वाचनम्
ಭಾಗಸೂಚನಾ
ದಶರಥರಾಜನು ಶ್ರೀರಾಮನೊಡನೆ ಸೈನ್ಯವನ್ನು, ಭಂಡಾರವನ್ನು ಕಳುಹಿಸಲು ಸುಮಂತ್ರನಿಗೆ ಆದೇಶವಿತ್ತುದು, ಕೈಕೇಯಿಯ ವಿರೋಧ, ಸಿದ್ಧಾರ್ಥನು ಕೈಕೇಯನ್ನು ಸಮಾಧಾನಗೊಳಿಸಿದುದು, ದಶರಥನು ಶ್ರೀರಾಮನೊಡನೆ ತಾನೂ ಹೋಗುವ ಇಚ್ಛೆಯನ್ನು ವ್ಯಕ್ತಪಡಿಸಿದುದು
ಮೂಲಮ್ - 1
ತತಃ ಸಮಂತ್ರಮೈಕ್ಷ್ವಾಕಃ ಪೀಡಿತೋಽತ್ರ ಪ್ರತಿಜ್ಞಯಾ ।
ಸಬಾಷ್ಪಮತಿನಿಃಶ್ವಸ್ಯ ಜಗಾದೇದಂ ಪುನರ್ವಚಃ ॥
ಅನುವಾದ
ಆಗ ಇಕ್ಷ್ವಾಕುಕುಲನಂದನ ದಶರಥನು ತನ್ನ ಪ್ರತಿಜ್ಞೆಯಿಂದ ಪೀಡಿತನಾಗಿ ಕಣ್ಣೀರು ಸುರಿಸುತ್ತಾ ದೀರ್ಘವಾಗಿ ನಿಟ್ಟುಸಿರು ಬಿಡುತ್ತಾ ಸುಮಂತ್ರನಲ್ಲಿ ಪುನಃ ಈ ಪ್ರಕಾರ ಹೇಳಿದನು-॥1॥
ಮೂಲಮ್ - 2
ಸೂತ ರತ್ನಸುಸಂಪೂರ್ಣಾ ಚತುರ್ವಿಧಬಲಾ ಚಮೂಃ ।
ರಾಘವಸ್ಯಾನುಯಾತ್ರಾರ್ಥಂ ಕ್ಷಿಪ್ರಂ ಪ್ರತಿವಿಧೀಯತಾಮ್ ॥
ಅನುವಾದ
ಸೂತನೇ! ನೀನು ಶೀಘ್ರವಾಗಿ ರತ್ನಗಳಿಂದ ಪರಿಪೂರ್ಣವಾದ ಚತುರಂಗಿಣೀ ಸೇನೆಯು ಶ್ರೀರಾಮನ ಹಿಂದೆ-ಹಿಂದೆ ಹೋಗಲು ಆಜ್ಞಾಪಿಸು.॥2॥
ಮೂಲಮ್ - 3
ರೂಪಾಜೀವಾಶ್ಚ ವಾದಿನ್ಯೋ ವಣಿಜಶ್ಚ ಮಹಾಧನಾಃ ।
ಶೋಭಯಂತು ಕುಮಾರಸ್ಯ ವಾಹಿನೀಃ ಸುಪ್ರಸಾರಿತಾಃ ॥
ಅನುವಾದ
ಚಿತ್ತಾಕರ್ಷಕ ರೂಪಿನಿಂದಲೇ ಜೀವಿಸುವ ಮಧುರಭಾಷಿಣಿಯರಾದ ಸ್ತ್ರೀಯರು ಹಾಗೂ ಕ್ರಯ-ವಿಕ್ರಯ ದ್ರವ್ಯಗಳ ಪ್ರಸಾರಣಮಾಡುವಲ್ಲಿ ಕುಶಲರಾದ ವೈಶ್ಯರು ರಾಜಕುಮಾರ ಶ್ರೀರಾಮನ ಸೈನ್ಯವನ್ನು ಸುಶೋಭಿತಗೊಳಿಸಲಿ.॥3॥
ಮೂಲಮ್ - 4
ಯೇ ಚೈನಮುಪಜೀವಂತಿ ರಮತೇ ಯೈಶ್ಚ ವೀರ್ಯತಃ ।
ತೇಷಾಂ ಬಹುವಿಧಂ ದತ್ತ್ವಾ ತಾನಪ್ಯತ್ರ ನಿಯೋಜಯ ॥
ಅನುವಾದ
