०३५ सुमन्त्रकृतं कैकेयीगर्हणम्

वाचनम्
ಭಾಗಸೂಚನಾ

ಸುಮಂತ್ರನಿಂದ ಕೈಕೇಯಿಯ ನಿಂದನೆ

ಮೂಲಮ್ - 1

ತತೋ ನಿಧೂಯ ಸಹಸಾಶಿರೋ ನಿಃಶ್ವಸ್ಯ ಚಾಸಕೃತ್ ।
ಪಾಣಿಂ ಪಾಣೌ ವಿನಿಷ್ಪಿಷ್ಯ ದಂತಾನ್ಕಟಕಟಾಯ್ಯ ಚ ॥

ಮೂಲಮ್ - 2

ಲೋಚನೇ ಕೋಪಸಂರಕ್ತೇ ವರ್ಣಂ ಪೂರ್ವೋಚಿತಂ ಜಹತ್ ।
ಕೋಪಾಭಿಭೂತಃ ಸಹಸಾ ಸಂತಾಪಮಶುಭಂ ಗತಃ ॥

ಮೂಲಮ್ - 3

ಮನಃ ಸಮೀಕ್ಷ್ಯಮಾಣಶ್ಚ ಸೂತೋ ದಶರಥಸ್ಯ ಚ ।
ಕಂಪಯನ್ನಿವ ಕೈಕೇಯ್ಯಾ ಹೃದಯಂ ವಾಕ್ಶರೈಃ ಶಿತೈಃ ॥

ಅನುವಾದ

ಅನಂತರ ಎಚ್ಚರಗೊಂಡ ಸುಮಂತ್ರನು ಸಟ್ಟನೆ ಎದ್ದು ನಿಂತನು. ಅವನ ಮನಸ್ಸಿಗೆ ಅಮಂಗಲಕಾರಿಯಾದ ಭಾರೀ ಸಂತಾಪವಾಯಿತು. ಅವನು ಕ್ರೋಧದಿಂದ ನಡುಗುತ್ತಿದ್ದನು. ಅವನ ಶರೀರ ಮತ್ತು ಮುಖದ ಕಾಂತಿಯು ಬದಲಾಯಿತು. ಅವನು ಸಿಟ್ಟಿನಿಂದ ಕಣ್ಣುಗಳನ್ನು ಕೆಂಪಗಾಗಿಸಿ, ಎರಡು ಕೈಗಳಿಂದ ತಲೆಯನ್ನು ಚಚ್ಚಿಕೊಂಡನು. ಪದೇ ಪದೇ ದೀರ್ಘವಾಗಿ ನಿಟ್ಟುಸಿರುಬಿಡುತ್ತಾ, ಕೈಗಳನ್ನು ತಿಕ್ಕಿಕೊಳ್ಳುತ್ತಾ, ಕಟಕಟನೆ ಹಲ್ಲು ಕಡಿಯುತ್ತಿದ್ದನು. ದಶರಥರಾಜನ ಮನಸ್ಸಿನ ವಾಸ್ತವಿಕ ಸ್ಥಿತಿಯನ್ನು ನೋಡುತ್ತಾ ತನ್ನ ವಚನರೂಪೀ ಹರಿತವಾದ ಬಾಣಗಳಿಂದ ಕೈಕೇಯಿಯ ಹೃದಯವನ್ನು ನಡುಗಿಸಿ ಬಿಡುವಂತೆ ನುಡಿಯತೊಡಗಿದನು.॥1-3॥

ಮೂಲಮ್ - 4

ವಾಕ್ಯವಜ್ರೈರನುಪಮೈರ್ನಿರ್ಭಿಂದನ್ನಿವ ಚಾಶುಭೈಃ ।
ಕೈಕೇಯ್ಯಾ ಸರ್ವಮರ್ಮಾಣಿ ಸುಮಂತ್ರಃ ಪ್ರತ್ಯಭಾಷತ ॥

ಅನುವಾದ

ತನ್ನ ಅಶುಭ ಹಾಗೂ ಅನುಪಮ ವಾಗ್ ವಜ್ರದಿಂದ ಕೈಕೇಯಿಯ ಎಲ್ಲ ಮರ್ಮಸ್ಥಾನಗಳನ್ನು ವಿದೀರ್ಣಗೊಳಿಸುತ್ತಾ ಸುಮಂತ್ರನು ಈ ಪ್ರಕಾರ ಹೇಳಲುಪಕ್ರಮಿಸಿದನು.॥4॥

ಮೂಲಮ್ - 5

ಯಸ್ಯಾಸ್ತವ ಪತಿಸ್ತ್ಯಕ್ತೋ ರಾಜಾ ದಶರಥಃ ಸ್ವಯಮ್ ।
ಭರ್ತಾ ಸರ್ವಸ್ಯ ಜಗತಃ ಸ್ಥಾವರಸ್ಯ ಚರಸ್ಯ ಚ ॥

