०३३ पितृदर्शनगमनम्

वाचनम्
ಭಾಗಸೂಚನಾ

ಸೀತಾ-ರಾಮ-ಲಕ್ಷ್ಮಣರು ಶೋಕಾಕುಲರಾದ ನಗರವಾಸಿಗಳ ನಾನಾಪ್ರಕಾರವಾದ ಮಾತುಗಳನ್ನು ಕೇಳುತ್ತಾ ದಶರಥನನ್ನು ನೋಡಲು ಕೈಕೇಯಿಯ ಅಂತಃಪುರಕ್ಕೆ ಹೋದುದು

ಮೂಲಮ್ - 1

ದತ್ತ್ವಾತು ಸಹ ವೈದೇಹ್ಯಾ ಬ್ರಾಹ್ಮಣೇಭ್ಯೋ ಧನಂ ಬಹು ।
ಜಗ್ಮತುಃ ಪಿತರಂ ದ್ರಷ್ಟುಂ ಸೀತಯಾ ಸಹ ರಾಘವೌ ॥

ಅನುವಾದ

ಶ್ರೀರಾಮ-ಲಕ್ಷ್ಮಣರು ಸೀತೆಯೊಡನೆ ಬ್ರಾಹ್ಮಣರಿಗೆ ಅಪಾರವಾದ ಧನವನ್ನು ದಾನಮಾಡಿದ ಬಳಿಕ ತಂದೆಯನ್ನು ದರ್ಶಿಸಲು ಸೀತೆಯೊಡನೆ ಹೊರಟನು.॥1॥

ಮೂಲಮ್ - 2

ತತೋ ಗೃಹೀತೇ ಪ್ರೆಷ್ಯಾಭ್ಯಾಮಶೋಭೇತಾಂತದಾಯುಧೇ ।
ಮಾಲಾದಾಮಭಿರಾಸಕ್ತೇ ಸೀತಯಾ ಸಮಲಂಕೃತೇ ॥

ಅನುವಾದ

ಅವರೊಂದಿಗೆ ಇಬ್ಬರು ಸೇವಕರು ಶ್ರೀರಾಮ ಮತ್ತು ಲಕ್ಷ್ಮಣರ ಧನುಸ್ಸೆ ಮುಂತಾದ ಆಯುಧಗಳನ್ನು ಹಿಡಿದುಕೊಂಡು ಹೊರಟರು. ಆ ಆಯುಧಗಳನ್ನು ಪುಷ್ಪಮಾಲೆಗಳಿಂದ ಅಲಂಕರಿಸಿದ್ದು, ಸೀತೆಯು ಪೂಜಿಸಿದ ಚಂದನಾದಿಗಳಿಂದ ಅವು ಬಹಳ ಶೋಭಿಸುತ್ತಿದ್ದವು.॥2॥

ಮೂಲಮ್ - 3

ತತಃ ಪ್ರಾಸಾದಹರ್ಮ್ಯಾಣಿ ವಿಮಾನಶಿಖರಾಣಿ ಚ ।
ಅಭಿರುಹ್ಯ ಜನಃ ಶ್ರೀಮಾನುದಾಸೀನೋ ವ್ಯಲೋಕಯತ್ ॥

ಅನುವಾದ

ಸೀತಾ-ರಾಮ-ಲಕ್ಷ್ಮಣರು ರಾಜಮಾರ್ಗದಲ್ಲಿ ಹೋಗುತ್ತಿದ್ದಾಗ ಶ್ರೀಮಂತ ಜನರು ಮನೆಗಳ ಮಹಡಿ ಮೇಲೆ, ರಾಜಭವನಗಳ ಮೇಲೆ, ಏಳು ಅಂತಸ್ತಿನ ಮಹಡಿ ಮನೆಗಳನ್ನು ಹತ್ತಿ ವಿಷಣ್ಣವದನರಾಗಿ ಅವರನ್ನು ನೋಡುತ್ತಿದ್ದರು.॥3॥

ಮೂಲಮ್ - 4

ನ ಹಿ ರಥ್ಯಾಃ ಸು ಶಕ್ಯಂತೇ ಗಂತುಂ ಬಹುಜನಾಕುಲಾಃ ।
ಆರುಹ್ಯ ತಸ್ಮಾತ್ಪ್ರಾಸಾದಾದ್ದೀನಾಃ ಪಶ್ಯಂತಿ ರಾಘವಮ್ ॥

