वाचनम्
ಭಾಗಸೂಚನಾ
ದಶರಥನ ವಿಲಾಪ, ರಾಜನ ಆಜ್ಞೆಯಂತೆ ಸುಮಂತ್ರನು ರಥವನ್ನು ಸಜ್ಜುಗೊಳಿಸಿದುದು, ಕೋಶಾಧ್ಯಕ್ಷನು ಬಹುಮೂಲ್ಯವಾದ ಆಭರಣಗಳನ್ನು ಸೀತೆಗೆ ಕೊಟ್ಟುದು, ಪತಿಯ ಸೇವೆ ಮಾಡಿಕೊಂಡಿರುವಂತೆ ಸೀತೆಗೆ ಕೌಸಲ್ಯೆಯಿಂದ ಉಪದೇಶ, ಸೀತೆಯ ಸಮ್ಮತಿ, ತಂದೆಯ ವಿಷಯದಲ್ಲಿ ದೋಷವೆಣಿಸಬಾರದೆಂದು ಶ್ರೀರಾಮನಿಂದ ತಾಯಿಗೆ ಹಿತೋಕ್ತಿ, ಶ್ರೀರಾಮನು ಇತರ ಮಾತೆಯರಿಂದಲೂ ವನವಾಸಕ್ಕೆ ಅನುಮತಿ ಪಡೆದುದು
ಮೂಲಮ್ - 1
ರಾಮಸ್ಯ ತು ವಚಃ ಶ್ರುತ್ವಾ ಮುನಿವೇಷಧರಂ ಚ ತಮ್ ।
ಸಮೀಕ್ಷ್ಯ ಸಹ ಭಾರ್ಯಾಭೀ ರಾಜಾ ವಿಗತಚೇತನಃ ॥
ಅನುವಾದ
ಶ್ರೀರಾಮನ ಮಾತನ್ನ ಕೇಳಿ, ಮುನಿವೇಷದಲ್ಲಿರುವ ಅವನನ್ನು ನೋಡಿ ಪತ್ನಿಯರ ಸಹಿತ ದಶರಥನು ಶೋಕದಿಂದ ನಿಶ್ಚೇಷ್ಟಿತನಂತೆ ಆದನು.॥1॥
ಮೂಲಮ್ - 2
ನೈನಂ ದುಃಖೇನ ಸಂತಪ್ತಃ ಪ್ರತ್ಯವೈಕ್ಷತ ರಾಘವಮ್ ।
ನ ಚೈನಮಭಿಸಂಪ್ರೇಕ್ಷ್ಯ ಪ್ರತ್ಯಭಾಷತ ದುರ್ಮನಾಃ ॥
ಅನುವಾದ
ದುಃಖದಿಂದ ಸಂತಪ್ತನಾದ ಕಾರಣ ಅವನು ಶ್ರೀರಾಮನನ್ನು ಸರಿಯಾಗಿ ನೋಡದಾದನು ಮತ್ತು ನೋಡಿಯೂ ಮನಸ್ಸಿನಲ್ಲಿರುವ ದುಃಖದಿಂದ ಅವನಿಗೆ ಯಾವ ಉತ್ತರವನ್ನೂ ಕೊಡದಾದನು.॥2॥
ಮೂಲಮ್ - 3
ಸ ಮುಹೂರ್ತಮಿವಾಸಂಜ್ಞೋ ದುಃಖಿತಶ್ಚ ಮಹೀಪತಿಃ ।
ವಿಲಲಾಪ ಮಹಾಬಾಹೂ ರಾಮಮೇವಾನುಚಿಂತಯನ್ ॥
ಅನುವಾದ
ಮುಹೂರ್ತಕಾಲ ಪ್ರಜ್ಞಾಹೀನನಂತೆ ಇದ್ದು ಮತ್ತೆ ಎಚ್ಚರಗೊಂಡಾಗ ಮಹಾಬಾಹು ರಾಜನು ಶ್ರೀರಾಮನನ್ನೇ ಚಿಂತಿಸುತ್ತಾ ದುಃಖಿತನಾಗಿ ವಿಲಪಿಸತೊಡಗಿದನು.॥3॥
ಮೂಲಮ್ - 4
ಮನ್ಯೇ ಖಲು ಮಯಾ ಪೂರ್ವಂ ವಿವತ್ಸಾ ಬಹವಃ ಕೃತಾಃ ।
ಪ್ರಾಣಿನೋ ಹಿಂಸಿತಾ ವಾಪಿ ತನ್ಮಾಮಿದಮುಪಸ್ಥಿತಮ್ ॥
ಅನುವಾದ
ನಾನು ಹಿಂದಿನ ಜನ್ಮದಲ್ಲಿ ಅವಶ್ಯವಾಗಿ ಅನೇಕ ಹಸುಗಳನ್ನು ಕರುಗಳಿಂದ ಅಗಲಿಸಿಬಿಟ್ಟಿರುವೆನು, ಅಥವಾ ಅನೇಕ ಪ್ರಾಣಿಗಳ ಹಿಂಸೆ ಮಾಡಿರುವೆ ಎಂದು ತೋರುತ್ತದೆ. ಅದರಿಂದ ಇಂದು ನನ್ನ ಮೇಲೆ ಈ ಸಂಕಟ ಬಂದೆರಗಿದೆ.॥4॥
ಮೂಲಮ್ - 5
ನ ತ್ವೇವಾನಾಗತೇ ಕಾಲೇ ದೇಹಾಚ್ಚ್ಯವತಿ ಜೀವಿತಮ್ ।
ಕೈಕೇಯ್ಯಾ ಕ್ಲಿಶ್ಯಮಾನಸ್ಯ ಮೃತ್ಯುರ್ಮಮ ನ ವಿದ್ಯತೇ ॥