ಶ್ರೀರಾಮನನ್ನು ಆಶ್ರಯಿಸಿ ಜೀವನ ನಡೆಸುವವರಿಗೆ, ಯಾರೊಡನೆ ಶ್ರೀರಾಮನು ವೀರ್ಯಪ್ರದರ್ಶನ ಮಾಡುತ್ತಾ ಕ್ರೀಡಿಸುವನೋ ಆ ಮಲ್ಲರಿಗೆ ಅನೇಕ ಪ್ರಕಾರದ ಧನಕೊಟ್ಟು ಅವರನ್ನು ಶ್ರೀರಾಮನೊಂದಿಗೆ ಹೋಗುವಂತೆ ಆಜ್ಞಾಪಿಸು.॥4॥
ಮೂಲಮ್ - 5
ಆಯುಧಾನಿ ಚ ಮುಖ್ಯಾನಿ ನಾಗರಾಃ ಶಕಟಾನಿ ಚ ।
ಅನುಗಚ್ಛಂತು ಕಾಕುತ್ಸ್ಥಂ ವ್ಯಾಧಾಶ್ಚಾರಣ್ಯಕೋವಿದಾಃ ॥
ಅನುವಾದ
ಮುಖ್ಯ-ಮುಖ್ಯ ಆಯುಧಗಳು, ನಗರ ನಿವಾಸಿಗಳು, ಆವಶ್ಯಕ ಸಾಮಗ್ರಿಗಳಿಂದ ತುಂಬಿದ ಬಂಡಿಗಳು, ಕಾಡಿನ ರಹಸ್ಯವನ್ನು ತಿಳಿದ ಬೇಡರೂ ಕಾಕುತ್ಸ್ಥನನ್ನು ಹಿಂಬಾಲಿಸಲಿ.॥5॥
ಮೂಲಮ್ - 6
ನಿಘ್ನನ್ ಮೃಗಾನ್ ಕುಂಜರಾಂಶ್ಚ ಪಿಬಂಶ್ಚಾರಣ್ಯಕಂ ಮಧು ।
ನದೀಶ್ಚ ವಿವಿಧಾಃ ಪಶ್ಯನ್ ನ ರಾಜ್ಯಂ ಸಂಸ್ಮರಿಷ್ಯತಿ ॥
ಅನುವಾದ
ಶ್ರೀರಾಮನು ದಾರಿಯಲ್ಲಿ ಬಂದ ಮೃಗಗಳನ್ನು, ಆನೆಗಳನ್ನು ಹಿಮ್ಮೆಟ್ಟಿಸುತ್ತಾ, ಕಾಡಿನ ಜೇನನ್ನು ಕುಡಿಯುತ್ತಾ, ನಾನಾ ವಿಧದ ನದಿಗಳನ್ನು ನೋಡುತ್ತಾ, ತನ್ನ ರಾಜ್ಯವನ್ನು ಮರೆಯುವನು.॥6॥
ಮೂಲಮ್ - 7
ಧಾನ್ಯಕೋಶಶ್ಚ ಯಃ ಕಶ್ಚಿದ್ಧನಕೋಶಶ್ಚ ಮಾಮಕಃ ।
ತೌ ರಾಮಮನುಗಚ್ಛೇತಾಂ ವಸಂತಂ ನಿರ್ಜನೇ ವನೇ ॥
ಅನುವಾದ
ರಾಮನು ನಿರ್ಜನ ವನಕ್ಕೆ ವಾಸಿಸಲು ಹೋಗುತ್ತಿದ್ದಾನೆ. ಆದ್ದರಿಂದ ನನ್ನ ಭಂಡಾರ-ಅನ್ನಭಂಡಾರ ಇವೆರಡೂ ಅವನೊಂದಿಗೆ ಹೋಗಲಿ.॥7॥
ಮೂಲಮ್ - 8
ಯಜನ್ ಪುಣ್ಯೇಷು ದೇಶೇಷು ವಿಸೃಜಂಶ್ಚಾಪ್ತದಕ್ಷಿಣಾಃ ।
ಋಷಿಭಿಶ್ಚಾಪಿ ಸಂಗಮ್ಯ ಪ್ರವತ್ಸ್ಯತಿ ಸುಖಂ ವನೇ ॥
ಅನುವಾದ
ಅವನು ಕಾಡಿನ ಪಾವನ ಪ್ರದೇಶದಲ್ಲಿ ಯಜ್ಞಮಾಡಲಿ, ಅವುಗಳಲ್ಲಿ ಆಚಾರ್ಯರೇ ಮೊದಲಾದವರಿಗೆ ಹೇರಳ ದಕ್ಷಿಣೆ ಕೊಡಲಿ. ಋಷಿಗಳೊಂದಿಗೆ ಸೇರಿ ವನದಲ್ಲಿ ಸುಖವಾಗಿ ಇರಲಿ.॥8॥
ಮೂಲಮ್ - 9
ಭರತಶ್ಚ ಮಹಾಬಾಹುರಯೋಧ್ಯಾಂ ಪಾಲಯಿಷ್ಯತಿ ।
ಸರ್ವಕಾಮೈಃ ಪುನಃ ಶ್ರೀಮಾನ್ ರಾಮಃ ಸಂಸಾಧ್ಯತಾಮಿತಿ ॥
