वाचनम्
ಭಾಗಸೂಚನಾ
ಸೀತಾ-ರಾಮ-ಲಕ್ಷ್ಮಣರು ನಾರುಮಡಿಯನ್ನುಟ್ಟದ್ದು, ಸೀತೆಯು ನಾರುಮಡಿಯನ್ನುಟ್ಟಿದ್ದಕ್ಕೆ ರಾಣೀವಾಸದವರ ದುಃಖ, ವಸಿಷ್ಠರು ಕೈಕೇಯಿಯನ್ನು ನಿಂದಿಸುತ್ತಾ ಸೀತಾದೇವಿಯು ನಾರುಮಡಿಯನ್ನು ಉಡುವುದು ಅನುಚಿತವೆಂದು ಹೇಳಿದುದು
ಮೂಲಮ್ - 1
ಮಹಾಮಾತ್ರವಚಃ ಶ್ರುತ್ವಾ ರಾಮೋ ದಶರಥಂ ತದಾ ।
ಅಭ್ಯಭಾಷತ ವಾಕ್ಯಂ ತು ವಿನಯಜ್ಞೋ ವಿನೀತವತ್ ॥
ಅನುವಾದ
ಮಹಾಮಂತ್ರಿಯಾದ ಸಿದ್ಧಾರ್ಥನ ಮಾತನ್ನು ಕೇಳಿ ವಿನಯವನ್ನು ಬಲ್ಲ ಶ್ರೀರಾಮನು ಆಗ ದಶರಥ ಮಹಾರಾಜರಿಗೆ ವಿನೀತನಾಗಿ ಹೇಳಿದನು.॥1॥
ಮೂಲಮ್ - 2
ತ್ಯಕ್ತಭೋಗಸ್ಯ ಮೇ ರಾಜನ್ ವನೇ ವನ್ಯೇನ ಜೀವತಃ ।
ಕಿಂ ಕಾರ್ಯಮನುಯಾತ್ರೇಣ ತ್ಯಕ್ತಸಂಗಸ್ಯ ಸರ್ವತಃ ॥
ಅನುವಾದ
ಮಹಾರಾಜರೇ! ನಾನು ಸರ್ವಸಂಗ ಪರಿತ್ಯಾಗ ಮಾಡಿರುವೆನು. ನನಗೆ ಕಾಡಿನ ಕಂದ-ಮೂಲಗಳಿಂದ ಜೀವನ ನಿರ್ವಾಹ ಮಾಡುವುದಿದೆ. ನಾನು ಎಲ್ಲ ಆಸಕ್ತಿಯನ್ನು ಬಿಟ್ಟಿರುವಾಗ ನನಗೆ ಸೈನ್ಯದ ಪ್ರಯೋಜನ ಏನಿದೆ.॥2॥
ಮೂಲಮ್ - 3
ಯೋ ಹಿ ದತ್ತ್ವಾ ದ್ವಿಪಶ್ರೇಷ್ಠಂ ಕಕ್ಷ್ಯಾಯಾಂ ಕುರುತೇ ಮನಃ ।
ರಜ್ಜುಸ್ನೇಹೇನ ಕಿಂ ತಸ್ಯ ತ್ಯಜತಃ ಕುಂಜರೋತ್ತಮಮ್ ॥
ಅನುವಾದ
ಶ್ರೇಷ್ಠ ಗಜರಾಜನನ್ನು ದಾನಮಾಡಿ, ಅದರ ಹಗ್ಗವನ್ನು ಲೋಭವಶ ಇರಿಸಿಕೊಳ್ಳಲು ಬಯಸುವುದು ಸರಿಯಲ್ಲ; ಏಕೆಂದರೆ ಉತ್ತಮ ಆನೆಯನ್ನೇ ತ್ಯಾಗ ಮಾಡುವವನಿಗೆ ಅದರ ಹಗ್ಗದಲ್ಲಿ ಆಸಕ್ತಿ ಇರಿಸುವ ಆವಶ್ಯಕತೆ ಏನಿದೆ.॥3॥
ಮೂಲಮ್ - 4
ತಥಾ ಮಮ ಸತಾಂ ಶ್ರೇಷ್ಠ ಕಿಂ ಧ್ವಜಿನ್ಯಾ ಜಗತ್ಪತೇ ।
ಸರ್ವಾಣ್ಯೇವಾನುಜಾನಾಮಿ ಚೀರಾಣ್ಯೇವಾನಯಂತು ಮೇ ॥
ಅನುವಾದ
ಸತ್ಪುರುಷರಲ್ಲಿ ಶ್ರೇಷ್ಠ ಮಹಾರಾಜರೇ! ಹೀಗೆಯೇ ನಾನು ಸೈನ್ಯವನ್ನು ಪಡೆದು ಏನು ಮಾಡುವುದು? ನಾನು ಈ ಎಲ್ಲ ವಸ್ತುಗಳನ್ನು ಭರತನಿಗೆ ಅರ್ಪಿಸಲು ಅನುಮತಿ ಕೊಡುತ್ತೇನೆ. ನನಗೆ (ತಾಯಿ ಕೌಸಲ್ಯೆಯ ದಾಸಿಯರು) ನಾರುಮಡಿಯನ್ನು ತಂದು ಕೊಡಲಿ.॥4॥