ಅನುವಾದ

ಆಗ ದಾರಿಯು ಜನನಿಬಿಡವಾಗಿತ್ತು. ಅದರಿಂದ ಸುಗಮವಾಗಿ ನಡೆಯುವುದೇ ಕಷ್ಟವಾಗಿತ್ತು. ಆದ್ದರಿಂದ ಹೆಚ್ಚಿನ ಜನರು ಉಪ್ಪರಿಗೆಗಳ ಮೇಲೆ ಹತ್ತಿ ಅಲ್ಲಿಂದ ದುಃಖಿತರಾಗಿ ಶ್ರೀರಾಮನ ಕಡೆಗೆ ನೋಡುತ್ತಿದ್ದರು.॥4॥

ಮೂಲಮ್ - 5

ಪದಾತಿಂ ಸಾನುಜಂ ದೃಷ್ಟ್ವಾಸಸೀತಂ ಚ ಜನಾಸ್ತದಾ ।
ಊಚುರ್ಬಹುಜನಾ ವಾಚಃ ಶೋಕೋಪಹತಚೇಸಃ ॥

ಅನುವಾದ

ಶ್ರೀರಾಮನು ಪತ್ನೀ ಸೀತೆ ಮತ್ತು ಅನುಜ ಲಕ್ಷ್ಮಣನೊಂದಿಗೆ ಕಾಲ್ನಡಿಗೆಯಿಂದ ಹೋಗುವುದನ್ನು ನೋಡಿ ಅನೇಕ ಜನರ ಹೃದಯ ಶೋಕದಿಂದ ವ್ಯಾಕುಲವಾಯಿತು. ಅವರು ಖೇದಗೊಂಡು ಈ ರೀತಿ ಮಾತನಾಡಿಕೊಳ್ಳುತ್ತಿದ್ದರು.॥5॥

ಮೂಲಮ್ - 6

ಯಂ ಯಾಂತ ಮನುಯಾತಿ ಸ್ಮ ಚತುರಂಗಬಲಂ ಮಹತ್ ।
ತಮೇಕಂ ಸೀತಯಾ ಸಾರ್ಧಮನುಯಾತಿ ಸ್ಮ ಲಕ್ಷ್ಮಣಃ ॥

ಅನುವಾದ

ಅಯ್ಯೋ! ಹಿಂದೆ ಶ್ರೀರಾಮನು ರಾಜಬೀದಿಯಲ್ಲಿ ಹೋಗುತ್ತಿರುವಾಗ ಚತುರಂಗಬಲವು ಅನುಸರಿಸಿ ಹೋಗುತ್ತಿತ್ತು. ಅಂತಹ ಸೀತಾಸಮೇತನಾದ ರಾಮನನ್ನು ಏಕಾಕಿಯಾದ ಲಕ್ಷ್ಮಣನು ಮಾತ್ರ ಅನುಸರಿಸುತ್ತಿದ್ದಾನೆ.॥6॥

ಮೂಲಮ್ - 7

ಐಶ್ವರ್ಯಸ್ಯ ರಸಜ್ಞಃ ಸನ್ ಕಾಮಾನಾಂ ಚಾಕರೋ ಮಹಾನ್ ।
ನೇಚ್ಛತ್ಯೇವಾನೃತಂ ಕರ್ತುಂ ವಚನಂ ಧರ್ಮಗೌರವಾತ್ ॥

ಅನುವಾದ

ಐಶ್ವರ್ಯದ ಸುಖವನ್ನು ಅನುಭವಿಸುವ, ಭೋಗ್ಯವಸ್ತುಗಳ ಬಂಡಾರವೇ ಆಗಿದ್ದ, ಎಲ್ಲರ ಕಾಮನೆಗಳನ್ನು ಪೂರ್ಣಗೊಳಿಸುತ್ತಿದ್ದ ಶ್ರೀರಾಮನು ಇಂದು ಧರ್ಮವನ್ನು ಗೌರವಿಸಲಿಕ್ಕಾಗಿ ತಂದೆಯ ಮಾತನ್ನು ಸತ್ಯವಾಗಿಸಲು ಬಯಸುತ್ತಿರುವನು.॥7॥

ಮೂಲಮ್ - 8

ಯಾ ನ ಶಕ್ಯಾ ಪುರಾ ದ್ರಷ್ಟುಂ ಭೂತೈರಾಕಾಶಗೈರಪಿ ।
ತಾಮದ್ಯ ಸೀತಾಂ ಪಶ್ಯಂತಿ ರಾಜಮಾರ್ಗಗತಾ ಜನಾಃ ॥

