०३४ दशरथमूर्च्छा

वाचनम्
ಭಾಗಸೂಚನಾ

ಶ್ರೀರಾಮನು ಸೀತಾ-ಲಕ್ಷ್ಮಣ ಸಮೇತನಾಗಿ ರಾಜನ ಬಳಿಗೆ ಹೋಗಿ ಅರಣ್ಯಕ್ಕೆ ಹೊರಡಲು ಅನುಮತಿಯನ್ನು ಬೇಡಿದುದು, ರಾಜನ ಶೋಕ ಮತ್ತು ಮೂರ್ಛೆ, ಶ್ರೀರಾಮನ ಸಾಂತ್ವನ, ರಾಜನು ಶ್ರೀರಾಮನನ್ನು ಗಾಢವಾಗಿ ಆಲಿಂಗಿಸಿಕೊಂಡು ಪುನಃ ಮೂರ್ಛೆಹೋದುದು

ಮೂಲಮ್ - 1

ತತಃ ಕಮಲಪತ್ರಾಕ್ಷಃ ಶ್ಯಾಮೋ ನಿರುಪಮೋ ಮಹಾನ್ ।
ಉವಾಚ ರಾಮಸ್ತಂ ಸೂತಂ ಪಿತುರಾಖ್ಯಾಹಿ ಮಾಮಿತಿ ॥

ಮೂಲಮ್ - 2

ಸ ರಾಮಪ್ರೇಷಿತಃ ಕ್ಷಿಪ್ರಂ ಸಂತಾಪಕಲುಷೇಂದ್ರಿಯಮ್ ।
ಪ್ರವಿಷ್ಯನೃಪತಿಂ ಸೂತೋ ನಿಃಶ್ವಸಂತಂ ದದರ್ಶ ಹ ॥

ಅನುವಾದ

ಕಮಲನಯನ ಶ್ಯಾಮಸುಂದರ ಉಪಮಾರಹಿತ ಮಹಾಪುರುಷ ಶ್ರೀರಾಮನು ಸೂತ ಸುಮಂತ್ರನಿಗೆ - ‘ನಾನು ಬಂದಿರುವ ಸೂಚನೆಯನ್ನು ನೀವು ತಂದೆಯವರಿಗೆ ಕೊಡಿರಿ’ ಎಂದು ಹೇಳಿದಾಗ ಶ್ರೀರಾಮನ ಪ್ರೇರಣೆಯಿಂದ ಬೇಗನೇ ಒಳಗೆ ಹೋಗಿ ಸುಮಂತ್ರನು ದಶರಥನನ್ನು ದರ್ಶಿಸಿದನು. ರಾಜನ ಎಲ್ಲ ಇಂದ್ರಿಯಗಳು ಸಂತಾಪದಿಂದ ಕಲುಷಿತಗೊಂಡಿದ್ದವು, ದೀರ್ಘವಾಗಿ ನಿಟ್ಟುಸಿರು ಬಿಡುತ್ತಿದ್ದನು.॥1-2॥

ಮೂಲಮ್ - 3

ಉಪರಕ್ತಮಿವಾದಿತ್ಯಂ ಭಸ್ಮಚ್ಛನ್ನಮಿವಾನಲಮ್ ।
ತಟಾಕಮಿವ ನಿಸ್ತೋಯಮಪಶ್ಯಜ್ಜಗತೀಪತಿಮ್ ॥

ಮೂಲಮ್ - 4

ಅಭೋದ್ಯ ಚಮಹಾಪ್ರಾಜ್ಞಃ ಪರಮಾಕುಲಚೇತನಮ್ ।
ರಾಮಮೇವಾನುಶೋಚಂತಂ ಸೂತಃ ಪ್ರಾಂಜಲಿರಬ್ರವೀತ್ ॥

ಅನುವಾದ

ಸುಮಂತ್ರ ನೋಡುತ್ತಾನೆ - ಪೃಥಿವೀಪತಿ ದಶರಥನು ರಾಹುಗ್ರಸ್ತ ಸೂರ್ಯನಂತೆ, ಬೂದಿಮುಚ್ಚಿದ ಕೆಂಡದಂತೆ, ನೀರಿಲ್ಲದ ಸರೋವರದಂತೆ ಶ್ರೀಹೀನನಾಗಿದ್ದನು. ಅವನ ಚಿತ್ತ ಅತ್ಯಂತ ವ್ಯಾಕುಲಗೊಂಡಿತ್ತು. ಅವನು ಶ್ರೀರಾಮನನ್ನೇ ಚಿಂತಿಸುತ್ತಿದ್ದನು. ಆಗ ಮಹಾಪ್ರಾಜ್ಞ ಸೂತನು ಮಹಾರಾಜನನ್ನು ಸಂಬೋಧಿಸಿ ಕೈಮುಗಿದು ಹೇಳಿದನು.॥3-4॥

ಮೂಲಮ್ - 5

ತಂ ವರ್ಧಯಿತ್ವಾ ರಾಜಾನಂ ಪೂರ್ವಂ ಸೂತೋ ಜಯಾಶಿಷಾ ।
ಭಯವಿಕ್ಲವಯಾ ವಾಚಾ ಮಂದಯಾ ಶ್ಲಕ್ಷ್ಣಯಾಬ್ರವೀತ್ ॥

ಅನುವಾದ

ಮೊದಲಿಗೆ ಸುಮಂತ್ರನು ವಿಜಯಸೂಚಕ ಆಶೀರ್ವಾದಗಳನ್ನು ಕೊಡುತ್ತಾ ಮಹಾರಾಜನ ಅಭ್ಯುದಯವನ್ನು ಹಾರೈಸಿದನು. ಮತ್ತೆ ಭಯವ್ಯಾಕುಲ ಮಂದ-ಮಧುರ ವಾಣಿಯಿಂದ ಹೀಗೆ ಹೇಳಿದನು.॥5॥

ಮೂಲಮ್ - 6

ಅಯಂ ಸ ಪುರುಷವ್ಯಾಘ್ರೋ ದ್ವಾರಿ ತಿಷ್ಠತಿ ತೇ ಸುತಃ ।
ಬ್ರಾಹ್ಮಣೇಭ್ಯೋ ಧನಂ ದತ್ತ್ವಾ ಸರ್ವಂ ಚೈವೋಪಜೀವಿನಾಮ್ ॥

ಮೂಲಮ್ - 7

ಸ ತ್ವಾಂ ಪಶ್ಯತು ಭದ್ರಂ ತೇ ರಾಮಃ ಸತ್ಯಪರಾಕ್ರಮಃ ।
ಸರ್ವಾನ್ಸುಹೃದ ಆಪೃಚ್ಛ್ಯ ತ್ವಾಂ ಹೀದಾನೀಂ ದಿದೃಕ್ಷತೇ ॥

ಮೂಲಮ್ - 8

ಗಮಿಷ್ಯತಿ ಮಹಾರಣ್ಯಂ ತಂ ಪಶ್ಯ ಜಗತೀಪತೇ ।
ವೃತಂ ರಾಜಗುಣೈಃ ಸರ್ವೈರಾದಿತ್ಯಮಿವ ರಶ್ಮಿಭಿಃ ॥

ಅನುವಾದ

ಪೃಥಿವೀಪತೇ! ಸತ್ಯಪರಾಕ್ರಮಿ, ಪುರುಷಸಿಂಹ ನಿಮ್ಮ ಪುತ್ರ ಶ್ರೀರಾಮನು ಬ್ರಾಹ್ಮಣರಿಗೆ ಮತ್ತು ಆಶ್ರಿತಸೇವಕರಿಗೆ ತನ್ನ ಎಲ್ಲ ಧನವನ್ನು ಕೊಟ್ಟು, ಇಲ್ಲಿಗೆ ಬಂದು ದ್ವಾರದಲ್ಲಿ ನಿಂತಿರುವನು. ನಿಮಗೆ ಮಂಗಳವಾಗಲಿ. ಅವನು ತನ್ನ ಎಲ್ಲ ಸುಹೃದರನ್ನು ಭೆಟ್ಟಿಯಾಗಿ, ಅವರಿಂದ ಬೀಳ್ಕೊಂಡು ಈಗ ನಿಮ್ಮನ್ನು ದರ್ಶಿಸಲು ಬಯಸುತ್ತಿರುವನು. ನಿಮ್ಮಾಜ್ಞೆ ಆದರೆ ಇಲ್ಲಿಗೆ ಬಂದು ನಿಮ್ಮನ್ನು ದರ್ಶಿಸುವನು. ಮಹಾರಾಜ! ಈಗ ಅವನು ವಿಶಾಲವನಕ್ಕೆ ಹೋಗುವನು, ಆದ್ದರಿಂದ ಕಿರಣ ಗಳಿಂದ ಕೂಡಿದ ಸೂರ್ಯನಂತೆ ಸಮಸ್ತ ರಾಜೋಚಿತ ಗುಣಗಳಿಂದ ಸಂಪನ್ನನಾದ ಈ ರಾಮನನ್ನು ನೀವು ಮನಃಪೂರ್ತ ನೋಡಿರಿ.॥6-8॥