ಮೂಲಮ್ - 5
ಖನಿತ್ರಪಿಟಕೇ ಚೋಭೇ ಸಮಾನಯತ ಗಚ್ಛತ ।
ಚತುರ್ದಶ ವನೇ ವಾಸಂ ವರ್ಷಾಣಿ ವಸತೋ ಮಮ ॥
ಅನುವಾದ
ದಾಸಿಯರೇ! ಹೋಗಿ, ಗುದ್ದಲಿ ಮತ್ತು ಮಂಕರಿ ಇವೆರಡನ್ನು ತಂದುಕೊಡಿರಿ. ಹದಿನಾಲ್ಕು ವರ್ಷ ವನದಲ್ಲಿ ವಾಸಿಸಲು ಈ ವಸ್ತುಗಳು ಉಪಯೋಗಿ ಆಗಬಲ್ಲವು.॥5॥
ಮೂಲಮ್ - 6
ಅಥ ಚೀರಾಣಿ ಕೈಕೇಯೀ ಸ್ವಯಮಾಹೃತ್ಯ ರಾಘವಮ್ ।
ಉವಾಚ ಪರಿಧತ್ಸ್ವೇತಿ ಜನೌಘೇ ನಿರಪತ್ರಪಾ ॥
ಅನುವಾದ
ಕೈಕೇಯಿಯು ನಾಚಿಕೆ, ಸಂಕೋಚ ಬಿಟ್ಟುಬಿಟ್ಟಿದ್ದಳು. ಅವಳು ಸ್ವತಃ ಹೋಗಿ ಅನೇಕ ನಾರುಮಡಿಗಳನ್ನು ತಂದು, ಜನಸಮುದಾಯದ ಎದುರಿಗೆ ಶ್ರೀರಾಮನಿಗೆ ‘ಇದೋ ಉಟ್ಟುಕೋ’ ಎಂದು ಹೇಳಿದಳು.॥6॥
ಮೂಲಮ್ - 7
ಸ ಚೀರೇ ಪುರುಷವ್ಯಾಘ್ರಃ ಕೈಕೇಯ್ಯಾಃ ಪ್ರತಿಗೃಹ್ಯ ತೇ ।
ಸೂಕ್ಷ್ಮವಸ್ತ್ರಮವಕ್ಷಿಪ್ಯ ಮುನಿವಸ್ತ್ರಾಣ್ಯವಸ್ತ ಹ ॥
ಅನುವಾದ
ಪುರುಷಸಿಂಹ ಶ್ರೀರಾಮನು ಕೈಕೇಯಿಯ ಕೈಯಿಂದ ಎರಡು ನಾರುಬಟ್ಟೆಯನ್ನು ಪಡೆದು, ತನ್ನ ನಯವಾದ ವಸ್ತ್ರಗಳನ್ನು ಕಳಚಿ ಮುನಿಗಳ ವಸ್ತ್ರಗಳನ್ನು ಧರಿಸಿಕೊಂಡನು.॥7॥
ಮೂಲಮ್ - 8
ಲಕ್ಷ್ಮಣಶ್ಚಾಪಿ ತತ್ರೈವ ವಿಹಾಯ ವಸನೇ ಶುಭೇ ।
ತಾಪಸಾಚ್ಛಾದನೇ ಚೈವ ಜಗ್ರಾಹ ಪಿತುರಗ್ರತಃ ॥
ಅನುವಾದ
ಇದೇ ರೀತಿ ಲಕ್ಷ್ಮಣನೂ ಕೂಡ ತನ್ನ ತಂದೆಯ ಎದುರಿಗೇ ತನ್ನ ಸುಂದರ ವಸ್ತ್ರಗಳನ್ನು ಬಿಚ್ಚಿ ತಪಸ್ವಿಗಳಂತೆ ವಲ್ಕಲಗಳನ್ನು ಉಟ್ಟುಕೊಂಡನು.॥8॥
ಮೂಲಮ್ - 9
ಅಥಾತ್ಮ ಪರಿಧಾನಾರ್ಥಂ ಸೀತಾ ಕೌಶೇಯವಾಸಿನೀ ।
ಸಂಪ್ರೇಕ್ಷ್ಯ ಚೀರಂ ಸಂತ್ರಸ್ತಾ ಪೃಷತೀ ವಾಗುರಾಮಿವ ॥
ಮೂಲಮ್ - 10
ಸಾ ವ್ಯಪತ್ರಪಮಾಣೇವ ಪ್ರಗೃಹ್ಯ ಚ ಸುದುರ್ಮನಾಃ ।
ಕೈಕೇಯ್ಯಾಃ ಕುಶಚೀರೇ ತೇ ಜಾನಕೀ ಶುಭಲಕ್ಷಣಾ ॥
ಮೂಲಮ್ - 11
ಅಶ್ರುಸಂಪೂರ್ಣನೇತ್ರಾ ಚ ಧರ್ಮಜ್ಞಾ ಧರ್ಮದರ್ಶಿನೀ ।