ಅನುವಾದ
ಕಾಲವು ಸನ್ನಿಹಿತವಾಗದೆ ಯಾರ ಶರೀರದಿಂದಲೂ ಪ್ರಾಣ ಹೋಗುವುದಿಲ್ಲ. ಅದರಿಂದಲೇ ಕೈಕೇಯಿಯಿಂದ ಇಷ್ಟು ಕ್ಲೇಶಪಟ್ಟರೂ ನನ್ನ ಮೃತ್ಯು ಆಗುವುದಿಲ್ಲವಲ್ಲ.॥5॥
ಮೂಲಮ್ - 6
ಯೋಽಹಂ ಪಾವಕಸಂಕಾಶಂ ಪಶ್ಯಾಮಿ ಪುರತಃ ಸ್ಥಿತಮ್ ।
ವಿಹಾಯ ವಸನೇ ಸೂಕ್ಷ್ಮೇ ತಾಪಸಾಚ್ಛಾದಮಾತ್ಮಜಮ್ ॥
ಅನುವಾದ
ಅಯ್ಯೋ! ಅಗ್ನಿಯಂತೆ ತೇಜಸ್ವೀ ನನ್ನ ಪುತ್ರನನ್ನು ರಾಜೋಚಿತ ವಸ್ತ್ರಗಳನ್ನು ತ್ಯಜಿಸಿ ತಪಸ್ವಿಗಳ ವಲ್ಕಲಗಳ್ನು ಉಟ್ಟು ಎದುರಿಗೆ ನಿಂತಿರುವುದನ್ನು ನೋಡಿಯೂ ನನ್ನ ಪ್ರಾಣಗಳು ಹೋಗಲಿಲ್ಲವಲ್ಲ.॥6॥
ಮೂಲಮ್ - 7
ಏಕಸ್ಯಾಃ ಖಲು ಕೈಕೇಯ್ಯಾಃ ಕೃತೇಽಯಂ ಖಿದ್ಯತೇ ಜನಃ ।
ಸ್ವಾರ್ಥೇ ಪ್ರಿಯತಮಾನಾಯಾಃ ಸಂಶ್ರಿತ್ಯ ನಿಕೃತಿಂತ್ವಿಮಾಮ್ ॥
ಅನುವಾದ
ವಂಚನೆಯ ಮಾರ್ಗವನ್ನಾಶ್ರಯಿಸಿ ಸ್ವಾರ್ಥಸಾಧನೆಯನ್ನು ಮಾಡಿಕೊಳ್ಳಲು ಯತ್ನಿಸಿದ ಕೈಕೆಯಿಯೊಬ್ಬಳಿಂದ ಸಕಲ ಪ್ರಜೆಗಳು ರಾಮನ ವಿರಹಕ್ಲೇಶವನ್ನು ಅನುಭವಿಸುವಂತಾಯಿತಲ್ಲ.॥7॥
ಮೂಲಮ್ - 8
ಏವಮುಕ್ತ್ವಾತು ವಚನಂ ಬಾಷ್ಪೇಣ ವಿಹತೇದ್ರಿಯಃ ।
ರಾಮೇತಿ ಸಕೃದೇವೋಕ್ತ್ವಾ ವ್ಯಾಹರ್ತುಂ ನ ಶಶಾಕ ಸಃ ॥
ಅನುವಾದ
ಹೀಗೆ ಹೇಳುತ್ತಾ-ಹೇಳುತ್ತಾ ರಾಜನ ಕಣ್ಣುಗಳಲ್ಲಿ ನೀರು ತುಂಬಿ ಬಂತು. ಅವನ ಇಂದ್ರಿಯಗಳು ಶಿಥಿಲವಾಗಿ, ಒಂದೇ ಬಾರಿ ಹೇರಾಮ! ಎಂದು ಹೇಳಿ ಮೂರ್ಛಿತನಾದನು. ಮುಂದೆ ಮಾತನಾಡದಾದನು.॥8॥
ಮೂಲಮ್ - 9
ಸಂಜ್ಞಾಂ ತು ಪ್ರತಿಲಭ್ಯೈವ ಮುಹೂರ್ತಾತ್ ಸಮಹೀಪತಿಃ ।
ನೇತ್ರಾಭ್ಯಾಮಶ್ರುಪೂರ್ಣಾಭ್ಯಾಂ ಸುಮಂತ್ರಮಿದಮಬ್ರವೀತ್ ॥
ಅನುವಾದ
ಮುಹೂರ್ತ ಕಾಲದಲ್ಲಿ ಎಚ್ಚರಗೊಂಡು ಮಹಾರಾಜನು ಕಣ್ಣೀರು ತುಂಬಿದ ನೇತ್ರಗಳಿಂದ ನೋಡುತ್ತಾ ಸುಮಂತ್ರನಲ್ಲಿ ಈ ಪ್ರಕಾರ ಹೇಳಿದನು.॥9॥
ಮೂಲಮ್ - 10
ಔಪವಾಹ್ಯಂ ರಥಂ ಯುಕ್ತ್ವಾ ತ್ವಮಾಯಾಹಿ ಹಯೋತ್ತಮೈಃ ।
ಪ್ರಾಪಯೈನಂ ಮಹಾಭಾಗಮಿತೋಜನಪದಾತ್ಪರಮ್ ॥
ಅನುವಾದ
ನೀನು ಪ್ರಯಾಣಕ್ಕಾಗಿ ಉತ್ತಮ ಕುದುರೆಗಳನ್ನು ಹೂಡಿದ ಒಂದು ರಥವನ್ನು ತೆಗೆದುಕೊಂಡು ಬಾ. ಈ ಮಹಾಭಾಗ ಶ್ರೀರಾಮನನ್ನು ಅದರಲ್ಲಿ ಕುಳ್ಳಿರಿಸಿ ರಾಜ್ಯದ ಹೊರಗಡೆ ತಲುಪಿಸು.॥10॥