ಮೂಲಮ್ - 9

ಸ ಸತ್ಯವಾಕ್ಯೋಧರ್ಮಾತ್ಮಾ ಗಾಂಭೀರ್ಯಾತ್ ಸಾಗರೋಪಮಃ ।
ಆಕಾಶ ಇವ ನಿಷ್ಪಂಕೋ ನರೇಂದ್ರಃ ಪ್ರತ್ಯುವಾಚ ತಮ್ ॥

ಅನುವಾದ

ಇದನ್ನು ಕೇಳಿ ಸಮುದ್ರದಂತೆ ಗಂಭೀರ ಹಾಗೂ ಆಕಾಶದಂತೆ ನಿರ್ಮಲ, ಸತ್ಯವಾದೀ, ಧರ್ಮಾತ್ಮಾ ದಶರಥನು ಅವನಿಗೆ ಇಂತು ಉತ್ತರಿಸಿದನು.॥9॥

ಮೂಲಮ್ - 10

ಸುಮಂತ್ರಾನಯ ಮೇ ದಾರಾನ್ ಯೇ ಕೇಚಿದಿಹಮಾಮಕಾಃ ।
ದಾರೈಃ ಪರಿವೃತಃ ಸರ್ವೈರ್ದ್ರಷ್ಟುಮಿಚ್ಛಾಮಿ ರಾಘವಮ್ ॥

ಅನುವಾದ

ಸುಮಂತ್ರ! ಇಲ್ಲಿ ಇರುವ ಎಲ್ಲ ನನ್ನ ಪತ್ನಿಯರನ್ನು ಕರೆಸು. ಅವರೆಲ್ಲರೊಂದಿಗೆ ನಾನು ಶ್ರೀರಾಮನನ್ನು ನೋಡಲು ಬಯಸುವೆನು.॥10॥

ಮೂಲಮ್ - 11

ಸೋಽಂತಃಪುರಮತೀತ್ಯೈವ ಸ್ತ್ರಿಯಸ್ತಾವಾಕ್ಯಮಬ್ರವೀತ್ ।
ಆರ್ಯೋ ಹ್ವಯತಿ ವೋ ರಾಜಾ ಗಮ್ಯತಾಂ ತತ್ರ ಮಾ ಚಿರಮ್ ॥

ಅನುವಾದ

ಆಗ ಸುಮಂತ್ರನು ಅವಸರವಾಗಿ ಅಂತಃಪುರಕ್ಕೆ ಹೋಗಿ ರಾಜನ ಎಲ್ಲ ಮಡದಿಯರಲ್ಲಿ ಹೇಳಿದನು- ದೇವಿಯರೇ! ನಿಮ್ಮನ್ನು ಮಹಾರಾಜರು ಕರೆಯುತ್ತಿದ್ದಾರೆ, ಆದ್ದರಿಂದ ಅಲ್ಲಿಗೆ ಬೇಗನೇ ನಡೆಯಿರಿ.॥11॥

ಮೂಲಮ್ - 12

ಏವಮುಕ್ತಾಃ ಸ್ತ್ರಿಯಃ ಸರ್ವಾಃ ಸುಮಂತ್ರೇಣ ನೃಪಾಜ್ಞಯಾ ।
ಪ್ರಚಕ್ರಮುಸ್ತದ್ಭವನಂ ಭರ್ತುರಾಜ್ಞಾಯ ಶಾಸನಮ್ ॥

ಅನುವಾದ

ರಾಜನ ಆಜ್ಞೆಯನ್ನು ಸುಮಂತ್ರನು ತಿಳಿಸಿದಾಗ ಆ ಎಲ್ಲ ರಾಣಿಯರು ಸ್ವಾಮಿಯ ಆದೇಶವೆಂದು ತಿಳಿದು ದಶರಥನಿದ್ದ ಭವನದ ಕಡೆಗೆ ಹೊರಟರು.॥12॥

ಮೂಲಮ್ - 13

ಅರ್ಧಸಪ್ತಶತಾಸ್ತತ್ರ ಪ್ರಮದಾಸ್ತಾಮ್ರಲೋಚನಾಃ ।
ಕೌಸಲ್ಯಾಂ ಪರಿವಾರ್ಯಾಥ ಶನೈರ್ಜಗ್ಮುರ್ಧೃತವ್ರತಾಃ ॥

ಅನುವಾದ

ಸ್ವಲ್ಪ ಕೆಂಪಾಗಿರುವ ಕಣ್ಣುಗಳುಳ್ಳ ಮುನ್ನೂರಐವತ್ತು ಪತಿವ್ರತಾ ಯುವತಿ ಸ್ತ್ರೀಯರು ಮಹಾರಾಣಿ ಕೌಸಲ್ಯೆಯನ್ನು ಸುತ್ತುವರೆದು ನಿಧಾನವಾಗಿ ಆ ಭವನಕ್ಕೆ ಹೋದರು.॥13॥

ಮೂಲಮ್ - 14

ಆಗತೇಷು ಚ ದಾರೇಸು ಸಮವೇಕ್ಷ್ಯಮಹೀಪತಿಃ ।
ಉವಾಚ ರಾಜಾ ತಂ ಸೂತಂ ಸುಮಂತ್ರಾನಯ ಮೇಸುತಮ್ ॥

ಅನುವಾದ

ಅವರೆಲ್ಲರೂ ಬಂದಾಗ ಅವರನ್ನು ನೋಡಿ ಪೃಥಿವೀಪತಿ ರಾಜನು ಸೂತನಲ್ಲಿ ಹೇಳಿದನು - ಸುಮಂತ್ರ! ಈಗ ನನ್ನ ಪುತ್ರನನ್ನು ಕರೆದುಕೊಂಡು ಬಾ.॥14॥

ಮೂಲಮ್ - 15

ಸ ಸೂತೋ ರಾಮಮಾದಾಯ ಲಕ್ಷ್ಮಣಂ ಮೈಥಿಲೀಂ ತಥಾ ।
ಜಗಾಮಾಭಿಮುಖಸ್ತೂರ್ಣಂ ಸಕಾಶಂ ಜಗತೀಪತೇಃ ॥

ಅನುವಾದ

kಅಪ್ಪಣೆ ಪಡೆದ ಸುಮಂತ್ರನು ಹೋಗಿ ಶ್ರೀರಾಮ, ಲಕ್ಷ್ಮಣ ಹಾಗೂ ಸೀತೆಯರನ್ನು ಜೊತೆಗೆ ಕರೆದುಕೊಂಡು ಶೀಘ್ರವಾಗಿ ಮಹಾ ರಾಜರ ಬಳಿಗೆ ಮರಳಿ ಬಂದನು.॥15॥

ಮೂಲಮ್ - 16

ಸ ರಾಜಾ ಪುತ್ರ ಮಾಯಾಂತಂ ದೃಷ್ಟ್ವಾ ಚಾರಾತ್ ಕೃತಾಂಜಲಿಮ್ ।
ಉತ್ಪಪಾತಾಸನಾತ್ ತೂರ್ಣಮಾರ್ತಃ ಸ್ತ್ರೀಜನಸಂವೃತಃ ॥

ಅನುವಾದ

ತನ್ನ ಪುತ್ರನು ಕೈಮುಗಿದು ಬರುವುದನ್ನು ನೋಡಿ ಮಹಾರಾಜನು ಸಟ್ಟನೆ ಆಸನದಿಂದ ಎದ್ದು ನಿಂತನು. ಆಗ ಸ್ತ್ರೀಯರನ್ನು ಸುತ್ತುವರಿದ ಆ ನರೇಶನು ಶೋಕದಿಂದ ಆರ್ತನಾಗಿದ್ದನು.॥16॥