ಅನುವಾದ
ಮಹಾಬಾಹು ಭರತನು ಅಯೋಧ್ಯೆಯನ್ನು ಪಾಲಿಸಲಿ. ಶ್ರೀಮಾನ್ ರಾಮನಿಗೆ ಮನೋವಾಂಛಿತ ಎಲ್ಲ ಭೋಗಗಳಿಂದ ಸಂಪನ್ನಗೊಳಿಸಲು ಇಲ್ಲಿಂದ ಕಳಿಸಲಾಗುವುದು.॥9॥
ಮೂಲಮ್ - 10
ಏವಂ ಭ್ರುವತಿ ಕಾಕುತ್ಸ್ಥೇಕೈಕೇಯ್ಯಾ ಭಯಮಾಗತಮ್ ।
ಮುಖಂ ಚಾಪ್ಯಗಮಚ್ಛೋಷಂ ಸ್ವರಶ್ಚಾಪಿ ವ್ಯರುಧ್ಯತ ॥
ಅನುವಾದ
ದಶರಥ ಮಹಾರಾಜನು ಹೀಗೆ ಹೇಳತೊಡಗಿದಾಗ ಕೈಕೇಯಿಗೆ ಬಹಳ ಭಯವಾಯಿತು. ಆಕೆಯ ಮುಖ ಬಾಡಿತು, ಗಂಟಲು ಕಟ್ಟಿಕೊಂಡಿತು.॥10॥
ಮೂಲಮ್ - 11
ಸಾ ವಿಷಣ್ಣಾ ಚ ಸಂತ್ರಸ್ತಾ ಮುಖೇನ ಪರಿಶುಷ್ಯತಾ ।
ರಾಜಾನಮೇವಾಭಿಮುಖೀ ಕೈಕೇಯೀ ವಾಕ್ಯಮಬ್ರವೀತ್ ॥
ಅನುವಾದ
ಆಗ ಕೈಕೇಯಿಯು ವಿಷಣ್ಣಳಾಗಿ ಸಂತ್ರಸ್ತಳಾಗಿ. ಬಾಡಿದ ಮುಖದಿಂದ ಮಹಾರಾಜನನ್ನು ನೋಡುತ್ತಾ ಇಂತೆಂದಳು.॥11॥
ಮೂಲಮ್ - 12
ರಾಜ್ಯಂ ಗತಧನಂ ಸಾಧೋ ಪೀತಮಂಡಾಂ ಸುರಾಮಿವ ।
ನಿರಾಸ್ವಾದ್ಯತಮಂ ಶೂನ್ಯಂ ಭರತೋ ನಾಭಿಪತ್ಸ್ಯತೇ ॥
ಅನುವಾದ
ಶ್ರೇಷ್ಠ ಮಹಾರಾಜರೇ! ಯಾವುದರ ಸಾರಭಾಗವನ್ನು ಮೊದಲೇ ಕುಡಿದಿರುವ, ರುಚಿಯಿಲ್ಲದ ಸುರೆಯನ್ನು ಕುಡುಕರೂ ಕೂಡ ಸ್ವೀಕರಿಸುವುದಿಲ್ಲವೋ, ಹಾಗೆಯೇ ಈ ಧನಹೀನ ಮತ್ತು ಬರಿದಾದ ರಾಜ್ಯವನ್ನು ಎಂದಿಗೂ ಸೇವಿಸಲು ಯೋಗ್ಯವಾಗಿರಲಾರದು. ಇದನ್ನು ಭರತನು ಖಂಡಿತವಾಗಿ ಸ್ವೀಕರಿಸಲಾರನು.॥12॥
ಮೂಲಮ್ - 13
ಕೈಕೇಯ್ಯಾಂ ಮುಕ್ತಲಜ್ಜಾಯಾಂ ವದಂತ್ಯಾಮತಿದಾರುಣಮ್ ।
ರಾಜಾ ದಶರಥೋ ವಾಕ್ಯಮುವಾಚಾಯತಲೋಚನಾಮ್ ॥
ಅನುವಾದ
ಕೈಕೇಯಿಯು ನಾಚಿಕೆಗೆಟ್ಟು ಹೀಗೆ ಅತ್ಯಂತ ದಾರುಣವಾದ ಮಾತನ್ನು ಹೇಳ ತೊಡಗಿದಾಗ ದಶರಥನು ಆ ವಿಶಾಲಲೋಚನೆ ಕೈಕೇಯಿಯಲ್ಲಿ ಈ ಪ್ರಕಾರ ಹೇಳಿದನು.॥13॥
ಮೂಲಮ್ - 14
ವಹಂತಂ ಕಿಂ ತುದಸಿ ಮಾಂ ನಿಯುಜ್ಯ ಧುರಿ ಮಾಹಿತೇ ।