ಅನುವಾದ

ಅಯ್ಯೋ! ಮೊದಲು ಆಕಾಶದಲ್ಲಿ ಸಂಚರಿಸುವ ಪ್ರಾಣಿಗಳೂ ಕೂಡ ನೋಡದಿರುವ ಸೀತೆಯನ್ನು ಈಗ ದಾರಿಯಲ್ಲಿ ನಿಂತಿರುವ ಜನರು ನೋಡುತ್ತಾ ಇದ್ದಾರೆ.॥8॥

ಮೂಲಮ್ - 9

ಅಂಗರಾಗೋಚಿತಾಂ ಸೀತಾಂ ರಕ್ತಚಂದನಸೇವಿನೀಮ್ ।
ವರ್ಷಮುಷ್ಣಂ ಚ ಶೀತಂ ಚ ನೇಷ್ಯತ್ಯಾಶು ವವಿರ್ಣತಾಮ್ ॥

ಅನುವಾದ

ಅಂಗರಾಗವನ್ನು ಹಚ್ಚಿಕೊಳ್ಳಲು ಹಾಗೂ ಕಸ್ತೂರೀ-ಚಂದನಾದಿಗಳ ಅನುಲೇಪಕ್ಕೆ ಯೋಗ್ಯಳಾದ ಸೀತೆಯ ಮುಖವು ಮಳೆ, ಚಳಿ-ಬಿಸಿಲುಗಳಿಂದ ಬೇಗನೇ ಕುಂದಿ ಹೋದೀತು.॥9॥

ಮೂಲಮ್ - 10

ಅದ್ಯ ನೂನಂ ದಶರಥಃ ಸತ್ತ್ವಮಾವಿಷ್ಯ ಭಾಷತೇ ।
ನಹಿ ರಾಜಾ ಪ್ರಿಯಂ ಪುತ್ರಂವಿವಾಸಯಿತುಮರ್ಹತಿ ॥

ಅನುವಾದ

ನಿಶ್ಚಯವಾಗಿ ಇಂದು ದಶರಥನು ಯಾವುದೋ ಪಿಶಾಚಿಯ ಆವೇಶದಲ್ಲಿ ಬಿದ್ದು ಅನುಚಿತ ವಾದ ಮಾತನ್ನು ಹೇಳುತ್ತಿರುವನು; ಏಕೆಂದರೆ ತನ್ನ ಸ್ವಾಭಾವಿಕ ಸ್ಥಿತಿಯಲ್ಲಿ ಇರುವ ಯಾವ ರಾಜನೂ ಕೂಡ ತನ್ನ ಪ್ರಿಯ ಪುತ್ರನನ್ನು ಮನೆಯಿಂದ ಹೊರ ಹಾಕುವನೇ.॥10॥

ಮೂಲಮ್ - 11

ನಿರ್ಗುಣಸ್ಯಾಪಿ ಪುತ್ರಸ್ಯ ಕಥಂ ಸ್ಯಾದ್ ವಿನಿವಾಸನಮ್ ।
ಕಿಂ ಪುನರ್ಯಸ್ಯ ಲೋಕೋಽಯಂ ಜಿತೋ ವೃತ್ತೇನ ಕೇವಲಮ್ ॥

ಅನುವಾದ

ಪುತ್ರನು ಗುಣಹೀನನಾಗಿದ್ದರೂ ಅವನನ್ನು ಮನೆಯಿಂದ ಹೊರಗೆ ಹಾಕುವ ಸಾಹಸ ಹೇಗಾಗಬಲ್ಲದು? ಹಾಗಿರುವಾಗ ಕೇವಲ ಚರಿತ್ರದಿಂದಲೇ ಈ ಇಡೀ ಜಗತ್ತು ವಶೀಭೂತವಾಗುತ್ತದೋ ಅಂತಹವನಿಗೆ ವನವಾಸ ವಿಧಿಸುವ ಮಾತು ಹೇಗೆ ಹೇಳಬಹುದು.॥11॥

