತಾರ್ಥಂ ಸ್ರವಂತೀಂ ವಾರಿ ನೇತ್ರಜಮ್ ।
ಅಸಕೃತ್ಪ್ರೈಕ್ಷತ ಸ ತಾಂ ನೃತ್ಯಂತೀಮಿವ ಮಾತರಮ್ ॥

ಅನುವಾದ

ಹಾ ರಾಮಾ! ಹಾ ರಾಮಾ! ಹಾ ಸೀತೇ! ಹಾ ಲಕ್ಷ್ಮಣಾ ಎಂದು ಕೂಗುತ್ತಾ ಕೌಸಲ್ಯೆಯು ರಥದ ಹಿಂದೆ ಓಡುತ್ತಿದ್ದಳು. ಅವಳು ಶ್ರೀರಾಮ ಲಕ್ಷ್ಮಣ ಸೀತೆಗಾಗಿ ಕಣ್ಣೀರು ಹರಿಸುತ್ತಿದ್ದಳು. ಅತ್ತ-ಇತ್ತ ವಾಲುತ್ತಾ ಎಡವುತ್ತಾ, ಏಳುತ್ತಾ-ಬೀಳುತ್ತಾ, ಓಡಿ ಬರುತ್ತಿದ್ದಳು. ಈ ಸ್ಥಿತಿಯಲ್ಲಿ ತಾಯಿ ಕೌಸಲ್ಯೆಯನ್ನು ಶ್ರೀರಾಮನು ನೋಡಿದನು.॥44-45॥

ಮೂಲಮ್ - 46

ತಿಷ್ಠೇತಿ ರಾಜಾ ಚುಕ್ರೋಶ ಯಾಹಿ ಯಾಹೀತಿ ರಾಘವಃ ।
ಸುಮಂತ್ರಸ್ಯ ಬಭೂವಾತ್ಮಾ ಚಕ್ರಯೋರಿವ ಚಾಂತರಾ ॥

ಅನುವಾದ

ರಾಜಾ ದಶರಥನು ಕೂಗಿ ಹೇಳುತ್ತಿದ್ದನು - ‘ಸುಮಂತ್ರ! ನಿಲ್ಲು, ನಿಲ್ಲು’ ಶ್ರೀರಾಮಚಂದ್ರನು - ‘ಮುಂದೆ ನಡೆ, ಬೇಗ ಮುಂದಕ್ಕೆ ನಡೆ’ ಎಂದು ಹೇಳುತ್ತಿದ್ದನು. ಅವೆರಡು ಆದೇಶಗಳಲ್ಲಿ ಬಿದ್ದಿರುವ ಬಡಪಾಯಿ ಸುಮಂತ್ರನ ಮನಸ್ಸು ಆಗ ಎರಡು ಗಾಲಿಗಳ ನಡುವೆ ಸಿಲುಕಿಹಾಕಿಕೊಂಡ ಮನುಷ್ಯನಂತೆ ಆಗಿತ್ತು.॥46॥

ಮೂಲಮ್ - 47

ನಾಶ್ರೌಷಮಿತಿ ರಾಜಾನಮುಪಾಲಬ್ದೋಽಪಿ ವಕ್ಷ್ಯಸಿ ।
ಚಿರಂ ದುಃಖಸ್ಯ ಪಾಪಿಷ್ಠಮಿತಿ ರಾಮಸ್ತಮಬ್ರವೀತ್ ॥

ಅನುವಾದ

ಆಗ ಶ್ರೀರಾಮನು ಸುಮಂತ್ರನಲ್ಲಿ ಹೇಳಿದನು - ಇಲ್ಲಿ ಹೆಚ್ಚು ವಿಳಂಬ ಮಾಡುವುದು ನನಗೆ ಮತ್ತು ತಂದೆಯವರಿಗೆ ಮಹಾದುಃಖದ ಕಾರಣವಾದೀತು. ಅದಕ್ಕಾಗಿ ರಥವನ್ನು ಮುಂದಕ್ಕೆ ಹೊಡಿ. ಮರಳಿದಾಗ ಮಹಾರಾಜರು ಕೇಳಿದರೆ ನನಗೆ ನಿಮ್ಮ ಮಾತು ಕೇಳಿಸಲಿಲ್ಲ ಎಂದು ಹೇಳು.॥47॥

ಮೂಲಮ್ - 48

ಸ ರಾಮಸ್ಯ ವಚಃ ಕುರ್ವನ್ನನುಜ್ಞಾಪ್ಯ ಚ ತಂ ಜನಮ್ ।
ವ್ರಜತೋಽಪಿ ಹಯಾನ್ಶೀಘ್ರಂ ಚೋದಯಾಮಾಸ ಸಾರಥಿಃ ॥