ಮೂಲಮ್ - 11
ಏವಂ ಮನ್ಯೇ ಗುಣವತಾಂ ಗುಣಾನಾಂಲಮುಚ್ಯತೇ ।
ಪಿತ್ರಾ ಮಾತ್ರಾ ಚ ಯತ್ಸಾಧುರ್ವೀರೋ ನಿರ್ವಾಸ್ಯತೇ ವನಮ್ ॥
ಅನುವಾದ
ತನ್ನ ಶ್ರೇಷ್ಠ ವೀರಪುತ್ರನನ್ನು ಸ್ವತಃ ತಾಯಿ-ತಂದೆಯರೇ ಮನೆಯಿಂದ ಹೊರಹಾಕಿ ಕಾಡಿಗೆ ಕಳಿಸುತ್ತಿರುವಾಗ, ಶಾಸ್ತ್ರಗಳಲ್ಲಿ ಗುಣವಂತ ಪುರುಷರ ಗುಣಗಳಿಗೆ ಇದೇ ಫಲವೆಂದು ಹೇಳಿದೆಯೋ ಏನೋ.॥11॥
ಮೂಲಮ್ - 12
ರಾಜ್ಞೋ ವಚನಮಾಜ್ಞಾಯ ಸುಮಂತ್ರಃ ಶೀಘ್ರವಿಕ್ರಮಃ ।
ಯೋಜಯಿತ್ವಾ ಯಯೌ ತತ್ರರಥಮಶ್ವೈರಲಂಕೃತಮ್ ॥
ಅನುವಾದ
ರಾಜನ ಆಜ್ಞೆಯನ್ನು ಶಿರಸಾವಹಿಸಿ ಶೀಘ್ರಗಾಮಿ ಸುಮಂತ್ರನು ಹೋಗಿ ಉತ್ತಮ ಕುದುರೆಗಳಿಂದ ಹೂಡಿದ ರಥವನ್ನು ತಂದು ನಿಲ್ಲಿಸಿದನು.॥12॥
ಮೂಲಮ್ - 13
ತಂ ರಥಂ ರಾಜಪುತ್ರಾಯ ಸೂತಃ ಕನಕಭೂಷಿತಮ್ ।
ಆಚಚಕ್ಷೇಽಂಜಲಿಂ ಕೃತ್ವಾ ಯುಕ್ತಂ ಪರಮವಾಜಿಭಿಃ ॥
ಅನುವಾದ
ಮತ್ತೆ ಸೂತ ಸುಮಂತ್ರನು ಕೈಮುಗಿದುಕೊಂಡು ಹೇಳಿದನು - ಮಹಾರಾಜರೇ! ರಾಜಕುಮಾರ ಶ್ರೀರಾಮನಿಗಾಗಿ ಉತ್ತಮ ಕುದುರೆಗಳನ್ನು ಹೂಡಿದ ಸುವರ್ಣಭೂಷಿತ ರಥ ಸಿದ್ಧವಾಗಿದೆ.॥13॥
ಮೂಲಮ್ - 14
ರಾಜಾ ಸತ್ವರಮಾಹೂಯ ವ್ಯಾಪೃತಂ ವಿತ್ತಸಂಚಯೇ ।
ಉವಾಚ ದೇಶಕಾಲಜ್ಞೋ ನಿಶ್ಚಿತಂ ಸರ್ವತಃ ಶುಚಿಃ ॥
ಅನುವಾದ
ದೇಶಕಾಲವನ್ನು ತಿಳಿದಿರುವ ಎಲ್ಲ ರೀತಿಯಿಂದ ಶುದ್ಧ (ಇಹಲೋಕ ಮತ್ತು ಪರಲೋಕದ ಋಣ ಮುಕ್ತನಾದ) ದಶರಥನು ಕೂಡಲೇ ಕೋಷಾಧ್ಯಕ್ಷನನ್ನು ಕರೆದು ನಿಶ್ಚಿತವಾದ ಈ ಮಾತನ್ನು ಹೇಳಿದನು.॥14॥
ಮೂಲಮ್ - 15
ವಾಸಾಂಸಿ ಚ ವರಾರ್ಹಾಣಿ ಭೂಷಣಾನಿ ಮಹಾಂತಿ ಚ ।
ವರ್ಷಾಣ್ಯೇತಾನಿ ಸಂಖ್ಯಾಯ ವೈದೇಹ್ಯಾಃ ಕ್ಷಿಪ್ರಮಾನಯ ॥
ಅನುವಾದ
ನೀನು ವಿದೇಹಕುಮಾರೀ ಸೀತೆಯು ತೊಡಲು ಯೋಗ್ಯವಾದ ಬಹುಮೂಲ್ಯ ವಸ್ತ್ರ ಮತ್ತು ಆಭೂಷಣಗಳನ್ನು ಹದಿನಾಲ್ಕು ವರ್ಷಗಳವರೆಗೆ ಸಾಕಾಗುವಷ್ಟು ಎಣಿಸಿ ಶೀಘ್ರವಾಗಿ ತೆಗೆದುಕೊಂಡು ಬಾ.॥15॥
ಮೂಲಮ್ - 16
ನರೇಂದ್ರೇಣೈವಮುಕ್ತಸ್ತು ಗತ್ವಾ ಕೋಶಗೃಹಂ ತತಃ ।
ಪ್ರಾಯಚ್ಛತ್ ಸರ್ವಮಾಹೃತ್ಯ ಸೀತಾಯೈ ಕ್ಷಿಪ್ರಮೇವ ತತ್ ॥