ಗಂಧರ್ವರಾಜಪ್ರತಿಮಂ ಭರ್ತಾರಮಿದಮಬ್ರವೀತ್ ॥
ಮೂಲಮ್ - 12
ಕಥಂ ನು ಚೀರಂ ಬಘ್ನಂತಿ ಮುನಯೋ ವನವಾಸಿನಃ ।
ಇತಿ ಹ್ಯಕುಶಲಾ ಸೀತಾ ಸಾ ಮುಮೋಹ ಮುಹುರ್ಮುಹುಃ ॥
ಅನುವಾದ
ಅನಂತರ ರೇಶ್ಮಬಟ್ಟೆಯನ್ನೇ ಉಡುತ್ತಿದ್ದ, ಧರ್ಮದಲ್ಲೇ ದೃಷ್ಟಿವಿರಿಸಿದ, ಧರ್ಮಜ್ಞೆ ಶುಭಲಕ್ಷಣೆ ಜನಕನಂದಿನೀ ಸೀತೆಯು ತನಗೆ ಉಡಲು ತಂದಿರಿಸಿದ ನಾರುಮಡಿಯನ್ನು ನೋಡಿ, ಹರಹಿದ ಬಲೆಯನ್ನು ಕಂಡು ಜಿಂಕೆಯು ಭಯಪಡುವಂತೆ, ಹೆದರಿಹೋದಳು. ಅವಳು ಕೈಕೇಯಿಯ ಕೈಯಿಂದ ಎರಡು ವಲ್ಕಲಗಳನ್ನು ತೆಗೆದುಕೊಂಡು ನಾಚಿಕೊಂಡಳು. ಆಕೆಯ ಮನಸ್ಸಿಗೆ ಬಹಳ ದುಃಖವಾಯಿತು, ಕಣ್ಣುಗಳಿಂದ ಕಣ್ಣೀರು ಹರಿಯಿತು. ಆಗ ಆಕೆಯು ಗಂಧರ್ವರಾಜನಂತೆ ತೇಜಸ್ವೀ ಪತಿಯಲ್ಲಿ - ಸ್ವಾಮಿ! ವನವಾಸೀ ಮುನಿಗಳು ವಲ್ಕಲ ಹೇಗೆ ಕಟ್ಟಿಕೊಳ್ಳುತ್ತಾರೆ? ಎಂದು ಕೇಳಿದಳು. ಹೀಗೆ ಹೇಳಿ ಅದನ್ನು ಉಡಲು ತಿಳಿಯದಿರುವುದರಿಂದ ಸೀತೆಯು ಪದೇ-ಪದೇ ಸಂಕೋಚಕ್ಕೊಳಗಾಗುತ್ತಿದ್ದಳು.॥9-12॥
ಮೂಲಮ್ - 13
ಕೃತ್ವಾ ಕಂಠೇ ಸ್ಮ ಸಾ ಚೀರಮೇಕಮಾದಾಯ ಪಾಣಿನಾ ।
ತಸ್ಥೌ ಹ್ಯಕುಶಲಾ ತತ್ರ ವ್ರೀಡಿತಾ ಜನಕಾತ್ಮಜಾ ॥
ಅನುವಾದ
ನಾರುಮಡಿಯನ್ನು ಧರಿಸಲು ಅರಿಯದಿರುವ ಜಾನಕಿಯು ಲಜ್ಜಿತಳಾಗಿ ಒಂದನ್ನು ಹೆಗಲ ಮೇಲೆ ಹಾಕಿಕೊಂಡು ಇನ್ನೊಂದನ್ನು ಕೈಯಲ್ಲಿ ಹಿಡಿದು ಸುಮ್ಮನೇ ನಿಂತುಕೊಂಡಿದ್ದಳು.॥13॥
ಮೂಲಮ್ - 14
ತಸ್ಯಾಸ್ತತ್ಕ್ಷಿಪ್ರಮಾಗತ್ಯ ರಾಮೋ ಧರ್ಮಭೃತಾಂ ವರಃ ।
ಚೀರಂ ಬಬಂಧ ಸೀತಾಯಾಃ ಕೌಶೇಯಸ್ಯೋಪರಿ ಸ್ವಯಮ್ ॥
ಅನುವಾದ
ಆಗ ಧರ್ಮಾತ್ಮರಲ್ಲಿ ಶ್ರೇಷ್ಠನಾದ ಶ್ರೀರಾಮನು ಕೂಡಲೇ ಆಕೆಯ ಬಳಿಗೆ ಹೋಗಿ ಸ್ವತಃ ತನ್ನ ಕೈಗಳಿಂದಲೇ ಅವಳ ರೇಶ್ಮೆಸೀರೆಯ ಮೇಲೆಯೇ ನಾರುಮಡಿಯನ್ನು ಉಡಿಸಲುತೊಡಗಿದನು.॥14॥
ಮೂಲಮ್ - 15
ರಾಮಂ ಪ್ರೇಕ್ಷ್ಯತು ಸೀತಾಯಾ ಬಧ್ನಂತಂ ಚೀರಮುತ್ತಮಮ್ ।