ಮೂಲಮ್ - 6

ನಹ್ಯಕಾರ್ಯತಮಂ ಕಿಂಚಿತ್ತವ ದೇವೀಹ ವಿದ್ಯತೇ ।
ಪತಿಘ್ನೀಂ ತ್ವಾಮಹಂ ಮನ್ಯೇಕುಲಘ್ನೀಮಪಿ ಚಾಂತತಃ ॥

ಅನುವಾದ

‘‘ದೇವಿ! ನೀನು ಚರಾಚರ ಸಂಪೂರ್ಣ ಜಗತ್ತಿನ ಸ್ವಾಮಿ ಸ್ವಯಂ ನಿನ್ನ ಪತಿ ಮಹರಾಜಾ ದಶರಥನನ್ನೇ ತ್ಯಾಗ ಮಾಡಿದಾಗ ಈ ಜಗತ್ತಿನಲ್ಲಿ ನೀನು ಮಾಡದೇ ಇರುವ ಯಾವುದೇ ಕುಕರ್ಮವಿಲ್ಲ. ನೀನು ಪತಿಯ ಹತ್ಯೆ ಮಾಡುವವಳೇ ಅಲ್ಲ, ಕೊನೆಗೆ ಕುಲಘಾತಿನಿಯೂ ಆಗಿರುವೆ’’ ಎಂದೇ ನಾನು ತಿಳಿಯುತ್ತೇನೆ.॥5-6॥

ಮೂಲಮ್ - 7

ಯನ್ಮಹೇಂದ್ರಮಿವಾಜಯ್ಯಂ ದುಷ್ಪ್ರಕಂಪ್ಯಮಿವಾಚಲಮ್ ।
ಮಹೋದಧಿಮಿವಾಕ್ಷೋಭ್ಯಂ ಸಂತಾಪಯಸಿ ಕರ್ಮಭಿಃ ॥

ಅನುವಾದ

ಅಯ್ಯೋ! ದೇವೇಂದ್ರನಂತೆ ಅಜೇಯನೂ, ಪರ್ವತದಂತೆ ಸ್ಥಿರನೂ, ಮಹಾಸಾಗರದಂತೆ ಕ್ಷೋಭರಹಿತನೂ ಆದ ದಶರಥನನ್ನು ನೀನು ತನ್ನ ಕರ್ಮಗಳಿಂದ ಸಂತಪ್ತಗೊಳಿಸುತ್ತಿರುವೆ.॥7॥

ಮೂಲಮ್ - 8

ಮಾವಮಂಸ್ಥಾ ದಶರಥಂ ಭರ್ತಾರಂ ವರದಂ ಪತಿಮ್ ।
ಭರ್ತುರಿಚ್ಛಾ ಹಿ ನಾರೀಣಾಂ ಪುತ್ರಕೋಟ್ಯಾ ವಿಶಿಷ್ಯತೇ ॥

ಅನುವಾದ

ದಶರಥ ಮಹಾರಾಜರು ನಿನಗೆ ಪತಿ, ಪಾಲಕ ಮತ್ತು ವರದಾತಾ ಆಗಿದ್ದಾರೆ. ನೀನು ಅವರ ಅಪಮಾನಮಾಡಬೇಡ. ನಾರಿಯರಿಗೆ ಪತಿಯ ಇಚ್ಛೆಯ ಮಹತ್ವ ಕೋಟಿ ಪುತ್ರರಿಗಿಂತ ಹೆಚ್ಚಾಗಿದೆ.॥8॥

ಮೂಲಮ್ - 9

ಯಥಾವಯೋ ಹಿ ರಾಜ್ಯಾನಿ ಪ್ರಾಪ್ನುವಂತಿ ನೃಪಕ್ಷಯೇ ।
ಇಕ್ಷ್ವಾಕುಕುಲನಾಥೇಽಸ್ಮಿಂಸ್ತಂ ಲೋಪಯಿತುಮಿಚ್ಛಸಿ ॥

ಅನುವಾದ

ಈ ಕುಲದಲ್ಲಿ ರಾಜನು ಪರಲೋಕವಾಸಿಯಾದಾಗ ಅವನ ಪುತ್ರರ ವಯಸ್ಸಿನ ವಿಚಾರಮಾಡಿ ಜ್ಯೇಷ್ಠಪುತ್ರನೇ ರಾಜ್ಯವನ್ನು ಪಡೆಯುತ್ತಾನೆ. ರಾಜಕುಲದ ಈ ಪರಂಪರಾಗತ ಪದ್ಧತಿಯನ್ನು ನೀನು ಈ ಇಕ್ಷ್ವಾಕು ವಂಶದ ಒಡೆಯ ಮಹಾರಾಜರು ಜೀವಿಸಿ ಇರುವಾಗಲೇ ಅಳಿಸಿಬಿಡಲು ಬಯಸುತ್ತಿಯಲ್ಲ.॥9॥