ಅನಾರ್ಯೇ ಕೃತ್ಯಮಾರಬ್ಧಂ ಕಿಂ ನ ಪೂರ್ವಮುಪಾರುಧಃ ॥
ಅನುವಾದ
ಅನಾರ್ಯೆ! ಅಹಿತಕಾರಿಣಿಯೇ! ನೀನು ರಾಮನಿಗೆ ವನವಾಸ ವಿಧಿಸಿ ಹೊರಲಾರದ ಭಾರವನ್ನು ನಾನು ಹೊರುತ್ತಿದ್ದೇನೆ. ಇಂತಹ ಸ್ಥಿತಿಯಲ್ಲಿ ನೀನು ಮಾತಿನ ಚಾವಟಿಗೆಯಿಂದ ನನಗೆ ಹೊಡೆದು ಏಕೆ ಪೀಡಿಸುತ್ತಿರುವೆ? ಈಗ ಶ್ರೀರಾಮನ ಜೊತೆಗೆ ಸೈನ್ಯ, ಸಾಮಗ್ರಿ ಕಳಿಸುವುದನ್ನು ತಡೆಯುತ್ತಿರುವ ಕಾರ್ಯ ಮಾಡುತ್ತಿರುವೆಯಲ್ಲ, ಇದನ್ನು ಮೊದಲು ಏಕೆ ಹೇಳಲಿಲ್ಲ? (ಅರ್ಥಾತ್ ಶ್ರೀರಾಮನು ಒಬ್ಬಂಟಿಗನಾಗಿ ಕಾಡಿಗೆ ಹೋಗಬೇಕು, ಅವನೊಂದಿಗೆ ಸೈನ್ಯ ಮೊದಲಾದ ಸಾಮಗ್ರಿ ಹೋಗಬಾರದೆಂದು ಏಕೆ ಹೇಳಲಿಲ್ಲ?.॥14॥
ಮೂಲಮ್ - 15
ತಸ್ಯೈತತ್ ಕ್ರೋಧಸಂಯುಕ್ತಮುಕ್ತಂ ಶ್ರುತ್ವಾ ವರಾಂಗನಾ ।
ಕೈಕೇಯೀ ದ್ವಿಗುಣಂ ಕ್ರುದ್ಧಾ ರಾಜಾನಮಿದಮಬ್ರವೀತ್ ॥
ಅನುವಾದ
ರಾಜನ ಈ ಕ್ರೋಧಯುಕ್ತ ಮಾತನ್ನು ಕೇಳಿ ಸುಂದರೀ ಕೈಕೇಯಿಯು ಇಮ್ಮಡಿ ಕ್ರೋಧಗೊಂಡು ಅವನಲ್ಲಿ ಹೀಗೆ ಹೇಳಿದಳು.॥15॥
ಮೂಲಮ್ - 16
ತವೈವ ವಂಶೇಸಗರೋ ಜ್ಯೇಷ್ಠ ಪುತ್ರಮುಪಾರುಧತ್ ।
ಅಸಮಂಜ ಇತಿ ಖ್ಯಾತಂ ತಥಾಯಂ ಗಂತುಮರ್ಹತಿ ॥
ಅನುವಾದ
ಮಹಾರಾಜರೇ! ನಿಮ್ಮ ವಂಶದಲ್ಲೇ ಮೊದಲು ಆಗಿ ಹೋದ ರಾಜಾ ಸಗರನು ತನ್ನ ಜ್ಯೇಷ್ಠಪುತ್ರನಾದ ಅಸಮಂಜನನ್ನು ರಾಜ್ಯದಿಂದ ಹೊರಹಾಕಿ ಕಾಡಿಗೆ ಕಳಿಸಿದ್ದನು. ಹಾಗೆಯೇ ಇವನನ್ನು ಇಲ್ಲಿಂದ ಹೊರಹಾಕಿರಿ.॥16॥
ಮೂಲಮ್ - 17
ಏವಮುಕ್ತೋ ಧಿಗಿತ್ಯೇವ ರಾಜಾ ದಶರಥೋಬ್ರವೀತ್ ।
ವ್ರೀಡಿತಶ್ಚ ಜನಃ ಸರ್ವಃ ಸಾ ಚ ತನ್ನಾವಬುಧ್ಯತ ॥
ಅನುವಾದ
ಆಕೆಯು ಹೀಗೆ ಹೇಳಿದಾಗ ದಶರಥನು ನುಡಿದನು-ಧಿಕ್ಕಾರ, ಧಿಕ್ಕಾರ! ಅಲ್ಲಿ ಕುಳಿತಿರುವ ಎಲ್ಲ ಜನರು ನಾಚಿ ಹೆದರಿಕೊಂಡರು. ಆದರೆ ಕೈಕೇಯಿಗೆ ತಾನಾಡಿದ ಮಾತಿನ ಅನೌಚಿತ್ಯವನ್ನು ಅಥವಾ ರಾಜನು ಧಿಕ್ಕರಿಸಿದುದನ್ನು ಗಮನಿಸಲೇ ಇಲ್ಲ.॥17॥