ಅಂತಃಪುರಚರಾ ನಾರ್ಯೋ ಮುಮುಚುರ್ವಾರಿ ನೇತ್ರಜಮ್ ॥
ಅನುವಾದ
ಸೀತೆಗೆ ಉತ್ತಮ ನಾರುಮಡಿಯನ್ನು ಉಡಿಸುತ್ತಿರುವ ಶ್ರೀರಾಮನನ್ನು ನೋಡಿ ರಾಣೀವಾಸದ ಸ್ತ್ರೀಯರು ಕಣ್ಣುಗಳಿಂದ ಕಣ್ಣೀರು ಹರಿಸಿದರು.॥15॥
ಮೂಲಮ್ - 16
ಊಚುಶ್ಚ ಪರಮಾಯತ್ತಾ ರಾಮಂ ಜ್ವಲಿತತೇಜಸಮ್ ।
ವತ್ಸ ನೈವಂ ನಿಯುಕ್ತೇಯಂ ವನವಾಸೇ ಮನಸ್ವಿನೀ ॥
ಅನುವಾದ
ಅವರೆಲ್ಲರೂ ಖಿನ್ನರಾಗಿ ಉಜ್ವಲ ತೇಜವುಳ್ಳ ಶ್ರೀರಾಮನಲ್ಲಿ - ಮಗು! ಬುದ್ಧಿವಂತ ಸೀತೆಗೆ ಈ ಪ್ರಕಾರ ವನವಾಸದ ಆಜ್ಞೆ ಕೊಡಲಾಗಲಿಲ್ಲ.॥16॥
ಮೂಲಮ್ - 17
ಪಿತುರ್ವಾಕ್ಯಾನುರೋಧೇನ ಗತಸ್ಯ ವಿಜನಂ ವನಮ್ ।
ತಾವದ್ದರ್ಶನಮಸ್ಯಾ ನಃ ಸಫಲಂ ಭವತು ಪ್ರಭೋ ॥
ಅನುವಾದ
ಪ್ರಭೋ! ನೀನು ಪಿತೃವಾಕ್ಯ ಪರಿಪಾಲನೆಗಾಗಿ ನಿರ್ಜನ ವನದಲ್ಲಿ ಇರುವತನಕ ಈಕೆಯನ್ನು ನೋಡಿ ನಮ್ಮ ಜೀವನ ಸಫಲವಾಗುವಂತೆ ಮಾಡು.॥17॥
ಮೂಲಮ್ - 18
ಲಕ್ಷ್ಮಣೇನ ಸಹಾಯೇನ ವನಂ ಗಚ್ಛಸ್ವ ಪುತ್ರಕ ।
ನೇಯಮರ್ಹತಿ ಕಲ್ಯಾಣಿ ವಸ್ತುಂ ತಾಪಸವದ್ ವನೇ ॥
ಅನುವಾದ
ಮಗು! ನೀನು ಲಕ್ಷ್ಮಣನನ್ನು ಜೊತೆಯಾಗಿಸಿಕೊಂಡು ಕಾಡಿಗೆ ಹೋಗು, ಆದರೆ ಈ ಕಲ್ಯಾಣೀ ಸೀತೆಯು ತಪಸ್ವೀ ಮುನಿಗಳಂತೆ ವನದಲ್ಲಿ ವಾಸಿಸಲು ಯೋಗ್ಯಳಲ್ಲ.॥18॥
ಮೂಲಮ್ - 19
ಕುರು ನೋ ಯಾಚನಾಂ ಪುತ್ರ ಸೀತಾ ತಿಷ್ಠತು ಭಾಮಿನೀ ।
ಧರ್ಮನಿತ್ಯಃ ಸ್ವಯಂ ಸ್ಥಾತುಂ ನ ಹೀದಾನೀಂ ತ್ವಮಿಚ್ಛಸಿ ॥
ಅನುವಾದ
ಮಗನೇ! ನೀನು ನಮ್ಮ ಯಾಚನೆಯನ್ನು ಸಫಲಗೊಳಿಸು. ಭಾಮಿನೀ ಸೀತೆಯು ಇಲ್ಲೇ ಇರಲಿ. ನೀನಾದರೋ ನಿತ್ಯ ಧರ್ಮಪರಾಯಣನಾಗಿರುವೆ, ಆದ್ದರಿಂದ ಸ್ವತಃ ಈಗ ಇಲ್ಲಿರಲು ಬಯಸುವುದಿಲ್ಲ. (ಆದರೆ ಸೀತೆಯು ಇಲ್ಲೇ ಇರಲಿ.॥19॥
ಮೂಲಮ್ - 20
ತಾಸಾಮೇವಂ ವಿಧಾ ವಾಚಃ ಶೃಣ್ವನ್ದಶರಥಾತ್ಮಜಃ ।
ಬಬಂಧೈವ ತಥಾ ಚೀರಂ ಸೀತಯಾ ತುಲ್ಯಶೀಲಯಾ ॥
ಮೂಲಮ್ - 21
ಚೀರೇ ಗೃಹೀತೇ ತು ತಯಾ ಸಬಾಷ್ಪೋ ನೃಪತೇರ್ಗುರುಃ ।