ಮೂಲಮ್ - 10

ರಾಜಾ ಭವತು ತೇ ಪುತ್ರೋ ಭರತಃ ಶಾಸ್ತು ಮೇದಿನೀಮ್ ।
ವಯಂ ತತ್ರ ಗಮಿಷ್ಯಾಮೋ ಯತ್ರರಾಮೋ ಗಮಿಷ್ಯತಿ ॥

ಅನುವಾದ

ನಿನ್ನ ಪುತ್ರ ಭರತನು ರಾಜನಾಗಿ ಈ ರಾಜ್ಯವನ್ನು ಆಳಲಿ; ಆದರೆ ನಾವಾದರೋ ಶ್ರೀರಾಮನಿರುವಲ್ಲಿಗೆ ಹೊರಟುಹೋಗುವೆವು.॥10॥

ಮೂಲಮ್ - 11½

ನ ಚ ತೇ ವಿಷಯೇ ಕಶ್ಚಿದ್ಬ್ರಾಹ್ಮಣೋ ವಸ್ತುಮರ್ಹತಿ ।
ತಾದೃಶಂ ತ್ವಮಮರ್ಯಾದಮದ್ಯ ಕರ್ಮ ಕರಿಷ್ಯಸಿ ॥
ನೂನಂ ಸರ್ವೇ ಗಮಿಷ್ಯಾಮೋ ಮಾರ್ಗಂ ರಾಮನಿಷೇವಿತಮ್ ।

ಅನುವಾದ

ನಿನ್ನ ರಾಜ್ಯದಲ್ಲಿ ಯಾವ ಬ್ರಾಹ್ಮಣನೂ ವಾಸಿಸಲಾರನು; ನೀನು ಇಂದು ಇಂತಹ ಮರ್ಯಾದಾಹೀನ ಕಾರ್ಯಮಾಡುವೆಯಾದರೆ ನಿಶ್ಚಯವಾಗಿ ನಾವೆಲ್ಲರೂ ಶ್ರೀರಾಮನು ಸೇವಿಸುವಲ್ಲಿಗೇ ಹೊರಟುಹೋಗುವೆವು.॥11½॥

ಮೂಲಮ್ - 12

ತ್ಯಕ್ತಾ ಯಾ ಬಾಂಧವೈಃ ಸರ್ವೈರ್ಬ್ರಾಹ್ಮಣೈಃ ಸಾಧುಭಿಃ ಸದಾ ॥

ಮೂಲಮ್ - 13

ಕಾ ಪ್ರೀತೀ ರಾಜ್ಯಲಾಭೇನ ತವ ದೇವಿ ಭವಿಷ್ಯತಿ ।
ತಾದೃಶಂ ತ್ವಮಮರ್ಯಾದಂ ಕರ್ಮ ಕರ್ತುಂ ಚಿಕೀರ್ಷಸಿ ॥

ಅನುವಾದ

ಸಮಸ್ತ ಬಂಧು-ಬಾಂಧವರು ಹಾಗೂ ಸದಾಚಾರೀ ಬ್ರಾಹ್ಮಣರೂ ಕೂಡ ನಿನ್ನನ್ನು ತ್ಯಜಿಸುವರು. ದೇವಿ! ಮತ್ತೆ ಈ ರಾಜ್ಯವನ್ನು ಪಡೆದು ನಿನಗೆ ಯಾವ ಆನಂದಸಿಗಬಲ್ಲದು? ಅಯ್ಯೋ! ನೀನು ಇಂತಹ ಮರ್ಯಾದೆಗೆಟ್ಟ ಕರ್ಮ ಮಾಡಲು ಬಯಸುತ್ತಿರುವೆಯಲ್ಲ.॥12-13॥

ಮೂಲಮ್ - 14

ಆಶ್ಚರ್ಯಮಿವ ಪಶ್ಯಾಮಿ ಯಸ್ಯಾಸ್ತೇ ವೃತ್ತಮೀದೃಶಮ್ ।
ಆಚರಂತ್ಯಾ ನವಿದೃತಾ ಸದ್ಯೋ ಭವತಿ ಮೇದಿನೀ ॥

ಅನುವಾದ

ಇದನ್ನು ನೋಡಿ ನನಗೆ ಆಶ್ಚರ್ಯವಾಗುತ್ತಿದೆ-ನೀನು ಇಷ್ಟು ಅತ್ಯಾಚಾರ ಮಾಡಿದರೂ ಪೃಥಿಯು ಕೂಡಲೇ ಏಕೆ ಬಿರಿದುಹೋಗುವುದಿಲ್ಲ ಎಂದು.॥14॥