ಅನುವಾದ

ಕೊನೆಗೆ ರಾಮನ ಆದೇಶವನ್ನೇ ಪಾಲಿಸುತ್ತಾ ಸಾರಥಿಯು ಹಿಂದಿನಿಂದ ಬರುತ್ತಿರುವ ಜನರ ಅನುಮತಿ ಪಡೆದು ನಡೆಯುತ್ತಿದ್ದ ಕುದುರೆಗಳನ್ನು ವೇಗವಾಗಿ ಓಡಿಸಿದನು.॥48॥

ಮೂಲಮ್ - 49

ನ್ಯವರ್ತತ ಜನೋ ರಾಜ್ಞೋ ರಾಮಂ ಕೃತ್ವಾ ಪ್ರದಕ್ಷಿಣಮ್ ।
ಮನಸಾಪ್ಯಾಶುವೇಗೇನ ನ ನ್ಯವರ್ತತ ಮಾನುಷಮ್ ॥

ಅನುವಾದ

ದಶರಥನ ಜೊತೆಗೆ ಬರುತ್ತಿದ್ದ ಜನರು ಮನಸ್ಸಿನಲ್ಲೇ ಶ್ರೀರಾಮನ ಪ್ರದಕ್ಷಿಣೆ ಮಾಡಿ ಶರೀರಮಾತ್ರದಿಂದ ಮರಳಿದರು. (ಮನಸ್ಸಿನಿಂದ ಅಲ್ಲ); ಏಕೆಂದರೆ ಮನಸ್ಸಿನ ಗತಿ ರಥಕ್ಕಿಂತಲೂ ತೀವ್ರಗಾಮಿಯಾಗಿತ್ತು. ಕೆಲವು ಜನರು ಶೀಘ್ರಗಾಮಿ ಮನಸ್ಸು ಮತ್ತು ಶರೀರದಿಂದಲೂ ಮರಳಲಿಲ್ಲ. ರಾಮನ ಹಿಂದೆ-ಹಿಂದೆ ಓಡುತ್ತಾ ನಡೆದರು.॥49॥

ಮೂಲಮ್ - 50

ಯಮಿಚ್ಛೇತ್ ಪುನರಾಯಾತಂ ನೈನಂ ದೂರಮನುವ್ರಜೇತ್ ।
ಇತ್ಯಮಾತ್ಯಾಮಹಾರಾಜಮೂಚುರ್ದಶರಥಂ ವಚಃ ॥

ಅನುವಾದ

ಇತ್ತ ಮಂತ್ರಿಗಳು ದಶರಥನಿಗೆ ಮಹಾರಾಜರೇ! ಯಾರು ಬೇಗನೆ ಮರಳಿ ಬರುವರೋ, ಅವರ ಒಳಿತನ್ನು ಬಯಸುವವರು ಅವರ ಹಿಂದೆ ದೂರದವರೆಗೆ ಹೋಗಬಾರದು ಎಂದು ಹೇಳುತ್ತಿದ್ದರು.॥50॥

ಮೂಲಮ್ - 51

ತೇಷಾಂ ವಚಃ ಸರ್ವಗುಣೋಪಪನ್ನಃ
ಪ್ರಸ್ವಿನ್ನಗಾತ್ರಃ ಪ್ರವಿಷಣ್ಣ ರೂಪಃ ।
ನಿಶಮ್ಯ ರಾಜಾ ಕೃಪಣಃ ಸಭಾರ್ಯೋ
ವ್ಯವಸ್ಥಿತಸ್ತಂ ಸುತಮೀಕ್ಷಮಾಣಃ ॥

ಅನುವಾದ

ಸರ್ವಗುಣ ಸಂಪನ್ನ ದಶರಥನ ಶರೀರವು ಬೆವರಿನಿಂದ ಒದ್ದೆಯಾಗಿತ್ತು. ಅವನು ವಿಷಾದದ ಮೂರ್ತಿಮಂತ ಸ್ವರೂಪದಂತೆ ಕಾಣುತ್ತಿದ್ದನು. ಮಂತ್ರಿಗಳ ಮಾತನ್ನು ಕೇಳಿ ಅವರು ಅಲ್ಲೇ ನಿಂತುಬಿಟ್ಟರು ಮತ್ತು ರಾಣಿಯರ ಸಹಿತ ಅತ್ಯಂತ ದೀನಭಾವದಿಂದ ಪುತ್ರನ ಕಡೆಗೇ ನೋಡುತ್ತಾ ಇದ್ದನು.॥51॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ನಲವತ್ತನೆಯ ಸರ್ಗ ಪೂರ್ಣವಾಯಿತು ॥40॥