ನಿವಾರ್ಯ ಸೀತಾಂ ಕೈಕೇಯೀಂ ವಸಿಷ್ಠೋ ವಾಕ್ಯಮಬ್ರವೀತ್ ॥
ಅನುವಾದ
ತಾಯಂದಿರ ಇಂತಹ ಮಾತುಗಳನ್ನು ಕೇಳುತ್ತಿರುವಾಗಲೇ ದಶರಥನಂದನ ಶ್ರೀರಾಮನು ಸೀತೆಗೆ ನಾರುಮಡಿಯನ್ನು ಉಡಿಸಿಯೇ ಬಿಟ್ಟನು. ಪತಿಯಂತೆ ಶೀಲಸ್ವಭಾವವುಳ್ಳ ಸೀತೆಯು ವಲ್ಕಲಗಳನ್ನು ಧರಿಸಿದಾಗ ರಾಜಗುರು ವಸಿಷ್ಠರ ಕಣ್ಣುಗಳಲ್ಲಿ ನೀರು ತಂಬಿಬಂತು. ಅವರು ಸೀತೆಯನ್ನು ತಡೆಯುತ್ತಾ ಕೈಕೇಯಿಯ ಬಳಿ ಹೇಳಿದರು.॥20-21॥
ಮೂಲಮ್ - 22
ಅತಿಪ್ರವೃತ್ತೇ ಧರ್ಮೇಧೇ ಕೈಕೇಯಿ ಕುಲಪಾಂಸನಿ ।
ವಂಚಯಿತ್ವಾ ತು ರಾಜಾನಂ ನ ಪ್ರಮಾಣೇಽವತಿಷ್ಠಸೀ ॥
ಅನುವಾದ
ಮೇರೆ ಮೀರಿ ಅಧರ್ಮದ ಕಡೆಗೆ ಸಾಗುತ್ತಿರುವ ದುರ್ಬುದ್ಧಿ ಕೈಕೇ! ನೀನು ಕೇಕೆಯ ರಾಜಕುಲದ ಜೀವಂತ ಕಲಂಕವಾಗಿರುವೆ. ಎಲೆಗೇ! ರಾಜನಿಗೆ ಮೋಸಮಾಡಿ ಈಗ ನೀನು ಸೀತೆಯೂ ಅರಮನೆಯಲ್ಲಿ ಇರಗೊಡಲು ಬಯಸುವುದಿಲ್ಲವಲ್ಲ.॥22॥
ಮೂಲಮ್ - 23
ನ ಗಂತವ್ಯಂ ವನಂ ದೇವ್ಯಾ ಸೀತಯಾ ಶೀಲವರ್ಜಿತೇ ।
ಅನುಷ್ಠಾಸ್ಯತಿ ರಾಮಸ್ಯ ಸೀತಾ ಪ್ರಕೃತಮಾಸನಮ್ ॥
ಅನುವಾದ
ಶೀಲಗೆಟ್ಟ ದುಷ್ಟೇ! ದೇವೀ ಸೀತೆಯು ಕಾಡಿಗೆ ಹೋಗುವುದಿಲ್ಲ. ರಾಮನಿಗಾಗಿ ಪ್ರಸ್ತುತವಾದ ರಾಜ ಸಿಂಹಾಸನದಲ್ಲಿ ಈಕೆಯೇ ಕುಳಿತುಕೊಳ್ಳುವಳು.॥23॥
ಮೂಲಮ್ - 24
ಆತ್ಮಾ ಹಿ ದಾರಾಃ ಸರ್ವೇಷಾಂ ದಾರಸಂಗ್ರಹವರ್ತಿನಾಮ್ ।
ಆತ್ಮೇಯಮಿತಿ ರಾಮಸ್ಯ ಪಾಲಯಿಷ್ಯತಿ ಮೇದಿನೀಮ್ ॥
ಅನುವಾದ
ಸಮಸ್ತ ಗೃಹಸ್ಥರ ಪತ್ನಿಯರು ಅವರ ಅರ್ಧ ಅಂಗವೇ ಆಗಿದ್ದಾರೆ. ಹೀಗೆಯೇ ಸೀತಾದೇವಿಯು ಶ್ರೀರಾಮನ ಆತ್ಮಾ ಆಗಿರುವಳು. ಆದ್ದರಿಂದ ಅವನ ಜಾಗದಲ್ಲಿ ಇವಳೇ ರಾಜ್ಯಭಾರ ನಡೆಸುವಳು.॥24॥
ಮೂಲಮ್ - 25
ಅಥ ಯಾಸ್ಯತಿ ವೈದೇಹೀ ವನಂ ರಾಮೇಣ ಸಂಗತಾ ।
ವಯಮತ್ರಾನುಯಾಸ್ಯಾಮಃ ಪುರಂ ಚೇದಂ ಗಮಿಷ್ಯತಿ ॥
ಮೂಲಮ್ - 26
ಅಂತಪಾಲಾಶ್ಚ ಯಾಸ್ಯಂತಿ ಸದಾರೋ ಯತ್ರ ರಾಘವಃ ।