ಮೂಲಮ್ - 15

ಮಹಾಬ್ರಹ್ಮರ್ಷಿಸೃಷ್ಟಾ ವಾ ಜ್ವಲಂತೋ ಭೀಮದರ್ಶನಾಃ ।
ಧಿಗ್ವಾಗ್ದಂಡಾ ನ ಹಿಂಸಂತಿ ರಾಮಪ್ರವ್ರಾಜನೇ ಸ್ಥಿತಾಮ್ ॥

ಅನುವಾದ

ಅಥವಾ ದೊಡ್ಡ-ದೊಡ್ಡ ಬ್ರಹ್ಮರ್ಷಿಗಳ ಧಿಕ್ಕಾರಪೂರ್ಣ ವಾಗ್ದಂಡ(ಶಾಪ)ವು ನೋಡಲು ಭಯಂಕರ ಹಾಗೂ ಸುಟ್ಟು ಬಿಡುವಂತಹುದಾಗಿದೆ. ಶ್ರೀರಾಮನನ್ನು ಮನೆಯಿಂದ ಹೊರಹಾಕಲು ಹೊರಟಿರುವ ನಿನ್ನಂತಹ ಪಾಷಾಣ ಹೃದಯಿಯ ಅದು ಸರ್ವನಾಶ ಏಕೆ ಮಾಡಿಬಿಡುವುದಿಲ್ಲ.॥15॥

ಮೂಲಮ್ - 16

ಆಮ್ರಂ ಛಿತ್ವಾ ಕುಠಾರೇಣ ನಿಂಬಂ ಪರಿಚರೇತ್ತು ಕಃ ।
ಯಶ್ಚೈನಂ ಪಯಸಾ ಸಿಂಚೇನ್ನೈವಾಸ್ಯ ಮಧುರೋ ಭವೇತ್ ॥

ಅನುವಾದ

ಮಾವಿನಮರವನ್ನು ಕಡಿದು ಅಲ್ಲಿ ಕಹಿಬೇವನ್ನು ಯಾರು ಸೇವಿಸುವರು? ಆ ಕಹಿಬೇವಿಗೆ ಹಾಲೆರೆದರೆ ಅದು ಸಿಹಿ ಫಲ ನೀಡಬಲ್ಲದೇ? (ಆದ್ದರಿಂದ ವರದಾನದ ನೆಪದಿಂದ ಶ್ರೀರಾಮನಿಗೆ ವನವಾಸ ವಿಧಿಸಿ ಕೈಕೇಯಿಯ ಮನಸ್ಸನ್ನು ಸಂತೋಷಪಡಿಸುವುದು ರಾಜರಿಗೆ ಎಂದೂ ಸುಖಮಯ ಪರಿಣಾಮ ಆಗಲಾರದು.॥16॥

ಮೂಲಮ್ - 17

ಆಭಿಜಾತ್ಯಂ ಹಿ ತೇ ಮನ್ಯೇ ಯಥಾ ಮಾತುಸ್ತಥೈವ ಚ ।
ನ ಹಿ ನಿಂಬಾತ್ ಸ್ರವೇತ್ ಕ್ಷೌದ್ರಂ ಲೋಕೇ ನಿಗದಿತಂ ವಚಃ ॥

ಅನುವಾದ

ಕೈಕೇಯಿ! ನಿನ್ನ ತಾಯಿಯ ವರ್ತನೆ ತನ್ನ ಕುಲಕ್ಕನು ರೂಪವಾಗಿರುವಂತೆ ನಿನ್ನ ವರ್ತನೆಯಾಗಿದೆ ಎಂದು ನಾನು ತಿಳಿಯುತ್ತೇನೆ. ‘ಬೇವಿನಹಣ್ಣಿನಿಂದ ಜೇನುತುಪ್ಪವು ಸುರಿಯುವುದಿಲ್ಲ’ ಎಂಬ ಗಾದೆಯು ಸತ್ಯವಾಗಿದೆ.॥17॥

ಮೂಲಮ್ - 18

ತವ ಮಾತುರಸದ್ಗ್ರಾಹಂ ವಿದ್ಮ ಪೂರ್ವಂ ಯಥಾ ಶ್ರುತಮ್ ।
ಪಿತುಸ್ತೇ ವರದಃ ಕಶ್ಚಿದ್ದದೌ ವರಮನುತ್ತಮಮ್ ॥

ಅನುವಾದ

ನಿನ್ನ ತಾಯಿಯ ದುರಾಗ್ರಹವೂ ಕೂಡ ನಾನು ತಿಳಿದಿದ್ದೇನೆ. ಈ ವಿಷಯದಲ್ಲಿ ಹಿಂದೆ ಕೇಳಿದಂತೆ ತಿಳಿಸುತ್ತೇನೆ. ಒಮ್ಮೆ ಯಾರೋ ವರಕೊಡುವಂತಹ ಸಾಧುವು ನಿನ್ನ ತಂದೆಗೆ ಅತ್ಯಂತ ಉತ್ತಮ ವರವನ್ನು ಕೊಟ್ಟಿದ್ದರು.॥18॥