ಮೂಲಮ್ - 12

ಆನೃಶಂಸ್ಯಮನುಕ್ರೋಶಃ ಶ್ರುತಂ ಶೀಲಂ ದಮಃ ಶಮಃ ।
ರಾಘವಂ ಶೋಭಯಂತ್ಯೇತೇ ಷಡ್ಗುಣಾಃ ಪುರುಷರ್ಷಭಮ್ ॥

ಅನುವಾದ

ಕ್ರೂರತೆಯ ಅಭಾವ, ದಯೆ, ವಿದ್ಯೆ, ಶೀಲ, ದಮ (ಇಂದ್ರಿಯಸಂಯಮ), ಶಮ (ಮನೋನಿಗ್ರಹ) - ಈ ಆರು ಗುಣಗಳಿಂದ ಶ್ರೀರಾಮನು ಸದಾ ಶೋಭಿಸುತ್ತಿರುವನು.॥12॥

ಮೂಲಮ್ - 13

ತಸ್ಮಾತ್ತಸ್ಯೋಪಘಾತೇನ ಪ್ರಜಾಃ ಪರಮಪೀಡಿತಾಃ ।
ಔದಕಾನೀವ ಸತ್ತ್ವಾನಿ ಗ್ರೀಷ್ಮೇ ಸಲಿಲಸಂಕ್ಷಯಾತ್ ॥

ಅನುವಾದ

ಆದ್ದರಿಂದ ಇವನ ಮೇಲೆ ಆಘಾತ ಮಾಡುವುದರಿಂದ ಇವನ ಪಟ್ಟಾಭಿಷೇಕದಲ್ಲಿ ವಿಘ್ನವನ್ನೊಡ್ಡುವುದರಿಂದ ಬೇಸಿಗೆಯಲ್ಲಿ ಜಲಾಶಯದ ನೀರು ಇಂಗಿ ಹೋದಾಗ ನೀರಿನಲ್ಲಿರುವ ಜೀವಿಗಳು ಚಡಪಡಿಸುವಂತೆ, ಪ್ರಜೆಗಳಿಗೆ ಅಂತಹ ಮಹಾಕ್ಲೇಶವನ್ನು ಕೊಟ್ಟಿರುವರು.॥13॥

ಮೂಲಮ್ - 14

ಪೀಡಯಾ ಪೀಡಿತಂ ಸರ್ವಂ ಜಗದಸ್ಯ ಸಗತ್ಪತೇಃ ।
ಮೂಲಸ್ಯೇವೋಪಘಾತೇನ ವೃಕ್ಷಃ ಪುಷ್ಪಲೋಪಗಃ ॥

ಅನುವಾದ

ಈ ಜಗದೀಶ್ವರ ಶ್ರೀರಾಮನ ವ್ಯಥೆಯಿಂದ ಸಮಸ್ತ ಜಗತ್ತು ಬುಡ ಕಡಿದುದರಿಂದ ಫಲ-ಪುಷ್ಪಗಳ ಸಹಿತ ಇಡೀ ಮರವು ಒಣಗಿ ಹೋಗುವಂತೆ ವ್ಯಥಿತವಾಗಿದೆ.॥14॥

ಮೂಲಮ್ - 15

ಮೂಲಂ ಹ್ಯೇಷ ಮನುಷ್ಯಾಣಾಂ ಧರ್ಮಸಾರೋ ಮಹಾದ್ಯುತಿಃ ।
ಪುಷ್ಪಂ ಫಲಂ ಚ ಪತ್ರಂ ಚ ಶಾಖಾಶ್ಚಾಸ್ಯೇತರೇ ಜನಾಃ ॥

ಅನುವಾದ

ಈ ಮಹಾತೇಜಸ್ವೀ ಶ್ರೀರಾಮನು ಸಮಸ್ತ ಮನುಷ್ಯರ ಮೂಲನಾಗಿದ್ದಾನೆ, ಧರ್ಮವೇ ಇವನ ಬಲವಾಗಿದೆ. ಜಗತ್ತಿನ ಇತರ ಪ್ರಾಣಿಗಳು ಪತ್ರ, ಪುಷ್ಪ, ಫಲ ಮತ್ತು ರೆಂಬೆಗಳಾಗಿವೆ.॥15॥