ಸಹೋಪಜೀವ್ಯಂ ರಾಷ್ಟ್ರಂ ಚ ಪುರಂ ಚ ಸಪರಿಚ್ಛದಮ್ ॥
ಅನುವಾದ
ವಿದೇಹನಂದಿನೀ ಸೀತೆಯು ಶ್ರೀರಾಮನೊಂದಿಗೆ ವನಕ್ಕೆ ಹೋದರೆ ನಾವೂ ಇವರೊಂದಿಗೆ ಹೊರಟು ಹೋಗುವೆವು. ಈ ನಗರವಿಡೀ ಹೊರಟುಹೋದೀತು ಹಾಗೂ ಅಂತಃಪುರದ ರಕ್ಷಕರೂ ಹೊರಟುಹೋಗುವರು. ತನ್ನ ಪತ್ನಿಯೊಂದಿಗೆ ಶ್ರೀರಾಮನು ವಾಸಿಸುವಲ್ಲಿಯೇ ಈ ರಾಜ್ಯ ಮತ್ತು ನಗರದ ಜನರು ಧನ-ಸಂಪತ್ತು, ಆವಶ್ಯಕ ವಸ್ತುಗಳನ್ನು ಎತ್ತಿಕೊಂಡು ಹೊರಟುಹೋಗುವರು.॥25-26॥
ಮೂಲಮ್ - 27
ಭರತಶ್ಚ ಸಶತ್ರುಘ್ನಶ್ಚೀರವಸಾ ವನೇಚರಃ
ವನೇ ವಸಂತಂಕಾಕುತ್ಸ್ಥಮನುವತ್ಸ್ಯತಿ ಪೂರ್ವಜಮ್ ॥
ಅನುವಾದ
ಭರತ-ಶತ್ರುಘ್ನರೂ ನಾರುಮಡಿಯನ್ನು ಉಟ್ಟು ವನದಲ್ಲಿ ಇರುವರು ಹಾಗೂ ಅಲ್ಲಿ ವಾಸಿಸುವ ತಮ್ಮ ಹಿರಿಯ ಅಣ್ಣ ಶ್ರೀರಾಮನ ಸೇವೆ ಮಾಡುವರು.॥27॥
ಮೂಲಮ್ - 28
ತತಃ ಶೂನ್ಯಾಂ ಗತಜನಾಂ ವಸುಧಾಂ ಪಾದಪೈಃ ಸಹ ।
ತ್ವಮೇಕಾಶಾಧಿ ದುವೃತ್ತಾ ಪ್ರಜಾನಾಮಹಿತೇ ಸ್ಥಿತಾ ॥
ಅನುವಾದ
ಮತ್ತೆ ನೀನು ವೃಕ್ಷಗಳೊಂದಿಗೆ ಒಬ್ಬಂಟಿಗಳಾಗಿ ಈ ನಿರ್ಜನ ಹಾಗೂ ಪಾಳು ಬಿದ್ದ ರಾಜ್ಯವನ್ನು ಆಳುವೆ. ನೀನು ಬಹಳ ದುರಾಚಾರಿಣಿಯಾಗಿ, ಪ್ರಜೆಯ ಅಹಿತ ಮಾಡುವುದರಲ್ಲಿ ತೊಡಗಿರುವೆ.॥28॥
ಮೂಲಮ್ - 29
ನ ಹಿ ತದ್ಭವಿತಾ ರಾಷ್ಟ್ರಂ ಯತ್ರರಾಮೋ ನ ಭೂಪತಿಃ ।
ತದ್ವನಂ ಭವಿತಾರಾಷ್ಟ್ರಂ ಯತ್ರ ರಾಮೋ ನಿವತ್ಸ್ಯತಿ ॥
ಅನುವಾದ
ಶ್ರೀರಾಮನು ಎಲ್ಲಿ ರಾಜನಾಗಿರುವುದಿಲ್ಲವೋ ಆ ರಾಜ್ಯ, ರಾಜ್ಯವಾಗಿ ಇರಲಾರದು - ಕಾಡು ಆಗಿಹೋದೀತು ಎಂಬುದನ್ನು ನೆನಪಿಡು. ಶ್ರೀರಾಮನು ವಾಸಿಸುವ ವನವೇ ಒಂದು ಸ್ವತಂತ್ರ ರಾಷ್ಟ್ರ ಆಗುವುದು.॥29॥
ಮೂಲಮ್ - 30
ನ ಹ್ಯದತ್ತಾಂ ಮಹೀಂ ಪಿತ್ರಾ ಭರತಃ ಶಾಸ್ತುಮಿಚ್ಛತಿ ।
ತ್ವಯಿ ವಾ ಪುತ್ರವದ್ವಸ್ತುಂ ಯದಿ ಜಾತೋ ಮಹೀಪತೇಃ ॥
ಅನುವಾದ