ಅನುವಾದ
ಮಹಾರಾಜನು ಹೀಗೆ ಹೇಳುತ್ತಲೇ ಕೋಷಾಧ್ಯಕ್ಷನು ಭಂಡಾರದಿಂದ ಎಲ್ಲ ವಸ್ತುಗಳನ್ನು ತಂದು ಶೀಘ್ರವಾಗಿ ಸೀತೆಗೆ ಅರ್ಪಿಸಿದನು.॥16॥
ಮೂಲಮ್ - 17
ಸಾ ಸುಜಾತಾ ಸುಜಾತಾನಿ ವೈದೇಹೀ ಪ್ರಸ್ಥಿತಾ ವನಮ್ ।
ಭೂಷಯಾಮಾಸ ಗಾತ್ರಾಣಿ ತೈರ್ವಿಚಿತ್ರೈರ್ವಿಭೂಷಣೈಃ ॥
ಅನುವಾದ
ಉತ್ತಮ ಕುಲದಲ್ಲಿ ಉತ್ಪನ್ನಳಾದ ಅಯೋನಿಜೆ ಹಾಗೂ ವನವಾಸಕ್ಕೆ ಹೊರಟ ವಿದೇಹಕುಮಾರೀ ಸೀತೆಯು ಸುಂದರ ಲಕ್ಷಣಗಳಿಂದ ಕೂಡಿದ ಅಂಗಾಂಗಗಳಲ್ಲಿ ಆ ಚಿತ್ರಿತ ಆಭೂಷಣಗಳನ್ನು ಸಿಂಗರಿಸಿಕೊಂಡಳು.॥17॥
ಮೂಲಮ್ - 18
ವ್ಯರಾಜಯತ ವೈದೇಹೀ ವೇಶ್ಮ ತತ್ಸುವಿಭೂಷಿತಾ ।
ಉದ್ಯತೋಽಂಶುಮತಃ ಕಾಲೇ ಖಂ ಪ್ರಭೇವ ವಿವಸ್ವತಃ ॥
ಅನುವಾದ
ಆ ಒಡವೆಗಳಿಂದ ವಿಭೂಷಿತಳಾದ ಸೀತೆ ಪ್ರಾತಃಕಾಲದಲ್ಲಿ ಉದಯಿಸಿದ ಅಂಶುಮಾಲಿ ಸೂರ್ಯನ ಪ್ರಭೆ ಆಕಾಶವನ್ನು ಬೆಳಗುವಂತೆ ಆ ಭವನವನ್ನು ಸುಶೋಭಿಸತೊಡಗಿದಳು.॥18॥
ಮೂಲಮ್ - 19
ತಾಂ ಭುಜಾಭ್ಯಾಂ ಪರಿಷ್ವಜ್ಯ ಶ್ವಶ್ರೂರ್ವಚನಮಬ್ರವೀತ್ ।
ಅನಾಚರಂತೀಂ ಕೃಪಣಂ ಮೂರ್ಧ್ನ್ಯುಪಾಘ್ರಾಯ ಮೈಥಿಲೀಮ್ ॥
ಅನುವಾದ
ಆಗ ಎಂದೂ ದುಃಖದ ವರ್ತನೆ ಮಾಡದಿರುವ ಮಿಥಿಲೇಶಕುಮಾರೀ ಸೀತೆಯನ್ನು ಅತ್ತೆ ಕೌಸಲ್ಯೆಯು ಎರಡೂ ಭುಜಗಳಿಂದ ಸೇಳೆದು ಬಿಗಿದಪ್ಪಿಕೊಂಡು, ಶಿರವನ್ನು ಆಘ್ರಾಣಿಸಿ ಇಂತೆಂದಳು.॥19॥
ಮೂಲಮ್ - 20
ಅಸತ್ಯಃ ಸರ್ವಲೋಕೇಽಸ್ಮಿನ್ ಸತತಂ ಸತ್ಕೃತಾಃ ಪ್ರಿಯೈಃ ।
ಭರ್ತಾರಂ ನಾನುಮನ್ಯಂತೇ ವಿನಿಪಾತಗತಂ ಸ್ತ್ರಿಯಃ ॥
ಅನುವಾದ
ಮಗಳೇ! ಯಾವ ಸ್ತ್ರೀಯು ತನ್ನ ಪತಿಯಿಂದ ಸದಾ ಸಮ್ಮಾನಿತಳಾದರೂ ಸಂಕಟಬಂದಾಗ ಪತಿಯನ್ನು ಆದರಿಸುವುದಿಲ್ಲವೋ ಅವಳನ್ನು ಈ ಜಗತ್ತಿನಲ್ಲಿ ‘ಅಸತೀ’(ದುಷ್ಟಾ) ಎಂದು ಕರೆಯುತ್ತಾರೆ.॥20॥
ಮೂಲಮ್ - 21
ಏಷ ಸ್ವಭಾವೋ ನಾರೀಣಾಮನುಭೂಯ ಪುರಾ ಸುಖಮ್ ।
ಅಲ್ಪಾಮಪ್ಯಾಪದಂ ಪ್ರಾಪ್ಯ ದುಷ್ಯಂತಿ ಪ್ರಜಹತ್ಯಪಿ ॥
ಅನುವಾದ
ಮೊದಲು ಅವರು ಪತಿಯಿಂದ ಯಥೇಷ್ಟ ಸುಖ ಭೋಗಿಸಿದ್ದರೂ ಸ್ವಲ್ಪವಾದರೂ ವಿಪತ್ತು ಬಂದಾಗ ಅವನ ಮೇಲೆ ದೋಷಾರೋಪಣ ಮಾಡಿ, ಅವನನ್ನು ಬಿಟ್ಟು ಬಿಡುವುದು ದುಷ್ಟ ಸ್ತ್ರೀಯರ ಸ್ವಭಾವವಾಗಿರುತ್ತದೆ.॥21॥