ಮೂಲಮ್ - 19

ಸರ್ವಭೂತರುತಂ ತಸ್ಮಾತ್ ಸಂಜಜ್ಞೇ ವಸುಧಾಧಿಪಃ ।
ತೇನ ತಿರ್ಯಗ್ಗತಾನಾಂ ಚ ಭೂತಾನಾಂ ವಿದಿತಂ ವಚಃ ॥

ಅನುವಾದ

ಆ ವರ ಪ್ರಭಾವದಿಂದ ಕೇಕೇಯ ನರೇಶನು ಸಮಸ್ತ ಪ್ರಾಣಿಗಳ ಮಾತನ್ನು ತಿಳಿಯತೊಡಗಿದನು. ತಿರ್ಯಕ್ ಯೋನಿಯ ಪ್ರಾಣಿಗಳ ಭಾಷೆಯನ್ನು ಅವನು ಅರಿಯುತ್ತಿದ್ದನು.॥19॥

ಮೂಲಮ್ - 20

ತತೋ ಜೃಂಭಸ್ಯ ಶಯನೇ ವಿರುತಾದ್ ಭೂರಿವರ್ಚಸಃ ।
ಪಿತುಸ್ತೇ ವಿದಿತೋ ಭಾವಃ ಸ ತತ್ರ ಬಹುಧಾಹಸತ್ ॥

ಅನುವಾದ

ಒಂದು ದಿನ ಮಹಾತೇಜಸ್ವೀ ನಿನ್ನ ತಂದೆ ಶಯ್ಯೆಯಲ್ಲಿ ಒರಗಿದ್ದರು. ಅದೇ ಸಮಯ ಜೃಂಭ ಎಂಬ ಪಕ್ಷಿಯ ಶಬ್ದ ಅವನ ಕಿವಿಗೆ ಬಿತ್ತು. ಅದರ ಮಾತಿನ ಅಭಿಪ್ರಾಯ ತಿಳಿದು, ಅನೇಕ ಬಾರಿ ನಗತೊಡಗಿದನು.॥20॥

ಮೂಲಮ್ - 21

ತತ್ರ ತೇ ಜನನೀ ಕ್ರುದ್ಧಾ ಮೃತ್ಯುಪಾಶಮಭೀಪ್ಸತೀ ।
ಹಾಸಂ ತೇ ನೃಪತೇ ಸೌಮ್ಯ ಜಿಜ್ಞಾಸಾಮೀತಿ ಚಾಬ್ರವೀತ್ ॥

ಅನುವಾದ

ಅದೇ ಶಯ್ಯೆಯಲ್ಲಿ ನಿನ್ನ ತಾಯಿಯೂ ಮಲಗಿದ್ದಳು. ರಾಜನು ನನ್ನ ಕುರಿತು ನಗುತ್ತಿದ್ದಾನೆ ಎಂದು ತಿಳಿದು ಕುಪಿತಳಾಗಿ ಕತ್ತಿಗೆ ಮೃತ್ಯುವಿನ ಉರುಲನ್ನು ಹಾಕಿಕೊಳ್ಳುವ ಇಚ್ಛೆಯಿಂದ ಕೇಳಿದಳು - ಸೌಮ್ಯ! ನರೇಶ್ವರ! ನೀವು ನಕ್ಕಿರುವ ಕಾರಣವೇನು? ಇದನ್ನು ತಿಳಿಯಲು ನಾನು ಬಯಸುತ್ತಿರುವೆನು.॥21॥

ಮೂಲಮ್ - 22

ನೃಪಶ್ಚೋವಾಚ ತಾಂ ದೇವೀಂ ಹಾಸಂ ಶಂಸಾಮಿ ತೇ ಯದಿ ।
ತತೋ ಮೇ ಮರಣಂ ಸದ್ಯೋ ಭವಿಷ್ಯತಿ ನ ಸಂಶಯಃ ॥

ಅನುವಾದ

ಆಗ ರಾಜನು ಹೇಳಿದನು - ರಾಣೀ! ನಾನು ನನ್ನ ನಗುವಿನ ಕಾರಣವನ್ನು ಹೇಳಿದರೆ ತತ್ಕ್ಷಣ ನನ್ನ ಮೃತ್ಯು ಆಗುವುದು. ಇದರಲ್ಲಿ ಸಂಶಯವೇ ಇಲ್ಲ.॥22॥

ಮೂಲಮ್ - 23

ಮಾತಾ ತೇ ಪಿತರಂ ದೇವಿ ಪುನಃ ಕೇಕಯಮಬ್ರವೀತ್ ।
ಶಂಸ ಮೇ ಜೀವ ವಾ ಮಾ ವಾ ನ ಮಾಂ ತ್ವಂ ಪ್ರಹಸಿಷ್ಯಸಿ ॥