ಮೂಲಮ್ - 16

ತೇ ಲಕ್ಷ್ಮಣ ಇವ ಕ್ಷಿಪ್ರಂ ಸಪತ್ನ್ಯಃ ಸಹಬಾಂಧವಾಃ ।
ಗಚ್ಛಂತಮನುಗಚ್ಛಾಮೋ ಯೇನ ಗಚ್ಛತಿ ರಾಘವಃ ॥

ಅನುವಾದ

ಆದ್ದರಿಂದ ನಾವೂ ಕೂಡ ಲಕ್ಷ್ಮಣನಂತೆ ಪತ್ನೀ ಮತ್ತು ಬಂಧು-ಬಾಂಧವರೊಂದಿಗೆ ಕಾಡಿಗೆ ಹೋಗುತ್ತಿರುವ ಶ್ರೀರಾಮನ ದಾರಿಯಲ್ಲೇ ಅವನ ಹಿಂದೆ-ಹಿಂದೆ ಹೊರಟು ಬಿಡೋಣ.॥16॥

ಮೂಲಮ್ - 17

ಉದ್ಯಾನಾನಿ ಪರಿತ್ಯಜ್ಯ ಕ್ಷೇತ್ರಾಣಿ ಚ ಗೃಹಾಣಿ ಚ ।
ಏಕದುಃಖಸುಖಾ ರಾಮಮನುಗಚ್ಛಾಮ ಧಾರ್ಮಿಕಮ್ ॥

ಅನುವಾದ

ಮನೆ-ಮಠ, ಹೊಲ-ತೋಟ ಎಲ್ಲವನ್ನು ಬಿಟ್ಟು ಧರ್ಮಾತ್ಮ ಶ್ರೀರಾಮನನ್ನು ಅನುಸರಿಸೋಣ. ಇವನ ಸುಖ, ದುಃಖದಲ್ಲಿ ಭಾಗಿಯಾಗುವಾ.॥17॥

ಮೂಲಮ್ - 18

ಸಮುದ್ಧೃತನಿಧಾನಾನಿ ಪರಿಧ್ವಸ್ತಾಜಿರಾಣಿ ಚ ।
ಉಪಾತ್ತಧನಧಾನ್ಯಾನಿ ಹೃತಸಾರಾಣಿ ಸರ್ವಶಃ ॥

ಮೂಲಮ್ - 19

ರಜಸಾಭ್ಯವಕೀರ್ಣಾನಿ ಪರಿತ್ಯಕ್ತಾನಿ ದೈವತೈಃ ।
ಮೂಷಕೈಃ ಪರಿಧಾವದ್ಭಿರುದ್ಬಿಲೈರಾವೃತಾನಿ ಚ ॥

ಮೂಲಮ್ - 20

ಅಪೇತೋದಕಧೂಮಾನಿ ಹೀನಸಮ್ಮಾರ್ಜನಾನಿ ಚ ।
ಪ್ರಣಷ್ಟಬಲಿಕರ್ಮೇಜ್ಯಾಮಂತ್ರಹೋಮಜಪಾನಿ ಚ ॥

ಮೂಲಮ್ - 21

ದುಷ್ಕಾಲೇನೇವ ಭಗ್ನಾನಿ ಭಿನ್ನಭಾಜನವಂತಿ ಚ ।
ಅಸ್ಮತ್ತ್ಯಕ್ತಾನಿ ಕೈಕೇಯೀ ವೇಶ್ಮಾನಿ ಪ್ರತಿಪದ್ಯತಾಮ್ ॥