ಮೂಲಮ್ - 22
ಅಸತ್ಯಶೀಲಾ ವಿಕೃತಾ ದುರ್ಗಾ ಅಹೃದಯಾಃ ಸದಾ ।
ಅಸತ್ಯಃ ಪಾಪಸಂಕಲ್ಪಾಃ ಕ್ಷಣಮಾತ್ರವಿರಾಗಿಣಃ ॥
ಅನುವಾದ
ಸುಳ್ಳು ಹೇಳುವವಳೂ, ವಿಕೃತಚೇಷ್ಟೆ ಮಾಡುವವಳೂ, ದುಷ್ಟ ಪುರುಷರೊಂದಿಗೆ ಸಂಸರ್ಗ ಉಳ್ಳವಳೂ, ಪತಿಯ ಕುರಿತು ಹೃದಯಹೀನವಾಗಿ ನಡೆಯುವವಳೂ, ಪಾಪ ಸಂಕಲ್ಪವುಳ್ಳವಳೂ, ಅಲ್ಪಮಾತಿಗೆ ಪತಿಯಿಂದ ವಿರಕ್ತಳಾಗುವವಳೂ, ಇವರೆಲ್ಲರೂ ಅಸತಿ ಅಥವಾ ದುಷ್ಟಸ್ತ್ರೀಯೆಂದು ಹೇಳಲಾಗುತ್ತದೆ.॥22॥
ಮೂಲಮ್ - 23
ನ ಕುಲಂ ನ ಕೃತಂ ವಿದ್ಯಾ ನ ದತ್ತಂ ನಾಪಿ ಸಂಗ್ರಹಃ ।
ಸ್ತ್ರೀಣಾಂಗೃಹ್ಣಾತಿ ಹೃಯಮನಿತ್ಯಹೃದಯಾ ಹಿ ತಾಃ ॥
ಅನುವಾದ
ಉತ್ತಮಕುಲ, ಮಾಡಿದ ಉಪಕಾರ, ವಿದ್ಯೆ, ಭೂಷಣಾದಿಗಳು ದಾನ ಮತ್ತು ಸಂಗ್ರಹ (ಪತಿಯಿಂದ ಪ್ರೀತಿಯಿಂದ ತನ್ನದಾಗಿಸಿದ) ಇವು ಯಾವುದೂ ದುಷ್ಟಸ್ತ್ರೀಯರ ಹೃದಯ ಗೆಲ್ಲಲಾಗುವುದಿಲ್ಲ; ಏಕೆಂದರೆ ಅವರ ಚಿತ್ತ ಅವ್ಯವಸ್ಥಿತವಾಗಿರುತ್ತದೆ.॥23॥
ಮೂಲಮ್ - 24
ಸಾಧ್ವೀನಾಂ ತು ಸ್ಥಿತಾನಾಂ ತು ಶೀಲೇ ಸತ್ಯೇ ಶ್ರುತೇ ಸ್ಥಿತೇ ।
ಸ್ತ್ರೀಣಾಂ ಪವಿತ್ರಂ ಪರಮಂ ಪತಿರೇಕೋ ವಿಶಿಷ್ಯತೇ ॥
ಅನುವಾದ
ಇದಕ್ಕೆ ವಿಪರೀತವಾಗಿ ಸತ್ಯ, ಸದಾಚಾರ, ಶಾಸ್ತ್ರಗಳ ಆಜ್ಞೆ ಹಾಗೂ ಕುಲೋಚಿತ ಮೇರೆಯಲ್ಲಿ, ಸ್ಥಿತವಾಗಿರುವ ಸಾಧ್ವಿ ಸ್ತ್ರೀಯರಿಗೆ ಏಕಮಾತ್ರ ಪತಿಯೇ ಪರಮಪವಿತ್ರ ಮತ್ತು ಸರ್ವಶ್ರೇಷ್ಠ ದೇವತೆಯಾಗಿರುವನು.॥24॥
ಮೂಲಮ್ - 25
ಸ ತ್ವಯಾ ನಾವಮಂತವ್ಯಃ ಪುತ್ರಃ ಪ್ರವ್ರಾಜಿತೋ ವನಮ್ ।
ತವ ದೇವಸಮಸ್ತ್ವೇಷ ನಿರ್ಧನಃ ಸಧನೋಽಪಿ ವಾ ॥
ಅನುವಾದ
ಅದಕ್ಕಾಗಿ ನೀನು ವನವಾಸದ ಆಜ್ಞೆಪಡೆದ ನನ್ನ ಪುತ್ರ ಶ್ರೀರಾಮನನ್ನು ಎಂದೂ ಅನಾದರಿಸಬೇಡ. ಅವನು ಧನಿಕನಾಗಿದ್ದರೂ, ನಿರ್ಧನನಾಗಿದ್ದರೂ ನಿನಗೆ ದೇವರಂತೆ ಇರುವನು.॥25॥
ಮೂಲಮ್ - 26
ವಿಜ್ಞಾಯ ವಚನಂ ಸೀತಾ ತಸ್ಯಾ ಧರ್ಮಾರ್ಥಸಂಹಿತಮ್ ।
ಕೃತ್ವಾಜಂಲಿಮುವಾಚೇದಂ ಶ್ವಶ್ರೂಮಭಿಮುಖೇ ಸ್ಥಿತಾ ॥
ಅನುವಾದ