ಮೂಲಮ್ - 17

ಸೋಽಭಿದುದ್ರಾವ ವೇಗೇನ ರಾಮಂ ದೃಷ್ಟ್ವಾ ವಿಶಾಂಪತಿಃ ।
ತಮಸಂಪ್ರಾಪ್ಯ ದುಃಖಾರ್ತಃ ಪಪಾತ ಭುವಿ ಮೂರ್ಛಿತಃ ॥

ಅನುವಾದ

ಶ್ರೀರಾಮನನ್ನು ನೋಡುತ್ತಲೇ ಆ ಪ್ರಜಾಪಾಲಕ ಮಹಾರಾಜನು ವೇಗವಾಗಿ ಅವನ ಕಡೆ ಧಾವಿಸಿದನು, ಆದರೆ ಅವನ ಬಳಿಗೆ ತಲುಪುವ ಮೊದಲೇ ದುಃಖದಿಂದ ವ್ಯಾಕುಲನಾಗಿ ಭೂಮಿಗೆ ಬಿದ್ದು ಮೂರ್ಛಿತನಾದನು.॥17॥

ಮೂಲಮ್ - 18

ತಂ ರಾಮೋಽಭ್ಯಪತತ್ ಕ್ಷಿಪ್ರಂ ಲಕ್ಷ್ಮಣಶ್ಚ ಮಹಾರಥಃ ।
ವಿಸಂಜ್ಞಮಿವ ದುಃಖೇನ ಸಶೋಕಂ ನೃಪತಿಂ ತಥಾ ॥

ಅನುವಾದ

ಆಗ ಶ್ರೀರಾಮ ಮತ್ತು ಮಹಾರಥಿ ಲಕ್ಷ್ಮಣರು ವೇಗವಾಗಿ ಮುಂದರಿದು ದುಃಖದಿಂದ ಅಚೇತನನಂತಾದ ಶೋಕಮಗ್ನ ಮಹಾರಾಜರ ಬಳಿಗೆ ತಲುಪಿದರು.॥18॥

ಮೂಲಮ್ - 19

ಸ್ತ್ರೀಸಹಸ್ರನಿನಾದಶ್ಚ ಸಂಜಜ್ಞೇ ರಾಜವೇಶ್ಮನಿ ।
ಹಾ ಹಾ ರಾಮೇತಿ ಸಹಸಾ ಭೂಷಣಧ್ವನಿಮಿಶ್ರಿತಃ ॥

ಅನುವಾದ

ಇಷ್ಟರಲ್ಲಿ ಆ ರಾಜಭವನದಲ್ಲಿ ಕೂಡಲೇ ಆಭರಣಗಳ ಧ್ವನಿಯೊಂದಿಗೆ ಸಾವಿರಾರು ಸ್ತ್ರೀಯರ ‘ಹಾ ರಾಮ! ಹಾ ರಾಮ!’ ಎಂಬ ಆರ್ತನಾದ ಪ್ರತಿಧ್ವನಿಸಿತು.॥19॥

ಮೂಲಮ್ - 20

ತಂ ಪರಿಷ್ವಜ್ಯ ಬಾಹುಭ್ಯಾಂ ತಾವುಭೌ ರಾಮಲಕ್ಷ್ಮಣೌ ।
ಪರ್ಯಂಕೇ ಸೀತಯಾ ಸಾರ್ಧಂ ರುದಂತಃ ಸಮವೇಶಯನ್ ॥

ಅನುವಾದ

ಶ್ರೀರಾಮ ಮತ್ತು ಲಕ್ಷ್ಮಣರಿಬ್ಬರೂ ಸಹೋದರರು ಸೀತೆಯೊಂದಿಗೆ ಅತ್ತುಬಿಟ್ಟರು ಹಾಗೂ ಅವರು ಮೂವರೂ ಮಹಾರಾಜರನ್ನು ಭುಜಗಳಿಂದ ಎತ್ತಿ ಮಂಚದ ಮೇಲೆ ಕುಳ್ಳಿರಿಸಿದರು.॥20॥

ಮೂಲಮ್ - 21

ಅಥ ರಾಮೋ ಮುಹೂರ್ತಸ್ಯಲಬ್ಧಸಂಜ್ಞಂ ಮಹೀಪತಿಮ್ ।
ಉವಾಚ ಪ್ರಾಂಜಲಿರ್ವಾಷ್ಪಶೋಕಾರ್ಣವಪರಿಪ್ಲುತಮ್ ॥

ಅನುವಾದ

ಶೋಕಾಶ್ರು ಸಾಗರದಲ್ಲಿ ಮುಳುಗಿದ ಮಹಾರಾಜ ದಶರಥನು ಎರಡು ಗಳಿಗೆಯಲ್ಲಿ ಎಚ್ಚರಗೊಂಡಾಗ ಶ್ರೀರಾಮನು ಕೈಮುಗಿದು ಅವರಲ್ಲಿ ಹೇಳಿದನು.॥21॥

ಮೂಲಮ್ - 22

ಆಪೃಚ್ಛೇ ತ್ವಾಂ ಮಹಾರಾಜ ಸರ್ವೇಷಾಮೀಶ್ವರೋಽಸಿ ನಃ ।
ಪ್ರಸ್ಥಿತಂ ದಂಡಕಾರಣ್ಯಂ ಪಶ್ಯ ತ್ವಂ ಕುಶಲೇನ ಮಾಮ್ ॥

ಅನುವಾದ

ಮಹಾರಾಜರೇ! ನೀವು ನಮ್ಮ ಸ್ವಾಮಿಯಾಗಿರುವಿರಿ. ನಾನು ದಂಡಕಾರಣ್ಯಕ್ಕೆ ಹೋಗುತ್ತಿದ್ದೇನೆ ಮತ್ತು ತಮ್ಮ ಅಪ್ಪಣೆಯನ್ನು ಪಡೆಯಲು ಬಂದಿರುವೆನು. ನೀವು ನಿಮ್ಮ ಮಂಗಳಮಯ ದೃಷ್ಟಿಯಿಂದ ನನ್ನನ್ನು ನೋಡಿರಿ.॥22॥

ಮೂಲಮ್ - 23

ಲಕ್ಷ್ಮಣಂ ಚಾನುಜಾನೀಹಿ ಸೀತಾ ಚಾನ್ವೇತು ಮಾಂ ವನಮ್ ।
ಕಾರಣೈರ್ಬಹುಭಿಸ್ತಥ್ಯೈರ್ವಾರ್ಯಮಾಣೌ ನ ಚೇಚ್ಛತಃ ॥

ಮೂಲಮ್ - 24

ಅನುಜಾನೀಹಿ ಸರ್ವಾನ್ ನಃ ಶೋಕಮುತ್ಸೃಜ್ಯ ಮಾನದ ।
ಲಕ್ಷ್ಮಣಂ ಮಾಂ ಚ ಸೀತಾಂ ಚ ಪ್ರಜಾಪತಿರಿವಾತ್ಮಜಾನ್ ॥

ಅನುವಾದ

ನನ್ನೊಂದಿಗೆ ಲಕ್ಷ್ಮಣನಿಗೂ ವನಕ್ಕೆ ಹೋಗಲು ಆಜ್ಞೆ ಕೊಡಿರಿ. ಜೊತೆಗೆ ಸೀತೆಯೂ ನನ್ನೊಂದಿಗೆ ವನಕ್ಕೆ ಹೋಗುವಂತೆ ಒಪ್ಪಿಗೆ ನೀಡಿರಿ. ನಾನು ಅನೇಕ ನಿಜಕಾರಣಗಳನ್ನು ತಿಳಿಸಿ ಅವರನ್ನು ತಡೆಯಲು ತುಂಬಾ ಪ್ರಯತ್ನಿಸಿದೆ, ಆದರೆ ಇವರು ಇಲ್ಲಿ ಇರಲು ಬಯಸುವುದಿಲ್ಲ. ಆದ್ದರಿಂದ ಬೇರೆಯವರಿಗೆ ಮಾನ ಕೊಡುವ ನರೇಶರೇ! ತಾವು ಶೋಕ ಬಿಟ್ಟು ನನಗೆ, ಲಕ್ಷ್ಮಣನಿಗೆ ಮತ್ತು ಸೀತೆಗೂ ಕಾಡಿಗೆ ಹೋಗುವ ಅಪ್ಪಣೆ ಕೊಡಿರಿ. ಬ್ರಹ್ಮದೇವರು ತನ್ನ ಪುತ್ರರಾದ ಸನಕಾದಿಗಳಿಗೆ ತಪಸ್ಸಿಗಾಗಿ ವನಕ್ಕೆ ಹೋಗಲು ಅನುಮತಿ ಕೊಟ್ಟಂತೆ, ನಮಗೂ ಅನುಮತಿ ಕೊಡಿರಿ.॥23-24॥