ಮೂಲಮ್ - 18
ತತ್ರ ವೃದ್ಧೋ ಮಹಾಮಾತ್ರಃ ಸಿದ್ಧಾರ್ಥೋನಾಮ ನಾಮತಃ ।
ಶುಚಿರ್ಬಹುಮತೋ ರಾಜ್ಞಃ ಕೈಕೇಯೀಮಿದಮಬ್ರವೀತ್ ॥
ಅನುವಾದ
ಆಗ ಅಲ್ಲಿ ರಾಜನ ಪ್ರಧಾನನು ಮತ್ತು ವಯೋವೃದ್ಧ ಮಂತ್ರೀ ಸಿದ್ಧಾರ್ಥನು ಕುಳಿತಿದ್ದನು. ಅವನು ಬಹಳ ಶುದ್ಧ ಸ್ವಭಾವವುಳ್ಳವನೂ, ರಾಜನಿಗೆ ವಿಶೇಷ ಆದರಣೀಯನಾಗಿದ್ದನು. ಅವನು ಕೈಕೇಯಿಯಲ್ಲಿ ಇಂತೆಂದನು.॥18॥
ಮೂಲಮ್ - 19
ಅಸಮಂಜೋ ಗೃಹೀತ್ವಾ ತು ಕ್ರೀಡತಃ ಪಥಿ ದಾರಕಾನ್ ।
ಸರಯ್ವಾಃ ಪ್ರಕ್ಷಿಪನ್ನಪ್ಸು ರಮತೇ ತೇನ ದುರ್ಮತಿಃ ॥
ಅನುವಾದ
ದೇವಿ! ಅಸಮಂಜನು ಬಹಳ ದುಷ್ಟಬುದ್ಧಿಯ ರಾಜಕುಮಾರನಾಗಿದ್ದನು. ಅವನು ದಾರಿಯಲ್ಲಿ ಆಡುತ್ತಿರುವ ಬಾಲಕರನ್ನು ಹಿಡಿದು ಸರಯೂ ನೀರಿನಲ್ಲಿ ಎಸೆಯುತ್ತಿದ್ದನು. ಇಂತಹ ಕಾರ್ಯಗಳಿಂದ ಆನಂದ ಪಡೆಯುತ್ತಿದ್ದನು.॥19॥
ಮೂಲಮ್ - 20
ತಂ ದೃಷ್ಟ್ವಾ ನಾಗರಾಃ ಸರ್ವೇ ಕ್ರುದ್ಧಾ ರಾಜಾನಮಬ್ರುವನ್ ।
ಅಸಮಂಜಂ ವೃಣೀಷ್ವೈಕಮಸ್ಮಾನ್ ವಾ ರಾಷ್ಟ್ರವರ್ಧನ ॥
ಅನುವಾದ
ಅವನ ಈ ಕೃತ್ಯವನ್ನು ನೋಡಿ ಎಲ್ಲ ನಗರವಾಸಿಗಳು ಕುಪಿತರಾಗಿ ರಾಜನ ಬಳಿಗೆ ಹೋಗಿ ಹೇಳಿದರು - ರಾಷ್ಟ್ರದ ವೃದ್ಧಿಯನ್ನು ಮಾಡುವ ಮಹಾರಾಜರೇ! ಒಂದೋ ನೀವೊಬ್ಬರೇ ಅಸಮಂಜನನ್ನು ಇಟ್ಟುಕೊಂಡು ಇರಿ, ಇಲ್ಲವೇ ಅವನನ್ನು ನಗರದಿಂದ ಗಡೀಪಾರು ಮಾಡಿರಿ.॥20॥
ಮೂಲಮ್ - 21
ತಾನುವಾಚ ತತೋ ರಾಜಾ ಕಿಂ ನಿಮಿತ್ತಮಿದಂ ಭಯಮ್ ।
ತಾಶ್ಚಾಪಿ ರಾಜ್ಞಾ ಸಂಪೃಷ್ಟಾ ವಾಕ್ಯಂ ಪ್ರಕೃತಯೋಽಬ್ರುವನ್ ॥
ಅನುವಾದ
ಆಗ ರಾಜನು ಅವರಲ್ಲಿ ಕೇಳಿದನು-ನಿಮಗೆ ಅಸಮಂಜನಿಂದ ಯಾವ ಕಾರಣದಿಂದ ಭಯ ಉಂಟಾಗಿದೆ? ರಾಜನು ಕೇಳಿದಾಗ ಆ ಪ್ರಜಾಜನರು ಹೀಗೆ ಹೇಳಿದರು.॥21॥