ಅನುವಾದ

ದೇವಿ! ಇದನ್ನು ಕೇಳಿ ನಿನ್ನ ತಾಯಿಯು ನಿನ್ನ ತಂದೆ ಕೇಕೆಯರಾಜನಲ್ಲಿ ಪುನಃ ಹೇಳಿದಳು - ನೀನು ಬದುಕಿರು ಅಥವಾ ಸಾಯಿ, ನನಗೆ ಕಾರಣವನ್ನು ಹೇಳು. ಭವಿಷ್ಯದಲ್ಲಿ ನೀನು ಪುನಃ ನನ್ನನ್ನು ಹಾಸ್ಯ ಮಾಡಲಾರೆ.॥23॥

ಮೂಲಮ್ - 24

ಪ್ರಿಯಯಾಚತಥೋಕ್ತಃ ಸ ಕೇಕಯಃ ಪೃಥಿವೀಪತಿಃ ।
ತಸ್ಮೈ ತಂ ವರದಾಯಾರ್ಥಂ ಕಥಯಾಮಾಸ ತತ್ತ್ವತಃ ॥

ಅನುವಾದ

ತನ್ನ ಪ್ರಿಯರಾಣಿಯು ಹೀಗೆ ಹೇಳಿದಾಗ ಕೇಕೆಯ ನರೇಶನು ಆ ವರ ಕೊಟ್ಟ ಸಾಧುವಿನ ಬಳಿಗೆ ಹೋಗಿ ಎಲ್ಲ ವೃತ್ತಾಂತವನ್ನು ತಿಳಿಸಿದನು.॥24॥

ಮೂಲಮ್ - 25

ತತಃ ಸ ವರದಃ ಸಾಧೂ ರಾಜಾನಂ ಪ್ರತ್ಯಭಾಷತ ।
ಮ್ರಿಯತಾಂ ಧ್ವಂಸತಾಂ ವೇಯಂ ಮಾ ಶಂಸೀಸ್ತ್ವಂ ಮಹೀಪತೇ ॥

ಅನುವಾದ

ಆಗ ಆ ವರ ಕೊಟ್ಟ ಸಾಧು ರಾಜನಿಗೆ ತಿಳಿಸಿದನು - ಮಹಾರಾಜಾ! ರಾಣಿಯು ಸಾಯಲಿ ಅಥವಾ ಮನೆ ಬಿಟ್ಟುಹೋಗಲಿ, ಆದರೂ ನೀನು ಈ ಮಾತನ್ನು ಎಂದೂ ಆಕೆಗೆ ಹೇಳಬೇಡ.॥25॥

ಮೂಲಮ್ - 26

ಸ ತಚ್ಛ್ರುತ್ವಾ ವಚಸ್ತಸ್ಯ ಪ್ರಸನ್ನಮನಸೋ ನೃಪಃ ।
ಮಾತರಂ ತೇ ನಿರಸ್ಯಾಶು ವಿಜಹಾರ ಕುಬೇರವತ್ ॥

ಅನುವಾದ

ಪ್ರಸನ್ನಚಿತ್ತವುಳ್ಳ ಆ ಸಾಧುವಿನ ಈ ಮಾತನ್ನು ಕೇಳಿ ಕೇಕೇಯ ನರೇಶನು ನಿನ್ನ ತಾಯಿಯನ್ನು ಕೂಡಲೇ ಮನೆಯಿಂದ ಹೊರಗೆಹಾಕಿದನು ಹಾಗೂ ಕುಬೇರನಂತೆ ವಿಹರಿಸತೊಡಗಿದನು.॥26॥

ಮೂಲಮ್ - 27

ತಥಾ ತ್ವಮಪಿ ರಾಜಾನಂ ದುರ್ಜನಾಚರಿತೇ ಪಥಿ ।
ಅಸದ್ಗ್ರಾಹಮಿಮಂ ಮೋಹಾತ್ ಕುರುಷೇಪಾಪದರ್ಶಿನೀ ॥

ಅನುವಾದ

ನೀನೂ ಇದೇ ಪ್ರಕಾರ ದುರ್ಜನರ ಮಾರ್ಗದಲ್ಲಿ ಸ್ಥಿತಳಾಗಿ ಪಾಪದೃಷ್ಟಿಯನ್ನೇ ಇಟ್ಟುಕೊಂಡು ಮೋಹವಶ ರಾಜನಲ್ಲಿ ಇಂತಹ ಅನುಚಿತ ಆಗ್ರಹವನ್ನು ಮಾಡುತ್ತಿರುವೆ.॥27॥