ಮೂಲಮ್ - 25

ಪ್ರತೀಕ್ಷ್ಯಮಾಣಮವ್ಯಗ್ರಮನುಜ್ಞಾಂ ಜಗತೀಪತೇಃ ।
ಉವಾಚ ರಾಜಾ ಸಂಪ್ರೇಕ್ಷ್ಯ ವನವಾಸಾಯ ರಾಘವಮ್ ॥

ಅನುವಾದ

ಈ ಪ್ರಕಾರ ಶಾಂತಭಾವದಿಂದ ವನವಾಸಕ್ಕಾಗಿ ರಾಜನ ಆಜ್ಞೆಯನ್ನು ಪ್ರತೀಕ್ಷೆ ಮಾಡುತ್ತಿರುವ ಶ್ರೀರಾಮನ ಕಡೆಗೆ ನೋಡಿ ಮಹಾರಾಜನು ಹೇಳಿದನು.॥25॥

ಮೂಲಮ್ - 26

ಅಹಂ ರಾಘವ ಕೈಕೇಯ್ಯಾ ವರದಾನೇನ ಮೋಹಿತಃ ।
ಅಯೋಧ್ಯಾಯಾಂ ತ್ವಮೇವಾದ್ಯ ಭವ ರಾಜಾ ನಿಗೃಹ್ಯ ಮಾಮ್ ॥

ಅನುವಾದ

ರಘುನಂದನ! ನಾನು ಕೈಕೇಯಿಗೆ ಕೊಟ್ಟ ವರಗಳಿಂದಾಗಿ ಮೋಹದಲ್ಲಿ ಬಿದ್ದಿರುವೆನು. ನೀನು ನನ್ನನ್ನು ಬಂಧಿಸಿ ಸ್ವತಃ ಅಯೋಧ್ಯೆಯ ರಾಜನಾಗು.॥26॥

ಮೂಲಮ್ - 27

ಏವಮುಕ್ತೋ ನೃಪತಿನಾ ರಾಮೋ ಧರ್ಮಭೃತಾಂ ವರಃ ।
ಪ್ರತ್ಯುವಾಚಾಂಜಲಿಂಕೃತ್ವಾ ಪಿತರಂ ವಾಕ್ಯಕೋವಿದಃ ॥

ಅನುವಾದ

ಮಹಾರಾಜನು ಹೀಗೆ ಹೇಳಿದಾಗ ಮಾತಿನಲ್ಲಿ ಕುಶಲನೂ, ಧರ್ಮಾತ್ಮರಲ್ಲಿ ಶ್ರೇಷ್ಠನೂ ಆದ ಶ್ರೀರಾಮನು ಎರಡೂ ಕೈಗಳನ್ನು ಮುಗಿದು ತಂದೆಯ ಬಳಿ ಇಂತು ಉತ್ತರಿಸಿದನು.॥27॥

ಮೂಲಮ್ - 28

ಭವಾನ್ ವರ್ಷಸಹಸ್ರಾಯ ಪೃಥಿವ್ಯಾನೃಪತೇ ಪತಿಃ ।
ಅಹಂ ತ್ವರಣ್ಯೇ ವತ್ಸ್ಯಾಮಿ ನ ಮೇ ರಾಜಸ್ಯ ಕಾಂಕ್ಷಿತಾ ॥

ಅನುವಾದ

ಮಹಾರಾಜರೇ! ತಾವು ಸಾವಿರಾರು ವರ್ಷಗಳವರೆಗೆ ಈ ಪೃಥಿವಿಯನ್ನು ಪಾಲಿಸಿದಿರಿ. ನಾನಾದರೋ ಇನ್ನು ಮೇಲೆ ವನದಲ್ಲೇ ವಾಸಿಸುವೆನು. ನನಗೆ ರಾಜ್ಯವನ್ನು ಪಡೆಯುವ ಇಚ್ಛೆಯೇ ಇಲ್ಲ.॥28॥

ಮೂಲಮ್ - 29

ನವ ಪಂಚ ಚ ವರ್ಷಾಣಿ ವನವಾಸೇ ವಿಹೃತ್ಯ ತೇ ।
ಪುನಃ ಪಾದೌ ಗ್ರಹೀಷ್ಯಾಮಿಪ್ರತಿಜ್ಞಾಂತೇ ನರಾಧಿಪ ॥

ಅನುವಾದ

ನರೇಶ್ವರ! ಹದಿನಾಲ್ಕುವರ್ಷ ಕಾಡಿನಲ್ಲಿ ಇದ್ದು, ನಿಮ್ಮ ಪ್ರತಿಜ್ಞೆಯನ್ನು ಪೂರ್ಣಗೊಳಿಸಿದ ಬಳಿಕ ನಾನು ಪುನಃ ಬಂದು ನಿಮ್ಮ ಚರಣಯುಗಗಳಲ್ಲಿ ಶಿರವನ್ನು ಚಾಚುವೆನು.॥29॥

ಮೂಲಮ್ - 30

ರುದನ್ನಾರ್ತಃ ಪ್ರಿಯಂ ಪುತ್ರಂ ಸತ್ಯಪಾಶೇನ ಸಂಯತಃ ।
ಕೈಕೇಯ್ಯಾ ಚೋದ್ಯಮಾನಸ್ತು ಮಿಥೋ ರಾಜಾ ತಮಬ್ರವೀತ್ ॥

ಅನುವಾದ

ದಶರಥನು ಒಂದು ಸತ್ಯದ ಬಂಧನದಲ್ಲಿ ಬಂಧಿತನಾಗಿದ್ದನು, ಇನ್ನೊಂದು ಕಡೆ ಏಕಾಂತದಲ್ಲಿ ಕೈಕೇಯಿಯು ಅವನನ್ನು ಶ್ರೀರಾಮನನ್ನು ಕಾಡಿಗೆ ಕಳಿಸಿ ಕೊಡಲು ಬಾಧ್ಯನನ್ನಾಗಿಸುತ್ತಿದ್ದಳು. ಈ ಸ್ಥಿತಿಯಲ್ಲಿ ಆರ್ತಭಾವದಿಂದ ಅಳುತ್ತಾ ತನ್ನ ಪ್ರಿಯಪುತ್ರ ಶ್ರೀರಾಮನಲ್ಲಿ ಹೇಳಿದನು.॥30॥

ಮೂಲಮ್ - 31

ಶ್ರೇಯಸೇ ವೃದ್ಧಯೇ ತಾತ ಪುನರಾಗಮನಾಯ ಚ ।
ಗಚ್ಛಸ್ವಾರಿಷ್ಟಮವ್ಯಗ್ರಃ ಪಂಥಾನಮಕುತೋಭಯಮ್ ॥

ಅನುವಾದ

ಅಪ್ಪಾ! ನೀನು ಶ್ರೇಯಸ್ಸಿಗಾಗಿ, ವೃದ್ಧಿಗಾಗಿ ಮತ್ತು ಪುನಃ ಮರಳಿ ಬರಲಿಕ್ಕಾಗಿ ಶಾಂತನಾಗಿ ಹೋಗು. ನಿನ್ನ ಮಾರ್ಗವು ವಿಘ್ನ-ಬಾಧೆಗಳಿಂದ ರಹಿತವಾಗಿ ನಿರ್ಭಯವಾಗಲಿ.॥31॥

ಮೂಲಮ್ - 32

ನ ಹಿ ಸತ್ಯಾತ್ಮನಸ್ತಾತ ಧರ್ಮಾಭಿಮನಸ್ತವ ।
ಸಂನಿವರ್ತಯಿತುಂ ಬುದ್ಧಿಃ ಶಕ್ಯತೇ ರಘುನಂದನ ॥

ಮೂಲಮ್ - 33

ಅದ್ಯ ತ್ವಿದಾನೀಂ ರಜನೀಂ ಪುತ್ರ ಮಾಗಚ್ಛ ಸರ್ವಥಾ ।
ಏಕಾಹಂ ದರ್ಶನೇನಾಪಿ ಸಾಧು ತಾವಚ್ಚರಾಮ್ಯಹಮ್ ॥