ಅನುವಾದ

ನಾವು ನಮ್ಮ ಮನೆಯಲ್ಲಿ ಹೂತಿಟ್ಟಿದ್ದ ನಿಧಿಯನ್ನು ಅಗೆದು ತೆಗೆದು ಎಲ್ಲ ಧನವನ್ನು ಎತ್ತಿಕೊಳ್ಳುವಾ. ಎಲ್ಲ ಆವಶ್ಯಕ ವಸ್ತುಗಳು ಇಲ್ಲೇ ಇರಲಿ. ಅವುಗಳ ಮೇಲೆ ಧೂಳು ತುಂಬಿ ಹೋಗಲಿ. ದೇವತೆಗಳು ಈ ಮನೆಗಳನ್ನು ಬಿಟ್ಟು ಓಡಿ ಹೋಗಲಿ. ಇಲಿಗಳು ಬಿಲದಿಂದ ಹೊರಬಂದು ಎಲ್ಲೆಡೆ ಓಡಾಡಲಿ. ಅವುಗಳಿಂದ ಈ ಮನೆ ತುಂಬಿಹೋಗಲಿ. ಇದರಲ್ಲಿ ಎಂದೂ ಒಲೆ ಉರಿಯದಿರಲಿ, ನೀರು ಇಲ್ಲದಿರಲಿ, ಕಸ ಗುಡಿಸದಿರಲಿ. ಇಲ್ಲಿ ಬಲಿವೈಶ್ಯದೇವ, ಯಜ್ಞ, ವೇದ ಮಂತ್ರಪಠಣ, ಹೋಮ, ಜಪ ನಿಂತು ಹೋಗಲಿ. ದೊಡ್ಡ ಕ್ಷಾಮವೇ ಬಂದಿರುವಂತೆ ಈ ಮನೆ ಪಾಳು ಬೀಳಲಿ. ಇದರಲ್ಲಿ ಒಡೆದ ಪಾತ್ರೆಗಳು ಚೆಲ್ಲಿಹೋಗಲಿ, ನಾವು ಎಂದೆಂದಿಗೂ ಇದನ್ನು ಬಿಟ್ಟುಬಿಡೋಣ - ಇಂತಹ ಸ್ಥಿತಿಯಲ್ಲಿ ಈ ಮನೆಗಳ ಮೇಲೆ ಕೈಕೆಯಿಯು ಅಧಿಕಾರ ನಡೆಸಲಿ.॥18-21॥

ಮೂಲಮ್ - 22

ವನಂ ನಗರಮೇವಾಸ್ತು ಯೇನ ಗಚ್ಛತಿ ರಾಘವಃ ।
ಅಸ್ಮಾಭಿಶ್ಚ ಪರಿತ್ಯಕ್ತಂ ಪುರಂ ಸಂಪದ್ಯತಾಂ ವನಮ್ ॥

ಅನುವಾದ

ಶ್ರೀರಾಮನು ಹೋಗುತ್ತಿರುವ ವನವೇ ನಗರವಾಗಲಿ. ನಾವು ಬಿಟ್ಟುಹೋದಾಗ ಈ ನಗರವೂ ವನವಾಗಿ ಪರಿಣತವಾಗಿ ಹೋಗಲಿ.॥22॥

ಮೂಲಮ್ - 23

ಬಿಲಾನಿದಂಷ್ಟ್ರಿಣಃ ಸರ್ವೇ ಸಾನೂನಿ ಮೃಗಪಕ್ಷಿಣಃ ।
ತ್ಯಜಂತ್ವಸ್ಮದ್ಭಯಾದ್ಭೀತಾ ಗಜಾಃ ಸಿಂಹಾ ವನಾನ್ಯಪಿ ॥

ಅನುವಾದ

ಕಾಡಿನಲ್ಲಿ ನಮ್ಮ ಭಯದಿಂದ ಹಾವುಗಳು ಬಿಲಗಳನ್ನು ಬಿಟ್ಟು ಓಡಿಹೋಗಲಿ. ಪರ್ವತದ ಮೇಲೆ ವಾಸಿಸುವ ಮೃಗ, ಪಕ್ಷಿಗಳು ಆ ಶಿಖರಗಳನ್ನು ಬಿಟ್ಟು ಬಿಡಲಿ. ಆನೆ, ಸಿಂಹಗಳೂ ಆ ವನವನ್ನು ತ್ಯಜಿಸಿ ದೂರ ಹೊರಟು ಹೋಗಲಿ.॥23॥

ಮೂಲಮ್ - 24

ಅಸ್ಮತ್ಯಕ್ತಂ ಪ್ರಪದ್ಯಂತುಂ ಸೇವ್ಯಮಾನಂ ತ್ಯಜಂತು ಚ ।
ತೃಣಮಾಂಸಲಾದಾನಾಂ ದೇಶಂ ವ್ಯಾಲಮೃಗದ್ವಿಜಮ್ ॥

ಮೂಲಮ್ - 25

ಪ್ರಪದ್ಯತಾಂ ಹಿ ಕೈಕೇಯೀ ಸಪುತ್ರಾ ಸಹಬಾಂಧವೈಃ ।
ರಾಘವೇಣ ವಯಂ ಸರ್ವೇ ವನೇ ವತ್ಸ್ಯಾಮ ನಿರ್ವೃತಾಃ ॥