ಮೂಲಮ್ - 28

ಸತ್ಯಾಶ್ಚಾತ್ರ ಪ್ರವಾದೋಯಂ ಲೌಕಿಕಃ ಪ್ರತಿಭಾತಿ ಮಾ ।
ಪಿತೃ ನ್ ಸಮನುಜಾಯಂತೇ ನರಾ ಮಾತರಮಂಗನಾಃ ॥

ಅನುವಾದ

‘ಪುತ್ರನು ತಂದೆಯಂತೆಯೂ, ಕನ್ಯೆಯು ತಾಯಿಯಂತೆ’ ಎಂಬ ಈ ಗಾದೆಯು ನೂರಕ್ಕೆ ನೂರು ಸರಿಯಾದುದು.॥28॥

ಮೂಲಮ್ - 29

ನೈವಂ ಭವ ಗೃಹಾಣೇದಂ ಯದಾಹ ವಸುಧಾಧಿಪಃ ।
ಭರ್ತುರಿಚ್ಛಾಮುಪಾಸ್ವೇಹ ಜನಸ್ಯಾಸ್ಯ ಗತಿರ್ಭವ ॥

ಅನುವಾದ

ನೀನು ಹೀಗಾಗಬೇಡ. ಈ ಗಾದೆಯನ್ನು ನಿನ್ನ ಜೀವನದಲ್ಲಿ ಸಾರ್ಥಕಪಡಿಸಬೇಡ. ರಾಜನು ಹೇಳಿದಂತೆ ಸ್ವೀಕರಿಸಿಕೋ (ಶ್ರೀರಾಮನಿಗೆ ಪಟ್ಟಾಭಿಷೇಕ ನಡೆಯಲಿ). ತನ್ನ ಪತಿಯ ಇಚ್ಛೆಯನ್ನು ಅನುಸರಿಸಿ, ಈ ಜನಸಮುದಾಯಕ್ಕೆ ಶರಣ್ಯಳಾಗು.॥29॥

ಮೂಲಮ್ - 30

ಮಾ ತ್ವಂ ಪ್ರೋತ್ಸಾಹಿತಾ ಪಾಪೈರ್ದೆವರಾಜಸಮಪ್ರಭಮ್ ।
ಭರ್ತಾರಂ ಲೋಕಭರ್ತಾರಮಸದ್ಧರ್ಮಮುಪಾದಧ ॥

ಅನುವಾದ

ಪಾಪಪೂರ್ಣ ವಿಚಾರವುಳ್ಳ ಜನರ ಕುತಂತ್ರಕ್ಕೆ ತುತ್ತಾಗಿ ನೀನು ದೇವೇಂದ್ರನಂತಹ ತೇಜಸ್ವೀ ನಮ್ಮ ಲೋಕಪ್ರತಿಪಾಲಕ ಒಡೆಯನನ್ನು ಅನುಚಿತ ಕರ್ಮದಲ್ಲಿ ತೊಡಗಿಸಬೇಡ.॥30॥

ಮೂಲಮ್ - 31

ನಹಿ ಮಿಥ್ಯಾ ಪ್ರತಿಜ್ಞಾತಂ ಕರಿಷ್ಯತಿ ತವಾನಘಃ ।
ಶ್ರೀಮಾನ್ ದಶರಥೋ ರಾಜಾ ದೇವಿ ರಾಜೀವಲೋಚನಃ ॥

ಅನುವಾದ

ದೇವಿ! ಕಮಲನಯನ ಶ್ರೀಮಾನ್ ದಶರಥರಾಜರು ಪಾಪದಿಂದ ದೂರವಿರುತ್ತಾರೆ. ಅವರು ತಮ್ಮ ಪ್ರತಿಜ್ಞೆಯನ್ನು ಸುಳ್ಳಾಗಿಸಲಾರರು.॥31॥

ಮೂಲಮ್ - 32

ಜ್ಯೇಷ್ಠೋ ವದಾನ್ಯಃ ಕರ್ಮಣ್ಯಃ ಸ್ವಧರ್ಮಸ್ಯಾಪಿರಕ್ಷಿತಾ ।
ರಕ್ಷಿತಾ ಜೀವಲೋಕಸ್ಯ ಬಲೀ ರಾಮೋಭಿಷಿಚ್ಯತಾಮ್ ॥

ಅನುವಾದ

ಶ್ರೀರಾಮಚಂದ್ರನು ಜ್ಯೇಷ್ಠನೂ, ಉದಾರನೂ, ಕರ್ಮಠನೂ, ಸ್ವಧರ್ಮಪಾಲಕನೂ, ಜೀವ ಜಗತ್ತಿನ ರಕ್ಷಕನೂ, ಬಲಿಷ್ಠನೂ ಆಗಿರುವನು. ಅವನ ಈ ರಾಜ್ಯದಲ್ಲಿ ಪಟ್ಟಾಭಿಷೇಕವಾಗಲಿ.॥32॥