ಮೂಲಮ್ - 22
ಕ್ರೀಡತಸ್ತ್ವೇಷ ನಃ ಪುತ್ರಾನ್ ಬಾಲಾನುದ್ ಭ್ರಾಂತಚೇತಸಃ ।
ಸರಯ್ವಾಂ ಪ್ರಕ್ಷಿಪನ್ಮೌರ್ಖ್ಯಾದತುಲಾಂ ಪ್ರೀತಿಮಶ್ನುತೇ ॥
ಅನುವಾದ
ಮಹಾರಾಜರೇ! ಆಡುತ್ತಿರುವ ನಮ್ಮ ಪುಟ್ಟ-ಪುಟ್ಟ ಮಕ್ಕಳನ್ನು ಹಿಡಿದುಕೊಳ್ಳುವನು ಮತ್ತು ಅವರು ಗಾಬರಿಗೊಂಡಾಗ ಅವರನ್ನು ಸರಯೂ ನದಿಗೆ ಎಸೆದುಬಿಡುತ್ತಾನೆ. ಮುರ್ಖತೆಯಿಂದ ಹೀಗೆ ಮಾಡುವುದರಿಂದ ಅವನಿಗೆ ಹೆಚ್ಚಿನ ಆನಂದ ಸಿಗುತ್ತದೆ.॥22॥
ಮೂಲಮ್ - 23
ಸ ತಾಸಾಂವಚನಂ ಶ್ರುತ್ವಾ ಪ್ರಕೃತೀನಾಂ ನರಾಧಿಪಃ ।
ತಂ ತತ್ಯಾಜಾಹಿತಂ ಪುತ್ರಂ ತಾಸಾಂ ಪ್ರಿಯಚಿಕೀರ್ಷಯಾ ॥
ಅನುವಾದ
ಆ ಪ್ರಜಾಜನರ ಮಾತನ್ನು ಕೇಳಿ ರಾಜಾ ಸಗರನು ಅವರನ್ನು ಸಂತೋಷಗೊಳಿಸುವ ಇಚ್ಛೆಯಿಂದ ಆ ಅಹಿತಕಾರಕ ದುಷ್ಟಪುತ್ರನನ್ನು ತ್ಯಜಿಸಿಬಿಟ್ಟನು.॥23॥
ಮೂಲಮ್ - 24
ತಂ ಯಾನಂ ಶೀಘ್ರಮಾರೋಪ್ಯ ಸಭಾರ್ಯಂ ಸಪರಿಚ್ಛದಮ್ ।
ಯಾವಜ್ಜೀವಂ ವಿವಾಸ್ಯೋಽಯಮಿತಿ ತಾನನ್ವಶಾತ್ ಪಿತಾ ॥
ಅನುವಾದ
ತಂದೆಯು ತನ್ನ ಪುತ್ರನನ್ನು ಪತ್ನೀ ಮತ್ತು ಆವಶ್ಯಕ ಸಾಮಗ್ರಿಸಹಿತ ರಥದಲ್ಲಿ ಕುಳ್ಳಿರಿಸಿ ‘ಇವನನ್ನು ಜೀವನವಿಡೀ ರಾಜ್ಯದಿಂದ ಗಡೀಪಾರು ಮಾಡಿಬಿಡಿ ಎಂದು ಸೇವಕರಿಗೆ ಆಜ್ಞಾಪಿಸಿದನು.॥24॥
ಮೂಲಮ್ - 25
ಸ ಫಾಲಪಿಟಕಂ ಗೃಹ್ಯ ಗಿರಿದುರ್ಗಾಣ್ಯಲೋಕಯತ್ ।
ದಿಶಃಸರ್ವಾಸ್ತ್ವನುಚರನ್ಸ ಯಥಾ ಪಾಪಕರ್ಮಕೃತ್ ॥
ಮೂಲಮ್ - 26
ಇತ್ಯೇನಮತ್ಯಜದ್ ರಾಜಾ ಸಗರೋ ವೈ ಸುಧಾರ್ಮಿಕಃ ।
ರಾಮಃ ಕಿಮಕರೋತ್ಪಾಪಂ ಯೇನೈವಮುಪರುಧ್ಯತೇ ॥
ಅನುವಾದ