ಭರತನು ದಶರಥನಿಂದ ಹುಟ್ಟಿದ್ದನಾಗಿದ್ದರೆ ತಂದೆಯು ಸಂತೋಷವಾಗಿ ಕೊಡದಿರುವ ರಾಜ್ಯವನ್ನು ಎಂದಿಗೂ ತೆಗೆದುಕೊಳ್ಳಲಾರನು ಹಾಗೂ ನಿನ್ನೊಂದಿಗೆ ಪುತ್ರನಾಗಿ ವರ್ತಿಸಲು ಇಲ್ಲಿ ಇರಲು ಇಚ್ಛಿಸಲಾರನು.॥30॥
ಮೂಲಮ್ - 31
ಯದ್ಯಪಿ ತ್ವಂ ಕ್ಷಿತಿತಲಾದ್ ಗಗನಂ ಚೋತ್ಪತಿಷ್ಯಸಿ ।
ಪಿತೃವಂಶಚರಿತ್ರಜ್ಞಃ ಸೋಽನ್ಯಥಾ ನ ಕರಿಷ್ಯತಿ ॥
ಅನುವಾದ
ನೀನು ಭೂಮಿಯನ್ನು ಬಿಟ್ಟು ಆಕಾಶದಲ್ಲಿ ಹಾರಾಡುತ್ತಿದ್ದರೂ, ತನ್ನ ಪಿತೃಕುಲದ ಆಚಾರ-ವ್ಯವಹಾರವನ್ನು ತಿಳಿದ ಭರತನು ಅದಕ್ಕೆ ವಿರುದ್ಧವಾಗಿ ಏನೂ ಮಾಡಲಾರನು.॥31॥
ಮೂಲಮ್ - 32
ತತ್ತ್ವಯಾ ಪುತ್ರಗರ್ಧಿನ್ಯಾ ಪುತ್ರಸ್ಯ ಕೃತಮಪ್ರಿಯಮ್ ।
ಲೋಕೇ ನಹಿ ಸ ವಿದ್ಯೇತ ಯೋ ನ ರಾಮಮನುವ್ರತಃ ॥
ಅನುವಾದ
ನೀನು ಪುತ್ರನ ಪ್ರಿಯಮಾಡುವ ಇಚ್ಛೆಯಿಂದ ನಿಜವಾಗಿ ಅವನ ಅಪ್ರಿಯವನ್ನೇ ಮಾಡಿರುವೆ; ಏಕೆಂದರೆ ಜಗತ್ತಿನಲ್ಲಿ ಶ್ರೀರಾಮನ ಭಕ್ತನಲ್ಲದ ಪುರುಷರು ಯಾರೂ ಇರಲಾರನು.॥32॥
ಮೂಲಮ್ - 33
ದ್ರಕ್ಷ್ಯಸ್ಯದ್ಯೈವ ಕೈಕೇಯೀ ಪಶುವ್ಯಾಲಮೃಗದ್ವಿಜಾನ್ ।
ಗಚ್ಛತಃ ಸಹ ರಾಮೇಣ ಪಾದಪಾಂಶ್ಚ ತದುನ್ಮಖಾನ್ ॥
ಅನುವಾದ
ಕೈಕೇಯಿ! ವನಕ್ಕೆ ಹೋಗುತ್ತಿರುವ ಶ್ರೀರಾಮನ ಜೊತೆಗೆ ಪಶು, ಸರ್ಪ, ಮೃಗ, ಪಕ್ಷಿಗಳೂ ಕೂಡ ಹೋಗುತ್ತಿರುವುದನ್ನು ನೀನು ಇಂದೇ ನೋಡುವೆ. ಬೇರೆಯವರ ಮಾತೇನು, ವೃಕ್ಷಗಳೂ ಕೂಡ ಅವನೊಂದಿಗೆ ಹೋಗಲು ಉತ್ಸುಕವಾಗಿವೆ.॥33॥
ಮೂಲಮ್ - 34
ಅಥೋತ್ತಮಾನ್ಯಾಭರಣಾನಿ ದೇವಿ
ದೇಹಿ ಸ್ನುಷಾಯೈ ವ್ಯಪನೀಯ ಚೀರಮ್ ।
ನ ಚೀರಮಸ್ಯಾಃ ಪ್ರವಿಧೀಯತೇತಿ
ನ್ಯವಾರಯತ್ತದ್ವಸನಂ ವಸಿಷ್ಠಃ ॥
ಅನುವಾದ
ದೇವಿ! ಸೀತೆಯು ನಿನ್ನ ಸೊಸೆಯಾಗಿರುವಳು. ಈಕೆಯ ಮೈಮೇಲಿನ ನಾರುಮಡಿಯನ್ನು ಕಿತ್ತುಹಾಕಿ ನೀನು ಆಕೆಗೆ ಉಡಲಿಕ್ಕಾಗಿ ಉತ್ತಮೋತ್ತಮ ವಸ್ತ್ರ ಹಾಗೂ ಒಡವೆಗಳನ್ನು ಕೊಡು. ಇವಳಿಗೆ ವಲ್ಕಲವಸ್ತ್ರವನ್ನು ಕೊಡುವುದು ಎಂದಿಗೂ ಉಚಿತವಾಗಲಾರದು. ಹೀಗೆ ಹೇಳಿ ವಸಿಷ್ಠರು ಜಾನಕಿಯು ವಲ್ಕಲಗಳನ್ನು ಧರಿಸುವುದನ್ನು ತಡೆದುಬಿಟ್ಟರು.॥34॥