ಮೂಲಮ್ - 33

ಪರಿವಾದೋ ಹಿ ತೇ ದೇವಿ ಮಹಾನ್ಲ್ಲೋಕೇ ಚರಿಷ್ಯತಿ ।
ಯದಿ ರಾಮೋ ವನಂ ಯಾತಿ ವಿಹಾಯ ಪಿತರಂ ನೃಪಮ್ ॥

ಅನುವಾದ

ದೇವಿ! ಶ್ರೀರಾಮನು ತನ್ನ ತಂದೆಯನ್ನು ಬಿಟ್ಟು ವನವಾಸಕ್ಕೆ ಹೊರಟುಹೋದರೆ ಜಗತ್ತಿನಲ್ಲಿ ನಿನ್ನ ಭಾರೀ ನಿಂದನೆಯಾಗುವುದು.॥33॥

ಮೂಲಮ್ - 34

ಸ್ವರಾಜ್ಯಂ ರಾಘವಃ ಪಾತು ಭವ ತ್ವಂ ವಿಗತಜ್ವರಾ ।
ನಹಿ ತೇ ರಾಘವಾದನ್ಯಃ ಕ್ಷಮಃ ಪುರವರೇ ವಸನ್ ॥

ಅನುವಾದ

ಆದ್ದರಿಂದ ಶ್ರೀರಾಮಚಂದ್ರನೇ ನಮ್ಮ ರಾಜ್ಯವನ್ನು ಪಾಲಿಸಲಿ ಹಾಗೂ ನೀನು ನಿಶ್ಚಿಂತಳಾಗಿ ಕುಳಿತುಕೋ. ಶ್ರೀರಾಮನಲ್ಲದೆ ಬೇರೆ ಯಾರೂ ಈ ಶ್ರೇಷ್ಠ ನಗರದಲ್ಲಿ ಇದ್ದು ನಿನಗೆ ಅನುಕೂಲ ಆಚರಣ ಮಾಡಲಾರರು.॥34॥

ಮೂಲಮ್ - 35

ರಾಮೇ ಹಿ ಯೌವರಾಜ್ಯಸ್ಥೇ ರಾಜಾ ದಶರಥೋ ವನಮ್ ।
ಪ್ರವೇಕ್ಷ್ಯತಿ ಮಹೇಷ್ವಾಸಃ ಪೂರ್ವವೃತ್ತಮನುಸ್ಮರನ್ ॥

ಅನುವಾದ

ಶ್ರೀರಾಮನು ಯುವರಾಜ ಪದವಿಯಲ್ಲಿ ಪ್ರತಿಷ್ಠಿತನಾದ ಬಳಿಕ ಮಹಾಧನುರ್ಧರ ದಶರಥರಾಜರು ಪೂರ್ವಜರ ವೃತ್ತಾಂತವನ್ನು ಸ್ಮರಿಸಿ ಸ್ವತಃ ವನಕ್ಕೆ ಹೋಗುವರು.॥35॥

ಮೂಲಮ್ - 36

ಇತಿ ಸಾಂತ್ವೈಶ್ಚ ತೀಕ್ಷ್ಣೈಶ್ಚ ಕೈಕೇಯೀಂ ರಾಜಸಂಸದಿ ।
ಭೂಯಃ ಸಂಕ್ಷೋಭಯಾಮಾಸ ಸುಮಂತ್ರಸ್ತು ಕೃತಾಂಜಲಿಃ ॥

ಮೂಲಮ್ - 37

ನೈವ ಸಾ ಕ್ಷುಭ್ಯತೇ ದೇವೀ ನ ಚ ಸ್ಮ ಪರಿದೂಯತೇ ।
ನ ಚಾಸ್ಯಾ ಮುಖವರ್ಣಸ್ಯಲಕ್ಷ್ಯತೇ ವಿಕ್ರಿಯಾ ತದಾ ॥

ಅನುವಾದ

ಈ ಪ್ರಕಾರ ಸುಮಂತ್ರನು ಕೈಮುಗಿದು ಕೈಕೇಯಿಗೆ ಆ ರಾಜ ಭವನದಲ್ಲಿ ಸಾಂತ್ವನಪೂರ್ವಕ ಹಾಗೂ ತೀಕ್ಷ್ಣವಾದ ಮಾತುಗಳಿಂದ ಪದೇ-ಪದೇ ವಿಚಲಿತಗೊಳಿಸಲು ಪ್ರಯತ್ನಿಸಿದನು. ಆದರೆ ಆಕೆಯೂ ತನ್ನ ನಿರ್ಧಾರದಿಂದ ಕದಲಲಿಲ್ಲ. ಕೈಕೇಯಿಯ ಮನಸ್ಸಿನಲ್ಲಿ ಕ್ಷೋಭವಾಗಲೀ, ದುಃಖವಾಗಲೀ ಆಗಲಿಲ್ಲ. ಆಗ ಆಕೆಯ ಮುಖಭಾವದಲ್ಲಿಯೂ ಯಾವುದೇ ಬದಲಾವಣೆ ಆಗಲಿಲ್ಲ.॥36-37॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಮೂವತ್ತೈದನೆಯ ಸರ್ಗ ಪೂರ್ಣವಾಯಿತು.॥35॥