ಅನುವಾದ

ಮಗು ರಘುನಂದನ! ನೀನು ಸತ್ಯ ಸ್ವರೂಪ ಮತ್ತು ಧರ್ಮಾತ್ಮಾ ಆಗಿರುವೆ. ನಿನ್ನ ವಿಚಾರವನ್ನು ಬದಲಿಸುವುದು ಅಸಂಭವವಾಗಿದೆ; ಆದರೂ ಕೇವಲ ಒಂದು ರಾತ್ರಿಯಾದರೂ ನಿನ್ನ ಪ್ರಯಾಣವನ್ನು ಮುಂದಕ್ಕೆ ಹಾಕು. ಕೇವಲ ಒಂದು ದಿನವಾದರೂ ನಿನ್ನನ್ನು ನೋಡುವ ಸುಖವನ್ನು ಅನುಭವಿಸುವೆನು.॥32-33॥

ಮೂಲಮ್ - 34

ಮಾತರಂ ಮಾಂ ಚ ಸಂಪಶ್ಯನ್ವಸೇಮಾಮದ್ಯ ಶರ್ವರೀಮ್ ।
ತರ್ಪಿತಃ ಸರ್ವಕಾಮೈಸ್ತ್ವಂ ಶ್ವಃ ಕಾಲ್ಯೇ ಸಾಧಯಿಷ್ಯಸಿ ॥

ಅನುವಾದ

ನಿನ್ನ ತಾಯಿಯನ್ನು ಮತ್ತು ನನ್ನನ್ನು ಈ ಸ್ಥಿತಿಯಲ್ಲಿ ನೋಡಿ ಇಂದಿನ ಇರುಳನ್ನು ಇಲ್ಲೇ ಇದ್ದು ಬಿಡು. ನಾನು ಕೊಡುವ ಬೇಕಾದ ಎಲ್ಲ ವಸ್ತುಗಳಿಂದ ತೃಪ್ತನಾಗಿ ನಾಳೆ ಪ್ರಾತಃಕಾಲ ಇಲ್ಲಿಂದ ಹೋಗು.॥34॥

ಮೂಲಮ್ - 35

ದುಷ್ಕರಂ ಕ್ರಿಯತೇ ಪುತ್ರ ಸರ್ವಥಾರಾಘವ ಪ್ರಿಯ ।
ತ್ವಯಾ ಹಿ ಮತ್ಪ್ರಿಯಾರ್ಥಂ ತು ವನಮೇವಮುಪಾಶ್ರಿತಮ್ ॥

ಅನುವಾದ

ರಾಘವ! ನೀನು ಸರ್ವಥಾ ದುಷ್ಕರ ಕಾರ್ಯವನ್ನು ಮಾಡುತ್ತಿರುವೆ. ನನಗೆ ಪ್ರಿಯವನ್ನುಂಟುಮಾಡಲು ನೀನು ಈಪ್ರಕಾರ ವನವನ್ನು ಆಶ್ರಯಿಸುತ್ತಿರುವೆ.॥35॥

ಮೂಲಮ್ - 36

ನ ಚೈತನ್ಮೇ ಪ್ರಿಯಂ ಪುತ್ರ ಶಪೇ ಸತ್ಯೇನ ರಾಘವ ।
ಛನ್ನಯಾ ಚಲಿತಸ್ತ್ವಸ್ಮಿ ಸ್ತ್ರಿಯಾ ಭಸ್ಮಾಗ್ನಿಕಲ್ಪಯಾ ॥

ಮೂಲಮ್ - 37

ವಂಚನಾ ಯಾ ತು ಲಬ್ಧಾ ಮೇ ತಾಂ ತ್ವಂ ನಿಸ್ತರ್ತುಮಿಚ್ಛಸಿ ।
ಅನಯಾ ವೃತ್ತಸಾದಿನ್ಯಾ ಕೈಕೇಯ್ಯಾಭಿಪ್ರಚೋದಿತಃ ॥

ಅನುವಾದ

ಆದರೂ ಮಗು ರಘುನಂದನ! ‘ಇದು ನನಗೆ ಪ್ರಿಯವಾಗಿಲ್ಲ’ ಇದನ್ನು ಸತ್ಯದಮೇಲೆ ಆಣೆಇಟ್ಟು ಹೇಳುತ್ತಿದ್ದೇನೆ. ನೀನು ಕಾಡಿಗೆ ಹೊಗುವುದು ನನಗೆ ಏನೂ ಇಷ್ಟವಿಲ್ಲ. ಈ ನನ್ನ ಪತ್ನೀ ಕೈಕೆಯಿಯು ಬೂದಿಮುಚ್ಚಿರುವ ಬೆಂಕಿಯಂತೆ ಭಯಂಕರವಾಗಿ ಇರುವಳು. ಇವಳು ತನ್ನ ಕ್ರೂರ ಅಭಿಪ್ರಾಯವನ್ನು ಅಡಗಿಸಿಟ್ಟಿದ್ದಳು. ಇವಳೇ ಇಂದು ನನ್ನ ಅಭೀಷ್ಟ ಸಂಕಲ್ಪದಿಂದ ನನ್ನನ್ನು ವಿಚಲಿತಗೊಳಿಸಿರುವಳು. ಕುಲೋಚಿತ ಸದಾಚಾರವನ್ನು ವಿನಾಶ ಮಾಡುವಂತಹ ಈ ಕೈಕೇಯಿಯು ವರದಾನಕ್ಕಾಗಿ ನನ್ನನ್ನು ಪ್ರೇರೇಪಿಸಿ, ನನಗೆ ದೊಡ್ಡ ಮೋಸ ಮಾಡಿದಳು. ಇವಳಿಂದ ನನಗೆ ಪ್ರಾಪ್ತವಾದ ವಂಚನೆಯನ್ನು ನೀನು ಕಳೆಯಲು ಬಯಸುತ್ತಿರುವೆ.॥36-37॥

ಮೂಲಮ್ - 38

ನ ಚೈತದಾಶ್ಚರ್ಯತಮಂ ಯತ್ ತ್ವಂ ಜ್ಯೇಷ್ಠಃ ಸುತೋ ಮಮ ।
ಅಪಾನೃತಕಥಂ ಪುತ್ರ ಪಿತರಂ ಕರ್ತುಮಿಚ್ಛಸಿ ॥

ಅನುವಾದ

ಮಗನೇ! ನೀನು ನಿನ್ನ ತಂದೆಯನ್ನು ಸತ್ಯವಾದಿಯಾಗಿಸಲು ಬಯಸುತ್ತಿರುವೆ. ನಿನಗೆ ಇದು ಯಾವುದೇ ದೊಡ್ಡ ಮಾತಲ್ಲ; ಏಕೆಂದರೆ ನೀನು ಗುಣ ಮತ್ತು ವಯಸ್ಸು ಎರಡೂ ದೃಷ್ಟಿಯಿಂದ ನನ್ನ ಜ್ಯೇಷ್ಠ ಪುತ್ರನಾಗಿರುವೆ.॥38॥

ಮೂಲಮ್ - 39

ಅಥ ರಾಮಸ್ತದಾ ಶ್ರುತ್ವಾಪಿತುರಾರ್ತಸ್ಯ ಭಾಷಿತಮ್ ।
ಲಕ್ಷ್ಮಣೇನ ಸಹಭ್ರಾತ್ರಾ ದೀನೋ ವಚನಮಬ್ರವೀತ್ ॥

ಅನುವಾದ

ಶೋಕಾಕುಲ ತನ್ನ ತಂದೆಯ ಮಾತನ್ನು ಕೇಳಿ ಆಗ ತಮ್ಮನಾದ ಲಕ್ಷ್ಮಣಸಹಿತ ಶ್ರೀರಾಮನು ದುಃಖಿತನಾಗಿ ಹೇಳಿದನು.॥39॥

ಮೂಲಮ್ - 40

ಪ್ರಾಪ್ಸ್ಯಾಮಿ ಯಾನದ್ಯ ಗುಣಾನ್ ಕೋ ಮೇ ಶ್ವಸ್ತಾನ್ ಪ್ರದಾಸ್ಯತಿ ।
ಅಪಕ್ರಮಣಮೇವಾತಃ ಸರ್ವಕಾಮೈರಹಂ ವೃಣೇ ॥