ಅನುವಾದ

ಆ ಸರ್ಪವೇ ಮೊದಲಾದವುಗಳು ನಾವು ಬಿಟ್ಟಿರುವ ಸ್ಥಾನಗಳಿಗೆ ಹೊರಟು ಹೋಗಲಿ. ನಾವು ವಾಸಿಸುವ ಸ್ಥಾನವನ್ನು ಬಿಟ್ಟು ಹೋಗಲಿ. ಈ ಊರು ಹುಲ್ಲು ತಿನ್ನುವ ಪಶುಗಳ, ಮಾಂಸಭಕ್ಷಿ ಹಿಂಸ್ರ ಪ್ರಾಣಿಗಳಿಂದ, ಹಣ್ಣು ತಿನ್ನುವ ಪಕ್ಷಿಗಳ ನಿವಾಸ ಸ್ಥಾನವಾಗಲಿ. ಇಲ್ಲಿ ಹಾವು, ಪಶು-ಪಕ್ಷಿ ಇರತೊಡಗಲಿ. ಇಂತಹ ಸ್ಥಿತಿಯಲ್ಲಿ ಪುತ್ರ ಮತ್ತು ಬಂಧು-ಬಾಂಧವರೊಂದಿಗೆ ಕೈಕೆಯಿಯು ಇದನ್ನು ತನ್ನ ಅಧಿಕಾರಕ್ಕೆ ತೆಗೆದುಕೊಳ್ಳಲಿ. ನಾವೆಲ್ಲರೂ ವನದಲ್ಲಿ ಶ್ರೀರಘುನಾಥನೊಂದಿಗೆ ಬಹಳ ಆನಂದದಲ್ಲಿ ಇರುವಾ.॥24-25॥

ಮೂಲಮ್ - 26

ಇತ್ಯೇವಂ ವಿವಿಧಾ ವಾಚೋ ನಾನಾ ಜನಸಮೀರಿತಾಃ ।
ಶುಶ್ರಾವ ರಾಘವಃ ಶ್ರುತ್ವಾ ನ ವಿಚಕ್ರೇಽಸ್ಯ ಮಾನಸಮ್ ॥

ಮೂಲಮ್ - 27

ಸ ತು ವೇಶ್ಮ ಪುನರ್ಮಾತುಃ ಕೈಲಾಸಶಿಖರಪ್ರಭಮ್ ।
ಅಭಿಚಕ್ರಾಮ ಧರ್ಮಾತ್ಮಾ ಮತ್ತಮಾತಂಗವಿಕ್ರಮಃ ॥

ಅನುವಾದ

ಈ ಪ್ರಕಾರ ಅನೇಕ ಜನರು ಆಡುತ್ತಿದ್ದ ಮಾತುಗಳನ್ನು ಶ್ರೀರಾಮನು ಕೇಳಿದನು; ಆದರೆ ಕೇಳಿಯೂ ಅವನ ಮನಸ್ಸಿನಲ್ಲಿ ಯಾವುದೇ ವಿಕಾರ ಉಂಟಾಗಲಿಲ್ಲ. ಮತ್ತ ಗಜರಾಜನಂತೆ ಪರಾಕ್ರಮಿ ಧರ್ಮಾತ್ಮಾ ಶ್ರೀರಾಮನು ಪುನಃ ಕೈಲಾಸ ಶಿಖರ ದಂತಿರುವ ತಾಯಿ ಕೈಕೇಯಿಯ ಶುಭ್ರ ಭವನವನ್ನು ಪ್ರವೇಶಿಸಿದನು.॥26-27॥

ಮೂಲಮ್ - 28

ವಿನೀತವೀರಪುರುಷಂ ಪ್ರವಿಶ್ಯ ತು ನೃಪಾಲಯಮ್ ।
ದದರ್ಶಾವಸ್ಥಿತಂ ದೀನಂ ಸುಮಂತ್ರಮವಿದೂರತಃ ॥

ಅನುವಾದ

ವಿನಯಶೀಲ ವೀರ ಪುರುಷರಿಂದ ಕೂಡಿದ ಆ ರಾಜಭವನದಲ್ಲಿ ಪ್ರವೇಶಿಸಿ ಅವನು ನೋಡುತ್ತಾನೆ-ಸುಮಂತನು ಬಳಿಯಲ್ಲೇ ದುಃಖಿತನಾಗಿ ನಿಂತಿದ್ದನು.॥28॥