ಅತ್ತೆಯ ಧರ್ಮ ಹಾಗೂ ಅರ್ಥಗರ್ಭಿತ ಮಾತುಗಳ ತಾತ್ಪರ್ಯವನ್ನು ಚೆನ್ನಾಗಿ ತಿಳಿದುಕೊಂಡು, ಅವಳ ಮುಂದೆ ನಿಂತಿರುವ ಸೀತೆಯು ಕೈಮುಗಿದು ಈ ಪ್ರಕಾರ ಹೇಳಿದಳು.॥26॥
ಮೂಲಮ್ - 27
ಕರಿಷ್ಯೇ ಸರ್ವಮೇವಾಹಮಾರ್ಯಾ ಯದನುಶಾಸ್ತಿ ಮಾಮ್ ।
ಅಭಿಜ್ಞಾಸ್ಮಿ ಯಥಾ ಭರ್ತುರ್ವರ್ತಿತವ್ಯಂ ಶ್ರುತಂ ಚ ಮೇ ॥
ಅನುವಾದ
ಆರ್ಯೆ! ನೀವು ನನಗೆ ಮಾಡಿದ ಉಪದೇಶವನ್ನು ನಾನು ಪೂರ್ಣವಾಗಿ ಪಾಲಿಸುವೆನು. ಸ್ವಾಮಿಯ ಜೊತೆಗೆ ಹೇಗೆ ವರ್ತಿಸಬೇಕೆಂಬುದು ನನಗೆ ಚೆನ್ನಾಗಿ ತಿಳಿದಿದೆ; ಏಕೆಂದರೆ ಈ ವಿಷಯದಲ್ಲಿ ನಾನು ಮೊದಲೇ ಕೇಳಿರುವೆನು.॥27॥
ಮೂಲಮ್ - 28
ನಮಾಮಸಜ್ಜನೇನಾರ್ಯಾ ಸಮಾನಯಿತುಮರ್ಹತಿ ।
ಧರ್ಮಾದ್ವಿಚಲಿತುಂ ನಾಹಮಲಂ ಚಂದ್ರಾದಿವ ಪ್ರಭಾ ॥
ಅನುವಾದ
ಪೂಜ್ಯ ಮಾತೇ! ನೀವು ನನ್ನನ್ನು ಅಸತೀ ಸ್ತ್ರೀಯರಂತೆ ತಿಳಿಯಬೇಡಿರಿ; ಏಕೆಂದರೆ ಚಂದ್ರನಿಂದ ಪ್ರಭೆ ದೂರವಾಗದೇ ಇರುವಂತೆಯೇ ನಾನು ಪತಿವ್ರತಾ ಧರ್ಮದಿಂದ ವಿಚಲಿತಳಾಗಲಾರೆನು.॥28॥
ಮೂಲಮ್ - 29
ನಾತಂತ್ರೀ ವಾದ್ಯತೇ ವೀಣಾ ನಾಚಕ್ರೋ ವಿದ್ಯತೇ ರಥಃ ।
ನಾಪತಿಃಸುಖಮೇಧೇನ ಯಾ ಸ್ಯಾದಪಿ ಶತಾತ್ಮಜಾ ॥
ಅನುವಾದ
ತಂತಿಯಿಲ್ಲದ ವೀಣೆಯು ನುಡಿಯಲಾರದು, ಚಕ್ರಗಳಿಲ್ಲದೆ ರಥ ಸಾಗದು, ಹಾಗೆಯೇ ನಾರಿಯು ನೂರು ಮಕ್ಕಳ ತಾಯಿಯಾದರೂ ಪತಿಯಿಲ್ಲದೆ ಸುಖಿಯಾಗಲಾರಳು.॥29॥
ಮೂಲಮ್ - 30
ಮಿತಂ ದದಾತಿ ಹಿ ಪಿತಾ ಮಿತಂ ಭ್ರಾತಾ ಮಿತಂ ಸುತಃ ।
ಅಮಿತಸ್ಯ ತು ದಾತಾರಂ ಭರ್ತಾರಂ ಕಾ ನ ಪೂಜಯೇತ್ ॥
ಅನುವಾದ
ತಂದೆ, ಸಹೋದರ, ಮಗ-ಇವರು ಪರಿಮಿತ ಸುಖ ಕೊಡಬಲ್ಲರು, ಆದರೆ ಪತಿ ಅಪರಿಮಿತ ಸುಖದ ಧಾತೃನಾಗಿದ್ದಾನೆ. ಅವನ ಸೇವೆಯಿಂದ ಇಹಲೋಕ ಮತ್ತು ಪರಲೋಕ ಎರಡರಲ್ಲಿಯೂ ಶ್ರೇಯಸ್ಸಾಗುತ್ತದೆ. ಆದ್ದರಿಂದ ತನ್ನ ಪತಿಯ ಸತ್ಕಾರ ಮಾಡದೆ ಇರುವ ಸ್ತ್ರೀ ಯಾರು ತಾನೇ ಇರುವಳು.॥30॥
ಮೂಲಮ್ - 31
ಸಾಹಮೇವಂಗತಾ ಶ್ರೇಷ್ಠಾ ಶ್ರುತಧರ್ಮಪರಾವರಾ ।
ಆರ್ಯೇ ಕಿಮವಮನ್ಯೇಯಂ ಸ್ತ್ರೀಯಾ ಭರ್ತಾ ಹಿ ದೈವತಮ್ ॥
ಅನುವಾದ