ಅನುವಾದ

ಮಹಾರಾಜರೇ! ಇಂದು ನಾನು ಪ್ರಯಾಣಮಾಡಿ ಪಡೆಯುವ ಗುಣ(ಲಾಭ)ಗಳು ನಾಳೆ ನನಗೆ ಸಿಗಲಾರದು. ಆದ್ದರಿಂದರಿಂದ ನಾನು ಸಮಸ್ತ ಕಾಮನೆಗಳಿಗಿಂತಲೂ ಮಿಗಿಲಾಗಿ ಈಗಲೇ ಹೊರಡಲು ಬಯಸುತ್ತಿರುವೆನು.॥40॥

ಮೂಲಮ್ - 41

ಇಯಂ ಸರಾಷ್ಟ್ರಾಸಜನಾ ಧನಧಾನ್ಯಸಮಾಕುಲಾ ।
ಮಯಾ ವಿಸೃಷ್ಟಾ ವಸುಧಾ ಭರತಾಯ ಪ್ರದೀಯತಾಮ್ ॥

ಅನುವಾದ

ರಾಷ್ಟ್ರ ಮತ್ತು ಇಲ್ಲಿಯ ನಿವಾಸಿ ಜನರ ಸಹಿತ ಧನ-ಧಾನ್ಯದಿಂದ ಸಂಪನ್ನ ಈ ಇಡೀ ಪೃಥಿವಿಯನ್ನು ನಾನು ಬಿಟ್ಟು ಬಿಟ್ಟಿರುವೆನು. ನೀವು ಇದನ್ನು ಭರತನಿಗೆ ಕೊಟ್ಟುಬಿಡಿ.॥41॥

ಮೂಲಮ್ - 42½

ವನವಾಸಕೃತಾ ಬುದ್ಧಿರ್ನ ಚ ಮೇಽದ್ಯ ಚಲಿಷ್ಯತಿ ।
ಯಸ್ತು ಯುದ್ಧೇ ವರೋ ದತ್ತಃ ಕೈಕೇಯ್ಯೈ ವರದ ತ್ವಯಾ ॥
ದೀಯತಾಂ ನಿಖಿಲೇನೈವ ಸತ್ಯಸ್ತ್ವಂ ಭವ ಪಾರ್ಥಿವ ।

ಅನುವಾದ

ನನ್ನ ವನವಾಸ ವಿಷಯದ ನಿಶ್ಚಯವು ಈಗ ಬದಲಾಗಲಾಗದು. ವರದಾಯಕ ನರೇಶರೇ! ನೀವು ದೇವಾಸುರ ಸಂಗ್ರಾಮದಲ್ಲಿ ಕೈಕೇಯಿಗೆ ವರವನ್ನು ಕೊಡುವುದಾಗಿ ಮಾಡಿದ ಪ್ರತಿಜ್ಞೆಯನ್ನು ಪೂರ್ಣಗೊಳಿಸಿ ಸತ್ಯವಾದಿಯಾಗಿರಿ.॥42॥

ಮೂಲಮ್ - 43

ಅಹಂ ನಿದೇಶಂ ಭವತೋ ಯಥೋಕ್ತಮನುಪಾಲಯನ್ ॥

ಮೂಲಮ್ - 44

ಚತುದರ್ಶ ಸಮಾ ವತ್ಸೇ ವನೇ ವನಚರೈಃ ಸಹ ।
ಮಾ ವಿಮರ್ಶೋ ವಸುಮತೀ ಭರತಾಯ ಪ್ರದೀಯತಾಮ್ ॥

ಅನುವಾದ

ನಾನು ನಿಮ್ಮ ಆಜ್ಞೆಯನ್ನು ಪಾಲಿಸುತ್ತಾ ಹದಿನಾಲ್ಕು ವರ್ಷ ಕಾಡಿನಲ್ಲಿ ವನ್ಯಪ್ರಾಣಿಗಳೊಂದಿಗೆ ವಾಸಿಸುವೆನು. ನಿಮ್ಮ ಮನಸ್ಸಿನಲ್ಲಿ ಯಾವುದೇ ಬೇರೆ ವಿಚಾರ ಬರಬಾರದು. ನೀವು ಈ ಇಡೀ ಪೃಥಿವಿಯನ್ನು ಭರತನಿಗೆ ಕೊಡಿರಿ.॥43-44॥

ಮೂಲಮ್ - 45

ನಹಿ ಮೇ ಕಾಂಕ್ಷಿತಂ ರಾಜ್ಯಂ ಸುಖಮಾತ್ಮನಿ ವಾ ಪ್ರಿಯಮ್ ।
ಯಥಾ ನಿದೇಶಂ ಕರ್ತುಂ ವೈ ತವೈವ ರಘುನಂದನ ॥

ಅನುವಾದ

ರಘುನಂದನ! ನಾನು ನನ್ನ ಮನಸ್ಸಿಗೆ ಸುಖವಾಗಲು ಅಥವಾ ಸ್ವಜನರ ಪ್ರಿಯವನ್ನು ಮಾಡುವ ಉದ್ದೇಶದಿಂದ ರಾಜ್ಯವನ್ನು ಸ್ವೀಕರಿಸಲು ಇಚ್ಛಿಸಿರಲಿಲ್ಲ. ನಿಮ್ಮ ಆಜ್ಞೆಯನ್ನು ಯಥಾವತ್ತಾಗಿ ಪಾಲಿಸಲೆಂದೇ ನಾನು ಸ್ವೀಕರಿಸಲು ಬಯಸಿದ್ದೆ.॥45॥

ಮೂಲಮ್ - 46

ಅಪಗಚ್ಛತು ತೇ ದುಃಖಂ ಮಾ ಭೂರ್ಬಾಷ್ಪಪರಿಪ್ಲುತಃ ।
ನಹಿ ಕ್ಷುಭ್ಯತಿ ದುರ್ಧರ್ಷಃ ಸಮುದ್ರಃ ಸರಿತಾಂ ಪತಿಃ ॥

ಅನುವಾದ

ನಿಮ್ಮ ದುಃಖ ದೂರವಾಗಲೀ, ನೀವು ಹೀಗೆ ಕಣ್ಣೀರಿಡುವುದು ಸರಿಯಲ್ಲ. ನದಿಗಳಿಂದ ದುರ್ಧರ್ಷ ಸಮುದ್ರವು ಕ್ಷುಬ್ಧವಾಗುವುದಿಲ್ಲ-ತನ್ನ ಮೇರೆ ಮೀರುವುದಿಲ್ಲ. (ಹೀಗೇ ನೀವೂ ಕ್ಷುಬ್ಧರಾಗಬಾರದು.॥46॥

ಮೂಲಮ್ - 47

ನೈವಾಹಂ ರಾಜ್ಯಮಿಚ್ಛಾಮಿ ನ ಸುಖಂ ನ ಚ ಮೇದಿನೀಮ್ ।
ನೈವ ಸರ್ವಾನಿಮಾನ್ ಕಾಮಾನ್ನಸ್ವರ್ಗಂ ನ ಚ ಜೀವಿತಮ್ ॥

ಅನುವಾದ

ನನಗೆ ಈ ರಾಜ್ಯದ, ಸುಖದ, ಪೃಥಿವಿಯ, ಸಂಪೂರ್ಣ ಭೋಗಗಳ, ಸ್ವರ್ಗದ ಮತ್ತು ಜೀವನದ ಇಚ್ಛೆಯೂ ಇಲ್ಲ.॥47॥

ಮೂಲಮ್ - 48

ತ್ವಾಮಹಂ ಸತ್ಯಮಿಚ್ಛಾಮಿ ನಾನೃತಂ ಪುರುಷರ್ಷಭ ।
ಪ್ರತ್ಯಕ್ಷಂ ತವ ಸತ್ಯೇನ ಸುಕೃತೇನ ಚ ತೇ ಶಪೇ ॥

ಅನುವಾದ

ಪುರುಷ ಶಿರೋಮಣಿಯೇ! ನನ್ನ ಮನಸ್ಸಿನಲ್ಲಿ ಯಾವುದಾದರೂ ಇಚ್ಛೆ ಇದ್ದರೆ ನೀವು ಸತ್ಯವಾದಿಗಳಾಗಬೇಕೆಂಬುದೇ ಆಗಿದೆ. ನಿಮ್ಮ ಮಾತು ಸುಳ್ಳಾಗಬಾರದು. ಈ ಮಾತನ್ನು ನಾನು ನಿಮ್ಮ ಮುಂದೆ ಸತ್ಯ ಮತ್ತು ಶುಭಕರ್ಮಗಳ ಮೇಲೆ ಆಣೆಇಟ್ಟು ಹೇಳುತ್ತಿದ್ದೇನೆ.॥48॥