ಮೂಲಮ್ - 35
ಏಕಸ್ಯ ರಾಮಸ್ಯ ವನೇ ನಿವಾಸ-
ಸ್ತ್ವಯಾ ವೃತಃ ಕೇಕಯ ರಾಜಪುತ್ರಿ ।
ವಿಭೂಷಿತೇಯಂ ಪ್ರತಿಕರ್ಮನಿತ್ಯಾ
ವಸತ್ವರಣ್ಯೇ ಸಹ ರಾಘವೇಣ ॥
ಅನುವಾದ
ಅವರು ಪುನಃ ಹೇಳಿದರು-ಕೇಕೇಯ ರಾಜಕುಮಾರೀ! ನೀನು ಶ್ರೀರಾಮನಿಗೊಬ್ಬನಿಗೇ ವನವಾಸದ ವರವನ್ನು ಕೇಳಿರುವೆ (ಸೀತೆಗಾಗಿ ಇಲ್ಲ); ಆದ್ದರಿಂದ ಈ ರಾಜಕುಮಾರಿ ವಸ್ತ್ರಾಭೂಷಣಗಳಿಂದ ಅಲಂಕೃತಳಾಗಿ ಸದಾ ಶೃಂಗಾರ ಧರಿಸಿಕೊಂಡೇ ವನದಲ್ಲಿ ಶ್ರೀರಾಮಚಂದ್ರನೊಂದಿಗೆ ವಾಸಿಸಲಿ.॥35॥
ಮೂಲಮ್ - 36
ಯಾನೈಶ್ಚ ಮುಖ್ಯೈಃ ಪರಿಚಾರಕೈಶ್ಚ
ಸುಸಂವೃತಾ ಗಚ್ಛತು ರಾಜಪುತ್ರೀ ।
ವಸೈಶ್ಚ ಸರ್ವೈಃ ಸಹಿತೈರ್ವಿಧಾನೈ-
ರ್ನೇಯಂ ವೃತಾ ತೇ ವರಸಂಪ್ರದಾನೇ ॥
ಅನುವಾದ
ರಾಜಕುಮಾರಿ ಸೀತೆಯು ಮುಖ್ಯ-ಮುಖ್ಯ ಸೇವಕರು ಹಾಗೂ ವಾಹನಗಳೊಂದಿಗೆ ಎಲ್ಲ ವಿಧದ ವಸ್ತ್ರ ಮತ್ತು ಆವಶ್ಯಕ ಉಪಕರಣಗಳಿಂದ ಸಂಪನ್ನನಾಗಿ ವನದ ಪ್ರಯಾಣ ಮಾಡಲಿ. ನೀನು ವರವನ್ನು ಕೇಳುವಾಗ ಸೀತೆಯ ವನವಾಸದ ಕುರಿತು ಏನೂ ಹೇಳಲಿಲ್ಲ. (ಆದ್ದರಿಂದ ಈಕೆಗೆ ನಾರುಮಡಿಯನ್ನು ಉಡಿಸಲಾಗುವುದಿಲ್ಲ.॥36॥
ಮೂಲಮ್ - 37
ತಸ್ಮಿಂಸ್ತಥಾ ಜಲ್ಪತಿ ವಿಪ್ರಮುಖ್ಯೇ
ಗುರೌ ನೃಪಸ್ಯಾಪ್ರತಿಮಪ್ರಭಾವೇ ।
ನೈವ ಸ್ಮ ಸೀತಾ ವಿನಿವೃತ್ತಭಾವಾ
ಪ್ರಿಯಸ್ಯ ಭರ್ತುಃ ಪ್ರತಿಕಾರಕಾಮಾ ॥
ಅನುವಾದ
ಬ್ರಾಹ್ಮಣಶಿರೋಮಣಿ ಅಪ್ರತಿಮ ಪ್ರಭಾವಶಾಲಿ ರಾಜಗುರು ಮಹರ್ಷಿ ವಸಿಷ್ಠರು ಹೀಗೆ ಹೇಳಿದರೂ ಕೂಡ ಸೀತೆಯು ತನ್ನ ಪ್ರಿಯತಮ ಪತಿಯಂತೆಯೇ ವೇಷ-ಭೂಷಣಗಳನ್ನು ಧರಿಸಲು ಇಚ್ಛಿಸಿ ನಾರುಮಡಿಯನ್ನು ಧರಿಸುವ ನಿಶ್ಚಯವನ್ನು ಬದಲಾಯಿಸಲಿಲ್ಲ.॥37॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಮೂವತ್ತೇಳನೆಯ ಸರ್ಗ ಪೂರ್ಣವಾಯಿತು.॥37॥