ಮೂಲಮ್ - 29

ಪ್ರತೀಕ್ಷಮಾಣೋಽಭಿಜನಂ ತದಾರ್ತ-
ಮನಾರ್ತರೂಪಃ ಪ್ರಹಸನ್ನಿವಾಥ ।
ಜಗಾಮ ರಾಮಃ ಪಿತರಂ ದಿದೃಕ್ಷುಃ
ಪಿತುರ್ನಿದೇಶಂ ವಿಧಿವಚ್ಚಿಕೀರ್ಷುಃ ॥

ಅನುವಾದ

ಪೂರ್ವಜರ ನಿವಾಸಭೂಮಿಯಾದ ಅವಧದ ಜನರು ಅಲ್ಲಿ ಶೋಕಾತುರರಾಗಿ ನಿಂತಿದ್ದರು. ಅವರನ್ನು ನೋಡಿಯೂ ಶ್ರೀರಾಮನು ಸ್ವತಃ ಶೋಕದಿಂದ ಪೀಡಿತನಾಗಲಿಲ್ಲ. ಅವನ ಶರೀರದಲ್ಲಿ ವ್ಯಥೆಯ ಯಾವ ಚಿಹ್ನೆಯೂ ಪ್ರಕಟವಾಗಲಿಲ್ಲ. ಅವನು ತಂದೆಯ ಆಜ್ಞೆಯನ್ನು ವಿಧಿವತ್ತಾಗಿ ಪಾಲಿಸುವ ಇಚ್ಛೆ ಯಿಂದ ಅವನನ್ನು ದರ್ಶಿಸಲು ನಗುತ್ತಾ ಮುಂದರಿದನು.॥29॥

ಮೂಲಮ್ - 30

ತತ್ಪೂರ್ವಮೈಕ್ಷ್ವಾಕಸುತೋ ಮಹಾತ್ಮಾ
ರಾಮೋ ಗಮಿಷ್ಯನ್ ನೃಪಮಾರ್ತರೂಪಮ್ ।
ವ್ಯತಿಷ್ಠತ ಪ್ರೇಕ್ಷ್ಯ ತದಾ ಸುಮಂತ್ರಂ
ಪಿತುರ್ಮಹಾತ್ಮಾ ಪ್ರತಿಹಾರಣಾರ್ಥಮ್ ॥

ಅನುವಾದ

ಶೋಕಾಕುಲನಾಗಿ ಬಿದ್ದಿರುವ ಮಹಾರಾಜನ ಬಳಿಗೆ ಹೋಗುವ ಮಹಾತ್ಮಾ, ಮಹಾಮನಾ ಇಕ್ಷ್ವಾಕು ನಂದನ ಶ್ರೀರಾಮನು ಅಲ್ಲಿಗೆ ತಲುಪುವ ಮೊದಲು ಸುಮಂತ್ರ ನನ್ನು ನೋಡಿ ತಂದೆಗೆ ತಾನು ಬಂದಿರುವ ಸೂಚನೆಯನ್ನು ಕಳಿಸಲು ಆಗ ಅಲ್ಲೇ ನಿಂತುಬಿಟ್ಟನು.॥30॥

ಮೂಲಮ್ - 31

ಪಿತುರ್ನಿದೇಶೇನ ತು ಧರ್ಮವತ್ಸಲೋ
ವನಪ್ರವೇಶೇ ಕೃತಬುದ್ಧಿನಿಶ್ಚಯಃ ।
ಸ ರಾಘವಃ ಪ್ರೇಕ್ಷ್ಯ ಸುಮಂತ್ರಮಬ್ರವೀ-
ನ್ನಿವೇದಯಸ್ವಾಗಮನಂ ನೃಪಾಯ ಮೇ ॥

ಅನುವಾದ

ತಂದೆಯ ಆದೇಶದಂತೆ ವನವನ್ನು ಪ್ರವೇಶಿಸಲು ಬುದ್ಧಿ ಪೂರ್ವಕ ನಿಶ್ಚಯಿಸಿ ಬಂದಿರುವ ಧರ್ಮವತ್ಸಲ ಶ್ರೀರಾಮಚಂದ್ರನು ಸುಮಂತ್ರನ ಕಡೆಗೆ ನೋಡಿ - ನೀವು ಮಹಾರಾಜರಿಗೆ ನಾನು ಬಂದಿರುವ ಸೂಚನೆಯನ್ನು ಕೊಡಿರಿ ಎಂದು ಹೇಳಿದನು.॥31॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಮೂವತ್ತಮೂರನೆಯ ಸರ್ಗ ಪೂರ್ಣವಾಯಿತು.॥33॥