ಮೂಲಮ್ - 49

ನ ಚ ಶಕ್ಯಂ ಮಯಾ ತಾತ ಸ್ಥಾತುಂ ಕ್ಷಣಮಪಿ ಪ್ರಭೋ ।
ನ ಶೋಕಂ ಧಾರಯಸ್ವೇಮಂ ನಹಿ ಮೇಽಸ್ತಿ ವಿಪರ್ಯಯಃ ॥

ಅನುವಾದ

ಪ್ರಭೋ! ಈಗ ನಾನು ಇಲ್ಲಿ ಒಂದು ಕ್ಷಣವೂ ಇರಲಾರೆ. ಆದ್ದರಿಂದ ನೀವು ಈ ಶೋಕವನ್ನು ಒಳಗೇ ಅದುಮಿಟ್ಟಿಕೊಳ್ಳಿ. ನಾನು ನನ್ನ ನಿಶ್ಚಯಕ್ಕೆ ವಿಪರೀತವಾಗಿ ಏನನ್ನೂ ಮಾಡಲಾರೆ.॥49॥

ಮೂಲಮ್ - 50

ಅರ್ಥಿತೋ ಹ್ಯಸ್ಮಿ ಕೈಕೇಯ್ಯಾ ವನಂ ಗಚ್ಛೇತಿ ರಾಘವ ।
ಮಯಾ ಚೋಕ್ತಂ ವ್ರಜಾಮೀತಿ ತತ್ಸತ್ಯಮನುಪಾಲಯೇ ॥

ಅನುವಾದ

ರಘುನಂದನ! ‘ರಾಮಾ! ನೀನು ಕಾಡಿಗೆ ಹೋಗು’ ಎಂದು ಕೈಕೆಯಿಯು ಕೇಳಿದ್ದಳು. ‘ಅವಶ್ಯವಾಗಿ ಹೋಗುವನು’ ಎಂದು ನಾನು ಮಾತು ಕೊಟ್ಟಿದ್ದೆ. ಆ ಸತ್ಯವನ್ನು ನಾನು ಪಾಲಿಸಬೇಕಾಗಿದೆ.॥50॥

ಮೂಲಮ್ - 51

ಮಾ ಚೋತ್ಕಂಠಾಂ ಕೃಥಾ ದೇವ ವನೇ ರಂಸ್ಯಾಮಹೇ ವಯಮ್ ।
ಪ್ರಶಾಂತಹರಿಣಾಕೀರ್ಣೇ ನಾನಾ ಶಕುನಿನಾದಿತೇ ॥

ಅನುವಾದ

ಸ್ವಾಮಿ! ನಡುವಿನಲ್ಲಿ ನಮ್ಮನ್ನು ನೋಡುವುದಾಗಲೀ, ಭೆಟ್ಟಿಯಾಗುವುದಾಗಲೀ ಅದಕ್ಕಾಗಿ ಉತ್ಕಂಠಿತರಾಗಬೇಡಿ. ಶಾಂತಸ್ವಭಾವವುಳ್ಳ ಮೃಗಗಳಿಂದ ತುಂಬಿದ, ಬಗೆ-ಬಗೆಯ ಪಕ್ಷಿಗಳ ಕಲರವದಿಂದ ಕೂಡಿರುವ ಆ ವನದಲ್ಲಿ ನಾವು ಆನಂದವಾಗಿ ಇರುವೆವು.॥51॥

ಮೂಲಮ್ - 52

ಪಿತಾ ಹಿ ದೈವತಂ ತಾತ ದೇವತಾನಾಮಪಿ ಸ್ಮೃತಮ್ ।
ತಸ್ಮಾದ್ದೈವತಮಿತ್ಯೇವ ಕರಿಷ್ಯಾಮಿ ಪಿತುರ್ವಚಃ ॥

ಅನುವಾದ

ಅಪ್ಪಾ! ತಂದೆಯು ದೇವತೆಗಳಿಗೂ ದೇವನಾಗಿದ್ದಾನೆ. ಆದ್ದರಿಂದ ತಂದೆಯಾದ ನಿಮ್ಮನ್ನು ದೇವರೆಂದೇ ತಿಳಿದು ನಾನು ತಮ್ಮ ಆಜ್ಞೆಯನ್ನು ಪಾಲಿಸುವೆನು.॥52॥

ಮೂಲಮ್ - 53

ಚತುರ್ದಶಸು ವರ್ಷೇಷು ಗತೇಷು ನರಸತ್ತಮ ।
ಪುನರ್ದ್ರಕ್ಷಸಿ ಮಾಂ ಪ್ರಾಪ್ತಂ ಸಂತಾಪೋಽಯಂ ವಿಮುಚ್ಯತಾಮ್ ॥

ಅನುವಾದ

ನೃಪಶ್ರೇಷ್ಠರೇ! ಈಗ ಈ ಸಂತಾಪವನ್ನು ಬಿಡಿರಿ. ಹದಿನಾಲ್ಕು ವರ್ಷ ಕಳೆದಾಗ ನಾನು ಅರಣ್ಯದಿಂದ ಹಿಂದಿರುಗಿ ಬರುವುದನ್ನು ನೋಡುವಿರಿ.॥53॥

ಮೂಲಮ್ - 54

ಯೇನ ಸಂಸ್ತಂಭನಿಯೋಽಯಂ ಸರ್ವೋ ಬಾಷ್ಪಕಲೋ ಜನಃ ।
ಸ ತ್ವಂ ಪುರುಷಶಾರ್ದೂಲ ಕಿಮರ್ಥಂ ವಿಕ್ರಿಯಾಂ ಗತಃ ॥

ಅನುವಾದ

ಪುರುಷಸಿಂಹರೇ! ಇಲ್ಲಿ ಕಣ್ಣೀರು ಹರಿಸುತ್ತಿರುವ ಎಲ್ಲರಿಗೂ ಧೈರ್ಯ ಕೊಡುವುದು ನಿಮ್ಮ ಕರ್ತವ್ಯವಾಗಿದೆ. ಹಾಗಿರುವಾಗ ನೀವು ಸ್ವತಃ ಇಷ್ಟು ವಿಕಲ ಹೇಗೆ ಆಗುತ್ತಿರುವಿರಿ.॥54॥

ಮೂಲಮ್ - 55

ಪುರಂ ಚ ರಾಷ್ಟ್ರಂ ಚ ಮಹೀ ಚ ಕೇವಲಾ
ಮಯಾ ವಿಸೃಷ್ಟಾ ಭರತಾಯ ದೀಯತಾಮ್ ।
ಅಹಂ ನಿದೇಶಂ ಭವತೋಽನುಪಾಲಯನ್
ವನಂ ಗಮಿಷ್ಯಾಮಿ ಚಿರಾಯ ಸೇವಿತುಮ್ ॥

ಅನುವಾದ

ಈ ನಗರ, ರಾಜ್ಯ, ಇಡೀ ಪೃಥಿವಿಯನ್ನು ನಾನು ಬಿಟ್ಟುಬಿಟ್ಟಿರುವೆನು. ನೀವು ಇದೆಲ್ಲವನ್ನು ಭರತನಿಗೆ ಕೊಟ್ಟು ಬಿಡಿರಿ. ಈಗ ನಾನು ನಿಮ್ಮ ಆದೇಶವನ್ನು ಪಾಲಿಸುತ್ತಾ ದೀರ್ಘಕಾಲ ವನದಲ್ಲಿ ವಾಸಿಸಲು ಹೋಗುತ್ತಿದ್ದೇನೆ.॥55॥

ಮೂಲಮ್ - 56

ಮಯಾ ವಿಸೃಷ್ಟಾಂ ಭರತೋ ಮಹೀಮಿಮಾಂ
ಸಶೈಲ ಖಂಡಾಂ ಸಪುರೋಪಕಾನನಾಮ್ ।
ಶಿವಾಸು ಸೀಮಾಸ್ವನುಶಾಸ್ತು ಕೇವಲಂ
ತ್ವಯಾಯದುಕ್ತಂ ನೃಪತೇ ತಥಾಸ್ತು ತತ್ ॥