ಆರ್ಯೆ! ತಾಯಿಯೇ ಆದಿ ಶ್ರೇಷ್ಠ ಸ್ತ್ರೀಯರಿಂದ ನಾನು ನಾರಿಯ ಸಾಮಾನ್ಯ ಮತ್ತು ವಿಶೇಷ ಧರ್ಮಗಳನ್ನು ಶ್ರವಣಿಸಿ ಇರುವೆನು. ಹೀಗೆ ಪಾತಿವ್ರತ್ಯದ ಮಹತ್ವ ತಿಳಿದುಕೊಂಡು ನಾನು ಪತಿಯನ್ನು ಏಕೆ ಅಪಮಾನ ಮಾಡುವೆನು? ಪತಿಯೇ ಸ್ತ್ರೀಯಳಿಗೆ ದೇವತೆಯಾಗಿದ್ದಾನೆ ಎಂದು ನಾನು ತಿಳಿದಿರುವೆನು.॥31॥
ಮೂಲಮ್ - 32
ಸೀತಾಯಾ ವಚನಂ ಶ್ರುತ್ವಾ ಕೌಸಲ್ಯಾ ಹೃದಯಂಗಮಮ್ ।
ಶುದ್ಧಸತ್ತ್ವಾ ಮುಮೋಚಾಶ್ರು ಸಹಸಾ ದುಃಖಹರ್ಷಜಮ್ ॥
ಅನುವಾದ
ಸೀತೆಯ ಈ ಮನೋಹರ ಮಾತನ್ನು ಕೇಳಿದ ಶುದ್ಧಾಂತಃಕರಣವುಳ್ಳ ದೇವೀ ಕೌಸಲ್ಯೆಯ ಕಣ್ಣುಗಳಿಂದ ದುಃಖ ಮತ್ತು ಹರ್ಷದ ಕಣ್ಣೀರು ಹರಿಯಿತು.॥32॥
ಮೂಲಮ್ - 33
ತಾಂ ಪ್ರಾಂಜಲಿರಭಿಪ್ರೇಕ್ಷ್ಯ ಮಾತೃಮಧ್ಯೇಽತಿಸತ್ಕೃತಾಮ್ ।
ರಾಮಃ ಪರಮಧರ್ಮಾತ್ಮಾ ಮಾತರಂ ವಾಕ್ಯಮಬ್ರವೀತ್ ॥
ಅನುವಾದ
ಆಗ ಪರಮ ಧರ್ಮಾತ್ಮಾ ಶ್ರೀರಾಮನು ತಾಯಂದಿರ ನಡುವೆ ಅತ್ಯಂತ ಸಮ್ಮಾನಿತಳಾಗಿ ನಿಂತಿರುವ ಮಾತೆ ಕೌಸಲ್ಯೆಯ ಕಡೆಗೆ ನೋಡಿ ಕೈಮುಗಿದುಕೊಂಡು ಹೇಳಿದನು.॥33॥
ಮೂಲಮ್ - 34
ಅಂಬ ಮಾ ದುಃಖಿತಾ ಭೂತ್ವಾ ಪಶ್ಯೆಸ್ತ್ವಂ ಪಿತರಂ ಮಮ ।
ಕ್ಷಯೋ ಪಿ ವನವಾಸಸ್ಯ ಕ್ಷಿಪ್ರಮೇವ ಭವಿಷ್ಯತಿ ॥
ಅನುವಾದ
ಅಮ್ಮಾ! (ಇವರ ಕಾರಣದಿಂದಲೇ ನನ್ನ ಪುತ್ರನಿಗೆ ವನವಾಸವಾಯಿತು, ಎಂದು ತಿಳಿದು) ನೀನು ನಮ್ಮ ತಂದೆಯವರನ್ನು ದುಃಖಿತಳಾಗಿ ನೋಡಬಾರದು. ವನವಾಸದ ಅವಧಿಯು ಬೇಗನೇ ಮುಗಿದುಹೋಗುವುದು.॥34॥
ಮೂಲಮ್ - 35
ಸುಪ್ತಾಯಾಸ್ತೇ ಗಮಿಷ್ಯಂತಿ ನವ ವರ್ಷಾಣಿ ಪಂಚ ಚ ।
ಸಮಗ್ರಮಿಹ ಸಂಪ್ರಾಪ್ತಂ ಮಾಂ ದ್ರಕ್ಷ್ಯಸಿಸುಹೃದ್ವತಮ್ ॥
ಅನುವಾದ
ಈ ಹದಿನಾಲ್ಕು ವರ್ಷ ಕಣ್ಣುಮುಚ್ಚಿ ತೆರೆಯುವುದರೊಳಗೆ ಹೊರಟುಹೋಗುವವು. ಮತ್ತೆ ಒಂದು ದಿನ ನಾನು ನನ್ನ ಸುಹೃದರಿಂದ ಕೂಡಿ ಸೀತಾ ಮತ್ತು ಲಕ್ಷ್ಮಣ ಜೊತೆಗೆ ಇಲ್ಲಿಗೆ ಬಂದಿರುವ ನನ್ನನ್ನು ನೋಡುವಿರಿ.॥35॥
ಮೂಲಮ್ - 36
ಏತಾವದಭಿನೀತಾರ್ಥಮುಕ್ತ್ವಾ ಸ ಜನನೀಂ ವಚಃ ।
ತ್ರಯಃ ಶತಶತಾರ್ಧಾ ಹಿ ದದರ್ಶಾವೇಕ್ಷ್ಯಮಾತರಃ ॥
ಮೂಲಮ್ - 37
ತಾಶ್ಚಾಪಿ ಸ ತಥೈವಾರ್ತಾ ಮಾತೃರ್ದಶರಥಾತ್ಮಜಃ ।
ಧರ್ಮಯುಕ್ತಮಿದಂ ವಾಕ್ಯಂ ನಿಜಗಾದ ಕೃತಾಂಜಲಿಃ ॥
ಅನುವಾದ