ಅಸಮಂಜನು ಗುದ್ದಲಿ, ಬುಟ್ಟಿ ಎತ್ತಿಕೊಂಡು ಪರ್ವತಗಳ ದುರ್ಗಮ ಗುಹೆಗಳನ್ನೇ ತನಗೆ ವಾಸಕ್ಕೆ ಯೋಗ್ಯವೆಂದು ನೋಡಿ, ಕಂದ-ಮೂಲಗಳಿಗಾಗಿ ಎಲ್ಲೆಡೆ ಸಂಚರಿಸ ತೊಡಗಿದನು. ಅವನು ಪಾಪಾಚಾರಿಯಾಗಿದ್ದನು ಆದ್ದರಿಂದ ಪರಮ ಧಾರ್ಮಿಕ ರಾಜಾ ಸಗರನು ಅವನನ್ನು ತ್ಯಜಿಸಿದನು ಎಂದು ಹೇಳಲಾಗುತ್ತದೆ. ಶ್ರೀರಾಮನು ಇಂತಹ ಯಾವ ಅಪರಾಧ ಮಾಡಿರುವನು? ಯಾವ ಕಾರಣದಿಂದ ಅವನನ್ನು ಈ ರೀತಿ ರಾಜ್ಯವನ್ನು ಪಡೆಯುವುದರಲ್ಲಿ ತಡೆಯಲಾಗಿದೆ.॥25-26॥
ಮೂಲಮ್ - 27
ನಹಿ ಕಂಚನ ಪಶ್ಯಾಮೋ ರಾಘವಸ್ಯಾಗುಣಂ ವಯಮ್ ।
ದುರ್ಲಭೋ ಹ್ಯಸ್ಯ ನಿರಯಃ ಶಶಾಂಕಸ್ಯೇವ ಕಲ್ಮಷಮ್ ॥
ಅನುವಾದ
ನಾವಾದರೋ ಶ್ರೀರಾಮಚಂದ್ರನಲ್ಲಿ ಯಾವುದೇ ಅವಗುಣವನ್ನು ನೋಡಿಲ್ಲ. ಶುಕ್ಲಪಕ್ಷದ ಬಿದಿಗೆಯ ಚಂದ್ರನಲ್ಲಿ ಮಲಿನತೆಯ ದರ್ಶನ ದುರ್ಲಭವಿರುವಂತೆಯೇ ರಾಮನಲ್ಲಿ ಯಾವುದೇ ಪಾಪ ಅಥವಾ ಅಪರಾಥ ಹುಡುಕಿದರೂ ಸಿಗುವುದಿಲ್ಲ.॥27॥
ಮೂಲಮ್ - 28
ಅಥವಾ ದೇವಿ ತ್ವಂ ಕಂಚಿದ್ ದೋಷಂ ಪಶ್ಯತಿ ರಾಘವೇ ।
ತಮದ್ಯ ಬ್ರೂಹಿ ತತ್ತ್ವೇನ ತದಾ ರಾಮೋ ವಿವಾಸ್ಯತೇ ॥
ಅನುವಾದ
ಅಥವಾ ದೇವಿ! ನಿನಗೆ ಶ್ರೀರಾಮನಲ್ಲಿ ಯಾವುದಾದರು ದೋಷ ಕಂಡು ಬಂದಿದ್ದರೆ ಅದನ್ನು ಇಂದು ಸ್ಪಷ್ಟವಾಗಿ ತಿಳಿಸು. ಆ ಸ್ಥಿತಿಯಲ್ಲಿ ರಾಮನನ್ನು ಕಳಿಸಿಕೊಡಲಾಗುವುದು.॥28॥
ಮೂಲಮ್ - 29
ಅದುಷ್ಟಸ್ಯ ಹಿ ಸಂತ್ಯಾಗಃ ಸತ್ಪಥೇ ನಿರತಸ್ಯ ಚ ।
ನಿರ್ದಹೇದಪಿ ಶಕ್ರಸ್ಯ ದ್ಯುತಿಂ ಧರ್ಮನಿರೋಧವಾನ್ ॥
ಅನುವಾದ
ಯಾರಲ್ಲಿ ಯಾವುದೇ ದುಷ್ಟತೆ ಇಲ್ಲವೋ, ಸದಾ ಸನ್ಮಾರ್ಗದಲ್ಲೇ ಸ್ಥಿತನಾಗಿರುವನೋ, ಅಂತಹವನನ್ನು ತ್ಯಜಿಸುವುದು ಧರ್ಮಕ್ಕೆ ವಿರುದ್ಧವೆಂದು ತಿಳಿಯಲಾಗುತ್ತದೆ. ಇಂತಹ ಧರ್ಮ ವಿರೋಧಿ ಕರ್ಮವಾದರೋ ಇಂದ್ರನ ತೇಜವೂ ಕೂಡ ಸುಟ್ಟುಬಿಡುವುದು.॥29॥
ಮೂಲಮ್ - 30
ತದಲಂ ದೇವಿ ರಾಮಸ್ಯ ಶ್ರಿಯಾ ವಿಹತಯಾ ತ್ವಯಾ ।
ಲೋಕತೋಽಪಿ ಹಿ ತೇ ರಕ್ಷ್ಯಃ ಪರಿವಾದಃ ಶುಭಾನಸೇ ॥