ಅನುವಾದ

ನಾನು ಬಿಟ್ಟಿರುವ ಪರ್ವತಖಂಡಗಳನ್ನು, ನಗರಗಳನ್ನು, ಉಪವನಗಳ ಸಹಿತ ಈ ಇಡೀ ಪೃಥಿವಿಯನ್ನು ಭರತನು ಕಲ್ಯಾಣಕಾರೀ ಮೇರೆಯೊಳಗಿದ್ದು ಪಾಲಿಸಲಿ. ನರೇಶ್ವರರೇ! ನೀವು ಕೊಟ್ಟ ವಚನವು ಪೂರ್ಣವಾಗಲಿ.॥56॥

ಮೂಲಮ್ - 57

ನ ಮೇ ತಥಾ ಪಾರ್ಥಿವ ದೀಯತೇ ಮನೋ
ಮಹತ್ಸು ಕಾಮೇಷು ನ ಚಾತ್ಮನಃ ಪ್ರಿಯೇ ।
ಯಥಾ ನಿದೇಶೇ ತವ ಶಿಷ್ಟಸಮ್ಮತೇ
ವ್ಯಪೈತು ದುಃಖಂ ತವ ಮತ್ಕೃತೇಽನಘ ॥

ಅನುವಾದ

ಪೃಥಿವೀಪತೇ! ನಿಷ್ಪಾಪ ಮಹಾರಾಜರೇ! ಸತ್ಪುರುಷರಿಂದ ಅನುಮೋದಿತವಾದ ನಿಮ್ಮ ಆಜ್ಞೆಯನ್ನು ಪಾಲಿಸುವುದರಲ್ಲಿ ನನಗಾಗುವ ಸಂತೋಷವು ದೊಡ್ಡ-ದೊಡ್ಡ ಭೋಗಗಳಿಂದ, ಪ್ರಿಯ ಪದಾರ್ಥಗಳಿಂದ ಆಗುವುದಿಲ್ಲ. ಆದ್ದರಿಂದ ನನಗಾಗಿ ನಿಮ್ಮ ಮನಸ್ಸಿನಲ್ಲಿ ಆಗುವ ದುಃಖವು ದೂರವಾಗಬೇಕು.॥57॥

ಮೂಲಮ್ - 58

ತದದ್ಯ ನೈವಾನಘ ರಾಜ್ಯಮವ್ಯಯಂ
ನ ಸರ್ವಕಾಮಾನ್ ವಸುಧಾಂ ನ ಮೈಥಿಲೀಮ್ ।
ನ ಚಿಂತಿತಂ ತ್ವಾಮನೃತೇನ ಯೋಜಯನ್
ವಣೀಯ ಸತ್ಯಂ ವ್ರತಮಸ್ತುತೇ ತಥಾ ॥

ಅನುವಾದ

ಪುಣ್ಯಾತ್ಮರಾದ ಅರಸರೇ! ಇಂದು ನಿಮ್ಮನ್ನು ಮಿಥ್ಯಾ ವಾದಿಯಾಗಿಸಿ, ನಾನು ಅಕ್ಷಯ ರಾಜ್ಯ, ಎಲ್ಲ ವಿಧದ ಭೋಗಗಳು, ವಸುಂಧರೆಯ ಆಧಿಪತ್ಯ, ಮಿಥಿಲೇಶಕುಮಾರಿ ಸೀತೆ ಹಾಗೂ ಇತರ ಯಾವುದೇ ಇಚ್ಛಿತ ಪದಾರ್ಥಗಳನ್ನು ಸ್ವೀಕರಿಸಲಾರೆನು. ನಿಮ್ಮ ಪ್ರತಿಜ್ಞೆ ಸತ್ಯವಾಗಲಿ ಎಂಬುದೊಂದೇ ನನ್ನ ಇಚ್ಛೆಯಾಗಿದೆ.॥58॥

ಮೂಲಮ್ - 59

ಫಲಾನಿ ಮೂಲಾನಿ ಚ ಭಕ್ಷಯನ್ ವನೇ
ಗಿರೀಂಶ್ಚ ಪಶ್ಯನ್ಸರಿತಃ ಸರಾಂಸಿ ಚ ।
ವನಂ ಪ್ರವಿಶ್ಯೈವ ವಿಚಿತ್ರಪಾದಪಂ
ಸುಖೀ ಭವಿಷ್ಯಾಮಿ ತವಾಸ್ತು ನಿರ್ವೃತಿಃ ॥

ಅನುವಾದ

ವಿಚಿತ್ರವೃಕ್ಷಗಳಿಂದ ಕೂಡಿದ ಕಾಡಿನಲ್ಲಿ ಪ್ರವೇಶಿಸಿ ನಾನು ಫಲ-ಮೂಲಗಳನ್ನು ತಿನ್ನುತ್ತಾ ಅಲ್ಲಿಯ ಪರ್ವತಗಳನ್ನು, ನದಿಗಳನ್ನು, ಸರೋವರಗಳನ್ನು ನೋಡು-ನೋಡುತ್ತಾ ಸುಖಿಯಾಗುವೆನು. ಅದಕ್ಕಾಗಿ ನೀವು ಮನಸ್ಸಿನಲ್ಲಿ ಶಾಂತರಾಗಿರಿ.॥59॥

ಮೂಲಮ್ - 60

ಏವಂ ಸ ರಾಜಾ ವ್ಯಸನಾಭಿಪನ್ನ -
ಸ್ತಾಪೇನ ದುಃಖೇನ ಚ ಪೀಡ್ಯಮಾನಃ ।
ಆಲಿಂಗ್ಯ ಪುತ್ರಂ ಸುವಿನಷ್ಟ ಸಂಜ್ಞೋ
ಭೂಮಿಂ ಗತೋನೈವ ಚಿಚೇಷ್ಟ ಕಿಂಚಿತ್ ॥

ಅನುವಾದ

ಶ್ರೀರಾಮನು ಹೀಗೆ ಹೇಳಿದಾಗ ಪುತ್ರ ವಿಯೋಗದ ಸಂಕಟದಲ್ಲಿ ಬಿದ್ದಿರುವ ದಶರಥನು ದುಃಖ ಮತ್ತು ಸಂತಾಪದಿಂದ ಪೀಡಿತನಾಗಿ ರಾಮನನ್ನು ಎದೆಗೊತ್ತಿಕೊಂಡನು; ಮತ್ತೆ ನಿಶ್ಚೇಷ್ಟಿತರಾಗಿ ಭೂಮಿಗೆ ಕುಸಿದನು. ಆಗ ಅವನ ಶರೀರವು ಜಡದಂತೆ ಯಾವ ಚೇಷ್ಟೆಯನ್ನೂ ಮಾಡದಾಯಿತು.॥60॥

ಮೂಲಮ್ - 61

ದೇವ್ಯಃ ಸಮಸ್ತಾ ರುರುದುಃ ಸಮೇತಾ-
ಸ್ತಾಂ ವರ್ಜಯಿತ್ವಾ ನರದೇವಪತ್ನೀಮ್ ।
ರುದನ್ ಸುಮಂತ್ರೋಽಪಿ ಜಗಾಮ ಮೂರ್ಛಾಂ
ಹಾಹಾಕೃತಂ ತತ್ರ ಬಭೂವ ಸರ್ವಮ್ ॥

ಅನುವಾದ

ಇದನ್ನು ನೋಡಿ ರಾಣಿ ಕೈಕೇಯಿಯನ್ನು ಬಿಟ್ಟು ಅಲ್ಲಿ ನೆರೆದ ಉಳಿದ ಎಲ್ಲ ರಾಣಿಯರು ಅಳತೊಡಗಿದರು. ಸುಮಂತ್ರನೂ ಅಳುತ್ತಾ-ಅಳುತ್ತಾ ಮೂರ್ಛೆಹೋದನು ಹಾಗೂ ಅಲ್ಲಿ ಎಲ್ಲೆಡೆ ಹಾಹಾಕಾರ ಉಂಟಾಯಿತು.॥61॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಮೂವತ್ತನಾಲ್ಕನೆಯ ಸರ್ಗ ಪೂರ್ಣವಾಯಿತು.॥34॥