ತಾಯಿಯ ಬಳಿ ಹೀಗೆ ತನ್ನ ನಿಶ್ಚಿತ ಅಭಿಪ್ರಾಯವನ್ನು ತಿಳಿಸಿ ದಶರಥನಂದನ ಶ್ರೀರಾಮನು ಇತರ ತನ್ನ ಮುನ್ನೂರೈವತ್ತು ಮಾತೆಯರನ್ನು ನೋಡಿದಾಗ ಅವರೂ ಕೌಸಲ್ಯೆಯಂತೆ ಶೋಕಾಕುಲರಾಗಿರುವುದನ್ನು ನೋಡಿದನು. ಆಗ ಅವನು ಅವರಿಗೆ ಕೈಮುಗಿದು ಅವರೆಲ್ಲರಲ್ಲಿ ಧರ್ಮಯುಕ್ತ ಈ ಮಾತನ್ನು ಹೇಳಿದನು.॥36-37॥
ಮೂಲಮ್ - 38
ಸಂವಾಸಾತ್ ಪುರುಷಂ ಕಿಂಚಿದಜ್ಞಾನಾದಪಿ ಯತ್ಕೃತಮ್ ।
ತನ್ಮೇ ಸಮುಪಜಾನೀತ ಸರ್ವಾಶ್ಚಾಮಂತ್ರಯಾಮಿ ವಃ ॥
ಅನುವಾದ
ತಾಯಂದಿರೇ! ಸದಾ ಜೊತೆಗೆ ಇರುವುದರಿಂದ ನಾನೇನಾದರೂ ಕಠೋರವಾದ ಮಾತನ್ನು ಆಡಿದ್ದರೆ, ಅಥವಾ ತಿಳಿಯದೇ ನನ್ನಿಂದ ಏನಾದರೂ ಅಪರಾಧ ನಡೆದಿದ್ದರೆ ನೀವು ಕ್ಷಮಿಸಿಬಿಡಿರಿ. ನಾನು ನಿಮ್ಮೆಲ್ಲರಲ್ಲಿ ಅನುಮತಿ ಬೇಡುತ್ತಿರುವೆನು.॥38॥
ಮೂಲಮ್ - 39
ವಚನಂ ರಾಘವಸ್ಯೈತದ್ ಧರ್ಮಯುಕ್ತಂ ಸಮಾಹಿತಮ್ ।
ಶಶ್ರುವುಸ್ತಾಃ ಸ್ತ್ರಿಯಃ ಸರ್ವಾಃ ಶೋಕೋಪಹತಚೇತಸಃ ॥
ಅನುವಾದ
ದಶರಥರಾಜನ ಆ ಎಲ್ಲ ಪತ್ನಿಯರು ಶ್ರೀ ರಘುನಾಥನ ಈ ಸಮಾಧಾನಕರ ಧರ್ಮಯುಕ್ತ ಮಾತನ್ನು ಕೇಳಿ ಅವರೆಲ್ಲರ ಚಿತ್ತವು ಶೋಕದಿಂದ ವ್ಯಾಕುಲವಾಯಿತು.॥39॥
ಮೂಲಮ್ - 40
ಜಜ್ಞೇಽಥ ತಾಸಾಂ ಸಂನಾದಃ ಕ್ರೌಂಚೀನಾಮಿವ ನಿಃಸ್ವನಃ ।
ಮಾನವೇಂದ್ರಸ್ಯ ಭಾರ್ಯಾಣಾಮೇವಂ ವದತಿ ರಾಘವೇ ॥
ಅನುವಾದ
ಶ್ರೀರಾಮನು ಹೀಗೆ ಮಾತನಾಡುತ್ತಿರುವಾಗ ದಶರಥನ ರಾಣಿಯರು ಕುರರಪಕ್ಷಿಯಂತೆ ವಿಲಾಪಿಸತೊಡಗಿದರು. ಅವರ ಆ ಆರ್ತನಾದ ಆ ಅರಮನೆಯಲ್ಲಿ ಎಲ್ಲೆಡೆ ಪ್ರತಿಧ್ವನಿಸಿತು.॥40॥
ಮೂಲಮ್ - 41
ಮುರಜಪಣವಮೇಘಘೋಷವದ್
ದಶರಥವೇಶ್ಮಬಭೂವ ಯತ್ಪುರಾ ।
ವಿಲಪಿತಪರಿದೇವನಾಕುಲಂ
ವ್ಯಸನಗತಂ ತದಭೂತ್ಸುದುಃಖಿತಮ್ ॥
ಅನುವಾದ
ದಶರಥನ ಅರಮನೆಯು ಮೊದಲು ಮುರಜ, ಪಣವ, ಮೇಘ ಮೊದಲಾದ ಗಂಭೀರ ಘೋಷದಿಂದ ಪ್ರತಿಧ್ವನಿಸುತ್ತಿತ್ತು; ಅದೇ ಈಗ ವಿಲಾಪ, ಅಳುವಿನಿಂದ ವ್ಯಾಪ್ತವಾಗಿ ಸಂಕಟದಲ್ಲಿ ಬಿದ್ದು ಅತ್ಯಂತ ದುಃಖಮಯವಾಗಿ ಕಾಣುತ್ತಿತ್ತು.॥41॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಮೂವತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು.॥39॥