ಅನುವಾದ
ಆದ್ದರಿಂದ ದೇವಿ! ಶ್ರೀರಾಮ ಚಂದ್ರನ ಪಟ್ಟಾಭಿಷೇಕದಲ್ಲಿ ವಿಘ್ನವನ್ನು ತಂದೊಡ್ಡುವುದರಿಂದ ನಿನಗೆ ಯಾವ ಲಾಭವೂ ಆಗಲಾರದು. ಶುಭಾನನೇ! ನೀನು ಲೋಕನಿಂದೆಯಿಂದ ಬದುಕುಳಿಯಲು ಪ್ರಯತ್ನಿಸಬೇಕು.॥30॥
ಮೂಲಮ್ - 31
ಶ್ರುತ್ವಾ ತು ಸಿದ್ಧಾರ್ಥವಚೋ ರಾಜಾ ಶ್ರಾಂತತರಸ್ವನಃ ।
ಶೋಕೋಪಹತಯಾ ವಾಚಾ ಕೈಕೇಯೀಮಿದಮಬ್ರವೀತ್ ॥
ಅನುವಾದ
ಸಿದ್ದಾರ್ಥನ ಮಾತನ್ನು ಕೇಳಿದ ದಶರಥನು ಅತ್ಯಂತ ಬಳಲಿದ ದನಿಯಿಂದ, ಶೋಕಾಕುಲನಾಗಿ ಕೈಕೇಯಿಯಲ್ಲಿ ಇಂತೆಂದನು.॥31॥
ಮೂಲಮ್ - 32
ಏತದ್ವಚೋ ನೇಚ್ಛಸಿ ಪಾಪರೂಪೇ
ಹಿತಂ ನ ಜಾನಾಸಿ ಮಮಾತ್ಮನೋಥವಾ ।
ಆಸ್ಥಾಯ ಮಾರ್ಗಂ ಕೃಪಣಂ ಕುಚೇಷ್ಟಾ
ಚೇಷ್ಟಾ ಹಿ ತೇ ಸಾಧುಪಥಾದಪೇತಾ ॥
ಅನುವಾದ
ಪಾಪಿನಿಯೇ! ನಿನಗೆ ಈ ಮಾತು ರುಚಿಸಲಿಲ್ಲವೇ? ನಿನಗೆ ನನ್ನ ಅಥವಾ ನಿನ್ನ ಹಿತದ ಯಾವ ಜ್ಞಾನವೂ ಇಲ್ಲವೇ? ನೀನು ದುಃಖಮಯ ಮಾರ್ಗವನ್ನು ಅನುಸರಿಸಿ ಇಂತಹ ಕುಚೇಷ್ಟೆ ಮಾಡುತ್ತಿರುವೆ. ನಿನ್ನ ಇವೆಲ್ಲ ಚೇಷ್ಟೆಯು ಸಾಧು ಪುರುಷರ ಮಾರ್ಗಕ್ಕೆ ವಿಪರೀತವಾಗಿದೆ.॥32॥
ಮೂಲಮ್ - 33
ಅನುವ್ರಜಿಷ್ಯಾಮ್ಯಹಮದ್ಯ ರಾಮಂ
ರಾಜ್ಯಂ ಪರಿತ್ಯಜ್ಯ ಸುಖಂ ಧನಂ ಚ ।
ಸರ್ವೆಚ ರಾಜ್ಞಾ ಭರತೇನ ಚ ತ್ವಂ
ಯಥಾಸುಖಂ ಭುಂಕ್ಷ್ವ ಚಿರಾಯ ರಾಜ್ಯಮ್ ॥
ಅನುವಾದ
ಈಗ ನಾನೂ ಈ ರಾಜ್ಯ, ಧನ ಮತ್ತು ಎಲ್ಲ ಸುಖಗಳನ್ನು ಬಿಟ್ಟು ಶ್ರೀರಾಮನ ಹಿಂದೆಯೇ ಹೋಗುವೆನು. ಇವರೆಲ್ಲರೂ ಅವನೊಂದಿಗೆ ಹೋಗುವರು. ನೀನು ಒಬ್ಬಳೇ ರಾಜಾ ಭರತನೊಂದಿಗೆ ಚಿರಕಾಲದವರೆಗೆ ಸುಖವಾಗಿ ರಾಜ್ಯವನ್ನು ಅನುಭವಿಸುತ್ತಾ ಇರು.॥33॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಮೂವತ್ತಾರನೆಯ ಸರ್ಗ ಪೂರ್ಣವಾಯಿತು.॥36॥